‘ನಕ್ಷತ್ರ ಕವಿತೆಗಳು” ಕವನ ಸಂಕಲನ ಅನಾವರಣ : ಕಾಲನೆಂಬ ಖಳನ ಎದುರು ಕಾವ್ಯ ಗುಬ್ಬಚ್ಚಿ

ಪ್ರಕೃತಿ ಪ್ರಕಾಶನದ ಎರಡನೆಯ ಕವನ ಸಂಕಲನ ‘ನಕ್ಷತ್ರ ಕವಿತೆಗಳು’ ಪ್ರಕಟಗೊಂಡಿದೆ. ಕೆಲವು ತೊಡಕುಗಳ ನಡುವೆ ಈ ಪುಸ್ತಕವನ್ನು ಸಾಧ್ಯವಾದಷ್ಟು ಬೇಗ ಬಿಡುಗಡೆ ಮಾಡಬೇಕಿತ್ತು. ಪುಸ್ತಕ ಬಿಡುಗಡೆ ಎಲ್ಲಿ ಹೇಗೆ; ಯಾರು ಈ ಕವಿತೆಗಳ ಕುರಿತು ಮಾತಾಡಬೇಕು ಎಂದೆಲ್ಲ ಯೋಚಿಸುತ್ತಿರುವಾಗ, ಈ ಕವಿತೆಗಳನ್ನು ವರುಷಗಳಿಂದ ಆಸ್ವಾದಿಸುತ್ತಿದ್ದ ಮತ್ತೊಂದು ಕವಿ ಮನಸ್ಸು ಬರೆದ ಮುನ್ನುಡಿಯೇ ಇದನ್ನು ಓದುಗರ ಮುಂದಿಡುವ ದಾರಿಯೆನ್ನಿಸಿತು. ಹಾಗಾಗಿ, ಅಬ್ದುಲ್ ರಶೀದ್ ಬರೆದಿರುವ ಮುನ್ನುಡಿಯನ್ನು ಋತುಮಾನದಲ್ಲಿ ಪ್ರಕಟಿಸುವ ಮೂಲಕ ಈ ಸಂಕಲವನ್ನು ವಿದ್ಯುಕ್ತವಾಗಿ ಬಿಡುಗಡೆಗೊಳಿಸುತ್ತಿದ್ದೇವೆ. ಈ ಚುಕ್ಕಿ ಸಂಭ್ರಮ – ಕವಿಯನ್ನೂ ಕಾವ್ಯಾಸಕ್ತರನ್ನೂ, ಈ ಪುಸ್ತಕ್ಕಾಗಿ ಸಹಕರಿಸಿದ ಎಲ್ಲರನ್ನೂ ಸದಾ ಪೊರೆಯುವುದೆನ್ನುವ ನಂಬಿಕೆಯಿಂದ ನಮ್ಮ ಪಯಣ ಮುಂದುವರಿಯಲಿದೆ. ನಾಳೆಯಿಂದ ‘ನಕ್ಷತ್ರ ಕವಿತೆಗಳು’ ಪ್ರಮುಖ ಮಳಿಗೆಗಳಲ್ಲಿ ಲಭ್ಯವಿರುತ್ತದೆ. ಋತುಮಾನ ಸ್ಟೋರ್ ನಲ್ಲಿ (store.ruthumana.com)  ಆನ್ಲೈನ್ ಆರ್ಡರ್ ಮಾಡಬಹುದು ಅಥವ ಕ್ಯಾಶ್ ಆನ್ ಡೆಲಿವೆರಿ ಮೂಲಕ ತರಿಸಿಕೊಳ್ಳುವವರು – 9480035877 / 9742053545 ನಂಬರಿಗೆ ತಮ್ಮ ವಿಳಾಸವನ್ನು ಮೆಸೇಜ್ ಮಾಡಬಹುದು.

ನಾಗಶ್ರೀ ಈ ಕವಿತೆಗಳನ್ನು ಬರೆಯಲು ತೊಡಗಿದಾಗ ಆಕೆಗೆ ಈ ಕವಿತೆಗಳನ್ನು ತನ್ನ ಹೆಸರಿನಲ್ಲಿ ಪ್ರಕಟಿಸುವ ಉಮೇದು ಕೂಡಾ ಇರಲಿಲ್ಲ. ಇದಕ್ಕಿದ್ದ ಒಂದು ಕಾರಣವೆಂದರೆ ಇವುಗಳು ಎಲ್ಲ ಕಾರ್ಯಕಾರಣಗಳಿಗೂ ಮೀರಿದ ಒಂದು ಮುಕ್ತವಾದ ಋತದಂತೆ ಆಕೆಗೂ ಅಚ್ಚರಿಯಾಗುವಂತೆ ಆಕೆಯ ಒಳಗಿಂದ ಬರುತ್ತಿದ್ದುದು. ದೇಹದ ಪುಳಕಗಳು, ಮಿದುಳಲ್ಲಿ ಅವು ಮೂಡಿಸುತ್ತಿದ್ದ ಮಿಂಚುಗಳು, ತಲೆಯ ಮೇಲೆ ಸಂಗೀತದಂತೆ ಸುಮ್ಮಗಿರುವ ನೀಲಾಕಾಶ ಮತ್ತು ಈ ಎಲ್ಲದರ ನಡುವೆಯೂ ಭಯಂಕರವಾಗಿ ಕಾಡುತ್ತಿದ್ದ ಒಂಟಿತನ ಈ ಕವಿತೆಗಳನ್ನು ಅವಳಿಂದ ಬರೆಸುತ್ತಿತ್ತು. ಇವುಗಳಿಗೆ ಹೆಸರಿಡುವುದು ಅಥವಾ ಇವುಗಳನ್ನು ತಾನು ಬರೆದದ್ದೆಂದು ಹೇಳಿಕೊಳ್ಳುವುದು ಕೂಡಾ ಅವುಗಳ ಮೇಲೆ ಆಕ್ರಮಣ ನಡೆಸಿದಂತೆ ಆಕೆಗೆ ಅನಿಸುತ್ತಿತ್ತು. ಜೊತೆಗೆ ತನ್ನದೇ ಕವಿತೆಗಳನ್ನು ತನ್ನದಲ್ಲದ ಹಾಗೆ ದೂರದಿಂದ ನೋಡುತ್ತಾ ಮಜಾ ತೆಗೆದುಕೊಳ್ಳುತ್ತಿದ್ದ ವಯೋ ಸಹಜವಾದ ಲವಲವಿಕೆಯೂ ಆಕೆಗಿತ್ತು. ಹಾಗಾಗಿ ಆಕೆಯ ಇಷ್ಟದಂತೆ ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ಇವುಗಳನ್ನು `ನಕ್ಷತ್ರ’ ಎನ್ನುವ ಹೆಸರಿನಲ್ಲಿ ಪ್ರಕಟಿಸಲು ಮುಂದಾದೆವು. ಈ ಕವಿತೆಗಳ ತಾಜಾತನ, ನಿರ್ಭಿಡತೆ ಹಾಗೂ ಪದಲಾಲಿತ್ಯಗಳನ್ನು ಆರಾಧಿಸುವ ಓದುಗರ ಸಂಖ್ಯೆಯೂ ಹೆಚ್ಚಾದಂತೆ ಇವುಗಳನ್ನು ಯಾರು ಬರೆದಿರಬಹುದೆನ್ನುವ ಕುತೂಹಲವೂ, ಇತರ ಆಸಕ್ತಿಗಳೂ ಕೆದರತೊಡಗಿದವು. ಬಹುತೇಕರು ಇವುಗಳನ್ನು ಕೆಂಡಸಂಪಿಗೆಯ ಸಂಪಾದಕನೇ ಬರೆಯುತ್ತಿರುವನು ಎಂದೂ ಓದಿಕೊಳ್ಳತೊಡಗಿದರು. ನಾವೂ ಈ ಊಹೆಗಳನ್ನು ಇಲ್ಲವೆನ್ನಲಿಲ್ಲ, ಇದೊಂದು ತರಹದ ಒಡಪಿನಂತೆ, ಜೂಟಾಟದಂತೆ, ಕಚಗುಳಿಯಂತೆ ಮುಂದುವರಿಯಿತು. ಬಹುಶ: ಕನ್ನಡದಲ್ಲಿ ತೇಜಸ್ವಿ-ನಳಿನಿ ದೇಶಪಾಂಡೆ, ಲಂಕೇಶ್- ನೀಲು ಇದ್ದಂತೆ ಇನ್ನೊಂದು ಜೋಡಿ ಅಂದುಕೊಂಡವರೂ ಇದ್ದರು. ಏನಾದರೂ ಅಂದುಕೊಳ್ಳಲಿ ಎಂದು ನಾಗಶ್ರೀ ಬರೆಯುತ್ತಲೇ ಹೋದಳು.

ಕೆಂಡಸಂಪಿಗೆ ಈ ನಡುವಲ್ಲಿ ನಿಂತುಹೋದಾಗಲೂ ನಾಗಶ್ರೀ ಬರೆಯುವುದನ್ನು ನಿಲ್ಲಿಸಲಿಲ್ಲ. ಎಷ್ಟು ತೀವ್ರವಾಗಿ ಬರೆಯುತ್ತಾ ಹೋದಳೆಂದರೆ ತಾನು ಬರೆದ ಸಾಲುಗಳ ಸುಖದ ಮುಳ್ಳುಗಳನ್ನು ತನ್ನ ಮೈಗೇ ಗೀರಿಕೊಂಡು ನೋವನ್ನು ಅನುಭವಿಸುವ ವಿರಾಗಿಣಿಯ ಹಾಗೆ, ತಾನು ಉಂಡ ಸುಖದ ಪರಿಮಳಗಳನ್ನು ತನ್ನ ಮೈಗೆ ಹತ್ತಿಕೊಂಡಿದ್ದ ಹುತ್ತದ ಮೃತ್ತಿಕೆಯೆಂದು ಬಗೆವ ಶ್ರಾವಕಿಯ ಹಾಗೆ ಒಂಟಿಯಾಗುತ್ತಲೇ ಬರೆದಳು. ಅವಳು ಬರೆದ ಸುಖದ ಪಲುಕುಗಳಿಗಾಗಿ ಇನ್ನೂ ಕಾಯುತ್ತಿದ್ದ ಓದುಗ ಸುಖಿಗಳ ಪಾಲಿಗೆ ಅವಳು ಬಹಳ ದೂರದ, ಬಹಳ ಎತ್ತರದ ಒಂಟಿಕೊಂಬೆಯ ಮೇಲೆ ಕೂತ ಇನ್ನೊಂದು ಲೋಕದ ಹಕ್ಕಿಯ ಹಾಗೆ ಮೌನವಾಗುತ್ತಾ ಹೋದಳು. ಬಹುಶಃ ಇದು ಒಂದು ರೀತಿಯಲ್ಲಿ ಈ ಕಾಲದ, ಅಷ್ಟೇ ಯಾಕೆ ಎಲ್ಲ ಕಾಲಗಳ ಸಂಕಟವೆಂದು ತಿಳಿದವರು ಹೇಳುತ್ತಾರೆ. ಬೋದಿಲೇರ್ ಹೇಳಿದ ಹಾಗೆ ಕಲೆ ಮತ್ತು ಸೌಂದರ್ಯವನ್ನು ಕೊಲ್ಲುವ ಕಡು ಕೊಲೆಗಾರ ಕಾಲ. ಸುಖದ ತುತ್ತ ತುದಿಯಲ್ಲೇ ಒಂಟಿತನವನ್ನೂ, ಉತ್ಕಟ ಔನ್ನತ್ಯದ ಮತ್ತಿನಲ್ಲೇ ಸೋಲನ್ನೂ ಕರುಣಿಸುವ ಬಲು ದೊಡ್ಡ ಸಂಚುಗಾರ ಈ ದೇವರು. ಬಹುಶ: ಪ್ರಕೃತಿಯ ಈ ಹೊಂಚು ಇಲ್ಲದಿದ್ದರೆ, ಮನುಷ್ಯ ಅದಕ್ಕೆ ಈಡಾಗಿ ಜರ್ಝರಿತನಾಗಿರದಿದ್ದರೆ, ಕಾವ್ಯವೂ, ಸಂಗೀತವೂ ಈ ಲೋಕದಲ್ಲಿ ಹುಟ್ಟುತ್ತಲೇ ಇರಲಿಲ್ಲವೇನೋ.

ನಾಗಶ್ರೀಯ ವಿಷಯದಲ್ಲೂ ಹೀಗೇ ಸಂಭವಿಸಿತು. ಈಕೆ ತನ್ನ ಕವನಗಳಿಗೆ ಬರೆದಿರುವ ಉದ್ದನೆಯ ಪ್ರಸ್ತಾಪವನ್ನು ಓದಿದರೆ ನಿಮಗೆ ತಣ್ಣಗಿನ ಹಿಮದ ಅಲುಗೊಂದು ನಿಮ್ಮ ಪುಪ್ಪಸದೊಳಕ್ಕೆ ಸುಮ್ಮನೇ ಹಾದು ಹೋದಂತೆ ಅನಿಸಬಹುದು. ಲೋಕದ ಚಲನೆಗಳಿಗೆ ಈಕೆ ಕಣ್ಣು ತೆರೆದುಕೊಂಡ ಕಾಲದಿಂದಲೇ ಈಕೆಯ ಒಳ ಹೊಕ್ಕಿದ್ದ ವಿಷಾದ ಮತ್ತು ಅಸಹಾಯಕತೆ, ಸಂಜೆಯ ಆಕಾಶದ ವರ್ಣಗಳು ಈಕೆಯಲ್ಲಿ ಹುಟ್ಟಿಸುತ್ತಿದ್ದ ಭಯ ಮತ್ತು ಏಕಾಂಗಿತನ, ಒಂದು ಶ್ರಾವದಂತೆ ಈಕೆಯನ್ನು ಹಿಂಬಾಲಿಸಿಕೊಂಡು ಬಂದ ಕವಿತೆ ಬರೆಯುವ ಹುಚ್ಚು ಮತ್ತು ದೇಹ ಕಾವ್ಯ ಆಕಾಶಗಳ ವರ್ಣಸಂಯೋಜನೆಯಲ್ಲಿ ಉನ್ಮತ್ತಳಾಗಿ ಮುಳುಗಿರುವಾಗಲೇ ಈಕೆಯನ್ನು ಅನಾಮತ್ತಾಗಿ ತನ್ನ ತೆಕ್ಕೆಗೆ ಪಡೆದುಕೊಳ್ಳಲು ಹೊರಟ ಕಾಲನ ಹುನ್ನಾರಗಳು.

ನನಗಂತೂ ಇಲ್ಲಿರುವ ಕವಿತೆಗಳನ್ನು ಓದುತ್ತಾ, ಜೊತೆಗೆ ಕಾಲನ ಎದುರು ಒಂಟಿ ಗುಬ್ಬಚ್ಚಿಯಂತೆ ಹೋರಾಡುತ್ತಿರುವ ನಾಗಶ್ರೀಯ ಬದುಕನ್ನು ಬಲು ಹತ್ತಿರದಿಂದ ನೋಡುತ್ತಾ ಈ ಮುನ್ನುಡಿಯನ್ನು ಬರೆಯಲೂ ಆಗದೆ ಒಂದು ತರಹದ ಕ್ರೋಧ ಮೈತುಂಬ ಹರಿದಾಡುತ್ತಿದೆ. ಆದರೆ ಆಕೆಯಾದರೋ ಏನೂ ಸಿಟ್ಟಿಲ್ಲದೆ, ಅಳುವಿಲ್ಲದೆ ಸುಖದಲ್ಲಿ ಮಲಗಿರುವ ಲೋಕವೆಂಬ ತಂಟೆಕೋರ ಕಂದನನ್ನು ದೂರದಿಂದ ಮಮತೆಯಿಂದ ನೋಡುವ ತಾಯಿಯ ಹಾಗೆ ಬರೆಯುತ್ತಾಳೆ.

‘ಮನುಷ್ಯರ ಪ್ರಲಾಪಗಳೆಲ್ಲಾ ಮುಗಿದು
ಆಕಾಶ ನಿರಾಳವಾಗುತಿದೆ,
ಮನ್ನಿಸುತಿದೆ ಎಲ್ಲವನ್ನು, ಮಲಗಿರುವವರನ್ನು,
ಬೆಳಗಿಗೆ ಪುಟ್ಟ ಮಗುವಂತೆ ಏಳುವವರನ್ನು….’

ಯಾವ ಕಾಲ, ಯಾವ ದೇಶ, ಯಾವ ಭಾವ ಪ್ರದೇಶಕ್ಕೂ ಸೇರದ ಆದರೆ ಎಲ್ಲ ಮನುಷ್ಯ ವಾಸನೆಗಳನ್ನೂ ಹಿಡಿದಿಡುವ ತರುಣಿಯೊಬ್ಬಳು ಬರೆದ ಹಸಿದ ಕರುವಿನಂತಹ ಒಂದು ಉತ್ಕಟ ಕೂಗು ಈ ಕವಿತೆಗಳಲ್ಲಿವೆ. ಮರು ಕ್ಷಣದಲ್ಲೇ ಯಾರೋ ಹಗ್ಗ ಹಿಡಿದು ಆ ಸುಖವನ್ನು ಹಿಂದಕ್ಕೆ ಎಳೆದಂತೆ ಅನಿಸುವ ಒಂದು ಅವ್ಯಕ್ತ ಕ್ರೌರ್ಯ ಕೂಡಾ. ಅಪರಿಮಿತವಾದ ಜೀವ ಸೌಂದರ್ಯ ಮತ್ತು ಅದಕ್ಕಿಂತಲೂ ನಿಗೂಢವಾದ ಮರಣದಂತಹ ಒಂಟಿತನಗಳ ಮುಖಾಮುಖಿ ಇಲ್ಲಿರುವ ಕವಿತೆಗಳು. ಕತ್ತಿಯ ಅಲುಗಿನ ಮೇಲೆ ನಡೆಯುತ್ತಿರುವಂತೆ ಅನಿಸುವ ಈ ಎರಡು ಜೀವವ್ಯಾಪಾರಗಳ ನಡುವೆ ಗಾಳಿಯಲ್ಲಿ ಬಳುಕಿಕೊಂಡು, ಏನೋ ಬೇಕೆಂಬಂತೆ ನಾಚಿಕೊಂಡು ಒಂದು ಲಾಸ್ಯದಂತೆ ಬಳುಕುತ್ತ ಇಲ್ಲಿನ ಕವಿತೆಗಳ ಸಾಲುಗಳು ಹರಿಯುತ್ತವೆ. `ಇನ್ನೂ ಬೇಕಾದಷ್ಟು ಇದೆ ಹೇಳಲು ಅದು ಯಾಕೋ ಬರುತ್ತಿಲ್ಲ ನನಗೆ’ ಎಂಬ ಕಾವ್ಯದ ಅಸಹಾಯಕತೆ ಇಲ್ಲಿನ ಬಹುತೇಕ ಕವಿತೆಗಳಲ್ಲಿ ನಮ್ಮನ್ನು ಜಗ್ಗಿ ಹತ್ತಿರಕ್ಕೆ ಎಳೆಯುತ್ತದೆ. ಅಬ್ಬರದ, ಅಟ್ಟಹಾಸದ, ಬೀಸು ಹೇಳಿಕೆಗಳ ಕನ್ನಡ ಕಾವ್ಯ ಮೆರವಣಿಗೆ ಸಾಗುತ್ತಿರುವ ಈ ಹೊತ್ತಲ್ಲಿ ಎದೆಯ ಸಂಕಟವೊಂದು ಕೋಲ್ಮಿಂಚಂತೆ ಆಕಾಶದಲ್ಲಿ ಜಗ್ಗನೆ ಮಿಂಚುವಂತೆ ಕಾಣಿಸುವ ಈ ಕವಿತೆಗಳಿಗೆ ಏನಂತ ಹೆಸರಿಡುವುದು?

ಅದಕ್ಕೆ ನನಗೆ ಈ ಕವಿತೆಗಳು ಈ ಲೋಕಕ್ಕೆ ಸೇರಿಯೇ ಇರಲಿಲ್ಲ ಅನ್ನಿಸುವುದು. ಬಹುಶಃ ಅಕ್ಷರಗಳೂ, ಪುಸ್ತಕಗಳೂ ಮತ್ತು ಲಾಗಾಯ್ತಿನ ಓದುಗ ವಲಯವೂ ಕೂಡಾ ಇಲ್ಲಿರುವ ಕವಿತೆಗಳಿಗೆ ಪರಕೀಯ ಅನ್ನಿಸಲೂಬಹುದು.

‘ಇಲ್ಲಿ ಎಲ್ಲವೂ ಹೀಗೇಕೆಂದು ಕೇಳುವ
ಪುಟ್ಟ ಮಗುವೊಂದು ಉತ್ಸಾಹದಲ್ಲಿದೆ
ಆದರೆ ಅದು ತಂತಾನೇ ಎಲ್ಲಾ ತಿಳಿದುಕೊಳ್ಳಬೇಕಿದೆ’

ಎಂಬ ಸಾಲುಗಳು ಈ ಸಂಕಲನದಲ್ಲಿದೆ. ಮಗುವೊಂದರಿಂದ ದೂರ ಹೋಗಬೇಕಾಗಿ ಬರುವ ತಾಯೊಬ್ಬಳು ಬರೆದ ಸಾಲುಗಳು ಇವು ಎಂಬುದಾಗಿ ನೀವು ಇವನ್ನು ಓದಿಕೊಳ್ಳಿ. ಎಂಥ ಸಂಯಮ ಮತ್ತು ಅಷ್ಟೇ ವಿಷಣ್ಣವಾದ ಕ್ರೌರ್ಯವೊಂದರ ತಣ್ಣಗಿನ ಅನಾವರಣ ಇದು.

‘ಎಳಸು ಹುಡುಗಿ
ಏನೂ ಅರಿಯದವಳು
ಇಲ್ಲಿ ಹರಡಿ ಚೆಲ್ಲಾಪಿಲ್ಲಿಗೊಂಡಿರುವವಳು’

ಎಂದು ಬರೆಯುತ್ತಿರುವವಳು ಇಲ್ಲಿ ತನ್ನನ್ನು ತಾನೇ ವರ್ಣಿಸುತ್ತಿಲ್ಲ. ಬದಲಾಗಿ ಕಾಲನ ಜೊತೆಗಿನ ಕಾದಾಟದಲ್ಲಿ ಅಸ್ತವ್ಯಸ್ತಗೊಂಡಿರುವ ತನ್ನ ಬಾಳಬಟ್ಟೆಯ ನೆರಿಗೆಗಳನ್ನು ಸುಮ್ಮನೆ ಸರಿಪಡಿಸಿಕೊಳ್ಳುತ್ತಿದ್ದಾಳೆ. ಮತ್ತು ಅದನ್ನು ತಣ್ಣಗೆ ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಿದ್ದಾಳೆ. ಇದು ಬೇಕೆಂದೇ ಬರಿಸಿಕೊಂಡಿರುವ ಸಂಯಮವೂ ಅಲ್ಲ. ಒಬ್ಬ ನುರಿತ ಸಂಗೀತಗಾರನಿಗೆ ಸ್ವರದ ಮೇಲೆ ಅರಿವಿಲ್ಲದೇ ಸಿಕ್ಕಿರುವ ನಿಯಂತ್ರಣದ ಹಾಗೆ ಇದು. ಕಾವ್ಯ ಹೊರಡಿಸುವ ಸದ್ದುಗಳು ಕರಾರುವಾಕ್ಕಾಗಿ ಹೀಗೇ ಕೇಳಿಸಬೇಕು ಎನ್ನುವ ಕವಿಯೊಬ್ಬಳ ಭಾಷೆಯ ಮೇಲಿನ ಹಿಡಿತವಿದು.

‘ಅಲ್ಲಿ ಯಾರೋ ಕಟುಕನೊಬ್ಬ
ಕೈ ಎತ್ತಿ ಆರ್ತನಾಗುತ್ತಿದ್ದಾನೆ
ಇಲ್ಲಿ ಆಕಾಶವು ಜಗ್ಗನೆ ಮಿನುಗುತ್ತಿದೆ’

ಎನ್ನುವಾಗಿನ ಚಿತ್ರಕ ಶಕ್ತಿಯನ್ನು ಗಮನಿಸಿ. ಅದೂ ಕವಿಯೊಬ್ಬಳು ಎಂತಹ ಹೊತ್ತಿನಲ್ಲಿ ಕಟ್ಟಿಕೊಡುತ್ತಿರುವ ಚಿತ್ರ. ಕೊಲೆಗಾರ ಕಾಲ ತನ್ನ ಮೇಲೆಯೇ ಕತ್ತಿ ಎತ್ತುತ್ತಿರುವ ಹೊತ್ತಿನಲ್ಲೂ ಆಕೆಗೆ ಆತನ ಆರ್ತತೆ ಕೇಳಿಸುತ್ತದೆ. ಜೊತೆಜೊತೆಯಲ್ಲೇ ಜಗ್ಗನೆ ಮಿನುಗುತ್ತಿರುವ ಆಕಾಶವೂ ಕಾಣಿಸುತ್ತದೆ. ತನ್ನ ಬಾಲ್ಯಕಾಲದ ಉಡುಪಿಯ ಸಂಜೆಯ ಆಕಾಶದ ಚದುರಿ ಚೆಲ್ಲಾಪಿಲ್ಲಿಯಾದ ಬಣ್ಣಗಳನ್ನು ಕಂಡು ಹೆದರಿ ಮನೆಯ ಕತ್ತಲಿನೊಳಕ್ಕೆ ಬಚ್ಚಿಟ್ಟುಕೊಳ್ಳುತ್ತಿದ್ದ ಬಾಲಕಿ ಈಗ ಬೆಳೆದು ಕನ್ನಡದ ಕವಯಿತ್ರಿಯಾಗಿ ಇದೀಗ ಬದುಕಿನ ಶಿಖರದ ತುತ್ತ ತುದಿಯನ್ನೂ ಹತ್ತಿ ಇಳಿದು ಆ ರಣ ಏಕಾಂತದ ಹೊತ್ತಲ್ಲೂ ಜಗ್ಗನೆ ಮಿಂಚುವ ಆಕಾಶವನ್ನು ಸೌಂದರ್ಯವೆಂಬಂತೆ ಅನುಭವಿಸುತ್ತಿದ್ದಾಳೆ. ಅಲ್ಲಿ ತಾನು ಕಂಡಂತಹ ಆಕಾಶವನ್ನು ಕನ್ನಡದ ಲಯದ ಮುಖೇನ ನಮಗೂ ಕಾಣಿಸುತ್ತಿದ್ದಾಳೆ. ಕವಿತೆಯನ್ನು ಇದಕ್ಕಿಂತ ಚಂದ ಹಡೆಯುವುದು ಹೇಗೆ?

*****

ಈ ಸಂಕಲನದ ಮೊದಲ ಭಾಗದ ಕವಿತೆಗಳು ಒಂದು ರೀತಿಯಲ್ಲಿ ಸುಖದ ಸುರೆಯಲ್ಲಿ ಮುಳುಗಿ ಎದ್ದಂತಹ ಕವಿತೆಗಳು. ಕಾವ್ಯ ನಮ್ಮನ್ನು ಕುಡಿವುದೋ ಅಥವಾ ನಾವು ಕಾವ್ಯವನ್ನು ಕುಡಿವೆವೋ ಎಂದು ಅರಿವಾಗದಂತಹ ಉನ್ಮತ್ತ ಕಾಲದ ಸುಖದ ಸಾಲುಗಳು. ಹೇಳಲಾರದೆ ಬರೆಯಲಾರದೆ ಕೊನೆಗೆ ಮೈಯನ್ನೂ ಹೊರಳಿಸಲಾರದ ಹೊತ್ತಲ್ಲಿ ಋತದಂತೆ ಹೊರ ಚೆಲ್ಲಿದ ಸಾಲುಗಳು ಇವು. ಆದರೆ ಎಲ್ಲ ಸುಖಗಳ ನಂತರ ಕೊನೆಗೂ ಇರುವುದು ನನ್ನೊದೊಂದು ಪುರಾತನ ದುಃಖ ಮತ್ತು ನನ್ನ ಬೆತ್ತಲಿನಷ್ಟೇ ಬೆಳ್ಳಗಿನ ನನ್ನ ಒಂಟಿತನ ಎಂಬ ಕಾವ್ಯ ಸತ್ಯವನ್ನು ಯಾವುದೋ ಸಾಕ್ಷಾತ್ಕಾರ ಎಂಬ ಭ್ರಮೆಯಿಲ್ಲದೇ ತಣ್ಣಗೆ ಹೇಳಿರುವ ಭಾಗ ಇದು. ಎರಡನೆಯ ಭಾಗದ ಕವಿತೆಗಳು ಭ್ರಮೆಯೆಂದು ಸುಮ್ಮನೆ ಅನಿಸಿದ್ದು ನಿಜಕ್ಕೂ ಭ್ರಮೆಯೆಂದು ಅರಿವಾಗತೊಡಗಿದ ಕಾಲಘಟ್ಟದ್ದು. ಇವರೆಲ್ಲಾ ಯಾರೋ ನನ್ನ ಪದ್ಮಾಸನದಲ್ಲಿ ನೆನಪಾಗುವವರು ಎಂದು ಅನಿಸುತ್ತಿದ್ದಾಗಿನ ಕವಿತೆಗಳು ಇವು. ರಾಗವೊಂದರ ಆರೋಹದ ನಂತರ ಗೊತ್ತಿಲ್ಲದೆ ಅರಿವಾಗುವ ಮೌನದ ಇರವು ಮತ್ತು ಆ ನಂತರದ ಅವರೋಹಣವನ್ನು ನಾವು ಇಲ್ಲಿ ಗಮನಿಸಬಹುದು. ಕವಿಯೊಬ್ಬಳ ಕಾವ್ಯ ಜೀವಿತಾವಧಿಯ ಒಂದು ನೀಳ ಕಾಲಘಟ್ಟದಲ್ಲಿ ನಿಧಾನಕ್ಕೆ ನಡೆಯಬೇಕಿದ್ದ ಈ ಪ್ರಕ್ರಿಯೆ ನಾಗಶ್ರೀಯ ಮೊದಲ ಸಂಕಲನದ ಮೂರು ಭಾಗಗಳಲ್ಲಿಯೇ ಘಟಿಸಿಹೋಗಿದೆ. ಇದು ಒಂದು ರೀತಿಯಲ್ಲಿ ಕವಿತೆ, ಯೌವನ, ಸೃಜನಶೀಲತೆ ಮತ್ತು ಸೌಂದರ್ಯವನ್ನು ತನ್ನ ಬಾಣಲೆಯಲ್ಲಿ ಪುಟಕ್ಕಿಡುವ ಕಾಲನೆಂಬ ಲೋಹಗಾರನ ಕರುಳರಿಯದ ಆಟಕ್ಕೆ ಸಿಲುಕಿಕೊಂಡ ತರುಣಿ ಕವಿಯೊಬ್ಬಳ ಜೀವನದ ನರಕ ಮತ್ತು ಪುಳಕ ಎರಡೂ ಹೌದು. ಈ ಕುರಿತು ನಾನು ಗದ್ಗದಿತನಾಗದೆ ಇನ್ನೇನೂ ಹೆಚ್ಚಿಗೆ ಹೇಳಲಾರೆ.

‘ಬೆನ್ನಲ್ಲಿ ಈಗಲೂ ಮೆಲ್ಲಗೆ ಇಣುಕುವ ಹುಚ್ಚುಗಳು ನನ್ನ ಕೊಂಕು ನಗೆಯ ತುಟಿಗಳಲ್ಲಿ ಮೇಲೇಳುವವು’ ಎಂದು ಕಠೋರವಾದ ನೋವಿನ ಮರು ಹೊತ್ತಲ್ಲೇ ಒಂದು ಪುಟ್ಟ ಮಂದಹಾಸದಂತೆ ಈಕೆ ಬರೆಯಬಲ್ಲಳು. ಪುಪ್ಪುಸದೊಳಕ್ಕೆ ಒಂದಿಷ್ಟು ಹೊಸಗಾಳಿ ಪಡಕೊಳ್ಳಲು ಋಗ್ಣಾಲಯದ ಕಿಟಕಿಯ ಕಂಬಿಗೆ ಆತುಕೊಂಡವಳು. ‘ನನ್ನ ಕರೆಯುತ್ತಿದ್ದ ಗಾಳಿಗೆ ಒಳ ಬರುವಂತೆ ಹೇಳಿರುವೆ’ ಎಂದೂ ಕರೆಯಬಲ್ಲಳು. ಅಂತ್ಯವೊಂದರ ಬಿಳಿ ಮೊನಚಿನಂತಿರಬಹುದು ಎಂದು ಕತ್ತಲನ್ನು ಕಾಯುತ್ತಿರುವ ಹೊತ್ತಲ್ಲೇ `ಪ್ರತಿ ಘಳಿಗೆ ಗುಂಯ್ ಗುಡುವ ಅಚ್ಚರಿಯೊಂದು ಕೆರಳಬೇಕು ಕಿವಿಯೊಳಗೆ ಎಲೆಯ ಪರಿಮಳದಲ್ಲಿ ನಗುವ ನೆಲದ ಬೇರಂತೆ’ ಎಂದು ಆಶೆಪಟ್ಟುಕೊಳ್ಳಬಲ್ಲಳು. ಇನ್ನೇನು ಆಯಿತು ಎನ್ನುವ ಹೊತ್ತಲ್ಲೂ, `ಅವನು, ಬರಿಯ ಬೆಳಕಲ್ಲದ ಕೊರೆವ ಬೆಳಕು, ಏಕಾಂತದ ಕಡೆಯ ಸುಖದಂತವನು’ ಎಂದು ಸುಖಿಸಬಲ್ಲಳು. `ನಾನೀಗ ಇಲ್ಲೇ ಒಂದು ಕ್ಷುದ್ರ ಕಲ್ಲ ಕಣದೊಳಗಿರುವೆ’ ಎಂದು `ಸೆಟೆದ ಬೆನ್ನಲ್ಲಿ ಹುತ್ತಗಟ್ಟಿಸಿಕೊಂಡ ಶ್ರಾವಕಿ’ ಯಂತೆ ಕಾವ್ಯದ ಏಕಾಂತದಲ್ಲಿ ಒಬ್ಬಳೇ ಸುಮ್ಮನಿರಬಲ್ಲಳು.

ಈ ಸಂಕಲನಕ್ಕೆ ನಾಗಶ್ರೀ ಒಂದು ಉದ್ದನೆಯ ಪ್ರಸ್ತಾವನೆಯನ್ನು ಬರೆದಿದ್ದಾಳೆ. ಬಹುಶಃ ನಾವಾಗಿದ್ದಿದ್ದರೆ ನೋವಿನಿಂದ, ಭಯದಿಂದ, ಹತಾಶೆಯಿಂದ ಮುದುರಿ ಹೋಗುತ್ತಿದ್ದ ಹೊತ್ತಿನಲ್ಲಿ, ಈಕೆ ತನ್ನ ಬಾಲ್ಯವನ್ನೂ, ಊರನ್ನೂ, ಮನೆಯನ್ನೂ, ತಂದೆಯನ್ನೂ, ಬಾಲ್ಯದ ಆಕಾಶವನ್ನೂ, ಮತ್ತು ಯಕ್ಷಗಾನದ ದೇವೀ ಮಹಾತ್ಮೆಯನ್ನೂ ನೆನೆದುಕೊಂಡು ತನ್ನನ್ನು ತಾನೇ ಸಂತೈಸಿಕೊಳ್ಳುವ ಯತ್ನ ನಡೆಸಿದ್ದಾಳೆ. ಇದೊಂದು ರೀತಿ ಕಾಲನ ಜೊತೆಗೆ ಪೋರಿಯೊಬ್ಬಳು ಸೇರಿಗೆ ಸವ್ವಾಸೇರು ಸವಾಲು ಎಸೆದು ಆತನನ್ನು ಆಟಕ್ಕೆ ಸಜ್ಜುಗೊಳಿಸುವ ಪರಿಯಂತೆ ನಮ್ಮನ್ನು ಓದಿಸಿಕೊಳ್ಳುತ್ತದೆ. ಇದೊಂದು ತೆರನಾದ ಕ್ರೂರ ಆಟದಂತೆಯೂ ಅನಿಸುತ್ತದೆ. ಮಾಗಿದ ಇಳಿ ಜೀವವೊಂದಕ್ಕೆ ಬಾಲ್ಯದ ನೆನಪುಗಳು ತನ್ನ ಜನ್ಮ ಸಾರ್ಥಕವಾಗಿತ್ತು ಎಂಬ ಧನ್ಯತೆಯನ್ನು ತಂದುಕೊಡುತ್ತದೆ. ಆದರೆ ಇದೀಗ ತನ್ನ ಯೌವನದ ಏರು ತುದಿಯಲ್ಲಿರುವ ತರುಣಿಯೊಬ್ಬಳಿಗೆ ಅವೇ ನೆನಪುಗಳು ಬದುಕಿನ ಸೌಂದರ್ಯಗಳನ್ನು ತನ್ನಿಂದ ಕಿತ್ತುಕೊಳ್ಳುತ್ತಿರುವ ಕಾಲನ ಆಟಗಳಿಗೆ ಕಾವ್ಯದ ಮುಖೇನ ಕಡಿವಾಣ ಹಾಕಲು ಬೇಕಾದ ಹತಾರುಗಳಂತೆ ಒದಗುತ್ತದೆ. ಸಾವಿರದೊಂದು ರಾತ್ರಿಯ ಶಹಜಾದೆ ಕಥೆ ಹೇಳುತ್ತಾ ಕೊನೆಯನ್ನು ನೀಗಿಕೊಂಡಂತೆ. ನೆನಪುಗಳನ್ನು ಬೊಗಸೆಯೊಳಕ್ಕೆ ಹಿಡಿದಿಟ್ಟುಕೊಳ್ಳಲು ನೋಡುತ್ತಾ ಕಾವ್ಯವೆಂಬ ಮಾಯಕಾತಿ ಕಾಲನೆಂಬ ಮಾಟಗಾರನನ್ನು ಮಣಿಸುವ ಪರಿ ಇದು. ಕಾವ್ಯ ಎಲ್ಲಿ ಕೊನೆಯಾಗುವುದೋ ಅಲ್ಲಿಂದಲೇ ನಿಜದ ಕಥೆಗಳು ಶುರುವಾಗುವುದು ಮತ್ತು ನಾವೆಲ್ಲರೂ ವಿರಮಿಸಿದ ನಂತರವೇ ಕವಯಿತ್ರಿಯ ನೋವುಗಳ ಲೋಕ ತೆರೆದುಕೊಳ್ಳುವುದು ಮತ್ತು ಈ ಲೋಕಕ್ಕೆ ಅವಳೊಬ್ಬಳೇ ಸಾಕ್ಷಿಯಾಗಿ ಎಚ್ಚರವಾಗಿರುವಳು ಎಂದು ಈ ಪುಸ್ತಕದ ಕೊನೆಯ ಭಾಗದ ಕವಿತೆಗಳು ನಮಗೆ ಹೇಳುತ್ತವೆ.

ಈ ಪುಸ್ತಕದ ಮುನ್ನುಡಿಯಿಂದ ವಿರಮಿಸುವ ಮುನ್ನ ಒಂದು ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ಇದು ‘ದೇವಿ ಮಹಾತ್ಮೆ’ ಎಂಬ ಯಕ್ಷಗಾನ ಬಯಲಾಟದ ಕುರಿತದ್ದು. ಈ ಆಟ ನಡೆಯುವಾಗ ಭ್ರಾಮರಿ ದೇವಿಯು ಬಯಲು ರಂಗಸ್ಥಳದಿಂದ ಒಂದಿಷ್ಟು ದೂರದಲ್ಲಿ ಕಲ್ಲಪಾರೆಯೊಂದರ ಮೇಲೆ ಅದೃಶ್ಯಳಾಗಿ ಕುಳಿತುಕೊಂಡು ವಾತ್ಸಲ್ಯದಿಂದಲೂ, ಮಮತೆಯಿಂದಲೂ, ಲಾಸ್ಯದಿಂದಲೂ ಆಟ ಆಡುವವರನ್ನೂ, ಆಡಿಸುವವರನ್ನೂ, ನೋಡುವವರನ್ನೂ ಏನೂ ಕೇಡಾಗದ ಹಾಗೆ ಪೊರೆಯುವಳು ಎನ್ನುತ್ತಾರೆ. ತನ್ನದೇ ಅತಿರೌದ್ರ ವಿಲಾಸದ ಕುರಿತು ಹುಲು ಮಾನವರು ಆಡುತ್ತಿರುವ ಆಟವನ್ನು ಪ್ರೀತಿಯಿಂದ ಕುತೂಹಲದಿಂದ ನೋಡುತ್ತಿರುವ ಮಮತಾಮಯಿ ಭ್ರಾಮರಿಯ ಕುರಿತು ನಾಗಶ್ರೀ ಬೇರೊಂದು ಕಡೆ ಬರೆದಿದ್ದಾಳೆ. ಸಾಧಾರಣವಾಗಿ ಯಕ್ಷಗಾನದಲ್ಲಿ ದೇವಿಯ ಪಾತ್ರವನ್ನು ಗಂಡಸರೇ ನಿರ್ವಹಿಸುತ್ತಾರೆ. ನಾಗಶ್ರೀಯ ತಂದೆ ಕೂಡಾ ದೇವಿಯ ಪಾತ್ರವನ್ನು ಮಾಡುವವರು. (ಈ ಕುರಿತು ಆಕೆ ತನ್ನ ಪ್ರಸ್ತಾವನೆಯಲ್ಲಿ ವಿವರವಾಗಿ ಬರೆದಿದ್ದಾಳೆ) ಅಲ್ಲಿ ನಾಗಶ್ರೀ ಹೇಳಿರುವುದೇನೆಂದರೆ ಆಕೆಗೆ ದೇವಿಯನ್ನು ನೋಡಿದಾಗಲೆಲ್ಲ ತಂದೆಯ ಮುಖ ಕಣ್ಣೆದುರು ಬಂದು ಪ್ರೀತಿ ಉಕ್ಕುತ್ತಿತ್ತಂತೆ. ತಂದೆಯನ್ನು ನೋಡಿದಾಗಲೆಲ್ಲ ದೇವಿಯ ನೆನಪಾಗಿ ಭಯವಾಗುತ್ತಿತ್ತಂತೆ. ಆದರೆ ಇದೀಗ ಆಕೆ ಕಾಲನ ಜೊತೆಗೆ ಒಂದು ದೊಡ್ಡ ಹೋರಾಟವನ್ನು ನಡೆಸಿ ಇನ್ನೊಂದು ದೊಡ್ಡ ಹೋರಾಟಕ್ಕೆ ಅಣಿಯಾಗುತ್ತಿರುವ ಈ ಹೊತ್ತಲ್ಲಿ ದೇವಿಯ ಮತ್ತು ತಂದೆಯ ಮುಖಗಳು ಕಲಸು ಮೇಲೋಗರವಾಗಿ ಕಲ್ಲಪಾರೆಯ ಮೇಲೆ ಲಾಸ್ಯ ಮತ್ತು ಮಮತೆಯಲ್ಲಿ ಕುಳಿತು ಆಟವನ್ನು ನೋಡುತ್ತಿರುವ ದುರ್ಗೆಯ ಹಸನ್ಮುಖ ಕಣ್ಣೆದುರು ಬರುತ್ತಿದೆಯಂತೆ. ಇದು ಒಂದು ರೀತಿಯಲ್ಲಿ ರಕ್ತಬೀಜಾಸುರ ಮತ್ತು ನವದುರ್ಗೆ ಇಬ್ಬರನ್ನೂ ಒಲಿಸಿಕೊಳ್ಳಬಲ್ಲ ಕಾವ್ಯದ ಶಕ್ತಿಯ ಕುರಿತ ಒಂದು ಉಪಮೆಯಂತೆ ನನಗೆ ತೋರುತ್ತಿದೆ. ಜೊತೆಗೆ ದೇವಿಯ ವೇಷ ಹಾಕುತ್ತಿದ್ದ ಪುರುಷ ಪಾತ್ರಧಾರಿಯು ಮಗಳ ನೋವನ್ನು ನೆನೆದು ತಾನು ದೇವಿಯೋ ಅಥವಾ ಬರಿಯ ಪಾತ್ರಧಾರಿಯೋ ಎಂದು ನೆಲಕ್ಕೆ ಕುಸಿದು ಹೋಗುತ್ತಿರುವಂತಹ ಕಾವ್ಯದ ಅಸಹಾಯಕತೆಯನ್ನೂ ಕೂಡಾ. ನಾಗಶ್ರೀ ಬರೆದ ಈ ನಕ್ಷತ್ರ ಕವಿತೆಗಳನ್ನು ಓದುತ್ತಾ ನನಗೂ ಯಾವುದೋ ಶಕ್ತಿದೇವತೆಯ ಪಾತ್ರವನ್ನು ಹೊತ್ತುಕೊಂಡು ತಿರುಗುತ್ತಿರುವ ಅಸಹಾಯಕ ಅಲೆಮಾರಿಯಂತೆ ಅನಿಸಲು ತೊಡಗಿದೆ. ಕನ್ನಡ ಕಾವ್ಯಸರಸ್ವತಿ ಈಕೆಯಿಂದ ಇನ್ನೂ ಬಹಳ ಬಹಳ ಕಾಲ ಇನ್ನಷ್ಟು ಕವಿತೆಗಳನ್ನು ಬರೆಸಲಿ ಎಂದು ಎಲ್ಲ ದೇವತೆಗಳ ಅಡಿಗೆ ಬಿದ್ದು ಕೇಳಿಕೊಳ್ಳುತ್ತೇನೆ.

ಅಬ್ದುಲ್ ರಶೀದ್
ಮೈಸೂರು
24 ಜನವರಿ 2018

 

ಕವನ ಸಂಕಲನ ಕೊಳ್ಳಲು ಕೊಂಡಿ : http://store.ruthumana.com/product/nakshathra-kavitegalu/

2 comments to “‘ನಕ್ಷತ್ರ ಕವಿತೆಗಳು” ಕವನ ಸಂಕಲನ ಅನಾವರಣ : ಕಾಲನೆಂಬ ಖಳನ ಎದುರು ಕಾವ್ಯ ಗುಬ್ಬಚ್ಚಿ”
  1. ಮುನ್ನುಡಿಯಿಿ ಓದನಿಂದ ಒಳಗಡಿಯಿರಿಸುವ ಕಾತರತೆ
    ಸಂಗೀತ ರವಿರಾಜ್

ಪ್ರತಿಕ್ರಿಯಿಸಿ