ಹೇಮಂತ ಸಂಪುಟ ೨ – ಸಂಪಾದಕೀಯ

ಕಳೆದ ಶರತ್ ಸಂಚಿಕೆ ಋತುಮಾನಕ್ಕೆ ವಿಶೇಷವಾಗಿತ್ತು. ಪ್ರಕೃತಿ ಪ್ರಕಾಶನ ಹೊರ ತಂದ ಅಜ್ಞಾತ ಕವಿಯೊಬ್ಬರ ’ರಾಮು ಕವಿತೆಗಳು’ ಕಥಾ ಸಂಕಲನ ಋತುಮಾನದ ಅಂಗಳದಲ್ಲಿ ಲೋಕಾರ್ಪಣೆಯಾಯಿತು. ಇಲ್ಲಿಯ ಅಪರೂಪದ ಕವಿತೆಗಳ ಕುರಿತು ಹಿರಿಯ ವಿಮರ್ಶಕ ಓ ಎಲ್ ಎನ್ ಮತ್ತು ಎಚ್ ಎಸ್ ಆರ್ ಮಾತನಾಡಿದ್ದು ಕನ್ನಡ ಕಾವ್ಯ ಪರಂಪರೆಯಲ್ಲಿ ಮಹತ್ವದ ದಾಖಲೆಯಾಗಿ ಉಳಿಯಲಿದೆ. ಹತ್ತು ಕವನ ಸಂಕಲನಗಳನ್ನು ಖರ್ಚು ಮಾಡುವುದೂ ಕಷ್ಟ ಎಂದು ಎಲ್ಲರು ಹೆದರಿಸಿದರೂ ಮುನ್ನೂರಕ್ಕು ಹೆಚ್ಚು ಪುಸ್ತಕಗಳನ್ನು ಮಾರಾಟ ಮಾಡಲಾಯಿತು. ಇಂತಹ ಅಪರೂಪದ ಪುಸ್ತಕಗಳಿಗೆಂದೇ ಋತುಮಾನ ಸ್ಟೋರ್ ಎಂಬ ಪುಸ್ತಕದ ಅಂಗಡಿಯನ್ನೂ ಪ್ರಾರಂಭಿಸಿದೆವು. ಮುಂದಿನ ದಿನಗಳಲ್ಲಿ ಇಲ್ಲಿ ಸಾಕಷ್ಟು ಅಪರೂಪದ ಪುಸ್ತಕಗಳು ಸಿಗಲಿವೆ.

ಗಾಂಧಿ ಜಯಂತಿಯ ನೆಪದಲ್ಲಿ ಗಾಂಧಿ ವಿಚಾರಗಳನ್ನು ನಿಕಷಕ್ಕೊಡ್ಡಲು ಗಾಂಧಿ ಕುಲುಮೆ ಎಂಬ ಸರಣಿಯೂ ಈ ಸಂಚಿಕೆಯೊಂದಿಗೆ ಪ್ರಾರಂಭವಾಗಿದೆ. ಮೊದಲ ಎಪಿಸೋಡಿನಲ್ಲಿ ಶ್ರೀಧರ್ ಬಳಗಾರರು ಗಾಂಧಿಯ ಕಲ್ಪಿತ ಗ್ರಾಮದ ಕುರಿತು ಮನೋಜ್ನವಾಗಿ ಮಾತನಾಡಿದ್ದಾರೆ. ಮುಂದಿನ ಹೇಮಂತ ಸಂಪುಟದಲ್ಲಿ ಈ ಸರಣಿಯ ಇತರೆ ವೀಡಿಯೊಗಳನ್ನು ವೀಕ್ಷಿಸಬಹುದು.

ಭಾಷೆಯ ಅಳಿವು ಮತ್ತು ಉಳಿವಿನ ಕುರಿತು ಜಗತ್ತಿನಲ್ಲೆಡೆ ಆತಂಕ ತುಂಬಿದ ಚರ್ಚೆಗಳಾಗುತ್ತಿರುವ ಈ ಕಾಲದಲ್ಲಿ ಚೋಮ್ ಸ್ಕಿ ಚಿಂತನೆಗಳು ಹೆಚ್ಚಿನ ಜನರಿಗೆ ತಲುಪಬೇಕಿದೆ. ಅಹರ್ನಿಶಿ ಪ್ರಕಾಶನ ಹೊರ ತಂದಿರುವ ’ಚಾಮ್ ಸ್ಕಿ ಜೊತೆಗೆ ಎರಡು ಹೆಜ್ಜೆ..’ ಕೆ.ವಿ ನಾರಾಯಣರ ಈ ಪುಸ್ತಕ ಹೆಚ್ಚು ಹೆಚ್ಚು ಜನರನ್ನು ತಲುಪಬೇಕಿದೆ. ಈ ಪುಸ್ತಕದ ಕುರಿತು ಕೆ.ವಿ ನಾರಾಯಣ್ ಅವರ ಸಂದರ್ಶನ ಈ ಸಂಚಿಕೆಯಲ್ಲಿದೆ.

ಇತಿಹಾಸವನ್ನು ವರ್ತಮಾನದಲ್ಲಿ ನೋಡುವಾಗ ನಮ್ಮೊಳಗಿನ ’ಎಚ್ಚರ ’ ಬಲು ಮುಖ್ಯ. ನಮ್ಮಲ್ಲಿ ಎಲ್ಲರಿಗೂ ಎಲ್ಲ ವಿಷಯಗಳ ಬಗ್ಗೆ ಮಾತನಾಡುವ ಕೆಟ್ಟ ತೆವಲಿದೆ. ’ಎಚ್ಚರ’ ಮರೆತ ಈ ಮಾತಿನ ತೆವಲಿನಿಂದ ಬಿಡಿಸಬೇಕಾದ ಸಿಕ್ಕುಗಳು ಇನ್ನಷ್ಟು ಜಟಿಲವಾಗುತ್ತ ಹೋಗುತ್ತದೆ. ಟಿಪ್ಪು ಜಯಂತಿಯ ವಿವಾದದಲ್ಲಿ ನಾವು ಟಿಪ್ಪುವಿನ ಕುರಿತು ಅಧಿಕೃತವಾಗಿ ಮಾತನಾಡಬಲ್ಲ ಓಲಿಕಾರ್ ಅವರನ್ನು ಸಂದರ್ಶಿಸಿದೆವು. ಟಿಪ್ಪುವಿನ ಕುರಿತು ಇದ್ದ ಸಾಕಷ್ಟು ಪೂರ್ವಾಗ್ರಹಗಳನ್ನು ಓಲಿಕಾರ್ ಅವರ ಮಾತುಗಳು ದೂರ ಮಾಡಿದ್ದಾವೆ ಎಂಬುದು ನಮ್ಮ ನಂಬಿಕೆ.

ಗೌರಿಯನ್ನು ನೆನೆಸಿಕೊಂಡು ಚಿದಾನಂದ ರಾಜಘಟ್ಟ ಅವರ ಲೇಖನದ ಕನ್ನಡ ಭಾಷಾಂತರ ಸಾವಿರಾರು ಜನ ಮೆಚ್ಚಿಕೊಂಡರು. ಇದಲ್ಲದೆ ಇನ್ನಷ್ಟು ಕತೆ, ವಿಮರ್ಶಾ ಲೇಖನಗಳು ಈ ಸಂಚಿಕೆಯನ್ನ ಸಮೃದ್ಧವಾಗಿಸಿವೆ.

ಕೊನೆಯದಾಗಿ, ಋತುಮಾನದಲ್ಲಿ ಪ್ರಕಟವಾಗಿರುವ ಧ್ವನಿ ಮುದ್ರಿಕೆಗಳು ಪಾಡ್ ಕಾಸ್ಟ್ ನಲ್ಲಿ ಸಿಗಬೇಕೆಂಬ ಬಹುಜನರ ಬಹುದಿನದ ಬೇಡಿಕೆಯನ್ನು ಈ ಸಂಚಿಕೆಯಲ್ಲಿ ಪೂರೈಸಿದ್ದೇವೆ. ಇದೀಗ ಸಾಕಷ್ಟು ಜನಪ್ರಿಯ ಪಾಡ್ ಕಾಸ್ಟ್ ಗಳಲ್ಲಿ ಋತುಮಾನದ ಆಡಿಯೋಗಳು ಲಭ್ಯವಿದೆ.

ದಿನಾಂಕ: ೨೧.೧೧.೨೦೧೭

ಪ್ರತಿಕ್ರಿಯಿಸಿ