ಡೇವಿಡ್ ಬಾಂಡ್ ಬರೆಯುವ ಚಿತ್ರ ಭಾರತ: ’ತಿಥಿ’- ಮೊದಲ ಭಾಗ

ಈ ಚಿತ್ರದ ಆಕರ್ಷಣೆ ಎಂದರೆ ಹಲವು ಪೀಳಿಗೆಗಳ ಕುರಿತು ನಮ್ಮಲ್ಲಿರುವ ಅಲಿಖಿತ ನಂಬಿಕೆಗಳನ್ನು ಕೌಶಲ್ಯಪೂರ್ಣವಾಗಿ ತಿರಸ್ಕರಿಸಿರುವುದು. ಹಿರಿಯರಲ್ಲಿ ಸಂಪ್ರದಾಯ ಮತ್ತು ಕುರುಡು ಗೌರವ ಸಾಮಾನ್ಯ ಎಂಬುದನ್ನು , ಯುವಕರಲ್ಲಿ ತಿರುಗಿ ಬೀಳುವ ಮನೋಭಾವ ಸಹಜ ಎಂಬುದನ್ನು ಈ ಚಿತ್ರ ಸಾರಾಸಗಟಾಗಿ ತಿರಸ್ಕರಿಸುತ್ತದೆ.

’ತಿಥಿ’ ಜಗತ್ತೆಲ್ಲ ಸುತ್ತಾಡಿ ಕೊನೆಗೂ ಕರ್ನಾಟಕಕ್ಕೆ ಬಂದಾಗ ಒಂದು ದೊಡ್ಡ ಅಭಿಮಾನಿ ಬಳಗವನ್ನೇ ಸೃಷ್ಟಿಸಿಕೊಂಡಿತ್ತು. ಕನಿಷ್ಟ ಬೆಂಗಳೂರಿನಲ್ಲಿನ ಸಿನಿ ಪ್ರಿಯರಿಗೆ ಈ ಚಿತ್ರ ಚಿತ್ರೋತ್ಸವದಲ್ಲಿ ಯಶಸ್ವಿಯಾಗುವುದರ ಬಗ್ಗೆ, ವಿಮರ್ಶಕರಿಗೆ ಪ್ರಿಯವಾಗುವುದರ ಕುರಿತು ಖಾತ್ರಿ ಇತ್ತು. ನಿರ್ದೇಶಕನಾಗಿ ರಾಮ್ ರೆಡ್ಡಿಯ ಸಾಮರ್ಥ್ಯ ಏನೇ ಇದ್ದರೂ , ಪ್ರಚಾರದಲ್ಲಿ ಆತನ ಪ್ರತಿಭೆಯ ಕುರಿತು ಎಳ್ಳಷ್ಟೂ ಸಂಶಯಪಡುವಂತಿಲ್ಲ . ಸಿನೆಮಾದ ಕುರಿತು ಆತ ನಡೆಸಿದ ಪ್ರತಿ ಪ್ರಚಾರವೂ ಜನರಲ್ಲಿ ಮೋಡಿ ಮಾಡಿದ್ದು ಸುಳ್ಳಲ್ಲ. ಬೆಂಗಳೂರು ಚಿತ್ರೋತ್ಸವದಲ್ಲಿ ಈ ಚಿತ್ರ ನೋಡಲು ಜನ ಮುಗಿಬಿದ್ದರು. ರಾಜ್ಯಾದ್ಯಾಂತ ಈ ಚಿತ್ರ ತೆರೆ ಕಾಣದಿದ್ದರೂ , ಚಿತ್ರದ ಪರಿಸರಕ್ಕೆ ಹತ್ತಿರವಾದ ಮಂಡ್ಯದಲ್ಲಿ ಚಿತ್ರ ಬಿಡುಗಡೆಯಾಯ್ತು ಮತ್ತು ಸಾಕಷ್ಟು ಜನ ಈ ಚಿತ್ರ ನೋಡಿದರು. ಚಿತ್ರ ನೋಡದಿದ್ದವರಿಗೂ ಇಂತಹ ಚಿತ್ರವೊಂದು ಬಿಡುಗಡೆಯಾಗಿದೆ ಎಂಬ ಸುದ್ದಿಯಂತೂ ತಲುಪಿತ್ತು.

ತಿಥಿಯಂತಹ ಚಿತ್ರಕ್ಕೆ ಇಂತಹ ದೊಡ್ಡಮಟ್ಟದ ಹೈಪ್ ನ ಅಗತ್ಯವೇ ಇರಲಿಲ್ಲ. ’ತಿಥಿ’ ತನ್ನಷ್ಟಕ್ಕೆ ಒಂದು ಉತ್ತಮ ಚಲನಚಿತ್ರ. ಈ ದಶಕದಲ್ಲಿ ನಾನು ನೋಡಿದ ಅತ್ಯುತ್ತಮ ಭಾರತೀಯ ಸಿನೆಮಾಗಳಲ್ಲೊಂದು. ಕ್ಲಾಸಿಕ್ ಎನಿಸಿಕೊಳ್ಳುವ ಎಲ್ಲ ಅರ್ಹತೆಯನ್ನೂ ಹೊಂದಿರುವಂತಹದ್ದು. ಈ ಕಾರಣಕ್ಕಾಗಿ ತಿಥಿ ಚಿತ್ರದ ಕುರಿತು ಇಲ್ಲಿ ಎರಡು ಲೇಖನಗಳ ಮೂಲಕ ಚರ್ಚಿಸುತ್ತಿದ್ದೇನೆ.

ಸಾರ್ವಜನಿಕ ಅಭಿಪ್ರಾಯಗಳಿಗೆ ವಿಮರ್ಶಕ ಯಾವತ್ತೂ ತದ್ವಿರುದ್ದವಾಗಿರಬೇಕೆಂದೇನೂ ಇಲ್ಲ. ನನಗೆ ತಿಥಿ ಚಿತ್ರದ ಕುರಿತು ಕರ್ನಾಟಕದ ಪ್ರೇಕ್ಷಕರ ಅಭಿಪ್ರಾಯ ಮುಖ್ಯವಾಗಿತ್ತೇ ವಿನಃ ಈ ಚಿತ್ರದ ಕುರಿತು ಲೋಕಾರ್ನೋ, ಟೆಕ್ಸಾಸ್ ಅಥವಾ ಟಿಂಬಟ್ತುವಿನ ಪ್ರೇಕ್ಷಕರ ಅಥವಾ ಅಂತರ್ರಾಷ್ಟ್ರೀಯ ಸಿನೆಮಾ ವಿಮರ್ಶಕರ ಅಭಿಪ್ರಾಯಗಳಲ್ಲ.

ಸಾರ್ವಜನಿಕ ಅಭಿಪ್ರಾಯಗಳಿಗೆ ವಿಮರ್ಶಕ ಯಾವತ್ತೂ ತದ್ವಿರುದ್ದವಾಗಿರಬೇಕೆಂದೇನೂ ಇಲ್ಲ. ನನಗೆ ತಿಥಿ ಚಿತ್ರದ ಕುರಿತು ಕರ್ನಾಟಕದ ಪ್ರೇಕ್ಷಕರ ಅಭಿಪ್ರಾಯ ಮುಖ್ಯವಾಗಿತ್ತೇ ವಿನಃ ಈ ಚಿತ್ರದ ಕುರಿತು ಲೋಕಾರ್ನೋ, ಟೆಕ್ಸಾಸ್ ಅಥವಾ ಟಿಂಬಟ್ತುವಿನ ಪ್ರೇಕ್ಷಕರ ಅಥವಾ ಅಂತರ್ರಾಷ್ಟ್ರೀಯ ಸಿನೆಮಾ ವಿಮರ್ಶಕರ ಅಭಿಪ್ರಾಯಗಳಲ್ಲ. ಭಾರತದ ಹಳ್ಳಿಯಲ್ಲಿ ವಾಸಿಸುವ ನನ್ನ ಸ್ನೇಹಿತನೊಬ್ಬ ಈ ಚಿತ್ರದ ಕುರಿತು ತಿಳಿದುಕೊಂಡಿದ್ದ ಮತ್ತು ನೋಡಲು ಭಾರೀ ಉತ್ಸುಕನಾಗಿದ್ದ. ನನ್ನ ಸಮಕಾಲೀನನಾದ ಈತ ನಿವೃತ್ತ ಮುಖ್ಯೋಪಧ್ಯಾಯ. ತನ್ನ ಜೀವನದುದ್ದಕ್ಕೂ ಹಲವು ಹೊರಾಟಗಳಲ್ಲಿ ಸ್ಠಳಿಯವಾಗಿ ಸಕ್ರಿಯವಾಗಿ ಪಾಲ್ಗೊಂಡವನು. ಇಂಗ್ಲೇಂಡಿನಲ್ಲಿ ’ ಅರವತ್ತರ ದಶಕದ ಮಗು’ ಎಂದೋ, ಅಥವಾ ಫ್ರಾನ್ಸಿನಲ್ಲಿ ಮೇ ಕ್ರಾಂತಿಯ ನೆನಪಿನಲ್ಲಿ ಕರೆಯಲ್ಪಡುವ”ಅರವತ್ತರ ಫ್ರೇಂಚ್ ವಿದ್ಯಾರ್ಥಿ ಪ್ರತಿಭಟನಕಾರ ’ಎಂದು ಕರೆಯಬಹುದಾದ ಭಾರತೀಯ ಸ್ನೇಹಿತ.

ಆ ಕಾಲಘಟ್ಟದ ಯುರೋಪಿನ ಸಮಸ್ಯೆಗಳು ಭಾರತದ ಸಮಸ್ಯೆಗಳು ಖಂಡಿತ ಏಕಪ್ರಕಾರದವುಗಳಲ್ಲ. ಆದರೆ ಎರಡೂ ಕಡೆಯ ಹೋರಾಟಗಳೊಳಗಿನ ಕಿಚ್ಚು ಒಂದೇ ಬಗೆಯದು. ಸರಳವಾಗಿ ಹೇಳಬೇಕೆಂದರೆ ಅದು ಸಂಪ್ರದಾಯಗಳ ನಿರಾಕರಣೆ, ಎಲ್ಲವನ್ನೂ ಪ್ರಶ್ನಿಸುವ ಮನೋಭಾವ. ಬದಲಾವಣೆಯಲ್ಲಿ ಗಟ್ಟಿಯಾದ ನಂಬಿಕೆ. ನನ್ನ ಸ್ನೇಹಿತ ಉಳಿದ ವಿಚಾರಗಳ ಜೊತೆಗೆ ಮದುವೆ ಮತ್ತು ಅಂತ್ಯ ಸಂಸ್ಕಾರಗಳ ವಿಧಿ ವಿಧಾನಗಳು ಬಡವರ ಮೇಲೆ ಸಂಪ್ರದಾಯದ ಹೆಸರಿನಲ್ಲಿ ಹೊರಿಸುವ ಅನಗತ್ಯ ಹೊರೆಗಳ ಕುರಿತು ತುಸು ಹೆಚ್ಚೇ ವ್ಯಗ್ರನಾಗಿದ್ದ. ಈತ ಮತ್ತು ಈತನ ಪತ್ನಿ ಸಂಪ್ರದಾಯವನ್ನು ತಿರಸ್ಕರಿಸಿ ಸರಳವಾಗಿಯೇ ವಿವಾಹವಾದವರು. ಬದುಕಿದ್ದ ತನ್ನ ತಾಯಿಯ ಮನ ನೋಯಿಸಬಾರದೆಂದು ತಂದೆಯ ತಿಥಿಯನ್ನು ಈತ ಮಾಡಿದ. ಆದರೇ ತಾಯಿ ಸತ್ತಾಗ ಆಕೆಯ ತಿಥಿ ಮಾಡದೇ , ತನ್ನ ಮನವೊಲಿಸಲು ಬಂದ ಊರವರನ್ನು ಬಯ್ದು ಕಳಿಸಿದ್ದ. ಈ ನನ್ನ ಸ್ನೇಹಿತ ಎರಡು ಬಾರಿ ತಿಥಿ ಸಿನೆಮಾ ನೋಡಿ ಮೆಚ್ಚಿಕೊಂಡ. ತಿಥಿಯಂತಹ ಸಮಾರಂಭ ತಮಾಶೆಯ ಕಾರ್ಯವಲ್ಲ. ಹಾಸ್ಯ ಸಿನೆಮಾ ಕೂಡ ಈ ವಾಸ್ತವವನ್ನು-ತಿಥಿಕಾರ್ಯದ ಗಾಂಭಿರ್ಯವನ್ನು- ತಿಳಿದಿರಬೇಕಾಗುತ್ತದೆ. ಈ ಸಿನೆಮಾ ಗೊತ್ತಿದ್ದೋ ಗೊತ್ತಿಲ್ಲದೆಯೋ ಅದನ್ನ ಸಾಧಿಸಿದೆ. ಇಂತ ನಿರರ್ಥಕ ಕಾರ್ಯಗಳು ಕುಟುಂಬದೊಳಗೆ ತಂದೊಡ್ಡುವ ಹಣಕಾಸಿನ ಬಿಕ್ಕಟ್ಟು ಮಾತ್ರವಲ್ಲ, ನನ್ನ ಸ್ನೇಹಿತ ಸರಿಯಾಗಿಯೇ ಗುರುತಿಸಿದ ಹಾಗೆ ಇದು ಹೇಗೆ ಅವಕಾಶವಾದಿ ಖದೀಮರಂತಹ, ಭ್ರಷ್ಟ ಅಧಿಕಾರಿಗಳಂತಹ ಸಮಾಜದೊಳಗಿನ ಲಾಭಕೋರರ ಹಿತವನ್ನು ಕಾಪಾಡುತ್ತದೆ ಎಂಬುದನ್ನು ಚಿತ್ರ ಸಮರ್ಪಕವಾಗಿ ಗುರುತಿಸುತ್ತದೆ. ಟಪ್ಪಾಂಗುಚ್ಚಿ ಹಾಡನ್ನು ಬಳಸಲು ಈ ಚಿತ್ರದ ಶೀರ್ಷಿಕೆ ಹುಟ್ಟಿಸಬಹುದಾದ ಪ್ರಲೋಭನೆಯನ್ನೂ ಬುದ್ಧಿವಂತಿಕೆಯಿಂದ ನಿರ್ಲಕ್ಶಿಸುತ್ತದೆ. ಚಿತ್ರದೊಳಗೆ ತಿಥಿ ಕಾರ್ಯ ಸಂಪೂರ್ಣ ಅಸ್ತವ್ಯಸ್ತವಾಗಿ- ತಿಥಿಯೂಟ ಚೆನ್ನಾಗಿದ್ದರೂ- ಥಟ್ಟನೆ ಹರಿಕತೆ ಶುರುವಾಗುವ ಹೊತ್ತಿಗೆ ಮುಗಿದೇ ಹೋಗುತ್ತದೆ.

ಚಿತ್ರ ಬೇರೆ ಬೇರೆ ಪೀಳಿಗೆಯವರನ್ನು ಚಿತ್ರಿಸುವ ವಿಧಾನ ನನಗೂ ನನ್ನ ಸ್ನೇಹಿತನಿಗೂ ಇಷ್ಟವಾಯಿತು. ಸೆಂಚೂರಿ ಗೌಡ ಚಿತ್ರದ ಮೊದಲ ದೃಶ್ಯದಲ್ಲೇ ನಾಟಕೀಯವಾಗಿ ಸತ್ತಾಗ , ಆತನ ಹಿರಿ ಮಗ ಗಡ್ಡಪ್ಪ ಅದನ್ನ ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ. ಗಡ್ಡಪ್ಪನ ಮಗ ತಮ್ಮಣ್ಣ ತಿಥಿಯ ಜವಾಬ್ದಾರಿಯನ್ನು ತನ್ನ ಮೇಲೆ ಹೇರಿಕೊಂಡರೂ ತನ್ನ ತಂದೆಗೆ ಸೇರಬೇಕಾದ ಆಸ್ತಿಯನ್ನು ಮಾರದೇ ತಿಥಿಯ ಖರ್ಚು-ವೆಚ್ಚಗಳನ್ನು ದೂಗಿಸಲಾರ. ಈತನ ಮಗ ಅಭಿ ಅವನ ವಯೋಮಾನಕ್ಕೆ ತಕ್ಕಂತೆ ಉಂಡಾಡಿ ಗುಂಡನಂತೆ ಅಲೆದು ಕುಡಿತ, ಜೂಜು, ಹೆಣ್ಣಿನ ಚಟಕ್ಕೆ ಬಿದ್ದಿದ್ದಾನೆ.

ಈ ಚಿತ್ರದ ಆಕರ್ಷಣೆ ಎಂದರೆ ಹಲವು ಪೀಳಿಗೆಗಳ ಕುರಿತು ನಮ್ಮಲ್ಲಿರುವ ಅಲಿಖಿತ ನಂಬಿಕೆಗಳನ್ನು ಕೌಶಲ್ಯಪೂರ್ಣವಾಗಿ ತಿರಸ್ಕರಿಸಿರುವುದು. ಹಿರಿಯರಲ್ಲಿ ಸಂಪ್ರದಾಯ ಮತ್ತು ಕುರುಡು ಗೌರವ ಸಾಮಾನ್ಯ ಎಂಬುದನ್ನು , ಯುವಕರಲ್ಲಿ ತಿರುಗಿ ಬೀಳುವ ಮನೋಭಾವ ಸಹಜ ಎಂಬುದನ್ನು ಈ ಚಿತ್ರ ಸಾರಾಸಗಟಾಗಿ ತಿರಸ್ಕರಿಸುತ್ತದೆ. ಬದಲಿಗೆ ಹಿಂದಿನ ಎರಡು ಪೀಳಿಗೆಯವರಲ್ಲೇ ಅಗೌರವ ತೋರುವ ಮತ್ತು ತಿರುಗಿ ಬೀಳುವ ಗುಣವಿದೆ. ಬರೀ ಕೆಟ್ಟ ಮಾತನಾಡಿ ಎಲ್ಲರ ಗೋಳು ಹೊಯ್ದುಕೊಳ್ಳುವ ಸೆಂಚುರಿ ಗೌಡ ಮತ್ತು ಪಾದರಸದಂತೆ ಚುರುಕಾಗಿರುವ ಶಾಂತಿಯುತವಾಗೆ ಅರಾಜಕತೆಯನ್ನು ಸೃಷ್ಟಿಸುವ ಹಿಪ್ಪಿ ಗಡ್ಡಪ್ಪ. ಇವರಿಗೆ ಹೋಲಿಸಿದರೆ ಯುವ ಪೀಳಿಗೆಯವರು (ತಮ್ಮಣ್ಣ ಮತ್ತು ಅಭಿ) ಹೆಚ್ಚು ಕಡಿಮೆ ಒಂದು ಬಗೆಯಲ್ಲಿ ಸಂಪ್ರದಾಯದವರಂತೆ ಭಾಸವಾಗುತ್ತಾರೆ.

ಖಂಡಿತವಾಗಿಯೂ ಇದೊಂದು ಹಾಸ್ಯ ಸಿನೆಮಾ. ತಮಾಶೆಯ ಸಿನೆಮಾ. ತನ್ನೊಡಲೊಳಗೆ ಗಾಂಭಿರ್ಯದ ವಿಷಯವನ್ನಿಟ್ಟುಕೊಂಡ ಹಾಸ್ಯ ಚಿತ್ರ. ಹಾಗಾಗಿ ಇದು ನಮ್ಮ ಗೌರವವನ್ನು, ಮೆಚ್ಚುಗೆಯನ್ನೂ ಪಡೆದುಕೊಳ್ಳುತ್ತದೆ. ಚಿತ್ರದ ಛಾಯಾಗ್ರಹಣ ಮತ್ತು ನಟನೆಯ ಕುರಿತು ಮುಂದಿನ ಲೇಖನದಲ್ಲಿ ಮಾತನಾಡೋಣ.

ಇಂಗ್ಲೀಷಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

2 comments to “ಡೇವಿಡ್ ಬಾಂಡ್ ಬರೆಯುವ ಚಿತ್ರ ಭಾರತ: ’ತಿಥಿ’- ಮೊದಲ ಭಾಗ”
  1. Bond,
    As usual you are brilliant. Many thanks for such an wonderful write-up. Also, thanks to Kunatady, Kiran and others.

ಪ್ರತಿಕ್ರಿಯಿಸಿ