ಕಲಿಕಾ ದಕ್ಷತೆಯ ನಿರ್ಧಾರಕಗಳಾಗಿ ಅಂಕಗಳು

ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಂಜನ್ ಎಂಬ ಪ್ರತಿಭಾವಂತ ೬೨೫ಕ್ಕೆ ೬೨೫ ಅಂಕ ಪಡೆದದ್ದು ರಾಜ್ಯಾದ್ಯಾಂತ ತೀರ ಚರ್ಚೆಗೆ ಕಾರಣವಾಗಿತ್ತು. ಸ್ವತಃ ಅಧ್ಯಾಪಕರಾಗಿರುವ ಚಿಂತಕ ಅರವಿಂದ ಚೊಕ್ಕಾಡಿಯವರು ಈ ನೆಪದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯ ವಾಸ್ತವ ಸಮಸ್ಯೆಗಳನ್ನಿಲ್ಲಿ ವಿಶ್ಲೇಷಿಸಿದ್ದಾರೆ.

2016ರ ಏಪ್ರಿಲ್ ನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬರು 625ಕ್ಕೆ 625 ಅಂಕಗಳನ್ನು ಪಡೆದುಕೊಂಡಾಗ , ಇದು ಸಾಧ್ಯವೇ ಎಂಬ ಪ್ರಶ್ನೆ ಸಾಮಾಜಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬಂದಿತು.
625ಕ್ಕೆ 625 ಅಂಕಗಳನ್ನು ಪಡೆಯುವುದು, ಯಾರನ್ನೂ ಅನುತ್ತೀರ್ಣಗೊಳಿಸದಿರುವುದು, ನಾನಾ ಪ್ರಯೋಗಗಳನ್ನು ಮಾಡಿ ಅಂತಿಮವಾಗಿ ನೂರಕ್ಕೆ ನೂರು ಶೇಕಡಾ ಫಲಿತಾಂಶ ಬರಬೇಕೆನ್ನುವುದು; ಅಂತಹ ನೂರು ಶೇಕಡಾ ಫಲಿತಾಂಶದಲ್ಲಿ ಎಲ್ಲರೂ ಎ+ ಗ್ರೇಡ್ ಪಡೆಯಬೇಕೆನ್ನುವುದು- ಇದರ ಹಿನ್ನೆಲೆ, ಮುನ್ನೆಲೆಗಳೆಲ್ಲ ಶಿಕ್ಷಣ ಕ್ಷೇತ್ರದಲ್ಲಿ ಸುಮಾರು ಕಳೆದೊಂದು ದಶಕದಲ್ಲಿರುವವರಿಗೆಲ್ಲ ಗೊತ್ತಿದೆ. ಆದರೆ ಈ ವಿಷಯಗಳಲ್ಲಿ ಸಾಮಾಜಿಕ ವಲಯದಿಂದ ಪ್ರತಿಕ್ರಿಯೆ ಶೂನ್ಯವಾಗಿತ್ತು. ಸಮಾಜದ ಪ್ರತಿಸ್ಪಂದನೆಗಳೇನಿದ್ದರೂ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಹಾಲು, ಶೂ, ಮೊಟ್ಟೆ, ಬೈಸಿಕಲ್ ಕೊಡುವುದರ ಬಗ್ಗೆ, ಒಂದನೆಯ ತರಗತಿಯಿಂದ ಇಂಗ್ಲೀಷ್ ಭಾಷೆಯನ್ನು ಕಲಿಸಬೇಕೆ? ಬೇಡವೇ? ಎಂಬುದರ ಬಗ್ಗೆ. ಲೈಂಗಿಕ ಶಿಕ್ಷಣದ ಅಗತ್ಯಗಳ ಬಗ್ಗೆ ಕೇಂದ್ರಿಕೃತವಾಗಿತ್ತು.
ಗೊತ್ತು ಗುರಿ ಇರುವ ಮತ್ತು ಇಲ್ಲದಿರುವ ತರಬೇತಿಗಳು, ಅಗತ್ಯವುಳ್ಳ ಮತ್ತು ಅಗತ್ಯವಿರದ ಶೈಕ್ಷಣಿಕ ಪ್ರಯೋಗಗಳನ್ನು ಸಮಾಜ ಗುರುತಿಸಲಿಲ್ಲ. ಬದಲಿಗೆ ಈ ಎಲ್ಲವೂ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಎಂಬ ನಂಬಿಕೆ ಎಲ್ಲರಲ್ಲಿತ್ತು. ಇದೇ ಮೊದಲ ಬಾರಿಗೆ 625ಕ್ಕೆ 625 ಅಂಕಗಳನ್ನು ಪಡೆಯಲು ಸಾಧ್ಯ ಎನ್ನುವುದಾದರೆ ಮೌಲ್ಯಮಾಪನದ ಗುಣಮಟ್ಟ ಏನು? ಕಲಿಕೆಯ ದಕ್ಷತೆಯ ಮಾನದಂಡ ಏನು? ಎಂಬ ಪ್ರಶ್ನೆಯನ್ನು ಸಮಾಜ ಎತ್ತಿದೆ.

ನೂರಕ್ಕೆ ನೂರರಷ್ಟು ಅಂಕ ಪಡೆಯಲು ಸಾಧ್ಯವೇ? ಎನ್ನುವ ಪ್ರಶ್ನೆಗೆ ಸಾಧ್ಯ ಎಂದು ನಾವು ಒಪ್ಪಿಕೊಂಡರೆ ಸಾಧ್ಯ. ಸಾಧ್ಯವಿಲ್ಲ ಎಂದುಕೊಂಡರೆ ಸಾಧ್ಯವಿಲ್ಲ. ನಾಳೆಯ ದಿನ ವಿದ್ಯಾರ್ಥಿ ಬರೆದ ಸರಿ ಉತ್ತರಗಳಿಗೆ , ನಿಗದಿ ಪಡಿಸಿದ ಅಂಕಕ್ಕಿಂತ ಎರಡು ಪಟ್ಟು ಹೆಚ್ಚು ಅಂಕ ಕೊಡಬೇಕು ಎಂಬ ನಿಯಮ ಜಾರಿಗೆ ಬಂದರೆ 625ಕ್ಕೆ 1250 ಅಂಕಗಳೂ ಸಾಧ್ಯ. ಆದರಿಲ್ಲಿ ಪ್ರಶ್ನೆ ಇರುವುದು ಇದರ ಔಚಿತ್ಯದ್ದು.
ಔಚಿತ್ಯ ಇಲ್ಲಿ ಎರಡು ರೀತಿಯಲ್ಲಿ ನಿರ್ಧಾರವಾಗುತ್ತದೆ. ಒಂದು ಪೂರ್ವಾನುಭವಗಳಿಂದ ನಿರ್ಧಾರವಾಗುವ ಔಚಿತ್ಯ. ಇದರಲ್ಲಿ ಪೂರ್ವಾಗ್ರಹಗಳೂ ಸೇರಿಕೊಂಡಿರುತ್ತವೆ. ” ನಾವು ಎಸ್.ಎಸ್.ಎಲ್.ಸಿ” ಓದುವಾಗ 625ಕ್ಕೆ 625 ಅಂಕಗಳು ಬರಲು ಸಾಧ್ಯವೇ ಇರಲಿಲ್ಲ. ಈಗ ಹೇಗೆ ಅಷ್ಟೊಂದು ಅಂಕ ಪಡೆಯಲು ಸಾಧ್ಯ?” ಎಂಬ ನೆಲೆಯಲ್ಲಿಯೇ ಹೆಚ್ಚಿನ ಪ್ರಶ್ನೆಗಳು ಎತ್ತಲ್ಪಟ್ಟಿದೆ. ಇದಕ್ಕೆ ಉತ್ತರವಾಗಿ ಹಿಂದಿನ ವ್ಯವಸ್ಥೆ ದೋಷಪೂರಿತವಾಗಿತ್ತು. ಈಗ ಅದನ್ನು ಸರಿಪಡಿಸಲಾಗಿದೆ ಎಂದೋ ಅಥವಾ ಈಗಿನ ವಿದ್ಯಾರ್ಥಿಗಳು ಹಿಂದಿಗಿಂತ ಈಗ ಹೆಚ್ಚು ಬುದ್ಧಿವಂತರಾಗಿದ್ದಾರೆ ಎಂದೋ ಉತ್ತರಿಸಬಹುದು. ಹಿಂದಿನಂತೆಯೇ ಈಗಲೂ ಇರಬೇಕೆ ಎಂಬುದೂ ಒಂದು ಉತ್ತರ.

ಔಚಿತ್ಯದ ಪ್ರಶ್ನೆಗೆ ಇನ್ನೊಂದು ರೂಪವಿದೆ. ಅದು ವಾಸ್ತವಿಕ ನೆಲಗಟ್ಟಿನ ಅರಿವು. ಕಲಿಕೆ ಎಂದರೆ ‘ವ್ಯಕ್ತಿಯ ವರ್ತನೆಯಲ್ಲಿ ಪರಿವರ್ತನೆ ತರುವುದು’ ಎಂದು ಶಿಕ್ಷಣ ಶಾಸ್ತ್ರವು ವ್ಯಾಖ್ಯಾನಿಸುತ್ತದೆ. ಮತ್ತು ಈ ಪರಿವರ್ತನೆಯು ಧನಾತ್ಮಕ ರೂಪದಲ್ಲಿರಬೇಕೆಂದೂ ಇದು ಹೇಳುತ್ತದೆ.
ಹಾಗಿದ್ದರೆ ಶಿಕ್ಷಣ ಪಡೆದವರೆಲ್ಲರ ವರ್ತನೆ ಸಮಾಜದಲ್ಲಿ ಧನಾತ್ಮಕವಾಗಿದೆಯೇ ಎಂದು ಪ್ರಶ್ನಿಸಿಕೊಂಡರೆ 625ಕ್ಕೆ 625 ಅಂಕಗಳ ಔಚಿತ್ಯ ಅರ್ಥವಾಗುತ್ತದೆ. ಅಷ್ಟಕ್ಕೂ ವರ್ತನೆಯಲ್ಲಿ ಪರಿವರ್ತನೆ ಎನ್ನುವುದೇ ಅಸ್ಪಷ್ಟ ಪರಿಕಲ್ಪನೆ. ಅದನ್ನು ಸ್ಪಷ್ಟ ರೂಪಕ್ಕೆ ತರಲು ಪಠ್ಯಕ್ರಮ ಎಂಬ ಒಂದು ವ್ಯವಸ್ಥೆ ಜಾರಿಯಲ್ಲಿದೆ. ಪಠ್ಯಕ್ರಮವು ಕಲಿಕಾ ವರ್ತನೆಗಳನ್ನು ರೂಪಿಸುತ್ತದೆ. ಆಗ ನಿರ್ದಿಷ್ಟ ಪಠ್ಯದ ಅಭ್ಯಾಸದಿಂದ ಉಂಟಾಗಬೇಕಾದ ಬಹುಮುಖಿ ಆಯಾಮದ ಎಲ್ಲ ಕಲಿಕೆಗಳೂ ಎಲ್ಲ ರೀತಿಯಲ್ಲೂ ಸಾಧಿಸ್ಪಲ್ಪಟ್ಟಿದ್ದರೆ ಆಗ 625ಕ್ಕೆ 625 ಅಂಕಗಳನ್ನು ಕೊಡಬಹುದು. ಒಬ್ಬ ಪರಿಪೂರ್ಣ ವ್ಯಕ್ತಿ ಮಾತ್ರ ಅದನ್ನು ಸಾಧಿಸಬಲ್ಲ. ಆದರೆ ಯಾವ ವ್ಯಕ್ತಿಯೂ ಈ ಜಗತ್ತಿನಲ್ಲಿ ಪರಿಪೂರ್ಣನಲ್ಲ ಎಂಬುದು ಸ್ಥಾಪಿತ ಸಿದ್ದಾಂತ. ಹಾಗಿದ್ದಾಗ ಈ ಅಂಕದ ಔಚಿತ್ಯವೇನು?

ಮೂರನೆಯದಾಗಿ ಒಂದು ವರ್ಷದಲ್ಲಿ ಕಲಿತ ಪಠ್ಯದ ಸಂಪೂರ್ಣ ಮೌಲ್ಯಮಾಪನ ವಾಸ್ತವದಲ್ಲಿ ಅಸಾಧ್ಯ. ಆದ್ದರಿಂದ ಕಲಿಕಾ ವಿಚಾರಗಳನ್ನು ಕಿರಿದುಗೊಳಿಸಿ ಸ್ಯಾಂಪಲ್ ಮೂಲಕ ಅರ್ಥೈಸುವ ವಿಧಾನವೇ ಪರೀಕ್ಷೆ. ಇಲ್ಲಿರುವುದು “ಅನ್ನ ಬೆಂದಿದೆಯೋ ಎಂದು ತಿಳಿಯಲು ಒಂದು ಅಗುಳು ಸಾಕಾಗುತ್ತದೆ” ಎಂಬ ತತ್ವ. ಆದ್ದರಿಂದ ವರ್ಷದ ಕಲಿಕೆಯನ್ನು ಮೂರುಗಂಟೆಯ ಪರೀಕ್ಷೆಯ ವ್ಯಾಪ್ತಿಗೆ ಕಿರಿದುಗೊಳಿಸಿ ಪರೀಕ್ಷಿಸುವುದು ಅನಿವಾರ್ಯವಾಗುತ್ತದೆ. ಆದರೆ ಪರೀಕ್ಷೆಯ ಉತ್ತರಗಳನ್ನು ಮೌಲ್ಯಮಾಪನ ಮಾಡುವ ವಿಧಾನ ಮಾತ್ರ ಕೇಳಲ್ಪಟ್ಟಿರುವ ಪ್ರಶ್ನೆಯು ಬಯಸುವ ಉತ್ತರವು ಯಾವೆಲ್ಲ ಸಾಮರ್ಥ್ಯ ಗಳ ಗಳಿಕೆಯ ಪರಿಣಾಮವಾಗಿರುತ್ತದೆಯೋ ಆ ಎಲ್ಲ ದೃಷ್ಟಿಕೋನಗಳಲ್ಲಿಯೂ ಮೌಲ್ಯಮಾಪನಕ್ಕೆ ಒಳಪಡಿಸಬೇಕು. ಆಗ ನೂರಕ್ಕೆ ನೂರು ಅಂಕದ ಗಳಿಕೆ ಸಾಧ್ಯವಿಲ್ಲ.
ಯಾವಾಗಲೂ ಹಲವು ಆಯಾಮಗಳಲ್ಲಿ ಸಾಮರ್ಥ್ಯವನ್ನು ಪರೀಕ್ಷಿಸುವುದು ವಾಕ್ಯ ರೂಪದ ಉತ್ತರಗಳನ್ನು ಬಯಸುವ ಪ್ರಶ್ನೆಗಳು. ಆದ್ದರಿಂದಲೇ ಪ್ರಬಂಧ ಮಾದರಿಯ ಪ್ರಶ್ನೆಗಳಲ್ಲಿ ಪೂರ್ಣ ಅಂಕಗಳನ್ನು ಪಡೆಯಲು ಸಾಧ್ಯವಿಲ್ಲ ಎನ್ನುವ ನಂಬಿಕೆ ಇದೆ. ಉದಾಹರಣೆಗೆ ಭಾಷಾ ಪಠ್ಯಗಳಲ್ಲಿ ಪ್ರಬಂಧ ಬರೆಯುವುದು ಇರುತ್ತದೆ. ಎಷ್ಟು ಚೆನ್ನಾಗಿ ಪ್ರಬಂಧ ಬರೆದರೂ ಅಲ್ಲಿ ಹೇಳಬಹುದಾದ ಇನ್ನೊಂದಷ್ಟು ವಿಷಯಗಳು ಬಾಕಿ ಇದ್ದೇ ಇರುತ್ತದೆ. ಆದ್ದರಿಂದ ಎಂತಹ ಅದ್ಭುತ ಪ್ರಬಂಧಕ್ಕೂ ಪೂರ್ಣ ಅಂಕವನ್ನು ಕೊಡಲು ಸಾಧ್ಯವಾಗುವುದಿಲ್ಲ. ಜೊತೆಗೆ ಯಾರೂ ಪರಿಪೂರ್ಣ ಜ್ನಾನಿಗಳಾಗಿರುವುದಿಲ್ಲ ಎಂಬುದರ ಸೂಚಕವಾಗಿ ಒಂದು ಅಂಕ ಕಡಿತಗೊಳಿಸುವ ಪದ್ದತಿ ಇದೆ. ಸಲೂ ಸಾಧ್ಯವಿದೆ.

TH17_NATION_SSLC_2856001fತರ್ಕವು ಸತ್ಯವನ್ನು ಸಾಧಿಸಲು ಇರುವ ದಾರಿಯಷ್ಟೇ! ಸತ್ಯವು ತರ್ಕವನ್ನು ಮೀರಿಯೂ ಇರಬಹುದು. ಎಂಬ ತತ್ವದ ಆಧಾರದಲ್ಲಿ ಮುಂದಿನ ವಿಚಾರಗಳನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. 90 ರ ದಶಕದಲ್ಲಿ ವಿಶ್ವಸಂಸ್ಠೆಯು ಹಿಂದುಳಿದ ಮತ್ತು ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಸಾರ್ವತ್ರಿಕ ಶಿಕ್ಷಣವನ್ನು ಸಾಧಿಸಲು ತೀವ್ರ ಪ್ರಯತ್ನಕ್ಕೆ ತೊಡಗಿತು. ಜೊಮೆಟಿಯನ್ ಅಂತರಾಷ್ಟ್ರೀಯ ಸಮ್ಮೇಳನದ ಪರಿಣಾಮವಾಗಿ ಸಾರ್ವತ್ರಿಕ ಶಿಕ್ಷಣದ ಪರಿಕಲ್ಪನೆ ಪ್ರಬಲವಾಯಿತು. ಉನ್ನಿಕೃಷ್ಣನ್ ಮೊಕದ್ದಮೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪು ಅಂತಿಮವಾಗಿ ಶಿಕ್ಷಣವನ್ನು ಮೂಲಭೂತ ಹಕ್ಕುಗಳ ಸ್ಥಾನಕ್ಕೆ ತಂದು ನಿಲ್ಲಿಸಿತು. 2002 ರಲ್ಲಿ ಸರ್ವಶಿಕ್ಷಣ ಅಭಿಯಾನವೂ ಜಾರಿಗೊಂಡಿತು. ಶೈಕ್ಷಣಿಕ ಕಾರ್ಯಗಳಿಗೆ ವಿಶ್ವಬ್ಯಾಂಕ್ ಧಾರಾಳವಾಗಿ ಹಣವನ್ನೂ ಕೊಡತೊಡಗಿತು.

ಸಾರ್ವತ್ರಿಕ ಗುಣಮಟ್ಟದ ಶಿಕ್ಷಣ ಯಾವಾಗ ಸಾಧ್ಯ : `ಬೇಕಾದವರು ಮಾತ್ರ ಶಾಲೆಗೆ ಬನ್ನಿ’ ಎಂದಾಗ ಕಲಿಕೆಯಲ್ಲಿ ಆಸಕ್ತರಾದವರು ಮಾತ್ರ ಶಾಲೆಗೆ ಬರುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಸ್ವಾಭಾವಿಕ ಅಂತಃಪ್ರೇರಣೆ ಇರುವುದರಿಂದ ಕಲಿಸುವುದು ಸುಲಭ. ಹೆಚ್ಚು ಅಂಕಗಳಿಸುವುದು ಸುಲಭ. ಆದರೆ ‘ ಎಲ್ಲರೂ ಕಡ್ಡಾಯವಾಗಿ ಶಾಲೆಗೆ ಬರಬೇಕು’ ಎಂದಾಗ ಎಲ್ಲರಿಗೂ ಆಸಕ್ತಿಯಿರುವ ಎಲ್ಲಾ ಕಲಿಕೆಗಳನ್ನು ಕಲಿಸುವ ಶಾಳೆಗಳು ಬೇಕಾಗುತ್ತವೆ. ಎಲ್ಲಾ ವಿದ್ಯಾರ್ಥಿಗಳು ಮೂರು ಭಾಷಾ ಪಠ್ಯಗಳು ಮತ್ತು ಮೂರು ಕೋರ್ ವಿಷಯಗಳನ್ನೇ ಕಲಿಯಲು ಆಸಕ್ತರಾಗಿರುವುದಿಲ್ಲ. ಕೆಲವರಿಗೆ ಮೀನು ಹಿಡಿಯುವುದರಲ್ಲಿ ಆಸಕ್ತಿ ಇರಬಹುದು. ಆಗ ಶಾಲೆಗಳಲ್ಲಿ ಮೀನು ಹಿಡಿಯುವುದನ್ನೂ ಕಲಿಸುವ ವ್ಯವಸ್ಥೆ ಇರಬೇಕಾಗುತ್ತದೆ. ಕೆಲವು ವಿದ್ಯಾರ್ಥಿಗಳು ವ್ಯಾಪಾರದಲ್ಲಿ ಆಸಕ್ತರಿರಬಹುದು. ಆಗ ಅವರಿಗೆ ಪ್ರಾಕ್ಟಿಕಲ್‍ಆಗಿ ವ್ಯಾಪಾರ ಮಾಡುವುದನ್ನು ಕಲಿಸಲು ಶಾಲೆಗಳಲ್ಲಿ ವ್ಯವಸ್ಥೆ ಇರಬೇಕಾಗುತ್ತದೆ. ಇಂತಹ ವ್ಯವಸ್ಥೆ ಇದ್ದಾಗ ಮಾತ್ರ ಯಾವ ಮಕ್ಕಳೂ ಕಲಿಕೆಯಲ್ಲಿ ಹಿಂದುಳಿಯುವುದಿಲ್ಲ.
ಆದರೆ ನಮ್ಮ ಶಾಲೆಗಳಲ್ಲಿ ಈ ರೀತಿಯ ವ್ಯವಸ್ಥೆ ಜಾರಿಗೆ ಬರಲೇ ಇಲ್ಲ. ಭಾರತದ ಬೃಹತ್ ಜನಸಂಖ್ಯೆಗೆ ಶಿಕ್ಷಣವನ್ನು ಈ ರೂಪದಲ್ಲಿ ಸಂಘಟಿಸಬೇಕಾದರೆ ಕನಿಬಷ್ಠ 10 ವರ್ಷಗಳ ಸಿದ್ಧತೆಗಳು ಮತ್ತು ಊಹಿಸಲು ಸಾಧ್ಯವಿಲ್ಲದ ಮೊತ್ತದ ಅಪಾರ ಹಣ ಬೇಕಾಗುತ್ತದೆ. ಭಾರತ ಸರ್ಕಾರ ಮತ್ತು ಭಾರತದ ಸರ್ಕಾರಗಳು ಆ ಮಟ್ಟಿಗೆ ಇನ್ನೂ ಸಮರ್ಥವಾಗಿಲ್ಲವೆಂದು ಒಪ್ಪಬೇಕಾಗುತ್ತದೆ. ಆಗ ಜಾರಿಗೆ ಬಂದದ್ದು `ರಾಜಿಯ ಶಿಕ್ಷಣ’.
ರಾಜಿಯ ಶಿಕ್ಷಣ : ರಾಜಿಯ ಶಿಕ್ಷಣ ಎಂದರೆ ಅದಾಗಲೇ ಇದ್ದ 6 ವಿಷಯಗಳ ಕಲಿಕೆಯನ್ನು `ಎ’ಭಾಗ ಎಂದು ಮಾಡಿ ಅದರಲ್ಲಿ ಅಂತಃಪ್ರೇರಣೆಯ ಆಸಕ್ತಿಯಿಲ್ಲದ ಮಕ್ಕಳಿಗೆ , ಆಸಕ್ತಿ ಇರಬಹುದಾದ ವಿಷಯಗಳನ್ನು ‘ಬಿ` ಭಾಗ ಎಂದು ಮಾಡಿ ಅದರಲ್ಲಿಯೂ ಅಂಶಗಳನ್ನು ಕೊಡಲು ಶಿಕ್ಷಕರಿಗೆ ತಿಳಿಸಿ. ಆದರೆ ಉತ್ತೀರ್ಣತೆಗೆ ಆರು ಅಂಶಗಳನ್ನೇ ಪ್ರಧಾನವಾಗಿರುಸಿಕೊಳ್ಳುಂತೆ ಆದೇಶಿಸಿದ್ದೇ ರಾಜಿಯ ಶಿಕ್ಷಣ.

ರಾಜಿಯ ಶಿಕ್ಷಣದ ಸಮಸ್ಯೆ ಏನೆಂದರೆ ಮಕ್ಕಳಿಗೆ ಸ್ವಾಭಾವಿಕ ಆಸಕ್ತಿಯಿಲ್ಲದ ವಿಷಯಗಳಲ್ಲಿ ಅಂತಃಪ್ರೇರಣೆಯನ್ನು ತರುವುದು ಹೇಗೆ ಎಂಬುದು. ಆ ಸಂದರ್ಭದಲ್ಲಿ ಶಿಕ್ಷಣದ ಅಕಾಡೆಮಿಕ್ ಭಾಗಗಳನ್ನು, ಆಢಳಿತಾತ್ಮಕ ಭಾಗಗಳನ್ನು ಪ್ರತ್ಯೇಕಗೊಳಿಸಿ ಶಿಕ್ಷಣದ ಆಢಳಿತಾತ್ಮಕ ಭಾಗಗಳಿಗೆ ಶಿಕ್ಷಕರ ಪ್ರವೇಶವನ್ನು ತಡೆದಿದ್ದರೆ ಆಸಕ್ತಿಯಿಲ್ಲದ ಮಕ್ಕಳಲ್ಲೂ ಆಸಕ್ತಿಯನ್ನು ಒಂದಷ್ಟು ಮಟ್ಟಿಗೆ ಸೃಷ್ಟಿಸಬಹುದಿತ್ತು. ಆದರೆ ಸರ್ವಶಿಕ್ಷಣ ಅಭಿಯಾನದ ನಂತರ ಶಿಕ್ಷಣದ ಆಡಳಿತಾತ್ಮಕ ಕಾರ್ಯಗಳು ವಿಪರೀತ ಹೆಚ್ಚಿದವು ಮತ್ತು ಅದೆಲ್ಲಕ್ಕೂ ಶಿಕ್ಷಕರನ್ನು ನಿಯೋಜಿಸಲಾಯ್ತು. ಆಗ ಅಕಾಡೆಮಿಕ್ ವಿಭಾಗದಲ್ಲಿ ಶಿಕ್ಷಕರ ತೊಡಗಿಕೊಳ್ಳುವಿಕೆ ‘ದಾಖಲೆ ಸೃಷ್ಠಿ’ಗೆ ಮಾತ್ರ ಸೀಮಿತಾವಾಗುತ್ತಾ ಹೋಯ್ತು. ಹಾಗೆಂದು ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ಮುಂದಿನ ವರ್ಷ ಅವರು ಶಾಲೆಗೆ ಬರುವುದಿಲ್ಲ. ವಿದ್ಯಾರ್ಥಿಗಳು ಶಾಲೆಗೆ ಬರದಿದ್ದರೆ ಸಾರ್ವತ್ರಿಕ ಶಿಕ್ಷಣವೇ ಸಾಧಿತವಾಗುವುದಿಲ್ಲ. ಆಗ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪುನಃಬೋಧಿಸಿ ಪುನಃ ಪರೀಕ್ಷೆನಡೆಸಿಯಾದರೂ ಉತ್ತೀರ್ಣರಾಗುವಂತೆ ಮಾಡಲು ಶಿಕ್ಷಕರಿಗೆ ತಿಳಿಸಲಾಯ್ತು.

ಆಡಳಿತಾತ್ಮಕ ಕಾರ್ಯಗಳಲ್ಲಿ ಜರ್ಜರಿತರಾದ ಶಿಕ್ಷಕರಿಗೆ ಒಂದು ಬಾರಿ ಬೋಧಿಸಲು ಸಮಯ ಸಿಗದಿರುವಾಗ ಪುನಃ ಪುರ್ನ ಬೋಧಿಸಲು ಸಮುಯ ಎಲ್ಲಿಂದ ಬರಬೇಕು. ಈ ಸನ್ನಿವೇಶದಲ್ಲಿ ಎಲ್ಲರನ್ನೂ ಉತ್ತೀರ್ಣಗೊಳಿಸಿದರೆ ಸಮಸ್ಯೆಯೇ ಇರುವುದಿಲ್ಲವೆಂಬ ಚಿಂತನೆ ಯಾರಿಗಾದರೂ ಬಂದೇ ತೀರುತ್ತದೆ ಎಂಬುದು ಎಲ್ಲರಿಗೂ ಅರ್ಥವಾಗುವ ವಿಷಯ. ಎಲ್ಲರನ್ನೂ ಉತ್ತೀರ್ಣಗೊಳಿಸಲು ಉಳಿದುಕೊಂಡ ಏಕೈಕ ವಿಧಾನವೆಂದರೆ ಮೌಲ್ಯಮಾಪನದ ಮಾನದಂಡಗಳನ್ನು ತೀರಾ ದುರ್ಬಲಗೊಳಿಸಿಕೊಳ್ಳುವುದು. ಅದರ ಪರಿಣಾಮ ಉತ್ತರ ಪತ್ರಿಕೆಯಲ್ಲಿ `ಎಲಿಫೆಂಟ್’ ಎಂದು ಬರೆಯಬೇಕಾದಲ್ಲಿ `ಎಲಿ’ ಎಂದು ಬರೆದಿದ್ದರೆ “ ಎಲಿಫೆಂಟ್ ಎಂದು ಬರೆಯಲು ಹೊರಟ ವಿದ್ಯಾರ್ಥಿಗೆ ಅವಸರ ಅವಸರವಾಗಿ ಬರೆದಾಗ ‘ಫೆಂಟ್’ ಬರೆಯಲು ಬಿಟ್ಟು ಹೋಗಿರಬೇಕು, ಆದ್ರೆ ವಿದ್ಯಾರ್ಥಿ ಹೊರಟದ್ದು ಎಲಿಫೆಂಟ್ ಎಂದೇ ಬರೆಯಲಿಕ್ಕೇನೆ ಎಂದು, ಮೌಲ್ಯ ಮಾಪಕರೇ ಅರ್ಥಮಾಡಿಕೊಂಡು ಅಂಕಗಳನ್ನು ಕೊಡಬಹುದಾದ ಸ್ಥಿತಿ ಜಾರಿಗೆ ಬಂದಿತ್ತು. ಉತ್ತೀರ್ಣರಾಗಲಾಗದವರನ್ನ ಉತ್ತೀರ್ಣಗೊಳಿಸಲು ನಾನಾ ಕಸರತ್ತುಗಳನ್ನು ಮಾಡಲು ಹೊರಟಾಗ ಬರೆಯದವರಿಗೆ ಅಂಕಗಳನ್ನು ಕೊಡುವಾಗ ಸ್ವಲ್ಪ ಚೆನ್ನಾಗಿ ಬರೆದವರಿಗೇಕೆ ಅನ್ಯಾಯ ಮಾಡಬೇಕು, ಇನ್ನೂ ಧಾರಾಳವಾಗಿಯೇ ಕೊಡೋಣ ಎಂಬ ಪ್ರಜ್ಞೆ ಜಾಗೃತವಾಗುವುದು ಸಹಜ. ಅದರ ಪರಿಣಾಮ 60 ಅಂಕ ಬರುವವನಿಗೆ 80-85 ಅಂಕಗಳು ಬರಲು ಶುರುವಾಯ್ತು. 10ನೇ ತರಗತಿಯದ್ದು ಬೋರ್ಡ್ ಎಕ್ಸಾಂ ಆಗಿದ್ರೂ ಅಲ್ಲಿ ಮೌಲ್ಯಮಾಪನ ಮಾಡುವುದು 9ನೇಯ ತನಕ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿದವರೇ ಹೊರತು ಬೇರಾರೂ ಅಲ್ಲ. 9ನೇಯ ತನಕ ವಿದ್ಯಾರ್ಥಿಗಳನ್ನು ಉತ್ತೀರ್ಣರಾಗಿ 10ನೆಯಲ್ಲಿ ದೊಡ್ಡ ಪ್ರಮಾಣದ ಅನುತ್ತೀರ್ಣತೆಯಾದರೆ 9ನೆಯ ತನಕ ಉತ್ತೀರ್ಣಗೊಳಿಸಿದವರೇ ಉತ್ತರಿಸಬೇಕಾಗುತ್ತದೆ. 9ನೆಯ ತನಕ ಉತ್ತೀರ್ಣಗೊಳಿಸಿದ ಉತ್ತರದಾಯಿಗಳೇ 10ನೇ ಉತ್ತರ ಪತ್ರಿಕೆಯ ಮೌಲ್ಯ ಮಾಪಕರು ಆದಾಗ ಸ್ವಾಭಾವಿಕವಾಗಿ ಏನಾಗಬಹುದೋ ಅದೇ ಆಯಿತು.

ಈ ಸನ್ನಿವೇಶವನ್ನು ಅತ್ಯಂತ ಯಶಸ್ವಿಯಾಗಿ ಶೈಕ್ಷಣಿಕ ಆಡಳಿತವು ಬಳಸಿಕೊಂಡಿತು. ‘ ಎಲ್ಲರೂ ಉತ್ತೀರ್ಣರಾದ ಮಾತ್ರಕ್ಕೆ ಗುಣಮಟ್ಟದ ಶಿಕ್ಷಣವೆಂದು ಅರ್ಥವಲ್ಲ. ಎಲ್ಲರೂ ಪ್ರಥಮ ಧರ್ಜೆಯಲ್ಲಿ ಉತ್ತೀರ್ಣರಾದ್ರೆ ಗುಣಮಟ್ಟದ ಶಿಕ್ಷಣ ಎನ್ನಬಹುದು ಎಂಬ ನಿಲುವು ಕ್ರಮೇಣ ತೆಗೆದುಕೊಳ್ಳತೊಡಗಿತು. ಈಗ ಉತ್ತೀರ್ಣಗೊಳಿಸುತ್ತಾ ಹೋದ ಶಿಕ್ಷಕರಿಗೆ ಪ್ರಥಮ ಧರ್ಜೆಯಲ್ಲಿ ಉತ್ತೀರ್ಣಗೊಳಿಸಬೇಕಾದ ಅನಿವಾರ್ಯತೆ ಜೊತೆಗೆ ಜಿಲ್ಲೆಗಳ ಶೈಕ್ಷಣಿಕ ಫಲಿತಾಂಶದ ನಡುವೆ ಶತೃ ರಾಷ್ಟ್ರಗಳ ಕದನದ ಸ್ವರೂಪದ ಸ್ಪರ್ಧಾತ್ಮಕತೆಯನ್ನ ಮಾಧ್ಯಮಗಳು ಸೃಷ್ಟಿಸಿದ್ದರ ಪರಿಣಾಮವಾಗಿ ಶೈಕ್ಷಣಿಕ ಆಡಳಿತವು ಪ್ರಥಮ ಧರ್ಜೆಯನ್ನು ಬಿಟ್ಟು ಬಿಡಿ, ಡಿಸ್ಟಿಂಕ್ಷನ್ ಎಷ್ಟು ಎಂದು ಶಿಕ್ಷಕರನ್ನು ತರಾಟೆಗೆ ತೆಗೆದುಕೊಳ್ಳುವ ಹಂತಕ್ಕೆ ಬರತೊಡಗಿದೆ. ಆಗ ಶಿಕ್ಷಕರೂ ಆಗಿರುವ ಮೌಲ್ಯಮಾಪಕರು ಹೇಗೆಲ್ಲಾ ಸಾಧ್ಯವೋ ಹಾಗೆಲ್ಲ ಉತ್ತರಗಳನ್ನು ಅರ್ಥಮಾಡಿಕೊಂಡು ಸಾಧ್ಯವಾದಷ್ಟು ಹೆಚ್ಚು ಮಕ್ಕಳಿಗೆ ಡಿಸ್ಟಿಂಕ್ಷನ್ ಕೊಡುವ ಮಟ್ಟಿಗೆ ಮೌಲ್ಯಮಾಪನವನ್ನು ದುರ್ಬಲಗೊಳಿಸುವ ಸ್ಥಿತಿಗೆ ಬಂದ್ರು. ಇದರ ಫಲವೇ 625ಕ್ಕೆ 625 ಅಂಕಗಳು. ಅದಿಲ್ಲದೇ ಇದ್ದರೆ ಜ್ಞಾನರೂಪದ ಪರೀಕ್ಷೆ 625ಕ್ಕೆ 625 ಬರಲಾರದು. ಕೌಶಲ್ಯ ರೂಪದ ಪರೀಕ್ಷೆ 625ಕ್ಕೆ 625 ಬರಲು ಸಾಧ್ಯ ಏಕೆಂದರೆ 10 ಜನ ಓಟಗಾರರನ್ನು ಪ್ರಥಮ ಯಾರು ಎಂದು ನಿಖರವಾಗಿ ಹೇಳಲು ಆಗುತ್ತದೆ. +2 ವರೆಗಿನ ಹಂತದಲ್ಲಿ ಗಣಿತದಲ್ಲಿ ಜ್ಞಾನ ಪರೀಕ್ಷಿಸಲ್ಪಟ್ಟರು ಪತ್ರಿಕೆಯು ಕೌಶಲ್ಯ ರೂಪದಲ್ಲಿರುವುದರಿಂದ 100ಕ್ಕೆ ನೂರು ಬರಬಹುದು. ಆದ್ರೆ ಉಳಿದ 5 ವಿಷಯಗಳ ಪತ್ರಿಕೆ ಜ್ಞಾನರೂಪದಲ್ಲಿರುತ್ತದೆ. ಜ್ಞಾನವನ್ನು ಅಂದಾಜಿಸಬಹುದೇ ಹೊರತು ಅಳೆಯಲು ಸಾಧ್ಯವಿಲ್ಲ. ಅಂದಾಜಿಸುವಿಕೆಯು ಒಬ್ಬ ಮೌಲ್ಯಮಾಪಕನಿಂದ ಇನ್ನೊಬ್ಬ ಮೌಲ್ಯಮಾಪಕನಿಗೆ 625ರಲ್ಲಿ 10-15 ಅಂಕಗಳ ವ್ಯತ್ಯಾಸವನ್ನಾದ್ರೂ ತರುತ್ತದೆ ಆದ್ರಿಂದ 625ಕ್ಕೆ 625ನ್ನ ಪಡೆಯಲು ಸಾಧ್ಯವಿಲ್ಲ.

ಭವಿಷ್ಯದ ಸವಾಲು: ಭವಿಷ್ಯದ ಸವಾಲು ಏನಿರತ್ತದೆ ಎಂದರೆ ಬೇರೆ ಬೇರೆ ರೀತಿಯ ಆಸಕ್ತಿಗಳನ್ನ ಅಂತಃಪ್ರೇರಣೆಯಾಗಿ ಹೊಂದಿರುವ ಮಕ್ಕಳ ಎಲ್ಲಾ ಆಸಕ್ತಿಗಳ ಆಧಾರದಲ್ಲಿ ವ್ಯವಸ್ಥಿತ ಪಠ್ಯಕ್ರಮವನ್ನು ರೂಪಿಸಿ ಕಲಿಸಲು ಮತ್ತು ಪರೀಕ್ಷಿಸಲು ಸಿದ್ದತೆ ಮಾಡಿಕೊಳ್ಳುವುದು ಸಾಧ್ಯವೇ ಎನ್ನುವುದು. ಇದು ಸಾಧ್ಯವಾದರೆ ಆಗ ಕೌಶಲ್ಯ ರೂಪದ ಕಲಿಕೆಗಳಲ್ಲಿ 625ಕ್ಕೆ 625 ಅಂಕಗಳನ್ನು ಪಡೆಯಲು ಸಾಧ್ಯವಾಗಬಹುದು. ಹಾಗೆ ಆದಾಗಲೂ ಕಲಿಕೆಯ ಗುಣಮಟ್ಟ ಕುಸಿಯುವುದಿಲ್ಲ.
ಆದರೆ, ಇಂಥಹ ಸಾಧ್ಯತೆಯೂ ತೀರ ವಿರಳ. ಹಾಗಿರುವಾಗ ಈಗಿರುವ ಪತ್ರಿಕೆಗಳಲ್ಲಿ ಒಂದು ಶಾಲೆಯಲ್ಲಿ 625ಕ್ಕೆ 625 ಅಂಕಗಳನ್ನು ಎಷ್ಟು ವಿದ್ಯಾರ್ಥಿಗಳು ಪಡೆದಿದ್ದಾರೆ ಎಂಬ ಆಧಾರದಲ್ಲಿ ಕಲಿಕೆಯ ಗುಣಮಟ್ಟವನ್ನು ನಿರ್ಧರಿಸುವ ವ್ಯವಸ್ಥೇ ಬಂದೇ ಬರಲಿದೆ. ಸಮಾಜ ಒಂದೊಮ್ಮೆ ಎಚ್ಚೆತ್ತುಕೊಂಡರೇ 625ಕ್ಕೆ 625 ಅಂಕಗಳು ಸೂಚಿಸುವ ಗುಣಮಟ್ಟದ ಯಥಾರ್ಥತೆ ಪರಿಶೀಲನೆಗೆ ಒಳಪಡಬಹುದು.

ಯಥಾರ್ಥತೆಯನ್ನು ಪರಿಶೀಲಿಸುವುದು ಕಷ್ಟವೇನಲ್ಲ. ನಮ್ಮಲ್ಲಿ ಸಾಮಾನ್ಯ ಶಿಕ್ಷಣದ ಪರೀಕ್ಷೆಯ ಮೌಲ್ಯಮಾಪನ ತೀರಾ ದುರ್ಬಲವಾಗಿ 625ಕ್ಕೆ 625 ಅಂಕಗಳ ಸ್ಥಿತಿಗೆ ತಲುಪಿತ್ತಿದ್ದಂತೆ, ಸ್ಪರ್ಧಾತ್ಮಕ ಪರೀಕ್ಷೆಗಳು ಮೌಲ್ಯಮಾಪನ ತೀರಾ ಬಿಗಿಯೂ ಸಶಕ್ತವೂ ಆಗಿ ಅಂಕಗಳನ್ನು ಪಡೆಯುವುದೆ ಕಷ್ಟ ಎಂಬ ಸ್ಥಿತಿಗೆ ಹೋಗಿದೆ. ಸಾಮಾನ್ಯ ಶಿಕ್ಷಣದ ಪರೀಕ್ಷೆಯಲ್ಲಿ 625ಕ್ಕೆ 625ರ ಮಟ್ಟದ ಅಂಕಗಳನ್ನು ಪಡೆದವರು ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ಶೇಕಡಾ 100 ಅಂಕ ಪಡೆದಿದ್ದಾರೆಯೇ ಎಂಬ ಸಮೀಕ್ಷೆ ನಡೆಸಬೇಕು. ಸಾಮಾನ್ಯ ಶಿಕ್ಷಣದ ಪರೀಕ್ಷೆಯಲ್ಲಿ ಶೇಕಡಾ 100 ಅಂಕ ಪಡೆದವರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಶೇಕಡಾ 95 ಅಂಕವನ್ನಾದರೂ ಪಡೆದರೆ ಆಗ ಕಲಿಕಾ ಧಕ್ಷತೆ ಸಮರ್ಥವಿದೆ ಎಂದು ಸ್ವೀಕರಿಸಬಹುದು. ಬದಲಿಗೆ ಸಾಮಾನ್ಯ ಶಿಕ್ಷಣದ ಪರೀಕ್ಷೆಯಲ್ಲಿ ಶೇಕಡಾ 100 ಅಂಕ ಪಡೆದವರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಶೇಕಡಾ 60ಕ್ಕಿಂತ ಕಡಿಮೆ ಅಂಕ ಪಡೆದರೆ ಕಲಿಕಾ ಧಕ್ಷತೆಯೇ ಪ್ರಶ್ನಾರ್ಹವಾಗಿ ಉಳಿಯುತ್ತಿದೆ. ಅದರಿಂದ ಆಗಲಿರುವ ಉಪಯೋಗವೆಂದರೆ ಪಡೆದ ಅಂಕಗಳು ಕಲಿಕಾ ಧಕ್ಷತೆಯ ಮಾನದಂಡವಲ್ಲ ಎಂಬುದು ಸಾಬೀತಾಗುತ್ತದೆ. ಅಷ್ಟು ಸಾಧ್ಯವಾದ್ರೆ ನೂರು ಶೇಕಡಾದ ತೆವಲು ಮತ್ತು ಆವೇಶಗಳಿಗೆ ಕಡಿವಾಣ ಬೀಳಬಹುದು.

One comment to “ಕಲಿಕಾ ದಕ್ಷತೆಯ ನಿರ್ಧಾರಕಗಳಾಗಿ ಅಂಕಗಳು”

ಪ್ರತಿಕ್ರಿಯಿಸಿ