‘ಅಕಾವ್ಯ’ದ ಹರಿಕಾರ ನಿಕನೋರ್ ಪರ್ರನಿಗೊಂದು ನುಡಿ ನಮನ


ಚಿಲಿ ದೇಶದ ಕವಿ ನಿಕನೋರ್ ಪರ್ರ ಮೊನ್ನೆ ೨೩ ಜನವರಿ ಯಂದು ತನ್ನ ೧೦೩ನೆ ವಯಸ್ಸಿನಲ್ಲಿ ತೀರಿಕೊಂಡ. ಪರ್ರನನ್ನ ಚಿಲಿ ದೇಶದ ಇತಿಹಾಸದಲ್ಲೇ ಅತ್ಯಂತ ಮಹತ್ವದ ಕವಿಗಳಲ್ಲೊಬ್ಬ ಮಾತ್ರವಲ್ಲ ಭೂಗೋಳದ ಪಶ್ಚಿಮಾರ್ಧದ ಬಹುಮುಖ್ಯ ದನಿ ಎಂದು ಬಣ್ಣಿಸುತ್ತಾ ಚಿಲಿ ದೇಶದ ಅಧ್ಯಕ್ಷ ಮಿಚೆಲ್ ಬ್ಯಾಚೆಲ್ಟ್ ಎರಡು ದಿನದ ಶೋಕಾಚರಣೆ ಘೋಷಿಸಿದ್ದಾರೆ. ಚಿಲಿ ದೇಶದಾದ್ಯಂತ ರಾಷ್ತ್ರಬಾವುಟ ಧ್ವಜ ಸ್ಥ೦ಭದ ಅರ್ಧಕ್ಕೆ ಇಳಿಸಲಾಗಿದೆ.

ಚಿಲಿ ದೇಶಕ್ಕೆ ಅಷ್ಟೊಂದು ಪ್ರಮುಖ ಕವಿ ಪರ್ರ!

ಪರ್ರಗೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ಚಿಲಿ ದೇಶದಾದ್ಯಂತ ಆತನ “ಕಾಲ್ಪನಿಕ ಮನುಷ್ಯ” ಕವಿತೆಯ ಸಾಮೂಹಿಕ ವಾಚನ ನಡೆಸಲಾಗಿತ್ತು. ಆ ಸಾಮೂಹಿಕ ವಾಚನದ ನೇತೃತ್ವ ವಹಿಸಿಕೊಂಡಿದ್ದು ದೇಶದ ಅಧ್ಯಕ್ಷ ಮಿಚೆಲ್!

ಮೂಲತಃ ಭೌತಶಾಸ್ತ್ರಜ್ಞ ಮತ್ತು ಗಣಿಶಾಸ್ತ್ರಜ್ಞನಾದ ಪರ್ರ ಲೋಕದ ಅಪರೂಪದ ಭೌತಶಾಸ್ತ್ರಜ್ಞ ಆಗಿದ್ದರೂ ಲೋಕದಾದ್ಯಂತ ಆತನ ಖ್ಯಾತಿ ಓರ್ವ ಕವಿಯಾಗಿ.

ಪರ್ರನನ್ನ ಕವಿ ಎಂದು ಕರೆಯುವುದು ಅಸಮಂಜಸ. ಯಾಕೆಂದರೆ ಪರ್ರ ತನ್ನ ಕವಿತೆಯನ್ನು ಅಕಾವ್ಯ (Anti-poetry) ಎಂದೇ ಹೇಳುತ್ತಿದ್ದ. ಕಾವ್ಯ ಸಾಮಾನ್ಯವಾಗಿ ಎತ್ತಿಹಿಡಿಯುವ ಅಲಂಕೃತ ಭಾಷೆ, ಪ್ರತಿಮೆ, ಅಸ್ಪಷ್ಟತೆ, ರಮ್ಯತೆ, ಕಾಲ್ಪನಿಕತೆ ಇವುಗಳನ್ನೆಲ್ಲ ದೂರವಿಟ್ಟು ಕಾವ್ಯವನ್ನು ಜನರ ಬಾಳ್ವೆಯ ಭಾಷೆಗೆ ಹತ್ತಿರವಾಗಿಸಬೇಕೆಂದು ನಂಬಿದ್ದ ಪರ್ರ ಆ ದಿಕ್ಕಿನಲ್ಲಿ ಹೆಜ್ಜೆ ಇಟ್ಟ ಪರಿಣಾಮ ಆಂಟಿ-ಪೊಯೆಟ್ರಿಯ ಜನನ.

ಕಾವ್ಯವನ್ನು ಒಲಿಂಪಸ್ ತುದಿಯಿಂದ ಕೆಳಕ್ಕಿಳಿಸಿ ಜನರ ನಡುವೆ ತೆಗೆದುಕೊಂಡು ಹೋಗಬೇಕು ಮತ್ತು ಅಲ್ಲಿಂದಲೇ ಸೃಷ್ಟಿಸಬೇಕು ಎಂಬುದು ಪರ್ರನ ವಾದವಾಗಿತ್ತು. ಕಾವ್ಯ ಚುರ್ಚಿನಲ್ಲಿ ಪಾದ್ರಿ ಮಾಡುವ ಭಾಷಣದಂತೆ ಕೇಳಿಸುತ್ತದೆ ಎನ್ನುತ್ತಿದ್ದ ಪರ್ರ ಕಾವ್ಯದಿಂದ ಅದರ ಕಾವ್ಯಾತ್ಮಕತೆ ಹೊರಗಿಟ್ಟು ಕಾವ್ಯ ರಚಿಸುವ ಕಡೆ ಗಮನ ಹರಿಸಿದ. ತನ್ನ ಒಂದು ಕವಿತೆಯಲ್ಲಿ ತನಗಿಂತ ಮೊದಲು ಕಾವ್ಯ ಶಿಷ್ಟರ ಸ್ವರ್ಗವಾಗಿತ್ತು ಎಂದು ಹೇಳುತ್ತಾ ಆ ಸ್ವರ್ಗಕ್ಕೆ ಬೆಂಕಿ ಹಚ್ಚಲು ನಡೆಸಿದ ಪ್ರಯತ್ನ ಆಂಟಿ-ಪೊಯೆಟ್ರಿ. ತನ್ನ ಈ ಮಾರ್ಗದ ಕುರಿತು ಆತನಿಗಿದ್ದ ಬದ್ಧತೆ ಮತ್ತು ಸ್ಪಷ್ಟತೆ ಎಷ್ಟೆಂದರೆ ಆತ ಒಂದು ಹಂತದ ನಂತರ ಜನರ ಕವಿ ಎಂದೇ ಸುಪ್ರಸಿದ್ಧನಾದ ನೆರೂಡನ ಕಾವ್ಯ ಮಾರ್ಗವನ್ನೇ ಟೀಕಿಸಿದ. ನೆರೂಡಾನ ಕವಿತೆಯ ವಸ್ತುಗಳ ಬಗ್ಗೆ ಸಮ್ಮತಿ ಇದ್ದರೂ ಅದರ ಮಂಡನೆ ಮತ್ತು ಕಾವ್ಯಾತ್ಮಕತೆ ಕುರಿತು ಪರ್ರ್ರಾನಿಗೆ ಭಿನ್ನಾಭಿಪ್ರಾಯವಿತ್ತು. “ಹಾಡುವ ಕೆಲಸ ಹಕ್ಕಿಗಳಿಗಿರಲಿ, ಮನುಷ್ಯರು ಮಾತನಾಡಬೇಕು,” ಎಂದೇ ಹೇಳುತ್ತಿದ್ದ ಪರ್ರ.

ಸಂದರ್ಶನವೊಂದರಲ್ಲಿ ಆಂಟಿ-ಪೊಯೆಮ್ಸ್ ಎಂದರೆ ಏನೆಂದು ವಿವರಿಸುತ್ತಾ ಪರ್ರ ಹೇಳಿದ್ದು: ವಿಡಂಬನೆ, ವ್ಯಂಗ್ಯ ಇವುಗಳನ್ನು ಬಳಸಿಕೊಂಡು ಲೇಖಕ ತನ್ನನ್ನೂ ಒಳಗೊಂಡಂತೆ ಇಡೀ ಮಾನವಕುಲವನ್ನೇ ಹಾಸ್ಯಮಾಡಬಲ್ಲನಾದರೆ ಆತನ ಪದಸೃಷ್ಟಿ ಕಾವ್ಯವಾಗುವುದಿಲ್ಲ.ಹಾಡಾಗುವುದಿಲ್ಲ ಬದಲಾಗಿ ಅದು ಕಥನವಾಗುತ್ತದೆ. ಇದುವೇ ಆಂಟಿ-ಪೊಯೆಮ್ಸ್ ನ ಮುಖ್ಯ ಗುಣ.

ಪರ್ರನ ಪ್ರಮುಖ ಕವನ ಸಂಕಲಗಳಲ್ಲಿ ಒಂದಾದ ಆಂಟಿ-ಪೊಯೆಮ್ಸ್ ಅನ್ನು ಆಂಗ್ಲ ಭಾಷೆಗೆ ಅನುವಾದ ಮಾಡಿದ ಲಿಜ್ ವೆರ್ನೆರ್ ಅನುವಾದಿತ ಪುಸ್ತಕಕ್ಕೆ ಮುನ್ನುಡಿ ಬರೆಯುತ್ತಾ ಹೇಳುತ್ತಾಳೆ ಆಂಟಿ ಪೊಯೆಮ್ಸ್ ಎಂದರೆ ಅದು ಕಾವ್ಯವನ್ನಾಗಲಿ ಇಲ್ಲ ಕಾವ್ಯವಿಧಾನವನ್ನಾಗಲಿ ನಿರಾಕರಿಸುವ ಹಾದಿಯಲ್ಲ. ಬದಲಾಗಿ ಅದು ಕಾವ್ಯ ಮಾರ್ಗಕ್ಕೆ ಕನ್ನಡಿ ಹಿಡಿದಂತೆ. ಆಂಟಿ ಪೊಯೆಮ್ಸ್ ಅನ್ನುವುದು ಕಾವ್ಯಕ್ಕೆ ಪರಿಪೂರಕವಾದದ್ದು, ಕಾವ್ಯವನ್ನು ಎದುರು ಹಾಕಿಕೊಂಡಿದ್ದರೂ, ಅಭಿಮುಖವಾಗಿದ್ದರೂ ಕಾವ್ಯವನ್ನು ಪರಿಪೂರ್ಣಗೊಳಿಸುವಂತದ್ದು. ಲಿಜ್ ಹೇಳುವಂತೆ ಮುಖ್ಯವಾಗಿ ಆಂಟಿ-ಪೊಯೆಮ್ಸ್ ಕಾವ್ಯಾವಲಂಬಿಯೇ ಆಗಿದೆ.

ಕಾವ್ಯವು ಲೋಕವನ್ನು ಭಿನ್ನವಾಗಿ ಗ್ರಹಿಸಲು ಸಹಾಯ ಮಾಡಬೇಕು ಎನ್ನುವ ಪರ್ರ ತನ್ನ ಕವಿತೆಯೊಂದರಲ್ಲಿ ಲೋಕದ ಎಲ್ಲಾ ವಿಷಯ ವಸ್ತುಗಳಿಗೆ ಮರುನಾಮಕರಣ ಮಾಡಬೇಕು ಎನ್ನುತ್ತಾನೆ. ಮತ್ತು ಹಾಗೆ ಮಾಡದ ಕವಿ ತಾನು ಬಳಸುವ ಭಾಷೆಗೆ ಪ್ರಾಮಾಣಿಕವಾಗಿ ನೆಡೆದುಕೊಳ್ಳುತ್ತಿಲ್ಲ ಎಂದೇ ಹೇಳುತ್ತಾನೆ.

ತನ್ನ ಕಾವ್ಯ ಮಾರ್ಗದಲ್ಲಿ ಪರ್ರ್ರ ಬಳಸಿದ ಪರಿಣಾಮಕಾರಿ ಅಸ್ತ್ರ ಎಂದರೆ ಹಾಸ್ಯ. ಪರ್ರನ ನಂಬಿಕೆ ಏನಾಗಿತ್ತೆಂದರೆ ಹಾಸ್ಯವು ಜನರ ಜೊತೆ ಸಂವಾದ ನೆಡೆಸಲು ಇರುವ ಅತ್ಯಂತ ಸುಲಭ ಮತ್ತು ಸರಳ ಮಾರ್ಗ. ಹಾಸ್ಯ ಲೋಕದ ಡೊಂಕನ್ನು ತೋರಿಸಲು ಮತ್ತು ತಿದ್ದಲು ಉಪಯೋಗಿಸಿದ ಪರ್ರ ಸಂದರ್ಶನವೊಂದರಲ್ಲಿ ಹೇಳಿದ್ದ, “ಹಾಸ್ಯ ಪ್ರಜ್ಞೆ ಇಲ್ಲದಾಗಲೇ ಮನುಷ್ಯ ಪಿಸ್ತೂಲ್ ಕೈಗೆತ್ತಿಕೊಳ್ಳುವುದು.”

ಗಣಿತದ ನಿಖರತೆಯನ್ನೇ ಆಂಟಿ-ಪೊಯೆಮ್ಸ್ ಒಳಗಡೆ ಗುರುತಿಸುವ ವಿಮರ್ಶಕರು ಪರ್ರನ ಈ ಕಾವ್ಯ ಮಾರ್ಗದ ಹಿಂದಿರುವ ಸ್ಫೂರ್ತಿ ಆತನ ಗಣಿತದ ಮನೋಸ್ಥಿತಿ ಎಂದೇ ಅಭಿಪ್ರಾಯ ಪಟ್ಟಿದ್ದಾರೆ. ಅದರೊಂದಿಗೆ ಕಾಫ್ಕನ ಸಾಹಿತ್ಯದ ಸತ್ವವೂ ಪರ್ರನ ಮೇಲೆ ಪ್ರಭಾವ ಬೀರಿದೆ ಎನ್ನಲಾಗುತ್ತದೆ.

ಸಮಾಜವಾದಿ ಅಲ್ಲಾಂಡೆಯ ಅಧಿಕಾರವನ್ನು ಟೀಕಿಸಿದ್ದ ಪರ್ರ ಮುಂದೆ ಸರ್ವಾಧಿಕಾರಿ ಧೋರಣೆಯ ಪಿನೋಚೆ ಅಧಿಕಾರಕ್ಕೆ ಬಂದಾಗ ಆತನ ವಿರುದ್ಧವೂ ನಿಂತ ಮತ್ತು ಆಂಟಿ-ಪೊಯೆಮ್ಸ್ ರಚಿಸಿದ. ಪಿನೋಚೆ ಸರ್ವಾಧಿಕಾರ ಸಂದರ್ಭದಲ್ಲಿ ಪರ್ರ ರಚಿಸಿದ ಆಂಟಿ-ಪೊಯೆಮ್ಸ್ ಪ್ರತಿರೋಧಿ ಮಾತ್ರವಾಗಿರಲಿಲ್ಲ ಬದಲಾಗಿ ಅದು ಗೋಡೆ ಬರಹ, ಘೋಷಣೆಗಳಾಗುವ ಸಾಧ್ಯತೆ ತಮ್ಮ ಗರ್ಭದೊಳಗಿಟ್ಟುಕೊಂಡೇ ಜನಿಸಿದವು. ಪರ್ರ ವರ್ಷ ಉರುಳಿದಂತೆ ಹೆಚ್ಚೆಚ್ಚು ರಾಜಕೀಯವಾಗಿ ಸೂಕ್ಷ್ಮನಾಗುತ್ತಾ ಹೋದದ್ದನ್ನು ಆತನ ಆಂಟಿ-ಪೊಯೆಮ್ಸ್ ಮೂಲಕ ತಿಳಿಯಬಹುದಾಗಿದೆ.

ತಾನು ರಾಜಕೀಯ ಸಿದ್ಧಾಂತದ ಎಡವೂ ಅಲ್ಲ ಬಲವೂ ಅಲ್ಲ ಎಂದು ಹೇಳುತ್ತಿದ್ದ ಪರ್ರ ತಾನು ಲೋಕದ ಎಲ್ಲಾ ವಿಷಯಗಳಿಂದಲೂ ಒಡೆದು ಬೇರಾಗುವಾತ ಎಂದು ಹೇಳಿದ್ದಿದೆ. ಒಂದು ರೀತಿಯಲ್ಲಿ ಪರ್ರ ನೆರೂಡನ ಮಾರ್ಗವನ್ನೇ ಅನುಸರಿಸುವಂತೆ ಕಂಡರೂ ಆತ ಆ ಮಾರ್ಗದಿಂದ ತುಂಬಾ ಪ್ರಜ್ಞಾಪೂರ್ವಕವಾಗಿಯೇ ಒಡೆದು ಬೇರಾದವನು.

ಪರ್ರ ಮತ್ತು ನೆರೂಡ ಸಮಕಾಲೀನರಾಗಿದ್ದರೂ ಭಿನ್ನ ಮಾರ್ಗ ಅನುಸರಿಸಿದವರು. ನೆರೂಡನ ಜೀವನಚರಿತ್ರೆ ಬರೆದ ಫ್ರಾಂಕ್ ಮ್ಯಾಕ್ಶೇನ್ ಹೇಳುವುದೇನೆಂದರೆ ಪರ್ರ ಮತ್ತು ನೆರೂಡನ ಬದುಕು ಮತ್ತು ಲೋಕದೃಷ್ಟಿಯನ್ನು ವಿವರಿಸಲು ಅವರಿಬ್ಬರೂ ವಾಸಿಸಿದ ಮನೆಯನ್ನು ಒಂದು ಪ್ರತಿಮೆಯಾಗಿಟ್ಟುಕೊಂಡು ಅರಿಯಬಹುದು. ಪೈನ್ ತೋಟದ ನಡುವೆಯಿದ್ದ ಪರ್ರನ ಮನೆ ಬಹಳ ಸಾಧಾರಣವಾಗಿತ್ತು ಮತ್ತು ಸಮುದ್ರ ತಟದಲ್ಲಿದ್ದ ನೆರೂಡನ ಮನೆ ಭವ್ಯವಾಗಿತ್ತು. ನೆರೂಡಾನ ಮನೆ ಜನಜೀವನಕ್ಕೆ ಮತ್ತು ಪ್ರಕೃತಿಗೆ ಹತ್ತಿರವಾಗಿದ್ದಾರೆ ಪರ್ರನ ಮನೆ ಜನವಾಸ್ತವ್ಯದಿಂದ ದೂರವಿತ್ತು. ಇದರಿಂದ ಪರ್ರನ ಮಿತಭಾಷಿ ಗುಣದ ಬಗ್ಗೆ ಅರಿಯಬಹುದು ಎನ್ನುವ ಮ್ಯಾಕ್ಶೇನ್ ತನ್ನ ವಿಶ್ಲೇಷಣೆಯನ್ನು ಮುಂದುವರಿಸುತ್ತಾ ಹೇಳುವುದೇನೆಂದರೆ ಪರ್ರನ ಮನೆ ಇದ್ದ ಪ್ರದೇಶ ಮತ್ತು ಆತನ ಮನೆಯ ಒಳರಚನೆ ಆತನ ಅರಾಜಕತಾ ವ್ಯಾಮೋಹವನ್ನು ಪ್ರತಿಬಿಂಬಿಸುತಿತ್ತು. ಅದೂ ಅಲ್ಲದೆ ಹೇಗೆ ಆತ ಎಲ್ಲಾ ಬಗೆಯ ಚೌಕಟ್ಟಿನಿಂದ ಹೊರಗುಳಿಯಬಯಸುತ್ತಿದ್ದ, ಅನ್ಯನಾಗಿರಬಯಸುತ್ತಿದ್ದ ಎಂಬುದನ್ನೂ ಅರಿಯಬಹುದು. ಮ್ಯಾಕ್ಶೇನ್ ಹೇಳುವ ಪ್ರಕಾರ ಪರ್ರ ಎಲ್ಲಾ ಬಗೆಯ ಸಮುದಾಯಗಳಿಂದ ಹೊರಗುಳಿದವನು, ಅನ್ಯನಾಗಿದ್ದವನು. ತಾನು ವಾಸಿಸುವ ದೇಶಕ್ಕೂ ಅನ್ಯನಾಗಿದ್ದವನು.

ತಾನು ಎಲ್ಲದರಿಂದಲೂ ಒಡೆದು ಬೇರಾಗುತ್ತೇನೆ ಎಂದ ಪರ್ರ ಎಲ್ಲಾ ವಿಷಯದಲ್ಲೂ ಹಾಗೆಯೇ ನೆಡೆದುಕೊಂಡ. ಯಾವುದೇ ರೀತಿಯ ವರ್ಗೀಕರಣಕ್ಕೆ ಸಿಕ್ಕಿಹಾಕಿಕ್ಕೊಳ್ಳಲು ಆತ ಇಚ್ಚಿಸಲಿಲ್ಲ.

ತನ್ನ ಕೊನೆಯ ದಿನಗಳನ್ನು ಜನರಿಂದ ದೂರ ಉಳಿದು ಏಕಾಂತದಲ್ಲಿ ಕಳೆದ ಪರ್ರ.

ನಿನ್ನಿಚ್ಛೆಯಂತೆ ಬರಿ
ನಿನಗಿಷ್ಟವಾದ ಶೈಲಿಯಲ್ಲಿ
ಅದೊಂದೇ ಮಾರ್ಗ
ಸರಿ ಎಂದು ನಂಬುತ್ತಿರಲು
ಸೇತುವೆಯಡಿಯಲ್ಲಿ ಅದೆಷ್ಟೋ
ರಕ್ತ ಹರಿದಿದೆ

ಕಾವ್ಯದಲ್ಲಿ ಎಲ್ಲವೂ ಸೈ

ಆದರೆ ಒಂದೇ ಒಂದು ಷರತ್ತು:
ಖಾಲಿ ಹಾಳೆಯನ್ನು ಉತ್ತಮಗೊಳಿಸಬೇಕು.

***

ಹೊರಡುವ ಮುನ್ನ
ಕೊನೆಯದೊಂದು ಆಸೆ
ಸಹೃದಯ ಓದುಗನೇ
ಸುಟ್ಟುಬಿಡು ಈ ಪುಸ್ತಕವನ್ನು
ನಾನು ಹೇಳಬೇಕೆಂದುಕೊಂಡದ್ದು
ಇದಲ್ಲವೇ ಅಲ್ಲ
ಇದನ್ನು ರಕ್ತದಲ್ಲಿ ಬರೆಯಲಾಗಿದ್ದರೂ
ನಾನು ಉಸುರಲಿಚ್ಚಿಸಿದ್ದು
ಇದಲ್ಲವೇ ಅಲ್ಲ.
ನನಗಿಂತ ನಾಚಿಕೆಗೇಡಿನವನಿನೊಬ್ಬ
ತನ್ನ ನೆರಳಿನಿಂದಲೇ ನೆಲಕಚ್ಚಿದವನು ನಾನು
ನನ್ನ ಅಕ್ಷರಗಳೇ ನನ್ನ ಮೇಲೆ
ಸೇಡು ತೀರಿಸಿಕೊಂಡಿವೆ
ನನ್ನ ಕ್ಷಮಿಸು ಓದುಗನೇ, ಸಹೃದಯ ಓದುಗನೇ,
ಹೊರಡುವಾಗ ಬಿಸಿಯಪ್ಪುಗೆಯೊಂದಿಗೆ
ಹೊರಡದಿದ್ದರೆ
ಬಲವಂತದ ದುಃಖತಪ್ತ ನಗೆ ಬೀರುತ್ತಾ
ಹೋರಾಡಬೇಕಾಗುತ್ತದೆ
ಅದೇ ಇರಬಹುದು ನನ್ನ ಸತ್ಯ
ಆದರೆ ಕೇಳು ನನ್ನ ಕೊನೆಯ ಮಾತನ್ನು:
ನನ್ನೆಲ್ಲಾ ನುಡಿಯನು ನಾನು ಹಿಂಪಡೆಯುತ್ತಿದ್ದೇನೆ
ಜಗತ್ತಿನೆಲ್ಲಾ ಕಹಿಯನ್ನು ಎದೆಯಲ್ಲಿಟ್ಟುಕೊಂಡು
ನನ್ನೆಲ್ಲಾ ನುಡಿಯನ್ನು ನಾ ಹಿಂದೆ ಪಡೆಯುತ್ತಿದ್ದೇನೆ.

***

ಇಷ್ಟವೋ ಕಷ್ಟವೋ
ನಮ್ಮ ಬಳಿ ಇರುವುದು
ಮೂರೇ ಮೂರು ಆಯ್ಕೆ
ನಿನ್ನೆ, ಇಂದು ಮತ್ತು ನಾಳೆ

ನಿಜ ಹೇಳಬೇಕೆಂದರೆ
ಮೂರೂ ಅಲ್ಲ.
ವೇದಾಂತಿ ಹೇಳಿದ್ದು ನಿಜ
ನಿನ್ನೆ ಎಂದರೆ ಕಳೆದು ಹೋದ ದಿನ
ನೆನಪಿಗೆ ಸೇರಿದ್ದು
ನೆನಪಿನಲ್ಲಿ ಮಾತ್ರ ಅದು ನಮ್ಮದು:
ಗಿಡದಿಂದ ಕಿತ್ತ ಗುಲಾಬಿಯಿಂದ
ಹೊಸ ದಳಗಳು ಅರಳುವುದಿಲ್ಲ.

ಕೈಯಲ್ಲಿರುವ ಎಲೆಗಳು
ಎರಡೇ ಎರಡು:
ಇಂದು ಮತ್ತು ನಾಳೆ

ಸತ್ಯಸಂಗತಿ ಏನೆಂದರೆ
ಎರಡೂ ಇಲ್ಲ
ಯಾಕೆಂದರೆ ನಮಗೆಲ್ಲ ಗೊತ್ತು
ಇಂದು ಅಥವಾ ವರ್ತಮಾನ
ಅಂತ ಏನೂ ಇರುವುದಿಲ್ಲ
ಯೌವ್ವನದಂತೆ
ಬದುಕುತ್ತಿರುವಾಗಲೇ ಇಲ್ಲವಾಗುತ್ತದದು

ಕೊನೆಗುಳಿಯುವುದು ನಾಳೆ ಮಾತ್ರ
ಗಾಜಿನ ಬಟ್ಟಲನ್ನು ಮೇಲೆತ್ತುತ್ತಾ
ಎಂದು ಬಾರದ ಆ ದಿನಕ್ಕೆ ಗೌರವ ಸೂಚಿಸುತ್ತೇನೆ

ಅದಷ್ಟೇ ಅಲ್ಲವೇ ನಮ್ಮ ಪಾಲಿಗುಳಿದಿರುವುದು!

***

ಅದೆಷ್ಟೋ ವರ್ಷಗಳ ಹಿಂದೆ
ಹಿಂದುಮುಂದಿಲ್ಲದೆ ಅಡ್ಡಾಡುತ್ತಿರುವಾಗ
ಮೈಯೆಲ್ಲಾ ಹೂವಾಗಿದ್ದ
ಅಕೇಶಿಯಾ ಮರಗಳ
ನಡುವಿದ್ದ ಬೀದಿಯೊಂದರಲ್ಲಿ
ಹಳೆಯ ಗೆಳೆಯನೊಬ್ಬ ಸಿಕ್ಕಿ ಹೇಳಿದ
ನಿನಗೆ ಆಗಷ್ಟೇ
ಮದುವೆ ಆಯಿತೆಂದು.
ನಾನಂದೆ
ನನಗೇನೂ ಆಗಬೇಕಿಲ್ಲ
ನಾನು ನಿನ್ನನ್ನು ಪ್ರೀತಿಸಿರಲೇ ಇಲ್ಲ ಎಂದೆ.
ನಿನಗದು
ನನಗಿಂತ ಹೆಚ್ಚು ಸ್ಪಷ್ಟವಾಗಿ ತಿಳಿದಿರಬೇಕು
ಆದರೂ ಪ್ರತಿ ಬಾರಿ
ಅಕೇಶಿಯಾ ಗಿಡ ಮೈಮೇಲೆ
ಹೂವುಗಳನ್ನು ಹೊದ್ದಾಗ
– ನಂಬುತ್ತೀಯ ನೀನು? –
ಪಾಯಿಂಟ್-ಬ್ಲಾಂಕ್ ರೆಂಜಿನಿಂದ
ಎದೆಯೊಡೆಯುವಂತಾ
ನಿನ್ನ ಮದುವೆಯ ಸುದ್ದಿ ಕೊಟ್ಟಾಗ
ಆದ ನೋವೇ
ಮತ್ತೆ ಜೀವಂತವಾಗುತ್ತದೆ.

***

ಬೆಂಕಿಯ ಸಂದರ್ಭದಲ್ಲಿ
ಲಿಫ್ಟ್ ಬಳಸಬೇಡಿ
ಮೆಟ್ಟಿಲನ್ನೇ ಬಳಸಿ
ಬೇರೆ ಇನ್ನ್ಯಾವುದೇ ಸೂಚನೆ ಕೊಡದ ಹೊರತು

ಧೂಮ್ರಪಾನ ನಿಷಿದ್ಧ
ಇಲ್ಲಿ ಕಸ ಕಡ್ಡಿ ಹಾಕಬಾರದು
ಮಲಮೂತ್ರ ವಿಸರ್ಜನೆ ನಿಷೇಧಿಸಲಾಗಿದೆ
ರೇಡಿಯೋ ಬಳಸಬಾರದು
ಇತರೆ ಆಜ್ಞೆ ಹೋರಡಲಿಸಲಾಗದ ಹೊರತು
ಪ್ರತಿಬಾರಿ
ಟಾಯ್ಲೆಟ್ ನಲ್ಲಿ ಫ್ಲಶ್ ಮಾಡತಕ್ಕದ್ದು
ಟ್ರೈನ್ ನಿಂತಿರುವ ಸಂದರ್ಭದಲ್ಲಿ
ಟಾಯ್ಲೆಟ್ ಬಳಸಬೇಡಿ
ಮುಂದಿನ ಸರತಿಯವರ ಕುರಿತು
ಸ್ವಲ್ಪ ಆಲೋಚಿಸಿ
ಮುಂದಿನ ಕ್ರಿಸ್ಟಿಯನ್ ಸೈನಿಕ
ಕಾರ್ಮಿಕರೇ ಜೊತೆಗೂಡಿ
ಜೀವ ಹೊರತುಪಡಿಸಿ
ಕಳೆದುಕೊಳ್ಳಲು ಮತ್ತೇನೂ ಇಲ್ಲ
ತಂದೆ, ಪುತ್ರ ಮತ್ತು ಪವಿತ್ರ ದೈವಕ್ಕೆ ಉಘೇ ಎನ್ನಿ
ಬೇರೆ ಯಾವುದೇ ಅಪ್ಪಣೆ ಆಗದ ಹೊರತು
ಅಂದಹಾಗೆ
ನಾವು ಈ ಎಲ್ಲಾ ಸತ್ಯವನ್ನು ನಾವು
ಸ್ವಯಂಸಿದ್ಧ ಎಂದೆ ನಂಬುತ್ತೇವೆ
ಎಲ್ಲಾ ಮನುಷ್ಯರನ್ನು
ಆ ಭಗವಂತ ಸೃಷ್ಟಿಸಿದ್ದಾನೆ
ಮತ್ತು ನಮಗೆಲ್ಲಾ ಜೀವ, ಸ್ವಾತಂತ್ರ ಮತ್ತು ಸಂತಸ ಸಂಭ್ರಮದ
ಹಕ್ಕನ್ನು ದಯಪಾಲಿಸಿದ್ದಾನೆಂದು
ಮತ್ತು ಕೊನೆಯದಾಗಿ
ಎರಡು ಕೂಡಿಸು ಎರಡು ನಾಲಕ್ಕು ಎಂದು
ಬೇರೆ ಆದೇಶ ಆಗದ ಹೊರತು.

***

ಕಾಲ್ಪನಿಕ ಮನುಷ್ಯ
ಕಾಲ್ಪನಿಕ ನದಿಯೊಂದರ ಕಾಲ್ಪನಿಕ ತೀರದಲ್ಲಿ
ಕಾಲ್ಪನಿಕ ಮರಗಳ ನಡುವೆ
ಕಾಲ್ಪನಿಕ ಮನೆಯಲ್ಲಿ ವಾಸವಾಗಿದ್ದ

ಕಾಲ್ಪನಿಕ ಗೋಡೆಗಳ ಮೇಲೆ
ರಿಪೇರಿ ಮಾಡಲಾಗದ
ಕಾಲ್ಪನಿಕ ಬಿರುಕುಗಳು
ಕಾಲ್ಪನಿಕ ಜಗತ್ತಿನಲ್ಲಿ
ಕಾಲ್ಪನಿಕ ಸ್ಥಳ ಮತ್ತು ಕಾಲ್ಪನಿಕ ಕಾಲದಲ್ಲಿ
ಘಟಿಸಿದ
ಕಾಲ್ಪನಿಕ ಘಟನೆಗಳನ್ನು ನೆನಪಿಸುವ
ಕಾಲ್ಪನಿಕ ವರ್ಣಚಿತ್ರಗಳನ್ನು
ಅಲ್ಲಿ ನೇತು ಹಾಕಲಾಗಿತ್ತು

ಪ್ರತಿ ಕಾಲ್ಪನಿಕ ಮಧ್ಯಾನದಂದು
ಕಾಲ್ಪನಿಕ ಮೆಟ್ಟಿಲುಗಳನ್ನೇರಿ
ಕಾಲ್ಪನಿಕ ಬಾಲ್ಕನಿಯಲ್ಲಿ ನಿಂತು
ಕಾಲ್ಪನಿಕ ಬೆಟ್ಟಗಳ
ಕಾಲ್ಪನಿಕ ಕಣಿವೆಗಳ
ಕಾಲ್ಪನಿಕ ಪ್ರಕೃತಿಯನ್ನು ನೋಡಿ
ಆಸ್ವಾದಿಸುತಿದ್ದ

ಕಾಲ್ಪನಿಕ ನೆರಳುಗಳು
ಕಾಲ್ಪನಿಕ ಹಾದಿಯ ಮೇಲೆ
ಕಾಲ್ಪನಿಕ ಹಾಡುಗಳನ್ನು ಹಾಡುತ್ತಿದ್ದವು
ಕಾಲ್ಪನಿಕ ಸೂರ್ಯಾಸ್ತಮದ ನೆನಪಿನಲ್ಲಿ

ಕಾಲ್ಪನಿಕ ಬೆಳದಿಂಗಳಿನದಿಯಲ್ಲಿ
ಕಾಲ್ಪನಿಕ ಬೆಡಗಿಯೊರ್ಬಳು
ಕಾಲ್ಪನಿಕ ಪ್ರೀತಿಯನ್ನು ಅವನಿಗರ್ಪಿದಾಗ
ಮತ್ತದೇ ನೋವು
ಮತ್ತದೇ ಕಾಲ್ಪನಿಕ ಸಂತೃಪ್ತಿ
ಮತ್ತೆ ಅದೇ ಕಾಲ್ಪನಿಕ ಮನುಷ್ಯನ
ಜೀವ ಮಿಡಿತದ ಸದ್ದು.

***

ನಾನಿಲ್ಲ್ಗೆ ತಲುಪಿದ್ದು ಹೇಗೋ

ಗೊತ್ತಿಲ್ಲ
ನಾನು ಒಂದು ಕೈಯಲ್ಲಿ
ನನ್ನ ಹ್ಯಾಟ್ ಹಿಡಿದುಕೊಂಡು
ನನ್ನನ್ನು ಹುಚ್ಚಎಬ್ಬಿಸಿದ
ಮಿನುಗುವ ಚಿಟ್ಟೆಯೊಂದನ್ನು
ಅಟ್ಟಿಸಿಕೊಂಡು ಬರುತ್ತಿದ್ದೆ
ಭಯಂಕರ ಖುಷಿಖುಷಿಯಾಗಿ

ಇದ್ದಕ್ಕಿದ್ದಂತ ನಾನು ಧಡಾರ್ ಎಂದು
ಮುಗ್ಗರಿಸಿ ಬಿದ್ದೆ
ಅದೇನಾಯಿತೋ ಗೊತ್ತಿಲ್ಲ
ಇಡೀ ತೋಟ ಚೂರುಚೂರಾಯಿತು
ಮೂಗು ಬಾಯಿಯಿಂದ ರಕ್ತ ಸೋರಿತು
ಏನಾಗುತ್ತಿದೆಯೋ ಗೊತ್ತಿಲ್ಲ
ಒಂದೋ ನನಗೆ ಹೇಗಾದರೂ ಸಹಾಯ ಮಾಡಿ
ಇಲ್ಲ ಹಣೆಯೊಳಕ್ಕೆ ಗುಂಡು ಇಳಿಸಿ.

***

ಒಂದರೆ ಶತಮಾನ

ಕಾವ್ಯ ಶಾಸ್ತ್ರೋಕ್ತ ಮುಠ್ಠಾಳರ
ಸ್ವರ್ಗವಾಗಿತ್ತು
ನಾ ಬಂದು
ಏಳುಬೀಳುವ ರೈಲು ಮಾರ್ಗ
ಆಗಿಸುವ ತನಕ.

ಬೇಕಿದ್ದರೆ
ಹತ್ತಿ, ಒಳಗೆ ಬನ್ನಿ
ಕೊನೆಯಲ್ಲಿ ಹೊರಬರುವಾಗ
ಬಾಯಿ ಮೂಗಿನಿಂದ
ರಕ್ತ ಸುರಿಯುತ್ತಿದ್ದರೆ
ಅದಕ್ಕೆ ನಾನಲ್ಲ ಜವಾಬ್ಧಾರಿ.

***

ಆಂಟಿ-ಪೊಯೆಟ್ ಎಂದರೆ ಯಾರು?
ಶವಪೆಟ್ಟಿಗೆ ಇಲ್ಲ ಕಲಶದ ವ್ಯವಹಾರ ನೆಡೆಸುವವನೇ?
ತನ್ನ ಬಗ್ಗೆಯೇ ನಂಬಿಕೆ ಇಲ್ಲದ ಸೇನಾನಿಯೇ?
ಏನನ್ನೂ ನಂಬದ ಪುರೋಹಿತನೇ?
ಎಲ್ಲವನ್ನು- ಮುದಿತನ ಮತ್ತು ಸಾವನ್ನೂ-
ಹಾಸ್ಯಮಯವಾಗಿ ನೋಡುವ
ಅಲೆಮಾರಿಯೇ?
ನಂಬಲಸಾಧ್ಯವಾದ ಮಾತುಗಾರನೇ?
ಬೆಟ್ಟದ ಅಂಚಿನಲ್ಲಿ ಕುಣಿಯುವ ನೃತ್ಯಪಟುವೇ?
ಎಲ್ಲರನ್ನೂ ಪ್ರೀತಿಸುವ ಸ್ವ-ವ್ಯಾಮೋಹಿಯೇ?
ವಿನಾಕಾರಣ ಕೇಡು ಎಸಗುವ
ಕತ್ತು ಹಿಚುಕುವ ಹಾಸ್ಯಗಾರನೇ?
ಕುರ್ಚಿಯ ಮೇಲೆ ನಿದ್ರಿಸುವ ಕವಿಯೇ?
ಆಧುನಿಕ ರಸವಾದಿಯೇ?
ಬಾಯಿಪಟಾಕಿ ಹಾರಿಸುವ ಕ್ರಾಂತಿಕಾರಿಯೇ?
ವಂಚಕನೇ?
ದೇವರೇ?
ಮುಗ್ಧನೆ?
ಸಾಮಾನ್ಯ ರೈತನೇ?
ಸರಿಯಾದ ಉತ್ತರಕ್ಕೆ ಅಡಿಗೆರೆ ಎಳೆಯಿರಿ.

ಆಂಟಿ-ಪೊಯೆಟ್ರಿ ಎಂದರೇನು?
ಚಹದ ಪಾತ್ರೆಯೊಳಗಿನ ಬಿರುಗಾಳಿಯೇ?
ಬಂಡೆಯ ಮೇಲೆ ಹಿಮದ ರಾಶಿಯೇ?
ತಟ್ಟೆಯ ಮೇಲೆ ಕೂಡಿಹಾಕಿದ ಮಲದ ರಾಶಿಯೇ?
ಸುಳ್ಳು ಹೇಳದ ಕನ್ನಡಿಯೇ?
ಲೇಖಕರ ಸಂಘದ ಅಧ್ಯಕ್ಷನ
ಕಪಾಳಕ್ಕೆ ಬಿಗಿದ ಪೆಟ್ಟೇ?
ಯುವ ಕವಿಗಳಿಗೆ ನೀಡಿದ ಎಚ್ಚರಿಕೆಯೇ?
ತೀವ್ರಗತಿಯ ಶವಪೆಟ್ಟಿಗೆಯೇ?
ನಡುಹಾದಿಯ ಶವಪೆಟ್ಟಿಗೆಯೇ?
ಕೆರೋಸೀನ್ ಚಾಲಿತ ಶವಪೆಟ್ಟಿಗೆಯೇ?
ಶವವಿಲ್ಲದ ಶವಸಂಸ್ಕಾರವೇ?
ಸರಿಯಾದ ಉತ್ತರದ ಮುಂದೆ
ಸರಿ ಗುರುತು ಹಾಕಿ.

***

ಪ್ರತಿ ಬಾರಿ ನಾನು
ಧೀರ್ಘ ಪ್ರವಾಸ ಮುಗಿಸಿ
ನನ್ನ ನಾಡಿಗೆ ಮರಳಿದಾಗ
ನಾನು ಮಾಡುವ ಮೊದಲ ಕೆಲಸ ಎಂದರೆ
ಸತ್ತವರ ಸುದ್ದಿ ಕೇಳುವುದು
ಪ್ರತಿ ವ್ಯಕ್ತಿಯೂ
ಸಾವಿನಲ್ಲಿ ಧೀರನೇ
ಮತ್ತೆ ಧೀರರೆಲ್ಲರೂ ನಮಗೆ
ಮಾರ್ಗದರ್ಶಕರು

ಆಮೇಲೆ ಕೇಳುತ್ತೇನೆ
ಘಾಸಿಗೊಂಡವರ ಬಗ್ಗೆ
ನೊಂದವರ ಬಗ್ಗೆ

ಈ ಸಣ್ಣ ಸಂಸ್ಕಾರ ಮುಗಿಸಿಯೇ
ನಾನು ಬದುಕು ಮುಂದುವರೆಸುತ್ತೇನೆ
ಕಣ್ಣು ಕಾಣಿಸುವಂತಾಗಲೆಂದು
ಕಣ್ಣನ್ನು ಮುಚ್ಚುತ್ತೇನೆ
ಮತ್ತೆ ಕಹಿತುಂಬಿಡಿಕೊಂಡು
ಹಾಡುತ್ತೇನೆ
ಶತಮಾನದ ತಿರುವಿನ
ಹಾಡುಗಳನ್ನು

***

ಒಂದಿಷ್ಟು ವರ್ಷ ನಾನು
ಎಲ್ಲೂ ಯಾವ ಕೆಲಸವನ್ನೂ
ಮಾಡದೆ ಇದ್ದು ಬಿಟ್ಟೆ.
ಸಮಯವನ್ನೆಲ್ಲಾ ಯಾತ್ರೆಗೆ ಮೀಸಲಿಟ್ಟೆ
ಸುತ್ತಮುತ್ತಲ್ಲಿನವರೊಂದಿಗೆ
ಅನುಭವ ಅಭಿಪ್ರಾಯವನ್ನು
ಹಂಚಿಕೊಳ್ಳುತ್ತಾ ಕೂತು ಬಿಟ್ಟೆ.
ನಿದ್ದೆಗೆ ನನ್ನನ್ನೇ ಸಮರ್ಪಿಸಿಕೊಂಡೆ.
ಆದರೆ ಗತಿಸಿದ ದಿನಗಳ ನೆನಪು
ಮನಸ್ಸಿನ ಪರದೆಯ ಮೇಲೆ
ಮತ್ತೆ ಮತ್ತೆ ಮೂಡುತ್ತಲೇ ಹೋದವು
ಕುಣಿಯುವಾಗಲೆಲ್ಲಾ ಅಸಂಬದ್ಧ ವಿಚಾರಗಳು
ಮತ್ತೆ ಮತ್ತೆ ಮರುಕಳಿಸುತ್ತಲೇ ಹೋದವು
ಹಿಂದಿನ ದಿನ ಕಣ್ಣಿಗೆ ಬಿದ್ದ
ಯಾವುದೋ ತರಕಾರಿ ಸೊಪ್ಪು
ಅಡುಗೆಮನೆ ಹಾದುಹೋಗುವಾಗ ನೆನಪಾಗುತಿತ್ತು
ನನ್ನ ಕುಟುಂಬಕ್ಕೆ ಸಂಬಂಧಿಸಿದ
ಅಸಂಖ್ಯ ಅದ್ಭುತ ಸಂಗತಿಗಳು
ನೆನಪಿಗೆ ಬರುತ್ತಿತ್ತು
ಅದೇ ಸಂದರ್ಭದಲ್ಲಿ
ನಾನಿದ್ದ ದೋಣಿ
ಜಲಸಂಬಂಧಿ ಜೀವಿಗಳು
ರಾಶಿ ರಾಶಿ ಬಿದ್ದಿದ್ದ ಕಿನಾರೆ
ಮೇಲೇರಿತು
ಆ ದೃಶ್ಯ ನನ್ನನ್ನು ಆಳವಾಗಿ
ಕಲುಕಿತು
ಕೋಣೆಯೊಳಗೇ ಸ್ವಯಂಇಚ್ಛೆ
ಬಂಧಿ ಆಗುವಂತೆ
ಮಾಡಿತು
ನನಗೆ ನಾನೇ
ಒತ್ತಾಯ ಮಾಡಿ
ಊಟ ಮಾಡಿದೆ
ನನ್ನ ವಿರುದ್ಧ ನಾನೇ
ದಂಗೆದ್ದೆ
ನಾನು ಯಾವಹೊತ್ತಿಗೂ ಸ್ಪೋಟಿಸಬಲ್ಲ
ಅಪಾಯವಾಗಿದ್ದೆ
ಯಾಕೆಂದರೆ ಯಾವುದೇ ಹೊತ್ತಿಗೂ
ವಿಚಿತ್ರ ಅಸಂಬದ್ಧತೆ
ಪ್ರದರ್ಶಿಸುತ್ತಿದ್ದೆ.

***

ಕನಸಿನಲ್ಲಿ ನಾನೊಂದು ಮರಭೂಮಿಯಲಿದ್ದೆ
ನನ್ನಿಂದ ನಾನೇ ಬೇಸತ್ತಿದ್ದೆ
ಅದಕ್ಕೆ ಒಂದು ಹೆಂಗಸನ್ನು
ಬೇಕಾಬಿಟ್ಟಿ ಹೊಡೆಯಲಾರಂಭಿಸಿದೆ
ಆ ದಿಂದ ಚಳಿ ರಾಕ್ಷಸ ಚಳಿ
ಏನಾದರೂ ಮಾಡಬೇಕಾಗಗಿತ್ತು
ಬೆಂಕಿ ಕಾಸಬೇಕು ಇಲ್ಲಾ
ದೇಹವ ದುಡಿಸಬೇಕು
ವಿಪರೀತ ತಲೆಸಿಡಿತ ಬೇರೆ
ಸುಸ್ತಾಗಿತ್ತು
ಸಾಯಬೇಕೆನಿಸುವಷ್ಟು
ನಿದ್ದೆಯ ಅಗತ್ಯ ನನಗಿತ್ತು
ನನ್ನ ಕೋಟ್ ರಕ್ತದಲ್ಲಿ ಸೋಕಿತ್ತು
ಕೈಬೆರಳುಗಳ ನಡುವೆ ಬೀದಿಗೂದಲುಗಳು
ಜೋತಾಡುತಿತ್ತು
ಅದು ನನ್ನ ತಾಯಿಯದಾಗಿತ್ತು
“ನಿನ್ನ ತಾಯಿಯನ್ನು ಯಾಕೆ ಹಿಂಸಿಸುತ್ತಿ?” ಎಂದು ಕಲ್ಲೊಂದು ಕೇಳಿತು
ಧೂಳುಧೂಳಾದ ಕಲ್ಲು
“ಯಾಕೆ ತಾಯ್ಗೆ ಹಿಂಸೆ ಕೊಡುತ್ತಿ?”
ಆ ಸ್ವರ ಬಂದಿದ್ದೆಲ್ಲಿಂದಲೋ ಗೊತ್ತಿಲ್ಲ
ಆದರೆ ಅದು ನನ್ನನ್ನು ನಡುಗಿಸಿತು
ನನ್ನ ಉಗುರುಗಳನ್ನ ನೋಡಿದೆ
ಅವುಗಳನ್ನ ಕಚ್ಚಿದೆ
ಬೇರೆ ಏನನ್ನಾದರೂ ಆಲೋಚಿಸಲು
ಪ್ರಯತ್ನಿಸಿದೆ
ಸೋತೆ.
ಕಣ್ಣಿಗೆ ಕಾಣಿಸಿದ್ದು
ಮರುಭೂಮಿ ಮಾತ್ರ
ಕಣ್ಣು ಹಾದಷ್ಟು ದೂರ
ಮರುಭೂಮಿ ಮಾತ್ರ
ಮತ್ತು ಆ ಒಂದು ವಿಗ್ರಹ
ನನ್ನ ದೇವರು
ನಾ ಮಾಡುತ್ತಿದ್ದದ್ದನ್ನು ನೋಡುತ್ತಿದ್ದವನು
ಆಗ ಅದೆಲ್ಲಿಂದಲೋ ಒಂದಿಷ್ಟು
ಹಕ್ಕಿಗಳು
ಹಾರುತ್ತಾ ಬಂದವು
ಅದೇ ಹೊತ್ತಿಗೆ ಕತ್ತಲಾವರಿಸುತ್ತಿರುವಾಗಲೇ
ಒಂದಿಷ್ಟು ಕಲ್ಲು ಚಪ್ಪಡಿ
ಕಣ್ಣಿಗೆ ಬಿದ್ದವು
ಅವು ತಮ್ಮ ಪರಿಚಯ ಮಾಡಿಕೊಂಡಾಗ ತಿಳಿಯಿತು
ಅವು ಶಾಸನಗಳೆಂದು
“ನಿನ್ನಮ್ಮನನ್ನು ಯಾಕೆ ಹಿಂಸಿಸುತ್ತಿದ್ದೀ?
ಈ ಹಕ್ಕಿಗಳನ್ನು ನೋಡು
ಅವು ನಿನ್ನ ಅಪರಾಧದ ಲೆಕ್ಕ ಇಡಲು
ಬಂದವು.”
ನಾನು ಆಕಳಿಸಿದೆ.
ಈ ಬೆದರಿಕೆಗಳೆಲ್ಲಾ
ಎಂದೋ
ಬೇಜಾರು ಹಿಡಿಸಿದ್ದವು.
“ಓಡಿಸು ಈ ಹಕ್ಕಿಗಳನ್ನೆಲ್ಲ”
ಎಂದು ನಾನು ಆದೇಶಿಸಿದೆ.
ಒಂದು ಕಲ್ಲು ಚಪ್ಪಡಿ “ಇಲ್ಲ”
ಎಂದು ಗರ್ಜಿಸಿತು.
“ಒಂದೊಂದು ಹಕ್ಕಿಯೂ ನಿನ್ನ
ಒಂದೊಂದು ಅಪರಾಧದ ಪ್ರತೀಕ.
ಅವು ನಿನ ನಡೆಯ ಮೇಲೆ ಕಣ್ಣಿಡಲು
ಇಲ್ಲಿದ್ದಾವೆ.”
ನಾನು ಹೆಂಗಸಿನ ಕಡೆ ತಿರುಗಿದೆ
ಮತ್ತು ಹಿಂದಿಗಿಂತ ಹೆಚ್ಚು
ಹಿಂಸೆ ಆಕೆಗೆ ಕೊಟ್ಟೆ
ಹೇಗಾದರೂ ಎಚ್ಚರಿರಬೇಕಾದ
ಒತ್ತಡ ನನ್ನ ಮೇಲಿತ್ತು
ಬೇರೆ ಇನ್ನ್ಯಾವುದೇ ಉಪಾಯ ಇರಲಿಲ್ಲ
ಇಲ್ಲವಾದಲ್ಲಿ
ಆ ಕಲ್ಲುಗಳ ನಡುವೆ
ಹಕ್ಕಿಗಳ ಕೆಳಗೆ
ನಾ ನಿದ್ದೆ ಹೋಗುತ್ತಿದ್ದೆ
ಹಾಗಾಗಿ ಕಿಸೆಯಿಂದ
ಬೆಂಕಿಪಟ್ಟಣ ತೆಗೆದು
ಆ ದೇವರ ಪ್ರತಿಮೆಗೆ ಬೆಂಕಿ ಹಚ್ಚಲು
ನಿರ್ಧರಿಸಿದೆ
ಚಳಿಯಲ್ಲಿ ನಡುಗುತ್ತಿದ್ದ ನನಗೆ
ಮೈಕಾಸಬೇಕಿತ್ತು
ಆದರೆ ಬೆಂಕಿ
ಹೆಚ್ಚು ಹೊತ್ತು ಉರಿಯಲಿಲ್ಲ
ಆ ಕಲ್ಲು ಚಪ್ಪಡಿಗಳಿಗಾಗಿ
ಹುಡುಕಾಡಿದೆ
ಆದರೆ ಅವೆಲ್ಲೂ ಮಾಯವಾಗಿದ್ದವು
ನನ್ನಮ್ಮ ನನ್ನನ್ನು ಬಿಟ್ಟು ಹೋಗಿದ್ದಳು
ನಾನು ಹಿಂಸಕನಾದೆ
ಕ್ರೂರಿಯಾದೆ
ಅದಲ್ಲದೆ ಮತ್ತಿನ್ನೇನೂ
ಆಗದಾಗಿತ್ತು ನನ್ನಿಂದ

~  ನಿಕನೋರ್ ಪರ್ರ
ಕನ್ನಡಾನುವಾದ: ಸಂವರ್ತ ‘ಸಾಹಿಲ್’
One comment to “‘ಅಕಾವ್ಯ’ದ ಹರಿಕಾರ ನಿಕನೋರ್ ಪರ್ರನಿಗೊಂದು ನುಡಿ ನಮನ”

ಪ್ರತಿಕ್ರಿಯಿಸಿ