ಸೌಂದರ್ಯವೂ.. ವಿಜ್ಞಾನವೂ..

ವಾಲ್ಟ್ ವಿಟ್ಮನ್ನನ ಖ್ಯಾತ ಕವಿತೆಗಳಲ್ಲಿ ಇದೂ ಒಂದು:

ತಿಳಿದ ಖಗೋಳ ಶಾಸ್ತ್ರಜ್ಞನ ಮಾತುಗಳನ್ನು ನಾನು ಕೇಳಿದಾಗ,
ಪುರಾವೆಗಳು, ಅಂಕಿ-ಸಂಖ್ಯೆಗಳ ಅಂಕಣಸಾಲು ನನ್ನೆದುರಿಗಿದ್ದಾಗ,
ಕೂಡಿಸಿ, ಭಾಗಿಸಿ, ಅಳತೆ ಮಾಡಲು ನಕ್ಷೆ, ರೇಖಾಚಿತ್ರಗಳನ್ನು ನನ್ನೆದುರು ತೋರಿಸಿದಾಗ,
ಶಾಸ್ತ್ರಜ್ಞನ ಇಂಥ ಉಪನ್ಯಾಸವನ್ನು ಚಪ್ಪಾಳೆಗಳ ಮಧ್ಯೆ ಕುಳಿತು ನಾನು ಕೇಳಿದಾಗ,
ಎಷ್ಟೊಂದು ಬೇಗ ಲೆಕ್ಕಕ್ಕೆ ಸಿಕ್ಕದ ಹಾಗೆ ದಣಿದುಹೋದೆ, ಅಸ್ವಸ್ಥಗೊಂಡೆ
ತಟ್ಟನೆದ್ದು ಅಲ್ಲಿಂದ ಹೊರಬಿದ್ದು ಏಕಾಂಗಿಯಾಗಿ ಅಲೆದಾಡುವವರೆಗೆ,
ಇರುಳ ತೇವಭರಿತ ಅತೀಂದ್ರಿಯ ಗಾಳಿಯಲ್ಲಿ, ಹಾಗೂ ಆಗಾಗ್ಗೆ,
ಪರಿಶುದ್ಧ ಮೌನದಲ್ಲಿ ತಲೆಯೆತ್ತಿ ನಕ್ಷತ್ರಗಳತ್ತ ನೋಡುವವರೆಗೆ.

ಇದನ್ನು ಓದುತ್ತಿರುವ ಎಷ್ಟೋ ಮಂದಿ ಈಗ ಅಂದುಕೊಳ್ಳುತ್ತಿರಬಹುದು, “ಹೌದಲ್ಲ! ವಿಜ್ಞಾನ ಎಲ್ಲದರೊಳಗಿನ ಸೌಂದರ್ಯವನ್ನು ಹೀರಿ, ಲೆಕ್ಕಾಚಾರಕ್ಕಿಳಿಸುತ್ತದಷ್ಟೆ. ಸುಮ್ಮನೆ ಹೊರಹೋಗಿ ನಕ್ಷತ್ರಗಳನ್ನು ನೋಡಲು ಸಾಧ್ಯವಿರುವಾಗ ಅನಗತ್ಯವಾಗಿ ಕಲಿಯುವ ಅಗತ್ಯವೇನಿದೆ?”
ಇದು ಅನುಕೂಲಕರ ದೃಷ್ಟಿಕೋನ. ಏಕೆಂದರೆ ಇದು ವಿಜ್ಞಾನದ ಕಷ್ಟಕರ ವಿಷಯಗಳನ್ನು ಅನಗತ್ಯ, ಕಲಾತ್ಮಕವಾಗಿಯೂ ತಪ್ಪೆಂದು ತೋರಿಸುತ್ತದೆ. ಇದರ ಬದಲಿಗೆ, ನೀವು ರಾತ್ರಿ ಆಕಾಶದತ್ತ ಕಣ್ಣು ಹಾಯಿಸಿ ಒಂದು ನಿಗದಿತ ಪ್ರಮಾಣದ ಚೆಲುವನ್ನು ಆಸ್ವಾದಿಸಿ, ನೈಟ್ ಕ್ಲಬ್ಬಿಗೆ ತೆರಳಬಹುದು!
ಸಮಸ್ಯೆಯೇನೆಂದರೆ ಇಲ್ಲಿ ವಿಟ್ಮನ್ ಏನೊಂದೂ ತಿಳಿಯದೆ ಮಾತನಾಡುತ್ತಿದ್ದಾನೆ, ಆ ಪಾಪದ ಮನುಷ್ಯನಿಗೆ ಸರಿಯಾಗಿ ತಿಳಿದಿರಲಾರದು.

ರಾತ್ರಿ ವೇಳೆಯ ಆಕಾಶ ಸುಂದರವೆಂಬುದನ್ನು ನಾನಿಲ್ಲಿ ಅಲ್ಲಗೆಳೆಯುತ್ತಿಲ್ಲ. ನಾನೂ ಕೆಲ ಕಾಲ ಬೆಟ್ಟವೊಂದರ ತಪ್ಪಲ್ಲಲ್ಲಿ ಅಂಗಾತ ಬಿದ್ದುಕೊಂಡು ನಕ್ಷತ್ರಗಳನ್ನು ದಿಟ್ಟಿಸಿದ್ದೇನೆ, ಅವುಗಳ ಸೊಗಸನ್ನು ಕಂಡು ನಿಬ್ಬೆರಗಾಗಿದ್ದೇನೆ. (ಹಾಗೆಯೇ ಕೀಟಗಳಿಂದ ಕಚ್ಚಿಸಿಕೊಂಡು ವಾರಗಟ್ಟಲೆ ಮಾಯದ ಕಲೆಗಳನ್ನೂ ಪಡೆದುಕೊಂಡಿದ್ದೇನೆ.

ನಾನಿದನ್ನು ನೋಡುವ ರೀತಿ ಹೀಗೆ – ಈ ಮೌನವಾಗಿ ಹೊಳೆಯುವ ಬೆಳಕಿನ ಕಿಡಿಗಳಷ್ಟೇ ಸೌಂದರ್ಯವಲ್ಲ. ನಾನು ಬರೀ ಒಂದು ಎಲೆಯನ್ನಷ್ಟೇ ನೋಡಿ ಕಾಡಿನ ಬಗ್ಗೆ ಅಜ್ಞಾನಿಯಾಗಿರಲೇ? ಬೆಣಚುಕಲ್ಲೊಂದರ ಮೇಲೆ ಹೊಳೆಯುವ ಸೂರ್ಯನನ್ನು ನೋಡಿ ಸಮಾಧಾನ ತಂದುಕೊಂಡು, ಸಮುದ್ರದ ಬಗೆಗಿನ ಜ್ಞಾನವನ್ನು ತಿರಸ್ಕರಿಸಲೇ?

ನಾವು ಗ್ರಹಗಳೆಂದು ಕರೆಯುವ ಈ ಆಕಾಶದಲ್ಲಿ ಬೆಳಗುವ ಚುಕ್ಕಿಗಳು ನಿಜವಾಗಿ ವಿಶ್ವಗಳು. ಕಾರ್ಬನ್ ಡೈಆಕ್ಸೈಡ್ ಮತ್ತು ಸಲ್ಫ್ಯೂರಿಕ್ ಆಸಿಡ್ ಹೊಂದಿರುವ ವಿಶ್ವಗಳು; ಇಡೀ ಭೂಮಿಯನ್ನೇ ನುಂಗಬಲ್ಲ ಕೆಂಪು ಬಿಸಿ ದ್ರವದ ಚಂಡಮಾರುತವಿರುವ ವಿಶ್ವಗಳು; ಬೊಕ್ಕೆಗಳಿರುವ ಕುಳಿಗಳಿರುವ ನಿರ್ಜೀವ ವಿಶ್ವಗಳು; ನಿರ್ವಾತಕ್ಕೆ ಧೂಳನ್ನುಗುಳುವ ಜ್ವಾಲಾಮುಖಿಗಳಿರುವ ವಿಶ್ವಗಳು; ನಾವು ಹಾಗೆಯೇ ರಾತ್ರಿ ಹೊತ್ತಿನ ಆಕಾಶವನ್ನು ದಿಟ್ಟಿಸುತ್ತಿದ್ದರೆ ಬರೀ ಚುಕ್ಕಿಯಾಗಷ್ಟೇ ಉಳಿಯಬಲ್ಲ, ಅಲೌಕಿಕ ಚೆಲುವಿನ ಗುಲಾಲಿ, ನಿರ್ಜನ ಮರಳುಗಾಡುಗಳಿರುವ ವಿಶ್ವಗಳು.

ಬೆಳಕುಸೂಸುವ ಇನ್ನಿತರ ಚುಕ್ಕಿಗಳೂ ಗ್ರಹಗಳಲ್ಲ, ಬದಲಾಗಿ ನಕ್ಷತ್ರಗಳು. ವಾಸ್ತವವಾಗಿ ಸೂರ್ಯಗೋಳಗಳು. ಇವುಗಳಲ್ಲಿ ಕೆಲವೊಂದರದು ಹೋಲಿಕೆಯೇ ಇಲ್ಲದ ಭವ್ಯತೆ; ಪ್ರತಿಯೊಂದೂ ನಮ್ಮ ಸೂರ್ಯನ ಹಾಗೆ ಸಾವಿರ ಸೂರ್ಯರ ಬೆಳಕಿನಿಂದ ಹೊಳೆಯುತ್ತಿರುವಂಥವು. ಇನ್ನು ಕೆಲವು ನಕ್ಷತ್ರಗಳು ಕಿಂಚಿತ್ತೇ ತೇಜಸ್ಸು ಹೊಮ್ಮಿಸುತ್ತಿರುವ ಬರಿಯ ಕೆಂಪು ಬಿಸಿ ಉಂಡೆಗಳು. ಕೆಲವಕ್ಕೆ ನಮ್ಮ ಸೂರ್ಯನಂತೆಯೇ ಬೃಹತ್ತಾದ, ದಟ್ಟ ಆಕಾರವಿದ್ದರೂ ಅವು ಸಂಪೂರ್ಣವಾಗಿ ಚಿಕ್ಕ ಚೆಂಡಿನಂತೆ ಭೂಮಿಗಿಂತಲೂ ಸಣ್ಣಗಿರುತ್ತವೆ. ಇನ್ನೂ ಕೆಲವು ಮತ್ತೂ ಸಾಂದ್ರವಾಗಿರುತ್ತವೆ, ಹಾಗೂ ಈ ಸೂರ್ಯರ ಗಾತ್ರ ಚಿಕ್ಕ ಕ್ಷುದ್ರಗ್ರಹದಷ್ಟಿರುತ್ತವೆ.
ಇನ್ನು ಕೆಲವು ಶೂನ್ಯ ಗಾತ್ರಕ್ಕೆ ಕುಗ್ಗಿರುವ, ತೀರಾ ಅಡಕವಾಗಿರುವ ಸೂರ್ಯಗೋಳಗಳಿವೆ. ಅವುಗಳಿರುವ ಸ್ಥಳವು ಎಲ್ಲವನ್ನೂ ಕಬಳಿಸಿ ಏನ್ನನ್ನೂ ಹಿಂದಕ್ಕೆ ಮರಳಿಸದ ತೀವ್ರ ಗುರುತ್ವಾಕರ್ಷಣ ಶಕ್ತಿಯನ್ನು ಹೊಂದಿದೆ. ಇಲ್ಲಿ ವಸ್ತುವು ತಳವಿಲ್ಲದ ಕುಳಿಗೆ ಬೀಳುತ್ತದೆ; ಇಲ್ಲಿ ಕ್ಷಕಿರಣಗಳ ಸಾವಿನ ಚೀರಾಟ ಮಾತ್ರ ಕೇಳಿಬರುತ್ತದೆ.

ಸತತವಾಗಿ ವಿಶ್ವೀಯ ಪ್ರಾಣಾಯಾಮದಲ್ಲಿ ತೊಡಗಿರುವ ನಕ್ಷತ್ರಗಳೂ ಇವೆ. ಮತ್ತೆ ಬೇರೆಯವು ತಮ್ಮ ಇಂಧನವನ್ನು ಸಂಪೂರ್ಣವಾಗಿ ಬಳಸಿದ ಕಾರಣ ಹಿಗ್ಗಿ, ಕೆಂಪಗಾಗಿ ತಮ್ಮ ಗ್ರಹಗಳನ್ನು, ಗ್ರಹಗಳೇನಾದರೂ ಇದ್ದಲ್ಲಿ, ನುಂಗುವಷ್ಟು ದೊಡ್ಡವಾಗುತ್ತವೆ (ಮುಂದೊಂದು ದಿನ, ಬಿಲಿಯ ವರ್ಷಗಳ ನಂತರ ನಮ್ಮ ಸೂರ್ಯ ಹಿಗ್ಗಿ, ಭೂಮಿ ಉದುರಿ ಹಿಂದೊಮ್ಮೆ ಇದ್ದ ಜೀವಗಳ ಕುರುಹೇ ಇಲ್ಲದಂತೆ ಕಬ್ಬಿಣ ಮತ್ತು ಶಿಲೆಯ ಅನಿಲದೊಂದಿಗೆ ಆವಿಯಾಗುತ್ತದೆ). ಮತ್ತೆ ಕೆಲ ನಕ್ಷತ್ರಗಳು ಪ್ರಳಯಾಂತಕವಾಗಿ ಸ್ಫೋಟಿಸಿದಾಗ, ಆ ಸ್ಫೋಟದ ಅನಂತ ಬ್ರಹ್ಮಾಂಡದ ಕಿರಣಗಳ ಭಯಂಕರ ಸಿಡಿತವು ಬೆಳಕಿನ ವೇಗದಲ್ಲಿ ಹೊರ ಧಾವಿಸುತ್ತ ಸಾವಿರ ಸಾವಿರ ಜ್ಯೋತಿರ್ವರ್ಷಗಳನ್ನು ದಾಟಿ ಭೂಮಿಯನ್ನು ಮುಟ್ಟಿ ಪರಿವರ್ತನೆಗಳ ಮೂಲಕ ವಿಕಾಸದ ಹಿಂದಿನ ಶಕ್ತಿಯನ್ನು ಪೂರೈಸುತ್ತದೆ.

ಪರಿಶುದ್ಧ ಮೌನದಲ್ಲಿ ನಾವು ತಲೆಯೆತ್ತಿ ನೋಡುವಾಗ ಕಾಣ ಸಿಗುವ ಅಲ್ಪ ಸಂಖ್ಯೆಯ ನಕ್ಷತ್ರಗಳು (ಅಂದರೆ 2,500, ಗಾಢಾಂಧಕಾರದಲ್ಲಿ, ಸ್ಪಷ್ಟವಾಗಿ ರಾತ್ರಿಯಲ್ಲಿ ಕಂಡರೂ ಅದಕ್ಕಿಂತ ಹೆಚ್ಚಿಲ್ಲ) ನಮಗೆ ಕಾಣದ ಅಗಾಧ ಗುಂಪಿನಲ್ಲಿ – ಮುನ್ನೂರು ಬಿಲಿಯ ನಕ್ಷತ್ರಗಳು – 300,000,000,000 – ಅಂತರಿಕ್ಷದಲ್ಲಿ ಬೃಹತ್ತಾದ ಗಿರಿಗಿಟ್ಲೆಯಂಥ ಭ್ರಮಣವನ್ನು ರೂಪಿಸುವುದಕ್ಕಾಗಿ ಸೇರಿಕೊಂಡಿರುತ್ತವೆ. ಈ ತೀವ್ರ ಆವರ್ತನ ಚಕ್ರ, ಕ್ಷೀರಪಥ, ಎಷ್ಟು ವಿಸ್ತಾರವಾಗಿ ಹರಡುತ್ತದೆಂದರೆ ಬೆಳಕು ಒಂದು ಕ್ಷಣದಲ್ಲಿ 186,288 ಮೈಲಿಯಂತೆ ಸಾಗಿದರೂ ಒಂದು ತುದಿಯಿಂದ ಇನ್ನೊಂದು ತುದಿಗೆ ಮುಟ್ಟಲು ನೂರು ಸಾವಿರ ವರುಷಗಳು ಬೇಕಾಗುತ್ತವೆ! ಹಾಗೂ ಅದರ ಕೇಂದ್ರದಲ್ಲಿ ನೇರವಾಗಿ ತಿರುಗ ಹೊರಟರೆ 200 ಮಿಲಿಯ ವರುಷಗಳು ಹಿಡಿಯುತ್ತವೆ. ಸೂರ್ಯ, ಭೂಮಿ ಮತ್ತು ನಾವೆಲ್ಲರೂ ಆ ಆವರ್ತನವನ್ನು ನಡೆಸುತ್ತಿದ್ದೇವೆ.

ನಮ್ಮ ಕ್ಷೀರಪಥದಾಚೆ, ನಮ್ಮದರಕ್ಕೆ ಹೊಂದಿಕೊಂಡಂತೆ ಅನೇಕ ಆಕಾಶಗಂಗೆಗಳ ಗುಂಪಿಗಳಿವೆ, ಹೆಚ್ಚಿನವು ಚಿಕ್ಕವು, ಕೆಲ ಬಿಳಿಯ ನಕ್ಷತ್ರಗಳಷ್ಟೇ ಅವುಗಳಲ್ಲಿವೆ. ಆದರೆ ಆಂಡ್ರೊಮೆಡಾ ಎಂಬ ನೀಹಾರಿಕೆಯ ಗಾತ್ರ ನಮ್ಮದಕ್ಕಿಂತ ಎರಡು ಪಟ್ಟುಗಳಷ್ಟಿದೆ.
ನಮ್ಮ ಆಕಾಶಗಂಗೆಯಾಚೆ ಆಕಾಶಗಂಗೆಗಳ ಸಮೂಹಗಳೇ ಇವೆ. ಕೆಲ ಸಮೂಹಗಳು ಸಾವಿರಾರು ಆಕಾಶಗಂಗೆಗಳಾಗುತ್ತವೆ. ನಮ್ಮ ಬಳಿಯಿರುವ ಉತ್ತಮೋತ್ತಮ ದೂರದರ್ಶಕಗಳಿಗೂ ನಿಲುಕದೆ ಅವು ಹರಡುಕೊಂಡಿವೆ. ಅವುಗಳಲ್ಲಿ ಸುಮಾರು ನೂರು ಬಿಲಿಯ ಆಕಾಶಗಂಗೆಗಳಿರಬಹುದು.

ಹೀಗೆ ಹೆಚ್ಚಿನ ಆಕಾಶಗಂಗೆಗಳಲ್ಲಿ ನಡೆಯುತ್ತಿರುವ ಹಿಂಸೆಯ ಕುರಿತು, ಮಿಲಿಯಗಟ್ಟಲೆ ನಕ್ಷತ್ರಗಳ ಸಾವಿಗೆ ಕಾರಣವಾಗುವ ಮಹಾ ಸ್ಫೋಟಗಳು ಹಾಗೂ ವಿಕಿರಣಗಳ ಅರಿವು ನಮಗೆ ಆಗುತ್ತಿರುತ್ತದೆ. ನಮ್ಮದೇ ಕ್ಷೀರಪಥದ ಕೇಂದ್ರದದಲ್ಲಿ ನಡೆಯುವ ನಂಬಲಸಾಧ್ಯವಾದ ಹಿಂಸೆಯನ್ನು ನಮ್ಮ ಮತ್ತು ನಮ್ಮ ಕ್ಷೀರಪಥದ ಕೇಂದ್ರದ ನಡುವೆ ಇರುವ ಅಗಾಧವಾದ ಧೂಳು ಮತ್ತು ಅನಿಲದ ಮೋಡಗಳ ಮೂಲಕ ಸೌರವ್ಯೂಹ ಮರೆಮಾಚುತ್ತದೆ.

ಕೆಲವು ಆಕಾಶಗಂಗೆಗಳ ಕೇಂದ್ರಗಳು ಎಷ್ಟು ಉಜ್ವಲವಾಗಿರುತ್ತವೆಂದರೆ ಅವುಗಳನ್ನು ಬಿಲಿಯಗಟ್ಟಲೆ ಜ್ಯೋತಿರ್ವರ್ಷಗಳ ದೂರದಿಂದಲೂ ನೋಡಲು ಸಾಧ್ಯ. ಅಷ್ಟು ದೂರದಿಂದ ನೋಡಿದಾಗ ಆಕಾಶಗಂಗೆಗಳು ಕಾಣುವುದಿಲ್ಲ. ಬದಲಾಗಿ ಬರೀ ನಕ್ಷತ್ರದಂತೆ ಮಿನುಗುವ ಉಜ್ವಲ ಶಕ್ತಿಕೇಂದ್ರಗಳಂತೆ (ಕ್ವಾಸಾರ್ಗಳಂತೆ) ತೋರುತ್ತವೆ. ಇವುಗಳಲ್ಲಿ ಕೆಲವನ್ನು ಹತ್ತು ಬಿಲಿಯ ಜ್ಯೋತಿರ್ವರ್ಷಗಳಿಗಿಂತ ಹಿಂದಿನವು ಎಂದು ಗುರುತಿಸಲಾಗಿದೆ.

ಸುಮಾರು ಹದಿನೈದು ಬಿಲಿಯ ವರ್ಷಗಳ ಹಿಂದೆ ಬ್ರಹ್ಮಾಂಡ ವಿಸ್ತರಣೆಯ ಪ್ರಕ್ರಿಯೆಯ ಸಂದರ್ಭದಲ್ಲಿ ಸಣ್ಣದೊಂದು ಗೋಳದಲ್ಲಿ ಅಡಕವಾಗಿದ್ದ ಬ್ರಹ್ಮಾಂಡದ ದ್ರವ್ಯರಾಶಿಗಳು ಭಾರಿ ಪ್ರಮಾಣದ ಆಸ್ಫೋಟದೊಂದಿಗೆ ಆಕಾಶಗಂಗೆಗಳ ನಿರ್ಮಾಣಕ್ಕೆ ಹೊರಟಾಗಲಿಂದ ಈ ಎಲ್ಲ ಆಕಾಶಗಂಗೆಗಳು ತೀವ್ರ ವೇಗದಿಂದ ಬೇರ್ಪಟ್ಟು ಹೊರಹೊಮ್ಮುತ್ತಿವೆ.

ಈ ವಿಶ್ವ ಸದಾ ವಿಸ್ತರಿಸುತ್ತಿರಬಹುದು ಅಥವಾ ಟ್ರಿಲಿಯ ವರ್ಷಗಳ ಹಿಂದಿನ ಉಸಿರಾಟದ ಗತಿಯನ್ನು ಮತ್ತೆ ಪಡೆಯುವಂತಾಗಲು ವಿಶ್ವದ ವಿಕಾಸ ಪ್ರಕ್ರಿಯೆ ನಿಧಾನವಾಗಿ ಸಂಕುಚಿತಗೊಳ್ಳಬಹುದು. ಹಾಗೆ ಆಟ ಮತ್ತೆ ಶುರುವಾಗಲೂಬಹುದು.

ಮಾನವ ಕಲ್ಪನೆಗೆ ನಿಲುಕದ ಈ ಎಲ್ಲ ನೋಟಗಳು ಸಾಧ್ಯವಾಗಿರುವುದು ನೂರಾರು ಖಗೋಳ ವಿಜ್ಞಾನಿಗಳ ಕೆಲಸದಿಂದಾಗಿ. ಇವೆಲ್ಲವೂ ಕಂಡು ಹಿಡಿಯಲ್ಪಟ್ಟಿದ್ದು 1982ರಲ್ಲಿ ವಿಟ್ಮನ್ನನ ಸಾವಿನ ನಂತರ! ಮತ್ತು ಹೆಚ್ಚಿನವು ಈ ಇಪ್ಪತ್ತೈದು ವರ್ಷಗಳಲ್ಲಿ ಘಟಿಸಿದಂತವು. ಹಾಗಾಗಿ ಆ ಬಡಪಾಯಿ ಕವಿ ತಾನು “ಪರಿಶುದ್ಧ ಮೌನದಲ್ಲಿ ತಲೆಯೆತ್ತಿ ನಕ್ಷತ್ರಗಳತ್ತ ನೋಡಿದಾಗ” ಎಂಥ ನಿರರ್ಥಕ ಮತ್ತು ಸೀಮಿತ ಸೌಂದರ್ಯವನ್ನು ಗ್ರಹಿಸುತ್ತಿದ್ದೇನೆಂದು ಅವನಿಗೇ ತಿಳಿದಿರಲಿಲ್ಲ.

ಭವಿಷ್ಯದಲ್ಲಿ ವಿಜ್ಞಾನವು ಅನಾವರಣಗೊಳಿಸಲಿರುವ, ಅಪರಿಮಿತ ಸೌಂದರ್ಯದ ಬಗ್ಗೆ ನಮಗೂ ತಿಳಿದಿಲ್ಲ, ಯಾರಿಂದಲೂ ಕಲ್ಪಿಸಲೂ ಆಗದು!

ಮೂಲ: ಐಸಾಕ್ ಅಸಿಮೋವ್
ಅನುವಾದ: ಸ್ನೇಹಜಯಾ ಕಾರಂತ

4 comments to “ಸೌಂದರ್ಯವೂ.. ವಿಜ್ಞಾನವೂ..”
  1. ಕನ್ನಡದ್ದೇ ಬರೆಹ ಅನ್ನುವಂತಿದೆ. ಅಸಿಮೋವ್ ನ ಬರೆಹಗಳ ಅನುವಾದ ಕನ್ನಡಕ್ಕೆ ಮತ್ತಶ್ಟು ದಕ್ಕುವಂತಾಗಲಿ.

  2. Pingback: ಸೌಂದರ್ಯವೂ.. ವಿಜ್ಞಾನವೂ.. – Neelihakki

ಪ್ರತಿಕ್ರಿಯಿಸಿ