ನಿಷ್ಠುರತೆಯ ನೋಂಪು ಜಿ.ರಾಜಶೇಖರ್ ೭೦: ಕೋಮುವಾದ ಮತ್ತು ಸೆಕ್ಯುಲರಿಸಂ

GRheader3divderspaರಾಜಶೇಖರ್ ಬರಹಗಳಿಗೆ ಶಿಖರಪ್ರಾಯವಾಗಿ ಇತ್ತೀಚೆಗೆ ಬಿಡುಗಡೆಗೊಂಡ ‘ಕೋಮುವಾದದ ರಾಜಕೀಯ’-ಮಹಾ ಪ್ರಬಂಧವಿದೆ. ‘ಇಸಂ’ಗಳ ಹಂಗಿನಿಂದ ಮುಕ್ತವಾಗಿ ಬರೆದ ಒಂದು ಮೌಲಿಕವಾದ ದೀರ್ಘ ಲೇಖನವಿದು.

ರಾಜಶೇಖರ್ ಸೈದ್ಧಾಂತಿಕ ತಳಹದಿಯಲ್ಲಿ ಬರೆದ ತಮ್ಮೆಲ್ಲಾ ಹಿಂದಿನ ಬರಹಗಳನ್ನು disown ಮಾಡಿದ ನಂತರ ಕೆಲಕಾಲ ಮೌನವಾಗಿದ್ದರು. ಆದರೆ ಒಬ್ಬ ಬೌದ್ಧಿಕನಿಗೆ ಮೌನವೂ ಸಹಿಸಲಾರದ ಹೊರೆಯಾಗುತ್ತದೆ. ಎದುರು ಜ್ವಲಂತ ಸಮಸ್ಯೆ ಇರುವಾಗ ಸುಮ್ಮನಿರುವುದೆಂದರೆ ಅದಕ್ಕೆ ಅಪರೋಕ್ಷವಾಗಿ ತನ್ನ ಸಮ್ಮತಿಯೂ ಇದೆ – ಎಂದು ಗಾಢವಾಗಿ ಕಾಡಲಾರಂಭಿಸುತ್ತದೆ. ಒಂದು ಸೆಕ್ಯುಲರ್ ದೇಶದಲ್ಲಿ ಬದುಕುವ ಧೀಮಂತನಿಗೆ ಕೋಮುವಾದ ನುಂಗಲಾರದ ತುತ್ತಾಗುತ್ತದೆ.

ರಾಜಶೇಖರ್ ತನ್ನಿಬ್ಬರು ಗೆಳೆಯರೊಂದಿಗೆ ಕೂಡಿಕೊಂಡು ಒಂದು ಸೂಕ್ಷ್ಮವಾದ, ಆದರೆ ಅತ್ಯಂತ ಜರೂರಿನ ‘ಕೋಮುವಾದ’ದ ಸಮಸ್ಯೆಯನ್ನು ಕೈಗೆತ್ತಿಕೊಂಡಿದ್ದಾರೆ. ಸುರತ್ಕಲ್ ಗಲಭೆಗಳ ನಂತರ ರಾಜಶೇಖರ್ ತಮ್ಮ ಗೆಳೆಯರೊಂದಿಗೆ ಸಾಕಷ್ಟು ಓಡಿಯಾಡಿ ಮಾಹಿತಿ ಸಂಗ್ರಹಿಸಿ, ಜನರನ್ನು, ಸಂತ್ರಸ್ತರನ್ನು ಭೇಟಿಯಾಗಿ ಸಂದರ್ಶಿಸಿ ಸಿದ್ದಪಡಿಸಿದ ದೀರ್ಘ ಲೇಖನವಿದು. ವ್ಯಾಪ್ತಿ, ಆಳ – ವಿಸ್ತಾರಗಳಲ್ಲಿ ಅವರ ಈವರೆಗಿನ ಲೇಖನಗಳ ಅಡಕವನ್ನು ಹೊತ್ತುಕೊಂಡ ಈ ಬರಹ ಒಂದು ಸ್ವಸ್ಥ ಸಮಾಜ ವಹಿಸಲೇಬೇಕಾದ ಜವಾಬ್ದಾರಿಯನ್ನು ನೆನಪಿಸುತ್ತದೆ.

raj4ಬಹುಶಃ ನಮ್ಮ ಬುದ್ಧಿಜೀವಿಗಳಲ್ಲಿ ಕೋಮುವಾದ, ಅದರ ಹಿನ್ನೆಲೆ, ಅದು ಒಳಗೊಳ್ಳುವ ರಾಜಕೀಯ – ಇವುಗಳ ಬಗ್ಗೆ ರಾಜಶೇಖರ್‌ನಷ್ಟು ಆಳವಾಗಿ ಅಧ್ಯಯಿಸಿದವರು, ಮತ್ತು ನಿರ್ಭೀಡೆಯಿಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದವರು ಯಾರೂ ಇಲ್ಲವೆಂದೇ ಹೇಳಬಹುದು.

ಲಂಕೇಶ್ ಪತ್ರಿಕೆ ಮತ್ತು ಇತರ ನಿಯತಕಾಲಿಕಗಳಲ್ಲಿ ಆಗಾಗ್ಗೆ ಪ್ರಕಟಗೊಳ್ಳುತ್ತಿರುವ ರಾಜಶೇಖರ್ ಬರಹಗಳು, ಅವರ ಎದುರಾಳಿಗಳನ್ನು, ಅರ್ಥಾತ್ ಕೋಮುವಾದಿಗಳನ್ನು ಎಷ್ಟು ಬಲವಾಗಿ ಕಾಡಿದೆಯೆಂದರೆ ‘ರಾಜಶೇಖರ್ ಮುಸ್ಲಿಂವಾದಿ, ಒಬ್ಬ ಮುಸ್ಲಿಂ ಮುಲ್ಲಾ, ತಾಲಿಬಾನ್ ಪ್ರತಿಪಾದಿ – ಅವರ ಹೆಸರು ರಾಜಾಶೇಖ್’ – ಇತ್ಯಾದಿ ನಾಮಧೇಯ, ಬಿರುದು ಬಾವಲಿಗಳಿಂದ ಪುರಸ್ಕರಿಸುವವರೆಗೂ ಸಾಗಿದೆ. ಇದಕ್ಕೆ ಪೂರಕವಾಗಿ, ಅವರು ಜಮಾತ್-ಏ-ಇಸ್ಲಾಂನಂತಹ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳ ಆಶ್ರಯದಲ್ಲಿ ವಕ್ತಾರರಾಗಿ ಕೊಡುವ ಹೇಳಿಕೆಗಳೂ ಕಾರಣವಾಗಿರಬಹುದು. (ಇಂತಹ ಮೂಲಭೂತವಾದೀ ಸಂಘಟನೆಗಳಲ್ಲಿ ರಾಜಶೇಖರ್ – ಮಾತನಾಡುವುದು, ಎಡಪಂಥೀಯರಿಗೂ ಇರುಸು ಮುರುಸು ತಂದಿದೆ ಎನ್ನುವುದು ನಿಜ.)

ರಾಜಶೇಖರ್‌ರನ್ನು ತರ್ಕದಲ್ಲಿ ನೇರವಾಗಿ ಎದುರಿಸಲಾರದ ಎದುರಾಳಿಗಳು ಈ ಸ್ಥಿತಿಗೆ ತಲುಪುವುದು ವಿಶೇಷವೇನೂ ಅಲ್ಲ; ಅದೂ ಅಲ್ಲದೆ ಇತ್ತೀಚೆಗೆ ಅವರನ್ನು ಹಿಂಸೆಯಿಂದ ಎದುರಿಸುವ ಹುನ್ನಾರ ನಡೆಯುವುದೂ ವಿಚಿತ್ರ ಎನ್ನಿಸುವುದಿಲ್ಲ. ಅಂದರೆ ತಾರ್ಕಿಕವಾಗಿ ಎದುರಿಸಲಾರದ ಸಮಸ್ಯೆಗಳನ್ನು ಹೇಡಿಗಳು ಕ್ರೂರವಾಗಿ ಹತ್ತಿಕ್ಕಲು ಯತ್ನಿಸುವುದು ಒಂದು ಐತಿಹಾಸಿಕ ವಾಸ್ತವಿಕತೆ.

‘ಒಬ್ಬ ಧೀಮಂತ ನಿಜವಾದ ಅರ್ಥದಲ್ಲಿ ‘ಸೆಕ್ಯುಲರ್’ ಚಿಂತಕ ಎಂದನ್ನಿಸಿಕೊಳ್ಳಬೇಕಾದರೆ ಆತ ಯಾವ ಮಟ್ಟದಲ್ಲೂ ರಾಷ್ಟ್ರ, ಮತ, ಆಳುವ ಪ್ರಭೃತಿಗಳಿಗೆ ಅಡಿಯಾಳು ಆಗಿರಬಾರದು’- ಇದು ಎಡ್ವರ್ಡ್ ಸೈದನ ನಿಲುವು. ರಾಜಶೇಖರ್ ಇದಕ್ಕೆ ಹೊರತಲ್ಲ.

ರಾಜಶೇಖರ್ ‘ಕೋಮುವಾದ’ ಮತ್ತು ‘ಮೂಲಭೂತವಾದ’ – ಪದಗಳ ಅರ್ಥವ್ಯಾಪ್ತಿಯನ್ನು ವಿವರಿಸಿಯೇ ತಮ್ಮ ಪ್ರಬಂಧವನ್ನು ಆರಂಭಿಸುತ್ತಾರೆ. ಪ್ರಾಯಶಃ ಇದು ಲಂಕೇಶ್ ಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ಅವರ ಲೇಖನಗಳನ್ನು ಓದದ, ಓದುಗರಿಗೆ ಸಹಾಯಕವಾಗಲಿ ಎಂದಿರಬಹುದು. (ಒಂದು ದೀರ್ಘ ಪ್ರಬಂಧ, ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿರುವ ವೇಳೆಯಲ್ಲಿ ಇದು ಅಗತ್ಯ ಕೂಡಾ)

‘ಕೋಮುವಾದದ ತತ್ವ ಮತ್ತು ತಂತ್ರಗಳನ್ನು ಅರ್ಥಮಾಡಿಕೊಳ್ಳದೆ ಅದನ್ನು ಎದುರಿಸುವುದು ಸಾಧ್ಯವಿಲ್ಲ. ಕೋಮುವಾದದ ಬಗ್ಗೆ ಬಂದಿರುವ ಅನೇಕ ಬರಹಗಳಲ್ಲಿ ಕೋಮುವಾದ ಮತ್ತು ಮೂಲಭೂತವಾದ – ಎಂಬ ನುಡಿಕಟ್ಟುಗಳನ್ನು ಸಲೀಸಾಗಿ ಒಂದರ ಬದಲು ಇನ್ನೊಂದನ್ನು ಬಳಸುವುದನ್ನು ಕಾಣುತ್ತೇವೆ. ರಾಜಕೀಯ ಅಧಿಕಾರಕ್ಕಾಗಿ ಒಂದು ಧರ್ಮದ ಅನುಯಾಯಿಗಳನ್ನು ಇನ್ನೊಂದು ಧರ್ಮದವರ ವಿರುದ್ಧ ಎತ್ತಿಕಟ್ಟುವುದು ಮತ್ತು ಬಹುಸಂಖ್ಯಾತರ ಸಂಸ್ಕೃತಿಗೆ ಅಲ್ಪಸಂಖ್ಯಾತರು ಹೊರಗಿನವರು ಎಂದು ವಾದಿಸಿ ಅವರ ಬಗ್ಗೆ ದ್ವೇಷ, ತಿರಸ್ಕಾರಗಳನ್ನು ಬೆಳೆಯಿಸುವುದು ಕೋಮುವಾದ. ತನ್ನ ಧರ್ಮದ ಕಟ್ಟುಪಾಡುಗಳಿಗೆ ಮತ್ತು ಪವಿತ್ರ ಗ್ರಂಥಗಳಿಗೆ, ಆ ಧರ್ಮಕ್ಕೆ ಸೇರಿದ ಪ್ರತಿಯೊಬ್ಬನೂ ತಲೆಬಾಗಬೇಕು ಎಂದು ಒತ್ತಾಯಿಸುವುದು – ಮೂಲಭೂತವಾಗಿದೆ.

GR6ಕೋಮುವಾದ ಒಂದು ಆಧುನಿಕ ರಾಜಕೀಯ ಸಿದ್ಧಾಂತ. ಅದು ಪ್ರಭುತ್ವವನ್ನು ವಶಪಡಿಸಿಕೊಳ್ಳುವ ಒಂದು ತಂತ್ರ. ಅದಕ್ಕೂ ಧರ್ಮಕ್ಕೂ ಇರುವ ಸಂಬಂಧ ನೆಪ ಮಾತ್ರ. ಜನರನ್ನು ಧರ್ಮದ ಹೆಸರಿನಲ್ಲಿ ಒಟ್ಟುಗೂಡಿಸಿ ಇನ್ನೊಂದು ಧರ್ಮದವರ ವಿರುದ್ಧ ಎತ್ತಿಕಟ್ಟುವ ಮತೀಯವಾದಿಗಳಿಗೆ, ಹಸಿವು, ಬಡತನ, divderspaಅಸಮಾನತೆಗಳ ಆಧಾರದಲ್ಲಿ ಜನರನ್ನು ಒಟ್ಟುಗೂಡಿಸುವ ರಾಜಕೀಯ ಎಂತಹ ಪ್ರಳಯಾಂತಕ ಶಕ್ತಿ ಆಗಬಲ್ಲುದು ಎಂಬುದರ ಸರಿಯಾದ ಕಲ್ಪನೆ ಇದೆ. ಹಾಗಾಗಿ ಕಮ್ಯುನಿಸ್ಟರು, ಎಡಪಂಥೀಯರು, ಸಮಾಜವಾದಿಗಳು ಎಂದರೆ ಇವರಿಗೆ ದುಃಸ್ವಪ್ನ. ಅನಂತರ ದಲಿತರ ಹಕ್ಕುಗಳಿಗಾಗಿ ಹೋರಾಡುವವರು, ಪರಂಪರಾಗತ ಆಚರಣೆಗಳನ್ನು ಪ್ರಶ್ನಿಸುವ ವಿಚಾರವಾದಿಗಳು, ರಾಜಕಾರಣದಿಂದ ಧರ್ಮವನ್ನು ಹೊರಗಿಡಬೇಕು ಎನ್ನುವ ಸೆಕ್ಯೂಲರಿಸ್ಟರು, ಹೆಂಗಸರ ಹಕ್ಕುಗಳಿಗಾಗಿ ಹೋರಾಡುವವರು, ತಮ್ಮ ಅಭಿಪ್ರಾಯಗಳನ್ನು ಒಲ್ಲದ ಬುದ್ಧಿಜೀವಿಗಳು ಮತ್ತು ಕಲಾವಿದರು, ಯುದ್ಧಗಳನ್ನು ವಿರೋಧಿಸುವವರು, ಅಣುಬಾಂಬುಗಳನ್ನು ಖಂಡಿಸುವವರು ಮತ್ತು ಈ ದೇಶದ ಪ್ರಜೆಗಳಲ್ಲಿ ಹಿಂದುಗಳಲ್ಲದವರು… ಇವರೆಲ್ಲ ಶತ್ರುಗಳು ಮತ್ತು ದೇಶದ್ರೋಹಿಗಳು.

ರಾಜಶೇಖರ್ ಮಹಾ ಚಿಕಿತ್ಸಕ ಬುದ್ಧಿಯ ಮೇಧಾವಿ. ಹಾಗಾಗಿ ಯಾವ ಸೂಕ್ಷ್ಮಗಳೂ, ಒಳಸುಳಿಗಳೂ ಪಕ್ಕನೆ ಅವರ ಕಣ್ಣು ತಪ್ಪಿಸುವಂತಿಲ್ಲ. ಮೇಲಿನ ಪಟ್ಟಿಯನ್ನೇ ಗಮನಿಸಿ. ಸಂಘ ಪರಿವಾರ ಒಳಗೊಳ್ಳದ ಎಲ್ಲಾ ಕೂಟಗಳನ್ನು ಒಟ್ಟುಗೂಡಿಸಿದರೆ ಸಂಘ ತನ್ನ ಅಭದ್ರ ನೆಲೆಯ ಬಗ್ಗೆ ಗಾಬರಿಯಾದೀತು. ಆದರೆ ಸಂಘ ಪರಿವಾರಕ್ಕೆ ಇದೂ ತಿಳಿದಿದೆ. ಹೂ ಮಾರುವವನ ‘ಹೂ ಬೇಕೇ ಹೂ’ ಚಿಕ್ಕ ಗಂಟಲಿನ ಹಿಂದೆಯೇ ಮೀನು ಮಾರುವವಳ ‘ಮೀನು ಬೇಕೆ ಮೀನು’ ದೊಡ್ಡ ಗಂಟಲು ಹೊರಟರೆ – ಮೆಲುಧ್ವನಿಗಳು ಅಡಗಿ ಹೋಗುತ್ತವೆ. ಮತ್ತೆ ಎಲ್ಲ ಸರಿಯಾಗುತ್ತದೆ. ಅಧಿಕಾರ ಮತ್ತು ಆರ್ಥಿಕ ಬಲದಿಂದ ಏನನ್ನೂ ಸಾಧಿಸಬಹುದು, ಇಲ್ಲದ್ದನ್ನು ಸೃಷ್ಟಿಸಬಹುದು.

‘ಜರ್ಮನಿಯ ನಾಝಿಗಳು ಯಹೂದಿಗಳನ್ನು ದ್ವೇಷಿಸಿದಂತೆಯೇ, ಸಂಘ ಪರಿವಾರದವರು ಭಾರತದ ಮುಸ್ಲಿಮರನ್ನು ಮತ್ತು ಕ್ರಿಶ್ಚಿಯನ್ನರನ್ನು ದ್ವೇಷಿಸುತ್ತಾರೆ. ಇಟಲಿಯ ಫ್ಯಾಸಿಸ್ಟರ ಹಾಗೆ ಕಮ್ಯುನಿಸ್ಟರು ಮತ್ತು ಸಮಾಜವಾದಿಗಳನ್ನು ದೇಶದ್ರೋಹಿಗಳು ಎಂದು ಪರಿಗಣಿಸುತ್ತಾರೆ. ನಾಝಿಗಳು ಮತ್ತು ಫ್ಯಾಸಿಸ್ಟರ ಹಾಗೆ ಸಂಘ ಪರಿವಾರದವರೂ ಬಲಿಷ್ಠ ಸರಕಾರ, ಬಲಿಷ್ಠ ಸೈನ್ಯ, ಕೇಂದ್ರೀಕೃತ ಅಧಿಕಾರ ಹಾಗೂ ಸಾಮಾನ್ಯ ಪ್ರಜೆಗಳಲ್ಲಿ ಶಿಸ್ಟು ಮತ್ತು ವಿಧೇಯತೆಯ ಮೌಲ್ಯಗಳನ್ನು ಪ್ರತಿಪಾದಿಸುತ್ತಾರೆ.

ಇದರ ಅರ್ಥ – ಹಿಂದೆ ಯುದ್ಧ ಮಾಡುವ ಸೈನಿಕರಿಗೆ ತಾವು ಯಾರೊಂದಿಗೆ, ಯಾಕಾಗಿ ಹೋರಾಡುತ್ತೇವೆ ಎನ್ನುವ ಕಾರಣ ತಿಳಿದಿತ್ತು. ಈಗ ಅದು ತಿಳಿದಿರುವುದಿಲ್ಲ. ಮಾತ್ರವಲ್ಲ, ಮತ್ತೂ ಭಯಾನಕವಾಗಿ ತಿಳಿಯಬೇಕೆಂಬ ಇಚ್ಛೆಯೇ ಇರುವುದಿಲ್ಲ. ಈ ಸ್ಥಿತಿಯನ್ನು ಎರಡೂ ಕೈಗಳಲ್ಲಿ ಬರಮಾಡಿಕೊಳ್ಳುವ ಬಲಪಂಥೀಯರನ್ನು ರಾಜಶೇಖರ್ ನೇರವಾಗಿ ತರಾಟೆಗೆ ತೆಗೊಳ್ಳುತ್ತಾರೆ.

ಮ್ಮ ಚರಿತ್ರೆಯಲ್ಲಿ ಹಿಂದೂ, ಮುಸ್ಲಿಂ, ಬ್ರಿಟಿಷ್ ಎಂದು ವರ್ಗೀಕರಿಸಿದವರು – ವಸಾಹತುಶಾಹೀ ಚರಿತ್ರೆಕಾರರು. ವಾಸ್ತವವಾಗಿ ಹಿಂದೂ ರಾಜರ ಕಾಲ ಎಂದು ಗುರುತಿಸಲಾಗುವ ಕಾಲದಲ್ಲಿ ದೇಶದ ಅನೇಕ ಕಡೆ ಹಿಂದೂಯೇತರ ಪ್ರಭುತ್ವಗಳಿದ್ದುವು. ಹಿಂದೂ ಧರ್ಮಕ್ಕೆ ತೀವ್ರ ಪ್ರತಿರೋಧ ಒಡ್ಡಿದ ವೈಚಾರಿಕ ಚಳುವಳಿಗಳೂ ನಡೆದಿದ್ದುವು. ಮುಸ್ಲಿಮರ ಆಳ್ವಿಕೆಯ ಕಾಲ ಎಂದು ಈ ವಸಾಹತುಶಾಹೀ ಚರಿತ್ರಕಾರರು ಹಣೆಪಟ್ಟಿ ಹಚ್ಚಿದ ಕಾಲದಲ್ಲಿ, ದೇಶದ ಅನೇಕ ಕಡೆ ಹಿಂದೂ ರಾಜರ ಆಳ್ವಿಕೆಯೇ ಇತ್ತು. ಅಲ್ಲದೆ, ಮುಸ್ಲಿಂ ಅರಸರೇ ಪರಸ್ಪರ ಕಚ್ಚಾಡಿಕೊಂಡದ್ದೂ ಇದೆ. ಬ್ರಿಟಿಷರು ಈ ದೇಶದಲ್ಲಿ ತಮ್ಮ ಅಧಿಕಾರವನ್ನು ಭದ್ರಪಡಿಸುವವರೆಗೆ, ಇಲ್ಲಿ ಯಾವುದೇ ಕಾಲದಲ್ಲೇ ಆಗಲೀ ಒಂದು ಏಕೀಕೃತ ರಾಷ್ಟ್ರವಾಗಲೀ ಪ್ರಭುತ್ವವಾಗಲೀ ಇರಲೇ ಇಲ್ಲ.

ಇದೊಂದು ಮಹತ್ವದ ಚಾರಿತ್ರಿಕ ದೃಷ್ಟಿಕೋನ. ಬಹುಶಃ ‘ಕಣ್ಣಿದ್ದೂ ಕುರುಡರು, ಕಿವಿಯಿದ್ದೂ ಕಿವುಡರು’ ಎನ್ನುವಂತಹ ತಿಳಿಗೇಡಿ ಜನರನ್ನು ಬಿಟ್ಟರೆ ಈ ಇತಿಹಾಸ ಹೇಳುವುದನ್ನು ಯಾರೂ ಅಲ್ಲಗಳೆಯಲಾರರು. ರಾಜಶೇಖರ್ ತಮ್ಮ ಪ್ರಬಂಧವನ್ನು ಮುಂದುವರಿಸಿ ‘ಆರ್.ಎಸ್.ಎಸ್., ಹಿಂದೂ ಧರ್ಮದ ಒಗ್ಗಟ್ಟಿನ ಪರಿಕಲ್ಪನೆಯನ್ನು ಎರವಲು ಪಡೆದದ್ದು ಕ್ರಿಶ್ಚಿಯನ್ ಮತ್ತು ಇಸ್ಲಾಂ ಹಾಗೂ ಯಹೂದಿ ಧರ್ಮಗಳಿಂದ’ – ಎಂದು ಸಕಾರಣವಾಗಿ ವಿವರಿಸಿ, ತನ್ನ ನಿಲುವನ್ನು ಸಮರ್ಥಿಸಿಕೊಳ್ಳುತ್ತಾರೆ.

GR5ಪ್ರಜಾಪ್ರಭುತವೆಂದರೆ ಬಹುಸಂಖ್ಯಾತರ ಇಚ್ಛೆಗೆ ಅನುಗುಣವಾಗಿ ಪ್ರಭುತ್ವವಲ್ಲ. ಅದು ಅಲ್ಪಸಂಖ್ಯಾತರು ಮತ್ತು ಭಿನ್ನಮತೀಯರು ತಮ್ಮ ನಂಬಿಕೆಗಳಿಗೆ ಬದ್ಧವಾಗಿದ್ದುಕೊಂಡೇ ಸಮಾನಹಕ್ಕು, ಅಧಿಕಾರಗಳನ್ನು ಹೊಂದಿರುವುದನ್ನು ಖಾತರಿ ಮಾಡುವಂತಹ ವ್ಯವಸ್ಥೆ. ಬಿ.ಜೆ.ಪಿ. ನಮ್ಮ ರಾಜಕೀಯದಲ್ಲಿ ಚಲಾವಣೆಗೆ ತಂದ ಹಿಂದು ಮತ್ತು ಹಿಂದುಯೇತರ ಎಂಬ ವಿಭಜನೆಯನ್ನು ಕಾಂಗ್ರೆಸ್ ಮಾತ್ರವಲ್ಲ, ಎಡಪಕ್ಷಗಳನ್ನು ಬಿಟ್ಟು ಇತರ ಪಕ್ಷಗಳೂ ಒಪ್ಪಿಕೊಂಡಿವೆ. ಹಾಗಾಗಿ ಮತೀಯವಾದವನ್ನು ಬಿಜೆಪಿಗೆ ಅಂಟಿಸಿ ಸುಮ್ಮನಿರುವುದಲ್ಲ. ನಮ್ಮ ಹೆಚ್ಚಿನ ಪತ್ರಿಕೆಗಳು, ಸರಕಾರೀ ಮತ್ತು ಸರಕಾರೇತರ ಸಂಸ್ಥೆಗಳು ಕೂಡಾ ಇದನ್ನು ಒಪ್ಪಿಕೊಂಡಿವೆ. ಮತೀಯವಾದವನ್ನು ಬಿಜೆಪಿ ಎಂಬ ರಾಜಕೀಯ ಪಕ್ಷ ಹುಟ್ಟಿಸಿದ ಸಮಸ್ಯೆ ಎಂದು ಗುರುತಿಸುವುದರ ಜೊತೆಗೆ – ಇದು ಬೇರೆ ಬೇರೆ ಪಕ್ಷಗಳಲ್ಲಿ ಬೇರೆ ಬೇರೆ ಪ್ರಮಾಣಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಒಂದು ಅರ್ಬುದ ರೋಗ – ಎಂದು ಗುರುತಿಸುವುದು ಕೂಡಾ ಅಗತ್ಯ’ ಎನ್ನುವ ಒಂಥರಾದಲ್ಲಿ ಧೀಮಂತರು ಹತಾಶರಾಗಬಹುದಾದ ಪ್ರಮೇಯವನ್ನು divderspaನಮ್ಮ ಮುಂದಿಡುತ್ತಾರೆ. ಬಹುಶಃ ಮುಂಬೈ ಗಲಭೆಗಳನ್ನು ಅಧ್ಯಯಿಸಿದವರಿಗೆ – ಅದರಲ್ಲಿ ಪಾಲ್ಗೊಂಡ ಸಂಘಟನೆಗಳು ಶಿವಸೇನೆ, ಬಿ.ಜೆ.ಪಿ. ಮಾತ್ರವಲ್ಲ, ಇತರ ಎಲ್ಲಾ ಪಕ್ಷಗಳ ಒಳಗುಂಪುಗಳೂ ಇದ್ದುವು – ಎನ್ನುವ ಕಳವಳಕಾರಿಯಾದ ಅಂಶ ನೆನಪಿಗೆ ಬರಬಹುದು.

ಸೆಕ್ಯುಲರಿಸಂ‘, ಪ್ರಜಾಪ್ರಭುತ್ವ ಮತ್ತು ಸಮಾನತೆಗಾಗಿ ಹೋರಾಟ’ – ಖ್ಯಾತ ಚಿಂತಕ ಐಜಾಜ್ ಅಹಮದ್ ಹೇಳುವ ಮಾತುಗಳನ್ನು ಮುಂದರಿಸಿ, ‘ಅಲ್ಪಸಂಖ್ಯಾತರ ಮೇಲೆ ನಡೆಯುವ ಹಲ್ಲೆಗಳು, ದಲಿತರ ಮೇಲೆ ನಡೆಯುವ ಹಿಂಸೆ, ಹೆಂಗಸರ ಮೇಲೆ ಅತ್ಯಾಚಾರ, ದೈತ ಕಾರ್ಮಿಕರ ಶೋಷಣೆ, ಶ್ರೀಮಂತರ ಸಂಪತ್ತು ಹೆಚ್ಹುತ್ತಿರುವ ವೇಳೆಯಲ್ಲಿ ಬಡವರು ತಮ್ಮ ಕೊನೆ ತುತ್ತನ್ನೂ ಕಳೆದುಕೊಳ್ಳುತ್ತಿರುವುದು, ಬಡವರ ಮಕ್ಕಳು ಶಿಕ್ಷಣವಿಲ್ಲದೆ, ಉದ್ಯೋಗವಿಲ್ಲದೆ ಭಿಕಾರಿಗಳಾಗುತ್ತಿರುವುದು ಇವೆಲ್ಲವೂ ಈ ನಾಡಿನಲ್ಲಿ ಒಟ್ಟೊಟ್ಟಿಗೆ ನಡೆಯುತ್ತಿದೆ. ಇದು ನಮ್ಮ ಪ್ರಸ್ತುತ ಸಾಮಾಜಿಕ ಬದುಕು. ಈ ಸಮಾಜ ಹಿಂಸೆಗೆ ಬೇರೆ ಬೇರೆ ಹೆಸರುಗಳನ್ನು ಕೊಡಬಹುದು. ಆದರೆ ಹಿಂಸೆ ಒಂದೇ. ಸಂದರ್ಭ ಮಾತ್ರ ಬೇರೆ ಬೇರೆ. ನಿಜಜೀವನದಲ್ಲಿ ಹಿಂಸೆ ಹೆಸರು ಹೊತ್ತು ಬರುವುದಿಲ್ಲ. ಅದು ನಮ್ಮ ಪ್ರಜ್ಞೆಗೆ ಆಘಾತವಾಗಿ, ಸವಾಲಾಗಿ ಬರುತ್ತದೆ. ವ್ಯವಸ್ತೆಯ ಈ ಅಗಾಧವೂ ಬಹುರೂಪಿಯೂ ಆದ ಹಿಂಸೆಗೆ, ನಾವು ತೋರಿಸುವ ಪ್ರತಿಕ್ರಿಯೆ, ನೈತಿಕವಾಗಬೇಕಾದರೆ ಅದು ರಾಜಕೀಯ ಎಚ್ಚರ ಮತ್ತು ಕ್ರಿಯಾಶೀಲತೆಗಳಿಂದ ಕೂಡಿದ್ದಾಗಿರಬೇಕು’ – ಎಂದು ಅದ್ಭುತವಾಗಿ ಪ್ರತಿಪಾದಿಸುತ್ತಾರೆ.

‘ಮತೀಯ ಸಾಮರಸ್ಯ ಅನ್ನುವುದು ಒಂದು ಸಹಜಕ್ರಿಯೆಯಾಗಬೇಕು’-ಎಂದು ವಾದಿಸುವ ರಾಜಶೇಖರ್, ‘ಶಿಶುನಾಳ ಶರೀಫರಂತಹವರು ಹಿಂದೂ ಮುಸ್ಲಿಂ ದೇವತೆಗಳ ಬಗ್ಗೆ ಲಾವಣಿ ಕಟ್ಟಿ ಹಾಡಿದ್ದನ್ನು, ಸಲೀಸಾಗಿ ಹಿಂದು ಮುಸ್ಲಿಂ ಪುರಾಣಗಳನ್ನು ರೂಪಕವಾಗಿ ಬಳಸಿದ್ದನ್ನು ಸಾಮರಸ್ಯದ ಚಿಹ್ನೆ ಎಂದು ಒಪ್ಪುವುದಿಲ್ಲ. ಹಿಂದು ಅನುಭಾವೀ ಕವಿಗಳು ಮುಸ್ಲಿಂ ದೇವರ ಬಗ್ಗೆ, ಸೂಫಿಗಳು ಹಿಂದು ದೇವರ ಬಗ್ಗೆ ಧೇನಿಸುವುದು, ಹಾಡುವುದು ಆ ಕಾಲದ ಸಹಜಕ್ರಿಯೆ. ಇದೇನು ವಿಶೇಷವಲ್ಲ, ಚರಿತ್ರೆಯ ಇನ್ನೊಂದು ಬಿಂದುವಿನಲ್ಲಿ ನಿಂತು ನಾವು ಯೋಚಿಸುವಾಗ ‘ಇದೇ ಮತೀಯ ಸಾಮರಸ್ಯ’ ಎನ್ನುವ ತಪ್ಪು ನಿರ್ಣಯಕ್ಕೆ ಬರಬಹುದು. ಪ್ರಾಯಶಃ ರಹಮತ ತರೀಕೆರೆಯವರು ಇದೇ ನಿಲುವನ್ನು ತಮ್ಮ ‘ ಕರ್ನಾಟಕದ ಸೂಫಿಗಳು’ ಪ್ರಬಂಧದಲ್ಲೂ ಎತ್ತಿಕೊಂಡಿದ್ದಾರೆ.

ಸುರತ್ಕಲ್ಲಿನ ಗಲಭೆಗಳ ಹಿನ್ನೆಲೆಯನ್ನು ಈ ತಾತ್ವಿಕ ನೆಲೆಯಲ್ಲಿ ವಿವೇಚಿಸುವ ರಾಜಶೇಖರ್ ಕೆಲವೊಮ್ಮೆ ಒಬ್ಬ ದೃಷ್ಟಾರನ ಸಂಯಮವನ್ನು ಪ್ರದರ್ಶಿಸುತ್ತಾರೆ. ಮತ್ತೊಮ್ಮೆ ರೊಚ್ಚಿಗೆದ್ದ ಸಿಡುಕರೂ ಆಗುತ್ತಾರೆ. ಅವರ ವ್ಯಂಗ್ಯದ ಮೊನಚು ಎಷ್ಟು ತೀವ್ರವಾಗಿರುತ್ತದೆ ಎಂದರೆ ಎದುರಾಳಿ ಒಂದೋ ಅವರ ನಿಲುವನ್ನು ಮೌನವಾಗಿ ಒಪ್ಪಿಕೊಳ್ಳಬೇಕು. ಇಲ್ಲವೇ ಅಲ್ಲಿಂದ ಜಾಗ ಖಾಲಿ ಮಾಡಬೇಕು. ಕೋಮುಗಲಭೆಗಳ ಬಗ್ಗೆ ವಸ್ತುನಿಷ್ಠ ಬರಹಗಳೇ ಇಲ್ಲದ ಸಮಯದಲ್ಲಿ ಈ ವರದಿ ಮತ್ತು ಪೂರಕವಾದ ಲೇಖನ ಬಹಳ ಬೆಲೆಯುಳ್ಳದ್ದು.

‘ಕೋಮುಗಲಭೆಗಳಂತಹ ದುರಂತದ ಬಗ್ಗೆ ನಾವು ವಹಿಸುವ ಮೌನ, ನಮ್ಮನ್ನು ಕೋಮುವಾದಿಗಳ ಮೂಕ ಸಹವರ್ತಿಗಳನ್ನಾಗಿ ಮಾಡಬಹುದು. ನಮ್ಮ ಕಾಲದ ದುರಂತಗಳಿಗೆ ಸಾಕ್ಷಿ ಹೇಳಲಾಗದ ನಮ್ಮ ನೈತಿಕ ದೌರ್ಬಲ್ಯ, ಮಾತ್ರವಲ್ಲ, ನಮ್ಮ ರಾಜಕೀಯ ನಿಲುವುಗಳಿಗೆ ನಿಜಜೀವನದ ಸಾಕ್ಷ್ಯಾಧಾರಗಳು ಇರಬೇಕು – ಎಂದು ಒತ್ತಾಯ ಮಾಡಲಾರದ ಭೌತಿಕ ದಾರಿದ್ರ್ಯ ಕೂಡಾ ನಮ್ಮ ಔದಾಸೀನಕ್ಕೆ ಕಾರಣ’ ಎಂದು ರಾಜಶೇಖರ್ ತಮ್ಮ ಪ್ರಬಂಧವನ್ನು ಔಚಿತ್ಯಪೂರ್ಣವಾದ ರೀತಿಯಲ್ಲಿ ಮುಗಿಸುತ್ತಾರೆ.

ಒಂದು ಸರಕಾರ ತನ್ನ ಸಕಲ ಕಬಂಧ ಬಾಹುಗಳೊಂದಿಗೆ, ಪ್ರತಿಷ್ಠೆ ಪತ್ರಿಕೆ ಮತ್ತಿತರ ಮಾಧ್ಯಮಗಳು ತಮ್ಮೆಲ್ಲಾ ಪರಿಕರಗಳೊಂದಿಗೆ, ಒಂದು ಸ್ವಾಯತ್ತ ಸಂಸ್ಥೆ ತನ್ನ ಸಮಸ್ತ ಸವಲತ್ತುಗಳೊಂದಿಗೆ ಕೋಮುವಾದದ ಹಿನ್ನೆಲೆ, ಅದರ ಆಂತರಿಕ ಶಕ್ತಿ, ಅದು ಪಡೆಯುವ ಭೀಭತ್ಸ ರೂಪವನ್ನು ತೃಪ್ತಿಕರವಾಗಿ ಬಯಲಿಗೆಳೆಯಲು ಅಸಮರ್ಥವಾದಾಗ, ಇಲ್ಲವೇ ಸುಳ್ಳು, ಅಥವಾ ಅರ್ಧ ಸತ್ಯ ಮಾಹಿತಿಗಳಲ್ಲೇ ತೃಪ್ತರಾದಾಗ, ರಾಜಶೇಖರ್ ಅಂತಹವರ ಅಧ್ಯಯನ, ಧ್ಯಾನ, ಅದಕ್ಕೊದಗಿಸಿದ ಧ್ವನಿ ನಿಜಕ್ಕೂ ಅರ್ಥಪೂರ್ಣ.

ಈ ಒಟ್ಟು ಸಂಶೋಧನಾತ್ಮಕ ಲೇಖನ, ಎರಿಕ ಫ್ರಾಮ್ ಅನ್ನುವ being modeನದ್ದು,  having modeನದ್ದಲ್ಲ, ಅಂದರೆ ತನ್ನ ಪಾಡನ್ನು ಸಂತ್ರಸ್ತರ ಪಾಡಿನೊಂದಿಗೆ ಸಮೀಕರಿಸಿಕೊಂಡದ್ದು. ಇನ್ನೊಂದರ್ಥದಲ್ಲಿ ‘ಹಿಟ್ಲರ್‌ಗೆ ನಾನು ಜವಾಬ್ದಾರ’ – ಎಂದ ಸಾರ್ತ್ರೆಯಂತೆ, ರಾಜಶೇಖರ್, ಸುರತ್ಕಲ್ ಗಲಭೆಗಳಿಗೆ ನಾನು ಜವಾಬ್ದಾರ’ – ಎನ್ನುವ ವಿಶಾಲವಾದ ಅರ್ಥದಲ್ಲಿ ಬರೆದದ್ದು. ಇದೇ ಒಬ್ಬ ಲೇಖಕ ತನ್ನ ಕಾಲಕ್ಕೆ ಪ್ರಸ್ತುತವಾಗಿದ್ದಾನೆ, ಜೀವಂತವಾಗಿದ್ದಾನೆ, ಎನ್ನುವುದರ ಲಕ್ಷಣವಲ್ಲವೇ?

ಮಾನವತೆಯದು ಸೂಕ್ಷ್ಮ ಧ್ಯಾನ, ಮತೀಯ ಸಾಮರಸ್ಯ ಎನ್ನುವುದು ಅತೀ ಕ್ಷೀಣ ಧ್ವನಿ. ಹಾಗಾಗಿ ಈ ಬಗ್ಗೆ ಸ್ಪಷ್ಟವಾಗಿ ಮತ್ತು ನಿಖರವಾಗಿ ಬರೆಯುವ ರಾಜಶೇಖರ್ ಅಂತಹವರ ಸೊಲ್ಲು ಉಡುಗಿಹೋಗಬಾರದು. ಇದು ತುರ್ತಾಗಿ ಮತ್ತು ಅನಿವಾರ್ಯವಾಗಿ ಆಗಲೇಬೇಕಾದ ಕೆಲಸ.

“ಅಡಿಗರ ಕಾವ್ಯದ ಮನೋಧರ್ಮ’ ಮತ್ತು ಲಂಕೇಶ್ ಪತ್ರಿಕೆ ಮತ್ತಿತರ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಲೇಖನಗಳು ರಾಜಶೇಖರ್ – ಅವರ ರಾಜಕೀಯ ದೃಷ್ಟಿಕೋನವನ್ನು ಬೆಳಕಿಗೆ ತರುವವುಗಳಾದರೂ, ಇಲ್ಲಿ ಪ್ರಸ್ತಾಪಿಸುವ ಗೋಜಿಗೆ ಹೋಗಿಲ್ಲ. ಈ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ. ವಿವಾದಗಳು ಹುಟ್ಟಿಕೊಂಡಿವೆ. ಅಂತೆಯೇ ಅವರ ಮೌಲಿಕ, ಬರಹಗಳಾದ ‘ಕಾಗೋಡು ಸತ್ಯಾಗ್ರಹ’, ‘ಬ್ರೆಕ್ಟ್ – ಒಂದು ಪರಿಚಯ’ ಮತ್ತು ಅನುವಾದಿತ ಕೃತಿಗಳಾದ ದಾರು ಪ್ರತಿಮಾ ನ ಪೂಜಯೇ, ‘ಪರಿಸರ ರಕ್ಷಣೆ ಮತ್ತು ಸಮಾಜವಾದ’ – ಇವುಗಳನ್ನು ಅನಿವಾರ್ಯವಾಗಿ ಇಲ್ಲಿ ಕೈಬಿಟ್ಟಿದ್ದೇನೆ. ಇದರಿಂದ ಅವು ಕಡಿಮೆ ಮಹತ್ವದವು ಎಂದು ಅರ್ಥವಲ್ಲ.

(* ಈ ಲೇಖನವನ್ನು ಪುತ್ತೂರು ಕನ್ನಡ ಸಂಘದಿಂದ ೨೦೦೨ರಲ್ಲಿ  ಪ್ರಕಟಿತ ಎಂ . ರಾಜಗೋಪಾಲ್ ಅವರ   “ಧ್ಯಾನ, ಮಾತು ಮತ್ತು ಧ್ವನಿ” ಕೃತಿಯಿಂದ ಆಯ್ದುಕೊಳ್ಳಲಾಗಿದೆ . )

ಚಿತ್ರಗಳು : ಫೇಸ್ಬುಕ್

One comment to “ನಿಷ್ಠುರತೆಯ ನೋಂಪು ಜಿ.ರಾಜಶೇಖರ್ ೭೦: ಕೋಮುವಾದ ಮತ್ತು ಸೆಕ್ಯುಲರಿಸಂ”
  1. ಬಹುಶ: 2004ರಲ್ಲಿರಬೇಕು ಉಡುಪಿಯಲ್ಲಿ ಅವರ ಕಚೇರಿಗೆ ಹೋಗಿದ್ದೆ. ನಾನಾಗ ಸಣ್ಣದಾದ ಒಂದು ಸಾಹಿತ್ಯಕ ಪತ್ರಿಕೆ ತರುತ್ತಿದ್ದೆ. ಅದಕ್ಕೆ ಚಂದಾ ನೀಡಿ ಪ್ರೀತಿಯಿಂದ ಮಾತಾಡಿಸಿ ಕಳಿಸಿದ್ದರು
    ಅವರ ಸರಳತೆಗೆ ನಾನು ಶರಣಾಗಿಬಿಟ್ಟಿದ್ದೆ

ಪ್ರತಿಕ್ರಿಯಿಸಿ