“ರೂಪ ರೂಪಗಳನು ದಾಟಿ..”- ಅನುವಾದಕನ ಮಾತು

(ಸಂವರ್ತ ಅನುವಾದಿಸಿರುವ ಕವನಗಳ ಸಂಕಲನ “ರೂಪ ರೂಪಗಳನು ದಾಟಿ..” ಕುವೆಂಪು ಭಾಷಾಭಾರತಿಯಿಂದ ಪ್ರಕಟಗೊಳ್ಳಲಿದೆ. ಕವನಗಳ ಮೊದಲಿಗೆ ಅನುವಾದಕ ಬರೆದಿರುವ ಮಾತು ಋತುಮಾನದ ಓದುಗರಿಗಾಗಿ)

ಬೆಲ್ಜಿಯಂನಲ್ಲಿ ಹುಟ್ಟಿ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಸಿಮೋನ್ ಲೇಯ್ಸ್ ಎಂಬ ವಿಧ್ವಾಂಸ ಅನುವಾದ ಒಂದು ಪ್ರೀತಿಯ ಕಾರ್ಯ ಎಂದು ಹೇಳುತ್ತಾ ಅದನ್ನು ಏಕಕಾಲಕ್ಕೆ ‘ಲಕ್ಷುರಿ’ ಸಹ ಎಂದಿದ್ದಾನೆ. ಅವನು ಅನುವಾದವನ್ನು ‘ಲಕ್ಷುರಿ’ ಎನ್ನಲು ಕಾರಣ, ಹೊಟ್ಟೆಪಾಡಿಗಾಗಿ ಅಲ್ಲದೆ ಮಾಡುವ ಅನುವಾದಗಳಿಗೆ ಕೃತಿ ಕುರಿತ ಪ್ರೀತಿ ಮುಖ್ಯ ಆದರೆ ಅದು ಯಾವುದೇ ಬಗೆಯ ಲಾಭವನ್ನು ತಂದುಕೊಡುವುದಿಲ್ಲ. ಇಂಥಾ ಲಾಭರಹಿತ ಕಾರ್ಯವನ್ನು ಕೈಗೆತ್ತಿಕೊಳ್ಳಲು ಒಂದು ಬಗೆಯ ಸ್ವಾತಂತ್ರ, ಒಂದು ಬಗೆಯ ಸವಲತ್ತು, ಇವೆಲ್ಲದರ ಭಾಗ್ಯ ಇರಲೇಬೇಕು, ಒಂದು ಮಟ್ಟಿಗೆ ಪುಣ್ಯ ಮಾಡಿರಬೇಕು.

ಸಿಮೋನ್ ಲೇಯ್ಸ್ ಹೇಳಿದ ಮಾತು ಅನುವಾದವನ್ನು ಒಂದು ಹಂತದಲ್ಲಿ ತೀರಾ ವ್ಯಾವಹಾರಿಕವಾಗಿ ನೋಡುತ್ತದೆ. ಆದರೆ ಆತ ಒತ್ತು ನೀಡುವ ‘ಪ್ರೀತಿ’ ಅನುವಾದಕನಿಗೆ ಅಗತ್ಯ ಎನ್ನುವುದನ್ನು ಒಪ್ಪಿಕೊಳ್ಳಬಹುದು. ಆದರೆ…

ನಮ್ಮ ನೆಲದ ಮೇಲೆ ನೆಡೆದಾಡಿ ಹೋದ ಬಹಳ ಅತಿಸೂಕ್ಷ್ಮಮತ್ತು ಅಪರೂಪದ ಸಾಹಿತಿ-ಚಿಂತಕ ಎ.ಕೆ. ರಾಮಾನುಜನ್ ಒಂದು ಸಂದರ್ಶನದಲ್ಲಿ (ಚಿರಂತನ ಕುಲಶ್ರೇಷ್ಠ ಎಂಬಾತನಿಗೆ ನೀಡಿದ) ಅನುವಾದಗಳ ಕುರಿತು ಮಾತನಾಡುತ್ತಾ, ‘ನಾನು ಅನುವಾದ ಮಾಡುವಾಗ ನನಗರಿವಾದ ಒಂದು ಸಂಗತಿ ಎಂದರೆ ನಾನು ಅನುವಾದ ಮಾಡುತ್ತಿದ್ದ ಹಲವಾರು ಕವಿತೆಗಳನ್ನು ನಾನೇ ಬರೆಡಿರಬೇಕಿತ್ತು ಎಂದು ಆಶಿಸುತ್ತಿದ್ದೆ. ನಾನು ಪ್ರೀತಿಯಿಂದ ಅನುವಾದ ಮಾಡುವುದಿಲ್ಲ. ಬದಲಾಗಿ ಆ ಎಲ್ಲಾ ಕವಿತೆಗಳ ಬಗೆಗೆ ಒಂದು ಬಗೆಯ ಅಸೂಯೆಯಿಂದ, ಆಕ್ರೋಶಭರಿತವಾಗಿ ಅನುವಾದ ಮಾಡುತ್ತೇನೆ. ತಾನು ಮಾಡಲು ಬಯಸಿದ್ದು ಆದರೆ ಸೃಷ್ಟಿ ಮಾಡಲಾಗದ ಕೃತಿಯನ್ನು ತಾನು ಮಾಡುವುದಕ್ಕಿಂತ ಉತ್ತಮವಾಗಿ ಯಾರೋ ಮಾಡಿರುವ ಸಂದರ್ಭದಲ್ಲಿ ಆ ಕೃತಿಯನ್ನು ತನ್ನದಾಗಿಸಿಕೊಳ್ಳುವ ಅಸೂಯೆ ಮಿಶ್ರಿತ ಪ್ರೀತಿಯಲ್ಲಿ ಜನರು ಅನುವಾದ ಮಾಡುತ್ತಾರೆ,’ ಎಂಬರ್ಥದ ಮಾತನ್ನು ಆಡುತ್ತಾರೆ.

ರಾಮಾನುಜನ್ ಅವರ ಮಾತಿಗೆ ಹತ್ತಿರವಾದ ಆದರೂ ಸ್ವಲ್ಪ ಭಿನ್ನವಾದ ರೀತಿಯಲ್ಲಿ ಇದನ್ನು ಚೈನೀಸ್ ಬರಹಗಾರ ಜ್ಹೌ ಜ್ಯೋರೆನ್ ಅಭಿಪ್ರಾಯದಲ್ಲಿ ನೋಡಬಹುದು. ಆತನ ಪ್ರಕಾರ, ‘ಬರಹಗಾರ ತನ್ನೊಳಗೆ ಇದ್ದ ಒಂದು ಭಾವಪ್ರಪಂಚವನ್ನು ಕಾರಣಾಂತರಗಳಿಂದ ಹೊರಹಾಕಲು ಆಗದೆ ಹೋದಾಗ ಆ ಭಾವಪ್ರಪಂಚಕ್ಕೆ ಅಕ್ಷರ ರೂಪ ನೀಡಿದ ಕೃತಿಗಳನ್ನು ಅನುವಾದಕ್ಕೆ ಎತ್ತಿಕೊಳ್ಳುತ್ತಾನೆ.’

ಇವೆಲ್ಲಕ್ಕೂ ಭಿನ್ನವಾಗಿ ಆದರೆ ಸ್ವಲ್ಪ ಪೂರಕವಾಗಿಯೇ ಫ್ರೆಂಚ್ ಬರಹಗಾರ ವೆಲೇರಿ ಲಾರ್ಬೌಡ್ ಕೊಂಚ ಒರಟೊರಟಾಗಿ ಹೇಳುವುದೇನೆಂದರೆ ಅನುವಾದ ಎಂಬುದು ಒಂದು “ಉತ್ಕೃಷ್ಟ ಕೃತಿಚೌರ್ಯ.” ಇದನ್ನು ಒಂದು ಆಪಾದನೆಯನ್ನಾಗಿ ನೋಡದೆ ಒಂದು ಕೃತಿಯನ್ನು ತನ್ನದಾಗಿಸಿಕೊಳ್ಳಬೇಕು ಎಂಬ ತೀವ್ರವಾದ ಹಂಬಲ ಮತ್ತು ಪ್ರಯತ್ನ ಎಂದು ನೋಡಿದರೆ ಅಲ್ಲಿ ಪ್ರೀತಿಯೂ ಈರ್ಷೆಯೂ ಏಕಕಾಲಕ್ಕೆ ಕಾಣಲು ಸಿಗುತ್ತದೆ.

ಈ ತನ್ನದಾಗಿಸಿಕೊಳ್ಳುವಿಕೆ ಕೇವಲ ಹಕ್ಕುಸ್ಥಾಪನೆ ಎಂದು ನೋಡುವುದು ಸಹ ತಪ್ಪಾಗುತ್ತದೆ. ಈ ಹಂತದಲ್ಲಿ ನಾವು ಮತ್ತೆ ಲಾರ್ಬೌಡ್ ಅಭಿಪ್ರಾಯಕ್ಕೆ ಮರಳಿದರೆ ತಿಳಿಯುವುದೇನೆಂದರೆ, ‘ಅನುವಾದ ಒಂದು ಬಗೆಯಲ್ಲಿ ಅನುಸಂಧಾನ, ಶೋಧನೆ. ಓದಿನ ಮಿತಿಗೆ ದಕ್ಕದನ್ನು ಹಿಡಿಯುವ ಮತ್ತು ಆ ಮುಖೀನ ಕೃತಿಯನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವುದು.’

ಸಿಮೋನ್ ಲೇಯ್ಸ್ ಒಂದು ಕಡೆ ಅನುವಾದ ‘ನಕಲಿ ಬರವಣಿಗೆ’ ಮತ್ತು ಓರ್ವ ಸೃಜನಶೀಲ ಲೇಖಕನಿಗೆ ಕೆಲವೊಮ್ಮೆ ‘ಬದಲಿ ಬರವಣಿಗೆ’ ಎಂದು ಹೇಳುತ್ತಾನೆ. ಇದು ಒಪ್ಪಿಕೊಳ್ಳಲು ಕಷ್ಟವಾದರೂ ಇದನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ಯಾಕೆಂದರೆ ಸೃಜನಶೀಲ ಲೇಖಕರು ಎಷ್ಟೆಂದರೂ ರೋಲ್ಯಾಂಡ್ ಬಾರ್ತೆಸ್ ಹೇಳುವಂತೆ ‘ಭಾಷೆಯೊಂದಿಗೆ ಸಮಸ್ಯೆ ಉಳ್ಳ,’ ವ್ಯಕ್ತಿಗಳೇ ಆಗಿರುತ್ತಾರೆ. ಈ ಸಮಸ್ಯೆ ಬರವಣಿಗೆಯ ಹಾದಿಯಲ್ಲಿ ಬಂದು ಬರವಣಿಗೆಗೆ ಅಡಚಣೆ ಉಂಟಾದಾಗ ಅನುವಾದದ ಮೊರೆ ಹೋಗಿ ಆ ಅಡಚಣೆಯನ್ನು ದಾಟಬಹುದೇನೋ. ಆದರೆ ‘ನಕಲಿ ಬರವಣಿಗೆ’ ಅಥವಾ ‘ಬದಲಿ ಬರವಣಿಗೆ’ ಎಂದು ತೀರಾ ಸರಳೀಕೃತವಾಗಿ ಅನುವಾದ ಕಾರ್ಯವನ್ನು ನೋಡಲಾಗದು ಯಾಕೆಂದರೆ ಅನುವಾದವನ್ನು ಕೈಗೆತ್ತಿಕೊಳ್ಳಲು ಅನುವಾದಕ ಮೂಲ ಕರ್ತೃವಿನೊಂದಿಗೆ ಗುರುತಿಸಿಕೊಳ್ಳುವುದು ಅಗತ್ಯ ಯಾಕೆಂದರೆ ಅನುವಾದ ಎನ್ನುವುದು ಒಂದು “ಪ್ರೀತಿಯ ಸಹಭಾಗಿತ್ವ” ಎಂದು ಅನುವಾದಕ ಮೌರಿಸ್ ಕಾಯಿನ್ಡ್ರೂ ಹೇಳುತ್ತಾನೆ. ಇದು ತುಂಬಾ ನಿಜದ ಮಾತು. ಅನುವಾದಕನಿಗೆ ಪ್ರೀತಿಯ ಇಲ್ಲಾ ಈರ್ಷೆಯ ಒಂದು ಸಂಬಂಧ ಕೃತಿಯೊಂದಿಗೆ ಏರ್ಪಡುವುದು ಅಗತ್ಯ. ಅದಿಲ್ಲದೆ ಹೋದರೆ ಅನುವಾದ ನಿರ್ಜೀವವಾಗಿ ಹೋಗುತ್ತದೆ, ಇಲ್ಲಾ ಅಸಾಧ್ಯವಾಗುತ್ತದೆ.

ಲಾರ್ಬೌಡ್ ಮತ್ತು ಕಾಯಿನ್ಡ್ರೂ ಮಾತನ್ನು ಜೊತೆಜೊತೆಗಿಟ್ಟು ನೋಡಿದಾಗ ಈ ಸಂಬಂಧ ಕೇವಲ ಓರ್ವ ಬರಹಗಾರ ಅಥವಾ ಒಂದು ಬರವಣಿಗೆಯ ಮತ್ತೊಬ್ಬ ಅನುವಾದಕನ ನಡುವಿನ ಸಂಬಂಧ ಮಾತ್ರವಾಗಿರದೆ, ಅದು ಒಬ್ಬ ಓದುಗ ಮತ್ತು ಒಬ್ಬ ಬರಹಗಾರನ/ ಬರವಣಿಗೆಯ ನಡುವಿನ ಸಂಬಂಧವೂ ಆಗಿರುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ಅನುವಾದಕ ಉತ್ತಮ ಓದುಗ ಆಗಿರುವ ಅಗತ್ಯವನ್ನು ಸಹ ಧ್ವನಿಸುತ್ತವೆ ಈ ಮಾತುಗಳು.

ಚಿರಂತನ ಕುಲಶ್ರೇಷ್ಠ ಅವರಿಗೆ ನೀಡಿದ ಅದೇ ಸಂದರ್ಶನದಲ್ಲಿ ಎ.ಕೆ.ರಾಮನುಜನ್ ಹೇಳುವ ಮತ್ತೊಂದು ಮುಖ್ಯವಾದ ಮಾತಿದೆ. “ನಾನು ಕನ್ನಡದಲ್ಲಿ ಬರೆಯುವಾಗ ನಾನು ನನ್ನ ಒಳಗಿನ ಇಂಗ್ಲಿಷ್ ಲೋಕ ತಮಿಳು ಲೋಕ ಎಲ್ಲವೂ ನನ್ನ ಬರವಣಿಗೆಯ ಹಿಂದಿರಲಿ ಎಂದು ಇಚ್ಚಿಸುತ್ತೇನೆ. ನಾನು ಇಂಗ್ಲಿಷ್ ಭಾಷೆಯಲ್ಲಿ ಬರೆಯುವಾಗ ನನ್ನ ಕನ್ನಡ, ನನ್ನ ತಮಿಳು, ನನ್ನ ಭಾಷಾಶಾಸ್ತ್ರ, ನನ್ನ ಮಾನವಶಾಸ್ತ್ರ ಇವೆಲ್ಲವೂ ಆ ಬರವಣಿಗೆಯ ಹಿಂದೆ ಗುಪ್ತವಾಗಿ ಕಾರ್ಯನಿರ್ವಾಹಿಸುತ್ತಿರಲಿ ಎಂದು ಬಯಸುತ್ತೇನೆ. ಇದು ಒಂದು ಆಶಯ ಮಾತ್ರವೇ.”

ಈ ಮಾತನ್ನು ಅನುವಾದಕ್ಕೂ ವಿಸ್ತರಿಸಿದರೆ ನಾವು ತಿಳಿಯಬಹುದಾದದ್ದು ಏನೆಂದರೆ ಉತ್ತಮ ಅನುವಾದ ತನ್ನೊಳಗಿನ ಇತರೆ ಎಲ್ಲಾ ಲೋಕವನ್ನು ಕಾರ್ಯಕ್ಕೆ ತೊಡಗಿಸಿಕೊಂಡಾಗ ಉತ್ತಮ ಅನುವಾದ ಸಾಧ್ಯ.

ಉತ್ತಮ ಅನುವಾದಕ್ಕೆ ಕವಿಯೊಳಗಿನ ಲೋಕಗಳು ಕವಿಗಿರುವ ಲೋಕಜ್ಞಾನ ಇವುಗಳು ಮಾತ್ರ ಮುಖ್ಯವಾಗಿರದೆ ಅದಕ್ಕೂ ಮೀರಿದ ಮೂಲ ಕೃತಿಯ ಭಾಷೆ-ಸಂಸ್ಕೃತಿ-ಕಾಲ ಮತ್ತು ಅನುವಾದಗೊಂಡ ಭಾಷೆ-ಸಂಸ್ಕೃತಿ-ಕಾಲಕ್ಕೆ ಒಂದು ಬಗೆಯ ಸಾಮ್ಯ ಇದ್ದಾಗ ಅನುವಾದದ ಮೆರುಗು ಹೆಚ್ಚಬಹುದೇನೋ!

*****

ಸುಮಾರು ಒಂಬತ್ತು ವರ್ಷದ ಹಿಂದೆ, ಅಂದರೆ ೨೦೦೭ನೆ ಇಸವಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಹೆಗ್ಗೋಡಿನ ಸಂಸ್ಕೃತಿ ಶಿಬಿರಕ್ಕೆ ಹೋಗಿದ್ದಾಗ ಸಾಗರದ ವೃಂದ ಮತ್ತು ಪಿ.ವಿ.ಸುಬ್ರಾಯರ ಮನೆಯಲ್ಲಿ ನಾವೆಲ್ಲಾ ತಂಗಿದ್ದೆವು. ಎರಡನೇ ಸಂಜೆ ನಾಟಕ ನೋಡಿ ಊಟ ಮಾಡಿ ಮರಳಿದ ನಾವು ಕೆಲವರು ವೃಂದ-ಸುಬ್ರಾಯರ ಲೈಬ್ರರಿ ನೋಡುತ್ತಾ ಕುಳಿತೆವು. ಅಲ್ಲಿದ್ದ ವಚನ ಸಂಗ್ರಹ ಒಂದನ್ನು ಕೈಗೆತ್ತಿಕೊಂಡು ನನ್ನ ಇಬ್ಬರು ವಿದ್ಯಾರ್ಥಿಗಳಾದ ಆರ್ಯ ಮತ್ತು ಪ್ರಶಿತ್ (ಇಬ್ಬರೂ ನೇಪಾಳಿ ಮೂಲದವರು) ಅವರಿಗೆ ಕೆಲವು ವಚನಗಳನ್ನು ಓದಿ ಹೇಳುತ್ತಾ ಅದನ್ನು ಅದರ ಕಾಲಘಟ್ಟದೊಂದಿಗೆ ವಿವರಿಸುತ್ತಿದ್ದೆ. ಸ್ವಲ್ಪ ಹೊತ್ತಿನ ಬಳಿಕ ತನ್ನ ಕೋಣೆಗೆ ಹೋದ ಆರ್ಯ ಕೈಯಲ್ಲೊಂದು ಪುಸ್ತಕ ಹಿಡಿದುಕೊಂಡು ಬಂದಳು. ಅದು ನೇಪಾಳಿ ಕವಿ ಭೂಪಿ ಶೇರ್ಚನ್ ಕವನ ಸಂಗ್ರಹವಾಗಿತ್ತು. ಅದರಿಂದ ಒಂದು ನೇಪಾಳಿ ಕವಿತೆಯನ್ನು ಆರ್ಯ ಓದಿ ಹೇಳಿದಳು. ಅವಳು ಓದಿ ಹೇಳಿದ ಬೆನ್ನಿಗೆ ಆಕೆಯ ಪ್ರಿಯಕರ ಪ್ರಶಿತ್ ನನಗಾಗಿ ಆ ಕವಿತೆಯನ್ನು ತಡವಿಲ್ಲದೆ ಆಂಗ್ಲ ಭಾಷೆಗೆ ಅನುವಾದ ಮಾಡಿದ. ಅವನ ಅನುವಾದದಿಂದ ಸ್ಫೂರ್ತಿ ಪಡೆದೋ ಏನೋ, ಇಲ್ಲ ಯಾವುದೋ ಒಂದು ಭಾವನಾತ್ಮಕ ಕೊಂಡಿ ಏರ್ಪಟ್ಟ ಕಾರಣವೋ ಉಮೇದಿನಲ್ಲಿ ಆ ಕವಿತೆಯನ್ನು ತುರಂತಾಗಿ ಕನ್ನಡಕ್ಕೆ ಅನುವಾದಿಸಿದೆ.

ಬಹುಶಃ ಅದೇ ನಾನು ಮಾಡಿದ  ಮೊದಲ ಅನುವಾದ ಇರಬೇಕು.

ಅದಾಗಿ ಕೆಲವರ್ಷಗಳ ಕಾಲ ಅಂಥಾ ಸಾಹಸಕ್ಕೇನೂ ಕೈ ಹಾಕಿರಲಿಲ್ಲ. ಆದರೆ ಅದೊಂದು ದಿನ ನಸರೀನ್ ಮುನ್ನಿ ಕಬೀರ್ ನಿರ್ದೇಶಿಸಿದ ಚಿತ್ರನಿರ್ದೇಶಕ ಮತ್ತು ನಟ ಗುರು ದತ್ತ್ ಕುರಿತಾದ ಸಾಕ್ಷ್ಯ ಚಿತ್ರ ನೋಡುತ್ತಿದ್ದಾಗ ಅದರ ಕೊನೆಯಲ್ಲಿ ಕೈಫಿ ಆಜ್ಮಿ ವಾಚಿಸುವ ಗಜಲ್ ಕೇಳಿದಾಗ ಅದೆಲ್ಲಿಂದ ಅಷ್ಟೊಂದು ಹೊಟ್ಟೆ ಕಿಚ್ಚಾಯಿತೋ ತಿಳಿಯದು, ಸಿನಿಮಾ ನಿಲ್ಲಿಸಿ ಧೀಡೀರೆಂದು ಐದೇ ಐದು ನಿಮಿಷದಲ್ಲಿ ಸಂಪೂರ್ಣ ಗಜಲ್ ಅನ್ನು ಕನ್ನಡಕ್ಕೆ ಅನುವಾದ ಮಾಡಿದೆ.

ಇದಾಗಿ ಕೆಲವೇ ಸಮಯದಲ್ಲಿ ದೀಪಾ ಭಾಟಿಯಾ ಅವರ ‘ನೀರೊಸ್ ಗೆಸ್ಟ್ಸ್’ ಸಾಕ್ಷ್ಯ ಚಿತ್ರ ನೋಡುವಾಗ ಅದರಲ್ಲಿ ವಿದರ್ಭ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಕೃಷ್ಣ ಕಲಂಬ್ ಬರೆದ ಒಂದು ಕವಿತೆ ಕೇಳಿ ಮೈಯೆಲ್ಲಾ ಕಣ್ಣೀರಾದಾಗ ‘ಈ ಕವಿತೆ ಕನ್ನಡಕ್ಕೆ ಬರಬೇಕು, ಈ ಕತೆ ವ್ಯಥೆ ಮತ್ತಷ್ಟು ಜನರಿಗೆ ತಲುಪಬೇಕು,’ ಎಂದನಿಸಿ ಅನುವಾದ ಮಾಡಿದೆ.

ಕೃಷ್ಣ ಕಲಂಬ್ ಮತ್ತು ಕೈಫಿ ಆಜ್ಮಿ ಅವರ ಕವಿತೆಗಳ ಅನುವಾದ ಮಾಡಿದ ಮೇಲೆಯೇ ಸ್ವಲ್ಪ ಧೈರ್ಯ ಬಂದು ಅನುವಾದಕ್ಕೆ ಹೆಚ್ಚು ಕೈ ಹಾಕಲು ಆರಂಭಿಸಿದ್ದು. ಅದಾಗುವ ಹೊತ್ತಿಗೆ ಕ್ಯಾಲೆಂಡರ್ ೨೦೧೧ ತೋರಿಸುತಿತ್ತು.

ಮುಂದೆ ಹೀಗೆ ಎಲ್ಲೊ ಓದಿದ, ಎಲ್ಲೋ ಕೇಳಿದ, ಯಾರೋ ಓದಿಸಿದ, ಇನ್ನ್ಯಾರೋ ಓದಿ ಹೇಳಿದ ಕವಿತೆಗಳನ್ನು ಅನುವಾದ ಮಾಡುತ್ತಾ ಬಂದೆ. ಹೀಗೆ ಮಾಡುತ್ತಿರುವ ಸಂದರ್ಭದಲ್ಲಿ ಕೆಲವೊಮ್ಮೆ, ‘ನಾನ್ಯಾಕೆ ಅನುವಾದ ಮಾಡುತ್ತೇನೆ?’ ಎಂಬ ಪ್ರಶ್ನೆ ನನಗೆ ನಾನೇ ಕೇಳಿಕೊಂಡಿದ್ದೇನೆ. ಅದಕ್ಕೆ ನಿರ್ದಿಷ್ಟವಾದ ಉತ್ತರ ಇಲ್ಲ. ಯಾಕೆಂದರೆ ಪ್ರತಿ ಕವಿತೆಯ ಅನುವಾದದ ಹಿಂದೆ ಒಂದೊಂದು ಕಾರಣವಿದೆ. ಭಗ್ನ ಪ್ರೇಮ ಆ ಸಂದರ್ಭದಲ್ಲಿ ಒಂದು ಕವಿತೆಯನ್ನು ಅನುವಾದ ಮಾಡಿಸಿದ್ದಾರೆ, ರಾಜಕೀಯ ಪರಿಸ್ಥಿತಿ ಇನ್ನ್ಯಾವುದೋ ಕವಿತೆಯನ್ನು ಅನುವಾದ ಮಾಡಿಸಿದೆ. ನನಗೆ ತಿಳಿಯದ ನನ್ನೊಳಗಿನ ಒಂದಂಶವನ್ನು ಸ್ಪರ್ಶಿಸಿದ ಕವಿತೆಯ ಭಾವವೊಂದು ಕೈಹಿಡಿದು ಆಲಿಂಗಿಸಿ ನನ್ನ ಮುಖಾಂತರ ತನ್ನನ್ನೇ ಕನ್ನಡೀಕರಿಸಿಕೊಂಡಿದೆ.

ಆದರೂ ‘ಯಾರೇ ಆಗಲಿ, ಅನುವಾದ ಯಾಕೆ ಮಾಡುತ್ತಾರೆ?’ ಎಂಬ ಪ್ರಶ್ನೆ ನನ್ನೊಳಗೆ ಗಿರಾಗಿರಾ ಸುತ್ತುತ್ತಿದ್ದದ್ದು ಹೌದು. ಅದಕ್ಕೆ ನನ್ನ ಮಿತಿಯೊಳಗೆ ಉತ್ತರ ಮತ್ತು ಅರ್ಥ ಕಂಡುಕೊಳ್ಳಲು ‘ಅನುವಾದಕನ ಮಾತು’ವಿನ ಮೊದಲ ಭಾಗದಲ್ಲಿ ಪ್ರಯತ್ನಿಸಿದ್ದೇನೆ.

ಬಹುಶಃ ಉತ್ತರವೂ ಕೊನೆಗೆ ಮೂಲ ಕೃತಿಯಂತೆ ಇರಬೇಕು; ಕೈಗೆ ಸಂಪೂರ್ಣವಾಗಿ ತನ್ನೆಲ್ಲ ಬಣ್ಣ, ತನ್ನೆಲ್ಲಾ ಛಾಯೆ, ತನ್ನೆಲ್ಲಾ ಕಂಪು, ಹೆಣೆತಗಳೊಂದಿಗೆ ದಕ್ಕುವುದಿಲ್ಲ.

ಜಯಂತ್ ಕಾಯ್ಕಿಣಿ ಒಮ್ಮೆ ಹೇಳಿದ್ದರು ಅನುವಾದ ಮಾಡುವುದೆಂದರೆ ಪೆರ್ಫ್ಯೂಮ್ ಅನ್ನು ಒಂದು ಬಾಟಲಿಯಿಂದ ಇನ್ನೊಂದು ಬಾಟಲಿಗೆ ವರ್ಗಾಯಿಸಿದಂತೆ ಎಂದು. ಯಾವುದೇ ನೂಕ್ಸಾನು ಇಲ್ಲದೆ ಅನುವಾದ ಸಾಧ್ಯ ಇಲ್ಲ ಎಂಬುದನ್ನು ಹೇಳಲು ಅವರು ಉಪಯೋಗಿಸಿದ ಪ್ರತಿಮೆ ನನಗೆ ಬಹಳ ಇಷ್ಟವಾಯಿತು. ವರ್ಗಾವಣೆ ಇಲ್ಲಿ ಕೇಂದ್ರ ಆಗಿದ್ದು ರೂಪ ರೂಪಗಳನು ದಾಟಿ ಬರುವಾಗ ಅದೆಷ್ಟೋ ಸೋರಿ ಹೋಗುತ್ತದೆ. ಆ ಕಾರಣಕ್ಕೆ ಮತ್ತು ಇಲ್ಲಿನ ಹೆಚ್ಚಿನ ಕವಿತೆಗಳು ತಮ್ಮ ಮೂಲ ‘ರೂಪ’ದಿಂದ ಆಂಗ್ಲ ‘ರೂಪ’ಕ್ಕೆ ವರ್ಗಾವಣೆ ಆಗಿ ಮತ್ತು ಆ ಮುಖಾಂತರ ಕನ್ನಡ ‘ರೂಪ’ಕ್ಕೆ ಬಂದಿರುವ  ಕಾರಣಕ್ಕೆ ಈ ಅನುವಾದ ಸಂಕಲನಕ್ಕೆ ‘ರೂಪರೂಪಗಳನು ದಾಟಿ…’ ಎಂದು ಹೆಸರಿಟ್ಟಿದ್ದೇನೆ. ಇಲ್ಲಿ ಒಂದಕ್ಕಿಂತ ಹೆಚ್ಚಿನ ವರ್ಗಾವಣೆ ಆಗಿರುವ ಕಾರಣ ಸೋರಿಕೆಯೂ ಹೆಚ್ಚಾಗಿರಬಹುದು.

ಇಷ್ಟೆಲ್ಲಾ ಮಿತಿ ಇದ್ದರೂ ಈ ಅನುವಾದ ಮಾಡಿರಲು ಮತ್ತು ಈಗ ಪ್ರಕಟಿಸಲು ಕಾರಣ ಇದೆ. ಈರ್ಷೆ, ಪ್ರೀತಿ, ಪ್ರಸ್ತುತತೆ, ಶ್ರೇಷ್ಠತೆ ಇವೆಲ್ಲವದರ ಆಚೆಗೂ ಒಂದು ಕಾರಣ.

ಸುಕೃತ ಪಾಲ್ ಕುಮಾರ್ ಎಂಬ ದೆಹಲಿ ಮೂಲದ ಕವಿಯ ಹಲವಾರು ಕವಿತೆಗಳನ್ನು ಉರ್ದು ಕವಿ ಗುಲ್ಜಾರ್ ಉರ್ದುವಿಗೆ ಭಾಷಾಂತರ ಮಾಡುತ್ತಾ ಹೇಳಿದರು, “ಸುಕೃತ ಅವರ ಕವಿತೆಗಳನ್ನು ಓದುವಾಗ ಈ ಕವಿತೆಗಳೆಲ್ಲ ಆಂಗ್ಲ ಬಟ್ಟೆ ತೊಟ್ಟು ಏನು ಮಾಡುತ್ತಿದ್ದವೇ, ಇವೆಲ್ಲಾ ತನ್ನ ಭಾವ ಮತ್ತು ಶೈಲಿಯ ಮೂಲದಲ್ಲಿ ಉರ್ದು ಕವಿತೆಗಳು. ಇವುಗಳನ್ನು ಮತ್ತೆ ಮನೆಗೆ ಮರಳಿ ತರಬೇಕು ಎಂದನಿಸಿ ಅನುವಾದ ಆರಂಭ ಮಾಡಿದೆ.” ಉಭಯ ಭಾಷೆಯಲ್ಲಿ ಪ್ರಕಟವಾದ ಸುಕೃತ-ಗುಲ್ಜಾರ್ ಅವರ ಸಂಕಲಕ್ಕೆ ‘ಪೊಯೆಮ್ಸ್ ಕಮ್ ಹೋಂ’ (ಕವಿತೆಗಳು ಮನೆಗೆ ಮರಳಿದವು) ಎಂದೇ ಹೆಸರು.

ಇಲ್ಲಿ ನಾನು ಅನುವಾದ ಮಾಡಿರುವ ಎಷ್ಟೋ ಕವಿತೆಗಳು ಬಹುಶಃ ಕನ್ನಡ ಮನೋಲೋಕಕ್ಕೆ ಭಾವಲೋಕಕ್ಕೆ ಆಪ್ತ ಎಂದನಿಸಿ ಅವುಗಳನ್ನೂ ನಮ್ಮ ಮನೆಗೆ ಕರೆದು ಅತಿಥಿ ಸತ್ಕಾರ ಮಾಡಬೇಕು ಎಂದು ತೀವ್ರವಾಗಿ ಅನಿಸಿದ್ದು ಹೌದು. ಆದರೆ ಅವು ಮನೆ ಬಿಟ್ಟು ಹೋದ ಕವಿತೆಗಳು ಅವನ್ನು ಮರಳಿ ತಂದೆ ಎಂಬ ಅಭಿರಾಯ ನನಗಿಲ್ಲ. ಆದರೆ ನಮ್ಮ ಮನೆಯನ್ನು ಖಂಡಿತಾ ಭೇಟಿ ಮಾಡಬೇಕಾದ ಸಂಬಂಧಿಕರು ಎಂದು ಅನಿಸಿದ್ದಂತೂ ಸುಳ್ಳಲ್ಲ.

ಈ ಸತ್ಕಾರ ಕೂಟವನ್ನು ಏರ್ಪಡಿಸಲು ಕುವೆಂಪು ಭಾಷಾ ಭಾರತಿ ಮುಂದಾಗಿರುವುದು ನನ್ನಲ್ಲಿ ಬಹಳ ಸಂತೋಷ ಉಂಟು ಮಾಡಿದೆ. ಕುವೆಂಪು ಭಾಷಾ ಭಾರತಿಗೆ ನಾನು ಋಣಿಯಾಗಿದ್ದೇನೆ.

 

8 comments to ““ರೂಪ ರೂಪಗಳನು ದಾಟಿ..”- ಅನುವಾದಕನ ಮಾತು”
  1. ಅನುವಾದದ ಕುರಿತ ಗಟ್ಟಿ ಲೇಖನ..
    ಧನ್ಯವಾದಗಳು ಸಂವರ್ತ ಸಾಹಿಲ್ ಸರ್..

  2. Munnudi chennagide. Modala bhagadalli iruva hesarugala jote nimma hesaroo prasthaapavaguva dina bEga barali. kruti bEga sigali.

  3. ಅನುವಾದದ ಬಗೆಗೆ ಒಳ್ಳೆಯ ಮಾತುಗಳನ್ನಾಡಿದ್ದೀರಿ. ಧನ್ಯವಾದಗಳು.

  4. ನಿಮ್ಮ ಜೊತೆ ಸೇರಿ ಏನಾದರೊಂದು ಕೆಲಸ ಮಾಡಬೇಕು, ಭೇಟಿ ಮಾಡುತ್ತೇನೆ

ಪ್ರತಿಕ್ರಿಯಿಸಿ