ಗೋವನ್ನು ತಿಂದು ಗೋವಿನಂತಾದವನು… : ‘ಮಾಂಸದಂಗಡಿಯ ನವಿಲು’ ಪುಸ್ತಕ ಪರೀಕ್ಷೆ

headernotextmasadivderspaಎನ್ಕೆ’ ಎಂದೇ ಕನ್ನಡ ಸಾಹಿತ್ಯ ಲೋಕದಲ್ಲಿ ಜನಪ್ರಿಯರಾಗಿರುವ ಕವಿ ಎನ್ಕೆ ಹನುಮಂತಯ್ಯ (1974-2010) ರವರ ಸಮಗ್ರ ಕಾವ್ಯವನ್ನು ‘ಮಾಂಸದಂಗಡಿಯ ನವಿಲು’ ಎಂಬ ಹೆಸರಿನಲ್ಲಿ ಹೊರತಂದಿದ್ದಾರೆ ಸಾಮಾಜಿಕ ಹಾಗೂ ರಾಜಕೀಯ ಹೋರಾಟದ ಪುಸ್ತಕಗಳನ್ನು ಹೆಚ್ಚಾಗಿ ಪ್ರಕಟಿಸುತ್ತಾ ಬಂದಿರುವ ‘ಲಡಾಯಿ ಪ್ರಕಾಶನ.’ ಈ ಪುಸ್ತಕದಲ್ಲಿ ಎನ್ಕೆಯವರ ಎರಡು ಪ್ರಕಟಿತ ಸಂಕಲನಗಳ ಕವಿತೆಗಳು ಹಾಗೂ ಕೆಲ  ಅಪ್ರಕಟಿತ ಕವಿತೆಗಳನ್ನು ಸಂಗ್ರಹಿಸಿ ಕೊಡಲಾಗಿದೆ.

ಈ ಪುಸ್ತಕದ ವಿಮರ್ಶೆ ಅಥವಾ ವಿಶ್ಲೇಷಣೆ ಮಾಡಬೇಕಾದರೆ, ಎನ್ಕೆ ಆರಂಭದಿಂದ ಇಲ್ಲಿಯವರೆಗೆ ಕ್ರಮಿಸಿರುವ ಹಾದಿಯ ಜೊತೆಜೊತೆಗೆ ಆಧುನಿಕ ಕನ್ನಡ ಸಾಹಿತ್ಯ, ಅದರಲ್ಲೂ ದಲಿತ ಸಾಹಿತ್ಯದ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೇನೋ!

1996ರಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಜಂಟಿಯಾಗಿ ‘ದಲಿತ ಕಾವ್ಯ’ ಪುಸ್ತಕ ಪ್ರಕಟಿಸಿತು. 55 ಕವಿಗಳ 95 ಪದ್ಯಗಳನ್ನೊಳಗೊಂಡ ಈ ಸಂಕಲನದ ಸಂಪಾದಕರಾದ ಕೆ.ಬಿ. ಸಿದ್ಧಯ್ಯ, ಎಚ್.ಗೋವಿಂದಯ್ಯ ಹಾಗೂ ನಟರಾಜ ಬೂದಾಳ್ ‘ಏಕಲವ್ಯಧ್ಯಾನ’ ಎಂಬ ಹೆಸರಿನಲ್ಲಿ ಬರೆದ ಮುನ್ನುಡಿಯಲ್ಲಿ ಹೀಗೆ ಬರೆದರು: “ಈಗ  ದಲಿತ ಚಳವಳಿ ಒಂದು ನೆನಪು. ‘ಇಕ್ಕಲೂ ಅಗದ ಒದೆಯಲೂ ಅಗದ ಸ್ಥಿತಿಯಲ್ಲಿದೆ. ಕಣ್ಣೆದುರಿಗೆ ನಿಂತಿದ್ದ ಚಳುವಳಿ ಕುಸಿಯಿತು. ಅಥವಾ ಮೂಕ  ಮನುಷ್ಯನಿಗೆ ಮಾತು ಬಂತು ಅನ್ನುತ್ತಿದ್ದಂತೆ ಆ ಮನುಷ್ಯ ಮಾತು ಮರೆತು ಮತ್ತೆ ಮೂಕನಾದಂತೆ ಆಗಿವೆ. ದಲಿತ ಚಳುವಳಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕವಾಗಿ ದಲಿತ-ಬಂಡಾಯ ಮಾದರಿಗಳು ಅತೃಪ್ತಿ ತಂದಿವೆ. ಆದರೆ ಕನ್ನಡ ಸಾಹಿತ್ಯ-ಸಂಸ್ಕೃತಿ ಪರಂಪರೆ ಬಹಳ ದೊಡ್ಡದು. ದಲಿತರೇ ಮುಂತಾಗಿ ಎಲ್ಲರೂ ಕಲಿಯಬೇಕಾದ್ದು ಅಪಾರವಾಗಿದೆ. ಹೀಗೆ ಕಲಿಯಲು ಸಿದ್ಧರಾಗಿರುವ ದಲಿತ ಬರಹಗಾರರು ಬಹುಮುಖಿ ಸಂಸ್ಕೃತಿಯ ಮೂಲಗಳಿಗೆ ಸಂಚಾರ ಹೊರಡಬೇಕಾಗಿದೆ… ಅಸ್ಪೃಶ್ಯನು ತನ್ನ ಹುಟ್ಟಿನ ಮೂಲದ ಜನಾಂಗಿಕ ನೆನಪು, ಜನಾಂಗಿಕ ಕೌಶಲ್ಯ, ನಂಬಿಕೆಗಳು, ಆಚರಣೆಗಳು, ದಂತಕತೆಗಳು, ಪುರಾಣಗಳು, ಎಲ್ಲ ರೀತಿಯ ಸೂಕ್ಷ್ಮಾತಿಸೂಕ್ಷ್ಮ ಹಾಗೂ ದಟ್ಟ ವಿವರಗಳೊಂದಿಗೆ ಮರುಹುಟ್ಟು ಪಡೆಯಬೇಕಾಗಿದೆ.”

ಈ ಸಂಕಲನದಲ್ಲಿ ಎನ್ಕೆ ಅವರ ‘ಜನವರಿಯ ನಡು-ರಾತ್ರಿ’ ಎಂಬ ಪದ್ಯವನ್ನು ಕಾಣಬಹುದು. (ಈಗ  ವಿಮರ್ಶಿಸಲಾಗುತ್ತಿರುವ ಪುಸ್ತಕದಲ್ಲಿ ‘ಹಿಮದ ಹೆಜ್ಜೆ’ ಪದ್ಯ ಸಂಕಲನದಲ್ಲಿ ಈ ಪದ್ಯ ಸೇರಿಕೊಂಡಿದೆ). ಇಡೀ  ಪುಸ್ತಕದಲ್ಲಿ ಈ ಪದ್ಯ ಒಂದು ರೀತಿಯ ಬೆಚ್ಚಿಬೀಳಿಸುವ  ಪದ್ಯ. ‘ಉಚ್ಚೆ ಕಟ್ಟಿದ ನನ್ನೊಡಲೊಳಗೀಗ ನಿದ್ದೆಯ ಕಳವು’, ‘ನನ್ನಂತರಾಳದ ಜಾಡಮಾಲಿಗಳ ಯೋನಿಯಲಿ ಸೂರ್ಯ ವೀರ್ಯವ ಸ್ಖಲಿಸಿ ನಾರುತಿಹನು’, ‘ಹಾದಿ ಬೀದಿಯ ಕಸದ ಹಚ್ಚಡದೊಳಗೆ ಜೀವ ರೆಪ್ಪೆ ತೋತು ಉಪ್ಪು ರಕ್ತ ಸೋರುತಿಹವು… ನೋಡಿ ಮಾಡುವುದೇನು?’ ಎಂಬ  ಸಾಲುಗಳೇ ಅದಕ್ಕೆ ಉದಾಹರಣೆ. ಹಾಗಾಗಿಯೇ, ಆ ಪುಸ್ತಕದಲ್ಲಿರುವ 95 ಪದ್ಯಗಳ(ಇದರಲ್ಲಿ ದೇವನೂರ ಮಹಾದೇವರ ‘ಕುಸುಮಬಾಲೆ’ಯನ್ನೂ ಸೇರಿಸಿರುವುದು ವಿಶೇಷ) ಬೆರಳೆಣಿಕೆಯಷ್ಟು ಗಮನ ಸೆಳೆಯುವ ಪದ್ಯಗಳಲ್ಲಿ ಎನ್ಕೆಯ ಪದ್ಯ ಕೂಡ  ಒಂದಾಗಿತ್ತು. ಆದರೆ, ಮೇಲೆ ಹೇಳಿದ ಹಾಗೆ ಎನ್ಕೆ ಕಾವ್ಯ ‘ಮರುಹುಟ್ಟು’ ಪಡೆದ ಕಾವ್ಯವೇ ಎಂಬುದನ್ನು ಅವರ  ಸಮಗ್ರ ಕಾವ್ಯದ ಹಿನ್ನೆಲೆಯಲ್ಲಿ ನೋಡೋಣ.

ಮಾಂಸದಂಗಡಿಗೆ ನವಿಲು ಹೇಗೆ ಬಂತು?

ಈ ಪುಸ್ತಕವನ್ನು ನೋಡಿದವರಿಗೆ ಹಾಗೆ ಅನ್ನಿಸದೇ ಇರದು. ಈ ರೂಪಕದ ಸ್ವಾರಸ್ಯಕರ ಹಿನ್ನೆಲೆಯ ಬಗ್ಗೆ ರಹಮತ್ ತಮ್ಮ ಮುನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ: “ಎನ್ಕೆ, ಸದಾ  ತೀವ್ರ ತಳಮಳದಲ್ಲಿ ಅದ್ದಿರುವಂತಿದ್ದ ಜೀವ, ಒಮ್ಮೆ ಅವರು ಕನ್ನಡ ವಿಶ್ವವಿದ್ಯಾಲಯದಲ್ಲಿ ದಲಿತ ಚಳುವಳಿಯ  ಮೇಲೆ ಒಂದು  ಉಪನ್ಯಾಸ ಮಾಡಿದ ಪ್ರಸಂಗ ನೆನಪಾಗುತ್ತಿದೆ. ದಲಿತ ಚಳುವಳಿಯ ವರ್ತಮಾನದ ದುರವಸ್ಥೆಯನ್ನುಅವರು ನವಿಲಿನ ರೂಪಕದಲ್ಲಿ ವಿವರಿಸಿದರು. ದಲಿತ ಚಳುವಳಿ, ಒಂದು ಕಾಲಕ್ಕೆ ಕರ್ನಾಟಕದ ಯಾವುದೇ ಮೂಲೆಯಲ್ಲಿ ದಲಿತರ ಮೇಲೆ ಹಲ್ಲೆಯಾದರೂ,ಅಲ್ಲಿಗೆ ಹೋಗಿ ಕ್ರಾಂತಿಯ ಮೊಟ್ಟೆಗಳನ್ನಿಟ್ಟು ಬರುವ ನವಿಲಿನ ಕೆಲಸವನ್ನು ಮಾಡುತ್ತಿತ್ತು: ನಂತರ ಮೊಟ್ಟೆಗಳು ಒಡೆದು ಅಲ್ಲಿ ಹೊಸನವಿಲುಗಳು ಹುಟ್ಟುತ್ತಿದ್ದವು; ಕ್ರಾಂತಿಯನ್ನು ಮುಂದುವರೆಸುತ್ತಿದ್ದವು. ಈಗ ಅಂತಹ ನವಿಲುಗಳೆಲ್ಲ ಬಿಕರಿಯಾಗಿ, ಕಸಾಯಿಖಾನೆಯಲ್ಲಿ ಪುಕ್ಕ ತರಿಸಿಕೊಂಡು ಮಾರಾಟಗೊಳ್ಳುತ್ತಿವೆ ಎಂಬುದು ಆ ರೂಪಕದ ಆಶಯವಾಗಿತ್ತು.”

ಆರಂಭದಲ್ಲಿ ಹೆಸರಿಸಿದ ‘ದಲಿತ ಕಾವ್ಯ’ ಕೃತಿಯಲ್ಲೂ ದಲಿತ ಚಳುವಳಿ ಮತ್ತು ದಲಿತ ಸಾಹಿತ್ಯದ ಬಗ್ಗೆ ಇಂತದ್ದೇ ಆಶಯ ವ್ಯಕ್ತವಾಗಿರುವುದನ್ನು ಕಾಣಬಹುದು. ಆದರೆ, ಎನ್ಕೆ ಪ್ರತಿಭೆಯೆಂದರೆ, ಹತ್ತು ಪುಟಗಳಲ್ಲಿ ಹೇಳುವಂತದ್ದನ್ನು ಒಂದೇ ರೂಪಕದ ಮೂಲಕ ಹೇಳಿಬಿಡುವುದು. ಈ ಕಾರಣಕ್ಕೇ ಅವರು ಕನ್ನಡ ಕಾವ್ಯದಲ್ಲಿ, ಅದರಲ್ಲೂ ಕಳೆದ ಎರಡು ದಶಕಗಳ ಕನ್ನಡ ಕಾವ್ಯದಲ್ಲಿ ವಿಶಿಷ್ಟವಾಗಿ ಕಾಣುವುದು. ‘ಮಾಂಸದಂಗಡಿಯ ನವಿಲು’ ಅಂತಹದೊಂದು ರೂಪಕ. ಈ ಕೃತಿ ಅಂತಹ ರೂಪಕ, ಪ್ರತಿಮೆಗಳ ಪಾಕ.

 mamsadangadiya-naviludivderspa

ಎನ್ಕೆ ಕಾವ್ಯದ ಪರಿಯ ಸೊಬಗು

ಎನ್ಕೆ ಕಾವ್ಯವನ್ನು ಓದುತ್ತಾ ಹೋದಂತೆ, ಯಾರ ಕಾವ್ಯದೊಂದಿಗೆ ಸಮೀಕರಿಸಿ ನೋಡಬೇಕು? ಅವರ  ಕಾವ್ಯದ ಬೆಲೆಕಟ್ಟುವುದಾದರೆ ಹೇಗೆ ಕಟ್ಟಬೇಕು? ದಲಿತ ಕಾವ್ಯದಲ್ಲಿ ಅವರ ಸ್ಥಾನವೇನು ಎಂಬುದನ್ನು ನೋಡಬೇಕೆ? ಅಥವಾ ಇಡೀ ಕನ್ನಡ ಕಾವ್ಯದಲ್ಲಿ ಅವರ ಸ್ಥಾನವೇನು ಎಂಬುದನ್ನು ನೋಡಬೇಕೇ? ಎಂಬ  ಪ್ರಶ್ನೆಗಳು ಒಂದಾದ ಮೇಲೊಂದರಂತೆ ಎದುರಾಗದೇ ಇರವು. ಯಾಕೆಂದರೆ, ಅವರ ತಲೆಮಾರಿನವರೊಂದಿಗೆ ಯಾಕೆ ಯಾವ ತಲೆಮಾರಿನ ಕವಿಯೊಂದಿಗೂ ಅವರನ್ನು ಹೋಲಿಸಲಾಗದೇನೋ ಎನ್ನುವಷ್ಟು ವಿಶಿಷ್ಟವಾದ ಕವಿ ಅವರು.

ಸುಮಾರು 120 ಪುಟಗಳವರೆಗೆ ಹರಡಿಕೊಂಡಿರುವ ಎನ್ಕೆಯವರ ಈ ಸಮಗ್ರ ಕಾವ್ಯ ಸಂಕಲನದ ಮೊದಲ ಪದ್ಯ(?) ‘ಕತ್ತಲೆಗೆ ಕಾಯುವುದಿಲ್ಲ’ ಮೂಲಕ ಆರಂಭಿಸುವುದಾದರೆ, ಈ ಪದ್ಯ ಉಳಿದೆಲ್ಲದಕ್ಕಿಂತ ಗಾತ್ರದಲ್ಲಿ ದೊಡ್ಡದು. ಇದನ್ನು ಪದ್ಯ ಅನ್ನುವುದಕ್ಕಿಂತ ಕಾವ್ಯಮಯವಾದ ಗದ್ಯ ಅನ್ನಬಹುದೇನೋ. ಅಥವಾ ಒಂದು ಅತ್ಯುತ್ತಮವಾದ ಸಣ್ಣಕತೆ?

ಸಂವೇದನೆ ಹಾಗೂ ಕಾವ್ಯಮಯವಾದ ಗದ್ಯದ ದೃಷ್ಟಿಯಿಂದ ಇದು ದೇವನೂರ ಮಹಾದೇವರ ಸಣ್ಣಕತೆಗಳನ್ನು ನೆನಪಿಸುವುದುಂಟು.

‘’ಬಡವಾರು ಸತ್ತಾರೆ ಸುಡುವುದಕೆ ಸೌದಿಲ್ಲೋ

ಒಡಲ ಕಿಚ್ಚಲ್ಲಿ ಹೆಣಬೆಂದೊ/ಶಿವನೆ

ಬಡವರಿಗೆ ಸಾವ ಕೊಡಬ್ಯಾಡ…”

ಎಂದಾಗ ನಮ್ಮ ಜಾನಪದ ಗೀತೆಗಳು ನೆನಪಾಗುವುದುಂಟು. ಬೆಳಕು ಹರಿಯುವುದನ್ನು ‘ನದಿಗೆ ಬಣ್ಣ ಬಂದಿತಲ್ಲ’ ಎಂದಾಗ ಥಟ್ಟನೆ ಕಾವ್ಯದ ಸೆಲೆಯೊಂದು ಜಿನುಗುವುದುಂಟು. ಅದು ಹಾಗೆಯೇ “ನಾನಿದ್ದ ‘ಕೆಳನಾರ್’ನ  ಜನರಿಗೆಲ್ಲ ಎಷ್ಟೊಂದು ಬಣ್ಣಗಳಿದ್ದವು! ಆದರೆ ಈ ಹಾಳುನದಿಗೆ ಬಣ್ಣವೇ ಇಲ್ಲ. ಊರ ಬಣ್ಣಗಳಿಗೆ ಹೆಸರು ಕೊಡುವುದರಲ್ಲೇ ನನ್ನೆಲ್ಲ ಮಾತುಗಳು ಬತ್ತಿಹೋದವು’ ಎಂಬ ಮೊದಲಾಡಿದ ಮಾತುಗಳನ್ನು ನೆನಪಿಗೆ ತಾರದೇ ಇರದು. ಆದರೆ, ಈ ಕತೆಯ ಹೆಸರುಗಳು, ಸ್ಥಳಗಳು ಬೇರೆ ಪರಿಸರದ್ದಾಗಿರುವುದರಿಂದ ಇದು ಇನ್ನಿಲ್ಲದ ಕುತೂಹಲತುಂಬಿದ ಗೊಂದಲವನ್ನು ಮೂಡಿಸುವುದು ಸಹಜ. “ಇಲ್ಲ… ಇಲ್ಲ… ನಾನು ಅಪ್ಪನಂತೆ ಕತ್ತೆಲೆಗೆ ಕಾಯುವುದಿಲ್ಲ”  ಎಂದು ಮುಗಿಯುವ ಈ ಕತೆ ಎನ್ಕೆ ಇನ್ನೊಂದಿಷ್ಟು ಇಂತಹ ಕತೆಗಳನ್ನು ಬರೆಯಬೇಕಿತ್ತು ಎಂದು ಬಯಸುವಂತೆ ಮಾಡದಿರದು.

‘ರಕ್ತಗಮಲೆ’ ಪದ್ಯ ಹುಟ್ಟಿನ ಕರಾಳ, ಭೀಕರ ಭಾವವನ್ನು ಅದರ ರಕ್ತದ ವಾಸನೆಯಿಂದ ಇಡೀ ಪದ್ಯದುದ್ದಕ್ಕೂ ಮೂಡಿಸುತ್ತಾ ಹೋಗುವುದು.

‘ಅವಳೆದೆಯ ಕಡಲೊಳಗ ಕಣ್ಣುಂಡೆಗಳ ನಾವೆ

ಶಿಖರ ಹಸಿವಿನ ಬುರುಡೆ

ಹುಳ  ಬಿದ್ದ ಇರುಳ ಹಾಸಿನ ಮೇಲೆ

ಹೊರಳುತಿರುವಳು ತಾಯಿ…

ಎಂಬ  ಒಂದು ಪ್ಯಾರಾ ಒಂದು ಭೀಕರ ದೃಶ್ಯವನ್ನು ನಮ್ಮ ಕಣ್ನ ಮುಂದೆ ಮೂಡಿಸುತ್ತದೆ. ಇದೇ  ಪದ್ಯದಲ್ಲಿ ನಿರರ್ಥಕ, ನಿಷ್ಪ್ರಯೋಜಕ ಭಾವವನ್ನು ಮೂಡಿಸುವ “ನಾಯ  ಹಾಲಲಿ ಮೊಸರ ಕಡೆಯುವ ತವಕ, ನೀರ ನೆರಿಗೆಗೆ ಉರಿಯನ್ನಿಕ್ಕುವ ತವಕ’ ಎಂಬ  ಸಾಲುಗಳು, ‘ಬಸಿರಿಗೆ ಬ್ಯಾಟರಿ ಬಿಡುವ ಬೇಟೆಗಾರಾ… ನಿನಗೆಂದು ಸಾವೋ…” ಎಂದು ನೇರವಾಗಿ ಎದೆಗೊದೆವ ಸಾಲು,  ಮುಂದೆ ಬರುವ ‘’ಒಳಗುದಿ’ ಎಂಬ ಪದ್ಯದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತದೆ. ‘ಹಿಮದ ಜಲ್ಲಿಗಳಲ್ಲಿ ಗೋರಿಕಟ್ಟುವ ಸೂರ್ಯ,’ ಎಂಬ ಚಮತ್ಕಾರದ ಸಾಲನ್ನೂ ಈಪದ್ಯದಲ್ಲಿ ಕಾಣಬಹುದು.

‘ಕಡಲ ಸೆರಗೊಳಗೆ’ ಪದ್ಯದಲ್ಲಿನ ಈ ಸಾಲುಗಳು ತನ್ನ ಚಮತ್ಕಾರಿಕೆಯಿಂದ ಗಮನ ಸೆಳೆಯುತ್ತವಾದರೂ, ಇಡೀ ಪದ್ಯ ಅರಿವಿನ ಆಳಕ್ಕೆ ತಲುಪುವಲ್ಲಿ ಸೋಲುತ್ತವೆ:

ಭಾವದ ಶಿಶ್ನವನ್ನೊಮ್ಮೆ

ಕೆರಳಿಸಿ

ಕಡಲ ಸೆರಗ ಸರಿಸಿದರೆ ಸಾಕು

ಅಸಂಖ್ಯ ಚಿತ್ತಾರದ

ಯೋನಿಗಳ ದಿಗ್ಧರ್ಶ

‘ಕವಿತೆಗೆ’ ಅನ್ನುವ ಪುಟ್ಟ ಪದ್ಯವನ್ನು ಓದಿದಾಗ ಕೆಎಸ್ ನರಸಿಂಹಸ್ವಾಮಿಯವರ ‘ಮೈಸೂರು ಮಲ್ಲಿಗೆ’ ಪದ್ಯಗಳು ನೆನಪಾದಲ್ಲಿ ಅಚ್ಚರಿಯಿಲ್ಲ.

ನಾಡಿಯ ಮೇಲೆ ನಾಟ್ಯವಾಡುವ

ಭಾವನೆಗೆ

ಎದೆಯ ಮೃದಂಗ ನುಡಿಸುವ

ಹೂಗೆನ್ನೆ ಹುಡುಗೀ

ನಿನ್ನ ನಿಟ್ಟುಸಿರ ವೀಣೆ ಮಾಧುರ್ಯದಲಿ

ಏನು  ಸೊಬಗೋ

‘ಮರೆತಿಲ್ಲ ನನ್ನವಳೆ,’ ‘ರಂಗೋಲಿಯೊಳಗೆ,’ ನನ್ನ ಗೂಡಲಿ’ ಇನ್ನು ಮುಂತಾದ ಪದ್ಯಗಳು ಕೂಡ ಇದೇ ರೀತಿಯ ರಮ್ಯ ಭಾವನೆಯನ್ನು ಮೂಡಿಸುವ ಪದ್ಯಗಳೇ.

‘ಆಪ್ಪ’ ಪದ್ಯ ಮಾತ್ರ ಆಪ್ತವಾಗುವುದು ಹಲವು ಕಾರಣಗಳಿಂದಾಗಿ. ರಹಮತ್ ಹೇಳುವಂತೆ ಲಂಕೇಶರ ‘ಅವ್ವ’ನನ್ನು ನೆನಪಿಗ ತರದೆ ಇರದು. ಆದರೆ, ಲಂಕೇಶ್ ಗೂ  ಮುಂಚೆ ಅಮ್ಮನ ಬಗ್ಗೆ ಪದ್ಯ ಬರೆದಿದ್ದು ಗಂಗಾಧರ ಚಿತ್ತಾಲರು ಎಂದು ಕಾಣುತ್ತದೆ. ಸಾಕಷ್ಟು ಕವಿಗಳು ತಮ್ಮ ಅಮ್ಮಂದಿರ ಬಗ್ಗೆಯೇ ಪದ್ಯಗಳನ್ನು ಬರೆದಿದ್ದಾರೆ. ಆದರೆ, ಎನ್ಕೆ ತನ್ನ ‘ಅಪ್ಪ’ನ ಬಗ್ಗೆ ಬರೆದಿರುವುದು ವಿಶೇಷ. ತನ್ನೆಲ್ಲ ಒಳಿತುಕೆಡಕುಗಳ ನಡುವೆಯೂ ‘ಇರುಳ ಉರುಳಿಗೆ ಶಿರವಿಟ್ಟು ಸತ್ತವನು’ ಕವಿಯ ಒಡಲ ‘ಗೋಳಗುಮ್ಮಟದಲಿ ಗಳಗಳ ಅಳು’ವುದು ಮಾರ್ಮಿಕವಾಗಿದೆ.‘

ಇದಾದ ನಂತರ ಬರುವ ಸುಮಾರು ಪದ್ಯಗಳು ಸುಮಾರಾಗಿಯೇ ಇವೆ. ನಡುವೆ ಸುಳಿವ “ದೇವರೇ… ನಿನ್ನ ಧ್ಯಾನದಿಂದ ಹದಗೆಳ್ಳುವಷ್ಟು ಕೆಟ್ಟಿದ್ದರೆ ಅದಕ್ಕೆ ಧಿಕ್ಕಾರವಿರಲಿ’ ಎಂಬ  ಹಾಯ್ಕು ಮಾತ್ರ ತನ್ನ ರೆಬೆಲ್ ಗುಣದಿಂದಾಗಿ ಗಮನ ಸೆಳೆಯುತ್ತಾದರೂ, ಇದೇ  ಮಾತುಗಳನ್ನು ಬೇರೆ ಹಾಯ್ಕುಗಳ ಬಗ್ಗೆ ಹೇಳುವ ಹಾಗಿಲ್ಲ.

ಒಟ್ಟಾರೆಯಾಗಿ, ‘ಹಿಮದ ಹೆಜ್ಜೆ’ ಸಂಕಲನದಲ್ಲಿನ ಪದ್ಯಗಳು—ಅದೇ  ಹೆಸರಿನ ಪದ್ಯವನ್ನೊಳಗೊಂಡು—ಭರವಸೆ ಹುಟ್ಟಿಸುವಂತಹ ಕೆಲವು ಪದ್ಯಗಳ ಜೊತೆಜೊತೆಗೆ ಅಪಕ್ವವೂ ಹಸಿಹಸಿಯೂ ಆದ ಸಾಕಷ್ಟು ಪದ್ಯಗಳನ್ನೊಳಗೊಂಡಿರುವುದರಿಂದ ಹೇಳಿಕೊಳ್ಳುವಂತಹ ಪರಿಣಾಮವನ್ನು ಮೂಡಿಸುವಲ್ಲಿ ಸೋಲುತ್ತವೆ. ಇದು ಎನ್ಕೆ ಕಾವ್ಯದ ಆರಂಭಿಕ ಘಟ್ಟವಾಗಿರುವುದರಿಂದ ಅದನ್ನು ಮರೆತು ಆನಂತರ ಬಂದ ‘ಚಿತ್ರದ ಬೆನ್ನು’ ಕಡೆ  ಗಮನ  ಹರಿಸಬಹುದು.

ನನ್ನ ಚಿತ್ರಕ್ಕೇಕೆ ಬೆನ್ನು ಬರೆವೆ?

 ‘ಚಿತ್ರದ ಬೆನ್ನು ಪದ್ಯ ಸಂಕಲನದ ಶೀರ್ಷಿಕಾ ಪದ್ಯ ಎನ್ಕೆಯವರ ಪದ್ಯಗಳಲ್ಲೇ ಅತ್ಯಂತ ಜನಪ್ರಿಯವಿರಬಹುದೇನೋ. ಒಂದು ರೀತಿಯ ಸೂಫಿ ಮತ್ತು ವಚನಗಳ ಮನೋಧರ್ಮವನ್ನೊಳಗೊಂಡಿರುವ ಈ ಪದ್ಯ, ನಿರಾಶೆ ಮೂಡಿಸುವ ಅವರ ಮೊದಲ ಪದ್ಯ ಸಂಕಲನ ‘ಹಿಮದ ಹೆಜ್ಜೆ’ಯಿಂದ ಮುಂದೆ ಏರಿದ ಎತ್ತರಕ್ಕೆ ದೊಡ್ಡ ಉದಾಹರಣೆಯಾಗಿದೆ.

ಅಗ್ನಿಮಾಂಸದ ಕುಲುಮೆಯಲಿ

ನನ್ನ ಕಾಯಿಸಿ ಬಣ್ಣವ ಮಾಡಿ

ಮರಳಿ ನನ್ನ ರೂಪನೇ ಕಡೆವ—

ಏ ನನ್ನಾಳದ ಅಳುವೇ

ನನ್ನ ಚಿತ್ರಕ್ಕೇಕೆ ಬೆನ್ನು ಬರೆವೆ?

ಎಂದು ಕೇಳುತ್ತ ಪದ್ಯವನ್ನು ಕೊನೆಗೊಳಿಸುವ ಎನ್ಕೆ ಇಡೀ ಪದ್ಯದಲ್ಲಿ ಇರುವೆ, ಬಸವನ ಹುಳು, ಸಣ್ಣ ಹಕ್ಕಿಯಂತಹ ಸೂಕ್ಷ್ಮ ಜೀವಿಗಳಲ್ಲೂ ದೊಡ್ಡಗುಣವೊಂದನ್ನು ಹುಡುಕಿ ಅದಕ್ಕೆ ಶರಣು ಹೇಳುವ ಹೇಳುವ ದೊಡ್ಡತನವನ್ನು ತೋರುತ್ತಾರೆ. ಈ ಪದ್ಯದಷ್ಟು ಅವರ  ಬೇರಾವ ಪದ್ಯವೂ ಮತ್ತೆ ಮತ್ತೆ ಓದಿಸಿಕೊಳ್ಳಲಾರದೇನೋ ಅನ್ನುವಷ್ಟು ಸೊಗಸಾದ ಪದ್ಯ ಇದು. ಚಿತ್ರಕ್ಕೂ ಬೆನ್ನು ಇರುತ್ತದೆ ಅಥವಾ ಇರಬಲ್ಲದು ಎಂಬುದನ್ನು ನಾವು ಯೋಚಿಸಲೂ ಹೋಗುವುದಿಲ್ಲ. ಇದೊಂದು ರೀತಿಯ ಮೂರನೇ ಆಯಾಮದ ಪರಿಕಲ್ಪನೆಯನ್ನು ನಮ್ಮ ಮುಂದೆ ತಂದರೂ ತರಬಹುದು. ಆದರೆ, ಇಲ್ಲಿ ‘ಚಿತ್ರ’ ಅನ್ನುವುದು ಏನನ್ನು ಸೂಚಿಸುತ್ತದೆ? ಇದನ್ನು ಓದುಗ ಹೇಗೆ ಅನುವಾದಿಸಿಕೊಳ್ಳಬೇಕು ಎಂಬುದು ಒಂದು ಪ್ರಶ್ನೆಯಾದರೆ, ಈ ಸಾಲನ್ನು ಬೇರೊಂದು ಭಾಷೆಗೆ, ಅದರಲ್ಲೂ ಇಂಗ್ಲಿಶ್ ನಂತಹ ಭಾಷೆಗೆ ದಾಟಿಸುವುದಾದರೂ ಹೇಗೆ?

‘ಚಿತ್ರದ ಬೆನ್ನು’ ಕವನಸಂಕಲನದಲ್ಲಿ ಎನ್ಕೆಯವರ ಅತ್ಯುತ್ತಮವಾದ ಹಾಗೂ ಅತ್ಯಂತ ಸಾಧಾರಣವೆನಿಸುವ ಪದ್ಯಗಳೆರಡನ್ನೂ ಕಾಣಬಹುದಾದರೂ, ಗಮನಸೆಳೆಯುವುದು ಪದ್ಯಗಳ ಶೀರ್ಷಿಕೆಗಳು. ಉದಾಹರಣೆಗೆ, ‘ಮಾಂಸದಂಗಡಿಯ ನವಿಲು’, ‘ಚಿತ್ರದ ಬೆನ್ನು’, ‘ಗೋವು ತಿಂದು ಗೋವಿನಂತಾದವನು’, ’ಕರಿ ನವಿಲು’, ‘ಎರೆಹುಳದ ಬಾಯೊಳಗೆ ಕರಗುವ ಆನೆಗಳು’, ‘ಗಡಿಯಾರವಾಗುವವನು’,  ‘ಯೋಗಿಯ ಕಣ್ಣಲ್ಲಿಚಿಗುರುವ ಏಣಿ’, ‘ನರೆಗೂದಲ ಉಯ್ಯಾಲೆ’, ‘ಶಬ್ದದ ಶಿರ ಹಿಡಿದು,’ ‘ಇದ್ದಿಲಾಗುವ ಆಲಿ’.

‘ಈ ಸಂಕಲನದ ಅತ್ಯಂತ ಗಮನಾರ್ಹವಾದ ರಾಜಕೀಯ ಪದ್ಯವೆಂದರೆ, ಗೋವನ್ನು ತಿಂದು ಗೋವಿನಂತಾದವನು.’ ಎನ್ಕೆ ಬದುಕಿದ್ದ ಸಂದರ್ಭದಲ್ಲಿಯೇ ನಡೆದಿದ್ದ ‘ಗೋಮಾಂಸ’ ವಿವಾದಕ್ಕೆ ಪ್ರತಿಕ್ರಿಯೆಯಾಗಿ ಹೊಮ್ಮಿದ ಪದ್ಯ ಅದು. ಇಂದು ಗುಜರಾತಿನಲ್ಲಿ ಗೋವಿನ ಚರ್ಮ ಸುಲಿದರೆಂಬ ಕಾರಣಕ್ಕೆ ಮೇಲ್ಜಾತಿಯೆಂದು ಕರೆದುಕೊಳ್ಳುವವರು ದಲಿತರ ಚರ್ಮ ಸುಲಿದು ಅಂಬೇಡ್ಕರ್ ಗತಿಸಿದ ನಂತರದ ಸಂದರ್ಭದಲ್ಲಿ ದೇಶ ಕಂಡ  ಅತ್ಯಂತ ದೊಡ್ಡ ದಲಿತ ಪ್ರತಿಭಟನೆಗೆ ಎಡೆ ಮಾಡಿಕೊಟ್ಟಿರುವ ವೇಳೆಯಲ್ಲಿ ಹಿಂದೆಂದಿಗಿಂತಲೂ ಈಪದ್ಯ ಹೆಚ್ಚು ಪ್ರಸ್ತುತವಾಗಿ ಕಾಣಿಸುತ್ತಿದೆ. ಕಾವ್ಯ ತಾನು ಎಷ್ಟೇ ಕಾಲನಿಷ್ಠವಾಗಿರಲು ಪ್ರಯತ್ನಿಸಿದರೂ ಕಾಲಾತೀತವಾಗಿ ನಿಲ್ಲುವುದು ಹೀಗೆಯೇ ತಾನೇ? ಎನ್ಕೆ ಬದುಕಿದ್ದಿದ್ದರೆ ಇದಕ್ಕೆ ಕಾವ್ಯಾತ್ಮಕವಾಗಿ ಹೇಗೆ ಸ್ಪಂದಿಸುತ್ತಿದ್ದರು, ಯಾವ ರೂಪಕದ ಮೂಲಕ ಟೀಕಿಸುತ್ತಿದ್ದರು, ಪ್ರತಿಭಟಿಸುತ್ತಿದ್ದರು ಎಂಬುದನ್ನು ನಾವು ಈಗ ಊಹೆ ಮಾಡಿಕೊಳ್ಳಬೇಕಷ್ಟೆ.

‘ಅಸ್ಪೃಶ್ಯ’

ಹೌದು; ನಾವು ಗೋವು ತಿಂದು

ಗೋವಿನಂತಾದವನು.

ನೀವು ನೀಡುವ ಮೇವು ತಿಂದು

ನಿಮ್ಮಂಥ ಮನುಷ್ಯನಾಗಲಾರೆ

ಮನುಷ್ಯರನ್ನು ತಿನ್ನಲಾರೆ ಎಂದು  ರೂಪಕದ ಕೊಂಬಿನ ಮೂಲಕವೇ ಹಿಂದುತ್ವವಾದಿಗಳಿಗೆ ತಿವಿದರೂ ಮನುಷ್ಯತ್ವವನ್ನು ಎತ್ತಿ ಹಿಡಿಯುವ  ಎನ್ಕೆ, ಅದೇ ಪದ್ಯದಲ್ಲಿ –

ತಂತ್ರವನು ಭೋಗಿಸುವ ನಿಮ್ಮಂಥ

ಸಲಿಂಗ ಕಾಮಿಗಳಿಗೆ

ಹೆದರಲಾರೆ

ಎಂದು ಬರೆದು ಮರುಕ್ಷಣವೇ ‘ಸಲಿಂಗ ಕಾಮಿ’ಗಳನ್ನು ಹೀಗಳೆಯುವ ದುಡುಕುತನಕ್ಕಿಳಿದುಬಿಡುತ್ತಾರೆ. ಇದೊಂದನ್ನು ಗುರುತಿಸದೇ ಹೋದರೂ ಇಂತಹ ಅನೇಕ ದುಡುಕುಗಳನ್ನು ’ಮಾಂಸದಂಗಡಿಯ ನವಿಲು’ ಕೃತಿಗೆ ಆಳವಾದ ಅಭ್ಯಾಸಪೂರ್ಣವಾದ ಮುನ್ನುಡಿ ಬರೆದ ಕನ್ನಡದ ಪ್ರಮುಖ ಸಾಹಿತ್ಯ ವಿಮರ್ಶಕ ಹಾಗೂ ಸಂಸ್ಕೃತಿ ಚಿಂತಕ ರಹಮತ್ ತರೀಕೆರೆ ಗುರುತಿಸುತ್ತಾರೆ. ಬರೀ ದುಡುಕುಗಳ ಬಗ್ಗೆ ಮಾತ್ರವಲ್ಲ, ಎನ್ಕೆಯ ರೂಪಕ ಶಕ್ತಿಯ ಬಗ್ಗೆ, ಕವಿಹೃದಯದ ಬಗ್ಗೆ ಕೂಡ ರಹಮತ್ ನಿಚ್ಚಳವಾಗಿ ಬರೆಯುತ್ತಾರೆ. ಆ ಕಾರಣಕ್ಕೇ ಎನ್ಕೆ ಕಾವ್ಯದ ಬಗ್ಗೆ ಇಲ್ಲಿಯವರೆಗೆ ಬಂದಿರುವ ವಿಮರ್ಶೆಯಲ್ಲಿಯೇ ಇದು ಅತ್ಯಂತ ಪ್ರಬುದ್ಧವಾದ ವಿಮರ್ಶೆ ಅನ್ನಬಹುದು. ‘ಹಿಮಗೈಯಲ್ಲಿ ಹಿಡಿದ ಸುಡುಗೆಂಡ’ ಎಂದು ಕರೆದಿರುವ ಮುನ್ನುಡಿಯಲ್ಲಿ ಕೇವಲ ಐದಾರು ಪುಟಗಳಲ್ಲಿ ಅವರು ಹೇಳಬೇಕಾದ್ದೆಲ್ಲವನ್ನೂ ಎಷ್ಟು ನೀಟಾಗಿ ಸಾಂದ್ರವಾಗಿ ಹೇಳಿದ್ದಾರೆಂದರೆ, ಇದನ್ನು ಬಿಟ್ಟು ಹೊಸದಾಗಿ ಹೇಳಲು ಇನ್ನೇನು ಉಳಿದಿದೆ ಎಂದು ಎನ್ಕೆ ಕಾವ್ಯದ ವಿಮರ್ಶೆ ಅಥವಾ ವಿಶ್ಲೇಷಣೆಗೆ ತೊಡಗುವವರಿಗೆ ಅನ್ನಿಸದೇ ಇರದು!

ಕಿಟಕಿಯ ಕಂಬಿಗಳ ಹಿಂದೆ

ಅವ್ವ ನಿಂತಿದ್ದಾಳೆ

ಕಣ್ಣಲ್ಲಿ ನೀರು ಈಚಲು ಮರದಲ್ಲಿ

ಸೇಂಧಿ ತೊಟ್ಟಿಕ್ಕುವಂತೆ

ಎನ್ನುವ ಪ್ರತಿಮೆಯಂತದ್ದೇ ಅನೇಕ ಪ್ರತಿಮೆಗಳನ್ನು ಅವರು ತಮ್ಮ ಮುಂದಿನ ಪದ್ಯಗಳಲ್ಲೂ ಕಟ್ಟುತ್ತಾ ಹೋಗುತ್ತಾರೆ.

“ಅವ್ವ ನಿಂತೇಯಿದ್ದಾಳೆ’ ಪದ್ಯದ ನಂತರ ಬರುವುದೇ ‘ಮಾಂಸದಂಗಡಿಯ ಮುಂದೆ ನವಿಲು’.ಆರು ಪುಟಗಳಿಗೂ ಮಿಗಿಲಾಗಿ ಹರಿಯುತ್ತಾ ಹೋಗುವ ಈ ಪದ್ಯವನ್ನು ಒಳಗೊಳಗೇ ಓದಿಕೊಳ್ಳುವುದಕ್ಕಿಂತ ಗಟ್ಟಿಯಾಗಿ ಓದಿಕೊಂಡಲ್ಲಿ ಇನ್ನೂ ಸೊಗಸಾಗಿ ಕೇಳಿಸುತ್ತದೆ. ಕಾಡು. ಸೂರ್ಯ, ಕಡಲಿನಿಂದ ಹಿಡಿದು ಪ್ರಕೃತಿಯಲ್ಲಿರುವ ಗಿಡಮರ, ಪಶುಪಕ್ಷಿಗಳು, ಹುಳುಹುಪ್ಪಟೆಗಳೆಲ್ಲವನ್ನೂ ಪ್ರತಿಮೆ, ರೂಪಕಗಳನ್ನಾಗಿಸಿಬಿಡುತ್ತಾರೆ

ಆ ನಾರು ಹೂವಾಗಿ ಆ ನಾರು

ಹಸಿರಾಗಿ

ಹಿಪ್ಪೆ ಹೊಂಗೆ ಬೇವು ತುಂಬೆ

ಕಾತಾಳೆ ಭೂತಾಳೆ ಕಾರೆ ಕಣಗಿಲೆ

ಜಾಲಿ ಈಚಲು ಮುತ್ತುಗ ತಂಗಟೆ

ಬ್ಯಾಲ ತೊಡರೆ ಗಲಕೆ

ಬಂದರೆ

ಥರಂಥರ ಬಣ್ಣ ಘಮ್ಮೆಂದವು

ಸಾಲುಗಳಂತೆಯೇ. ಇಡೀ  ಪದ್ಯವನ್ನು ಓದುತ್ತಾ ಹೋದರೆ, ಪದಗಳು ಕುಣಿಯುತ್ತಿರುವಂತೆ ಭಾಸವಾಗುವುದು.

ಹರಿಯುತ್ತಲಿವೆ ಇರುವೆ

ಈ ಮಹಾಭೆಳಗಿನ ಮಾಂಸದಂಗಡಿಯಲ್ಲಿ ತಲೆಕೆಳಗಾಗಿ

ತೂಗುತ್ತಿರುವ ನನ್ನ ಮೇಲೆ

ಎಂಬ ಸಾಲುಗಳು ಮನುಷ್ಯನನ್ನೇ ಕೊಂದು ಮಾಂಸದಂಗಡಿಯಲ್ಲಿ ನೇತು ಹಾಕಿರುವ ದೃಶ್ಯವನ್ನು ಕಣ್ಣೆದುರಿಗೆ ತಂದು ವಿದ್ರಾವಕ ಭಾವನೆಯನ್ನುಂಟುಮಾಡಿಬಿಡುತ್ತದೆ.

‘ಮಿಂಚು ಹುಳ ಮತ್ತು ನಾನು’ ಸೊಗಸಾದ ಪದ್ಯ. ಈ ಪದ್ಯದಲ್ಲಿರುವಂತೆ ಇರುವೆ, ಮಿಂಚು ಹುಳ. ಮುಂತಾದವು ಎನ್ಕೆ ಪದ್ಯಗಳಲ್ಲಿ ಪದೇಪದೇ ಕಾಣಿಸಿಕೊಳ್ಳುವುದುಂಟು. ‘ಸಂಜೆಯನು ಲಂಗದಲ್ಲಿ ಹೆತ್ತ ಮಗು’ ಎಂಬಂತಹ ಚಮತ್ಕಾರದ ಸಾಲನ್ನು ಈ ಪದ್ಯದಲ್ಲಿ ಕಾಣಬಹುದು.

ಇನ್ನು ನವಿಲೆಂದರಂತೂ ಎನ್ಕೆಗೆ ಪ್ರಾಣ. ‘ಕರಿಯ ನವಿಲು’ ಪದ್ಯದಲ್ಲಿ ಬಿಳಿಯ ನವಿಲು, ನೀಲಿ ನವಿಲುಗಳೆಲ್ಲ ಬಂದು ಹೋಗುವುದು. ಇಡೀ  ಪದ್ಯದಲ್ಲಿ ಅತ್ಯಂತ ಗಮನ ಸೆಳೆವ ಸಾಲುಗಳೆಂದರೆ,

ಇರುಳಲ್ಲಿ ಆಕಾಶ ಚುಕ್ಕಿ ಹೂಬಿಟ್ಟಂತೆ

ನೆಲದಲ್ಲಿ ಮಿಂಚುತಿದೆ ನವಿಲ ಹೆಜ್ಜೆ.

‘ಸೂರ್ಯ ಭೂಮಿಯ ದಾರಿ’ ಪದ್ಯ ಭೀಭತ್ಸ ಪ್ರತಿಮೆಗಳನ್ನು ಸೃಷ್ಟಿಮಾಡಿ, ಘಾಸಿಗೊಳಿಸಿಬಿಡುತ್ತದೆ. ಉದಾಹರಣೆಗೆ,

ಕೊಳೆತ ಮೊಲೆಗಳು ಒಡೆದ ಕೊರಳುಗಳು

ಸುಟ್ಟ ಕಣ್ಣುಗಳು

ಕೇಸರಿ ಬಿಳಿ ಹಸಿರು ಕತ್ತರಿಸಿದ

ಮರ್ಮಾಂಗಗಳು

ಆದರೆ, ಇಡೀ  ಪದ್ಯವನ್ನು ಓದಿದಾಗ ಇಂತಹ ಡಾರ್ಕ್ ಇಮೇಜುಗಳನ್ನು ಸೃಷ್ಟಿಸಿ ಹೇಳಲು ಹೊರಟಿರುವುದಾದರೂ ಏನು? ಅನ್ನಿಸದೆ ಇರದು. ಇದೊಂದು ರೀತಿಯ ಫ್ಯಾಂಟಸಿ ಪ್ರಪಂಚಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಇದು ಸ್ವಲ್ಪ ಮಟ್ಟಿಗೆ ‘ಜೋಳಿಗೆಯ ದಂಡ’ ಪದ್ಯದಲ್ಲೂ ಮುಂದುವರೆಯುತ್ತದೆ. ಇವೆರಡೂ ಪದ್ಯಗಳಿಗಿಂತ ‘ಎರೆಹುಳದ ಬಾಯೊಳಗೆ ಕರಗುವ ಆನೆಗಳು’ ಗಮನ  ಸೆಳೆಯುತ್ತದೆ. ಕೇವಲ 15 ಸಾಲುಗಳಲ್ಲಿ ಒಂದು ಕತೆಯೇ ನಮ್ಮ ಕಣ್ನ ಮುಂದೆ ನಡೆದುಬಿಡುತ್ತದೆ. ಮುಂದೆ ಬರುವ ‘ಯಜಮಾನರಿಗೊಂದು ಪತ್ರ’ ಹಾಗೂ ‘ಕೂಲಿಯವರು’ ದಲಿತ ಬಂಡಾಯ ಹಿನ್ನೆಲೆಯ ಪದ್ಯಗಳನ್ನು ನೆನಪಿಸುತ್ತವಾದರೂ, ವ್ಯಂಗ್ಯ ಎದ್ದುಕಾಣುವಂತದ್ದು. ಅದರಲ್ಲೂ   ಯಜಮಾನರಿಗೊಂದು ಪತ್ರ’ –

ನೀವು ಕರುಣಾಳುಗಳು

ಈ ಸಂತೆಯಲಿ ನನಗೊಂದು ಅಂಗಡಿ ಹಾಕಿ

ಕಣ್ಣೀರು ಮಾರುವ ಕೆಲಸ ಕೊಟ್ಟಿದ್ದೀರಿ

ನಿಮಗೆ ಚಿರಋಣಿ

ನಿಮಗೆ ತೊಂದರೆಯಾದಾಗ ನನ್ನ

ಕಣ್ಣು ಕಿವಿ ಮೂಗು ನಾಲಗೆ ಧರ್ಮ

ಹೆಂಡತಿ ಮಗು ಎಲ್ಲವೂ

ನಿಮ್ಮ ಸ್ವತ್ತುಗಳೇ ಎಂಬ ಕೃತಜ್ಞತೆಯನ್ನು ಮರೆಯಲಾರೆ

ಎಂಬ  ಸಾಲುಗಳು ಜೀತದ ಹಿಂದಿನ ಅಸಹಾಯಕತೆಯನ್ನು ತನ್ನೆಲ್ಲ ಮಾರ್ಮಿಕ ವ್ಯಂಗ್ಯದಿಂದ ಎತ್ತಿಹಿಡಿಯುತ್ತವೆ.

‘ಗಡಿಯಾರವಾಗುವವನು’ ಕನ್ನಡ ದಲಿತ ಸಾಹಿತ್ಯದ ಪ್ರಮುಖ ಪದ್ಯ ಎಂದರೂ ತಪ್ಪಾಗಲಾರದು. ‘ಗಡಿಯಾರವಾಗುವವನು’ ಎಂಬ ಪದವನ್ನೇ ಇಂಗ್ಲಿಶ್ ನಂತಹ ಭಾಷೆಗೆ ಅನುವಾದಿಸುವುದಾದರೂ ಹೇಗೆ ಎಂಬ ಪ್ರಶ್ನೆ ಅನುವಾದಕನೊಬ್ಬನಿಗೆ ಕಾಡುವುದುಂಟು.               ಈ ಪದ್ಯದಲ್ಲಿ ಗಮನಾರ್ಹವಾದುದೆಂದರೆ, ಅದರ ಚಿತ್ರಕ ಶಕ್ತಿ. ಒಂದು ಸಣ್ಣಕತೆಯಲ್ಲಿ ಬರುವ ಅಂಶಗಳನ್ನು ಪದ್ಯರೂಪದಲ್ಲಿ ನಮಗೆ ಕಟ್ಟಿಕೊಡುತ್ತಾರೆ ಎನ್ಕೆ. ಇದು ಮತ್ತೆ ಮಹಾದೇವರ ಕತೆಗಳನ್ನು ನೆನಪಿಗೆ ತಂದರೆ ಆಚ್ಚರಿಯೇನಿಲ್ಲ.

ನಿದ್ದೆ ನುಂಗಿದ ಯಜಮಾನರ ನೆಲಗಳಲ್ಲಿ

ಅವ್ವ ಸೀರೆ ಎತ್ತಿ ದುಡಿಯುತ್ತಿದ್ದಾಳೆ

ಅಪ್ಪ ತಲೆಬಾಗಿ ಕಣ್ಣೀರಭಾರ

ಹೊರುತ್ತಿದ್ದಾನೆ

ತಂಗಿ ಒಲೆ ಮುಂದೆ ಮೇಣದಂತೆ ಕರಗುತ್ತಿದ್ದಾಳೆ

….

ಇವರ ಕನಸಾದ ನಾನು

ನನ್ನ ಶಿರಕ್ಕಂಟಿದ ಪುರಾತನ ಗಡಿಯಾರವನ್ನು

ಕಿತ್ತೆಸೆದು

ಹಟ್ಟಿಯ ತುಂಬ ಸುತ್ತುತ್ತಿದ್ದೇನೆ

ಗಡಿಯಾರವಾಗುತ್ತಿದ್ದೇನೆ.

“ಯೋಗಿಯ ಕಣ್ಣಲ್ಲಿ ಚಿಗುರುವ ಏಣಿ.” ಪದ್ಯದಲ್ಲಿ ‘ಬಿಸಿಯೇರಿದ ಯೋಗಿ ದೀಪವ ಭೋಗಿಸಿದ ಹುಳುವಿನಂತೆ’,  ಹಾಗೂ ‘ತನ್ನ ನಿದ್ರೆಯಲಿ ಬಚ್ಚಿಟ್ಟ ಯೋನಿಯನು ಬೆದಕತೊಡಗಿದ’ ಎಂಬ  ಸಾಲುಗಳು ಯೋಗಿತನದ ವ್ಯಂಗ್ಯವಾಡುತ್ತವೆ. ‘ಇದ್ದಿಲಾಗುವ ಆಲಿ’ ಕೂಡ  ಗಮನಾರ್ಹವಾದ ಕವನ.

2005ರ ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕವನವಾದ ‘ಆ ಒಂದು ಹನಿ ಮಳೆ’ ಎನ್ಕೆಯ ಸಿಗ್ನೇಚರ್ ಪದ್ಯ. ಹಾಗೆಂದರೇನೆಂದು ವಿವರಿಸಬೇಕಾದ ಅಗತ್ಯವಿಲ್ಲದುದುದರಿಂದ ಅದಕ್ಕೆ ಹೊರತಾದ ಒಂದು ಮುಖ್ಯವಾದ ಟಿಪ್ಪಣಿಯನ್ನಿಲ್ಲಿ ಕೊಡಲೇಬೇಕು.

ಇರುವೆ ಹೆಜ್ಜೆಗಳಲ್ಲಿ ಹೊಲ ಗದ್ದೆಗಳು ಮೂಡಿ

ವೃಕ್ಷಪರ್ವತ ಬೇರು ನಭ ತಾಕಿ ಉಸಿರಾಡಿ ಊರಾಯಿತು.

ಇರುವೆ ಬಾಯೊಳಗೆ ಮುಟ್ಟು ತೊಟ್ಟಿಕ್ಕಿ

ಅಂಟಿತ್ತು ಬ್ರಹ್ಮಾಂಡ ಮುಟ್ಟಿನೊಳಗೆ

ಬೆರಗು ಆರುವ ಮೊದಲೆ ಅರಸಿ ಬಂದನು

ಸೂರ್ಯ ಕಂಗಳ ಶೂರ

ಇರುವೆ ಹೆಜ್ಜೆಯ ಹೊಲಗದ್ದೆ ಮೇಲಿಟ್ಟು ಬೆಂಕಿಗಾಲ

ಅವಳ  ನಗ್ನಕ್ಕೆ ನಿಮಿರಿ ನುಗ್ಗಿದವು ಅವನ

ಬಂದೂಕು ಮರ್ಮಗಳು

ಅವಳ  ಬೆರಗು ಬೆರಳನು ಕತ್ತರಿಸಿ

ಮುಟ್ಟಿಸಿದ ಮಲಮೂತ್ರಗಳ ರಕ್ತ ಹರಿವ ಸುರಂಗಗಳ

ಹೆರದೆಯೂ ಹೊರಗೆ ತೆಗೆದನು ನನ್ನ ಶಿರವ.

ಹರಿಯುತ್ತಲಿವೆ ಇರುವೆ

ಪುಟ್ಟ ಬಾಯಲ್ಲಿ ಬ್ರಹ್ಮಾಂಡವಂಟಿದ

ಅವಳ  ಮುಟ್ಟನು ಕಚ್ಚಿ ಬಚ್ಚಿಟ್ಟ ಅಸ್ತ್ರಗಳ ನೆರಳ ಮೇಲೆ

ಕಸದ ತೊಟ್ಟಿಯಲಿ ಕೊಳೆತ ಅವಳ  ಬೆರಳ ಮೇಲೆ

ಹರಿಯುತ್ತಲಿವೆ ಇರುವೆ ರಕ್ತ ಮೆತ್ತಿದ ಕೊಲು ಯಂತ್ರದ ಚಕ್ರಗಳ ಮೇಲೆ

ಖಾಲಿಯಾಗದೆ ಉರಿವ ಸ್ಮಶಾನಗಳ ಮೇಲೆ

ಹರಿಯುತ್ತಲಿವೆ ಇರುವೆ

ಈ ಮಹಾಬೆಳಗಿನ ಮಾಂಸದಂಗಡಿಯಲಿ ತಲೆಕೆಳಗಾಗಿ

ತೂಗುತ್ತಿರುವ ನನ್ನ ಮೇಲೆ

ಮೇಲೆ ಉದ್ಧರಿಸಲಾದ ಇಷ್ಟೂ ಸಾಲುಗಳು ಮೊದಲೇ ಬಂದಿರುವ “ಮಾಂಸದಂಗಡಿಯ ನವಿಲು” ಪದ್ಯದಲ್ಲಿ ಕಾಣಿಸಿಕೊಂಡಿರುವುದು ಅನೇಕ ಪ್ರಶ್ನೆಗಳನ್ನು ಎತ್ತುತ್ತವೆ. ಇದು ಎಡಿಟಿಂಗ್ ವೇಳೆಯಲ್ಲಿ ಆದ ಅಚಾತುರ್ಯವಂತೂ ಖಂಡಿತ ಆಗಿರಲಾರದು. ಸಂಪಾದಕರಾದರೂ ಇದರೆಡೆ ಗಮನ ಹರಿಸಬೇಕಾಗಿತ್ತೇನೋ. ಕನ್ನಡದಲ್ಲಿ ಕೈಬರೆಹವನ್ನು ಇಡಿಯಾಗಿ ಓದಿ, ತಿದ್ದಿ ತೀಡಿ, ಒಂದೇ ವಿಷಯ ಮತ್ತೆ ಮತ್ತೆ ಕಾಣಿಸಿಕೊಂಡಿಲ್ಲವೆಂಬುದನ್ನು ಖಾತ್ರಿಪಡಿಸಿಕೊಳ್ಳುವ ಕೆಲಸವನ್ನು ಇನ್ನಾದರೂ ಸೀರಿಯಸ್ಸಾಗಿ ಮಾಡಲೇಬೇಕಾಗಿದೆ. ಕವಿಯೊಬ್ಬನ ಸಮಗ್ರಕಾವ್ಯವನ್ನು ತರುವುದು ಸರಿಯೇ. ಅದಕ್ಕಾಗಿ ಕವಿಯ ಎಲ್ಲ ಪದ್ಯ  ಸಂಕಲನಗಳನ್ನು ಸೇರಿಸಿ ತರುವುದು ಕೂಡ ತಪ್ಪೇನಲ್ಲ. ಆದರೆ, ಹಾಗೆ ಮಾಡುವಾಗ ಅವುಗಳನ್ನು ಯಥಾವತ್ತಾಗಿ ಹಾಕಿ ಅದಕ್ಕೊಂದು ಮುನ್ನುಡಿ, ಬೆನ್ನುಡಿ ಬರೆಸಿ ತಂದುಬಿಡುವುದು ಕನ್ನಡದಲ್ಲಿ ಬೆಳೆದುಕೊಂಡು ಬಂದಿರುವ ಪರಿಪಾಠ. ಹೀಗೆ ಮಾಡುವುದಕ್ಕಿಂತ ಉತ್ತಮವಾದ ಆಲೋಚನೆಯೆಂದರೆ, ಕವಿಯ ಚಿಂತನಾಕ್ರಮ ಬೆಳೆದುಬಂದ ಬಗೆಯನ್ನು ಪದ್ಯಗಳ ಮೂಲಕ ಗುರುತಿಸಿಯೋ ಅಥವಾ ವರ್ಷಾನುಕ್ರಮವಾಗಿಯೋ ಪದ್ಯಗಳನ್ನು ಜೋಡಿಸುವ ಕೆಲಸವಾದಲ್ಲಿ ಸಾಹಿತ್ಯಾಧ್ಯಯನಕ್ಕೆ ಅದರಿಂದ ಹೆಚ್ಚಿನ ಲಾಭವಿದೆ. ಅಂತಹ ಕೆಲಸ ಕನ್ನಡದಲ್ಲಿ ಒಳ್ಳೆಯ ಮಾದರಿಗಳನ್ನು ಕೂಡ  ನಿರ್ಮಿಸಬಲ್ಲದು.

ಎನ್ಕೆ  ಕಾವ್ಯ ತತ್ವ:

ಕಡೆಯದಾಗಿ, ಎನ್ಕೆಯವರನ್ನು ಸಮಕಾಲೀನ ಕವಿಗಳಲ್ಲಿ ವಿಶಿಷ್ಟರನ್ನಾಗಿಸಿದ ಅಂಶಗಳಾವುವು ಎಂಬುದನ್ನು ರಹಮತ್ ರ ಮಾತುಗಳಲ್ಲಿಯೇ ಹೇಳುವುದಾದರೆ: “ಎನ್ಕೆ ಕಾವ್ಯವು ಅಂಬೇಡ್ಕರ್ ವೈಚಾರಿಕ ಎಚ್ಚರ, ಬುದ್ಧನ ತಾಯಕರುಣೆ, ಅಲ್ಲಮನ ಆನುಭಾವಿಕ ಬೆಡಗು, ಲಂಕೇಶರ ವೈಯಕ್ತಿಕ ತಳಮಳ ಮತ್ತು ಅಂತರ್ಮುಖತ್ವಗಳೆಲ್ಲವೂ ಸಂಗಮಗೊಂಡು ಹುಟ್ಟಿದ್ದು; ಇಲ್ಲಿ ದಲಿತ ಸಂವೇದನೆಯನ್ನು ಮಾನವ ಸಂವೇದನೆಯ ವಿಶಾಲಭಿತ್ತಿಯಲ್ಲಿಟ್ಟು ನೋಡುವ ಅಥವಾ ಸಾಮಾನ್ಯ ಲೋಕಾನುಭವವನ್ನು ದಲಿತ ಭಿತ್ತಿಯಲ್ಲಿಟ್ಟು ನೋಡುವ ವಿಶಿಷ್ಟ ದೃಷ್ಟಿಕೋನವಿದೆ. ಸ್ವಂತದ ಒಳಗಿನ ಖಾಸಗಿ ತಲ್ಲಣಗಳನ್ನೇ ದೊಡ್ಡದೆಂದು ಪರಿಭಾವಿಸಿ ತನ್ನ ಅಸ್ತಿತ್ವವನ್ನು ಹುಡುಕುವ ವೈಯಕ್ತಿಕತೆಯಿದೆ; ಹಾಗೆಯೇ ಕಷ್ಟಗಳಲ್ಲಿ ಹುದುಗಿದ ಎಲ್ಲರ ದುಗುಡಗಳನ್ನು ತನ್ನವೇ ಎಂದು ಪರಿಭಾವಿಸಿ ಮಿಡಿಯುವ ಸಾರ್ವತ್ರಿಕತೆಯೂ ಇದೆ. ಇಲ್ಲಿನ ಕಾವ್ಯದ ಕಸುವೆಂದರೆ, ರೂಪಕಗಳ ನುಡಿಗಟ್ಟು, ಭಾವನಾತ್ಮಕ ತೀವ್ರತೆ, ದಾರ್ಶನಿಕ ಜಿಗಿತ ಹಾಗೂ ಮೇರೆಯಿಲ್ಲದ ಜೀವಪ್ರೀತಿ.”

ಆದರೆ, ಅಂಬೇಡ್ಕರರ ವೈಚಾರಿಕ, ಧಾರ್ಮಿಕ, ತಾತ್ವಿಕ ಎಚ್ಚರಗಳಿಗಿಂತ ಹೆಚ್ಚಾಗಿ ಸಾಮಾಜಿಕ ಕಳಕಳಿಯ ಒಂದು ಸೆಲೆಯನ್ನು ಎನ್ಕೆ ಕಾವ್ಯದಲ್ಲಿ ಕಾಣಬಹುದು. ಹಾಗೆಯೇ, ಬುದ್ಧ ತಾಯಕರುಣೆಯ ಜೊತೆಯಲ್ಲೇ ಮಹಾನ್ ವಿಚಾರವಾದವನ್ನು ಹೊಂದಿದ್ದ. ಅಲ್ಲಮನ ಅನುಭಾವಿಕ ಬೆಡಗು ಕೇವಲ ಕಾವ್ಯಸ್ಪೂರ್ತಿಯಿಂದ ಹುಟ್ಟುಕೊಂಡಿದ್ದಲ್ಲ. ಅದರ  ಹಿಂದೆ ಆಳವಾದ ವಿರಾಟ್ ದರ್ಶನವೇ ಅಡಗಿದೆ. ಇನ್ನು ಲಂಕೇಶರ ವೈಯುಕ್ತಿಕ ತಳಮಳ ಮತ್ತು ಅಂತರ್ಮುಖತ್ವಗಳೆರಡರ ಸಂಗಮವನ್ನು ಎನ್ಕೆಯಲ್ಲಿ ಕಾಣಬಹುದಾಗಿದ್ದರೂ, ಅದಕ್ಕೆ ಒದಗಿಸಿರುವ ತಾತ್ವಿಕ ಮತ್ತು ಸೌಂದರ್ಯಾತ್ಮಕ ತಳಹದಿ ಗಟ್ಟಿಯಾದುದಲ್ಲ. ಎನ್ಕೆಯ ಪದ್ಯಗಳು ಕೆಲವೊಮ್ಮೆ ನದಿ ತೊರೆಯಂತೆ ಹರಿದರೆ, ಮತ್ತೆ ಕೆಲವೆಡೆ ಕಾರಂಜಿಯಂತೆ ಜಿನುಗುತ್ತವೆ. ಅದಕ್ಕೆ ಕಾರಣವನ್ನು ರಹಮತ್ ಸರಿಯಾಗಿಯೇ ಗುರುತಿಸುತ್ತಾರೆ: “ಹೃದಯದ ಮೂಲಕವೇ ಲೋಕದ ವಿದ್ಯಮಾನಗಳನ್ನು ನೋಡುವುದು ಮತ್ತು ಪ್ರತಿಕ್ರಿಯಿಸುವುದು ಇಲ್ಲಿನ ಒಂದು ಗುಣ. ಇದರ ಸಮಸ್ಯೆಯೆಂದರೆ, ಕೊಚ್ಚಿಹೋಗುವಂತಹ ಭಾವುಕ ತೀವ್ರತೆಯಲ್ಲಿ ಬೌದ್ಧಿಕತೆಯನ್ನು ಬಿಟ್ಟುಕೊಡುವುದು. ಇದರಿಂದ ಕಾವ್ಯದೊಳಗಿನ ಬೌದ್ಧಿಕತೆ ಕೆಲಮಟ್ಟಿಗೆ ಮಂಕಾಗುವುದುಂಟು.” ಎನ್ಕೆ ಮೇಲೆ ಲಂಕೇಶರ ಕಾವ್ಯಕ್ಕಿಂತಲೂ ಅಥವಾ  ಕಾವ್ಯದಷ್ಟೆಯೇ ಪ್ರಭಾವ ಲಂಕೇಶ್ ಅನುವಾದಿಸಿದ್ದ ಫ್ರೆಂಚ್ ಕವಿ ಬೋದಿಲೇರನ ‘ಪಾಪದ ಹೂಗಳು’ ಪದ್ಯ ಸಂಕಲನದ್ದೂ ಆಗಿರುವುದನ್ನು  ಬೆಚ್ಚಿಬೀಳಿಸುವ ಅವರ ಭಾಷೆ, ಉಪಮೆ, ರೂಪಕಗಳಲ್ಲಿ ಕಾಣಬಹುದು. ಹಾಗೆ ಹೇಳುವುದಾದರೆ, ಬೋದಿಲೇರನ ಕಾವ್ಯದ ಲಂಕೇಶರ ಅನುವಾದ ಗಟ್ಟಿಯಾದ ಅನುವಾದವೇನೂ ಅಲ್ಲ. ಆದರೂ, ಹೊಸ ತಲೆಮಾರಿನ ಕವಿಗಳು ಈ ಅನುವಾದದಿಂದ ಪ್ರಭಾವಕ್ಕೋ, ಪ್ರೇರಣೆಗೋ ಒಳಗಾಗಿ ಕಾವ್ಯ ರಚಿಸಿರುವುದನ್ನು ನಾವು ಇಲ್ಲಿಯವರೆಗೂ ಕಾಣಬಹುದು.

ಎನ್ಕೆಯವರ ಮೇಲೆ ವಚನ ಸಾಹಿತ್ಯ ಹಾಗೂ ಮಲೆ ಮಾದೇಶ್ವರ ಕಾವ್ಯ, ಮಂಟೇಸ್ವಾಮಿ ಕಾವ್ಯದ ಪ್ರಭಾವ ಜಾನಪದ ಸಾಹಿತ್ಯದ ಪ್ರಭಾವ ಎಷ್ಟರ ಮಟ್ಟಿಗೆ ಆಗಿತ್ತು ಎಂಬುದನ್ನು ಪುಸ್ತಕದ ಎರಡನೆಯ ಪದ್ಯವಾದ ‘ಹೊಸ ಸುದ್ದಿ ತಂದಿರುವೆ’ ಪದ್ಯ ಕಂಡೆನವ್ವಾ… ನಾನು… ಕಂಡೆನೆವ್ವಾ… ಎಂಬ  ಉದ್ಘಾರದಿಂದ ಆರಂಭವಾಗಿ ಮುಂದಿನ ಪದ್ಯಗಳಲ್ಲಿ ಉಪಮೆ, ರೂಪಕ, ಬೆಡುಗಗಳಲ್ಲಿ ಕಾಡು ನಾಡು ಎನ್ನದೆ, ಗಿಡ ಮರ  ಬಳ್ಳಿ ಎನ್ನದೆ, ಹೂವು ಹಣ್ಣು ಕಾಯಿ ಎನ್ನದೆ, ಪ್ರಾಣಿ ಪಕ್ಷಿ ಎನ್ನದೆ, ಹರಿಯುತ್ತಾ ಹೋಗುತ್ತದೆ. ಈ ಪದ್ಯದ ಕೊನೆಯ ಸಾಲುಗಳಲ್ಲಿ ಕಾಣುವಂತೆ, ‘ಸೂರ್ಯನಿಲ್ಲದ ಬೆಳಗು, ಚಂದ್ರನಿಲ್ಲದ ಇರುಳು’ವಿನ ದರ್ಶನವನ್ನೂ ಮಾಡಿಸುವುದುಂಟು.

ಕಾವ್ಯಕ್ಕೆ ಬೇಕಾದ ಭಾವನುಡಿಯ ಗಟ್ಟಿ ದೇಹವಿದ್ದರೂ, ಬೌದ್ದಿಕ ಎಚ್ಚರದ ಕೊರತೆಯಿಂದಾಗಿಯೇ ಎನ್ಕೆಯವರ ಪದ್ಯಗಳು ಅವುಗಳು ಹುಟ್ಟಿಸುವ ಮಹತ್ವಾಕಾಂಕ್ಷೆಯ ಹೊರತಾಗಿಯೂ ಏರಬೇಕಾದ ಎತ್ತರವನ್ನೇರದೆ, ಕೆಳಗುಳಿದುಬಿಡುತ್ತವೇನೋ ಅನ್ನಿಸಿಬಿಡುತ್ತವಲ್ಲ ಎಂಬ  ಬೇಸರ ಕಾಡುತ್ತದಾದರೂ ಅನಂತಮೂರ್ತಿಯವರು ‘ಚಿತ್ರದ ಬೆನ್ನು’ ಸಂಕಲನಕ್ಕೆ ಬರೆದ ಬೆನ್ನುಡಿಯಲ್ಲಿ ಹೇಳಿದ್ದ ಹಾಗೆ: “ಇದು  ಸಾಮಾಜಿಕ, ಇದು  ವೈಯುಕ್ತಿಕ, ಇದು  ಆಧ್ಯಾತ್ಮಿಕ ಎಂದು ವಿಂಗಡಿಸಲಾರದಂತೆ ಬರೆಯುತ್ತಿರುವ ಮುಖ್ಯರಲ್ಲಿ ಶ್ರೀ ಎನ್.ಕೆ. ಹನುಮಂತಯ್ಯ ಒಬ್ಬರು.” ಇಂದು ಅವರಿಬ್ಬರೂ ನಮ್ಮೊಂದಿಗಿಲ್ಲ. ಆದರೆ, ಎನ್ಕೆ ನಂತರ ತೀರಿಕೊಂಡ ಅನಂತಮೂರ್ತಿಯವರು ಎನ್ಕೆ ಬದುಕಿದ್ದಾಗ ಹೇಳಿದ್ದ ಮಾತುಗಳು ಅವರಿಬ್ಬರೂ ಇಲ್ಲದ ಕಾಲದಲ್ಲೂ ಮುಂದೆಯೂ ಸಲ್ಲುವುದರಲ್ಲಿ ಸಂದೇಹವಿಲ್ಲ.

ಬದುಕಿನಲ್ಲಿ ‘ಸಾವು’ ಎಲ್ಲರನ್ನು ಒಂದಲ್ಲ ಒಂದು ರೀತಿಯಲ್ಲಿ ಕಾಡುವುದುಂಟು. ಕೆಲವೊಮ್ಮೆ ನಮಗೆ ಸಂಬಂಧಿಸಿದವರ, ಹತ್ತಿರದವರ ಸಾವು ಕಾಡಿದರೆ, ಮತ್ತೆ ಕೆಲವೊಮ್ಮೆ ನಮಗೆ ಸಂಬಂಧಿಸಿಲ್ಲದ, ನಾವೆಂದೂ ಕಾಣಲು ಸಾಧ್ಯವೇ ಇಲ್ಲದಂತಹವರ ಸಾವು ಕೂಡ ಕಾಡುವುದುಂಟು. ಕೆಲವರಿಗೆ ಬದುಕೆಂಬುದೇ ಅಸಹನೀಯವೆನಿಸಿ, ಕನಸುನನಸಿನಲ್ಲಿಯೂ ‘ಸಾವು’ ಕಾಡುವುದುಂಟು. ಅದರಿಂದ ಹೊರಬರಲು ಕೆಲವರು ಏನೆಲ್ಲ ಪ್ರಯತ್ನ ನಡೆಸಿ ಅದರಲ್ಲಿ ಯಶಸ್ವಿಯಾಗುವುದುಂಟು. ಇನ್ನು ಕೆಲವರು ಸಾವಿಗೆ ತಮ್ಮನ್ನು ತಾವು ಒಡ್ಡಿಕೊಳ್ಳುವುದುಂಟು. ಸೃಜನಶೀಲ ಮನಸ್ಸುಗಳು ಸಾವಿಗೂ ತಮ್ಮದೇ ಅದ  ರೀತಿಯಲ್ಲಿ ಸ್ಪಂದಿಸುತ್ತವೆ. ‘ಸಾವು’ ಎನ್ಕೆಯವರನ್ನು ಕಾಡಿದ್ದರಲ್ಲಿ ಯಾವ ಸಂದೇಹವೂ ಇಲ್ಲ ಎಂಬುದಕ್ಕೆ ಅವರ ಹಲವು ಪದ್ಯಗಳು ಉದಾಹರಣೆಯಾಗಿವೆ. ನಾವು ಸಾಮಾನ್ಯವಾಗಿ ಅನ್ನುವಂತೆ, ಅವರಿಗೆ ಸಾಯುವ ವಯಸ್ಸು ಖಂಡಿತ ಆಗಿರಲಿಲ್ಲ. ಅವರ ‘ಸಾವಿನ ಕಾರಣಗಳಿಂದ ದೂರವಾಗಬೇಕು’ ಎಂಬ ಪದ್ಯದ ಈ ಸಾಲುಗಳನ್ನೇ ಗಮನಿಸಿ—

‘ಸತ್ತವರಿಗೆ ಇರುವವರ ಬಗ್ಗೆ

ತೀವ್ರ ಮಮಕಾರ,

ಎಲ್ಲರನ್ನೂ ಎಲ್ಲರನ್ನೂ ತಮ್ಮೊಡನೆ

ಕರೆದೊಯ್ಯುವ ಕಾತುರ

ಸತ್ತವರು ಬದುಕಿದವರನ್ನು  ಪ್ರೀತಿಸಲು

ಒಂದು ಸಣ್ಣ ಕಾರಣ ಸಾಕು

ನಾವಿನ್ನು ಸಾವಿನ ಕಾರಣಗಳಿಂದ

ದೂರವಾಗಬೇಕು

ಈ ಸಾಲುಗಳನ್ನು ಓದಿದ ಎಂತಹವರಿಗೂ ಇದನ್ನು ಬರೆದ ವ್ಯಕ್ತಿ ನಿಜಜೀವನದಲ್ಲಿ ತಂತಾನೇ ಸಾವಿಗೆ ಶರಣಾಗುತ್ತಾರೆ ಎಂದು ಅನ್ನಿಸುವುದಿಲ್ಲ. ಕಾರಣ, ಇಲ್ಲಿ ಎನ್ಕೆ ಬದುಕಿನ ಬಗ್ಗೆ ಸಕಾರಾತ್ಮಕ ಮನೋಭಾವವನ್ನೇ ತೋರುತ್ತಾರೆ, ಆದರೆ, ಬದುಕಿನಲ್ಲಿ ಅದಕ್ಕೆ ವಿರುದ್ಧವಾಗಿ ಹೋಗಿ ತಾನಾಗಿಯೇ ಸತ್ತವರಿಗೆ ಹತ್ತಿರವಾಗಿದ್ದು ಮಾತ್ರ ಐರನಿಯೋ ದುರಂತವೋ…

*****

ಅಡಿಟಿಪ್ಪಣಿ:

ಪುಸ್ತಕದ ತಾಂತ್ರಿಕ ಅಂಶಗಳ ಬಗ್ಗೆ ಕೆಲಮಾತುಗಳನ್ನು ಹೇಳಲೇಬೇಕು. ಸಾಮಾಜಿಕ ಕಳಕಳಿಯ ಜೊತೆಗೆ ಅತ್ಯುತ್ತಮ ಗುಣಮಟ್ಟದ ಪುಸ್ತಕಗಳನ್ನು ಹೊರತರುವ ಲಡಾಯಿ ಪ್ರಕಾಶನದ ಈ ಪುಸ್ತಕದ ಒಟ್ಟಾರೆ ಗುಣಮಟ್ಟವನ್ನು ಮೆಚ್ಚಲೇಬೇಕು. ಅರುಣ್ ಕುಮಾರ್ ಜಿ. ಸುಂದರವಾದ ಮುಖಪುಟ ವಿನ್ಯಾಸ ಮಾಡಿದ್ದಾರಾದರೂ, ಎನ್ಕೆ ಕಾವ್ಯದ ಬನಿಯನ್ನಾಗಲಿ, ಶೀರ್ಷಿಕೆಯಲ್ಲಿರುವ ರೂಪಕವನ್ನು ಅದು ಹಿಡಿದಿಡುವುದಿಲ್ಲ. ಎನ್ಕೆಯವರ ಮಗಳಾದ ಚಿತ್ರಕಾರ್ತಿ ಸಂಘಮಿತಾ ನೀಡಿರುವ ಕೆಲ ಚಿತ್ರಗಳು ವಿಶೇಷವಾದ ಮೆರುಗನ್ನು ತಂದುಕೊಟ್ಟಿದೆ. ಆದರೆ, ಚಿತ್ರಗಳನ್ನು ಕೇವಲ ಮೊದಲ ಸಂಕಲನದ ಹತ್ತಿಪ್ಪತ್ತು  ಪದ್ಯಗಳಿಗೆ ಮಾತ್ರ ಬಳಸಿಕೊಂಡು ಉಳಿದ ಸುಮಾರು 50 ಪದ್ಯಗಳನ್ನು ಹಾಗೆಯೇ ಅಚ್ಚು ಹಾಕಿರುವುದು ಪುಸ್ತಕದ ಉತ್ಪಾದನಾ ಗುಣಮಟ್ಟದ ದೃಷ್ಟಿಯಿಂದ ಸರಿಯಾದುದಲ್ಲ. ಪುಸ್ತಕ ಅಚ್ಚುಹಾಕುವಾಗ ಇದನ್ನೆಲ್ಲ ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು.

2 comments to “ಗೋವನ್ನು ತಿಂದು ಗೋವಿನಂತಾದವನು… : ‘ಮಾಂಸದಂಗಡಿಯ ನವಿಲು’ ಪುಸ್ತಕ ಪರೀಕ್ಷೆ”

ಪ್ರತಿಕ್ರಿಯಿಸಿ