ಡನ್‍ಕರ್ಕ್ – ಬಿಳಿಯರ ಇನ್ನೊಂದು ದೊಡ್ಡ ಕುಂಡೆ ಚೇಷ್ಟೆ

Brexit ನಂತರ ಡನ್‍ಕ್ರಿಕ್‍ನಂತಹ ಒಂದು ಪ್ರಯತ್ನ ಇಂಗ್ಲೀಷರಿಗೆ ತೀರ ಅನಿವಾರ್ಯವೇ ಆಗಿತ್ತು. ಯುರೋಪ್ ಒಕ್ಕೂಟವನ್ನು ತೊರೆದ ನಂತರ ಏಕಾಂಗಿಯಾದ ಬ್ರಿಟನ್, ಎರಡನೆಯ ಮಹಾಯುದ್ಧದ ಆರಂಭದ ಡನ್‍ಕ್ರಿಕ್ ದಿನಗಳಲ್ಲಿ ಪ್ರತ್ಯೇಕವಾಗಿದ್ದರೂ ನಲುಗದೆ, ಯುರೋಪಿನಿಂದ ದೂರವೇ ಉಳಿದಿದ್ದರೂ ತಮ್ಮ ಶಕ್ತಿಯ ಬಲದಿಂದ ಮತ್ತೆ ಮಹಾನ್ ರಾಷ್ಟ್ರವಾದದನ್ನು, ಮತ್ತೆ ಮೆಲುಕು ಹಾಕಿ, ತನ್ನ ಚೇತನವನ್ನು ಪುನಃಶ್ಚೇತನಗೊಳಿಸಿದ್ದು ಈ ಸಂದರ್ಭದಲ್ಲೇ.


ಡನ್ಕರ್ಕ್ ಚಿತ್ರದ ಟ್ರೈಲರ್

ಜರ್ಮನ್ನಿನ ದಿಗ್ಗಜ, ಪ್ರವಾದಿ ಫ್ರೀಡಿಕ್ ನೀಶೆ ‘On the Genealogy of Morality’ ಗ್ರಂಥದಲ್ಲಿ ಒಂದು ವಾದವನ್ನು ಮಂಡಿಸುತ್ತಾನೆ, ಸುಮಾರು ಭಾಷೆಗಳಲ್ಲಿ ‘ಪವರ್‍ಫುಲ್’ ಅಥವಾ ‘ಮಾಸ್ಟರ್ಸ್’ ಅಥವಾ ‘ರಿಚ್’ ಈ ಶಬ್ಧಗಳ ಬೇರಿನಿಂದಲೇ ಈ ‘ಗುಡ್’ ಎನ್ನುವ ಪದ ಹುಟ್ಟಿದ್ದು ಎನ್ನುವ ಅರ್ಥ ಬರುವ  ಹಾಗೆ. ಗ್ರೀಕಲ್ಲಿ ‘ಗುಡ್’ ಪದವು ‘ಟ್ರುಥ್’ ಅಥವಾ ‘ಸತ್ಯ’ದ ಜತೆಗೂ ಬೆಸೆದುಕೊಂಡಿದೆ. ಅದೇ ನೀವು ಸಾಮಾನ್ಯರು ಹಾಗೂ ಬಡವರು ಕೆಳವರ್ಗದವರನ್ನು ಉದ್ದೇಶಿಸುವ ಪದಗಳು ‘ಸುಳ್ಳು’ ಮತ್ತು ‘ಪುಕ್ಕಲು’ ಎನ್ನುವ ಅರ್ಥಗಳ ಜತೆ ಥಳುಕು ಹಾಕಿಕೊಂಡಿವೆ. ನೀಶೆ ಹಾಗೇ ‘ಡಾರ್ಕ್’ ಮತ್ತು ‘ಬ್ಯ್ಲಾಕ್’ ಶಬ್ದಗಳೂ ಕೇಡಿನ ಸಂಕೇತವಾಗಿರುವ ವಿಪರ್ಯಾಸಕ್ಕೂ ಕನ್ನಡಿ ಹಿಡಿಯುತ್ತಾನೆ. ಸುಮ್ಮನೇ ಡಿಕ್ಷನರಿಯನ್ನು ತಿರುವಿ, ಬ್ಲ್ಯಾಕ್ ಅರ್ಥಕ್ಕಿರುವ ಸಮಾನಾರ್ಥಕ ಶಬ್ಧಗಳತ್ತ ಗಮನ ಕೊಡಿ; ಬ್ಲ್ಯಾಕ್ ಎಂದರೆ ಕೆಟ್ಟದ್ದು, ಅಪಾಯ ಅಥವಾ ಬೆದರಿಕೆ ಇಲ್ಲವೇ ಅಪಶಕುನ. ಬಹುಶಃ ದಟ್ಟ ಕೂದಲಿನ, ಚರ್ಮದ ಮೂಲ ನಿವಾಸಿಗಳನ್ನು ಸರ್ವನಾಶಗೊಳಿಸಿಯೇ ಅಥವಾ ದಬ್ಬಾಳಿಕೆಯಿಂದಲೋ ಆಳಿದ ನೀಲಿ ಕಂಗಳ ಬಿಳಿಯರು, ಈ ಭಾಷಾ ಪಂಡಿತರ ಪ್ರಕಾರ ಶುದ್ಧರು. ಅದಕ್ಕೇ ಶ್ವೇತ ಬಣ್ಣವು ಸದಾ ಶಾಂತಿ, ಒಳಿತು ಮತ್ತು ಶ್ರೇಷ್ಠತೆಯ ಸಂಕೇತ! ಅಂದರೆ ಸತ್ಯವೆಂದು ನಾವು ನಂಬಿರುವುದು ನಮ್ಮ ಪ್ರಜ್ಞೆಯ ಆಳದಲ್ಲೆಲ್ಲೋ ಹರಿಯುತ್ತಿಲ್ಲ, ಅಥವಾ ನಮ್ಮ ಇಡಿಯಾದ ಇರುವಲ್ಲೇ ಇದು ವಾಸಿಸುತ್ತಲೂ ಇಲ್ಲ. ಆದರೆ ಸತ್ಯದ ಅಸ್ತಿತ್ವವಿರುವುದು ಬಾಹ್ಯ ಜಗತ್ತಿನಲ್ಲಿ  ಘಟಿಸಿದ ಆಕಸ್ಮಿಕಗಳಲ್ಲಿ; ಹಾಗೇಯೇ ಒಂದು ಪ್ರಬಲ ಸಮುದಾಯಕ್ಕೆ, ಒಂದು ಪಂಗಡಕ್ಕೆ ಒಗ್ಗುವ ಅನುಕೂಲಗಳನ್ನೇ ಸತ್ಯ ಮತ್ತು ಒಳಿತು ಎಂದು ನಿರ್ಣಯಿಸಲಾಗಿದೆ ಎನ್ನಲೂಬಹುದೇನೋ. ಈ ನಿರೂಪಣೆಯೇ   ಬಹುಶಃ ಇತಿಹಾಸದ ಉದ್ದಕ್ಕೂ ವಿಕಾಸವಾಗುತ್ತಿದ್ದರಿಂದಲೋ ಏನೋ, ನಮಗೆ ಇದೇ ಸಮಂಜಸವಾಗಿಯೂ ಅರ್ಥಪೂರ್ಣವಾಗಿಯೂ ಕಾಣುತ್ತಿದೆ. ನಮ್ಮ ಆತ್ಮ ಮನಸ್ಸುಗಳು ಮಾತ್ರವಲ್ಲ. ನಮ್ಮ ಭಾವನೆಗಳು ಮತ್ತು ದೇಹಗಳೂ ಸಹ ಈ ಇತಿಹಾಸ ಕಟ್ಟಿದ ಭ್ರಮೆಯಿಂದ ತೀವ್ರವಾಗಿ ಪ್ರಭಾವಿತವಾಗಿದೆ. ವಾರದ ಆರು ದಿನಗಳೂ ಕತ್ತೆಯಂತೆ ದುಡಿಯುವ ವ್ಯಕ್ತಿ ಭಾನುವಾರ ನಿನಗೆ ರಜೆಯಲ್ಲ ಎಂದು ಬಿಟ್ಟರೆ ದಿಢೀರನೆ ದಂಗೆಯೇಳುತ್ತಾನೆ. ತಾನು ಜೀವಂತವಾಗಿರುವ ಹಕ್ಕನ್ನು ಯಾರೋ ಕಸಿದುಕೊಂಡರು ಎನ್ನುವಂತೆ! ಅದೇ ಬೇರೆ ಸಮಯದಲ್ಲಿ ಬೇಕಾದರೆ ಆತ,  ತನ್ನ ಇನ್ಸ್ಟಿಟ್ಯೂಷನ್‍ನ ಉದ್ಧಾರಕ್ಕೆ ಗುಲಾಮನಂತೆ ಇಪ್ಪತ್ತನಾಲ್ಕು ಗಂಟೆಯೂ ಗೇಯ ಬಲ್ಲ! ಆ ಒಂದು ದಿನ ರಜೆ ಕೊಡದಿದ್ದರೆ ಮಾತ್ರ, ಆತ ರುದ್ರ ರೂಪ ತಾಳುವುದು. ಹಾಗಾದರೆ ಒಂದು ದಿನದ ರಜೆಯ ಆಮಿಷ ಪಾಪ ಅವನ ಜೀವನಪೂರ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದೆ, ಮತ್ತು ಈ ಗುಲಾಮನ ಬದುಕನ್ನೇ ಆತನೂ ಇಷ್ಟಪಟ್ಟು ಅದೇ ತನ್ನ ಐಡೆಂಟಿಯ ಮಾನದಂಡ ಎಂದೇ ದೃಢವಾಗಿ ನಂಬಿದ್ದಾನೆ! ಅಂದರೆ ಒಂದು ಪ್ಯಾರ್ಟನ್‍ಗೆ ನಾವು ಹೇಗೆ ಒಗ್ಗಿ ಹೋಗಿದ್ದೇವೆ ಎಂದರೆ, ಅದೇ ನಮ್ಮ ಬದುಕಾಗಿದೆ.

ಮೊನ್ನೆ ಡನ್‍ಕರ್ಕ್ ನೋಡುತ್ತಿದ್ದಾಗ ಈ ಅಸಂಗತ ವಾದಗಳ ಸರಣಿ ಇಡಿ-ಬಿಡಿಯಾಗಿ ನನ್ನೊಳಗೆ ನರ್ತಿಸುತ್ತಿದ್ದವು! “ಅಬ್ಬಾ ಡನ್‍ಕರ್ಕ್ ಎಂಥ ಸಿನಿಮಾ! ಎಂಥ ವೈಭವ…! ಎಷ್ಟು ನೊಂದರು ಪಾಪದ ಬ್ರಿಟಿಷ್ ಎಳೆ ಸೈನಿಕರು! ಎಂಥ ತ್ಯಾಗ ಸಿವಿಲಿಯನ್ನರದ್ದು, ಸಾಯಲು ಕಾಯುತ್ತಿದ್ದ ಈ ಹುಡುಗರನ್ನು, ಜರ್ಮನಿಯ ದುಷ್ಟ ಯುದ್ಧ ವಿಮಾನಗಳು ಸಿಡಿಸುವ ಮುನ್ನ ತಮ್ಮ ನೆಮ್ಮದಿಯನ್ನೇ ಬದಿಗಿಟ್ಟು, ತಮ್ಮ ಪ್ಲೆಶರ್‍ಯಾಕ್ಟ್‍ಗಳಲ್ಲೇ ಈ ಹೆದರಿದ ಬಾಲಕರನ್ನು ಎಷ್ಟು ರೋಚಕವಾಗಿ ಕಾಪಾಡಿದರು, ಈ ದೇಶಪ್ರೇಮಿಗಳು” ಎನ್ನುವ ಮಾತುಗಳು ಈ ಚಿತ್ರದೊಂದಿಗೆ ಸಹಜವಾಗಿ ಅಂಟಿಕೊಂಡಂತೆ ತೇಲಿಬರುವ ‘ಪಾಸಿಟಿವ್’ ವಿಮರ್ಶೆಗಳು. ಇದರ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಐ ಮಾಕ್ಸ್ ಎಕ್ಸ್‍ಪೀರಿಯನ್ಸ್‍ನ ರಾಯಭಾರಿಯಂತೆ ಕಾಣುವ ಮನುಷ್ಯ. ಇವನನ್ನು ಮೇಲಕ್ಕೇತ್ತಿದ್ದ ಚಿತ್ರ    ‘ಇನ್‍ಸೊಮ್ನೀಯಾ’ದಲ್ಲಿ ಮಂಜಿನಿಂದ ಆವೃತ್ತವಾದ ಬೆಟ್ಟಗಳನ್ನು ಎತ್ತರಕ್ಕೆ ತೋರಿಸುತ್ತಿದ್ದ; ‘ಡಾರ್ಕ್ ನೈಟ್’ ‘ಇನ್‍ಸೆಪ್ಷನ್’ ಚಿತ್ರಗಳಲ್ಲಿ ಕಾರ್ಪೋರೇಟ್ಗ ಗನಚುಂಬಿ ಕಟ್ಟಡಗಳನ್ನು ಮಹಾನ್ ಆಕೃತಿಗಳಂತೆ ಸೆರೆಹಿಡಿಯುತ್ತಿದ. ಈಗ ‘ಡನ್‍ಕರ್ಕ್’ ಚಿತ್ರದಲ್ಲಿ ನಗ್ನ ನೀಲಾಕಾಶವನ್ನೇ ಮಲಗಿರುವ ಮೌನಿ ಸರ್ಪದಂತೆ ದೈತ್ಯವಾಗಿ ಕೆತ್ತಿದ್ದಾನೆ. ಐ ಮ್ಯಾಕ್ಸ್ ಸ್ಕ್ರೀನಿನಲ್ಲಿ ತಿಮಿಂಗಿಲ ಗಾತ್ರದ ಬ್ರಿಟಿಷ್ ಆಕಾಶ, ಬ್ರಿಟಿಷ್ ಸಮುದ್ರ, ಬ್ರಿಟಿಷ್ ತಲ್ಲಣಗಳನ್ನು ಈ ಜೈಗ್ನಾಟಿಕ್ ಪ್ರೊಜೆಕ್ಷನ್ ನ ಮುಖಾಂತರ ನೋಡಿದರೆ, ಈ ದೈತ್ಯ  ಭ್ರಮೆಯೂ ವಿಶ್ವರೂಪದಷ್ಟು ಅದ್ಭುತವಾಗಿ ಕಂಡು ನಾವು ಬ್ರಿಟಿಷರ ಸಾಹಸವನ್ನು ಮೆಚ್ಚಿ “ಭೇಷ್… ಭೇಷ್!” ಎಂದೇ ಕಿರುಚಿ ಬಿಡಬೇಕು.

ನೋಲನ್‍ನ ಈ ಐ ಮ್ಯಾಕ್ಸ್ ಖಯಾಲಿ ನನಗೆ ಜೋನಾಥನ್ ಸ್ವಿಫ್ಟ್ ನ ‘ಗಲಿವರ್ ಟ್ರಾವಲ್ಸ್’ ನೆನಪಿಸಿತು. ಅಲ್ಲೂ ಹಾಗೇ ನಾಶವಾದ ಹಡಗಿನಿಂದ ಈಜಿ ಯಾವುದೋ ದ್ವೀಪದಲ್ಲಿ ಬಿದ್ದಿರುವ ಗಲಿವರನನ್ನು ಆರು ಇಂಚು ಉದ್ದವಿರುವ ಲಿಲಿಪುಟ್ಟರು ಸುತ್ತುವರಿಯುತ್ತಾರೆ. ಅವರ ಬದುಕಿಗಿಂತಲೂ ನೂರು ಪಟ್ಟು ಬೃಹತ್ತಾಗಿರುವ ಈತನ ದೇಹವೇ ಲಿಲಿಪುಟ್ಟರಿಗೆ   ಅಚ್ಚರಿ ಹುಟ್ಟಿಸುವ ಸಂಗತಿ. ಇವನನ್ನು ಕಟ್ಟಿ ಹಾಕುತ್ತಾರೆ. ಇವನೊಬ್ಬ ಅನ್ಯಗ್ರಹದಿಂದ ಬಿದ್ದ ಜೀವಿಯೆಂದು ನಂಬುತ್ತಾರೆ. ಅಲ್ಲಿಯ ರಾಜ ಗಲಿವರನನ್ನು ಮಹಾಪ್ರತಿಮೆಯಂತೆ ಪೋಸ್ ಕೊಡಲು ಹೇಳಿ, ಅವನ ಕಾಲುಗಳ ನಡುವಿನಿಂದ ತನ್ನ ಸೈನಿಕರು, ಕವಾಯತು ಮಾಡುವುದನ್ನು ನೋಡಿ  ನಲಿಯುತ್ತಾನೆ. ಆದರೆ ಅಸಲಿಗೆ ಈ ಗಲಿವರ್ ಎಲ್ಲ ಮನುಷ್ಯರಂತೆ ಸಾಮಾನ್ಯ, ಆದರೆ ಈ ಆರಿಂಚು ಉದ್ದವಿರುವ ಲೀಲಿಪುಟ್ಟರ ಲ್ಯಾಂಡಿನಲ್ಲಿ ಈತ ಅಸಾಮಾನ್ಯ! ಬ್ರಿಟಿಷರ ದುರ್ಬುದ್ಧಿಯನ್ನು ಮರ್ಮಕ್ಕೆ ತಾಗುವಂತೆ ಹೇಳಲು ಸ್ವತಃ ಇಂಗ್ಲೀಷ್ಮನ್ನೇ ಆಗಿದ್ದ ಸ್ವಿಫ್ಟ್ ಬರೆದಿದ್ದ ಕಾದಂಬರಿಯದು.  ತಮ್ಮ ಸಂಸ್ಥಾನವನ್ನು ಹಿಗ್ಗಿಸಲು ಕಂಡ-ಕಂಡ ದ್ವೀಪಗಳನ್ನು ದೋಚಿ, ಹೊಸ-ಹೊಸ ಖಂಡಗಳನ್ನು ಅನ್ವೇಷಿಸಿ ಅಲ್ಲಿದ್ದ ಮುಗ್ಧ ಆದಿವಾಸಿ-ಮೂಲನಿವಾಸಿಗಳನ್ನೆಲ್ಲಾ, ‘ನೀವು ಜರ್ಬರ ಮೃಗಗಳು ಕಪ್ಪು ಕ್ರೂರಿಗಳು! ನಿಮಗೆ ಧರ್ಮ ಗೊತ್ತಿಲ್ಲ;   ನೈತಿಕತೆಯ ಅರಿವಿಲ್ಲ. ಮಾಡಬಾರದ ಪಾಪ ಮಾಡಿರುವ ಕಿರಾತಕರು ನೀವು, ಹುಟ್ಟುತ್ತಲೇ ಪಾಪಿಶ್ಟರು ನೀವು! ಆದರೂ ಕ್ರಿಸ್ತನು ನಿಮ್ಮನ್ನೆಲ್ಲಾ ಕ್ಷಮಿಸುತ್ತಾನೆ; ನಿಮ್ಮನ್ನು  ಸಿವಿಲೈಜ್ ಆಗಿ ಪರಿವರ್ತಿಸಲು, ಅವನ ದೇವದೂತನಾದ ನಮ್ಮನ್ನು ಕಳುಹಿಸಿದ್ದಾನೆ. ಬಿಳಿಯರಾದ ನಮ್ಮ ಕರ್ತವ್ಯವೇ ಇದು…” ಎಂದೆಲ್ಲಾ ಬಿಟ್ಟಿ ಫಿಲಾಸಫಿû ಲೆಕ್ಚರ್ ಕೊಟ್ಟು ಧರ್ಮವೆಂಬ, ಧೀಮಂತ ನಾಗರೀಕರೆಂಬ ದೈತ್ಯ ನೆರಳುಗಳಡಿಯಲ್ಲಿ ಅವರೆನ್ನೆಲ್ಲಾ ವಂಚಿಸಿ, ತಮ್ಮ ವಶಕ್ಕೆ ತೆಗೆದುಕೊಂಡ ಬ್ರಿಟೀಷರನ್ನೂ, ಈ ಬ್ರಿಟಿಷ್ ರಾಣಿಯರ ಚೇಲಗಳಾಗಿ, ಹಲ್ಲು ಕಿರಿದುಕೊಂಡು, ಅವಳನ್ನು ಮೆಚ್ಚಿಸಲು ದ್ವೀಪ-ದ್ವೀಪಗಳನ್ನು ಅರಸುತ್ತಾ ಸಮುದ್ರದಲ್ಲಿ ಅಲೆದ ನಾವಿಕರನ್ನು ಸ್ವಿಫ್ಟ್ ಇಲ್ಲಿ ಗಲಿವರ್‍ನಂತಹ ಮಹಾ ನೆರಳಿನ ಆಕಾರದಲ್ಲಿ ಬಿಂಬಿಸುತ್ತಿರುವುದು. ಕೆಲ ನಾವಿಕರು ಸಮುದ್ರಗಳನ್ನೆಲ್ಲಾ ದಾಟಿ ಮರಳಿಬಂದಾಗ ತಮ್ಮ  ಅನುಭವಗಳನ್ನೂ ಹಂಚಲು ‘ಟ್ರಾವೆಲೋಗ್’  ಎನ್ನುವ ಹೆಸರಿನ ದಿನಚರಿಗಳನ್ನು ಬರೆಯುತ್ತಿದ್ದರು ಅದರಲ್ಲಿ ಇದ್ದದ್ದೇ ಪರಿಪೂರ್ಣ ಸತ್ಯವೆಂಬ ನಂಬಿಕೆ ಜನರಲ್ಲಿರುತ್ತಿತ್ತು. ಏಕೆಂದರೆ ಅಷ್ಟೆಲ್ಲಾ ಬೆವರು ಸುರಿಸಿ ಜೀವವನ್ನೇ ಮರೆತು, ಸಂಸಾರ, ಮನೆ-ಮಠಗಳನ್ನೇ ಬಿಟ್ಟು, ಸಾಗರಕ್ಕೆ ಜಿಗಿದ ನಾವಿಕರು ಸುಳ್ಳನ್ನು ಏಕೆ ಬರೆಯುತ್ತಾರೆ. ಆದರೆ ಸ್ವಿಫ್ಟ್ ಗೆ   ಏಕೋ ಗುಮಾನಿ. “ಏನೂ ಹುಡುಕದೆ ಮತ್ತೆ ಮರಳಿದರೆ, ರಾಣಿಗೆ ದುಃಖವಾಗುತ್ತದೆ, ಜನ ಆಡಿಕೊಳ್ಳುತ್ತಾರೆ, ಎಂದು ಈ ಜನರು ಅವರಿಗಿಷ್ಟ ಬಂದ ಹಾಗೆ ಸತ್ಯವನ್ನು ಒಂದು ಫೆಂಟಾಸ್ಟಿಕ್ ಕಥೆಯಾಗಿ ವಿವರಿಸುತ್ತಿದ್ದಾರೆಯೇ” ಎಂಬ ಕೆಟ್ಟ ಸಂಶಯ!  ಅದಕ್ಕೇ ನಾವಿಕನ ದಿನಚರಿಯ ಶೈಲಿಯಲ್ಲೇ ಗಲಿವರ್ ಕಥೆ ಬರೆದ. ಅದರ ಕೃರ್ತ ಗಲಿವರ್ ಎಂದೇ ಜನ ನಂಬಿ ಬಿಟ್ಟಿದ್ದರು. ಆದರೆ ಯಾವಾಗ ಆರು ಇಂಚಿನ ಲಿಲಿಪುಟ್ಟರು, ಐವತ್ತು ಅಡಿಯ ಮನುಷ್ಯರು, ಮಾತನಾಡುವ ಕುದುರೆಗಳು ಇದ್ದಕ್ಕಿದ್ದಂತೆ ಈ ದಿನಚರಿಯಲ್ಲಿ ಅನಾವರಣವಾಯಿತೋ ಆಗಲೇ ಎಲ್ಲ ವಿಮರ್ಶಕರಿಗೆ ಗೊತ್ತಾದ್ದದ್ದು, ಸ್ವಿಫ್ಟ್ ಅತಿ ರಮ್ಯವಾಗಿ ಈ ಸೈಲರ್ಸ್ ಬುಡುಬುಡಿಕೆಗಳನ್ನು ಛೇಡಿಸುತ್ತಿದ್ದಾನೆ ಎಂದು.

 

ಈಗ ನಾವಿಕರಿಲ್ಲ. ಆದರೆ ಬ್ರಿಟನ್ನಿನ ಅಧಿಪತ್ಯವನ್ನು ಮೆರೆಸುವ ಈ ನೋಲನ್‍ನಂತಹ ನಿರ್ದೇಶಕರಿದ್ದಾರೆ. Brexit ನಂತರ ಡನ್‍ಕ್ರಿಕ್‍ನಂತಹ ಒಂದು ಪ್ರಯತ್ನ ಇಂಗ್ಲೀಷರಿಗೆ ತೀರ ಅನಿವಾರ್ಯವೇ ಆಗಿತ್ತು. ಯುರೋಪ್ ಒಕ್ಕೂಟವನ್ನು ತೊರೆದ ನಂತರ ಏಕಾಂಗಿಯಾದ ಬ್ರಿಟನ್, ಎರಡನೆಯ ಮಹಾಯುದ್ಧದ ಆರಂಭದ ಡನ್‍ಕ್ರಿಕ್ ದಿನಗಳಲ್ಲಿ ಪ್ರತ್ಯೇಕವಾಗಿದ್ದರೂ ನಲುಗದೆ, ಯುರೋಪಿನಿಂದ ದೂರವೇ ಉಳಿದಿದ್ದರೂ ತಮ್ಮ ಶಕ್ತಿಯ ಬಲದಿಂದ ಮತ್ತೆ ಮಹಾನ್ ರಾಷ್ಟ್ರವಾದದನ್ನು,  ಮತ್ತೆ ಮೆಲುಕು ಹಾಕಿ, ತನ್ನ ಚೇತನವನ್ನು ಪುನಃಶ್ಚೇತನಗೊಳಿಸಿದ್ದು ಈ ಸಂದರ್ಭದಲ್ಲೇ.

ಈಗ ಮತ್ತೆ ಚರ್ಚಿಲ್ ಅಲೆ ಎದ್ದಿದೆ.  Brexit ಗೆ ಒಪ್ಪಿ ಬ್ರಿಟನ್ ಚರ್ಮ ಕಿತ್ತುಕೊಂಡಿತು ಎಂದು ಹಾಸ್ಯ ಮಾಡುವರನ್ನೆಲ್ಲ ರಾಜಸೇವಾಸಕ್ತರು  ಚರ್ಚಿಲ್ಲನ ದೈತ್ಯ ಇಮೇಜಿನಿಂದ ಬಾಯಿ ಮುಚ್ಚಿಸಲು ಹೆಣಗುತ್ತಾರೆ. ‘ಚರ್ಚಿಲ್ಲ್ ಇದ್ದಿದ್ದರೆ ಖಂಡಿತ ಆತ ಈ Brexit  ಕ್ರಾಂತಿಯನ್ನು ಮೆಚ್ಚಿ, ಅದರ ಚುಕ್ಕಾಣಿ ಹಿಡಿಯುತ್ತಿದ್ದ, ಹಾಗಾಗಿ ನಾವು ನಮ್ಮ ಪೂರ್ವಿಕ ದಂತಕಥೆಯಾದ ಚರ್ಚಿಲ್ಲನ ಹೆಜ್ಜೆ ಗುರುತಗಳನ್ನೇ ಹಿಂಬಾಲಿಸಿದ್ದೇವೆ…’ ಎಂದೆಲ್ಲಾ ಇವರ ವಾದ. ಆಗಲೇ ಹಠಾತ್ತಾಗಿ ಅಮೇರಿಕಾದ ಮಾನ್ಯ ಅಧ್ಯಕ್ಷ ಟ್ರಂಪ್ ತನ್ನ ಓವಲ್ ಆಫೀಸಿನಲ್ಲಿ ಮತ್ತೆ ಚರ್ಚಿಲ್ ಪ್ರತಿಮೆಯನ್ನು ಪ್ರತಿಷ್ಠಾಪಿಸುತ್ತಾನೆ, “ನಾನು ಚರ್ಚಿಲ್ಲನ ನೆರಳೇ! ಗೋಡೆ ಕಟ್ಟುತ್ತೇನೆ, ವಲಸಿಗರ ಆಗಮನವನ್ನೇ ನಿರ್ಬಂಧಿಸುತ್ತೇನೆ, ಯಾರಿಗೂ ಹೆದರುವುದೇ ಇಲ್ಲ…” ಎನ್ನುವಂತೆ. ಇದೇ ಪ್ರತಿಮೆಯನ್ನು ಮಾಜಿ ಅಧ್ಯಕ್ಷ ಒಬಾಮ ಇಂಗ್ಲೆಡಿಗೆ ವಾಪಾಸ್ಸು ಕಳುಹಿಸಿದಾಗ ಈ ಚರ್ಚಿಲ್ ಭಕ್ತರೆಲ್ಲಾ, ಓಬಾಮ “ಇಸ್ಲಾಮಿಕ್ ಸ್ಟೇಟ್ಸ್‍ನ ಹುಟ್ಟಡಗಿಸಲು ಸೋತವನು, ಅದಕ್ಕೇ ತನ್ನ ಪುಕ್ಕಲುತನವನ್ನು ಮುಚ್ಚಲು ಹೀಗೆ ಮಾಡಿದ” ಎಂದರು. ಅಂದ ಹಾಗೆ ಈ ಪ್ರತಿಮೆಯನ್ನು ಆ ಕಾಲದ ಪ್ರಧಾನಿ ಟೋನಿ ಬ್ಲೇರ್, ಸದ್ದಾಂ ಹುಸೇನ್‍ನನ್ನು ಕೊಂದ ಖ್ಯಾತಿಯ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಆಳ್ವಿಕೆಯ ಅದೃಷ್ಟಕ್ಕೆಂದು ಕೊಟ್ಟ ಉಡುಗೊರೆ.  ಹೀಗೇ ಪವರ್ ಮತ್ತು ಪ್ರಭುತ್ವ, ಯಾರ ಮುಲಾಜೂ ಇಲ್ಲದೆ ತನ್ನ ವೈರಿಗಳನ್ನು ಮುಗಿಸುವ ಮಹಾನುಭಾವ ಚರ್ಚಿಲ್ ಹುಟ್ಟಿದ ನಾಡು ಬ್ರಿಟನ್ ಎಂದಿಗೂ ಸಲಗವೇ ಎಂದು ಸೂಕ್ಷ್ಮವಾಗಿ ಘೋಷಿಸುವ ಚಿತ್ರ ಈ ಡನ್‍ಕರ್ಕ್.

ಹಲವಾರು ಜನ ಹೇಳುತ್ತಾರೆ, ಇದು ವಾರ್ ಫಿಲ್ಮ್ ಅಲ್ಲ, ಸರ್ವೈವಲ್ಲ್ ಫಿಲ್ಮ್ ಎಂದು. ಚರ್ಚಿಲ್ಲ್ ಆಳುತ್ತಿದ್ದ   ಕಾಲದಲ್ಲಿ ಹೇಗೆ ತೀರ ಸಾಮಾನ್ಯರಾಗಿದ್ದ ಜನರೂ ಫ್ರೆಂಚ್ ಸಮುದ್ರದಂಡೆಯಲ್ಲಿ ಸಿಕ್ಕಿ ಬಿದ್ದಿದ್ದ ಬ್ರಿಟಿಷ್ ಸೈನಿಕರನ್ನು ಕಾಪಾಡಿದ ಧೈರ್ಯವಂತ ಜನರ ಚಿತ್ರವೆಂದು. ಆದರೆ 2010 ಕಳೆದ ನಂತರವೂ ಇನ್ನೂ ಎರಡನೆಯ ಮಹಾಯುದ್ಧದಲ್ಲಿ ಬ್ರಿಟನ್ನು ಅನುಭವಿಸಿದ ನೋವು, ಅನ್ಯಾಯವನ್ನು ಮತ್ತೆ-ಮತ್ತೆ ಅದೇ ದೃಷ್ಟಿಕೊನದಲ್ಲಿ ಕೊರೆದು ಅಕಾಡೆಮಿ ಅವಾರ್ಡ್ಸ್ ಗಮನ ಸೆಳೆಯಲು ಹವಣಿಸುವುದು, ದೊಡ್ಡ ಕುಂಡೆ ಚೇಷ್ಟೆಯಂತೆ!

ಈಗಾಗಲೇ ಬ್ರಿಟನ್ನಿನ ಪ್ರಾಬಲ್ಯವನ್ನು ಹೊಗಳಿ ಹಾಡಿ ಅಂಡು ಬಡಿದ ಜನಪ್ರಿಯ ನಿರ್ದೇಶಕರಂತೆ, ನೋಲನ್ ಸಾವಿರದೊಂದನೆಯ ಸಲ ಮತ್ತದೇ ಪೇಟ್ರಿಯಾರ್ಟಿಸಂ ರಾಗ ತೆಗೆಯುತ್ತಾನೆ. ಇದನ್ನು ಮುಚ್ಚಲು ಈತ, ಹೆಚ್ಚು ಸಂಭಾಷಣೆಯನ್ನೇ ಬಳಸದೇ, ಎಲ್ಲೂ ಬ್ರಿಟನ್ನಿನ ಕೆಚ್ಚಿನ ಬಗ್ಗೆ ಭಾಷಣ ಬಿಗಿಯದೇ, ಕೇವಲ ಪೇಲವ ಯೋಧರ ಮುಖಗಳ ಮುಖಾಂತರ, ಗುಪ್ತವಾಗಿ ಈ ಸಂದೇಶವನ್ನು ನಮಗೆ ದಾಟಿಸಲು ಹವಣಿಸುತ್ತಾನೆ. ಆದರೆ ಆಕಾಶದಲ್ಲಿ ಏಕಾಂಗಿಯಾಗಿ ಹಾರುತ್ತಾ, ಜರ್ಮನ್ ಜೆಟ್ ವಿಮಾನಗಳನ್ನು ಆಸ್ಪೋಟಿಸುತ್ತಿದ್ದ ವೀರ ಪೈಲಟ್ ಟಾಮ್ ಹಾರ್ಡಿ  ಕೊನೆಗೆ,   ಶತ್ರುಗಳ ಸೆರೆಯಾಗುವ ಮುನ್ನ ತನ್ನ ಜೆಟ್ಟಿಗೆ ಬೆಂಕಿ ಹಚ್ಚಿ ತಲೆ ಎತ್ತಿ ಅವರ ಆಗಮನವನ್ನೇ ಎದುರು ನೋಡುವಾಗ, ಕ್ಯಾಪ್ಟನ್ ಕೆನತ್ ಬ್ರಾಂಗ್, ಇಂಗ್ಲೀಷರೆಲ್ಲಾ ಇವ್ಯಾಕ್ಯುಯೇಟ್ ಆದ ಮೇಲೂ ‘ಫ್ರೆಂಚರೆಲ್ಲರೂ ಈ ದಡದಿಂದ ಸುರಕ್ಷಿತವಾಗಿ ಹೋಗುವವರೆಗೂ ನಾನಿಲ್ಲಿಯೇ ಇರುತ್ತೇನೆ…’ ಎನ್ನುವಾಗ, ಮಾರ್ಕ್ ರೈಲನ್ಸ್‍ನ ಪ್ಲೆಶರ್‍ಯಾಕ್ಟ್ನ ಒಳಗೆ ಅವನ ಸಂಬಂಧಿಯಾದ ಹದಿನಾಲ್ಕರ ಹುಡುಗ ಜಾರ್ಜ್, ಇನ್ನೊಬ್ಬ  ಎದೆಗುಂದಿದ ಸೋಲ್ಜರ್ನಿಂದ ಹತನಾದರೂ, ಆ ಶೋಕವನ್ನು ಬದಿಗೊತ್ತಿ, ದೇವರಂತೆ ನಗುತ್ತಾ, ಎಲ್ಲಾ ಸೈನಿಕರನ್ನು ಮರಳಿ ಮನೆಗೆ ನಿಯತ್ತಾಗಿ ಸಾಗಿಸುವಾಗ ಹಾಗೂ ಇನ್ನೂ ಇಂತಹ ಕೋಡೆಡ್ ದೃಶ್ಯಗಳಲೆಲ್ಲಾ ಬ್ರಿಟನ್ನಿನ ಸುಪ್ರಿಮೆಸಿ ಠಣ್ಣನೆ ತಲೆಗೆ ಹೊಡೆದಷ್ಟು ಢಾಳಾಗಿ ಕಣ್ಣು ಕುಕ್ಕುತ್ತದೆ.

 

ನನಗೆ ನಿರಾಶೆಯಾದದ್ದು, ನಿಸ್ತೇಜ ಭಯಗ್ರಸ್ಥ ಮೊರೆಗಳನ್ನು ತೋರಿಸುತ್ತಾ ಅವರನ್ನೆಲ್ಲಾ ಒಂದೆ ಬೊಂಬೆಯ ಸಾವಿರ ಬಿಂಬಗಳಾಗಿ ಸೆರೆ ಹಿಡಿದದ್ದು. ಅವರಲ್ಲಿರುವ ವಿಚಿತ್ರ ತೊಳಲಾಟಗಳನ್ನು ವಿಭಿನ್ನ ಭಾವೋದ್ವೇಗಗಳನ್ನು ಒಂದೇ ಒಂದು ದೃಶ್ಯದಲ್ಲಿ ಹೊರ ಹಾಕದೇ ಭಾವನಾತ್ಮಕವಾಗಿ ಟೊಳ್ಳು ದೃಶ್ಯಗಳ ತಣ್ಣಗಿನ ಕೊಲಾಜೊಂದನ್ನು ಈತ ಕಟ್ಟಿಕೊಟ್ಟದ್ದು. ಅಂದರೆ, ಬ್ರಿಟನ್ನನ ಮಹತ್ವವನ್ನೇ ಈ ಮನುಷ್ಯ ಸಾವಿರ ಸೈನಿಕರನ್ನು ಪಾರು ಮಾಡಿದ ಪ್ರಕ್ರಿಯೆಯ ಮುಖಾಂತರ ಸ್ತುತಿಸುವ ಭರದಲ್ಲಿ, ಆ ನರಕದಂತಹ ದಂಡೆಯಲ್ಲಿ ಸಾವಿನ ಭಯ ಮತ್ತು ಬದುಕಿನ ಅನಿಶ್ಚತೆಯ ನಡುವೆ ಸಿಕ್ಕಿ ಬಿದ್ದಿರುವ ವ್ಯಕ್ತಿಗಳ ತಲ್ಲಣವನ್ನೂ, ಇದ್ದಕ್ಕಿದ್ದಂತೆ ಎದುರಾದ ಈ ಸನ್ನಿವೇಶದಲ್ಲಿ ಇನ್ನೊಬ್ಬನನ್ನು ಸಿಡಿಸಿ ತಾನು ಬದುಕಲೇ ಬೇಕಾಗಿ ಬರುವ ಅನಿವಾರ್ಯ ಪರಿಸ್ಥಿತಿಯನ್ನೂ ಈತ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾನೆ(ಎಲ್ಲೋ ಇದು ನೆನಪದಾಂತೆ ಈತ, ಇದ್ದಕ್ಕಿದ್ದಂತೆ ಬೇಸತ್ತು ಸಮುದ್ರಕ್ಕೆ ನೆಗೆದು ಮುಳುಗುವ ಸೈನಿಕನ ದೃಶ್ಯವನ್ನು ತುರಿಕಿದ್ದಾನೆ; ಆದರೆ ಈ ಸೀನಿಗೂ ಮಿಕ್ಕಿದ ಚಿತ್ರಕ್ಕೂ ಯಾವ ಸಂಬಂಧವೂ ಕಾಣುವುದಿಲ್ಲ, ಅಷ್ಟು ಹಸಿಯಾಗಿದೆ ಆ ಆತ್ಮಹತ್ಯೆ!).  ಮುಕ್ತವಾಗಿದ್ದರೂ ಆಕಾಶವೇ ಎಂತಹ ಕ್ಲಾಸ್ಟ್ರೋಫೋಬಿಯಾವನ್ನು ಸೃಷ್ಟಿಸುತ್ತದೆ, ಎನ್ನುವುದು ನನ್ನನ್ನು ತಟ್ಟಿತು.

 

ಆದರೆ ಇದರ ಪೈಲೆಟ್ ಹಾರ್ಡಿ ಪಾತ್ರದಲ್ಲೂ ಈ ಪ್ರಕೃತಿಯ ಮಹಾವ್ಯಂಗವು ವ್ಯಕ್ತವಾಗುವುದೇ ಇಲ್ಲ. ಆತನೊಂದು ದೇಶಪ್ರೇಮದ ಯಂತ್ರದಂತೆ ಕಾಣುತ್ತಾನೆ. ತನ್ನ ಜತೆಗಾರ ಸಮುದ್ರಕ್ಕೆ ಅಪ್ಪಳಿಸುವಾಗಲೂ, ಸುಮಾರು ಜನ ನೀರಲ್ಲಿ ಮುಳುಗಿ ಸಾಯುವುದನ್ನು ಗಮನಿಸುವಾಗಲೂ, ಈತನ ಕಣ್ಣುಗಳು ಅದೊಂದು ಸಹಜವಾದ ಕ್ರಿಯೆಯೋನೋ ಎನ್ನುವಂತೆ ಮಿಂಚುತ್ತವೆ. ಈತ ಮಾಡುತ್ತಿರುವ ಕೆಲಸದ ಬಗ್ಗೆ ಈತನಿಗೆ ಚೂರೂ ಗೊಂದಲಗಳಿಲ್ಲ, ತನ್ನ ಜೀವ ಉಳಿಸಿಕೊಳ್ಳಬೇಕೆಂಬ ಆಕಾಂಕ್ಷೆಯೂ ಇಲ್ಲ. ಇಷ್ಟು ಸ್ಪಷ್ಟವಾಗಿ ವ್ಯಕ್ತವಾಗಿರುವ ಪಾತ್ರಗಳು ತೀರ ಸಪ್ಪೆ, ಏಕೆಂದರೆ ಆ ಪಾತ್ರಧಾರಿ ಯಾವಾಗ ಹೇಗೆಲ್ಲಾ ವರ್ತಿಸುತ್ತಾನೆಂದು ನಾವು ಮೊದಲೇ ಊಹಿಸಬಹುದು. ಆದರೆ ಪ್ರಕೃತಿಯ ಸೃಷ್ಟಿ ಅಷ್ಟೊಂದು ಸರಳವಾಗಿರುವುದಿಲ್ಲ. ಪ್ರಜ್ಞೆ ಇರುವ ನಿರ್ದೇಶಕ, ಆಳವಾದ ಸತ್ಯಗಳನ್ನು ಶೋಧಿಸುವಲ್ಲಿ ನಿರತನಾಗುತ್ತಾನೆ. ಟೆರೇಸ್ ಮೇಲಿಕ್‍ನ The thin red line  ಎಂಬ ಸಿನಿಮಾವೂ ಎರಡನೆಯ ಮಹಾಯುದ್ಧದ ಘೋರ ವಾಸ್ತವದಲ್ಲೇ ಬಿಡಿಸಿಕೊಳ್ಳುತ್ತದೆ. ಅಲ್ಲಿಯೂ ಕಗ್ಗಾಡೊಂದರಲ್ಲಿ ಮುಕ್ತಿಗೆಂದು ಕಾಯುತ್ತಿರುವ ಜೀವಗಳಿವೆ. ಇವರೂ ಸೈನಿಕರೇ. ಆದರೆ ಒಬ್ಬರೊಬ್ಬರದ್ದೂ ಒಂದೊಂದು ತರಹದ ಭಯಗಳು ಮತ್ತು ಕಲ್ಪನೆಗಳು. ಅಲ್ಲೊಬ್ಬ ಹೋಮರ್‍ನ ಕಾವ್ಯದಿಂದ ಪ್ರಭಾವಿತನಾದ ಕರ್ನಲ್ ಜೀವಂತವಾಗಿರುವಾಗ ಅಂತಹ ಯುದ್ಧದಲ್ಲಿ ಭಾಗವಹಿಸಲೇ ಬೇಕೆಂಬ ಹಠಕ್ಕೆ ಬಿದ್ದು, ಬೇಕಾದರೆ ತನ್ನ ಬೆಟಾಲಿಯನ್ನಿನ ಹುಡುಗರನ್ನೇ ಶತ್ರುಗಳ ಗನ್ನುಗಳಿಗೆ ಬಲಿಯೊಡ್ಡಲು ಸಿದ್ಧನಿದ್ದಾನೆ. ಆದರೆ ಒಂದು ಕಡೆಯಿಂದ ಅವನಿಗೆ ವಯಸ್ಸಾಗುತ್ತಿದೆ, ಯುದ್ಧವನ್ನು ಸವಿಯುವ ಮುನ್ನವೇ ತಾನು ಪ್ರಾಣ ಬಿಟ್ಟರೆ ಎಂಬ ಭಯ. ಇನ್ನೊಬ್ಬ ಕರ್ನಲ್ ಈ ವ್ಯಕ್ತಿಗೆ ತದ್ವಿರುದ್ಧ; ಕೂದೆಲೆಳೆಯಲ್ಲಿ ಬಚಾವಾಗುತ್ತಿದ್ದ ಹಾಗೆಯೇ ಇವನ ಬಳಗವನ್ನೇ ಸಂಪೂರ್ಣವಾಗಿ ಅನಾಥ ಮಾಡಿ ಮನೆ ಕಡೆ ಹಾರುತ್ತಾನೆ, ಆ ಗವ್ವೆನ್ನುವ ಕಾಡಿಂದ. ಯಾರೂ ಅವನನ್ನು ಹೀಯಾಳುಸುವುದಿಲ್ಲ, ಹೇಡಿ ಎನ್ನುವುದಿಲ್ಲ. ಇನ್ನೇನು ಒಂದು ಯುದ್ಧ ಮುಗೀತು ಎನ್ನುವಾಗ, ಹೊಸ ಜರ್ನಲ್ ಬರುತ್ತಾನೆ, ಹೊಸ ಹುರುಪಿನ ಮಾತನಾಡುತ್ತಾನೆ. ಕಷ್ಟಕ್ಕೆ ಬಿದ್ದು ಬಚಾವಾಗಿದ್ದ ಯೋಧರೀಗ ಮತ್ತೆ ಮೊದಲಿದ್ದ ಅದೇ ಹಳೆಯ ಭಯಂಕರ, ಅಪಾಯಕಾರಿ ಅನುಭವಗಳನ್ನು ಪುನರ್‍ಜೀವಿಸಲೇಬೇಕು, ಅದೇ ಅವರ ಕರ್ಮ. ಇಲ್ಲಿ ನೋಲನ್ ಸಿನಿಮಾದಲ್ಲಿ ಕಾಣುವ ಒಂದೇ ಒಂದು ಪದರವಿರುವ ಹುತಾತ್ಮ ಹಾರ್ಡಿಗಳಿಲ್ಲ. ಬದಲಾಗಿ ಯುದ್ಧಕ್ಕೆ ಹೆದರಿ ಹೋದ, ದಣಿದ ವ್ಯಕ್ತಿಗಳಿದ್ದಾರೆ. ಇವರಿಗೆ ತಾವು ಯಾವ ಪುರುಷಾರ್ಥಕ್ಕೋಸ್ಕರ ಇಲ್ಲಿ ಪರದಾಡುತ್ತಿದ್ದೇವೆಂಬ ಅರಿವಿಲ್ಲ; ಅವರ ಕ್ರಿಯೆಗಳಲ್ಲಿ ನಿರಾಸೆಯ ಕಾರ್ಮೋಡವಿದೆ, ಆದರೆ ವೀರಾವೇಶ ದೇಶಪ್ರೇಮದ ಉತ್ಪ್ರೇಕ್ಷೆಯಿಲ್ಲ. ಈ ಚಿತ್ರ ಆರಂಭವಾಗುವುದೇ ರಾತ್ರಿಯ ಕಪ್ಪು ಅರಣ್ಯದಲ್ಲಿ ನಿಶಾವರಿಯಂತೆ ಮೊಸಳೆಯೊಂದು ನದಿಗೆ ಇಳಿಯುವಾಗ. ಅದೊಂದು ಕೊಲ್ಲುವ ಯಂತ್ರವೇ, ಆದರೆ ಅದು ಕೊಲ್ಲುವಾಗಲೂ ಮುಗ್ಧ. ಆದರೆ ಮೇಲಿನವರ ಅಧಿಕಾರ ವಾಣಿಗೆ ತಕ್ಕಂತೆ ವಧಿಸುವ ಸೋಲ್ಜರ್‍ಗಳೆಂಬ ಕೃತ್ರಿಮ ಕೊಲ್ಲುವ ಯಂತ್ರಗಳ ಪಾಡು ಎಂತದ್ದು? ಈ ಜಿಜ್ಞಾಸೆಯನ್ನು ಮ್ಯಾಲೀಕ್ ಎತ್ತುತ್ತಾನೆ. ಇವರು ಜಪಾನಿಸ್ ಶತ್ರುಗಳನ್ನು ಹೊಂಚು ಹಾಕಿ ಹೊಡೆಯುವ ಕಾಡು ಎಷ್ಟು ರುದ್ರವಾಗಿದ್ದರೂ ಅಷ್ಟೇ ನಿರ್ಲಿಪ್ತ. ಇಲ್ಲಿ ಎದೆಯೆತ್ತರಕ್ಕೆ ಬೆಳೆದಿರುವ ಹುಲ್ಲಿನ ನಡುವೆ ಸರೀಸೃಪದಂತೆ   ಓರ್ವ ಯೋಧ ತೆವಳುತ್ತಿರುವಾಗ ಒಂದು ಮಂಡಲದ ಹಾವು ಅವನಿಗೆ ಎದುರಾಗುತ್ತದೆ, ಹಿಸ್ಸೆನ್ನುತ್ತದೆ. ಮತ್ತದೇ ಅಸ್ತಿತ್ವದ ಪ್ರಶ್ನೆ, ವಿಕಾಸವಾದ ಮೇಲೆ ಮಾನವ ಮತ್ತೆ ಅಸಂಗತ ಆದರ್ಶಗಳಿಗೆ ಶರಣಾಗಿ ಮತ್ತೆ ಮತ್ತೆ ಹಿನ್ನಡೆಯುತ್ತಿದ್ದಾನೆ ಎನ್ನುವಂತೆ.   ಪ್ರಕೃತಿಯ ಹೃದಯ ಎಷ್ಟೊಂದು ನಿಗೂಢವೆನಿಸುವುದು ನಮಗೆ ಈ ಸಂಧರ್ಭದಲ್ಲೇ, ಎಲ್ಲವನ್ನೂ ನಿರ್ಮಿಸಿದ ಸೃಷ್ಟಿ, ನೀತಿ ಮತ್ತು ಕೇಡು ಇವರೆಡರ ಸರಹದ್ದನ್ನು ದಾಟಿದ ಸ್ಥಿತಿಯಿದು.

ನೀವೇನಾದರು ಸೇವಿಂಗ್ ಪ್ರೈವೇಟ್ ರೈನ್ ವೀಕ್ಷಿಸಿದ್ದರೆ, ಅದರ ಮೊದಲ ಸೀನಿನಲ್ಲೇ ನೀವು ಯುದ್ಧದ ತೀವ್ರತೆಯನ್ನೂ ರೌದ್ರತೆಯನ್ನೂ ಮುಟ್ಟಿರುತ್ತೀರಿ. ಕ್ಯಾಪ್ಟನ್ ಟಾಮ್ ಹ್ಯಾಂಕ್ಸ್ ಎಷ್ಟೇ ಸ್ಥಿತ ಪ್ರಜ್ಞನಾಗಿದ್ದರೂ, ಅವನಿದ್ದ ಬೋಟು ರಣಭೂಮಿಗೆ ಹತ್ತಿರದಾಂತೆಲ್ಲಾ ಅವನ ಒಂದು ಕೈ ನಡುಗುತ್ತಿರುತ್ತದೆ. ಓಮಾಹ ಬೀಚ್‍ನಲ್ಲಿ    ಒದ್ದೆಯಾಗದೇ ಇರಲಿ ಎಂದು ಪ್ಲಾಸ್ಟಿಕ್ನಲ್ಲಿ ಸುತ್ತಿದ ಮಷಿನ್ನ್ ಗನ್ನುಗಳನ್ನು ಹಿಡಿದು ಧುಮುಕುವಷ್ಟರಲ್ಲೇ ಬಹಳಷ್ಟು ಸೈನಿಕರು ಗುಂಡುಗಳ ಅಕ್ಷರಶಃ ಮಳೆಯಲ್ಲಿ ನಾಶವಾಗಿರುತ್ತಾರೆ. ಬರೀ ರಕ್ತ ವಾಂತಿ ಭಯ; ಒಂದುಕ್ಷಣ ಕೆಪ್ಪನಂತೆ ಕೂತ ಟಾಮ್ ಹ್ಯಾಂಕ್ಸ್‍ಗೆ ಕ್ಷಣದಲ್ಲಿ ಈ ಯುದ್ಧ ಇಷ್ಟೊಂದು ಅಸಂಗತ ಮತ್ತು ಭೀಭತ್ಸ ಎನಿಸುವುದನ್ನು ಸ್ಟಿವ್ ಬರ್ಗ್ ಶಬ್ದಗಳ ಹಂಗಿಗೆ ಬೀಳದ ಸೆರೆಹಿಡಿಯುತ್ತಾನೆ. ಜೀವಂತವಾಗಿ ಉರಿದುಹೋಗುತ್ತಿರುವ ದೇಹಗಳು, ತನ್ನ ಚಿಂದಿಯಾಗಿದ್ದ ಇನ್ನೊಂದು ಕೈಯನ್ನು ಹುಡುಕುತ್ತಾ ಅಡ್ಡಾಡುವ ಒಬ್ಬ ಪ್ರೈವೇಟ್, ಈ ನರಕ ಸಮುದ್ರ ದಂಡೆಯಲ್ಲಿ ನಾಯಕನೇ ಇಲ್ಲದೆ  ಚೆಲ್ಲಾಪಿಲ್ಲಿಯಾಗಿ ಸಾಯುತ್ತಿರುವ ಮೂಕ ಸೈನಿಕರು, ಇಷ್ಟು ವಿಕಾರವಾಗಿ ಈ ಚಿತ್ರ ಆರಂಭವಾದರೂ, ಇದರ ಆತ್ಮ ಹುಡುಕುವುದು ವ್ಯಕ್ತಿಯ ಅಸ್ತಿತ್ವದ ಸಹಜತೆ ಮತ್ತು ಪ್ರಾಮುಖ್ಯತೆಯನ್ನು… ಪ್ರೈವೇಟ್ ರಾಯನ್‍ನ ಸಹೋದರರೆಲ್ಲಾ ಯುದ್ಧದಲ್ಲಿ ಸತ್ತಿದ್ದಾರೆ. ಈ ಉಳಿದ ಒಬ್ಬನನ್ನಾದರೂ ಮತ್ತೆ ಮನೆಗೆ ತಲುಪಿಸೋ ಆಸೆ ಓರ್ವ ಜನರಲಿನದ್ದು. ಅದಕ್ಕೇ ಹಿಂದೆ ಸಿವಿಲ್‍ವಾರ್ ಆದಾಗ ಲಿಂಕನ್ ಹೀಗೆ ನೋವಲ್ಲಿ ಎಲ್ಲವನ್ನೂ ಕಳೆದುಕೊಂಡ ಫ್ಯಾಮಿಲಿಗೆ ಬರೆದ ಪತ್ರವೇ ಅವನಿಗೆ ಸ್ಫೂರ್ತಿ. ಟಾಮ್ ಹ್ಯಾಂಕ್ಸ್‍ನ ಬೆಟಾಲಿಯನ್‍ಗೆ ಈ ಹುಡುಗನನ್ನು ಹುಡುಕಿ ವಾಪಸ್ಸು ಕರೆತರುವ ಕೆಲಸ! ಎಲ್ಲೋ ಆರಾಮದಲ್ಲಿ ಕೂತು, ಯಾವುದೋ ಸಿದ್ಧಾಂತಕ್ಕೆ ಕಟ್ಟು ಬಿದ್ದು ಫೀಲ್ಡಿನಲ್ಲಿ ಹೋರಾಡಿ ಸಾಯುವ, ಅಸಲಿ   ಯೋಧರಿಗೆ ಹೀಗೆ ಅಸಂಭವ ಮಿಷನ್ ಕಟ್ಟುವ ಜನರೆಲ್‍ಗಳನ್ನು ನಾವಿಲ್ಲಿ ನೋಡುತ್ತೇವೆ. ಈ ಆದೇಶವನ್ನು ಪಾಲಿಸಲು, ಸೂಜಿಗಳ ದೊಡ್ಡ ರಾಶಿಯಲ್ಲಿ ಸೂಜಿಯನ್ನು ತಡಕಾಡುವಂತೆ ಈ ರಾಯನ್ನನನ್ನು ಅನ್ವೇಷಿಸುತ್ತಾ ಕೋಪದಲ್ಲಿ, ನಿರಾಸೆಯಲ್ಲಿ ಅಲೆಯುವ ಬೆಟಾಲಿಯನ್ ಮಂದಿಗೆ, ಹಠಾತ್ತಾಗಿ ದಾರಿಯಲ್ಲಿ ಎದುರಾಗುವ ಇನ್ನೊಂದು ಜರ್ಮನ್ ತುಕುಡಿಯನ್ನು ಮುಗಿಸಿ ಮುಂದೆ ಸಾಗುವುದೇ ದಂಗೆ. ಏಕೆಂದರೆ ತಮ್ಮ ಆಕ್ರೋಶವನ್ನು ಅವರು ತೋರಿಸುವ ಬಗೆಯೇ ಹಾಗೇ. ಇದು ಸಹಾ ಖಂಡಿತಾ ದೇಶ ಪ್ರೇಮವಲ್ಲ, ಬದಲಾಗಿ ತಮ್ಮನ್ನು ಇಷ್ಟು ತುಚ್ಛವಾಗಿ ಗೇಯಿಸುತ್ತಿರುವ ಪವರ್ ಇರುವ ಯಜಮಾನರ ವಿರುದ್ಧ ಇರುವ ರೊಚ್ಚಿನ ಅಭಿವ್ಯಕ್ತಿ ಅಷ್ಟೇ. ಹಾಗಾಗಿ ಇವರ ಮೇಲೆ ಹೇರಲಾಗಿದ್ದ ನಿಯಮವನ್ನು ಉಲ್ಲಂಘಿಸಿ, ಈ ಜನ ತಮ್ಮ ಸವಲತ್ತಾದ ಕೊಲ್ಲುವ ಹಕ್ಕು ಕೊಡುವ  ಮಜ ಅನುಭವಿಸುತ್ತಾರೆ. ಕೊನೆಗೆ ರಾಯನ್ ಸಿಕ್ಕುತ್ತಾನೆ. ಅವನನ್ನು ಉಳಿಸಲು ಬಂದವರೆಲ್ಲಾ ಸಾಯುತ್ತಾರೆ. ಒಂದು ಜೀವಕ್ಕಾಗಿ ಇಷ್ಟು ಜೀವಗಳು ಇಲ್ಲವಾಗ ಬೇಕೆ? ಆದರೆ ಈಗ ರಾಯನ್ ಮುದುಕ; ಅವನಿಗೆ ಮೊಮ್ಮಕ್ಕಳು, ಮರಿ ಮಕ್ಕಳಿದ್ದಾರೆ. ಆ ಹೆಣಗಳ ಗೋರಿಯ ಮೇಲೆ ಅವನ ವಂಶ ನಿಂತಿದೆ. ಇದು ಸರಿಯೇ ತಪ್ಪೇ? ಈ ಸಿನಿಮಾ ಯಾವ ಘನಂದಾರಿ ಆದರ್ಶಗಳನ್ನೂ, ಆ ದೇಶದ ಬೆನ್ನಿಗೆ ಹೊಲೆದು ವಿಜೃಂಭಿಸುವುದಿಲ್ಲ. ಉಳಿವಿಗಾಗಿ ನಡೆಯುವ ಹೋರಾಟದ ದರ್ಶನವಿದೆ ಇಲ್ಲಿ ಅಷ್ಟೇ.  ಈ ಹೋರಾಟವೇ Thou Shall not Kill ಎನ್ನುವ ಎಲ್ಲರೂ ಒಪ್ಪಿರುವ ದೈವ ವಾಣಿಯ ದಟ್ಟ ಆದರ್ಶದ ಮತ್ತು ಮನುಷ್ಯನ ಆಂತರ್ಯದ ನಡುವಿನ ಘರ್ಷಣೆ. ಈ ಸಿದ್ಧಾಂತವನ್ನು  ನೀವು ಒಪ್ಪಿಕೊಂಡ ಮೇಲೆ, ಯಾವ ಕಾರಣಕ್ಕೂ ನೀವು ಕೊಲ್ಲಬಾರದು ತಾನೇ? ಆದರೆ ಒಮ್ಮೆ ಕೊಲೆಯನ್ನು ಅಪರಾಧ ಎಂದೂ, ಒಮ್ಮೆ ಅದೇ ಮಹಾ ದೇಶಪ್ರೇಮವೆಂದು ಎಲ್ಲ ಯುದ್ಧಗಳನ್ನು ನಿಲ್ಲಿಸಲು ಮಹಾಯುದ್ಧಗಳಿಗೆ ಕುಮ್ಮಕ್ಕು ಕೊಡುವ,  ಕೊಡುವ, ಸೋ ಕಾಲ್ಡ್ ಧರ್ಮ ಸಮ್ಮತವಾದ ದೇಶಗಳು ಇತ್ತ ಸಾವಿರಾರು ಆತ್ಮಗಳನ್ನು ನಾಶಮಾಡಲು ಆಜ್ಞಾಪಿಸಿ, ಅತ್ತ ಒಬ್ಬನನ್ನು ಬದುಕಿಸಿ ತನ್ನಿ ಎನ್ನುವ ಹುಳುಕು, ದೇಶಾವರಿ ಲಕ್ಷ್ಯಗಳನ್ನು ಈ ಚಿತ್ರ ಜಾಸ್ತಿ ಸದ್ದು ಮಾಡದೆ ಕೆತ್ತುತ್ತದೆ.

ಚಿತ್ರದ ನಿರ್ದೇಶಕ ಕ್ರಿಷ್ಟೋಫರ್ ನೋಲಾನ್

 

ಇಷ್ಟೆಲ್ಲಾ ಹೇಳಬೇಕಾಗಿ ಬಂದದ್ದು ಏಕೆಂದರೆ ನೊಲನ್ ಹೇಳಿ-ಕೇಳಿ ಚಾಲ್ತಿಯಲ್ಲಿರುವ ನಿರ್ದೇಶಕ. ಆದರೆ ಮತ್ತೆ-ಮತ್ತೆ ಕಪ್ಪು-ಬಿಳುಪಿನಲ್ಲಿ ಮಹಾಯುದ್ಧವನ್ನು ಮುಳುಗಿಸುವುದು ಹಾಗೂ ಸಮಯದ ಸಾಪೇಕ್ಷತೆಯನ್ನು ಕರಾರುವಕ್ಕಾಗಿ ಹೇಳಲು, ಸರಳವಾಗಿ ಹೇಳಬಹುದಾದ ಕಥೆಯನ್ನು ಬಲವಂತವಾಗಿ, ನಾನ್-ಲೀನಿಯರ್ ಶೈಲಿಯಲ್ಲಿ, ಹಿಂದಕ್ಕೂ-ಮುಂದಕ್ಕೂ ಅನಗತ್ಯವಾಗಿ ಹೆಣೆದು, ಗಿಮಿಕ್ಕ್ ಮಾಡುವುದರಿಂದ ಈ ಚಿತ್ರ ಎಲ್ಲಿಗೂ ಸಲ್ಲುವುದಿಲ್ಲ. ನಮ್ಮ ದೇಶದ ಕೆಲ ಬುದ್ಧಿವಂತ ವಿಮರ್ಶಕರು ಈತನು ಈ ಚಿತ್ರದಲ್ಲಿ ಕಾಲವನ್ನು ಬೇರೇ ಬೇರೇ ಮೂರು ಆಯಾಮದಲ್ಲಿ ಹಿಡಿದಿಟ್ಟಿರುವುದನ್ನು ನೋಡಿ ಥ್ರಿಲ್ ಆದ ಹಾಗಿದೆ. ಏಕೆಂದರೆ ಈ ಶೈಲಿಯ ನಿರೂಪಣೆಯನ್ನೇ ಅವರು ತುಂಬಾ ಮೆಚ್ಚಿದಂತೆ ಕಾಣುತ್ತಿದೆ. ಸಮಯವೇ ಒಂದು ವಿಸ್ಮಯ ಬಿಡಿ. ಓರ್ವ ವ್ಯಕ್ತಿಗೆ ಇದು ಒಂದೇ ವೇಗದಲ್ಲಿ, ಒಂದೇ ದಿಕ್ಕಿನಲ್ಲಿ, ನೆಟ್ಟಗೆ ಸಾಗುವ ಬಾಣ. ಆದರೆ ನೀವು ಸ್ವಲ್ಪ ಎತ್ತರದ ಜಾಗಕ್ಕೆ ಬಂದರೆ, ಆಗ ಹಲವಾರು ಘಟನೆಗಳೂ, ಹಲವಾರು ಆಕಸ್ಮಿಕಗಳು ಏಕಕಾಲಕ್ಕೆ ಸಂಭವಿಸುತ್ತಿರುವ ಅರಿವಾಗುತ್ತದೆ. ಒಬ್ಬ ನಿರ್ದೇಶಕನಾಗಿ ಈ ಸಮಯದ ಅನೇಕ ಮಗ್ಗುಲನ್ನು ಈ ಕಾಲಮಾನದಲ್ಲಿ ಬೆರುಗು ಮೂಡಿಸುವಷ್ಟು ಚೆಂದಕ್ಕೆ  ಹೆಣೆಯುವ ಮನುಷ್ಯ ಕ್ವೆಂಟಿನ್ ಟ್ಯಾರಂಟೀನೋ. ಇವನ ರಂಗು-ರಂಗಿನ ಪಲ್ಪೀ ಚಿತ್ರ ‘ಇನ್‍ಗ್ಲೋರಿಯಸ್ ಬಾಸ್ಟರ್ಡ್ಸ್’ ಅನ್ನೇ ನೋಡಿ. ಎರಡೂ ದೃಷ್ಟಿ ಕೋನದಲ್ಲಿ ಬಂಧಿಯಾಗಿರುವ ಒಂದು ಸತ್ಯವಿದೆ ಇಲ್ಲಿ. ಅವಳು ಜ್ಯೂ ಹೆಣ್ಣು ಮಗಳು. ತನ್ನ ಕುಟುಂಬವನ್ನೇ ನಾಶ ಮಾಡಿದ ನಾಝಿಗಳನ್ನು ಉರಿಸುವುದು ಅವಳ ಗುರಿ. ಅದಕ್ಕೇ ಕಾಯುತ್ತಿದ್ದಾಳೆ, ಗುಟ್ಟಾಗಿ, ತನ್ನದೇ ಒಂದು ಸಿನಿಮಾ ಮಂದಿರವನ್ನು ನಡೆಸುತ್ತಾ, ಹೊಂಚು ಹಾಕುತ್ತಿದ್ದಾಳೆ. ಅವನೊಬ್ಬ ವೀರ ನಾಝಿ; ಒಮ್ಮೆ ಸೈನ್ಪರ್ ಎತ್ತಿ ಅದೆಷ್ಟೋ ಶತ್ರುಗಳನ್ನು ಕೊಂದವ. ಹಿಟ್ಲರ್ ಕೂಡ ಅವನನ್ನು ಮೆಚ್ಚಿ, ಈ ವೀರ ಗುರಿಕಾರನೇ ನಟಿಸಿರುವ ಚಿತ್ರವನ್ನು ನೋಡಲು ಖುದ್ದಾಗಿ ಬರುತ್ತಿದ್ದಾನೆ. ಆದರೆ ಈ ನಾಝಿ ಓರ್ವ ಪ್ರೇಮಿ, ಆ ಹೆಣ್ಣೊಂದು ಜ್ಯೂ ಸೇಡಿನ ಹಕ್ಕಿ ಎಂದು ಗೊತ್ತಿಲ್ಲದೆ ಅತಿಯಾಗಿ ಅವಳನ್ನು ಪ್ರೀತಿಸಿದ್ದಾನೆ. ನೋಡುಗ ಅವಳ ಹತಾಶೆ ಮತ್ತು ಸೇಡಿನ ಕಿಚ್ಚನ್ನೂ ಅರಿತಿದ್ದಾನೆ, ಹಾಗೇಯೇ ಈ ವ್ಯಕ್ತಿಯ ಕ್ರೌರ್ಯ ಮತ್ತು ಪ್ರೇಮದ ನೆರಳುಗಳನ್ನೂ ಬಲ್ಲವಾಗಿದ್ದಾನೆ. ಅದಕ್ಕೇ ಅಂತಿಮ ದೃಶ್ಯದಲ್ಲಿ ಅವಳು ಈ ಪ್ರೇಮಿ ನಾಝಿಯನ್ನು ದಾಳದಂತೆ ಉಪಯೋಗಿಸಿ ಹಿಟ್ಲರನನ್ನು ತನ್ನದೇ ಥಿಯೇಟರನಲ್ಲಿ ಉಡಾಯಿಸಲು ಹವಣಿಸುವುದು, ಇದಕ್ಕೆ ಅವನು ಅಡ್ಡ ಬಂದಾನೆಂದು ಹೆದರಿ ಆಕೆ ಅವನನ್ನೇ ಮುಗಿಸುವುದು, ಅವನೂ ಆ ಹೆಣ್ಣನ್ನು ಶೂಟ್ ಮಾಡುವುದು. ಇವೆಲ್ಲ ದೃಶ್ಯಗಳು ಪ್ರೇಕ್ಷಕರಿಗೆ ಎರಡು ಧೃವಗಳ ಪರಿಭ್ರಮಣೆಯನ್ನು ಮತ್ತು ಅವರವರು ಸಂಶೋಧಿಸಿಕೊಂಡ ಸತ್ಯವನ್ನೂ, ಹೀಗೇ ಇತಿಹಾಸ ಕಾಣದಿದ್ದ ಬೆಳಕನ್ನೂ ಕಾಣಿಸುತ್ತವೆ. ಆದರೆ ನೋಲನ್ ಮೂರೂ ಆಯಾಮಗಳಲ್ಲೂ ಅದೇ ಬ್ರಿಟಿಷ್ ಅನುಭವ ಮತ್ತು ಆಗ ಹೇಳಿದ ಬ್ರಿಟಿಷ್ ಶ್ರೇಷ್ಠತೆಯನ್ನೇ ಹೇಳಿದ್ದಾನೆ. ಇದೇ ಸಂಧರ್ಭದಲ್ಲಿ ಜರ್ಮನ್ನಿನ ಯೋಧರ ಮನಸ್ಸಿನಲ್ಲಿ ಏನಾಗುತಿತ್ತು ಎನ್ನುವುದು ವೀಕ್ಷಕನಿಗೆ ತಿಳಿಯುವುದೇ ಇಲ್ಲ. ನಾನ್ ಲೀನಿಯರ್ ನಿರೂಪಣೆ ಕೊಡುವ ಅತಿ ದೊಡ್ಡ ಸೌಲಭ್ಯಗಳೇ ಈ ಬಗೆ-ಬಗೆ ಅನುಭವಗಳ ರುಚಿಗಳು. ನೋಲನ್ ವಿಭಿನ್ನ ಧ್ವನಿಗಳನ್ನೇ ಸಂಪೂರ್ಣವಾಗಿ ನಿರ್ಲಕ್ಷಿಸಿ, ಒಂದೇ ರಾಗವನ್ನು ಮೂರು ಸ್ವರಗಳಲ್ಲಿ ಹಾಡಿಸಿದ್ದಾನೆ.

ಡನ್ ಕರ್ಕ್ ಚಿತ್ರದ ದೃಶ್ಯ

ದುಃಖದ ಸಂಗತಿಯೆಂದರೆ    ಎಲ್ಲ ಆಗಿ ಈ ಚಿತ್ರದಲ್ಲಿ ಯೋಧರು ಮರಳಿದಾಗ ಮತ್ತೆ ಅವರನ್ನು ಬಿಯರ್ಸ್ ಬಾಟಲಿಗಳನ್ನು ಹಿಡಿದು ಚಪ್ಪಾಳೆ ಹೊಡೆದು ಸ್ವಾಗತಿಸುವ ಊರ ಜನರ ಸಂತಸ ತುಂಬಿದ ಮುಖಗಳ ಮೂಲಕ, ಈ ಯುದ್ಧದ ಸಾರ್ಥಕತೆಯನ್ನು ನಿರೂಪಿಸುವುದು ಅಸಹ್ಯ ತರಿಸುತ್ತದೆ. ಆಲಿವರ್ ಸ್ಟೋನ್‍ನ ‘ಬಾರ್ನ್ ಆನ್ ಪೋರ್ಥ್ ಆಫ್ ಜುಲೈ’ ಚಿತ್ರದ ಒಂದು ದೃಶ್ಯದಲ್ಲಿ ವಿಯೇಟ್ನಾಂ ಯುದ್ಧದಿಂದ, ಚಿಂದಿಯಾಗಿ, ದೇಹದ ಮೇಲೆ ಸ್ವಾಧೀನವನ್ನೇ ಕಳೆದುಕೊಂಡು, ಬರುವ ಟಾಮ್ ಕ್ರೂಸಿಗೆ ರಾಜ ವೈಭೋಗವನ್ನು ನೆನಪಿಸುವ ಸ್ವಾಗತ ಸಿಗುತ್ತದೆ. ಅವನೊಬ್ಬ ವೀರನೆಂಬಂತೆ, ಮಕ್ಕಳೆಲ್ಲಾ ಮಂದಹಾಸ ಬೀರುತ್ತಾ ದೇಶದ ಧ್ವಜ ಹಿಡಿದು ಪಟಾಕಿ ಸಿಡಿಸಿ ಖುಷಿ ಪಡುವಾಗ, ಆ ಭಯಂಕರ ಕಾಡಿನ, ನರಕ ಕಾದಾಟದ ಹ್ಯಾಂಗ್‍ಓವರ್‍ನಿಂದ ಹೊರ ಬರಲಾಗದೇ, ಮನೆಗೆ ಬಂದರೂ ಆ ಯುದ್ಧದ ಅರಣ್ಯದಲ್ಲೇ ಹಾದಿ ತಪ್ಪಿರುವ ಆತ್ಮದ ಭಾರವನ್ನು ಹೊತ್ತ ಈತನಿಗೆ, ಸಂಭ್ರಮದ ಪಟಾಕಿಗಳು, ಬಂದೂಕಿನ ಗುಂಡುಗಳಂತೆ, ತಲ್ಲಣಿಸುವ ಶಬ್ಧ! ಯುದ್ಧವೆನ್ನುವುದು ಮನುಷ್ಯನ ಮನಸ್ಸನ್ನು ಅಷ್ಟು ಆಳವಾಗಿ ಕೊರೆಯಬಲ್ಲದು. ಡನ್‍ಕ್ರಿಕ್‍ನಲ್ಲಿ ಈ ಯಾವ ಸೂಕ್ಷ್ಮತೆಯ ದರ್ಶನವೂ ಸಿಗುವುದಿಲ್ಲ. ಅಂತೂ ಇಂತೂ ಸರ್ವೈವ್ ಆಗಿ ಬಂದ ಯೋಧನೊಬ್ಬ ಯಾವ ಮಾನಸಿಕ ತುಮುಲಗಳಿಲ್ಲದೆ ಹಾಗೇ ರೈಲಿನಲ್ಲಿ  ಮಲಗುತ್ತಾನೆ. ಪೊಣ್ಣಪ್ಪ ಹೋಟೇಲಿನಲ್ಲಿ ದೋಸೆ ತಿಂದು ಮಲಗಿದಂತೆ, ಬಚಾವಾದ ಯೋಧ ಒಂದು ಬೋಗಿಯಲ್ಲಿ ಅಷ್ಟು ನೆಮ್ಮದಿಯಲ್ಲಿ ನಿದ್ದೆ ಹೋಗುವುದು, ಬಾಲಿಶ. ದೇಹಕ್ಕೆ ಬಿಡುಗಡೇ ಸಿಕ್ಕರೂ, ಮನುಷ್ಯರೆಲ್ಲರ ಮನಸ್ಸುಗಳು ಜಾಗ ಹುಡುಕುವುದು ಭೂತ ಕಾಲದ ಕನವರಿಕೆಗಳಲ್ಲೇ. ಅದೂ ಅಂತಹ ಜೀವನ್ಮರಣ ಹೋರಾಟದಿಂದ ಪಲಾಯನಗೈದು ಬರುವಾಗ ಈ ಮನಸ್ಸಿಗೆ ಸಮಾಧಾನ ಅಷ್ಟು ಕ್ಷಿಪ್ರವಾಗಿ ದಕ್ಕುವುದಿಲ್ಲ. ರೊಮಾನ್ ಪೊಲಾನ್ಸಿಕಿಯ ‘ಪಿಯಾನಿಶ್ಟ್’ ಚಿತ್ರದಲ್ಲಿ ಒಂದು ಕಡೆ, ಜೀವಕ್ಕಾಗಿ  ತಲೆ ಮರೆಸಿಕೊಂಡು, ಕಂಡ-ಕಂಡ ಕಡೆಯೆಲ್ಲ ಅಲೆದಾಡುತ್ತಿದ್ದ ಜ್ಯೂ ಪಿಯಾನಿಶ್ಟ್  ಯಾವುದೋ ಪಾಳು ಬಂಗಲೆಯಲ್ಲಿ ಅವಿತಿರುತ್ತಾನೆ.  ಒಂದು ಕೋಣೆಯಲ್ಲಿ ಅನಾಥವಾಗಿ ಧೂಳು ತಿನ್ನಿತ್ತಿರುವ ಪಿಯಾನೋ ಈತನ ಆತ್ಮವನ್ನೇ ತಟ್ಟುತ್ತದೆ. ಏನು ಮಾಡುವುದು? ಹೊರಗೆಲ್ಲ, ನಾಝಿಗಳು ಕತ್ತೆ ಕಿರುಬಗಳಂತೆ ಅಡ್ಡಾಡುತ್ತಿದ್ದಾರೆ. ಹಾಗೆಂದು ಪಿಯಾನೋವಿಂದ ದೂರ ಹೋಗಲು ಒಳಗಿರುವ ಕ್ರಿಯಾಶೀಲತೆ ಕೇಳುತ್ತಿಲ್ಲ. ವಿಧಿಯೇ ಇಲ್ಲದೇ ಆತ, ಅದರ ಕಪ್ಪು-ಬಿಳಿಪು ಪದರಗಳ ಮೇಲಿರುವ ಖಾಲಿ ಅವಕಾಶದಲ್ಲೇ ಬೆರಳುಗಳನ್ನು ಗಾಳಿಯಲ್ಲಿ ಹಾರಿಸುತ್ತಾ, ಮೌನದಲ್ಲಿ ಲೀನವಾಗಿರುವ ಸಂಗೀತವನ್ನು ಸವಿಯುತ್ತಾನೆ. ಇದು ಸರ್ವೈವ್ ಆಗುವ ಕ್ಲಿಶ್ಟ ಕಲೆಯನ್ನು ತೆರೆಯಲ್ಲಿ ತರುವ ರೀತಿ.

ಕಾರಣವೇ ಇಲ್ಲದೆ, ತನ್ನ ಅಪ್ಪಂದಿರ ಲೋಭಕ್ಕೆ ಸಂಭವಿಸುತ್ತಿರುವ ಯುದ್ಧಕ್ಕೆ ಕತ್ತು ಕೊಡಲು ಹೋಗಿ ಸಾಯುವ ಒಬ್ಬ ಕಿಶೋರನ ಸಾವಿನ ಬಗ್ಗೆ ಆಗಲೇ ಹೇಳಿದೆ. ಈ ಅನ್ಯಾಯವಾದ ಸಾವಿಗೆ ಯಾರೂ ಅಷ್ಟೇನು ಕೊರಗುವುದಿಲ್ಲ. ಅವನೊಬ್ಬ ಅನಾಥ, ಅನಾಮಿಕ, ಹುಡುಗ. ಯಾವ ಮಹಾ ಆಕಾಂಕ್ಷೆಗಳೂ ಇಲ್ಲದ ಬಾಲಕ. ಈ ಸಮಾಜದಲ್ಲಿ ಮಹಾ ಗುರಿಗಳನ್ನು ಇಟ್ಟುಕೊಂಡು, ಗಹನವಾದ ಕನಸುಗಳನ್ನೇ ಕಾಣುತ್ತಾ, ದೊಡ್ಡ ಮಟ್ಟಕ್ಕೆ ಬೆಳೆದು, ದೊಡ್ಡ ಮನುಷ್ಯರಾಗುವವರೇ ಸಂಭಾವಿತರು ತಾನೇ? ಈ ಪಾಪದ ಮುಗ್ಧ ಜಾರ್ಜ್ ತನ್ನಲ್ಲಿ ಅಂತಹ ವಿಜೃಂಭಿಸುವ ಲಕ್ಷ್ಯಗಳಿಲ್ಲ ಎಂದು ಮೊದಲೇ ಖಿನ್ನನಾಗಿರುತ್ತಾನೆ; ಆದರೆ ಇವೆಲ್ಲ ಈ ಸಮಾಜದ ಕೆಲ ಶಕ್ತಿವಂತ ದುಷ್ಟಕೂಟದವರು ಕಟ್ಟಿರುವ ಮೋಸದ ಮರೀಚಿಕೆ ಅಷ್ಟೇ. ಈ ದುಷ್ಪರಿಣಾಮಕ್ಕೆ ಸಿಲುಕಿ ತನ್ನ ಸಹಜ, ಸುಂದರ ಬಾಲ್ಯವನ್ನು ಸವಿಯುವುದರ ಬದಲು, ಈ ಜಾರ್ಜ್ ‘ನಿಮ್ಮ ಬೋಟಿನಲ್ಲಿ ನಾನು ಬಂದು, ನಲುಗಿರುವ ಯೋಧರನ್ನು ಕಾಪಾಡುತ್ತೇನೆ, ಅದರಿಂದಾದಲೂ ನನ್ನ ಸಾಧನೆ ಶುರುವಾಗಲಿ…’ ಎಂದೇ ಆಶಿಸುತ್ತಾ ಬಂದು ವಿನಾಕಾರಣ ಸಾಯುತ್ತಾನೆ. ಸತ್ತಮೇಲೆ ಅವನ ಚಿತ್ರ ಮುಂದಿನ ದಿನದ ಪತ್ರಿಕೆಯಲ್ಲಿ ಪ್ರಶಂಸೆಯೊಂದಿಗೆ ಪ್ರಕಟವಾಗುತ್ತದೆ. ಈ ಅರ್ಥಹೀನ ಸಾವು ಕೂಡ, ಇಂತಹ ಮಹಾ ಹೋರಾಟದಲ್ಲಿ ಸಹಜ ಎಂದು ನೊಲಾನ್, ಇಲ್ಲಿ ಒಂದು ಮುಗ್ಧ ಬಾಲಕನ ದುರಂತವನ್ನು ಆದರ್ಶೀಕರಿಸುತ್ತಿದ್ದಾನೆ. ಕಡೇ ಪಕ್ಷ ಈ ಅಚಾನಕ್ಕ್ ಕೊನೆಯನ್ನು ಈತ ಅಲ್ಲಿಗೇ ಬಿಟ್ಟು ಬಿಟ್ಟಿದ್ದರೆ, ಅದಕ್ಕೊಂದು ಬೇರೇಯೇ ಅರ್ಥ ಸಿಗುತಿತ್ತು, ಎಂತಹ ಬಾಲ್ಯ ಹೇಗೆ ಚೆಲ್ಲಾಪಿಲ್ಲಿಯಾಯಿತು ಎನ್ನುವಂತೆ.

 

ಈ ಕಾಲಘಟ್ಟದಲ್ಲಿ ‘ನಾರ್ಮಲೈಝೇಷನ್’ ಮತ್ತು ‘ಕಂಟ್ರೋಲ್’ ಮುಖವಾಡಗಳನ್ನೇ ಪವರ್ ಎಂಬ ವಂಚಕ ತೊಟ್ಟಿರುವುದು. ‘ಪವರ್’ ಎನ್ನುವುದು ಈಗ ಅಂತರ್ಜಲದಷ್ಟು ಗುಪ್ತವಾಗಿದೆ. ಇದು ಈ ಕಾಲದಲ್ಲಿ ನಿಮ್ಮನ್ನು ಮೊದಲಿನಂತೆ ಹೊಡೆದು ಬಡಿದು ದಬ್ಬಾಳಿಕೆ ನಡೆಸುವುದಿಲ್ಲ. ಬದಲಾಗಿ ನೀವು ವ್ಯವಸ್ಥೆಗೆ ಅನುಗುಣವಾಗಿ ನಡೆದರೆ  ನಿಮ್ಮ ಬೆನ್ನು ತಟ್ಟಿ, ಅದಕ್ಕೆ ಸೇರಿದ ಜನರೇ ನಿಮ್ಮನ್ನು ಹೊಗಳುವಂತೆ ಮಾಡುತ್ತದೆ. ಅದೇ ನೀವು ಅದನ್ನು ಟೀಕಿಸಿದ ಕೂಡಲೇ, ನಿಮ್ಮನ್ನು ತನ್ನ ಸಮುದಾಯದಿಂದಲೇ ಬೇರ್ಪಡಿಸಿ, ನೀವೊಂದು ಅಸಹಜ ವ್ಯಕ್ತಿಯೆಂದು ಬಿಂಬಿಸಿ, ನಿಮ್ಮ ಜನರೇ ನಿಮ್ಮನ್ನು ಅಸ್ವಾಭಾವಿಕ, ವಿಲಕ್ಷಣ ಎಂದು ಛೀಮಾರಿ ಹಾಕಿ ಓಡಿಸುವಂತಹ ಸ್ಥಿತಿ ತರುತ್ತದೆ. ಇದು  ವ್ಯವಸ್ಥೆಯೆಂಬ ‘ಪವರ್ ರೇನ್‍ಜರ್’ ನಿಮ್ಮನ್ನು ಹೊಗಳುವ ಮತ್ತು ನಿಯಂತ್ರಿಸುವ ರೀತಿ! ಈ ಹುಡುಗನನ್ನು ಪತ್ರಿಕೆಯೊಂದು ಹೊಗಳಿತ್ತಿರುವುದು ಆತ ಸತ್ತನೆಂದಲ್ಲ. ಆ ಯೋಧರಿಗಾಗಿ ಹುತಾತ್ಮನಾದನೆಂದು. ಅಂದರೆ  ಸಹಜವಾಗಿ ವ್ಯವಸ್ಥೆಯ ಉಳಿವಿಗಾಗಿ ಸತ್ತನೆಂದು!

ನೊಲನ್‍ಗೆ ಸ್ಟ್ಯಾನ್ಲೀ ಕೊಬ್ರಿಕ್ ಸ್ಫೂರ್ತಿಯಂತೆ. ಆದರೆ ಕೂಬ್ರಿಕ್‍ನ ಸಿನಿಮಾಗಳು ಪ್ರವಾದಿಯ ಸ್ವಪ್ನದಂತೆ. ಹೀಗಿದ್ದೂ ಈ ನೊಲನ್‍ಗೆ ಕೇಡು ಮತ್ತು ಒಳಿತಿನ ಆಚೆಯಿದ್ದ ಮೈದಾನದ ಪರಿಚಯ ಇದ್ದಂತಿಲ್ಲ. ಫುಲ್ ಮೆಟಲ್ ಜಾಕೆಟ್ ಚಿತ್ರದ ಕೊನೆಯ ದೃಶ್ಯದಲ್ಲಿ ಥರಥರಾವರಿ ಟ್ರೈನಿಂಗ್ ಪಡೆದು ವಿಯೇಟ್ನಾಂ ಯುದ್ಧದ ಹೃದಯಕ್ಕೆ ಧುಮುಕುವ ಮಿಷನ್ನು ಗನ್ನುಗಳನ್ನು ಹಿಡಿದ ಅಮೇರಿಕದ ಧಾಂಡಿಗ ಧೀರರನ್ನು ಒಂದೇ ಒಂದು ಸ್ಪೈನ್ಪರ್ ಚಿಂದಿ ಮಾಡುತ್ತಿರುತ್ತದೆ. ಅರ್ಧಕರ್ಧ ಜನ ಚೀರಾಡಿ, ಹೆದರಿ ಸಾಯುತ್ತಾರೆ. ಯಾವುದೋ ಒಂದು ಉರಿಯುತ್ತಿರುವ ಪಾಳು ಬಂಗಲೆ; ಯಾವುದೋ ಕಾಡು; ಆ ನೂರಾರು ಕೋಣೆಗಳ ಗರ್ಭದಲ್ಲಿ ಅಡಗಿರುವ ಸ್ವೈನ್ಪರ್ ಮಾಯೆ. ಇವರನ್ನೆಲ್ಲಾ ಮೃತ್ಯು ಕೂಪಕ್ಕೆ ತಳ್ಳುತಿದೆ. ಕೊನೆಗೆ ಪ್ರೈವೇಟ್ ಜೋಕರ್ ಈ ವ್ಯೂಹವನ್ನು ಭೇದಿಸಿ, ಆ ಮಾಯೆಯ ಮುಖವನ್ನು ಪತ್ತೆ ಹಚ್ಚುತ್ತಾನೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ, ಎರಡು ಹೆಜ್ಜೆ ಊರಲು ತ್ರಾಣವಿಲ್ಲದ ತನಗಿಂತ ಭಾರವಿರುವ ಗನ್ನು ಹಿಡಿದ ಬಡಕಲು ಬಾಲಕಿಯೇ, ಆ ಮಾರಿ! ಗುಂಡು ತಗುಲಿದೆ ಅವಳಿಗೂ, ಅವಳು ನೋವಲ್ಲಿ ಒದ್ದಾಡಲಿ ಎನ್ನುತ್ತಾರೆ, ಬೆಟಾಲಿಯನ್ನಲ್ಲಿ ಉಳಿದ ದಾಂಡಿಗರು. ಆದರೆ ಪ್ರೈವೇಟ್ ಜೋಕರ್‍ನ ಮುಖವನ್ನು ದಾರುಣವಾಗಿ ನೋಡುವ ಅವಳು ‘ಕಿಲ್ ಮೀ’ ಎಂದು ಕಷ್ಟಪಟ್ಟು ಉಸುರುತ್ತಾಳೆ. ಅವಳಿಗೆ ದಯಾ ಮರಣದ ಭಾಗ್ಯ ಸಿಗುತ್ತದೆ. ಅಂದರೆ ಅಮೇರಿಕಾದಂತಹ ಬಲಿಷ್ಠ ರಾಷ್ಟ್ರ, ಬೇಕಿಲ್ಲದ ವಿಯೇಟ್ನಾಂ ಯುದ್ಧಕ್ಕೆ ಮೂಗು ತುರಿಸಿ, ಪಾಪದ ರೈತರನ್ನು ಬಡಪಾಯಿಗಳ ರಕ್ತ ಹರಿಸುತ್ತಿರುವಾಗ, ಇಂತಹ ಸಾಧು ಸ್ವಭಾವದವರೂ, ಕೊಲ್ಲುವ ಯಂತ್ರಗಳಾಗುತ್ತಾರೆ. ಇದೊಂದು ಸೋಜಿಗ ಹಾಗೂ ದೊಡ್ಡ ವಿಪರ್ಯಾಸ. ಈ ರೈತಾಪಿ ವರ್ಗದವರು, ಅಮೇರಿಕಾದಿಂದ ಬಂದ ಕೊಲ್ಲುವ ಯಂತ್ರಗಳನ್ನು ತಮ್ಮ ಸ್ವಾಭಿಮಾನವನ್ನು ಉಳಿಸಿಕೊಳ್ಳಲು ಹೊಡೆದುರುಳಿಸುತ್ತಿರುವುದನ್ನು ನಿರ್ಭಿಡೆಯಿಂದ ಕೂಬ್ರಿಕ್ ನಮಗೆ ಮುಟ್ಟಿಸುವಾಗ, ಸತ್ಯದ ಇನ್ನರ್ಧ ಮುಖ ಪ್ರಖರವಾಗಿ ಹೊಳೆಯುವುದು. ಹೀಗೆ ತಮ್ಮ ಆತ್ಮಗಳನ್ನು ಸಂರಕ್ಷಿಸಲು ಮಡಿದವರನ್ನು ಯಾರೂ ಹಾರ ಹಾಕಿ ಮರ್ಯಾದೆ ಮಾಡುವುದುಲ್ಲ, ಅಥವಾ ನಿಮ್ಮ ಬಿಲ್ ಗೇಟ್ಸ್ ಅಥವಾ ಝ್ಯೂಕರ್‍ಬರ್ಗ ಯಶೋಗಾಥೆಯನ್ನು ಎಲ್ಲ ಸೋಶಿಯಲ್ ಮೀಡಿಯಾಗಳಲ್ಲಿ ಊದಿದಂತೆ ಯಾರೂ ಪ್ರಚಾರವೂ ಮಾಡುವುದಿಲ್ಲ. ಲೆಕ್ಕವಿಲ್ಲದಷ್ಟು ಪರದೇಸಿಗಳು ಈ ನಾಗರೀಕತೆಯನ್ನೇ ಪುನರ್ ನಿರೂಪಿಸಿದ ಪ್ರಬಲ ದೇಶಗಳ ಅತಿಯಾಸೆಗೆ ಬಲಿಯಾಗಿದ್ದಾರೆ. ಇವರ ಹೆಸರೂ ನಮಗೆ ಗೊತ್ತಿಲ್ಲ, ಆದರೆ ಪ್ರಾಣದಾಸೆ ಬಿಟ್ಟು, ಈ ಸಾಮಾನ್ಯರೆಲ್ಲ ಹೋರಾಡಿ ಮಣ್ಣಾಗಿದ್ದಾರೆ. ನಿಜವಾಗಿ ಮನುಷ್ಯಲೋಕದ ಬಗ್ಗೆ ಒಲವಿರುವ ನಿರ್ದೇಶಕ ಇತಿಹಾಸ ಹತ್ತಿಕ್ಕಲು ಹೆಣಗಾಡುವ ವಾಸ್ತವಕ್ಕೆ ದೀಪ ಹಿಡಿಯುತ್ತಾನೆ. ಚಾಪ್ಲಿನ್ನಿನ ಗೋಲ್ಡ್ ರಶ್ ಚಿತ್ರದಲ್ಲಿ, ಸ್ವತಃ ಚಾಪ್ಲಿನ್ನೇ ಇನ್ನೊಬ್ಬ ಅಮೇರಿಕದ ಡುಮ್ಮಯ್ಯಗೆ, ದೈತ್ಯ ಕೋಳಿಯಂತೆ ಗೋಚರಿಸುತ್ತಾನೆ. ಹಸಿದು, ಈ ‘ಕೋಳಿಯನ್ನೇ’ ಮುಕ್ಕಲು ಆತ ಹಾತೊರೆಯುತ್ತಾನೆ. ಎಲ್ಲರೂ ಇದನ್ನು ನೋಡಿ ಬಿದ್ದು-ಬಿದ್ದು ನಕ್ಕರೆ, ನಾವು ನಮ್ಮ ನಾಗರೀಕ ನರಭಕ್ಷಕರನ್ನು ನೋಡಿ ನಕ್ಕಂತೆ. ಈ ಬಿಳಿಯರು ಅಭಿವೃದ್ಧಿ, ಧರ್ಮ ಸಂಸ್ಥಾಪನೆ, ವಿಶೇಷವಾದ ಜ್ಞಾನ, ಮಣ್ಣು-ಮಸಿ ಎಂದು ಢೋಂಗಿ ಹೊಡೆದು, ಏನೂ ಅರಿಯದೆ, ಕಾಡನ್ನೇ ನಂಬಿ, ನಿಜವಾಗಿ ಪ್ರಕೃತಿಯಲ್ಲೇ ಬದುಕಿದ್ದ, ರೆಡ್ ಇಂಡಿಯನ್ನರ ಮಾರಣ ಹೋಮ ನಡೆಸಿ, ಅವರ ಭೂಮಿಗೆ ಒಕ್ಕರಿಸಿದ್ದು. ಇದು ನರಭಕ್ಷಣೆಗಿಂತಲೂ ಘೋರ ತಾನೇ? ಇದೇ ಕೂಬ್ರಿಕ್‍ನ  ಶೈನಿಂಗ್  ಚಿತ್ರದಲ್ಲಿ ಮುಚ್ಚಿದ್ದ ಅಮೇರಿಕಾದ ಭವ್ಯ ಓವರ್ ಲೋಕ್ ಹೋಟೆಲಿನ ಬಾಗಿಲನ್ನೇ ಧ್ಚಂಸಗೊಳಿಸಿ ನೆತ್ತರಿನ ಜಲಪಾತ ಝೇಂಕರಿಸುವುದು, ಇದೇ ನಿಶ್ಯಬ್ಧ ಕೋಟ್ಯಾಂತರ ಆತ್ಮಗಳ ನಿನಾದ; ಇದೇ ಸಿನಿಮಾದ ನಾಯಕ ವಿಕೃತ ಜಾಕ್ ಟೊರೆನ್ಸ್, ಸ್ಕಾಚ್ ವಿಸ್ಕಿ ಹಾಕುತ್ತಾ ‘ಬಿಳಿಯರ ಕರ್ತವ್ಯ’ ಎಂದು ಬಹಳ ಹೆಮ್ಮೆಯಲ್ಲಿ ಉದ್ಗಾರ ತೆಗೆದು, ಕೊನೆಯಲ್ಲಿ ತನ್ನ ಹೆಂಡತಿ, ಮಗುವನ್ನು ಪಾರು ಮಾಡಲು ಬಂದ ಕರಿಯನನ್ನು ಕೊಡಲಿಯಲ್ಲಿ ಕೊಚ್ಚಿ ಕೊಂದು, ಇನ್ನೂ ರಕ್ತದ ದಾಹ ಇಂಗದೆ, ತನಗಾಗಿ ಎಲ್ಲ ಬಿಟ್ಟು ಬಂದವಳನ್ನೂ. ತನ್ನ ಪ್ರೀತಿಯ ಕುಡಿಯನ್ನು ಅದೇ ಕೊಡಲಿಯಲ್ಲಿ ತುಂಡು-ತುಂಡು ಮಾಡಲು ಹಪ-ಹಪಿಸುತ್ತಾನೆ. ಈ ವಿಶ್ವ ರೂಪ ನಮಗೆ ‘ಬಿಳಿಯರ ಕತ್ತರಿಸುವ ಕರ್ತವ್ಯ’ದ ನೆನಪು ಮಾಡಿ ಕೊಡುತ್ತದೆ. ಒಬ್ಬ ಡೈರೆಕ್ಟರ್‍ಗೆ ದೇವರಿಗೆ ಸಿಗುವ ಸವಲತ್ತು ಸಿಗುತ್ತದೆ, ಎಂದು ಬಹುಶಃ ಕೂಬ್ರಿಕ್ ಅರಿತ್ತಿದ್ದನೇನೋ; ಅವನ ಪ್ರತಿ ಚಿತ್ರಗಳೂ ಹೀಗೆ, ಮುಕ್ತ ದೃಷ್ಟಿಯಿದ್ದ ಪ್ರಚಂಡ ಅನುಭವಗಳು.

ಇಷ್ಟೆಲ್ಲಾ ಹೇಳ ಬೇಕಾಗಿ ಬಂದದ್ದು ಏಕೆಂದರೆ ನೋಲನ್ ಎಂದರೆ ನನಗೆ ಬಹಳ ಇಷ್ಟ.  ಡಾರ್ಕ್ ನೈಟ್  ಸಿನಿಮಾದಲ್ಲಿ ಆತ ಈವಿಲ್‍ನನ್ನು, ಗೊಂದಲವನ್ನೂ ಜತೆಗಿಟ್ಟು ತೂಗಿದ ರೀತಿ, ಮೆಮೆನ್‍ಟೋದಲ್ಲಿ ಸಮಯಕ್ಕಿರುವ ಮಾರಕ ಶಕ್ತಿಯನ್ನು ಕೆತ್ತಿದ ಬಗೆ, ಇನ್ಸೋಮೇನಿಯದಲ್ಲಿ ಪಾಪಪ್ರಜ್ಞೆಯನ್ನು ಸೂರ್ಯವೇ ಮುಳುಗದ ನಗರಿಗೆ ಹೋಲಿಸಿದ ಕವಿ ಮನಸ್ಸು ಹಾಗೆಯೇ  ಇಂಟರ್‍ಸ್ಟೆಲ್ಲಾರ್  ಎಂಬ ವಿಸ್ಮಯದಲ್ಲಿ ಬ್ಲ್ಯಾಕ್ ಹೋಲಿನಲ್ಲಿ ನುಸುಳಿ ತನ್ನ ಮಗಳ ಜತೆ ಅವಳ ಕೋಣೆಯ ಪುಸ್ತಕಗಳ ಕಪಾಟಿನ ಮೂಲಕ ಸಂವಹಿಸುವ ಅಂತರಿಕ್ಷ ಯಾತ್ರಿಕನ ಅಪ್ಪಟ ಪ್ರೀತಿಯ ಮೆಟಾಫಿûಸಿಕ್ಸ್… ನೋಲನ್ ನನ್ನನ್ನು ಪ್ರಭಾವಿಸಿದ್ದ. ಆದರೆ ಅವನ ಡನ್‍ಕರ್ಕ್ ನೋಡಿದಾಗ ಇವೆಲ್ಲ ಮರೆತೇ ಹೋಗಿ ನನಗೆ ನೆನಪಾದದ್ದು, ಅಗೋಚರ ಗ್ರಹಗಳಿಂದ ಲಾಸ್ ಏಂಜಲೀಸ್‍ಗೋ ನ್ಯೂಯರ್ಕ್‍ಗೋ ಲಗ್ಗೆ ಇಡುವ ಜೀವಿಗಳನ್ನೇ ಭೂಮಿಯನ್ನೇ ನಾಶಮಾಡಲು ಬಂದ ರಾಕ್ಷಸರು ಎಂಬ ರೀತಿಯಲ್ಲಿ ಪ್ರದರ್ಶಿಸಿ, ಮತ್ತೆ ಅವುಗಳ ವಿರುದ್ಧ ದಂಗೆ ಸಾರಿ, ತಮ್ಮ ಸಿ.ಐ.ಜಿ. ತಂತ್ರಜ್ಞಾನದಿಂದ ಮುರಿದ ನಗರಗಳನ್ನೇ ಈ ವಿಶ್ವದ ಬಿಂಬಗಳಂತೆ ತೋರ್ಪಡಿಸಿ, ಈ ಜಗತ್ತನ್ನು  ಜೀವಂತವಾಗಿಡುವ ತಾಕತ್ತು ‘ನಮ್ಮದು’, ಹಾಗಾಗಿ ಈ ಜಗತ್ತು ‘ನಮ್ಮದು’ ಎಂದು ತಮ್ಮ ತೊಡೆಯನ್ನು ತಾವೇ ತಟ್ಟಿಕೊಳ್ಳುವ ಸಹಸ್ರ ಸೂಪರ್ ಹೀರೋ ಸಿನಿಮಾಗಳು. ಅಲ್ಲಿಯಂತೆ ಇಲ್ಲೂ ನೋಲನ್‍ನ ನೆಚ್ಚಿನ ಸಂಗೀತ ನಿರ್ದೇಶಕ ಹ್ಯಾನ್ಸ್ ಝಿಮ್ಮರ್ ಮೌನವಾಗಿ ಗ್ರಹಿಸಬಹುದಾಗಿರುವ ದ್ರೃಶ್ಯಗಳನ್ನೆಲ್ಲಾ, ಚಚ್ಚುವ ಹಿನ್ನಲೆ ಮೇಳದಿಂದ ಅಸ್ತವ್ಯಸ್ತಗೊಳಿಸಿದ್ದಾನೆ, ಅಂದರೆ ಈ ಹಿನ್ನಲೆಯ ತಲೆ ಸಿಡಿಸುವಂತೆ ಅಬ್ಬರಿಸುವ ಕಂಪನಗಳೇ, ಆ ದೃಶ್ಯಗಳ ಅತಿ ಪ್ರಾಮುಖ್ಯತೆಯನ್ನು ಸಾರುವಂತೆ. ನೋಲನ್ ಈಕಿಷ್ಟು ಸಾಧಾರಣವಾಗಿ ಯೋಚಿಸುತ್ತಿದ್ದಾನೆ? ಈಕಿಷ್ಟು ಬಿಳಿಯನಾಗುತ್ತಿದ್ದಾನೆ?  ಈತನ ತಿಕ್ಕಲುತನವನ್ನೆಲ್ಲಾ ಬದಿಗಿಟ್ಟರೆ, ಈ ವ್ಯಕ್ತಿಯಲ್ಲೊಬ್ಬ ಒಳ್ಳೆಯ ನಿರ್ದೇಶಕನಿದ್ದಾನೆ. ಆ ನೋಲನ್ ಬೇಗ ಬೆಳಗಲಿ;

ಕ್ಲಿಂಟ್ ಈಸ್ಟ್ ವುಡ್

 

ಮುಂದಿನ ವೆಂಚರಲ್ಲಿ ಇಂತಹ ದೊಡ್ಡ ಕುಂಡೆ ಚೇಷ್ಟೆ ಮಾಡದೆ, ನೆಟ್ಟಗೊಂದು ನಿಯೋ ನಾಯರ್ ಸಿನಿಮಾ ಮಾಡಲಿ. ಅದಕ್ಕಾಗಿ ನಾನು ಕಾಯುತ್ತೇನೆ. ಡನಕರ್ಕ್‍ನಿಂದಾದ ನಷ್ಟದಿಂದ ಪರಿಹಾರ ಗಿಟ್ಟಿಸಲು, ಇವತ್ತು ಈಶ್ಟ್‍ವುಡ್‍ನ ಎರಡನೆಯ ಮಹಾಯುದ್ಧದ ಎರಡೂ ಪಕ್ಷಗಳ ತಳಮಳಗಳನ್ನೂ, ಸಾವುಗಳನ್ನೂ ಒಂದೇ ಕಾಲಕ್ಕೆ ಹಿಡಿಯುವ, ‘ಫ್ಲಾಗ್ಸ್ ಆಫ್ ಅವರ್ ಫಾದರ್ಸ್’ ಹಾಗೂ ‘ಲೆಟರ್ಸ್ ಫ್ರಂ ಇವು ಜಿಮ’ ಚಿತ್ರಗಳನ್ನು ಒಂದೇ ಗುಕ್ಕಿಗೆ ನೋಡಬೇಕೆಂದಿರುವೆ. ಈ ಈಸ್ಟ್ ವುಡ್ಗೆ ಹತ್ತಿರ ಹತ್ತಿರ ತೊಂಭತ್ತಾಯಿತು. ಅರುಳುಮರಳಾಗುವ ಸಮಯದಲ್ಲಿ ಈ ಜೀವನ ಪ್ರೇಮಿ,   ‘ಅಮೇರಿಕನ್ ಸ್ನೈನ್ಪರ್’ ಎನ್ನುವ ಸಿನಿಮಾ ಮಾಡುತ್ತಾನೆ. ಇಲ್ಲಿ ವಾರ್‍ಹೀರೋನ ಹೃದಯಕ್ಕೆ ಶೂನ್ಯ ಕವಿಯುವ ಹೊತ್ತನ್ನು ವಿಚಲಿತನಾಗದೆ ಹೆಣೆಯುತ್ತಾನೆ. ಈ ಮಹಾಶಯ ಬಿಡಿ… ಮಹಾ ಬದುಕನ್ನು ಬಾಳಿದವನು, ಮಹಾ ದುರಂತಗಳನ್ನು ನಿರ್ಲಿಪ್ತನಾಗಿ ಗಮನಿಸಿದವನು. ಇವನ ಬಗ್ಗೆ ಆದರೆ ಇನ್ನೊಮ್ಮೆ ಹೇಳುವೆ.

5 comments to “ಡನ್‍ಕರ್ಕ್ – ಬಿಳಿಯರ ಇನ್ನೊಂದು ದೊಡ್ಡ ಕುಂಡೆ ಚೇಷ್ಟೆ”
  1. Good write up for a beginner… ಹೇಳುವುದನ್ನು ಸಂಕ್ಷಿಪ್ತವಾಗಿ ಕಲಿಯಬೇಕು… ವಿಮರ್ಶೆಯೆಂಬುದು ಪಾಂಡಿತ್ಯ ಪ್ರದರ್ಶನವಾಗಬಾರದು… ಕಣ್ಣಿಕಾಣುವುದನ್ನು ಗಮನವಿಟ್ಟು ನೋಡಬೇಕು ಏನೇನೋ ನೆನಪಿಸ್ಕೊಂಡು ಹಲುಬಬಾರದು

    • you go by this logic then Sigmund Freud is ranting on when he invented psycho anlysis where he discovered seeing through a human pyshce would explore his inner self not what lies on surface, Freud saw Oedipus when an infant is sucking his mother breast… may be you would call that as ranting too… and may be you would call Bhardwaj Rangan and Roger Ebert as exhibitionist for they bring in so many memories of other films while they speak about one particular film… it’s film studies a new branch of literary theory… it’s a scientific study of human creativity and what manipulates them… guess you are not aware of all that…

  2. Vimarsheyannu ee etharakke kooda kondoyyabahudendu ankondrirlilla. Munche nodida Dunkirk Cinema ee vimarshe odida nanthara bereyade aada ondu cinema aagi kanistide.. Ade vimarshe ge iruva dodda shakti..

    Hats off to Gautham!!! Proud to know Kannada language has such a brilliant critics.

Leave a Reply to Harish Cancel reply