ಭಾರತದಲ್ಲಿ ಗೋಹತ್ಯೆ ನಿಷೇಧಿಸಬೇಕೆಂದವರಿಗೆ ಗಾಂಧಿ ಹೇಳಿದ್ದೇನು ?

ಭಾರತದಲ್ಲಿ ಗೋಹತ್ಯೆ ನಿಷೇಧಿಸುವ ಯಾವುದೇ ಕಾನೂನು ರೂಪಿಸುವಂತಿಲ್ಲ. ಗೋವುಗಳ ಸೇವೆಗೆ ನಾನು ಯಾವಾಗಲೂ ಮುಡುಪಾಗಿರುತ್ತೇನೆ. ಆದರೆ ನನ್ನ ಧರ್ಮ ಉಳಿದೆಲ್ಲ ಭಾರತೀಯರ ಧರ್ಮವಾಗಲು ಹೇಗೆ ಸಾಧ್ಯ? ಇದು ಹಿಂದೂಗಳಲ್ಲದ ಭಾರತೀಯರ ಮೇಲೆ ದಬ್ಬಾಳಿಕೆಯಾಗುತ್ತದೆ.

೫೦,೦೦೦ ಪೋಸ್ಟ್ ಕಾರ್ಡ್‍ಗಳು, ೨೫ ರಿಂದ ೩೦ ಸಾವಿರ ಪತ್ರಗಳು ಹಾಗೂ ಹಲವು ಸಾವಿರ ಟೆಲಿಗ್ರಾಮ್‍ಗಳು ಗೋಹತ್ಯೆಯನ್ನು ನೀಷೇಧಿಸುವಂತೆ ಕೋರಿ ಬಂದಿದೆ ಎಂದು ರಾಜೇಂದ್ರ ಬಾಬು ನನಗೆ ಹೇಳುತ್ತಾರೆ. ಇದರ ಬಗ್ಗೆ ನಾನು ಈಗಾಗಲೇ ಒಮ್ಮೆ ನಿಮ್ಮೊಡನೆ ಮಾತಾಡಿದ್ದೇನೆ. ಈ ಟೆಲಿಗ್ರಾಮ್ ಹಾಗೂ ಪತ್ರಗಳ ಪ್ರವಾಹ ಏಕೆ? ಇವುಗಳಿಂದ ಯಾವುದೇ ಪ್ರಯೋಜನವಿಲ್ಲ.

ಗೆಳೆಯರೊಬ್ಬರು ಈ ವಿಚಾರಕ್ಕೆಂದು ಉಪವಾಸ ಪ್ರಾರಂಭಿಸಿದ್ದಾರೆಂದು ಇನ್ನೊಂದು ಟೆಲಿಗ್ರಾಮ್ ಹೇಳುತ್ತಿದೆ. ಭಾರತದಲ್ಲಿ ಗೋಹತ್ಯೆ ನಿಷೇಧಿಸುವ ಯಾವುದೇ ಕಾನೂನು ರೂಪಿಸುವಂತಿಲ್ಲ. ಹಿಂದೂಗಳಿಗೆ ಗೋಹತ್ಯೆ ನಿಷಿದ್ಧ ಎಂಬುದರ ಕುರಿತು ನನಗೆ ಯಾವುದೇ ಸಂಶಯವಿಲ್ಲ. ಗೋವುಗಳ ಸೇವೆಗೆ ನಾನು ಯಾವಾಗಲೂ ಮುಡುಪಾಗಿರುತ್ತೇನೆ. ಆದರೆ ನನ್ನ ಧರ್ಮ ಉಳಿದೆಲ್ಲ ಭಾರತೀಯರ ಧರ್ಮವಾಗಲು ಹೇಗೆ ಸಾಧ್ಯ? ಇದು ಹಿಂದೂಗಳಲ್ಲದ ಭಾರತೀಯರ ಮೇಲೆ ದಬ್ಬಾಳಿಕೆಯಾಗುತ್ತದೆ.

ಧರ್ಮದ ಆಧಾರದ ಮೇಲೆ ಯಾವುದೇ ದಬ್ಬಾಳಿಕೆಯಿರದೆಂದು ನಾವು ಸಾರಿ ಸಾರಿ ಹೇಳುತ್ತಿದ್ದೇವೆ. ಪ್ರಾರ್ಥನಾ ಸಮಯದಲ್ಲಿ ನಾವು ಕುರಾನ್‍ನ ಭಾಗಗಳನ್ನು ಪಠಿಸುತ್ತಿದ್ದೇವೆ. ಆದರೆ ಇದೇ ಸಾಲುಗಳನ್ನು ಪಠಿಸುವಂತೆ ಯಾರಾದರೂ ನನ್ನ ಮೇಲೆ ಹೇರಿದರೆ ನಾನದನ್ನು ಸಹಿಸಲಾರೆ. ಗೋಹತ್ಯೆ ಮಾಡಬಾರದೆಂದು ಅವರ ಸ್ವಂತ ಅಭಿಪ್ರಾಯವಲ್ಲದಿದ್ದರೆ, ಗೋಹತ್ಯೆ ಮಾಡದಂತೆ ನಾನು ಹೇರಿಕೆ ಮಾಡಲು ಹೇಗೆ ಸಾಧ್ಯ? ಭಾರತದಲ್ಲಿರುವವರು ಬರೀ ಹಿಂದೂಗಳೆಂದೇನಲ್ಲ. ಇಲ್ಲಿ ಮುಸ್ಲಿಮ್, ಪಾರ್ಸಿ, ಕ್ರಿಶ್ಚಿಯನ್ ಮತ್ತು ಇತರ ಧರ್ಮಗಳ ಸಮುದಾಯಗಳಿವೆ.

ಭಾರತ ಈಗೆ ಹಿಂದೂಗಳ ನಾಡಾಗಿದೆ ಎನ್ನುವುದು ತಪ್ಪು ಕಲ್ಪನೆ. ಭಾರತ ಇಲ್ಲಿ ನೆಲೆಸಿದವರೆಲ್ಲರಿಗೂ ಸೇರಿದ್ದು. ನಾವಿಲ್ಲಿ ಗೋಹತ್ಯೆಯನ್ನು ಕಾನೂನು ಮುಖಾಂತರ ತಡೆದರೆ, ಹಾಗೂ ಪಾಕಿಸ್ತಾನದಲ್ಲಿ ಇದರ ತದ್ವಿರುದ್ಧ ಸ್ಥಿತಿಯಾದರೆ ಹೇಗಿದ್ದೀತು? ಮೂರ್ತಿ ಪೂಜೆಯು ಶರಿಯತ್ ವಿರುದ್ಧವಾದೀತು ಎಂದು ಅವರು ಹಿಂದೂಗಳು ದೇವಸ್ಥಾನಗಳಿಗೆ ಹೋಗದಂತೆ ನಿಷೇಧಿಸಿದರೆ? ನನಗೆ ಒಂದು ಕಲ್ಲಿನಲ್ಲಿಯೂ ದೇವರು ಕಾಣುತ್ತಾರೆ ಆದರೆ ನಾನು ಇದರಿಂದ ಯಾರಿಗೆ ಹಾನಿ ಉಂಟು ಮಾಡುತ್ತಿದ್ದೇನೆ? ಹಾಗಾಗಿ ದೇವಸ್ಥಾನಗಳಿಗೆ ಹೋಗದಂತೆ ಕಾನೂನು ತಡೆದರೂ ನಾನು ಹೋಗುತ್ತಿರುತ್ತೇನೆ. ಹೀಗಾಗಿ ಈ ಟೆಲಿಗ್ರಾಮ್ ಮತ್ತು ಪತ್ರಗಳು ನಿಲ್ಲಬೇಕೆಂಬುದು ನನ್ನ ಸಲಹೆ. ಇವುಗಳ ಮೇಲೆ ದುಡ್ಡು ವ್ಯರ್ಥ ಮಾಡುವುದು ಸರಿಯಲ್ಲ.

ಅಷ್ಟಕ್ಕೂ ಕೆಲವು ಶ್ರೀಮಂತ ಹಿಂದೂಗಳು ಸ್ವತಃ ಗೋಹತ್ಯೆಯನ್ನು ಪ್ರೋತ್ಸಾಹಿಸುತ್ತಾರೆ. ನಿಜ, ಅವರು ಇದನ್ನು ತಮ್ಮದೇ ಕೈಗಳಿಂದ ನಡೆಸುವುದಿಲ್ಲ. ಆದರೆ ಹತ್ಯೆ ಮಾಡಿ ಗೋಚರ್ಮದಿಂದ ತಯಾರದ ಶೂಗಳನ್ನು ಭಾರತಕ್ಕೆ ಮರಳಿಸಲೆಂದು ಆಸ್ಟ್ರೇಲಿಯಾಕ್ಕೆ ಗೂವುಗಳನ್ನು ಕಳುಹಿಸುತ್ತಿರುವವರು ಯಾರು? ನನಗೆ ಒಬ್ಬರು ಸಾಂಪ್ರದಾಯಿಕ ವೈಷ್ಣವ ಹಿಂದೂ ಗೊತ್ತು. ಅವರು ತಮ್ಮ ಮಕ್ಕಳಿಗೆ ಬೀಫ್ ಸೂಪ್ ಕುಡಿಸುತ್ತಿದ್ದರು. ನಾನು ಅವರನ್ನು ಹೀಗೆ ಮಾಡಿದ್ದೇಕೆ ಎಂದು ಕೇಳಿದಾಗ ಅವರು ಗೋಮಾಂಸವನ್ನು ಔಷಧವಾಗಿ ತೆಗೆದುಕೊಳ್ಳುವುದರಲ್ಲಿ ತಪ್ಪಿಲ್ಲ ಎನ್ನುತ್ತಿದ್ದರು.

ನಿಜವಾದ ಧರ್ಮ ಏನು ಎನ್ನುವುದನ್ನು ನಾವು ಕೂತು ಆಲೋಚಿಸುವುದಿಲ್ಲ. ಬದಲಾಗಿ ಗೋಹತ್ಯೆ ನಿಷೇಧದ ಕಾನೂನು ಬೇಕೆಂದು ಬೊಬ್ಬೆಯಿಡುತ್ತೇವೆ. ಹಳ್ಳಿಗಳಲ್ಲಿ ಹಿಂದೂಗಳು ಎತ್ತುಗಳನ್ನು ನೆಗ್ಗುವಷ್ಟು ಭಾರ ಹೊರುವಂತೆ ಮಾಡುವುದಿದೆ. ಇದು ನಿಧಾನವಾಗಿ ಮಾಡುವ ಗೋಹತ್ಯೆ ಅಲ್ಲವೇನು? ಹೀಗಾಗಿ ಈ ವಿಚಾರವನ್ನು ಸಂವಿಧಾನ ಸಭೆಯಲ್ಲಿ ಹೆಚ್ಚು ಮುಂದುವರಿಸಬಾರದೆಂಬುದು ನಾನು ಸಲಹೆ ನೀಡುತ್ತೇನೆ.

“ಮುಸ್ಲಿಮರು ನಡೆಸಿರುವ ದೌರ್ಜನ್ಯಗಳ ಬೆನ್ನಲ್ಲಿ ಯಾವ ಮುಸ್ಲಿಮರನ್ನು ನಂಬಬೇಕೆಂಬುದು ಪ್ರಶ್ನೆಯಾಗಿದೆ. ಭಾರತದಲ್ಲಿರುವ ಮುಸ್ಲಿಮರ ಬಗ್ಗೆ ನಮ್ಮ ಧೋರಣೆ ಹೇಗಿರಬೇಕು? ಪಾಕಿಸ್ತಾನದಲ್ಲಿರುವ ಮುಸ್ಲಿಮೇತರರು ಏನು ಮಾಡಬೇಕು” ಎಂದು ನನ್ನನ್ನು ಕೇಳಲಾಗಿದೆ.

ಭಾರತದ ಎಲ್ಲ ಧರ್ಮಗಳೂ ಪರೀಕ್ಷೆ ಎದುರಿಸುತ್ತಿವೆ ಎಂಬ ನನ್ನ ನಿಲುವನ್ನು ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ. ವಿವಿಧ ಮತಗಳಿಗೆ ಸೇರಿದವರಾದ ಸಿಖ್ಖರು, ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ಇವರೆಲ್ಲ ಹೇಗೆ ವರ್ತಿಸುತ್ತಾರೆ ಹಾಗೂ ಭಾರತದ ವಹಿವಾಟುಗಳನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಪಾಕಿಸ್ತಾನ ಮುಸ್ಲಿಮರಿಗೆ ಸೇರಿದ್ದೆಂದು ಹೇಳಲಾಗಿರಬಹುದು ಆದರೆ ಭಾರತ ಎಲ್ಲರಿಗೂ ಸೇರಿದ್ದು.

ಈ ಪ್ರಶ್ನೆಯನ್ನು ನಾನು ಈಗಾಗಲೇ ಉತ್ತರಿಸಿದ್ದೇನೆ. ಭಾರತದ ಎಲ್ಲ ಧರ್ಮಗಳೂ ಪರೀಕ್ಷೆ ಎದುರಿಸುತ್ತಿವೆ ಎಂಬ ನನ್ನ ನಿಲುವನ್ನು ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ. ವಿವಿಧ ಮತಗಳಿಗೆ ಸೇರಿದವರಾದ ಸಿಖ್ಖರು, ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ಇವರೆಲ್ಲ ಹೇಗೆ ವರ್ತಿಸುತ್ತಾರೆ ಹಾಗೂ ಭಾರತದ ವಹಿವಾಟುಗಳನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಪಾಕಿಸ್ತಾನ ಮುಸ್ಲಿಮರಿಗೆ ಸೇರಿದ್ದೆಂದು ಹೇಳಲಾಗಿರಬಹುದು ಆದರೆ ಭಾರತ ಎಲ್ಲರಿಗೂ ಸೇರಿದ್ದು. ನೀವು ನಿಮ್ಮ ಅಧೈರ್ಯವನ್ನು ತೊರೆದು ಧೀರರಾದರೆ ಮುಸ್ಲಿಮರೊಡನೆ ಹೇಗೆ ವರ್ತಿಸಬೇಕೆಂದು ನೀವು ಯೋಚಿಸಬೇಕಿಲ್ಲ. ಆದರೆ ಇವತ್ತು ನಮ್ಮಲ್ಲೇ ಅಧೈರ್ಯವಿದೆ. ಇದಕ್ಕಾಗಿ ನಾನು ಈಗಾಗಲೇ ಹೊಣೆ ಒಪ್ಪಿಕೊಂಡಿದ್ದೇನೆ.

ನನ್ನ ಮುವ್ವತ್ತು ವರ್ಷಗಳ ಭೋದನೆ ಹೇಗೆ ನಿಷ್ಫಲವಾಗಿದೆಯೆಂದು ನಾನು ಇನ್ನೂ ಯೋಚಿಸುತ್ತಿರುತ್ತೇನೆ. ಶುರುವಿನಲ್ಲಿ, ಅಹಿಂಸೆ ಅಂಜುಬುರಕರಿಗೆ ಅಹಿಂಸೆ ಆಯುಧವಾಗಲು ಸಾಧ್ಯ ಎಂದು ನಾನು ಯಾಕೆ ಕಲ್ಪಿಸಿಬಿಟ್ಟೆ? ಇವತ್ತಿಗೂ ನಾವು ಧೀರರಾಗಿ, ಮುಸ್ಲಿಮರನ್ನು ಪ್ರೀತಿಸಬಲ್ಲವರಾದೇವೆಂದರೆ, ಮುಸ್ಲಿಮರಿಗೆ ನಮಗೆ ದ್ರೋಹ ಬಗೆದು ಏನು ಸಾಧಿಸಬೇಕೆಂದು ಯೋಚನೆ ಹುಟ್ಟುತ್ತದೆ. ಅವರು ಪ್ರೀತಿಗೆ ಪ್ರೀತಿಯನ್ನು ಮರಳಿಸುತ್ತಾರೆ. ಭಾರತದಲ್ಲಿರುವ ಕೋಟ್ಯಂತರ ಮುಸ್ಲಿಮರನ್ನು ನಾವು ಗುಲಾಮರನ್ನಾಗಿಸಲು ಸಾಧ್ಯವೇ? ಯಾರು ಪರರನ್ನು ಗುಲಾಮರನ್ನಾಗಿ ಮಾಡುತ್ತಾನೋ ಆತ ಸ್ವತಃ ಗುಲಾಮನಾಗುತ್ತಾನೆ. ನಾವು ಖಡ್ಗಕ್ಕೆ ಖಡ್ಗ, ಲಾಠಿಗೆ ಲಾಠಿ, ಒದೆತಕ್ಕೆ ಪ್ರತಿಒದೆತ ಉತ್ತರವೆಂದುಕೊಂಡರೆ ಪಾಕಿಸ್ತಾನದಲ್ಲಿ ಸನ್ನಿವೇಶ ಬೇರೆಯಿರುತ್ತದೆಂದು ನಾವು ಅಂದುಕೊಳ್ಳಲಾಗದು.  ಆಗ ನಾವು ಸ್ವಾತಂತ್ರ್ಯವನ್ನು ಪಡೆದಷ್ಟೇ ಸುಲಭವಾಗಿ ಕಳೆದುಕೊಳ್ಳುತ್ತೇವೆ.

ಪ್ರಾರ್ಥನಾ ಪ್ರವಚನ – ೧, ಪುಟ ೨೭೭-೨೮೦

2 comments to “ಭಾರತದಲ್ಲಿ ಗೋಹತ್ಯೆ ನಿಷೇಧಿಸಬೇಕೆಂದವರಿಗೆ ಗಾಂಧಿ ಹೇಳಿದ್ದೇನು ?”
  1. ಪಾಕಿಸ್ತಾನದಲ್ಲಿನ ಹಿಂದೂಗಳ ಸ್ಥಿತಿ ಗೊತ್ತಿದೆ. ಪಟೇಲರು ಹೇಳಿದಂತೆ ಭೂಪ್ರದೇಶದೊಡನೆ ಜನಾಂಗವನ್ನೂ ಅಂದೇ ವಿಂಗಡಿಸಬೇಕಿತ್ತು. (ಇಲ್ಲಿನ ಮುಸಲ್ಮಾನರೊಟ್ಟಿಗೆ ಗಾಂಧೀ, ನೆಹರೂ ರವರನ್ನೂ ಉಚಿತ ಕೊಡುಗೆಯಾಗಿ ಪಾಕಿಸ್ತಾನಕ್ಕೆ ಕಳುಹಿಸಿದ್ದರೆ ಚೆನ್ನಾಗಿತ್ತು)

    • ಪಟೇಲರು ಜನಾಂಗವನ್ನು ವಿಂಗಡಿಸಬೇಕು ಎಂದು ಎಲ್ಲೂ ಹೇಳಿಲ್ಲ.. ನೀವು ಸುಳ್ಳನ್ನು ಸತ್ಯವಾಗಿಸದಿರಿ ಶಿವಕುಮಾರ್.. ಪ್ರೀತಿಯಿಂದಲಷ್ಟೇ ಜಗತ್ತನ್ನು ಗೆಲ್ಲಲು ಸಾಧ್ಯ. ಅದನ್ನು ಗಾಂದೀ ನೆಹರು ಅಂಬೇಡ್ಕರ್ ತೋರಿಸಿಕೊಟ್ಟಿದ್ದಾರೆ. ರಾಷ್ಟ್ರಪಿತರನ್ನ ಇನ್ನೊಂದು ದೇಶಕ್ಕೆ ಅಟ್ಟುವ ನಿಮ್ಮ ತನವು ಏಕಮುಖವಾದದ್ದು.. ಬಹುತ್ವವನ್ನು ಗೌರವಿಸಿದರೆ ಭಾರತವನ್ನು ಗೌರವಿಸಿದಂತೆ. ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ ನಾಯಕರನ್ನು ಅಟ್ಟುವವರನ್ನು ದೇಶಪ್ರೇಮಿಗಳು ಎನ್ನಲಾಗುತ್ತದೆ ಯೇ..

ಪ್ರತಿಕ್ರಿಯಿಸಿ