ಒಂದಲ್ಲಾ  ಎರಡಲ್ಲಾ : ಹಬ್ಬಿದಾ ಮಲೆ ಮಧ್ಯದೊಳಗೆ ವ್ಯಾಘ್ರ ಬದಲಾಗಿದ್ದಾನೆ

ಇದು ನಿನ್ನೆ ಬಿಡುಗಡೆಯಾದ ಡಿ. ಸತ್ಯಪ್ರಕಾಶ್ ನಿರ್ದೇಶದ ಚಿತ್ರ “ಒಂದಲ್ಲ ಎರಡಲ್ಲ” ಕುರಿತಾದ ಚಿತ್ರವಿಮರ್ಶೆ. ಋತುಮಾನ ಆರೋಗ್ಯಕರ ಚರ್ಚೆಗಳಲ್ಲಿ ನಂಬಿಕೆಯಿಡುತ್ತದೆ. ಸಿನೆಮಾ ನಿಮಗೆ ಈ ವಿಮರ್ಶೆಗೆ ಭಿನ್ನವಾಗಿ ಕಂಡಿದ್ದರೆ ನಿಮ್ಮ ಅಭಿಪ್ರಾಯವನ್ನು ಸವಿಸ್ತಾರವಾಗಿ ಬರೆದು ನಮ್ಮ ಈಮೇಲ್ ಗೆ ಕಳುಹಿಸಿಕೊಡಿ . ಪ್ರಕಟಣೆಗೆ ಯೋಗ್ಯವೆನಿಸಿದರೆ ಅದನ್ನು ಮುಂದೆ ಪ್ರಕಟಿಸಲಾಗುವುದು.

ಒಂದು ಹಳೆಯ ಶಿಶುಗೀತೆ

ಅನಾಮಧೇಯ ರಚಿತ ಗೋವಿನ ಹಾಡು ಬಹುಶಃ ಕರ್ನಾಟಕದ ಹೆಚ್ಚೆಚ್ಚು ಮಕ್ಕಳಿಗೆ ಚಿರಪರಿಚಿತ. ಶಾಲೆಗಳಲ್ಲಿ ಭಾವನಾತ್ಮಕವಾಗಿ ಹೇಳಿಕೊಡುವ ಈ ಹಾಡು ಕರುಣೆಯ, ಪ್ರಾಮಾಣಿಕತೆಯ, ಕ್ಷಮೆಯೆ/ದಯೆಯ ಗುಣಗಳಿಗೆ ಪ್ರತೀಕದಂತೆ ಬಹಳ ಪ್ರಭಾವಿಯಾಗಿ/ಜನಪ್ರಿಯವಾಗಿ ಬೆಳೆದುಬಂದಿದೆ. ಆದರೆ ಒಂದು ದಿನ ಒಬ್ಬ ಮೇಷ್ಟ್ರು ಇಲ್ರಯ್ಯ, ಮಾಂಸಾಹಾರ ಹುಲಿಯ ಸ್ವಭಾವ. ಹುಲಿ ಯಾರಿಗೂ ಕೆಡುಕು ಬಯಸುವ ಪ್ರಾಣಿ ಅಲ್ಲ. ಅದರ ಆಹಾರ ಹುಡುಕಿ ತಿಂದ ಮೇಲೆ ತನ್ನ ಪಾಡಿಗೆ ತಾನು ಅಡವಿಯಲ್ಲಿ ಅವಿತುಕೊಂಡು ಇರತ್ತೆ. ಇಲ್ಲಿ ಹುಲಿಯ ಕ್ರೌರ್ಯ ಏನೂ ಇಲ್ಲ, ಈ ಪದ್ಯದಲ್ಲಿ ದಯಾಪರತೆಯ ಬೋಧನೆಯು ಅಷ್ಟು ಮುಗ್ಧವಾದದ್ದಲ್ಲ ಮತ್ತು ಪ್ರಾಮಾಣಿಕತೆಯಿಂದ ಕೂಡಿದ್ದಲ್ಲ. ಒಂದು ಪಕ್ಷ ಕರುವಿಗಾಗಿ ಹೃದಯ ಮಿಡಿದು ತನ್ನ ಆಹಾರವನ್ನು ಹುಲಿ ನಿರಾಕರಿಸಿದ್ದರೂ ಪ್ರಾಣ ಬಿಡುವ ಅವಶ್ಯಕತೆಯಂತೂ ಖಂಡಿತ ಇರಲಿಲ್ಲ. ಒಂದು ಮೇಲ್ಜಾತಿಯ ರಾಜಕೀಯವನ್ನು ಮುಗ್ಧತೆಯ ಸೋಗಿನಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ಮಾಡಿರುವ ಶಿಶುಗೀತೆ ಇದು. ಹೀಗೊಂದು ಹೊಸ ಹೊಳಹು ಲಭ್ಯವಾದ ದಿನ, ಹಿಂದಿನಿಂದ ಹುಲಿ ಕ್ರೂರಿ ಎಂದು ನಂಬಿಕೊಂಡು ಬಂದಿದ್ದ ಮನಸ್ಸುಗಳಿಗೆ ತಕ್ಷಣ ಆಘಾತವಾಗಬಹುದು. ತಲ್ಲಣಿಸಬಹುದು. ಆದರೆ ಹೀಗೂ ಇರಬಹುದಲ್ಲವೇ ಎಂದು ನಿಂತು ಯೋಚಿಸುವ ಸಂಯಮ-ವ್ಯವಧಾನ ಕಳೆದುಕೊಂಡರೆ ಇಂದು ನಮ್ಮ ಕಣ್ಣ ಮುಂದೆ ಇರುವ ಸಮಾಜ ಸೃಷ್ಟಿ ಆಗುತ್ತದೆ.

ಇಂದಿನ ಬಹುಸಂಖ್ಯಾತರ ಸಾಂಸ್ಕೃತಿಕ ರಾಜಕೀಯ

ಮೂರ್ನಾಲ್ಕು ವರ್ಷಗಳಿಂದ ಗೋರಕ್ಷಣೆ ಸಾರ್ವಜನಿಕ ಸಂವಾದದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ವಿಷಯ. ಆದರೆ ಅದು ನೈಜ ಕಾಳಜಿಯಿಂದ ಹುಟ್ಟುತ್ತಿರುವುದಲ್ಲ ಬದಲಾಗಿ ಗೋವುಗಳನ್ನು ಆಹಾರವಾಗಿ ಭಕ್ಷಿಸುವ ಸಮುದಾಯಗಳ ಮೇಲಿನ ದ್ವೇಷದಿಂದ ಹುಟ್ಟಿಕೊಳ್ಳುತ್ತಿರುವ, ಸಾಂಸ್ಕೃತಿಕ ನಿಯಂತ್ರಣಕ್ಕೆ ಹಾತೊರೆಯುವ, ಗೊಡ್ಡು ಏಕರೂಪ ಸಂಸ್ಕೃತಿಯ ರಾಷ್ಟ್ರೀಯತೆಯಿಂದ ಹುಟ್ಟುತ್ತಿರುವ ರಾಜಕೀಯ ದಬ್ಬಾಳಿಕೆ ಮೇಲುಗೈ ಪಡೆದಿರುವ ಸಂವಾದ ಇದು. ಇದಕ್ಕಾಗಿ ಹತ್ತಾರು ಅಲ್ಪಸಂಖ್ಯಾತ ಸಮುದಾಯದ ಜನರನ್ನು ಬಹುಸಂಖ್ಯಾತರು ಕೊಚ್ಚಿ ಕೊಂದಿದ್ದಾರೆ. ಕೊಂದವರಲ್ಲಿ ಬಹುತೇಕರಿಗೆ ಗೋವುಗಳನ್ನು ಸಾಕುವ ಅದರಿಂದ ಇರುವ ಉಪಯೋಗ ಮತ್ತು ಅವುಗಳು ಒಡ್ಡುವ ಕಷ್ಟ ಕಾರ್ಪಣ್ಯಗಳ ಅರಿವಿಲ್ಲ. ಒಂದು ಪಕ್ಷದ, ಅವರನ್ನು ಬೆಂಬಲಿಸುವ ಉಗ್ರವಾದ ಏಕರೂಪತೆಯ ಸಾಂಸ್ಕೃತಿಕ ರಾಜಕೀಯವನ್ನು ಪ್ರಚುರಿಸುವ ಸಂಘಟನೆ ಮುಂದುಮಾಡಿರುವ ಗೋಮಾತೆ ಎಂಬ ವೈಪರೀತ್ಯಕ್ಕೆ ಬಲಿಯಾಗಿ ಅಡ್ಡದಾರಿ ಹಿಡಿದವರೆ ಹೆಚ್ಚು.

ಈಗ ಈ ಎರಡು ಕಥೆಗಳನ್ನು ಸದ್ಯಕ್ಕೆ ಮರೆತುಬಿಡೋಣ.

ನಿನ್ನೆಯಷ್ಟೇ ಬಿಡುಗಡೆಯಾದ ಫಿಲ್ಮು ‘ಒಂದಲ್ಲಾ  ಎರಡಲ್ಲಾ’

ಒಂದು ಬಡ ಮುಸ್ಲಿಂ ಕುಟುಂಬ. ಆ ಕುಟುಂಬದಲ್ಲಿ ಸಣ್ಣ ಬಾಲಕ ಸಮೀರ. ಅವನಿಗೆ ತಾವು ಸಾಕಿರುವ ಹಸು ಭಾನು ಎಂದರೆ ಪಂಚಪ್ರಾಣ. ವಿಪರೀತ ಹಚ್ಚಿಕೊಂಡಿದ್ದಾನೆ. ಆ ಇಡೀ ಕುಟುಂಬಕ್ಕೂ, ಮತ್ತು ಗೆಳೆಯ ರಾಜಣ್ಣನ ಕುಟುಂಬಕ್ಕೂ ಆ ಹಸುವನ್ನು ಕಂಡರೆ ಬಹಳ ಪ್ರೀತಿ. ಸಮೀರನ ತಾತನಿಗೆ ಮೆಕ್ಕಾಗೆ ಹೋಗುವ ಕನಸು, ಅವನ ಅಕ್ಕ ಫಾತಿಮಾಳಿಗೆ ಉನ್ನತ ಶಿಕ್ಷಣದ ಕನಸು. ಇದಕ್ಕಾಗಿ ಸಮೀರನ ಅಪ್ಪ ಹುಸೇನ ಹಸುವನ್ನು ಅಡವಿಟ್ಟು ಸಾಲ ತೆಗೆದುಕೊಳ್ಳಲು ಮುಂದಾದಾಗ, ಸಮೀರನ ತಾತನು ಮತ್ತು ಅವನ ಅಕ್ಕ ಕೂಡ ಆಕಳ ಮೇಲಿನ ಪ್ರೀತಿಗಾಗಿ ತಮ್ಮ ಆಸೆಯನ್ನು ಮುಂದೂಡುತ್ತಾರೆ. ಒಂದು ದಿನ ಇವರ ಗೆಳೆಯ ರಫೀಕ್ ಆಟೋದಲ್ಲಿ ಹಸುವನ್ನು ಕರೆದುಕೊಂಡು ಹೋಗುವಾಗ, ಆಟೋಗೆ ಅಪಘಾತ ಆಗಿ ಹಸು ಕಳೆದುಹೋಗುತ್ತದೆ. ಇದರಿಂದ ಸಮೀರನಿಗೆ ಆಘಾತವಾಗುತ್ತದೆ. ರಾಜಣ್ಣ, ಹುಸೇನ ಹಸು ಭಾನುವನ್ನು ಹುಡುಕಲು ಮುಂದಾಗುತ್ತಾರೆ. ಈ ನಡುವೆ ರಾಜಣ್ಣನ ಜೊತೆಗೆ ಭಾನುವನ್ನು ಹುಡುಕಲು ತೆರಳುವ ಸಮೀರ ಕಳೆದುಹೋಗುತ್ತಾನೆ. ಸಮೀರನ ಕುಟುಂಬ ಆತಂಕದಲ್ಲಿ ಮುಳುಗಿ ಸಮೀರನನ್ನು ಹುಡುಕಲು ಪ್ರಾರಂಭಿಸುತ್ತದೆ. ಸಮೀರ ಅಲ್ಲಲ್ಲಿ ಕಳೆದುಹೋಗುವುದು, ಮತ್ತೆ ಸಿಗುವ ಭರವಸೆ ಮೂಡಿಸುವುದು, ಈ ನಡುವೆ ಗೋವಿನ ಚಿಹ್ನೆ ಉಳ್ಳ ‘ನೆರೆಹೊರೆ’ ಪಕ್ಷದವರ ಜೊತೆಗೆ ಸಿಕ್ಕಿ ಕರುವಿನ ವೇಷ ತೊಟ್ಟು ಅವರ ರಾಯಭಾರಿ ಆಗುವುದು, ಎದುರಾಳಿ ಪಕ್ಷ ಹುಲಿ ಚಿಹ್ನೆಯುಳ್ಳ ‘ಕಳಕಳಿ ಪಕ್ಷ’ದ ಹುಲಿವೇಷಧಾರಿ ಹುಲಿಯ ಕೈಗೆ ಸಿಕ್ಕಿ ಬೆದರುವುದು ಹೀಗೆ ಮುಂದುವರೆಯುತ್ತಾ ಹೋಗುವ ಕಥೆಯಲ್ಲಿ ಭಾನು ಸಮೀರನಿಗೆ ಸಿಗುವಳೇ?

ಈಗ ಇದನ್ನು ಸದ್ಯಕ್ಕೆ ಪಕ್ಕಕ್ಕಿಟ್ಟು…

ಬಹುಸಂಖ್ಯಾತರ ಸಾಂಸ್ಕೃತಿಕ ರಾಜಕೀಯ ಹಲವು ತೆರನಾದ್ದು. ಅಲ್ಪಸಂಖ್ಯಾತರನ್ನು ಹಳಿಯಲು ಇವರು ಹೂಡುವ ಆಟಗಳು ಒಂದಲ್ಲ ಎರಡಲ್ಲ. ಅಲ್ಪಸಂಖ್ಯಾತರ ಆಚರಣೆಗಳು ರಾಕ್ಷಸ ರೀತಿಯವು, ನಾಡಿಗೆ ಅಪಾಯಕಾರಿಯಾದವು ಎಂಬ ಸುಳ್ಳನ್ನು ಹಬ್ಬಿಸುವುದು ಒಂದು ರೀತಿಯಾದರೆ, ಬಹುಸಂಖ್ಯಾತರ ಆಚರಣೆಗಳನ್ನು ಒಪ್ಪಿಕೊಳ್ಳುವ, ಬಹುಸಂಖ್ಯಾತರ ಸಂಸ್ಕೃತಿಯನ್ನಷ್ಟೇ ಅನುಸರಿಸುವ ಅಲ್ಪಸಂಖ್ಯಾತರನ್ನು ಮಾತ್ರ ಮುನ್ನಲೆಯಲ್ಲಿ ಚರ್ಚಿಸುವುದು, ಅವರನ್ನಷ್ಟೇ ಒಪ್ಪಿಕೊಳ್ಳುವುದು ಇನ್ನೊಂದು ರೀತಿ. ಇಂತಹ ಮಾತು ಆಗಾಗ ಕಿವಿಗೆ ಬಿದ್ದಿರುತ್ತದೆ : ಅಲ್ಯಾರೋ ಒಬ್ಬ ಅನ್ಯಧರ್ಮಿಯ ಸಂಗೀತಗಾರ ಬೆಳಗ್ಗೆ ಬೆಳಗ್ಗೆ ಊದುಗಡ್ಡಿ ಹಚ್ಚಿ ಬಹುಸಂಖ್ಯಾತರ ದೇವರಿಗೆ ಪೂಜೆ ಮಾಡ್ತಾನೆ, ಅದಕ್ಕೆ ಅವನಿಗೆ ಸರಸ್ವತಿ ಒಲಿದಿರುವುದು ಇತ್ಯಾದಿಯಾಗಿ. ಇಲ್ಲಿ ಸಮನ್ವಯದ, ಸೌಹಾರ್ದದ, ಸಾಮರಸ್ಯದ ಒಂದಂಶ ಇರುತ್ತಾದರೂ, ಅದನ್ನು ಮೀರಿದ ಒಂದು ಹೇರಿಕೆಯ ಟೋನ್ ಕೂಡ ಇರತ್ತೆ. ನಮ್ಮ ಆಚರಣೆಗಳಿಗೆ ನೀವು ಹೊಂದಿಕೊಂಡು ನಮ್ಮ ಏಕರೂಪತೆಯ ಸಾಂಸ್ಕೃತಿಕ ರಾಜಕಾರಣಕ್ಕೆ ತಗ್ಗಿ ನಡೆದರಷ್ಟೇ ನಿಮ್ಮನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂಬ ದಬ್ಬಾಳಿಕೆಯ ಭಾವನೆ ಕೂಡ ಅದು.

ಸತ್ಯಪ್ರಕಾಶ್ ನಿರ್ದೇಶನದ ಎರಡನೆ ಸಿನೆಮಾ ‘ಒಂದಲ್ಲಾ ಎರಡಲ್ಲಾ’. ಇದು ಗೋವಿನ ಕಥೆಯ ಮುಂದುವರೆದ ಭಾಗ ಅಂತಲೋ ಅದರಿಂದ ಪ್ರೇರಿತ ಕಥೆ ಅಂತಲೋ ಅವರೇ ಹೇಳಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಓದಿದ ನೆನಪು. ನಾವು ಯಾವುದನ್ನು ಮರುಸೃಷ್ಟಿ ಮಾಡುತ್ತಿದ್ದೇವೆ ಅನ್ನುವುದರಿಂದಲೇ ನಮ್ಮ ರಾಜಕೀಯ ಪ್ರಾರಂಭ ಆಗುತ್ತದೆ. ಸೃಷ್ಟಿಸುವ ಪಾತ್ರಗಳು, ಸಿನೆಮಾ ಪ್ರಚೋದಿಸುವ ಭಾವುಕತೆ, ಪಾತ್ರಗಳು ಮಿಡಿಯುವ ಮಾನವೀಯತೆ ಎಲ್ಲವು ರಾಜಕೀಯವೇ. ಸಿನೆಮಾಗಳಲ್ಲಿ ತೋರಿಸುವ ಬಣ್ಣಗಳು ಕೂಡ.  (ಪ ರಂಜಿತ್ ತಮ್ಮ ಇತ್ತೀಚಿನ ಸಿನೆಮಾ ‘ಕಾಲಾ’ದಲ್ಲಿ ತೋರಿಸುವ ಫ್ಲೆಕ್ಸ್  ಒಂದರಲ್ಲಿ ರಾಜಕೀಯ ನಾಯಕನ ಪಾತ್ರವೊಂದು ನಾವು ದೇಶಭಕ್ತರು ಅಂತಲೋ, ಸ್ವಚ್ಛ ಮಾಡುತ್ತೇವೆ ಅಂತಲೋ ಹೇಳುವಂತೆ ಕಾಣಿಸಿದಾಗ ಅದು ಇಂದಿನ ಯಾವ ನಾಯಕರ ಜೊತೆಗೆ ಹೋಲಿಕೆ ಆಗುತ್ತಿದೆ ಎಂದು ಊಹೆ ಮಾಡಲು ಕಷ್ಟವೇನಲ್ಲ – ಅದು ನಿರ್ದೇಶಕನ ಆಶಯ ಕೂಡ ಆಗಿರುತ್ತದೆ)

ಪ್ರಸಕ್ತ ಸಿನೆಮಾದಲ್ಲಿ ಪ್ರೀತಿಯ ಸಾಕು ಪ್ರಾಣಿ ದನವೇ ಯಾಕಾಯಿತು, ಅದನ್ನು ಪ್ರೀತಿಸುವ ಕುಟುಂಬ ಮುಸ್ಲಿಂ ಧರ್ಮೀಯರಾಗಿಯೇ ಯಾಕೆ ಕಟ್ಟಿಕೊಡಲಾಯಿತು, ಸಮೀರ ಗೊತ್ತಿಲ್ಲದೇ ರಾಯಭಾರಿ ಆಗುವ ಪಕ್ಷ, ಗೋವನ್ನು ಚಿಹ್ನೆಯಾಗಿ ಇಟ್ಟುಕೊಂಡ ಪಕ್ಷವೇ ಯಾಕಾಯಿತು, ಎಂಬ ಪ್ರಶ್ನೆಗಳು ಪ್ರೇಕ್ಷಕರಿಗೆ ಗೋಚರಿಸದೆ ಇರವು. ಇವತ್ತು ಗೋರಕ್ಷಣೆಯ ಹೆಸರಿನಲ್ಲಿ ದಾಳಿಗೆ ಬಲಿಯಾಗುತ್ತಿರುವವರು ಮುಸ್ಲಿಮರು ಮತ್ತು ದಲಿತರು. ಈ ಉಗ್ರದಾಳಿಕೋರರು ಸಿನೆಮಾದಲ್ಲಿ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ ಏಕೆ? ಅವರ ವಿರುದ್ಧ ಏನಾದರೂ ಸ್ಟೇಟ್ಮೆಂಟ್ ಇದೆಯೇ? ಇಂತಹ ಪ್ರಶ್ನೆಗಳನ್ನು ಕೇಳಿಕೊಂದರೆ ಅದು ಸಿನೆಮಾವನ್ನು ಅತಿಯಾಗಿ ಓದುವುದು ಅನ್ನಿಸಿಕೊಳ್ಳುವುದಿಲ್ಲ, ಬದಲಾಗಿ ನಮ್ಮ ಪರಿಸರಲ್ಲಿ ನಾವು ಕಂಡುಕೊಂಡಿರುವ ಜೀವನದೃಷ್ಟಿಯನ್ನು ಪ್ರಶ್ನಿಸಿಕೊಂಡು, ಅದನ್ನು ಒರೆಗೆ ಹಚ್ಚಿದಂತೆ ಅಷ್ಟೇ.

ಇಲ್ಲಿ ನಿರ್ದೇಶಕ ತಮ್ಮ ಸೀಮಿತ ಚೌಕಟ್ಟಿನಲ್ಲಿ ತಾವು ಕಟ್ಟಿರುವ ಪಾತ್ರಗಳ ಮಾನವೀಯತೆಯನ್ನು ತೋರಿಸಲು ಪ್ರಯತ್ನ ಮಾಡಿಲ್ಲ ಎಂದಲ್ಲ. ಆದರೆ ಅದು ಹುಟ್ಟುವ ಸಂದರ್ಭ ಎಂತಾದ್ದು? ಸಾಲ ವಸೂಲಿ ಮಾಡಲು ಸಮಿರನನ್ನು ಸ್ವಲ್ಪ ಕಾಲ ಅಪಹರಿಸಿದ್ದ ಲೇವಾದೇವಿ ವ್ಯವಹಾರ ಮಾಡುವ ಕಠಿಣ ಮನಸ್ಸಿನ ವ್ಯಕ್ತಿಗೂ ಸ್ವಲ್ಪ ಮನಸ್ಸು ಕರಗುತ್ತದೆ. ಮೌಲ್ವಿ ಎಂದು ಕರೆಸಿಕೊಂಡರೂ, ಸಮೀರನ ಧರ್ಮ ತಿಳಿದಾಗ್ಯು ಪೂಜಾರಿ ಪೂಜೆ ಮಾಡಿಕೊಟ್ಟು ಭಾನು ಬೇಗ ಸಿಗಲಿ ಎಂದು ಹರಸುತ್ತಾನೆ (ಹಸುವನ್ನು ಪ್ರೀತಿಯಿಂದ ಕಾಣುವ ಹುಡುಕುವ ಮುಸ್ಲಿಂ ಬಾಲಕನನ್ನು ಕಂಡು ಪೂಜಾರಿಯ ಅಂತಃಕರಣ ಕರಗಿ ಹೋಯಿತೇ?). ಇನ್ನು ದನದ ಚಿಹ್ನೆಯ ‘ನೆರೆಹೊರೆ’ ಪಕ್ಷದ ವಿರೋಧಿ ‘ಕಳಕಳಿ’ ಪಕ್ಷದ ಹುಲಿಯ ಮನಸ್ಸು ಕೂಡ ಕರಗಿ ಕರುವಿನ ವೇಷ ತೊಟ್ಟ ಸಮೀರನ ರಕ್ಷಣೆಗೆ ನಿಲ್ಲುತ್ತಾನೆ (ಮದುವೆಯಾಗಿ ಸುಮಾರು ವರ್ಷ ಮಕ್ಕಳಾಗದೆ ಇರುವ ಹುಲಿಯನ್ನು ಮಗುವಿನ ಸಾಮಿಪ್ಯ/ಒಡನಾಟ ಮೃದುವಾಗಿಸಿತೆ?). ಸಮೀರನ ಕರುವಿನ ವೇಷ ಕಂಡು ಅಲ್ಯಾರೋ ಒಬ್ಬ ರಸ್ತೆ ಬದಿಯ ಹೋಟೆಲ್ ನವನು ಕೊಟ್ಟ ಊಟಕ್ಕೆ ದುಡ್ಡನ್ನು ಕೂಡ ತೆಗೆದುಕೊಳ್ಳುವುದಿಲ್ಲ. ಒಟ್ಟಿನಲ್ಲಿ ಇವರೆಲ್ಲರ ಮಾನವೀಯತೆ ಹುಟ್ಟುತ್ತಿರುವುದು ಸಮೀರ ತಮ್ಮ ನಂಬಿಕೆಯ ಗೋಮಾತೆಯನ್ನು ಪ್ರತಿನಿಧಿಸುತ್ತಿದ್ದಾನೆ ಎಂಬುದರಿಂದಲೋ ಅಥವಾ ತಮ್ಮ ಪಾಪಪ್ರಜ್ಞೆಯಿಂದಲೋ ಅಥವಾ ತನ್ನ ಜೀವನದ ಅಭಾವವನ್ನು ಸಮೀರ ತುಂಬುತ್ತಿರುವುದರಿಂದಲೋ! ಇವ್ಯಾವುದನ್ನು ಹೇಳದೆ ಪಾತ್ರಗಳಲ್ಲಿ ಇಂತಹ ಬದಲಾವಣೆಯನ್ನು ನಿರ್ದೇಶಕ ಕಟ್ಟಿಕೊಡುತ್ತಾನೆ.

ಇನ್ನು ರಫೀಕನಿಗೆ ಅಪಘಾತ ಯಾಕಾಯಿತು ಎಂಬುದರ ಬಗ್ಗೆ ಯಾರಿಗೂ ದೊಡ್ಡ ಮಟ್ಟದ ಕಾಳಜಿ ಇಲ್ಲ. ಇದು ಸಿನೆಮಾದ ವಸ್ತು ಕೂಡ ಅಲ್ಲ. ಸಿನೆಮಾ ಆಗಲಿ ಇನ್ಯಾವುದೇ ಕಲಾಕೃತಿ ಆಗಲಿ ಯಾವುದನ್ನು ಬಿಟ್ಟಿದ್ದಾರೆ ಎಂಬುದು ಕೂಡ ಮುಖ್ಯವೇ. ಅದು ಕೂಡ ಸಿನೆಮಾದ ಒಟ್ಟಾರೆ ಆಶಯವನ್ನು ಪ್ರತಿಧ್ವನಿಸುತ್ತಿರುತ್ತದೆ. ರಫೀಕ ಅಪಘಾತ ಆಗಿ ಸಾವು ಬದುಕಿನ ನಡುವೆ ಬಿದ್ದಿದ್ದಾನೆ. ಪೊಲೀಸರಿಗೆ ಅಪಘಾತ ಯಾಕಾಯಿತು ಗೊತ್ತಿಲ್ಲ. ಬಹುಷಃ ಇಂದಿನ ದಿನಗಳಲ್ಲಿ ನಡೆಯುವಂತೆ ಗೋವುಗಳನ್ನು ಸಾಗಿಸುವವರನ್ನು ಬಹುಧರ್ಮಿಯರು ಚಚ್ಚುವಂತೆ ಚಚ್ಚಿರಲೂಬಹುದು. ಅದು ಅಪಘಾತ ಎಂಬಂತೆ ಬಿಂಬಿಸಿಯೂ ಇರಬಹುದು. ಒಟ್ಟಿನಲ್ಲಿ ಅವನಿಗೂ ಲೇವಾದೇವಿಯವನು ರಕ್ತ ಕೊಡುವ ಮೂಲಕ ಅದಕ್ಕೊಂದು ಅಂತ್ಯ ಕಾಣಿಸುತ್ತಾರೆ.

ಇನ್ನು ರಾಜಕೀಯ ಹೊರತುಪಡಿಸಿ ಸಾಕುಪ್ರಾಣಿಯ ಬಗೆಗಿನ ಪ್ರೀತಿಯ ಕಥೆ, ಕಳೆದುಹೋದ ತನ್ನ ಪ್ರೀತಿಯ ಪ್ರಾಣಿಯನ್ನು ಹುಡುಕುವ ಕಥೆ ಎಂದರೂ ಸಿನೆಮಾ ಅಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿಲ್ಲ. ಹುಸೇನನಿಗೆ ಮದುವೆಯಲ್ಲಿ (?) ಕೊಟ್ಟ ಹಸು ಮುದಿಯಾದಂತೆ ಏನೂ ಕಾಣುವುದಿಲ್ಲ. ಇರಲಿ. ಪ್ರತಿ ದೃಶ್ಯವು ಸಿಕ್ಕಾಪಟ್ಟೆ ವಾಚ್ಯವಾಗಿದ್ದು ಯಾರ ನಡುವಿನ ಭಾವನಾತ್ಮಕ ಸಂಬಂಧವನ್ನು ದೃಶ್ಯಗಳ ಮೂಲಕ ಗಟ್ಟಿಯಾಗಿ ಬೆಳೆಸಿಲ್ಲ. ಮಾತಿನ ಮೂಲಕವೇ ಎಲ್ಲವನ್ನು ಮುಗಿಸುವುದರ ಹೊರತು, ಪ್ರಿಯ ಹಸುವಿಗೆ ಹುಲ್ಲು ತಂದು ಹಾಕುವ ದೃಶ್ಯವನ್ನೂ, ಅದಕ್ಕೆ ಮೈತೊಳೆಯುವ ದೃಶ್ಯವನ್ನೂ ಕಟ್ಟಿಕೊಟ್ಟಿದ್ದರೆ ಅವರ ಸಂಬಂಧದ ಗಾಢತೆಯನ್ನು ಮೂಡಿಸಬಹುದಿತ್ತು. ಸಮೀರ ಆಗಾಗ ತಪ್ಪಿಸಿಕೊಳ್ಳುವ ಇನ್ಯಾರೋ ಕೈಗೋ ಸಿಗುವ ದೃಶ್ಯಗಳು ಮತ್ತು ಆ ಹೆಣಿಕೆ ತುರುಕಿದಂತಿದ್ದು ನಂಬಿಕೆಯನ್ನು ಮೂಡಿಸುವುದಿಲ್ಲ. ಈ ಕಳೆದುಹೋಗುವ-ಹುಡುಕುವ ದೃಶ್ಯಗಳು ಸಿಕ್ಕಾಪಟ್ಟೆ ಪುನರಾವರ್ತಿತ ಅನ್ನಿಸಿ ಕೆಲವು ಬಾರಿ ಬೇಸರ ಮೂಡಿಸುತ್ತದೆ.

ನಮ್ಮ ಸಂಸ್ಕೃತಿಯನ್ನು ಒಪ್ಪುವರರ ಜೊತೆಗೆ ನಾವೆಷ್ಟು ಪ್ರೀತಿಯಿಂದ ನಡೆದುಕೊಳ್ಳುತ್ತೇವೆ, ಅವರ ಸಮಸ್ಯೆಗಳಿಗೆ ನಾವು ಹೇಗೆ ಮಿಡಿಯುತ್ತೇವೆ ಎಂಬುದನ್ನು ಬಹುಶಃ ಸುಲಭವಾಗಿ ಕಥೆ ಕಟ್ಟಿ ಸಿನೆಮಾ ಹೆಣೆಯಬಹದು. ಬಹುಸಂಸ್ಕೃತಿಗಳ ನಮ್ಮ ನಾಡಿನಲ್ಲಿ ನಮಗೆ ಅನ್ಯ ಎನಿಸುವ ಸಂಸ್ಕೃತಿಯಲ್ಲಿ ಬದುಕುವುವರ ಬಗ್ಗೆ ನಾವೆಷ್ಟು ಕಾಳಜಿ ಉಳ್ಳವರಾಗಿದ್ದೇವೆ, ಅಂತವರ ಮೇಲೆ ಸಾಂಸ್ಕೃತಿಕ ದಬ್ಬಾಳಿಕೆಯಿಂದ, ಏಕರೂಪ ಸಾಂಸ್ಕೃತಿಕ ರಾಷ್ಟ್ರೀಯತೆಯ ರಾಜಕೀಯಕ್ಕೆ ಹಲ್ಲೆಗೊಳಗಾದಾಗ ನಾವು, ನಮ್ಮ ಸುತ್ತಮುತ್ತಲಿನ ಗೆಳೆಯರು, ನಮ್ಮ ಆಪ್ತರು ಹಲ್ಲೆಗೊಳಗಾದವರ ಜೊತೆಗೆ ನಿಲ್ಲುತ್ತೇವೆಯೇ? ಹಲ್ಲೆ ಮಾಡಿದವರನ್ನು ವಿರೋಧಿಸುತ್ತೆವೆಯೇ? ಇಂತಹ ಮಾನವೀಯತೆ ನಮ್ಮಲ್ಲಿ ಉಳಿದಿದೆಯೇ ಎಂದು ಪ್ರಶ್ನಿಸಿಕೊಳ್ಳುವುದು ಮತ್ತು ಅದರ ಸುತ್ತ ಕಥೆ ಕಟ್ಟಿ ದೃಶ್ಯಗಳನ್ನು ಕಟ್ಟಿ ಸಿನೆಮಾ ಮಾಡುವುದು ದೊಡ್ಡ ಕೆಲಸ ಆದೀತು. ಅಂತಹುದರ ನಿರೀಕ್ಷೆಯಲ್ಲಿ ಅಂತಹ ಸಿನೆಮಾಗಳನ್ನು ಸಂಭ್ರಮಿಸುವುದಕ್ಕೆ ಕಾಯೋಣ.

6 comments to “ಒಂದಲ್ಲಾ  ಎರಡಲ್ಲಾ : ಹಬ್ಬಿದಾ ಮಲೆ ಮಧ್ಯದೊಳಗೆ ವ್ಯಾಘ್ರ ಬದಲಾಗಿದ್ದಾನೆ”
  1. ಸಿನಿಮಾ ನೋಡಿಲ್ಲ. ಮೊನ್ನೆ ಇಂದ ಇದರ ಚರ್ಚೆ ಗಮನಿಸುತ್ತಿರುವೆ. ಗುರು ಅಟೋ ಆಕ್ಸಿಡೆಂಟ್ ಬಗ್ಗೆ ಎತ್ತಿರುವ ಪ್ರಶ್ನೆ ಮುಖ್ಯ ಅನಿಸುತ್ತದೆ. ಮಿಕ್ಕ ವಿವರಣೆ ನೋಡಿದರೆ ಸಿನಿಮಾ ನೋಡಬಹುದು ಅನ್ನಿಸುತ್ತದೆ

  2. Thanks for your insightful review which brings a new perspective about the movie. I hadn’t thought of this angle when I watched the movie.

    At the outset I think we can be happy that a movie of this kind, different from the run of the mill movies that Sandalwood churns out has been made, released and is running successfully (I believe). At the same time your perspective raises an important question does the movie cheers a kind of majoritarianism that accepts a minority as long as their practices are in line with beliefs, and value systems of majority. So I am in two minds about this movie: whether to rejoice that a movie like this bring a whiff of fresh air to Kannada movie industry or to bemoan this offbeat movies also seems? to be inline with raising majoritarian intolerance that has become dominant over the years.

    On a related, I think there are a few more plus points about the movie which I think worth mentioning:

    * Brilliant acting by the lead child actor
    * Subtle way that it emphasises the primacy of mother tongue (the
    birthday cake scene)

    Given that both movies by Satyaprakash and team were off the beaten path and have initiated healthy dialogues I hope they continue to make more films.

  3. Horrible ideologically fed review. He talks about majoritarian politics and hatred towards Muslims. But the review is nothing but hatred against so called hindu community.

    First of all the reviewer lacks understanding cinema as a craft. He has filled the review with his opinions and assumptions

  4. ನಾನು ನೋಡಿದ ಚಿತ್ರ: ಒಂದಲ್ಲ ಎರಡಲ್ಲ (೨೦೧೮) ಕನ್ನಡ- ನಿರ್ದೇಶನ: D. ಸತ್ಯ ಪ್ರಕಾಶ್
    ಇದೊಂದು ಆಕಸ್ಮಿಕಗಳ ಕೊಲಾಜ್. ಈಚಿತ್ರವನ್ನು ಬೇರೆ ಬೇರೆ ಹಂತಗಳಲ್ಲಿ ವಿಭಿನ್ನವಾಗಿ ವಿಶ್ಲೇಷಿಸಬಹುದು.
    ಹಂತ ಒಂದು: ಒಬ್ಬ ಚಿಕ್ಕ ಹುಡುಗ ತನ್ನ ನೆಚ್ಚಿನ ಹಸುವೊಂದನ್ನು ಹುಡುಕಿಕೊಂಡು ಹೋಗಿ ಒಬ್ಬರ ಕೈಯಿಂದ ಒಬ್ಬರಿಗೆ ಸಾಗುತ್ತಾ ತಾನೇ ಕಳೆದುಹೋಗುವ ಕಥೆ.
    ಹಂತ ಎರಡು: ಜೀವನ ಎಂಥ ಆಕಸ್ಮಿಕಗಳ ಗೂಡು, ಎಂಥ ವೈರುಧ್ಯಗಳ ತವರು. ಯಾವುದೂ ನಾವಂದುಕೊಂಡಂತೆ ನಡೆಯುವುದಿಲ್ಲ. ಕಾಲ ನಮ್ಮನ್ನು ಎತ್ತೆತ್ತಲೋ ಕರೆದೊಯ್ಯುತ್ತದೆ.
    ಹಂತ ಮೂರು: ಭೂಮಿಯ ಮೇಲಿನ ಈ ಬದುಕು ಪರಿಪೂರ್ಣವಾಗಿದೆ. ಇಲ್ಲಿ ಎಲ್ಲರೂ ಏನನ್ನು ಒಂದನ್ನು ಕಳೆದುಕೊಂಡು ಅದು ವಾಪಸ್ಸು ಸಿಗುವ ಧಾವಂತದ ನಿರೀಕ್ಷೆಯಲ್ಲಿದ್ದಾರೆ. ಆದರೆ ಅದು ಎಲ್ಲೋ ಇಲ್ಲ ಅದು ನಮ್ಮಲ್ಲೇ ಇದೆ ನಮ್ಮ ಸುತ್ತಲೇ ಇದೆ.
    ನಿರ್ದೇಶಕರು ಬಿಗಿಹಿಡಿತ ದೊಂದಿಗೆ ಕಥೆಯನ್ನು ಸೊಗಸಾಗಿ ಕುತೂಹಲಭರಿತವಾಗಿ ಕೊಂಡೊಯ್ಯುತ್ತಾರೆ. ಈ ಚಿತ್ರದ ಪಾತ್ರಗಳಲ್ಲಿ ಮುಖ್ಯವಾಗಿ ಹಿಂದೂಗಳು ಮತ್ತು ಮುಸ್ಲಿಮರು ಸದಾ ಜೊತೆಜೊತೆಗೆ ಇರುತ್ತಾರೆ. ಒಬ್ಬ ಕ್ರಿಶ್ಚಿಯನ್ ಅಜ್ಜ ಕೂಡ ಇದ್ದಾರೆ. ಹಾಗಿದ್ದರೂ ಇಲ್ಲಿನ ಯಾವ ಪಾತ್ರಗಳೂ ಯಾರನ್ನು ಧರ್ಮಾಧಾರಿತವಾಗಿ ನೋಡುವುದಿಲ್ಲ ಎನ್ನುವುದು ಒಂದು ಅಚ್ಚರಿ ಮತ್ತು ಒಂದು ಆದರ್ಶ. ಆ ರೀತಿಯ ಸಂದರ್ಭಗಳನ್ನು ಊಹಿಸಿಕೊಳ್ಳಲು ಕೂಡಾ ಅಸಾಧ್ಯ. ಆ ಬಗ್ಗೆ ಕಥೆಗಾರ ತನ್ನ ನಿಲುವನ್ನೂ ಹೇಳಿಕೊಳ್ಳುತ್ತಾನೆ. :-
    “ಆ ಮಗು ಮುದ್ದಾಗಿದೆ. ಅದರ ಜೊತೆ ನಾನು ಆಟ ಆಡ್ತೀನಿ.”
    “ಹೇ ಮಂಗ, ಅದು ನಮ್ಮ ಜನ ಅಲ್ಲ”
    “ಅದಿನ್ನೂ ಜನ ಎಲ್ಲಿ ಆಗೈತೆ. ಅದು ಮಗಾ ಅಲ್ವಾ?.”
    ಹಂತ ನಾಲ್ಕು: ಈ ಹಂತದಲ್ಲಿ ಸಾಂಕೇತಿಕವಾಗಿ ಇಡೀ ಚಿತ್ರವನ್ನು ನೋಡಬಹುದು. ಹಸು – ಸಮೀರಾ – ನೆರೆಹೊರೆ( ನೆರೆಯವರಿಗೆ ಹೊರೆ) ಪಕ್ಷ – ಹಸು ಕರು ಗುರುತು – ಕಳಕಳಿ ( ಕಳ್ಕೊಳ್ಳಿ?)- ಹುಲಿ ಗುರುತು – ಒಂದೇ ಗುಂಪಿನ ರಕ್ತ- ಬ್ಯಾನರುಗಳು ಕೊಳೆಯಲ್ಲಿ ಕೊಚ್ಚಿ ಹೋದಾಗ ಪ್ರೀತಿಯ ಹಸು ಹುಲಿ ಜೊತೆಜೊತೆಗೆ ಎದ್ದು ನಿಲ್ಲುವುದು… ಎಲ್ಲವೂ ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ತೆರೆಗೆ ತಂದಂತಿವೆ.
    ಕಥೆಯ ಓಟಕ್ಕೆ ಚುರುಕುತನ ಸಹಕಾರಿಯಾಗಿದೆ. ಹಾಡುಗಳು ಅರ್ಥಪೂರ್ಣವಾಗಿವೆ. ವಾಸುಕಿ ವೈಭವ್ ತಮ್ಮ ಎಂದಿನ ಲಾಲಿ ಹಾಡಿನ ದಾಟಿಯಲ್ಲಿ ಹಾಡುಗಳನ್ನು ಸಂಯೋಜಿಸಿದ್ದಾರೆ. ನಿರ್ದೇಶಕ ಸತ್ಯಪ್ರಕಾಶ್ ಅವರು ತಮ್ಮ ಹಿಂದಿನ ಚಿತ್ರ ‘ರಾಮ ರಾಮ ರೇ…’ ರೀತಿಯಲ್ಲಿ ರಾಚುವ ವೈರುಧ್ಯಗಳನ್ನು ಮತ್ತೆ ಮತ್ತೆ ಎದುರಾಗಿಸಿದ್ದಾರೆ. ಆದರೆ ಪಾತ್ರಗಳ ಸಂಖ್ಯೆ ಕೊಂಚ ಕಡಮೆ ಆಗಿದ್ದರೆ ಕಥೆ ಇನ್ನಷ್ಟು ಮನಸೂರೆಗೊಳ್ಳುವಂತೆ ಆಗುತ್ತಿತ್ತು.
    ಸಮೀರಾ ಯಾರ ಯಾರ ಜೊತೆ ಸೇರಿ ತನ್ನ ಹಸು ಸಿಗಬಹುದೆಂದು ಹುಡುಕುತ್ತಾನೆ ಎಂದು ಸುಮ್ಮನೆ ನೋಡಿ: ರಾಜಣ್ಣ, ಅರ್ಚಕ, ಸುರೇಶ, ಸಾಲ ನೀಡುವ ವ್ಯಕ್ತಿ, ಹುಲಿ, ಡೇವಿಡ್, ಹುಲಿಯನ ಹೆಂಡತಿ, ಅಲೋಕ್, ಕೊನೆಗೆ ಮತ್ತೊಮ್ಮೆ ಹುಲಿ… ಇದೊಂದು ದೊಡ್ಡ ಪಯಣ…
    -ನವೀನ್ ಹಳೆಮನೆ

ಪ್ರತಿಕ್ರಿಯಿಸಿ