ನಮ್ಮ ಗ್ರಹಿಕೆಗಳಿಗೆ ಮೆಟ್ಟಿದ ಗ್ರಹಣ

chintana-nammagrahanadivderspaಕೆಲವು ದಿನಗಳ ಹಿಂದೆ ನಾನೊಂದು ಅಧ್ಯಯನಕೂಟಕ್ಕೆ ಹೋಗಿದ್ದೆ, ದೇವುಡು ನರಸಿಂಹಶಾಸ್ತ್ರಿಗಳ ಮಹಾಕ್ಷತ್ರಿಯದ ಬಗೆಗೆ ಅಲ್ಲಿ ನಡೆದ ಚಚರ್ೆಗಳು ಬಹುಕಾಲದಿಂದ ನನ್ನನ್ನು ಕಾಡುತ್ತಿದ್ದ ಕೆಲವು ಪ್ರಶ್ನೆಗಳನ್ನು ಮತ್ತೆ ಎತ್ತಿ ಕಣ್ಮುಂದೆ ನಿಲ್ಲಿಸಿಬಿಟ್ಟವು. ಪ್ರಶ್ನೆಗಳಿಗೆ ಹೋಗುವ ಮೊದಲು ಆ ಚರ್ಚೆಯ ಕೆಲವು ಅಂಶಗಳನ್ನು ನಿಮ್ಮ ಮುಂದಿಡುತ್ತೇನೆ, ಅವು ನಮ್ಮ ಮುಂದಿನ ಪ್ರಶ್ನೆಗಳಿಗೆ ಒಂದು ಪರಿಪ್ರೇಕ್ಷ್ಯವನ್ನು ಒದಗಿಸಬಹುದು.

ಅಲ್ಲಿ ಸೇರಿದ್ದ ಬಹುತೇಕರು ಕನ್ನಡ ಸಾಹಿತ್ಯಕ್ಕೆ ಹೊಸಬರಲ್ಲದಿದ್ದರೂ ದೇವುಡು ಅವರ ಕೃತಿಗಳನ್ನು ಮೊದಲಬಾರಿಗೆ ಓದಿದ್ದರು. ಅವರೆಲ್ಲರಲ್ಲೂ ಸಮಾನವಾಗಿಯೆಂಬಂತೆ ಆ ಕೃತಿಯ ಬಗೆಗೆ ಒಂದು ವಿಸ್ಮಯದ, ಮೆಚ್ಚುಗೆಯ ಭಾವವಿತ್ತು. ಅದು ಅವರ ಮಾತುಗಳಲ್ಲಿಯೂ ವ್ಯಕ್ತವಾಯಿತು. ಅದನ್ನು ಅನುಸರಿಸಿಯೇ ಒಂದು ಪ್ರಶ್ನೆ ಆ ಚರ್ಚೆಯಲ್ಲಿ ಹುಟ್ಟಿತು. ದೇವುಡು ಅವರ ನಂತರ ಯಾಕೆ ಯಾರಿಗೂ ಇಂತಹ ಪೌರಾಣಿಕ ವಸ್ತುಗಳನ್ನು ಇಟ್ಟುಕೊಂಡು ಕೃತಿರಚನೆ ಮಾಡುವ ಆಸಕ್ತಿ ಹುಟ್ಟಲಿಲ್ಲ? ಯಾರೂ ಯಾವ ಲೇಖಕನಿಗೂ ಇಂಥಾ ವಿಷಯವನ್ನೇ ಆಧರಿಸಿ ಬರೆಯಿರಿ ಎಂದು ಹೇಳಲಾಗುವುದಿಲ್ಲ ನಿಜ. ಆದರೆ ಲೇಖಕರಿಗೇ ಇಂಥದೊಂದು ಸಾಧ್ಯತೆ, ಆಸಕ್ತಿ ಹುಟ್ಟಲಿಲ್ಲವೇಕೆ? ಜೊತೆಗೆ ಕೆಲವರು ಆ ದಾರಿಯಲ್ಲಿ ಪ್ರಯತ್ನಗಳನ್ನು ಮಾಡಿದ್ದರೂ ಅವು ಇಷ್ಟು ಯಶಸ್ವಿಯಾಗಲಿಲ್ಲವೇಕೆ?

ಆದರೆ ಅಲ್ಲಿಯೇ ನನ್ನ ಹಿರಿಯ ಸ್ನೇಹಿತರೊಬ್ಬರು ತುಂಬ ಸ್ವಾರಸ್ಯವಾದ ಬೇರೊಂದು ಬಗೆಯ ಅಭಿಪ್ರಾಯವನ್ನು ನನ್ನೊಡನೆ ಹಂಚಿಕೊಂಡರು. ನಮಗೆ ಪುರಾಣ ಪ್ರಪಂಚದೊಡನೆಯ ಹೊಕ್ಕುಬಳಕೆ ಕಡಿಮೆಯಾಗಿರುವುದರಿಂದ ಆ ಕೃತಿಗಳು ತುಂಬಾ ಮಹತ್ತ್ವದವಾಗಿ ಕಾಣುತ್ತಿವೆಯೋ ಅಥವಾ ಸಾಹಿತ್ಯಕವಾಗಿಯೂ ಅವು ಅಷ್ಟೇ ಮಹತ್ತ್ವದ ಕೃತಿಗಳೋ? ಎಂದು. ದೂರದ ಬೆಟ್ಟ ನುಣ್ಣಗೆ ಕಾಣುವುದೇನೂ ಹೊಸದಲ್ಲವಲ್ಲ. ಈ ಪ್ರಶ್ನೆಗಳಿಗೆ ಅಂದು ಅಲ್ಲಿ ನಡೆದ ಚಚರ್ೆಯ ಆಯಾಮವಲ್ಲದೇ ಬಹಳ ಕಾಲದಿಂದ ನನ್ನನ್ನು, ನನ್ನಂತೆಯೇ ಅನೇಕರನ್ನು ಕಾಡುತ್ತಿರುವ ಇಂದಿಗೆ ತುತರ್ಾದ ಒಂದು ಆಯಾಮವಿದೆ. ಸದ್ಯಕ್ಕೆ ನಾವು ಇವುಗಳನ್ನು ದೇವುಡು ಕೃತಿಯೊಂದರ ವಿಮಶರ್ೆಯಂತಲ್ಲದೇ ನಮಗೆ ಸಲ್ಲುವ ಆಯಾಮದಲ್ಲಿ ಎದುರಿಸುವ ಪ್ರಯತ್ನ ಮಾಡೋಣ.

grahana2ಇದು ಮೂಲಭೂತವಾಗಿ ಪರಂಪರೆಯ ಸಹಜಪ್ರಜ್ಞೆ ಮತ್ತು ಅದರ ಬಗ್ಗೆ ನಮ್ಮ ಕಾಲದ ಅರಿವಿನ ಪ್ರಶ್ನೆಯಾಗಿದೆ. ಈ ಪ್ರಶ್ನೆಯನ್ನು ನಮ್ಮ ಚಿಂತನಪರಂಪರೆ ಬೇರೆ ಬೇರೆ ರೀತಿಗಳಲ್ಲಿ ಎದುರಿಸಿದೆ, ಉತ್ತರಗಳನ್ನೂ ಬೇರೆ ಬೇರೆ ದಿಕ್ಕುಗಳಿಂದ ಕಂಡುಕೊಳ್ಳುವ ಪ್ರಯತ್ನಗಳಾಗಿವೆ. ಇದರಲ್ಲಿ ತುಂಬ ಮೇಲ್ಪದರದ ತೆಳುವಾದ ತುರ್ತಿನ ತೀರ್ಮಾನಗಳಂತೆ  ಆಳವಾದ ಸಂಶೋಧನೆಗಳೂ ಜರುಗಿವೆ. ಅಷ್ಟಾಗಿಯೂ ನಾನು ನನ್ನ ಕಾಲದ ಬಾಲ್ಕನಿಯಲ್ಲಿ ನಿಂತು ನೋಡುವುದಾದರೆ, ನನ್ನನ್ನೂ ಸೇರಿ ಬಹುತೇಕರಿಗೆ ಈ ವಿಷಯದಲ್ಲಿ ಅರಿವಿಗಿಂತ ಗೊಂದಲಗಳೇ ಹೆಚ್ಚಾಗಿವೆ. ಈ ಗೊಂದಲಗಳ ನಡುವೆಯೇ ನಮ್ಮ ಚಚರ್ೆಗಳು ಮುಂದಕ್ಕೆ ಸಾಗುತ್ತಿವೆ, ಅದರಲ್ಲಿ ಹುಡುಕಾಟದ ಹಂಬಲದ ಇನಿದನಿಗಳಂತೆ, ಮಂಡನೆಯ ಗರ್ಜನೆಗಳೂ ಕೇಳುತ್ತಿರುತ್ತವೆ.

ಒಂದು ಕಡೆಯಲ್ಲಿ ಪರಂಪರೆಯ ಜ್ಞಾನರಾಶಿಯೆಲ್ಲವೂ ಶೋಷಣೆಯ ಪ್ರತೀಕವೆಂದೂ, ಅವುಗಳನ್ನು ಅನುಸಂಧಾನ ಮಾಡುವುದು ಅನಗತ್ಯವಷ್ಟೇ ಅಲ್ಲ, ಅಪಾಯಕಾರಿಯಾದುದು; ಅಂತಹ ಪ್ರಯತ್ನಗಳು ಇಂದಿಗೂ ಶೋಷಣೆಯನ್ನೂ, ಅದರ ಅಡಿಪಾಯಗಳಾದ ಜಾತಿವ್ಯವಸ್ಥೆ, ಪುರುಷಪ್ರಧಾನತೆಯನ್ನೂ ಗಟ್ಟಿಗೊಳಿಸುವ ಪ್ರಕ್ರಿಯೆಗಳಷ್ಟೇ ಆಗುತ್ತವೆ. ಆದ್ದರಿಂದ ಇವುಗಳಿಗೆ ಬೆನ್ನುಮಾಡಿ ನಡೆಯುವುದೇ ಪ್ರಗತಿಯೆಡೆಗಿನ ನಡೆ ಎನ್ನುವ ತೀಮರ್ಾನಗಳನ್ನು ತಲುಪಿದ ಮಾದರಿಗಳಿವೆ. ಇಲ್ಲಿ ಎಲ್ಲರೂ ಇದೇ ಬಗೆಯಲ್ಲಿ ಅಭಿಪ್ರಾಯಪಡದಿದ್ದರೂ ಈ ಬಗೆಯ ಆರೋಪವನ್ನಂತೂ ಸಾಕಷ್ಟುಜನ ಪರಂಪರೆಯ ಮೇಲೆ ಹೊರಿಸುವುದಿದೆ. ಅಂದರೆ ವೇದ, ಪುರಾಣ, ಇತಿಹಾಸ, ಮಹಾಕಾವ್ಯಗಳೆಲ್ಲಕ್ಕೂ ನಮ್ಮ ಕಾಲದ ಸಾಮಾಜಿಕ ಕಥನ, ಸಿದ್ಧಾಂತಗಳ ಹೊರೆಯನ್ನು ನಾವು ಆರೋಪಿಸುತ್ತಿದ್ದೇವೆ. ಇದು ನಮ್ಮ ಇತಿಹಾಸ ಮತ್ತು ಸಮಾಜಗಳ ಅಧ್ಯಯನ ಪ್ರಕ್ರಿಯೆಯಲ್ಲಿ ಒಂದುಮಟ್ಟದಲ್ಲಿ ಅನಿವಾರ್ಯವಾದ ಸಂಗತಿಯೂ ಹೌದು. ನಮ್ಮ ಇಂದಿನ ಸವಾಲುಗಳು ಮತ್ತು ಸಮಸ್ಯೆಗಳಿಗೆ ಹಿಂದಿನ ಬದುಕಿನ, ಸಮಾಜದ ಕೊಡುಗೆಗಳು ಇದ್ದೇ ಇವೆ. ಆದರೆ ಇಲ್ಲಿ ನಾವು ತಲುಪಿದ ಕೊನೆ ಮಾತ್ರ ಈ ವಿಷಯದಲ್ಲಿ ನಾವು ಮತ್ತೊಮ್ಮೆ ಯೋಚಿಸುವಂತೆ ಮಾಡುತ್ತದೆ. ನಾವು ನಮ್ಮ ಸಮಸ್ಯೆಗಳಿಗೆ ಉತ್ತರವೆಂದೋ, ಕಾರಣವೆಂದೋ ಹುಡುಕಿಕೊಂಡು ಹೊರಟ ಈ ಹಾದಿಯಲ್ಲಿ ಹೀಗೆ ಹುಡುಕುವುದೇ ಅನಪೇಕ್ಷಿತ, ಅಪಾಯಕಾರಿ ಎಂಬ ಅಸಂಗತ ತುದಿಗೆ ತಲುಪಿದ್ದೇ ಒಂದು ವೈಚಿತ್ರ್ಯ ಎನಿಸುತ್ತದೆ.

ಈ ಮೇಲಿನ ಪ್ರಕ್ರಿಯೆಗೆ ಪರಂಪರೆಯನ್ನು ಪ್ರತಿನಿಧಿಸುವ ಕಾಳಜಿಯನ್ನು ಹೊತ್ತವರು ಓರಿಯಂಟಲಿಸ್ಮ್ನ ಕಾರಣಗಳನ್ನು ಕೊಡುತ್ತಾರೆ. ಐರೋಪ್ಯರು ಪೌವರ್ಾತ್ಯ ರಾಷ್ಟ್ರಗಳನ್ನು ಅಧ್ಯಯನ ಮಾಡಲು ತೊಡಗಿದ್ದು, ಅವರಿಗೆ ಇಲ್ಲಿನ ಸಂಸ್ಕೃತಿಗಳನ್ನು ಅದರಲ್ಲೂ ಭಾರತೀಯ ಸಂಸ್ಕೃತಿಯನ್ನು ಅಥರ್ೆಸುವಾಗ ಬಂದ ತೊಡಕುಗಳು, ಅದನ್ನವರು ತಮ್ಮ ಮೂಗಿನ ನೇರಕ್ಕೆ ಪರಿಹರಿಸಿಕೊಂಡು, ತಮಗೆ ಅರ್ಥವಾಗದ್ದನ್ನು ಗೊಡ್ಡು ಸಂಪ್ರದಾಯವೆಂಬಂತೆ ಚಿತ್ರಿಸಿದ್ದರ ಬಗ್ಗೆ ಜಾಗತಿಕ ಮಟ್ಟದಲ್ಲಿ ಚಚರ್ೆಗಳು ನಡೆದಿವೆ, ನಡೆಯುತ್ತಿವೆ. ಐರೋಪ್ಯರ ಈ ಪೌವರ್ಾತ್ಯ ಅಧ್ಯಯನದ ಪ್ರಯಾಸದಲ್ಲಿ ಅವರಿಗೆ ಎದುರಾದ ದೊಡ್ಡ ಸಮಸ್ಯೆಯೆಂದರೆ ಭಾರತದಂತಹ ಚಲನಶೀಲವಾದ ಜೀವಂತ ಸಂಸ್ಕೃತಿಯ ಜಾನಪದಗುಣವನ್ನು ಹೇಗೆ ಅಥರ್ೆಸುವುದು ಎಂಬುದು. ಅದಕ್ಕವರು ಮೊರೆಹೊಕ್ಕದ್ದು ಲಿಖಿತ ಪರಂಪರೆಯನ್ನು, ಬರೆದಿಟ್ಟ ಗ್ರಂಥ, ಕೊರೆದಿಟ್ಟ ಶಾಸನಗಳಂತಹ ‘ಗಟ್ಟಿ’ ಆಧಾರಗಳನ್ನು. ಅದಕ್ಕಾಗಿಯೇ ಅವರು ತಮಗೆ ಭಾರತೀಯ ಅಥವಾ ದಕ್ಷಿಣ ಏಷ್ಯಾದ ಸಂಸ್ಕೃತಿಗಳಿಗೆ ಮೂಲಭೂತವೆನಿಸಿದ ಗ್ರಂಥಗಳನ್ನು ಅನುವಾದಿಸಿಕೊಳ್ಳುವ, ಅಧ್ಯಯನಮಾಡುವ ಮಹತ್ತಾದ ಪ್ರಯತ್ನಗಳನ್ನು ಮಾಡಿದ್ದು. ಈ ಪ್ರಕ್ರಿಯೆಯಲ್ಲಿ ನಮ್ಮ ಬಗ್ಗೆಯೇ ನಮಗೇ ಪರಕೀಯವಾದ ಹಲವು ಗ್ರಹಿಕೆಗಳು, ವಾದಗಳು, ಸಿದ್ಧಾಂತಗಳನ್ನು ಅವರು ಹುಟ್ಟುಹಾಕಿದರು. ಮುಂದೆ ಬಂದ ಭಾರತೀಯ ಬೌದ್ಧಿಕವರ್ಗಕ್ಕೂ ಇದೇ ದಾರಿ ಸುಗಮ ಎನಿಸಿದ್ದಕ್ಕೆ ಅನೇಕ ವಸಾಹತೀಕೃತ ಮನಃಸ್ಥಿತಿಯ ಕಾರಣಗಳಿವೆ. ಐರೋಪ್ಯರು ಹುಟ್ಟುಹಾಕಿದ ‘ಭಾಷೆ’ಯನ್ನೇ ನಾವು ಪರಂಪರೆಯ ‘ಭಾಷೆ’ಯನ್ನಾಗಿ ಗ್ರಹಿಸಲು ಮೊದಲುಮಾಡಿದ್ದು ಈ ಕಾಲದಲ್ಲಿಯೇ. ಇದಕ್ಕೆ ಅಪವಾದವಾಗಿ ಹಲವರು ಅವೇ ಪಠ್ಯಗಳನ್ನು ಬಳಸಿಕೊಂಡೂ ಪರಂಪರೆಯ ನಿಲುವುಗಳನ್ನು ಭಿನ್ನರೀತಿಯಲ್ಲಿ ವ್ಯಾಖ್ಯಾನಿಸಿದವರಿದ್ದಾರೆ. ಭಾರತದಲ್ಲಿ ನ್ಯಾಷನಲಿಸ್ಮ್ ಅಥವಾ ರಾಷ್ಟ್ರೀಯವಾದವನ್ನು ಬೆಂಬಲಿಸಿದ ಅನೇಕ ವಿದ್ವಾಂಸರು ಈ ದಿಕ್ಕಿನಲ್ಲಿ ಚಿಂತನೆ ನಡೆಸಿದ್ದಾರೆ. ಪರಂಪರೆಯ ನಿಲುವುಗಳನ್ನು ಪ್ರಖರವಾಗಿ ಪ್ರಶ್ನಿಸಿದ ಎಡಪಂಥದ ಘನವಿದ್ವಾಂಸ ಡಿ.ಡಿ.ಕೋಸಂಬಿಯವರೂ ಕೂಡ ಭಾರತೀಯ ಸಂಸ್ಕೃತಿಯ ಬಗ್ಗೆ ಐರೋಪ್ಯರ ನಿಲುವುಗಳನ್ನು, ಮಂಡನೆಗಳನ್ನು ಯಥಾವತ್ತಾಗಿ ಸ್ವೀಕರಿಸುವುದನ್ನು ವಿರೋಧಿಸುತ್ತಾರೆ. ತಮ್ಮದೇ ನೆಲೆಯಲ್ಲಿ ಈ ದೇಶದ ಇತಿಹಾಸವನ್ನು ಈ ನೆಲದ ಬೇರುಗಳಿಂದ ಕಟ್ಟಿ ವ್ಯಾಖ್ಯಾನಿಸಬೇಕು ಎಂದು ಅಭಿಪ್ರಾಯಪಡುತ್ತಾರೆ. ಆದರೆ ಇದೇ ಪ್ರಕ್ರಿಯೆಯೇ ನಮ್ಮಲ್ಲಿ ತೊಡಕುಗಳನ್ನೂ ಹುಟ್ಟುಹಾಕಿದೆ.

ಈ ಪ್ರಕ್ರಿಯೆಯಿಂದ ನಮ್ಮಲ್ಲಿ ಆದ ಒಂದು ಮೂಲಭೂತ ಬದಲಾವಣೆಯೆಂದರೆ ಸಂಸ್ಕೃತಿ ಅಥವಾ ಪರಂಪರೆಯ ಅಥರ್ೆಕೆ, ವ್ಯಾಖ್ಯಾನಗಳನ್ನು ಕಟ್ಟಲು ‘ಗ್ರಂಥಗಳ ಆಧಾರ’ವನ್ನು ನಿಮರ್ಿಸಿಕೊಳ್ಳುವ ಅನಿವಾರ್ಯತೆ. ಇದು ಎಷ್ಟು ವ್ಯಾಪಕವಾಗಿ ನಮ್ಮಲ್ಲಿ ಬೇರೂರಿದೆಯೆಂದರೆ ನಾವು ಜೀವಂತ ಸಂಪ್ರದಾಯವನ್ನೂ, ಅದರ ಜಾನಪದ ಅಸ್ಮಿತೆಯ ಅಸಂಖ್ಯ ಪದರಗಳನ್ನೂ ಅಲಕ್ಷಿಸಿ ಕೆಲವೇ ಆರಿಸಿದ ಪಠ್ಯಗಳ ಮೇಲೆ ನಮ್ಮ ಗ್ರಹಿಕೆಗಳನ್ನು ನಿಮರ್ಿಸಿಕೊಳ್ಳಲು ಪೂತರ್ಿಯಾಗಿ ತೊಡಗಿಕೊಂಡುಬಿಟ್ಟಿದ್ದೇವೆ. ಅಲ್ಲಲ್ಲಿ ಈ ಪ್ರಕ್ರಿಯೆಯ ಅಸಮಗ್ರತೆಯ ಅರಿವು ಕಂಡರೂ ಅದನ್ನು ಬಿಡಲಾರದ ಸ್ಥಿತಿ ನಮ್ಮದು. ಒಂದು ಉದಾಹರಣೆಯಿಂದ ಈ ಪ್ರಕ್ರಿಯೆ ನಮ್ಮಲ್ಲಿ ಹುಟ್ಟುಹಾಕಿದ ತೊಡಕನ್ನು ಸ್ಪಷ್ಟಗೊಳಿಸಲು ಬಯಸುತ್ತೇನೆ. ಇದನ್ನು ದೃಷ್ಟಾಂತಮಾತ್ರವಾಗಿ ಪರಿಗಣಿಸಬೇಕೆಂದು ಮನವಿ.
ಭಾರತೀಯ ಸಂಸ್ಕೃತಿಯ ಮುಖ್ಯವಾಹಿನಿಯಾದ, ಈಗ ಹಿಂದೂ ಎಂದೇ ಕರೆಸಿಕೊಳ್ಳುವ ಸಂಪ್ರದಾಯಕ್ಕೆ ಆಧಾರಗ್ರಂಥವೆಂಬುದು ಇಲ್ಲವಷ್ಟೇ. ನಮ್ಮ ಶಾಸ್ತ್ರಪರಂಪರೆಯಲ್ಲಿ ವೇದಗಳಿಗೆ ಬಹುದೊಡ್ಡ ಪ್ರಾಧಾನ್ಯವಿದ್ದರೂ ವೇದಗಳೆಂದರೆ ಈಗ ನಾವು ಮಾಡಿಕೊಂಡಿರುವಂತೆ ಗ್ರಂಥಮಾತ್ರವಾಗಿ ಅವರು ಕಾಣುತ್ತಿರಲಿಲ್ಲ. ಆಸ್ತಿಕದರ್ಶನವಾದ ನ್ಯಾಯಶಾಸ್ತ್ರದಲ್ಲಿ ವೇದಾಂತಶಾಸ್ತ್ರದಂತೆ ವೇದವಾಕ್ಯಗಳ ಪ್ರಮಾಣವನ್ನು ಹಿಡಿದು ತಮ್ಮ ಸಿದ್ಧಾಂತಗಳ ಪ್ರತಿಪಾದನೆಯನ್ನು ಮುಂದಿಡಲಾಗಿಲ್ಲ. ಬದಲಾಗಿ ವೇದದ ದರ್ಶನವನ್ನಷ್ಟೇ ಬಳಸಿಕೊಂಡು ತಮ್ಮ ಸಿದ್ಧಾಂತವನ್ನು ಬಲಪಡಿಸಿಕೊಂಡಿದ್ದಾರೆ. ಆದರೆ ನಾವು ಮಾತ್ರ ಮುಂದೆ ಭಾರತೀಯ ಸಂಸ್ಕೃತಿಯೆಂದರೆ ಏನು ಎಂದು ಹುಡುಕಿಕೊಳ್ಳುವ ಕಾಲ ಬಂದಾಗ ಐರೋಪ್ಯರಂತೆ ಗ್ರಂಥಮಾತ್ರಕ್ಕೆ ಕಟ್ಟುಬಿದ್ದು ಮನುಸ್ಮೃತಿಯಂತಹ ಸ್ಮೃತಿಗ್ರಂಥಗಳನ್ನು ಆರಿಸಿಕೊಂಡು ಸಿದ್ಧಾಂತಗಳನ್ನು ಕಟ್ಟಿಕೊಂಡಿದ್ದೇವೆ. ಅದೂ ಗ್ರಂಥದ ಪೂರ್ಣಪರಿಶೀಲನಕ್ಕೆ ಬದಲಾಗಿ ನಮಗೆ ಪ್ರಸ್ತುತವೆನಿಸಿದ್ದನ್ನು ಮಾತ್ರ ಬಳಸಿಕೊಳ್ಳುವ ಪರಿಪಾಠವನ್ನೂ ಕಟ್ಟಿಕೊಂಡಿದ್ದೇವೆ. ಮುಂದೆ ಇಂತಹ ಸಿದ್ಧಾಂತಗಳ ರಾಜಕೀಯ ಲಾಭ ನಮ್ಮನ್ನು ಎಷ್ಟು ಪ್ರಬಲವಾಗಿ ಕಟ್ಟಿಹಾಕಿಬಿಟ್ಟಿತೆಂದರೆ ಮನುಸ್ಮೃತಿಯಂತಹ ಕೃತಿಗಳ ಕಾಲದ ಮತ್ತು ವ್ಯಾಪ್ತಿಯ ಪರಿಮಿತಿಗಳಾಗಲಿ ಅಥವಾ ಅದಕ್ಕಿಂತ ಭಿನ್ನವಾಗಿ ಆಲೋಚಿಸಿದ ಸ್ಮೃತಿಗ್ರಂಥಗಳಾಗಲೀ ನಮಗೆ ಕಾಣಲೇ ಇಲ್ಲ.

ಈ ಬಗೆಯ ಕಥನಕ್ಕೆ ಪ್ರತಿಯಾಗಿ ಇನ್ನೊಂದೆಡೆ ಇವೇ ಗ್ರಂಥಗಳಿಂದ ಇವೇ ವಾದಗಳಿಗೆ ವಿರುದ್ಧವಾದ ಅಭಿಪ್ರಾಯಗಳನ್ನು ಉಲ್ಲೇಖಿಸಿ ಸಮಥರ್ಿಸಿಕೊಳ್ಳುವ ಪ್ರಕ್ರಿಯೆಯೂ ನಡೆದಿದೆ. ಹಾಗೆ ವಾದಿಸುತ್ತಲೇ ಇಂತಹ ಗ್ರಂಥಗಳನ್ನು ಪ್ರಶ್ನಾತೀತಗೊಳಿಸುವ ಪ್ರಯತ್ನವೂ ನಡೆಯಿತು. ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವನ್ನಾಗಿ ಮಾಡಬೇಕು ಎನ್ನುವ ಕೂಗು ಇದೇ ಹಾದಿಯ ನಿರೀಕ್ಷಿತ ಫಲ. ಅಂದರೆ ಪರಂಪರೆಯನ್ನು ಒಪ್ಪುವ, ಸಮಥರ್ಿಸುವ ಮನಸ್ಸುಗಳು ಕೂಡ ಬದುಕಿನ ಸಹಜ ಅರಿವಿಗೆ ಬದಲಾಗಿ ಇಂತಹ ಸಿದ್ಧಮಾದರಿಗಳ ವತರ್ುಲದಲ್ಲಿಯೇ ಸಿಕ್ಕಿಹಾಕಿಕೊಳ್ಳುತ್ತಿರುವುದು ಗಮನಿಸಬೇಕಾದ್ದು.

ಇನ್ನು ಈ ಇಡಿಯ ಪ್ರಕ್ರಿಯೆಗೆ ಜಾಗತಿಕ ಆಯಾಮವೊಂದಿದೆ. ಜಾಗತೀಕರಣದ ಪ್ರಭಾವ ಯೂರೋಪು, ಅಮೆರಿಕಾಗಳನ್ನು ಕೇಂದ್ರವಾಗಿಟ್ಟುಕೊಂಡು ಕ್ರಮೇಣ ತೃತೀಯಜಗತ್ತಿನ ಮಾರುಕಟ್ಟೆ ಶಕ್ತಿಯನ್ನು ಉಪಯೋಗಿಸಿಕೊಳ್ಳುವತ್ತ ನಡೆದು ಇಲ್ಲಿನ ಸಂಸ್ಕೃತಿಗಳಲ್ಲಿ ವೈಚಾರಿಕ ಮತ್ತು ಸಾಂಸ್ಕೃತಿಕ ದ್ವಂದ್ವಗಳನ್ನು, ಸಂಘರ್ಷಗಳನ್ನು ಹುಟ್ಟುಹಾಕಿದ ಸಂಗತಿ ನಮಗೆ ಪರಿಚಿತವಷ್ಟೇ. ಆದರೆ ಇನ್ನೇನು ಜಾಗತೀಕರಣ ಪ್ರಕ್ರಿಯೆ ತೃತೀಯ ಜಗತ್ತನ್ನೂ ಒಳಗೊಂಡಂತೆ ಎಲ್ಲೆಡೆ ನೆಲೆಯಾಗಿಬಿಟ್ಟಿತು ಎಂದುಕೊಳ್ಳುವಷ್ಟರಲ್ಲಿ, ಅದಕ್ಕೆ ವ್ಯತಿರಿಕ್ತವಾಗಿ ಈಗ ಪ್ರಾದೇಶಿಕ ಮತ್ತು ಮತೀಯ ಚಳುವಳಿಗಳು ಎಲ್ಲೆಡೆ ಹಬ್ಬುತ್ತಿವೆ. ಜೊತೆಗೆ ಇದು ಯಾವುದೋ ಒಂದು ರಾಷ್ಟ್ರದ ಅಥವಾ ಜನಾಂಗದ ಸಂಚಲನವಷ್ಟೇ ಆಗಿರದೇ ಜನರಲ್ಲಿಯೇ ತಮ್ಮ ಬೇರುಗಳನ್ನು ಶೋಧಿಸುವ ಅಥವಾ ಕಡೆಯ ಪಕ್ಷ ಅವುಗಳ ಪರವಹಿಸಿ ಪ್ರಚಲಿತ ಚಚರ್ೆಗಳನ್ನು ಕಟ್ಟುವ, ಅದಕ್ಕೆ ಸಾಂಸ್ಕೃತಿಕವಾಗಿ ಸ್ಪಂದಿಸುವ ಕಾರ್ಯಗಳು ಜಾಗತೀಕರಣದ ಹತ್ಯಾರಗಳನ್ನೇ ಬಳಸಿಕೊಂಡು ನಡೆಯುತ್ತಿವೆ. ಇದೊಂದು ಜನರೇ ಕಟ್ಟಿದ ಜಾಗತಿಕ ಚಳುವಳಿಯೋ ಎಂಬಂತೆ ವ್ಯಾಪಿಸುತ್ತಿರುವುದನ್ನು ಸಮಾಜಶಾಸ್ತ್ರಜ್ಞರು ಗುರುತಿಸಿದ್ದಾರೆ. ಜೊತೆಗೆ ಇದನ್ನು 20ನೆಯ ಶತಮಾನದಲ್ಲಿ ತಾನೇತಾನಾಗಿ ಮೆರೆದ ಜಾಗತೀಕರಣ ಪ್ರಕ್ರಿಯೆಗೆ ತೃತೀಯ ಜಗತ್ತು ತನ್ನದೇ ರೀತಿಯಲ್ಲಿ ಒಡ್ಡುತ್ತಿರುವ ಪ್ರತಿಚಲನೆ ಎಂದೂ, ಜಾಗತೀಕರಣದ ‘ಸಂಸ್ಕೃತಿಗಳನ್ನು ಸಮತಟ್ಟುಗೊಳಿಸುವ ಬುಲ್ಡೋಜéರ್ ತಂತ್ರ’ಕ್ಕೆ ಪ್ರಾದೇಶಿಕ/ರಾಷ್ಟ್ರೀಯ ಅಸ್ಮಿತೆಯ ಜಾಗರಣವೇ ಪ್ರತ್ಯುತ್ತರವೆಂದೂ ಕೆಲವರು ಅಭಿಪ್ರಾಯಪಡುತ್ತಾರೆ. ಇದು ನಾವು ಮೇಲೆ ನೋಡಿದ ರಾಷ್ಟ್ರೀಯತೆಯ ಚಿಂತನಮಾದರಿಗೆ ಹತ್ತಿರವಿದೆ ಎಂಬುದನ್ನು ನಾವು ಗಮನಿಸಬಹುದು. ಆದರೆ ಇಲ್ಲಿ ತುಂಬ ಮುಖ್ಯವಾದ ತೊಡಕೊಂದಿದೆ. ತಮ್ಮ ಬೇರುಗಳನ್ನು ಶೋಧಿಸುವ ಈ ಕೆಲಸ ಮೇಲೆ ಹೇಳಿದಷ್ಟು ಸರಳರೇಖಾತ್ಮಕವಾದದ್ದಲ್ಲ. ಈ ಪ್ರತಿಚಲನೆಯ ಹಾದಿಯಲ್ಲಿ ಅಭಿಮಾನ, ಅಸ್ಮಿತೆಗಳ ಕೈ ಮೇಲಾಗಿ ಅರಿವು ಹಿಂದೆಬೀಳುವ ಆತಂಕ ಇದ್ದೇ ಇರುತ್ತದೆ. ಇದನ್ನು ಸರಳರೇಖಾತ್ಮಕವಾಗಿ ಭಾವಿಸಿದ್ದರಿಂದ, ಅಭಿಮಾನಮಾತ್ರದಿಂದ ಕಟ್ಟುವುದರಿಂದ ಏನಾಗುತ್ತಿದೆ ಎನ್ನುವುದನ್ನು ಭಾರತೀಯ ಸಂದರ್ಭದಲ್ಲಿ ನೋಡಿದ್ದೇವೆ. ಭಗವದ್ಗೀತೆಯಂಯಹ ಕೃತಿಯನ್ನು ಒಂದು ಸ್ಥಾವರವಾಗಿಸುವುದು ಸುಬ್ಬಣ್ಣನವರು ಅಂದೇ ಹೇಳಿದಂತೆ ನಾವು ‘ಪ್ರತಿಮೆಗಳನ್ನು ಲಾಂಛನಗಳ ಸ್ಥಾನಕ್ಕೆ ಇಳಿಸುತ್ತಿರುವುದರ’ ದ್ಯೋತಕ. ಗ್ರಂಥವೊಂದನ್ನು ಪರಂಪರೆ ನೋಡಿದ್ದಕ್ಕೂ ನಾವು ನೋಡುತ್ತಿರುವುದಕ್ಕೂ ಇರುವ ಮೂಲಭೂತ ವ್ಯತ್ಯಾಸದ ಕಡೆಗೆ ಇಂತಹ ಹತ್ತು ಹಲವು ಸಂಗತಿಗಳು ಬೆಟ್ಟುಮಾಡಿ ತೋರಿಸುತ್ತವೆ. ಇಂದು ಇತಿಹಾಸ-ಪುರಾಣಗಳ ಪ್ರಪಂಚವನ್ನು ನಾವು ಕಾಣುತ್ತಿರುವುದರಲ್ಲೂ ಬಹುತೇಕ ಈ ಬಗೆಯ ದೃಷ್ಟಿಕೋನವೇ ಇದೆ. ಇದು ಇಂದು ಪರಂಪರೆಯನ್ನು ಅಧ್ಯಯನ ಮಾಡುವ ಆಸಕ್ತಿ ಇರುವವರಿಗೆಲ್ಲ ಕಾಲ್ತೊಡಕಾಗುತ್ತಿರುವ ಸಂಗತಿ. ಈ ಸಂದರ್ಭವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಾವು ಮೊದಲು ಎತ್ತಿಕೊಂಡ ಪ್ರಶ್ನೆಗಳತ್ತ ಹೊರಳೋಣ.

garahana1ಮೊದಲಿಗೆ ನನ್ನ ಸ್ನೇಹಿತರು ಕೇಳಿದ ಎರಡನೆಯ ಪ್ರಶ್ನೆ, ನಾವು ಪರಂಪರೆಯಿಂದ ದೂರವಾಗಿ ಬದುಕುತ್ತಿರುವುದರಿಂದ ನಮಗೆ ಕೆಲವು ಕೃತಿಗಳು ತುಂಬಾ ಮಹತ್ತ್ವದವಾಗಿ ಕಾಣುತ್ತಿವೆಯಾ ಎನ್ನುವ ಅನುಮಾನವು ಅಕಾರಣವಾದುದಲ್ಲ ಎನ್ನುವುದು ಗೊತ್ತಾಗುತ್ತದೆ. ದೇವುಡು ಅವರ ಕೃತಿಗಳನ್ನು ನಾವು ಒಂದು ಬಗೆಯ ಸಾಂಸ್ಕೃತಿಕ ಸಂದರ್ಭದಲ್ಲಿ ಇಟ್ಟು ನೋಡುತ್ತಿರುವುದರಿಂದ ಮಾತ್ರ ಅವು ಮಹತ್ತದವಾಗಿವೆಯಾ ಎಂಬುದು ಬೇರೆಯೇ ಚಚರ್ೆಯ ವಿಷಯ.(ಆಸಕ್ತರು ಕೀತರ್ಿನಾಥ ಕುರ್ತಕೋಟಿಯವರ ವಿಮಶರ್ೆಯ ವಿನಯ ಕೃತಿಯನ್ನು ಗಮನಿಸಬಹುದು) ಆದರೆ ನನಗಿಲ್ಲಿ ಮುಖ್ಯವಾಗಿ ಕಾಡಿದ ಅಂಶವೆಂದರೆ ನಮ್ಮ ಕಾಲ ದೇವುಡು ಅವರ ಪ್ರಯತ್ನಗಳನ್ನು ಅಥವಾ ಪುರಾಣಗಳನ್ನು ನೋಡಿದ, ನೋಡುತ್ತಿರುವ ಕ್ರಮ ಎಂಥದು ಎಂಬುದು. ಪುರಾಣಪ್ರಪಂಚವೆಂಬುದು ಹಲವರಿಗೆ ನೀತಿಕಥೆಗಳ ಜಾಲವಷ್ಟೇ ಆಗಿ ಅಥವಾ ಕೆಲವು ಗೊತ್ತಾದ ಮೌಲ್ಯಗಳನ್ನು ವಿಶದೀಕರಿಸಲು ರಚಿಸಿದ ಉಪದೇಶಗಳಾಗಿ ಕಾಣುತ್ತಿದ್ದರೆ ಇನ್ನು ಕೆಲವರಿಗೆ ರಾಷ್ಟ್ರೀಯ ಅಸ್ಮಿತೆಯ ಊರುಗೋಲಾಗಿ ಕಾಣುತ್ತಿದೆ. ಇದಕ್ಕೆ ಭಿನ್ನವಾಗಿ ಪುರಾಣವೆಂದರೆ ಪ್ರತಿಮಾವಿಧಾನದಲ್ಲಿ ಅಭಿವ್ಯಕ್ತವಾದ ಜಾನಪದ ಪ್ರತಿಭೆ ಎಂದು ವಿಶಾಲಾರ್ಥದಲ್ಲಿ ಗ್ರಹಿಸುವ ಸಮಾಧಾನ, ವಿವೇಕ ಇಂದಿನ ಅಗತ್ಯವೇನೋ ಎನಿಸುತ್ತದೆ.

ನಾನು ಮೊದಲಿಗೆ ಪ್ರಸ್ತಾಪಿಸಿದ ಚಚರ್ಾಗೋಷ್ಠಿಯಲ್ಲಿ ಎದ್ದದ್ದು ಇದೇ ಪ್ರಶ್ನೆ. ಏಕೆ ಪುರಾಣಗಳು ನಮ್ಮ ಆಧುನಿಕ ಲೇಖಕರನ್ನು ಆಕಷರ್ಿಸಲಿಲ್ಲ ಎಂದು ಅದನ್ನು ಸ್ಥೂಲವಾಗಿ ಗ್ರಹಿಸಿದರೆ ಮೊದಲಿಗೆ ನಮ್ಮ ಮನಸ್ಸಿನಲ್ಲಿ ಬರುವ ಉತ್ತರ, ನಮ್ಮ ಶಿಕ್ಷಣಕ್ರಮದಲ್ಲಿಯೇ ನಾವು ಪುರಾಣಪ್ರಪಂಚದಿಂದ ದೂರಾಗಿದ್ದೇವೆ, ಆದ್ದರಿಂದ ಆಸಕ್ತಿ ಹುಟ್ಟುತ್ತಿಲ್ಲ ಎಂಬುದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೋಡಿದರೆ ನಮ್ಮ ಕಾಲದ ಬಹುತೇಕರಿಗೆ ಸಂಸ್ಕೃತಾದಿ ಪ್ರಾಚೀನಭಾಷೆಗಳ ಪರಿಚಯವಿಲ್ಲದ ಕಾರಣ ಕೊಡಬಹುದು. ಆದರೆ ಇಷ್ಟಕ್ಕೆ ಸಮಸ್ಯೆಗೆ ಕಾರಣ ಅಥವಾ ಪರಿಹಾರದ ದಾರಿಯನ್ನು ಸೂಚಿಸಿದಂತಾಗಲಿಲ್ಲ ಎಂಬುದೇ ನನ್ನನ್ನು ಕಾಡಿದ ಸಮಸ್ಯೆ.

ಸಂಸ್ಕೃತ ಭಾಷೆಯನ್ನು ಕಲಿತರೆ ಪುರಾಣಗಳು ದಕ್ಕುತ್ತವೆ ಎನ್ನುವ ಮಾತು ತುಂಬಾ ಹಾರಿಕೆಯದ್ದಾದೀತು. ಒಂದು ಸಂಸ್ಕೃತಿಯನ್ನು ಗ್ರಹಿಸಲು ಭಾಷೆಗಿಂತ, ಗ್ರಂಥಗಳಿಗಿಂತ ಜಾನಪದ ಸಂಪ್ರದಾಯ ಬಹಳ ಮುಖ್ಯ ಎನಿಸುತ್ತದೆ. ಭಾಷೆಯೆಂಬುದು ಸಂಕೇತಗಳ ಸಮೂಹವಷ್ಟೇ, ಅದರ ಆಳದಲ್ಲಿ ವಿಹರಿಸುವ ಬೀಜರೂಪದ ಧ್ವನಿಪ್ರಪಂಚ ನಮಗೆ ದಕ್ಕದೇ ಬರಿಯ ಹೊರಮೈಯಿಂದ ಆ ಜೀವನದೃಷ್ಟಿ ದಕ್ಕುತ್ತದೆಯೇ? ಪುರಾಣಗಳಂತಹ ಸಾಂಸ್ಕೃತಿಕ ಪ್ರತಿಮೆಗಳು, ರೂಪಕಗಳಿಂದ ದಟ್ಟೈಸಿದ ಭಾಷೆಯ ವಿಷಯದಲ್ಲಂತೂ ಇದು ಇನ್ನೂ ಕಷ್ಟದ ಮಾತು. ಅಥವಾ ಭಾಷೆಯೆಂಬುದನ್ನೇ ಈ ಬಗೆಯ ಧ್ವ್ವನಿಪ್ರಪಂಚದ ಹಿನ್ನೆಲೆಯಲ್ಲಿ ನೋಡಿ, ವಿಶಾಲಾರ್ಥದಲ್ಲಿ ಗ್ರಹಿಸಿದರೆ ಅದು ಬೇರೆ ಮಾತು. ಜೊತೆಗೆ ನಾವು ಪುರಾಣಗಳನ್ನು ಸಮೀಪಿಸುತ್ತಿರುವ ನಮ್ಮ ಕಾಲದ ಅನಿವಾರ್ಯತೆಗಳು ನಮ್ಮ ನಡೆಯನ್ನು ಬಹುತೇಕ ನಿಯಂತ್ರಿಸುತ್ತಿರುವ ಸಾಧ್ಯತೆಯೂ ಇದ್ದೇ ಇದೆ. ಅದರಿಂದ ನಾವು ನಮಗೆ ಬೇಕಾದಂತೆ ಪುರಾಣಗಳನ್ನು ಓದಿಕೊಳ್ಳುವುದರಲ್ಲಿಯೇ ಆಸಕ್ತರಾಗುತ್ತೇವೆಯಾ ಎಂಬೊಂದು ಅನುಮಾನವೂ ಬರುತ್ತದೆ. ಮತ್ತೆ ಪುರಾಣಗಳನ್ನು ನಮ್ಮ ಕಾಲದ ಅಭಿವ್ಯಕ್ತಿಯ ಭಾಷೆಯಲ್ಲಿ ಹಿಡಿಯಹೊರಟಾಗ ಇನ್ನೂ ಸಮಸ್ಯೆಗಳು ತಲೆದೋರುತ್ತವೆ. ಆದರೆ ಇನ್ನೊಮ್ಮೆ ಎನಿಸುತ್ತದೆ ಹೀಗೆ ಆಯಾ ಕಾಲದ ತೊಡಕುಗಳಿಗೆ ಆಪ್ತವಾಗಿ ಸ್ಪಂದಿಸುವ ಗುಣವೇ ಪುರಾಣಗಳನ್ನು ‘ಪುರಾಣ’ಗಳಾಗಿಸಿದ್ದಾ ಎಂದು. ಅಂದರೆ ನಮಗೆ ಪುರಾಣಗಳ ಭಾಷೆ ಕಳೆದುಹೋದದ್ದನ್ನೂ ಪುರಾಣಗಳ ಅನುಸಂಧಾನವೇ ತೋರಿಸಿಕೊಡಬೇಕಷ್ಟೇ. ಹಾಗಾಗಿ ತಪ್ಪಾದರಾಗಲಿ, ಕಾಲ ಸರಿ ಮಾಡುತ್ತದೆ ಎಂದು ಅನುಸಂಧಾನವನ್ನಾದರೂ ಉಳಿಸಿಕೊಳ್ಳಬೇಕಾಗಿದೆ.

One comment to “ನಮ್ಮ ಗ್ರಹಿಕೆಗಳಿಗೆ ಮೆಟ್ಟಿದ ಗ್ರಹಣ”
  1. ನಾನು ಇದೇ ವಿಷಯಕ್ಕೆ ಸಂಬಂಧಪಟ್ಟ ಒಂದು ಲೇಖನ ಬರೆಯುತ್ತಿದ್ದೇನೆ. ಅಲ್ಲಿ ನಿಮ್ಮ ಲೇಖನವನ್ನು ಉದ್ಧೃತಗೊಳಿಸಲು ಇಚ್ಛಿಸುತ್ತೇನೆ. ನಿಮ್ಮ ಈ-ಮೇಲ್ ದಯವಿಟ್ಟು ಕಳಿಸುತ್ತೀರಾ? [email protected]

ಪ್ರತಿಕ್ರಿಯಿಸಿ