ದಯಾನಂದ ಬರೆದ ಕತೆ ’ಹಿತ’

ಮಗ
ಮದುವೆಯಾದ ಮೇಲೆ ಮೂರು ವಾರವೂ ಅಮ್ಮ – ಇವಳು ಒಟ್ಟಿಗೆ ಬಾಳಲಿಲ್ಲ. ಇವಳನ್ನು ಕಟ್ಟಿಕೊಂಡ ಗಳಿಗೆಯೇನೂ ಸಂಭ್ರಮದ್ದಲ್ಲ. ಹಾಗೆ ನೋಡಿದರೆ ಎರಡೂ ಮನೆಯವರಿಗೂ ಇಷ್ಟವಿಲ್ಲದ ಮದುವೆ ಇದು. ಮದುವೆ ನಡೆಯುತ್ತಿದ್ದ ದೇವಸ್ಥಾನಕ್ಕೆ ಬಂದರೂ ಚಪ್ಪರದ ಕಡೆಗೆ ಸುಳಿಯಲಿಲ್ಲ ಅಜ್ಜಿ. ಅವರಿಗೆ ಅವರ ಹಠವೇ ಹೆಚ್ಚಾಯ್ತು. ಕೈಗೆ ಬಂದ ಅಕ್ಷತೆಯನ್ನು ದೇವಸ್ಥಾನದಲ್ಲೇ ಒಗೆದು ಹೊರಟು ಹೋದರು. ಪ್ರೀತಿಯಿಂದ ಬೇಡ, ಮೊಮ್ಮಗ ಕಟ್ಟಿಕೊಳ್ಳುತ್ತಿರುವವಳ ಮುಖ ನೋಡಲೂ ಚಪ್ಪರದ ಕಡೆಗೆ ತಿರುಗಲಿಲ್ಲ. ಕಾರು ಹತ್ತಿ ಹೋದವರು ಈವರೆಗೂ ಒಂದು ಫೋನ್‌ ಕೂಡಾ ಮಾಡಿಲ್ಲ. ಜಾತಿಗೆ ಅಂಟಿಕೂತ ಅಜ್ಜಿಯ ಮನಸ್ಸು ಇಷ್ಟರ ಮಟ್ಟಿಗೆ ಕಲ್ಲಾಗುತ್ತದೆ ಎಂದುಕೊಂಡಿರಲಿಲ್ಲ.

ಅಮ್ಮ ಏನೋ ಮದುವೆ ಮನೆಯಲ್ಲಿ ಜೋರಾಗಿಯೇ ಓಡಾಡಿಕೊಂಡು ಬಂದ ಬೆರಳೆಣಿಕೆಯಷ್ಟು ಜನರನ್ನು ಅಕ್ಕರೆಯಿಂದಲೇ ಕಂಡಳು. ಇವಳಿಗೆ ಧಾರೆ ಸೀರೆಯಿಂದ ಹಿಡಿದು ಕಾಲ್ಗೆಜ್ಜೆ ಖರೀದಿಯವರೆಗೂ ಅಮ್ಮನದ್ದೇ ಮುಂದುಗೈ. ಮದುವೆ ದಿನ ಅಮ್ಮನದ್ದು ಎಂಥದ್ದೋ ಸಡಗರ. ಅಜ್ಜಿಯ ಹಾಗೆ ಕೊಂಕು ಮಾಡದೆ ತಾನೇ ಮುಂದೆ ನಿಂತು ಎಲ್ಲವನ್ನೂ ನೋಡಿಕೊಂಡಳು ಅಮ್ಮ. ಮುಹೂರ್ತದ ಹೊತ್ತಿಗೆ ಕಣ್ಣಲ್ಲಿ ನೀರು ತುಂಬಿಕೊಂಡರೂ ಸೆರಗಿನ ತುದಿಯಿಂದ ಅದನ್ನು ಒರೆಸಿಕೊಂಡು ನನ್ನತ್ತ ನೋಡಿ ಸಣ್ಣಗೆ ನಕ್ಕ ಅಮ್ಮ ಇವಳೊಂದಿಗೆ ಹೊಂದಿಕೊಳ್ಳದಷ್ಟು ಕಠೋರ ಆದಳೇ?

ಅಪ್ಪ ಸತ್ತ ನೆನಪು ಮಸುಕು ಮಸುಕು. ಆಗ ನಾನಿನ್ನೂ ಚಿಕ್ಕವನು. ಏನೊಂದೂ ಸರಿಯಾಗಿ ನೆನಪಿಲ್ಲ. ‘ಕುಡಿದೂ ಕುಡಿದೂ ಸತ್ತ’ ಎಂದು ಜನರೆಲ್ಲಾ ಮಾತಾಡಿಕೊಳ್ಳುತ್ತಿದ್ದುದ್ದು ಮಾತ್ರ ಕಿವಿಗೆ ಕಟ್ಟಿದ ಹಾಗಿದೆ. ಹೂ ಹಾರಗಳ ರಾಶಿಯಡಿ ಮಲಗಿದ್ದ ಅಪ್ಪನ ಮುಖದ ಮೇಲೆ ಬಿದ್ದು ಅಮ್ಮ, ಅಕ್ಕ ಬಿಕ್ಕಿಬಿಕ್ಕಿ ಅಳುತ್ತಿದ್ದರು. ಅಳುತ್ತಿದ್ದ ನನ್ನನ್ನು ಯಾರೋ ಹೆಗಲಿಗೆ ಹಾಕಿಕೊಂಡು ಸಮಾಧಾನ ಮಾಡಿಸುತ್ತಿದ್ದರು. ಅಜ್ಜಿ ಹಣೆ ಹಣೆ ಚಚ್ಚಿಕೊಳ್ಳುತ್ತಿದ್ದರೆ, ಅತ್ತೆ ಅಜ್ಜಿಯ ತಲೆ ನೇವರಿಸುತ್ತಿದ್ದರು. ಮನೆಯ ಮುಂದೆ ಬೆಂಕಿ ಹಾಕಲು ಬಿಡದ ಮಳೆಯನ್ನು ಬೈಯ್ಯುತ್ತಾ ಒಂದಷ್ಟು ಜನ ನೆಂಟರು ನೆಂದಿದ್ದ ಕಟ್ಟಿಗೆಗಳಿಂದ ಹೊಗೆ ಹೊರಡಿಸುವ ಸಾಹಸ ಮಾಡುತ್ತಿದ್ದರು. ಅಪ್ಪನನ್ನು ಅತ್ತ ಹೊತ್ತುಕೊಂಡು ಹೋದ ಮೇಲೆ ಅಮ್ಮ ಎದೆ ಬಡಿದುಕೊಂಡು ಅತ್ತಳು. ಯಾರದೋ ಹೆಗಲ ಮೇಲಿದ್ದ ನನ್ನನ್ನು ತಬ್ಬಿ ಅಳು ಹೆಚ್ಚು ಮಾಡಿದಳು.

ಅಂದಿನಿಂದ ಅಮ್ಮನದ್ದು ಒಂಟಿ ಬದುಕು. ಅಪ್ಪ ಸತ್ತ ಮೇಲೆ ನನ್ನನ್ನೂ ಅಕ್ಕನನ್ನೂ ಅಜ್ಜಿ ಮನೆಗೆ ಸೇರಿಸಿದ ಅಮ್ಮ ಅಗರಬತ್ತಿ ಫ್ಯಾಕ್ಟರಿ ಸೇರಿಕೊಂಡು ಅಲ್ಲೇ ಜೀವನ ಸವೆಸಿದವಳು. ನಾನು ಅಕ್ಕ ಅಜ್ಜಿ ಮನೆಯಲ್ಲೇ ಉಳಿದು ಶಾಲೆ, ಕಾಲೇಜು ಕಲಿತವರು. ಆಗೀಗ ಬರುತ್ತಿದ್ದ ಅಮ್ಮ ಒಂದು ದಿನವೂ ನಮ್ಮೊಂದಿಗೆ ಉಳಿಯುತ್ತಿರಲಿಲ್ಲ. ತನ್ನೊಂದಿಗೂ ಒಂದು ದಿನ ಕರೆದುಕೊಂಡು ಹೋಗುತ್ತಿರಲಿಲ್ಲ. ಅಜ್ಜಿ ಮನೆಗೆ ಬಂದಾಗಲೂ ಅಮ್ಮ ಒಂದು ದಿನವೂ ಪ್ರೀತಿಯ ಮಾತುಗಳನ್ನು ಆಡಿದ್ದು ಕಾಣೆ. ಬೇಸರದ ಮುಖದಲ್ಲಿ ಬಂದು ಒಂದಷ್ಟು ಹೊತ್ತು ಇದ್ದು ಅಜ್ಜಿಯೊಂದಿಗೆ ಜಗಳವಾಡಿ ಕಣ್ಣೀರಿಡುತ್ತಾ ಹೊರಟುಹೋಗುತ್ತಿದ್ದಳು. ಇನ್ನು ಮತ್ತೆ ಬರುತ್ತಿದ್ದುದು ಯಾವಾಗಲೋ.

ಅಕ್ಕನ ಮದುವೆಗೂ ಅಮ್ಮ ಬಂದಿದ್ದು ಒಂದು ದಿನ ಮಾತ್ರ. ಬ್ಯಾಗು ಹಿಡಿದು ಸೀದಾ ಕಲ್ಯಾಣ ಮಂಟಪಕ್ಕೇ ಬಂದವಳು, ಮದುವೆ ಮುಗಿಸಿಕೊಂಡು ಅದೇ ಬ್ಯಾಗು ಹಿಡಿದು ಬಂದಂತೇ ಹೊರಟುಹೋಗಿದ್ದಳು.

‘ಅಪ್ಪ ಏನೋ ಕುಡಿದೂ ಕುಡಿದೂ ಸತ್ತ. ಅಮ್ಮನಾಗಿ ನೀನಾದರೂ ನಮ್ಮನ್ನ ಜೊತೇಗೆ ಇಟ್ಕೋಬಹುದಿತ್ತು. ಅಪ್ಪ ಸತ್ತ ಮೇಲೆ ಅಮ್ಮ ಅಂತ ನೀನೊಬ್ಬಳಿದ್ದೂ ನಾವು ತಬ್ಬಲಿಗಳಾದೊ. ಅಜ್ಜಿ ಮನೆ ಅನ್ನೋದೇನೋ ಸರಿ. ಆದ್ರೆ, ತುತ್ತು ತುತ್ತಿಗೂ ಎಣಿಸ್ತಿದ್ದ ಅತ್ತೆನೂ ಅಲ್ಲೇ ಇದ್ದಳಲ್ಲಾ. ನಮ್ಮನ್ನ ಕಂಡೋರ ಮನೆಗೆ ದೂಡಿ ನೀನು ನಿನ್ನ ಜವಾಬ್ದಾರಿ ಕಳ್ಕೊಂಡೆ’
ಅಕ್ಕ ತನ್ನ ಮದುವೆಯ ಹಿಂದಿನ ರಾತ್ರಿ ಯಾವುದೋ ಮಾತಿಗೆ ಅಮ್ಮನೊಂದಿಗೆ ಜಗಳ ತೆಗೆದು ಇದ್ದಬದ್ದದ್ದನ್ನೆಲ್ಲಾ ಕಕ್ಕಿದ್ದಳು. ಅಕ್ಕ ಅಷ್ಟೆಲ್ಲಾ ಮಾತಾಡಿದರೂ ಏನೊಂದೂ ಕಿವಿಗೆ ಬಿದ್ದೇ ಇಲ್ಲವೆಂಬಂತೆ ಮದುವೆ ಮುಗಿಸಿಕೊಂಡು ಹೊರಟು ಹೋಗಿದ್ದಳು ಅಮ್ಮ.

‘ಗಂಡ ಸತ್ತ ಮೇಲೆ ಅವಳಿಗೆ ತಲೆ ಕೆಟ್ಟಿದೆ’ ಎಂದು ಅಜ್ಜಿಯೂ ಅತ್ತೆಯೂ ಆಗಾಗ ಮಾತಾಡಿಕೊಳ್ಳುತ್ತಿದ್ದುದು ನಿಜವೇ ಇರಬೇಕು ಎಂದು ನನಗೂ ಅನ್ನಿಸಿತ್ತು.

ನಮಗೆ ಬೇಕು ಎನಿಸಿದಾಗ ಅಮ್ಮ ಜೊತೆಗಿರಲಿಲ್ಲ. ಅಮ್ಮನಿಗೆ ನಾವು ಬೇಕಿದ್ದೆವೋ ಹೇಗೋ ಗೊತ್ತಿಲ್ಲ. ಅಪ್ಪನ ಪ್ರೀತಿಯಂತೂ ಸಿಗಲಿಲ್ಲ. ಅಮ್ಮನೂ ಜೊತೆಗೆ ಉಳಿಯಲಿಲ್ಲ. ಅನಾಥರಾದ ನಮಗೆ ಊಟ, ಬಟ್ಟೆ ಕೊಟ್ಟು ಸಾಕಿದ ಅಜ್ಜಿಗೆ ನಾವು ನಿಷ್ಠರಾಗಿರಬೇಕಿತ್ತು. ಆದರೆ ಅದಾಗಲಿಲ್ಲ. ಅಕ್ಕನೂ ಇಷ್ಟಪಟ್ಟ ಬೇರೆ ಜಾತಿಯವನೊಂದಿಗೇ ಮದುವೆಯಾದಳು. ಭಾವನದ್ದು ಮೇಲು ಜಾತಿ ಎಂಬ ಕಾರಣಕ್ಕೆ ಅಜ್ಜಿ ಹೆಚ್ಚು ರಗಳೆ ಮಾಡಲಿಲ್ಲ. ಆದರೆ ನನ್ನ ವಿಷಯದಲ್ಲಿ ಹಾಗಾಗಲಿಲ್ಲ. ಅಜ್ಜಿಯ ಪ್ರಕಾರ ಇವಳು ಮುಟ್ಟಿಸಿಕೊಳ್ಳಲೂ ಯೋಗ್ಯಳಲ್ಲದವಳು. ಈಗ ಅಮ್ಮನಿಗೂ ಹೀಗೆ ಅನ್ನಿಸುತ್ತಿದೆಯೋ ಏನೋ?

ಮಳೆಗಾಲದಲ್ಲಿ ವಾರಗಟ್ಟಲೆ ಕಾಡುತ್ತಿದ್ದ ಶೀತಜ್ವರದ ದಿನಗಳಲ್ಲಿ ಅಮ್ಮನ ಕೈ ನನ್ನ ಹಣೆಯ ಮೇಲಿದ್ದರೆ ಹಗುರಗೊಳ್ಳುವ ಕನಸು ಕಾಣುತ್ತಿದ್ದೆ. ಜ್ವರದಿಂದ ಬಳಲುತ್ತಿರುವ ಮಗು, ಮೋಡಗಳ ಮರೆಯಿಂದ ಬಿಳಿ ಸೀರೆಯುಟ್ಟು ದೇವತೆಯಂತೆ ಬರುವ ಅಮ್ಮ, ಮಗುವನ್ನು ಎತ್ತಿಕೊಂಡು ಅದರ ಹಣೆಯನ್ನು ನೇವರಿಸಿದ್ದೇ ನನ್ನ ಜ್ವರವೂ ಇಳಿದು ಹೋದ ಅನುಭವ. ಕಣ್ಣು ತೆರೆದರೆ ಬರಿದೇ ಕಾಣುತ್ತಿದ್ದ ಸೂರು. ಹಿಂದೆಯೇ ಆವರಿಸಿಕೊಂಡು ಮತ್ತೆ ಕಾಡುತ್ತಿದ್ದ ಜ್ವರ. ಅಜ್ಜಿಯ ಕಕ್ಕುಲಾತಿ ಇದ್ದೇ ಇತ್ತು. ಆದರೆ ಅದು ಎಂದೂ ಅಮ್ಮನ ಮಮತೆಯಾಗಲಿಲ್ಲ. ಅಪ್ಪ ಸಾಯುವ ಮುನ್ನ ಮಾತ್ರ ಅಮ್ಮನ ಅಸ್ತಿತ್ವ ಇತ್ತು ಎನಿಸುತ್ತದೆ. ಅಪ್ಪ ಸತ್ತ ಮೇಲೆ ನಮ್ಮ ಪಾಲಿಗೆ ಅಮ್ಮ ಬದುಕಿದ್ದೂ ಸತ್ತಂತೆ ಇದ್ದಳು.

ಮದುವೆಯಾಗುವ ಮುನ್ನವೇ ಇವಳಿಗೆ ಹೇಳಿದ್ದೆ, ‘ಹೊಸ ಮನೆ ಮಾಡಿದ್ದೀನಿ, ಅಮ್ಮ ನಾನು ನೀನು ಒಟ್ಟಿಗೇ ಇರೋದು’ ಅಂತ. ‘ನಿನ್ನ ಅಮ್ಮನ್ನ ನಮ್ಮಮ್ಮ ಅನ್ನೋ ತರ ನೋಡ್ಕೋತೀನಿ’ ಅಂದಿದ್ದಳು ಇವಳು.

ಇವಳನ್ನ ಪ್ರೀತಿ ಮಾಡ್ತಿದ್ದೀನಿ, ಮದುವೆನೂ ಆಗ್ತೀನಿ ಎಂದು ಹೇಳಿದಾಗ ಅಮ್ಮ ಸಂತೋಷದಿಂದಲೇ ಒಪ್ಪಿದ್ದಳು. ಹಾಗೆ ನೋಡಿದರೆ ಮದುವೆಗೆ ಒಪ್ಪದೇ, ಮದುವೆ ನಿಲ್ಲಿಸಲು ಇನ್ನಿಲ್ಲದ ಪ್ರಯತ್ನ ಮಾಡಿದ್ದು ಅಜ್ಜಿ ಮಾತ್ರ. ಜಾತಿಯ ಕಾರಣ ಹಿಡಿದು ಹಠದಲ್ಲಿ ಹಠ ಸಾಧಿಸಿದರು ಅವರು. ಇವಳ ಮನೆಯಲ್ಲೂ ನಮ್ಮ ಪ್ರೀತಿಗೆ ವಿರೋಧವಿತ್ತು. ಇವಳ ಚಿಕ್ಕಮ್ಮನದು ಎಂಥದೋ ಆಲಸ್ಯವಾದರೆ, ಇವರಪ್ಪ ಮದುವೆಗೆ ಕಲ್ಲು ಹಾಕಬೇಕೆಂದು ಅಜ್ಜಿಯ ಜತೆ ಸೇರಿಕೊಂಡು ಮಸಲತ್ತು ನಡೆಸಿದವನು. ಆದರೆ ನಮ್ಮ ಮದುವೆಯ ಆಸೆಗೆ ಒತ್ತಾಸೆಯಾಗಿ ಬಲ ತುಂಬಿದವಳು ಅಮ್ಮ.

‘ಇಷ್ಟಪಟ್ಟೋಳನ್ನೇ ಮದುವೆ ಆಗು. ಜೀವನ ಚೆನ್ನಾಗಿರುತ್ತೆ’ ಎಂದಿದ್ದ ಅಮ್ಮ ಈಗ ‘ಅತ್ತೆಗೂ ಸೊಸೆಗೂ ಹುಯ್ದಕ್ಕಿ ಬೇಯಲ್ಲ’ ಎನ್ನುತ್ತಿದ್ದಾಳೆ.

ಬಾಲ್ಯದಲ್ಲಿ ಕಳೆದುಕೊಂಡಿದ್ದ ಅಮ್ಮನ ಪ್ರೀತಿ ಮತ್ತೆ ಸಿಗುತ್ತಿದೆ ಎಂದುಕೊಳ್ಳುವ ದಿನಗಳಲ್ಲಿ ಮತ್ತೆ ಅದು ಮರೀಚಿಕೆಯಾಗುತ್ತಿದೆ. ಅಮ್ಮನ ಸಮಸ್ಯೆ ಏನು ಎಂಬುದು ಅರ್ಥವಾಗುತ್ತಿಲ್ಲ. ಇವಳಾದರೂ ಅಮ್ಮನೊಂದಿಗೆ ಹೊಂದಿಕೊಳ್ಳಬಹುದಿತ್ತು. ಆದರೆ, ಹಠ ಮಾಡಿ ಬೇರೆ ಮನೆ ಹಿಡಿಸಿದಳು. ಹೊಸ ಸಂಸಾರಕ್ಕೆ ಒಗ್ಗಿಕೊಳ್ಳಲು ಸಮಯ ಕೊಡುವುದು ಯಾರಿಗೂ ಬೇಡವಾಗಿದೆ.

‘ಯಾವಳನ್ನೋ ಕಟ್ಕೊತಿದ್ದೀಯಲ್ಲಾ ಕಟ್ಕೊ ಹೋಗು. ಮೂರು ತಿಂಗ್ಳೂ ನೆಟ್ಟಗೆ ಸಂಸಾರ ಮಾಡಲ್ಲ ಅವಳು’
ಲಗ್ನಪತ್ರಿಕೆ ಕಟ್ಟಿನೊಂದಿಗೆ ಮನೆಗೆ ಹೋದಾಗ ಅಜ್ಜಿ ಆಡಿದ ಮಾತಿದು. ಅಜ್ಜಿಯ ಮಾತು ಶಾಪವಾಯಿತೇ. ಮೂರು ತಿಂಗಳಲ್ಲ ಮೂರು ವಾರವೂ ಪೂರೈಸಲಿಲ್ಲ. ಅಮ್ಮನಿಗೆ ಇವಳು ಹೊಂದಿಕೊಳ್ಳುತ್ತಿಲ್ಲವೋ, ಇವಳಿಗೆ ಅಮ್ಮ ಹೊಂದಿಕೊಳ್ಳುತ್ತಿಲ್ಲವೋ ಗೊತ್ತಿಲ್ಲ. ಮದುವೆಯಾದ ಮೇಲೆ ಅಮ್ಮ, ಹೆಂಡತಿ ಜತೆಗೆ ಬಾಳಲೆಂದು ಬಾಡಿಗೆಗೆ ಹಿಡಿದಿದ್ದ ಹೊಸ ಮನೆಯಲ್ಲಿ ಈಗ ಅಮ್ಮ ಮತ್ತೆ ಒಬ್ಬಂಟಿ.

ಎಮಿರೇಟ್ಸ್‌ನಲ್ಲಿ ಒಳ್ಳೆ ಕೆಲಸದ ಆಫರ್‌ ಇದೆ. ಮೂರು ವರ್ಷಕ್ಕೆ ಅಗ್ರಿಮೆಂಟ್‌ ಆಗಬೇಕು. ಇಲ್ಲಿ ಮಾಡುವ ಕೆಲಸಕ್ಕೆ ಅಲ್ಲಿ ಇಲ್ಲಿಗಿಂತ ಹತ್ತು ಪಟ್ಟು ಸಂಬಳ ಹೆಚ್ಚು. ಮೂರು ವರ್ಷ ದುಡಿದು ಮತ್ತೆ ಇಲ್ಲಿಗೆ ಬಂದು ಸೆಟ್ಲ್‌ ಆದರಾಯಿತು. ಇವರಿಬ್ಬರನ್ನೂ ಮೂರು ವರ್ಷ ಒಂದೇ ಮನೆಯಲ್ಲಿ ಬಿಟ್ಟು ಹೋದರೆ ಹೇಗೋ ಒಬ್ಬರಿಗೊಬ್ಬರು ಹೊಂದಿಕೊಳ್ಳಬಹುದು.

ಒಬ್ಬರ ಮುಖ ಒಬ್ಬರು ನೋಡಿಕೊಂಡಿದ್ದರೆ ಹೊಂದಿಕೊಳ್ಳದೇ ಏನು.
*

ಸೊಸೆ
ಹೊಂದಿಕೊಂಡು ಹೋಗುವುದೇನೂ ಕಷ್ಟವಲ್ಲ. ಆದರೆ, ಹೊಂದಾಣಿಕೆ ಒಂದು ಕಡೆಯಿಂದ ಆದರೆ ಮಾತ್ರ ಸಾಧ್ಯವಿಲ್ಲ. ಹೊಂದದಿದ್ದರೆ ಕನಿಷ್ಠ ಜಗಳವನ್ನಾದರೂ ಮಾಡಲಿ. ಮಾತನಾಡದೆ ಬಿಗುಮಾನ ಮಾಡಿದರೆ ಹೊಂದಿಕೊಳ್ಳುವುದಾದರೂ ಹೇಗೆ? ಅಮ್ಮನ ಪ್ರೀತಿ ಕಾಣದ ನಾನು ಅತ್ತೆಯಲ್ಲೇ ಅಮ್ಮನನ್ನು ಕಾಣಬೇಕೆಂದು ಕನಸಿದವಳು. ಆದರೆ ಮಗಳಂತೆ ಕಾಣಲು ಅವರಿಗೆ ಮನಸ್ಸಿಲ್ಲ. ಅವರೂ ಜೀವನದಲ್ಲಿ ನೊಂದಿದ್ದಾರೆ ಎಂದು ಗೊತ್ತಿದೆ. ಆದರೆ, ನಮ್ಮ ಬದುಕು, ಭಾವನೆಗಳಿಗೂ ಅವರು ಬೆಲೆ ಕೊಡಬೇಕು ಎಂದು ಬಯಸುವುದು ತಪ್ಪೇ? ಕಿರಿಯರು ಎಡವಿದಾಗ ತಿದ್ದಿ ಬುದ್ಧಿ ಹೇಳುವುದು ಅವರ ಕರ್ತವ್ಯವಲ್ಲವೇ?

ಆದರೆ ಅದಾವುದೂ ಆಗಲಿಲ್ಲ. ‘ಇಷ್ಟ ಇಲ್ಲಾಂದ್ರೆ ಮನೆ ಬಿಟ್ಟು ಹೋಗು’ ಎಂದರು ಕಡ್ಡಿಮುರಿದಂತೆ. ಇವನೂ ಹೆಚ್ಚು ಮಾತು ಮುಂದುವರಿಸದೆ ಬೇರೆ ಮನೆ ಮಾಡುವ ನಿರ್ಧಾರಕ್ಕೆ ಬಂದಿದ್ದ. ಬೇರೆ ಮನೆ ಮಾಡು ಎಂದೆ ನಿಜ. ಆದರೆ, ಅದು ಆತುರದ ಮಾತು ಎಂಬುದು ಇವನಿಗೆ ಗೊತ್ತಾಗಲಿಲ್ಲವೇ? ಈ ಹೊಸ ಸಂಸಾರಕ್ಕೆ ನಾನಿನ್ನೂ ಹೊಸಬಳು. ‘ಹೀಗಲ್ಲ ಹೀಗೆ’ ಎಂದು ತಿಳಿ ಹೇಳಿದ್ದರೆ ತಿದ್ದಿಕೊಳ್ಳಲಾರದಷ್ಟು ಹಠಮಾರಿಯೇನಲ್ಲ ನಾನು.

ಅಮ್ಮನ ಮುಖ ನೋಡಿದ್ದೇ ನೆನಪಿಲ್ಲ ನನಗೆ. ಕಿವಿಗೆ ಮಾತು ಎಂದು ಸೋಕುತ್ತಿದ್ದುದ್ದೇ, ‘ಅಮ್ಮನನ್ನ ನುಂಗಿಕೊಂಡವಳು’ ಎಂಬ ಮಾತಿನಿಂದ. ‘ಅಮ್ಮನ್ನ ಹೇಗೆ ನುಂಗಿಕೊಂಡೆ’ ಎಂದು ಕೇಳಿದ್ದಕ್ಕೆ ಅಪ್ಪ ಒಮ್ಮೆ ಕಣ್ಣೀರು ಹಾಕಿದ್ದ. ಆದರೆ, ಅಪ್ಪನಿಗೆ ಎರಡನೇ ಹೆಂಡತಿಯಾಗಿ ಬಂದವಳು ಯಾವತ್ತಿಗೂ ಅಮ್ಮ ಎನಿಸಲಿಲ್ಲ. ಅಪ್ಪನ ಎರಡನೇ ಹೆಂಡತಿ ಬರುವ ಮುಂಚೆಯೇ ಮನೆ ನೆಮ್ಮದಿಯಾಗಿತ್ತು. ಅವಳು ಬಂದ ಮೇಲೆ ಮನೆ ಮನೆಯಾಗಿ ಉಳಿಯಲಿಲ್ಲ. ಅವಳಿಗೊಂದು ಗಂಡು ಮಗುವಾದ ಮೇಲೆ ಅಪ್ಪನ ಪ್ರೀತಿಯೂ ನನ್ನ ಕಡೆಗೆ ಅಷ್ಟಕ್ಕಷ್ಟೆ.

ಕೆಲಸದ ಆಳಿಗಿಂತ ಕಡೆಯಾಗಿ ನಡೆಸಿಕೊಂಡಳು ಚಿಕ್ಕಮ್ಮ. ಮುದ್ದಿನ ಮಾತಿರಲಿ ನನ್ನೊಂದಿಗೆ ಸಮಾಧಾನದಿಂದ ಮಾತಾಡಿದ್ದೇ ಕಾಣೆ. ಮನೆಯ ಕಸ, ಮುಸುರೆ ಮುಗಿಸಿ ಸ್ಕೂಲಿಗೆ ಓಡಬೇಕಿತ್ತು. ಅಲ್ಲಿಂದ ಬಂದ ಕೂಡಲೆ ನೀರು, ತರಕಾರಿ, ಅಡುಗೆ, ಪಾತ್ರೆ – ಮತ್ತೆ ಮನೆ ಕೆಲಸದ ಜಗತ್ತು. ಚಿಕ್ಕಮ್ಮನ ಮಗನನ್ನು ದಿನವೂ ಸಂಜೆ ಪಾರ್ಕಿಗೆ ತಿರುಗಾಟಕ್ಕೆ ಕರೆದುಕೊಂಡು ಹೋಗುತ್ತಿದ್ದ ಅಪ್ಪ ಒಂದು ಬಾರಿಯೂ ನನ್ನನ್ನು ಜತೆಗೆ ಕರೆಯಲಿಲ್ಲ. ಚಿಕ್ಕಮ್ಮ ಬರುವ ಮುಂಚೆಯಷ್ಟೇ ಅಪ್ಪ ನನಗೆ ಬಟ್ಟೆ ಕೊಡಿಸಿದ್ದ ನೆನಪು. ಆಮೇಲೆ ಯಾವ ಹಬ್ಬಕ್ಕೂ ಅಪ್ಪ ಹೊಸ ಬಟ್ಟೆ ಕೊಡಿಸಿದ ನೆನಪಿಲ್ಲ. ನನ್ನನ್ನು ನೋಡಲು ಬರುತ್ತಿದ್ದ ಅಮ್ಮನ ಕಡೆಯ ನೆಂಟರು ಆಗೊಮ್ಮೆ ಈಗೊಮ್ಮೆ ಹೊಸ ಬಟ್ಟೆ ತರುತ್ತಿದ್ದರು. ಆ ಹೊಸ ಬಟ್ಟೆ ತೊಟ್ಟಾಗೆಲ್ಲಾ ಅಮ್ಮನೇ ನನ್ನ ಮೈ ಆವರಿಸಿದಂತಾಗುತ್ತಿತ್ತು.

ಕಾಲೇಜಿಗೆ ಹೋಗುವ ಹೊತ್ತಿಗೆ ನನ್ನ ನಾಲಿಗೆಯೂ ಬಲಿತಿತ್ತು. ಚಿಕ್ಕಮ್ಮನಿಗೆ ಎದುರಾಡುವಷ್ಟಾದರೂ ಬುದ್ಧಿ ಬೆಳೆದಿತ್ತು. ಪಿಯುಸಿ ಓದುತ್ತಿದ್ದ ದಿನದಲ್ಲೇ ಜೆರಾಕ್ಸ್‌ ಅಂಗಡಿಯಲ್ಲಿ ಸಂಜೆ ಪಾರ್ಟ್‌ಟೈಂ ಕೆಲಸ ಮಾಡುತ್ತಿದ್ದೆ. ಜೆರಾಕ್ಸ್‌ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ ಮೇಲೆಯೇ ನೂರರ ನೋಟುಗಳನ್ನು ನಾನು ಮುಟ್ಟಿದ್ದು. ಸರ್ಕಾರಿ ಕಾಲೇಜಿನಲ್ಲಿ ನಮ್ಮ ಜಾತಿಯವರಿಗೆ ಫೀಸು ಇರಲಿಲ್ಲ. ಹೀಗಾಗಿಯೇ ನಾನು ಕಾಲೇಜು ಮೆಟ್ಟಿಲು ಹತ್ತಿದ್ದೋ ಏನೋ. ಅಪ್ಪ ಫೀಸು ಕಟ್ಟಿ ಕಾಲೇಜಿಗೆ ಸೇರಿಸುತ್ತಿದ್ದುದು ಬರಿಯ ಕನಸಿನ ಮಾತೇ.

ಬಿಕಾಂ ಮುಗಿದ ಮೇಲೆ ಕೆಲಸ ಸಿಕ್ಕಿದ್ದು ಅಮೆರಿಕನ್‌ ಸ್ಟ್ಯಾಟಿಕ್ಟ್ಸ್‌ ಕಂಪೆನಿಯ ಇಲ್ಲಿನ ಬ್ರಾಂಚ್‌ನಲ್ಲಿ. ಅಮೆರಿಕದ ಹಗಲಿಗೆ ಇಲ್ಲಿ ರಾತ್ರಿಯ ಲೆಕ್ಕಾಚಾರ. ರಾತ್ರಿ ಆಫೀಸ್‌ ತಲುಪಿದರೆ, ಬೆಳಗಿನ ಜಾವ ಮನೆ ಮುಂದೆ ಬಿಸಾಕಿ ಹೋಗುವ ಕ್ಯಾಬ್‌. ವರ್ಷವಿಡೀ ಬರೀ ರಾತ್ರಿ ಪಾಳಿ. ಹಗಲು ರಾತ್ರಿಗಳ ಅಸ್ತಿತ್ವವನ್ನೇ ಕೆಡವಲು ಹೊರಟಂತೆ ರಾತ್ರಿ ಆಫೀಸ್‌ ಸೇರಿದರೆ ಬೆಳಗಿನ ಜಾವ ಮನೆ ಸೇರುತ್ತಿದ್ದುದು ದಣಿದ ಬೆಕ್ಕುಗಳಂತೆ.

ನಮ್ಮ ಮನೆಯ ಹಿಂದಿನ ಬೀದಿಯಲ್ಲೇ ಇದ್ದ ಇವನ ಪ್ರೀತಿಗೆ ನಾನು ಬಿದ್ದಿದ್ದು ಆಕಸ್ಮಿಕ. ಚಿಕ್ಕಂದಿನಿಂದಲೂ ನೋಡುತ್ತಿದ್ದ ಸಾಮಾನ್ಯ ನೋಟ ಅದೆಂದೋ ಕಣ್ಣಲ್ಲಿ ಮಿಂಚು ಮೂಡಿಸಿತ್ತು. ಪ್ರೀತಿಯಲ್ಲಿ ನಾನು ಮಾತ್ರ ಬೀಳಲಿಲ್ಲ, ಇವನೂ ಬಿದ್ದಿದ್ದ. ಉಡಾಳನಾಗಿ ಚಡ್ಡಿ ಹಾಕಿಕೊಂಡು ಸೈಕಲ್‌ ಅಲೆಯುತ್ತಿದ್ದ ಇವನು, ಈಗ ದೊಡ್ಡ ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಸೆಕ್ಯೂರಿಟಿ ಎಂಜಿನಿಯರ್‌. ಎಂಜಿನಿಯರಿಂಗ್‌ ಓದದೇ ಎಂಜಿನಿಯರ್‌ ಆದ ಬುದ್ಧಿವಂತ ಇವನು.

ಕಾಲೇಜು ದಿನಗಳಲ್ಲಿ ಇವನು ಮೆಡಿಸಿನ್‌ ಎಕ್ಸ್‌ಪಿರಿಮೆಂಟ್‌ ಲ್ಯಾಬ್‌ನಲ್ಲಿ ಪ್ರಯೋಗಪಶುವಾಗಿದ್ದನಂತೆ. ಹೊಸ ಮಾತ್ರೆ, ಹೊಸ ಟಾನಿಕ್‌, ಹೊಸ ಇಂಜೆಕ್ಷನ್‌ ಕಂಡುಹಿಡಿದಾದ ಮೇಲೆ ಅವುಗಳನ್ನು ಇಲಿ, ಕೋತಿಗಳ ಮೇಲೆ ಪ್ರಯೋಗ ಮಾಡುತ್ತಾರಂತೆ. ಆ ಪ್ರಯೋಗ ಯಶಸ್ವಿಯಾದ ಮೇಲೆ ಅವನ್ನು ಮನುಷ್ಯರ ಮೇಲೆ ಪ್ರಯೋಗ ಮಾಡುತ್ತವೆ ಇಂಥ ಲ್ಯಾಬ್‌ಗಳು. ಇದೇನು ನಿತ್ಯದ ಕೆಲಸವಲ್ಲ. ಲ್ಯಾಬ್‌ನವರು ಕರೆದಾಗ ಹೋಗಿ ಬೆಡ್‌ ಮೇಲೆ ಮಲಗಿ ಪ್ರಯೋಗಕ್ಕೆ ಒಳಗಾಗುವ ಮುನ್ನಾ ಒಂದು ನಳಿಕೆ ರಕ್ತ ಕೊಟ್ಟು, ಪ್ರಯೋಗ ಮುಗಿದ ಗಂಟೆಯ ಬಳಿಕ ಒಂದು ನಳಿಕೆ ರಕ್ತ ಕೊಟ್ಟು ಅವರು ಕೊಡುವ ಒಂದು ಸಾವಿರ, ಒಂದು ಸೇಬು ಹಣ್ಣಿನೊಂದಿಗೆ ಹೊರಬರುವುದು. ಹೀಗೇ ಮೂರು ವರ್ಷಗಳ ಕಾಲ ಪ್ರಯೋಗಪಶುವಾಗಿದ್ದನಂತೆ ಇವನು. ಸಾವಿರದ ಆಸೆಗಾಗಿ ಆಗ ಅಲ್ಲಿ ಯಾವ ಯಾವ ಮಾತ್ರೆ ನುಂಗಿದನೋ, ಯಾವ ಯಾವ ಟಾನಿಕ್‌ ಕುಡಿದನೋ, ಯಾವ ಯಾವ ಇಂಜೆಕ್ಷೆನ್‌ ಎಲ್ಲೆಲ್ಲಿಗೆ ಚುಚ್ಚಿಸಿಕೊಂಡನೋ, ಈಗ ಒಮ್ಮೊಮ್ಮೆ ಹುಚ್ಚನ ಹಾಗೆ ಆಡುತ್ತಾನೆ. ಇವನ ಎಕ್ಸ್‌ಟ್ರೀಮ್‌ಗಳಿಗೆಲ್ಲಾ ಕಾರಣ ಆ ಡ್ರಗ್‌ನ ಪ್ರಭಾವವೇ ಇರಬೇಕು.

ಕಳೆದೊಂದು ವರ್ಷದಲ್ಲಿ ನಾಲ್ಕು ಕಡೆ ಕೆಲಸ ಬದಲಿಸಿದ್ದಾನೆ. ಈಗಿರುವ ಕೆಲಸದಲ್ಲೇ ಕೈತುಂಬಾ ಸಂಬಳ ಬರುತ್ತಿದೆ. ತಿಂಗಳಿಗೆ ಲಕ್ಷಕ್ಕೂ ಮೀರಿ ಸಂಬಳ ತೆಗೆಯುತ್ತಾನೆ. ಆದರೆ, ಮದುವೆಯಾಗಿ ತಿಂಗಳೂ ಕಳೆದಿಲ್ಲ. ಆಗಲೇ ಸೌದಿಗೆ ಹಾರುವ ಮಾತನಾಡುತ್ತಿದ್ದಾನೆ. ನನ್ನನ್ನೂ ಕರೆದುಕೊಂಡು ಹೋಗು ಎಂದರೆ ಸದ್ಯಕ್ಕೆ ವೀಸಾ ಸಿಗಲ್ಲ ಎನ್ನುತ್ತಾನೆ.

ಮದುವೆಯಾಗುವ ಮೊದಲು ಇದ್ದ ಪ್ರೀತಿ ಮದುವೆಯಾದ ಮೇಲೆ ಕಡಿಮೆಯಾಗುತ್ತದೆಯೇ? ಮೊದಲು ದಿನವಿಡೀ ನನ್ನೊಂದಿಗೆ ಇರಬೇಕು ಎಂದು ಹಂಬಲಿಸುತ್ತಿದ್ದವನು ಮದುವೆಯಾದ ಮೇಲೆ ಟೈಂ ಟೇಬಲ್‌ ಹಾಕಿಕೊಂಡು ಕೆಲಸ ಮಾಡುತ್ತಿದ್ದಾನೆ. ಬೆಳಿಗ್ಗೆ ಆರಕ್ಕೇ ಮನೆ ಬಿಡುತ್ತಾನೆ. ರಾತ್ರಿ ಎಂಟೋ ಒಂಬತ್ತೋ ಹತ್ತಕ್ಕೋ ಮನೆಗೆ ಬರುತ್ತಾನೆ. ನಾನು ರಾತ್ರಿ ಕೆಲಸಕ್ಕೆ ಹೋದ ಮೇಲೆ ಅವನು ಮನೆಗೆ ಬಂದರೆ, ನಾನು ಕೆಲಸ ಮುಗಿಸಿ ಬಂದು ಮಲಗಿದ ಸ್ವಲ್ಪ ಹೊತ್ತಿಗೇ ಎದ್ದು ರೆಡಿಯಾಗಿ ಕೆಲಸಕ್ಕೆ ಹೊರಡುತ್ತಾನೆ. ವೀಕ್‌ಎಂಡ್‌ ಎಂಬುದು ಇಲ್ಲದೇ ಹೋಗಿದ್ದರೆ ಒಬ್ಬರ ಮುಖ ಒಬ್ಬರು ನೋಡುತ್ತಿದ್ದುದು ಮಲಗಿರುವಾಗ ಮಾತ್ರ.

ಬೆಳಿಗ್ಗೆ ಎಂಬ ಹನ್ನೆರಡು ಗಂಟೆಗೆ ಎದ್ದರೆ ಇಡೀ ಮನೆ ಖಾಲಿ ಜಗತ್ತಿನ ಹಾಗೆ ಕಾಣುತ್ತದೆ. ಇಡೀ ಜಗತ್ತಿನಲ್ಲಿ ನಾನು ಒಂಟಿ. ರಾತ್ರಿ ಹಗಲಾಗಿ, ಹಗಲು ರಾತ್ರಿಯಾಗದ ತಳಮಳ ಇದು. ನಾನು ಮಲಗಿದ್ದು ಏಕೆ, ಎದ್ದಿದ್ದು ಏಕೆ, ಈಗ ಏನು ಮಾಡಬೇಕು, ಏನು ತಿನ್ನಬೇಕು, ಯಾತಕ್ಕಾಗಿ ತಿನ್ನಬೇಕು, ನಾನು ಬದುಕಿರುವುದು ಯಾತಕ್ಕೆ, ಅತ್ತೆಗೆ ಯಾಕೆ ನನ್ನನ್ನು ತನ್ನ ಮಗಳು ಎಂದು ಒಪ್ಪಿಕೊಳ್ಳಲು ಆಗುತ್ತಿಲ್ಲ, ಇವನಿಗೆ ಏಕೆ ನನ್ನ ಮೇಲೆ ಪ್ರೀತಿ ಕಡಿಮೆಯಾಗಿದೆ, ಆಫೀಸ್‌ನಲ್ಲಿ ಯಾರನ್ನಾದರೂ ನೋಡಿಕೊಂಡಿದ್ದಾನೋ ಹೇಗೆ… ಪ್ರಶ್ನೆಗಳೆಲ್ಲಾ ಒಟ್ಟಿಗೆ ಗಿರಕಿ ಹೊಡೆದು ತಲೆ ಚಿಟ್ಟೆನಿಸುತ್ತವೆ. ಟಿವಿ ಹಾಕಿದರೆ ಗೊಂಬೆಗಳು ಸುಮ್ಮನೆ ಕುಣಿಯುತ್ತವೆ. ಬಾಲ್ಕನಿಗೆ ಹೋಗಿನಿಂತರೆ ರಸ್ತೆಯಲ್ಲಿ ಗಾಡಿಗಳು ತಲೆ ಕೆಟ್ಟಂತೆ ಸುಮ್ಮನೆ ಹೋಗಿ ಬರುತ್ತಿರುತ್ತವೆ. ಬೀದಿಯಲ್ಲಿ ಕಾಣುವ ಎಲ್ಲರ ಕಿವಿಗಳಲ್ಲೂ ಮೊಬೈಲ್‌ಗಳು ಸಿಕ್ಕಿಕೊಂಡಿರುತ್ತವೆ. ಬೀಸುವ ಗಾಳಿಗೂ ತಂಪಿನ ಸೋಂಕಿಲ್ಲ. ನನ್ನೊಬ್ಬಳಿಗೇ ಹೀಗಾಗುತ್ತದೆಯೇ ಅಥವಾ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಎಲ್ಲರಿಗೂ ಹೀಗೆಯೋ.

ಅತ್ತೆಯ ಜೊತೆಯಲ್ಲಾದರೂ ಇದ್ದಿದ್ದರೆ ಅವರು ಮುಖ ತಿರುಗಿಸುವುದನ್ನು ನೋಡಿಕೊಂಡಾದರೂ, ಅವರ ಗೊಣಗಾಟ ಕೇಳಿಕೊಂಡಾದರೂ ಕಾಲ ಕಳೆಯಬಹುದಿತ್ತು. ಈ ಮನೆ ತುಂಬಿದ್ದೂ ಖಾಲಿ ಖಾಲಿ ಎನಿಸುತ್ತದೆ. ಗೋಡೆಯ ಮೇಲೆ ಯಾರೋ ಹತ್ತಿಹೋಗಿ ಕಾಲಿನ ಹೆಜ್ಜೆಗಳು ಉಳಿದಂತೆ ಕಾಣುತ್ತದೆ. ಬಚ್ಚಲಿನಲ್ಲಿ ಸ್ನಾನ ಮಾಡುವಾಗ ನೀರಿನೊಂದಿಗೆ ಯಾರೋ ನನ್ನನ್ನು ಆವರಿಸುತ್ತಿದ್ದಾರೆ ಎನಿಸುತ್ತದೆ. ಅಡಿಗೆ ಕೋಣೆಯಲ್ಲಿ ರವೆ ಹುರಿಯುವಾಗ ಹಿಂದಿನಿಂದ ಯಾರೋ ಬಂದು ಕುತ್ತಿಗೆ ಹಿಸುಕಿದಂತಾಗುತ್ತದೆ. ಇದನ್ನೆಲ್ಲಾ ಹೇಳಿದ್ದಕ್ಕೆ ಮೊದಲು ನಕ್ಕಿದ್ದ ಇವನು ಆಮೇಲೆ ಯಾವುದೋ ದೇವಸ್ಥಾನದಿಂದ ತಾಯತ ತಂದು ಕಟ್ಟಿದ್ದಾನೆ. ತಾಯತ ಕಟ್ಟಿದ ಎರಡು ದಿನ ಸುಮ್ಮನಿದ್ದ ಕಾಟ ಮತ್ತೆ ಶುರುವಾಗಿದೆ. ಇದು ನನ್ನ ಸಮಸ್ಯೆಯೋ, ಮನೆಯ ಸಮಸ್ಯೆಯೋ ಗೊತ್ತಾಗುತ್ತಿಲ್ಲ. ಮಾತು ಕೇಳಿಸಿಕೊಳ್ಳಲು ಮನೆಯಲ್ಲೊಂದು ಜೀವವಿಲ್ಲ. ಮಾತನಾಡದೆ ಮೂಕಿಯಾಗುತ್ತಿದ್ದೇನೆ ನಾನು.

ಆದದ್ದಾಗಲಿ ಅತ್ತೆಯ ಜತೆಗೆ ಹೊಂದಿಕೊಂಡು ಹೋಗುವುದೇ ಸರಿ. ಮುಖ ತಿರುವಿದರೆ ಏನಾಯಿತು, ಗೊಣಗಿದರೆ ಏನಾಯಿತು. ಚಿಕ್ಕಮ್ಮನ ಹಿಂಸೆಯನ್ನು ಸಹಿಸಿದವಳಿಗೆ ಇವರೊಂದಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆಯೇ. ಜಗಳವಾಡಿಕೊಂಡಾದರೂ ಅವರ ಜತೆಗಿರುವುದೇ ಸರಿ. ‘ಅಮ್ಮನನ್ನ ನುಂಗಿಕೊಂಡವಳು’ ಅನ್ನುತ್ತಿದ್ದವರು ಈಗ ‘ಅಮ್ಮನಿಂದ ಮಗನನ್ನ ಕಿತ್ತುಕೊಂಡವಳು’ ಅನ್ನುವ ಮುಂಚೆ ಈ ಮನೆ ಖಾಲಿ ಮಾಡಿ ಅತ್ತೆ ಮನೆಗೆ ಹೋಗಬೇಕು. ಆದಷ್ಟು ಬೇಗ ಈ ಕೆಲಸ ಬಿಟ್ಟು ಬೇರೆ ಕೆಲಸ ನೋಡಿಕೊಳ್ಳಬೇಕು. ಅನಿವಾರ್ಯ ಎಂದಾದರೆ ಕೆಲಸ ಬಿಟ್ಟು ಮನೆಯಲ್ಲೇ ಇದ್ದರೂ ನಡೆದೀತು. ಇವನು ಸೌದಿಗೆ ಹೋಗುವುದೇನೂ ಬೇಡ. ಬಂದಿದ್ದರಲ್ಲಿ ಹೇಗೋ ಸಂಸಾರ ನಡೆಯುತ್ತದೆ. ಇವನು ಬರಲಿ ಇಂದೇ ಇದನ್ನೆಲ್ಲಾ ಹೇಳಿಬಿಡಬೇಕು.

ಸಂಬಂಧ ಹಳಸಿಹೋಗುವ ಮೊದಲು ಸರಿ ಮಾಡಿಕೊಳ್ಳಬೇಕು
*

ಅಮ್ಮ
ಹೇಳಬಹುದಿತ್ತು, ಆದರೆ ಇನ್ನೂ ಸಣ್ಣ ಹುಡುಗಿ. ಅತ್ತೆಯಿಂದ ಬೈಯಿಸಿಕೊಳ್ಳುವವರ ಕಾಲ ಇದಲ್ಲ. ತಪ್ಪುಮಾಡಿದಾಗ ಸಣ್ಣಗೆ ಕೊಂಕಿದರೂ ಗಂಡನ ಕಿವಿ ಕಚ್ಚುವ ಸೊಸೆಯರ ಕಾಲ ಇದು. ನಾನೇನು ಅವಳನ್ನು ಬೈಯಲಿಲ್ಲ, ಹಿಂಸಿಸಲಿಲ್ಲ. ನೇರಾ ನೇರಾ ಹೇಳಿದರೆ ಎಲ್ಲಿ ನೊಂದುಕೊಳ್ಳುತ್ತಾಳೋ ಎಂದು ಸುಮ್ಮನಾಗುತ್ತಿದ್ದೆ. ಅವಳೂ ಹೊಂದಿಕೊಂಡು ಹೋಗಬೇಕಲ್ಲ.

ಮನೆ ಎಂದ ಮೇಲೆ ಇದೆಲ್ಲಾ ಇದ್ದಿದ್ದೇ. ಇಪ್ಪತ್ತು ವರ್ಷ ಅಗರಬತ್ತಿ ಫ್ಯಾಕ್ಟರಿಯನ್ನೇ ಆಫೀಸ್‌– ಮನೆ ಮಾಡಿಕೊಂಡಿದ್ದ ನನಗೂ ಈ ಮನೆಗೆ, ಮಗ ಸೊಸೆಗೆ ಹೊಂದಿಕೊಳ್ಳಲು ಸಮಯಬೇಕಿತ್ತು. ನಾನೂ ಈ ಹೊಂದಿಕೊಳ್ಳುವ ಬದುಕಿಗೆ ಹೊಸಬಳೇ. ಸೊಸೆಯಾಗಿ ಈ ಮನೆಗೆ ಅವಳೆಷ್ಟು ಅಪರಿಚಿತಳೋ, ಸೊಸೆಗೆ ಅತ್ತೆಯಾಗಿ, ಬೆಳೆದ ಮಗನಿಗೆ ತಾಯಿಯಾಗಿ ನಾನೂ ಈ ಮನೆಗೆ ಅಷ್ಟೇ ಅಪರಿಚಿತಳು. ಎಲ್ಲರೂ ಮನಸ್ಸು ಬಿಚ್ಚಿ ಮಾತನಾಡಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು. ಇಷ್ಟಕ್ಕೇ ಬೇರೆ ಮನೆ ಮಾಡಿಕೊಂಡು ಹೋಗೋದು ಮಗ ಸೊಸೆಗೆ ಸರಿ ಕಂಡಿತೇ. ಮನೆ ಬಿಟ್ಟು ಹೋಗು ಎಂದೆ ನಿಜ. ಆದರೆ, ಸಿಟ್ಟಿನಲ್ಲಿ ಒಂದು ಮಾತು ಅನ್ನುವ ಯೋಗ್ಯತೆಯೂ ನನಗೆ ಇಲ್ಲವೇ? ಅದನ್ನೇ ಪಟ್ಟು ಮಾಡಿಕೊಂಡು ಮನೆ ಬಿಟ್ಟು ಹೊರಟೇ ಹೋದರು.

ಕಷ್ಟಗಳು ಬಂದರೆ ಒಟ್ಟೊಟ್ಟಿಗೇ ಬರುತ್ತವೆ. ಗಂಡನನ್ನು ಕಳೆದುಕೊಂಡೆ. ಹಿಂದೆಯೇ ಮಕ್ಕಳನ್ನೂ ಕಳೆದುಕೊಳ್ಳಬೇಕಾಯಿತು. ಕಷ್ಟಕಾಲದಲ್ಲಿ ಅವರಿಬ್ಬರಿಗೂ ಊಟ, ಬಟ್ಟೆ, ಓದು ಕೊಡಿಸುವಷ್ಟು ದುಡಿಮೆ ನನಗೆ ಇರಲಿಲ್ಲ. ಆದರೆ, ನನ್ನ ದುಡಿಮೆಯೂ ಒಂದು ಹಂತಕ್ಕೆ ಬಂದಾಗ ಮಕ್ಕಳನ್ನು ಕಳಿಸಿಕೊಡಲು ಅತ್ತೆ ತಯಾರಿರಲಿಲ್ಲ. ಪ್ರತಿ ಸಲ ಅತ್ತೆ ಮನೆಗೆ ಮಕ್ಕಳನ್ನು ನೋಡಲು ಹೋದಾಗಲೆಲ್ಲಾ ಇದೇ ವಿಷಯಕ್ಕೆ ಅತ್ತೆಯೊಂದಿಗೆ ಜಗಳವಾಗುತ್ತಿತ್ತು. ಕಷ್ಟಕಾಲದಲ್ಲಿ ಮಕ್ಕಳನ್ನು ನೋಡಿಕೊಂಡ ಅವರ ಇಷ್ಟಕ್ಕೆ ವಿರುದ್ಧವಾಗಿ ಮಕ್ಕಳನ್ನು ದೂಡಿಕೊಂಡು ಬರಲು ನನಗೂ ಮನಸ್ಸಾಗಲಿಲ್ಲ. ಮಕ್ಕಳಿದ್ದೂ ನಾನು ಬಂಜೆಯಾಗಿದ್ದೆ.

ಮದುವೆಗೆ ಸಿಂಗಾರಗೊಂಡಿದ್ದ ಮಗಳ ಒಡಲೊಳಗೆ ಜ್ವಾಲಾಮುಖಿಯೊಂದು ತಣ್ಣಗೆ ಅಡಗಿಕೊಂಡಿದ್ದು, ಅದು ಸ್ಫೋಟಗೊಂಡು ನನ್ನನ್ನು ಸುಟ್ಟಿದ್ದು ಸುಳ್ಳಲ್ಲ. ಅವಳು ಹೇಳಿದ್ದು ಸರಿ. ನಾನು ಮಕ್ಕಳನ್ನು ಸಾಕಲಿಲ್ಲ. ಜವಾಬ್ದಾರಿ ನಿಭಾಯಿಸಲಿಲ್ಲ. ಆದರೆ, ಸಂದರ್ಭ ನನ್ನನ್ನು ಕಟ್ಟಿ ಹಾಕಿತ್ತು. ಜನ ಗಂಡನನ್ನು ಕಳೆದುಕೊಂಡವಳು ಅನ್ನುವ ಆ ನೋವೇ ಸಾಕಾಗಿತ್ತು. ಆದರೆ, ಅಗರಬತ್ತಿ ಫ್ಯಾಕ್ಟರಿ ಮಾಲೀಕನನ್ನೇ ಇಟ್ಟುಕೊಂಡಿದ್ದಾಳೆ ಎಂದರು. ಹೋಗುವುದಿದ್ದರೆ ಯಾವತ್ತೋ ಹೋಗಬಹುದಿತ್ತು. ಒಮ್ಮೆ ನೇಣಿನ ಕುಣಿಕೆ ಬಿಗಿದುಕೊಂಡಿದ್ದವಳು ಮಕ್ಕಳ ನೆನಪಾಗಿ ಸಾಯುವ ಆಸೆ ಬಿಟ್ಟಿದೆ. ಮಕ್ಕಳು ಇದ್ದಾರೆ. ನನ್ನ ಮಕ್ಕಳು ಇದ್ದಾರೆ. ಎಲ್ಲೋ ಒಟ್ಟಿನಲ್ಲಿ ಇದ್ದಾರೆ. ಅವರಿಗಾಗಿಯಾದರೂ ನಾನು ಬದುಕಬೇಕು. ಅವರ ಏಳ್ಗೆಯನ್ನು ಕಾಣಬೇಕು. ಸತ್ತು ಸಾಧಿಸುವುದರಲ್ಲೇನಿದೆ. ಜನ ಹೇಗಿದ್ದರೂ ಅಂದುಕೊಳ್ಳುತ್ತಾರೆ, ಬೆಂಕಿ ಹೊಕ್ಕು ಬಂದ ಜಾನಕಿಯನ್ನೂ ಬಿಡಲಿಲ್ಲ.

ಮಗ ಬೇರೆ ಮನೆ ಮಾಡುತ್ತೇನೆ ಎಂದಾಗ ಕರುಳು ಕತ್ತರಿಸಿದಷ್ಟು ನೋವಾಗಿದ್ದು ನಿಜ. ಮದುವೆಯಾದ ಮೇಲೆ ಮೂರು ವಾರವೂ ನನ್ನ ಜೊತೆಗಿರದೆ ಮಗ– ಸೊಸೆ ಈ ಮನೆಯಿಂದ ದೂರಾದರೆ ಅದನ್ನು ಗೆಲುವೆಂದು ಸಂಭ್ರಮಿಸುವಷ್ಟು ಕ್ರೂರಿಯಲ್ಲ ನಾನು. ಇದ್ದ ಇಬ್ಬರು ಮಕ್ಕಳನ್ನು ದೂರ ಮಾಡಿಕೊಂಡು ಅಗರಬತ್ತಿ ಫ್ಯಾಕ್ಟರಿಯನ್ನೇ ಬದುಕಾಗಿಸಿಕೊಂಡಿದ್ದ ನನಗೆ ಮಗನ ಮದುವೆ, ಮನೆಗೆ ಬಂದ ಸೊಸೆ ಹೊಸ ಬದುಕಿನ ಅಧ್ಯಾಯದಂತೆ ಕಂಡಿದ್ದರು.

ಆದರೆ, ಸಂಭ್ರಮ ಹೆಚ್ಚು ದಿನ ನಿಲ್ಲಲಿಲ್ಲ. ಮಗಳು ಹೇಳಿದಂತೆ ನಾನು ನನ್ನ ಜವಾಬ್ದಾರಿ ನಿಭಾಯಿಸಲಿಲ್ಲ. ಗಂಡ ಸತ್ತ ಮೇಲೆ ಮಕ್ಕಳನ್ನ ಗಂಡನ ಅಮ್ಮನ ಮನೆಗೆ ಸೇರಿಸಿದೆ. ಇಬ್ಬರು ಮಕ್ಕಳನ್ನು ಚೆನ್ನಾಗಿ ಸಾಕುವ ಶಕ್ತಿ ನನಗೆ ಇರಲಿಲ್ಲ ನಿಜ. ಅಜ್ಜಿ ಮನೆಯಲ್ಲಿ ಬೆಳೆದ ಮಕ್ಕಳೇನೂ ಅಪಾಪೋಲಿಗಳಾಗಲಿಲ್ಲ. ಆದರೆ, ಅಪ್ಪ– ಅಮ್ಮನ ಪ್ರೀತಿ ಅವರಿಗೆ ಸಿಗಲಿಲ್ಲ. ಹೀಗಾಗಿಯೇ ನಿರ್ಧಾರಗಳ ಹಿಂದೆ ಆಲೋಚನೆ ಕಡಿಮೆ.

‘ನೀನು ಅವಳು ಮಾತೇ ಆಡಲ್ವಂತೆ. ನಿಮಗೆ ಹೊಂದಿಕೆ ಆಗಲ್ಲ. ನೀನು ಈ ಮನೇಲಿ ಇರು, ನಾನು ಅವಳು ಬೇರೆ ಮನೇಲಿ ಇರ್ತೇವೆ. ಈ ಮನೆಯ ಖರ್ಚೆಲ್ಲಾ ನಾನೇ ನೋಡ್ಕೋತೀನಿ. ನೀನು ಮತ್ತೆ ಆ ಫ್ಯಾಕ್ಟರಿಗೆ ಹೋಗೋದು ಬೇಡ’
ತೀರ್ಪು ಓದಿ ಮುಗಿಸಿದವನಂತೆ ಮಾತನಾಡಿದ ಮಗನಿಗೆ ಅಮ್ಮನನ್ನು ಒಂದು ಮಾತು ಕೇಳಬೇಕು ಎನ್ನುವ ಸೌಜನ್ಯವೂ ಉಳಿದಿರಲಿಲ್ಲ. ನಾನೂ ಮಾತಾಡಲಿಲ್ಲ. ಎಲ್ಲರ ಮನೆಯಲ್ಲೂ ಬರಬಹುದಾದ, ನಮ್ಮ ಮನೆಯಲ್ಲೂ ಬರಬಹುದಾಗಿದ್ದ ಸಂದರ್ಭ ಇದು ಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೆ, ನಿಭಾಯಿಸಲಿಲ್ಲ. ನಾವು ಯಾರೂ ಈ ಸಂದರ್ಭವನ್ನು ನಿಭಾಯಿಸಲಿಲ್ಲ. ಬದುಕಲ್ಲಿ ಸಹಿಸಿಕೊಳ್ಳುವುದೂ ಮುಖ್ಯ ಎಂದು ಈಗ ಅನ್ನಿಸುತ್ತಿದೆ.

ಹೊಸ ಮನೆಗೆ ಹೊರಡುವ ಸಡಗರದಲ್ಲಿ ‘ಹೋಗಿ ಬರ್ತೀನಿ’ ಎಂದು ಶಾಸ್ತ್ರಕ್ಕಾದರೂ ಮಾತಾಡಲಿಲ್ಲ ಸೊಸೆ. ಹೊಸ ಮನೆಗೆ ಹೋದ ಮೇಲೂ ಸತ್ತೆಯಾ ಬದುಕಿದೆಯಾ ಎಂದು ಒಂದು ಫೋನ್‌ ಕೂಡಾ ಮಾಡಿಲ್ಲ ಅವಳು. ಅವಳೇಕೆ, ಮದುವೆಯಾಗಿ ಇಷ್ಟು ವರ್ಷವಾದರೂ ಮಗಳೇ ಫೋನ್‌ ಮಾಡಿ ಮಾತಾಡಿಲ್ಲ. ಒಂದು ಸಲವೂ ನನ್ನನ್ನು ನೋಡಲು ಬರಲಿಲ್ಲ. ಒಂದು ಸಲವೂ ‘ಮನೆಗೆ ಬಾ’ ಎಂದು ಕರೆದಿಲ್ಲ. ಮಕ್ಕಳನ್ನ ನಾನು ಚೆನ್ನಾಗಿ ನೋಡಿಕೊಂಡಿದ್ದರೆ ಅವರೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದರೋ ಏನೋ. ಮತ್ತೆ ಫ್ಯಾಕ್ಟರಿಗೆ ಹೋಗೋದು ಬೇಡ, ಈ ಮನೆ ಖರ್ಚು ನಾನೇ ನೋಡ್ಕೋತೀನಿ ಎಂದ ಮಗನೇ ಇದ್ದಿದ್ದರಲ್ಲಿ ಮುಕ್ಕಾಲು ಪಾಲು ಉತ್ತಮ. ಸದ್ಯ ‘ನಿನ್ನ ದಾರಿ ನಿನಗೆ, ನಮ್ಮ ದಾರಿ ನಮಗೆ’ ಎನ್ನಲಿಲ್ಲ ಪುಣ್ಯಾತ್ಮ.

ಸೇಲ್ಸ್‌ಮನ್‌ ಆಗಿದ್ದ ಇವರಪ್ಪನಿಗೆ ಆಗ ಒಳ್ಳೆಯ ದುಡಿಮೆ ಇತ್ತು. ಉಳಿತಾಯವೂ ಇತ್ತು. ಮನಸ್ಸು ಮಾಡಿದ್ದರೆ ನಾವಿದ್ದ ಬಾಡಿಗೆ ಮನೆಯನ್ನೇ ಕೊಂಡುಕೊಳ್ಳಬಹುದಿತ್ತು. ಅದರ ಮಾಲೀಕರೂ ಖರೀದಿ ವ್ಯವಹಾರಕ್ಕೆ ಸಡಿಲ ಇದ್ದರು. ಆದರೆ ಇವರು ಮನಸ್ಸು ಮಾಡಲಿಲ್ಲ. ದುಡಿಮೆಯ ಜತೆಗೆ ಕುಡಿತದ ಪಾಲೂ ಕೂಡಿಕೊಂಡಿತು. ದಿನಗಳು ಕಳೆದಂತೆ ದುಡಿಮೆ ಕಡಿಮೆಯಾಗಿ ಕುಡಿತ ಹೆಚ್ಚಾಯಿತು. ಅವರ ಕುಡಿತ ನಮ್ಮ ಬದುಕನ್ನು ಬೀದಿಯ ಅಂಚಿಗೆ ತಂದು ನಿಲ್ಲಿಸಿತ್ತು. ನಾವು ಬೀದಿಗೆ ಬೀಳುವ ಮುಂಚೆಯೇ ಅವರು ಇಲ್ಲವಾದರು.

ಗಂಡ ಇದ್ದ ಕಾಲದಲ್ಲಿಯೂ ನೆಮ್ಮದಿ ಇರಲಿಲ್ಲ. ಅವರು ಹೋದ ಮೇಲೆ ಅಗರ ಬತ್ತಿ ಫ್ಯಾಕ್ಟರಿಯೇ ಎಲ್ಲವೂ ಆಗಿತ್ತು. ಅದು ಬರೀ ಫ್ಯಾಕ್ಟರಿ ಅಲ್ಲ, ನನ್ನಂಥ ಅದೆಷ್ಟೋ ಜನರಿಗೆ ನೀರು ನೆರಳು ಕೊಟ್ಟ ಆಲದ ಮರ. ಅದೊಂದು ಇರದೇ ಇದ್ದಿದ್ದರೆ ನಾನು ಬೀದಿಗೆ ಬೀಳಬೇಕಿತ್ತು. ಗಂಡ ಸತ್ತ ಮೇಲೆ ನನ್ನ ಮಕ್ಕಳನ್ನ ಮಡಿಲಿಗೆ ಹಾಕಿಕೊಂಡ ಅತ್ತೆಗೆ ಸೊಸೆಯನ್ನ ಸಾಕುವಷ್ಟು ಕರುಣೆ ಇರಲಿಲ್ಲ. ಗಂಡ ಸತ್ತು ನಿರ್ಗತಿಕಳಾಗಿದ್ದ ನನ್ನನ್ನು ತವರು ಮನೆಯೂ ಸಲಹಲಿಲ್ಲ. ‘ನಮ್ಮ ಜೊತೆಗೇ ಬಂದು ಇರು’ ಎಂದು ಅತ್ತೆಯೂ ಒಂದು ಮಾತು ಹೇಳಲಿಲ್ಲ. ನನ್ನ ಕಂದಮ್ಮಗಳನ್ನು ಅವರು ನಡು ನೀರಲ್ಲಿ ಬಿಡಲಿಲ್ಲ ಎನ್ನುವುದಷ್ಟೇ ಸಮಾಧಾನ. ಮಕ್ಕಳೂ ಅವರವರ ದಾರಿ ನೋಡಿಕೊಂಡರು. ಹೇಗೋ ಅವರ ಬದುಕು ಹಸನಾಗಿ ನಡೆಯಲಿ. ನನ್ನ ಹಣೆಬರಹಕ್ಕೆ ಸೊಸೆ, ಮಗ, ಮಗಳು, ಅತ್ತೆಯನ್ನು ದೂಷಿಸುವುದು ಎಷ್ಟು ಮಾತ್ರ ಸರಿ? ಇದು ನನ್ನ ಹಣೆಬರಹದಲ್ಲಿ ಇದ್ದಿದ್ದು. ಬರೆದಿದ್ದು ತೀರಲೇ ಬೇಕು, ವಿಧಿಯಿಲ್ಲ.

ನಾನೇ ಸೋಲಬಹುದಿತ್ತು. ಸೊಸೆ ಹೇಳಿದ ಮಾತಿಗೆ, ಅವಳು ನಡೆದ ನಡೆಗೆ ಹೊಂದಿಕೊಂಡು ಹೋಗಬಹುದಿತ್ತು. ಆದರೆ, ನನ್ನ ಮನಸ್ಸು ಬೇರೆಯದೇ ದಾರಿ ಬಯಸುತ್ತಿದೆ. ಇದು ಬರಿಯ ಹೊಂದಿಕೊಳ್ಳುವುದರ ಸಮಸ್ಯೆಯಲ್ಲ. ಬದುಕಿನ ಸಮಸ್ಯೆ. ನಮ್ಮ ನಮ್ಮ ಬದುಕಿನ ಸಮಸ್ಯೆ. ಸೊಸೆಗಷ್ಟೇ ಅಲ್ಲ, ನಾನೀಗ ಮಗನಿಗೂ ಬೇಡವಾಗಿದ್ದೇನೆ. ಒಟ್ಟಿಗಿದ್ದು ಒಬ್ಬರಿಗೊಬ್ಬರು ಹಿಂಸೆಯಾಗುವುದಕ್ಕಿಂತ ದೂರವಿದ್ದು ಒಂಟಿಯಾಗಿ ನೋವು ತಿನ್ನುವುದೇ ಲೇಸು. ಹಿಂದಿನಿಂದಲೂ ಒಂಟಿಯಾಗಿದ್ದೆ, ಈಗಲೂ ಒಂಟಿಯಾಗಿರುತ್ತೇನೆ ಅಷ್ಟೆ.

ಎರಡೂ ಮನೆ ನಿಭಾಯಿಸುವುದು ಮಗನಿಗೂ ಹೊರೆಯೇ. ಇರುವ ಒಬ್ಬಳಿಗಾಗಿ ಇಷ್ಟು ದೊಡ್ಡ ಮನೆ ಯಾಕೆ. ಮಗ ಸೊಸೆ ಜತೆಗೆ, ಮುಂದೆ ಬರುವ ಮೊಮ್ಮಕ್ಕಳ ಜತೆಗೆ ಉಳಿದ ಕಾಲ ದೂಡಬಹುದು ಎಂದು ಕನಸಿದ್ದೇ ಬಂತು. ಅದೇನೂ ಈಗ ಆಗುವ ಹೋಗುವ ಮಾತಲ್ಲ. ಮಗ ಸೊಸೆ ಚೆನ್ನಾಗಿರಲಿ. ಅವರ ಅನ್ನದ ಮಧ್ಯೆ ನಾನು ಹುಳುವಾಗುವುದು ಯಾತಕ್ಕೆ. ಮಕ್ಕಳ ಬಾಳಲ್ಲಿ ನಾನು ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ. ಮಧ್ಯದ ಈ ಒಂದಷ್ಟು ದಿನ ಕನಸಿನ ಹಾಗೆ, ಅಷ್ಟೆ. ಸಮಾಧಾನದಿಂದ ಹೇಳಿ ಈ ಮನೆ ಖಾಲಿ ಮಾಡಿಸಲು ಮಗನನ್ನು ಒಪ್ಪಿಸಬೇಕು. ಮುಂದೆ ಹೇಗೂ ಅಗರಬತ್ತಿ ಫ್ಯಾಕ್ಟರಿ ಇದೆ. ಮತ್ತೆ ಅಲ್ಲಿಗೆ ಹೋಗಿ ‘ಹೀಗೀಗೆ’ಎಂದರೆ ‘ಆಗದು’ ಎನ್ನುವಷ್ಟು ಕಠಿಣ ಮನಸ್ಸಿನವರಲ್ಲ ಮಾಲೀಕರು. ಹೇಗೋ ಇದ್ದಷ್ಟು ದಿನ ಅಲ್ಲಿ ಕಾಲ ಮಾಡಿ, ಕೊನೆಗಾಲಕ್ಕೆ ಯಾವುದಾದರೂ ಆಶ್ರಮ ಸೇರಿಕೊಂಡರಾಯಿತು. ಬದುಕು ಹೀಗೇ ಹೇಗೋ ನಡೆಯುತ್ತದೆ.

ಇಷ್ಟಕ್ಕೂ ಬದುಕೇನೂ ನಿಂತ ನೀರಲ್ಲವಲ್ಲ.

ಚಿತ್ರ- ಮದನ್ ಸಿ.ಪಿ

15 comments to “ದಯಾನಂದ ಬರೆದ ಕತೆ ’ಹಿತ’”
  1. ಸೊಸೆ ಹೇಳಿಕೊಳ್ಳುವ ಹಾಗೆ, ಎಲ್ಲರೂ ಮನಸ್ಸು ಬಿಚ್ಚಿ ಮಾತನಾಡಿದ್ದರೆ ಎಲ್ಲವೂ ಸರಿ ಹೋಗುತ್ತಿತ್ತೇನೋ. ಆದರೆ ಅವರ ನಿರ್ಧಾರಗಳು ಮೂರು ದಾರಿ ಹಿಡಿದಿವೆ

  2. ಒಳ್ಳೆಯ ಕತೆ ದಯಾನಂದ. ತುಂಬಾ ಚನ್ನಾಗಿದೆ. ವಾಸ್ತವಕ್ಕೆ ಹೆಚ್ಚು ಹತ್ತಿರವಿದೆ.

    • ಕಥೆ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಫೆಬ್ರುವರಿ 12ಕ್ಕೆ ಪುಸ್ತಕ ಬಿಡುಗಡೆಯಾಗಲಿದೆ. ದಯವಿಟ್ಟು ನನ್ನ ಇತರೆ ಕಥೆಗಳನ್ನೂ ಓದಿ, ಪ್ರತಿಕ್ರಿಯೆ ಬರೆಯಿರಿ.

  3. ಕತೆಯ ಬಂಧ ಚೆನ್ನಾಗಿದೆ…! ಖಾಸನೀಸ್ ರವರ ‘ತಬ್ಬಲಿಗಳು’ ನೆನಪಾಯಿತು…!..congratulations ..!

  4. ಪ್ರಸ್ತುತ ಕಮ್ಯೂನಿಕೇಶನ್ ಗ್ಯಾಪ್ ನಿಂದ ಇಂತಹ ಅದೇಷ್ಟೋ ಕುಟುಂಬಗಳು ದೂರವಾಗುತ್ತಿವೆ…
    ತುಂಬಾ ಚೆನ್ನಾಗಿದೆ ಸರ್……….

  5. ಕಥೆ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಫೆಬ್ರುವರಿ 12ಕ್ಕೆ ಪುಸ್ತಕ ಬಿಡುಗಡೆಯಾಗಲಿದೆ. ದಯವಿಟ್ಟು ನನ್ನ ಇತರೆ ಕಥೆಗಳನ್ನೂ ಓದಿ, ಪ್ರತಿಕ್ರಿಯೆ ಬರೆಯಿರಿ.

ಪ್ರತಿಕ್ರಿಯಿಸಿ