ಒಂದಲ್ಲಾ… ಎರಡಲ್ಲಾ… ನೂರಾರು ಪಾತ್ರ…

ಕಳೆದ ವಾರ  ರಾಮ ರಾಮ ರೇ ನಿರ್ದೇಶಕ ಸತ್ಯಪ್ರಕಾಶ್ ಅವರ `ಒಂದಲ್ಲ ಎರಡಲ್ಲ’ ಚಿತ್ರ ಬಿಡುಗಡೆಯಾಗಿದೆ. ಎಲ್ಲ ಕಡೆಯಿಂದಲೂ ಎಲ್ಲ ಬಗೆಯ ಪ್ರತಿಕ್ರಿಯೆ ದೊರಕುತ್ತಿದೆ. ವಿಮರ್ಶಕರಾದ ಗುರುಪ್ರಸಾದ್ ಅವರು ಋತುಮಾನಕ್ಕೆ ಬರೆದಿರುವ ಲೇಖನಕ್ಕೆ ವಿವೇಕ್ ಪ್ರಕಾಶ್ ಪ್ರತಿಕ್ರಿಯೆ.

ಇಲ್ಲಿ ಯಾರು ಸರಿ ಯಾರು ತಪ್ಪು ಎಂಬ ಪ್ರಶ್ನೆ ಅಲ್ಲ. ಒಂದು ಪ್ರತಿಕ್ರಿಯೆ ಬಂದಿದೆ ಇದು ಅದಕ್ಕೊಂದು ಉತ್ತರ ಅಷ್ಟೇ. ಯಾಕೆಂದರೆ ಕಲೆ ತುಂಬ ವ್ಯಕ್ತಿನಿಷ್ಟ ವಿಷಯ. ನನಗನ್ನಿಸಿರುವುದು ನಿಮಗೆ ಸರಿಯಲ್ಲ ಎಂದೆನಿಸಬಹುದು. ಇಲ್ಲಿ ಯಾವುದಕ್ಕೂ ನಿಯಮಗಳಿಲ್ಲ. ಬಹುಶಃ ಈ ಕಾರಣದಿಂದಲೇ ಕಲೆ ಸಾವಿರಾರು ವರ್ಷಗಳಿಂದ ಜೀವಂತವಾಗಿದೆ. ಒಂದು ಸಿನಿಮಾದ ವಿಮರ್ಶೆಯ ಬಗೆಗೆ ಯಾಕಿಷ್ಟು ಹಗ್ಗ ಜಗ್ಗಾಟ ಎಂದು ಕೇಳಿದರೆ ಯಾವುದೇ ನಿರ್ದಿಷ್ಟ ಉತ್ತರವಿಲ್ಲ.

ಮುಸ್ಲಿಂ ಕಟುಂಬದ ಸಮೀರ ಬಹಳ ಹಚ್ಚಿಕೊಂಡಿರುವುದು ತನ್ನ ಹಸುವಿನ ಜತೆಗೆ. ಈ ಕುಟುಂಬಕ್ಕೆ ರಾಜಣ್ಣನ ಕುಟುಂಬ ತೀರಾ ಹತ್ತಿರದವರು. ಎಲ್ಲ ಕಷ್ಟಗಳನ್ನು ಹಂಚಿಕೊಂಡು ಬಾಳುತ್ತಿರುವವರು. ಸಮೀರನ ಕುಟುಂಬದಲ್ಲಿ ಕಷ್ಟ ಹಾಗು ಬಡತನ ಹೇರಳವಾಗಿದೆ. ಇದರಿಂದ ಸಮೀರನ ಹಸು ಬಾನುವನ್ನು ಮಾರುವ ಪ್ರಸ್ತಾಪನೆಯನ್ನು ಸಮೀರನ ತಂದೆ ಇಟ್ಟಾಗ ಬೇಡ ಎಂದು ಎಲ್ಲರೂ ಹೇಳುತ್ತಾರೆ. ಹೀಗಿರುವಾಗ ಕಣ್ಣಾ ಮುಚ್ಚಾಲೆ ಆಡುವಾಗ ಸಮೀರ ಹಾಗು ಬಾನು ಬೇರೆಯಾಗುತ್ತಾರೆ. ಬಾನು ಕಳೆದುಹೋಗುತ್ತಾಳೆ. ಸಮೀರ ಬಾನುವನ್ನು ಹುಡುಕಿಕೊಂಡು ಹೋಗುತ್ತಾನೆ. ಬಾನು ಸಮೀರನಿಗೆ ಸಿಗುತ್ತಾಳ ಇಲ್ಲವಾ ಎಂಬುದೇ ಕತೆ. ಜೊತೆಗೆ ಸಮೀರ ಈ ಹುಡುಕುವ ಪ್ರಕ್ರಿಯೆಯಲ್ಲಿ ಅವನಿಗೇ ಅರಿವಿಲ್ಲದೇ ಒಂದು ನಿರೂಪಣೆಯ ಭಾಗವಾಗುತ್ತಾನೆ.

ಗುರುಪ್ರಸಾದ್ ಅವರು ಬರೆದಿರುವ ಲೇಖನದ ಕೊಂಡಿ ಇಲ್ಲಿದೆ:

ಕೊಂಡಿ : http://ruthumana.com/2018/08/25/ondalla-eradalla-review-1/

ಬಹಳ ಹಿಂದೆ ಅಂದರೆ 1984ರಲ್ಲಿ ಗೋವಿಂದ್ ನಿಹಲಾನಿ `ಪಾರ್ಟಿ’ ಎನ್ನುವ ಒಂದು ಸಿನಿಮಾ ಮಾಡಿದ್ದರು. ಆ ಸಿನಿಮಾದಲ್ಲಿ ಒಂದು ಅದ್ಭುತವಾದ ದೃಶ್ಯವಿದೆ. ಅವಿನಾಶ್ (ಓಂ ಪುರಿ) ಹಾಗು ಭರತ್ (ಕೆ.ಕೆ. ರೈನಾ) ಎಂಬ ಇಬ್ಬರು ತರುಣರು ಒಂದು ಕವಿತೆಯ ನೆಪದಲ್ಲಿ ಕಲೆ ಹಾಗು ರಾಜಕೀಯದ ನಡುವೆ ಇರುವ ಸಂಬಂಧ ಅಥವಾ ಕೊಂಡಿಯ ಬಗೆಗೆ ಚರ್ಚೆ ಶುರು ಮಾಡುತ್ತಾರೆ. ಎಲ್ಲದನ್ನೂ ಪ್ರಶ್ನೆ ಮಾಡುವ ಸ್ವಭಾವ ಇರುವ ಅವಿನಾಶ್ ಆ ಕವಿತೆ ಅಥವಾ ಒಟ್ಟಾರೆಯಾಗಿ ಕಲೆಯು ಎಂದಿಗೂ ಸಮಾಜವನ್ನು ಬದಲಿಸಲು ಇರುವ ಅಸ್ತ್ರ ಎಂದು ಹೇಳುತ್ತಾನೆ. ಎಲ್ಲದರಲ್ಲೂ ತಟಸ್ತ ಮನೋಭಾವ ತಾಳುವ ಭರತ್ ಅದನ್ನು ಒಪ್ಪುವುದಿಲ್ಲ. ಅವನು ಅದು ಮೊದಲು ಕವನ ತದನಂತರ ರಾಜಕೀಯ ಅಸ್ತ್ರವಾದರೆ ಆದೀತು ಎಂದು ಹೇಳುತ್ತಾನೆ. ಅವಿನಾಶ್ “ಕಲೆ, ಕಾವ್ಯ ಅಥವಾ ಸಿನಿಮಾವನ್ನು ಸಹ ರಾಜಕೀಯದಿಂದ ಬೇರೆ ಮಾಡಲು ಸಾಧ್ಯವೇ ಇಲ್ಲ” ಎಂದು ಹೇಳಿ ಪಾರ್ಟಿಯಲ್ಲಿ ನಿಂತಿರುವ `ಡಾಕ್ಟರ್’ಗೆ (ಅಮರೀಶ್ ಪುರಿ) ಮಧ್ಯ ಪ್ರವೇಶಿಸಲು ಕೇಳುತ್ತಾನೆ. ಯಾವುದೇ ಬರಹಗಾರ ಅಥವಾ ಕವಿ ಯಾವ ಸಿದ್ಧಾಂತವನ್ನಾದರೂ ನಂಬಲು ಸ್ವತಂತ್ರ ಹಾಗು 20ನೇ ಶತಮಾನದ ಯಾವುದೇ ಕಲಾಕೃತಿ ವಿದ್ರೋಹದಿಂದಲೇ ಹುಟ್ಟಿದೆ ಎನ್ನುತ್ತಾನೆ. ಮುಂದುವರೆದು ಡಾಕ್ಟರ್ “ಆದರೆ ಆ ವಿದ್ರೋಹ ರಾಜನೈತಿಕವೋ, ತಾತ್ವಿಕವೋ ಅಥವಾ ಸಾಮಾಜಿಕವೋ ನಾವು ವಿಶ್ಲೇಷಿಸುವುದು ಕಷ್ಟ” ಎಂದು ಹೇಳಿ ಮಾತು ಮುಗಿಸುತ್ತಾನೆ. ಇಲ್ಲಿ ಯಾರ ವಾದ ಸರಿ? ಎಲ್ಲರೂ ಅವರವರ ಭಾವಕ್ಕೆ ಹಾಗು ಅನುಭವಕ್ಕೆ ತಕ್ಕಂತೆ ಮಾತನಾಡುತ್ತಿದ್ದಾರೆ. ಮೇಲೆ ನಾನು ಉಲ್ಲೇಖಿಸಿರುವ ದೃಶ್ಯ ಇನ್ನೂ ವಿವರವಾಗಿ ನೋಡಬೇಕೆಂದರೆ `ಪಾರ್ಟಿ’ ಸಿನಿಮಾ ನೋಡಿ.

ಯಾಕೆ ಈ ದೃಶ್ಯವನ್ನು ಉಲ್ಲೇಖಿಸಿದೆ ಎಂದರೆ ಗುರುಪ್ರಸಾದ್ ಎತ್ತಿರುವ ಪ್ರಶ್ನೆ ಅವಿನಾಶ್ ಪಾತ್ರ ಎತ್ತಿರುವ ಪ್ರಶ್ನೆ. ಅಥವಾ ಭಾಗಶಃ ಪ್ರಶ್ನೆ ಎಂದೂ ಸಹ ಹೇಳಬಹುದು. ಸತ್ಯಪ್ರಕಾಶ್ ಎಲ್ಲೋ `ನನ್ನ ಸಿನಿಮಾ ಗೋವಿನ ಹಾಡಿನ ಮುಂದುವರೆದ ಭಾಗ’ ಎಂದು ಹೇಳಿದ್ದಾರಂತೆ. ಇರಲಿ. ಯಾವುದನ್ನು ಮರುಸೃಷ್ಟಿ ಮಾಡುತ್ತೇವೆ ಅನ್ನುವುದರಲ್ಲಿ ನಮ್ಮ ರಾಜಕೀಯ ಅಡಗಿದೆ ಎಂದು ಗುರುಪ್ರಸಾದ್ ಹೇಳುತ್ತಾರೆ. ಅದು ನಿಜ ಇರಬಹುದು. ಆಗಲೇ ನಾನು ಹೇಳಿದ ಹಾಗೆ ಇನ್ನೊಬ್ಬರಿಗೆ ಅನ್ನಿಸಿರುವುದನ್ನು ಸುಳ್ಳು ಅಥವಾ ತಪ್ಪು ಎಂದು ಹೇಳಲು ನನಗೆ ಯಾವ ಹಕ್ಕೂ ಇಲ್ಲ. ಹೇಳಲೂಬಾರದು. ಹೇಳಿದರೆ ಅದು ಉದ್ಧಟತನವಾಗುತ್ತದೆ. ಆದರೆ ಈ ಚಿತ್ರ ಹುಟ್ಟಿರುವುದು ಒಂದು ಹುಡುಗನ ಹಾಗು ಆತನ ಸಾಕುಪ್ರಾಣಿಯ ನಡುವಿನ ಬಾಂಧವ್ಯದ ಹಿನ್ನೆಲೆಯಲ್ಲಿ ಅನ್ನುವುದು ನನ್ನ ಅನಿಸಿಕೆ. ರಾಜನೈತಿಕ ದೃಷ್ಟಿಯಲ್ಲಿ ನನಗೆ ಸಿನಿಮಾ ಕಾಣಲಿಲ್ಲ. ಸಿನಿಮಾ ನೋಡುವಾಗ ನನ್ನೊಳಗೆ ಹುಟ್ಟಿದ ಭಾವನೆಗಳಿಗನುಗುಣವಾಗಿ ಇವೆಲ್ಲವನ್ನು ಬರೆಯುತ್ತಿದ್ದೇನೆ.

ಮಗುವಿನ ಮುಗ್ಧತೆ ಎಂತಹ ಮನುಷ್ಯನನ್ನೂ ಕರಗಿಸುತ್ತದೆ. ಅದನ್ನು ಬಳಸಿ ಹಲವು ಕಲಾವಿದರು ಸಮಾಜದ ಮುಖವನ್ನು ಅನಾವರಣಗೊಳಿಸಿದ್ದಾರೆ. ಕೆಲವೊಮ್ಮೆ ದೊಡ್ಡವರ ಮುಗ್ಧತೆಯನ್ನೂ ಮುನ್ನೆಲೆಗೆ ತಂದಿದ್ದಾರೆ. ಉದಾಹರಣೆಗೆ ಡಿ. ರಾಜೇಂದ್ರ ಬಾಬುರವರ `ರಾಮಾಚಾರಿ’. ಸಮೀರನ ಮುಗ್ಧತೆಗೆ ಯಾವುದೇ ಹಿನ್ನೆಲೆ ಬೇಕಿಲ್ಲ. ಬಹುಶಃ ಸಿನಿಮಾವನ್ನು ಆ ಹುಡುಗನ ಮೂಲಕ ನೋಡಿದರೆ ಬೇರಾವ ವಿಷಯಗಳೂ ದೊಡ್ಡದಾಗುವುದಿಲ್ಲವೇನೋ. ಬಹುಶಃ ಆ ಮುಗ್ಧತೆಯನ್ನು ಮುಗ್ಧತೆಯಾಗಿ ನೋಡುವಷ್ಟು ಮಾದರಿ ಸಮಾಜ ನಮ್ಮದಲ್ಲ ಎನ್ನುವುದು ವಿಷಾದದ ಸಂಗತಿ. ಅದನ್ನೂ ನಾವು ಒಪ್ಪಬೇಕು. ನನಗೆ ಅವನ ಮುಗ್ಧತೆ ಮುಗ್ಧತೆಯಾಗೇ ಕಂಡಿದ್ದಕ್ಕೆ ಹಲವು ಕಾರಣಗಳಿವೆ. ಸಮೀರನ ಹಸು ಇನ್ನೊಂದು ಧರ್ಮ ಪೂಜಿಸುವ ಪ್ರಾಣಿ ಎಂದು ಅವನಿಗೆ ಗೊತಿಲ್ಲ. ಸಮೀರನ ಈ ಮುಗ್ಧತೆಯನ್ನು ನಿರ್ದೇಶಕರು ಅವನ ಹಾಗು ರಾಜಣ್ಣನ ಕುಟುಂಬಕ್ಕೂ ವಿಸ್ತರಿಸುವ ಪ್ರಯತ್ನ ಮಾಡಿದ್ದಾರೆ. ಎಲ್ಲೂ ಸಹ ಹಸುವನ್ನು ಗೋವು ಎಂದು ಸಂಬೋಧಿಸಿಲ್ಲ. ಹಸುವನ್ನು ಹಸುವಾಗಿ ನೋಡಿದರೆ ಯಾವುದೇ ಸಮಸ್ಯೆಯಿರುವುದಿಲ್ಲ. ಉದಾಹರಣೆಗೆ ಗಂಗೆಯನ್ನು ಮಾತೆ ಎಂದು ನೋಡದೆ ಬರೀ ನದಿಯಾಗಿ ನೋಡಿದ್ದರೆ ಇಷ್ಟು ಮಲಿನವಾಗುತ್ತಿರಲಿಲ್ಲವೇನೋ. ಹಾಗೆಯೇ ಇಲ್ಲಿ ಹಸುವನ್ನು ಹಸುವಾಗಿ ಮಾತ್ರ ನೋಡುವ ಪ್ರಯತ್ನ ಮಾಡಲಾಗಿದೆ ಎಂಬುದು ನನ್ನ ಅನಿಸಿಕೆ. ಹಾಗು ಈ ರೀತಿಯ ಪ್ರಯತ್ನಗಳು ಆಗಬೇಕು. ಸಮೀರನ ಮುಗ್ಧತೆಯನ್ನು ನೀವು ಹೇಗೆ ನೋಡಿದರೂ ಮನ ಕರಗುತ್ತದೆ. ಅದನ್ನು ನಟಿಸಿರುವ ಹುಡುಗನೂ ಅಚ್ಚುಕಟ್ಟಾಗಿ ನಟಿಸಿದ್ದಾನೆ. ನಿಧಾನವಾಗಿ ಸಮೀರನ ಮುಗ್ಧತೆ ಸಿನಿಮಾದ ಎಲ್ಲ ಪಾತ್ರಗಳಿಗೂ ಪಸರಿಸುತ್ತದೆ. ಇದೇ ಮುಗ್ಧತೆ ಎದುರಾಳಿ ಪಕ್ಷದ ಹುಲಿವೇಷದವನ ಮನ ಕರಗಿಸುತ್ತದೆ. ಹೋಟೆಲಿನವನು ಊಟಕ್ಕೆ ದುಡ್ಡು ತೆಗೆದುಕೊಳ್ಳಲ್ಲ. ಒತ್ತಯಾಗಿ ಇಟ್ಟುಕೊಂಡಿದ್ದ ಸಾಲಗಾರನ ಮನಸ್ಸೂ ಕರಗುತ್ತದೆ. ಹೀಗೆ ಅದು ನಮ್ಮ ಸುತ್ತಮುತ್ತಲಿನ ಹಲವು ಮಜಲುಗಳಲ್ಲಿರುವ ಜನರನ್ನು ತಾಕುತ್ತಾ ಹೋಗುತ್ತದೆ. ಸಮೀರ ಹಸುವನ್ನು ಹುಡುಕದೇ ನಾಯಿಯನ್ನು ಹುಡುಕಿಕೊಂಡು ಹೋಗಿದ್ದರೂ ಅವರಿಗೆಲ್ಲಾ ಅವನ ಮುಗ್ಧತೆ ತಿಳಿಯುತ್ತಿತ್ತು. ಸಮೀರ ಹಸುವೇಷ ಹಾಕದೇ ಇದ್ದರೂ ಸಹ ಬಹುಶಃ ಈ ಪ್ರತಿಕ್ರಿಯೆಯಲ್ಲಿ ಯಾವ ಬದಲಾವಣೆಗಳೂ ಇರುತ್ತಿರಲಿಲ್ಲ ಎಂಬುದೇ ನನ್ನ ಅನಿಸಿಕೆ. `ಒಂದಲ್ಲಾ…’ ಸಿನಿಮಾ ಮಕ್ಕಳ ಚಿತ್ರ ಎಂದು ಗಟ್ಟಿಯಾಗಿ ನಂಬಿದ್ದರಿಂದ ನನ್ನ ನೋಡುವ ಪ್ರಕ್ರಿಯೆ ಹೀಗಾಗಿದ್ದಿರಬಹುದು.

ನನಗೆ ಸಿನಿಮಾ ನೋಡುವಾಗ ಅದು ಯಾವುದೇ ರಾಜನೈತಿಕ ಸಿದ್ಧಾಂತದೆಡೆಗೆ ತಿರುಗಿರುವುದು ಕಾಣಲಿಲ್ಲ. ಖಂಡಿತ ಒಬ್ಬ ಮುಸ್ಲಿಂ ಹುಡುಗ ಹಸುವನ್ನು ಹುಡುಕಿಕೊಂಡು ಹೋಗುವ ಕತೆ ಈ ಸಂದರ್ಭದಲ್ಲಿ ಬೇರೆಯದೇ ರೀತಿ ಧ್ವನಿಸುತ್ತದೆ. ಯಾಕೆಂದರೆ ನಮ್ಮ ಪರಿಸ್ಥಿತಿ ಹಾಗಿದೆ. ನನಗೆ ಕಂಡಿದ್ದು ಹಿಂದೂ ಮುಸ್ಲಿಂ ಕುಟುಂಬದ ಬಾಂಧವ್ಯ ಹಾಗು ತೀರಾ ಸಾಮಾನ್ಯವಾಗಿ ಎರಡೂ ಮನೆಯವರು ಹೊಂದುಕೊಂಡಿರುವುದು ಕಂಡಿತು. ಯಾವುದೇ ಪೂರ್ವಾಗ್ರಹವಿಲ್ಲದೇ ಆ ಕುಟುಂಬಗಳು ಸಾಮರಸ್ಯದಿಂದಿರುವುದು ಖುಷಿ ಕೊಟ್ಟಿತು. ಈ ಹಿಂದೆ ಝೋಯಾ ಅಖ್ತರ್ ನಿರ್ದೇಶನದಲ್ಲಿ `ಝಿಂದಗಿ ನಾ ಮಿಲೇಗಿ ದೋಬಾರಾ’ ಸಿನಿಮಾ ಬಿಡುಗಡೆಯಾದಾಗ ಮೂವರು ಸ್ನೇಹಿತರಲ್ಲಿ ಯಾವುದೇ ಅಜೆಂಡಾ ಇಟ್ಟುಕೊಳ್ಳದೇ ಒಬ್ಬನನ್ನು ಮುಸ್ಲಿಂ ಮಾಡಲಾಗಿತ್ತು ಹಾಗು ಅದು ಆ ಮೂವರ ನಡುವಿನ ಸಂಬಂಧದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಬೀರಲೂಕೂಡದು. ಒಂದಲ್ಲಾ ಎರಡಲ್ಲಾ ಚಿತ್ರದಲ್ಲೂ ಈ ಅಂಶವನ್ನು ತೀರಾ ಸಾಮಾನ್ಯ ವಿಷಯ ಎಂಬ ರೀತಿಯಲ್ಲಿ ಚಿತ್ರಿಸಿರುವುದು ನನಗೆ ಖುಷಿ ಕೊಟ್ಟ ವಿಷಯ. ಚಿತ್ರದುದ್ದಕ್ಕೂ ಸಮೀರ ತನ್ನ ಕಳೆದು ಹೋಗಿರುವ ಬಾನುವನ್ನು (ಹಸುವನ್ನು) ಹುಡುಕಲು ಹೆಣಗಾಡುತ್ತಾನೆ. ಈ ಹುಡುಕುವ ಪ್ರಯತ್ನದಲ್ಲಿ ತನಗೇ ತಿಳಿಯದೇ ರಾಜನೈತಿಕವಾದ ನೆರೇಟಿವ್ ಒಂದರ ಭಾಗವಾಗುತ್ತಾನೆ. ಒಂದು ದೇವಸ್ಥಾನಕ್ಕೆ ಹೋಗಿ ಪೂಜಾರಿಯನ್ನು “ಮುಲ್ಲಾ ಸಾಹಬ್” ಎಂದು ಕರೆಯುತ್ತಾನೆ. ಹಸುವನ್ನು ಗುರುತಾಗಿಸಿಕೊಂಡಿರುವ ಒಂದು ಪಕ್ಷದ ಬೀದಿ ನಾಟಕದಲ್ಲಿ ಪಾತ್ರವಾಗುತ್ತಾನೆ. ಎದುರಾಳಿ `ಹುಲಿ’ ಪಕ್ಷದ ಹುಲಿವೇಷದವನೊಂದಿಗೆ ಜೂಟಾಟವಾಡುತ್ತಾನೆ. ಇನ್ನೂ ಅನೇಕ ದೃಶ್ಯಗಳು ಇವೆ. ಈ ಪ್ರಕ್ರಿಯೆಯ ಎಲ್ಲಾ ದೃಶ್ಯಗಳೂ ಸಹ ಒಂದಲ್ಲಾ ಒಂದು ರಾಜಕಾರಣವನ್ನು ತನ್ನಲ್ಲಿ ಹುದುಗಿಸಿಕೊಂಡಿದೆ. ನಿರ್ದೇಶಕ ಆ ತರಹ ಅದನ್ನು ಹೆಣೆಯದೇ ಇದ್ದರೂ ಸಹ ದೃಶ್ಯಗಳು ಚಿತ್ರಮಂದಿರದಲ್ಲಿ ಧ್ವನಿಸುವ ಪ್ರಕಾರವೇ ಅಂತಿಮ. ಅದು ನಿರ್ದೇಶಕನ ಊಹೆಗೆ ಮೀರಿದ್ದೂ ಸಹ ಇರಬಹುದು. ಆ ಧ್ವನಿಯನ್ನು ನೋಡುಗ ಬೇಕಾದ ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು. ಆದರೆ ನಿರ್ದೇಶಕನ ವಿವರಣೆ ಆ ನಿಟ್ಟಿನಲ್ಲಿಲ್ಲ.

ಆದರೆ ನಾನು ಚಿತ್ರ ನೋಡುವಾಗ ಮೇಲಿನ ಪಂಕ್ತಿಯಲ್ಲಿ ಹೇಳಿರುವ ದೃಶ್ಯಗಳು ಬಂದಾಗ ನನಗೆ ಆ ದೃಶ್ಯಗಳ ಹಿಂದಿರುವ ಉದ್ದೇಶಗಳಿಂದ ಇಷ್ಟವಾಗುತ್ತಾ ಹೋಯಿತು. ಮುಸಲ್ಮಾನ ಹುಡುಗನೊಬ್ಬ ದೇವಸ್ಥಾನದ ಅಂಗಳದಲ್ಲಿ ನಮಾಝ್ ಮಾಡುವಾಗ ಕೈಕಾಲು ತೊಳೆಯುವ ರೀತಿಯಲ್ಲಿ ತೊಳೆದುಕೊಂಡು ದೇವಸ್ಥಾನಕ್ಕೆ ಹೋಗುತ್ತಾನೆ. ಈ ದೃಶ್ಯ ನನಗೆ 2017ರ ರಾಹುಲ್ ಢೋಲಕಿಯಾ ಅವರ `ರಯೀಝ್’ ಸಿನಿಮಾ ನೆನಪಿಸಿತು. ಆ ಸಿನಿಮಾದಲ್ಲಿ ಚಿಕ್ಕ ಮುಸ್ಲಿಂ ಹುಡುಗನೊಬ್ಬ ಕನ್ನಡಕ ಕೊಳ್ಳಲು ಹಣವಿಲ್ಲವೆಂದು ಆ ಊರಿನಲ್ಲಿರುವ ಗಾಂಧೀ ಪ್ರತಿಮೆಯಲ್ಲಿ ಗಾಂಧೀ ತೊಟ್ಟಿರುವ ಕನ್ನಡಕ ಕದ್ದು ತರುತ್ತಾನೆ. ಆದರೆ `ರಯೀಝ್’ನ ಆ ದೃಶ್ಯದಲ್ಲಿರುವ ವಿದ್ರೋಹ ಇಲ್ಲಿಲ್ಲ ಹಾಗು ಆ ವಿದ್ರೋಹದ ಅವಶ್ಯಕತೆಯೂ ಇಲ್ಲಿಲ್ಲ. ಮೊದಲೇ ಹೇಳಿದ ಹಾಗೆ ಸಮೀರ ತನಗೇ ಅರಿವಿಲ್ಲದೇ ನೆರೇಟಿವ್ ಒಂದರ ಭಾಗವಾಗುತ್ತಾ ಹೋಗುತ್ತಾನೆ. ಹಾಗು ಆ ನೆರೇಟಿವ್ ನಾವು ಪ್ರತಿದಿನ ನೋಡುತ್ತಿರುವ ನೆರೇಟಿವ್. ಬಹುಶಃ ಆತ ಮುಸ್ಲಿಂ ಎಂಬ ಕಾರಣಕ್ಕೆ ಹಾಗು ಹಸುವನ್ನು ಆಸ್ಥೆಯಿಂದ ಹುಡುಕುವ ಕಾರಣಕ್ಕೆ ಚಿತ್ರವು ಒಂದು ಸಿದ್ಧಾಂತದೆಡೆಗೆ ವಾಲಿದೆ ಎಂದು ಕೆಲವರಿಗೆ ಅನ್ನಿಸಿರಬಹುದು. ನನ್ನ ಮುಖ್ಯ ಪ್ರಶ್ನೆ ಏನೆಂದರೆ ಮುಗ್ಧತೆಯನ್ನು ಇನ್ಹೇಗೆ ಹೇಳಬಹುದು? ಆತ ಮುಸ್ಲಿಂ ಎಂಬ ಕಾರಣಕ್ಕೆ ಅಥವಾ ಅವನು ಹುಡುಕುತ್ತಿರುವುದು ಹಸು ಎಂಬ ಕಾರಣಕ್ಕೆ ಹುಡುಗನ ಮುಗ್ಧತೆ ಪಕ್ಕಕ್ಕಿಡುವುದು ಸರಿಯಾ? ಅದರ ಬಗೆಗೆ ಚರ್ಚೆ ನಡೆಯಬೇಕಿದೆ. `ಒಂದಲ್ಲಾ ಎರಡಲ್ಲಾ..’ ಚಿತ್ರದ ಬಗೆಗೆ ಮೂಡಿರುವ ಅಭಿಪ್ರಾಯಗಳು ಹಲವಿದೆ ಆದರೆ ಆ ಎಲ್ಲ ಅಭಿಪ್ರಾಯಗಳೂ ಮುಖ್ಯ. ಆದರೆ ಮೇಲೆ ಹೇಳಿರುವ ಎಲ್ಲಾ ಅಂಶಗಳಿಗೆ ಮತ್ತೊಮ್ಮೆ ಒತ್ತು ಕೊಟ್ಟು ನಾನು ಹೇಳುವ ವಿಷಯವೆಂದರೆ, ಈ ಚಿತ್ರವು ಗಟ್ಟಿಯಾದ ಧ್ವನಿಯಾಗಬಹುದಾದ ಎಲ್ಲ ಲಕ್ಷಣಗಳನ್ನೂ ಒಡಲಲ್ಲಿ ಇಟ್ಟುಕೊಂಡಿತ್ತು. ಹುಡುಗನ ಪಾತ್ರಕ್ಕೆ ವಿಪರೀತವಾದ ಇನ್ನೊಂದು ಪರಿಸ್ಥಿತಿ ಹುಟ್ಟಿದ್ದರೆ ಸಮೀರನ ಮುಗ್ಧತೆಗೆ ಇನ್ನಷ್ಟು ವರ್ಚಸ್ಸು ಬರುತ್ತಿತ್ತು. ಅದನ್ನು ತೋರಿಸಬಾರದೆಂಬುದು ನಿರ್ದೇಶಕರ ಆಯ್ಕೆಗೆ ಬಿಟ್ಟಿದ್ದು. ಏನೇ ಆದರೂ ಸಮೀರ ಇಷ್ಟವಾಗುತ್ತಾನೆ. ಸಮೀರನ ಮುಗ್ಧತೆ ನಮಗೆ ಮಾದರಿಯಾಗಬೇಕು. ಚಿತ್ರದಲ್ಲಿರುವ ಒಳ್ಳೆಯ ಅಂಶಗಳನ್ನು ಒತ್ತಿ ಹೇಳಬೇಕು. ಚಿತ್ರದಲ್ಲಿ ಸಮೀರನ ಮುಗ್ಧತೆಗೆ ಹೆಚ್ಚು ವರ್ಚಸ್ಸು ಕೊಡಲು ಸಾಧ್ಯವಿತ್ತು ಎಂದು ಹೇಳದೇ ಇದ್ದರೆ ಈ ಲೇಖನಕ್ಕೆ ಮೋಸ ಮಾಡಿದ ಹಾಗೆ. ಯಾವುದೇ ಪೂರ್ವಾಗ್ರಹವಿಲ್ಲದೇ ಆ ವಿಷಯವನ್ನೂ ಹೇಳಲು ಬಯಸುತ್ತೇನೆ. ಹಾಗು ಈ ವಿಷಯಗಳು ಸಮೀರನ ಯಾವುದೇ ಪೂರ್ವಾಗ್ರಹವಿಲ್ಲದ ಮುಗ್ಧತೆಗೆ ಇನ್ನಷ್ಟು ತೂಕ ಬರಲು ಸಾಧ್ಯವಿತ್ತು. ಭೀಕರತೆ ಹಿನ್ನೆಲೆಯಲ್ಲಿದ್ದಿದ್ದರೆ ಮುಗ್ಧತೆಗೆ ಇನ್ನೂ ಹೆಚ್ಚು ಒತ್ತು ಸಿಗುತ್ತಿತ್ತು. ಈಗಿರುವ ಚಿತ್ರ ಇನ್ನೂ ಹೆಚ್ಚು ಕಳೆಗಟ್ಟುತ್ತಿದ್ದು. ಅದರ ಕೆಲವು ಉದಾಹರಣೆಗಳು ಕೆಳಗಿನ ಪಂಕ್ತಿಯಲ್ಲಿವೆ.

ಮುಗ್ಧತೆಯನ್ನು ಭೀಕರತೆಯ ಹಿನ್ನೆಲೆಯಲ್ಲಿ ಹೇಳಿರುವ ಚಿತ್ರಗಳಲ್ಲಿ `ಶಿಂಡ್ಲರ್ಸ್ ಲಿಸ್ಟ್’ ಒಂದು ಗಟ್ಟಿ ಉದಾಹರಣೆ. ವಿಶ್ವ ಯುದ್ಧದ ಭೀಕರತೆಯನ್ನು ಸ್ಟೀವನ್ ಸ್ಪಿಲ್‍ಬರ್ಗ್ ನಮಗೆ ಕಟ್ಟಿಕೊಡುತ್ತಾ ಹೋಗುತ್ತಾರೆ. ಮನುಷ್ಯ ಇಷ್ಟು ಕ್ರೂರಿಯಾ ಎಂಬ ಭೀಭತ್ಸ ಭಾವ ಹುಟ್ಟಿದ ಮೇಲೆ ಕಪ್ಪು ಬಿಳುಪಿನ ಸಿನಿಮಾದಲ್ಲಿ ಕೆಂಪು ಉಡುಪು ತೊಟ್ಟ ಒಂದು ಚಿಕ್ಕ ಹುಡುಗಿಯೊಬ್ಬಳು ಯುದ್ಧಭೂಮಿಯಲ್ಲಿ ಹಿಂದು ಮುಂದಿಲ್ಲದೇ ನಡೆದಾಡುವುದನ್ನು ತೋರಿಸುತ್ತಾರೆ. ಆ ಹುಡುಗಿ ಯೆಹೂದಿಯೂ ಇರಬಹುದು ಅಥವಾ ಸಾಂಪ್ರದಾಯಿಕ ಜರ್ಮನಳೂ ಇರಬಹುದು. ಭೀಕರವಾದ ಸಿನಿಮಾದಲ್ಲಿ ಆಕೆಯ ಮುಗ್ಧ ನಡಿಗೆ ನಮಗೆ ರೋಮಾಂಚನವುಂಟು ಮಾಡುತ್ತದೆ. ಸಮೀರನ ಮುಗ್ಧತೆಗೆ ವಿರುದ್ಧವಾದ ಒಂದು ಶಕ್ತಿ ಸಿನಿಮಾದಲ್ಲಿದ್ದಿದ್ದರೆ ಅವನ ಮುಗ್ಧತೆಯೇ ಸಮಾಜದ ಏಕೈಕ ಆಯ್ಕೆ ಎಂಬ ಭಾವ ಮೂಡಬಹುದಿತ್ತು. ಮಣಿರತ್ನಂ ಅವರ `ಕನ್ನತ್ತಿಲ್ ಮುತ್ತಮಿಟ್ಟಾಲ್’ ಚಿತ್ರದಲ್ಲಿ ಅಮುದಾ (ಕೀರ್ತನಾ) ಎಂಬ ಅನಾಥ ಮಗುವೊಂದನ್ನು ವಿದ್ರೋಹಿ ಕವಿ ತಿರುಚೆಲ್ವನ್ (ಮಾಧವನ್) ಹಾಗು ಸಮಾಚಾರ ವರದಿಗಾರ್ತಿ ಇಂದಿರಾ (ಸಿಮ್ರಾನ್) ಸಾಕುತ್ತಾರೆ. ಮಗುವಿನ ಎಂಟನೇ ಹುಟ್ಟುಹಬ್ಬದಂದು ತಂದೆ ಅಮುದಾಳಿಗೆ ಒಂದು ಸತ್ಯ ಹೇಳುತ್ತಾನೆ. ಅಮುದಾ ದತ್ತು ಪಡೆದಿರುವ ಮಗಳು ಎಂದು. ಅಮುದಾ ಹಠ ಮಾಡುತ್ತಾಳೆ ತನ್ನ ತಾಯಿಯನ್ನು ಕಾಣಬೇಕೆಂದು. ಅದಕ್ಕಾಗಿ ತಂದೆ ತಾಯಿ ಮಗಳು ಯುದ್ಧ ಪೀಡಿತ ಶ್ರೀಲಂಕೆಗೆ ಹೋಗುತ್ತಾರೆ. ಅಲ್ಲಿನ ಸಿವಿಲ್ ವಾರ್ ಎಂತಹವರನ್ನೂ ಕತ್ತಲಿಗೆ ದೂಡುತ್ತದೆ. ಅಮುದಾ ಹೀಗೆ ಸುಮ್ಮನೇ ಉದ್ಯಾನದಲ್ಲಿ ವ್ಹೀಲ್ ಚೇರಲ್ಲಿ ಕುಳಿತಿರುವ ತರುಣನ ಜೊತೆಗೆ ಮಾತಿಗಿಳಿಯುತ್ತಾಳೆ. ಮಾತಿನ ಕೊನೆಯಲ್ಲಿ ಆ ತರುಣ ಅಮುದಾಳಿಗೆ ಟಾಟಾ ಎಂದು ಹೇಳಿ ನಕ್ಕು ಎದ್ದು ನಡೆದು ಬರುತ್ತಿರುವ ಸಿಂಹಳ ಮಂತ್ರಿಯ ಕಾರಿಗೆ ಹಾರಿ ಬಾಂಬ್ ಸಿಡಿಸುತ್ತಾನೆ. ಅವನು ಶ್ರೀಲಂಕಾ ತಮಿಳು ಮಿಲಿಟೆಂಟ್ ಆಗಿರುತ್ತಾನೆಂದು ನಂತರ ತಿಳಿಯುತ್ತದೆ. ಅಮುದಾ ಗಾಬರಿಗೊಳ್ಳುತ್ತಾಳೆ. ಇನ್ನೊಂದೆಡೆ ತಿರುಚೆಲ್ವನ್ ತಮಿಳು ಮಿಲಿಟೆಂಟ್‍ಗಳ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಹೀಗೆ ಹಲವು ರೇಶಿಯಲ್ ಕಲಹಗಳನ್ನು ನಮಗೆ ತೋರಿಸುತ್ತಾರೆ. ಅಮುದಾಳ ತಾಯಿ ಶ್ಯಾಮ (ನಂದಿತಾ ದಾಸ್) ಇದೇ ಶ್ರೀಲಂಕೆಯಲ್ಲಿ ನೆಲೆಸಿರುವ ತಮಿಳು ಮಿಲಿಟೆಂಟ್ ಆಗಿರುತ್ತಾಳೆ. ಹೃದಯ ವಿದ್ರಾವಕ ಅಂತ್ಯದಲ್ಲಿ ಅಮುದಾ ಶ್ಯಾಮಾಳಿಗೆ ಈ ಯುದ್ಧವೆಲ್ಲಾ ಯಾಕೆ ಎಂದು ಮುಗ್ಧವಾಗಿ ಪ್ರಶ್ನಿಸುತ್ತಾಳೆ. ಎಲ್ಲ ಬಿಟ್ಟು ಚೆನ್ನೈಗೆ ಬಂದುಬಿಡು ಎಂದೆಲ್ಲಾ ಹೇಳಿತ್ತಾಳೆ. ಆದರೆ ಶ್ಯಾಮ “ಆ ದಿನವೂ ಬರಲಿ ಎಂದು ಹಾರೈಸುವೆ ಕಂದಾ” ಎಂದು ಹೊರಡುತ್ತಾಳೆ. ಇಲ್ಲಿ ಶ್ರೀಲಂಕೆಯಲ್ಲಿರುವ ಯಾವ ಪರಿಸ್ಥಿತಿಯನ್ನೂ ಹೇಳದೇ ಇದ್ದಿದ್ದರೆ ಅಮುದಾ ನಮಗೆ ಹತ್ತಿರವಾಗುತ್ತಿರಲಿಲ್ಲ. ಇನ್ನೊಂದು ವಿಷಯ ಇದು 16 ವರ್ಷ ಹಳೆಯ ಸಿನಿಮಾ. ಇಂದಿಗೂ ಇದರ ಬಗೆಗೆ ನಾನು ಬರೆಯುತ್ತಿದ್ದೇನೆ. ಹೀಗೆ ಮುಗ್ಧತೆ ಮುನ್ನೆಲೆಗೆ ಬರಬೇಕಾದರೆ ವಿಪರೀತವಾದ ಇನ್ನೊಂದು ಭಾವ ಹುಟ್ಟಿಸಿದರೆ ನಿರೂಪಣೆಗೆ ಸಹಕಾರಿಯಾಗುತ್ತದೆ.

ವಿದ್ರೋಹದಿಂದ ಕಲೆ ಹುಟ್ಟುತ್ತದೆ ಎಂಬ `ಪಾರ್ಟಿ’ ಸಿನಿಮಾದಲ್ಲಿನ ಮಾತು ತೆಗೆದುಕೊಂಡರೆ `ಒಂದಲ್ಲಾ…’ ಚಿತ್ರದಲ್ಲಿ ಆ ವಿದ್ರೋಹ ಕಾಣುವುದಿಲ್ಲ. ಮೊದಲನೆಯದಾಗಿ ಈ ವಸ್ತುವನ್ನು ಹೇಳಲು ವಿದ್ರೋಹದ ಅಗತ್ಯವಿದೆ ಎಂದು ನಿರ್ದೇಶಕರಿಗೆ ಅನಿಸಿಲ್ಲದಿರುವುದನ್ನು ನಾವು ಒಪ್ಪಬೇಕು ಹಾಗು ಗೌರವಿಸಬೇಕು. ಇದೇ ಕತೆಯನ್ನು ಸ್ವಲ್ಪ ತಲೆಕೆಳಗು ಮಾಡೋಣ. ಪುಟ್ಟ ಹಿಂದೂ ಬಾಲಕನೊಬ್ಬ ತಾನು ಸಾಕಿರುವ ಹಂದಿಯನ್ನು ಹುಡುಕಿಕೊಂಡು ಹೋಗುವ ನೆರೇಟಿವ್. ಹೇಗಿರುತ್ತದೆ? ಅಥವಾ ಮುಸ್ಲಿಂ ಯುವಕನೊಬ್ಬ ತನ್ನ ನಾಯಿಯನ್ನು ಹುಡುಕಿಕೊಂಡು ಹೋಗುವ ಕತೆ? ಇದೇ ವಸ್ತುವನ್ನು ಹಲವಾರು ಏರಿಳಿತ ಹಾಗು ಮಿಶ್ರಣದೊಂದಿಗೆ ಹೇಳಬಹುದು. ಒಂದು ಮಾತು ನನಗನ್ನಿಸಿದ್ದು ಏನೆಂದರೆ ಸಮೀರ ಹಸು ಅಲ್ಲದೇ ನಾಯಿಯನ್ನು ಹುಡುಕಿಕೊಂಡು ಹೋಗಿದ್ದರೂ ಅವನ ಮುಗ್ಧತೆ ನನನ್ನು ತಾಕುತ್ತಿತ್ತು. ಹಾಗಾಗಿ ನಾನು ನೋಡಿದ್ದು ಸಮೀರನ ಪಾತ್ರವನ್ನು. ಅದು ನಾಯಿಯಾಗಿದ್ದರೆ ರಾಜನೈತಿಕ ಧ್ವನಿ ಬೇರೆಯದೇ ಆಗುತ್ತಿತ್ತು ಅಥವಾ ಇರುತ್ತಲೇ ಇರಲಿಲ್ಲವೇನೋ. ಆದರೆ ಆತನ ಮುಗ್ಧತೆ ಹಾಗೇ ಉಳಿಯುತ್ತಿತ್ತು. ಹೀಗೆ ಯಾವುದೇ ವಸ್ತು ಸ್ಥಾಯಿ ಧಾರಣೆಯೊಂದನ್ನು ಹೊಂದಿರುತ್ತದೆ. ನನಗೆ ಕಂಡಿದ್ದು ಇಡೀ ಸಿನಿಮಾದಲ್ಲಿ ಹಾಸುಹೊಕ್ಕಾಗಿರುವ ಈ ಮುಗ್ಧತೆ ಹಾಗು ಅದೇ ಈ ಸಿನಿಮಾದ ಸ್ಥಾಯಿ ಧಾರಣೆ. ಇನ್ನು ಕಡೆಯ ವಿಷಯ. ರಾಜಕೀಯ ಎಲ್ಲದರಲ್ಲೂ ಇರುತ್ತದೆ. ರಾಜನೈತಿಕ ಧ್ವನಿಯೇ ಇಲ್ಲದೇ ಯಾವುದೇ ಕಲಾಕೃತಿ ಹೊಮ್ಮುವುದಿಲ್ಲ. ಕಲಾವಿದ ಆ ಧ್ವನಿಯನ್ನು ಪ್ರತಿಪಾದಿಸದೇ ಇರದಿದ್ದರೂ ರಾಜನೈತಿಕ ಹಿನ್ನೆಲೆಯೊಂದು ಕಲಾಕೃತಿಯಲ್ಲಿ ಹೊಮ್ಮಿದರೆ ಖಂಡಿತ ತಪ್ಪಲ್ಲ. ನಿರ್ದೇಶಕ ಮಾಡಿರುವ ಚಿತ್ರದ ಧ್ವನಿಯನ್ನು ಹಿಡಿದು ಪ್ರೇಕ್ಷಕರಿಗೆ ತಲುಪಿಸಲು ಇರುವ ವಾಹಿನಿಯೇ `ವಿಮರ್ಶೆ’. ಬಹುಶಃ ಇನ್ನಷ್ಟು ಜನ ಪ್ರತಿಕ್ರಿಯಿಸಿದರೆ ಒಂದು ಹೊಸ ಹೊಳಹು ಸಿಗುವ ಎಲ್ಲ ಸಾಧ್ಯತೆಗಳೂ ಈ ಚರ್ಚೆಗೆ ಇದೆ. ಈ ಚರ್ಚೆ ಅರ್ಥಪೂರ್ಣವಾಗಿ ಮುಂದುವರೆಯಲಿ. ಹಾಗು ಚರ್ಚೆ ಎಲ್ಲರನ್ನೂ ಒಳಗೊಳ್ಳಲಿ.

ನೀವೂ ಒಮ್ಮೆ `ಒಂದಲ್ಲಾ… ಎರಡಲ್ಲಾ…’ ನೋಡಿ ಬನ್ನಿ. ನೋಡಿದ ನಂತರವೇ ಪ್ರತಿಕ್ರಿಯಿಸಿ.

2 comments to “ಒಂದಲ್ಲಾ… ಎರಡಲ್ಲಾ… ನೂರಾರು ಪಾತ್ರ…”
  1. ನಾನು ಚಿತ್ರ ನೋಡಿಲ್ಲದಿದ್ದರೂ ಚಿತ್ರದ ಬಗೆಗಿನ ಈ ಅನಿಸಿಕೆ ಗುರುಪ್ರಸಾದರ ದೃಷ್ಟಿಕೋನಕ್ಕಿಂತ ಹೆಚ್ಚು ಹಿಡಿಸಿತು. ಆಪ್ತವೆನಿಸಿತು..

  2. ಸಮೀರನ ಮುಗ್ದತೆ ಮಾದರಿಯಾಗಬೇಕು
    ಎನ್ನನವ ಮಾತುಗಳನ್ನು ಹೇಗೆ ಗ್ರಹಿಸಬೇಕು ??

ಪ್ರತಿಕ್ರಿಯಿಸಿ