ನಿಷ್ಠುರತೆಯ ನೋಂಪು ಜಿ.ರಾಜಶೇಖರ್ ೭೦: ವೈದೇಹಿ ಕಣ್ಣಲ್ಲಿ ಜಿ. ರಾಜಶೇಖರ್- ಈತನಿಗೆ ಎಪ್ಪತ್ತೇ!

ರಾಜಶೇಖರ ಅವರನ್ನು ನಾನು ಕಂಡದ್ದು 1982ನೆ ಇಸವಿಯಲ್ಲಿ. ಮಣಿಪಾಲದ ಗೋಲ್ಡನ್ ಜುಬಿಲಿ ಹಾಲ್‍ನ ಎದುರು ಅಂಗಳದಲ್ಲಿ. ಅವತ್ತೊಂದು ಕಾರ್ಯಕ್ರಮವಿತ್ತು. ಅದು ಮುಗಿದ ಬಳಿಕ ಎಲ್ಲ ಚದುರುತ್ತಿರುವಾಗ. ಆ ವರೆಗೆ ನಾನು ಅವರ ಹೆಸರನ್ನು ಮಾತ್ರ ಕೇಳಿದ್ದೆ. ವ್ಯಕ್ತಿಯನ್ನು ನೊಡುವುದಕ್ಕಿಂತ ಮೊದಲೇ ಹೆಸರು ಕೇಳಿಬರುವ ಹೆಸರಾಂತ ಮುಖ್ಯರಲ್ಲಿ ಅವರೂ ಒಬ್ಬರು. ಈಗಾದರೂ ಅಷ್ಟೆ, ಸುಲಭದಲ್ಲಿ ಅವರು ಕಾಣಸಿಗುವವರಲ್ಲ. ಯಾವ ಸಾಹಿತ್ಯ ಸಮ್ಮೇಳನಕ್ಕಾಗಲೀ ಸಂಭ್ರಮಕ್ಕಾಗಲೀ ಒಂದಲ್ಲ ಒಂದು ಕಡೆ ನಡೆಯುತ್ತಲೇ ಇರುವ ಚರ್ಚಾಗೋಷ್ಟಿ ಸಂಕಿರಣಕ್ಕಾಗಲೀ ಅವರು ಹೆಚ್ಚು ಹಾಜರಿರುವುದಿಲ್ಲ್ಲವಾಗಿ, ಹೀಗೆ. ಎಂದರೆ ಆ ಬಗ್ಗೆ ಅವರಿಗೆ ತಾತ್ಸಾರ ಅಂತಲ್ಲ. ಹುಡಿ ಭಾಷಣ, ತೋರಿಕೆಯ ಪ್ರಶಂಸೆಗಳು, ಸುಂಟರಗಾಳಿಯಂಥ ‘ಸುಮ್ಮನೆ’ ಸಮಾರಂಭಗಳು ಅವರಿಗೆ ಬೇಡ ಬಹುಶಃ, ದಾಕ್ಷ್ಷಿಣ್ಯಕ್ಕಾದರೂ ಬೇಡವೇ. ಆದ್ದರಿಂದ ದೂರ, ಅಷ್ಟೆ. ಅವರ ಮನೋಭಾವವೇ ವಿಶಿಷ್ಟ; ಸಮಾಜದ ಆಳ ವಿದ್ಯಮಾನದ ಚಿಂತನೆಯಲ್ಲಿ ನಿತ್ಯ ನಿರಂತರ ತಂಗಿರುವುದು ಅವರ ಜಾಯಮಾನ. ಮನುಷ್ಯ ಲೋಕದ ಕ್ರೌರ್ಯವೆಂದೇ ಕಾಣದ ಅನೇಕ ಕಾಳಕ್ರೌರ್ಯಗಳನ್ನು ಅವರು ಕಾಣಬಲ್ಲರು. ಕಾರಣ ಅವರು ಬೆಳೆದು ಬಂದ ದಾರಿಯಲ್ಲೇ ಸಿಕ್ಕ ಅನೇಕ ಘಟನೆಗಳಿಂದ ಚಿತ್ರಗಳಿಂದ ಗಾಢ ಓದಿನಿಂದ ಅವರು ಕಣ್ಣಾರೆ ಕಂಡು ಅನುಭವಿಸಿ ಗ್ರಹಿಸಿ ಪಡೆದ ಕಣ್ಣು.

ಸ್ವಭಾವತಃ ಗಂಭೀರ ವ್ಯಕ್ತಿ ಅವರು, ನಗೆ ಕಡಿಮೆ. ನಕ್ಕರೆ ಮುಖತುಂಬ ನಗೆಯೇ. ಆ ನಗೆಗೇ ಒಂದು ಹೆಮ್ಮೆ ಮೂಡುವಂತೆ.

ಅವರೊಡನೆ ಸೀದ ಹೋಗಿ ಮಾತಾಡಲು ತುಸು ಭಯ ಎನ್ನುವವರಿದ್ದಾರೆ. ಆದರೆ ಹಾಗೆ ಅನಿಸುವುದು ಮಾತ್ರ. ಹೋಗಿ ಮಾತಾಡಿದರೆ ಅವರು ಸುಭಾಷಿ. ಆದರೆ ಮಾತಿನಲ್ಲಿ ಅಧಿಕಪ್ರಸಂಗ ಏನಾದರೂ ಕಂಡಿತೇ, ಅಲ್ಲಿಯೇ ತನ್ನ ಸ್ಪಷ್ಟ ನುಡಿಯಲ್ಲಿ ಖಂಡಿಸುವುದು ಅವರ ಮಾತುಕತೆಯ ಒಟ್ಟು ಶೈಲಿ. ಅದು ಎದುರಿಗಿರುವವರ ಮೇಲಿನ ಸಿಟ್ಟಲ್ಲ, ಅವರ ತಪ್ಪುಮಾತಿನ ಮೇಲಿನ ಸಿಟ್ಟು, ಅದರ ಒಳ ರಾಜಕಾರಣವನ್ನು ತೆರೆದಿಡುವ ಕಾಳಜಿ. ಸಿಟ್ಟಿನಂತೆಯೇ ಕಾಣುವ ಆದರೆ ಮಾಮೂಲು ಅರ್ಥದ ಸಿಟ್ಟಲ್ಲದಿರುವವು ಎಷ್ಟಿವೆ!

ಅವರ ಮುಖ ಗಂಭೀರ ಮಾತ್ರವಲ್ಲ ಹಲವೊಮ್ಮೆ ಹುಬ್ಬುಗಂಟಿಕ್ಕಿದಂತೆ ಕಂಡರೂ ನಾನು ತಿಳಿದಂತೆ ಆತ ಕರುಣಾದ್ರ್ರ ಹೃದಯಿ. ಅನ್ಯಾಯ ನೋವು ವೇದನೆಗಳನ್ನು ಅವರಷ್ಟು ತೀವ್ರವಾಗಿ ಒಳತೆಗೆದುಕೊಳ್ಳುವವರು ಅತ್ಯಂತ ವಿರಳ. ಅದು ಅವರದೇ ಬೀದಿಯಲ್ಲಿರಲಿ, ಉಡುಪಿಯ ಊರಿನಲ್ಲಿರಲಿ, ಆಸುಪಾಸಿನಲ್ಲೇ ಇರಲಿ, ಊರು ಮೀರಿ ರಾಜ್ಯ ರಾಷ್ಟ್ರ ಲೋಕದ ಯಾವುದೇ ಮೂಲೆಯಲ್ಲಿರಲಿ, ಸುದ್ದಿ ತಿಳಿಯಿತೆಂದರೆ ತಳಮಳಿಸುವರು. ತನ್ನಿಂದ ಏನಾದೀತು, ಚಿಂತಿಸುವರು. ಆಗುವುದನ್ನು ಮಾಡಲು ಸಜ್ಜಾಗುವರು. ಒಂದು ರೀತಿಯಲ್ಲಿ ನಿರ್ಭಯ.

ಅವರ ಆ ಪುಟ್ಟ ಆಕಾರದಲ್ಲಿಯೇ ನಿರ್ಭಯತೆ ಮತ್ತು ಚಿತ್ತ ಸ್ವತಂತ್ರತೆ ಎದ್ದು ಕಾಣುವುದು. ಸೋಗು ಎಂಬುದು ಅವರ ಬಳಿ ಸುಳಿಯದು. ಪ್ರಾಮಾಣಿಕತೆಯ ಮೂರ್ತರೂಪ ತೋರಿಸಿ ಎಂದರೆ ನಿಸ್ಸಂದೇಹವಾಗಿ ರಾಜಶೇಖರ್ ಅವರನ್ನು ತೋರಿಸಬಹುದು. ಅವರ ಪ್ರಾಮಾಣಿಕತೆ ಎದ್ದು ಕಾಣುವುದು ಅವರು ತಮ್ಮ ಅಭಿಪ್ರಾಯವನ್ನು ಮಂಡಿಸುವಾಗ ಮತ್ತು ಅವರ ಚಿಂತನಾ ಕ್ರಮದಲ್ಲಿ. ಅವರನ್ನು ನಾವು ಒಪ್ಪಬಹುದು ಇಲ್ಲ, ಬಿಡಬಹುದು, ಆದರೆ ಅವರ ವಿಚಾರಮಂಡನೆ ರೀತಿ ಹೇಗಿರುತ್ತದೆಂದರೆ ನಮ್ಮೊಳಗೆ ನಮ್ಮದೇ ಅಭಿಮತವನ್ನು ಪರಾಮರ್ಶೆಗೆ ಒಡ್ಡಿಕೊಳ್ಳುವಷ್ಟು.

ಲೋಕವೇ ಗೃಹವೆಂಬಂತಿರುವ ಗೃಹಸ್ಥ ಈತ. ಅಂತರಂಗದ ತುಂಬ -ಈ ಜಗತ್ತು ಹೇಗಿರಬೇಕಿತ್ತು , ಯಾಕೆ ಹೀಗಿದೆ ಎಂಬ ಆತಂಕ, ಪ್ರಪಂಚದ ನಾನಾ ದುರಂತಗಳು, ಹೋರಾಟಗಳು, ಹೋರಾಟಗಾರರು ,ಸಂತ್ರಸ್ತ ಜನಾಂಗದ ಕತೆಗಳು. ಇಲ್ಲೇ ಆಚೆಗೆ ನಮ್ಮ ಅರಿವಿಗೇ ಬರದೆ ನಡೆದುಹೋದ, ಪತ್ರಿಕೆಗಳಲ್ಲಿ ಎಲ್ಲೋ ಮೂಲೆಯಲ್ಲಿ ಹೌದೋ ಅಲ್ಲವೋ ಎಂಬಂತೆ ಪ್ರಕಟವಾಗುವ ಅನ್ಯಾಯಗಳ ಸತ್ಯಕಥನಗಳು. ಅವರು ಸ್ವತಃ ಆಖಾಡಕ್ಕಿಳಿದು ನಡೆಸಿದ ಪ್ರತಿಭಟನೆಗಳು ಎಷ್ಟೋ, ಸಂಘಸಂಸ್ಥೆಗಳೊಂದಿಗೆ ಸೇರಿ ಉರಿಬಿಸಿಲಿನಲ್ಲಿ ನಡೆದು ಹೋದ ಜಾಥಾಗಳೆಷ್ಟೋ. ಈ ಎಡೆಯಲ್ಲಿ ಅವರು ತಮ್ಮ ಸ್ವಂತ ಜೀವನದ ಸರಸ ಕ್ಷಣಗಳ ಗೊಡವೆಯನ್ನೇ ದೂಡಿಕೊಂಡರೋ ಹೇಗೆ ಅಂತ ನನಗೆ ಸಂದೇಹ ಬಂದದ್ದಿದೆ. ತನ್ನ ಚಿಂತನ ಸತ್ಯಗಳ ಮತ್ತು ಸ್ವಂತ ಬದುಕಿನ ನಿತ್ಯಗಳ ಸಮತೋಲನದ ಮಾರ್ಗದಲ್ಲಿ ಚಡಪಡಿಸುತ್ತಿರಬಹುದೆ ಅಂತಲೂ.

ಕೆಲವೊಮ್ಮೆ ಪ್ರಕರಣಗಳನ್ನು ತುಸು ಅತಿರೇಕವಾಗಿ ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆ ಮತ್ತು ಕೊಚ್ಚಿಹೋಗುತ್ತಾರೆ ಅಂತ ನನಗನಿಸಿದ್ದಿದೆ. ಸಮಾಜದಲ್ಲಿ ನಾವು ಯಾರೂ ಮುಟ್ಟದೆಯೂ ತಂತಾನೇ ಕಾಲನ ಹೆಜ್ಜೆ ತುಳಿತಕ್ಕೆ ನುಗ್ಗಾಗಿ ಸರಿ ಹೋಗುವ ಸಂಗತಿಗಳೂ ಇವೆ. ಇದಕ್ಕೆ ಉದಾಹರಣೆಗಳೂ ಸಾಕಷ್ಟಿವೆ ಎಂಬುದನ್ನು ಅವರು ಮರೆತಿರುವರೋ ಏನುಕತೆ ಎಂತಲೂ.

ಅವರೇನು ಪ್ರೊಫೆಶನಲ್ ಚಳವಳಿಗಾರರಲ್ಲ ಎಂಬುದು ಬಹಳ ಮುಖ್ಯ. ಎಂತಲೇ ಅವರ ಸಾಹಿತ್ಯಿಕ ಭಾಷೆ ಒರಟಾಗಿಲ್ಲ. ಅವರ ಗ್ರಹಿಕೆಯ ಸೂಕ್ಷ್ಮತೆಯೂ ಮೊನಚು ಕಳಕೊಂಡಿಲ್ಲ. ಕತೆ, ಕಾದಂಬರಿ, ಕಾವ್ಯ, ನಾಟಕ ಎಲ್ಲವನ್ನೂ ಆಸ್ವಾದಿಸುವಂತಹ ಮತ್ತು ತನ್ನದೇ ರೀತಿಯಲ್ಲಿ ಪ್ರತಿಕ್ರಿಯಿಸುವಂತಹ ಮನಸ್ಸನ್ನು ಉಳಿಸಿಕೊಂಡಿರುವ ಅಪರೂಪದ ‘ವಿಮರ್ಶಕ ಮತ್ತು ಸಹೃದಯ’ ವ್ಯಕ್ತಿತ್ವದ ಮಿಶ್ರಣ ಈತ. ಯಾವ ವಿಶ್ವವಿದ್ಯಾಲಯದ ಪದವಿ ಪುರಸ್ಕಾರ ಪ್ರಶಸ್ತಿ ಮುಂತಾದ ಗರಿಮುರಿ ಇಲ್ಲದೆಯೂ ಜನಮನದಲ್ಲಿ ನೆಲೆಸಿರುವವರು.

ಇಷ್ಟಾಗಿಯೂ ಕೆಲವೊಮ್ಮೆ ಪ್ರಕರಣಗಳನ್ನು ತುಸು ಅತಿರೇಕವಾಗಿ ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆ ಮತ್ತು ಕೊಚ್ಚಿಹೋಗುತ್ತಾರೆ ಅಂತ ನನಗನಿಸಿದ್ದಿದೆ. ಸಮಾಜದಲ್ಲಿ ನಾವು ಯಾರೂ ಮುಟ್ಟದೆಯೂ ತಂತಾನೇ ಕಾಲನ ಹೆಜ್ಜೆ ತುಳಿತಕ್ಕೆ ನುಗ್ಗಾಗಿ ಸರಿ ಹೋಗುವ ಸಂಗತಿಗಳೂ ಇವೆ. ಇದಕ್ಕೆ ಉದಾಹರಣೆಗಳೂ ಸಾಕಷ್ಟಿವೆ ಎಂಬುದನ್ನು ಅವರು ಮರೆತಿರುವರೋ ಏನುಕತೆ ಎಂತಲೂ. ಅವರ ಧ್ವನಿಯಲ್ಲಿ ಅನುನಯಕ್ಕಿಂತ ಹೆಚ್ಚು ಕೆರಳುಛಾಯೆ ಕಂಡು ಅಚ್ಚರಿ ಪಟ್ಟದ್ದು ಇದೆ. ಇದೆಲ್ಲವೂ ಒಬ್ಬ ಕ್ರಿಯಾಶೀಲ ಹೋರಾಟಗಾರನ ಕುರಿತಷ್ಟೇ ಅಲ್ಲ, ಒಟ್ಟಿಗೇ ಬದುಕುವ ನಮ್ಮ ಬಂಧು ಬಾಂಧವರ, ಆಪ್ತರ ಪರಿಚಿತರ ಬಗ್ಗೆ ಸಾಮಾನ್ಯವಾಗಿ ಅಗತ್ಯವೋ ಅನಗತ್ಯವೋ (ನನ್ನ ಬಗ್ಗೆಯೂ ಸುತ್ತ ಮುತ್ತಲಿನ ಮನಸ್ಸುಗಳು ತಮ್ಮ ನೇರಕ್ಕೆ ಏನೇನೋ ಅಂದುಕೊಳ್ಳುತ್ತವೆ ಎಂಬ ಪರಿಜ್ಞಾನದೊಂದಿಗೇ) ಗೌರವಪೂರ್ವಕವಾಗಿಯೇ ಹುಟ್ಟುವ ಕ್ಷಮಾರ್ಹ ಅನಿಸಿಕೆಗಳೇ ಆದ್ದರಿಂದ ಇಲ್ಲಿ ಹೇಳಿದೆ.

ನನಗೆ ಎಪ್ಪತ್ತು ಆದಾಗ ಓ, ಮುಗಿಯುತ್ತ ಬಂತು ಎಂಬ ಕಲ್ಪನೆಯಲ್ಲಿ ಒಂದು ಬಗೆಯ ಸಂತೋಷ ಆಗಿತ್ತು. ಅವತ್ತಿಡೀ ಖುಶೀಯಲಿದ್ದೆ. ಆದರೆ ರಾಜಶೇಖರ್ ಅವರಿಗೆ ವರ್ಷ ಎಪ್ಪತ್ತು ತುಂಬಿತು ಎಂದು ಕೇಳಿದಾಗ ಯಾಕೋ ಕಳವಳಗೊಂಡೆ. ಇಷ್ಟು ಬೇಗವೆ! ಯಾಕಾಯಿತು? ಎಪ್ಪತ್ತು ಆಗಬಾರದಿತ್ತಲ್ಲ, ಇಂಥವರಿಗೆ ದಿನ ಹೋದಂತೆ ಜೀವಚೈತನ್ಯ ಹೆಚ್ಚಾಗುತ್ತಲೇ ಇರಬೇಕು, ಎಂದಿಗೂ ಮಾಮೂಲಿ ವೃದ್ಧಾಪ್ಯ ಕವಿಯಲೇ ಕೂಡದು ಅಂತೆಲ್ಲ ಅನಿಸಿತು.

ರಾಜಶೇಖರರ ಹಾಗೆ ತನ್ನ ಆತ್ಮಸಾಕ್ಷಿಗೆ ತಕ್ಕಂತೆ ನಡಕೊಳ್ಳುವವರನ್ನು ಕಂಡು ಅಚ್ಚರಿ ಪಡುವುದೋ ಹೆಮ್ಮೆ ಪಡುವುದೋ ಮೆಚ್ಚುಗೆಯಿಂದ ನೋಡುವುದೋ ಸುಲಭ. ಆದರೆ ಹಾಗೆ ಆಗುವುದು, ಆಗಿ ಹಾಗೆಯೇ ಇರುವುದು!? ಸಾಮಾನ್ಯವೂ ಅಲ್ಲ, ಸುಲಭಸಾಧ್ಯವೂ ಅಲ್ಲ. ತನ್ನ ಮೂಲ ‘ಕೂಟ ಮಹಾಜಗತ್ತಿ’ನ ನೆಲದ ಕೆಲ ಉತ್ತಮ ಹಾಗೂ ಅಪ್ಪಟ ಲಕ್ಷಣಗುಣಗಳನ್ನೂ ನೆನಪಿಸುವ ಈ ಕೋಟತಟ್ಟಿನ ಮಾಣಿಕ್ಯದಂಥ ‘ಮಾಣಿ’ಗೆ ಪ್ರೀತಿ ಅಭಿಮಾನದಿಂದ ಎಲ್ಲ ಶುಭಾಶಯ.

ಪ್ರತಿಕ್ರಿಯಿಸಿ