ಎಂ. ವ್ಯಾಸರ ಕೃತಿಗಳ ಕುರಿತು ಕಿ.ರಂ ಉಪನ್ಯಾಸ

ಕನ್ನಡದ ಸಣ್ಣ ಕಥೆಗಾರರಲ್ಲಿ ತನ್ನದೇ ವಿಶಿಷ್ಟ ಛಾಪು ಮೂಡಿಸಿದ್ದ ಎಂ. ವ್ಯಾಸ ( ಮನ್ನಿಪಾಡಿ ವ್ಯಾಸ ) ನಮ್ಮನ್ನಗಲಿ ಇಂದಿಗೆ ಹತ್ತು ವರ್ಷಗಳಾಗುತ್ತವೆ.

1962ರ ಸುಮಾರಿಗೆ ಕತೆಗಳನ್ನು ಬರೆದು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಲು ಪ್ರಾರಂಭಿಸಿದ್ದ ವ್ಯಾಸರು 2008ರ ವರೆಗೂ ಅದನ್ನು ಮಾಡುತ್ತಲೇ ಬಂದರು. ಸುಮಾರು ನೂರೈವತ್ತಕ್ಕೂ ಮಿಕ್ಕು ಕತೆಗಳು, ಮೂರು ನೀಳ್ಗತೆಗಳು, ನೂರಾರು ಕವನಗಳು, ಅಂಕಣ ಬರಹಗಳು – ಹೀಗೆ ಸಾವಿರಾರು ಪುಟಗಳ ಸಾಹಿತ್ಯವನ್ನು ಉಳಿಸಿ ಹೋಗಿದ್ದಾರೆ. ತದನಂತರದಲ್ಲಿ ವಿವಿಧ ಪ್ರಕಾಶಕರಿಂದ ಅವು ಪುಸ್ತಕರೂಪದಲ್ಲಿ ಪ್ರಕಟಗೊಂಡವು. ಕೃತ, ಸ್ನಾನ, ತಪ್ತ, ಕೆಂಡ, ಅಸ್ತ್ರ, ಕಾಂತ, ದಡ, ಓಟ ಎಂಬ ಎಂಟು ಕಥಾ ಸಂಕಲನಗಳು, ಸುಳಿ, ಕ್ಷೇತ್ರ, ಸೃಷ್ಟಿ ಎಂಬ ಮೂರು ಕವನ ಸಂಕಲನಗಳು, ಜನಪಥ, ಮೌನಗರ್ಭ ಎಂಬೆರಡು ಲೇಖನ ಸಂಕಲನಗಳು ಸಂಕಲಿತಗೊಂಡು ಪ್ರಕಟಗೊಂಡ ಅವರ ಬರಹಗಳು.

ಹದಿಹರೆಯದಲ್ಲೇ ನಡೆದ ತನ್ನ ತಂದೆಯ ಭೀಕರ ಕೊಲೆಯು ವ್ಯಾಸರನ್ನು ಇನ್ನಿಲ್ಲದೆ ಕಾಡಿತ್ತು. ಅದೇ ಅವರ ಪ್ರತಿಭೆಯು ನಿರ್ದಿಷ್ಟ ಸೂಕ್ಷ್ಮ ಪಥವೊಂದನ್ನು ಅರಸಿ ಸಾಗುವುದಕ್ಕೆ ಕಾರಣವಾಯಿತು. ಮನುಷ್ಯ ಮನಸ್ಸು ಯಾಕೆ ಹೀಗೆ ವರ್ತಿಸುತ್ತದೆ ಎನ್ನುವುದನ್ನು ಯೋಚಿಸುತ್ತಾ, ತನ್ನ ಬರಹಗಳಲ್ಲಿ ಅದರ ಶೋಧನೆಗೆ ತೊಡಗಿದರು. ಬದುಕಿನ ನಿತ್ಯ ಹೋರಾಟದಲ್ಲಿ ಬರುವ ವಿಸಂಗತಿಗಳನ್ನು ಗುರುತಿಸುತ್ತಾ , ಅವಕ್ಕೆ ತಮ್ಮ ಕಥೆಗಳಲ್ಲಿ ಸ್ಪಂದಿಸುತ್ತಾ ಹೋದರು. ಕೆಲಕಾಲ ತನ್ನೂರು ಕಾಸರಗೋಡಿನಿಂದ ‘ಅಜಂತ’ ಎಂಬ ಸಾಹಿತ್ಯ ಮಾಸಪತ್ರಿಕೆಯನ್ನು ಪ್ರಕಟಿಸಿದರು.

ವ್ಯಾಸರು ನಿಧನರಾದ ಎರಡು ವರ್ಷಗಳ ಬಳಿಕ, 24-07-2010ರಂದು ಮಂಗಳೂರಿನಲ್ಲಿ ನಡೆದ ವ್ಯಾಸ ಸಂಸ್ಮರಣೆ ಮತ್ತು ಕೃತಿಬಿಡುಗಡೆ ಸಮಾರಂಭದಲ್ಲಿ ವ್ಯಾಸರ ಕೃತಿಗಳ ಕುರಿತಾಗಿ ಕಿ. ರಂ. ನಾಗರಾಜ ಅವರು ನೀಡಿದ ಉಪನ್ಯಾಸ ಇಲ್ಲಿದೆ .

ಧ್ವನಿ ಮುದ್ರಣ ಕೃಪೆ ಮತ್ತು ಬರಹ ರೂಪ : ವರದರಾಜ ಚಂದ್ರಗಿರಿ


ಎಂ. ವ್ಯಾಸ – ರುದ್ರಕಾಲದ ಲಯಗಳನ್ನು ಹಿಡಿದ ಪ್ರತಿಭೆ

– ಕಿ.ರಂ. ನಾಗರಾಜ

ನಾನು ವ್ಯಾಸರನ್ನು ನೋಡಿದ್ದು ಒಮ್ಮೆ ಮಾತ್ರ. ಅದು ಎಪ್ಪತ್ತರ ದಶಕದಲ್ಲಿ. ಬೆಂಗಳೂರಿನಲ್ಲಿ ಮಿತ್ರರ ಮಧ್ಯೆ ನೋಡಿದ್ದೆ. ಅವರೊಂದಿಗೆ ಯಾವತ್ತೂ ಸಂಪರ್ಕ ಇಟ್ಟುಕೊಂಡಿರಲಿಲ್ಲ. ಅವರು ಬರೆಯುತ್ತಿದ್ದ ಕತೆಗಳನ್ನು ಓದುತ್ತಿದ್ದೆ. `ಕೃತ’ ಸಂಕಲನವು ಹಲವು ವರ್ಷಗಳಿಂದ ನನಗೆ ಪ್ರಿಯವಾದ ಕೃತಿ. ವ್ಯಾಸರ ಕತೆಗಳು ಮೇಲಿಂದ ಮೇಲೆ ಪ್ರಕಟವಾಗುತ್ತಾ ಇದ್ದರೂ ಸಿಕ್ತಾ ಇರಲಿಲ್ಲ. ನಾಡಿನಾದ್ಯಂತ ಅವರ ಕತೆಗಳ ಆಸಕ್ತರು ದೊಡ್ಡ ಪ್ರಮಾಣದಲ್ಲಿ ಇದ್ದಾರೆ. ಇಂಥ ಲೇಖಕರು ಎಲ್ಲಾ ಕಡೆ ಇರ್ತಾರೆ. ಹೆಚ್ಚು ಸಾರ್ವಜನಿಕವಾಗದೆ ತನ್ನಷ್ಟಕ್ಕೇ ತೊಡಗಿಸಿಕೊಳ್ಳುವುದು ಅವರ ಕ್ರಮ. ತಮ್ಮ ಯೋಚನೆಗಳೇನಿದ್ದರೂ ಅವುಗಳನ್ನು ತಮ್ಮ ಕೃತಿಗಳ ಮೂಲಕವೇ ಪ್ರಕಟಪಡಿಸುವವರು.

ಕೃತಿಕಾರ ಸಾರ್ವಜನಿಕವಾಗಿ ಮಾತನಾಡಬೇಕೆಂದೇನೂ ಇಲ್ಲ. ತಾನೇನು ಮಾತನಾಡಿದರೂ ಅದು ಕೃತಿಯ ಮೂಲಕವೇ. ಕೃತಿಗಳ ಮೂಲಕವೇ ತನ್ನ ಅಂತರಂಗವನ್ನೂ ಬಹಿರಂಗವನ್ನೂ ಹೇಳಲು ಸಾಧ್ಯವಿದೆ ಎಂಬ ನಂಬಿಕೆ ಅವರಲ್ಲಿರುತ್ತದೆ. ಇಂಥವರು ಹಿಂದೆಯೂ ಇದ್ದರು. ಸಂಸರಂತಹ ನಾಟಕಕಾರರು ಹೇಳುವುದೆಲ್ಲವನ್ನೂ ನಾಟಕದ ಮೂಲಕವೇ ಹೇಳುತ್ತಿದ್ದರು. ಸೂಕ್ಷ್ಮ ಲೇಖಕ ಆ ರೀತಿಯಾದ ಸಂವಾದದ ನೆಲೆಯೊಂದನ್ನು ನಿರ್ಮಾಣ ಮಾಡುತ್ತಾನೆ. ಅಂತಹ ಲೇಖಕರಲ್ಲಿ ವ್ಯಾಸರು ವಿಶಿಷ್ಟರು. ತನ್ನ ಕೃತಿಗಳ ಸಂವಹನದಿಂದ ಮಾತ್ರ ತಾನು ಗುರುತಿಸಿಕೊಳ್ಳಬೇಕು ಎಂದು ಬಯಸಿದವರು ಅವರು. ವ್ಯಾಸರು ಸಮಕಾಲೀನವಾದ ಸಾಹಿತ್ಯ ಸಂದರ್ಭವನ್ನು ಗಂಭೀರವಾಗಿ ಸ್ವೀಕರಿಸಿದವರೇ ಅಲ್ಲ. ನಾವು ಅಂದುಕೊಳ್ಳುತ್ತಾ ಇರುತ್ತೇವೆ – ಸಮಕಾಲೀನ ಸಾಹಿತ್ಯ ಚಳುವಳಿಗಳಲ್ಲಿ ನಾವು ಬಹಳ ಕ್ರಿಯಾಶೀಲರಾಗಿ ಭಾಗವಹಿಸುತ್ತಾ ಇರಬೇಕು; ಅವುಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಮಾತ್ರ ತನ್ನ ವಿಚಾರವನ್ನು ಹೇಳಲು ಸಾಧ್ಯವಿದೆ ಎಂದು ಭಾವಿಸುತ್ತೇವೆ. ವ್ಯಾಸರ ಬರಹಗಳಲ್ಲಿ ಅವರ ಸಮಕಾಲೀನ ಲೇಖಕರ ಹೆಸರುಗಳೇ ಬರುವುದಿಲ್ಲ. ಎಲ್ಲೋ ಒಂದೆರಡು ಕಡೆ ಭಾರತದ ಅಥವಾ ಐರೋಪ್ಯ ಲೇಖಕರ ಪ್ರಸ್ತಾಪ ಬಂದಿರಬಹುದು. ಆದರೆ ನಮ್ಮ ಕಾಲದ ಪ್ರಮುಖ ಕನ್ನಡ ಲೇಖಕರಾಗಲೀ ಅಷ್ಟೇಕೆ, ದಕ್ಷಿಣ ಕನ್ನಡದ ಲೇಖಕರೂ ಅವರ ಬರಹದಲ್ಲಿ ಕಾಣಿಸೋದಿಲ್ಲ. ಶಿವರಾಮ ಕಾರಂತರಾಗಲೀ ಗೋವಿಂದ ಪೈಗಳಾಗಲೀ ಇಲ್ಲಿ ಬರುವುದಿಲ್ಲ!

ವ್ಯಾಸರು ಸ್ವಕೇಂದ್ರಿತರಾದ ಲೇಖಕ. ನಮ್ಮಲ್ಲಿ ನವೋದಯ, ಪ್ರಗತಿಶೀಲ, ನವ್ಯ ಇನ್ನಿತರ ಸಾಹಿತ್ಯ ಚಳುವಳಿಗಳು ನಡೀತಾ ಇದ್ದರೆ ಅದರ ಪ್ರಭಾವ ವ್ಯಾಸರ ಕತೆಗಳ ಒಳಗೆ ಆಗಿರಬಹುದೇ ಹೊರತು ಹೊರಗಡೆ ಇಲ್ಲ. ದಲಿತ, ಮಹಿಳಾ ಸಾಹಿತ್ಯ ಚಳುವಳಿಗಳ ಬಗ್ಗೆ ಏನಾದರೂ ಹೇಳುವುದಿದ್ದರೂ ಕತೆಗಳ ಪಾತ್ರಗಳ ಮೂಲಕವೇ ಅದನ್ನು ಕಾಣಹುದಾಗಿದೆ. ಹಾಗೆ ಹೇಳುವಾಗ ಅದರೊಳಗೇನಾದರೂ ವ್ಯಾಸರು ತಮ್ಮ ಅಭಿಪ್ರಾಯಗಳನ್ನು ಹುದುಗಿಸಿರಬಹುದು ಎಂದು ನಾವು ಅನುಮಾನಿಸಬೇಕೇ ಹೊರತು ಅದು ಅವರ ಉದ್ದೇಶ ಆಗಿರುವುದಿಲ್ಲ. ಎಲ್ಲ ಸಮಕಾಲೀನ ಸಮಸ್ಯೆಗಳೂ ವ್ಯಾಸರ ಕತೆಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಚರ್ಚೆಗೆ ಒಳಪಡುತ್ತವೆ ನಿಜ. ಆದರೆ ಅದರ ಬೆನ್ನು ಹತ್ತಿ ಹೋಗಿ ವಿಚಾರ ಮಾಡೋ ಉದ್ದೇಶ, ಅಭಿಲಾಷೆ ಅವರಿಗಿಲ್ಲ. ಈ ಕಾರಣಕ್ಕೋಸ್ಕರ ಕನ್ನಡ ಸಾಹಿತ್ಯದಲ್ಲಿ ಇದೊಂದು ವಿಶಿಷ್ಟ ಕ್ರಮ ಅಂತಲೇ ತಿಳಿಯಬೇಕಾಗಿದೆ.

ತಮ್ಮ ಸಾಹಿತ್ಯದ ಬಗ್ಗೆ ಪ್ರೊಜೆಕ್ಟ್ ಮಾಡುವಂತವರೇ ಜಾಸ್ತಿ ಇರುವಾಗ ತನ್ನ ಸಾಹಿತ್ಯದ ಬಗ್ಗೆ ಏನನ್ನೂ ಮಾತನಾಡದೇ ಇದ್ದು, ಸ್ವಂತಕ್ಕೆ ಪೂರ್ತಿಯಾಗಿ ಇಳಿದು ಬಿಡುವ ಲೇಖಕರು ವ್ಯಾಸರು. ತನ್ನ ಕಾಲದ ವಿಸಂಗತಿಗಳನ್ನೂ ವಿಕೃತಿಗಳನ್ನೂ ಅನುಭವಗಳ ಜತೆಗೇ ತಾನು ಕಲ್ಪಿಸಿಕೊಳ್ಳಬಹುದಾದ ಅನುಭವಗಳನ್ನೂ ಕೂಡ ಅತ್ಯಂತ ಸಮರ್ಥವಾಗಿ ಅಭಿವ್ಯಕಿಸಬಲ್ಲ ಸಾಮಥ್ರ್ಯ ಅವರಿಗಿತ್ತು. ಅನುಭವಿಸಿದ್ದನ್ನೂ ಅಲೋಚಿಸಿದ ವಿಚಾರಗಳÀನ್ನೂ ಸಮತೋಲನವಾಗಿ ಕಟ್ಟುವ ಶಕ್ತಿ ಅವರಿಗಿತ್ತು.

ವ್ಯಾಸರು ತಮ್ಮದೇ ಆದ ವಿಶಿಷ್ಟವಾದ ಸಾಹಿತ್ಯ ತತ್ವವನ್ನು ಕತೆಯೊಳಗಡೆಯೇ ಹೇಳಿರುತ್ತಾರೆ. `ಜಡ’ ಎನ್ನುವ ಕತೆಯಲ್ಲಿ ಹೀಗೊಂದು ಸಾಲು ಬರುತ್ತದೆ: “ಕವಿತೆಯ ಹಾಗೆ ಕತೆ ಹೇಳಲಾಗುವುದಿಲ್ಲ. ಕವಿತೆ ಕಟ್ ಆದರೆ ಅಲ್ಲೂ ಒಂದು ಅರ್ಥ ಹೊಳೆಯುತ್ತದೆ. ಕಥೆ ತುಂಡಾದರೆ ಹೋಯಿತು. ಅದು ಮತ್ತೆ ಬರುವುದೇ ಇಲ್ಲ. ಕಥಾಪಾತ್ರಗಳು ಸತ್ತುಹೋಗುತ್ತವೆ. ನಿಜಸಾವಿನಿಂದ ವ್ಯಕ್ತಿಯನ್ನು ಮರೆತಂತೆ ಕಥಾಪಾತ್ರÀದ ಸಾವಿನಿಂದ ಕಥೆ ಮರೆತು ಹೋಗುತ್ತದೆ. ಹಾಗೆ ಸಮಾಧಿಯಾಧ ಕತೆ ಮತ್ತೆ ಬರುವುದೇ ಇಲ್ಲ.” ಕವಿತೆಯಲ್ಲಿ ತಿಳಿದುದರಿಂದ ತಿಳಿಯದೇ ಇರುವುದನ್ನೂ ಮತ್ತು ತಿಳಿಯದೇ ಇರುವುದರಿಂದ ತಿಳಿದುದನ್ನೂ ಆರಿಸಿ ಹೊಂದಾಣಿಕೆ ಮಾಡಿಕೊಳ್ಳಬಹುದು. ಅರ್ಥವಾಗದ ಸಾಲುಗಳಿಂದ ಅರ್ಥವಾಗುವ ಸಾಲುಗಳು ತಿಳಿಯುತ್ತವೆ. ಅರ್ಥವಾಗುವ ಸಾಲುಗಳಿಂದ ಅರ್ಥವಾಗದ ಸಾಲುಗಳು ತಿಳೀತವೆ. ಅದು ಕವಿತೆಯ ಮಾಂತ್ರಿಕತೆ. ಕತೆಯಲ್ಲಿ ಹಾಗಾಗುವುದಿಲ್ಲ. ಒಂದೊಂದು ವಿವರವೂ ಒಂದೊಂದು ಲಯವನ್ನೂ ಸಮಗ್ರತೆಯನ್ನೂ ಕಟ್ಟಿಕೊಳ್ಳಬೇಕಾಗುತ್ತದೆ. ಇಬ್ಬರು ಲೇಖಕರ ಜತೆಯಲ್ಲಿ ನಡೆಯುವ ಸಾಹಿತ್ಯ ಚರ್ಚೆಯನ್ನು ತನ್ನ ಸಾಹಿತ್ಯ ತತ್ವವನ್ನಾಗಿ ಮಾಡುತ್ತಾರೆ ವ್ಯಾಸರು. ಅಂತಹ ಐದಾರು ಕತೆಗಳು ಸಿಗುತ್ತವೆ. ಇದರಲ್ಲಿ ಇಬ್ಬರು ಸಾಹಿತಿಗಳ ಲೋಕದೃಷ್ಟಿಯನ್ನು ¸ಮೀಕ್ಷಿಸುವ ದೃಷ್ಟಿಯೂ ಇದೆ.

ಇನ್ನೊಂದು ಕಡೆ ಹೀಗೆ ಬರುತ್ತದೆ: “ಕತೆ ಬೇಕಾದರೆ ಮುಗಿಸಬಹುದು. ಕತೆ ನಡೆದ ಹಾಗೆ – ನಿಂತಲ್ಲಿ ನಿಲ್ಲಿಸಬಹುದು. ಹೇಳದ ಕತೆಯನ್ನು ಊಹಿಸುವಾತನೇ ನಿಜವಾದ ಓದುಗ. ಹೇಳಿದ ಕತೆಯನ್ನು ಒಂದಿಷ್ಟು ಹೇಳದೇ ಉಳಿಸುವಾತನೇ ನಿಜವಾದ ಕತೆಗಾರ….” ಸಾಹಿತ್ಯದ ಸೂಕ್ಷ್ಮವಾದ ತಾತ್ವಿಕ ಗ್ರಹಿಕೆ ಇದು. ವ್ಯಾಸರು ತನ್ನ ಪರಿಸರದಲ್ಲಿ ಇರುವ ಇತರ ಗ್ರಹಿಕೆಗಳನ್ನು ಉಪೇಕ್ಷಿಸುತ್ತಾರೆ. ತನಗೆ ತನ್ನದೇ ಆದ ಸಾಹಿತ್ಯ ಗ್ರಹಿಕೆಯೊಂದನ್ನು ಕಟ್ಟಿಕೊಳ್ಳಬೇಕೆಂದು ಬಯಸುತ್ತಾರೆ.

ನವ್ಯರಲ್ಲಿ ಕಾಣುವಂತೆ ಓದುಗರಲ್ಲಿ ಆಸಕ್ತಿಯನ್ನೂ ಕುತೂಹಲವನ್ನೂ ಹುಟ್ಟಿಸುವ ಶೈಲಿ ವ್ಯಾಸರದ್ದು. ಅವರ ಕತೆಗಳು ಒಂದು puzzle ಇದ್ದ ಹಾಗೆ. ಒಂದು ಸಮಸ್ಯೆಗೆ ನಮ್ಮನ್ನು ಸಿಕ್ಕಿಹಾಕಿಕೊಳ್ಳುವ ಕ್ರಮ. ನೇರವಾದ ರೀತಿಯಲ್ಲಿ ಹೇಳಿದಂತೆ ತೋರುತ್ತದಾದರೂ ಓದುಗನನ್ನು ಒಂದು ಗೊಂದಲಕ್ಕೆ ಉದ್ದೇಶಪೂರ್ವಕವಾಗಿ ಒಳಪಡಿಸುತ್ತವೆ. ಗೊಂದಲ ಎನ್ನುವುದನ್ನು ನಾನು ಪಾಸಿಟಿವ್ ಅರ್ಥದಲ್ಲೇ ಬಳಸುತ್ತಿದ್ದೇನೆ. ಒಂದು ನಿತ್ಯದ ಜಗತ್ತನ್ನು ಸೃಷ್ಟಿಸುವ ಮೂಲಕವೇ ನಮ್ಮ ಸಮಸ್ಯೆಗಳಲ್ಲಿ ಇಷ್ಟೆಲ್ಲಾ ಸೂಕ್ಷ್ಮ ಸಂಗತಿಗಳಿವೆಯೇ ಎಂಬಂಥ ಆಶ್ವರ್ಯವನ್ನು ಉಂಟುಮಾಡುತ್ತವೆ. ಸರಳವಾದ ದಿನನಿತ್ಯದ ಅನುಭವಗಳಲ್ಲೇ ಒಂದು ಗಾಂಭೀರ್ಯದ ರೌದ್ರ, ವಿಸಂಗತವಾದ (paradox) ಅನೂಹ್ಯ ಜಗತ್ತೊಂದನ್ನು ಅನಾವರಣ ಮಾಡುವುದು – ಇದು ವ್ಯಾಸರ ಕತೆ, ಕವನಗಳನ್ನು ಕುರಿತಂತೆ ಒಟ್ಟಾರೆಯಾಗಿ ಹೇಳಬಹುದಾದ ಮಾತು.

ಮನುಷ್ಯನ ಮನಸ್ಸು ಮೂಲತ: ಎಷ್ಟು ನಿಗೂಢವಾದುದು! ಕಂಡೂ ಕಾಣದಂತೆ ನಡೆಯುವ ಅದೆಷ್ಟು ಸ್ಪೋಟಗಳು ಮನುಷ್ಯ ಮನಸ್ಸಿನಲ್ಲಿ ಆಗುತ್ತವೆ ಎನ್ನುವುದನ್ನು ವ್ಯಾಸರ ಕತೆಗಳು ತೋರಿಸುತ್ತವೆ. ಗಂಡು ಹೆಣ್ಣು ಸಂಬಂಧ, ತಂದೆ-ಮಕ್ಕಳು, ತಾಯಿ-ಮಗ, ವಯಸ್ಸಾದ ಗಂಡು-ಹೆಣ್ಣುಗಳು, ವಿವಾಹಪೂರ್ವ-ವಿವಾಹೇತರ ಸಂಬಂಧಗಳು ಹೀಗೆ ಬೇರೆ ಬೇರೆ ಸಂಗತಿಗಳು ಅಲ್ಲಿವೆ. ಓದುಗನ ಮಾತಂತಿರಲಿ, ಅಲ್ಲಿನ ಪಾತ್ರಗಳೇ ತಮ್ಮ ಮನಸ್ಸು ಮುಂದೆ ಯಾವ ರೀತಿಯಲ್ಲಿ ಸಾಗುವುದು ಎಂದು ಊಹಿಸಲಾರವು! ಓದುಗನೂ ಅಂತಹ ಸ್ಥಿತಿಗೆ ಪಕ್ಕಾಗುತ್ತಾನೆ. ನಿತ್ಯದ ಘಟನೆಗಳಿಗೆ ವಿಸ್ಮಯವನ್ನೂ ದಿಗ್ಭ್ರಮೆಯನ್ನೂ ಕುತೂಹಲವನ್ನೂ ತೋರುವುದರಲ್ಲಿ ನಾವು ಒಂದು ರೀತಿಯಲ್ಲಿ ವಿಫಲರಾಗಿದ್ದೇವೆ. ಅಂತಹ ಅನೇಕ ಸಂಗತಿಗಳ ಕಡೆಗೆ ನಮ್ಮನ್ನು ಎಚ್ಚರಿಸುವ ಕತೆಗಳು ವ್ಯಾಸರಲ್ಲಿವೆ.

ಸಿದ್ಧ ಮಾದರಿಯ ವಿಮರ್ಶೆಗಳನ್ನು ಪಕ್ಕಕ್ಕಿಟ್ಟು ಈ ಕತೆಗಳನ್ನು ನೋಡಿದರೆ ಬೇರೆ ರೀತಿ ಕಾಣಿಸಬಹುದೇನೋ ಎಂದು ನನಗೆ ಅನ್ನಿಸ್ತಾ ಇದೆ.
ಚಲನಚಿತ್ರಗಳಲ್ಲಿ ನಾವು ನೋಡುವ ಪಾತ್ರÀಗಳ ಮೂಲಕ ಹೇಗೆ ಒಂದು view point ದೊರೆಯುವುದೋ ಅದೇ ರೀತಿ ಇಲ್ಲಿಯ ಪಾತ್ರಗಳ ಮೂಲಕ ಬದುಕಿನ ಒಂದೊಂದು ದೃಷ್ಟಿಕೋನ ದೊರೆಯುವುದು. ಈ ಕತೆಗಳನ್ನು ನೋಡಿದಾಗ silent movie ನೋಡಿದ ಹಾಗೆ ಆಗುತ್ತದೆ. ಇಂಥ ಚಿತ್ರಗಳು ಮಾತಿಗಿಂತ ಹೆಚ್ಚಿನದನ್ನು ಹೇಳುತ್ತವೆ. ವ್ಯಾಸರ ಕತೆಗಳ ಮಾತುಗಳು ಚಿತ್ರಗಳಂತೆ ಕಾಣುತ್ತವೆ. ನಾವೆಲ್ಲಾ ಮೂಕಿಚಿತ್ರಗಳನ್ನು ನೋಡುತ್ತಿರುವ ಅನುಭವವನ್ನು ಅವು ಕೊಡುತ್ತವೆ. ಓದುಗ ಕೆಲವೊಮ್ಮೆ ಅವಾಕ್ಕಾಗುತ್ತಾನೆ. ಕೆಲವೊಮ್ಮೆ ಒಂದು ರೀತಿ ದಿಗ್ಭ್ರಾಂತನಾಗುತ್ತಾನೆ. ಒಂದು ಸಮಸ್ಯೆಯ ಕಡೆ ಬೆಳಕು ಚೆಲ್ಲುವ ಕ್ರಮ ಹಾಗಿರುತ್ತದೆ. ಅಂದರೆ, ಒಂದು ಖಚಿತವಾದ ವ್ಯಾಖ್ಯೆ, ವ್ಯಾಖ್ಯಾನಗಳಿಗೆ ಒಳಪಡಿಸಲಾಗದೇ ಇರತಕ್ಕಂತಹ ಪಠ್ಯವನ್ನು ಕತೆಗಾರ ನಿರ್ಮಾಣ ಮಾಡುತ್ತಾ ಇರುತ್ತಾನೆ. ನಮ್ಮಲ್ಲಿ ಕೆಲವು ಕತೆಗಾರರ ಕತೆಗಳಿಗೆ ವ್ಯಾಖ್ಯಾನಗಳು ಸಿದ್ಧವಾಗಿಬಿಟ್ಟಿವೆ. ಉದಾ:- ಮಾಸ್ತಿಯವರ ಕತೆಗಳು. ಅದಕ್ಕೆ ಹೊಸ ವ್ಯಾಖ್ಯಾನ ಕಷ್ಟವಿದೆ. ಆದರೆ ವ್ಯಾಸರದ್ದು ಓದುಗನಿಂದ ವ್ಯಾಖ್ಯಾನ ಸಿದ್ಧಗೊಳ್ಳುವ ಕತೆಗಳು. ಓದುಗನಿಂದ ಓದುಗನಿಗೆ ಈ ವ್ಯಾಖ್ಯಾನ ಭಿನ್ನವಾಗುವುದು. ಓದುಗ ತನ್ನ ಅನುಭವದಿಂದ ಪಠ್ಯವನ್ನು ಕಟ್ಟಿಕೊಳ್ಳುತ್ತಾನೆ. ವಿಮರ್ಶಕ ಕೊಡುವ ವ್ಯಾಖ್ಯಾನಗಳಿಗಿಂತ ಓದುಗ ಕಲ್ಪಿಸಿಕೊಳ್ಳುವ ತನ್ನದೇ ವ್ಯಾಖ್ಯಾನ ಮುಖ್ಯ. ಹೀಗೆ ಓದುಗರ ಮೂಲಕ ವ್ಯಾಖ್ಯಾನ ಕಟ್ಟಿಕೊಳ್ಳುವುದು ವ್ಯಾಸರ ಕತೆಗಳ ವೈಶಿಷ್ಟ್ಯ. ಹಲವು ಆಯಾಮಗಳು ಓದುಗನಿಗೆ ಇಲ್ಲಿ ದೊರೆಯಬಹುದು. ಹೀಗಾಗಿ ಓದುಗ ಕ್ರಿಯಾಶೀಲವಾಗಿ ವ್ಯಾಸರ ಕತೆಗಳಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ.

ಸಾವಿನ intensity-ಯ ಜತೆಗೇ ಒಂದು ಸೃಷ್ಟಿಶೀಲತೆಯ ಗುಣವೂ ವ್ಯಾಸರ ಕತೆಗಳಿಗಿವೆ. ವಿರೋಧಗಳನ್ನೂ ವಿಸಂಗತಿಗಳನ್ನೂ ಜೋಡಿಸುವ ಕಲೆ ವ್ಯಾಸರಿಗೆ ಚೆನ್ನಾಗಿ ಸಿದ್ಧಿಸಿವೆ. ಭಯ ಹುಟ್ಟಿಸುವಂತೆಯೇ ಭಯವನ್ನು ಮೀರುವ ನೆಲೆಗಳನ್ನೂ ವ್ಯಾಸರ ಕಥಾಪಾತ್ರಗಳು ಹೇಳುತ್ತವೆ. ಏಕಪ್ರಕಾರವಾದ ನೇರ ಬರವಣಿಗೆಗೂ ಪರೋಕ್ಷ ಸಂಬಂಧದ ಕಥನಕ್ಕೂ ವ್ಯತ್ಯಾಸವಿದೆ. ವ್ಯಾಸರದ್ದು ಪರೋಕ್ಷ ಸಂಬಂಧದ ಕಥನ.

ನಮ್ಮನ್ನು ನಾವು ಚೆನ್ನಾಗಿ ತಿಳಿದುಕೊಂಡಿದ್ದೇವೆ ಎಂಬ ಭ್ರಮೆ ನಮಗಿರುತ್ತದೆ. ನನಗೆ ಗೊತ್ತಾಗದೇ ಇರುವ `ನಾನು’ ತುಂಬಾ ಇದೆ. ನಮ್ಮ ಪಕ್ಕದಲ್ಲಿ ಓಡಾಡುವವರನ್ನು ನಾವೆಷ್ಟೋ ತಿಳಿದಿದ್ದೇವೆ ಎಂದು ಭಾವಿಸಿದರೂ ನಿಜವಾಗಿ ಅವರ ಬಗ್ಗೆ ನಾವು ಒಂದು ರೇಖೆಯಷ್ಟೂ ತಿಳಿದಿರುವುದಿಲ್ಲ. ಮನುಷ್ಯ ಮನುಷ್ಯನಿಗೆ ನಿಗೂಢವಾಗಿಯೇ ಇರುತ್ತಾನೆ. ಮನುಷ್ಯನ ಈ `ಸುಪ್ತ’ ದ ಬಗ್ಗೆ ಯೋಚಿಸುವಾಗಲೇ ಅದರ ವಿರುದ್ಧವಿರುವ `ಜಾಗೃತಿ’ಯನ್ನೂ ವ್ಯಾಸರು ತೋರಿಸುತ್ತಾರೆ. ಈ ವಿಸಂಗತಿಗಳನ್ನು ಹೆಣೆಯುವ ಕ್ರಮ ಕನ್ನಡದ ಕತೆಗಾರರಲ್ಲಿ ವ್ಯಾಸರದ್ದು ವಿಶಿಷ್ಟ.

ವ್ಯಾಸರ ಕತೆಗಳು ಕೆಲವೊಮ್ಮೆ ಮನೋವಿಶ್ಲೇಷಣಾತ್ಮಕ ಅನ್ನಿಸಬಹುದು. ಮನುಷ್ಯನ ಆದಿಮ ವಾಸನೆಗಳನ್ನು ಬೇರೆ ಬೇರೆ ರೀತಿಯಲ್ಲಿ ಶೋಧಿಸಿದ ಹಾಗೆ ಕಾಣಬಹುದು. ಅವರ ಪ್ರಕಾರ ಎಲ್ಲ ಕಾಲದಲ್ಲೂ ಮನುಷ್ಯನು ತಳಮಳಗಳಲ್ಲೇ ಬದುಕುತ್ತಾನೆ. ನೆಮ್ಮದಿಯಲ್ಲೂ ವಿಷಾದ ತಬ್ಬಿಕೊಂಡಿರುತ್ತದೆ. ಸುಖದೊಂದಿಗೆ ದುಃಖವಿದೆ. ದುಃಖದೊಂದಿಗೆ ಸುಖವೂ ಇದೆ. ನೆಮ್ಮದಿ ನೆಮ್ಮದಿಯಲ್ಲ. ದುಃಖ ದುಃಖವಲ್ಲ. ಸಾವು ಸಾವಲ್ಲ, ಬದುಕು ಬದುಕಲ್ಲ. ಎಲ್ಲವೂ ಒಂದಕ್ಕೊಂದು ಮಿಳಿತಗೊಂಡಿರುವ ಒಂದು ಸೆನ್ಸ್. ಆ ಸೆನ್ಸ್ ಅನ್ನು ಕುರಿತ ಜಿಜ್ಞಾಸೆಯನ್ನು ವ್ಯಾಸರ ಕತೆಗಳು ಮಾಡುತ್ತವೆ.

ನಾವು ಬದುಕೊಂದು ಹೋರಾಟ ಎನ್ನುತ್ತೇವೆ. ಒಬ್ಬ ರೈತ, ಒಬ್ಬ ವಿಜ್ಞಾನಿ, ಒಬ್ಬ ಲೇಖಕ ಎಲ್ಲರೂ ಬದುಕಿನ ಹೋರಾಟದಲ್ಲಿ ಇರುವವರು. ನಾವು ಸುಮ್ಮನೇ ಹೋರಾಟ ಎನ್ನುತ್ತೇವೆ. ವ್ಯಾಸರು ಆ ಹೋರಾಟವು ಬದುಕಿಗೆ ಹೇಗೆ ಸಂಬಂಧಿಸಿದೆ ಎನ್ನುವುದನ್ನು ಆಲೋಚಿಸುತ್ತಾರೆ. ಹಾಗೆ ಆಲೋಚನೆ ಮಾಢುವ ಮನಸ್ಸಿನ ಕ್ಷಣಗಳನ್ನು ಹಿಡಿಯುವುದಕ್ಕೆ ಪ್ರಯತ್ನಿಸುತ್ತಾರೆ. ಆ ಕ್ಷಣ ಎನ್ನುವುದು ಕೆಲವು ಸೆಕುಂಡುಗಳಾಗಿರಬಹುದು, ನಿಮಿಷಗಳಾಗಿರಬಹುದು, ಗಂಟೆಯೋ ದಿನಗಳೋ ಆಗಬಹುದು. ವ್ಯಾಸರದ್ದೊಂದು ಮಾತಿದೆ: “ನನ್ನೆದುರು ಮಹಾ ಸಮುದ್ರ ಇದೆ. ನನ್ನ ಸಮುದ್ರವನ್ನು ನಾನು ಕೆರೆಯನ್ನಾಗಿ ಮಾಡಬೇಕು’’ ಇದೊಂದು ರೂಪಕ. ಬದುಕಿನ ಹೋರಾಟವೇ ಸಮುದ್ರ. ಅದರ ಅಲೆಗಳನ್ನು ನಾವು ಎದುರಿಸಬೇಕಷ್ಟೆ. ಸಂವೇದನೆಗೆ ಒಳಪಡಿಸಲಾಗದ ಜಗತ್ತು ಒಂದಿದೆ. ಅದನ್ನು ಸಂವೇದನೆಗೆ ಒಳಪಡಿಸಿಕೊಳ್ಳುವುದು ಹೇಗೆ ಎಂಬ ಜಿಜ್ಞಾಸೆ. ಈ ತಾತ್ವಿಕತೆಯನ್ನು ಕನ್ನಡ ಸಾಹಿತ್ಯ ಹಿಂದಿನಿಂದಲೂ ಇಟ್ಟುಕೊಂಡಿದೆ. ಇದು ಕನ್ನಡ ಸಂವೇದನೆಯ ಜೀವಾಳ. ಹಲವಾರು ಕತೆಗಳನ್ನು ಬರೆದವರು ಮಾತ್ರ ಮುಖ್ಯರಾಗುವುದಲ್ಲ. ಕೆಲವೇ ಕೆಲವು ಕತೆಗಳನ್ನು ಬರೆದವರೂ ಈ ಸಂವೇದನೆಯನ್ನು ಬೆಳೆಸಿದವರಾಗುತ್ತಾರೆ.

ವ್ಯಾಸರು ಕೇವಲ ಸಂಕೇತನಿಷ್ಠ ಕತೆಗಾರ ಅಲ್ಲ. ಸಂಕೇತದಲ್ಲಿ ತನ್ನದೇ ಆದ ಕಥನ ಮಾರ್ಗವನ್ನು ಬೆಳೆಸಿದವರು. ದುಃಖ ಎನ್ನುವುದು ಇಲ್ಲಿ ಸ್ಥಾಯೀಭಾವ. ಒಂದು ಹೂ, ಒಂದು ಕೀಟಕ್ಕೂ ಸುಖ ದುಃಖಗಳಿರುತ್ತವೆ ಎಂದು ತಿಳಿಯುವುದು. ಇದು ನಿರಂತರವಾದ ಪ್ರಕ್ರಿಯೆ. ವ್ಯಾಸರ ಸಾಹಿತ್ಯದಿಂದ ಉತ್ಪನ್ನವಾಗುವ ತಾತ್ವಿಕತೆ ಇದು.

ಇದಕ್ಕೊಂದು ಮಿತಿ ಇದೆ. ವ್ಯಾಸರ ಕತೆಗಳಲ್ಲಿ ಏರಿಳಿತಗಳು ಕಾಣಿಸುವುದಿಲ್ಲ. ಅವರ rhythm ಒಂದೇ. fluctuations ತೋರುವುದಿಲ್ಲ. ಇದನ್ನು ಅಧ್ಯಯನ ಮಾಡಬೇಕಾಗುತ್ತದೆ. ಸುಮಾರು ನಲುವತ್ತು ವರ್ಷಗಳಿಂದ ಬರೆಯುತ್ತಿದ್ದರೂ ಅವರ ಕತೆಗಳು ಒಂದೇ ವಯೋಮಾನದವರು ಬರೆದ ಕತೆಗಳಂತೆ ಕಾಣುತ್ತದೆ. ಯಾಕೆ ಏರಿಳಿತಗಳಿಲ್ಲ? ತನ್ನಲ್ಲಿಯೇ ಕಟ್ಟಿಕೊಂಡ ಕಲ್ಪನೆಗೆ ತಾನೇ ಮೋಹಿಸಿದ್ದು ಕಾರಣವಿರಬಹುದೇ? ಅದಕ್ಕೆ ಒಗ್ಗಿಬಿಟ್ಟರೇನೋ. ಈ ಏಕತಾನತೆಯೇ ಸಾಹಿತ್ಯ ಲೋಕದಲ್ಲಿ ಅವರ ನಿರ್ಲಕ್ಷಕ್ಕೆ ಕಾರಣವಾದುವೇ? structure ನಲ್ಲೂ ಭಿನ್ನತೆಯಿಲ್ಲ. ಕನ್ನಡ ಸಾಹಿತ್ಯವನ್ನು ನೋಡಿ ವ್ಯಾಸರು ತನ್ನ structure ಅನ್ನು ಬದಲಿಸಬೇಕಾಗಿತ್ತು ಎಂದರ್ಥವಲ್ಲ. ಆದರೆ ಲೇಖಕ ತನಗಾಗಿಯೇ ಹೊಸದೊಂದು structure ಅನ್ನು ಯಾಕೆ ಪ್ರಯೋಗಿಸಲಿಲ್ಲ? ತಾನು ಬೇರೆ ಸಾಹಿತ್ಯವನ್ನು ಹೆಚ್ಚು ಓದಿದವನಲ್ಲ ಎಂದು ವಿನೀತನಾಗಿ ಹೇಳಿಕೊಂಡಿದ್ದಾರೆ ನಿಜ. ಆದರೆ ಅದನ್ನೊಂದು ಮಾಡುತ್ತಿದ್ದರೆ ಬೇರೆಯೇ ಒಂದು ಆಯಾಮ ಅವರ ಕತೆಗಳಿಗೆ ಸಿಗುತ್ತಿತ್ತು.

ವ್ಯಾಸರ ಕಾವ್ಯಕ್ಕೂ ಈ ಮಾತುಗಳು ಅನ್ವಯಿಸುತ್ತವೆ. ವ್ಯಾಸರ ಕಾವ್ಯ ಕೂಡ ಕತೆಯ ಹಾಗೇ ಇದೆಯೇ ಹೊರತು ಕಾವ್ಯಕ್ಕೆ ಇರಬೇಕಾದ ಸೂಕ್ಷ್ಮತೆ ಕಡಿಮೆ ಇದೆ. ಮನುಷ್ಯನ ಮನಸ್ಸಿನಲ್ಲಿ ಸಂಭವಿಸುವ ಹಟಾತ್ ಸ್ಪೋಟ ಮತ್ತು ಅದರಿಂದುಂಟಾಗುವ ಭಯ ಅವರನ್ನು ಕಾಡಿದೆ. ಅವರ ಕವನಗಳಿಗೂ ಇದೇ ವಸ್ತು. ಕತೆಗಳಲ್ಲಿ ಹೇಳಿರುವುದಕ್ಕಿಂತ ಭಿನ್ನವಾದುದೇನನ್ನೂ ಕವಿತೆಗಳಲ್ಲಿ ಹೇಳಿದಂತೆ ಕಾಣುವುದಿಲ್ಲ. ಕುಸಿದ ಮನ್ನಸ್ಸಿನ ಯಾತನೆಯಲ್ಲೇ ಮತ್ತೆ ಪುಟಿದೇಳಬೇಕೆನ್ನುವ ಧೋರಣೆ ಅವರದ್ದು. ದುಃಖದ ಆದಿಯಲ್ಲೇ ಸುಖ – ಸುಖದಿಂದ ಭಯ – ಭಯದಿಂದ ಸಾವು – ಈ ನಿರಂತರ ಚಲನೆಯನ್ನು ತೋರಿಸುವ ರಚನೆಗಳು ಇಲ್ಲಿವೆ.

ತನ್ನನ್ನು ತಾನು ಜಿಜ್ಞಾಸೆಗೆ ಗುರಿಪಡಿಸಿಕೊಳ್ಳಬೇಕು ಎನ್ನುವುದು ಅವರ ನಿಲುವು. ನಮ್ಮನ್ನು ನಾವು ತಿಳಿದುಕೊಂಡಾಗ ಮಾತ್ರ ಸುತ್ತಲಿನ ಜೀವ ಜಗತ್ತನ್ನು ತಿಳಿಯುವುದು ಸಾಧ್ಯ. ಬದುಕೆಂಬ ನಿತ್ಯ ಹೋರಾಟದಲ್ಲಿ ಬರುವ ವಿಸಂಗತಿಗಳನ್ನು ಜೋಡಿಸುವ ವಿಶಿಷ್ಟ ಪ್ರತಿಭೆ ವ್ಯಾಸರದ್ದು. ಅವರು ಕತೆಗಳಲ್ಲಿ ಹೇಳುವುದನ್ನು ನಾವು ನಮ್ಮ ಸಂದರ್ಭದಲ್ಲಿ ಅನುಭವಿಸಿದರೆ, ಸಿದ್ಧಗೊಂಡಿರುವ ವಿಮರ್ಶೆಯ ನೋಟಕ್ಕಿಂತ ಭಿನ್ನವಾದ ಯೋಚನೆಗಳು ಹೊಳೆಯಬಹುದು. ವ್ಯಾಸರ ಹಾಗೆ ರುದ್ರಕಾಲದ ಲಯಗಳನ್ನು ಹಿಡಿದವರು ಅತಿ ವಿರಳ.

ಸಂಗ್ರಹ: ವರದರಾಜ ಚಂದ್ರಗಿರಿ


ಪ್ರತಿಕ್ರಿಯಿಸಿ