ನೆಲ ತಳವಾರನಾದಡೆ

ಎಲ್ಲಿಂದಲೋ ಶಿಕ್ಷಕಿಯಾಗಿ ಹಾರೀಗೇರಿ ಊರಿಗೆ ಬಂದ ಸಾವಿತ್ರಿಯು, ತನ್ನೂರಿನಲ್ಲೇ ತನ್ನ ಅಸ್ತಿತ್ವವೇ ಇಲ್ಲದಂತಾಗಿಸಿ ಬಿಟ್ಟ ಸಂಗತಿ ಮಾತ್ರ ಮಾನಿಂಗಪ್ಪ ಸಾವಕಾರನಿಗೆ ಮರ್ಮಾಘಾತವನ್ನುಂಟು ಮಾಡಿತ್ತು. ಅದರಲ್ಲೂ ಆಕೆಗೆ ಕೆಳಗೇರಿಯ ಯುವಕರ ಮುಖಂಡ ತುಕಾರಾಮನ ಬೆಂಬಲವಿರುವುದು ಆತನ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಎಲ್ಲ ಕಾರಣಗಳಿಂದಾಗಿ ಆತ ದಿನವೂ ಚಿಂತೆಯೊಳಗೆ ಬೇಯುತ್ತಿದ್ದ…

12ಒಂದು

ಇಂದು, ಬೆಳಿಗ್ಗೆ ಹಾಸುಗೆಯಿಂದ ಎದ್ದಾಗಿನಿಂದ ಮಾನಿಂಗಪ್ಪ ಸಾವಕಾರನ ಜೀವಕ್ಕೆ ಸಮಾಧಾನ ಅಂಬೋದನs ಇಲ್ದಂಗಾಗಿತ್ತು!

ಆ ಗಳಿಗೆಯಲ್ಲಿ, ಆತನ ತಲೆಯೊಳಗೆ ತುಂಬುಕೊಂಡಿದ್ದ ನೂರೆಂಟು ವಿಚಾರಗಳು ಮನಸ್ಸನ್ನು ಎತ್ತೆತ್ತಲೋ ಹರಿದಾಡುವಂತೆ ಮಾಡಿದ್ದವು. ಇದರಿಂದಾಗಿ, ಆತ ಕುಂತಲ್ಲಿ ಕೂಡ್ರಲಾಗದೆ; ನಿಂತಲ್ಲಿ ನಿಲ್ಲಲಾಗದೆ ತನ್ನ ಮನೆಯ ಹಜಾರದೊಳಗೆ, ವಿಶಾಲವಾದ ಬೆನ್ನ ಹಿಂದೆ ಕೈ ಕಟ್ಟಿ ಅತ್ತಲಿಂದಿತ್ತ ದಡದಡನೆ ಹೆಜ್ಜೆ ಹಾಕುತ್ತಲೇ ಯೋಚನೆಯೊಳಗೆ ಮುಳುಗಿ ಹೋಗಿದ್ದ. ಹೀಗೆ, ಗಾಢವಾಗಿ ಯೋಚನೆಯೊಳಗೆ ಮುಳುಗಿಹೋಗಿದ್ದ ಆತ, ಆ ಹೊತ್ತಲ್ಲಿ ಯಾರದೋ ದಾರಿ ಕಾಯುತ್ತಿದ್ದಂತಿತ್ತು. ಅದಕ್ಕೇ, ಆತ ಗಳಿಗೆಗೊಮ್ಮೆ ಹಜಾರದಿಂದಿಳಿದು; ಅವಸರದಲ್ಲಿ ಮುಂಬಾಗಿಲಿಗೆ ಬಂದು, ಹೊರಗೆ ಇಣುಕಿ ನೋಡುತ್ತಿದ್ದ. ಇದು, ಸುಮಾರು ಹೊತ್ತಿನಿಂದ ಹಾಗೇ ನಡೆದಿತ್ತು. ಹೀಗಾಗಿ, ಮಾನಿಂಗಪ್ಪ ಸಾವಕಾರನು ಒಳಗೊಳಗೆ ಚಡಪಡಿಸುತ್ತಿದ್ದ. ಅದು, ಆತನ ಅಸಹಾಯಕತೆಯನ್ನು ಸೂಚಿಸುತ್ತಿತ್ತು.

ಹಾರೀಗೇರಿ ಊರಿನ ಆರಾಧ್ಯ ದೈವ ಹನುಮಂತ ದೇವರ ಗುಡಿಯ ಪಂಚ ಕಮೀಟಿಯಲ್ಲಿ ಒಬ್ಬನಾಗಿದ್ದ ಮಾನಿಂಗಪ್ಪ ಸಾವಕಾರನಿಗೆ ಊರಲ್ಲಿ ಎಲ್ಲರಿಗಿಂತ ಒಂದು ತೂಕ ಹೆಚ್ಚೇ… ಎಂಬಂತೆ ಮರ್ಯಾದೆ ಇತ್ತು. ಅದಕ್ಕೇ, ಈ ಗುಡಿಯ ವತಿಯಿಂದ ಪ್ರತೀ ವರ್ಷ ಉಗಾದಿಗೆ ನಡೆಸಿಕೊಂಡು ಬರುತ್ತಿದ್ದ ನೀರೋಕುಳಿ ಜಾತ್ರೆಯೂ ಈತನ ಅಣತಿಯಂತೆಯೇ ನೆರವೇರುತ್ತಿತ್ತು. ಆ ಮಟ್ಟಿಗೆ ಆತನ ಮಾತು ಪಂಚಕಮೀಟಿಯಲ್ಲಿ ನಡೀತಿತ್ತು. ಹೀಗಾಗಿ, ಈ ಊರಿನ ಮೇಲು ಜಾತಿಯ ಜನರು, ತಮ್ಮ- ತಮ್ಮೊಳಗೆ ಸಂಭವಿಸುತ್ತಿದ್ದ ಸಣ್ಣ ಪುಟ್ಟ ಜಗಳಗಳನ್ನು ಬಗೆಹರಿಸಿಕೊಳ್ಳುವುದಕ್ಕಾಗಿ ಮಾನಿಂಗಪ್ಪ ಸಾವಕಾರನ ಹತ್ತಿರ ಬರುತ್ತಿದ್ದರು. ಮತ್ತು, ಆತ ನೀಡುತ್ತಿದ್ದ ನ್ಯಾಯ ತೀರ್ಮಾನವನ್ನು ಒಪ್ಪಿಕೊಂಡು, ತಮ್ಮೊಳಗೇ ರಾಜಿಯಾಗಿ ಬಿಡುತ್ತಿದ್ದರು. ಇದು ಊರಲ್ಲಿ ಆತನ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿತ್ತು. ಈ ವರ್ಚಸ್ಸಿನಿಂದಾಗಿಯೇ ಆತ, ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯ ಅಧ್ಯಕ್ಷನೂ ಅಗಿದ್ದ. ಹೀಗೆ, ಮಾನಿಂಗಪ್ಪ ಸಾವಕಾರನು ಒಂದು ರೀತಿಯಲ್ಲಿ ಊರನ್ನೇ ಹಿಡಿತದಲ್ಲಿಟ್ಟುಕೊಂಡಿದ್ದ. ಆದರೆ, ಕೆಳಗೇರಿಯ ಯುವಕರಿಗೆ ಮಾತ್ರ ಆತನ ವಿಷಯದಲ್ಲಿ ಏನಕೇನ ಕಾರಣಗಳಿಂದಾಗಿ ಅಸಮಾಧಾನವಿತ್ತು. ಹೀಗಾಗಿ, ಅವರೆಲ್ಲ ಆತನ ಮೇಲೆ ಹಲ್ಲು ಮಸೆಯುತ್ತಿದ್ದರು. ಇದು, ಇತ್ತಿತ್ತಲಾಗಿ ಆತನನ್ನು ಚಿಂತೆಗೀಡು ಮಾಡಿತ್ತು. ಅದಕ್ಕೇ, ಕೆಲ ದಿನಗಳಿಂದ ಆತನ ಮನಸ್ಸಿಗೆ ನೆಮ್ಮದಿಯೇ ಇಲ್ಲವಾಗಿತ್ತು.

ಈ ಮಾತಿಗೆ ಪೂರಕವೆಂಬಂತೆ, ಈಗ ಹದನಿಪ್ಪತ್ತು ದಿನಗಳ್ಹಿಂದೆ ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಕಾರ್ಯಕ್ರಮವೊಂದರಲ್ಲಿ ಮಾನಿಂಗಪ್ಪ ಸಾವಕಾರನ ವಿಷಯದಲ್ಲಿ ಒಂದು ಘಟನೆ ಸಂಭವಿಸಿತ್ತು. ಅದು, ತಾನು ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯ ಅಧ್ಯಕ್ಷನಾಗಿದ್ದ ಈ ಶಾಲೆಯಲ್ಲಿ ಆಯೋಜಿಸಲಾಗಿದ್ದ ಅಂದಿನ ಕಾರ್ಯಕ್ರಮಕ್ಕೆ ಆತ ಮುಖ್ಯ ಅತಿಥಿಯಾಗಿ ಹೋಗಿದ್ದ. ಅಲ್ಲಿ, ಆ ಕಾರ್ಯಕ್ರಮದ ನಡುವೆ ನಡೆದ ಒಂದು ಕ್ಷುಲ್ಲಕ ವಿಚಾರಕ್ಕಾಗಿ ಮಾನಿಂಗಪ್ಪ ಸಾವಕಾರನಿಗೂ ಮತ್ತು ಕಾರ್ಯಕ್ರಮಕ್ಕೆ ಬಂದಿದ್ದ ಕೆಳಗೇರಿಯ ಯುವಕರಿಗೂ ಮಾತಿಗೆ ಮಾತು ಬೆಳೆದಿತ್ತು. ಆಗಲೇ, ಮಾನಿಂಗಪ್ಪ ಸಾವಕಾರನ ವರ್ತನೆಯಿಂದ ರೊಚ್ಚಿಗೆದ್ದ ಕೆಳಗೇರಿಯ ಆ ಯುವಕರೆಲ್ಲ ಆತನ ವಿರುದ್ಧ ಧಿಕ್ಕಾರ ಕೂಗತೊಡಗಿದರು. ಇದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿಬಿಟ್ಟಿತು- ಎಂಬಂಥ ಸ್ಥಿತಿ ಅಲ್ಲಿ ನಿರ್ಮಾಣವಾಗಿ ಬಿಟ್ಟಿತು! ಆಗ, ಅಲ್ಲಿದ್ದ ಊರ ಹಿರಿಯರೇ ಮುಂದೆ ಬಂದು ಕೆಳಗೇರಿಯ ಯುವಕರನ್ನು ಸಮಾಧಾನ ಮಾಡಿ ಕಳಿಸಿದ್ದರು. ಈ ಘಟನೆ ಮಾತ್ರ ಅಲ್ಲಿದ್ದವರ ಮುಂದೆ ಮಾನಿಂಗಪ್ಪ ಸಾವಕಾರನನ್ನು ಅವಮಾನಕ್ಕೀಡು ಮಾಡಿತ್ತು. ಇದರಿಂದಾಗಿಯೇ, ಕೆಳಗೇರಿಯ ಆ ಯುವಕರ ವಿಷಯದಲ್ಲಿ ಆತನ ಎದೆಯೊಳಗೆ ದ್ವೇಷದ ಕಿಚ್ಚು ಹೊತ್ತಿ ಉರೀತಿತ್ತು. ಆದರೆ, ಈ ತೆರನಾಗಿ ಆತನ ಎದೆಯೊಳಗೆ ದ್ವೇಷದ ಕಿಚ್ಚು ಹೊತ್ತಿ ಉರಿಯುವುದಕ್ಕೆ ಒಂದು ರೀತಿಯಲ್ಲಿ ಸಾವಿತ್ರಿಯೇ ಕಾರಣವಾಗಿದ್ದಳು.

ಎರಡು
ಎಂದಾದರೊಂದು ದಿನ ಹಾರೀಗೇರಿ ಊರಿನೊಂದಿಗೆ ತನ್ನ ನಂಟು ಬೆಸೆದುಕೊಳ್ಳುತ್ತದೆ ಎಂದು ಕನಸಲ್ಲೂ ಸಹ ಅಂದುಕೊಂಡಿರದಿದ್ದ ಸಾವಿತ್ರಿಯು ತೀರ ಅನಿರೀಕ್ಷಿತವೆಂಬಂತೆ ಇದೇ ಊರಿನ ಸರಕಾರಿ ಪ್ರಾಥಮಿಕ ಶಾಲೆಗೆ ಶಿಕ್ಷಕಿಯಾಗಿ ನೇಮಕಗೊಂಡು ಬಂದು ಅದಾಗಲೇ ಐದಾರು ವರ್ಷಗಳೇ ಆಗಿದ್ದವು. ಅಂದು, ಸಾವಿತ್ರಿಯು ಶಿಕ್ಷಕಿಯಾಗಿ ನೇಮಕಗೊಂಡು, ಈ ಶಾಲೆಗೆ ಹಾಜರಾಗಲು ಬಂದಾಗ ಆಕೆಯ ಆ ಹೊತ್ತಿನ ಇರುವಿಕೆಯ ಆಕಾರವನ್ನು ಕಂಡು, ಅಲ್ಲೇ ಆಫೀಸು ರೂಮಲ್ಲಿ ಹೆಡ್ ಮಾಸ್ತರರೊಂದಿಗೆ ಮಾತಾಡುತ್ತ ಕುಂತಿದ್ದ ಮಾನಿಂಗಪ್ಪ ಸಾವಕಾರನು, ಆಕೆಯತ್ತ ದೃಷ್ಟಿ ಬೀರಿ, ‘ಈ ಹಳ್ಳಿ ಊರಾಗ ಇವುಳೆನು ತಡೀತಾಳು? ನಾಕು ದಿನ್ದಾಗ ಈ ಕೆಲ್ಸ ಬಿಟ್ಟೋಗ್ಹದಿದ್ರ… ನನ್ನ ಕೇಳು!’ ಎಂದು ಮನದೊಳಗೆ ಅಂದುಕೊಳ್ಳುತ್ತ ತುಟಿಯೊಳಗೆ ನಕ್ಕಿದ್ದ. ಹೀಗೆ, ಆತ ಅಂದುಕೊಂಡಂತೆಯೇ ಸ್ವತಃ ಸಾವಿತ್ರಿಯೂ ಸಹ ಮೊದ ಮೊದಲು ಹಾಗೇ ಅಂದುಕೊಂಡಿದ್ದಳಾದರೂ ಅಚ್ಚರಿಯೆಂಬಂತೆ ಕೆಲವಾರು ತಿಂಗಳಲ್ಲಿ ಹಾರೀಗೇರಿ ಊರಿನವಳೇನೋ, ಇವಳು… ಎಂಬಂತೆ ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಬಿಟ್ಟಳು. ಆದರೆ, ಈ ಪರಿಯಾಗಿ ಆಕೆ, ಈ ಊರಿಗೆ ಹೊಂದಿಕೊಳ್ಳುವುದಕ್ಕೆ ಕರ್ಲಟ್ಟೇರ ಗೀತವ್ವನೇ ಕಾರಣಳಾಗಿದ್ದಳು. ಒಂದು ವೇಳೆ ಸಾವಿತ್ರಿಗೆ ಆಕೆ ಒದಗಿ ಬರದೇ ಹೋಗಿದ್ದರೆ ಈ ಊರಿಗೆ ಸಾವಿತ್ರಿಯು ಹೊಂದಿಕೊಳ್ಳುವುದು ಖಂಡಿತ ಸಾಧ್ಯವಾಗುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಕರ್¯ಟ್ಟೇರ ಗೀತವ್ವ ಆಕೆಗೆ ಸಹಕರಿಸಿದ್ದಳು. ಆಕೆ, ಹಾಗೆ ಸಹಕರಿಸುವುದಕ್ಕೆ ಕಾರಣವಿತ್ತು.
ಒಂದು ರೀತಿಯಲ್ಲಿ, ಸಾವಿತ್ರಿಯು ಈ ಊರಿಗೆ ಕಾಲಿಟ್ಟಾಗ ಆಕೆಗೆ ಮೊದಲು ಪರಿಚಯವಾದವಳು ಕರ್ಲಟ್ಟೇರ ಗೀತವ್ವನೇ ಎನ್ನಬೇಕು ಆಕೆ, ಶಿಕ್ಷಕಿಯಾಗಿದ್ದ ಶಾಲೆಯಲ್ಲೇ ಬಿಸಿಯೂಟದ ಅಡುಗೆ ತಯಾರಿಸುತ್ತಿದ್ದ ಕರ್ಲಟ್ಟೇರ ಗೀತವ್ವನು, ತನ್ನ ಮೊದಲ ಭೇಟ್ಟಿಯಲ್ಲಿಯೇ ಸಾವಿತ್ರಿಗೆ ಹಾರೀಗೇರಿ ಊರಿನ ಅಷ್ಟಿಷ್ಟು ಪರಿಚಯ ಮಾಡಿಕೊಟ್ಟಿದ್ದಳು. ಆಗಲೇ, ಆಕೆಯ ವಾಸಕ್ಕೊಂದು ತಳವಾರ ಓಣಿಯಲ್ಲಿ; ನೀರು- ನಿಡಿ, ಸಂಡಾಸ್- ಬಾತ್‍ರೂಮ್… ಈ ಎಲ್ಲ ಅನುಕೂಲಗಳಿರುವಂಥ ಬಾಡಿಗೆ ಮನೆಯೊಂದನ್ನು ಸೋವಿ ದರದಲ್ಲಿ ಹಿಡಿದುಕೊಟ್ಟಿದ್ದಳು. ಹಾಗೇ, ರಜೆಯ ದಿನಗಳಲ್ಲಿ ಸಾವಿತ್ರಿಗೆ ಮನೆ ಸ್ವಚ್ಛಗೊಳಿಸಿಕೊಡುವುದು, ಬಟ್ಟೆ- ಬರೆ ಒಗೆದುಕೊಡುವುದು ಮತ್ತು ಪೇಟೆಗೆ ಹೋಗಿ ಕಿರಾಣಿ ಸಾಮಾನು ತಂದುಕೊಡುವುದು ಮಾಡುತ್ತಿದ್ದಳು. ಹೀಗಾಗಿಯೇ ಆಕೆಯ ಮೇಲೆ ಸಾವಿತ್ರಿಗೆ ಒಂದು ರೀತಿಯ ನಂಬಿಕೆ ಬೆಳೆದಿತ್ತು.

ಹೀಗೆ, ಕರ್ಲಟ್ಟೇರ ಗೀತವ್ವನ ಸಹಕಾರದಿಂದಾಗಿ ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡ ಸಾವಿತ್ರಿಯು ದಿನ ಕಳೆದಂಗೆ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಲು ಹುಮ್ಮಸ್ಸಿನಿಂದ ಹೊರಟಳಾದರೂ ಅಲ್ಲಿ ಹೇಳಿಕೊಳ್ಳುವಷ್ಟು ಮಕ್ಕಳ ಹಾಜರಾತಿ ಇಲ್ಲದೇ ಇರುವುದು ಆಕೆಯನ್ನು ನಿರಾಶೆಯ ಮಡುವಿಗೆ ತಳ್ಳಿ ಬಿಟ್ಟಿತು. ಆಗ, ಇದರ ಹಿಂದಿನ ಕಾರಣವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ ಆಕೆಗೆ ಗೊತ್ತಾದ ಸಂಗತಿಯೆಂದರೆ, ಈ ಊರಿನ ಮೇಲ್ವರ್ಗದ ಜನರೆಲ್ಲ ಶ್ರೀಮಂತರಾಗಿದ್ದರಿಂದ ಅವರೆಲ್ಲ ತಮ್ಮ ಮಕ್ಕಳನ್ನು ಪಕ್ಕದೂರಿನ ಖಾಸಗಿ ಶಾಲೆಗೆ ಸೇರಿಸಿ ಬಿಟ್ಟಿದ್ದೇ ಕಾರಣವಾಗಿತ್ತು! ಹೀಗಾಗಿ, ಮಧ್ಯಮ ವರ್ಗದ ಜನರ ಮತ್ತು ಕೆಳಗೇರಿಯ ಬಡ ಕುಟುಂಬಗಳ ಮಕ್ಕಳು ಮಾತ್ರ ಇಲ್ಲಿನ ಸರಕಾರಿ ಶಾಲೆಗೆ ಬರುತ್ತಿದ್ದರು. ಅದರಲ್ಲೂ ಸಾವಿತ್ರಿಯು ತೆಗೆದುಕೊಂಡಿದ್ದ ತರಗತಿಯಲ್ಲಿ ಹೆಚ್ಚಾಗಿ ಕೆಳಗೇರಿಯ ಮಕ್ಕಳೇ ಇದ್ದರು. ಆದರೆ, ವಸ್ತುಸ್ಥಿತಿ ಹೀಗಿದ್ದರೂ ಸಹ ಈ ಶಾಲೆಯ ಹೆಡ್ ಮಾಸ್ತರರು ಮಾತ್ರ ಎಂದೂ ತಲೆ ಕೆಡಿಸಿಕೊಂಡಿರಲಿಲ್ಲ. ಇದೆಲ್ಲ, ಸಾವಿತ್ರಿಗೆ ಮೊದಮೊದಲು ನುಂಗಲಾರದ ಬಿಸಿ ತುಪ್ಪದಂತಾಗಿಬಿಟ್ಟಿತಾದರೂ ಸಹ ಮಹತ್ವಾಕಾಂಕ್ಷಿಯಾಗಿದ್ದ ಆಕೆ, ತನ್ನ ತರಗತಿಯಲ್ಲಿದ್ದ ಕೆಳಗೇರಿಯ ಮಕ್ಕಳಿಗೆಲ್ಲ ಕಾಳಜಿವಹಿಸಿ ಪಾಠ ಮಾಡತೊಡಗಿದಳು. ಜೊತೆಗೆ, ಅವರ ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ದಿನವೂ ನಿಗಾ ವಹಿಸತೊಡಗಿದಳು. ಇದರಿಂದಾಗಿ, ವರ್ಸಾರು ತಿಂಗಳು ಕಳೆಯುವುದರಲ್ಲಿ ಆ ಮಕ್ಕಳು ಸಾಕಷ್ಟು ಸುಧಾರಿಸುವುದರೊಂದಿಗೆ ಓದಿನಲ್ಲೂ ಸಹ ಆಸಕ್ತಿ ತೋರಿಸಲಾರಂಭಿಸಿದರು. ಹಾಗೆಯೇ, ಶಾಲೆಗೆ ಹೋಗುವುದೆಂದರೆ ಶಿಕ್ಷೆ ಅನುಭವಿಸಿದಂತೆ ಎಂದುಕೊಂಡಿದ್ದ ಕೆಳಗೇರಿಯ ಆ ಮಕ್ಕಳೆಲ್ಲ ತಮ್ಮಷ್ಟಕ್ಕೆ ತಾವೇ ನಿತ್ಯ ತಪ್ಪದೇ ಶಾಲೆಗೆ ಬರಲಾರಂಭಿಸಿದರು. ಅದಕ್ಕೇ, ಕ್ರಮೇಣ ಅವರೆಲ್ಲ ಚೆನ್ನಾಗಿ ಓದಿಕೊಂಡು, ಜಾಣ ವಿದ್ಯಾರ್ಥಿಗಳಾಗ ತೊಡಗಿದರು. ಆಗ, ಇದಕಂಡು ಪಕ್ಕದೂರಿಗೆ ಓದಲೆಂದು ಖಾಸಗಿ ಶಾಲೆಗೆ ಕಳಿಸುತ್ತಿದ್ದ ಮೇಲ್ವರ್ಗದ ಜನರೂ ಸಹ ತಮ್ಮ ತಮ್ಮ ಮಕ್ಕಳನ್ನು ಇದೇ ಸರಕಾರಿ ಶಾಲೆಗೆ ಸೇರಿಸಲಾರಂಭಿಸಿದರು. ಹೀಗಾಗಿ, ಸಾವಿತ್ರಿಯು ಹಾರೀಗೇರಿ ಊರಿನ ಆ ಶಾಲೆಗೆ ಶಿಕ್ಷಕಿಯಾಗಿ ಬಂದ ಒಂದೆರಡು ವರ್ಷದಲ್ಲೇ ಅಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿಬಿಟ್ಟಿತು. ಯಾವಾಗ, ಹೀಗೆ ಆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಯಿತೊ ಆಗಲೇ ಅಲ್ಲಿ ಶಿಕ್ಷಕರ ಕೊರತೆ ಕಾಡಲಾರಂಭಿಸಿತು. ಮುಂದೆ, ಈ ವಿಷಯ ತಾಲ್ಲೂಕಿನಲ್ಲಿರುವ ಶಿಕ್ಷಣಾಧಿಕರಿಗಳ ಗಮನಕ್ಕೂ ಬರಲು; ಅವರು, ಬೇರೆ ಕಡೆಗೆ ಹೆಚ್ಚುವರಿಯಾಗಿದ್ದ ಶಿಕ್ಷಕರನ್ನು ತಂದು ಸದರೀ ಶಾಲೆಗೆ ನಿಯೋಜಿಸುವ ಕೆಲಸ ಮಾಡಿದ್ದರು.

ಆಗಲೇ, ಈ ತೆರನಾಗಿ ತಮ್ಮೂರಿನ ಪ್ರಾಥಮಿಕ ಶಾಲೆ ಒಂದು ನೆಲೆಗೆ ಬಂದು ನಿಲ್ಲಲು ಕಾರಣಳಾದವಳು ಸಾವಿತ್ರಿಯೇ ಎಂಬ ಸತ್ಯ ಸಂಗತಿ ಗೊತ್ತಿದ್ದ ಹಾರೀಗೇರಿಯ ಊರ ಜನರಿಗೆ ಕ್ರಮೇಣ ಆಕೆಯ ಮೇಲೆ ಒಂದು ರೀತಿಯ ಗೌರವ ಭಾವನೆ ಮೂಡತೊಡಗಿತು. ಅದರಲ್ಲೂ ಕೆಳಗೇರಿಯ ಜನರಂತೂ ಅದೊಮ್ಮೆ ಅಂಬೇಡ್ಕರ ಜಯಂತಿಯಂದು ತಮ್ಮ ಕೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ತಾಲ್ಲೂಕಿನಲ್ಲಿರುವ ಎಲ್ಲ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಆಕೆಗೆ, ಸನ್ಮಾನ ಮಾಡಿದ್ದರು. ಆಗ, ಆ ಸಮಾರಂಭದಲ್ಲಿ ವೇದಿಕೆಯ ಮೇಲೆ ನಿಂತು, ನಿರೂಪಣೆ ಮಾಡುತ್ತಿದ್ದ ಕೆಳಗೇರಿಯ ಯುವಕರಿಗೆಲ್ಲ ಮುಖಂಡನಂತಿದ್ದ ತುಕಾರಾಮನು, ‘ಅಂದು, ದಲಿತರ ವಿಷಯದಲ್ಲಿ ಅಂಬೇಡ್ಕರರು ಕಂಡ ಕನಸು, ಇಂದು ಈ ಊರಿನಲ್ಲಿ, ಕೆಳಗೇರಿಯ ನಮ್ಮ ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡಲು ಶ್ರಮಿಸುತ್ತಿರುವ ಸಾವಿತ್ರಿಯವರಂಥ ಆದರ್ಶ ಶಿಕ್ಷಕಿಯೊಬ್ಬರ ಮೂಲಕ ನನಸಾಗುತ್ತಿದೆ…’- ಎಂದು ನೆರೆದ ಜನರ ಸಮ್ಮುಖದಲ್ಲಿ ಆಕೆಯ ಗುಣಗಾನ ಮಾಡಿದ್ದ. ಆಗ, ಆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದ ಮಾನಿಂಗಪ್ಪ ಸಾವಕಾರನಿಗೆ ಇದನ್ನೆಲ್ಲ ಕಣ್ಣಾರೆ ಕಂಡು ಸಾವಿತ್ರಿಯ ವಿಷಯದಲ್ಲಿ ಕಸಿವಿಸಿಯುಂಟಾಯಿತು. ಅದಕ್ಕೇ, ಆತ, ‘ಯಾವೂರವ್ಳೊ ನಮ್ಮೂರಿಗಿ ಬಂದು… ಹೊಲಗೇರಿನs ಸುಧಾರಿಸ್ಲಿಕ್ಕೆ ನಿಂತು ಬಿಟ್ಳಲ್ಲಪ್ಪೊ! ಹಿಂಗಾದ್ರ ಹೆಂಗಂತಿನಿ? ನಾಕು ಅಕ್ಷರ ಕಲ್ತು… ಈ ಹೊಲಿ ಸೂಳಿ ಮಕ್ಳೆಲ್ಲ ನಮ್ಮಂಥವ್ರ ತಲೆ ಮ್ಯಾಲೆ ಕುಂತ್ಗಂಡ ಬಿಡ್ತಾರು! ಇದೆಲ್ಲ, ಈ ಲೌಡಿಗಿ ಎಲ್ಲಿ ಗೊತ್ತಾಗ್ಬೇಕು…?’- ಎಂದು ಮನದೊಳಗೆ ಅಂದುಕೊಳ್ಳುತ್ತ ಕುಂತಲ್ಲೇ ಸಂಕಟಪಟ್ಟಿದ್ದ. ಆ ಸಂಕಟದಿಂದಾಗಿ ಆವೊತ್ತಿನಿಂದಲೇ ಆಕೆಯ ಮೇಲೆ ಒಂದು ಕಣ್ಣಿಟ್ಟ!

** ** **
ಯಾವಾಗ ಸಾವಿತ್ರಿಯ ಮೇಲೆ, ಮಾನಿಂಗಪ್ಪ ಸಾವಕಾರನು ಒಂದು ನೆದರಿಟ್ಟು ಬಿಟ್ಟನೊ ಆಗಲೇ ಸಾವಿತ್ರಿಗೆ ಕಷ್ಟದ ದಿನಗಳು ಪ್ರಾರಂಭವಾದವು ಎನ್ನಬೇಕು. ಇದೆಲ್ಲ, ದಿನಕಳೆದಂಗೆ ಆತನ ಮಾತಿನ ವೈಖರಿಯಿಂದ ಆಕೆಯ ಅರಿವಿಗೂ ಬಂದಿತ್ತಾದ್ದರಿಂದಲೇ ಆಕೆ, ಯಾರಿಗೂ ಗೊತ್ತಾಗದಂಗೆ ಚಿಂತೆಯೊಳಗೆ ಬೇಯುತ್ತಿದ್ದಳು. ಹೀಗೆ, ಆಕೆ ಚಿಂತೆಯಲ್ಲಿ ಬೇಯುತ್ತಲೇ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದ ದಿನಗಳಲ್ಲೇ ಆ ಶಾಲೆಯ ಹೆಡ್ ಮಾಸ್ತರರು ಬೇರೆ ಊರಿಗೆ ವರ್ಗವಾಗಿ ಹೋದ ಪರಿಣಾಮ ಸದರೀ ಶಾಲೆಯ ಸಮಸ್ತ ಜವಾಬ್ದಾರಿಯು ಜೇಷ್ಠತೆಯ ಆಧಾರದ ಮೇಲೆ ಸಾವಿತ್ರಿಯ ಹೆಗಲ ಮೇಲೆ ಬಿತ್ತು! ಇದು, ಆಕೆಯನ್ನು ಇನ್ನಷ್ಟು ಸಂದಿಗ್ಧತೆಗೀಡು ಮಾಡಿತು. ಅದಕ್ಕೇ, ಆಕೆ ಹೆಡ್ ಮಾಸ್ತರಿಕೆಯ ಜವಾಬ್ದಾರಿಯನ್ನು ವಹಿಸಿಕೊಂಡ ಮೇಲೆ ಶಾಲೆಯ ಎಲ್ಲ ವಿಚಾರಗಳಲ್ಲಿ ಮೈಯೆಲ್ಲ ಕಣ್ಣಾಗಿಸಿಕೊಂಡು ಕೆಲಸ ಮಾಡತೊಡಗಿದಳು. ಹೀಗಾಗಿಯೇ, ಶಾಲೆಯಲ್ಲಿ ದಿನವೂ ತಯಾರಿಸುತ್ತಿದ್ದ ಬಿಸಿಯೂಟಕ್ಕೆ ಸಂಬಂಧಿಸಿದಂತೆ ಅಡುಗೆ ಸಾಮಾನುಗಳ ಬಳಕೆಯ ವಿಚಾರದಲ್ಲಿ ತಾನೇ ಸ್ವತಃ ನಿಗಾ ವಹಿಸತೊಡಗಿದಳು. ಇದರಿಂದಾಗಿ, ಅಡುಗೆ ಕೋಣೆಯಲ್ಲಿ ಸಂಗ್ರಹಿಸಿಡುತ್ತಿದ್ದ ಅಕ್ಕಿ- ಬೇಳೆಯನ್ನು ಯಾರಿಗೂ ಗೊತ್ತಾಗದಂಗೆ ಆಗಾಗ ಕದ್ದು ಮನೆಗೆ ಸಾಗಿಸುತ್ತಿದ್ದ ಕರ್ಲಟ್ಟೇರ ಗೀತವ್ವನ ಕೈ ಕಟ್ಟಿ ಹಾಕಿದಂತಾಯಿತು. ಇದು, ಸಾವಿತ್ರಿಯ ಮೇಲೆ ಆಕೆ, ಅಸಮಾಧಾನಗೊಳ್ಳುವುದಕ್ಕೆ ಕಾರಣವಾಯಿತು.
ಹೀಗೆ, ಅತ್ತ ಮಾನಿಂಗಪ್ಪ ಸಾವಕಾರನ ವಕ್ರ ದೃಷ್ಟಿಗೂ; ಇತ್ತ ಕರ್ಲಟ್ಟೇರ ಗೀತವ್ವನ ಅಸಮಾಧಾನಕ್ಕೂ ಕಾರಣಳಾದ ಸಾವಿತ್ರಿಯು ಉಸಿರುಗಟ್ಟಿಸುವಂಥ ವಾತಾವರಣದಲ್ಲಿ ಕೆಲಸ ನಿರ್ವಹಿಸುತ್ತಿದ್ದ ದಿನಗಳಲ್ಲೇ ಆ ಶಾಲೆಗೆ ಹೈಟೆಕ್ ಶೌಚಾಲಯದ ನಿರ್ಮಾಣಕ್ಕಾಗಿ ದೊಡ್ಡ ಮೊತ್ತದ ಹಣ ಮಂಜೂರಾಗಿ ಬಂದು, ಬ್ಯಾಂಕಿನಲ್ಲಿದ್ದ ಶಾಲಾ ಉಸ್ತುವಾರಿ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಗು ಹೆಡ್ ಮಾಸ್ತರರ ಜಂಟಿ ಖಾತೆಗೆ ಜಮೆಯಾಯಿತು! ಆಗಲೇ, ಹೀಗೆ ತಮ್ಮಿಬ್ಬರ ಜಂಟಿ ಖಾತೆಯಲ್ಲಿ ಜಮೆಯಾದ ದೊಡ್ಡ ಮೊತ್ತದ ಹಣವನ್ನು ಕಂಡು ಮಾನಿಂಗಪ್ಪ ಸಾವಕಾರನ ತಲೆಯೊಳಗೆ ಕೆಟ್ಟ ಅಲೋಚನೆಯೊಂದು ಸುಳಿದಾಡತೊಡಗಿತು. ಅದು, ಕಡಿಮೆ ಹಣದಲ್ಲಿ ಕಳಪೆ ಮಟ್ಟದ ಶೌಚಾಲಯವನ್ನು ನಿರ್ಮಿಸಿ, ಉಳಿದ ಹಣವನ್ನು ತಾನೊಬ್ಬನೇ ನುಂಗಿ ಬಿಡುವುದಾಗಿತ್ತು! ಅದಕ್ಕೇ, ಆತ, ಈ ವಿಷಯದಲ್ಲಿ ಸಹಕರಿಸುವಂತೆ ಸಾವಿತ್ರಿಯ ಮೇಲೆ ಒತ್ತಡ ಹೇರಲಾರಂಭಿಸಿದ. ಆದರೆ, ಆತನ ಮಾತಿಗೆ ಸೊಪ್ಪು ಹಾಕದ ಸಾವಿತ್ರಿಯು, ಹೀಗೇ ಬಿಟ್ಟರೆ ಈತ, ತನ್ನನ್ನು ಮುಳುಗಿಸಿ ಬಿಡುತ್ತಾನೆಂದುಕೊಂಡು, ಈ ಸಂಗತಿಯನ್ನು, ತನ್ನ ನೌಕರಿಯ ನಿರ್ವಹಣೆಯಲ್ಲಿ ತನಗೆ ಬಂದೊದಗುವ ಇಂಥ ಸಮಸ್ಯೆಗಳಿಗೆ ತಕ್ಕ ಮಟ್ಟಿಗೆ ಸ್ಪಂದಿಸುತ್ತಿದ್ದ ತುಕಾರಾಮನ ಗಮನಕ್ಕೆ ತಂದಳು! ಆಗ, ಸಾವಿತ್ರಿಯ ಪ್ರಾಮಾಣಿಕತೆಯ ಬಗ್ಗೆ ಅರಿವಿದ್ದ ಆತ, ಕೆಳಗೇರಿಯ ಯುವಕರೊಂದಿಗೆ ಖುದ್ದು ಶಾಲೆಯ ತಂಕ ಬಂದು, ಶೌಚಾಲಯ ನಿರ್ಮಿಸುವ ವಿಷಯದಲ್ಲಿ ನೀನು ಅವ್ಯವಹಾರ ನಡೆಸುವುದಕ್ಕಾಗಿ ಹೆಡ್ ಮಾಸ್ತರರ ಮೇಲೆ ಒತ್ತಡ ತಂದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ… ಎಂದು ಮಾನಿಂಗಪ್ಪ ಸಾವಕಾರನಿಗೆ ಖಡಕ್ ಆಗಿ ತಾಕೀತು ಮಾಡಿ ಹೋಗಿದ್ದ. ಇದರಿಂದಾಗಿ, ಶೌಚಾಲಯ ನಿರ್ಮಾಣ ವಿಚಾರದಲ್ಲಿ ಆತ ಹಲ್ಲು ಕಿತ್ತ ಹಾವಾದ. ಹೀಗಾಗಿ, ಕೆಲವೇ ದಿನಗಳಲ್ಲಿ ಆ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಸುಸಜ್ಜಿತವಾದ ಹೈಟೆಕ್ ಶೌಚಾಲಯ ನಿರ್ಮಾಣವಾಗಿತ್ತು. ಆದರೆ, ಈ ಶೌಚಾಲಯ ನಿರ್ಮಿಸುವ ವಿಚಾರದಲ್ಲಿ ಮಾನಿಂಗಪ್ಪ ಸಾವಕಾರನಿಗೆ ಅಡ್ಡಗಾಲು ಹಾಕದಂತೆ ತುಕಾರಾಮನು ತಾಕೀತು ಮಾಡಿ ಹೋಗಿದ್ದ ಸುದ್ದಿ ಊರಲ್ಲೆಲ್ಲ ಗೊತ್ತಾಗಿ ಬಿಡಲು ಮಾನಿಂಗಪ್ಪ ಸಾವಕಾರನಿಗೆ ಊರಲ್ಲಿ ಮುಖವೇ ಇಲ್ಲದಂತಾಗಿ ಬಿಟ್ಟಿತು! ಆಗಿನಿಂದಲೂ ಆತ, ಸಾವಿತ್ರಿಯನ್ನು ಕಂಡರೆ ಸಾಕು ಉರಿದು ಬೀಳತೊಡಗಿದ್ದ.

ಮೂರು

ಹೀಗೆ, ಎಲ್ಲಿಂದಲೋ ಶಿಕ್ಷಕಿಯಾಗಿ ಹಾರೀಗೇರಿ ಊರಿಗೆ ಬಂದ ಸಾವಿತ್ರಿಯು, ತನ್ನೂರಿನಲ್ಲೇ ತನ್ನ ಅಸ್ತಿತ್ವವೇ ಇಲ್ಲದಂತಾಗಿಸಿ ಬಿಟ್ಟ ಸಂಗತಿ ಮಾತ್ರ ಮಾನಿಂಗಪ್ಪ ಸಾವಕಾರನಿಗೆ ಮರ್ಮಾಘಾತವನ್ನುಂಟು ಮಾಡಿತ್ತು. ಅದರಲ್ಲೂ ಆಕೆಗೆ ಕೆಳಗೇರಿಯ ಯುವಕರ ಮುಖಂಡ ತುಕಾರಾಮನ ಬೆಂಬಲವಿರುವುದು ಆತನ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಎಲ್ಲ ಕಾರಣಗಳಿಂದಾಗಿ ಆತ ದಿನವೂ ಚಿಂತೆಯೊಳಗೆ ಬೇಯುತ್ತಿದ್ದ. ಮತ್ತು, ಆ ಚಿಂತೆಯಿಂದಾಗಿಯೇ ಆತ, ಸಾವಿತ್ರಿಗೆ ತಕ್ಕ ಪಾಠ ಕಲಿಸಬೇಕೆಂದುಕೊಂಡು ಕಾದು ಕುಂತಿದ್ದ. ಇದಕ್ಕೆಲ್ಲ, ಸಾವಿತ್ರಿಯ ವಿಷಯದಲ್ಲಿ ಆತನೊಳಗೆ ಅಷ್ಟೊಂದು ಆಕ್ರೋಶ ಮನೆ ಮಾಡಿದ್ದೇ ಕಾರಣವಾಗಿತ್ತು. ಆದರೆ, ಸಾವಿತ್ರಿಯು ಮಾತ್ರ ಇದಾವುದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಶಾಲೆಯಲ್ಲಿ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡು ಹೊಂಟಿದ್ದಳು. ಆಗಲೇ, ಅಲ್ಲೊಂದು ಘಟನೆ ಸಂಭವಿಸಿತು!13

ಅದು, ಈಗ ಹದನಿಪ್ಪತ್ತು ದಿನಗಳ್ಹಿಂದೆ, ಗಾಂಧಿ ಜಯಂತಿಯಂದು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ಮಾನಿಂಗಪ್ಪ ಸಾವಕಾರನು ಮುಖ್ಯ ಅತಿಥಿಯಾಗಿ ಹೋಗಿದ್ದ. ಆಗ, ಹೆಡ್ ಮಾಸ್ತರರ ಸ್ಥಾನದಲ್ಲಿದ್ದ ಸಾವಿತ್ರಿಯು ಆ ಕಾರ್ಯಕ್ರಮಕ್ಕೆ ಊರಿನ ಹಿರಿಯರನ್ನು ಮತ್ತು ಕೆಳಗೇರಿಯ ಯುವಕರನ್ನು ಸಹ ಆಹ್ವಾನಿಸಿದ್ದಳು. ಆದರೆ, ಆ ಹೊತ್ತಿನ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಆ ಶಾಲೆಯ ಏಳನೆಯ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಕೆಳಗೇರಿಯ ಇದೇ ತುಕಾರಾಮನ ಅಣ್ಣ ಗೌತಮನ ಮಗ, ಸುರೇಶನಿಗೆ ವಹಿಸಿದ್ದಳು. ಹೀಗಾಗಿ, ಆತನೇ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದ. ಇದು, ಈ ಹಿಂದೆ ಹೈಟೆಕ್ ಶೌಚಾಲಯದ ನಿರ್ಮಾಣದ ವಿಚಾರದಲ್ಲಿ ತುಕಾರಾಮನಿಂದ ಅವಮಾನಿತನಾಗಿದ್ದ ಮಾನಿಂಗಪ್ಪ ಸಾವಕಾರನು ಸಹನೆ ಕಳೆದುಕೊಳ್ಳುವುದಕ್ಕೆ ಕಾರಣವಾಯಿತು. ಅದಕ್ಕೇ, ವೇದಿಕೆಯ ಮೇಲೆ ಕುಂತಿದ್ದ ಆತ,

‘ಲೇ, ಟೀಚರವ್ವ… ಈ ಕಾರ್ಯಕ್ರಮ ನಡೆಸಾಕೆ ಬ್ಯಾರೆ ಯಾರೂ ಸಿಗ್ಲಿಲ್ಲೆನು!? ಈ ಹೊಲೆ ಸೂಳಿಮಕ್ಳs ಬೇಕಿತ್ತೆನು, ನಿನ್ಗ…?’

ಎಂದು ಎಲ್ಲರಿಗೂ ಕೇಳಿಸುವಂತೆಯೇ ಅದೇ ವೇದಿಕೆಯ ಮೇಲೆ ಆತನ ಪಕ್ಕದ ಇನ್ನೊಂದು ಕುರ್ಚಿಯಲ್ಲಿ ಆಸೀನಳಾಗಿದ್ದ ಸಾವಿತ್ರಿಯನ್ನು ಏರು ದನಿಯಲ್ಲಿ ಕೇಳಿದ! ಆಗ, ಇದರಿಂದ ಅರೆಕ್ಷಣ ಗಲಿಬಿಲಿಗೊಳಗಾದ ಸಾವಿತ್ರಿಗೆ ಆ ಕ್ಷಣದಲ್ಲಿ ಏನೂ ತೋಚದಂತಾಗಲು ಸುಮ್ಮನೆ ಕುಂತು ಬಿಟ್ಟಳು. ಆದರೆ, ಆತನ ಮಾತುಗಳಿಂದ ವೇದಿಕೆಯ ಮುಂದೆ ಆಸೀನರಾಗಿದ್ದ ಕೆಳಗೇರಿಯ ಯುವಕರಿಗೆ ಅವಮಾನವಾದಂತಾಯಿತು. ಆ ಗಳಿಗೆಯಲ್ಲಿ, ಆತನ ವರ್ತನೆಯಿಂದ ರೊಚ್ಚಿಗೆದ್ದ ಅವರೆಲ್ಲ ಮಾನಿಂಗಪ್ಪ ಸಾವಕಾರನೊಂದಿಗೆ ಬಹಿರಂಗವಾಗಿಯೇ ಜಗಳಕ್ಕೆ ನಿಂತು ಬಿಟ್ಟರು. ಅದು, ಸಾಲದು ಎಂಬಂತೆ ಹಾಗೇ, ಆತನ ವಿರುದ್ಧ ಧಿಕ್ಕಾರ ಕೂಗತೊಡಗಿದರು. ಹೀಗಾಗಿ, ಪರಿಸ್ಥಿತಿ ವಿಕೋಪಕ್ಕೆ ಹೋಗಿ ಬಿಟ್ಟಿತು- ಎಂಬಂಥ ಸ್ಥಿತಿ ಅಲ್ಲಿ ನಿರ್ಮಾಣವಾಗಿ ಬಿಟ್ಟಿತು. ಆಗ, ಹಿಂಗಾದರೆ ಕೆಲಸ ಕೆಡುತ್ತದೆಯೆಂದುಕೊಂಡು ಅಲ್ಲಿದ್ದ ಊರ ಹಿರಿಯರೇ ಮುಂದೆ ಬಂದು ಕೆಳಗೇರಿಯ ಯುವಕರನ್ನು ಸಮಾಧಾನ ಮಾಡಿ ಕಳಿಸಿದ್ದರಾದರೂ ಈ ಘಟನೆ ಮಾತ್ರ ಮಾನಿಂಗಪ್ಪ ಸಾವಕಾರನನ್ನು ಇನ್ನಿಲ್ಲದಂಗೆ ಅವಮಾನಕ್ಕೀಡು ಮಾಡಿತ್ತು. ಇದರಿಂದಾಗಿಯೇ ಕೆಳಗೇರಿಯ ಆ ಯುವಕರ ವಿಷಯದಲ್ಲಿ ಆತನ ಎದೆಯೊಳಗೆ ದ್ವೇಷದ ಕಿಚ್ಚು ಹೊತ್ತಿ ಉರೀತಿತ್ತು.

‘ನಮಸ್ಕಾರಿ, ಸಾವ್ಕಾರ… ಯಾಕೋ ಮನೆ ಕಡಿಗಿ ಬಂದ್ಹೋಗಂತ ಹೇಳಿ ಕಳ್ಸಿದ್ರಲ್ಲ…!? ಅದಕ್ಕs, ನಸುಕಿನ್ಯಾಗ ಎದ್ದು ಜಳಕ ಮಾಡಿದಕಿನs ಒಂದು ಕಪ್ಪು ‘ಚಾ…’ ನೂ ಸಯಿತ್ ಕುಡೆಲ್ದ ನಿಮ್ಗ ಭೇಟ್ಟಿ ಆಗಾಕಂತ ಬಂದೀನಿ…?-

ಎಂದು ಕರ್ಲಟ್ಟೇರ ಗೀತವ್ವ ಅಂದುಕೊಳ್ಳುತ್ತ ಮುಂಬಾಗಿಲನ್ನು ದಾಟಿಕೊಂಡು ಒಳಗೆ ಬಂದಾಗ, ಮಾನಿಂಗಪ್ಪ ಸಾವಕಾರನು, ‘ಹ್ಞಾಂ…’ ಎನ್ನುತ್ತ ಸರಕ್ಕನೆ ವಾಸ್ತವಕ್ಕೆ ಬಂದ. ಹಾಗೇ, ಪಡಸಾಲೆಯಲ್ಲಿ ನಿಂತಿದ್ದ ಆಕೆಯತ್ತ ದೃಷ್ಟಿ ಬೀರಿದ. ಆಗಲೇ, ಸೂರ್ಯನ ಬೆಳಕು ಮುಂಬಾಗಿಲ ಮೂಲಕ ಒಳ ಬಂದು, ಪಡಸಾಲೆಯಲ್ಲಿ ಉದ್ದೋಕೆ ಕತ್ತರಿಸಿಟ್ಟಂತೆ ಹರಡಿಕೊಂಡಿತ್ತು. ಅದ ಕಂಡು ಆತ, ‘ವ್ಯಾಳ್ಳೆ ಭಾಳ ಆಗೇದೆಲ್ಲ…!’ ಎಂದು ಮನದೊಳಗೆ ಅಂದುಕೊಂಡ. ಹಾಗೇ,

‘ಬಾ, ಗೀತವ್ವ, ಬಾ… ನಿಂದs ದಾರಿ ಕಾಯಾಕ್ಹತ್ತಿದ್ದೆ…’ ಎಂದ.

ಆತ, ಇಂದು ಬೆಳಿಗ್ಗೆ ಹಾಸುಗೆಯಿಂದ ಎದ್ದಾಗಿನಿಂದಲೂ ಕುಂತಲ್ಲಿ ಕೂಡ್ರಲಾಗದೆ; ನಿಂತಲ್ಲಿ ನಿಲ್ಲಲಾಗದೆ ತನ್ನ ಮನೆಯ ಹಜಾರದೊಳಗೆ, ವಿಶಾಲವಾದ ಬೆನ್ನ ಹಿಂದೆ ಕೈ ಕಟ್ಟಿ, ಅತ್ತಲಿಂದಿತ್ತ ದಡದಡನೆ ಹೆಜ್ಜೆ ಹಾಕುತ್ತಲೇ ಯೋಚನೆಯೊಳಗೆ ಮುಳುಗಿ ಹೋಗಿದ್ದವನು ಕರ್ಲಟ್ಟೇರ ಗೀತವ್ವ, ಮನೆಯೊಳಗೆ ಬಂದು, ಮಾತಾಡಿಸಿದಾಗಲೇ ಎಚ್ಚೆತ್ತದ್ದು! ಆದರೆ, ಆ ಹೊತ್ತಲ್ಲಿ ಆತ, ಹೀಗೆ ಗಾಢವಾಗಿ ಯೋಚನೆಯೊಳಗೆ ಮುಳುಗುವುದಕ್ಕೂ ಒಂದು ಕಾರಣವಿತ್ತು.
…. ನಿನ್ನೆ ದಿನ ಸಂಜೆ, ಮಾನಿಂಗಪ್ಪ ಸಾವಕಾರನು ಹನುಮಂತ ದೇವರ ಗುಡಿಯ ಪೌಳಿಯಲ್ಲಿ ಮುಂಬರಲಿರುವ ನೀರೋಕುಳಿ ಜಾತ್ರೆಯ ವಿಚಾರದಲ್ಲಿ ನಡೆದ ಪಂಚ ಕಮೀಟಿಯ ಮೀಟಿಂಗು ಮುಗಿಸಿಕೊಂಡು ಮನೆಗೆ ಬರುವಾಗ ದಾರಿಯಲ್ಲಿ ಆತನಿಗೆ ತುಕಾರಾಮನು ಎದುರಾಗಿದ್ದ. ಆಗ, ಆತನನ್ನು ಕಂಡದ್ದೇ ತಡ, ಕೆಳಗೇರಿಯ ಯುವಕರ ವಿಷಯದಲ್ಲಿ ಮಾನಿಂಗಪ್ಪ ಸಾವಕಾರನ ಎದೆಯೊಳಗೆ ಹೆಪ್ಪುಗಟ್ಟಿದ್ದ ದ್ವೇಷದ ಕಿಚ್ಚು ಜಾಗೃತಗೊಂಡು ಬಿಟ್ಟಿತು! ಅದಕ್ಕೇ, ಆತ, ಆ ಯುವಕರ ಗುಂಪಿನ ಮುಖಂಡ ತುಕಾರಾಮನನ್ನು ತಡೆದು ನಿಲ್ಲಿಸಿದವನೆ ಎದೆ ಮೇಲಿನ ಅಂಗಿ ಹಿಡಿದು,

‘ಲೇ, ಲೌಡಿ ಮಕ್ಕಳ್ರ್ಯಾ… ಎಟ್ಟರೆ ಮೆರೀಲಿಕತ್ತೀರ್ಲೆ, ಈ ಊರಾಗ…!? ಆ ಹಾದ್ರಗಿತ್ತಿ, ಸಾವಿತ್ರಿ ಟೀಚರ್ನ ಬೆನ್ನಿಗಿ ನಿಂತು… ನನ್ನ ಮರ್ಯಾದೆ ತೆಗಿತೀರೇನ್ಲೆ…?’

ಎಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ಜಗಳಕ್ಕೆ ನಿಂತು ಬಿಟ್ಟ. ಆದರೆ, ಆ ಕ್ಷಣದಲ್ಲಿ, ಹೀಗೆ ಏಕಾ ಏಕಿ ತನ್ನ ಮೇಲೆ ಎಗರಿ ಬಿದ್ದ ಮಾನಿಂಗಪ್ಪ ಸಾವಕಾರನ ಮಾತುಗಳಿಂದ ವ್ಯಘ್ರನಾದ ತುಕಾರಾಮನು,

‘ಏಯ್, ಮಾನಿಂಗಪ್ಪ ಸಾವ್ಕಾರs, ನಾಲಗಿ ಬಿಗಿ ಹಿಡ್ದು ಮಾತಾಡು… ನಾವೂ ಮನುಸೇರಿದ್ದೀವಿ! ನೀ, ಹಿಂಗ್ ಗಂಟ್ಲು ಸಿರ ಹರ್ದೋಗ್ಹಂಗ ಚೀರಾಡಿದ್ರ… ನಾ, ಹೆದರ್ತೀನೆಂತ ತಿಳಿದಿದ್ದೆನು? ನೀನೆಂಥ ಹಲ್ಕಟ್ ಸೂಳಿ ಮಗ ಇದ್ದೀ ಅಂತ ಊರ್ಗೆಲ್ಲ ಗೊತ್ತದ. ನೀ, ಅದೇನು ಹರ್ಕೊಂತಿ ಹರ್ಕೋಗು! ನಾವೂ ಒಂದು ಕೈ ನೋಡ್ಕೋಂತಿವಿ, ಹೋಗು…’

ಎಂದು ಆತನ ಮುಖಕ್ಕೆ ಹೊಡೆದವರಂಗೆ ಅಂದವನೆ ಅಲ್ಲಿಂದ ಬಿರಬಿರನೆ ಹೊರಟು ಹೋಗಿದ್ದ! ಆಗ, ಇದರಿಂದ ಮತ್ತಷ್ಟು ಕುದ್ದು ಹೋದ ಮಾನಿಂಗಪ್ಪ ಸಾವಕಾರನು, ಆತ ಹೋದ ದಾರಿಯತ್ತ ದೃಷ್ಟಿ ಬೀರಿ,

‘ಇದಕ್ಕೆಲ್ಲ ಆ ಹಾದ್ರಗಿತ್ತಿ ಸಾವಿತ್ರಿನs ಕಾರಣ! ಅಕಿ, ಈ ಊರಾಗ ಅಟ್ಟs ಅಲ್ಲ… ಮಾಸ್ತರಕಿ ನೌಕ್ರಿನs ಬಿಟ್ಟೋಗ್ಬೇಕು… ಹಂಗ್ ಮಾಡ್ದಿದ್ರ ನನ್ನ ಹೆಸ್ರು ಮಾನಿಂಗಪ್ಪ ಸಾವ್ಕಾರನs ಅಲ್ಲ!’ ಎಂದು ತುಟಿಯೊಳಗೆ ಅಂದುಕೊಳ್ಳುತ್ತ ಕಟಕಟನೆ ಹಲ್ಲು ಕಡಿದ.

ಹಾಗೇ, ದೀರ್ಘವಾದ ನಿಟ್ಟುಸುರೊಂದನ್ನು ಬಿಟ್ಟು, ತನ್ನಷ್ಟಕ್ಕೆ ತಾನೇ ಸುಧಾರಿಸಿಕೊಂಡು ಯೋಚಿಸತೊಡಗಿದ. ಆಗ, ಆತನ ಕಣ್ಮುಂದೆ ಕರ್ಲಟ್ಟೇರ ಗೀತವ್ವ ಬಂದಂಗಾಗಲು ಮತ್ತೆ ಗೆಲುವಾದ. ಮರುಕ್ಷಣದಲ್ಲಿ, ಆ ಗೆಲುವನ್ನು ಮುಖದಲ್ಲಿ ತುಂಬುಕೊಂಡು, ದಡದಡನೆ ಹೆಜ್ಜೆ ಹಾಕುತ್ತ ಮನೆಗೆ ಬಂದವನೇ ತನ್ನ ಮನೆ ಕೆಲಸದಾಳು ಸಣ್ಣಪ್ಪನ ಮೂಲಕ,

‘ನಾಳೆ, ಹರ್ಯಾನೆಳೆ ಕರ್ಲಟ್ಟೇರ ಗೀತವ್ವನಿಗಿ ಮನೆತಂಕ ಬರ್ಲಿಕ್ಕೇಳು…’ ಎಂದು ಹೇಳಿ ಕಳಿಸಿದ್ದ. ಅದಕ್ಕೇ, ಆಕೆ, ಇಂದು ನಸುಕೀಲೆ ಎದ್ದು, ಜಳಕ ಮಾಡಿದವಳೆ ಒಂದು ಕಪ್ಪು ‘ಚಾ…’ ನೂ ಸಯಿತ ಕುಡೀದೆ ಮಾನಿಂಗಪ್ಪ ಸಾವಕಾರನ ಮನೆಗೆ ಬಂದಿದ್ದಳು….
ಆ ಗಳಿಗೆಯಲ್ಲಿ ಕರ್ಲಟ್ಟೇರ ಗೀತವ್ವನನ್ನು ಕಂಡು ಖುಷಿಯಾದ ಮಾನಿಂಗಪ್ಪ ಸಾವಕಾರನು ಅವಸರದಲ್ಲಿ ಹಜಾರದಿಂದಿಳಿದು ಆಕೆಯತ್ತ ಬಂದ. ಹಾಗೇ, ಆತ ಗೆಲುವಿನ ನಗೆಯನ್ನು ಮುಖದಲ್ಲಿ ತಂದುಕೊಳ್ಳುತ್ತ, ಆಕೆಯನ್ನು ತನ್ನ ಮನೆ ಪಕ್ಕದಲ್ಲಿದ್ದ ದನಗಳ ದಡ್ಡಿಯತ್ತ ಕರೆದುಕೊಂಡು ಹೋದ. ಆಗಲೇ, ಸುತ್ತಲೂ ಕಣ್ಣಾಡಿಸಿ, ಅಲ್ಲಿ ಯಾರೂ ಇಲ್ಲವೆಂಬುದನ್ನು ಖಚಿತಪಡಿಸಿಕೊಂಡವನೆ ಕರ್ಲಟ್ಟೇರ ಗೀತವ್ವನ ಕಿವಿಯಲ್ಲಿ ಗುಟ್ಟಾಗಿ ಏನೋ ಹೇಳತೊಡಗಿದ. ಆದರೆ, ಆ ಕ್ಷಣದಲ್ಲಿ ಅದ ಕೇಳುತ್ತ… ಕೇಳುತ್ತ… ಆಕೆಯ ಮುಖದಲ್ಲಿ ದುಗುಡ ತುಂಬಿಕೊಂಡಿತು!

ನಾಕು
ಇಂದು, ಬೆಳಿಗ್ಗೆಯಿಂದ ಶಾಲೆಯಲ್ಲಿ ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಬಂದಿತ್ತಾದರೂ ಮಧ್ಯಾಹ್ನದ ಊಟದ ಬಿಡುವಿನಲ್ಲಿ ಮಕ್ಕಳೆಲ್ಲ ಬಿಸಿಯೂಟ ಸೇವಿಸಿದ ಒಂದರ್ಧ ಗಂಟೆಯಲ್ಲೇ ವಾಂತಿ ಮಾಡಿಕೊಳ್ಳಲಾರಂಭಿಸಿದರು! ಯಾವಾಗ, ಹೀಗೆ ಮಕ್ಕಳೆಲ್ಲ ವಾಂತಿ ಮಾಡಿಕೊಳ್ಳಲಾರಂಭಿಸಿದರೋ ಆಗಲೇ ಅದಕಂಡು, ಸಾವಿತ್ರಿ ಅಷ್ಟೇ ಯಾಕೆ ಶಾಲೆಯಲ್ಲಿದ್ದ ಎಲ್ಲ ಶಿಕ್ಷಕರೂ ಸಹ ಹೆದರಿ ಕಂಗಾಲಾದರು. ಅದಕ್ಕೇ, ಅವರೆಲ್ಲ ಸೇರಿಕೊಂಡು ಅಸ್ವಸ್ಥರಾದ ಮಕ್ಕಳನ್ನು ಅತ್ತ ಉಪಚರಿಸತೊಡಗಿದರೆ ಇತ್ತ, ಹೀಗೆ ಏಕಾಏಕಿ ಸಂಭವಿಸಿದ ಘಟನೆಯಿಂದಾಗಿ ಸಾವಿತ್ರಿಯ ಜೀವವೇ ಬಾಯಿಗೆ ಬಂದಂತಾಗಿರಲು ಮುಂದೇನು ಮಾಡಬೇಕೆಂದು ತಿಳಿಯದೇ ದಿಗಿಲಿಗೆ ಬಿದ್ದಳು! ಜೊತೆಗೆ, ಆ ಶಾಲೆಯ ಹೆಡ್ ಮಾಸ್ತರಳಾಗಿದ್ದ ಆಕೆಯ ಮೇಲೆಯೇ ಎಲ್ಲ ಜವಾಬ್ದಾರಿಯೂ ಇತ್ತಾದ್ದರಿಂದ, ಅಲ್ಲಿ ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದನ್ನು ಕಣ್ಣಾರೆ ಕಂಡು ಒಳಗೊಳಗೆ ಸಂಕಟಪಡತೊಡಗಿದಳು. ಆದರೂ, ಸಾವಿತ್ರಿಯು ನಿಧಾನವಾಗಿ ತನ್ನಷ್ಟಕ್ಕೆ ತಾನೇ ಸುಧಾರಿಸಿಕೊಂಡು, ಫೋನ್ ಮೂಲಕ ಊರೊಳಗಿನ ಹಿರಿಯರಿಗೂ ಮತ್ತು ಕೆಳಗೇರಿಯ ಯುವಕರ ಗುಂಪಿಗೂ ತಡಮಾಡದೆ ಸುದ್ದಿ ಮುಟ್ಟಿಸಿದಳು. ಹೀಗೆ, ಆಕೆ ಸುದ್ದಿ ಮುಟ್ಟಿಸಿದ ಹತ್ತಿಪ್ಪತ್ತು ನಿಮಿಷದಲ್ಲೇ ಅವರೆಲ್ಲ ಶಾಲೆಯತ್ತ ಓಡೋಡಿ ಬಂದು, ಅವರಲ್ಲಿ ಕೆಲವರು ಅಸ್ವಸ್ಥರಾದ ಮಕ್ಕಳನ್ನು ತಮ್ಮ ತಮ್ಮ ವಾಹನಗಳ ಮೂಲಕ ಪಕ್ಕದೂರಿನಲ್ಲಿದ್ದ ಸಂಬರಗಿ ಡಾಕ್ಟರರ ದವಾಖಾನೆಗೆ ಸೇರಿಸುವ ವ್ಯವಸ್ಥೆ ಮಾಡತೊಡಗಿದರು. ಇನ್ನು ಕೆಲವರು ಸ್ವಯಂ ಪ್ರೇರಿತರಾಗಿ ತಾಲ್ಲೂಕು ಕೇಂದ್ರದಲ್ಲಿರುವ ಶಾಲಾ ಮೇಲಾಧಿಕಾರಿಗಳಿಗೂ ಮತ್ತು ಮಾಧ್ಯಮದವರಿಗೂ ಸುದ್ದಿ ಮುಟ್ಟಿಸುವುದರಲ್ಲಿ ನಿರತರಾಗಿದ್ದರು. ಹೀಗಾಗಿ, ಶಾಲಾ ಆವರಣದ ತುಂಬೆಲ್ಲ ಒಂದು ರೀತಿ ಆತಂಕದ ವಾತಾವರಣ ಮನೆ ಮಾಡಿತ್ತು. ಇದೇ ಹೊತ್ತಲ್ಲಿ, ಕೆಳಗೇರಿಯ ಯುವಕರ ಮುಖಂಡ ತುಕಾರಾಮನು, ಒಂದಿಷ್ಟು ಜನರೊಂದಿಗೆ ಅಲ್ಲೇ ಇದ್ದುಕೊಂಡು, ಸಾವಿತ್ರಿಗೂ ಮತ್ತು ಎಲ್ಲ ಶಿಕ್ಷಕರಿಗೂ,

‘ನೀವು ಹೆದರ್ಬ್ಯಾಡ್ರಿ… ಅಂಥದ್ದೇನೊ ಆಗಂಗಿಲ್ಲ. ಊಟದಾಗ ಏನೋ ವ್ಯತ್ಯಾಸ ಆಗಿ ಹಿಂಗ್ ಆಗಿರ್ಬೇಕು! ಸಂಬರಗಿ ಡಾಕ್ಟ್ರು ಭಾಳ್ ಶಾಣ್ಯಾ ಅದಾರು ತಾಸೊಪ್ಪತ್ತಿನ್ಯಾಗ ಎಲ್ಲನೂ ಕಂಟ್ರೋಲಿಗಿ ತರ್ತಾರು ನೀವೇನೂ ಚಿಂತೆ ಮಾಡ್ಬ್ಯಾಡ್ರಿ. ಧೈರ್ಯೆಲೆ ಇರ್ರಿ…’ ಎಂದು ಸಮಾಧಾನದ ಮಾತು ಹೇಳುತ್ತಿದ್ದ.

ಆದರೂ ಸಹ ಸಾವಿತ್ರಿಯು ನಿಂತಲ್ಲಿ ನಿಲ್ಲಲಾಗದೆ ಚಡಪಡಿಸುತ್ತಿದ್ದಳು. ಆದರೆ, ಇತ್ತ ಅಡುಗೆ ಕೋಣೆಯ ಒಂದು ಮೂಲೆಯಲ್ಲಿ ಒಬ್ಬಳೇ ಕುಂತಿದ್ದ ಕರ್ಲಟ್ಟೇರ ಗೀತವ್ವನ ಮುSದಲ್ಲಿ ಮಾತ್ರ ಪ್ರೇತಕಳೆ ತುಂಬಿಕೊಂಡಿತ್ತು! ಇದರಿಂದಾಗಿ, ಆಕೆ ಒಳಗೊಳಗೆ ಸಂಕಟಪಡುತ್ತಿದ್ದಳು. ಆ ಕ್ಷಣದಲ್ಲಿ ಆಕೆಯ ಕಣ್ಮುಂದೆ ಮಾನಿಂಗಪ್ಪ ಸಾವಕಾರನು ಬಂದಂಗಾಗಲು ಬೆಚ್ಚಿ ಬಿದ್ದಳು. ಆತ, ಹಾಗೆ ಕಣ್ಮುಂದೆ ಬರುತ್ತಿದ್ದಂಗೆ ಜೀವಭಯದಿಂದ ನಡುಗತೊಡಗಿದಳು. ಮರುಕ್ಷಣದಲ್ಲೇ ಅದೇ ಭಯದಲ್ಲಿ ಶೂನ್ಯದಲ್ಲಿ ದೃಷ್ಟಿ ನೆಟ್ಟು ಚಿಂತೆಗೆ ಬಿದ್ದಳು. ಆದರೆ, ಇದೇ ಹೊತ್ತಲ್ಲಿ, ಅತ್ತ ಮನೆಯಲ್ಲಿದ್ದುಕೊಂಡೇ ಶಾಲೆಯಲ್ಲಿ ನಡೆದ ಘಟನೆಯ ಬಗ್ಗೆ ತನ್ನ ಮನೆ ಕೆಲಸದಾಳು ಸಣ್ಣಪ್ಪನ ಮೂಲಕ ಎಲ್ಲವನ್ನೂ ತಿಳಿದುಕೊಂಡಿದ್ದ ಮಾನಿಂಗಪ್ಪ ಸಾವಕಾರನೂ ಸಹ ಹೆದರಿ ಕಂಗಾಲಾಗಿದ್ದ. ಹೀಗಾಗಿ, ತನಗಿನ್ನು ಉಳಿಗಾಲವಿಲ್ಲವೆಂಬುದು ಆತನಿಗೆ ಸ್ಪಷ್ಟವಾಗಿ ಗೊತ್ತಾಗಿತ್ತು. ಅದಕ್ಕೇ, ಆ ಗಳಿಗೆಯಲ್ಲಿ ಆತ ಒಂದು ನಿರ್ಧಾರಕ್ಕೆ ಬಂದು ಬಿಟ್ಟಿದ್ದ!

ಆಗಲೇ, ಇತ್ತ ಶಾಲೆಯ ಆವರಣದಲ್ಲಿ, ಒಂದಿಷ್ಟು ಜನರೊಂದಿಗೆ ನಿಂತುಕೊಂಡು ಸಾವಿತ್ರಿಗೂ ಮತ್ತು ಅಲ್ಲಿದ್ದ ಎಲ್ಲ ಶಿಕ್ಷಕರಿಗೂ ಧೈರ್ಯದ ಮಾತು ಹೇಳುತ್ತ ನಿಂತಿದ್ದ ತುಕಾರಾಮನಿಗೆ ಅಲ್ಲೆಲ್ಲೂ ಕರ್ಲಟ್ಟೇರ ಗೀತವ್ವನು ಕಾಣದೇ ಇರುವುದು ಅಚ್ಚರಿಯಾಯಿತು. ಮತ್ತು, ಆ ಅಚ್ಚರಿಯೇ ಆತನ ಅನುಮಾನಕ್ಕೆ ಕಾರಣವಾಯಿತು. ಆದರೆ, ಆತ ಅದನ್ನು ಹೊರ ತೋರುಗೊಡದೇ, ಅಲ್ಲಿದ್ದ ಜನರನ್ನು ಕಣ್‍ಸನ್ನೆಯ ಮೂಲಕವೇ ಕರೆದುಕೊಂಡು, ಅಡುಗೆ ಕೋಣೆಯತ್ತ ಬಂದವನೆ, ಒಳಹೊಕ್ಕು ಕರ್ಲಟ್ಟೇರ ಗೀತವ್ವನನ್ನು ಹುಡುಕತೊಡಗಿದ.

ಆಗ, ಅಡುಗೆ ಕೋಣೆಯ ಒಂದು ಮೂಲೆಯಲ್ಲಿ; ಒಬ್ಬಳೇ ಶೂನ್ಯದಲ್ಲಿ ದೃಷ್ಟಿ ನೆಟ್ಟು, ಜೀವ ಭಯದಿಂದ ನಡುಗುತ್ತ ಕುಂತಿದ್ದ ಕರ್ಲಟ್ಟೇರ ಗೀತವ್ವನು ಆತನ ಕಣ್ಣಿಗೆ ಬಿದ್ದಳು. ಆ ಹೊತ್ತಲ್ಲಿ, ಅಕೆಯ ಮುಖದಲ್ಲಿ ತುಂಬುಕೊಂಡಿದ್ದ ಪ್ರೇತ ಕಳೆಯನ್ನು ಕಂಡು, ತುಕರಾಮನ ಅನುಮಾನ ಇನ್ನಷ್ಟು ಬಲವಾಯಿತು. ಅದಕ್ಕೇ, ಆತ, ‘ಲೇ, ಗೀತವ್ವ, ಇಲ್ಲಿ ಕುತ್ಕಂಡು ಏನ್ ಮಾಡ್ಲಿಕತ್ತಿ!? ಅಲ್ಲಿ, ಹೊರಗಡೆ, ಮಕ್ಳೆಲ್ಲ… ನೀ, ತಯಾರಿ ಮಾಡಿದ ಬಿಸಿಯೂಟದ ಅಡುಗೆ ಉಂಡ್ಮ್ಯಾಲೆ ಹಿಂದಕ್ ಮುಂದಕ್ ಮಾಡ್ಕೊಂಡು ಪ್ರಜ್ಞೆ ತಪ್ಪಿ… ದವಾಖಾನಿ ಸೇರ್ಯಾರು! ಅಂಥದ್ರಾಗ, ನಿನ್ಗೇನೂ ಸಂಬಂಧನs ಇಲ್ದಂಗ ಇಲ್ಲಿ ಕುಂತಿದ್ದೆಲ್ಲ? ಹಿಂಗ್, ನೀ, ಕುಂತ್ಗಂಡದ್ದು ನೋಡಿದ್ರ… ಇದ್ರಾಗ ನಿಂದs ಏನೋ ಕರಾಮತ್ತು ಐತೆಂತ್ತ ನನ್ಗ ಅನಿಸ್ಲಿಕತ್ತೆದ…! ಲೇ, ಗೀತವ್ವ… ಖರೇ ಹೇಳು! ಇಲ್ದಿದ್ರ ನಿನ್ನ ಪರಿಣಾಮ ನೆಟ್ಟಗಿರಂಗಿಲ್ಲ, ನೋಡು…’ ಎಂದು ಆಕೆಗೆ ಏರು ದನಿಯಲ್ಲಿ ಅಂದ.

ಆತ, ಹೀಗೆ ಏರುದನಿಯಲ್ಲಿ ಅಂದ ಮಾತುಗಳನ್ನು ಕೇಳಿ, ತಟ್ಟನೆ ದೃಷ್ಟಿ ಕದಲಿಸಿ ಕರ್ಲಟ್ಟೇರ ಗೀತವ್ವ ವಾಸ್ತವಕ್ಕೆ ಬಂದಳು. ಆತನನ್ನು ಕಂಡು ಮತ್ತಷ್ಟು ಹೆದರಿ ಕಂಗಾಲಾದ ಆಕೆಯ ಗಂಟಲು ಒಣಗಿ ಬರಲು ಉಗುಳು ನುಂಗಿದಳು. ಹಾಗೇ, ತನ್ನಷ್ಟಕ್ಕೆ ತಾನೇ ಸುಧಾರಿಸಿಕೊಂಡು ಎದ್ದು ತುಕಾರಾಮನತ್ತ ಬಂದವಳೆ, ‘ಯಣ್ಣ, ಇದ್ರಾಗ ನಂದೇನೂ ತಪ್ಪಿಲ್ಲ. ಆ ಮಾನಿಂಗಪ್ಪ ಸಾವ್ಕಾರನs ಇಂದು ಹರ್ಯಾನೆಳೆ ನನ್ನ ಮನೆ ತಂಕ ಕರ್ಸಿ, ಅಡುಗ್ಯಾಗ ಹೇನಿನಪುಡಿ ಹಾಕಂತ ಹೇಳಿ… ಕೊಟ್ಟ! ಆಗ, ನಾ, ಇದೆಲ್ಲ ನನ್ನಿಂದ ಆಗದ ಕೆಲ್ಸ… ನಾ, ಮಾಡಂಗಿಲ್ಲ ಅಂದೆ! ಆದ್ರ ಅವುನು, ‘ಸಾವಿತ್ರಿ ಟೀಚರ್ರು ಭಾಳ ಸೊಕ್ಕಿಗಿ ಬಂದಾಳು. ಅಕಿ, ಕೆಳಗೇರಿ ಮಂದಿನೆಲ್ಲ ನನ್ನ ಮ್ಯಾಲೆ ಎತ್ತಿ ಕಟ್ಲಿಕತ್ತ್ಯಾಳು. ಅಕಿಗಿ ಬುದ್ಧಿ ಕಲಿಸ್ಬೇಕಾಗೆದ. ಅದಕ್ಕs, ನೀನು… ಈ ಕೆಲ್ಸ ಮಡಾಕsಬೇಕು’ ಅಂತೇಳಿ ಒತ್ತಾಯ ಮಾಡ್ದ. ಅಂಥಾದ್ರಾಗ ನನ್ಗೂ ಸಾವಿತ್ರಿ ಟೀಚರ್ಮ್ಯಾಲೆ ಒಂದು ಕಾರಣದಿಂದ ಸಿಟ್ಟಿತ್ತು! ಅದು, ನಾ, ಬಿಸಿಯೂಟದ ಅಕ್ಕಿ- ಬ್ಯಾಳಿ ಎಲ್ಲನೂ ತುಡುಗ ಮಾಡಿ ಮನಿಗಿ ಒಯ್ಯುದನೆಲ್ಲ ಅವ್ರು ಬಂದ್ ಮಾಡಿಸಿದ್ರು! ಅದಕ್ಕs, ಹಿಂಗ್ ಮಾಡಿ ಅವ್ರಿಗಿ ಬುದ್ಧಿ ಕಲಿಸ್ಬೇಕಂತ ಅಂದ್ಕಂಡು… ನಾ, ಈ ಹೇಲ್ ತಿನ್ನೊ ಕೆಲ್ಸ ಮಾಡಾಕ ಒಪ್ಕೊಂಡೆ…’ ಎಂದು ಆತನ ಕಾಲಿಗೆ ಬಿದ್ದು ಕಣ್ಣೀರಿಡತೊಡಗಿದಳು.

ಆ ಕ್ಷಣದಲ್ಲಿ, ಆಕೆಯ ಮಾತುಗಳನ್ನು ಕೇಳಿ ತುಕಾರಾಮನಿಗೆ ಸಿಟ್ಟು ಉಕ್ಕೇರಿ ಬಂತು. ಅದೇ ಸಿಟ್ಟಿನಲ್ಲಿ ಆತ, ಹಿಂದು ಮುಂದು ನೋಡದೆ, ‘ನಿಮ್ಮವ್ವುನ ಹಡ… ಎಂಥ ಕೆಲ್ಸ ಮಾಡ್ದೆಲ್ಲೆ!’ ಎಂದು ಬೈಯುತ್ತ, ಕರ್ಲಟ್ಟೇರ ಗೀತವ್ವನ ಎದೆಗೆ ಜಾಡಿಸಿ ಒದ್ದ! ಆಗ, ಆತ ಹಾಗೆ ಒದ್ದ ರಭಸಕ್ಕೆ ನಾಯಿಯಂಗೆ ಕುಂಯ್ಯಗುಡುತ್ತ ಹೋಗಿ ಮೂಲೆಯಲ್ಲಿ ಬಿದ್ದುಕೊಂಡ ಆಕೆ, ನೋವಿನಿಂದ ನರಳತೊಡಗಿದಳು. ಆಗಲೇ, ತುಕಾರಾಮನು ಆಕೆಯತ್ತ ಉರಿಗಣ್ಣು ಬಿಡುತ್ತ, ‘ಲೇ, ಬರ್ರಲೆ, ಸಣ್ಣ ಸಣ್ಣ ಮಕ್ಳಿಗಿ ವಿಷ ಉಣಿಸ್ಯಾನಲ್ಲ… ಆ ತಾಯ್ಗಂಡ ಸೂಳಿಮಗ ಮಾನಿಂಗಪ್ಪ ಸಾವಕಾರನ ಜೀವಂತ ಸುಟ್ಟು ಬಿಡೂನಂತ…!’ ಎಂದು ತನ್ನ ಬೆನ್ನಿಂದೆ ಇದ್ದವರಿಗೆಲ್ಲ ಅಂದ. ಹಾಗೇ, ಅದೇ ಸಿಟ್ಟಿನಲ್ಲಿ ಆತ ಅಡುಗೆ ಕೋಣೆಯಿಂದ ಹೊರ ಬಂದವನೆ ಮಾನಿಂಗಪ್ಪ ಸಾವಕಾರನ ಮನೆಯತ್ತ ಅವಸರದಲ್ಲಿ ಹೆಜ್ಜೆ ಹಾಕತೊಡಗಿದ. ಆಗ, ಉಳಿದವರೆಲ್ಲರೂ ಸಹ ರೋಷಾವೇಶದಲ್ಲಿ ಆತನ ಹಿಂದೆ ನಡೆದರು.

ಹೀಗೆ, ಅವರೆಲ್ಲ ಆವೇಶಭರಿತರಾಗಿ ದಪದಪನೆ ಹೆಜ್ಜೆ ಹಾಕುತ್ತ ನಡೆದು ಹೋಗುತ್ತಿರುವಾಗಲೇ ಊರೊಳಗಿಂದ, ‘ಮಾನಿಂಗಪ್ಪ ಸಾವ್ಕಾರ ಉರ್ಲಾಕೊಂಡು ಸತ್ತೋದ್ನಪ್ಪ…!’ ಎಂದು ಆತನ ಮನೆ ಕೆಲಸದಾಳು ಸಣ್ಣಪ್ಪನು ಗಟ್ಟಿ ದನಿಯಲ್ಲಿ ಅಂದುಕೊಳ್ಳುತ್ತ ಶಾಲೆಯತ್ತ ಬರುತ್ತಿದ್ದುದು ತುಕಾರಮನ ಕಿವಿಗೆ ಬಿದ್ದ ಹೊತ್ತಲ್ಲೇ ಇತ್ತ, ಹಿಂದಿನಿಂದ, ‘ದವಾಖಾನ್ಯಾಗ ಹುಡುಗ್ರೆಲ್ಲ ಆರಾಮ ಆಗ್ಯಾರಂತ ಫೋನು ಮಾಡಿದ್ರಪ್ಪೊ…’ ಎಂದು ಯಾರೋ ಜೋರಾಗಿ ಕೂಗಲು ಅದು ಕೂಡ ಶಾಲೆಯ ಆವರಣದ ತುಂಬೆಲ್ಲ ಪ್ರತಿಧ್ವನಿಸತೊಡಗಿತು!

ಪ್ರತಿಕ್ರಿಯಿಸಿ