ನಿಷ್ಠುರತೆಯ ನೋಂಪು ಜಿ.ರಾಜಶೇಖರ್ ೭೦: ರಾಜಶೇಖರರ ಪ್ರೀತಿಯ ಜಗತ್ತು !

grheader-naravidivderspa`ಅಭಿನವ’ ಶುರುವಾಗುವುದಕ್ಕೆ ಮುಂಚೆ ಕೆಲವು ಗೆಳೆಯರು ಸೇರಿ `ಪ್ರತಿಭಾ ಯುವ ವೆದಿಕೆ’ ಎಂಬ ಗುಂಪೊಂದನ್ನು ಮಾಡಿಕೊಂಡಿದ್ದೆವು. ಪ್ರತಿ ತಿಂಗಳು ಸಾಹಿತ್ಯದ ಕಾರ್ಯಕ್ರಮ, ಪುಸ್ತಕ ಪ್ರಕಟನೆ, ಕಾರ್ಯಶಿಬಿರಗಳು ಮುಂತಾದುವುಗಳನ್ನು ಮಾಡುವ ಉಮೇದಿತ್ತು. ಆಗ `ಕಾದಂಬರಿ ಕಣ್ಣಲ್ಲಿ ಕಾರಂತರು’ ಎಂಬ ಪುಸ್ತಕವನ್ನು ಹೊರತಂದಿದ್ದೆವು. (ಗೆಳೆಯ ಎನ್. ಎಸ್. ಶ್ರೀಧರಮೂರ್ತಿ ಮತ್ತು ನಾನು ಬೆಂಗಳೂರಿನ ಜನಾರ್ದನ ಹೊಟೇಲಿನಲ್ಲಿ ಕಾರಂತರನ್ನು ಸಂದರ್ಶಿಸಲು  ಹೋಗಿದ್ದು ಈಗಲೂ ನೆನಪಿದೆ) 1990 ಇರಬೇಕು. ಜಿ. ರಾಜಶೇಖರ ಅವರ `ಕಾರಂತರು ಮತ್ತು ಕಮ್ಯುನಿಷ್ಠರು’ ಎಂಬ ಲೇಖನವನ್ನು ಬಳಸಿಕೊಳ್ಳಲು ಪತ್ರ ಬರೆದಾಗ `ದಾರಾಳವಾಗಿ ಬಳಸಿಕೊಳ್ಳಿ’ ಎಂದು ಪತ್ರ ಬರೆದಿದ್ದರು. ಆ ಹೊತ್ತಿಗಾಗಲೇ ಕನ್ನಡದಲ್ಲಿ ಪ್ರಾಮಾಣಿಕ ಮತ್ತು ನೀಷ್ಠುರ ವಿಮರ್ಶಕ ಹಾಗು ವಿಶಿಷ್ಟ ಚಿಂತಕರೆಂದು ನಮ್ಮ ಸುತ್ತಲಿನ ಜನ ಮಾತನಾಡಿಕೊಳ್ಳುತ್ತಿದ್ದರು. ಜಿ. ರಾಜಶೇಖರರ ಈ ಲೇಖನವನ್ನು ಮತ್ತು ಪುಸ್ತಕವನ್ನು ಮೆಚ್ಚಿ ಹಲವು ಪತ್ರಿಕೆಗಳಲ್ಲಿ ಪ್ರಶಂಸೆೆಗಳು ಪ್ರಕಟವಾದವು. ಇದೆಲ್ಲದರಿಂದ ಉತ್ತೇಜಿತರಾದ ನಾವು, ಅವರು ಹಿಂದೆ ಕಾರಂತರ ಜೊತೆ ಮಾಡಿದ ಮಾತುಕತೆ ಮತ್ತು ಈ ಲೇಖನವನ್ನು ಪುಟ್ಟ ಪುಸ್ತಕವಾಗಿ ಹೊರತರವು ಉತ್ಸಾಹತೋರಿ ಪತ್ರ ಬರೆದಾಗ ತಕ್ಷಣವೇ ರಾಜಶೇಖರ್ ಉತ್ತರ ಬರೆದರು: `ಆ ಲೇಖನದಲ್ಲಿನ ನನ್ನ ವಿಚಾರ/ಅಭಿಪ್ರಾಯಗಳು ಬದಲಾಗಿವೆ. ಹೀಗಾಗಿ ದಯಮಾಡಿ ತರೆಬೇಡಿ’. ಆ ಹೊತ್ತಿನ ನಮ್ಮ ಮನಃಸ್ಥಿತಿಗೆ ನಿರಾಸೆಯಾದರೂ ಸುಮ್ಮನಾದೆವು.

1994ರಿಂದ ಆರಂಭಗೊಂಡ `ಅಭಿನವ ಚಾತುರ್ಮಾಸಿಕ ‘ ಪತ್ರಿಕೆಗೆ ಲೇಖನಗಳನ್ನು ಕೇಳಿದಾಗಲೆಲ್ಲ ಬರೆದು ಕಳಿಸುವುದು. ಪುಸ್ತಕಗಳನ್ನು ಕಳುಹಿಸಿದರೆ ತಕ್ಷಣ ಓದಿ ಅಭಿಪ್ರಾಯ ಬರೆಯುವುದು ಅದರ ಜತೆಗೆ ಸದ್ಯದ ಸಮಾಜದ ವಿದ್ಯಮಾನಗಳ ಬಗೆಗೆ ತಮ್ಮ ಅನಿಸಿಕೆಯನ್ನು ಪತ್ರದಲ್ಲಿ ವ್ಯಕ್ತಪಡಿಸುವುದು ನಡೆಯುತ್ತಿತ್ತು.

1998ರ ಲಂಕೇಶ್ ಪತ್ರಿಕೆಯ ದೀಪಾವಳಿ ವಿಶೇಷಾಂಕದಲ್ಲಿ ಬರ್ಟಂಡ್ ರಸೆಲ್ ಬಗೆಗೆ ಜಿ. ರಾಜಶೇಖರರ ಲೇಖನವೊಂದು ಪ್ರಕಟವಾಗಿತ್ತು. ಅದನ್ನು ಮೆಚ್ಚಿ ಮತ್ತು ಕಟುವಾಗಿ ವಿಮರ್ಶಿಸಿ ಲಂಕೇಶ್ ಮುಂದಿನ ಸಂಚಿಕೆಯಲ್ಲಿ ಬರೆದರು. ರಾಜಶೇಖರ್ ಅದಕ್ಕೂ ಪ್ರತಿಕ್ರಿಯಿಸಿದರು. ಮತ್ತೆ ಲಂಕೇಶ್ ಬರೆದರು. ಅದೇ ಸಮಯದಲ್ಲಿ ಉಡುಪಿಯಲ್ಲಿ ಬೇಟಿಯಾದೆ. `ನೀವು ಬರೆದಿರುವುದೇ ಸರಿ. ಲಂಕೇಶ್ ಹಾಗೆ ಬರೆಯಬಾರದಿತ್ತು ಅಲ್ಲವೆ? ಎಂದೆ. ಅದಕ್ಕವರು `ಅಯ್ಯೋ ದೊಡ್ಡವರು ಬೈದರೇನಾಗಲ್ಲ ಬಿಡಿ’ ಎಂದರು. ಅದೇ ಸುಮಾರಿನಲ್ಲಿ ಇರಬೇಕು ಗೋಪಾಲಕೃಷ್ಣ ಅಡಿಗರ `ಸುವರ್ಣ ಪುತ್ಥಳಿ’ಗೆ ರಾಜಶೇಖರ್ ಮುನ್ನುಡಿ ಬರೆದಿದ್ದರು. ಆ ಮುನ್ನುಡಿಗೆ ಪ್ರತಿಕ್ರಿಯೆಯಾಗಿ ಪಟ್ಟಾಭಿರಾಮ ಸೋಮಯಾಜಿ ಅವರು `ಶೂದ್ರ’ ಪತ್ರಿಕೆಯಲ್ಲಿ ಪ್ರತಿಕ್ರಿಯೆಯನ್ನು ಬರೆದಿದ್ದರು. ಅದನ್ನು ಓದಿ ಸೋಮಯಾಜಿ ಅವರನ್ನು ಹುಡುಕಿಕೊಂಡು ಮಂಗಳೂರು ವಿಶ್ವನಿದ್ಯಾನಿಲಯದ ಇಂಗ್ಲಿಷ್ ವಿಭಾಗಕ್ಕೆ ಹೋಗಿ ತಮ್ಮ ವಿಚಾರಗಳನ್ನು ಹೇಳಿ ಬಂದಿದ್ದರೆಂಬ ನೆನಪು. ನಾನು ಬರೆದದ್ದೇ ದೊಡ್ಡದು ಮತ್ತು ಮಾಡಿದ್ದೇ ಸರಿ ಎಂದೆಲ್ಲ ಬೀಗುವಾಗಲೆಲ್ಲ `ಅದು ಹೀಗಿರಲೂ ಸಾಧ್ಯ’ ಎಂಬುದನ್ನು ತೋರಿಸಿಕೊಟ್ಟವರು ರಾಜಶೇಖರ್. ಹಾಗೆಂದು ದೊಡ್ಡವರು ಅಥವಾ ಚಿಕ್ಕವರು ಯಾರೇ ತಪ್ಪು ಮಾಡಲಿ ಬಿಡಲಿ ಸುಮ್ಮನಿರುವ ಜಾಯಮಾನ ಅವರದಲ್ಲ. ಇಷ್ಟೂ ವರ್ಷಗಳಲ್ಲಿ ಅವರು ಯಾವುದಕ್ಕೂ ಅಳುಕತೆ, ಯಾರಿಗೂ ಅಂಜದೆ, ತನ್ನಗೆ ಸರಿ ಕಂಡಿದ್ದನ್ನು ಹೇಳುತ್ತಾ ಬಂದಿದ್ದಾರೆ ಬದುಕಿದ್ದಾರೆ. ಅವರ ಸರಳತೆ ಮತ್ತು ವಿನಯವಂತಿಕೆಗೆ ಬೆರಗಾಗಿದ್ದೆನೆ.

grimg_2194ಉಡುಪಿಗೆ ಹೋದಾಗಲೆಲ್ಲ ರಾಜಶೇಖರರನ್ನು ಭೇಟಿ ಮಾಡುವುದು ಸಾಮಾನ್ಯವಾಯಿತು. ಸಾಹಿತ್ಯ, ಸಂಸ್ಕೃತಿ ಕುರಿತ ಅಭಿಪ್ರಾಯಗಳನ್ನು ಗಮನವಿಟ್ಟು ಕೇಳಿ ತಮ್ಮ ವಿಚಾರಗಳನ್ನು ಹೇಳುತ್ತಿದ್ದರು. ಎಷ್ಟೇ ಸಿಲ್ಲಿ ಪ್ರಶ್ನೆಯಾದರೂ, ಗೋಜಲಾಗಿದ್ದರೂ ಅದರ ಹಿಂದಿನ ಕಾಳಜಿಯನ್ನು, ವಿಚಾರವನ್ನು ಗ್ರಹಿಸಿ ಮಾತನಾಡುತ್ತಿದ್ದರು. ಒಮ್ಮೆ ಅವರು ಹೇಳಿದ ಈ ಮಾತು ನನಗಿನ್ನೂ ನೆನಪಿದೆ. ಆ ಕಾಲದಲ್ಲಿ ನಮಗೆ ಅನ್ನಿಸಿದ್ದನ್ನೆಲ್ಲ divderspaಬರೆದುಬಿಡಬೇಕೆಂಬ ಉಮೇದು ಎದ್ದು ಕಾಣುತ್ತಿತ್ತು. `ಮನಸ್ಸಿಗೆ ಬಂದ ವಿಚಾರಗಳನ್ನೆಲ್ಲ ಒಳಗೇ ನಿಯಂತ್ರಿಸಿ ಎಷ್ಟು ಬೇಕೋ ಅಷ್ಟು ಮಾತ್ರ ಹೇಳುವುದು ನಮ್ಮಲ್ಲಿ ಕಾರ್ನಾಡ್ ಗೆ ಮಾತ್ರ ಸಾಧ್ಯವಾಗಿದೆ’. ಎಂದಿದ್ದರು. ಈ ಮಾತು ಕೇವಲ ಕನ್ನಡ ಸಾಹಿತ್ಯದ ಬಗೆಗೆ ಮಾತ್ರವಲ್ಲ; ಮನುಷ್ಯನ ವರ್ತನೆಯಲ್ಲೂ ಕಾಣಬೇಕಾಗಿರುವ ಮುಖ್ಯಾಂಶ ಎಂದು ಈಗಲೂ ನನ್ನ ನಂಬಿಕೆ. ತತ್ಕ್ಷಣದ ಘಟನೆಗಳಿಗೆ ವ್ಯಕ್ತವಾಗುವ ಮನಸ್ಸಿನ ಪ್ರತಿಕ್ರಿಯೆಗೂ ಕಾಲಾನಂತರದಲ್ಲಿ ವ್ಯಕ್ತವಾಗುವ ಪ್ರತಿಕ್ರಿಯೆಗಳಿಗೂ ಇರುವ ಅಂತರವನ್ನು ನೋಡಿದರೆ ಈ ಮಾತಿನ ಹಿಂದಿರುವ ಗ್ರಹಿಕೆ ಅರ್ಥವಾಗುತ್ತದೆ. ಹಾಗಂತ ಯಾವತ್ತೂ ತತ್ಕ್ಷಣದ ಸಂಗತಿಗಳಿಗೆ ಪ್ರತಿಕ್ರಿಯಿಸುವುದಲ್ಲ ಎಂಬುದು ಅವರ ನಿಲುವಲ್ಲ. ಆದರೆ ರಾಜಶೇಖರ್ ತತ್ಕ್ಷಣಕ್ಕೆ ಪ್ರತಿಕ್ರಿಯಿಸಲೀ ಅಥವಾ ಕಾಲಾನಂತರದಲ್ಲಿ ಪ್ರತಿಕ್ರಿಯಿಸಲಿ ಅವರ ವಿಚಾರಗಳು ಯಾವತ್ತೂ ಧ್ಯಾನಶೀಲ ಮನಸ್ಸಿನ ಪ್ರತಿಕ್ರಿಯೆಯಾಗಿರುತ್ತವೆ.

ಪುತ್ತೂರಿನಲ್ಲಿ ಗಲಭೆಯಾದಾಗ ತಾವೊಬ್ಬರೇ ಹೋಗಿ ಅಲ್ಲಿನ ಜನಸಾಮಾನ್ಯರ ಮೇಲೆ ಹಿಂಸೆ ಮಾಡಿರುವ ಪರಿಣಾಮಗಳನ್ನು ಕುರಿತು ಲಂಕೇಶ್ ಪತ್ರಿಕೆಯಲ್ಲಿ ಒಂದು ಲೇಖನ ಬರೆದರು. ಪೋಲೀಸರು, ಸರ್ಕಾರಕ್ಕೆ ಜನ ಹೆದರುತ್ತಿದ್ದ ಸಂದರ್ಭದಲ್ಲಿ ಹೀಗೆ ವಸ್ತುಸ್ಥಿತಿಯನ್ನು ಕುರಿತು ಯಾರ, ಯಾವ ಒತ್ತಾಯ ಅಥವಾ ಸೂಚನೆಯೂ ಇಲ್ಲದೆ ಸಮೀಕ್ಷೆ ಮಾಡಿದ ರಾಜಶೇಖರರ ಬಗೆಗಿದ್ದ ಗೌರವ ಇಮ್ಮಡಿಗೊಂಡಿತು. ಇದು ಕೇವಲ ಪುತ್ತೂರಿನಲ್ಲಿ ಮಾತ್ರವಲ್ಲ; ದಕ್ಷಿಣ ಕನ್ನಡದ ಯಾವುದೇ ಪುಟ್ಟ ಹಳ್ಳಿಯಲ್ಲಿ ಗಲಭೆಯಾದರೂ ಅಲ್ಲಿನ ವಸ್ತುಸ್ಥಿತಿಯನ್ನು ಸಮೀಕ್ಷಿಸಿ ಲೇಖನಗಳನ್ನು ಪ್ರಕಟಿಸುತ್ತಾ ಬಂದರು. ಕೆಲವು ದಿನಪತ್ರಿಕೆಗಳಲ್ಲಿನ ವರದಿಗಳನ್ನು ಸಾಕ್ಷಿ ಸಹಿತ ತರಾಟೆಗೆ ತೆಗೆದುಕೊಂಡರು. ಮುಂಬೈ ಗಲಭೆಗಳ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಶ್ರೀ ಕೃಷ್ಣ ಕಮಿಷನ್ ವರದಿಯನ್ನು ತೀಸ್ತಾ ಸೆಟ್ಲ್ವಾಡ್ ಅವರ ಸಬ್ ರಂಗ್ ಕಮ್ಯೂನಿಕೇಶನ್ ಮೊದಲಾಗಿ ಜವಾಬ್ದಾರಿ ಹೊತ್ತು ಪ್ರಕಟಿಸಿದರು. ಇದು ತನಗೆ ತಾನೇ ಭಾರತದ ಮಹತ್ವದ ಬೌದ್ಧಿಕ ಜವಾಬ್ದಾರಿಯ ಪ್ರತೀಕ. ರಾಜಶೇಖರ್ ಆ ಪುಸ್ತಕದ ಬಗೆಗೆ ಘನತೆವೆತ್ತ ಲೇಖನವನ್ನು ಪ್ರಕಟಿಸಿದರು. ಅದೇ ರೀತಿಯಲ್ಲಿ ಸುರತ್ಕಲ್ ಹಿಂಸೆಗೆ ಸಂಬಂಧಿಸಿದಂತೆ ನ್ಯಾಯಮೂತರ್ಿ ಸದಾಶಿವ ಆಯೋಗದ ಮುಂದೆ ಹೇಳಿಕೆ ಕೊಡಲು ಫಣಿರಾಜ್ ಅವರ ಜೊತೆಗೆ ಬಂದದ್ದು ನೆನಪಿನಲ್ಲಿದೆ. ಬೆಂಗಳೂರಿನ ಕಟ್ಟಡಗಳ ಬದಲಾದ ಮತ್ತು ಬದಲಾಗುತ್ತಿರುವ ವಾಸ್ತ್ರು ಚಹರೆಗಳನ್ನು ಕುರಿತ ಅವರ ಕುತೂಹಲ ಮತ್ತು ಬೆರಗಿನ ಮಾತುಗಳು ನನ್ನಲ್ಲಿ ಉಳಿದಿವೆ.

ಈ ಮಧ್ಯೆ ಅವರ ಬರಹಗಳನ್ನೆಲ್ಲ ಸಂಪಾದಿಸಿ ಪ್ರಕಟಸುವ ಕುರಿತು ಪ್ರಸ್ತಾಪ ಮಾಡಿದಾಗಲೆಲ್ಲ ಅಲ್ಲಗಳೆಯುತ್ತಾ ಬಂದರೂ ಕೆ. ವಿ. ಸುಬ್ಬಣ್ಣನವರ ಗೌರವ ಮಾಲಿಕೆಯ ಪುಸ್ತಕಕ್ಕಾಗಿ ಕೆಲವು ಲೇಖನಗಳನ್ನು ಪ್ರಕಟಿಸಲು ಅನುಮತಿ ಇತ್ತಾಗ ನಮ್ಮ ಆಸೆ ಮತ್ತೆ ಚಿಗುರಿತು. ಪುಸ್ತಕ ಪ್ರಕಟನೆಯ ಪ್ರಸ್ತಾಪ ಬಂದಾಗಲೆಲ್ಲ. `ನೋಡಿ ನಾನು ಆ ಸಂದರ್ಭದಲ್ಲಿ ಯೋಚಿಸಿದ್ದನ್ನು ಬರೆದಿದ್ದೇನೆ. ಈಗ ನನ್ನ ವಿಚಾರಗಳು ಬದಲಾಗಿವೆ. ಮತ್ತೆ ಆ ಬಗೆಗೆ ಓದಿ ಬರೆಯುವಷ್ಟು ವ್ಯವಧಾನವಾಗಲೀ, ಸಮಯವಾಗಲಿ ಇಲ್ಲ’ ಎಂದು ಖಡಾಖಂಡಿತ ಉತ್ತರ ಸಿದ್ಧವಾಗಿರುತ್ತಿತ್ತು. `ಆದರೆ ನಾನು ಸೆಕ್ಯುಲರಿಸಂ ಕುರಿತು ಬರೆದ ಬರವಣಿಗೆಗಳಿಗೆ ಇವತ್ತೂ ಯಾವತ್ತೂ ಬದ್ಧನಾಗಿರುತ್ತೇನೆ’ ಎನ್ನುತ್ತಿದ್ದರು. ಕೇವಲ ಸೆಕ್ಯುಲರಿಸಂ ಕುರಿತ ಲೇಖನಗಳ ಜೊತೆಗೆ ವಿಮರ್ಶಾ, ಚಿಂತನಶೀಲ ಲೇಖನಗಳನ್ನು ಹೊರತರುವ ಉತ್ಸಾಹ. `ಸರ್ ಸಾಹಿತ್ಯದ ವಿದ್ಯಾರ್ಥಿಗಳಿಗೆ ಈ ಲೇಖನಗಳು ಅನುಕೂಲವಾಗುತ್ತವೆ’ ಎಂದರೆ `ಅವುಗಳನ್ನು ವಿದ್ಯಾರ್ಥಿಗಳು ಓದದಿದ್ದರೂ ನಷ್ಟವಿಲ್ಲ’ ಎನ್ನುತ್ತಿದರು. `ಇವು ಬರಹಗಾರನೊಬ್ಬನ/ಚಿಂತನಶೀಲ ಮನುಷ್ಯನ ಆಯಾ ಕಾಲದ/ ಸಮಾಜದ ಸಂಗತಿಗಳ ಕುರಿತ ದಾಖಲೆಯಾದ್ದರಿಂದ ಈ ಲೇಖನಗಳಿಗೆ ಚಾರಿತ್ರಿಕ ಮಹತ್ವ ಇದೆ’ ಎಂದು ಸಮಾಜಾಯಿಷಿ ನೀಡಿದರೂ ಅವರ ನಿಲುವು ಬದಲಾಗುತ್ತಿರಲಿಲ್ಲ. ಪ್ರಕೃತಿಯಂತೆ ಮನುಷ್ಯನ ವಿಚಾರಗಳು, ಗ್ರಹಿಕೆಗಳು ಬದಲಾಗುತ್ತವೆ ಎನ್ನುವ ವಿಷಯದಲ್ಲಿ ನಂಬಿಕೆ ಇಟ್ಟವರು ಮಾತ್ರ ಹೀಗೆ ಯೋಚಿಸಲು ಸಾಧ್ಯ. ಪುಸ್ತಕ ಪ್ರಕಟನೆಯ ವಿಷಯ ಬಿಟ್ಟು ಅಭಿನವದ ಹೊಸ ಪುಸ್ತಕದ ಕುರಿತು, ಅಭಿನವ ಚಾತುಮರ್ಾಸಿಕ ಪತ್ರಿಕೆಯ ಕುರಿತು, ಕುಟುಂಬದ ಸೌಖ್ಯ ಕುರಿತು ಮಾತನಾಡಲು ತೊಡಗುತ್ತಿದ್ದರು. `ಕೈಕಚ್ಚದ ಹಾಗೆ ನೋಡಿಕೊಳ್ಳಿ’ ಎಂಬ ಎಚ್ಚರದ ಅಷ್ಟೇ ಕಾಳಜಿಯ ಮಾತು ಅವರದಾಗಿರುತ್ತಿತ್ತು. ರಾಜಶೇಖರ್ ಹಿಂದೆ ಅನುವಾದಿಸಿದ್ದ ರೇಮಂಡ್ ವಿಲಿಯಂನ `ಸಮಾಜವಾದ ಮತ್ತು ಪರಿಸರ’ ಹಾಗು `ಬ್ರೆಕ್ಟ್’ ಪುಸ್ತಕಗಳನ್ನು ಮರುಮುದ್ರಣವಾಗಿ ಪ್ರಕಟಿಸುವ ಖುಷಿ ನಮ್ಮದಾಗಿತ್ತು(ಈ ಪುಸ್ತಕಗಳನ್ನು ಅಕ್ಷರ ಪ್ರಕಾಶನ ಹೊರ ತಂದಿತ್ತು).

ಅಂದಹಾಗೆ ಉಡುಪಿಗೆ ಹೋದಾಗಲೆಲ್ಲ `ನಿಮ್ಮನ್ನು ಭೇಟಿಯಾಗ ಬೇಕು ನಿಮ್ಮ ಮನೆಗೇ ಬರುತ್ತೇನೆ’ ಎಂದರೆ. `ನನನೇಗೂ ತೊಂದರೆ ಇಲ್ಲ. ನಿಮಗೆ ತೊಂದರೆಯಾಗಬಾರದು. ಸಂಜೆ ನಾನೇ ನೀವು ಹೇಳಿದ ಕಡೆ ಬರುತ್ತೇನೆ’ ಎಂದು ಹೇಳಿದ ಸಮಯಕ್ಕೆ ಕೈಯಲ್ಲೊಂದು ಕೊಡೆ, ಹೆಗಲಲ್ಲೊಂದು ಬ್ಯಾಗ್ನೊಂದಿಗೆ ರಾಜಶೇಖರ್ ಪ್ರತ್ಯಕ್ಷವಾಗಿಬಿಡುತ್ತಿದ್ದರು. ಕೃಷ್ಣಮಠಕ್ಕೆ ಹೋಗುತ್ತೇನೆ ಎಂದರೆ `ಹೋಗಿ ಬನ್ನಿ ಮತ್ತೆ ಸಿಗುತ್ತೇನೆ’ ಎಂದು ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗಿ ಅವತ್ತಿನ ಪತ್ರಿಕೆಗಳನ್ನು ಓದಿಕೊಂಡು ಬರುತ್ತಿದ್ದರು. `ಆಸಕ್ತಿ ಇದ್ದರೆ ಕೃಷ್ಣಮಠದ ಪಕ್ಕದಲ್ಲಿರುವ ಅನಂತೇಶ್ವರ ದೇವಸ್ಥಾನಕ್ಕೂ ಹೋಗಿಬನ್ನಿ. ಅಲ್ಲಿನ ಕಟ್ಟಡದ ವಾಸ್ತುಶಿಲ್ಪದ ದೃಷ್ಠಿಯಿಂದ ಅಪರೂಪದ್ದು’ ಎಂದು ಹೇಳುವುದನ್ನು ಮರೆಯುತ್ತಿರಲಿಲ್ಲ.

ಮೊಬೈಲ್ ಇಲ್ಲದ ದಿನಗಳಲ್ಲಿಯೂ ಕರಾರುವಕ್ಕಾಗಿ ಹೇಳಿದ ಸಮಯಕ್ಕೆ ಹೊಟೇಲ್ ಕಿದಿಯೂರಿನಲ್ಲಿಯೋ, ಶಾಂತಿ ಸಾಗರದಲ್ಲಿಯೋ ತಾವೇ ಕಾಫಿ ಕುಡಿಸಿ ಬಸ್ಸಿಗೆ ಹತ್ತಿಸಿ ಹೊರಡುತ್ತಿದ್ದರು. ರಾಜಶೇಖರ್ ಅವರ ಬ್ಯಾಗಿನಲ್ಲಿ ಕಾಫಿಪುಡಿ ಮತ್ತು ಬ್ರೆಡ್ ಕವರುಗಳಿರುತ್ತಿದ್ದವು. ತಾವು ನಂಬಿದ ವಿಚಾರ ತತ್ವಗಳ ಆಚೆಗೂ ವ್ಯಕ್ತಿಯ ನಂಬಿಕೆ ಮುಖ್ಯ ಎಂಬ ನಿಲುವು ಅವರದು.
ಒಮ್ಮೆ ಅವರ ಜೊತೆ ವಾಕಿಂಗ್ ಹೋದಾಗ ತಾವು ಚಿಕ್ಕವರಾಗಿದ್ದಾಗಿನ ಆಟದ ಮೈದಾನ ತೋರಿಸಿ ಸಮುದಾಯ ರೇಡಿಯೋ ಕೇಳಿದ್ದು, ಆಗಿನ ಉಡುಪಿಯಲ್ಲಿನ ವಿದ್ಯಮಾನಗಳನ್ನು ಹೇಳುತ್ತಿದ್ದರು. ಇದ್ದಕ್ಕಿದ್ದಂತೆ `ಈ ವಾಸನೆ ಯಾವುದೆಂದು ಗೊತ್ತೇನ್ದ್ರಿ?’ ಕೇಳಿದರು. ನಾನು ಯಾವುದೋ ಗಿಡದ್ದೋ, ಹೂವಿನದೊ ಇರಬೇಕೆಂದು ಊಹಿಸಿದೆ. ಹಳ್ಳಿಯಿಂದ ಬಂದವನಾದ್ದರೂ ಆ ವಾಸನೆಯನ್ನು ಗ್ರಹಿಸುವ ಸಾಮಥ್ರ್ಯ ನನ್ನಲ್ಲಿರಲಿಲ್ಲ. `ಹಲಸಿನ ಹೀಚು ಬಿದ್ದು ಕೊಳೆತಾಗ ಬರುವ ವಿಚಿತ್ರ ವಾಸನೆ ಇದು’ ಎಂದರು. ರಾಜಶೇಖರ್ ಅವರ ಗ್ರಹಣಶಕ್ತಿ ಮತ್ತು ನೆನಪು ಎಷ್ಟು ವಿಸಾರವಾದುದು, ಸೂಕ್ಷ್ಮವಾದುದು.

ರಾಜಶೇಖರ್ ಯಾವತ್ತೂ ತಮಗನ್ನಿಸಿದ್ದನ್ನು ಹೇಳುತ್ತಾ ಬಂದಿರುವುದರ ಜೊತೆಗೆ ತಾವು ಓದಿದ ಪುಸ್ತಕಗಳನ್ನು ಪರಿಚಯಿಸುವುದನ್ನೂ ಮಾಡುತ್ತಾರೆ. ಇಲ್ಲ್ಸ್ಟ್ರೇಟ್ಡ್ ವೀಕ್ಲಿ ಪತ್ರಿಕೆಯಲ್ಲಿ ಅಂತರರಾಷ್ಟ್ರಿಯ ಖ್ಯಾತಿಯ ಇತಿಹಾಸಕಾರ ಷ, ಶೆಟ್ಟರ್ ಅವರು ಪ್ರಕಟಿಸಿದ್ದ `ಇನ್ವೈಟಿಂಗ್ ಡೆತ್’ ಮತ್ತು 1ಪಸ್ಯೋಯಿಂಗ್ ಡೆತ್’ ಪುಸ್ತಕಗಳನ್ನು ತರಿಸಿಕೊಂಡು ಓದಿ ವಿವರವಾದ ವಿಮಶರ್ೆಯನ್ನು `ಶೂದ್ರ’ ಪತ್ರಿಕೆ(ಜನವರಿ 1991)ಯಲ್ಲಿ ಪ್ರಕಟಿಸಿದರು. (ಮಧುಕೀಶ್ವರ್ ಸಂಪಾದಿಸಿದ `ವುಮೆನ್ ಭಕ್ತ ಪೊಯೆಟ್ಸ್’ ಪುಸ್ತಕದ ಬಗೆಗೆ ಮಲ್ಲಾಡಿಹಳ್ಳಿಯ ರಾಘವೇಂದ್ರ್ರ ಪಾಟೀಲರ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ `ಸಂವಾದ’ ಪತ್ರಿಕೆಗೆ ಸುಮಾರು 11 ಪುಟಗಳ ವಿಮಶರ್ೆಯನ್ನೂ ಬರೆಯುತ್ತಾರೆ. ಅಲ್ಲಿ ಎ. ಕೆ. ರಾಮಾನುಜನ್ ಅವರ ಪ್ರಬಂಧದ ಮತ್ತು ಕನ್ನಡ ಸಾಹಿತ್ಯದ ಹಿನ್ನೆಲೆಯಲ್ಲಿ ಅವರು ಆ ಪುಸ್ತಕಗಳ ವಿವರಗಳನ್ನು ಚರ್ಚಿಸಿರುವುದು ಆಸಕ್ತಿದಾಯಕವಾಗಿದೆ.)ತಿಳಿವಳಿಕೆ ಎಂಬುದು ಜಗತ್ತಿನ ಯಾವುದೇ ಮೂಲೆಯಲ್ಲಿರಲಿ ಅದು ಎಲ್ಲರಿಗೂ ತಲುಪಬೇಕೆಂಬ ಆಸೆಯನ್ನಿಟ್ಟುಕೊಂಡಿರುವವನಿಗೆ ಮಾತ್ರ ಇದು ಸಾಧ್ಯವಾಗುವಂಥದು. (ಈಗ ಅಭಿನವ ಈ ಎರಡೂ ಪುಸ್ತಕಗಳನ್ನು ಅನುವಾದಿಸಿ ಪ್ರಕಟಿಸಿದೆ) ಶ್ರವಣಬೆಳಗೊಳದಲ್ಲಿನ ಪಲ್ಲಟಗಳನ್ನು ಶೆಟ್ಟರ್ ಗುರುತಿಸುವುದ್ನುರಾಜಶೇಖರ್ ಹೀಗೆ ಉಲ್ಲೇಖಿಸುತ್ತಾರೆ:
1. ಕ್ರಿ ಶ. 600ರಿಂದ 900 ವಿಧ್ಯುಕ್ತ ಮರಣ ಮತ್ತು ಆಧ್ಯಾತ್ಮಿಕ ಅನ್ವೇಷಣೆಗಳ ಕಾಲಾವಧಿ 2. ಕ್ರಿ ಶ. 900 ರಿಂದ 1100 ದೇಹತ್ಯಾಗದ ಧಾರ್ಮಿಕ ವಿಧಿ ಹಿಂದೆ ಸರಿದು ಧಾರ್ಮಿಕ ಸಂಘಟನೆ ಪ್ರಾರಂಭವಾದ ಕಾಲ_ಈ ಅವಧಿಯಲ್ಲಿ ಶ್ರವಣಬೆಳಗೊಳ ಒಂದು ಯಾತ್ರಾಕ್ಷೇತ್ರವಾಯಿತು. 3. ಕ್ರಿ ಶ. 1100ರಿಂದ 1300 ಸಂಪತ್ತು, ಪ್ರಭಾವ ಭಕ್ತಾದಿಗಳ ಸಂಖ್ಯೆ ಎಲ್ಲವೂ ವೃದ್ಧಿಸಿ ಶ್ರವಣಬೆಳಗೊಳ ಒಂದು ಪಟ್ಟಣವಾಗಿ ಬೆಳೆದ ಕಾಲ. 4. ಕ್ರಿ. ಶ. 1300 ರಿಂದ 1600 ಈ ಅವಧಿಯಲ್ಲಿ ಜೈನಧರ್ಮ ರಾಜಾಶ್ರಯ ಕಳೆದುಕೊಂಡು ವರ್ತಕರ ನಿಯಂತ್ರಣಕ್ಕೆ ಸಿಕ್ಕಿಕೊಂಡಿತು. ಜೈನ ಪವಿತ್ರ ಸ್ಥಳಗಳ ಸಂಪತ್ತು ಮಾತ್ರವಲ್ಲ ಧಾರ್ಮಿಕ ವಿಷಯಗಳು ಕೂಡ ವರ್ತಕರ ಯಜಮಾನಿಕೆಗೆ ಒಳಪಟ್ಟವು. 5. ಕ್ರಿ ಶ 1600ರಿಂದ 199 ಅವನತಿಯ ಕಾಲ. ಶೆಟ್ಟರ್ ಹೇಳುವಂತೆ ಧಾರ್ಮಿಕ ಆಧ್ಯಾತ್ಮಿಕ ಲೌಕಿಕ ಯಾವ ವ್ಯವಹಾರವೂ ನಮ್ಮ ಮೆಚ್ಚುಗೆ ಪಡೆಯಲಾರವು ಪ್ರವಾಸಿಗರ ಸಂಖ್ಯೆ ಹೆಚ್ಚಿ ಮಸ್ತಕಾಭಿಷೇಕದಂಥ ಉತ್ಸವಗಳೂ ಹೆಚ್ಚುತ್ತವೆ ಅದಕ್ಕೆ ಅರ್ಥವೂ ಇಲ್ಲ ಮಹತ್ವವೂ ಇಲ್ಲ. . . ಆಧ್ಯಾತ್ಮಿಕ ಬರಡುತನವನ್ನು ಮುಚ್ಚಿಹಾಕುವುದಷ್ಟೇ ಅವುಗಳ ಉಪಯೋಗ. . . ನಮ್ಮ ದೇಶ ನಮ್ಮ ಧರ್ಮ ನಮ್ಮ ಪರಂಪರೆ ನಮ್ಮ ಚರಿತ್ರೆ ಎಂಬ ಅಹಂಕಾರದ ಘೋಷಣೆಗಳೇ ಎಲ್ಲೆಲ್ಲೂ ಮೊಳಗುತ್ತಿರುವ ಈ ಕಾಲದಲ್ಲಿ ಶೆಟ್ಟರ್ ಅವರ ಈ ಎರಡು ಪುಸ್ತಕಗಳು ತುಂಬ ಮಹತ್ವ ಉಳ್ಳವು(ಬಹುವಚನ ಭಾರತ. ಪುಟ 272, ಅಭಿನವ, 2015)
ಹೀಗೆ ಯಾವುದೇ ಒಳ್ಳೆಯ ಪುಸ್ತಕವಿರಲಿ, ಲೇಖನವಿರಲಿ ಅದನ್ನು ಕನ್ನಡಿಗರಿಗೆ ಪರಿಚಯಿಸಬೇಕೆಂಬ ಮಹತ್ವಾಕಾಕ್ಷೆಯ ಜೊತೆ ಜೊತೆಗೇ ಅವರು ನಾಡಿನ ಬಹುಪಾಲು ಲೇಖಕರ ಕೃತಗಳಿಗೆ ನಿರಂತರವಾಗಿ ಮುನ್ನುಡಿ ಬರೆದಿರುವುದೂ ಉಂಟು. ಎಷ್ಟೋ ಪುಸ್ತಕಗಳು ಹೊಸಬರದಾಗಿದ್ದರೂ ಅಲ್ಲಿನ ಪ್ರಯತ್ನಗಳನ್ನು ಅಲ್ಲಗಳೆಯದೆ ಆ ಬರಹಗಳು ರೂಪಗೊಂಡ ಹಿನ್ನೆಲೆ, ವಸ್ತು, ನಿರೂಪಣೆಗಳ ಬಗೆಗೆ ಹೆಚ್ಚು ಒತ್ತು ನೀಡಿ ವಿನಯವಂತಿಕೆ ಮೆರೆಯುವುದು ರಾಜಶೇಖರ್ತನ. ಹಾಗೆ ಅವರು ಬರೆದ ಎಲ್ಲ ಮುನ್ನುಡಿಗಳ ಸಂಖ್ಯೆ ಬಹುಶ 100ನ್ನಾದರೂ ದಾಟುತ್ತದೆ.

grimg_2190

ಕೆ. ಫಣಿರಾಜ್ , ಮುರಳೀಧರ ಉಪಾಧ್ಯ ಹಿರಿಯಡಕ ಜೊತೆ

divderspaಅಭಿನವ ಯು. ಆರ್. ಅನಂತಮೂರ್ತಿ ಅವರಿಗೆ 80 ತುಂಬಿದ ಸಂದರ್ಭದಲ್ಲಿ ಷ. ಶೆಟ್ಟರ್ ಅವರ ಗೌರವ ಮಾಲಿಕೆಯನ್ನು ರೂಪಿಸಿತು. ಅದರಲ್ಲಿ ನಿಮ್ಮದೂ ಒಂದು ಪುಸ್ತಕ ಇರಬೇಕು ಎಂದಾಗಲೂ ಸಂಕೋಚವಾದರೂ ಅನಂತಮೂರ್ತಿ ಅವರ ಮೇಲಿನ ಗೌರವದ ಕಾರಣದಿಂದ ಅವರಿಗೆ ಇಲ್ಲವೆನ್ನಲಾಗಲಿಲ್ಲ. `ಸಾಹಿತ್ಯಕ ಲೇಖನಗಳನ್ನು ಬಿಟ್ಟರೆ ನನಗೆ ಸಂತೋಷ’ ಎಂದಿದ್ದರು. ಆದರೂ ಅವರ ಮಾತನ್ನೂ, ಮೌನವನ್ನೂ ಗಮನಿಸಿ ನಾವು `ಬಹುವಚನ ಭಾರತ’ವನ್ನು ಪ್ರಕಟಿಸಿದೆವು. ಅಭಿನವದ ಮೇಲಿನ ಜನರ ಪ್ರೀತಿ ಗೌರವಗಳು ಹೆಚ್ಚಾಗಲು ಈ ಪುಸ್ತಕವೂ ಒಂದೆಂಬ ಮಾತಿಗೆ ನಾನು ಇಲ್ಲ ಎನ್ನಲಾರೆ.
ರಾಜಶೇಖರ್ಗೆ 70 ಎಂದರೆ ಯಾರೂ ನಂಬುವುದಿಲ್ಲ. ಅಷ್ಟೇಕೆ ಅವರು ಮಾರ್ಕಿಷ್ಟ್ ಎಂದರೂ. . . ಅವುಗಳನ್ನು ಮೀರಿದ ಧ್ಯಾನಶೀಲತೆ ಮತ್ತು ಮುಗ್ಥತೆಗಳು ಅವರಲ್ಲಿವೆ.

ಕೆಲವು ವರ್ಷಗಳ ಹಿಂದೆ ನನ್ನ ಮಗನ ಶಾಲೆಯಲ್ಲಿ ಮಕ್ಕಳು ಬಲೂನ್ ತರಬೇಕು ಎಂಬ ಸೂಚನೆಯನ್ನು ಕಳುಹಿಸಿದ್ದರು. ಒಬ್ಬ ಪೋಷಕರು ಹುಡುಗನ ಕೈಯಲ್ಲಿ ಕೇವಲ ಹಸಿರು ಬಣ್ಣದ ಬಲೂನ್ಗಳನ್ನು ಕಳಿಸಿದ್ದರು. ಆಶ್ಚರರ್ುವಾಯಿತು. ಏನೂ ಆರಿಯದ ಮಕ್ಕಳಿಗೆ ಇರುವುದು ಕೇಸರಿ ಅಥವಾ ಹಸಿರು ಬಲೂನ್ಗಳು ಮಾತ್ರ ಎಂಬ ತಿಳುವಳಿಕೆ ಮೂಡಿಸುವಲ್ಲಿ ಪೋಷಕರ ಮಹತ್ವ ಎಷ್ಟಿರುತ್ತದೆ? ಆದರೆ ಆವತ್ತು ಜಾಣೆಯಾಗಿದ್ದ ಅಧ್ಯಾಪಕಿ, ತಂದಿದ್ದ ಎಲ್ಲ ಬಲೂನುಗಳನ್ನು ಒಂದು ಕಟ್ಟಿನಲ್ಲಿ ಸೇರಿಸಿ ಭಾರತದ ಬಹುಮುಖತೆಯ ಪಾಠ ಹೇಳಿದ್ದರು. ರಾಜಶೇಖರ್ ಮಾಡುತ್ತಿರುವುದೂ ಇಂಥ ಪಾಠಗಳನ್ನೇ ಅಲ್ಲವೇ?

(ಉಡುಪಿಯಲ್ಲಿ ರಥಬೀದಿ ಗೆಳೆಯರು ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಸಂಯುಕ್ತವಾಗಿ ಏರ್ಪಡಿಸಿದ್ದ ಬಹುಮುಖಿ ಭಾರತ ವಿಚಾರಸಂಕಿರಣದಲ್ಲಿನ ಸಮಾರೋಪ ಸಮಾರಂಭದಲ್ಲಿ(11.9.2016) ಆಡಿದ ಮಾತುಗಳ ವಿಸ್ತೃತ ರೂಪ)

ಪ್ರತಿಕ್ರಿಯಿಸಿ