ನನ್ನ ದೇವರು – ಬಾನು ಮುಷ್ತಾಕ್

ಹುಟ್ಟು, ಮದುವೆ ಮತ್ತು ಸಾವು ಮನುಷ್ಯ ಜೀವನದ ಪ್ರಮುಖ ಘಟ್ಟಗಳು. ಒಂದು ಮಗುವು ಜನಿಸಿದ ಕೂಡಲೇ ಮೊಟ್ಟಮೊದಲಿಗೆ ಅದಕ್ಕೆ ದೇವರ ಪರಿಚಯವನ್ನು ಮಾಡಿಸಲಾಗುತ್ತದೆ.  ಮುಸ್ಲಿಮರಲ್ಲಿ ಈ ಪ್ರಕ್ರಿಯೆ ಯಾವುದೇ ಸದ್ದು ಗದ್ದಲವಿಲ್ಲದೆ ಅತ್ಯಂತ ಶೀಘ್ರವಾಗಿ ನಡೆಯುತ್ತದೆ.  ಮಗುವು ಹುಟ್ಟಿದ ಆರಂಭಿಕ ಭಾವೋದ್ರೇಕಗಳು ತಣಿದ ಕೂಡಲೇ ಅಂದರೆ ಸುಮಾರು ಒಂದು ಗಂಟೆಯ ಒಳಗಾಗಿ ಅದರ ನಾಮಕರಣವಾಗುತ್ತದೆ.  ಯಾರಾದರೊಬ್ಬ ಅತೀವ ಗೌರವನ್ವಿತ ಮತ್ತು ಸಭ್ಯ ಎಂದು ಭಾವಿಸಲಾದ ಪುರುಷ ಸಂಬಂಧಿಯನ್ನು ಆಯ್ಕೆ ಮಾಡಿ  ಅಜಾನ್ ಹೇಳುವಂತೆ ಆತನನ್ನು ಕೋರಲಾಗುತ್ತದೆ.  ಹೆರಿಗೆಗೆಂದು ಹೋಗುವ ಪ್ರತಿ ಮುಸ್ಲಿಂ ಮಹಿಳೆಯು ತನ್ನೊಡನೆ ತೆಗೆದುಕೊಂಡು ಹೋಗುವ ತನ್ನ ಮತ್ತು ಮಗುವಿನ ಬಟ್ಟೆ ಬರೆ, ನ್ಯಾಪಿ, ಸೋಪು, ಪೌಡರಿನೊಂದಿಗೆ ಅವಶ್ಯಕವಾಗಿ ಮರೆಯದೆ ತೆಗೆದುಕೊಂಡು ಹೋಗುವ ವಸ್ತುವೆಂದರೆ ಜೇನುತುಪ್ಪ ಮತ್ತು ಒಣ ಖರ್ಜೂರ.  ನಾಮಕರಣ ಮಾಡುವ ವ್ಯಕ್ತಿಯು ಮಗುವಿನ ಬಲಗಿವಿಯಲ್ಲಿ ಬಾಗಿ ಬಹು ಮೃದುವಾಗಿ ಅಜಾನ್ ಹೇಳುತ್ತಾನೆ.  ತದನಂತರ, ಎಡಗಿವಿಯಲ್ಲಿ ಅಜಾನ್ ಹೇಳುತ್ತಾನೆ, ಮತ್ತು ತನ್ನ ತೋರುಬೆರಳಿನಲ್ಲಿ ಒಂದಿಷ್ಟು ಜೇನುತುಪ್ಪವನ್ನು ಅದ್ದಿ ಆ ಮಗುವಿನ ನಾಲಿಗೆಗೆ ಇಟ್ಟು ಆ ಮಗುವಿನ ಹೆಸರನ್ನು ಹಿಡಿದು ಕರೆಯುತ್ತಾನೆ.  ಅಥವಾ ಇನ್ನೂ ಕೆಲವರು ಖರ್ಜೂರದಲ್ಲಿ ಅದ್ದಿ ಜೇನುತುಪ್ಪವನ್ನು ಅದರ ಬಾಯಿಗೆ ಇಡುತ್ತಾನೆ.  ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಈ ಕ್ರಮವು ವಿಶ್ವದಾದ್ಯಂತ ಮುಸ್ಲಿಂ ಸಮುದಾಯದವರಲ್ಲಿ ಜಾರಿಯಲ್ಲಿದೆ.

ನಾನು ಹುಟ್ಟಿದ ಕೂಡಲೇ ನನ್ನನ್ನು ಕೂಡ ಹೀಗೆಯೇ ನಾಮಕರಣ ಮಾಡಿ ದೇವರ  ‘ಅಲ್ಲಾಹು ಅಕ್ಬರ್’ ಎಂಬ ನಾಮದ ಪರಿಚಯದ ನಂತರ ನನಗೆ ನನ್ನ ತಾಯಿಯ ಮೊಲೆಹಾಲನ್ನು ಉಣಿಸಲು ಅವಕಾಶ ಮಾಡಿಕೊಡಲಾಯಿತು.  ಮತ್ತು ಹಾಲಿನ ಪ್ರತಿಯೊಂದು ಹನಿಯೊಂದಿಗೆ ಮತ್ತು ಉಣ್ಣುವ ಪ್ರತಿ ತುತ್ತಿನೊಂದಿಗೆ ಹಾಗೂ ಉಚ್ಛ್ವಾಸ ನಿಶ್ವಾಸದೊಂದಿಗೆ ಅಲ್ಲಾಹನ ಹೆಸರಿನ ಮಹಿಮೆಯನ್ನು ನನಗೆ ನನ್ನ ಹಿರಿಯರು ಸಾರಿದರು.  ಬೆಳಿಗ್ಗೆ ಎದ್ದ ಕೂಡಲೇ ಈ ದುವಾ (ಪ್ರಾರ್ಥನೆ) ನೀರು ಕುಡಿಯಬೇಕಾದಲ್ಲಿ ,ಮೊದಲ ತುತ್ತನ್ನು ಬಾಯಿಗಿಡಬೇಕಾದಲ್ಲಿ ,ಯಾರದರೂ ಶುಭವಾರ್ತೆಯನ್ನು ಅರುಹಿದಾಗ ಅಥವಾ ದುಃಖದ ಸುದ್ದಿಯನ್ನು ಹೇಳಿದಾಗ ,ಯಾರಾದರೂ ಉಪಕಾರ ಮಾಡಿದಾಗ ಅಥವಾ ಸೀನಿದಾಗ ,ಸ್ನಾನ ಮಾಡುವಾಗ ಶೌಚಾಲಯಕ್ಕೆ ಹೋದಾಗ ಕನ್ನಡಿ ನೋಡಿದಾಗ ಮತ್ತು ಯಾರದಾದರೂ ಮರಣದ ಸುದ್ದಿಯನ್ನು ಕೇಳಿದಾಗ ಯಾವ ಯಾವ ಪ್ರತ್ಯೇಕ ದುವಾ ಮಾಡಬೇಕೆಂಬುದು ನನಗೆ ವ್ಯವಸ್ಥಿತವಾಗಿ ಶಿಕ್ಷಣ ನೀಡಲಾಯಿತು.  ನನ್ನ ಅಜ್ಜ ಅಜ್ಜಿ ಸಮೇತ ಇಡೀ ಕುಟುಂಬದವರೇ ನನ್ನ ಈ ‘ಧಾರ್ಮೀಕರಣದ’ ಕ್ರಿಯೆಯಲ್ಲಿ ಅತ್ಯಂತ ಉತ್ಸಾಹದಿಂದ ಭಾಗಿಯಾಗಿದ್ದರು.  ನನ್ನ ಅಜ್ಜ ಶಾ ಅಲಿ ಸಾಹೇಬರು ಖಾಜಿಯಾಗಿದ್ದು ಸ್ವತಃ ನನ್ನ ಕುರಾನ್ ಶಿಕ್ಷಣದ ಮೇಲುಸ್ತುವಾರಿಯನ್ನು ಹೊಂದಿದ್ದರು.  ‘ಹೆಣ್ಣು ಮಗು ಅಲ್ಲಾವ ನಾಳೆ ಯಾರ ಮನೆ ಸೇರುತ್ತಾಳೋ….. ಧಾರ್ಮಿಕ ಶಿಕ್ಷಣದಲ್ಲಿ ಪರಿಣಿತಿ ಹೊಂದಿರಬೇಕು’ ಎಂಬುದು ಆಗ ಪ್ರಚಲಿತವಾಗಿದ್ದ ವಿಚಾರವಾಗಿತ್ತು.  ನನ್ನ ಅಜ್ಜ ನನಗೆ ಕುರಾನ್ ಓದಿಸುತ್ತ ಹಾಗೇಯೇ ಹಾಲ್‍ನಲ್ಲಿ ಓಡಾಡುತ್ತಿದ್ದರು.  ನನ್ನ ಕಣ್ಣು ಕಿಟಕಿಯಿಂದಾಚೆ ಆಗಾಗ್ಯೆ ಹಾಯಿಸಿದಾಗ ಒಮ್ಮೆ ತಲೆಎತ್ತಿ ತಮ್ಮ ಇರುವನ್ನು ಪ್ರಕಟಿಸುತ್ತ ಇನ್ನೊಮ್ಮೆ ತಲೆಮರೆಸಿಕೊಳ್ಳುತ್ತಿದ್ದ ನನ್ನ ಸ್ನೇಹಿತೆಯರತ್ತ ಇರುತ್ತಿತ್ತು.  ಹೀಗಾಗಿ ನನ್ನ ಗಮನವೆಲ್ಲಾ ಆ ಕಡೆ ಇರುತ್ತಿದ್ದು, ನಾನು ಮನಸ್ಸಿನಲ್ಲಿಯೇ ‘ಅಲ್ಲಾ ನನ್ನನ್ನು ಮಾಫ್ ಮಾಡು’ ಎಂದು ಕೋರುತ್ತ ಆತನ ಮಾಫಿಯಿಂದ ಆತನನ್ನು  ಕೂಡ ನನ್ನ ಕೃತ್ಯಗಳಲ್ಲಿ ಭಾಗಿದಾರನನ್ನಾಗಿ ಮಾಡಿಕೊಂಡು ನಾನು ಓದುತ್ತಿದ್ದ ಕುರಾನಿನ ನಾಲ್ಕೈದು ಹಾಳೆಗಳನ್ನು ಒಂದೇ ಏಟಿಗೆ ಪಲಟಾಯಿಸಿ ನನ್ನ ಅಂದಿನ ಓದು ಮುಗಿಯಿತು ಎಂದು ಕೊನೆಯ ಪುಟಕ್ಕೆ ಜಾರುತ್ತಿದ್ದೆ.  ಒಂದೊಂದು ಸಾರಿ ನನ್ನ ಅಜ್ಜನಿಗೆ ಸಂಶಯ ಬಂದು ‘ಇಷ್ಟು ಬೇಗ ಮುಗಿಯಿತೇ?’ ಎಂದು ಕೇಳುತ್ತಿದ್ದರು.  ಆದರೆ ಉತ್ತರ ಹೇಳಲು ನಾನು ಅಲ್ಲಿರುತ್ತಿರಲಿಲ್ಲ.  ಕುರಾನನ್ನು ಎತ್ತಿ ಇಡುವ ಕೆಲಸವನ್ನು ಕೂಡ ಅವರಿಗೆ ಬಿಟ್ಟು ನಾನು ಒಂದೇ ನೆಗೆತಕ್ಕೆ  ಕಾಂಪೌಂಡಿನ ಹೊರಗೆ ಇರುತ್ತಿದ್ದೆ.  ಇನ್ನೂ ನಮಾಜ್ ಮತ್ತು ಉಪವಾಸ ಹಾಗೂ ಝಕಾತ್ (ದಾನ) ಮೊದಲಾದವನ್ನು ಕಡ್ಡಾಯವಾಗಿ ಪಾಲಿಸಲೇಬೇಕಿತ್ತು.  ಒಮ್ಮೊಮ್ಮೆ ನಮಾಜ್‍ಗೆ ಚಕ್ಕರ್ ಹೊಡೆದರೂ ಇಡೀ ತಿಂಗಳ ರಂಜಾನಿನ ಉಪವಾಸವಂತೂ ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದೆ.  ನನ್ನ  ತರಬೇತಿಯತ್ತ ಕಣ್ಣು ಹಾಯಿಸಿದಾಗ ಕಂಡುಬರುವ ಒಂದೇ ಉದ್ದೇಶವೆಂದರೆ, ನನ್ನಲ್ಲಿ ಬಲವಾಗಿ ಏಕ ದೇವನ ವಿಶ್ವಾಸವನ್ನು ಬಲಿಷ್ಠವಾಗಿ ಪ್ರತಿಷ್ಠಾಪಿಸುವುದು.

                ಈ ಎಲ್ಲಾ ಕಠಿಣವಾದ ಮತ್ತು ವ್ಯವಸ್ಥಿವಾದ ಧಾರ್ಮಿಕ ಶಿಕ್ಷಣದ ನಡುವೆಯೂ ನನ್ನ ತಂದೆಯಿಂದ ನನಗೆ ಬಂದ ಬಳುವಳಿ ಎಂದರೆ ದೇವರೊಬ್ಬ ನಾಮ ಹಲವು ಎಂಬುದು. ನೀರು ಮತ್ತು ಗಾಳಿಗೆ ವಿವಿಧ ಹೆಸರುಗಳಿರುವಂತೆ ಪ್ರಪಂಚದ ಎಲ್ಲಾ ಭಾಗಗಳಲ್ಲಿಯೂ ಪಶು ಪಕ್ಷಿಗಳಲ್ಲಿಯೂ ತಾಯಿಯ ಮಮತೆ ಎಂಬ ಸ್ಥಾಯಿ ಭಾವದಂತೆ ಆಳು-ನಗು, ಸಂತೋಷ-ದುಃಖವೆಂಬ ವಿಶ್ವವ್ಯಾಪಿ ಸಹಜತೆಯಂತೆ ದೇವನೊಬ್ಬನೇ. ಅವನನ್ನು ಪರಿಭಾವಿಸುವ ,ಆರಾಧಿಸುವ, ನೋಡುವ, ಅರಿಯುವ ಬಾಂಧವ್ಯ ಹೊಂದುವ ಕ್ರಮ ಬೇರೆಯದೆಂದು.  ಹಾಸನಕ್ಕೆ ಬಂದಾಗ ಅಪ್ಪಟ ಮುಸ್ಲಿಂ ಮೊಹಲ್ಲಾದಲ್ಲಿಯ ನನ್ನ ಅನುಭವಗಳು ಹಾಗೂ ನನ್ನ ತಂದೆಯ ಉದ್ಯೋಗ ಸ್ಥಳದಲ್ಲಿ ನಾನು ಅನುಭವಿಸುತ್ತಿದ್ದ ಕಾಸ್ಮೊಪಾಲಿಟನ್ ಸಂಸ್ಕøತಿ ನನ್ನಲ್ಲಿ ವಿಭಿನ್ನ ಉದಾರವಾದಿ ನಿಲುವುಗಳನ್ನು ಸೃಷ್ಟಿಸಿತು.  ಇದಕ್ಕೆ ಪೂರಕವಾಗಿ ಕುರಾನ್‍ನ ಶ್ಲೋಕವೊಂದು ನನಗೆ ಅಪ್ಯಾಯಮಾನವಾಯಿತು.  ‘ನೀವು ಆರಾಧಿಸುವವುಗಳನ್ನು ನಾನು ಆರಾಧಿಸುವುದಿಲ್ಲ, ಮತ್ತು ನಾನು ಆರಾಧಿಸುವವನನ್ನು ನೀವು ಆರಾಧಿಸುವವರಲ್ಲ,  ನಿಮಗೆ ನಿಮ್ಮ ಧರ್ಮ ಮತ್ತು ನನಗೆ ನನ್ನ ಧರ್ಮ.’ ಹೀಗೆ ವೈಶಾಲ್ಯತೆಯನ್ನು ತೋರಿದ ಕುರಾನ್‍ನ ಮಾದರಿಯನ್ನು ಅನುಸರಿಸಿ ನಾನು ನನ್ನ ಮತ್ತು ನನ್ನ ದೇವರ ಬಾಂಧವ್ಯದ ಜೊತೆಯಲ್ಲಿ, ಇತರೆ ಧರ್ಮಗಳನ್ನು, ಸಂಸ್ಕøತಿಗಳನ್ನು ಅಚಾರ-ವಿಚಾರ ಮತ್ತು ಅವರ ಭಾವನೆಗಳನ್ನು ಗೌರವಿಸಲು ಕಲಿತೆ.  ಈ ರೀತಿಯ ಬಹುತ್ವದ ಮನೋಧರ್ಮ ನನ್ನದಾಯಿತು.

                ನನ್ನ ಮತ್ತು ನನ್ನ ದೇವರ ಬಾಂಧವ್ಯ ತೀರ ಆಪ್ತವಾದುದು, ಖಾಸಗಿಯಾದುದು ಹಾಗೂ ಅತ್ಯಂತ ಸೂಕ್ಷ್ಮ ಮತ್ತು ಸಂವೇದನಾಶೀಲವಾದುದು.  ಹೇಗೆ ನಾನು ನನ್ನ ಅತ್ಯಂತ ಖಾಸಗಿ ವಿಷಯಗಳನ್ನು ಬಹಿರಂಗಗೊಳಿಸುವುದಿಲ್ಲವೋ, ಹಾಗೇಯೇ ನನ್ನ ಮತ್ತು ದೇವರ ನಡುವಿನ ಸಂಬಂಧವನ್ನು ಬಹಿರಂಗಗೊಳಿಸಲು ಅಪಾರ ಸಂಕೋಚ ಮತ್ತು ಹಿಂಜರಿಕೆ.  ಅಲ್ಲಾ ಎಂಬ ದೇವರ ಪರಿಚಯ ಶ್ರವ್ಯದಿಂದ ಮಾತ್ರ ಸಾಧ್ಯ ; ದೃಶ್ಯದಿಂದ ಸಾಧ್ಯವಿಲ್ಲ.  ಆತ ಕರುಣಾಮಯಿ, ದಯಾಮಯಿ, ಪವಿತ್ರ, ಬಲಾಢ್ಯ, ನ್ಯಾಯ, ಸತ್ಯ ಹೀಗೆ 99ಹೆಸರುಗಳಿಂದ ಅವನ ಗುಣವೈಶಿಷ್ಟ್ಯದ ಮೇರೆಗೆ ಅವನ ಆರಾಧನೆಯನ್ನು ಮಾಡಬೇಕು.  ನಿರಾಕಾರ ಅಲ್ಲಾಹನ ಸಮ್ಮುಖದಲ್ಲಿ ನಮಾಜ್ ಮಾಡುವುದು ನನಗೆ ಅತ್ಯಂತ ಕಷ್ಟಕರವಾದ ವಿಷಯವಾಗಿತ್ತು.  ಯಾಂತ್ರಿಕವಾಗಿ ನಮಾಜ್ ಮಾಡಿದರೂ ಮನಸ್ಸು ಚಿಟ್ಟೆಯಂತೆ ಹಾರಾಡುತ್ತಿತ್ತು.  ನಾನು ಬಾಯಲ್ಲಿ ಪಠಿಸುತ್ತಿದ್ದ ವಾಕ್ಯಗಳು ನನ್ನ ಕಣ್ಣೆದುರಿಗೆ ಯಾವ ಸಮರ್ಪಕ ದೃಶ್ಯವನ್ನು ಕೂಡ ಸೃಷ್ಟಿಸುತ್ತಿರಲಿಲ್ಲ.  ಹೀಗಾಗಿ ಬಹಳ ವರ್ಷಗಳ ವರೆಗೆ ನನಗೆ ನಮಾಜ್‍ನಲ್ಲಿ ಯಾವುದೇ ಭಾವನಾತ್ಮಕ ಸಂಬಂಧ ಉಂಟಾಗಲಿಲ್ಲ.  ಆದರೆ ಯಾಂತ್ರಿಕವಾಗಿ ನಮಾಜ್‍ನ ಕ್ರಿಯೆಯಲ್ಲಿ ಭಾಗಿಯಾಗುತ್ತಿದ್ದೆ.

                ನಾನು ಪಿಯುಸಿ ಓದುತ್ತಿದ್ದಾಗ ನನ್ನ ಸ್ನೇಹಿತೆಯರಿಗೆ ತುಂಬ ಚಂದದ ವಾಚ್‍ಗಳಿದ್ದವು.  ನನ್ನ ತಂದೆಯು ಸಿನಿಯರ್ ಹೆಲ್ತ್ ಇನ್ಸ್‍ಪೆಕ್ಟರ್ ಆಗಿದ್ದು ಅವರ ವೇತನದಲ್ಲಿ ನಮ್ಮ ಕುಟುಂಬ ಹಾಯಾಗಿ ಇರಬಹುದಿತ್ತು.  ಆದರೆ` ಕುಟುಂಬ’ ಎಂಬುದರ ನನ್ನ ತಂದೆಯ ವ್ಯಾಖ್ಯಾನ ವಿಶಾಲವಾಗಿತ್ತು.  ವಿಧವೆಯಾಗಿದ್ದ ನನ್ನ ಸೋದರತ್ತೆ ಮತ್ತು ಆಕೆಯ ಐದು ಮಕ್ಕಳು, ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ನನ್ನ ಇನ್ನೊಬ್ಬ ಸೋದರತ್ತೆಯ ಪತಿ ಮತ್ತು ಅವರ ಕುಟುಂಬ ನಮ್ಮ ಮನೆಯಲ್ಲೇ ಇದ್ದು ಸದರಿಯವರ ಪೋಷಣೆ ವೈದ್ಯಕೀಯ ವೆಚ್ಚ ಮೊದಲಾದವು ಹಾಗೂ ಕಾಲೇಜು ವ್ಯಾಸಂಗ ಮಾಡುತ್ತಿದ್ದ ನನ್ನ ಚಿಕ್ಕಪ್ಪನ ವಿಧ್ಯಾಭ್ಯಾಸ ಮತ್ತು ಪೋಷಣೆಯ ವೆಚ್ಚ ಇನ್ನೂ ಹತ್ತು ಹಲವಾರು ಜವಾಬ್ದಾರಿಗಳನ್ನು ಹೊಂದಿದ್ದ ನನ್ನ ತಂದೆಗೆ ಯಾವಾಗಲೂ ವಿಪರೀತ ಸಾಲಗಳಿದ್ದವು.  ಹೀಗಾಗಿ ನನ್ನ ವಾಚ್‍ನ ಹೊರೆಯನ್ನು ಅವರ ಮೇಲೆ ಹೊರಿಸಲು ನನಗೆ ಮನಸಾಗಲಿಲ್ಲ.  ಅದನ್ನು ನಾನು ಸುಲಭವಾಗಿ ಅಲ್ಲಾಹನ ಮೇಲೆ ಹೊರಿಸಬಹುದು.  ಏಕೆಂದರೆ ಅವನು ಭೂಮಿ ಆಕಾಶದ ಒಡೆಯ.  ಹೀಗಾಗಿ ನಾನು ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದೆ.  ರಂಜಾನ್ ತಿಂಗಳ 26ನೇ ಉಪವಾಸದ ರಾತ್ರಿಯು ಜಾಗರಣೆ ಮಾಡಬೇಕಿದ್ದು ಇಡೀ ರಾತ್ರಿಯನ್ನು ಪ್ರಾರ್ಥನೆಯಲ್ಲಿ ಕಳೆಯಬೇಕಿತ್ತು.  ನಾನು ಇಡೀ ರಾತ್ರೆ ನಮಾಜ್ ಮಾಡಿದ್ದೇ ಮಾಡಿದ್ದು.  ಅದೂ ಏಕಸವಾಲಿನೊಂದಿಗೆ.  ‘ಓ ಅಲ್ಲಾಹನೇ ನನಗೆ ಒಂದು ಒಳ್ಳೆ ವಾಚನ್ನು ಕೊಡು.’ ರಾತ್ರೆ ಕಳೆಯಿತು.  ಮೂರು ದಿನಗಳ ನಂತರ ರಂಜಾನ್ ಹಬ್ಬ.  ಹಬ್ಬದ ದಿನ ನನ್ನ ತಂದೆ ನನ್ನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಪುಟ್ಟದೊಂದು ವಾಚನ್ನು ಕೊಡಿಸಿಬಿಟ್ಟರು.  ನಾನು ಅವರನ್ನು ಕೇಳಿಯೇ ಇರಲಿಲ್ಲ.  ಆ ದಿನ ರಾತ್ರೆಯ ನಮಾಜಿನಲ್ಲಿ ನಾನು ಹೃದಯ ತುಂಬಿ ಅಲ್ಲಾಹನಿಗೆ ವಂದನೆ ವಂದನೆ ಹೇಳಿ ಕೃತಜ್ಞತೆಯನ್ನು ಅರ್ಪಿಸಿದೆ.  ಅಂದಿನಿಂದ ನನ್ನ ಪ್ರಾರ್ಥನೆಗಳಿಗೆ ಉತ್ತರ ಸಿಗಲಾರಂಭಿಸಿತು.  ವಾಚಿನ ವಿಷಯ ಅಷ್ಟಕ್ಕೆ ಮುಗಿಯಲಿಲ್ಲ.  ವಾಚಿನ ಅಂಗಡಿಯ  ಮಾಲೀಕ ಯುವಕನೊಂದಿಗೆ ನನ್ನ ಮದುವೆಯು ಆಯಿತು.  ಅವರ ಮೊದಲ ಉಡುಗೊರೆ ಅದ್ಭುತವಾದ ವಾಚ್.  ಇವತ್ತು ವಿಶ್ವದ ದುಬಾರಿ ಬ್ರಾಂಡ್‍ನ ಎಷ್ಟೊಂದು ವಾಚ್‍ಗಳು ನನ್ನ ಬಳಿ ಇವೆ ಎಂದರೆ ನನಗೆ ಆಶ್ಚರ್ಯವಾಗುತ್ತದೆ.  ಒಂದು ವಾಚನ್ನು ಕೂಡ ನಾನು ಕೊಂಡಿಲ್ಲ.  ಎಲ್ಲವು ಉಡುಗೊರೆಗಳೇ.  ನನ್ನ ಅಂತರಂಗದಲ್ಲಿ  ನಾನು ಹೇಳುತ್ತೇನೆ. . . ವಂದನೆ ನನ್ನ ಅಲ್ಲಾಹನೇ.  ಅಂದಿನಿಂದ ಬಿಗಿಯಾದ ನಂಟು ಆರಂಭವಾಯಿತು.

ಒಂದು ವಾರದ ಹಿಂದೆ ಮಧ್ಯಾಹ್ನ ಹಿತ್ತಿಲಲ್ಲಿ ಕುಳಿತ್ತಿದ್ದೆ.  ಸಾಮಾನ್ಯವಾಗಿ ಅದು ನಾನು ಪುಟ್ಟ ನಿದ್ದೆಗೆ ಜಾರುವ ಹೊತ್ತು.  ಪಕ್ಕದ ಓಣಿಯಿಂದ ಒಂದು ಉದ್ದನೆಯ ಗಳು ನಮ್ಮ ಮನೆಯ ಕಾಂಪೌಂಡಿನೊಳಗೆ ತೂರಿಬಂದಿತು.  ಮತ್ತು ಎತ್ತರದ ನುಗ್ಗೆಮರದಿಂದ ಲಟಕ್ಕೆಂದು ಒಂದು ಕಾಯಿಯನ್ನು ಮುರಿಯಿತು.  ಅಲ್ಲಿಯವರೆಗೂ ಮೂಕ ಪ್ರೇಕ್ಷಕಿಯಂತೆ ಇದೇನಾಗುತ್ತಿದೆ ಎಂದು ನೋಡುತ್ತಿದ್ದ ನನಗೆ ಒಮ್ಮೆಲೇ ಸಿಟ್ಟೇರಿತು.  ದೊಡ್ಡ ಗಂಟಲಿನಲ್ಲಿ ಬೈದೆ.  ಗಳು ಸುಮ್ಮನೆ ಹಾಗೇಯೇ ಹಿಂದೆ ಸರಿಯಿತು.  ಆಗ ನಾನು ನುಗ್ಗೆ ಮರವನ್ನು ಅದರ ಎತ್ತರಕ್ಕೂ ಕಣ್ಣು ಹಾಯಿಸಿದೆ.  ಮರವು ಕಾಯಿಯಿಂದ ಜಗ್ಗುತ್ತಿತ್ತು.  ನಾನು ಕೂಡಲೇ ಟೆರೇಸನ್ನು ಏರಿ ಓಣಿಯತ್ತ ಬಂದರೆ ಗಳು ಮತ್ತು ಅದರ ಒಡೆಯ ಗೋಪಾಲಣ್ಣ ಮೂಲೆಯೊಂದರಲ್ಲಿ ಬಚ್ಚಿಟ್ಟುಕೊಳ್ಳುವ ವಿಫಲ ಪ್ರಯತ್ನದಲ್ಲಿದ್ದು, ಭೂಮಿಯೇ ಬಾಯಿತೆರೆ ಪೋಜಿನಲ್ಲಿದ್ದರು ಉದ್ದಕ್ಕೂ ಅಲ್ಲಿದ್ದ ಏಳೆಂಟು ಪುಟ್ಟ ಮನೆಗಳಲ್ಲಿ ಆ ಗಳ ಬಚ್ಚಿಟ್ಟುಕೊಳ್ಳಲು ಜಾಗವೇ ಇರಲಿಲ್ಲ.  ಗೋಪಾಲಣ್ಣ ಲಘುವಾಗಿ ಕೆಮ್ಮಿ ತನ್ನ ನಾಚಿಕೆ ಮತ್ತು ಅವಮಾನಕ್ಕೆ ರಹದಾರಿಯನ್ನು ಕಲ್ಪಿಸಲು ಪ್ರಯತ್ನಿಸಿದ.  ಆದರೆ ನಾನು ಅವನಿಗಿಂತ ಹೆಚ್ಚು  ನಾಚಿಕೆ ಮತ್ತು ಅವಮಾನದಿಂದ ಲಜ್ಜಿತಳಾಗಿದ್ದೆ. ಆಗ ಪ್ರವಾದಿಯವರ ವಚನ ಕಣ್ಣೆದುರಿಗೆ ಮೂಡಿತು. ` ನಿಮ್ಮ ನೆರೆಹೊರೆಯ 40 ಮನೆಗಳು ನಿಮ್ಮ ಜವಾಬ್ದಾರಿ.  ಆ ಮನೆಯಲ್ಲಿ ಯಾರಾದರೂ ಉಪವಾಸ ಮಲಗಿದರೆ ನೀವು ಅಲ್ಲಾಹನ ಸಮ್ಮುಖದಲ್ಲಿ ಉತ್ತರಿಸಬೇಕಾಗುತ್ತದೆ ‘.  ಆ ವಚನದ ಸಾಮಾಜಿಕತೆಯು ನನ್ನನ್ನು ಆಕರ್ಷಿಸಿತು. ನಾನು ಮೃದುವಾಗಿ ‘ಗೋಪಾಲಣ್ಣ’ ಎಂದೆ.  ‘ಏನಕ್ಕ?’ ಎಂದ. `ನಿನ್ನ ಗಳುವನ್ನ ಕೈಗೆತ್ತಿಕೋ.  ಈ ಕಾಯಿಗಳನ್ನು ಕೊಯ್ಲು ಮಾಡು.’ ಎಂದೆ. ಹೊಸ ಹುಮ್ಮಸ್ಸಿನೊಂದಿಗೆ ಅವನ ಗಳು ಲಾಸ್ಯವಾಡಿತು.  ನೋಡಿದರೆ, ಕೆಜಿಗಟ್ಟಳೆ ಎರಡು ಮಾರು ಉದ್ದದ ನುಗ್ಗೆಕಾಯಿಗಳು.  ‘ನಿನಗೆ ಎಷ್ಟು ಬೇಕು ತಗೋ ಗೋಪಾಲಣ್ಣ’ ಎಂದೆ.  ಅವನಿಗೆ ತಬ್ಬಿಬ್ಬಾಗಿ ಹೋಯಿತು.`ನನಗ್ಯಾಕೆ ಬೇಕು ಅಕ್ಕ?’ ಎಂದು ಬಾಯಲ್ಲಿ ಅಂದರೂ ಅವನ ಕೈ ಛಕಛಕನೆ ಕೆಲಸ ಮಾಡಿತು.  ಅವನ ಕೈಯಲ್ಲಿಯೇ ಉಳಿದ ಗಲ್ಲಿಯೆಲ್ಲಾ ಮನೆಗಳಿಗೂ ಮತ್ತು  ಮೊಹಲ್ಲಾದ ಎಲ್ಲಾ ಮನೆಗಳಿಗೂ ಕಳಿಸಿದೆ.  ಒಂದಿಬ್ಬರು ಫೋನ್ ಕೂಡ ಮಾಡಿದರು.  ‘ಎಂತ ರುಚಿಯಾದ ಗಾರ್ಡನ್ ಫ್ರೆಶ್ ನುಗ್ಗೆಕಾಯಿ.’ ಎಂದು ಹೇಳಿ ಒಂದಿಷ್ಟು ತಡೆದು ‘ಒಂದು ಹಿಡಿ ನುಗ್ಗೆಸೊಪ್ಪು ಕಳಿಸ್ತೀರ?’ಎಂಬ ಬೇಡಿಕೆಯನ್ನು  ಬೇರೆ ಇಟ್ಟರು.  ಆಗ ನನ್ನ ಮನಸ್ಸಿಗೆ ಹೊಳೆಯಿತು ಓಹೋ ನುಗ್ಗೆ ಸೊಪ್ಪು ಈಗ ಸೂಪರ್ ಫುಡ್ ಸಾಲಿಗೆ ಸೇರಿದೆ.

                ಆಧ್ಯಾತ್ಮೀಕತೆ, ಅಂತರಂಗದ ಸ್ಪಷ್ಟತೆ ಮಾನಸಿಕ ತುಮುಲಗಳ ಸ್ಥೈರ್ಯ ಸಂಘರ್ಷದ ಕತ್ತಲಿನ ದೀವಟಿಗೆ, ಜನಪರ ಜೀವಪರ ಕಾಳಜಿಯ ಇಂತಹ ಅದ್ಭುತ ದೇವನೊಂದಿಗೆ ನಮ್ಮ ಅಂತರಂಗದ ನಂಟು ಇರುವಾಗ ಬೆಳಗ್ಗೆದ್ದು ಪತ್ರಿಕೆಯನ್ನು ಎತ್ತಿಕೊಂಡಾಗ ಕಣ್ಣಂಚು ಒದ್ದೆಯಾಗುತ್ತದೆ.  ಅಪಾರ ಪ್ರೇಮಮಯಿ, ಅದ್ಭುತ ಕಲೆಗಾರ ಸೃಜನಶೀಲತೆಯ ಗಣಿ ದೇವರನ್ನು ಅವನ ಹೆಸರಿನಲ್ಲಿಯೇ ಹೇಗೆ ರಕ್ತಪಾತಕ್ಕೆ ಕಗ್ಗೊಲೆಗಳಿಗೆ ಅಮಾಯಕರನ್ನು ತುಂಡರಿಸಲು ತಮ್ಮ ಉದ್ರೇಕದ ತೀಟೆಗಳಿಗೆ ರಾಜಕೀಯದ ಅಧಿಕಾರದ ಸಲುವಾಗಿ ಮತ್ತು ಜನಾಂಗೀಯ ಹತ್ಯೆಗಳಿಗೆ ಹಾಗೂ ಮನುಷ್ಯತ್ವದ ಮರಣಹೋಮಕ್ಕೆ ಹೇಗೆ ದುರ್ಬಳಕೆ ಮಾಡುತ್ತಿದ್ದಾರೆ.  ಅವರನ್ನು ತಡೆಯುವವರು ಯಾರು ಇಲ್ಲವೇ ಮೂರು ವರ್ಷ ವಯಸ್ಸಿನ ಐಲಾನ್ ಕುರ್ದಿಯೆಂಬ ಕುರ್ದಿಷ್ ಮೂಲದ ಸಿರಿಯನ್ ಕೂಸು ಸಮುದ್ರ ದಡದಲ್ಲಿ ಮುಳುಗಿ ಮಕಾಡೆ ಬಿದ್ದ ದೃಶ್ಯವನ್ನು ಕಂಡಾಗ ನನ್ನ ಹೃದಯವೇ ಚೂರಾಗುತ್ತದೆ.  ಮತ್ತು ನಾನು ಅಸಹಾಯಕತೆಯಿಂದ ಆಕ್ರೋಶದಿಂದ ವಿಚಿತ್ರ ಸಿಟ್ಟಿನಿಂದ ತಲೆ ಚೆಚ್ಚಿಕೊಂಡು ಚೀರಾಡುತ್ತ ಆಳುತ್ತೇನೆ, ಮತ್ತು ಕೇಳುತ್ತೇನೆ, ‘ದೇವರೇ ನೀನು ನಿಜವಾಗಿಯೂ ಇದ್ದೀಯಾ? ಇದ್ದರೆ ಏನು ಮಾಡುತ್ತಿರುವೆ?’ ಈ ನನ್ನ ಪ್ರಶ್ನೆಗೆ ಯಾವುದೇ ಉತ್ತರ ದೊರಕಿಲ್ಲ. ಹೀಗೆಯೇ ಪ್ರತಿನಿತ್ಯವೂ ಗಳಿಗೆ ಗಳಿಗೆಗೂ ಈ ದುಃಖಗಳು ನನ್ನ ಅಂತರಾತ್ಮದ ಮೇಲೆ ಅಪ್ಪಳಿಸುತ್ತಿವೆ.  ಮತ್ತು ನಾನು ಗೋಳಾಡುತ್ತಲೇ ಇದ್ದೇನೆ.  ಧೀರ್ಘ ನಿರುತ್ತರದ ಯಾತನಾಮಯಾವಾದ ಅಂಧಕಾರದ ಮಬ್ಬು ಕರಗುವಂತೆ ಬೇಡುತ್ತಲೇ ಇದ್ದೇನೆ ನನ್ನ ದೇವರು ಖಂಡಿತವಾಗಿಯೂ ಆಲಿಸುವನೆಂಬ ಆಶಾವಾದದೊಡನೆ.

3 comments to “ನನ್ನ ದೇವರು – ಬಾನು ಮುಷ್ತಾಕ್”
  1. ಮಾರ್ಮಿಕವಾಗಿದೆ ರಘುನಾಥ್ ಎಂ ಎಸ್ ಬೆಂಗಳೂರು

ಪ್ರತಿಕ್ರಿಯಿಸಿ