ಮಧು ಮಹೋತ್ಸವ

‘ಮಧುಮಯ ಚಂದ್ರನ ಮಧುಮಯ ಹಾಸವೇ ಮೈತಳೆದಂತೆ ನಾ ಕಂಡೆ..’-ಒಂದು ಕಡೆಯಿಂದ ಜೇನುಕಂಠದ ಗಾನ ತೇಲಿಬರುತ್ತಿದ್ದರೆ ಇನ್ನೊಂದು ದಿಕ್ಕಿನಿಂದ, ‘ಬಹಾರೋ ಫೂಲ್ ಬರಸಾವೋ, ಮೇರಾ ಮೆಹಬೂಬ್ ಆಯಾ ಹೈ..’-ಮಧುರತೆಯೇ ಮೈವೆತ್ತ ಸ್ವರಲಹರಿ ತನ್ನೊಳಗೇ ಸೆಳೆಯುವಂತೆ ಮಾರ್ದನಿಸುತ್ತಿದ್ದ ಸಮಯ. ಎಲ್ಲೆಲ್ಲೂ ವಸಂತ! ವಸಂತನ ಗುಣಗಾನ ಮಾಡದ ಕವಿಯಿಲ್ಲ; ಹಾಡದ ಗಾಯಕನಿಲ್ಲ. ಚೈತ್ರದ ಆಗಮನವಾಗಿಬಿಟ್ಟಿದೆಯಲ್ಲ! ಬಾಗೇಶ್ರೀ, ಅಢಾಣಾ ಮತ್ತು ಮಲ್ಹಾರ್ ರಾಗಗಳನ್ನು ಬೆಸೆದು ನಿಸರ್ಗಕ್ಕೆ ನಿಸರ್ಗವೇ ಮೌಸಮೀರಾಗವನ್ನು ಹೊಸೆದು ಪಲುಕುತ್ತಿರೆ, ಅದರೊಳಗಿನ ಆ ‘ಮಧ’ ಹೊರಹೊಮ್ಮಿಸುವ ಮಧುರ ಮದೋನ್ಮತ್ತತೆಗೆ ಎಣೆಯುಂಟೆ? ಈ ಸಮಕಾಲೀನ ಸಂಗೀತಾಸ್ವಾದದೊಂದಿಗೆ, ಸದಾಕಾಲೀನ ಸಾಹಿತ್ಯಶ್ರೇಷ್ಠರ, ಅಷ್ಟಾದಶವರ್ಣನಾಸಿಧ್ಧರ ಕನ್ನಡಕಾವ್ಯದಲ್ಲಿನ ವಸಂತತನವನ್ನು ತುಸು ನೋಡೋಣ, ಬನ್ನಿ;

ಕುಮಾರವ್ಯಾಸನಲ್ಲಿ ವಸಂತೋದಯದ ಮೊದಲ ನೋಟ ಸಿಗುವುದು ದಿವ್ಯಾಶ್ರಮವಾಗಿ ಮಾರ್ಪಟ್ಟ ವಿಪಿನವನದಲ್ಲಿ. ವಾತಾಯನದಲ್ಲಿ ನಿಧಾನವಾಗಿ ತಣ್ಪು ಕಡಿಮೆಯಾಗಿ,ನದಿಜಲಗಳ ಹಾವಸೆ ಕರಗುತ್ತ, ವಿಹರಿಗರು ತಂಗಾಳಿಗೆ ಮೈಯೊಡ್ಡುವರು. ಕಾದ ಬಿಸಿಲೋ-ಕವಿಯನ್ನೇ ಕೇಳಿ;

“ಯೋಗಿಗೆತ್ತಿದ ಖಡುಗಧಾರೆ ವಿ/ಯೋಗಿಗೆತ್ತಿದ ಸಬಳವಖಿಳ ವಿರಾಗಿಗಳ ಹೆಡತಲೆಯ ದಡಿ/ ನೈಷ್ಠಿಕರಿಗಲಗಣಸು// ಆಗಮಿಕರೆದೆಶೂಲ ಗರ್ವಿತ/ಗೂಗೆಗಳನಖಸಾಳವಗ್ಗದ/ಭೋಗಿಗಳ ಕುಲದೈವವೆಸೆದುದು ಕುಸುಮಮಯ ಸಮಯ//”[ಆದಿಪರ್ವ-6]

ಪಾಂಡುವಿನ ಮೈಮೇಲೇ ವಸಂತನ ಆವಾಹನೆಯಾದಂತಿತ್ತಂತೆ! ಮೊರೆವ ದುಂಬಿಗಳೇ ಗಾಯಕರು, ಕುಹೂರವದ ಅಬ್ಬರದ ಕೋಗಿಲೆಗಳೇ ವಂದಿಮಾಗಧರು, ಗಿಳಿಸಂಕುಲವೇ ಪಂಡಿತವರ್ಗ, ಮಾಮರವೇ ಕರಿಘಟೆಯು, ಫುಲ್ಲಕುಸುಮಿತ ಪದ್ಮ-ಸತ್ತಿಗೆಯು, ಮಂಜರೀಪುಷ್ಪಗಳೇ ಚಾಮರಗಳು..ಆಹಾ!..ಯೋಗಿಕವಿಯ ಪದ-ಅರ್ಥರಸವರ್ಷದಲ್ಲಿ ನೆನೆದವರೇ ಧನ್ಯರೆಂಬುದು ಸುಳ್ಳಲ್ಲ; ಇಲ್ಲಿ ನೋಡಿ-

“ಪಸರಿಸಿತು ಮಧುಮಾಸ ತಾವರೆ/ಯೆಸಳ ದೋಣಿಯಮೇಲೆ ಹಾಯ್ದವು/ಕುಸುಮ ರಸದುಬ್ಬರದ ತೊರೆಯನು ಕೂಡೆ ತುಂಬಿಗಳು//ಒಸರ್ವ ಮಕರಂದದ ತುಷಾರದ/ಕೆಸರೊಳೆದ್ದವು ಕೊಂಚೆಗಳು ಹಸ/ರೆಸೆವ ದಂಪತಿವಕ್ಕಿ ಸಾರಸ ರಾಜಹಂಸಗಳು//” [ಆದಿಪರ್ವ-9]

ಸಾಮಾನ್ಯಜನ ನೆರಳು ಬಯಸಿ ವನದೊಳಹೊಕ್ಕವರು,‘ಮರಳಿದುದಿಲ್ಲವಂತೆ’.. ಆಶ್ಚರ್ಯವಿಲ್ಲ, ಏಕೆಂದರೆ-‘ಹೊಗುವ ಕಾಮನ ದಳದ ಚೂಣಿಯು ಮುನಿಜನಮತಿಯನ್ನೇ ಕೈದುವಿಕ್ಕಿ’ದಾಗ ಇನ್ನು ಜನಸಾಮಾನ್ಯರ ಪಾಡೇನು?
ವಸಂತ ಎಂದರೆ ಅದೊಂದು ಬರಿಯ ಪರಿಕಲ್ಪನೆ ಅಲ್ಲವೇಅಲ್ಲ.ಚೆಲುವು, ಆತ್ಮವಿಶ್ವಾಸ, ಜೀವನೋತ್ಸಾಹಗಳ. ಮೇಳವದು. ದ್ರೌಪದಿ ಸ್ವಯಂವರಮಂಟಪದಲ್ಲಿ ಕಾಲಿಟ್ಟಾಗ, ‘ವರವಸಂತನ ಬರವಿನಂತೆ’ ಶೋಭಿಸುತ್ತಾಳೆ.

2
“ವರವಸಂತನ ಬರವು ಜಾಜಿಯ
ಬಿರಿಮುಗುಳು ಮರಿದುಂಬಿಗಳ ನಯ
ಸರದ ದನಿ ಕರಿಕಳಭಲೀಲೆ ನವೇಕ್ಷುರಸಧಾರೆ
ಮೆರೆವವೋಲ್ ಹೊಸಹೊಗರ ಜವ್ವನ
ಸಿರಿಯ ಜೋಡಣೆ ಜನಮನವನಾವರಿಸಿದುದು..”[ಆದಿಪರ್ವ;26]

ಮೊದಲೇ ದ್ರೌಪದಿಯೆಂದರೆ, ‘ಪರಿಮಳದ ಪರಮಾಣುಗಳ ಜೋಡಣೆ’ಯಂತೆ!..ಅಗ್ನಿಕನ್ಯೆ ಮುಂದಿನ ಬದುಕಿನ ತಪನೆಯಲ್ಲಿ ಕಾಯುವಮುನ್ನಿನ ಲಲಿತಲಹರಿಯ ಲಾಸ್ಯದಂತೆ ಇಲ್ಲಿ ಸೊಗದ ಸಾಕಾರವಾಗುತ್ತಾಳೆ- ಪ್ರಾಯಶಃ ಲೋಕದೆಲ್ಲ ಹೆಣ್ಣುಗಳಂತೆ- ವೈಶಾಖಕ್ಕೆ ಮುನ್ನಿನ ಚೈತ್ರ!

ಜೈಮಿನೀಭಾರತದ ಲಕ್ಷೀಶನಿಗೆ, ಹೊಸಜವ್ವನೆಯಾಗಿ ‘ರಸಾಲಂ ವಿರಹಿಜನಶೂಲಂ ತಾನೆನೆ ವಿರಾಜಿತ ವಸಂತದೊಳು’ ಋತುಮತಿಯಾದ ಸೀತೆಯು ವಿಕಸಿತ[ವಿದಳಿತ] ವಸಂತಲಕ್ಷ್ಮಿಯಂತೆ ಕಂಗೊಳಿಸುತ್ತಾಳೆ. ಹೇಗೆಂದರೆ, ಬಾಹ್ಯಪ್ರಕೃತಿಯಲ್ಲಿ ಹೇಗೋ, ಹಾಗೆ ಸೀತೆಯ ಅಂತಃಪ್ರಕೃತಿಯೂ ಅರಳಿ ಕುಸುಮಿತವಾಗಿದೆ; “ಮಲ್ಲಿಕಾಸ್ಮಿತರುಚಿರೆ, ಕುಂದಕುಟ್ಮಲರದನೆ, ಪಲ್ಲವಾಧರೆ,ಭೃಂಗಕುಂತಳೆ, ಕುಸುಮಗಂಧಿ, ಸಲ್ಲಲಿತ ಕೋಕಿಲಾಲಾಪೆ, ಚಂಪಕವರ್ಣೆ, ಮೃದುಮಧುರ ಕೀರವಾಣಿ/ ಫುಲ್ಲಲೋಚನೆ, ಚಾರುಚಂದ್ರಬಿಂಬಾನನೆ, ಲಸಲ್ಲಲಿತಗಾತ್ರೆ.” [ಸಂಧಿ 18;ಪದ್ಯ,24] ಇದು, ಸೀತಾವಸಂತ! ವಸಂತ, ಸ್ರ್ತೀ-ವರ್ಣನೆಗೂ, ಪುರುಷ-ವರ್ಣನೆಗೂ ಸಲ್ಲುವ ಬೆರಗಿದು! ಪ್ರಕೃತಿ-ಪುರುಷರ ಅವಿನಾಭಾವ ಸಂಜ್ಞೆಗೊಂದು ಸಂಕೇತ. ಹೇಳಿ-ಕೇಳಿ, ಇದು, ಶೃಂಗಾರಮಾಸ; [‘ಕಂತು ನಕ್ಕ ಚಂದ್ರಹಾಸ’]

ಅರ್ಥಾತ್, ವಸಂತ-ಮೂರ್ತವೂ ಹೌದು; ಅಮೂರ್ತವೂ! ಅದೊಂದು ಜೀವ-ಜೀವನ ವಿಕಸನದ ಸಂಕೇತ. ಹಾಗೆ ನೋಡಿದರೆ ಪ್ರತಿಯೊಂದು ಋತುವೂ ಅದರದರ ಜಾಗದಲ್ಲಿ ವಿರಾಜಿತವೇ ಹೌದು; ಆದರೆ, ಸ್ವಯಂ ಶ್ರೀಕೃಷ್ಣನೇ ‘ಋತೂನಾಂ ಕುಸುಮಾಕರಃ’ ಎನ್ನಬೇಕಾದರೆ, ಈ ವಸಂತ ಹೇಗೆ ವಿಭಿನ್ನ? ಹೌದು..ಮನುಷ್ಯ-ಪ್ರಕೃತಿ ಬೇರೆ-ಬೇರೆಯಲ್ಲ. ಮನುಷ್ಯನೊಳಗಿನ ಪ್ರಕೃತಿಗೆ ಆದ್ಯಂತ ಎದುರಿಸಬಹುದಾದ -ಹಿಂದಿನ ಶಿಶಿರದ ಹಳವಂಡಗಳ ಕೊಡವುವ, ಮುಂದಿನ ‘ವರ್ಷ’ಕ್ಕೆ ತಪನೆಯನ್ನು ಒಗ್ಗೂಡಿಸುವ, ಹಸಿಚಿಗುರುವ, ಹೊಸತರಳುವ, ಬಣ್ಣ ಬರೆಯುವ, ಒಳಗಣ್ಣ ತೆರೆಯುವ, ಕನಸುವ, ಕನಸ ನನಸುವ ಜೀವಾಮೃತದ ಕಸುವಿನಂತೆ ವಸಂತ! ಭೂಮಿಯಂಥ ಭೂಮಿಯನ್ನು, ಕಡಲಿನಂಥ ಕಡಲನ್ನು, ಮುಗಿಲಿನಂಥ ಮುಗಿಲನ್ನು ಕಾಯಿಸಿ, ವಿಕಸಿಸಿ, ವಿಶುಧ್ಧಿಯ ಅಂತಃಕರಣಗಳಲ್ಲಿ ಹದಗೊಳಿಸುವ-ಹಸನ್ಮುಖೀ ಅವತಾರ-ವಸಂತನದು! ಅರವಿಂದ, ಅಶೋಕ, ಚೂತ, ನವಮಲ್ಲಿಕಾ, ನೀಲೋತ್ಪಲ-ಮದನನ ಇಕ್ಷುಚಾಪಕ್ಕೆ ಹೂಡಿದ ಪಂಚಬಾಣಗಳು. ವಸಂತದ ಹೆಗ್ಗುರುತುಗಳು ಹೂ-ದಂಡೆಯಂತೆ ಹೆಣೆಯಲ್ಪಟ್ಟ ದೃಶ್ಯ ಲಕ್ಷ್ಮೀಶನಿಗೆ ಮಾವಿನಚಿಗುರು-ಅಶೋಕೆಯೊಂದಿಗೆ, ಮರಿದುಂಬಿ-ಕೋಗಿಲೆಯೊಂದಿಗೆ, ಸಂಪಗೆ-ಹೊಸಹೊಂದಾವರೆಯೊಂದಿಗೆ, ಅರಳುಮಲ್ಲಿಗೆ-ಬೆಳುದಿಂಗಳೊಂದಿಗೆ, ಗಿಳಿವಿಂಡು-ವನಸಿರಿಯೊಂದಿಗೆ, ಬೆರೆತು,

3
“ಎಸೆದುವುವೊಂದೊಂದರೊಳ್ ಮಧುಮಾಸಕಂಗಜನ ದೆಸೆಯಂತೆ ಖತಿಯಂತೆ ಧನದಂತೆ ಜಸದಂತೆ ಪಸುರ್ವೆಳಸಿನಂತೆ..”ತೋರಿ-ತಂತೆ! ಮತ್ತೆ, ‘ಲೋಚನಕುದಯಿಪ ಪೊಸತಂತೆ, ಪಾತಕಕ್ಷಯದಂತೆ, ಮಾಗಿಯ ವಿಮೋಚನೆಯ ಪುಣ್ಯವಾಸನೆಯಂತೆ’ ದಕ್ಷಿಣದಗಾಳಿಯ ಋತುವಾವರಿಸಿತಂತೆ. [ಪೂರ್ವದಿಕ್ಕಿನ ಗಾಳಿ ವರ್ಷಋತುವಿಗೆ, ಪಶ್ಚಿಮದ ಗಾಳಿ ಗ್ರೀಷ್ಮಕ್ಕೆ, ಉತ್ತರದ ಗಾಳಿ ಶರದಕ್ಕೆ-ತೆಂಕಣಗಾಳಿ ವಸಂತಕ್ಕೆ.] ಇದನ್ನೇ ಪಂಪ ನೆನೆನೆನೆದು ಪುಳಕಗೊಳ್ಳುವುದು..

‘ವಿರಹ’ದ ನಿರ್ವಚನವು ಕವಿ-ದಾರ್ಶನಿಕರ ತತ್ವದಲ್ಲೇ ಇದೆ; ನಮ್ಮ ಟಿ.ಎಸ್.ವೆಂಕಣ್ಣಯ್ಯನವರ ವಿಶ್ಲೇಷಣೆ ಅದೆಷ್ಟು ಸೊಗಸಾಗಿದೆ! ಪ್ರತಿಯೊಬ್ಬ ಮಾನವನಲೂ ವರ್ತಮಾನಕ್ಕೆ ಅತೀತವಾದದ್ದೂ, ನೆಲೆಯೇ ಕಾಣದ್ದೂ ಆದೊಂದು ವಿರಹವಿದೆ,- ಆ ಗಮ್ಯಕೇಂದ್ರವು ಅನಂತದ ನಟ್ಟನಡುವೆ ಇದೆ. ಅವಿನಾಶಿಯೂ, ನಾವು ಪ್ರೇಮಾರ್ತರಾಗಿ ಹಾತೊರೆದು ಹಂಬಲಿಸಲು ತಕ್ಕವನೂ ಆದ ಆ ಪರಮೇಷ್ಠಿಯು ಹಾಗೆಲ್ಲ ಕೈಗೆ ಸಿಗುವನೇ?ನಮ್ಮೆಲ್ಲ ಅಗಣಿತ ದ್ವಂದ್ವಗಳ ಜಂಜಡದಲ್ಲಿಯೂ ಅವನ ಸ್ಪರ್ಶಲೇಪನದ ತಂಗಾಳಿಯಾದರೂ ನಮ್ಮನ್ನು ಸವರಿದರೆ-ಅದೇ ಪರಮಸೌಭಾಗ್ಯ.ಜೀವಾತ್ಮ-ಪರಮಾತ್ಮರ ಸಂಯೋಗಾರ್ಥವೇ ಈ ತುಡಿತ-ಮಿಡಿತವೆಲ್ಲ!..ಈಗ ಹೇಳಿ,ನಿಜವಾದ ಈ ಜೀವವಸಂತದ ವಿರಹಾನುಭವಿಯು ಪರಮಾನುಭವಿಯಾಗುವುದೇ ‘ಮಧುಮಹೋತ್ಸವ’ ಅಲ್ಲವೆ?

ಪಂಪನನ್ನು ನೆನೆಯದೆ ವಸಂತೋಪಾಖ್ಯಾನ ಅಪೂರ್ಣವೆನಿಸದೆ? “ತೆಂಕಣಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇಯಂ ಕಿವಿವೊಕ್ಕೊಡಂಬಿರಿದಮಲ್ಲಿಗೆಗಂಡೊಡಮಾದ ಕೆಂದಲಂಪಂಕೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನೆಂಬೆನಾರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಸಮಂ”-ಎಂದಿರುವುದರಲ್ಲಿ ಮಧುಮಹೋತ್ಸವದ ಘನತೆಯೇ ಘನತೆ!-ಎಂಬಪ್ರಶಂಸೆ-ಪ್ರಶಸ್ತಿ ಕವಿಮನದಾಳದ ಮಾತಾಗಿದೆ. ಶಬ್ದದಾಚೆ, ಅರ್ಥದಾಚೆ, ಮಧುಮಹೋತ್ಸವವಾಗಲಿ!

ಪ್ರತಿಕ್ರಿಯಿಸಿ