ಸಮಾಜವಾದಿಗಳೊಂದಿಗೆ ಗಾಂಧಿ : ಗುಹಾ – ಡಿ . ಎಸ್ . ನಾಗಭೂಷಣ ಸಂವಾದ ಭಾಗ ೧

ಹೆಸರಾಂತ ಚರಿತ್ರಕಾರ ಶ್ರೀ ರಾಮಚಂದ್ರ ಗುಹಾ ಅವರು ಈ ಬಾರಿಯ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಅಕ್ಟೋಬರ್ ಎರಡರಂದು ಗಾಂಧಿಯ ಬಗ್ಗೆ ಮಾತನಾಡಿದರು. ಅಲ್ಲಿದ್ದ ಹೊಸ ತಲೆಮಾರಿಗೆ ಗಾಂಧಿಯನ್ನು ಪರಿಚಿಸುವ ತಮ್ಮ ಪ್ರಯತ್ನ ಎಂದು ಹೇಳುತ್ತಾ ಅವರು, ಗಾಂಧಿ ಅವರು ಜಿನ್ನಾ, ಸಾವರ್ಕರ್-ಭಗತ್‌ಸಿಂಗ್, ನೆಹರೂ ಮತ್ತು ಅಂಬೇಡ್ಕರ್ ಅವರೊಂದಿಗೆ ನಡೆಸಿದ ಸಂವಾಗಳ ಬಗ್ಗೆ ಮಾತನಾಡಿದರು.

ಇದರ ಮುಂದುವರಿಕೆಯಾಗಿ, ಅಂದೇ ಮಧ್ಯಾಹ್ನ ಗುಹಾ ಅವರೊಂದಿಗೆ ಸಂವಾದ ಗೋಷ್ಠಿಯೂ ಆಯೋಜಿತವಾಗಿತ್ತು. ನೀನಾಸಂನ ಕೆ. ವಿ. ಅಕ್ಷರ ಅವರು, ಈ ಗೋಷ್ಟಿಯಲ್ಲಿ ಗುಹಾ ವರನ್ನು ಕೆಲವು ಪ್ರಶ್ನೆಗಳನ್ನೂ ಕೇಳುವ ಮೂಲಕ ಗೋಷ್ಠಿಯನ್ನು ಆರಂಭಿಸಬೇಕೆಂದು ನನ್ನನ್ನು ಕೋರಿದರು. ಬೆಳಗಿನ ಗೋಷ್ಟಿಯ ಗುಹಾ ಅವರ ಉಪನ್ಯಾಸದ ಬಗ್ಗ ನನ್ನದೂ ಕೆಲವು ಪ್ರಶ್ನೆಗಳಿದ್ದುದರಿಂದ ನಾನು ಪ್ರಶ್ನೆಗಳನ್ನು (ಬೇಕೆಂದೇ ಕನ್ನಡದಲ್ಲಿ) ಕೇಳಿದೆ. ಅವಕ್ಕೆ ಗುಹಾ ಅವರು ನನ್ನ ಪ್ರಕಾರ ಸಮರ್ಪಕವಾದ ಉತ್ತರಗಳನ್ನು ನೀಡಲಿಲ್ಲ. ಅವರು ಉತ್ತರ ನೀಡಿದ ಶೈಲಿಯೂ ನನ್ನನ್ನು ಸ್ವಲ್ಪ ರೇಗಿಸಿತು ಎಂದೇ ಹೇಳಬೇಕು ಮತ್ತು ಚರಿತ್ರೆ ಕುರಿತ ನನ್ನ ಓದನ್ನು-ಅದೆಷ್ಟೇ ಸೀಮಿತವಾಗಿದ್ದರೂ_ ಅವರು ಕೀಳುಗರೆದಂತಿತ್ತು. ಅವರು ನನ್ನನ್ನು ನನ್ನ ವಾದಕ್ಕೆ ಸಾಕ್ಷ್ಯಗಳನ್ನೂ ಕೇಳಿದರು. (ನಾನು ಅವರ ವಾದಕ್ಕೆ ಸಾಕ್ಷ್ಯಗಳನ್ನು ಕೇಳುವಂತಿರಲಿಲ್ಲವಲ್ಲ? ಏಕೆಂದರೆ ಅವರು ಖ್ಯಾತ ಚರಿತ್ರಕಾರರು!) ಹಾಗಾಗಿ ನಾನು ಊರಿಗೆ ವಾಪಸಾದ ನಂತರ ಸಂಬಂಧಪಟ್ಟ ಚರಿತ್ರೆಯ ಭಾಗವನ್ನು ಇನ್ನೊಮ್ಮೆ ಓದಿ ಅವರಿಗೊಂದು ಪತ್ರ ಮೇಲ್ ಮಾಡಿದೆ.

ಆಶ್ಚರ್ಯವೆಂದರೆ ಅವರಿಂದ ಕೂಡಲೇ ಉತ್ತರ ಬಂತು. ಆದರೆ ಅವರು ಆ ಉಪನ್ಯಾಸದ ದಿನದಂತೆಯೇ ಖಢಕ್ಕಾಗಿ ತಮ್ಮ ವಾದವೇ ಸರಿ ಎಂಬಂತೆ ಉತ್ತರಿಸಿದರು. ಆದರೆ ನನ್ನ ಓದಿನ ಬಗ್ಗೆ ನನಗೆ ವಿಶ್ವಾಸವಿದ್ದುದರಿಂದ ಮತ್ತು ಅವರ ಚರಿತ್ರೆಯ ಓದಿನ ಬಗ್ಗೆ ನನಗೆ ಮೊದಲಿಂದಲೂ ಕೆಲವು ಸಂದೇಹಗಳು ಮತ್ತು ಆಕ್ಷೇಪಣೆಗಳು ಇದ್ದುದರಿಂದ ನಾನು ಸುಮ್ಮನಿರಲು ಸಾಧ್ಯವಾಗದೆ ಅವರನ್ನು ಸ್ವಲ್ಪ ರೇಗಿಸುವಂತೆಯೇ ಉತ್ತರ ಬರೆದೆ. ಅದಕ್ಕೂ ತಕ್ಷಣ ಉತ್ತರ ಬಂತು! ಅದರಲ್ಲೂ-ಅವರು ಸ್ವಲ್ಪ ಹೊರಳಿಕೊಂಡಿದ್ದರಾದರೂ- ತಮ್ಮ ಹಠ ಬಿಟ್ಟಿರಲಿಲ್ಲ. ನಾನೂ ಹಠ ಬಿಡುವವನೇ? ನಾನು ಮತ್ತೆ ಬರೆದೆ.

ಹೀಗೆ ನಮ್ಮ ನಡುವೆ ನಾಲ್ಕು ದಿನಗಳ ಕಾಲ ನಿರಂತರ ಮೇಲ್ ಸಂಚಾರವಾಯಿತು. ಆ ಮೇಲ್‌ಗಳಲ್ಲಿ ಮೂಲ ವಾದ-ವಿಚಾರ ಇನ್ನಷ್ಟು ವಿಷಯಗಳಿಗೆ ವಿಸ್ತರಿಸಿಕೊಂಡು ಚರ್ಚೆ ಬಿಸಿಯೇರಿತು. ಕೊನೆಗೂ ಅವರು ನನ್ನ ವಾದಕ್ಕೆ ಪೂರಕವಾಗಿ ನಾನು ಒದಗಿಸಿದ್ದ ಸಾಕ್ಷ್ಯವನ್ನ-ಅದು ಈವರೆಗೆ ತಮ್ಮ ಗಮನಕ್ಕೆ ಬಾರದಿದ್ದುದರ ಬಗ್ಗೆ ವಿಷಾದ ವ್ಯಕ್ತಪಡಿಸಿ-ಒಪ್ಪಿಕೊಂಡು ನನ್ನ ಮಿತ್ರರೇ ಆದರು. ಅವರು ನನ್ನ ಮಿತ್ರರಾದರು ಎಂಬ ಸಂಗತಿಗಿಂತ ಹೆಚ್ಚಾಗಿ ನನ್ನನ್ನು ಈ ವಿಚಾರ ವಿನಿಮಯದ ಸಂದರ್ಭದಲ್ಲಿ ನನ್ನನ್ನು ತಾಕಿದ್ದು, ಸಾರ್ವಜನಿಕವಾಗಿ ತುಂಬ ದೊಡ್ಡ ಹೆಸರು ಮಾಡಿರುವ ಈ ಚರಿತ್ರಕಾರ ನನ್ನಂತಹ ಅನಾಮಿಕನೊಬ್ಬನೊಡನೆ-ಅದೂ ನನ್ನ ಬಹು ದುರ್ಬಲ ಇಂಗ್ಲಿಷ್‌ಗೆ ಮುಖಾಮುಖಿಯಾಗುತ್ತಾ-ಸಂವಾದ ನಡೆಸಲು ತೋರಿದ ಆಸಕ್ತಿ ಮತ್ತು ಅಂತಿಮವಾಗಿ ತನ್ನೆಲ್ಲ ಖ್ಯಾತಿಯನ್ನು ಬದಿಗಿರಿಸಿ ತನ್ನ ವಿಶೇಷಜ್ಞತೆಯ ಹೊರತಾಗಿಯೂ ತನಗರಿವಿಲ್ಲದ ಕೆಲವು ಸಂಗತಿಗಳು ಇವೆ ಎಂಬುದನ್ನು ಒಪ್ಪಿಕೊಳ್ಳುವಲ್ಲಿ ತೋರಿದ ನಮ್ರತೆ.

ವಂದನೆಗಳೊಂದಿಗೆ,
– ಡಿ . ಎಸ್ . ನಾಗಭೂಷಣ

14 ಪುಟಗಳಷ್ಟು ದೀರ್ಘವಾಗಿರುವ ಈ ಸಂವಾದ ಋತುಮಾನದಲ್ಲಿ ಕೆಲವು ಕಂತುಗಳಲ್ಲಿ ಪ್ರಕಟವಾಗುತ್ತದೆ .ಇಂಗ್ಲೀಶ್ ನಲ್ಲಿದ್ದ ಈ ಮಿಂಚಂಚೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದು ಸುಬ್ರಮಣ್ಯ ಹೆಗಡೆ

ಮೂಲತಃ ಶಿರಸಿಯವರಾದ ಸುಬ್ರಹ್ಮಣ್ಯ ಹೆಗಡೆ ಈಗ ತಿರುವನಂತಪುರಂನಲ್ಲಿ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಅನುಸಂಧಾನ ಕೇಂದ್ರದಲ್ಲಿ ಭೌತಶಾಸ್ತ್ರದ ಸಂಶೋಧನಾ ವಿದ್ಯಾರ್ಥಿ. ಆಗೀಗ ಕವಿತೆಗಳನ್ನು ಬರೆಯುತ್ತಾರೆ. ಬ್ಲಾಗಿಗ.


ದಿನಾಂಕ 9 ಅಕ್ಟೋಬರ್ 2017

ಪ್ರೀತಿಯ ಶ್ರೀ ರಾಮಚಂದ್ರ ಗುಹಾ ,
ನಾನು ಡಿ.ಎಸ್.ನಾಗಭೂಷಣ. ನೀನಾಸಂ(ಹೆಗ್ಗೋಡು) ಕಾರ್ಯಕ್ರಮದ ಮಧ್ಯಾಹ್ನದ ಗೋಷ್ಠಿಯ ಪ್ರಾರಂಭದಲ್ಲಿ ನಿಮಗೆ ಕನ್ನಡದಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿದ್ದೆ. ನೀವು ನನ್ನ ಎಲ್ಲ ಪ್ರಶ್ನೆಗಳನ್ನೂ ಉತ್ತರಿಸಿರಲಿಲ್ಲ. ಬಹುಶಃ ಅವು ನಿಮಗೆ ಸಂಪೂರ್ಣವಾಗಿ ಹಾಗೂ ಸಮರ್ಪಕವಾಗಿ ಭಾಷಾಂತರಿಸಲ್ಪಟ್ಟಿರದೇ ಇರಬಹುದು. ಕಾಂಗ್ರೆಸ್ ಸಮಾಜವಾದಿಗಳೊಂದಿಗೆ ಗಾಂಧಿಯವರ ಸಂವಾದದ ಬಗ್ಗೆ ನನ್ನ ಪ್ರಶ್ನೆಯನ್ನು ನೀವು ಉತ್ತರಿಸಿದ್ದಿರಿ, ಆದರೆ ನೀವು ನೀಡಿದ ಉತ್ತರ ವಾಸ್ತವಾಂಶಗಳ ಮೇಲೆ ಆಧಾರಿತವಾಗಿಲ್ಲ ಎಂದು ನನ್ನ ಅನಿಸಿಕೆ. ಸಮಾಜವಾದಿಗಳು ಗಾಂಧಿಯವರ ಸಂಪರ್ಕದ ಹೊರ ವೃತದವರ ಹೊರವೃತ್ತದಿಂದಲೂ ಹೊರಗಿದ್ದವರು ಮತ್ತು ಹಾಗಾಗಿ ಗಾಂಧಿ ಅವರೊಡನೆ ಹೇಳಿಕೊಳ್ಳುವಂತಹ ಮಾತುಕತೆ ನಡೆಸಿರಲಿಕ್ಕಿಲ್ಲ ಎಂದು ನೀವು ಹೇಳಿದಿರಿ. ಇದಕ್ಕೆ ಪ್ರತಿಯಾಗಿ ನಾನು ಗಾಂಧಿಯವರು ಜೆಪಿ ಅವರನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದ್ದು ನಿಮಗೆ ತಿಳಿದಿದೆಯೇ ಎಂದು ಪ್ರಶ್ನಿಸಿದ್ದೆ. ಆದರೆ ನೀವು ಇದಕ್ಕೆ ಆಧಾರ ಬೇಕೆಂದು ಕೇಳಿದಿರಿ! ನೀವು ಆ ಬೆಳಿಗ್ಗೆ ಭಾಷಣದಲ್ಲಾಡಿದ ಮಾತುಗಳಿಗೆಲ್ಲ ನಾನು ಕೂಡ ನಿಮ್ಮಲ್ಲಿ ಆಧಾರ ಕೇಳಬಹುದಿತ್ತು. ಆದರೆ ನೀವು ನಮ್ಮ ಅತಿಥಿಯಾಗಿದ್ದರಿಂದ ನಿಮ್ಮನ್ನು ಮುಜುಗರಕ್ಕೀಡುಮಾಡಲು ಬಯಸದೇ ನಾನು ಹಾಗೆ ಕೇಳಲಿಲ್ಲ. ಅಷ್ಟಲ್ಲದೇ ಪ್ರಶ್ನೋತ್ತರ ಸಮಯದ ಹೆಚ್ಚಿನ ಭಾಗವನ್ನು ನಿಮ್ಮೊಡನೆ ವಾಗ್ವಾದಕ್ಕಾಗಿ ಬಳಸಲು ನನಗೆ ಇಷ್ಟವಿರಲಿಲ್ಲ. ನಾವೇ ನಂತರ ನೋಡಿದಂತೆ, ಉಳಿದವರಿಗೂ ಕೂಡ ಬಹಳ ಪ್ರಶ್ನೆಗಳಿದ್ದವು.

ನಾನು ಅಂದು ಕೇಳಿದ ಎಲ್ಲ ಪ್ರಶ್ನೆಗಳನ್ನೂ ಮೊದಲು ಪಟ್ಟಿಮಾಡುತ್ತೇನೆ. 1. ನೀವು ಸಭಿಕರಿಗೆ ಗಾಂಧಿಯವರನ್ನು ಪರಿಚಯಿಸಲು ಆಯ್ದ ನಾಲ್ಕು ಸಂಭಾಷಣೆಗಳನ್ನು ಆಯಲು ನಿರ್ದಿಷ್ಟ ಕಾರಣಗಳೇನಾದರೂ ಇದ್ದವೇ? ಈ ನಾಲ್ಕು ಸಂಭಾಷಣೆಗಳನ್ನು ಗಾಂಧಿಯವರ ಬದುಕಿನ ಅತ್ಯಂತ ಮುಖ್ಯವಾದ ಸಂಭಾಷಣೆಗಳು ಎಂದು ನೀವು ಭಾವಿಸುತ್ತೀರಾ? ಗಾಂಧಿಯವರು ತಮ್ಮೊಂದಿಗೇ ನಡೆಸಿದ ಹಲವು ಸಂಭಾಷಣೆಗಳು ಅವರು ಇತರರೊಂದಿಗೆ ನಡೆಸಿದ ಸಂಭಾಷಣೆಗಳಿಗಿಂತ ಮುಖ್ಯವಾಗಿವೆಯೆಂದು ನಾನು ಭಾವಿಸಿರುವೆ. ನಾನಾದರೋ ಈ ಕೆಳಗಿನ ಸಂಭಾಷಣೆಗಳು ಗಾಂಧಿಯವರ ಬದುಕಿನ ಅತಿ ಮುಖ್ಯ ಸಂಭಾಷಣೆಗಳೆಂದು ನಾನು ಹೆಸರಿಸಿದ್ದೆ. 1. ಧರ್ಮ ಮತ್ತು ರಾಜಕೀಯದ ಸಂಬಂಧದ ಕುರಿತಾಗಿ ಗಾಂಧಿಯವರ ಚಿಂತನೆಗಳಿಗೆ ಬುನಾದಿಯಾದ, ಗಾಂಧಿಯವರು ರಸ್ಕಿನ್, ತೊರೂ, ಟಾಲ್‍ಸ್ಟಾಯ್ ಅವರ ಬರಹಗಳೊಂದಿಗೆ ನಡೆಸಿದ ಸಂಭಾಷಣೆಗಳು. 2. ಗಾಂಧಿಯವರು ಜೀವನದಾದ್ಯಂತ ಸಾಂಪ್ರದಾಯಿಕ ಹಿಂದೂ ಧರ್ಮದೊಡನೆ ನಡೆಸಿದ ಸಂಭಾಷಣೆಯ ಮೂಲಕ ಕಂಡುಕೊಂಡ ನಿಜವಾದ ಹಿಂದೂ ಧರ್ಮ. ಗಾಂಧಿ ಹಾಗೂ ಅಂಬೇಡ್ಕರ್ ಅವರ ನಡುವಿನ ಸಂಧಾನದ ಯಾವುದೇ ಪ್ರಯತ್ನಕ್ಕೆ ತಳಹದಿಯಾಗಬಲ್ಲ ವಿಚಾರ ಇದು ಎನ್ನುವುದು ನನ್ನ ಭಾವನೆ. 3. ಬೇರೆ ಬೇರೆ ಸನ್ನಿವೇಶಗಳಲ್ಲಿ ಅವರು ವಿಭಿನ್ನ ವಿಚಾರಗಳ ಕುರಿತು ಕಾಂಗ್ರೆಸ್ ಸೋಷಿಯಲಿಸ್ಟ್‍ರು, ಮುಖ್ಯವಾಗಿ ಜೆಪಿ, ಲೋಹಿಯಾ ಮತ್ತು ಕಮಲಾದೇವಿ ಚಟ್ಟೋಪಾದ್ಯಾಯ ಅವರೊಡನೆ ನಡೆಸಿದ ಸಂಭಾಷಣೆ. 4. ಅವರು ಡಾ.ಅಂಬೇಡ್ಕರ್ ಅವರೊಡನೆ ನಡೆಸಿದ ಸಂಭಾಷಣೆ. ಇನ್ನು ನನ್ನ ಕೊನೆಯ ಪ್ರಶ್ನೆ, ಗಾಂಧಿ-ಅಂಬೇಡ್ಕರ್ ನಡುವಿನ ಸಮನ್ವಯಕ್ಕಾಗಿ (ಹಿಂದೂ ಧರ್ಮದ ಸಾಂಪ್ರದಾಯಿಕ ಆವೃತ್ತಿಯೊಂದಿಗೆ ಗಾಂಧಿಯವರು ನಡೆಸಿದ ಸಂವಾದಗಳ ಮೂಲಕ ಪುನರನ್ವೇಷಿಕೊಂಡ ಮತ್ತು ಸನಾತನ ಧರ್ಮವೆಂದು ಅವರು ಕರೆದ -ಆದರೆ ಇತರರು ಮಡಿವಂತಿಕೆ ಧರ್ಮವೆಂದು ತಪ್ಪಾಗಿ ಅರ್ಥೈಸಿದ- ನಿಜವಾದ ಹಿಂದೂ ಧರ್ಮವನ್ನು ಹೊರಗಿಟ್ಟು) ಯಾವ (ತಾತ್ವಿಕ) ಆಧಾರದ ಮೇಲೆ ನೀವು ನಿಮ್ಮ ವಾದವನ್ನು ಮಂಡಿಸುತ್ತೀರಿ? ಅದರಲ್ಲಿಯೂ ಅಂಬೇಡ್ಕರ್ ಅವರು ಬರೆದ ‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗೆ ಮಾಡಿದ್ದೇನು?’ ಎನ್ನುವ ಗಾಂಧಿಯವರ ಮೇಲೆ ತುಂಬ ರೂಕ್ಷವಾದ ವೈಯಕ್ತಿಕ ದಾಳಿ ಮಾಡಿರುವ ಲೇಖನವನ್ನು ಓದಿದ ನಂತರ. ನಿಮ್ಮ ಭಾಷಣದ ಕುರಿತು ನನ್ನ ಕೊನೆಯ ಆಕ್ಷೇಪಣೆ, ನಿಮ್ಮ ಮೋದಿ ವಿರೋಧಿ ಧೋರಣೆ ಬಹಳ ಸರಳೀಕೃತವಾದದ್ದು ಎಂಬುದಾಗಿತ್ತು. ಏಕೆಂದರೆ, ಮೋದಿಯವರ ವಿರೋಧವು ಬಳಲಿ ತುಕ್ಕು ಹಿಡಿಯುತ್ತಿರುವ ಜಾತ್ಯತೀತತೆಯ ಮೇಲಷ್ಟೇ ನಿಲ್ಲಲು ಸಾಧ್ಯವಿಲ್ಲ ಎಂಬುದು ಮತ್ತು ಇದಕ್ಕೆ ಇನ್ನೂ ಸಧೃಡವಾದ ರಾಜಕೀಯ ವಿವರಣೆಯ ಅಗತ್ಯವಿದೆ ಎಂಬುದು ನನ್ನ ಅನ್ನಿಸಿಕೆ.

ಆದರೆ ನೀವು ಕಾಂಗ್ರೆಸ್ ಸಮಾಜವಾದಿಗಳ ಬಗ್ಗೆಯ ಪ್ರಶ್ನೆಯನ್ನಷ್ಟೇ ವಿವರವಾಗಿ ಉತ್ತರಿಸಲು ಆಯ್ದುಕೊಂಡಿರಿ. ನೀವು ಆಧುನಿಕ ಭಾರತದ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪರಂಪರೆಗೆ ಸಮಾಜವಾದಿಗಳ ಕೊಡುಗೆಯನ್ನು ಪ್ರಶಂಸಿಸತೊಡಗಿದಿರಿ ಮತ್ತು ಈ ಸಮಾಜವಾದಿ ಪರಂಪರೆಯು ಕಾಣೆಯಾಗಬಾರದಿತ್ತೆಂದು, ವಿಪರೀತಗಳಿಲ್ಲದ ಈ ಪರಂಪರೆಯು ಇವತ್ತಿನ ರಾಜಕೀಯ ವೈಪರೀತ್ಯಗಳ ಸನ್ನಿವೇಶದಲ್ಲಿ ಉಪಯುಕ್ತವಾಗಬಹುದಿತ್ತೆಂಬ ನಿಟ್ಟಿನಲ್ಲಿ, ವಿಶಾದ ವ್ಯಕ್ತಪಡಿಸಿದಿರಿ. ಆದರೆ ಹೀಗೆ ಹೇಳುವಾಗ ಗಾಂಧಿಯವರ ಸಮಯದಲ್ಲಿ ಹಾಗೂ ಅವರನ್ನು ಅನುಸರಿಸುವವರಿಂದ ಪ್ರಾರಂಭವಾದ ಈ ಪರಂಪರೆ/ಚಳುವಳಿ ಗಾಂಧಿಯವರೊಡನೆ ಹೊಂದಿದ ಸಂಬಂಧದ ಬಗ್ಗೆ ನೀವು ಮರುಯೋಚಿಸುವಂತೆ ಮಾಡಬೇಕಿತ್ತು. ಸಮಾಜವಾದಿಗಳು ಗಾಂಧಿಯವರ ಒಡನಾಟದ ಹೊರವೃತ್ತದ ಹೊರಹೊರವೃತ್ತದಿರಿಂದ ಕೂಡ ಹೊರಗಿದ್ದರು ಎನ್ನುವ ನಿಮ್ಮ ಹೇಳಿಕೆ ನೀವು ಇತಿಹಾಸವನ್ನು ಮಾಲುಗಣ್ಣಿನಿಂದ ಓದಿದ್ದೀರೆಂದು ತೋರಿಸುತ್ತದೆ.

ಗಾಂಧಿಯವರ ಸಮಗ್ರ ಬರಹಗಳ ಸಾವಿರಾರು ಪುಟಗಳ ಸಂಪುಟಗಳನ್ನು ನೀವು ಓದಿದ್ದು, ಅದರಲ್ಲಿ ಗಾಂಧಿಯವರು ಸಮಾಜವಾದಿಗಳೊಡನೆ ಸಂಭಾಷಣೆ ನಡೆಸಿದ್ದರೆಂದು ಯಾವುದೇ ಕುರುಹೂ ಕೂಡ ಕಾಣಲಿಲ್ಲ ಎಂದು ಹೇಳಿದಿರಿ. ಆದರೆ ಹೇರಳವಲ್ಲದಿದ್ದರೂ ಅದರ ಕುರುಹಂತೂ ಇದೆ. ದಯವಿಟ್ಟೂ 1947, ಮೇ 27ರ ನಮೂದನೆಯನ್ನು ಗಮನಿಸಿ. ಜೆಪಿ ಅವರ ನಾಯಕತ್ವದಲ್ಲಿ ಸಮಾಜವಾದಿಗಳ ಗುಂಪೆÇಂದು ಗಾಂಧಿಯವರೊಡನೆ ನಡೆಸಿದ ದೀರ್ಘ (ಸುಮಾರು 3-4 ಪುಟಗಳಷ್ಟು) ಸಂಭಾಷಣೆ ಸಿಗುತ್ತದೆ. ಇದು ನನ್ನಂತಹ ಓರ್ವ ಸಾಮಾನ್ಯ ಓದುಗನಿಗೆ ಕಂಡಿದ್ದು. ವೃತ್ತಿಪರರಾದ ನಿಮಗೆ ಇನ್ನೂ ಹೆಚ್ಚಿನ ಉದಾಹರಣೆಗಳು ದೊರೆಯಬಹುದು. ಆದರೆ ಇದೇ ಸಮಯದಲ್ಲಿ ಗಾಂಧಿಯವರ ಇತಿಹಾಸವನ್ನು ಅರ್ಥ ಮಾಡಿಕೊಳ್ಳಲು ಗಾಂಧಿಯವರ ಸಮಗ್ರ ಬರಹಗಳಷ್ಟೇ ಆಧಾರವಾಗಲಾರದು ಎಂಬುದನ್ನು ನಾನು ನಿಮಗೆ ನೆನಪಿಸಬೇಕು. ವಿಶೇಷವಾಗಿ ಸಮಾಜವಾದಿಗಳೊಂದಿಗೆ ಗಾಂಧಿಯವರ ಸಂಬಂಧದ ಕುರಿತಾಗಿ ನೀವು ಮರುಯೋಚಿಸಲು ಸಮಾಜವಾದಿ ನಾಯಕರಾಗಿದ್ದ ಜೆಪಿ, ಲೋಹಿಯಾ, ಅಶೋಕ್ ಮೆಹ್ತಾ, ಅಚ್ಯುತ್ ಪಟವರ್ಧನ್ ಮುಂತಾದವರ ಜೀವನಚರಿತ್ರೆ ಹಾಗೂ ಸಂಪೂರ್ಣ ಬರಹಗಳನ್ನು ಕೂಡ ನೀವು ಓದಬೇಕಾಗುತ್ತದೆ.

1934ರಲ್ಲಿ ಸಮಾಜವಾದಿ ಕಾಂಗ್ರೆಸ್ ಪಕ್ಷ ಸ್ಥಾಪಿತವಾದಾಗ ಗಾಂಧಿ ಅದನ್ನು ಸ್ವಾಗತಿಸಿದ್ದರು. ಅವರಿಗೆ ಇದರಿಂದ ಕಾಂಗ್ರೆಸ್‍ನೊಳಗೆ ಹೊಸ ಮಂಥನವೊದಕ್ಕೆ ಕಾರಣವಾಗಬಹುದೆಂಬ ಆಶಯ ಇತ್ತು ಹಾಗೂ ಅವರು ‘ಸಮಾಜವಾದ’ ಎನ್ನುವ ಹೊಸ ಪದದ ಕುರಿತು ಆಕರ್ಷಣೆ ಹೊಂದಿದ್ದರು; ಇದೊಂದು ಸುಂದರ ಪದವೆಂದೂ ಹಾಗೂ ಸಮಾಜವಾದಿ ಪಕ್ಷ ಹುಟ್ಟುವ ಮುನ್ನವೇ ತಾವು ಸಮಾಜವಾದಿಯಾಗಿದ್ದುದಸಾಗಿಯೂ ಹೇಳಿದ್ದರು. ಹೌದು, ಮಾರ್ಕ್ಸ್ ವಾದವನ್ನು ಅನುಸರಿಸುವ ಮಟ್ಟಿಗೆ ಅವರು ಸಮಾಜವಾದಿಗಳೊಂದಿಗೆ ಹಲವು ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು, ಮುಖ್ಯವಾಗಿ ಅಹಿಂಸೆಯನ್ನು ತತ್ವವಾಗಿ ಒಪ್ಪದಿದ್ದ ಕಾರಣಕ್ಕೆ. ಆದರೆ ಸಮಾಜವಾದಿ ಪಕ್ಷ ಮಾರ್ಕ್ಸ್‍ವಾದವನ್ನು ಪಕ್ಷದ ನಿಲುವಿನ ಸ್ಥಾನದಿಂದ (ಇದು ಸ್ಪಷ್ಟವಾಗಿ ಸಂಭವಿಸಿದ್ದು ಮೊದಲ ಮಹಾÀ್ಯ ಚುನಾವಣೆಯಲ್ಲಿ ದೊಡ್ಡದಾಗಿ ಸೋತ ಬಳಿಕ) ಬಿಟ್ಟಮೇಲೆ ಗಾಂಧಿ ನಿಧಾನವಾಗಿ ಸಮಾಜವಾದಿಗಳೆಡೆಗೆ, ವಿಶೇಷವಾಗಿ ಜೆಪಿ ಮತ್ತು ಲೋಹಿಯಾರೆಡೆಗೆ ವೈಯಕ್ತಿಕ ಹಾಗೂ ತಾತ್ವಿಕ ಒಲವನ್ನು ಬೆಳೆಸಿಕೊಂಡರು. ಇಂತಹ ಸನ್ನಿವೇಶದಲ್ಲಿ ಹಾಗೂ ಕಾಂಗ್ರೆಸ್‍ನ ಹಿರಿಯ ನಾಯಕತ್ವದೊಡನೆ ಭ್ರಮ ನಿರಸನರಾಗುತ್ತಿದ್ದ ವೇಳೆಯಲ್ಲಿ ಗಾಂಧಿ 1947ರಲ್ಲಿ ನೆಹರೂರವರಿಗೆ ಜೆಪಿ ಅವರನ್ನು 1948ನೇ ಇಸವಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕಾಗಿ ಸೂಚಿಸಿದರು. ಆದರೆ ನೆಹರೂ ಈ ಸಲಹೆಯನ್ನು ಒಪ್ಪಲಿಲ್ಲವೆಂದು ಹೇಳಲಾಗುತ್ತದೆ, ಹಾಗೂ ಇದರ ಬದಲಾಗಿ ಆಚಾರ್ಯ ನರೇಂದ್ರ ದೇವ ಅವರನ್ನು ಸೂಚಿಸಿದರು ಮತ್ತು ಕೊನೆಯಲ್ಲಿ ಪಕ್ಷ ಬಾಬು ರಾಜೇಂದ್ರ ಪ್ರಸಾದ್ ಅವರನ್ನು ಆಯ್ದುಕೊಂಡಿತು,. ಈ ನಿಟ್ಟಿನಲ್ಲಿ ನಿಮಗೆ ಯಾವುದೇ ಆಧಾರ ಬೇಕಿದ್ದಲ್ಲಿ ನೀವು ಜೆಪಿ ಅವರ ಜೀವನ ಚರಿತ್ರೆಗಳಲ್ಲಿನ ಈ ಕುರಿತ ಭಾಗಗಳನ್ನು ಓದಬಹುದು. ಉದಾಹರಣೆಗೆ ಅಜಿತ್ ಭಟ್ಟಾಚಾರ್ಯ ಅವರ “Unfinished revolution : A biography of JP”,, ಭಾರತೀಯ ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವ ಸುಧಾನ್ಶು ರಂಜನ್ ಅವರ “Jayaprakash Narayan: Prophet of People’s power”(ಅಧಿಕೃತ ಜೀವನ ಚರಿತ್ರೆ, ನೀವು ನಿಮ್ಮ ಅಧಿಕೃತ ಇತಿಹಾಸವನ್ನು ಹೇಳಲು ‘ಅಧಿಕೃತ/ಧೃಡೀಕೃತ ಆಧಾರ’ವಾಗಿ ತೆಗೆದುಕೊಳ್ಳುವಂತಹದ್ದು), ಮಿನೂ ಮಸಾನಿ ಅವರ “Is JP the answer” ಹಾಗೂ ಅಲನ್ ಮತ್ತು ವೆಂಡಿ ಸ್ಕಾರ್ಫೆ ಅವರ “JP: His biography”.

ವಾಸ್ತವವಾಗಿ ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ, ಒಟ್ಟು ದೇಶದ ಸ್ಥಿತಿಗೆ ಮುಖ್ಯವಾದ ಅಹಿಂಸೆ, ಸತ್ಯ ಮತ್ತು ದೇವರು, ¸ಪ್ರಭುತ್ವದ ಮೂಲಭೂತ ಪಾತ್ರ, ತಂತ್ರಜ್ಞಾನ, ಆಧುನಿಕ ಯುದ್ಧ ಮತ್ತು ಶಸ್ತ್ರಗಳು, ವಿಭಜನೆ, ಸಂವಿಧಾನ ಸಬೆಯು ರಚನೆ ಇತ್ಯಾದಿಗಳ ಕುರಿತು ಗಾಂಧಿಯವರು ಅತ್ಯಂತ ಗಹನವಾದ ಸಂಭಾಷಣೆಗಳನ್ನು ನಡೆಸಿದ್ದು ಸಮಾಜವಾದಿಗಳ ಜೊತೆಯಲ್ಲಿ. ಈ ತರಹದ ಸಂವಾದಕ್ಕೆ ಬೌದ್ಧಿಕವಾಗಿ ಸಮರ್ಥರಿದ್ದ ಕೆಲವೇ ಕೆಲವರಲ್ಲಿ ಸಮಾಜವಾದಿಗಳು ಒಬ್ಬರಾಗಿದ್ದರಿಂದ. ಅವರನ್ನು ಹೊರತುಪಡಿಸಿದರೆ, ಗಾಂಧಿಯವರ ಬಹುತೇಕ ಅನುಯಾಯಿಗಳು ‘ಹೌದಪ್ಪ’ಗಳು. ಲೋಹಿಯಾ ಅವರು ಗಾಂಧಿಯವರೊಡನೆ ಯಾವ ತರಹದ ಸಂಬಂಧ ಹೊಂದಿದ್ದರೆಂದು ನೀವು ತಿಳಿಯಲು ನೀವು ‘ಹರಿಜನ್’ ಪತ್ರಿಕೆಯ ಹಳೆಯ ಸಂಚಿಕೆಗಳನ್ನು ಓದಬೇಕು. ಗಾಂಧಿಯವರು ‘Congress Socialist’ ಪತ್ರಿಕೆಯಲ್ಲಿನ (ಲೋಹಿಯಾ ಅವರು ಸಂಪಾದಕರಾದ ಪತ್ರಿಕೆ) ಲೋಹಿಯಾ ಅವರ ಹಲವು ಲೇಖನಗಳನ್ನು ‘ಹರಿಜನ್’ ಪತ್ರಿಕೆಯಲ್ಲಿ ಮರುಪ್ರಕಟಿಸಿದ್ದರು. ಲೋಹಿಯಾ ಅವರು ದೇಶದ್ರೋಹದ ಆರೋಪದ ಮೇಲೆ ಹಾಗೂ ಗೋವಾ ಸ್ವಾತಂತ್ರ್ಯ ಮುಂತಾದ ವಿಷಯಗಳ ಮೇಲೆ ಕೋರ್ಟಿಗೆಳೆಯಲ್ಪಟ್ಟಾಗಲೆಲ್ಲ ಲೋಹಿಯಾ ಅವರ ವಾದದ ಬರಹರೂಪವನ್ನು ಗಾಂಧಿ ಪ್ರಕಟಿಸಿದ್ದರು. ಎಷ್ಟೆಂದರೂ ಲೋಹಿಯಾ ಅವರು ಗಾಂಧಿಯವರ ಸಮೀಪದ ಹಿಂಬಾಲಕರಾಗಿದ್ದ ಹೀರಾಲಾಲ್ ಅವರ ಪುತ್ರ. ಅಂತೆಯೇ ಜೆಪಿ ಗಾಂಧಿಯವರ ಮತ್ತೋರ್ವ ಸಮೀಪದ ಹಿಂಬಾಲಕರಾಗಿದ್ದ ಬ್ರಿಜ್ ಕಿಶೋರ್ ಪ್ರಸಾದ್ ಅವರ ಅಳಿಯರಾಗಿದ್ದರು.

ಸಮಾಜವಾದಿಗಳು ಬಂಧಿತರಾದಾಗ, ಕಿರುಕುಳಕ್ಕೊಳಪಟ್ಟಾಗಲೆಲ್ಲ ಗಾಂಧಿ ಅವರು ‘ಹರಿಜನ್’ ನಲ್ಲಿ ಬರೆದು ಪ್ರಕಟಿಸಿದ ಪತ್ರಗಳನ್ನು ನೀವು ಓದಬೇಕು. ವಿಶೇಷವಾಗಿ ಅವರು ಜೆಪಿ ಹಾಗೂ ಲೋಹಿಯಾ ಅವರನ್ನು ದೇಶದ ಅಮೂಲ್ಯ ಆಸ್ತಿಯೆಂದೂ, ಅಪೂರ್ವ ಬೌದ್ಧಿಕ ಸಾಮರ್ಥ್ಯ, ವ್ಯಕ್ತಿತ್ವ ಹಾಗೂ ಧೈರ್ಯವುಳ್ಳವರೆಂದೂ ಹೇಳಿದ ಪತ್ರಗಳನ್ನು ನೀವು ಓದಬೇಕು. ಬಿಮಲ್ ಪ್ರಸಾದ್ ಅವರ ‘Selected works of JP’ ಹಾಗೂ ಮಸ್ತ್‍ರಾಂ ಕಪೂರ್ ಅವರು ಸಂಕಲಿಸಿದ ‘Complete works of Dr. Rammanohar Lohia’ದ ಎಲ್ಲ ಪುಟಗಳನ್ನು ಓದುವುದಂತೂ ಸರಿ, ರಾಮ್ ಮನೋಹರ್ ಲೋಹಿಯಾ ಆವರ ‘Marx, Gandhi and Socialism’ ನ ಕೆಲವು ಅಧ್ಯಾಯಗಳನ್ನಾದರೂ ಓದಬೇಕೆನ್ನುವುದು ನನ್ನ ಸಲಹೆ. ಇಷ್ಟರ ಜೊತೆಗೆ ನಿಮ್ಮ ಅನುಮತಿ ಇದ್ದಲ್ಲಿ, ಗಾಂಧಿ ತಮ್ಮ ನೌಕಾಲಿ ಯಾತ್ರೆ ಮತ್ತು ಅಂದು ಯುದ್ಧಭೂಮಿಯಂತಿದ್ದಂತಹ ದೆಹಲಿಯ ನಿರಾಶ್ರಿತ ಶಿಬಿರಗಳಿಗೆ ಹೋಗಲು ಜೊತೆಯಾಗಲೆಂದು ಕರೆದಿದ್ದು ಲೋಹಿಯಾ ಅವರನ್ನು ಎಂದು ನೆನಪಿಸಲಿಚ್ಛಿಸುತ್ತೇನೆ. 28 ಜನವರಿ 1948ರಲ್ಲಿ ಗಾಂಧಿ ಹೆಗಲ ಮೇಲೆ ಕೈಯಿಟ್ಟು ಹೇಗೆ ದೇಶದ ರಾಜಕೀಯದಲ್ಲಿ ಹೊಸ ಪಾತ್ರವನ್ನು ವಹಿಸಬೇಕೆಂದು ದೀರ್ಘ ಸಂಭಾಷಣೆ ನಡೆಸಿದ್ದು ಲೋಹಿಯಾ ಅವರೊಡನೆ ಎಂದು ನಿಮಗೆ ತಿಳಿಸಲಿಚ್ಛಿಸುತ್ತೇನೆ, ಇದೇ ವಿಷಯದ ಕುರಿತು ಗಾಂಧಿಯವರು ಲೋಹಿಯಾ ಅವರಿಗೆ ಇನ್ನೆರಡು ದಿನಗಳ ನಂತರ ಬರಹೇಳಿದ್ದನ್ನೂ ಕೂಡ.

ಇದನ್ನೆಲ್ಲ ನಿಮಗೆ ವಿವರವಾಗಿ ಬರೆಯಬೇಕೆಂದು ನಿರ್ಧರಿಸಿದ್ದು ಏಕೆಂದರೆ ನೀವು ಇವತ್ತಿನ ಮುಂಚೂಣಿಯಲ್ಲಿರುವ ಸಾರ್ವಜನಿಕ ಬುದ್ಧಿಜೀವಿ ಹಾಗೂ ನೀವು ಸಾರ್ವಜನಿಕ ವೇದಿಕೆಗಳಲ್ಲಿ ಹೇಳುವ ಮತ್ತು ಬರೆಯುವ ಸಂಗತಿಗಳನ್ನು ಜನ ನಂಬುತ್ತಾರೆ. ನೀವು, ಬಹುಶಃ ಉದ್ದೇಶಪೂರ್ವಕವಾಗಿಯಲ್ಲದೇ ನಿಮ್ಮ ಸಾಮಾಜಿಕ ಹಿನ್ನಲೆ ಹಾಗೂ ರಾಜಕೀಯ ಧೋರಣೆಗಳ ವಾರಸುದಾರಿಕೆಯ ಕಾರಣದಿಂದ ಉಂಟಾಗುವ, ಅರ್ಧ ಸತ್ಯಗಳನ್ನು ಹರಡುವುದು ನನಗೆ ಇಷ್ಟವಿಲ್ಲ. ಅಧಿಕೃತ ದಾಖಲೆಗಳ ಮೇಲಷ್ಟೇ ಅವಲಂಬಿತವಾದ ನಿಮ್ಮ ಇತಿಹಾಸದ, ವ್ಯಾಖ್ಯಾನ ಪಶ್ಚಿಮದ ಚಾಳಿಗಳ ಮೇಲೆ ಆಧಾರಿತವಾಗಿದ್ದು ಹಾಗೂ ಗಾಂಧಿಯವರಿಗೆ ಈ ತರಹ ಇತಿಹಾಸದ ಬರವಣಿಗೆ ಇಷ್ಟವಿರಲಿಲ್ಲ. ‘ಅಧಿಕೃತ/ಧೃಡೀಕೃತ ದಾಖಲೆ’ಗಳನ್ನು ಹೊರತೆಗೆದು ಪ್ರಕಟಿಸುವ ಹಸಿವಿರುವ ಈ ವಿಧಾನ ಯಾವತ್ತೂ ಇತಿಹಾಸದ ತೆರೆದ ಗಾಯಗಳನ್ನು ವಾಸಿಯಾಗದಂತೆ ಇಡುತ್ತದೆ ಎಂದು ಭಾವಿಸಿದ್ದ ಅವರು ಇದನ್ನು ಆಧುನಿಕ ನಾಗರೀಕತೆಯ ಶಾಪ ಎಂದು ಕರೆದಿದ್ದರು.

ಕನ್ನಡವನ್ನು ಮಾತನಾಡುವ ರಾಜ್ಯವಾದ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಮೂರು ದಶಕಗಳ ಕಾಲ ಇದ್ದುಕೊಂಡೂ ನೀವು ಕನ್ನಡ ಮಾತನಾಡಲಾಗದಿರುವುದರ ಬಗ್ಗೆಯೂ ನಾನು ಆ ದಿನ ಮಾತನಾಡಿದ್ದೆ. ನೀವು ಬೆಂಗಳೂರಿಗೆ ನಲವತ್ತರ ವಯಸ್ಸಿನಲ್ಲಿ ಬಂದಿರೆನ್ನುವುದೂ ಹಾಗೂ ಬೆಂಗಳೂರಿನಲ್ಲಿ ಕನ್ನಡ ತಿಳಿದಿರದೆಯೂ ಬದುಕುವ ಐಷಾರಾಮ ಇರುವ ಬಗ್ಗೆ ನೀವು ಹೇಳಿದ್ದೂ ಒಬ್ಬ ಸಾರ್ವಜನಿಕ ಬುದ್ಧಿಜೀವಿಗೆ ಹೊಂದುವಂತಹದ್ದಲ್ಲ. ದಯವಿಟ್ಟು ಇದನ್ನು ಅಂಧ ಭಾಷಾಭಿಮಾನದ ಕುರುಹಾಗಿ ತಪ್ಪು ತಿಳಿಯಬಾರದು, ನಾನು ಅದನ್ನು ಸಮರ್ಥಿಸುವವನಲ್ಲ. ಇದು ಸಮಾಜದೊಡಗಿನ ಸಂಪರ್ಕ ಹಾಗೂ ಸಾಂಸ್ಕೃತಿಕವಾಗಿ ಬೇರೂರುವ ಪ್ರಶ್ನೆ. ಇವುಗಳ ಕೊರತೆ ನಿಮಗೆ ಕನ್ನಡದ ಸಾಹಿತ್ಯ ಪರಂಪರೆಯ ಬಗ್ಗೆ ಇರುವ, ನೀವು ನಿಮ್ಮ ಸಾರ್ವಜನಿಕ ಭಾಷಣಗಳಲ್ಲಿ ತೋರಿಸಿಕೊಳ್ಳುವ, ಸೀಮಿತ ಜ್ಞಾನದಲ್ಲಿ ಕಾಣಬಹುದು. ಈ ಸಂಬಂಧವಾಗಿನಿಮಗೆ ಯುಆರ್ ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಹಾಗೂ ಡಿ ಆರ್ ನಾಗರಾಜ್ ಅವರಷ್ಟೇ ಉಲ್ಲೇಖಾರ್ಹರಾಗುತ್ತಾರೆ ಎಂಬುದು ಇದಕ್ಕೆ ನಿದರ್ಶನ.

ದಯವಿಟ್ಟು ಇನ್ನೂ ಹಲವರು ಈ ತರಹದ ಬರಹಗಾರರಿದ್ದಾರೆಂಬುದನ್ನು ನೀವು ನೆನೆಪಿನಲ್ಲಿಡಬೇಕು, ಇವರಲ್ಲಿ ಹಲವರು ನೀವು ಹೇಳಿದ ಮೂವರಿಗಿಂತ ಕನ್ನಡ ಸಾಹಿತ್ಯ ಪರಂಪರೆಗೆ ಉತ್ತಮ ಕೊಡುಗೆಗಳನ್ನು ನೀಡಿದ್ದಾರೆ. ಕುವೆಂಪು ಮತ್ತು ಶಿವರಾಮ ಕಾರಂತರಂತಹ ಘಟಾನುಘಟಿಗಳನ್ನು ಬಿಡಿ. ಆಧುನಿಕ ಕನ್ನಡದ ಬೌದ್ಧಿಕ ಪರಂಪರೆಯನ್ನು ಕುರಿತು ಮಾತನಾಡುವಾಗ ಪಿ. ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಕೆ ವಿ ಸುಬ್ಬಣ್ಣ, ಚಂದ್ರಶೇಖರ ಕಂಬಾರ, ದೇವನೂರ ಮಹದೇವ ಮತ್ತು ಎಚ್ ಎಸ್ ಶಿವಪ್ರಕಾಶ್ ಅವರನ್ನು ಬಿಡುವುದು ಸಾಂಸ್ಕೃತಿಕ ಅಪರಾಧವೇ ಸರಿ! ನಾನು ‘ಇಂಗ್ಲಿಷ್ ಭಾವಿಯ ಮುದ್ದು ಕಪ್ಪೆಗಳು’ ಎಂದು ಕರೆಯುವ ನಿಮ್ಮಂತಹವರು ನಿಮ್ಮ ಇಂಗ್ಲಿಷ್ ಭಾಷಾ ಪಾಂಡಿತ್ಯ ಪ್ರದರ್ಶನದ ಮೂಲಕ ಈ ಅಪರಾಧವನ್ನು ಮಾಡುವ ಸಾಹಸ ತೋರಿಸುತ್ತೀರಿ. ನನ್ನ ಪ್ರಕಾರ ಭಾರತದವರಾಗಿದ್ದು ಯಾವೊಂದು ಭಾರತೀಯ ಭಾಷೆಯಲ್ಲಿಯೂ ಪರಿಣಿತಿಯಿಲ್ಲದವರು ನಿಜವಾದ, ನಂಬಿಕಾರ್ಹ ಬುದ್ಧಿಜೀವಿಗಳಾಗಲಾರರು. ನೀವು ಹೇಳಿದಂತೆ ಖಂಡಿತವಾಗಿಯೂ ದೇವಿ ಸರಸ್ವತಿ ಇಂಗ್ಲಿಷ್ ಮಗುವನ್ನು ಕೂಡ ಹೆತ್ತಿದ್ದಾಳೆ. ಆದರೆ ಆ ಕೂಸಿನ ಜನನವಾಗಿದ್ದು ಇಂಗ್ಲೆಂಡಿನಲ್ಲಿ. ನಮ್ಮ ಮಟ್ಟಿಗೆ ಹೇಳುವುದಾದರೆ ನಮಗೆ ಇಂಗ್ಲಿಷ್ ಸಾವಯವ ಭಾಷೆಯಲ್ಲ ಮತ್ತು ಇದನ್ನು ಭಾರತೀಯ ಭಾಷೆಗಳ ಸಾಂಸ್ಕೃತಿಕ ಸಂವೇದನೆಗಳ ಆಸರೆಯ ಮೇಲಷ್ಟೇ ಸಾರ್ವಜನಿಕ ಉದ್ದೇಶಗಳಿಗೆ ಬಳಸಬಹುದು.

ನನ್ನ ಇಂಗ್ಲಿಷ್‍ನ ಸೀಮಿತ ಜ್ಞಾನದೊಂದಿಗೆ ನಿಮ್ಮ ಅವತ್ತಿನ ಮಾತುಗಳ ಕುರಿತು ನನ್ನ ನಿಲುವು ಹಾಗೂ ವಿಚಾರಗಳನ್ನು ನಿಮಗೆ ತಲುಪಿಸುವುದರಲ್ಲಿ ಎಷ್ಟು ಯಶಸ್ವಿಯಾಗಿದ್ದೇನೋ ಗೊತ್ತಿಲ್ಲ. ನನ್ನ ಈ ದೀರ್ಘ ಪತ್ರವನ್ನು ಅದಕ್ಕೆ ಅಗತ್ಯವಾದ ಸಹಾನುಭೂತಿಯೊಂದಿಗೇ ನೀವು ಓದಿದ್ದೇರೆಂದು ಆಶಿಸುತ್ತೇನೆ. ನಿಮಗೆ ಉತ್ತರ ಬರೆಯಬೇಕೆಂದೆನಿಸಿದರೆ ದಯವಿಟ್ಟು ಬರೆಯಿರಿ.

ಶುಭ ಹಾರೈಕೆಗಳೊಂದಿಗೆ,

ಡಿ ಎಸ್ ನಾಗಭೂಷಣ
ಶಿವಮೊಗ್ಗ


ಗುಹಾ ಅವರ ಉತ್ತರ:

ಪ್ರಿಯ ಪ್ರೊ.ನಾಗಭೂಷಣ ಅವರೆ,

ನಿಮ್ಮ ಇ-ಮೇಲ್‍ಗಾಗಿ ಧನ್ಯವಾದ. ನಾನು, ಅಂದು ನಿಮ್ಮ ಪ್ರಶ್ನೆಗೆ ಉತ್ತರವಾಗಿ ಸ್ವಲ್ಪ ಸುದೀರ್ಘವಾಗಿಯೇ ವಿವರಿಸಿದಂತೆ, ಸಮಾಜವಾದಿ ಪರಂಪರೆಯ ಬಗ್ಗೆ ಬಹಳ ಮೆಚ್ಚುಗೆ ಹೊಂದಿದವನು ಮತ್ತು ಇದು ಸಮಕಾಲಿನ ಮಾಧ್ಯಮಗಳಲ್ಲಿನ ಸಾರ್ವಜನಿಕ ಬದುಕಿನಿಂದ ಕಣ್ಮರೆಯಾದ ಬಗ್ಗೆ ವಿಷಾದಿಸುವವನು. ನನ್ನ ಭಾರತೀಯ ರಾಜಕೀಯ ಚಿಂತಕರನ್ನು ಕುರಿತ ಸಂಗ್ರಹದಲ್ಲಿ ಮಾರ್ಕ್ಸ್ ವಾದಿಗಳನ್ನು ಸೇರಿಸದೆಯೇ ಜೆಪಿ, ಲೋಹಿಯಾ ಮತ್ತು ಕಮಲಾದೇವಿ ಅವರಲ್ಲಿ ಮೂವರು ಸಮಾಜವಾದಿಗಳನ್ನು ಸೇರಿಸಿದ್ದು, ಸಮಾಜವಾದಿಗಳನ್ನು ನಾನು ಉನ್ನತ ಸ್ಥಾನದಲ್ಲಿಡುತ್ತೇನೆಂದು ನಿಮಗೆ ಮನವರಿಕೆ ಮಾಡಬಲ್ಲದೆಂದು ವಿಶ್ವಾಸಿಸುತ್ತೇನೆ.

ನೀವು ನಿಮ್ಮ ಪತ್ರದಲ್ಲಿ ಅತಿಶಯೋಕ್ತಿ ಹಾಗೂ ಉತ್ಪ್ರೇಕ್ಷೆಯನ್ನು ಬಳಸಿದ್ದನ್ನು ನಾನು ವಿಶಾದಿಸುತ್ತೇನೆ. ನಾನು ‘ಸಮಾಜವಾದಿಗಳು ಗಾಂಧಿಯವರ ಒಡನಾಟದ ಹೊರವೃತ್ತದ ಹೊರವೃತ್ತದಿಂದಲೂ ಹೊರಗಿದ್ದವರು ಮತ್ತು ಹಾಗಾಗಿ ಗಾಂಧಿ ಅವರೊಡನೆ ಹೇಳಿಕೊಳ್ಳುವಂತಹ ಮಾತುಕತೆ ನಡೆಸಿರಲಿಕ್ಕಿಲ್ಲ’ ಎಂದು ಹೇಳಿದನೆಂದು ನೀವು ಬರೆದಿದ್ದೀರಿ. ಆದರೆ ನಾನು ಇಂತಹ ಅಸಂಬದ್ಧ ಹೇಳಿಕೆಯನ್ನು ಯಾವತ್ತೂ ಮಾಡಲಿಕ್ಕಿಲ್ಲ. ನಾನು ನಿಜವಾಗಿಯೂ ಹೇಳಿದ್ದು ಇದು: ಗಾಂಧಿಯವರಿಗೆ ವೈಯಕ್ತಿಕವಾಗಿ ಹತ್ತಿರವಾಗಿರುವ ಮಟ್ಟಿಗೆ ಹೇಳುವುದಾದರೆ ಸಮಾಜವಾದಿಗಳು ಅವರ ಸಮೀಪದ ವಲಯದಲ್ಲಿ ಇರಲಿಲ್ಲ. ವಾಸ್ತವಾಂಶಗಳು ಇವು:

ಗಾಂಧಿಯವರ ಅತ್ಯಂತ ಸಮೀಪದ ವಲಯ ಆಶ್ರಮವಾಸಿಗಳದ್ದು, ಮಹದೇವ್, ಮೀರಾ, ವಿನೋಬಾ, ಕುಮಾರಪ್ಪ ಅಂತಹವರದ್ದು.

ಗಾಂಧಿಯವರ ಎರಡನೇ ಸಮೀಪದ ವಲಯ ನೆಹರೂ, ಪಟೇಲ್ ಮತ್ತು ರಾಜಾಜಿ, ಕ್ರಮವಾಗಿ ಅವರ ಹೃದಯ, ಕೈ ಮತ್ತು ಮಿದುಳು ಎನ್ನಿಸಿಕೊಂಡವರು ಹಾಗೂ ನಿರ್ವಿವಾದವಾಗಿ ಅವರ ಅತ್ಯಂತ ಸಮೀಪದ ರಾಜಕೀಯ ಜೊತೆಗಾರರು.

ಗಾಂಧಿಯವರ ಮೂರನೇ ಸಮೀಪದ ವಲಯ ರಾಜಕೀಯ ಅಥವಾ ಆಶ್ರಮ ಜೀವನದಲ್ಲಿರದ ಅವರ ಸ್ನೇಹಿತರದ್ದು, ಟಾಗೋರ್, ಸಿಎಫ್ ಆಂಡ್ರೂಸ್, ಪ್ರಾಣ್‍ಜೀವನ್ ಮಿತ್ರ,ಪೊಲಕ್, ಕಾಲ್ಲೆನ್ಬಾಕ್ ಇನ್ನಿತರರು.

ಗಾಂಧಿಯವರ ನಾಲ್ಕನೇ ಸಮೀಪದ ವಲಯ ಇನ್ನಿತರ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ಸಿಗರು ಆಜಾದ್, ರಾಜೇಂದ್ರಬಾಬು, ಕೃಪಲಾನಿ, ಪಂತ್, ಸಿ ಆರ್ ದಾಸ್, ಸರೋಜಿನಿ ನಾಯ್ಡು ಇನ್ನಿತ್ಯಾದಿ.

ಸೋಶಿಯಲಿಸ್ಟರು ಈ ತರಹದ ಗುಂಪುಗಳಲ್ಲಿ ಬಹುಶಃ ಐದನೇ ಸಮೀಪದ ವಲಯದಲ್ಲಿ ಸೇರುವಂತಹವರು. ಗಾಂಧಿ ಅವರೊಡನೆ, ಇತರೆ ಬಹಳ ಜನರೊಡನೆಯಂತೆಯೇ, ಅವಶ್ಯವಾಗಿ ಒಡನಾಡಿದ್ದರು. ನಾನು ನನ್ನ ಭಾಷಣದಲ್ಲಿ ಕಮಲಾದೇವಿ ಅವರೊಡನೆ ಅವರು ಹೊಂದಿದ ಸಾಮೀಪ್ಯದ ಕುರಿತು ಮಾತನಾಡಿದ್ದೆ. 1934ರಲ್ಲಿ ಅವರು ಮಸಾನಿ ಅವರೊಂದಿಗೆ ಸಮಾಜವಾದಿ ಕಾಂಗ್ರೆಸ್ ಪಕ್ಷದ ಬಗ್ಗೆ ಚರ್ಚೆ ಮಾಡಿದ್ದರು. 1920, 30, 40ರ ಚಳುವಳಿಗಲ್ಲಿ ಜೈಲಿಗೆ ಹೋದ ನೂರಾರು ಜನರ ಮೇಲಿದ್ದಂತೆ ಗಾಂಧಿಯವರಿಗೆ ಜೆಪಿ ಹಾಗೂ ಲೋಹಿಯಾ ಅವರ ಕುರಿತು ಮಮತೆ ಇತ್ತು ಹಾಗೂ 40ರಲ್ಲಿ ಅವರು ಜೆಪಿ ಹಾಗೂ ಲೋಹಿಯಾ ಅವರನ್ನು ಪ್ರಶಂಸಿಸಿದರು. ಆದರೆ ನೀವು ಗಾಂಧಿಯವರ ಬದುಕನ್ನು ಸಂಪೂರ್ಣ ದೃಷ್ಟಿಯಿಂದ ನೋಡಿದರೆ, ಅವರ ಎಲ್ಲ ಸಂಪರ್ಕಗಳಲ್ಲಿ ಮತ್ತು ಅವರು ನಡೆಸಿದ ಸಂಭಾಷಣೆಗಳಲ್ಲಿ ನಾನು ಈ ಮೇಲೆ ಬರೆದ ನಾಲ್ಕು ಹಂತದ ವಲಯಗಳು ಯಾವುದೇ ಸಮಾಜವಾದಿಗಳಿಗಿಂತಲೂ ಗಾಂಧಿಯವರಿಗೆ ಬಹಳ ಸಮೀಪವಾಗಿದ್ದರು.

ಮತ್ತು ನಿಮ್ಮ ಪತ್ರದಲ್ಲಿ ನೀವು ಹೀಗೂ ಬರೆದಿದ್ದೀರಿ:
“ಆದರೆ ಸಮಾಜವಾದಿ ಪಕ್ಷ ಮಾರ್ಕ್ಸ್ ವಾದವನ್ನು ಪಕ್ಷದ ನಿಲುವಿನ ಸ್ಥಾನದಿಂದ (ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪಷ್ಟವಾಗಿ ಸೋತ ಬಳಿಕ) ಬಿಟ್ಟಮೇಲೆ ಗಾಂಧಿ ನಿಧಾನವಾಗಿ ಸಮಾಜವಾದಿಗಳೆಡೆಗೆ, ವಿಶೇಷವಾಗಿ ಜೆಪಿ ಮತ್ತು ಲೋಹಿಯಾ, ವೈಯಕ್ತಿಕ ಹಾಗೂ ತಾತ್ವಿಕ ಒಲವನ್ನು ಬೆಳೆಸಿಕೊಂಡರು.” ಮೊದಲ ಚುನಾವಣೆ ನಡೆದಿದ್ದು 1952ರಲ್ಲಿ; ಗಾಂಧಿಯವರು ನಿಧನರಾಗಿದ್ದು 1948ರಲ್ಲಿ. ಯಾವ ವಿಷಯದ ಬಗ್ಗೆ ನಾವಿಲ್ಲಿ ಮಾತನಾಡುತ್ತಿದ್ದೇವೆ?

ಈ ನಿಟ್ಟಿನಲ್ಲಿ ಅಲ್ಪರಾಗುವುದು ಅಥವಾ ವಿಪರೀತ ಸೂಕ್ಷ್ಮವಾಗಿ ನೋಡುವುದು ಅಗತ್ಯವಿಲ್ಲ ಎನ್ನುವುದು ನನ್ನ ಅಭಿಪ್ರಾಯ. ವಾಸ್ತವಾಂಶವೆಂದರೆ ಗಾಂಧಿಯವರಿಗೆ ಜೆಪಿ ಮತ್ತು ಲೋಹಿಯಾ ಅವರಿಗಿಂತ ಬಹಳ, ಬಹಳ ಹತ್ತಿರವಾದ ಹಲವು ಜನರಿದ್ದರು.

ಆದರೆ ಇಷ್ಟನ್ನು ಹೇಳಿಯೂ, ಸಮಾಜವಾದಿಗಳು ಗಾಂಧಿಯವರನ್ನು ಸೃಜನಾತ್ಮಕ ಹಾಗೂ ರಚನಾತ್ಮಕವಾಗಿ ಅರ್ಥೈಸಿದ್ದಾರೆ, ಗಾಂಧಿಯವರು ಬದುಕಿದ್ದಾಗಲೂ ಹಾಗೂ ಅವರು ನಿಧನರಾದ ಬಹಳ ಕಾಲದ ಬಳಿಕವೂ. ಭಾರತದ ಭೂತ, ವರ್ತಮಾನ ಹಾಗೂ ಭವಿಷ್ಯಕ್ಕೆ ಸಮಾಜವಾದದ ಕೊಡುಗೆ ಸಮಾಜವಾದಿಗಳನ್ನು, ಸತ್ಯಕ್ಕೆ ದೂರವಾಗಿ, ಗಾಂಧಿಯವರ ಸಮೀಪದ ಜೊತೆಗಾರರಾಗಿ ಮಾಡುವುದರ ಮೇಲೆ ಅವಲಂಬಿಸಿಲ್ಲ.

ಶುಭ ಹಾರೈಕೆಗಳೊಂದಿಗೆ,
ಆರ್ ಗುಹಾ
ನಂತರದ ಟಿಪ್ಪಣಿ : ನಾನು ಇತಿಹಾಸದ ವಾಸ್ತವಾಂಶಗಳಿಗೆ ಬೇಕೆಂದೆಲೇ ಸೀಮಿತಗೊಳಿಸಿಕೊಂಡಿದ್ದೇನೆ. ಕರ್ನಾಟಕಕ್ಕೆ ಹಾಗೂ ಭಾರತಕ್ಕೆ ನನ್ನ ಬದ್ಧತೆ ಏನು ಎನ್ನುವುದು ನಿಮಗೆ ಹೇಗೋ ಹಾಗೆಯೇ ನನ್ನ ಹಾಗೂ ನನ್ನ ಆತ್ಮಸಾಕ್ಷಿಯ ನಡುವಿನದ್ದು.

 

8 comments to “ಸಮಾಜವಾದಿಗಳೊಂದಿಗೆ ಗಾಂಧಿ : ಗುಹಾ – ಡಿ . ಎಸ್ . ನಾಗಭೂಷಣ ಸಂವಾದ ಭಾಗ ೧”
  1. But ramchandra guha must learn and speak kannada and better if he mixes Gandhi with lohia and quote kannada thinkers apart from those whom he often quotes and remembers. Nagbushan has raised very valid points.

  2. Is Nagabhushan raising questions about Guha’s stance on Gandhiji’s transactions with the Socialists of India or is he raising issues about the way History has been perceived or is he registering a protest against Guha for not learning Kannada for 3 decades? What is his problem actually? Not clear.
    By the way how much role language plays while deciding on somebody’s scholarship and knowledge?

  3. I really appreciate the question of correspondence between Gandhi and Socialists. It is really a profound matter to look into. But whether is it important to debate on the level of relationship socialists had with Gandhi, I really don’t know. We need details and discussions and love they carried through their correspondence to really pursue a better progress further. That’s what I certainly want to derive from the publication of this series. Waiting for further details of this conversation….

  4. Pingback: ಋತುಮಾನ | ಸಮಾಜವಾದಿಗಳೊಂದಿಗೆ ಗಾಂಧಿ : ಗುಹಾ – ಡಿ . ಎಸ್ . ನಾಗಭೂಷಣ ಸಂವಾದ ಭಾಗ ೨

  5. Pingback: ಋತುಮಾನ | ಸಮಾಜವಾದಿಗಳೊಂದಿಗೆ ಗಾಂಧಿ : ಗುಹಾ – ಡಿ . ಎಸ್ . ನಾಗಭೂಷಣ ಸಂವಾದ ಭಾಗ ೩

  6. Pingback: ಋತುಮಾನ | ಸಮಾಜವಾದಿಗಳೊಂದಿಗೆ ಗಾಂಧಿ : ಗುಹಾ – ಡಿ . ಎಸ್ . ನಾಗಭೂಷಣ ಸಂವಾದ ಭಾಗ ೪

Leave a Reply to Ashwini Cancel reply