ವೈವಿಧ್ಯ, ಬಹುರೂಪ, ಬಹುಮುಖ, ಬಹುವಚನ – ಇವು ಭಾರತದ ಪ್ರಮುಖ ಲಕ್ಷಣ – ಜಿ . ರಾಜಶೇಖರ

ವಿಷ್ಣು: ನೀವು ಲೇಖಕರೇ ಆಗಿದ್ದು ಹೇಗೆ?

ರಾಜಶೇಖರ: ಮೊದಲನೆಯದಾಗಿ ನಾನು ನನ್ನನ್ನು ಒಬ್ಬ ಲೇಖಕ ಎಂದು ಪರಿಗಣಿಸುವುದಿಲ್ಲ. ಅಂದ್ರೆ ನಾನು ವೃತ್ತಿನಿರತ ಲೇಖಕ ಅಲ್ಲ. professional accountant, professional doctor, professional engineer ಅನ್ನೋ ಅರ್ಥದಲ್ಲಿ ನಾನು professional ಲೇಖಕ ಅಲ್ಲ. ನಾನೊಬ್ಬ ಹವ್ಯಾಸಿ ಲೇಖಕ. amateur ಲೇಖಕ, Sunday ಲೇಖಕ. ಯಾಕೆ ನಾನು ಈ ಲೇಖನದ ವ್ಯವಸಾಯವನ್ನು ಕೈಗೊಂಡೆ ಅಂತ ಹೇಳೋದಕ್ಕೆ ಬಹುಶಃ ನಾನು ಬೆಳೆದುಬಂದ ಹಿನ್ನೆಲೆಯೇ ಕಾರಣ ಇರಬೇಕು. ನಾನು ಬಹಳ ಬಡತನದಲ್ಲಿ ಹುಟ್ಟಿ ಬೆಳೆದೆ; ಒಂದು ಬಡಕುಟುಂಬದಲ್ಲಿ ಹುಟ್ಟಿ ಬೆಳೆದೆ. ಆದರೆ ನನ್ನ ಓದಿಗೆ, ನನ್ನ ಅಭಿರುಚಿಗೆ ನನ್ನ ಬಡತನ ಯಾವತ್ತು ಅಡ್ಡ ಬಂದಿದೆ ಅಂತ ನನಗೆ ಅನ್ನಿಸಲಿಲ್ಲ. ಯಾಕೆಂದರೆ ನಾನು ಬಡತನದ ಮಧ್ಯೆಯೂ ಓದು, ಸಾಹಿತ್ಯ, ಬರವಣಿಗೆ ಇವುಗಳ ವಾತಾವರಣದಲ್ಲಿ ಬೆಳೆದೆ. ನನ್ನ ಸೋದರಮಾವ ಒಬ್ಬರು ಕಾರಂತರ ಆಪ್ತರಾಗಿದ್ದರು. ಶಿವರಾಮಕಾರಂತರ ಭಕ್ತ ಅಂತ ಕೂಡ ಅವರನ್ನು ಹೇಳಬಹುದು. ಅವರ ಮನೆಯಲ್ಲಿ ಕಾರಂತರ ಎಲ್ಲ ಕೃತಿಗಳು ಇದ್ದವು. ಹಾಗಾಗಿ ನನ್ನ ಬಾಲ್ಯದಲ್ಲೇ ಕಾರಂತರ ವ್ಯಕ್ತಿತ್ವ ಮತ್ತು ಅವರ ಕೃತಿಗಳು, ಎರಡರ ಸುಮಾರು ಪರಿಚಯವೂ ಇತ್ತು. ಕಾರಂತರ ಕಾದಂಬರಿಗಳನ್ನು ಓದುತ್ತಿದ್ದಾಗಲೇ ನನ್ನ ಸುತ್ತಮುತ್ತಲಿನ ಪರಿಸರ ಹಾಗೇ ಇದೆಯಲ್ಲ ಅನ್ನುವ ವಿಸ್ಮಯದಲ್ಲಿ ಕಾದಂಬರಿಗಳನ್ನೂ ಓದುತ್ತಿದ್ದೆ, ನನ್ನ ಸುತ್ತಲಿನ ಬದುಕನ್ನೂ ನೋಡುತ್ತಿದ್ದೆ. ಹಾಗಾಗಿ ನನಗೆ ಬಹಳ ಚಿಕ್ಕಂದಿನಿಂದಲೂ ಈ ಬರವಣಿಗೆ ಬಗ್ಗೆ ಒಂದು ಬಗೆಯ ಆಕರ್ಷಣೆ, ಇದ್ದೇ ಇತ್ತು. ಮುಂದೆ ನನ್ನ ಬಡತನದ ಕಾರಣದಿಂದಲೇ ನಾನು ನನ್ನ ಓದನ್ನು ಹೆಚ್ಚು ಮುಂದುವರಿಸುವುಕ್ಕೆ ಆಗಲಿಲ್ಲ. ನನಗೆ ಸಾಹಿತ್ಯವನ್ನೇ ಅಧ್ಯಯನ ಮಾಡಿ, ಅದನ್ನೇ ವೃತ್ತಿಯನ್ನಾಗಿ ಮಾಡಬೇಕು, ಬರವಣಿಗೆಯಲ್ಲದಿದ್ದರೆ ಸಾಹಿತ್ಯದ ಬೋಧನೆಯನ್ನಾದರೂ ವೃತ್ತಿಯನ್ನಾಗಿ ಮಾಡಿಕೊಳ್ಳಬೇಕು ಅನ್ನೋ ಆಶಯವಿತ್ತು, ಅದೂ ನನ್ನ ಕೈಯಲ್ಲಿ ಆಗಲಿಲ್ಲ. ಆದರೆ ನನಗೆ, ನನ್ನ ಹೊಟ್ಟೆಪಾಡಿಗೆ, ನನ್ನ ಕುಟುಂಬದ ನಿರ್ವಹಣೆಗೆ ನಾನೊಂದು ಉದ್ಯೋಗವನ್ನು ಹಿಡಿಯುವುದು ಅನಿವಾರ್ಯವಾಗಿತ್ತು. ನನ್ನ ಉದ್ಯೋಗದ ನಂತರದ ಬಿಡುವಿನಲ್ಲಿ, ನನ್ನಿಂದ ಸಾಧ್ಯವಾದ ಓದನ್ನು, ಚೂರುಪಾರು ಬರವಣಿಗೆಯನ್ನು ಮಾಡ್ಕೊಂಡೇ ಹೋದೆ. ಕನ್ನಡದಲ್ಲಂತೂ ಇವತ್ತು ಬಹುತೇಕ ಎಲ್ಲಾ ಲೇಖಕರು ಹೆಚ್ಚು ಕಡಿಮೆ ಇದೇ ಮಾರ್ಗವನ್ನು ಅನುಸರಿಸುವವರೆ. ಕನ್ನಡದಲ್ಲಿ ಒಬ್ಬ ಬರೀ ಲೇಖಕನ ವೃತ್ತಿಯಿಂದಲೇ ಬದುಕುತ್ತೇನೆ, ಅನ್ನೋ ವಾತಾವರಣ ಇವತ್ತಿಗೂ ಇಲ್ಲ. ಹಾಗಾಗಿ ಎಲ್ಲರೂ, ಬರವಣಿಗೆಯಲ್ಲಿ ತೊಡಗಿರುವ ಎಲ್ಲರೂ ತಮ್ಮ ಜೀವನ ನಿರ್ವಹಣೆಗೆ ಇನ್ನೊಂದು ಉದ್ಯೋಗವನ್ನು ಮಾಡಿಕೊಂಡು ಈ ವೃತ್ತಿಯನ್ನು ಮಾಡಬೇಕಾಗಿದೆ. ನಾನು ಹಾಗಂತಲೇ ತಿಳಿದಿದ್ದೇನೆ. ಹಾಗಾಗಿ ನಾನು ಪ್ರಥಮತಃ ಒಬ್ಬ ಲೇಖಕ ಅಂತ ಯಾವತ್ತಿಗೂ ಪರಿಗಣಿಸೋದಿಲ್ಲ. ನಾನು ಇವತ್ತಿಗೂ ತಿಳಿಯೋದು ಬಿಡುವಿನಲ್ಲಿ ಮಾತ್ರ ಚೂರುಪಾರು ಬರೆಯುವ, ಚೂರುಪಾರು ಓದ್ಕೊಂಡಿರುವ ಒಬ್ಬ ಮನುಷ್ಯ ಅಂತ.

ವಿಷ್ಣು: ಬಹಳ ವರ್ಷಗಳ ಹಿಂದೆ ನೀವು ನಿಮ್ಮ ಅಣ್ಣನ influence ಬಗ್ಗೆ ಹೇಳಿದ್ರಿ?

ರಾಜಶೇಖರ: ಅದರ ಬಗ್ಗೆ ನನಗೆ ಹೆಚ್ಚು ಮಾತಾಡೋದಿಕ್ಕೆ ಮನಸ್ಸಿಲ್ಲ. ಯಾಕಂದ್ರೆ ಅದರಲ್ಲಿ ತೀರಾ ನನ್ನ ಕುಟುಂಬದ ಖಾಸಗಿ ವಿಚಾರಗಳೆಲ್ಲಾ ಸೇರ್ಕೊಂಡಿವೆ. ಆದರೆ ಅವನಿಗೆ ಸಾಹಿತ್ಯದಲ್ಲಿ ಬಹಳ ತೀವ್ರವಾದ ಆಸಕ್ತಿಯಿತ್ತು. ಅವನಿಗೆ ತತ್ವಶಾಸ್ತ್ರದಲ್ಲೂ ಆಸಕ್ತಿಯಿತ್ತು. ಮಾರ್ಕ್ಸ್‌ವಾದದಲ್ಲೂ ಆಸಕ್ತಿಯಿತ್ತು ಮತ್ತು ಅವನು ತಕ್ಕಮಟ್ಟಿಗೆ ಆ ಕಾಲದ ಎಡಪಂಥೀಯ ಚಳುವಳಿಯಲ್ಲೂ ಕೂಡಾ ಭಾಗವಹಿಸುತ್ತಿದ್ದ. ಹಾಗಾಗಿ ನಾನು ಅವನನ್ನು ಅನುಕರಿಸುತ್ತಾ, ಅನುಕರಿಸುತ್ತಾ ಈ ಆಸಕ್ತಿಗಳನ್ನೆಲ್ಲಾ ತಕ್ಕ ಮಟ್ಟಿಗೆ ಬೆಳೆಸಿಕೊಂಡೆ. ಅಷ್ಟನ್ನು ಮಾತ್ರ ನಾನು ಹೇಳ್ತೇನೆ. ಯಾಕೆಂದ್ರೆ ಮುಂದೆ ಅವನ ದೇಹಾಂತ್ಯ ಅನಿರೀಕ್ಷಿತವಾದ ಮತ್ತು ಬಹಳ ಹಠಾತ್ತನೆ ಸಂಭವಿಸಿದ ಅವನ ದೇಹಾಂತ್ಯ ಇದರ ಬಗ್ಗೆ ಹೆಚ್ಚು ಮಾತಾಡೋದಿಕ್ಕೆ ಮನಸ್ಸಿಲ್ಲ.

ವಿಷ್ಣು: ನೀವು ಪತ್ರಕರ್ತರು ಮಾಡುವ ಕೆಲಸದ ಹಾಗೆಯೇ ಕರಾವಳಿಯಲ್ಲಿ ಕೋಮುವಾದದ ಬಗ್ಗೆ ಕಳೆದ ಮೂರು ದಶಕಗಳಿಂದಲೂ ಬರೀತಾ ಇದೀರಿ. (ಮಧ್ಯದಲ್ಲಿ ಮಾತನ್ನು ತುಂಡರಿಸುತ್ತಾ ರಾಜಶೇಖರ್ ರವರು “ಕರಾವಳಿಗೆ ಮೂರಲ್ಲ, ಎರಡು ದಶಕಗಳಿಂದ ಎಂದು ಹೇಳಬಹುದು” ಎಂದರು) ಕರಾವಳಿಯಲ್ಲಿ syncretism, ಇಲ್ಲಿಗೊಂದು cosmopolitan history ಇದೆ, tradition ಇದೆ. And yet…

ರಾಜಶೇಖರ: ಯಾಕೆ ಹೀಗಾಯ್ತು ಅಂತ ನಿಮ್ಮ ಪ್ರಶ್ನೆ ಅಲ್ವಾ?

ಈ ತರಹದ ಸೌಹಾರ್ದದ ಜಾತಿ ವರ್ಗಗಳ ನಡುವೆ, ಮತಮತಗಳ ನಡುವೆ, ಬಿಕ್ಕಟ್ಟುಗಳು ಇದ್ದ ಹಾಗೇ, ಜಗಳಗಳು ಇದ್ದ ಹಾಗೆಯೇ ಸ್ನೇಹ ಮತ್ತು ಸೌಹಾರ್ದದ ಸಂಬಂಧವೂ ಇರುವ, ನೀವು ಹೇಳುವ syncretism ಏನಿದೆ, ಈ ಸಂಸ್ಕೃತಿ ಬರೀ ಕರಾವಳಿಯ ವೈಶಿಷ್ಟ್ಯ ಮಾತ್ರ ಅಲ್ಲ, ಇಡೀ ಭಾರತದ ವೈಶಿಷ್ಟ್ಯವೇ ಅದು. ಅದಕ್ಕೇ ಜವಾಹರ್ ಲಾಲ್ ನೆಹರೂ ಭಾರತವನ್ನು ಒಂದು ನುಡಿಗಟ್ಟಿನಲ್ಲಿ ವಿವರಿಸಿದರು. ‘unity in diversity’, ಅಂತ. ಭಾರತ ಹಲವು ಭಾಷೆಗಳ, ಹಲವು ಮತಧರ್ಮಗಳ, ಹಲವು ನಂಬಿಕೆಗಳ, ಹಲವು ಜೀವನಶೈಲಿಗಳ, ಹಲವು ಚಿಂತನಕ್ರಮಗಳ, ಹಲವು ಪರಂಪರೆಗಳ – ಒಂದು ಪರಂಪರೆಯಲ್ಲ, ಹಲವು ಪರಂಪರೆಗಳ, ಒಂದು ದೇಶ.

ನೀವು ಆ ವೈವಿಧ್ಯದ ಹರವು ಎಷ್ಟು ದೊಡ್ಡದೆಂದರೆ ನಮ್ಮಲ್ಲಿ ಎಲ್ಲ ತರಹದ ಹವೆಗಳನ್ನು ಕಾಣ್ತಿರಿ. ಹೆಪ್ಪುಗಟ್ಟಿಸುವ ಚಳಿಯ ವಾತಾವರಣದ ಹಿಮಾಲಯದಿಂದ ಹಿಡಿದು ಸುಡುಬಿಸಿಲಿನ ದಕ್ಷಿಣದ ಆಂಧ್ರ, ರಾಜಾಸ್ಥಾನ – ಹೀಗೆ ಹವೆಯಲ್ಲಿ ವೈವಿಧ್ಯ, ಆಹಾರದಲ್ಲಿ ವೈವಿಧ್ಯ, ಕಡೆಗೆ ಬಳಸುವ ಎಣ್ಣೆಯಲ್ಲೂ ವೈವಿಧ್ಯ, ತೊಡುವ ಉಡುಪಿನಲ್ಲಿ ವೈವಿಧ್ಯ, ಹೀಗೆ ಹಲವು ತರಹದ ವೈವಿಧ್ಯಗಳ, ಸಹಬಾಳ್ವೆಯ ದೇಶ ನಮ್ಮದು. ಜಗತ್ತಿನ ಅನೇಕ ದೇಶಗಳ ಹಾಗೆ ಭಾರತವನ್ನು ಒಂದು ಭಾಷೆ, ಒಂದು ಜನಾಂಗ, ಒಂದು ಧರ್ಮ, ಇವುಗಳ ಜೊತೆಗೆ ಸಮೀಕರಿಸುವುದಕ್ಕೆ ಯಾವತ್ತೂ ಸಾಧ್ಯವಿಲ್ಲ. ವೈವಿಧ್ಯ, ಬಹುರೂಪ, ಬಹುಮುಖ, ಬಹುವಚನ – ಇವು ಭಾರತದ ಪ್ರಮುಖ ಲಕ್ಷಣ, ಕರಾವಳಿಯದ್ದು ಮಾತ್ರವಲ್ಲ, ಕರಾವಳಿ ಭಾರತದ ಭಾಗವಾಗಿರುವುದರಿಂದ ಕರಾವಳಿಯ ಸಂಸ್ಕೃತಿಯು ಈ ವೈವಿಧ್ಯತೆಮಯವಾದ, ವೈವಿಧ್ಯತೆಯನ್ನು ಇಟ್ಟುಕೊಂಡು ಒಟ್ಟಿಗೆ ಇರುವ ಸೌಹಾರ್ದದ ನೆಲೆ. ಹಾಗಾಗಿ ಕರಾವಳಿಯ ಬಗ್ಗೆ ನೀವು ಹೇಳಿದ ಮಾತೇನಿದೆ, ಇಲ್ಲಿನ syncretic culture ಅಂತ, ಅದು ಇಡೀ ಭಾರತ ದೇಶಕ್ಕೆ ಒಪ್ಪುವಂತಹದ್ದು. ಆದರೆ ಕಳೆದ ಮೂವತ್ತು-ನಲವತ್ತು ವರ್ಷಗಳಲ್ಲಿ ಈ ಸಂಸ್ಕೃತಿಗೆ ಬಹಳ ದೊಡ್ಡ ಆಪತ್ತು, ರಾಜಕೀಯ ಅಪಾಯ ಒದಗಿಬಂದಿದೆ. ಅದರ ಬಗ್ಗೆ ನಾನು ಹೆಚ್ಚು ಹೇಳಬೇಕಾದ ಅಗತ್ಯ ಇಲ್ಲ, ನಾನು ಈ ದೇಶದ ರಾಜಕೀಯದಲ್ಲಿ ಹಿಂದೂತ್ವದ ಮೇಲುಗೈ ಬಗ್ಗೆ ಹೇಳುತ್ತಿದ್ದೇನೆ. ಅದನ್ನು ಹೆಚ್ಚು ವಿವರಿಸಬೇಕಾದ ಅಗತ್ಯವಿಲ್ಲ. ಹಾಗಾಗಿ ಭಾರತದ syncretic culture ಏನಿದೆ, ಭಾರತದ ಹಲವು ಮತಧರ್ಮಗಳ, ಹಲವು ಜಾತಿಗಳ, ಹಲವು ನಂಬಿಕೆಗಳ, ಸಹಬಾಳ್ವೆಯ ಸಂಸ್ಕೃತಿಗೆ ಬಹಳ ದೊಡ್ಡ ಅಪಾಯ ಬಂದಿರುವುದು ಹಿಂದೂತ್ವದಿಂದ. ಆ ಅಪಾಯ ಭಾರತ ದೇಶದಲ್ಲಿ ಬಹಳ ತೀವ್ರವಾಗಿ ಎದುರಿಸುತ್ತಿರುವ ಪ್ರದೇಶಗಳಲ್ಲಿ ಕರಾವಳಿ ಕೂಡಾ ಒಂದು ಎಂದು ಭಾವಿಸಿದ್ದೇನೆ.

ವಿಷ್ಣು: ಕೆಲವು ವರ್ಷಗಳ ಹಿಂದೆ ನಾವಿಬ್ಬರೂ ಹೀಗೆ ಏನೋ ಒಂದು ವಿಷಯದ ಬಗ್ಗೆ ಮಾತಾಡ್ತಾ ಇದ್ವಿ. We talked about hope. ಆವಾಗ ನೀವೊಂದು ಮಾತು ಹೇಳಿದ್ರಿ. ನೀವು ನನ್ನ ವಯಸ್ಸಿನಲ್ಲಿದ್ದಾಗ ನಿಮಗೆ you had at least the communist party ಮತ್ತು ನಿಮ್ಮ ಬಡತನ ಮತ್ತು, ನಿಮ್ಮ beliefಗೆ, ನೀವು ಪಟ್ಟ ಅವಮಾನಕ್ಕೆ , ಕಮ್ಯುನಿಸ್ಟ್ ಪಾರ್ಟಿ ಒಂದು hope ಆಗಿ act ಮಾಡ್ತಿತ್ತು. ಮತ್ತು ನಿಮ್ಮ humiliation ಮತ್ತು lack of dignity, ಆ ಪಾರ್ಟಿ ಒಳಗಡೆ ನೀವು ಅದನ್ನು ಮರೆಯುತ್ತಿದ್ರಿ. ಆಮೇಲೆ ನೀವು ಜೋಕಾಗಿ ನಿಮ್ಮ ಜನರೇಷನ್‍ಗೆ ಅದೂ ಕೂಡ ಇಲ್ಲ ಎಂದು ಹೇಳಿದ್ರಿ. Do you think we can find hope anywhere?

ರಾಜಶೇಖರ: ನಾನು ನಿಮ್ಮ ಬಗ್ಗೆ ಏನನ್ನು ಹೇಳಲಾರೆ, ನಿಮಗೆ ಆಶಯ ಹುಟ್ಟಿಸುವಂಥ, ಭರವಸೆ ಹುಟ್ಟಿಸುವಂತಹ, ಯಾವ ಮಾತು ನನಗೆ ಹೊಳೆಯುತ್ತಿಲ್ಲ ಸದ್ಯಕ್ಕೆ. ನನ್ನ ಬಗ್ಗೆ ಹೇಳುವುದಾದರೆ, ಹೌದು, ನನ್ನ ಯೌವ್ವನದಲ್ಲಿ ನನ್ನ ಬಡತನ, ನನ್ನ ಕಂಗಾಲು ಸ್ಥಿತಿ, ಇವುಗಳಿಗೆ ನಾನು ಕಂಡುಕೊಂಡ ಒಂದು ಪರಿಹಾರ antidote ಅಂದ್ರೆ, ಕಮ್ಯುನಿಸ್ಟ್ ಐಡಿಯಾಲಜಿ. ಈಗ ಅದು ನನಗೆ ಒಂದು ಭ್ರಮೆ ಅಂತಲೇ ಅನ್ಸುತ್ತೆ. ಯಾಕೆಂದ್ರೆ ನಮ್ಮ ಪರಿಸರದಲ್ಲಿ ನಾನು ಕಾಣದ ಸಮಾನತೆಯನ್ನ ನಾನು ಐಡಿಯಾಲಜಿಯಲ್ಲಿ, ಚಳುವಳಿಯಲ್ಲಿ ಕಂಡುಕೊಂಡೆ. ಮತ್ತು

ಎಲ್ಲಿ ಸಮಾನತೆ ಇರುತ್ತೋ ಅಲ್ಲಿ ಮೇಲುಕೀಳಿನ ಪ್ರಶ್ನೆ ಇರೋದಿಲ್ಲ. ಕೆಲವರಿಗೆ ಗೌರವ, ಕೆಲವರಿಗೆ ಮನ್ನಣೆ, ಇನ್ನೂಕೆಲವರಿಗೆ ತಿರಸ್ಕಾರ ಅನ್ನುವ ತಾರತಮ್ಯ ಇರುವುದಿಲ್ಲ. ಸಮಾನತೆ ಅನ್ನೋದು ಅದರೊಟ್ಟಿಗೆ ಒಂದು ಆತ್ಮಪ್ರತಿಷ್ಠೆಯನ್ನು ಆತ್ಮಪ್ರತ್ಯಯವನ್ನು ತಂದುಕೊಡುತ್ತೆ.

ನನಗೆ ಆ ಕಾರಣಕ್ಕೆ ಕಮ್ಯುನಿಸ್ಟ್ ಐಡಿಯಾಲಜಿ ಅಪ್ಯಾಯಮಾನವಾಗಿತ್ತು ಆ ಕಾಲಕ್ಕೆ. ಆದರೆ ಅದು ಅಷ್ಟು ಒಳ್ಳೆಯ ಕಾರಣ ಅಲ್ಲ ಅನ್ಸುತ್ತೆ ಯಾಕೆಂದ್ರೆ ನಾನು ಹೇಳಿದ ಇದೇ ಕಾರಣಗಳಿಗೆ ಮತ್ತು ನನ್ನಂಥದೇ ಸ್ಥಿತಿಯಲ್ಲಿದ್ದ ಯುವಕರಿಗೆ ಆರೆಸ್ಸೆಸ್ಸ್ ಬಹಳ ಅಪ್ಯಾಯಮಾನವಾಗಿತ್ತು. ಯಾಕೆಂದ್ರೆ ಅರೆಸ್ಸೆಸ್ಸ್ ಕೂಡ ಅದರ ಶಾಖೆಗಳಲ್ಲಿ ಒಂದು ಥರದ ಸಮಾನತೆಯನ್ನು ಆಚರಿಸುತ್ತೆ. ಸಮಾನತೆ ಮತ್ತು ಸಮಾನ ಗೌರವ, ಸ್ಥಾನಮಾನಗಳ ಭರವಸೆಯನ್ನು ಕೊಡುತ್ತೆ. ಬಹುಶಃ ಈ ಸಮಾನತೆಯ ಭರವಸೆ ಮತ್ತು ಗೌರವದ ಆಶ್ವಾಸನೆ ಇದನ್ನು ಕಮ್ಯುನಿಸ್ಟ್ ಪಕ್ಷಗಳಿಗಿಂತ ಹೆಚ್ಚು ಇವತ್ತು ಆರೆಸ್ಸೆಸ್ಸ್ ಕೊಡುವ ಸ್ಥಿತಿಯಲ್ಲಿದೆ. ಯಾಕಂದ್ರೆ ಅಂತರ್ರಾಷ್ಟ್ರೀಯವಾಗಿ ಕಮ್ಯುನಿಸ್ಟ್ ಚಳುವಳಿ ಇವತ್ತು ಹಿನ್ನಡೆಯನ್ನು ಅನುಭವಿಸುತ್ತಿದೆ. ಅದು ಕೊಟ್ಟ ಭರವಸೆಗಳೆಲ್ಲಾ ಸುಳ್ಳಾಗಿಬಿಟ್ಟಿವೆ. ಹಾಗಾಗಿ ನಾವು ಈಗ ನೆಲೆಯಿಲ್ಲದ ಜನಗಳಾಗಿಬಿಟ್ಟಿದ್ದೇವೆ. ನಾನು ನಿಮ್ಮ ಈ ತಲೆಮಾರಿಗೆ ಕಮ್ಯುನಿಸ್ಟ್ ಪಕ್ಷ ಆ ಕಾಲಕ್ಕೆ ಕೊಟ್ಟ ಸಮಾನತೆಯ ಆಶ್ವಾಸನೆ ಕೂಡ ಇಲ್ಲ ಎಂದಾಗ, ನಾನು ಏನು ಹೇಳ್ತಾ ಇದೀನಂದ್ರೆ, ನಾವೆಲ್ಲರೂ ನೆಲೆ ಕಳೆದುಕೊಂಡುಬಿಟ್ಟಿದ್ದೇವೆ. ಇವತ್ತಿಗೂ ಕೂಡಾ ನನ್ನ ನಂಬಿಕೆ ಏನಂದ್ರೆ ಕಮ್ಯುನಿಸ್ಟ್ ಚಳುವಳಿ ಮತ್ತು ಕಮ್ಯುನಿಸ್ಟ್ ಪಕ್ಷದ ಆದರ್ಶಗಳು ಈ ಸಮಾಜಕ್ಕೆ ಅತ್ಯಗತ್ಯವಾಗಿ ಬೇಕು. ಆದರೆ ಚಳುವಳಿ ಇವತ್ತು ದಿಕ್ಕೆಟ್ಟ ಸ್ಥಿತಿಯಲ್ಲಿದೆ. ಅಂದ್ರೆ ಅರ್ಥ ಈ ಸಮಾಜವೇ ದಿಕ್ಕೆಟ್ಟ ಸ್ಥಿತಿಯಲ್ಲಿದೆ. ನಾವೆಲ್ಲರೂ ನಿಜವಾಗಲೂ ಕಾಲಡಿಯೇ ನೆಲವೇ ಕುಸಿದುಹೋಗಿರೋ ಸ್ಥಿತಿಯಲ್ಲಿರೋ ಜನಗಳು ಅನ್ಸುತ್ತೆ.

ವಿಷ್ಣು: ಈಗ ನೀವು ನಾವೆಲ್ಲ ಅಂತ ಹೇಳುಕೊಳ್ಳುವಾಗ ಯಾರ ಬಗ್ಗೆ ಹೇಳ್ತಾ ಇದೀರಿ? ಅದರಲ್ಲಿ dalit movements ಗಳ ಬಗೆ ಅವರ ಬಗ್ಗೆ ಕೂಡ ಅದನ್ನೇ ಹೇಳ್ತೀರಾ ನೀವು? ಆಮೇಲೆ ಅದು ಮಾತ್ರವಲ್ಲದೆ ಕಮ್ಯುನಿಸ್ಟ್ ಚಳುವಳಿಯಲ್ಲಿ

ರಾಜಶೇಖರ: (ಪ್ರಶ್ನೆಯನ್ನು ಅರ್ಧಕ್ಕೆ ನಿಲ್ಲಿಸುತ್ತಾ) ನಾವೆಲ್ಲರು ಅಂದ್ರೆ ಕಮ್ಯುನಿಸ್ಟ್ ಚಳುವಳಿಯಲ್ಲಿ ಗುರುತಿಸಿಕೊಂಡ ನಾವೆಲ್ಲರು. ನಾನು ಈಗಿನ ದಲಿತ ಚಳುವಳಿಯ ಬಗ್ಗೆಯಾಗಲಿ ಈಗಿನ ಮಹಿಳಾವಾದಿಯ ಚಳುವಳಿಯ ಬಗ್ಗೆಯಾಗಲೀ, ನಾನು ಹೇಳಿಲ್ಲ. ಮತ್ತು ಇವತ್ತಿಗೂ ಈ ದೇಶದಲ್ಲಿ ಕೆಲವು ಶಕ್ತಿಶಾಲಿಯಾದ movements ಇದೆ. ಉದಾಹರಣೆಗೆ, ಆದಿವಾಸಿಗಳ ಚಳುವಳಿ ಇದೆ. ಅಭಿವೃದ್ಧಿ ಯೋಜನೆಗಳಲ್ಲಿ ಭೂಮಿ ಕಳೆದುಕೊಂಡವರ ಚಳುವಳಿ ಇದೆ. ಆ ಚಳುವಳಿಗಳಲ್ಲಿ ಜೊತೆ ಕೂಡಾ ಗುರುತಿಸಿಕೊಂಡವರು ಇದ್ದಾರೆ. ನಾನು ಅದರ ಬಗ್ಗೆ ಹೇಳಿಲ್ಲ, ನಾನು ಒಂದು ಕಾಲಕ್ಕೆ ಕಮ್ಯುನಿಸ್ಟ್ ಚಳುವಳಿಯಲ್ಲಿ ಗುರುತಿಸಿಕೊಂಡ ನಮ್ಮಂತಹವರು ನಿಜಕ್ಕೂ ದಿಕ್ಕೆಟ್ಟ ಜನಗಳಾಗಿದ್ದೇವೆ.

1985 ರಲ್ಲಿ ಟಿ. ಪಿ . ಅಶೋಕ್ ಮತ್ತು ಎ. ಎನ್ ಮುಕುಂದ್ ಜೊತೆ

 

ವಿಷ್ಣು: ಆದರೆ ಒಂದಿದೆ, ಇತಿಹಾಸದ ಬಗ್ಗೆ ಸುಳ್ಳು ಹೇಳೋ ಅಭ್ಯಾಸ? for example, fascism ಮತ್ತು American imperialism ಬಗ್ಗೆ ಎಷ್ಟು ಕಟುವಾಗಿ ಟೀಕೆ ಮಾಡ್ತಾರೋ ಅದೇ attitude ಬೇರೆ mass murderers ಬಗ್ಗೆ ಇಲ್ಲ. ಅಂದ್ರೆ ಕೆಲವು mass murderers ರವರು Benign mass murderers . ಅವರು ನಮ್ಮವರು. ಉಳಿದವರೆಲ್ಲಾ ಅಂದ್ರೆ ನಾನು ಸ್ಪೆಸಿಫಿಕ್ ಆಗಿ ಹೇಳ್ಬೇಕಂದ್ರೆ ಸ್ಟಾಲಿನ್ ಮತ್ತು ಮಾವೋ ಅಂತಾನೇ ಇಟ್ಕೊಳ್ಳಿ. ಇವತ್ತಿಗೂ ಕೂಡಾ ಕಾಮ್ರೇಡ್ ಸ್ಟಾಲಿನ್ ಅಂತಲೇ ಕರಿತಾರೆ.

ರಾಜಶೇಖರ: ನಿಮ್ಮ ಮಾತನ್ನು ಬಹಳ ಒಪ್ಪಿಕೊಳ್ಳುತ್ತೇನೆ. ಈ ವಿಮರ್ಶೆಯನ್ನು ಮತ್ತು CPM ಬಗ್ಗೇನೆ ನಾನು ಮಾಡಿದ್ದೇನೆ. ಮತ್ತು ನಾನು ಅಂದ್ರೆ ನಾನು ಅಂತ ಹೇಳೋಲ್ಲ. ಜಗತ್ತಿನಾದ್ಯಂತ ಕಮ್ಯುನಿಸ್ಟ್ ಪಕ್ಷಗಳ ಜೊತೆ, ಕಮ್ಯುನಿಸ್ಟ್ ಚಳುವಳಿಗಳ ಜೊತೆ ಗುರುತಿಸಿಕೊಳ್ಳದೇ ಇವತ್ತಿಗೂ ಎಡಪಂಥೀಯರಾಗಿ ಉಳಿದಿರುವ ಜನಗಳು ಈ ಮಾತನ್ನು ಹೇಳಿದ್ದಾರೆ. ಯಾಕೆ ಕಮ್ಯುನಿಸ್ಟ್ ಪಕ್ಷಗಳಲ್ಲಿ ಇವತ್ತಿಗೂ ನಿಜವಾದ ಆತ್ಮಶೋಧನೆ ಇಲ್ಲ. ಯಾಕೆ ಸ್ಟಾಲಿನ್‌ನ ಅತಿರೇಕಗಳು ಯಾಕಾದವು? ಅದು ಒಬ್ಬ ಮನುಷ್ಯನ ನಿರ್ಧಾರದ ಪರಿಣಾಮವೋ? ಅಥವಾ ಐಡಿಯಾಲಜಿಯಲ್ಲೇ ಅಂತ ಕ್ರೌರ್ಯವನ್ನು ಅನಿವಾರ್ಯಗೊಳಿಸುವ ಅಂಶಗಳು ಇದಾವೋ. ಈ ಪ್ರಶ್ನೆಗಳ ಬಗ್ಗೆ ಆಳವಾಗಿ ಮತ್ತು ಹೆಚ್ಚು ತಾತ್ವಿಕವಾಗಿ ಆತ್ಮಶೋಧನೆಯ ರೇಖೆಯಲ್ಲಿ ಯೋಚನೆ ಮಾಡಬೇಕು. ಅಂತ ಆಲೋಚನೆ ಕಮ್ಯುನಿಸ್ಟ್ ಪಕ್ಷಗಳಲ್ಲಿ ಬರುತ್ತಿಲ್ಲ.

ವಿಷ್ಣು: ಇವತ್ತಿಗೂ ಕಮ್ಯುನಿಸ್ಟ್ ಪಕ್ಷ vanguard ನಲ್ಲಿ ನಂಬಿಕೆ ಇಡುತ್ತೆ?

ರಾಜಶೇಖರ: ಹೌದು, ವಾಸ್ತವವಾಗಿ ಕಮ್ಯುನಿಸ್ಟ್ ಪಕ್ಷ ತನ್ನ ೧೯ನೇ ಶತಮಾನದ ಮೈಂಡ್ ಸೆಟ್‌ನಿಂದ ಈಚೆಗೆ ಬಂದಿಲ್ಲ. ಅದಕ್ಕೆ ಒಂದು ಉದಾಹರಣೆಯೆಂದರೆ, ಇವತ್ತಿಗೂ ಕೂಡಾ ನಾನು ಮಾಡಿದ, ನಾನು ಮಾಡ್ತಿರೋ, ಇದು ನಾನು ಹೇಳ್ತಾ ಇರೋ ಮಾತಲ್ಲ. ನಾನು ಅವರ ಹೆಸರನ್ನು ಮರೆತಿದ್ದೇನೆ. ಬಹಳ ಸುಪ್ರಸಿದ್ಧ ಸಮಾಜಶಾಸ್ತ್ರಜ್ಞ ಹೇಳಿದ್ದಾರೆ: ಕಮ್ಯುನಿಸ್ಟ್ ಪಕ್ಷಗಳು ಇವತ್ತಿಗೂ ೧೯ನೇ ಶತಮಾನದ secret cellಗಳ ನುಡಿಗಟ್ಟಿನಲ್ಲೇ ಯೋಚನೆ ಮಾಡ್ತಿವೆ. ೧೯ನೇ ಶತಮಾನದಲ್ಲಿ ಮಾಧ್ಯಮಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯದೇ ಇದ್ದಾಗ, ಪ್ರಭುತ್ವದ ಕ್ರೌರ್ಯವನ್ನು ಎದುರಿಸುವುದಕ್ಕೆ ರಹಸ್ಯ ಕಾರ್ಯಾಚರಣೆ ಅಗತ್ಯವಾಗಿತ್ತು. ಅದು ಸಾಧ್ಯ ಕೂಡಾ ಆಗಿತ್ತು. ಈ ಇಂಟರ್ನೆಟ್ ಯುಗದಲ್ಲಿ ನೀವು ಏನನ್ನು ರಹಸ್ಯವಾಗಿಡ್ತೀರಿ. ನೀವು ಎಷ್ಟು ದಿನ ರಹಸ್ಯವಾಗಿಡ್ತೀರಿ. ಇದು ಬಹಳ ದೊಡ್ಡ ಪ್ರಶ್ನೆ. ಆದರೆ ಕಮ್ಯುನಿಸ್ಟ್ ಪಕ್ಷಗಳಿಗೆ ಇವತ್ತಿಗೂ ಕೂಡಾ ತಾವು ಎದುರಿಸುತ್ತಿರುವ ಮಾಧ್ಯಮಗಳ ಸ್ಫೋಟದ ಸಮಸ್ಯೆಯ ಅರಿವಿಲ್ಲ. Imagination ಇಲ್ಲ. ಅದು pathetic. ಅದು ಅವ್ರು ೧೯ನೇ ಶತಮಾನದ secret cell ನ ರೀತಿಯಲ್ಲೇ ಕಾರ್ಯಾಚರಣೆ ಮಾಡುತ್ತಿದ್ದಾರೆ. It’s laughable. ಅದೊಂದು ಹಾಸ್ಯಾಸ್ಪದವಾದದ್ದು. ಯಾಕಂದ್ರೆ ಇಡೀ ಜಗತ್ತಿಗೆ ಗೊತ್ತಿದೆ, ಸೋವಿಯತ್ ರಷ್ಯಾದ excessಗಳು ಏನು ಅಂತ? ಅತಿರೇಕಗಳು ಏನು ಅಂತ? ಇಡೀ ಜಗತ್ತಿಗೆ ಸರಿಸುಮಾರಾಗಿ ಸ್ಟಾಲಿನ್‌ನ ಅತ್ಯಾಚಾರ, ಅಕ್ರಮಗಳ ಬಗ್ಗೆ ಒಂದು ಅರಿವು ಇದೆ. ಮಾವೋ ನಡೆಸಿದ ಸಾಂಸ್ಕೃತಿಕ ಕ್ರಾಂತಿಯ ಹೆಸರಲ್ಲಿ ನಡೆದ ಅನ್ಯಾಯಗಳ ಅರಿವಿದೆ. ಆದರೆ ನಮ್ಮ ಕಮ್ಯುನಿಸ್ಟ್ ಪಕ್ಷಗಳಲ್ಲಿ ಅದರ ಬಗ್ಗೆ ಮಾತಾಡೋದು, ದ್ರೋಹ ಅಂತ ಪರಿಗಣಿಸುತ್ತಾರೆ. ನೀವು ಒಂದು ವಿಷಯದ ಬಗ್ಗೆ ಮಾತಾಡದೇ ಇದ್ರೆ, ಆ ಸಮಸ್ಯೆ ಇಲ್ಲವಾಗಿಬಿಡುತ್ತಾ? ಇದು ನಿಜಕ್ಕೂ ಗಂಭೀರವಾಗಿ ಪರಿಗಣಿಸಬೇಕಾದ್ದು.

ಹಾಗಾಗಿ ಕಮ್ಯುನಿಸ್ಟ್ ಪಕ್ಷಗಳಿಗೆ ಇವತ್ತು ಕೂಡಾ ಈ ಪ್ರಶ್ನೆಗಳನ್ನು ಆಳವಾಗಿ ತಾತ್ವಿಕವಾಗಿ ಪ್ರಾಮಾಣಿಕವಾಗಿ ಯೋಚನೆ ಮಾಡುವ ಒಂದು ಪರಂಪರೆ ಇಲ್ಲ. ಅದು ಬಹಳ ನಿರಾಶೆ ಹುಟ್ಟಿಸೋ ವಿಷಯ. ಯಾಕಂದ್ರೆ (ಪ್ರಶ್ನೆಗಾರರು: ironic ಅಲ್ವಾ ಅದು) ಸ್ಟಾಲಿನ್‌ನ ಅತಿರೇಕ, ಮಾವೋನ ಅತಿರೇಕ, ಕೆಂಬೋಡಿಯಾದಲ್ಲಿ ಪೋಲ್ಪಾಟ್‌ನ ನರಮೇಧ ಇವುಗಳ ಬಗ್ಗೆ ಅವ್ರು ಚರ್ಚೆ ಮಾಡೋದಿಲ್ಲ, ಮಾತ್ರ ಅಲ್ಲ, ೯೨ರಲ್ಲಿ ಯಾಕೆ ಗೊರ್ಬಾಚೆವ್‌ನ ಕಾಲದಲ್ಲಿ ಕಮ್ಯುನಿಸ್ಟ್ ಆಡಳಿತ ಅಂತ್ಯಗೊಂಡಿತು ಅಂತಾನು ಕೂಡಾ ಇವತ್ತಿಗೂ ಗಂಭೀರವಾದ ಚರ್ಚೆ ಕಮ್ಯುನಿಸ್ಟ್ ಪಕ್ಷಗಳಲ್ಲಿ ಕಾಣ್ತಾ ಇಲ್ಲ. ಇವತ್ತಿಗೂ CIA ಕುತಂತ್ರ, ಬಂಡವಾಳಶಾಹಿ ಸಾಮ್ರಾಜ್ಯಶಾಹಿ ಕುತಂತ್ರ ಅಂತಾನೇ ಮಾತಾಡ್ತಾರೆ. ಸಿಐಎ ಕುತಂತ್ರ ಖಂಡಿತವಾಗಿ ಕೆಲಸ ಮಾಡಿರಬಹುದು. ಸಾಮ್ರಾಜ್ಯಶಾಹಿ, ಬಂಡವಾಳಶಾಹಿ ಯಾವತ್ತೂ ಕಮ್ಯುನಿಸ್ಟರ ಬಗ್ಗೆ ಉದಾರವಾಗಿ ವರ್ತಿಸಿದ್ದಿಲ್ಲ. ಅವೆಲ್ಲವನ್ನೂ ಒಪ್ಕೊಂಡು ಸೋವಿಯತ್ ರಷ್ಯಾದ ಒಳಗೆಯೇ ಅದರ ವಿನಾಶಕ್ಕೆ ಕಾರಣವಾದ ಅಂಶಗಳು ಇರಲಿಲ್ವಾ ಅನ್ನೋ ಪ್ರಶ್ನೆ ಬಗ್ಗೆ ಯೋಚನೆ ಮಾಡ್ಬೇಕು. ಆ ರೀತಿಯ ಚಿಂತನೆ ಎಲ್ಲೂ ಕಾಣ್ತಿಲ್ಲ. ಇದು ನಿರಾಶವಾದದ್ದು ಮತ್ತು ಇವತ್ತು ಚೀನಾ ಹಿಡಿದಿರುವ ದಾರಿಯ ಬಗ್ಗೆ. ಇವತ್ತಿಗೂ ನೀವು CPMನ ಪ್ರಕಟನೆಗಳನ್ನು ನೋಡಿದರೆ ಚೀನಾದ ಬಗ್ಗೆ ಆರಾಧನೆಯ ಭಾವವೇ ಕಾಣುತ್ತದೆಯೇ ಹೊರತು, ಚೀನಾದಲ್ಲಿ ನಡೆಯುತ್ತಿರುವ ಎಲ್ಲವೂ ಸಮಾಜವಾದದ ಆದರ್ಶಗಳಿಗನುಗುಣವಾದದ್ದೂ. ಚೀನಾ ಅದು ಒಂದು ಸರ್ವಾಧಿಕಾರದ ಅತ್ಯಂತ ಕೆಟ್ಟ ಅಂಶಗಳನ್ನು ಬಂಡವಾಳಶಾಹಿಯ ಅತ್ಯಂತ ಕೆಟ್ಟ ಅಂಶಗಳನ್ನು ಮೇಳೈಸಿಕೊಂಡ ಸಮಾಜ ಆಗಿರಬಹುದಲ್ಲವೇ? Worst of both, worst of capitalism, worst of authoritarianism. But no democracy. ಈ ಥರದ ಒಂದು ಸಮಾಜ ಚೀನಾದಲ್ಲೂ ಕೊರಿಯಾದಲ್ಲೂ ಬೆಳಿತಾ ಇದೆ ಅಂತ ಅನೇಕರು ಹೇಳ್ತಾ ಇದಾರೆ. ಜಗತ್ತಿನ ಅನೇಕ ದೇಶಗಳಲ್ಲಿ ಈ ಥರದ ಒಂದು ವ್ಯವಸ್ಥೆ ಬೆಳಿತಾ ಇದೆ. ಅಂದ್ರೆ ಸರ್ವಾಧಿಕಾರದ ಕಡೆಗೆ ಹೋಗ್ತಾ ಸಮಾನತೆ ಇಲ್ಲದ ಸರ್ವಾಧಿಕಾರ. ಪ್ರಜಾಪ್ರಭುತ್ವ ಇಲ್ಲದ ಕನ್ಸೂಮರ್ ಕಲ್ಚರ್. ಇದು ಜಗತ್ತಿನ ಅನೇಕ ದೇಶಗಳಲ್ಲಿ ಬೆಳಿತಾ ಇದೆ. ಚೀನಾದಲ್ಲಿ ಅದು ಉತ್ತುಂಗ ಸ್ಥಿತಿಯನ್ನು ತಲುಪಿದೆ. ಭಾರತ ಕೂಡಾ ಅದೇ ದಾರಿಯಲ್ಲಿದೆ. ಹೀಗಾಗಿ ಒಂದು ರೀತಿಯಲ್ಲಿ ನಾವು ಒಂದು ಹೊಸ ರೀತಿಯ ಬಿಕ್ಕಟ್ಟನ್ನು ಎದುರಿಸುತ್ತಾ ಇದೇವೆ. ಇದರ ಬಗ್ಗೆ ಕೂಡಾ ವಿಮರ್ಶಾತ್ಮಕ ದೃಷ್ಟಿಕೋನ ಕಮ್ಯುನಿಸ್ಟ್ ಪಕ್ಷಗಳಲ್ಲಿ ಇಲ್ಲ.

ಉಡುಪಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ

ವಿಷ್ಣು: ನಿಮ್ಮ ಪುಸ್ತಕ ‘ಕಾಗೋಡು ಸತ್ಯಾಗ್ರಹ’ ಅದರ ಬಗ್ಗೆ ಮಾತಾಡೋಣ… ಕರ್ನಾಟಕದಲ್ಲಿ ಹೆಚ್ಚು progressive movementsಗಳ ಇತಿಹಾಸ ಅಥವಾ tradition ಇಲ್ಲ, ಬೇರೆ ರಾಜ್ಯಗಳಿಗೆ ಹೋಲಿಸಿದರೆ. ಇದ್ಯಾಕೆ?

ರಾಜಶೇಖರ: ಅದಕ್ಕೆ ಕಾರಣ ಅಂದ್ರೆ, ಕರ್ನಾಟಕದಲ್ಲಿ ಒಂದು ಪ್ರೋಗ್ರೆಸ್ಸಿವ್ ಪ್ರಗತಿಶೀಲ ಚಳುವಳಿ ಬೆಳೆಯೋದು, ಇಲ್ಲೊಂದು ಕ್ರಿಯಾಶೀಲವಾದ ಕಾರ್ಮಿಕ ಸಂಘಟನೆ, ರೈತರ, ಕೃಷಿ ಕಾರ್ಮಿಕರ ಸಂಘಟನೆಗಳು ಕ್ರಿಯಾಶೀಲವಾಗಿದ್ದಾಗ ಮತ್ತು ಇವರ ರಾಜಕೀಯ ಮುನ್ನೆಲೆಗೆ ಬಂದಾಗ. ದುಡಿಯುವವರ ಸಂಘಟನೆ ಮತ್ತು ತುಳಿಯುವವರ ರಾಜಕೀಯ ಮುನ್ನೆಲೆಗೆ ಬಂದಾಗ; ಬರವಣಿಗೆಗೂ ಈ ಹೋರಾಟದ ರಾಜಕೀಯಕ್ಕೂ ಒಂದು ನೇರವಾದ ಸಂಬಂಧ ಇರುತ್ತೆ.

ಆದರೆ ಕರ್ನಾಟಕದಲ್ಲಿ ನಾನು ನೋಡಿದ ಹಾಗೆ ಅನೇಕ ಜನ ಪ್ರಗತಿಶೀಲರು ಪ್ರಗತಿಶೀಲರಾದದ್ದು ಮತ್ತು ಎಡಪಂಥದ ಕಡೆ ಆಕರ್ಷಿತರಾದದ್ದು, ಕರ್ನಾಟಕದಲ್ಲಿ ಒಂದು ಜೀವಂತವಾದ ಚಲನಶೀಲವಾದ ಕಾರ್ಮಿಕರ ಅಥವಾ ಬಡಜನರ ಹೋರಾಟ ಇತ್ತು ಅನ್ನುವ ಕಾರಣಕ್ಕಲ್ಲ; ಅದು ಅವರು ತಮ್ಮ ಆಸಕ್ತಿಗಳನ್ನು ಬೆಳೆಸಿಕೊಂಡಿದ್ದು, ಅವರ ಓದಿನ ಕಾರಣದಿಂದ. ಹಾಗಾಗಿ ಇಲ್ಲಿ ಪ್ರಗತಿಶೀಲತೆ ಅನ್ನೋದು ಅಧ್ಯಯನದಿಂದ ಬಂದಿದ್ದೇ ಹೊರತು ಜೀವನದ ನೇರ ಅನುಭವದಿಂದ ಬಂದದ್ದಲ್ಲ.

ಅದಕ್ಕೆ ಅದರದೇ ಆದ ಮಿತಿಗಳಿವೆ. ಆದರೆ ಹಾಗಂತ ನಾನು ಈ ಪ್ರಗತಿಶೀಲತೆಯನ್ನು ತಿರಸ್ಕರಿಸುವುದಿಲ್ಲ. ಯಾಕೆಂದ್ರೆ ನಾವು ಯಾವತ್ತೂ ಪ್ರತಿಗಾಮಿ ಧೋರಣೆಗಳ ಬದಲಿಗೆ ಪ್ರಗತಿಶೀಲ ಧೋರಣೆಗಳನ್ನು ಸ್ವಾಗತಿಸಲೇಬೇಕು. ಹಾಗಾಗಿ ನಾನು ಕನ್ನಡದ ಈ ಪ್ರಗತಿಶೀಲತೆ, ಅದರಲ್ಲಿ ಅನೇಕ ಸಮಸ್ಯೆಗಳಿದ್ದರೂ ಕೂಡಾ ನಾನು ಅದನ್ನು ಸ್ವಾಗತಿಸುತ್ತೇನೆ. ಮುಖ್ಯವಾಗಿ ನನಗೆ ಅದರ ಸಮಸ್ಯೆಯೇನೆಂದರೆ ಕನ್ನಡದ ಬರವಣಿಗೆಯಲ್ಲಿ ವ್ಯಕ್ತವಾಗುವ ಪ್ರಗತಿಶೀಲತೆಗೆ, ಕರ್ನಾಟಕದ ಬದುಕಿನ ಜೊತೆ ಹೆಚ್ಚು, ಅತ್ಯಂತ ನಿಕಟವಾದ ಸಂಪರ್ಕ ಇರಲಿಲ್ಲ. ಯಾಕಂದ್ರೆ ಕರ್ನಾಟಕದಲ್ಲಿ ಒಂದು ಕಾರ್ಮಿಕರ, ರೈತರ ಚಳುವಳಿ ಹೇಳಿಕೊಳ್ಳುವ ಪ್ರಮಾಣದಲ್ಲಿ ಇರಲಿಲ್ಲ.

ವಿಷ್ಣು: ಒಂದ್ಸಲ ಈ ವಿಷಯದ ಬಗ್ಗೆ ಮಾತಾಡ್ತಾ ಇದ್ವಿ. ಕರಾವಳಿ ಬಗ್ಗೆ ಬರೆಯುತ್ತಿದ್ದ ಲೇಖಕರಿಗೆ ಕೂಡಾ ಬೇರೆ ಬೇರೆ ಮೀನಿನ variety ಗೊತ್ತಿಲ್ಲ ಅಂತ. ನಿಮಗೆ ನೆನಪಿದೆಯಾ?

ರಾಜಶೇಖರ: ನನಗೆ ನೆನಪಿದೆ. ಅದನ್ನು ನಾನು ಹೇಳಿದ್ದು ಬಹುಶಃ ಲೋಹಿಯಾವಾದದ ಗಾಢ ಪ್ರಭಾವದಲ್ಲಿ; ಇಲ್ಲಿನ ಜೀವನ, ಇಲ್ಲಿನ ಬರವಣಿಗೆಯನ್ನು ನೋಡಿದಾಗ; ನನಗೆ ಮಾತ್ರ ಅಲ್ಲ, ಯಾರಿಗಾದರೂ ಅನ್ನಿಸುವಂಥ ವಿಷಯವೇ. ನಾನು ಆ ಉದಾಹರಣೆಯನ್ನು ಹೇಳಿದ್ದೇನೆ ಕೂಡಾ. ಕನ್ನಡದ ಮಹತ್ವಪೂರ್ಣ ಕೃತಿಗಳಲ್ಲಿ ಒಂದು: ಶಿವರಾಮಕಾರಂತರ ‘ಮರಳಿ ಮಣ್ಣಿಗೆ’. ಶಿವರಾಮ ಕಾರಂತರ ಮರಳಿ ಮಣ್ಣಿಗೆ ೧೯ನೇ ಶತಮಾದ ಅಂತ್ಯದಿಂದ ತೊಡಗಿ ಸರಿಸುಮಾರು ಭಾರತದ ಸ್ವಾತಂತ್ರ್ಯ ಚಳುವಳಿ ಮುಕ್ತಾಯದ ಹಂತದವರೆಗಿನ ಒಂದು ಕಾಲಘಟ್ಟದ, ನಮ್ಮ ಕರಾವಳಿಯ ಕೋಟಾ ಮತ್ತು ಅದರ ಪರಿಸರದ ಬದುಕನ್ನು ಚಿತ್ರಿಸುವ ಕಾದಂಬರಿ. ಆದರೆ ಆ ಇಡೀ ಕಾದಂಬರಿಯನ್ನು ಓದಿದ ಯಾರಿಗಾದರೂ ತಕ್ಷಣ ಅನ್ನಿಸುವ ಒಂದು ವಿಷಯವೆಂದರೆ ಕಾದಂಬರಿಯಲ್ಲಿ ಬರುವ ಮುಖ್ಯ ಪಾತ್ರಗಳಾದ ರಾಮೈತಾಳ, ಅವನ ಕುಟುಂಬ, ಅವನಿಗೆ ಪ್ರತಿಯಾಗಿ ಬರುವ ಕೋಟಾದ ಇನ್ನೊಂದು ಪಾತ್ರ ಸೀನಮಯ್ಯ. ಇವರಿಬ್ಬರ ಜೀವನದ ಮುಖಾಂತರ ಮಾತ್ರ ಕೋಟಾದ ಪರಿಸರವನ್ನು ಕಾರಂತರು ಚಿತ್ರಿಸುತ್ತಾರೆಯೇ ವಿನಹ ಆ ಕಾದಂಬರಿಯಲ್ಲಿ ಬರುವ ಬ್ರಾಹ್ಮಣೇತರ ಪಾತ್ರಗಳು ಗಂಡಸರು ಮತ್ತು ಹೆಂಗಸರು ಬರೀ ರೇಖಾಚಿತ್ರಗಳಾಗಿ ಮೂಡಿಬರುತ್ತವೆ, ಬರೀ ಕ್ಯಾರಿಕೇಚರ್ಸ್ ಆಗಿ ಮೂಡಿಬರುತ್ತವೆ. ಇದು ಯಾಕೆ ಅನ್ನೋ ಪ್ರಶ್ನೆ ಇದೆ. ಯಾಕೆಂದರೆ ಅವತ್ತಾಗಲಿ ಇವತ್ತಾಗಲಿ ಕೋಟಾ, ಕರಾವಳಿಯಲ್ಲಿ ಭಾರತದ ಬೇರೆ ಕಡೆ ಇರುವ ಹಾಗೆಯೇ ಬಹು ಸಂಖ್ಯಾತರು ಬ್ರಾಹ್ಮಣರಲ್ಲ. ಬ್ರಾಹ್ಮಣೇತರ ದುಡಿಯುವ ಜಾತಿಗಳೇ ಕರಾವಳಿಯಲ್ಲೂ ಕೋಟಾದಲ್ಲೂ ಬಹುಸಂಖ್ಯಾತರು. ಮೀನುಗಾರರು, ನೇಕಾರರು, ಗಾಣಿಗರು, ಚರ್ಮದ ಕಾಯಕ ಮಾಡುವವರು, ದಲಿತರು, ಈ ರೀತಿ ಬ್ರಾಹ್ಮಣೇತರ ಸಮುದಾಯದ್ದೇ ದೊಡ್ಡ ಸಂಖ್ಯೆಯಾದರೂ ಕೂಡಾ, ಕೋಟಾದ ಪರಿಸರವನ್ನು ನಿರೂಪಿಸುವುದಕ್ಕೆ ಪ್ರಯತ್ನಿಸುವ ಕಲಾಕೃತಿಯಲ್ಲಿ ಯಾಕೆ ಈ ಜನಗಳು ನಾಪತ್ತೆಯಾಗಿದ್ದಾರೆ, ಅನ್ನುವ ಪ್ರಶ್ನೆ. ಇದು ಲೋಹಿಯಾವಾದದ ಬೆಳಕಿನಲ್ಲಿ ಈ ಕೃತಿಯನ್ನು ನೋಡಿದಾಗ ಯಾರಿಗಾದರೂ ಹೊಳೆಯಬಹುದಾದದ್ದೇ. ಅದಕ್ಕೆ ಸರಿಯಾಗಿ ಕೋಟಾ ಕಡಲ ತೀರದ ಒಂದು ಹಳ್ಳಿ. ಕಾದಂಬರಿಯಲ್ಲಿ ಉದ್ದಕ್ಕೂ ಕಡಲಿನ ಅನೇಕ ವರ್ಣನೆಗಳು ಬರುತ್ತೆ. ಅಲ್ಲಿನ ಬಿರುಗಾಳಿ, ಕಡಲಿನಲ್ಲಿ ಬರುವ ನೆರೆ, ಮಳೆಗಾಲದಲ್ಲಿ ಬರುವ ಪ್ರವಾಹ, ಅದರ ವಿರುದ್ಧ ರಾಮೈತಾಳಮತ್ತು ಅವರ ಕುಟುಂಬದವರು ಸೆಣಸಿ ಅಲ್ಲಿ ಆ ಕಾಲಕ್ಕೆ ಅವರ ಮನೆಗೆ, ಗೃಹಕೃತ್ಯಕ್ಕೆ ಅಗತ್ಯವಾದ ಕಟ್ಟಿಗೆಗಳನ್ನೆಲ್ಲಾ ಆ ಪ್ರವಾಹದಲ್ಲೇ ಸಂಗ್ರಹಿಸುವ ಚಿತ್ರಣಗಳು – ಇವೆಲ್ಲಾ ಬರುತ್ತೆ, ಸರಿ. ಆದರೆ ಯಾಕೆ ಮೀನುಗಾರಿಕೆಯ ಒಂದೇ ಒಂದು ವಿವರ ಇಲ್ಲ. ಯಾಕೆ ಬರೀ ಬ್ರಾಹ್ಮಣರ ಅಡುಗೆಯ ಪ್ರಸ್ತಾಪ ಮಾತ್ರ ಬರುತ್ತೆ. ರಾಮೈತಾಳ ಅವರ ಮನೆಯಲ್ಲಿ ಅವರ ಪತ್ನಿ, ಅವರ ಅಕ್ಕ ಮಾಡುವ ಅಡುಗೆ ಮಾತ್ರ ಯಾಕೆ ಪ್ರಸ್ತಾಪ ಬರುತ್ತೆ? (ಮಧ್ಯದಲ್ಲಿ ಪ್ರಶ್ನೆಗಾರರು: ನಾವು ಮಾತಾಡಿದ ಹಾಗೆ ಅದೊಂದು itself rich universe) ಹೌದು. ಇಲ್ಲಿನ ಪರಿಸರವೇ ಎಷ್ಟು ಶ್ರೀಮಂತವಾದ ದಟ್ಟವಾದ ಪರಿಸರ. ಆದರೆ ಯಾಕೆ ಒಂದು ಸಣ್ಣ ಸಮುದಾಯದ ಬದುಕನ್ನು ಇಡೀ ಪರಿಸರದ ಬದುಕು ಅನ್ನುವ ಹಾಗೆ ಚಿತ್ರಿತವಾಗಿದೆ ಅನ್ನೋ ಪ್ರಶ್ನೆಯನ್ನು ಕೇಳಬೇಕು. ಆದರೆ ಈ ಪ್ರಶ್ನೆಯನ್ನು ಕೇಳುವಾಗ ನಾವು ಬಹಳ ವಿಮರ್ಶಾತ್ಮಕವಾದ ಎಚ್ಚರವನ್ನು ವಹಿಸಬೇಕಾಗುತ್ತೆ.

ಯಾಕಂದ್ರೆ ಲೋಹಿಯಾವಾದ ಕರ್ನಾಟಕದಲ್ಲಿ ಕನ್ನಡದಲ್ಲಿ ಬಹಳ ದೊಡ್ಡ ಪ್ರಭಾವವನ್ನು ಬೀರಿದೆ. ಬಹುಮಟ್ಟಿಗೆ ಕನ್ನಡದ ಎಡಪಂಥೀಯ ಚಳುವಳಿ, ಸಮಾಜವಾದ ಚಳುವಳಿ ಅನ್ನೋದು ಲೋಹಿಯಾ ಅವರಿಂದ ಪ್ರಭಾವಿತವಾದದ್ದು. ಲೋಹಿಯಾ ಪ್ರಭಾವ ಕರ್ನಾಟಕಕ್ಕೆ ಬಂದದ್ದು ೫೦ರ ದಶಕದ ನಂತರ, ಮತ್ತು ೫೦ರ ದಶಕದ ನಂತರ ಭಾರತದಲ್ಲೂ, ಕರ್ನಾಟಕದಲ್ಲೂ ಅನೇಕ ರೀತಿಯ ರಾಜಕೀಯ ಬದಲಾವಣೆಗಳಾಗಿವೆ. ಸ್ವಾತಂತ್ರ್ಯ ಚಳುವಳಿಯ ನಂತರ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರ ಇಲ್ಲಿ ಕೆಳಜಾತಿಯವರ ಪ್ರಾತಿನಿಧ್ಯದ ಪ್ರಶ್ನೆ ಇಲ್ಲಿ ಬಹಳ ಮುಖ್ಯವಾಯಿತು. Representation. ಕೆಳಜಾತಿಯವರು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ರಾಜಕೀಯದಲ್ಲಿ ಸಾಮಾಜಿಕ ಅವಕಾಶಗಳಲ್ಲಿ, ಶಿಕ್ಷಣದಲ್ಲಿ – ಇವರ ಪ್ರಾತಿನಿಧ್ಯಕ್ಕೆ ಬಹಳ ದೊಡ್ಡ ರೀತಿಯ ಬೇಡಿಕೆ ಬಂತು ಮತ್ತು ಅದು ಪ್ರಜಾಪ್ರಭುತ್ವದ ತತ್ವಗಳಿಗೆ ಅನುಗುಣವಾದದ್ದಾಗಿತ್ತು.
ಅದಕ್ಕೆ ಸರಿಯಾಗಿ ಅಂಬೇಡ್ಕರರ ವಿಚಾರಗಳ ಬಹಳ ದೊಡ್ಡ ಪರಿಣಾಮವೂ ಕೂಡಾ ಅದೇ ಆಗಿತ್ತು. ಈ ದೇಶದ ದಲಿತರ ಪ್ರಾತಿನಿಧ್ಯಕ್ಕೆ ಅವರು ಮಾಡಿದ ಹೋರಾಟವೇನಿದೆ ಮತ್ತು ಮಹಿಳೆಯರಿಗೆ – (ದಲಿತರ, ಕೆಳಜಾತಿಯವರ, ಮೇಲ್ಜಾತಿಯವರ, ಸವರ್ಣೀಯರ – ಎಲ್ಲಾ ಸಾಮಾಜಿಕ ವರ್ಗಗಳ ಮಹಿಳೆಯರಿಗೆ) ಸಮಾನ ಹಕ್ಕುಗಳು ಬೇಕು ಅನ್ನುವ ದಿಸೆಯಲ್ಲಿ ಅಂಬೇಡ್ಕರರು ಮಾಡಿದ ಹೋರಾಟವೇನಿದೆ ಅದು ತನ್ನದೇ ಆದ ಪರಿಣಾಮಗಳನ್ನು ಬೀರುವುದಕ್ಕೆ ಪ್ರಾರಂಭ ಮಾಡಿತ್ತು. ಹಾಗಾಗಿ ೫೦ರ ದಶಕದ ನಂತರ ಪ್ರಾತಿನಿಧ್ಯದ ಪ್ರಶ್ನೆ ಬಹಳ ಪ್ರಮುಖವಾಗಿ ಬಂತು ಮತ್ತು ಅದರ ಪರಿಣಾಮಗಳನ್ನು ನಾವು ಇವತ್ತು ನೋಡ್ತಾ ಇದ್ದೇವೆ. ನಮ್ಮ ವಿಧಾನಸಭೆಗಳಲ್ಲಿ ಬ್ರಾಹ್ಮಣೇತರ ಜಾತಿಗಳಿಗೆ ಬಹಳ ದೊಡ್ಡ ಪ್ರಾತಿನಿಧ್ಯ ಇದೆ. ಮಹಿಳೆಯ ಪ್ರಾತಿನಿಧ್ಯಕ್ಕೋಸ್ಕರ ದೇಶದಾದ್ಯಂತ ಇವತ್ತು ಪ್ರಯತ್ನಗಳು ನಡೆಯುತ್ತಿವೆ. ಆದರೆ ಇದೇ ರೀತಿಯ ಪ್ರಾತಿನಿಧ್ಯ ಸಾಹಿತ್ಯದಲ್ಲಿ ಯಾಕಿಲ್ಲ ಅನ್ನೋ ಪ್ರಶ್ನೆ ಕಳೆದ ಕೆಲವು ದಶಕಗಳಿಂದ ಕೇಳಿ ಬರ್ತಾ ಇದೆ. ಇವತ್ತಿಗೂ ಕೂಡಾ ಅದು ಸಮಯೋಚಿತವಾದ ಬಹಳ relevant ಆದ ಪ್ರಶ್ನೆ. ಯಾಕೆ ಸಾಹಿತ್ಯದಲ್ಲಿ ಬರೀ ಬ್ರಾಹ್ಮಣ ಅನುಭವವನ್ನೇ ಇಡೀ ನಾಡಿನ ಅನುಭವ ಅನ್ನೋ ರೀತಿಯಲ್ಲಿ ಮತ್ತೆ ಮತ್ತೆ ಚಿತ್ರಣಗೊಳ್ಳುತ್ತೆ? ಯಾಕೆ ಬ್ರಾಹ್ಮಣರ ಅಡುಗೆ ಮಾತ್ರ ಕರ್ನಾಟಕದ ಅಡುಗೆ ಅನ್ನುವ ರೀತಿಯಲ್ಲಿ ಪ್ರತಿಬಿಂಬಿತವಾಗುತ್ತೆ? ನಮ್ಮ ಕರಾವಳಿಯಲ್ಲೇ ಮೀನಿನ ಅಡುಗೆಯಲ್ಲೇ ಎಷ್ಟು ತರಹದ ವೈವಿಧ್ಯಗಳಿವೆ. ಜಾತಿಜಾತಿಗಳ ನಡುವೆ ವೈವಿಧ್ಯ ಕಾಣುತ್ತೆ. ಯಾಕೆ ನಮ್ಮ ಸಾಹಿತ್ಯದಲ್ಲಿ ಬರೀ ಹಪ್ಪಳ, ಸಂಡಿಗೆ, ತಂಬಳಿ – ಇದರ ವರ್ಣನೆಯೇ ಮತ್ತೆ ಮತ್ತೆ ಬರುತ್ತೆ? ಯಾಕೆ ಮೀನಿನ ಸಾರು ಬರುವುದಿಲ್ಲ?

ವಿಷ್ಣು: ಈ ಪ್ರಶ್ನೆಯನ್ನೇ ವಿಸ್ತಾರ ಮಾಡಬಹುದೇ? Irrelevant .. ನೀವು ಮೀನು ತಿಂದಿದ್ದೀರಾ?
ರಾಜಶೇಖರ: ನಾನು ಮೀನು ತಿನ್ನಲಿಲ್ಲ, ಈ ಪ್ರಶ್ನೆಯನ್ನು ಕೇಳುವುದಕ್ಕೆ ನಾನು ಮೀನು ತಿನ್ನುವವನೇ ಆಗಬೇಕು ಅಂತಿಲ್ಲ. ನಾನು ಆ ತಲೆಮಾರಿನ ಲೇಖಕರ ಪ್ರತಿಭೆಯನ್ನು ಗುರುತಿಸಿಯೇ ನಾನು ಈ ಪ್ರಶ್ನೆ ಕೇಳ್ತಾ ಇದೀನಿ. ನಮ್ಮ ಕರ್ನಾಟಕದ ಶಿವರಾಮಕಾರಂತರಾಗಲಿ, ಮಾಸ್ತಿಯವರಾಗಲಿ, ಬೇಂದ್ರೆಯವರಾಗಲಿ, ಇವರೆಲ್ಲಾ ಬಹಳ ಪ್ರತಿಭಾವಂತ ಕವಿಗಳು/ಲೇಖಕರು. ಈ ಪ್ರತಿಭೆಯನ್ನು ಗುರುತಿಸಿಯೇ, ಇವರ ಜೀವನಾನುಭವದ ಒಂದು ಅದು ಮಿತಿಯೆಂದು ನಾನು ಹೇಳುವುದಿಲ್ಲ. ಯಾಕೆಂದ್ರೆ ಕಾರಂತರು ಕಡೆಗೂ ಕೂಡಾ ತನ್ನ ಅನುಭವಕ್ಕೆ ನಿಷ್ಠರಾಗಿದ್ದರು. ತಮ್ಮ ಅನುಭವಕ್ಕೆ ಪ್ರಾಮಾಣಿಕರಾಗಿದ್ದರು. ತನ್ನ ಬ್ರಾಹ್ಮಣ್ಯದ ಕಾರಣದಿಂದ ಅವರಿಗೆ ಕೋಟಾದಲ್ಲಿ ಇದ್ದೂ ಕೋಟಾದ ಬೇರೆ ಜಾತಿಗಳ ಬದುಕಿನ ವಿವರಗಳು ಗೊತ್ತಿಲ್ಲದೇ ಹೋದರೆ, ಅವರಿಗೆ ಮೀನು ತಿಂದ ಅನುಭವವೇ ಇಲ್ಲದೇ ಹೋದರೆ, ಮೀನುಗಾರಿಕೆಯ ವೃತ್ತಿಯ ವಿವರಗಳು ಗೊತ್ತಿಲ್ಲದೇ ಹೋದರೆ, I can’t blame him for that. ನಾನು ಅವರನ್ನು ದೋಷಾರೋಪಣೆಯ ಕಟಕಟೆಯಲ್ಲಿ ನಿಲ್ಲಿಸ್ತಾ ಇಲ್ಲ, ಖಂಡಿತವಾಗಿಯೂ. ಇದು ಆ ಕಾಲದ ಪ್ರತ್ಯಯ ಮಿತಿ ಅಂತ ಹೇಳ್ತಾ ಇದೀನಿ.

ವಿಷ್ಣು: ಅದರ ನಂತರ ಕರಾವಳಿಯ ಬಗ್ಗೆ ಬರೆದ ಲೇಖಕರ ಬಗ್ಗೆ ಕೂಡಾ ಅದೇ ಹೇಳ್ತಿರಾ?
ರಾಜಶೇಖರ: ಇವತ್ತಿನ ತಲೆಮಾರಿನ ಲೇಖಕರು, ಈ ಅನುಭವದ ಮಿತಿಯನ್ನು ಮೀರುವುದಕ್ಕೆ ಪ್ರಯತ್ನ ಪಡ್ತಿದ್ದಾರೆ. ಏನಿಲ್ಲವೆಂದರೂ ನಮ್ಮ ಜಾತಿ, ನಮ್ಮ ಅನುಭವಕ್ಕೆ ಒಂದು ಮಿತಿಯನ್ನು ಒಡ್ಡುತ್ತೆ, ನಾವು ಜಾತಿಯ ಗೋಡೆಗಳಲ್ಲಿ ಬದುಕ್ತಾ ಇದೇವೆ ಎಂಬ ಅರಿವು ಎಲ್ಲಾ ಲೇಖಕರಲ್ಲೂ ಇದೆ. ನಾನು ಇವತ್ತಿನದೇ ಸಮಕಾಲೀನ ಉದಾಹರಣೆ ಕೊಡುವುದಾದರೆ ನಮ್ಮ ಕರಾವಳಿಯ ಬಹಳ ದೊಡ್ಡ ಲೇಖಕಿ ವೈದೇಹಿಯವರಲ್ಲೂ ಆ ಅರಿವು ಇದೆ. ಇನ್ನೊಬ್ಬರು ಲೇಖಕಿ ಸಾರಾ ಅಬೂಬಕ್ಕರ್. ಅವರು ತನಗೆ ಯಾವುದು ದಟ್ಟವಾಗಿ ಅನುಭವವಿದೆ, ತನ್ನ ಸಂಪ್ರದಾಯಶೀಲ ಮುಸ್ಲಿಂ ಕೌಟುಂಬಿಕ ಬದುಕೇನಿದೆ, ಅದಕ್ಕೆ ಮಾತ್ರ ತನ್ನನ್ನು ಸೀಮಿತಗೊಳಿಸಿ ಬರೆಯುತ್ತಿದ್ದಾರೆ. ಹಾಗಾಗಿ ಇವರಿಬ್ಬರನ್ನು ಪ್ರಾತಿನಿಧಿಕ ಅಂತ ತಿಳಿಯುವುದಾದರೆ, ಕರಾವಳಿಯ ಲೇಖಕರಿಗೆ ಮತ್ತು ಕರ್ನಾಟಕದ ಎಲ್ಲಾ ಬಹುತೇಕ ಎಲ್ಲಾ ಲೇಖಕರಿಗೂ ಇವತ್ತು ತಮ್ಮ ತಮ್ಮ ಜಾತಿಗಳು, ತಮ್ಮ ತಮ್ಮ ಹಿನ್ನೆಲೆಗಳು, ಅದು ಬರೀ ಜಾತಿಯ ಹಿನ್ನೆಲೆಯೇ ಆಗಬೇಕು ಅಂತಿಲ್ಲ, ಅವರ ವರ್ಗದ ಹಿನ್ನೆಲೆ ಕೂಡಾ ಅವರ ಅನುಭವಕ್ಕೆ ಒಂದು ಮಿತಿಯನ್ನು ಒಡ್ಡುತ್ತೆ ಅನ್ನೋದು ಇವತ್ತು ಲೇಖಕರಿಗೆ ಚೆನ್ನಾಗಿ ಗೊತ್ತಿದೆ.

ವಿಷ್ಣು: ಆಮ್ ಆದ್ಮಿ ಪಾರ್ಟಿ ಮತ್ತು ಜೆ.ಎನ್.ಯು. ನ ಯುವ ಚಳುವಳಿ: ಇವೆಲ್ಲಾ ನಿಮಗೆ ಹೋಪ್ (ಭರವಸೆ) ಕೊಡುತ್ತಾ? ಆಮೇಲೆ ಈ ಡಿಜಿಟಲ್ ಮೀಡಿಯಾದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಆಗುವ ಚಳುವಳಿ ಬಗ್ಗೆ ನಿಮಗೆ ಏನನ್ಸುತ್ತೆ?

ರಾಜಶೇಖರ: ಆಮ್ ಆದ್ಮಿ ಪಾರ್ಟಿ ಮತ್ತು ಜೆ.ಎನ್.ಯು. ಚಳುವಳಿ – ಈ ಎರಡರ ಬಗ್ಗೆಯೂ ನನಗೆ ಸಹಮತ ಇದ್ದರೂ ಸಹಾನುಭೂತಿ ಇದ್ದರೂ ಅವು ಭಾರತದ ಭವಿಷ್ಯದ ಕುರಿತು ಆಶೆ ಹುಟ್ಟಿಸಬಲ್ಲ ಮುನ್ಸೂಚನೆಗಳು ಅಂತ ನನಗೆ ಅನ್ಸೋದಿಲ್ಲ. ಯಾಕಂದ್ರೆ AAP ಅನ್ನೋದು ಇವತ್ತಿಗೂ ದೆಹಲಿಗೆ ಸೀಮಿತವಾದ ಒಂದು ಪಕ್ಷ ಆಗಿದೆ. ಅದು ಪಂಜಾಬ್‌ನಲ್ಲೂ ಗೋವಾದಲ್ಲೂ ಬಹಳ ಒಳ್ಳೆಯ ಸಾಧನೆ ಮಾಡಿ ತೋರಿಸಬಹುದು ಅನ್ನೋ ನಿರೀಕ್ಷೆ ಇದೆ. ಆ ನಿರೀಕ್ಷೆ ಸುಳ್ಳಾಗದೇ ಇರಲಿ ಅಂತ ನನ್ನಾಸೆ. ಆದರೆ ಪಂಜಾಬ್‌ನಲ್ಲಿ ಗೋವಾದಲ್ಲಿ ಅವರು ನಿರೀಕ್ಷಿತ ಯಶಸ್ಸನ್ನು ಸಾಧಿಸಿದರೆ, ಅಷ್ಟರ ಮಟ್ಟಿಗೆ; ದೇಶದ ಎರಡು-ಮೂರು ರಾಜ್ಯಗಳಲ್ಲಾದರೂ ಅವರು ನೆಲೆವೂರಿದ ಹಾಗಾಗುತ್ತೆ. ಆಮೇಲೆ ಅವರ ಅಖಿಲ ಭಾರತ ಭವಿಷ್ಯದ ಬಗ್ಗೆ ನಾವು ಮಾತಾಡೋಕೆ ಸಾಧ್ಯ. ಈಗಿರುವ ಹಾಗೆ AAP, ಅದರ ಭವಿಷ್ಯ ಬಗ್ಗೆ ಏನನ್ನಾದರೂ ಹೇಳೋದು ಕಷ್ಟ. ಒಂದೊಂದು ಖಾತರಿಯಾಗಿ ಹೇಳ್ತೀನಿ ನಾನು. AAPನ ರಾಜಕೀಯ ಭವಿಷ್ಯದ ಬಗ್ಗೆ ಮಾತ್ರ ಅಲ್ಲ, ಇನ್ನೊಂದು ಹತ್ತು ವರ್ಷದಲ್ಲಿ AAPನಂಥ ಒಂದು ಪಕ್ಷ ಇರುತ್ತೆ ಅನ್ನುವುದರ ಬಗ್ಗೆಯೇ ನನಗೆ ಸಂದೇಹ ಇದೆ. ಅದು ಇರಬೇಕು ಅನ್ನೋದು ನನ್ನ ಆಶೆ. ಈಗ ಇರುವ ಸ್ಥಿತಿಯಲ್ಲಾದರೂ, ಯಾಕಂದ್ರೆ AAPನಂಥ ಒಂದು ಪಕ್ಷದ ಬಗ್ಗೆ, ಯೋಗೇಂದ್ರ ಯಾದವ್‌ರಂಥ ನಾನು ತುಂಬಾ ಗೌರವಿಸುವ; ಚಿಂತಕರು ಮಾಡುತ್ತಿರುವ ಟೀಕೆಗಳನ್ನು ಗಮನದಲ್ಲಿಟ್ಟುಕೊಂಡೇ ಹೇಳುವ ಮಾತಂದ್ರೆ

AAPನಂತ ಒಂದು ಪಕ್ಷ ದೇಶಕ್ಕೆ ಅವಶ್ಯ ಇದೆ. ಕೇಜ್ರೀವಾಲ್‌ನಂಥ ಒಬ್ಬ ರಾಜಕಾರಣಿ, ನಾನು ಇವತ್ತಿನ ಬೇರೆ ಯಾವುದೇ ರಾಜಕೀಯ ಪಕ್ಷದ ಯಾವುದೇ ರಾಜಕಾರಣಿಗಿಂತಲೂ ನನಗೆ ಅವರ ಬಗ್ಗೆ ಹೆಚ್ಚು ಒಲವಿದೆ. ಆದರೆ ಅವರು ಒಂದು ಸೂಕ್ತ ಪರ್ಯಾಯವೂ ಆಗಬಲ್ಲರು ಅನ್ನುವುದರ ಬಗ್ಗೆ ನನಗೆ ಸಂದೇಹವಿದೆ; ಪರ್ಯಾಯವಾದರೆ ಸಂತೋಷ. Whether they workable alternative ಅನ್ನೋದು ಪ್ರಶ್ನೆ ಅಷ್ಟೇ.

ಜೆ.ಎನ್.ಯು. ಬಗ್ಗೆ ಕೂಡಾ ನಾನು ಹೇಳುವುದು ಅದನ್ನೇ. ಜೆಎನ್ಯೂ ಪೊಲಿಟಿಕ್ಸ್ ಬಗ್ಗೆ, ಜೆಎನ್ಯೂನಲ್ಲಿ ಎಡಪಂಥೀಯರು ಅಂತ ಯಾರಿದ್ದಾರೆ, ಅವರ ಜೊತೆ ನಾನು ಯಾವಾಗಲೂ ಇದ್ದೇನೆ. ನಾನು ಅವರ ಪರವಾಗಿ, ಪ್ರತಿಭಟನಾ ಪ್ರದರ್ಶನಗಳಲ್ಲಿ ಉಡುಪಿಯಲ್ಲಿ ಪಾಲ್ಗೊಂಡಿದ್ದೇನೆ. ನಾನು ಕೂಡಾ ಅದನ್ನು ಸಂಘಟಿಸುವಲ್ಲಿ ದುಡಿದಿದ್ದೇನೆ. So, Iam with J.N.U., J.N.U. students, J.N.U. radicles. ಆದರೆ ಜೆ.ಎನ್ಯೂನ ಕ್ಯಾಂಪಸ್‌ನ ಒಳಗೆ ಅವರು ಮಾಡುವ ಚಟುವಟಿಕೆ ಏನಿದೆ, ಅದು ಅದರದ್ದೇ ಆದ ರೀತಿಯಲ್ಲಿ ಒಂದು riot ಚಟುವಟಿಕೆ ಆಗುವುದಿಲ್ಲವೋ ಅಂತ ನನ್ನ ಸಂದೇಹ ಕಾಡುತ್ತಿದೆ. ಅದಕ್ಕೆ ಒಂದು ಉದಾಹರಣೆ ಕೊಡುತ್ತೇನೆ: ಈ ಜೆ.ಎನ್ಯೂ
ಎಡಪಂಥೀಯರು ಅಂತ ಏನಿದ್ದಾರೆ, ಜೆ.ಎನ್ಯೂ ಕ್ಯಾಂಪಸ್ ಒಳಗೆ ಬಿಟ್ಟು ಹೊರಗೆ ಬಂದ ತಕ್ಷಣ, ದೆಹಲಿಯಲ್ಲಿಯೇ ರಿಕ್ಷಾವಾಲಾಗಳು, ಸಾಮಾನ್ಯ ದಾರಿಹೋಕರು, ಅಲ್ಲಿನ ಸಣ್ಣಪುಟ್ಟ ಕೆಲಸ ಮಾಡೋರು, ಕೆಳಮಧ್ಯಮ ವರ್ಗದ ನೌಕರರು, ಬಡಜನರು, ಇವರೆಲ್ಲಾ ಜೆ.ಎನ್ಯೂ ಸ್ಟೂಡೆಂಟ್ಸ್‌ನ ಗುಮಾನಿಯಿಂದ ನೋಡ್ತಾರೆ ಅಂತ ಕೇಳಿದೀನಿ. ಕೆಲವರಂತೂ ಸಿಟ್ಟಿನಲ್ಲೇ ನೋಡ್ತಾರೆ ಅಂತ ಕೇಳಿದೀನಿ. ಹಾಗಾಗಿ ಇವರು ದೆಹಲಿಯ ಬಡಜನರನ್ನೇ ಒಲಸಿಕೊಂಡಿಲ್ಲ, ದೇಶದ ಬಡಜನರನ್ನು ತಮ್ಮೆಡೆಗೆ ಸೆಳೆದುಕೊಳ್ಳಲು ಸಾಧ್ಯವಾ? ಅವರು ಆ ಪ್ರಯತ್ನ ಮಾಡುತ್ತಾರಾ? ಅವರಿನ್ನೂ ವಿದ್ಯಾರ್ಥಿಗಳು; ನನಗೆ ಗೊತ್ತಿದೆ, ಆದರೆ ಆ ಇಡೀ ಜೆ.ಎನ್ಯೂನ ಎಡಪಂಥೀಯ ರಾಜಕೀಯ ಅನ್ನೋದು ಇವತ್ತಿಗೆ ಜೆ.ಎನ್ಯೂ. ಕ್ಯಾಂಪಸ್ಸಿಗೆ ಸೀಮಿತವಾಗಿರೋದು ಅನ್ನೋದನ್ನು ಪರಿಭಾವಿಸಬಹುದು.
(ಮಧ್ಯದಲ್ಲಿ ವಿಷ್ಣು ’ ಡಿಜಿಟಲ್ ಬಗ್ಗೆ ನಿಮಗೇನನ್ನಿಸುತ್ತೆ? ನೀವು ಇ-ಮೇಲ್ ಉಪಯೋಗಿಸುತ್ತೀರಾ? ’ ಎಂದಾಗ ರಾಜಶೇಖರ್ – “ನಾನು ಇ-ಮೇಲ್ ಮಾತ್ರ ಉಪಯೋಗಿಸುತ್ತೇನೆ. ಇ-ಮೇಲ್ ಬಿಟ್ಟರೆ ಬೇರೆ ಸಾಮಾಜಿಕ ಮಾಧ್ಯಮದ ಬಗ್ಗೆ ಏನೂ ಗೊತ್ತಿಲ್ಲ. ನನ್ನ ಹತ್ತಿರ ಮೊಬೈಲ್ ಫೋನ್ ಇಲ್ಲ. ನಾನು ಕಂಪ್ಯೂಟರ್‌ನಲ್ಲಿ ಫೇಸ್‌ಬುಕ್ ಖಾತೆ ಹೊಂದಿಲ್ಲ. ನಾನು ಟ್ವೀಟ್ ಕೂಡ ಮಾಡೋದಿಲ್ಲ. ನಾನು ಇ-ಮೇಲ್ ಬಿಟ್ಟರೆ ಕಂಪ್ಯೂಟರ್ ಕೂಡಾ ಬಳಸುವುದೇ ಅಪರೂಪ. ಟಿವಿ ಸಹಿತ ನೋಡೋದಿಲ್ಲ. “)

ಎರಡನೇ ಮಗ ರಘುನಂದನ ಜೊತೆ

 

ವಿಷ್ಣು: ಟ್ವಿಟ್ಟರ್ ಮತ್ತು ಫೇಸ್‌ಬುಕ್‌ಬಗ್ಗೆ ಆರ್ಟಿಕಲ್ಸ್ ಓದೋದು ನೋಡಿದೀನಿ

ರಾಜಶೇಖರ: ಅಲ್ಲೂ ನಾನಿಲ್ಲದೇ ಇರುವುದೇ ಒಳ್ಳೆಯದಾಯ್ತೇನೋ ಅನ್ಸುತ್ತೆ.

ನನಗೆ ಕೈತುಂಬಾ ಕೆಲ್ಸ ಇದೆ. ಕೆಲ್ಸಕ್ಕಿಂತ ಜಾಸ್ತಿ ತಲೆ ತುಂಬಾ ರಗಳೆಗಳಿವೆ. ಇರೋ ರಗಳೆಗಳೇ ಜಾಸ್ತಿ ಆಗಿವೆ. ಇನ್ನೂ ಈ ಫೇಸ್‌ಬುಕ್ಕಿನ ಗದ್ದಲಗಳು, ರಾದ್ದಾಂತಗಳು, ಈ ಕ್ಷಣಿಕ ಉದ್ರೇಕಗಳು ಇವೆಲ್ಲಾ ನನಗೆ ಬೇಕಾ? I can do without that ಯಾಕಂದ್ರೆ ಬಸವಣ್ಣನವರು ಹೇಳ್ತಾರಲ್ಲಾ: ಎಮ್ಮ ಚಿಂತೆ ಯಮಗೆ ಹಾಸಲುಂಟು, ಹೊದೆಯಲುಂಟು, ನಮಗೆ ಬೇರೆಯವರ ಚಿಂತೆ ಯಾಕೆ ಸರ್,

ವಿಷ್ಣು: ನಿಮ್ಮ ಗುರುಗಳು ಹರಿದಾಸ ಭಟ್ಟರು ಹೇಳಿದಾರಲ್ವಾ? You take care of yourself. The world will take care of itself. Do you forget it all the time?

ರಾಜಶೇಖರ: At least digital Indiaದ ಲೋಕವನ್ನೇ ತಲೆ ಮೇಲೆ ಹೊತ್ತಿಕೊಂಡಿರುವ ಗದ್ದಲದ ನಡುವೆ ನನಗೆ ಹರಿದಾಸಭಟ್ಟರ ಈ ಮಾತುಗಳು ನೆನಪಾಗುತ್ತವೆ. This is my way of looking after myself.

ವಿಷ್ಣು: ನಿಮ್ಮ ಋಜುವಾತು, ಲಂಕೇಶ್, ‘ಮಾತುಕತೆ’ ಇವುಗಳ ಬಗ್ಗೆ ಹೇಳಿ?

ರಾಜಶೇಖರ: ಮಾತುಕತೆ, ಋಜುವಾತು, ಲಂಕೇಶ್ ಪತ್ರಿಕೆ ಬಗೆಗಿನ ನಿಮ್ಮ ಪ್ರಶ್ನೆಗೆ ಬಹಳ ಸಂಕ್ಷಿಪ್ತವಾಗಿ ನನ್ನ ಉತ್ತರ ಹೇಳುವುದಾದರೆ, ಋಜುವಾತು ಬಗ್ಗೆ ಈಗ ನಾನು ಹೇಳಬಹುದಾದದ್ದು ಏನೂ ಇಲ್ಲ. ಋಜುವಾತು ಪತ್ರಿಕೆಯನ್ನು ಸಂಪಾದಿಸಿ ಪ್ರಕಟಿಸುತ್ತಿದ್ದವರು ಡಾ|| ಯು. ಆರ್. ಅನಂತಮೂರ್ತಿಯವರು. ಅವರು ನಿಧನರಾಗಿ ಎರಡು ವರ್ಷಗಳು ಕಳೆದಿವೆ. ಅವರು ತೀರಿಕೊಳ್ಳುವ ಅನೇಕ ವರ್ಷಗಳ ಕೆಳಗೆಯೇ ಕಾರಣಾಂತರಗಳಿಂದ ‘ಋಜುವಾತು’ ತನ್ನ ಪ್ರಕಟಣೆಯನ್ನು ನಿಲ್ಲಿಸಿತ್ತು. ಆದರೆ ಋಜುವಾತು ಪತ್ರಿಕೆಯ ಸಂಪಾದಕರು ಮಾತ್ರ, ಆ ಪತ್ರಿಕೆಯನ್ನು ನಡೆಸುವಾಗಿನ ತನ್ನ ಧೋರಣೆ ಏನಿತ್ತೋ, ಅದನ್ನೇ ಮುಂದುವರಿಸಿದರು ಮಾತ್ರವಲ್ಲ; ಅದನ್ನೇ ತನ್ನ ಕೊನೆಯ ದಿನಗಳಲ್ಲಿ ಹೆಚ್ಚು ಖಚಿತವಾಗಿ ಹೆಚ್ಚು ಸ್ಪಷ್ಟವಾಗಿ ನಿಖರವಾಗಿ ಜನರ ಮುಂದಿರಿಸಿ, ಆಳುವ ಪಕ್ಷದ ದುರಾಗ್ರಹಕ್ಕೂ ತುತ್ತಾದರು. ನಾನು ಅದನ್ನು ನಿಮಗೆ ವಿವರಿಸಿ ಹೇಳಬೇಕಾದ್ದಿಲ್ಲ. ಅನಂತಮೂರ್ತಿ ತನ್ನ ಕೊನೆಯ ದಿನಗಳಲ್ಲಿ, ಏನೆಲ್ಲಾ ಅನುಭವಿಸಬೇಕಾಯಿತೆಂಬುದು ಕನ್ನಡದ ಜನರಿಗೆಲ್ಲಾ ಗೊತ್ತಿದೆ. ಅದು ಅವರ ನಿಲುವಿನ ಕಾರಣದಿಂದಲೇ. ಋಜುವಾತು ಆ ನಿಲುವಿಗೆ ಅಂಟಿಕೊಂಡಿತ್ತು. ನಾನು ‘ಋಜುವಾತು’ವಿನಲ್ಲಿ ಹಲವು ಲೇಖನಗಳನ್ನು ಪ್ರಕಟಿಸಿರುವುದರಿಂದ ಹೇಳುತ್ತೇನೆ: ಋಜುವಾತು ಯಾವ ಪ್ರದಾನ ರಾಜಕೀಯ ವಿಚಾರಧಾರೆಗೂ ತನ್ನನ್ನು ಗುರುತಿಸಿಕೊಳ್ಳದೇ, ಎಲ್ಲಾ ರೀತಿಯ ಸಿದ್ಧಾಂತಗಳಿಗೂ ವಿಚಾರಧಾರೆಗೂ ಚಿಂತನೆಗಳಿಗೂ ತನ್ನನ್ನು ತೆರೆದುಕೊಂಡಿತ್ತು. ಅದು ನಿಜವಾದ ಅರ್ಥದಲ್ಲಿ ಮುಕ್ತವಾದ ಸ್ವತಂತ್ರವಾದ ಸ್ವಾಯುತ್ತವಾದ ಒಂದು ಮಾಧ್ಯಮವಾಗಿತ್ತು. ಆ ಪತ್ರಿಕೆಯನ್ನು ಈಗಲೂ ನಾನು ಕಳೆದುಕೊಂಡೆ ಅಂತನ್ನಿಸುತ್ತದೆ.
‘ಮಾತುಕತೆ’ ಮಟ್ಟಿಗೆ ಹೇಳುವುದಾದರೆ ಅದು ಪ್ರಾರಂಭವಾದ ದಿನದಿಂದಲೂ, ಈಗಿನ ಅದರ ಸಂಪಾದಕರಿಗಿಂತ ಮೊದಲು, ಅದನ್ನು ಮೊದಲು ಸಂಪಾದಿಸುತ್ತಿದ್ದವರು ಕೆ.ವಿ.ಸುಬ್ಬಣ್ಣನವರು. ಕೆ.ವಿ. ಸುಬ್ಬಣ್ಣನವರ ಕಾಲದಿಂದಲೂ ‘ಮಾತುಕತೆ’ ತನ್ನ ಸಂಪಾದಕೀಯ ನಿಲುವನ್ನು ಇವತ್ತಿಗೂ ಕೂಡಾ ಬದಲಾಯಿಸಿಕೊಂಡಿದೆ ಅಂತ ಅನ್ನಿಸುವುದಿಲ್ಲ. ಅದು ಎಂದಿನ ವಿಷಯದ ಖಚಿತತೆ, ನಿರ್ದಿಷ್ಟತೆ ಮತ್ತು ಪ್ರಾಮಾಣಿಕತೆ: ಇವುಗಳಿಗೆ ಬದ್ಧವಾಗಿ ಇರುವ ಕಿರುಪತ್ರಿಕೆ ಅದು. ಹಾಗಾಗಿ ಸರ್ಕಾರಗಳು ಯಾವುದೇ ಇರಲಿ, ಆಳುವ ವ್ಯವಸ್ಥೆ ಹೇಗೇ ಇರಲಿ, ‘ಮಾತುಕತೆ’ ತನ್ನ ಸೀಮಿತ ಪರಿಧಿಯೊಳಗೆ ಅದು ತನ್ನ ಎಂದಿನ ಕರ್ತವ್ಯವನ್ನು ಅಷ್ಟೇ ದಕ್ಷತೆಯಿಂದ ನಿರ್ವಹಿಸುತ್ತಾ ಬಂದಿದೆ.
ಇನ್ನೂ ಲಂಕೇಶ್ ಬಗ್ಗೆ ಹೇಳೋದೆ ಬೇಡ, ಲಂಕೇಶ್‌ನ ಸಂಪಾದಕರು ಬದುಕಿದ್ದಾಗ ಯಾವ ಪತ್ರಿಕಾ ಧೋರಣೆಯನ್ನು ಅನುಸರಿಸುತ್ತಿದ್ದರೋ, ಅದನ್ನೇ ಈಗ ಅವರು ಮಗಳು ಗೌರಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಬಹುಶಃ ಕರ್ನಾಟಕದ ಪತ್ರಿಕಾ ರಂಗದಲ್ಲಿ ಗೌರಿ, ಏಕಾಂಗಿಯಾಗಿ, ಆಳುವ ಪಕ್ಷದ ಹಿಂದೂತ್ವ ರಾಜಕೀಯವನ್ನು ಎದುರಿಸುತ್ತಾ ಇದ್ದಾರೆ. ಕನ್ನಡದ ಕೆಲವು ದಿನಪತ್ರಿಕೆಗಳು ಈಗಲೂ ಕೂಡಾ ತಮ್ಮ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಮಾನವತಾವಾದದ ಲಿಬರಲ್ ಮೌಲ್ಯಗಳಿಗೆ ಬದ್ಧರಾಗಿದ್ದರೂ ಕೂಡ ಆಳುವ ಪಕ್ಷದ ಸಿದ್ಧಾಂತವನ್ನು ಲಂಕೇಶ್‌ರಷ್ಟು ಹಲ್ಲು ಕಚ್ಚಿಕೊಂಡು ವಿರೋಧಿಸುವ ಇನ್ನೊಂದು ಪತ್ರಿಕೆಯಾಗಲೀ, ಬೇರೆಯ ಮಾಧ್ಯಮಗಳಾಗಲೀ ನನಗೆ ಹೊಳೆಯುತ್ತಿಲ್ಲ.

ವಿಷ್ಣು: ಇವತ್ತಿನ ಮೀಡಿಯಾ ಬಗ್ಗೆ ನೀವು ಏನನ್ನು ಹೇಳಬಯಸುತ್ತೀರಾ? ನಿಮ್ಮ ಅಭಿಪ್ರಾಯವೇನು?

ರಾಜಶೇಖರ: ನಾನು ಪತ್ರಿಕೆಗಳನ್ನು ಮಾತ್ರ ಓದುತ್ತೇನೆ (ಮಾತನ್ನು ತುಂಡರಿಸುತ್ತಾ, ಪ್ರಶ್ನೆಗಾರರು: ನೀವು ದಿನಾ ಬೆಳಿಗ್ಗೆ ಎದ್ದು ಉದಯವಾಣಿ ಓದುತ್ತೀರಾ…ಯಾಕೆ ಓದುತ್ತೀರಾ?)ಉದಯವಾಣಿ ಓದೋದು ಒಂದನೆಯದಾಗಿ ನಮ್ಮ ಕರಾವಳಿಯ ಜಿಲ್ಲೆಗಳಲ್ಲಿ ಪ್ರತಿನಿತ್ಯ ಆಗುವ ವಿದ್ಯಮಾನಗಳ ವರದಿ, ಅದರ ಬಗ್ಗೆ ನನಗೆ ಕುತೂಹಲವಿದೆ. ನಮ್ಮ ಊರಿನ ಆಸುಪಾಸಿನಲ್ಲಿ ಯಾರಾದ್ರೂ ನಿಧನರಾಗಿದ್ದಾರೆ ಅನ್ನುವುದನ್ನು ತಿಳಿದುಕೊಳ್ಳುವುದಕ್ಕೋಸ್ಕರ ‘ಉದಯವಾಣಿ’ ಓದುತ್ತೇನೆ. ಅದು ಬಿಟ್ಟರೆ ಉದಯವಾಣಿಯನ್ನು ಮುಖ್ಯವಾಗಿ ಓದೋದು ನಮ್ಮ ಊರುಗಳಲ್ಲಿ ನಮ್ಮ ಹಳ್ಳಿಗಳಲ್ಲಿ ನಮ್ಮ ಸುತ್ತಮುತ್ತ ಸಂಘಪರಿವಾರದವರು ಯಾವಯಾವ ತರಹದ ಕಿತಾಪತಿಗಳನ್ನು ನಡೆಸುತ್ತಿದ್ದಾರೆ ಅನ್ನುವುದನ್ನು ತಿಳಿದುಕೊಳ್ಳುವುದು ನನ್ನ ಉದ್ಧೇಶ. ನಾನು ಇರುವ ವಿಷಯವನ್ನು ಹೇಳಿಬಿಡುತ್ತೇನೆ: ನಾನು ಉದಯವಾಣಿ ಓದೋದು ಇದಕ್ಕೋಸ್ಕರವೇ. ಹಾಗಾಗಿ ನಾನು ಅನೇಕ ಸಲ ನನ್ನ ಸ್ನೇಹಿತರೊಟ್ಟಿಗೆ ಹೇಳಿದ್ದೇನೆ: ಉದಯವಾಣಿ ಅನ್ನೋದು ಒಂದು symptom, symptom of disease, affecting Karnataka. ಅದು ಒಂದು ಪತ್ರಿಕೆಗಿಂತ ಹೆಚ್ಚಾಗಿ ಒಂದು ರೋಗದ ಲಕ್ಷಣ. ನಾವು ತಿಳ್ಕೊಳಬೇಕು ಅಷ್ಟೇ. that’s all.

ವಿಷ್ಣು: ಬೇರೆ ಪತ್ರಿಕೆಗಳ ಬಗ್ಗೆ ಇದನ್ನೇ ಹೇಳುತ್ತೀರಾ? ರೋಗಲಕ್ಷಣಗಳು ಹಬ್ಬುತ್ತಾ?

ರಾಜಶೇಖರ: ರೋಗಲಕ್ಷಣಗಳು ಹಬ್ಬುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಕನ್ನಡದಲ್ಲಿ ಪ್ರಜಾವಾಣಿ ಮತ್ತು ಕನ್ನಡಪ್ರಭ ಬಿಟ್ಟರೆ ಸಂಪೂರ್ಣವಾಗಿ, ವಸ್ತುನಿಷ್ಠವಾಗಿ, ಲಿಬರಲ್, ಹ್ಯೂಮನಿಸ್ಟ್, ಪ್ರಜಾಪ್ರಭುತ್ವವಾದಿ, ಸಮಾಜಕ್ಕೆ ಬದ್ಧವಾಗಿರುವ ಈ ಎರಡೂ ಮಾತ್ರ ಅಂತ ನನಗೆ ಅನೇಕ ಸಲ ಅನ್ನಿಸಿವೆ. ಉಳಿದ ಪತ್ರಿಕೆಗಳನ್ನು ನಾನು ಹೆಸರಿಸುವುದಿಲ್ಲ, ಅವುಗಳ ಬಗ್ಗೆ ಮಾತಾಡೋದು ಇಲ್ಲ, ಇಷ್ಟು ಹೇಳಿದರೆ ಸಾಕಾಗುತ್ತೆ. Of course ಉಳಿದ ಪತ್ರಿಕೆಗಳಲ್ಲಿ ಸಂಘಪರಿವಾರದ್ದೇ ಕರಪತ್ರ, ಅನೇಕ ತರಹದ ವ್ಯತ್ಯಾಸಗಳನ್ನು ಕಲ್ಪಿಸಿಕೊಳ್ಳುತ್ತಿದ್ದೇವೆ. ಒಟ್ನಲ್ಲಿ reliable ನಂಬಿಕೆಗೆ ಅರ್ಹವಾಗಿದೆ ಅನ್ನೋದು ಇವೆರಡೂ ಪತ್ರಿಕೆಗಳು ಮಾತ್ರ ಅಂತ ನನ್ನ ಭಾವನೆ. ಆದರೆ ಸಂಘಪರಿವಾರದ್ದೇ ಅಧಿಕೃತ ಮುಖವಾಣಿ ಆಗಿರುವ ಪತ್ರಿಕೆ ಇದೆ; ಅದರ ಬಗ್ಗೆ ನಾನು ಮಾಡಬಹುದಾದ ಯಾವ ಟೀಕೆಯೂ ಇಲ್ಲ. ಯಾಕಂದ್ರೆ ತಮ್ಮ ಸಂಪಾದಕೀಯ ಧೋರಣೆ ಏನು ಎಂಬುದನ್ನು ಅವು ಮುಚ್ಚಿಡುವುದಿಲ್ಲ. ಆದರೆ ಇವು ಜನಪ್ರಿಯ ಸುದ್ಧಿಪತ್ರಿಕೆಗಳು ಎನ್ನುವ, ಲಿಬರಲ್ ಮುಖವಾಡ ತೊಟ್ಕೊಂಡು ಸಂಘಪರಿವಾರದ ಸಿದ್ಧಾಂತವನ್ನು ಜನರಿಗೆ ಹಂಚುತ್ತಾ ಇವೆ. ಅದರ ಬಗ್ಗೆ ನನ್ನ ಆಕ್ಷೇಪ ಇದೆ. ಸಂಘಪರಿವಾರದ್ದೇ ಪತ್ರಿಕೆಗಳ ಬಗ್ಗೆ ನನಗೆ ಯಾವ ಆಕ್ಷೇಪವೂ ಇಲ್ಲ.

ವಿಷ್ಣು: ರುಜುವಾತು, ಸಾಕ್ಷಿ ಯಂತಹ ಪತ್ರಿಕೆಗಳನ್ನ ಇಂದಿನ ದಿನಮಾನದಲ್ಲಿ ನಿರೀಕ್ಷಿಸಬಹುದೇ?

ರಾಜಶೇಖರ: ಈಗಿನ ಭರಾಟೆಯ ವಾಣಿಜ್ಯ ಯುಗದಲ್ಲಿ ಇಂತಹ ಪತ್ರಿಕೆಗಳನ್ನ ನಡೆಸುವುದು ಕಷ್ಟ ಇದೆ. ಜೊತೆಗೆ ಇಂತಹ ಪತ್ರಿಕೆಗಳನ್ನು ನಡೆಸಲು ಬೇಕಾದ ತಾಳ್ಮೆಯಾಗಲೀ, ಶ್ರದ್ಧೆಯಾಗಲಿ, ಶ್ರಮವಾಗಲೀ ಹೆಚ್ಚಿನವರು ನೀಡಲು ಸಿದ್ಧರಿಲ್ಲ. ಆದರೇ ಒಂದಂತೂ ನಿಜ. ಈ ಪತ್ರಿಕೆಯನ್ನು ನಡೆಸುತ್ತಿದ್ದವರಲ್ಲಿ ಇದ್ದ ಬೌದ್ಧಿಕ ತಯಾರಿ, ಶಿಸ್ತು ಮತ್ತು ನಿಷ್ಟುರತೆ ಇವತ್ತಿನ ತಲೆಮಾರಿನಲ್ಲಿ ಇಲ್ಲ ಅನಿಸುತ್ತೆ. ನಿನಾಸಂ ನ ಮಾತುಕತೆ ಇವತ್ತಿಗೂ ತನ್ನ ಸ್ತಾಂಡರ್ಡ್ ಉಳಿಸಿಕೊಂಡಿದೆ. ಧಾರವಾಡದಿಂದ ಬರುವ ಸಮಾಹಿತ ಕೂಡ ಒಂದು ಹಿರೊಯಿಕ್ ಎಫರ್ಟ್. ಇಂತಹ ಪತ್ರಿಕೆಗಳ ಜಾಯಮಾನವೇ ಅದರ ಅಲ್ಪಾಯುಷ್ಯ. ಕನ್ನಡದ ಈಗಿನ ವಾತಾವರಣವೇ ಇಂತಹ ಪ್ರಯತ್ನಗಳನ್ನು ಪೋಷಿಸುವಂತಹದ್ದಲ್ಲ ಅಂತ ನನಗನ್ನಿಸುತ್ತೆ. ಯಾಕಂದ್ರೆ ಇದು ಬಹಳ ಬೇಗ ಲಾಭ ಬೇಡುವ ಕಾಲ (Age of Quick returns). ನಿಯಮಿತವಾಗಿ ಪತ್ರಿಕೆಗಳನ್ನ ತರುವುದು ದೊಡ್ಡ ಕಷ್ಟವಲ್ಲ ಬದಲಿಗೆ ಗುಣಮಟ್ಟವನ್ನ ಉಳಿಸಿಕೊಳ್ಳುವುದು ದೊಡ್ಡ ಸವಾಲು.

ವಿಷ್ಣು: ಕೃಷ್ಣ ಮಠದ ಪಂಕ್ತಿ ಭೇದ ವಿವಾದದ ಬಗ್ಗೆ

ರಾಜಶೇಖರ: ದೇವಸ್ಥಾನ ನಮ್ಮ ಮನೆಯ ಹಾಗೆ ಖಾಸಗಿ ಸ್ಥಳವಲ್ಲ. ದೇವಸ್ಥಾನ ಶಾಲೆಯ ಹಾಗೆ, ಆಸ್ಪತ್ರೆಯ ಹಾಗೆ ಸಾರ್ವಜನಿಕ ಸ್ಥಳ. ಅಲ್ಲಿ ಯಾವುದೇ ಜಾತಿ ಭೇದ ಇರಬಾರದು. ಅದು ಮುಜರಾಯಿ ಇಲಾಖೆಗೆ ಸೇರಿದ್ದಾಗಿರಬಹುದು ಅಥವ ಇಲ್ಲದಿರಬಹುದು.

ಈಗ ಶಾಲೆಗಳಲ್ಲೂ, ಆಸ್ಪತ್ರೆಯಲ್ಲೂ ಖಾಸಗಿ ಶಾಲೆ, ಯಾವ ನೆಲೆಯಲ್ಲಿ ನಾವು ಶಾಲೆಯಲ್ಲಿ, ಆಸ್ಪತ್ರೆಯಲ್ಲಿ ಜಾತಿಭೇಧ ಮಾಡಬಾರದು ಎಂದು ಹೇಳುತ್ತೇವೋ, ಅದೇ ನೆಲೆಯಲ್ಲಿ ದೇವಸ್ಥಾನದಲ್ಲಿ ಕೂಡ ಜಾತಿ ಭೇಧ ಇರಬಾರದು. ಕೃಷ್ಣ ಮಠ ಕೂಡ ಪಬ್ಲಿಕ್ ಸ್ಪೇಸ್. ಅವರ ವಾದ ಕೂಡ ಅದೇ ಅಲ್ವಾ? ಸಮಸ್ತ ಹಿಂದೂಗಳ ಶ್ರದ್ಧಾ ಕೇಂದ್ರ ಎಂದು ತಾನೆ ಅವರೂ ಹೇಳುತ್ತಿರುವುದು.

ವಿಷ್ಣು: ಚಲೋ ಉಡುಪಿ ಯಲ್ಲಿ ಕೇಳಿ ಬಂದ ಒಂದು ಆಪಾದನೆ ಎಂದರೆ ಅದು ಕೇವಲ ಪಂಕ್ತಿಭೇದಕ್ಕೆ ಸೀಮಿತವಾಯ್ತು ಅಂತ. ಅದರ ಬಗ್ಗೆ ಏನು ಹೇಳ್ತೀರಾ?

ರಾಜಶೇಖರ: ಚಲೋ ಉಡುಪಿಯ ಯೋಜನೆಯನ್ನು ನಾವು ಹಾಕಿಕೊಂಡಾಗ ಅದನ್ನ ಬರೇ ಒಂದು ರಾಜಕೀಯ ಕಾರ್ಯಕ್ರಮ ಮಾಡಬೇಕು ಅಂತಲ್ಲ. ಅದನ್ನ ಒಂದು ವಿಮೋಚನ ಚಳುವಳಿಯನ್ನಾಗಿ ಮಾಡಬೇಕು – ಅಂದರೆ Freedom, liberation, Emancipation. Emancipation ಅನ್ನೋದು ರಾಜಕೀಯ ಉದ್ದೇಶವನ್ನ ಮೀರಿದ ಬಿಡುಗಡೆ. ಚಲೋ ಊನಾದ ಉದ್ದೇಶವನ್ನು ವಿಸ್ತರಿಸಿ ಚಲೋ ಉಡುಪಿಯನ್ನ ಆಯೋಜಿಸಿದ್ದು. ಚಲೋ ಊನಾ ಚಳುವಳಿಗೆ ಕಾರಣವಾಗಿದ್ದು ಆ ಊನಾ ಹಳ್ಳಿಯಲ್ಲಿ ಸತ್ತ ದನದ ಮಾಂಸ ಹದ ಮಾಡುತ್ತಿದ್ದ ನಾಲಕ್ಕು ದಲಿತ ಯುವಕರ ಮೇಲೆ ನಡೆದ ಅಮಾನುಷ ಹಲ್ಲೆ. ಅದನ್ನು ಹೋಲುವಂತಹ ಹಲವು ಘಟನೆಗಳು ನಮ್ಮ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ನಡೆದಿವೆ. ಹಾಗಾಗಿ ನಮಗೆ ಊನಾ ಮತ್ತು ಉಡುಪಿಯ ನಡುವೆ ಒಂದು ಸಾಮ್ಯತೆ ಇರುವುದು ಬಹಳ ಸ್ಪಷ್ಟವಾಗಿ ಗೊತ್ತಾಗುತ್ತೆ. ಊನಾದ ಮಾದರಿಯಲ್ಲಿ ಒಂದು ಪ್ರತಿಭಟನೆ ನಡೆಯಬೇಕೆನ್ನುವುದು ನಾಡಿನ ದಲಿತ ಯುವಕರ, ಪ್ರಗತಿಶೀಲರ ನಿಲುವಾಗಿತ್ತು. ಅದಕ್ಕೆ ತಕ್ಷಣದ ಕಾರಣವೆಂದರೆ ಪ್ರವೀಣ್ ಪುಜಾರಿಯವರ ಕೊಲೆ ಪ್ರಕರಣ. ಈ ಕೊಲೆಯ ಹಿಂದಿರುವ ಆಹಾರದ ಆಯ್ಕೆಯ ರಾಜಕೀಯವನ್ನ ಜನರ ಮುಂದೆ ಇಡಬೇಕು ಅನ್ನುವುದು ಚಲೋ ಉಡುಪಿಯ ಮುಖ್ಯ ಉದ್ದೇಶಗಳಲ್ಲಿ ಒಂದಾಗಿತ್ತು. ಚಲೋ ಉಡುಪಿಯ ಘೋಷ ವಾಕ್ಯ ಇದ್ದದ್ದೆ, ಆಹಾರ ನಮ್ಮ ಆಯ್ಕೆ ಭೂಮಿ ನಮ್ಮ ಹಕ್ಕು ಎಂದು. ಇದುವರೆಗೂ ಒಂದಿಂಚು ಜಮೀನನ್ನು ದಲಿತರಿಗಾಗಲಿ, ಬಡವರಿಗಾಗಲಿ ಇನ್ನೂ ಹಂಚಿಲ್ಲ. ಹಂಚಿದ ಜಮೀನಿನ ಹಕ್ಕು ಪತ್ರಗಳು ಇನ್ನೂ ತಲುಪಿಲ್ಲ. ಹಾಗಾಗಿ ಈ ಘೋಷ ವಾಕ್ಯದಲ್ಲಿ ನಾವು ಬಡಜನರ ಬದುಕಿಗೆ ಹತ್ತಿರವಾದ ಎರಡು ವಿಚಾರಗಳನ್ನ ಪ್ರಭುತ್ವದ ಮಂದೆ ಇಟ್ಟಿದ್ದೇವೆ. ಬರೀ ಸರ್ಕಾರದ ಮುಂದೆ ಮಾತ್ರವಲ್ಲ. ಸರ್ಕಾರ, ವಿರೋಧ ಪಕ್ಷ, ಮಾಧ್ಯಮ ಒಟ್ಟಾರೆ ವ್ಯವಸ್ಥೆಯ ಎದುರಿಗೆ ಇಟ್ಟ ಬೇಡಿಕೆಗಳಿವು. ಹಾಗಾಗಿ ಇದು ಕೇವಲ ರಾಜಕೀಯದ ಪ್ರತಿಭಟನೆಯಷ್ಟೇ ಆಗಿರಲಿಲ್ಲ. ಉಡುಪಿಯ ಇತಿಹಾಸದ ಬಹು ದೊಡ್ಡ ಪ್ರತಿಭಟನೆಗಳಲ್ಲಿ ಒಂದಾದ ಇದರಲ್ಲಿ ಸಾಕಷ್ಟು ಯಶ ಗಳಿಸಿದ್ದೇವೆ ಎಂಬ ಭರವಸೆ ಸಂಘಟಕರಲ್ಲಿ ಬಂದಿದೆ. ಇದು ಕರ್ನಾಟಕದಾದ್ಯಂತ ಒಂದು ಎಚ್ಚರವನ್ನು ಮೂಡಿಸಿರುವುದರ ಜೊತೆಗೆ, ದಲಿತ, ಅಲ್ಪಸಂಖ್ಯಾತರ ಮತ್ತು ಹಿಂದುಳಿದವರ ಸಂಘಟಿಸಿದೆ.

ಈ ಸಂದರ್ಶನವನ್ನು 2016 ರ ಸೆಪ್ಟೆಂಬರ್ ಮತ್ತು ದಶಂಬರ್ ನಡುವೆ ನಡೆಸಲಾಗಿದೆ .

3 comments to “ವೈವಿಧ್ಯ, ಬಹುರೂಪ, ಬಹುಮುಖ, ಬಹುವಚನ – ಇವು ಭಾರತದ ಪ್ರಮುಖ ಲಕ್ಷಣ – ಜಿ . ರಾಜಶೇಖರ”
  1. ತುಂಬ ದಿನಗಳ ಮೇಲೆ ರಾಜಶೇಖರರ ಒಂದು ವಿಶಿಷ್ಠ ಒಳನೋಟಗಳುಳ್ಳ ಸಂದರ್ಷನ ಓದುವಂತಾಯ್ತು. ಋತುಮಾನಕ್ಕೆ ವಿಷ್ಣುವಿಗೆ ಧನ್ಯವಾದ. ರಾಜಶೇಖರರ ಮಾತುಗಳನ್ನು ಸೂಕ್ಷ್ಮವಾಗಿ ಧೇನಿಸಿದರೆ ಇವತ್ತಿನ ಕಮ್ಯುನಿಸ್ಟ್ ಚಳವಳಿ ದಿಕ್ಕುತಪ್ಪಿರುವ ಕಾರಣ ಗೊತ್ತಾಗುತ್ತದೆ. ಅವರ ಆಪ್ ಪಕ್ಷದ ಬಗೆಗಿನ ಕಮೆಂಟ್ ಕೂಡ ಸರಿ ಇದೆ. ಆದರೆ ಈಗಿನ ಹುಡುಗರಿಗೆ ಸರಿಯಾದ ಚಳವಳಿ ಮತ್ತು ದಾರಿಗಳಿಲ್ಲ ಅನ್ನೋದರ ಬಗ್ಗೆ , ಇದು ಕೇವಲ ರಾಜಶೇಖರ್ ಅಲ್ಲ, ನಮ್ಮ ಬಹುತೇಕ ಹಿರಿಯರು ಈಗಿನ ಹುಡುಗರ ಸಂವೇದನೆಗಳನ್ನು ಸೂಕ್ಷ್ಮಗಳನ್ನು ಅವರು ಎದುರಿಸುತ್ತಿರುವ ಸವಾಲುಗಳನ್ನು ಅರಿಯುವುದರಲ್ಲಿ ಹಿಂದಿದ್ದಾರೆ. ವಿಪುಲ ಅವಕಾಶಗಳು ಮತ್ತು ದುಡಿಮೆಗೆ ಹಲವು ದಾರಿಗಳಿರುವ ಕಾಲದಲ್ಲಿ ನ್ಯಾಸ್ತಾಲ್ಜಿಕ್ ಅಂಶಗಳು ಬೇಕಿಲ್ಲದ ಕಾಲದ ಈಗಿನ ಹುಡುಗರು ನಮ್ಮ ಕಾಲಕ್ಕಿಂತ ಹೆಚ್ಚು ಓದುತ್ತಿದ್ದಾರೆ.ಬರೆಯುತ್ತಿದ್ದಾರೆ. ಆದರೆ ಅವರ ಚಟುವಟಿಕೆಯನ್ನು ಅವರದೇ ಸಂವೇದನೆಗಳಿಂದ ಗ್ರಹಿಪ್ರತಿಕ್ರಿಯಿಸುವವರ ಕೊರತೆ ಇದೆ. ಸಂಘಿಗಳನ್ನೂ ಕಮ್ಯುನಿಶ್ಟರನ್ನೂ ಸಮಾನವಾಗಿ ತಿರಸ್ಕರಿಸಿರುವ ಹೊಸ ಜನಾಂಗಕ್ಕೆ ಯು.ಆರ್.ಅನಂತಮೂರ್ತಿಯವರಂಥ ಮೇಸ್ಟ್ರ ಕೊರತೆ ಇದೆ. ಸಾಮಾಜಿಕ ಜಾಲತಾಣಗಳಲ್ಲಿರುವ ಗುಂಪುಗಳು ಸಿನಿಮಾ ಸಾಹಿತ್ಯ ಸಂಗೀತ ಚಾರಣ ಕುರಿತಂತೆ ವಿಪುಲವಾಗಿ ಮಾಹಿತಿ ನೀಡುತ್ತಿವೆ. ಅನೇಕ ಹೊಸ ಬರಹಗಾರರು ನಿಜಕ್ಕೂ ಚೆನ್ನಾಗಿ ಈ ಕಾಲ ವಿಶೇಷವನ್ನು ಚಿತ್ರಿಸಿದ್ದಾರೆ. ಆದರೆ ಮತ್ತದೇ ಹಳೆಯ ಮೀಮಾಂಸೆಯ ಕಣ್ಣಲ್ಲೇ ಜರುಗುತ್ತಿರುವುದನ್ನು ಅಳೆಯಲಾಗದ ವಿಮರ್ಶಕ ತನಗಿರುವ ದೃಷ್ಟಿ ಮಿತಿಯಲ್ಲಿ ಕಾಣುತ್ತಿದ್ದಾನೆ ಅಷ್ಟೆ.

    • ರಾಮಸ್ವಾಮಿಯವರ ಇಂದಿನ ತಲೆಮಾರಿನವರ ಕುರಿತಾದ ಮಾತಿಗೆ ನನ್ನ ದನಿಯನ್ನೂ ಸೇರಿಸಬಯಸುತ್ತೇನೆ. ಇಂದಿನ ತಲೆಮಾರಿನವರನ್ನು ಎಂಗೇಜ್ ಮಾಡಿಕೊಳ್ಳಬೇಕಾದ ರೀತಿಯಲ್ಲಿ ಯಾರೂ ಮಾಡುತ್ತಿಲ್ಲ. ಅದಕ್ಕೆ ಕಾರಣ, ಹಿಂದಿನ ತಲೆಮಾರಿನವರಿಗೆ ಇಂದಿನವರ ಮೇಲಿರುವ ಉದಾಸೀನ. ಇಂದಿನವರು ಟೆಕ್ನಾಲಜಿಯತ್ತ ಹೆಚ್ಚು ಆಕರ್ಷಿತರಾಗಿದ್ದಾರೆ, ಇವರಿಗೆ ತತ್ವ, ಸಿದ್ಧಾಂತಗಳಿಲ್ಲ, ಬದ್ಧತೆ ಇಲ್ಲ, ಇತ್ಯಾದಿ. ಹಾಗೆ ಹೇಳುವುದಾದರೆ, ಹಿಂದಿನ ತಲೆಮಾರಿನಲ್ಲಿ ಮೂರ್ತಿಗಳ ಜೊತೆಜೊತೆಗೆ ತೇಜಸ್ವಿ, ಲಂಕೇಶ್, ಡಿಆರ್, ಮುಂತಾದ ಅನೇಕ ಬುದ್ಧಿಜೀವಿಗಳು ಒಬ್ಬರ ಜೊತೆ ಮತ್ತೊಬ್ಬರು ವಾಗ್ವಾದ ಮಾಡುತ್ತಲೇ ತಮ್ಮ ಹಾಗೂ ಮುಂದಿನ ತಲೆಮಾರಿಗಳಿಗೆ ಹೊಸ ಅರಿವು, ಹೊಸ ವಿವೇಕ, ಹೊಸ ದಿಕ್ಕು, ಹೊಸ ಆಲೋಚನೆ. ಹೊಸ ಒಳನೋಟವನ್ನು ದಾಟಿಸುವ ಕೆಲಸ ಮಾಡುತ್ತಿದ್ದರು. ಇಂದಿನ ತಲೆಮಾರಿನವರಲ್ಲಿ ಅಂತಹ ಒಬ್ಬರೂ ಕಾಣಸಿಗದಿರುವುದು ಚಿಂತಿಸಬೇಕಾದ ವಿಷಯ. ಹಿಂದಿನ ತಲೆಮಾರಿನವರಿಗೆ ಕಮ್ಯೂನಿಸಮ್ ಹಾಗೂ ಲೋಹಿಯಾವಾದ ಬೆಳಕಾಗಿ ಮೂಡಿತ್ತು. ಅದು ಅವರ ಸಾರ್ವಜನಿಕ ಜೀವನ, ಚಿಂತನೆ, ಬರೆಹಗಳಲ್ಲೂ ಕಾಣಿಸಿಕೊಳ್ಳುತ್ತಿತ್ತು. ಸಾಹಿತ್ಯ, ಸಿನಿಮಾ, ರಾಜಕೀಯ ಮುಂತಾದವು ಒಂದನ್ನೊಂದು ಪ್ರತಿಬಿಂಬಿಸುವ ಕೆಲಸವಾಗುತ್ತಿತ್ತು. ಈಗ ಅಂತಹ ಪರಿಸ್ಥತಿಯಿಲ್ಲ. ನೆರೆಯ ತೆಲಂಗಾಣ, ಆಂಧ್ರಕ್ಕೆ ಹೋಲಿಸಿದರೆ, ದಲಿತವಾದ, ಮಹಿಳಾವಾದ ಇನ್ನೂ ದೊಡ್ಡ ಮಟ್ಟಕ್ಕೆ ಬೆಳೆಯಬೇಕಾದ ಅಗತ್ಯವಿದೆ. ಆದಾವುದೂ ಇಲ್ಲದ post-truth ಕಾಲಘಟ್ಟದಲ್ಲಿ ರಾಜಕೀಯವಾಗಿ ನಾವು ಹೇಗೆ ಸ್ಪಂದಿಸಬೇಕು ಅನ್ನುವುದನ್ನು ಇನ್ನೂ ನಾವು ಕಲಿತಂತಿಲ್ಲ. ಸಾಮಾಜಿಕ ಜಾಲತಾಣದಿಂದಾಗಿ ಇಂದಿನ ತಲೆಮಾರಿನವರು ಹಿಂದೆಂದಿಗಿಂತಲೂ ವಿಪುಲವಾಗಿ ಬರೆಯುತ್ತಿರುವುದು ನಿಜವೇ ಆದರೂ, ಬರೆಯುವುದೆಲ್ಲ ಸಾಹಿತ್ಯವಾಗುವುದಿಲ್ಲ ಅನ್ನುವ ವಿವೇಚನೆ ಕೂಡ ಇರಬೇಕಾಗುತ್ತದೆ. ಫೇಸ್ಬುಕ್ ನಲ್ಲಿ ಸಿಗುವ ಲೈಕು, ಕಮೆಂಟುಗಳ ಆಧಾರದ ಮೇಲೆ ಗುಣಮಟ್ಟದ ನಿರ್ಧಾರವನ್ನು ಮಾಡುವುದು ಸರಿಯಾದ ಮಾನದಂಡವಲ್ಲ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಕ್ಷಣಕ್ಕೊಮ್ಮೆ ಸೃಷ್ಟಿಯಾಗುತ್ತಿರುವ ಬರೆಹಗಳನ್ನು ಯಾರು ವಿಮರ್ಶಿಸಬೇಕು? ಹೇಗೆ ವಿಮರ್ಶಿಸಬೇಕು? ಹೊಸ ತಲೆಮಾರು ಸೃಷ್ಟಿಸುತ್ತಿರುವ ಸಾಹಿತ್ಯವನ್ನು ವಿಮರ್ಶಿಸುವ ಗೋಜಿಗೆ ಹಳೆ ತಲೆಮಾರಿನ ವಿಮರ್ಶಕರು ಹೋಗುವ ಮನಸ್ಸು ಮಾಡಿಲ್ಲ. ಇಂದಿಗೂ ಅದೇ ಪಂಪ, ಅದೇ ಕುವೆಂಪು ನಮ್ಮ ಸಾಹಿತ್ಯ ವಿಮರ್ಶೆಯ ಪ್ರಮುಖ ಭಾಗವಾಗಿಬಿಟ್ಟಿದ್ದಾರೆ. ಅದರ ಜೊತೆಜೊತೆಯಲ್ಲೇ ಹೊಸ ತಲೆಮಾರಿನ ಸಾಹಿತ್ಯವನ್ನು ಮುಖಾಮುಖಿಯಾಗಿಸುವ ಕೆಲಸ ಇಂದು ಆಗಬೇಕಾಗಿದೆ. ಇಂದಿನ ತಲೆಮಾರಿನವರಿಗೆ ಟೀಕೆ, ವಿಮರ್ಶೆಗಳ ನಡುವಿನ ಗೆರೆ ಕಾಣಿಸುತ್ತಿಲ್ಲ. ಅಲ್ಲದೆ, ಹೊಸ ತಲೆಮಾರಿನ ಬರೆಹಗಾರರಿಗೆ “ಸೆಲೆಬ್ರಿಟಿ” ಗಳಾಗುವುದು ಮುಖ್ಯವಾಗಿದೆಯೇ ಹೊರತು, ಅವರ ಬರೆಹಗಳ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳುವ ಯಾ ಬೇರೆಯವರು ಮಾಡುವ ವಿಮರ್ಶೆಯನ್ನು ಸರಿಯಾಗಿ ಸ್ವೀಕರಿಸುವ ಮನಸ್ಥಿತಿಯಿದ್ದಂತಿಲ್ಲ. ಇದೆಲ್ಲದಕ್ಕೂ ಮೂಲ ಕಾರಣ, ನಮ್ಮ ಶಾಲೆ, ಕಾಲೇಜು, ಯೂನಿವರ್ಸಿಟಿಗಳು “ವಿಮರ್ಶಾ ಪ್ರವೃತ್ತಿ”ಯನ್ನು ಬೆಳೆಸುವಂತಹ ಬೋಧನೆ ಮಾಡುತ್ತಿಲ್ಲ. ಅದಕ್ಕೆ ಮುಖ್ಯವಾಗಿ ಮೇಲೆ ಹೆಸರಿಸಿದಂತಹ ಮೇಷ್ಠ್ರುಗಳಂತಹ ಪಡೆಯೇ ತಯಾರಾಗಬೇಕಾಗಿದೆ. ಅದನ್ನು ಮಾಡುವವರು ಯಾರು?

      ಜಿಆರ್ ತಮ್ಮ ಸಂಭಾಷಣೆಯುದ್ದಕ್ಕೂ ವಹಿಸಿರುವ ಮೌನದ ಹಿಂದಿನ ಮಾತನ್ನು ನಾನು ಹೀಗೆ ಕೇಳಿಸಿಕೊಂಡೆ. ಅಷ್ಟೆ.

ಪ್ರತಿಕ್ರಿಯಿಸಿ