ಬೆಜವಾಡ ವಿಲ್ಸನ್ ಸಂದರ್ಶನ – ಭಾಗ ೧ : ನನ್ನ ಕೈಗಳನ್ನು ನೋಡು.. ನನ್ನ ಬದುಕು ಹೇಗಾಯ್ತು ನೋಡು..

ಮನುಷ್ಯನ ಮಲಮೂತ್ರಗಳನ್ನು ಮನುಷ್ಯನೇ ತನ್ನ ಕೈಯಾರೆ ಶುಚಿಗೊಳಿಸುವ ವ್ಯವಸ್ಥೆಯನ್ನು ನಿರ್ಮೂಲನಗೊಳಿಸಲು 35 ವರ್ಷಗಳಿಂದ ಸಫಾಯಿ ಕರ್ಮಚಾರಿ ಅಂದೋಲನ ಎಂಬ ಸಂಘಟನೆಯನ್ನು ಕಟ್ಟಿಕೊಂಡು ಹೋರಾಡುತ್ತಿದ್ದಾರೆ ಬೆಜವಾಡ ವಿಲ್ಸನ್. ಕರ್ನಾಟಕದ  ಕೋಲಾರ ಜಿಲ್ಲೆಯಲ್ಲಿ ಹುಟ್ಟಿದ ವಿಲ್ಸನ್, ಈ ವಿಷಯವಾಗಿ  ಕ್ಷೇತ್ರ ಕಾರ್ಯ ಹಾಗೂ  ಕಾನೂನು ಹೋರಾಟ ಎರಡನ್ನೂ ಇವತ್ತಿಗೂ ಮುಂದುವರಿಸುತ್ತಾ ಬಂದಿರುವ  ಅವರಿಗೆ  2016ರಲ್ಲಿ ಮ್ಯಾಗ್ಸೆಸೆ ಅವಾರ್ಡ್ ನೀಡಿ ಗೌರವಿಸಲಾಯಿತು.

ತಮಿಳಿನ ಪ್ರಸಿದ್ದ ಲೇಖಕ ಪೆರುಮಾಳ್ ಮುರುಗನ್ ಅವರು ಬೆಜವಾಡ ವಿಲ್ಸನ್ ರನ್ನು ಸಂದರ್ಶಿಸಿದ್ದಾರೆ .

ಹೆಸರು ಮಾತ್ರವೇ ಪರಿಚಯವಿದ್ದ ಅವರನ್ನು  2015 ಜನವರಿ ತಿಂಗಳಲ್ಲಿ ಬೇಟಿಯಾಗುವ ಅವಕಾಶ ದೊರಕಿತು.  ನನ್ನ ಮಾದೊರುಬಾಗನ್ಪುಸ್ತಕ ಸಮಸ್ಯೆಗೆ ಸಿಕ್ಕಿಕೊಂಡಾಗ ನನ್ನನ್ನು ಬೇಟಿಯಾಗಲೆಂದೇ ದಿಲ್ಲಿಯಿಂದ ನಾಮಕ್ಕಲ್ಲಿಗೆ ಬಂದರು. ಅವರ ಬರುವು, ಮಾತು ನನಗೆ ಬಹಳ ಸಮಾಧಾನ ನೀಡಿತು. ಮುಂದೆಯೂ ಹಲವು ಬಾರಿ ಭೇಟಿಯಾಗುವ ಅವಕಾಶಗಳು ಉಂಟಾದವು. ಮಿಂಚಂಚೆ ಮತ್ತು ಮೊಬೈಲ್ ಮೂಲಕವಾಗಿಯೂ ಸಂಪರ್ಕ ಬೆಳೆಯಿತು.    

ಮೊದಲ ಭೇಟಿಯಾದಾಗಿನಿಂದಲೂ ನಾನು ನನ್ನ ಸಂಸಾರದೊಂದಿಗೆ ದಿಲ್ಲಿಗೆ ಬರಬೇಕೆಂದು ಸಫಾಯಿ ಕರ್ಮಚಾರಿ ಆಂದೋಲನದ ಕಚೇರಿಯನ್ನು ನೋಡಬೇಕೆಂದು ಆಹ್ವಾನ ನೀಡುತ್ತಿದ್ದರು. ಮೂರು ವರ್ಷಗಳ ನಂತರ ಅವರ ಪ್ರೀತಿಯ ಆಹ್ವಾನವನ್ನು ಸ್ವೀಕರಿಸಿ 2017 ಆಗಸ್ಟ್ ತಿಂಗಳು ದಿಲ್ಲಿಗೆ ಹೋಗಿದ್ದೆವು. ನಾವು ಹೋದ ದಿನ ಇಬ್ಬರು ಪೌರ ಕರ್ಮಚಾರಿಗಳು ಮೃತಪಟ್ಟಿದ್ದರಿಂದ ಆ ಕುರಿತಾದ ಕೆಲಸಗಳ ನಡುವೆ ನಮ್ಮನ್ನು ಬರಮಾಡಿಕೊಂಡರು . ಎರಡು ಹಗಲು ರಾತ್ರಿಗಳು ಅಲೆದಾಡಿದವರು ಆ ಕೆಲಸವನ್ನು ಮುಗಿಸಿ ಬಂದಾಗ ಮಧ್ಯರಾತ್ರಿಯಾಗಿತ್ತು. ಆದರೂ ನನ್ನೊಂದಿಗೆ ಬಹಳ ಉತ್ಸಾಹದಿಂದ ಮಾತನಾಡಿದರು. ಅವರೊಂದಿಗೆ ಬೆಳಗಿನ ಜಾವ (15.08.2017) ಒಂದು ಗಂಟೆಯಿಂದ ಮೂರು ಗಂಟೆಯವರೆಗೂ ನಡೆದ ಸಂಭಾಷಣೆಯ ಸಂಕಲನವೇ ಈ  ಸಂದರ್ಶನ.      

ಪೆರುಮಾಳ್ ಮುರುಗನ್

ತಮಿಳಿನ ‘ಕಾಲಚ್ಚುವಡು’ ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಈ ಸಂದರ್ಶನವನ್ನು ಕೆ.ನಲ್ಲತಂಬಿ ಕನ್ನಡಕ್ಕೆ ತಂದಿದ್ದಾರೆ. ಹದಿನೇಳು ಪುಟಗಳಷ್ಟು ದೀರ್ಘವಾಗಿರುವ ಈ ಸಂದರ್ಶನವನ್ನು ಹಲವು ಭಾಗಗಳಲ್ಲಿ ಋತುಮಾನ ಪ್ರಕಟಿಸುತ್ತದೆ . ಈ ಸಂದರ್ಶನ ಪ್ರಕಟಣೆಗೊಳ್ಳುವಲ್ಲಿ ನಮ್ಮೊಂದಿಗೆ ಶ್ರಮಿಸಿದ ಟಿ. ಎಸ್ . ವೇಣುಗೋಪಾಲ್ ಅವರಿಗೆ ಕೃತಜ್ಞತೆಗಳು . 

ಪೆರುಮಾಳ್ ಮುರುಗನ್(ಪೆಮು): ಎರಡು ದಿನಗಳಿಂದ ನೀವು ಅಲೆದಾಡುತ್ತಿದ್ದೀರಿ. ದಿಲ್ಲಿಯಲ್ಲಿ ಇಬ್ಬರು ಪೌರ ಕರ್ಮಚಾರಿಗಳು ಒಂದೇ ದಿನ ಸತ್ತರಲ್ಲವೇ?

ಬೆಜವಾಡ ವಿಲ್ಸನ್ (ಬೆವಿ): ಹೌದು….ಈಗ ಇಬ್ಬರು. ಹೋದವಾರ ಮೂರು ಮಂದಿ. ಇಲ್ಲಿ ಮಾತ್ರವಲ್ಲ,  ಇಂತಹ ಘಟನೆಗಳು ಎಲ್ಲೆಡೆ ನಡೆಯುತ್ತಲೇ ಇವೆ.  ನಿಜ ಹೇಳಬೇಕೆಂದರೆ ಇವು ಹೊಸತಲ್ಲ. ಇತ್ತೀಚೆಗಷ್ಟೇ ಇವರ ಬದುಕು ಸಹಾ ಮುಖ್ಯವೆಂದು ಮಾತನಾಡಲು ತೊಡಗಿದ್ದೇವೆ. ನಾವು ನಗರೀಕರಣವನ್ನು ಎಂದು ಪ್ರಾರಂಭಿಸಿದವೋ ಅಂದಿನಿಂದ ಇಂತಹ ಮರಣಗಳೂ ಪ್ರಾರಂಭವಾದವು.

ಸಫಾಯಿ ಕರ್ಮಚಾರಿ ಆಂದೋಲನವು ಭಾರತ ಸರ್ಕಾರ ಹಾಗೂ ಪ್ರಾಂತೀಯ ಸರ್ಕಾರಗಳ ವಿರುದ್ಧ ಹೂಡಿದ ದಾವೆ ಹನ್ನೆರಡು ವರ್ಷಗಳಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. 2014 ಮಾರ್ಚ್ 27ರಂದು ಈ ಮೊಕದ್ದಮೆಯ ತೀರ್ಪು ಬಂತು. ಅದರಲ್ಲಿ ಭಾರತ  ಅಭಿವೃದ್ದಿ ಹೊಂದಿದ ದೇಶಗಳಲ್ಲಿ ಒಂದು; ಈ ರೀತಿ ಚರಂಡಿಗಳನ್ನು ಶುದ್ಧಗೊಳಿಸಲು ಯಾರೂ ಹೋಗಬೇಕಾಗಿಲ್ಲ, ತಂತ್ರಜ್ಞಾನ ಬಹಳವಾಗಿ ಬೆಳೆದಿದೆ, ಅದರ ಉಪಯೋಗವನ್ನು ಪಡೆದುಕೊಳ್ಳಬೇಕು, ಹಾಗೇನಾದರೂ ಮನುಷ್ಯರನ್ನು ನೇರವಾಗಿ  ಇಂತಹ ಕೆಲಸಗಳಿಗೆ ಬಳಸಿಕೊಂಡರೂ ಮುನ್ನೆಚ್ಚರಿಕೆಯ ಕೆಲವು ರಕ್ಷಣಾ ವ್ಯವಸ್ಥೆಗಳನ್ನು ಮಾಡಬೇಕು ಎಂದು ಆ ತೀರ್ಪಿನಲ್ಲಿ ಹೇಳಲಾಯಿತು. ನಮ್ಮಿಂದಲೂ ಕೆಲವು ಸಲಹೆಗಳನ್ನು ಕೇಳಿದ್ದರು. ನಮಗೆ ತಿಳಿದ ಕೆಲವನ್ನು ನಾವೂ ಹೇಳಿದ್ದೆವು.

ಅದರಲ್ಲಿ ಉಲ್ಲೇಖಿಸಿದ್ದ ರಕ್ಷಣಾ ವ್ಯವಸ್ಥೆ, ಸಲಕರಣೆಗಳ ಬಳಕೆ ಇಲ್ಲಿಯವರೆಗೆ ಎಲ್ಲೂ ಆಗಿಲ್ಲ.  ಆಳುಗುಂಡಿಯ(Manhole) ಪ್ರವೇಶ ದ್ವಾರ ಕಿರಿದಾಗಿರುವುದರಿಂದ ಒಬ್ಬ ಮನುಷ್ಯ ಅದರೊಳಗಿಳಿದು ಕೆಲಸಮಾಡುವುದು ಬಹಳ ಕಷ್ಟ. ಹಾಗಿರುವಾಗ ಅದರೊಳಗೆ ಆಕ್ಸಿಜನ್ ಸಿಲಿಂಡರಿನೊಂದಿಗೆ ಇಳಿದು ಹೇಗೆ ಕೆಲಸಮಾಡಲು ಸಾಧ್ಯ? ಹೀಗೆ ಹಲವಾರು ಸಮಸ್ಯೆಗಳಿವೆ.

1993ರಲ್ಲಿ ಅಧಿಕೃತವಾಗಿ  ‘ಮನುಷ್ಯರು ಚರಂಡಿಯನ್ನು ಸ್ವಚ್ಚ ಮಾಡುವ ಪದ್ಧತಿಯನ್ನು ರದ್ದುಗೊಳಿಸಲಾಯಿತು. ಅಂದಿನಿಂದ ಇಂದಿನವರೆಗೆ ಎಷ್ಟು ಮಂದಿ  ಈ ಕೆಲಸಕ್ಕೆ ಬಳಸಿಕೊಳ್ಳಲ್ಪಟ್ಟರು ಎಂಬ ಅಂಕಿ ಅಂಶಗಳನ್ನು ತೆಗೆದು, ಅವರ ಕುಟುಂಬದವರಿಗೆ ಹತ್ತು ಲಕ್ಷ ರೂಪಾಯಿ ಪರಿಹಾರ ಧನ ನೀಡಬೇಕೆಂದು ನ್ಯಾಯಾಲಯ 2014ರಲ್ಲಿ ತೀರ್ಪು ನೀಡಿತ್ತು. ತೀರ್ಪು ನೀಡಿದ 2014ರಿಂದ ಇಲ್ಲಿಯವರೆಗೆ ಸರಕಾರ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಸಮಾಜದ ಹಿತೈಷಿಗಳು, ಸ್ವಯಂಸೇವಕರು ಸಂಗ್ರಹಿಸಿದ ಸುದ್ಧಿಗಳ ಆಧಾರದ ಮೇಲೆ 1470 ಮಂದಿ ಈ ಕೆಲಸಕ್ಕೆ ಬಳಸಲ್ಪಟ್ಟು ಪ್ರಾಣ ತೆತ್ತ ಪ್ರಕರಣಗಳನ್ನು ನಾವು ದಾಖಲು ಮಾಡಿದ್ದೇವೆ.

ದಿನಪತ್ರಿಕೆಗಳಲ್ಲಿ ಸಾವಿನ ಸುದ್ಧಿ ಬಂದಿದೆ. ಅವುಗಳಲ್ಲಿ ಕೆಲವಕ್ಕೆ ಸಾಕ್ಷ್ಯಾಧಾರಗಳಿಲ್ಲ. ಸರಿಯಾದ ವೈದ್ಯಕೀಯ ಪ್ರಮಾಣಪತ್ರಗಳಿಲ್ಲ. ಮರಣ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆಯೂ ಒಂದು ಸಮಸ್ಯೆ ಇದೆ. ಹಲವು ಸಂದರ್ಭಗಳಲ್ಲಿ ಅಂತಹ ಪ್ರಮಾಣಪತ್ರಗಳಲ್ಲಿ ಸಾವಿಗೆ ಕಾರಣವನ್ನು ಸ್ಪಷ್ಟವಾಗಿ ನಮೂದಿಸಿರುವುದಿಲ್ಲ. ದಿಢೀರ್ ಮರಣ ಎಂಬಂತಹ ಉಲ್ಲೇಖಗಳಿರುತ್ತವೆ. ಕೈಯಾರೆ ಮಲ ಶುಚಿ ಮಾಡುತ್ತಾ ಯಾರಾದರೂ ಸತ್ತರೆ ಅದಕ್ಕೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಾಗಿರಬೇಕು. ಆದರೆ ಹಲವು ಸಂದರ್ಭಗಳಲ್ಲಿ ಎಫ್‍ಐಆರ್ ದಾಖಲೇ ಆಗಿರುವುದಿಲ್ಲ.  ಇದರಿಂದಾಗಿ ಹಲವು ಕುಟುಂಬಗಳಿಗೆ ಪರಿಹಾರ ಸಿಗುವುದೇ ಇಲ್ಲ.

ಸತ್ತವರ ಕುಟುಂಬಕ್ಕೆ ಸರ್ಕಾರದಿಂದ ಸಾಧ್ಯವಾದಷ್ಟು ನೆರವನ್ನು ದೊರಕಿಸಿಕೊಡಲು ಹೋರಾಡುತ್ತಿರುವ ನಮ್ಮ ಕ್ರಮ ಸರಿಯಿಲ್ಲ ಎಂದು ಆಮೇಲೆ ನಮಗನ್ನಿಸತೊಡಗಿತು. ನಾವು ಮಾಡುತ್ತಿರುವುದಾದರೂ ಏನು? ಒಬ್ಬರು ಸಾಯುವವರೆಗೆ ಕಾದು ಅವರ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ ಕೊಡಿಸುವುದಕ್ಕೆ ಪ್ರಯತ್ನಿಸುತ್ತಿದ್ದೇವೆ. ನಾವು ಸಾವನ್ನು ಲೆಕ್ಕ ಹಾಕಲು ತೊಡಗಿದ್ದೇವೆ. ಅಂದರೆ ಈ ಕೆಲಸದಲ್ಲಿ ತೊಡಗಿಸಿಕೊಂಡು ಮನುಷ್ಯರ ಮರಣಗಳನ್ನು ಒಂದು, ಎರಡು, ಮೂರು ಎಂದು ಎಣಿಸುತ್ತೇವೆ. ಇದು ಯಾವ ನ್ಯಾಯ? ಈ ಮರಣವನ್ನು ಯಾಕೆ ತಡೆಯಲು ಪ್ರಯತ್ನಿಸಬಾರದು ಎಂಬ ಯೋಚನೆ ಉಂಟಾಯಿತು. ಹಾಗಾಗಿ ಆಮೇಲೆ  ‘ನಮ್ಮನ್ನು ಕೊಲ್ಲುವುದನ್ನು ನಿಲ್ಲಿಸಿ’ ಎಂದು ಘೋಷಣೆ ಕೂಗತೊಡಗಿದೆವು. ನಾವು ತೋಟಿಗಳಲ್ಲ. ನೀವೇ ನಮ್ಮನ್ನು ತೋಟಿಗಳಾಗಿಸಿದಿರಿ ! ಯಾರು ಜಾಡಮಾಲಿಗಳಾಗಬಾರದೆಂದೇ ಈಗ ಶ್ರಮಿಸುತ್ತಿದ್ದೇವೆ.

‘ಇಷ್ಟಪಟ್ಟೇ ಈ ಕೆಲಸಕ್ಕೆ ಬಂದೆವು’ ಎಂದು ಅವರು ಹೇಳುತ್ತಾರೆ ಎಂಬುದು ಕೆಲವರ ಅಭಿಪ್ರಾಯ . ರಸ್ತೆಯಲ್ಲಿ ಹೋಗುವ ಯಾರನ್ನಾದರೂ ಪ್ರಶ್ನಿಸಿದರೆ ಅವರು ಇಂತಹ ಉತ್ತರವನ್ನು ಕೊಡುತ್ತಾರೋ ಏನೋ. ‘ಈ ಕೆಲಸವನ್ನು ಬಿಟ್ಟು ಬಿಡುತ್ತೇವೆ. ನನಗೆ ಬೇರೆ ಯಾವುದಾದರೂ  ಕೆಲಸ  ಕೊಡಿ’, ಎಂದು ಅವರಿಗೆ ಹೇಳಲಾಗುತ್ತಿಲ್ಲ. ‘ಏನಪ್ಪಾ ಮಾಡೋದು. ಸಂಸಾರ ನಡೀಬೇಕಲ್ಲ, ಮಕ್ಕಳು ಮರಿಗೆ ಅನ್ನ ಹಾಕಬೇಕಲ್ಲ’ ಎಂದೆಣಿಸಿ ಏನೋ ಒಂದನ್ನು ಹೇಳುತ್ತಾರೆ. ಇಂತಹ ಉತ್ತರಗಳನ್ನು ಇಟ್ಟುಕೊಂಡು ದೊಡ್ಡ ದೊಡ್ಡ ಲೇಖನಗಳನ್ನು ಬರೆಯುತ್ತಾರೆ. ವಾಸ್ತವದಲ್ಲಿ ಯಾರೂ ಬರೀ ಕೈಯಿಂದ ಮನುಷ್ಯನ ಕಕ್ಕಸ್ಸು ಬಳಿಯಲು ಬಯಸುವುದಿಲ್ಲ. ಒಬ್ಬ ಮನುಷ್ಯನ ಮಲವನ್ನು  ಮತ್ತೊಬ್ಬ ಮನುಷ್ಯ ಬರೀ ಕೈಯಲ್ಲಿ ಬಳಿದು ಶುದ್ಧಗೊಳಿಸುವುದು  ಜಗತ್ತಲ್ಲಿ ಯಾರಿಗೂ ಸಂತೋಷವನ್ನು ಕೊಡಲು ಸಾಧ್ಯವಿಲ್ಲ.

ಅದೇ ರೀತಿ ಯಾರೂ ಸಾಯಬೇಕೆಂದು ಈ ಕೆಲಸಕ್ಕೆ ಹೋಗುವುದಿಲ್ಲ. ಕಡಿಮೆ ಸಮಯದಲ್ಲಿ ಈ ಕೆಲಸವನ್ನು ಮುಗಿಸಿ ಬರಬಹುದು ಎಂದೇ ಹೋಗುತ್ತಾರೆ. ಸಾವನ್ನು ಕಂಡು ಅಂಜುವವರನ್ನು ಮೇಲ್ವಿಚಾರಕರೇ ಧೈರ್ಯ ತುಂಬಿ ಈ ಕೆಲಸಕ್ಕೆ ದೂಡುತ್ತಾರೆ.  ಅನಾರೋಗ್ಯಕರವಾದ ರಾಜಕಾರಣವೇ ಈ ಕ್ಷೇತ್ರದಲ್ಲಿ ವೈಜ್ಞಾನಿಕ ತಂತ್ರಜ್ಞಾನವನ್ನು ಬಳಸಲು ಅಡ್ಡಿಯಾಗಿರುವುದು.  ಅದಕ್ಕೆ  ರಾಜಕೀಯ ಛಲ ಬೇಕು. ಗಟ್ಟಿಯಾದ ರಾಜಕೀಯ ತೀರ್ಮಾನಗಳು  ಮಾತ್ರವೇ ಇದನ್ನು ಸಾಧ್ಯವಾಗಿಸಬಹುದು. ಆ ಛಲ ತೊರದೇ ಇರುವುದರಿಂದಲೇ ಇಂತಹ ಮರಣಗಳನ್ನು ಸರ್ಕಾರವೇ ಮಾಡುತ್ತಿರುವ ಕೊಲೆಗಳೆಂದು ನಾವು ಹೇಳುತ್ತೇವೆ. ಅದನ್ನು ತಡೆಗಟ್ಟಬೇಕೆಂಬುದೇ ನಮ್ಮ ಉದ್ಧೇಶ.

ಪೆಮು: ಒಂದು ತಿಂಗಳಲ್ಲಿ ಒಂಬತ್ತು ಕಾರ್ಮಿಕರು ಸತ್ತದ್ದಾಗಿ ಹೇಳಿದಿರಿ. ಅವರೆಲ್ಲರೂ ಕೈಯಾರೆ ಮಲಶುಚಿ ಮಾಡುವವರೇ?

ಬೆವಿ: ಆಳುಗುಂಡಿ(Manhole) ಸ್ವಚ್ಛ ಮಾಡುವ, ಚರಂಡಿ ಶುದ್ಧಗೊಳಿಸುವ ಇಬ್ಬರನ್ನೂ ಸೇರಿಸಿಯೇ ಈ ಸಂಖ್ಯೆ. ದಿಲ್ಲಿ ಮುನಿಸಿಪಾಲಿಟಿ ಕಡೆಯಿಂದಲೂ, ಖಾಸಗಿ ಕಟ್ಟಡಗಳ ಕಡೆಯಿಂದಲೂ ಈ ಬಗೆಯ ಮರಣಗಳು ಸಂಭವಿಸುತ್ತವೆ. ಅವರೆಲ್ಲಾ ನೆಲದ ಕೆಳಗಿನ  ಮೋರಿ ಹಾಗೂ ಸೆಪ್ಟಿಕ್ ಟ್ಯಾಂಕನ್ನು ಶುಚಿಗೊಳಿಸುತ್ತಿದ್ದಾಗ ಸತ್ತಿದ್ದಾರೆ.  ಈಗ ಎಲ್ಲವನ್ನೂ ಗುತ್ತಿಗೆದಾರರಿಗೆ ವಹಿಸಿದ್ದಾರೆ. ಸಮಸ್ಯೆ ಉಂಟಾದಾಗ ‘ನಾವು ಗುತ್ತಿಗೆಯ ಒಪ್ಪಂದದ ಆಧಾರದ ಮೇರೆಗೆ ಕೆಲಸವನ್ನು ಕೊಟ್ಟೆವು. ನಮಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ’ ಎಂದು ಹೇಳುತ್ತಾರೆ. ಆದರೆ ಹಾಗೆ ಹೇಳಲು ಸಾಧ್ಯವಿಲ್ಲ. ಯಾಕೆಂದರೆ  ಸ್ವಚ್ಛತೆಯ ಪ್ರಮುಖ ಕೆಲಸಗಳು ದೆಹಲಿ ಜಲ ನಿಗಮ ಅಥವಾ ಮುನಿಸಿಪಾಲಿಟಿಯ ವ್ಯಾಪ್ತಿಗೆ ಬರುವುದರಿಂದ ಇದರ ಜವಾಬ್ಧಾರಿಯನ್ನು ಅವರೇ ಹೊರಬೇಕು.

ಪೆಮು: ಪೌರ ಕರ್ಮಚಾರಿಗಳಿಗೆ ಏನಾದರು ಮಾಡಬೇಕು, ಅವರ ಜತೆ ನಿಲ್ಲಬೇಕೆಂಬ ಭಾವನೆ ನಿಮ್ಮಲ್ಲಿ ಯಾವಾಗ ಮೂಡಿತು ?

ಬೆವಿ: ಆ ದಿನವನ್ನು ಖಚಿತವಾಗಿ ನೆನಪು ಮಾಡಿಕೊಳ್ಳುವುದು ಕಷ್ಟ. ನಾನೂ ಅದೇ ಜಾತಿಯಲ್ಲಿ  ಹುಟ್ಟಿರುವುದು ಎಂಬ ಅರಿವು ನನಗೆ ಉಂಟಾಗಲು ಸ್ವಲ್ಪ ದಿನ ಹಿಡಿಯಿತು. ಅಮ್ಮ, ಅಪ್ಪ, ಸೋದರ ಎಲ್ಲರೂ ಈ ಕೆಲಸವನ್ನೇ ಮಾಡುತ್ತಿದ್ದರು. ಮನೆ ಇದ್ದ ಜಾಗವು ಇಂತಹ ಜನಗಳ ನಡುವೆಯೇ. ಹೆಚ್ಚು ಕಡಿಮೆ 118 ಮನೆಗಳು ಅಲ್ಲಿದ್ದವು. ಎಲ್ಲರೂ ಇದೇ ಕೆಲಸವನ್ನು ಮಾಡುತ್ತಿದ್ದರು. ಕಾರ್ಪೊರೇಷನ್, ಮುನಿಸಿಪಾಲಿಟಿ, ಚಿನ್ನದ ಗಣಿ ಎಲ್ಲಿ ಹೋದರು ಇವರಿಗೆ ಸ್ವಚ್ಛತೆಯ ಕೆಲಸವನ್ನೆ ಕೊಡಲಾಗುತಿತ್ತು. ಅವರಿಗೆ ಬೇರೆ ಕೆಲಸ ಸಿಗುತ್ತಿರಲಿಲ್ಲ. ಅಲ್ಲಿ ಕಕ್ಕಸ್ಸು, ಮೋರಿ, ಚರಂಡಿ ಹೀಗೆ ಬೇರೆ ಬೇರೆ ವಿಭಾಗಗಳಿದ್ದರೂ, ಎಲ್ಲಾ ಕಡೆಯಲ್ಲೂ ಅವರ ಕೆಲಸ ಒಂದೆ!. ಶುಚಿಗೊಳಿಸುವುದು. ಹೊರಗೆ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ . ಆದರೂ ಎಲ್ಲರಿಗೂ ಇವೆಲ್ಲಾ ಗೊತ್ತು.

ನಮ್ಮ ತಂದೆ ತಾಯಿಗಳಿಗೆ ನಾನು ಆ ಕೆಲಸ ಮಾಡುವುದು ಇಷ್ಟವಿರಲಿಲ್ಲ. ಆದ್ದರಿಂದ ಶಾಲೆಗೆ ಕಳುಹಿಸಿದರು. ಹೀಗೆ ಹೊರಗೆ ಹೋಗುವಾಗ, ಇಂತಹ ಸಮುದಾಯದಿಂದ ಬರುತ್ತಿದ್ದೇನೆ  ಎಂದು ಹೇಳಲಾಗದೆ ನಾಚಿಕೆಯಿಂದಲೇ ಬೆಳದೆ; ಮರೆಮಾಚಿದೆ. ಬೇರೆ ಮಕ್ಕಳೊಂದಿಗೆ ಆಟ ಆಡುವಾಗಲೆಲ್ಲಾ ‘ತೋಟಿ’ ಎಂದು ಹೇಳಿ ನಗುತ್ತಿದ್ದರು. ನಾನು ಅಮ್ಮನ ಬಳಿ ಹೋಗಿ ‘ಇವರು ಯಾಕೆ ತೋಟಿ ಅಂತ ಹೇಳಿ ನಗುತ್ತಾರೆ ?’ ಎಂದು ಕೇಳುತ್ತಿದ್ದೆ. ‘ಏನೂ ಇಲ್ಲ, ನಮ್ಮ ಮನೆಯ ಬಳಿ ಚಿಕ್ಕ ತೊಟ್ಟಿ ಇದೆ ನೋಡು. ಆದ್ದರಿಂದ ಹಾಗೆ ಹೇಳುತ್ತಾರೆ’ಎಂದು ಹೇಳುತಿದ್ದರು.  ‘ಈ ಚಿಕ್ಕ ಹುಡುಗನಿಗೆ ಇವನ್ನೆಲ್ಲಾ ಯಾಕೆ ಹೇಳಬೇಕೆಂದು ಅಮ್ಮ ಅಂದುಕೊಂಡಿರಬಹುದು’. ‘ಜಾತಿ’ ಎನ್ನುವುದು ಒಬ್ಬ ವ್ಯಕ್ತಿ ತಕ್ಷಣ ಮಾತ್ರವೇ ಅಳಿಸಿಬಿಡುವ ವಿಷಯ ಅಲ್ಲ. ಎಲ್ಲರೂ ಸೇರಿ ಮಾಡಬೇಕಾದ ಕೆಲಸ.

ನಂತರ ನಾನು ಹಾಸ್ಟೆಲಿಗೆ ಹೋಗಿ ಹಿಂತಿರುಗಿದ ಮೇಲೆ ಇವರಿಗೆ ವಿದ್ಯೆ ಕಲಿಸಿದರೆ ಒಳ್ಳೆಯದೆಂದು ತೋರಿತು. ಅದಕ್ಕೆ ಅನುಕೂಲವಾಗಿ 1980 ರ ಸುಮಾರಿಗೆ ಭಾರತದಲ್ಲಿ ಶೈಕ್ಷಣಿಕ  ಚಳುವಳಿ ನಡೆಯುತ್ತಿದ್ದ ಸಮಯ. ‘Each one teach ten’ ಮುಂತಾದ ಕಾರ್ಯ ಯೋಜನೆಗಳಿಗೆ ಚಾಲನೆ ದೊರಕಿತ್ತು. ಆದ್ದರಿಂದ ನನಗೂ ಸಹಾ ಏನಾದರೂ ಮಾಡಬೇಕೆಂದು ಅನ್ನಿಸಿತು. ಸರಕಾರಕ್ಕೂ ನಮಗೂ ಸಂಬಂಧವಿಲ್ಲ. ಅದರ ಬಗ್ಗೆ ಹೆಚ್ಚಾಗಿ ನಮಗೆ ಏನೂ ತಿಳಿಯದು ಸಹಾ. ದಿನಪತ್ರಿಕೆಗಳಲ್ಲಿ ಓದಿ ನಾನು ಇದನ್ನು ಮಾಡಬಹುದು ಎಂದು ಅಂದುಕೊಂಡೆ. ಮಹಿಳೆಯರೆಲ್ಲರು ಬಂದು ನನ್ನ ಬಳಿ ಕೇಳಿದರು. ಸರಿ, ನಾನು ಹೇಗಿದ್ದರೂ ತೆಲುಗು ಕಲಿತಿರುವೆ. ಅದನ್ನೇ ಕಲಿಸೋಣ ಎಂದು ಪ್ರಾರಂಭಿಸಿದೆ.

ಬಹಳ ಜನ ಬರಲು ತೊಡಗಿದರು. ಕೀಟಲೆ, ಕುಚೋದ್ಯವೂ ಜತೆಯಲ್ಲಿಯೇ ಬಂದವು. ವಯಸ್ಸಾದವರು ಓದಿ ಏನಾಗಬೇಕು ಎಂದೆಲ್ಲಾ ಮಾತುಗಳು ಬಂದವು. ನಾನು ಯಾವುದನ್ನೂ ಲಕ್ಷಿಸಲಿಲ್ಲ.  ಆಸಕ್ತಿ ಇದ್ದವರಿಗೆ ನಾನು ಹೇಳಿಕೊಡುವುದನ್ನು ಮುಂದುವರೆಸಿದೆ. ‘ನಮ್ಮೊಂದಿಗೆ ಮಕ್ಕಳಿಗೂ ಸ್ವಲ್ಪ ಹೇಳಿಕೊಡಿ’ ಎಂದು ಅವರು ಕೇಳಿಕೊಂಡರು. ಅವರಿಗೂ ತರಗತಿ ನಡೆಸಿದೆ. ಆದರೆ ಮಕ್ಕಳು ನನ್ನ ಬಳಿ ‘ನೀವು ಏನು ಹೇಳಿಕೊಟ್ಟರೂ ಪ್ರಯೋಜವಿಲ್ಲ. ಮನೆಯಲ್ಲಿ ಯಾವಾಗಲೂ ಹೊಡೆದಾಟ ಜಗಳ ನಡೆಯುತ್ತಿರುತ್ತದೆ.’ ಎಂದು ಹೇಳಿದರು. ಆದ್ದರಿಂದ ಅವರ ಮನೆಗೆ ಹೋಗಿ ಅಪ್ಪ ಅಮ್ಮಂದಿರೊಂದಿಗೆ ಕುಳಿತು ಮಾತನಾಡಬೇಕು. ಮನೆಯಲ್ಲಿ ನೆಮ್ಮದಿ ಇದ್ದರೆ ಮಕ್ಕಳು ಓದಬಹುದು . ವಿಶೇಷವಾದ ಟ್ಯೂಷನ್ ಬೇಕಾಗಿಲ್ಲ.

ಇದರ ಬಗ್ಗೆ ನಾನು ಅವರ ಬಳಿ ಹೋಗಿ ಮಾತನಾಡಿ ನೋಡಿದೆ. ಗಂಡಸರೆಲ್ಲರೂ ಕುಡಿದು ಬರುವುದೇ ನೆಮ್ಮದಿ ಇಲ್ಲದಿರುವುದಕ್ಕೆ ಕಾರಣವಾಗಿತ್ತು ಎಂಬುದನ್ನು ಅರಿತುಕೊಂಡೆ. ಬೆಳಗ್ಗೆ ಒಂಬತ್ತು ಗಂಟೆಗೆ ಕುಡಿಯಲು ಪ್ರಾರಂಭಿಸುತ್ತಾರೆ. ಮಧ್ಯಾಹ್ನ ಕೂಗಿ ಕಿರುಚಾಡಿ ನೆಲದಲ್ಲಿ ಬಿದ್ದುಕೊಳ್ಳುತ್ತಾರೆ. ಸಂಜೆ ಆರು ಗಂಟೆಗೆ ಮತ್ತೆ ಕುಡಿಯಲು ಶುರುಮಾಡುತ್ತಾರೆ. ಅದೇ ಕೂಗಾಟವನ್ನು ರಾತ್ರಿ ನಿದ್ದೆ ಮಾಡುವವರೆಗೆ ಮಾಡುತ್ತಾರೆ. ದಿನವೂ ಇದೇ ಕಥೆ . ಸಮಸ್ಯೆ ತಿಳಿದುಕೊಂಡ ಮೇಲೆ ಗಂಡಸರನ್ನು ಕರೆದು ಮಾತನಾಡೋಣ  ಅಂದುಕೊಂಡೆ.

ನನ್ನೊಳಗೆ ಸದಾ ಒಂದು ನಂಬಿಕೆ ಇದೆ. ‘ಬದಲಾಗದೇ ಇರುವುದು ಎಂದು ಯಾವುದೂ ಇಲ್ಲ’ ಎಂಬುದು. ಎಲ್ಲವೂ ಬದಲಾಗುತ್ತದೆ. ಇಂದಿಲ್ಲದಿದ್ದರೆ ನಾಳೆ. ನಾಳೆ ಅಲ್ಲದಿದ್ದರೆ ಅದರ ಮಾರನೆಯ ದಿನ. ಬದಲಾವಣೆ ಸಮಾಜದ ನಿಯಮ. ಹೀಗಾಗಿ ಕೊನೆಗೆ ಕುಡಿಯುವ ಗಂಡಸರನ್ನು ಕೂರಿಸಿ ಮಾತನಾಡುವ ನಿರ್ಧಾರಕ್ಕೆ ಬಂದೆ. ಎಲ್ಲರೂ ನಗಲು ಪ್ರಾರಂಭಿಸಿದರು. ಕಾಲೇಜಿಗೆ ಹೋಗದೆ, ಹೀಗೆ ಕುಡುಕರೊಂದಿಗೆ ಮಾತನಾಡುತ್ತಾ ಕುಳಿತರೆ ಹೇಗೆ ಓದನ್ನು ಮುಂದುವರಿಸುವೆ ಎಂದು ನಗ ತೊಡಗಿದರು. ಇಂತಹ ಸಂಗತಿಗಳ ಬಗ್ಗೆ ಆಸಕ್ತಿ ತೋರಿಸಿದ್ದರಿಂದ ಓದಿನ ಬಗ್ಗೆ ನಿಧಾನವಾಗಿ ನನ್ನ ಆಸಕ್ತಿ ಕಡಿಮೆಯಾಯಿತು.

ಅವರೆಲ್ಲರೂ ಯಾಕೆ ಕುಡಿಯತೊಡಗಿದರು ಎಂಬ ಸ್ವಾರಸ್ಯಕರವಾದ ಕಥೆಗಳನ್ನು ಅವರು ಹೇಳುತಿದ್ದರು. ಎಲ್ಲರಿಗೂ ಒಂದು ಕಥೆ ಇತ್ತು. ಕೆಲವರಿಗೆ ನಾಲ್ಕೈದು ಕಥೆಗಳು ಸಹಾ ಇತ್ತು. ಅವರು ಹೇಳುವ ಕಥೆಗಳು ಕಾರಣಗಳು ಒಪ್ಪಿಕೊಳ್ಳುವಂತೆಯೇ ಇರುತಿದ್ದವು. ಆದ್ದರಿಂದ ಅವರನ್ನು ತಪ್ಪಾಗಿ ಅಪರಾಧಿಗಳಂತೆ ನೋಡಲು ನನ್ನಿಂದ ಆಗಲಿಲ್ಲ.  ನಿಜವಾಗಿಯೂ ಪ್ರಾಮಾಣಿಕವಾಗಿ ಅವರು ವಿಷಯಗಳನ್ನು ನನ್ನ ಬಳಿ ಹಂಚಿಕೊಂಡರು. ಒಬ್ಬರಿಗೆ ಹಣದ ಸಮಸ್ಯೆ ಇತ್ತು. ಇನ್ನೊಬ್ಬರಿಗೆ ಮನೆಯಲ್ಲಿ ಏನೂ ಇಲ್ಲ. ಮತ್ತೊಬ್ಬರಿಗೆ ಬಗೆಹರಿಸಲಾಗದ ಸಮಸ್ಯೆ ಏನಾದರೂ ಇತ್ತು. ಆದರೆ, ಅವರು ತಮ್ಮ ಸಮಸ್ಯೆ ಇದೇ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಿದ್ದರು. ಯಾವಾಗ ಕೇಳಿದರು ಸ್ಪಷ್ಟವಾಗಿ ಹೇಳುತ್ತಿದ್ದರು. ಇಂದೊಂದು, ನಾಳೆ ಮತ್ತೊಂದು ಎಂದು ಮಾತನಾಡುತ್ತಿರಲಿಲ್ಲ.

ಅವರ ಸಮಸ್ಯೆಗಳನ್ನು ಅರಿತುಕೊಂಡದ್ದರಿಂದ ಮನೋವೈದ್ಯರನ್ನು ಕರೆತರುವುದು, ಕುಡಿತವನ್ನು ನಿಲ್ಲಿಸಲು ಸಂಬಂಧಪಟ್ಟ ತಜ್ಞರನ್ನು ಕರೆದುಕೊಂಡು ಬಂದು ಮಾತನಾಡಿಸುವುದು ಮುಂತಾದ ಕಾರ್ಯಗಳಲ್ಲಿ ತೊಡಗಿದೆ. ಅವರನ್ನು ಕ್ರಿಕೇಟ್, ಫುಟ್ ಬಾಲ್ ಇತ್ಯಾದಿ ಆಟಗಳಲ್ಲಿ ತೊಡಗಿಸಲು ಪ್ರಾರಂಭಿಸಿದೆ. ಪ್ರವಾಸಗಳಿಗೆ ಕರೆದುಕೊಂಡು ಹೋದೆ. ಒಮ್ಮೆ ಪಿಕ್ನಿಕ್ ಹೋಗಿದ್ದಾಗ ಒಬ್ಬರು ಅಡಿಗೆ ಮಾಡೋಣ ಎಂದರು. ಆದ್ದರಿಂದ ಅಕ್ಕಿ, ತರಕಾರಿಗಳನ್ನು ತೆಗೆದುಕೊಂಡು ಹೋದೆವು. ಮತ್ತೆ ಇಬ್ಬರು ನಾವು ‘ನೀರು ತರುತ್ತೇವೆ’ ಎಂದರು. ನನಗೆ ಅದು ಅರ್ಥವಾಗಲಿಲ್ಲ. ನಾನು ಸರಿ ಎಂದುಬಿಟ್ಟೆ. ಸಾರಾಯಿ ತಂದು ಎಲ್ಲರೂ ಕುಡಿದರು. ನನಗೆ ಒಂದೂ ಅರ್ಥವಾಗಲಿಲ್ಲ. ಬಹಳ ಸಂಕಟವಾಯಿತು. ನಾನು ಬೇಸರಗೊಂಡು ‘ನನಗೆ ಮೋಸ ಮಾಡಬಾರದು, ಮನೆಯಲ್ಲಿದ್ದರೆ ಇಂತಹ ಸಮಸ್ಯೆಗಳಿರುತ್ತವೆ ಎಂದು ಹೊರಗೆ ಮಾತನಾಡಲು ಬಂದೆವು. ಇಲ್ಲಿಗೆ ಬಂದೂ ಈ ರೀತಿ ನಡೆದುಕೊಳ್ಳುತ್ತೀರಲ್ಲ ?” ಎಂದು ಕೇಳಿದೆ. ಅಂತಹ ಪರಿಸ್ಥಿತಿಯಿಂದ ಹೊರಗೆ ಬರಬೇಕೆಂದೇ ಪಿಕ್ನಿಕ್ ಬಂದದ್ದು. ಇವರೋ ಹಾಗೆಯೇ ಇರುವರಲ್ಲ ಎಂದು ಬೇಸರವಾಯಿತು.

“ನಿನಗೆ ಅರ್ಥವಾಗುವುದಿಲ್ಲ ,ನಾವು ಮಾಡುವ ಕೆಲಸ ಅಂತಹದ್ದು” ಎಂದು ಹೇಳಿದರು.

“ಈ ರೀತಿಯಾದ ಕೆಲಸ ಮಾಡಿದರೆ ಎಲ್ಲರೂ ಕುಡಿಯಲೇ ಬೇಕು” ಎಂದರು.

“ಹಾಗೇನೂ ಇಲ್ಲ, ಕುಡಿಯದೆ ಬಹಳ ಮಂದಿ ಈ ಕೆಲಸ ಮಾಡುತ್ತಾರೆ. ಹೆಂಗಸರು ಕುಡಿಯುವುದಿಲ್ಲವಲ್ಲ ” ಎಂದು ಅವರ ಬಳಿ ವಾದಿಸಿದೆ.

ಅದಕ್ಕೆ “ಅವರು ರಾತ್ರಿ ಕುಡಿಯುತ್ತಾರೆ, ನಾವು ಹಗಲಲ್ಲಿ ಕುಡಿಯುತ್ತೇವೆ, ಅಷ್ಟೇ ವ್ಯತ್ಯಾಸ’ ಎಂದು ಹೇಳಿದರು.

ನಿಜವಾಗಲು ಅವರು ಹೇಳಿದಂತೆ ಒಬ್ಬಿಬ್ಬರು ಮಾತ್ರವೇ ಕುಡಿಯುತ್ತಿರಲಿಲ್ಲ.

“ನೀನು ನಮಗೆ ಬಹಳಷ್ಟು ಒಳ್ಳೆಯದು ಮಾಡಬೇಕೆಂದು ಕೊಂಡಿದ್ದೀಯ. ಆದರೆ ನಾವು ಕುಡಿದುಬಿಟ್ಟೆವು” ಎಂದು ಸಂಕಟಪಟ್ಟು ಒಬ್ಬರು ಹೇಳಿದರು.

“ನೀವು ಈ ಕೆಲಸವನ್ನು ಮಾಡುವುದಕ್ಕೆ ಕುಡಿಯುತ್ತಿದ್ದೀರಿ. ನಿಮಗೆ ಬೇರೆ ಕೆಲಸ ಸಿಕ್ಕರೆ ನೀವು ಕುಡಿಯುವುದನ್ನು ನಿಲ್ಲಿಸುತ್ತೀರಾ?” ಅಂತ ಕೇಳಿದೆ.

“ಅದನ್ನು ಖಚಿತವಾಗಿ ಹೇಳಲಾಗದು, ನೀನು ಬಂದು ಒಮ್ಮೆ ಕೆಲಸ ಮಾಡುವವರನ್ನು ನೋಡು” ಎಂದರು.

ನಾನು ಬರುತ್ತೇನೆ ಎಂದು ಹೇಳಿದೆ.

ಇವರೊಂದಿಗಿನ ಸಂಭಾಷಣೆಯಲ್ಲಿ ನನ್ನ ತಲೆಯಲ್ಲಿ ಯೋಚನೆಗಳು ಒಂದರಿಂದ ಮತ್ತೊಂದಕ್ಕೆ ಓಡಾಡುತ್ತಲೇ ಇತ್ತು.  ಇದೆಲ್ಲಾ ಆಗುತ್ತಿರುವುದು ‘ವಿದ್ಯೆ ಇಲ್ಲದಿರುವುದರಿಂದಲೇ’ , ‘ಮಕ್ಕಳಿಗಾಗಿಯೇ’ , ‘ಕುಡಿತದಿಂದಲೇ’ … ಎಂದು ಒಂದರ ಹಿಂದೆ ಮತ್ತೊಂದು ವಿಷಯಗಳು ಓಡಲಾರಂಭಿಸಿ ನನಗೆ ಏನು ಮಾಡಬೇಕೆಂದು ತಿಳಿಯಲಿಲ್ಲ.

“ಜನಗಳ ಮೇಲೆ ನನಗೆ ನಂಬಿಕೆ ಇದೆ. ಅವರು ನನ್ನನ್ನು ವಂಚಿಸುತ್ತಾರೆ ಎಂದು ಅಂದುಕೊಳ್ಳಬಾರದು. ನನಗೆ ಯಾರು ಮೋಸ ಮಾಡಲಾರರು . ಹಾಗೇನಾದರೂ ಆದರೆ ಅದು ಪರಿಸ್ಥಿತಿಯ ಒತ್ತಡದಿಂದ ಆಗುತ್ತದೆ”.

ಅವರು ಕೆಲಸ ಮಾಡುವುದನ್ನು ಖುದ್ದಾಗಿ ನೋಡಲು ಮಾರನೆಯ ದಿನ ಅವರಿದ್ದಲ್ಲಿಗೆ ಹೋದೆ. ಅವರು ಆಗ ಈಗ ಎಂದು ತಪ್ಪಿಸಿಕೊಂಡರೆ ಹೊರತು, ನನ್ನನ್ನು ಕರೆದುಕೊಂಡು ಹೋಗಿ ತೋರಿಸಲೇ ಇಲ್ಲ.

‘ನೀವೇ ತಾನೇ ಕರೆದುಕೊಂಡು ಹೋಗುವುದಾಗಿ ಹೇಳಿದ್ದು . ಯಾಕೆ ಕರೆದುಕೊಂಡು ಹೋಗಿ ತೋರಿಸುವುದಿಲ್ಲ ಎನ್ನುತ್ತೀರಿ?’ ಎಂದು ಕೇಳಿದೆ.

‘ಇದರಲ್ಲಿ ತೋರಿಸಲು ಏನಿದೆ. ಎಲ್ಲರಿಗೂ ಗೊತ್ತಲ್ಲವೇ. ಅಲ್ಲಲ್ಲಿ ಕೆಲಸ ಮಾಡುತ್ತಲೇ ಇದ್ದಾರೆ. ನೀನೇ ಹೋಗಿ ನೋಡಿಕೋ’ ಎಂದರು.

‘ಇಲ್ಲ, ನಾನೂ ನಿಮ್ಮ ಜೊತೆಯೇ ಬರುತ್ತೇನೆ’ ಎಂದು ಅವರು ಹೋಗುವ ಟ್ರಾಕ್ಟರ್ ನಲ್ಲಿ ನಾನು ಹತ್ತಿಕೊಂಡೆ.

ಅದರಲ್ಲಿ ಒಂದು ಟ್ಯಾಂಕ್ ಇತ್ತು. ಇವರು ಬಕೆಟ್ಟಿನಲ್ಲಿ ಮಲವನ್ನು ತುಂಬಿ ಊರಿನ ಹೊರಗೆ ಸುರಿಯುತ್ತಾರೆ. ಕೆಲವು ಸಂಸ್ಥೆಗಳು ಗದ್ದೆಗಳಿಗೆ ಗೊಬ್ಬರವಾಗಿ ಉಪಯೋಗಿಸಲು ಅದನ್ನು ಯಾರಿಗಾದರೂ ಮಾರುವರು. ಎಲ್ಲೆಲ್ಲೋ ಸುತ್ತಿಕೊಂಡು ಹೋಗಿದ್ದರಿಂದ ನಾವು ತಲುಪಲು ಮಧ್ಯಾಹ್ನವಾಯಿತು. ಡ್ರೈವರ್ ಒಂದು ಜಾಗದಲ್ಲಿ ಗಾಡಿಯನ್ನು ನಿಲ್ಲಿಸಿದ. ತೋಟಿಗಳು ಮಲವನ್ನು ತರಲು ಹೋದರು. ಡ್ರೈವರ್ ಅವರೊಂದಿಗೆ ಹೋಗಲಿಲ್ಲ . ಕಂಪನಿಯಿಂದ ವಾಹನಗಳನ್ನು ಹೊರಗೆ ತಂದರು. ಬಹಳ ನಿದಾನವಾಗಿಯೇ ಆ ಗಾಡಿ ಚಲಿಸುತ್ತದೆ. ಆದ್ದರಿಂದ, ಇವರಲ್ಲಿ ಯಾರಾದರೂ ಒಬ್ಬರು ಅದನ್ನು ಓಡಿಸಿಕೊಂಡು ಹೋಗುತ್ತಾರೆ. ಎತ್ತಿನ ಗಾಡಿಗಿಂತಲೂ ಬಹಳ ನಿದಾನವಾಗಿ ಚಲಿಸುವುದರಿಂದ ಎಲ್ಲರೂ ಈ ಗಾಡಿಯನ್ನು ಓಡಿಸಬಹುದು ಎಂದರವರು .

ಒಬ್ಬ ಮಲ ತೆಗೆಯುವುದಕ್ಕೆ ಅಂತ ಟ್ಯಾಂಕಿನಲ್ಲಿ ಒಂದು ಬಕೆಟ್ ಹಾಕಿದ. ಅದು ಕೈ ಜಾರಿ ಕೆಳಗೆ ಬಿದ್ದು ಹೋಯಿತು. ಬಕೆಟ್ ಇಲ್ಲವೆಂದರೆ ಕೆಲಸಮಾಡಲು ಸಾಧ್ಯವಿಲ್ಲ ಅಲ್ಲವೇ? ಒಬ್ಬರು ಕೈಯನ್ನು ಮಡಚಿ ಬಕೆಟನ್ನು ತೆಗೆಯಲು ಅವನನ್ನು ಒಳಗೆ ಬಿಟ್ಟರು . ನಾನು ನೋಡುತ್ತಲೇ ನಿಂತಿದ್ದೆ. ಒಂದೂ ನನಗೆ ತಿಳಿಯಲಿಲ್ಲ. ‘ಏನಾಯ್ತೋ’ ಎಂದು ಹಿಂದೆ ಹೋದವರು ಬೈದುಕೊಂಡೇ ಅವರ ಹತ್ತಿರ ಬಂದರು . ಬಕೆಟ್ ಕೈಗೆ ಸಿಗದ್ದರಿಂದ ಅವನು ಒಳಗೆ ಇಳಿದಿದ್ದ ಇಳಿದು ಬಕೆಟ್ ತೆಗೆಯಲು ತೊಡಗಿದ. ಅವನು ಮಣ್ಣಿನ ಜೊತೆ ಆಟವಾಡುವ ಮಕ್ಕಳ ರೀತಿಯಲ್ಲಿ ಕಕ್ಕಸ್ಸಿನಲ್ಲಿ ಬಕೆಟ್ ಹುಡುಕುತ್ತಿದ್ದ.

ಹತ್ತಿರ ಹೋಗಿ ‘ಇದೇನು ಕೆಲಸ, ನೀನು ಏನು ಮಾಡುತಿದ್ದಿ, ಹೊರಗೆ ಬಾ’ ಎಂದು ಕೂಗಿದೆ. ಅವರೋ. ‘ಕೆಲಸ ಮುಗಿಯಲಪ್ಪಾ….ನೀನು ಹೋಗಿ ದೂರ ನಿಲ್ಲು’ ಎಂದು ಹೇಳಿದರು.

ಆವರಿಗೋ ಬಕೆಟ್ ಇಲ್ಲದೆ ಹೇಗೆ ಕೆಲಸ ಮಾಡುವುದು ಎಂಬ ಚಿಂತೆ . ಮೇಲಿಂದ ಒಬ್ಬ ‘ಬಕೆಟ್ ಇಲ್ಲದಿದ್ದರೆ ನಿನಗೆ ಆಬ್ಸೆಂಟ್ ಹಾಕಿಬಿಡುತ್ತಾರೆ’ ಎಂದು ಕೂಗಿ ಹೇಳಿದ.

ನಾನು ಸುತ್ತ ಇದ್ದವರ ಕೈಹಿಡಿದುಕೊಂಡು “ನೀವು ಇದನ್ನು ಮಾಡಬಾರದು” ಎಂದು ಅಂತ ಕೇಳಿಕೊಂಡೆ

‘ಕೈಯೆಲ್ಲಾ ಗಲೀಜಾಗಿದೆ. ನೀನು ಹೋಗಿ ದೂರ ನಿಲ್ಲಪ್ಪಾ’ ಎಂದು ಹೇಳಿದರು ಅವರು.

ಅವರೆಲ್ಲರೂ ನನಗಿಂತ ವಯಸ್ಸಿನಲ್ಲಿ ಹಿರಿಯರು. ನನಗೆ ಹದಿನೆಂಟು, ಹತ್ತೊಂಬತ್ತು ವಯಸ್ಸಿರಬಹುದು. ಆದ್ದರಿಂದ ನನ್ನಿಂದ ಅವರನ್ನು ಏನು ಮಾಡಲು ಸಾಧ್ಯವಾಗಲಿಲ್ಲ. ‘ದೂರ ಸರಿ’ ಎಂದು ಅವರು ನನ್ನನ್ನು ತಳ್ಳಿದರು. ನಾನು ಏನು ಮಾಡಲು  ತಿಳಿಯದೆ ನಿಂತಿದ್ದೆ.

ನಾನು ಅಳುತ್ತಲೇ ಅವರನ್ನು ಗೋಗರೆದೆ. “ಇವನ್ನೆಲ್ಲಾ ನೀವು ಮಾಡಕೂಡದು. ನೀವು ಮನುಷ್ಯರಲ್ಲವೇ? ಇದು ನ್ಯಾಯವಲ್ಲ” ಎಂದು ಹೇಳುತ್ತಲೇ ಇದ್ದೆ. ಅವರೋ ನನ್ನನ್ನು ದೂರ ಸರಿಸುತ್ತಲೇ ಇದ್ದರು. ನಿಜವಾಗಲೂ ಅವರು ನೂಕಿದ್ದರಿಂದ ನಾನು ಅಲ್ಲಿಂದ ಸರಿಯಲಿಲ್ಲ. ಆದರೆ ನನ್ನಿಂದ ಅಲ್ಲಿ ನಿಲ್ಲಲು ಸಾಧ್ಯವೇ ಆಗಲಿಲ್ಲ. ಕೆಳಗೆ ಬಿದ್ದು ಜೋರಾಗಿ ಅಳಲು ತೊಡಗಿದೆ. ‘ಅಯ್ಯೋ…..ಇಲ್ಲಿ ನೋಡಿ ಏನು ನಡೆಯುತ್ತಿದೆ’ ಎಂದು ಕೂಗಿದೆ.

ಮಲ ತೆಗೆಯುವ ಹೆಂಗಸೊಬ್ಬಳು ಬಂದು ನನ್ನನ್ನು ವಿಚಾರಿಸಿದಳು.

“ಎಲ್ಲರೂ ಇಲ್ಲಿ ಬಂದು ತಮಾಷೆ ನೋಡುತ್ತಾರೆ. ಹಾಗೆಲ್ಲ ಆಳಬಾರದು” ಎಂದಳು.

“ಅವರು ಈ ಕೆಲಸವನ್ನು ಮುಂದೆಂದು ಮಾಡುವುದಿಲ್ಲ ಅಂತ ಭರವಸೆ ಕೊಟ್ಟರೆ ಮಾತ್ರ ಏಳುತ್ತೇನೆ” ಎಂದು ಹಟ ಹಿಡಿದೆ.

ಆ ಅಮ್ಮನ ಹೆಸರು ಪಿಚ್ಚಮ್ಮ. ಆಗಲೇ ತುಂಬ ವಯಸ್ಸಾಗಿತ್ತು. ಅವರಾದರೂ ಪಾಪ, ಏನು ಮಾಡುತ್ತಾರೆ. ಅವರು ಸಮಾಧಾನ ಪ್ರಯತ್ನಿಸಿದರು. ನನ್ನ ಹಟ ಹೆಚ್ಚಾಯಿತು. ಎಲ್ಲರೂ ಬೈಯಲು ಶುರುಮಾಡಿದರು.

‘ಸತ್ಯವಾಗಲು ಇಂತಹ ಕೆಲಸವನ್ನು ಮನುಷ್ಯರಿಂದ ಯಾರೂ ಮಾಡಿಸುವುದಿಲ್ಲ….ಇವರಿಗೆ ಏನು ಬುದ್ಧಿ ಇಲ್ಲವೇ? ನೀನಾದ್ರೂ ಅವರಿಗೆ ಹೇಳು ಎಂದು ನಾನು ಒಂದೇ ಸಮನೆ ಅಳುತ್ತಿದ್ದೆ.  ‘ಲೇ..ನಿಲ್ಸೋ…’ ಎಂದು ಕೆಟ್ಟ ಪದಗಳಿಂದ ಬೈದರು. ಈ ಕೂಗಾಟವನ್ನು ಕೇಳಿ ಆ ಕೆಲಸ ಮಾಡುತ್ತಿದ್ದವರು ನಿಲ್ಲಿಸಿದರು. ನನಗೋ ಸಂತೋಷ. ತಕ್ಷಣ ಅವರ ಬಳಿ ಹೋಗಿ ‘ಅವರಿಗೆ ಹೇಳಿ. ಅಲ್ಲಿಂದ ಹೊರಗೆ ಬರಲು ಹೇಳಿ’ ಎಂದೆ.

‘ಏ…ಹೊರಗೆ ಬಾರೋ…’ ಎಂದಳು.

‘ಹೊರಗೆ ಬಂದರೆ ಹೇಗೆ’ ಎಂದು ಅವರು ಕೇಳಿದರು.

‘ಹುಡುಗ ಅಳ್ತಿದ್ದಾನೆ… ತಪ್ಪೂಂತ ಹೇಳ್ತೀದ್ದಾನೆ ..ನಾವು ಇದನ್ನ ಮಾಡಬಾರದು, ಇದು ಒಳ್ಳೇದಲ್ಲಾ ಅಂತ ಹೇಳ್ತೀದ್ದಾನೆ. ಈ ಮಗು ಹೇಳುತ್ತಿರುವುದು ನಿಜ ಅಲ್ವ? ಹೊರಗೆ ಬಾ…’ ಎಂದು ಅವಳು ಹೇಳಿದಳು.

“ಈಗ ನಾನು ಹೊರಗೆ ಬಂದರೂ ನಾಳೆ ಈ ಕೆಲಸ ಮಾಡಲೇ ಬೇಕು” ಅಂತ ಅವನು ಉತ್ತರಿಸಿದ.

“ಮೊದಲು ಈಗ ಹೊರಗೆ ಬಾ….” ಆ ಹೆಂಗಸು ಗದರಿಸಿ ಹೇಳಲು ಅವರು ಹೊರಗೆ ಬಂದರು.

ಈಗ ಆ ಅಮ್ಮನ ಬಳಿ,”ನಾಳೆಯೂ ಸಹ ಈ ಕೆಲಸವನ್ನು ಅವರು ಮಾಡುವುದಿಲ್ಲ ಎಂದು ನನಗೆ ಪ್ರಮಾಣ ಮಾಡಿ. ಆಗಲೇ ನಾನು ಏಳುವುದು.” ಎಂದು ಹೇಳಿದೆ.

ಅವರು ಪಾಪ ನನ್ನ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಪಿಚ್ಚಮ್ಮನ ಕಣ್ಣಲ್ಲಿ ಆ ವೇಳೆಗಾಗಲೇ ನೀರು ತುಂಬಿಕೊಂಡಿತ್ತು. ನಾನು ಮಾಡಿದ್ದು ಸರಿ ಅಂತ ಅವಳೇ ಮೊದಲು ನನಗೆ ಹೇಳಿದ್ದು.

“ಅಪ್ಪಾ… ನನಗೂ ಸಹ ಅಳು ಬರುತ್ತಪ್ಪಾ….ನನ್ನ ಕೈಗಳನ್ನು ನೋಡು.. ನನ್ನ ಬದುಕು ಹೇಗಾಗೋಯ್ತು ನೋಡು.. ” ಎಂದು ಹೇಳಿ ಗೋಳಾಡಿದರು. “ಇವು ನಾಯಿಗಳು ನಾವು ಹೇಳಿದರೆ ಕೇಳುವುದಿಲ್ಲ” ಎಂದು ಉಳಿದವರನ್ನು ಬೈಯಲು ತೊಡಗಿದಳು.

ಇವರೇ ಸರಿಯಾದ ವ್ಯಕ್ತಿ ಎಂದೆನಿಸಿ ಅವರನ್ನು ಹಿಡಿದುಕೊಂಡೆ.

ಏನೂಂತ ಗೊತ್ತಿಲ್ಲ ಅವರೊಬ್ಬರೇ ನಾನು ಹೇಳೋದು ಸರೀಂತ ಹೇಳಿದ್ದು. ಅದಕ್ಕೆ ಮೊದಲು ನಮ್ಮ ಮನೆಯಲ್ಲಾಗಲಿ, ಹೊರಗಡೆಯಾಗಲಿ, ನಾನು ಮಾಡುತ್ತಿರುವುದು ತಪ್ಪು ಎಂದೇ ಹೇಳಿದರು. ಇವರೇ ಮೊದಮೊದಲು ನಾನು ಮಾಡುವುದು ಸರಿ ಅಂತ ಹೇಳುತ್ತಿರೋದು. ಉಳಿದವರು “ನಿನಗೆ ವಿದ್ಯೆ ಹತ್ತಲಿಲ್ಲ, ಓದೋಕ್ಕೆ ಬರಲ್ಲಾ, ಓದೋಕ್ಕೆ ಇಷ್ಟ ಇಲ್ಲ, ಮುಟ್ಠಾಳ ಅಂತ ಏನೇನೋ ಕೆಟ್ಟ ಪದಗಳನ್ನ ಬಳಸಿ ಬೈತಿದ್ರು. ಆದರೆ ಇವರು ನಾನು ಹೇಳೋದು ಸರಿ ಅಂತ ಹೇಳಿದರು.

ಅವರನ್ನ ಗಟ್ಟಿಯಾಗಿ ಹಿಡಿದುಕೊಂಡು ಅತ್ತೆ. “ನೀನು ಅಳಬೇಡಪ್ಪಾ….ನೀನು ನೀನು ಮಾಡುತ್ತಿರುವುದು ಸರಿ” ಅಂತ ಸಮಾಧಾನ ಮಾಡಿದರು.

‘ಯಾರಿಗೂ ಇದನ್ನು ಮಾಡುವ ಧೈರ್ಯ ಇಲ್ಲ. ಎಲ್ಲರೂ ಹೊಟ್ಟೆ ಪಾಡು ಎಂದು ಮಾಡುತಿದ್ದಾರೆ . ಏನು ಹೊಟ್ಟೆಪಾಡೋ? ಈ ಕೆಲಸ ಮಾಡಿ ಊಟ ಸಹ ಮಾಡೋದಿಕ್ಕೆ ಆಗೋದಿಲ್ಲ. ವೀಳ್ಯ ಹಾಕ್ಕೊಂಡು ಉಗೀತಾ ಹಾಗೆ ಹೀಗೆ ಅಂತ ಕಾಲ ತಳ್ತಾ ಇದ್ದೀವಿ. ಇದೂ ಒಂದು ಬದುಕೇ?’ ಎಂದು ಒಂದು ದೊಡ್ಡ ಬೆಳಕನ್ನು ತೋರಿಸುವಂತೆ ಅವರು ಮಾತನಾಡಿದರು.

‘ನೀನು ನನ್ನೊಂದಿಗೆ ಇವರಿಗೆಲ್ಲಾ ಒಳ್ಳೇದು ಮಾಡೋದಿಕ್ಕೆ ಬರಬೇಕು’ ಎಂದು ಅವರನ್ನು ಹಿಡಿದುಕೊಂಡೆ. ಉಳಿದ ಇಬ್ಬರು ‘ನಮಗೆ ಕೂಡ ಇದನ್ನು ಮಾಡಲು ಆಸೆಯೇ’ ಎಂದು ಹೇಳಿದರು.

ನನಗೆ ಟೀ ಕೊಂಡುಕೊಟ್ಟರು. ನನಗೆ ಕುಡಿಯಬೇಕೆನಿಸಿತು, ಆದರೆ ಒಂದು ಗುಟುಕು ಸಹ ಒಳಗೆ ಇಳಿಯಲಿಲ್ಲ. ಅಲ್ಲಿಂದ ನಾವು ಹೊರಟೆವು. ಅದನಂತರ ಒಂದೆರಡು ಗಂಟೆಗಳ ಕಾಲ  ಒಂದು ಪದ ಸಹ ಮಾತನಾಡಲಿಲ್ಲ.

“ಈ ಹುಡುಗನಿಗೆ ಏನೋ ಆಗಿದೆ, ಮನೆತನಕ ಯಾರಾದರು ಕರೆದುಕೊಂಡು ಹೋಗಿ ತಲುಪಿಸಿ” ಎಂದು ಮಾತನಾಡಿಕೊಂಡರು.

ಮನೆಗೆ ಹೋದ ನಂತರವೂ ಒಂದು ಪದ ಸಹ ಮಾತನಾಡಲಾಗಲಿಲ್ಲ. ನಂತರ ಅಪ್ಪ, ಅಮ್ಮ, ಅಣ್ಣ, ನೆಂಟರು ಎಲ್ಲರ ಬಳಿ ಈ ರೀತಿ ನಡೆಯುವುದು ನಿಮಗೆಲ್ಲ ಗೊತ್ತಾ? ಎಂದು ಕೇಳಿದೆ.

ಅದಕ್ಕವರು  ‘ನೀನೇನು ಹೊಸದಾಗಿ ಕಂಡು ಹಿಡಿದ್ಯಾ. ಮೊದಲಿಂದಲೂ ಇದೇ ಅಲ್ವೇ ನಡೀತಿರೋದು’ ಎಂದರು.

ಮುಂದುವರೆಯುವುದು …

5 comments to “ಬೆಜವಾಡ ವಿಲ್ಸನ್ ಸಂದರ್ಶನ – ಭಾಗ ೧ : ನನ್ನ ಕೈಗಳನ್ನು ನೋಡು.. ನನ್ನ ಬದುಕು ಹೇಗಾಯ್ತು ನೋಡು..”
  1. Pingback: ಋತುಮಾನ | ಬೆಜವಾಡ ವಿಲ್ಸನ್ ಸಂದರ್ಶನ – ಭಾಗ ೨ : ನನ್ನ ಕೈಗಳನ್ನು ನೋಡು.. ನನ್ನ ಬದುಕು ಹೇಗಾಯ್ತು ನೋಡು..

  2. Pingback: ಋತುಮಾನ | ಬೆಜವಾಡ ವಿಲ್ಸನ್ ಸಂದರ್ಶನ – ಭಾಗ ೩ : ನನ್ನ ಕೈಗಳನ್ನು ನೋಡು.. ನನ್ನ ಬದುಕು ಹೇಗಾಯ್ತು ನೋಡು..

  3. Iಈ ದೇಶದಲ್ಲಿದ್ದೂ ಇಂಥ ಻ಅಮಾನವೀಯ ದಾರುಣ ಘಟನೆಗಳನ್ನ, ಗಮನಿಸಿಯೇ ಇಲ್ಲವಲ್ಲ. ೆಎಂಬ ದುಃಖ ಕಾಡತೊಡಗಿದೆ.
    ಇಂಥ ಕೆಲಸಕ್ಕೆ ಪ್ರಜ್ಞಾಪೂರ್ವಕವಾಗಿಯೇ ದೂಡುವ ನಾವು ಅದೆಂಥ ರಾಕ್ಷಸರು. ಮನುಷ್ಯರೇ ಮಲಹೊರುವ ಕೆದಕುವ ಕೆಲಸವನ್ನು ಇನ್ನಾದರೂ ನಿಷೇಧಿಸಬೇಕಾಗಿದೆ. ದೇಶಾಭಿಮಾನವೆಂದರೆ ಕೇವಲ ಸಿರಿವಂತಿಕೆಯನ್ನು ಪೂಜಿಸುವುದಲ್ಲ. ದಯನೀಯ ಸ್ಥಿತಿಗೆ ಮನುಷ್ಯನೇ ಮನುಷ್ಯನನ್ನು ನೂಕಿ ಮಾನವ ಘನತೆಯನ್ನೇ ನಾಶ ಮಾಡುವಂಥ ಕ್ರಿಯೆ ಗೆ ಪ್ರಜ್ಞಾವಂತರಾದರೂ ಪ್ರತಿಭಟಿಸಲೇ ಬೇಕು.

  4. Pingback: ಋತುಮಾನ | ಬೆಜವಾಡ ವಿಲ್ಸನ್ ಸಂದರ್ಶನ – ಭಾಗ ೪ : ನನ್ನ ಕೈಗಳನ್ನು ನೋಡು.. ನನ್ನ ಬದುಕು ಹೇಗಾಯ್ತು ನೋಡು..

  5. Hello sir, First of all Wilson Bejwad is not thoti / Jalagara/ safayi karmachari alla.He is telling lies.His native is kgf,Now it’s self come & see in kgf.no one thoti change their profession.they are doing in other form.But Bejawa sitting in Delhi.Speaking about safayi. in his interview —he is telling he went to see practically how they clean the gutters.when he is born bought in slum ,is it necessary to see the gutter.in one word he is showman.Not done anything to safayi karmachari s in kgf.in this regard I will come to open debate.

ಪ್ರತಿಕ್ರಿಯಿಸಿ