ನನ್ನ ದೇವರು – ಬಿ ಎಂ ರೋಹಿಣಿ : ನನ್ನ ಕೈ ಬಿಟ್ಟ ದೇವರು

ನಮ್ಮನ್ನು ನಾವು ಪ್ರೀತಿಸುವವರೆಗೆ, ನಮ್ಮ ಮೇಲೆ ನಮಗೆ ನಂಬಿಕೆ ಹುಟ್ಟುವವರೆಗೆ, ನನ್ನ ಭವಿಷ್ಯಕ್ಕೆ ನಾನೇ ಹೊಣೆ ಎಂಬ ಧೈರ್ಯ ಮೂಡುವವರೆಗೆ ಇನ್ನೊಂದು ಅವಲಂಬನೆ ಬೇಕಾಗುತ್ತದೆ. ನಾವು ಯಾರೂ ಅರ್ಜಿ ಹಾಕಿಕೊಂಡು ಈ ಭೂಮಿಯಲ್ಲಿ ಹುಟ್ಟಿಲ್ಲ. ಆದರೆ ಹುಟ್ಟುತ್ತಲೇ ನಮ್ಮನ್ನು ಸುತ್ತಿಕೊಳ್ಳುವ ಒಂದೊಂದೇ ಬಂಧನಗಳು, ನಮ್ಮ ಮೆದುಳು, ಕಣ್ಣು, ಕಿವಿಗಳ ನೈಜಶಕ್ತಿಯನ್ನೇ ಕುಂಠಿತಗೊಳಿಸಿಬಿಡುತ್ತವೆ. ಪರೆಗಳು ಬೆಳೆಯುತ್ತವೆ. ನಾನು ಅದಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ದೃಷ್ಟಿದೋಷಗಳನ್ನು ಪರಿಹರಿಸಿಕೊಂಡಿದ್ದೇನೆ. ದೇವರೇ ನನ್ನ ಕೈಬಿಟ್ಟನೋ ಅಥವಾ ನಾನೇ ಕೈಬಿಟ್ಟೆನೋ, ಸಮಾಜದಲ್ಲಿ ಮಾತ್ರ ನನಗೆ “ಪೆಟ್ಟ್ ಕಮ್ಮಿ” ಪಟ್ಟ ಕಟ್ಟಿದ್ದಾರೆ. ಅದರಲ್ಲೂ ಒಂದು ಸುಖವಿದೆ. ಒಕ್ಕಣ್ಣಿನವರು ಇರುವ ಮಧ್ಯೆ ಕುರುಡರಂತೆ ವರ್ತಿಸುವ ಸಂಕಷ್ಟವಿದೆಯಲ್ಲಾ ಅದು ಸವಾಲಿನ ಕೆಲಸ.

ಈ ಪ್ರಪಂಚದಲ್ಲಿ ಹುಟ್ಟಿದವರೆಲ್ಲರೂ ತಮ್ಮ ಜೀವನದಲ್ಲಿ ಒಂದಲ್ಲ ಒಂದು ದಿನ ದೇವರ ಬಗ್ಗೆ ಸಂದೇಹ ಪಟ್ಟೇ ಇರುತ್ತಾರೆಂದು ನನ್ನ ಭಾವನೆ. ಯಾಕೆಂದರೆ ಮಾನವ ಪಶುವಲ್ಲವಲ್ಲಾ? ನನ್ನ ಬದುಕಿನಲ್ಲಿ ಈ ಸಂದೇಹದ ಗ್ರಾಫ್ ಏರುತ್ತಾ ಇಳಿಯುತ್ತಾ ತಟ್ಟನೆ ನಿಂತುಬಿಟ್ಟ ಕತೆ ಸ್ವಾರಸ್ಯವಾಗಿದೆ.

ಕೃಷಿಕರಾದ ನನ್ನಪ್ಪನ ಮನೆಯಲ್ಲಿ ಯಾವ ದೈವ, ದೇವರು ಆಕ್ರಮಿಸಿರಲಿಲ್ಲ. ಅವುಗಳ ಕಾರುಬಾರುಗಳೆಲ್ಲಾ ತರವಾಡು ಮನೆಯಲ್ಲಿ ಮಾತ್ರ. ವರ್ಷಕ್ಕೊಮ್ಮೆ ಕುಟುಂಬದವರೆಲ್ಲಾ ಒಟ್ಟು ಸೇರಿ ಕೊಡುವ-ಕೊಳ್ಳುವ ವ್ಯವಹಾರ ಚುಕ್ತಾ ಮಾಡಿ ನಿಶ್ಚಿಂತರಾಗುತ್ತಿದ್ದರು. ನನ್ನ ಅಮ್ಮನ ತವರು ಮನೆಯಲ್ಲಿ ಗೋಡೆಯ ಮೇಲಿನ ಸಣ್ಣ ಹಲಗೆಯಲ್ಲಿ ಶ್ರೀ ನಾರಾಯಣ ಗುರುಗಳ ಚಿತ್ರ ಪ್ರತಿಷ್ಠೆಗೊಂಡು, ನಾವು ಮಕ್ಕಳೆಲ್ಲಾ ಮುಸ್ಸಂಜೆ ಹೊತ್ತಿಗೆ ದೀಪ ಹಚ್ಚಿ, ‘ನಾರಾಯಣ ಮೂರ್ತೇ, ಗುರುವಲ್ಲೋ ಪರದೈವಂ’ ಎಂದು ಹಾಡುತ್ತಿದ್ದೆವು. ಆ ಚಿತ್ರದ ಪಕ್ಕದಲ್ಲಿ ಇನ್ನೊಂದು ಸಣ್ಣ ಚಿತ್ರವಿತ್ತು. ಶಿವನದೋ, ವಿಷ್ಣುವಿನದ್ದೋ ಆಗಿರಬೇಕು. ಕೊನೆಯಲ್ಲಿ ನನಗೆ ವಿದ್ಯೆ ಕೊಡು, ಬುದ್ಢಿಕೊಡು ಎಂಬ ಉದ್ದದ ಪಟ್ಟಿಯುಳ್ಳ ಬೇಡಿಕೆಯನ್ನು ಸಲ್ಲಿಸಿ, ಎಲ್ಲಾ ಹಿರಿಯರಿಗೂ ವಂದಿಸಿದ ಮೇಲೆಯೇ ಅಡಿಗೆಕೋಣೆಯಲ್ಲಿ ಬಟ್ಟಲ ಸದ್ದು ಕೇಳುತ್ತಿತ್ತು. ದೇವರೆಂಬವನೊಬ್ಬ ಇದ್ದರೆ ನಮಗೆ ಕೇಳಿದ್ದನ್ನೆಲ್ಲಾ ಕೊಡುತ್ತಾನೆ. ಅದು ಅವನ ಕರ್ತವ್ಯ. ಕೇಳುವುದು ನಮ್ಮ ಹಕ್ಕು ಎಂಬ ಭಾವನೆಯೇ ಬಾಲ್ಯದಲ್ಲಿತ್ತು. ನಮಗೆ ನನ್ನ ಅಪ್ಪ, ಅಮ್ಮ, ಅಜ್ಜಿಯರು ಹೇಳಿದ ಕಥೆಗಳಲ್ಲಿದ್ದ ಆಸೆಬುರುಕ್ ದೇವರುಗಳು, ಹಿಂಸಾವಿನೋದಿಗಳೇ ಹೆಚ್ಚಿರುತ್ತಿದ್ದರು. ಪರಿಪರಿಯಲ್ಲಿ ಹೊಗಳಿ ಅವನನ್ನು ಮೆಚ್ಚಿಸುವುದು, ಇನ್ನೂ ಮುಂದೆ ಹೋಗಿ ಪ್ರತಿಫಲಾಪೇಕ್ಷೆಯಿಂದ ಅವನಿಗೆ ಲಂಚದ ಆಸೆ ಹುಟ್ಟಿಸುವುದು ಇವೆಲ್ಲದರ ಬಗ್ಗೆ ಯಾವುದೇ ಅನುಮಾನವಿಲ್ಲದ ನಿಷ್ಕಳಂಕ ಭಕ್ತಿ ನನ್ನಲ್ಲಿತ್ತು. ಭಕ್ತರನ್ನು ಪರೀಕ್ಷಿಸುವುದಕ್ಕೆಂದೇ ದೇವರು ಕಷ್ಟ ಕೊಡುತ್ತಾನೆಂದೂ, ಕೊನೆಗೆ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷನಾಗುತ್ತಾನೆಂದು ದೃಢವಾಗಿ ನಂಬಿ ಅದಕ್ಕಾಗಿ ಕನಸು ಕಾಣುತ್ತಿದ್ದೆ. ಹತ್ತೊಂಬತ್ತನೆಯ ಶತಮಾನದ ಅಂತ್ಯಕ್ಕಾಗಲೇ ಶೂದ್ರರ ಮನೆಗಳಲ್ಲಿ ರಾಜಾರವಿವರ್ಮನ ಕಲ್ಪನೆಯಲ್ಲಿ ರೂಪುಗೊಂಡ ದೇವ-ದೇವಿಯರು ವಿರಾಜಮಾನರಾಗಿದ್ದರು. ತಮಾಷೆಯ ಸಂಗತಿ ಗೊತ್ತೇ? ಆ ದೇವ ದೇವಿಯರ ಚಿತ್ರಗಳಿಗೆ ಫ್ರೇಮ್ ಹಾಕಿ ದೇವರೆಂದು ಮನೆಯಲ್ಲಿ ಆರಾಧನೆ ಮಾಡಿದರೆ ದೇವರ ಶಾಪ ತಟ್ಟುತ್ತದೆಂದು ಮೇಲ್ವರ್ಗದವರು ಹೆದರಿಸಿದ್ದರಂತೆ. ಶುದ್ಧಾಚಾರವಿಲ್ಲದಿದ್ದರೆ ದೇವರ ಕೃಪೆ ದಕ್ಕುವುದಿಲ್ಲವಾದುದರಿಂದ ಭಜನಾ ಮಂದಿರಗಳು ಸ್ಥಾಪನೆಗೊಂಡವು. ಅನಕ್ಷರಸ್ಥರಿಗೂ ಈ ಮಂದಿರಗಳು ಭಕ್ತಿಯ ತಾಣಗಳಾದವು. ವಿಚಿತ್ರವೆಂದರೆ ತೀರಾ ಕೆಳವರ್ಗದ ದಲಿತರಿಗೆ ಪ್ರವೇಶ ನಿರಾಕರಿಸಿದ, ಅವರು ಬೇರೆಯೇ ಭಜನಾ ಮಂದಿರ ಸ್ಥಾಪಿಸಿದ ಘಟನೆಗಳೂ ನನ್ನ ಬಾಲ್ಯದಲ್ಲಿ ನಡೆದಿದ್ದವು.

ನಾನು ನನ್ನಪ್ಪನ ಜೊತೆಯಲ್ಲಿ ಬಾಲ್ಯದಲ್ಲಿ ಭಜನಾ ಮಂದಿರಗಳಲ್ಲಿ ಹಾಡುತ್ತಿದ್ದ ಏಕೈಕ ಬಾಲೆಯಾಗಿದ್ದೆ. ಅಲ್ಲಿ ಒಬ್ಬ ಸಂನ್ಯಾಸಿ ಇದ್ದರು. ಹಿಮಾಲಯದಲ್ಲಿ ತಪಸ್ಸು ಮಾಡಿ ಬಂದಿದ್ದರಂತೆ, ದೇವರನ್ನು ಕಂಡವರಂತೆ. ಈ ಕತೆಗಳನ್ನು ಸತ್ಯವೆಂದೇ ನಂಬಿದ್ದ ನಾನು ಅಪ್ಪನೊಂದಿಗೆ ಹಿಮಾಲಯಕ್ಕೆ ಹೋಗುವ ಕನಸು ಕಾಣುತ್ತಿದ್ದೆ. ನನ್ನ ಬಾಲ್ಯದ ದೈನೇಸಿ ಬದುಕಿಗೆ ಈ ಭಜನೆ ಸಾಂತ್ವನವೀಯುತ್ತಿತ್ತು. ನನ್ನ ತಂದೆಗೆ ಕೆಲಸವಿಲ್ಲದ ಕಾರಣ ಆರನೆಯ ತರಗತಿಯ ಬಳಿಕ ಶಾಲೆಗೆ ಬರುವುದಿಲ್ಲವೆಂದು ಗೆಳತಿಯರಲ್ಲಿ ಹೇಳಿದ್ದೆ. ಅದನ್ನು ತಿಳಿದ ಸಿಸ್ಟರ್ ಎಸ್ಪಿರಿಯವರು ಕ್ಲಾಸಿನ ಮಕ್ಕಳೆಲ್ಲರನ್ನೂ ಮೊಣಕಾಲೂರಿಸಿ ಸುಮಾರು ಹೊತ್ತು ಪ್ರಾರ್ಥನೆ ಮಾಡಿಸಿದ್ದು, ಮುಂದಿನ ವಾರದಲ್ಲೇ ಅಪ್ಪನಿಗೆ ವಾಚ್‌ಮನ್ ಕೆಲಸ ಸಿಕ್ಕಿದ್ದು, ಯೇಸುವಿನ ಕೃಪೆಯಿಂದಲೇ ಎಂದು ನಂಬಿದ್ದೆ. ನನ್ನ ದೇವರಿಗಿಂತ ಈ ದೇವರಿಗೆ ಕಿವಿ ಸೂಕ್ಷ್ಮವಿದೆಯೆಂದು ಭಾವಿಸಿದ್ದೆ. ಶಾಲೆಯಲ್ಲಿ ಗೆಳತಿಯರೊಂದಿಗೆ ‘ನಮಾನ್ ಮೊರೆಯೇ’ ಹೇಳುವುದು ಕಪ್ಪು ದಿನಗಳಲ್ಲಿ ‘ಕುರ್ಸಾಚಿವಾಟ್’ನಲ್ಲಿ ಪ್ರಾರ್ಥನೆ ಮಾಡುವುದು ನನ್ನ ನಿತ್ಯಕರ್ಮವಾಯಿತು. ‘ಕ್ರಿಶ್ಚನ್ ಆಗ್ತಿಯಾ’ ಎಂದು ಸಿಸ್ಟರ್‌ಗಳು ತಮಾಷೆಗೆ ಕೇಳುತ್ತಿದ್ದಾಗ ಮಾತ್ರ ನನ್ನ ದೇವರುಗಳು ಕೈ ಹಿಡಿದೆಳೆಯುತ್ತಿದ್ದರು. ಈ ದೇವರುಗಳ ಪೈಪೋಟಿಯಲ್ಲಿ ಒಮ್ಮೊಮ್ಮೆ ಗೊಂದಲಕ್ಕೊಳಗಾಗುತ್ತಿದ್ದೆ. ಹೊಟ್ಟೆಯ ಪ್ರಶ್ನೆಯೇ ಮುಖ್ಯವಾಗಿರುವಾಗ ಇವೆಲ್ಲ ಕ್ಷುಲ್ಲಕ ವಿಷಯಗಳಾಗಿ ಮರೆಯಾಗುತ್ತಿದ್ದುವು.

ಸುಮಾರು ಹತ್ತು ವರ್ಷದವಳಾಗುವಾಗ ನನ್ನ ದೇವರು ಬಡ್ತಿಗೊಂಡರು. ಋಗ್ವೇದದ ಎಂಟು ಮಂತ್ರಗಳು, ಗಾಯತ್ರಿ ಮಂತ್ರ, ಭಗವದ್ಗೀತೆಯ ಕೆಲವು ಶ್ಲೋಕಗಳನ್ನು ಕಂಠಪಾಠ ಮಾಡಿಸಿ ದಿನಂಪ್ರತಿ ಜಪಿಸುವುದನ್ನು ಅಪ್ಪ ರೂಢಿ ಮಾಡಿಸಿದರು. ನಿಜ ಸಂಗತಿ ಹೇಳಬೇಕೆಂದರೆ ನನಗೆ ಭಜನೆ ಹಾಡಿದಾಗ ಉಂಟಾಗುವ ಸುಖ, ನೆಮ್ಮದಿ ಈ ಮಂತ್ರ ಹೇಳುವಾಗ ಉಂಟಾಗುತ್ತಿರಲಿಲ್ಲ. ಪ್ರತಿದಿನ ‘ಕಸ್ಮೈ ದೇವಾಯ ಹವಿಷಾವಿಧೇಮ’ ಎಂದು ಗಿಳಿಪಾಠ ಒಪ್ಪಿಸುತ್ತಿದ್ದೆ.

ಎಷ್ಟು ಶ್ರದ್ಧಾ ಭಕ್ತಿಯಿಂದ ಮಂತ್ರಪಠನ, ಭಜನೆ ಮಾಡಿದರೂ ಸೋಲು, ನಿಂದೆ, ಅವಮಾನ, ಹಿಂಸೆ, ಕಷ್ಟಗಳು ಸಾಲು ಸಾಲಾಗಿ ಬಂದು ಆಕ್ರಮಣ ಮಾಡುತ್ತಿದ್ದಾಗ ‘ತಲೆಯಲ್ಲಿ ಬರೆದುದನ್ನು ಎಲೆಯಿಂದ ಒರಸಲು ಸಾಧ್ಯವಿಲ್ಲ’ ಎಂಬ ಸಾಂತ್ವನವು ಹೆಣವನ್ನು ಕೊಚ್ಚಿ ಕೊಲ್ಲುವ ಪೌರುಷ ಪ್ರದರ್ಶನದಂತೆ ಕಾಣುತ್ತಿತ್ತು. ಪ್ರಪಂಚದ ಎಲ್ಲಾ ಜೀವಿಗಳಿಗೂ ಈ ಮಣ್ಣಿನಲ್ಲಿ ನೆಮ್ಮದಿಯಿಂದ ಬದುಕುವ ಅವಕಾಶವಿದೆ. ಆ ನೆಮ್ಮದಿಯ ದಾರಿಯನ್ನು ನಾವೇ ನಿರ್ಮಿಸಬೇಕೆಂದು ತಿಳಿಯಲು ಮಧ್ಯವಯಸ್ಸು ದಾಟಬೇಕಾಯಿತು. ಸಂತ ರಾಮಕೃಷ್ಣ ಪರಮಹಂಸರು ‘ಹುಡುಕಿದವರಿಗೆ ದೇವರು ಸಿಗುತ್ತಾನೆ’ ಎಂದದ್ದನ್ನು ನಂಬಿದ್ದೆ. ಮೊರೆಯಿಟ್ಟು ಅತ್ತರೆ ತಾಯಿ ಕೃಪೆದೋರುತ್ತಾಳೆ ಎಂಬ ಮಾತನ್ನು ನಂಬಿ ದೇವರ ಚಿತ್ರದ ಮುಂದೆ ಅಳುವುದನ್ನು ರೂಢಿ ಮಾಡಿಕೊಂಡೆ. ಗಂಗೆ ನಾನು ಕರೆದಾಗ ಕೂಡಲೇ ಬರುವಷ್ಟು ಆತ್ಮೀಯಳಾದುದರಿಂದ ದೇವಸ್ಥಾನಗಳಿಗೆ ಹೋಗಿ ಗರ್ಭಗುಡಿಯ ಮುಂದೇ ನಿಂತಾಗಲೂ ಕೆನ್ನೆ ತೋಯುತ್ತಿತ್ತು. ನಾಚಿಕೆಯಿಂದ ಆಚೀಚೆ ನೋಡಿ ಕಂಟ್ರೋಲ್ ಮಾಡುತ್ತಿದ್ದೆ. ಲಂಚ ಕೊಡುವಷ್ಟು ತಾಕತ್ತು ಇರಲಿಲ್ಲ. ಹಾಗಾಗಿ ನನ್ನ ಕಲ್ಪನೆಯ ದೇವರು ಕಾಯುತ್ತಾನೆಂಬ ಭರವಸೆ ಇತ್ತು. ಅವೆಲ್ಲಾ ಒಂದೊಂದೇ ಸುಳ್ಳಾದಾಗ ನನ್ನ ದೇವರು ಯಾರು? ಹೇಗಿದ್ದಾನೆ? ಎಂಬ ಬಗ್ಗೆ ತರ್ಕಿಸಲು ಪ್ರಾರಂಭಿಸಿದೆ. ಅದು ಕೊಡು, ಇದು ಕೊಡು ಎಂದು ದಿನವು ಪ್ರಾರ್ಥಿಸುವಾಗ ದೇವರೆಲ್ಲಾದರೂ ಪ್ರತ್ಯಕ್ಷನಾಗಿ ‘ನಿನಗೆ ಕೊಟ್ಟ ಬುದ್ಧಿ, ವಿವೇಕಗಳನ್ನು ಒತ್ತಿ ಇಟ್ಟಿದ್ದೀಯಾ’ ಎಂದು ಕೇಳಿದರೆ ಏನುತ್ತರ ಕೊಡಲಿ? ದೀಪವು ನಿನ್ನದೇ ಗಾಳಿಯು ನಿನ್ನದೇ, ಆರದಿರಲಿ ಬೆಳಕು’ ಎಂಬ ಭರವಸೆಯಾಗಲೀ, ‘ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು’ ಎಂಬ ಕವಿ ಮಾತಿನ ಅವಲಂಬೆಯಾಗಲೀ ಜೀವನದುದ್ದಕ್ಕೂ ಕಾಪಾಡಲಾರದು ಎಂಬ ಸತ್ಯದ ಅರಿವಾಯಿತು. ಅಳುಬುರುಕಿಯಾಗಿರುವುದು ಹೆಣ್ಣಿನ ಪರಮ ದೌರ್ಬಲ್ಯ. ಇದನ್ನು ಮೆಟ್ಟಿ ನಿಲ್ಲದೆ ಸ್ವಂತಿಕೆ ಗಳಿಸಲು ಸಾಧ್ಯವಿಲ್ಲ.

ಯಾವ ಆಧ್ಯಾತ್ಮಿಕ ಗ್ರಂಥಗಳೂ ಕಲಿಸದ ಪಾಠಗಳನ್ನು ಜೀವನ ಕಲಿಸಿದಾಗ ಪಾಪಪುಣ್ಯ, ಸ್ವರ್ಗನರಕಗಳೆಂಬ ಹೆಸರುಗಳಿಗೆ ಕಾಲ್ಪನಿಕ ಅರ್ಥವೇ ಬಂತು. ಸಮಾಜಮುಖಿಯಾದ ಕೆಲಸಗಳಲ್ಲಿ ತೊಡಗಿಸಿಕೊಂಡಂತೆಲ್ಲಾ ಕೋಟಿಗಟ್ಟಲೆ ದೈವ ದೇವರುಗಳಿರುವ ನಾಡಿನಲ್ಲೂ ಇಷ್ಟೊಂದು ಕ್ರೌರ್ಯ, ಹಿಂಸೆ, ಅನ್ಯಾಯ ವಂಚನೆಗಳಿರಲು ಸಾಧ್ಯವೇ? ಎಲ್ಲರೊಳಗೂ ದೇವರಿದ್ದಾನೆ ಎಂದು ನಂಬಿದ ನಾವೇ ಆ ದೇವರ ಮುಖವಾಡ ಹೊತ್ತ ದಾನವನನ್ನು ಕಂಡು ಬೇಸ್ತು ಬೀಳುತ್ತೇವೆ. ದೇವರು ಎಂಬ ಚಪ್ಪಡಿಕಲ್ಲು ನನ್ನ ತಲೆಯ ಮೇಲಿದ್ದುದರಿಂದ ತಲೆಯೆತ್ತಿ ನಡೆಯಲು, ಕಣ್ಣೆತ್ತಿ ನೋಡಲು ಕಷ್ಟವಾಗುತ್ತಿತ್ತು.

ನಾವು ನಮ್ಮ ಸ್ವಾರ್ಥಕ್ಕಾಗಿ ತಲೆ ಮೇಲೆ ನಾವೇ ಹೊತ್ತ ಕಲ್ಲನ್ನು ಕೆಳಗಿಳಿಸುವುದು ಸುಲಭವಲ್ಲ. ದೇವರು ಇದ್ದಾನೆ ಎಂದು ವಾದಿಸುವವರಿಗಿರುವಷ್ಟೇ ಕಾರಣಗಳು ಇಲ್ಲ ಎಂದು ವಾದಿಸುವವರಿಗೂ ಇವೆ. ವಾದದಿಂದ ಯಾವುದೂ ದಕ್ಕುವುದಿಲ್ಲವಲ್ಲಾ. ದೇವರು ಎಂಬ ಶಕ್ತಿಗಾಗಿ ವಾದ ಮಾಡುವ ಬದಲು. ಆ ಶಕ್ತಿ ಇದ್ದರೆ ಇರಲಿ ನಾವು ಅದರ ತಂಟೆಗೆ ಹೋಗುವುದು ಬೇಡ. ಅದು ನಮ್ಮ ತಂಟೆಗೆ ಬರಲಾರದು. ವಿ.ಸೀ.ಯವರು ಹೇಳಿದಂತೆ ‘‘ಇಲ್ಲದಿರೆ ಬೇರಾವ ದೇವರೇ ಬರರೋ, ಇಲ್ಲದೊಂದರೆ ಹೆಸರಿನಿತ್ತು ಕರೆಯುವೆವೋ, ಇಲ್ಲದಿರೆ ಮಾನವ ಸುಗುಣವೇ ದೈವವೋ, ಎಲ್ಲಿಗೂ ಹರಿಯದಿಹ ಸಂಶಯವೇ ಕೊನೆಯೋ” ಪ್ರಕೃತಿಯಲ್ಲಿ ಮಾನವನು ದೈವವನ್ನು ದೇವರನ್ನು ಆವಾಹಿಸುವಂತೆಯೇ ಮಾನವನ ಸುಗುಣಗಳನ್ನೇ ದೇವರೆಂದು ನಂಬಿದ ಕವಿ ಮಾತು ನನಗೆ ಇಷ್ಟವಾಯಿತು. ಮಾನವನಲ್ಲಿ ಸುಗುಣಗಳಿದ್ದಲ್ಲಿ ದೇವರು ಕಾಣುತ್ತಾನೆ. ಅವನಲ್ಲಿ ರಾಕ್ಷಸ, ಪ್ರಾಣಿಯ ಅಂಶಗಳೂ ಸೇರಿಕೊಂಡಿರುವುದರಿಂದ ಸಂಶಯದ್ ಎಳೆಯೊಂದು ನಮ್ಮ ಮನಸ್ಸಿನೊಳಗೇ ಬೆಸೆದು ಕೊಂಡಿರುತ್ತಲ್ಲವೇ?.

ನಮ್ಮನ್ನು ನಾವು ಪ್ರೀತಿಸುವವರೆಗೆ, ನಮ್ಮ ಮೇಲೆ ನಮಗೆ ನಂಬಿಕೆ ಹುಟ್ಟುವವರೆಗೆ, ನನ್ನ ಭವಿಷ್ಯಕ್ಕೆ ನಾನೇ ಹೊಣೆ ಎಂಬ ಧೈರ್ಯ ಮೂಡುವವರೆಗೆ ಇನ್ನೊಂದು ಅವಲಂಬನೆ ಬೇಕಾಗುತ್ತದೆ. ನಾವು ಯಾರೂ ಅರ್ಜಿ ಹಾಕಿಕೊಂಡು ಈ ಭೂಮಿಯಲ್ಲಿ ಹುಟ್ಟಿಲ್ಲ. ಆದರೆ ಹುಟ್ಟುತ್ತಲೇ ನಮ್ಮನ್ನು ಸುತ್ತಿಕೊಳ್ಳುವ ಒಂದೊಂದೇ ಬಂಧನಗಳು, ನಮ್ಮ ಮೆದುಳು, ಕಣ್ಣು, ಕಿವಿಗಳ ನೈಜಶಕ್ತಿಯನ್ನೇ ಕುಂಠಿತಗೊಳಿಸಿಬಿಡುತ್ತವೆ. ಪರೆಗಳು ಬೆಳೆಯುತ್ತವೆ. ನಾನು ಅದಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ದೃಷ್ಟಿದೋಷಗಳನ್ನು ಪರಿಹರಿಸಿಕೊಂಡಿದ್ದೇನೆ. ದೇವರೇ ನನ್ನ ಕೈಬಿಟ್ಟನೋ ಅಥವಾ ನಾನೇ ಕೈಬಿಟ್ಟೆನೋ, ಸಮಾಜದಲ್ಲಿ ಮಾತ್ರ ನನಗೆ “ಪೆಟ್ಟ್ ಕಮ್ಮಿ” ಪಟ್ಟ ಕಟ್ಟಿದ್ದಾರೆ. ಅದರಲ್ಲೂ ಒಂದು ಸುಖವಿದೆ. ಒಕ್ಕಣ್ಣಿನವರು ಇರುವ ಮಧ್ಯೆ ಕುರುಡರಂತೆ ವರ್ತಿಸುವ ಸಂಕಷ್ಟವಿದೆಯಲ್ಲಾ ಅದು ಸವಾಲಿನ ಕೆಲಸ. ಗಂಡಸರಾಗಲೀ, ಹೆಂಗಸರಾಗಲೀ ಈ ಸವಾಲುಗಳನು ವಾಸ್ತವದ ನೆಲೆಗಟ್ಟಿನ ಮೇಲೆ ನಿಂತೇ ಎದುರಿಸಬೇಕು. ಅಷ್ಟು ಮಾತ್ರ ಹೇಳಬಲ್ಲೆ.

ರೇಖಾಚಿತ್ರ : ಮಹಾಂತೇಶ ದೊಡ್ಡಮನಿ

ಪ್ರತಿಕ್ರಿಯಿಸಿ