ಮಹಾಶ್ವೇತಾ ದೇವಿಯವರ ಕತೆ: “ಯಾಕಮ್ಮ”

ಕೆಲವು ದಿನಗಳ ಹಿಂದೆ ನಮ್ಮನ್ನಗಲಿದ ಮಹಾಶ್ವೇತಾದೇವಿಯವರ ಜನಪ್ರಿಯ ಮಕ್ಕಳ ಕತೆ ಇದು. ಇಂಗ್ಲೀಷಿನಲ್ಲಿ “ವೈ ವೈ ಗರ್ಲ್” ಎಂಬ ಶೀರ್ಷಿಕೆಯಲ್ಲಿರುವ ಈ ಕತೆಗೆ ನಾವಿಟ್ಟ ಹೆಸರು “ಯಾಕಮ್ಮ”. ನಮ್ಮ ಮಾಹಿತಿಯ ಪ್ರಕಾರ ಗಿರೀಶ್ ಕಾರ್ನಾಡರು ಇದನ್ನು ಬಹಳ ಹಿಂದೆ ಕನ್ನಡಕ್ಕೆ ಅನುವಾದಿಸಿದ್ದಾರೆ. ಇಲ್ಲಿರುವ ಅನುವಾದ ಋತುಮಾನ ತಂಡದಿಂದ. ಇದು ಅಗಲಿದ ಚೇತನಕ್ಕೆ ಋತುಮಾನದ ನುಡಿನಮನ. 

thewhywhygirl“ಯಾಕೆ?”

ಈ ಪ್ರಶ್ನೆ ಒಂದು ಹತ್ತು ವರುಷದ ಹುಡುಗಿಯದ್ದು.

ಅವಳು ಒಂದು ದೊಡ್ಡ ಹಾವಿನ ಹಿಂದೆ ಓಡುತ್ತಿದ್ದಳು. ನಾನು ಆಕೆಯ ಹಿಂದೆ ಹಿಂದೆಯೇ ಓಡಿದೆ.

ಕೊನೆಗೆ ಆಕೆಯ ಜಡೆ ಹಿಡಿದು

” ಬೇಡ ಮೊಯಿನಾ.. ಹಾಗೆ ಮಾಡಬೇಡ.. ಬೇಡ” ಎಂದು ಕಿರುಚಿದೆ

“ಯಾಕೆ ಮಾಡಬಾರದು?” ಅವಳು ಕೇಳಿದಳು.

” ಅದು ಅಂತಿಂಥ ಹಾವಲ್ಲ.. ನಾಗರ ಹಾವು” ನಾನೆಂದೆ

“ನಾಗರಹಾವಾದ್ರೆ ಏನಾಯ್ತು? ನಾನ್ಯಾಕೆ ಹಿಡಿಬಾರದು?”

“ನೀನು ಯಾಕೆ ಅದನ್ನ ಹಿಡಿಯಬೇಕು?”

” ನಾವು ಹಾವು ತಿಂತೀವಿ” ಮೊಯಿನಾ ಹೇಳಿದಳು “ನಿಮಗೆ ಗೊತ್ತಾ ? ಅದರ ತಲೆ ತೆಗೆದು, ಚರ್ಮಾನ ಮಾರಿಬಿಡ್ತೀವಿ. ಮಾಂಸನ ಬೇಯಿಸಿ ತಿಂತೀವಿ”

” ಓಹ್ ಹೌದಾ? ಆದರೆ ಈ ಬಾರಿ ಬೇಡ ಬಿಟ್ಬಿಡು ಅದನ್ನ” ನಾನೆಂದೆ.

” ನಾನು ಹಿಡಿತೀನಿ.. ಹಿಡಿದೇ ಹಿಡಿತಿನಿ”

“ಬೇಡ ಮಗು” ಎಂದು ಅವಳನ್ನು ನಾನು ಕೆಲಸ ಮಾಡುವ ಸಮಿತಿಯ ಆಫೀಸಿನೊಳಗೆ ಎಳೆದು ಕರೆತಂದೆ.

ಸಮಿತಿ ಎಂದರೆ ಊರ ಜನ ಅಕ್ಷರ ಕಲಿಯಲು ಬರುತ್ತಿದ್ದ ಜಾಗ.

ನಾನು ಮೊಯಿನಾಗೆ ಹೇಳಿದೆ

” ಇಲ್ಲಿ ಕುಳಿತ್ಕೊ. ಸ್ವಲ್ಪ ವಿಶ್ರಾಂತಿ ತೊಗೊ”

” ಯಾಕೆ?”

” ನಿನಗೆ ಸುಸ್ತಾಗಿಲ್ವಾ? “

“ನಾನಿಲ್ಲಿ ಕಾಲ ಮೇಲೆ ಕಾಲು ಹಾಕಿಕೊಂಡು ಕೂತರೆ, ಕುರಿ-ಮರಿಗಳನ್ನ ಯಾರು ಮನೆಗೆ ಕರೆದೊಯ್ಯೋದು? ಕಟ್ಟಿಗೆ ಜೋಡಿಸೋದು ಯಾರು? ಮತ್ತೆ ನದಿಯಿಂದ ನೀರು ಯಾರು ತರ್ತಾರೆ? ಒಂದರ ಹಿಂದೊಂದು ಪ್ರಶ್ನೆ ಕೇಳಲು ಶುರು ಮಾಡಿದಳು.

” ಬಾಬೂಜಿ ನಮಗೆ ಅಕ್ಕಿ ಕಳಿಸಿಕೊಟ್ಟಿದ್ದಕ್ಕೆ ಅವರಿಗೆ ಧನ್ಯವಾದ ಹೇಳಲು ಮರೆಯಬೇಡ” ಹೊರಟು ನಿಂತವಳನ್ನು ಕಂಡು ಖಿರಿ ಹೇಳಿದ.

” ನಾನ್ಯಾಕೆ ಧನ್ಯವಾದ ಹೇಳಲಿ? ಅವರು ನನಗ್ಯಾವತ್ತಾದ್ರೂ ಧನ್ಯವಾದ ಹೇಳಿದಾರಾ? ನಾನು ಅವರ ಕೊಟ್ಟಿಗೆ ಕ್ಲೀನ್ ಮಾಡಿ ಕೊಡಲ್ವಾ? ಅವರು ಹೇಳೋ ನೂರಾರು ಕೆಲ್ಸ ಮಾಡಲ್ವಾ? ಅವರು ನನಗೆ ಯಾವತ್ತಾದರೂ ಧನ್ಯವಾದ ಹೇಳಿದಾರಾ? ಮತ್ತೆ ನಾನ್ಯಾಕೆ ಹೇಳಲಿ?”

ಎಂದು ಓಡಿಹೋದಳು..

ಮೊಯಿನಾ ಶಬರ್ ಪಂಗಡದ ಹುಡುಗಿ. ಶಬರ್ ಜನರಲ್ಲಿ ಸ್ವಂತ ಜಮೀನು ಇರುತ್ತಿರಲಿಲ್ಲ. ಹಾಗೆಂದು ಅದರ ಬಗ್ಗೆ ಅವರೆಂದೂ ತಲೆ ಕೆಡಿಸಿಕೊಂಡಿಲ್ಲ. ಆದರೇ ಈ ಮೊಯಿನಾಳ ಪ್ರಶ್ನೆಗಳು ಮಾತ್ರ ನಿಲ್ಲುತ್ತಿರಲಿಲ್ಲ. ” ಯಾಕೆ? ಯಾಕೆ? ಯಾಕೆ?”

” ನಾನು ನೀರು ತರಲಿಕ್ಕೆ ಇಷ್ಟು ದೂರ ನದಿಗೆ ಯಾಕೆ ಬರಬೇಕು? ನಾವು ಈ ಗುಡಿಸಿಲಿನ ಒಳಗೆ ಯಾಕೆ ಬದುಕ್ತಾ ಇದೀವಿ? ನಾವು ದಿನಕ್ಕೆ ಎರಡು ಬಾರಿ ಯಾಕೆ ಊಟ ಮಾಡಲ್ಲ?”

wಮೊಯಿನಾ ಊರಿನ ಜಮೀನ್ದಾರರ ಕುರಿ ಕಾಯುತ್ತಿದ್ದಳು. ಹಾಗಂತ ಯಾರ ಮುಲಾಜಿಗೂ ಬೀಳುತ್ತಿರಲಿಲ್ಲ. ಯಾರ ದಯೆ ದಾಕ್ಷಿಣ್ಯಕ್ಕೂ ಬಿದ್ದವಳಲ್ಲ. ತನ್ನ ಪಾಡಿಗೆ ತನ್ನ ಕೆಲಸ ಮಾಡುತ್ತಿದ್ದಳು. ಸಂಜೆ ಮನೆಗೆ ಬಂದುಬಿಡುತ್ತಿದ್ದಳು.

” ನಾನ್ಯಾಕೆ ಅವರು ಬಿಟ್ಟಿದ್ದು ತಿನ್ನಲಿ? ನಾನು ಅಕ್ಕಿ, ಸೊಪ್ಪಿನ ಜೊತೆಗೆ ಸಿಗಡಿ, ಮೆಣಸು ಹಾಕಿ ರುಚಿ ರುಚಿ ಅಡಿಗೆ ಮಾಡ್ತೀನಿ..ಮತ್ತೆ ಮನೆಯವರ ಜೊತೆಗೆ ಊಟ ಮಾಡ್ತೀನಿ.” ಎನ್ನುತ್ತಿದ್ದಳು.

ಹಾಗೆ ನೋಡಿದರೆ ಶಬರ್ ಜಾತಿಯವರು ಮನೆಯ ಹೆಣ್ಣು ಮಕ್ಕಳಿಂದ ಕೆಲಸ ಮಾಡಿಸುವುದಿಲ್ಲ. ಆದರೆ, ಮೊಯಿನಾಳ ಅಮ್ಮನ ಒಂದು ಕಾಲು ಸರಿಯಿರಲಿಲ್ಲ. ಆಕೆಯ ಅಪ್ಪ ಕೆಲಸ ಹುಡುಕಿಕೊಂಡು ಜಮಶೇಡ್ ಪುರ್ ಹೋಗಿದ್ದರು, ಮತ್ತೆ ಆಕೆಯ ಅಣ್ಣ ಗೋರು ಕಟ್ಟಿಗೆ ತರಲು ಕಾಡಿಗೆ ಹೋಗ್ತಿದ್ದ. ಹೀಗಾಗಿ ಮೊಯಿನಾ ಕೆಲಸ ಮಾಡದೆ ವಿಧಿಯಿರಲಿಲ್ಲ.

ಒಂದು ದಿನ ಆಕೆ ಘೋಷಿಸಿಬಿಟ್ಟಳು. “ಇನ್ಮೇಲೆ ನಾನು ನಿಮ್ಮ ಜೊತೆಗೇ ಇರ್ತೀನಿ ” ಎಂದು.

ಖಿರಿ ” ಅಯ್ಯೋ ಬೇಡ ” ಎಂದ.

” ಯಾಕೆ ಬೇಡ? ಮನೆ ಇಷ್ತು ದೊಡ್ಡದಿದೆ, ಈ ಮುದುಕಿಗೆ (ಅಂದರೆ ನನಗೆ) ಎಷ್ಟು ಮಹಾ ಜಾಗ ಬೇಕು?”

” ಹಾಗಾದ್ರೆ ಕೆಲಸದ ಗತಿ ಏನು?” ಆಕೆಯ ಅಮ್ಮ ಕೇಳಿದ್ದಳು.

“ಹೋಗ್ತಿನಲ್ಲ.. ಕೆಲಸ ಮುಗಿಸ್ಕೊಂಡು ಸಂಜೆ ಹಾಗೆ ಇಲ್ಲಿ ಬಂದು ಬಿಡ್ತಿನಿ” ದೃಢವಾಗಿ ಹೇಳಿದಳು. ಹಾಗೆಯೇ ಬಂದಳು ಕೂಡ, ಒಂದು ಜೊತೆ ಬಟ್ಟೆ ಮತ್ತು ಒಂದು ಪುಟ್ಟ ಮುಂಗಸಿಯೊಂದಿಗೆ.

” ಈ ಮುಂಗುಸಿ ತುಂಬಾ ಕಡಿಮೆ ತಿನ್ನುತ್ತೆ. ಕೆಟ್ಟ ಕೆಟ್ಟ ಹಾವನ್ನು ಓಡಿಸಿ ಬಿಡುತ್ತೆ. ಒಳ್ಳೊಳ್ಳೆ ಹಾವನ್ನು ನಾನು ಹಿಡಿತಿನಿ” ಎಂದಳು.

ನಮ್ಮ ಸಮಿತಿಯ ಅಧ್ಯಾಪಕಿ ಮಾಲತಿ

” ಈ ಹುಡುಗಿ ತಂಟೆಯಿಂದ ನೀವು ರೋಸಿ ಹೋಗ್ತೀರಾ ನೋಡಿ..” ಎಂದು ಎಚ್ಚರಿಕೆ ಕೊಟ್ಟಳು.

****

yygirl-001

ಆಹ್ ಎಂಥ ಸಮಯ ಕಳೆದೆ ನಾನು ಮೊಯಿನಾಳೊಂದಿಗೆ..

” ಬಾಬು ಕುರಿಗಳನ್ನ ಮೇಯಿಸೋಕೆ ನಾನ್ಯಾಕೆ ಕರ್ಕೊಂಡು ಹೋಗ್ಬೇಕು? ಅವರ ಮಕ್ಕಳು ಯಾಕೆ ಕರ್ಕೊಂಡು ಹೋಗಲ್ಲ?”

” ಮೀನುಗಳು ಯಾಕೆ ಮಾತನಾಡೋಲ್ಲ?”

” ಈ ನಕ್ಷತ್ರಗಳು ಸೂರ್ಯನಗಿಂತ ದೊಡ್ಡದಾಗಿದೆ ಅಂತಾದ್ರೆ ಇಷ್ಟು ಸಣ್ಣ ಯಾಕೆ ಕಾಣುತ್ತೆ?” “ಯಾಕೆ ? ಯಾಕೆ? ಯಾಕೆ?”

ಒಂದು ರಾತ್ರಿ ಆಕೆ ನನ್ನ ಕೇಳಿದಳು..

“ನೀನು ರಾತ್ರಿ ಮಲಗುವ ಮುನ್ನ ಪುಸ್ತಕ ಓದುತ್ತಾ ಮಲಗ್ತೀಯಲ್ವಾ ಯಾಕೆ?”

ನಾನು ಹೇಳಿದೆ-

“ಯಾಕಂದ್ರೆ ಈ ಪುಸ್ತಕಗಳಲ್ಲಿ ನಿನ್ನ ಯಾಕೆ ಯಾಕೆ ಅನ್ನೋ ಪ್ರಶ್ನೆಗಳಿಗೆಲ್ಲ ಉತ್ತರ ಇದೆ. ಅದಕ್ಕೆ”

ಮೊದಲ ಬಾರಿ ಮೊಯಿನಾ ಸುಮ್ಮನಾಗಿದ್ದಳು. ಕೋಣೆಯನ್ನ ಸ್ವಚ್ಚ ಮಾಡಿದಳು. ಗಿಡಗಳಿಗೆ ನೀರು ಹಾಕಿದಳು.

ಆಮೇಲೆ ನನ್ನ ಬಳಿ ಬಂದು ಹೇಳಿದಳು

” ನಾನೂ ಓದು ಬರಹ ಕಲಿತೀನಿ.. ನನ್ನ ಪ್ರಶ್ನೆಗಳಿಗೆಲ್ಲ ಉತ್ತರ ನಾನೇ ಕಂಡ್ಕೋತಿನಿ”

ಆಮೇಲಿಂದ , ಅವಳು ಕುರಿ ಕಾಯುವಾಗ ತನ್ನ ಸ್ನೇಹಿತರಿಗೆ ನನ್ನಿಂದ ಕಲಿತದ್ದನ್ನೆಲ್ಲ ಹೇಳುತ್ತಿದ್ದಳು.

“ತುಂಬಾ ನಕ್ಷತ್ರಗಳು ಸೂರ್ಯನಿಗಿಂತ ತುಂಬಾ ದೊಡ್ಡವು. ಆದರೆ ಅವು ಸೂರ್ಯನಿಗಿಂತ ತುಂಬಾ ದೂರದಲ್ಲಿದಾವೆ. ಹಾಗಾಗಿ ನಮಗೆ ಚಿಕ್ಕದಾಗಿ ಕಾಣ್ತಾವೆ.”

“ಸೂರ್ಯ ಹತ್ತಿರ ಇರ್ತಾನೆ ಹಾಗಾಗಿ ದೊಡ್ಡದಾಗಿ ಕಾಣ್ತಾನೆ. ಭೂಮಿ ದುಂಡಗಿದೆ. ಇದು ನಿನಗೆ ಗೊತ್ತಿತ್ತಾ?”

—-

eಒಂದು ವರುಷ ಬಿಟ್ಟು ಊರಿಗೆ ಮರಳಿ ಬಂದಾಗ ನನಗೆ ಮೊದಲು ಕೇಳಿಸಿದ ಧ್ವನಿ ಮೊಯಿನಾಳದ್ದು.

” ಸ್ಕೂಲು ಯಾಕೆ ಬಂದ್ ಆಗಿದೆ?”

ಧರಧರನೇ ಸಮಿತಿಯ ಒಳಗೆ ಬಂದವಳೇ ಮಾಲತಿಯನ್ನ ಕೆಣಕಿದಳು.

” ಏನು ನಿನ್ನ ಮಾತಿನ ಅರ್ಥ?” ಮಾಲತಿ ತಿರುಗಿ ಕೇಳಿದಳು.

” ನಾನೂ ಯಾಕೆ ಶಾಲೆ ಕಲಿಬಾರದಾ?”

“ನಿನ್ನನ್ನು ಯಾರು ತಡೆದಿದ್ದಾರೆ?” ಮಾಲತಿ ಮತ್ತೆ ಕೇಳಿದಳು.

“ಮತ್ತೆ ಇಲ್ಲಿ ಪಾಠ ಗೀಟ ಏನೂ ನಡೀತಾನೆ ಇಲ್ವಲ್ಲ?”

” ಇವತ್ತಿಗೆ ಸ್ಕೂಲು ಮುಗಿದಿದೆ.”

“ಯಾಕೆ?”

“ಯಾಕಂದ್ರೆ ಮೊಯಿನಾ, ನಾನು ಬೆಳಿಗ್ಗೆ ಒಂಬತ್ತರಿಂದ , ಹನ್ನೊಂದರ ತನಕ ಮಾತ್ರ ಕಲಿಸೋದು” ಮಾಲತಿ ತಿಳಿ ಹೇಳಿದಳು.

ಮೊಯಿನಾ ಕಾಲನ್ನು ನೆಲಕ್ಕೆ ಬಡಿಯುತ್ತ ” ಹಾಗಿದ್ರೆ ಸಮಯ ಬದಲಾಯಿಸೋಲ್ಲ ಯಾಕೆ? ಬೆಳಿಗ್ಗೆ ನಾನು ಕುರಿ ಮೆಯಿಸೋಕೆ ಹೋಗ್ಬೆಕು. ನಾನು ಹನ್ನೊಂದು ಗಂಟೆ ನಂತರನೇ ಬರಲಿಕ್ಕಾಗೋದು. ನನಗೆ ಕಲಿಸಲಿಲ್ಲಾ ಅಂದ್ರೆ ನಾನು ಕಲಿಯೋದು ಹೇಗೆ?

ನಾನು ಆ ಮುದುಕಿಗೆ (ಅಂದ್ರೆ ನನಗೆ) ಹೇಳ್ತೀನಿ. ಸಮಯ ಬದಲಾಯಿಸಲಿಲ್ಲ ಅಂದ್ರೆ ನಾವು ಕುರಿ ಮೇಯಿಸೋವ್ರೆಲ್ಲ ಶಾಲೆಗೆ ಬರಕ್ಕಾಗಲ್ಲ ಅಂತ.”

ಆಗ ಅಲ್ಲಿಯೇ ಇದ್ದ ನನ್ನ ನೋಡಿದವಳೇ ತನ್ನ ಕುರಿಮರಿಯನ್ನ ಕರೆದುಕೊಂಡು ಓಟಕ್ಕಿತ್ತಳು.

ಸಂಜೆ ನಾನು ಮೊಯಿನಾಳ ಮನೆಗೆ ಹೋದೆ.

ಆಕೆ ತನ್ನ ಪುಟ್ಟ ತಂಗಿ ಮತ್ತು ಅಣ್ಣನಿಗೆ ಹೇಳುತ್ತಿದ್ದಳು..

” ಒಂದು ಮರ ಕಡೆದರೆ ಎರಡು ಗಿಡ ನೆಡಬೇಕು.”

” ಒಂದು ಮರ ಕಡೆದರೆ ಎರಡು ಗಿಡ ನೆಡಬೇಕು”

“ಊಟ ಮಾಡೋ ಮೊದಲು ಕೈ ತೊಳಿಯಬೇಕು” ಯಾಕೆ ಗೊತ್ತಾ? ಇಲ್ಲಾಂದ್ರೆ ಹೊಟ್ಟೆಯಲ್ಲಿ ಹುಳ ಆಗ್ಬಿಡುತ್ತೆ

ನಿಮಗೇನೂ ಗೊತ್ತಿಲ್ಲ. ಯಾಕೆ ಗೊತ್ತಾ? ಯಾಕಂದ್ರೆ ನೀವು ಸಮಿತಿಲಿ ಪಾಠ ಕಲಿಯೋಕೆ ಹೋಗಲ್ಲ.ಅದಕ್ಕೆ. “

ನಿಮಗೆ ಗೊತ್ತಾ? ಈ ಊರಿನ ಪ್ರಾಥಮಿಕ ಶಾಲೆಯಲ್ಲಿ ಪ್ರವೇಶ ಪಡೆದ ಮೊದಲ ಹುಡುಗಿ ಯಾರು ಅಂತ?

ನಮ್ಮ ಮೊಯಿನಾ..

***

ಮೊಯಿನಾಗೆ ಈಗ ಹದಿನೆಂಟು ವರುಷ. ಅವಳೀಗ ಸಮಿತಿಯಲ್ಲಿ ಪಾಠ ಮಾಡ್ತಾಳೆ. ನೀವೇನಾದರೂ ಆ ಕಡೆ ಹಾದು ಹೋದರೆ ಆಕೆಯ ಎತ್ತರದ ಮತ್ತು ಸ್ಪಷ್ಟವಾದ ಧ್ವನಿ ನಿಮಗೆ ಕೇಳಿಸುತ್ತದೆ.

” ಸೋಮಾರಿಗಳಾಗಬೇಡಿ.. ನನ್ನ ಹತ್ರ ನಿಮ್ಮ ಪ್ರಶ್ನೆನ ಕೇಳಿ..ಕೇಳಿ. ಯಾಕೆ ಸೊಳ್ಳೆಗಳನ್ನ ಸಾಯಿಸ್ಬೇಕು? ಧೃವ ತಾರೆ ಯಾಕೆ ಯಾವಾಗಲೂ ಆಕಾಶದ ಉತ್ತರದ ದಿಕ್ಕಿನಲ್ಲೇ ಹುಟ್ಟುತ್ತೆ? ಈಗ ಬೇರೆ ಮಕ್ಕಳು ಕೂಡ ಕಲಿತಿದಾರೆ ಕೇಳೋದನ್ನ ” ಯಾಕೆ..?” ಅಂತ!!

ಮೊಯಿನಾಗೆ ನಾನು ಆಕೆಯ ಕುರಿತು ಕತೆ ಬರೆಯುತ್ತಿರುವುದು ಗೊತ್ತಿಲ್ಲ. ಆಕೆಗೆನಾದರೂ ಈ ವಿಷಯ ತಿಳಿದರೆ ಖಂಡಿತ ಕೇಳುತ್ತಾಳೆ,

” ನನ್ನ ಬಗ್ಗೆ ಬರಿತಿದಿಯಾ?.. ಯಾಕೆ?”

*********************

ಮೂಲ: ಮಹಾಶ್ವೇತಾ ದೇವಿ

ಅನುವಾದ: ಹಿಂದಿಯಿಂದ ಕನ್ನಡಕ್ಕೆ

ಚಿತ್ರಗಳು : ನಿಹಾರಿಕಾ ಶೆಣೈ , ಅಂತರ್ಜಾಲ

2 comments to “ಮಹಾಶ್ವೇತಾ ದೇವಿಯವರ ಕತೆ: “ಯಾಕಮ್ಮ””

ಪ್ರತಿಕ್ರಿಯಿಸಿ