ಹಾಡುವ ರೇಖೆ ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್‌ (೧೯೧೧-೧೯೯೬)

ಹೆಬ್ಬಾರರ ಪ್ರತಿಭೆಪರಂಪರೆ

ಕರ್ನಾಟಕದಲ್ಲಿ ಹುಟ್ಟಿ ಮುಂಬೈನಲ್ಲಿ ನೆಲೆಸಿದ ಕೆ.ಕೆ. ಹೆಬ್ಬಾರ್ ಯಾವುದೇ ಕಲಾ ಗುಂಪಿನೊಂದಿಗೆ ಇಲ್ಲಾ ಚಳುವಳಿಯೊಂದಿಗೆ ಗುರುತಿಸಿಕೊಳ್ಳದೆ ವಿಮಾರ್ಶಾತ್ಮಕ ಆಧುನಿಕತೆಯನ್ನು ಮೈಗೂಡಿಸಿಕೊಂಡು ಎಪ್ಪತರ ದಶಕದಲ್ಲಿ ಮೂಡಿದ ಅಪರೂಪದ ಕಲಾವಿದರ ಸಾಲಿಗೆ ಸೇರಿದವರು. ಹೆಬ್ಬಾರರ ಸಮಕಾಲೀನರಲ್ಲಿ ಬಾಂಬೆ ಪ್ರೋಗ್ರೆಸಿವ್ ಆರ್ಟಿಸ್ಟ್ಸ್ ಗ್ರೂಪ್ ಇದರ ಸದಸ್ಯರಾದ ಎಫ್.ಏನ್. ಸೂಜಾ (೧೯೨೪-೨೦೦೨), ಎಸ್.ಎಚ್. ರಜಾ (೧೯೨೨-), ಎಂ.ಎಫ್.ಹುಸ್ಸೈನ್ (೧೯೧೫-೨೦೧೧), ಕೆ.ಎಚ್. ಅರಾ (೧೯೧೪-೧೯೮೫), ಎಚ್.ಎ. ಗಡೆ (೧೯೧೭-೨೦೦೧), ಎಸ್.ಕೆ. ಬಾಕ್ರೆ (೧೯೨೦-೨೦೦೭) ಪ್ರಮುಖರು. ತೈಲವರ್ಣದಲ್ಲಿ ಅರಳಿದ ಅವರ ಕಲಾಕೃತಿಗಳು ತಮ್ಮ ಅಭಿವ್ಯಕ್ತಿಯಲ್ಲಿ ತುಸು ಅಮೂರ್ತತೆಯ ಕಡೆ ಬಾಗಿದ್ದರೆ, ಮುಲ್ಕ್ ರಾಜ್ ಆನಂದ್ (೧೯೦೫-೨೦೦೪) ಅವರಿಂದ ‘ಹಾಡುವ ರೇಖೆಗಳು’ (ಸಿಂಗಿಂಗ್ ಲೈನ್ಸ್) ಎಂದು ಕರೆಯಲ್ಪಟ್ಟು ಈಗ ಅದೇ ಹೆಸರಲ್ಲಿ ಖ್ಯಾತವಾಗಿರುವ ಅವರ ಆ ಶೈಲಿಯು ಮೂರ್ತ ರೂಪಕ್ಕೆ ಸಮೀಪವಾಗಿ ದಷ್ಟಪುಷ್ಟವಾದವು.

ಬಾಂಬೆಯ ಸರ್ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್ ಮತ್ತು ಪ್ಯಾರಿಸಿನ ಅಕಾಡೆಮಿ ಜುಲಿಯಾನ್ ಇಂದ ಸಾಂಪ್ರದಾಯಿಕ ಶಿಕ್ಷಣ ಪಡೆದ ಹೆಬ್ಬಾರ್ ಮುಂದೆ ತಾವು ಕಲಿತ ಜೆ.ಜೆ. ಸ್ಕೂಲಿನಲ್ಲಿ ಅಧ್ಯಾಪಕರಾಗಿ ಬಹು ಬೇಡಿಕೆಯ ಮಾರ್ಗದರ್ಶಿಯೂ ಸಲಹೆಗಾರರೂ ಆದರು. ದೇಶದುದ್ದಗಲದಲ್ಲಿ ಹಲವಾರು ಸಂಸ್ಥೆಗಳು ಅವರ ಮಾರ್ದರ್ಶನ ಬೇಡಿದವು, ಪಡೆದುಕೊಂಡವು. ಮೊದಮೊದಲಿನ ಅವರ ಕಲಾಕೃತಿಗಳು ಅಕಾಡೆಮಿಕ್ ಶೈಲಿಯ ಪ್ರಭಾವಕ್ಕೆ ಒಳಗಾಗಿದ್ದವು. ಕಲಾ ಲೋಕ ಮತ್ತು ಅದರ ಸೈದ್ಧಾಂತಿಕ ತುಡಿತಗಳ ಸೆಳೆವಿನಿಂದ ಪ್ರಜ್ಞಾಪೂರ್ವಕಾವಿ ದೂರ ಉಳಿಯದೆ ಅದರ ಪ್ರವಾಹದಲ್ಲಿ ಈಜಲು ಸಿದ್ಧರಿದ್ಧ ಕಲಾವಿದರ ತಲೆಮಾರಿಗೆ ಹೆಬ್ಬಾರರು ಸೇರಿದ್ದರು. ಮುಂದೆ ಲೋಕ ಸಂಚರಿಸಿದ ಅವರು ವಿಶೇಷವಾಗಿ ಯೂರೋಪ್, ಜಪಾನ್ ಮತ್ತು ಇಂಡೋನೇಷ್ಯಾ ದೇಶಗಳ ಪರ್ಯಟನೆಯ ನಂತರ ಅವರು ತಮ್ಮ ಶೈಲಿಯನ್ನು ಪುನರಾವಲೋಕಿಸಿಕೊಂಡು,  ಪುನರ್ವ್ಯಾಖ್ಯಾನಿಸಿಕೊಂಡರು. ಬದಲಾದ ಅವರ ಶೈಲಿ ಜಾಗತಿಕವೂ, ಅಮೂರ್ತವೂ ಮತ್ತು ಸಂಕೇತಾತ್ಮಕವೂ ಆಗಿ ಬೆಳೆಯಿತು. ಇವೆಲ್ಲಕ್ಕಿಂತ ಭಿನ್ನ ಅವರ ಅನುರೂಪಗಳು. ಅವುಗಳು ಹೆಬ್ಬಾರರು ತಮ್ಮ ಲೋಕದೊಂದಿಗೆ ತಮ್ಮ ಆತ್ಮೀಯರೊಂದಿಗೆ ನೆಡೆಸಿದ ಆಪ್ತ ಸಂವಾದದಂತಿವೆ.

ಹೆಬ್ಬಾರ್ ಮತ್ತು ಕರಾವಳಿ ಕರ್ನಾಟಕ

ಹೆಬ್ಬಾರರು ಉಡುಪಿ ಸಮೀಪದ ಕೇಟಿಂಗೇರಿ ಮೂಲದವರು, ಯಕ್ಷಗಾನ ಮತ್ತು ಇತರ ಸ್ಥಳೀಯ ಜಾನಪದ ಸಾಂಸ್ಕೃತಿಕ ಪ್ರದರ್ಶನ ಕಲೆಗಳ ನಡುವೆ ಸಂಗೀತಮಯ ಪರಿಸರದಲ್ಲಿ ಬೆಳೆದವರು. ಕರಾವಳಿ ಕರ್ನಾಟಕದಲ್ಲಿ ನೆಲೆಯಿಸ್ದ ಧೈತ್ಯ ಪ್ರತಿಭೆ ಡಾ| ಶಿವರಾಮ ಕಾರಂತರೊಂದಿಗಿನ (1902-1997) ಅವರ ಸ್ನೇಹ ಎಲ್ಲರಿಗೂ ತಿಳಿದ ವಿಷಯ. ಯುವಕರಾಗಿದ್ದಾಗ ಹೆಬ್ಬಾರರು ಪಂಡಿತ್. ಬಿರ್ಜು ಮಹಾರಾಜರ (1938-) ಶಿಷ್ಯರೊಬ್ಬರಿಂದ ಕಥಕ್ ಕಲಿತರು. ಇದರ ಹಿಂದೆ ನೃತ್ಯ ಕಲಿಯುವ ಉದ್ದೇಶ ಇರಲಿಲ್ಲ. ಅವರಿಗಿದ್ದ ಆಸೆ ತಮ್ಮ ಚಿತ್ರಕಲೆಗೆ ಬೇಕಾದ ಲಯದ ತಿಳುವಳಿಕೆಯನ್ನು ದೇಹವನ್ನೇ ದುಡಿಸಿಕೊಂಡು ಕಲಿಯುವುದಾಗಿತ್ತು. ಅವರ ‘ಹಾಡುವ ರೇಖೆಗಳು’ ಯಕ್ಷಗಾನದ ಜೀವದುಂಬಿದ, ಮಿಡಿಯುವ ಶಕ್ತಿಯನ್ನು ಸೆರೆಹಿಡಿದಿವೆ. ಡಾ| ಶಿವರಾಮ ಕಾರಂತರು ಯಕ್ಷಗಾನದ ಸ್ತ್ರೀವೇಷಧಾರಿಗಳಿಗೆ ಅವರ ವತ್ರಾಲಂಕಾರದ ಭಾಗವಾಗಿ ಹೊಸ ರೀತಿಯ ಕೇಶ ವಿನ್ಯಾಸ ಮತ್ತು ಕಿರೀಟ ಪರಿಚಯಿಸಿದ್ದು ಹೆಬ್ಬಾರರ ಸಲಹೆಯ ಮೇರೆಗೆ ಎಂದು ಹೇಳಲಾಗುತ್ತದೆ.

ಹೆಬ್ಬಾರರು ತಮ್ಮ ವೃತ್ತಿ ಜೀವನದ ಬಹುಪಾಲ ಜೀವಿಸಿದ್ದು ಮುಂಬೈ ನಗರದಲ್ಲಿ. ವಿಮರ್ಶಕ ಎಚ್.ಎ. ಅನಿಲ್ ಕುಮಾರ್ ಹೇಳುವಂತೆ ಅವರು ಆಧುನಿಕ ಕಲೆಯ ಚೌಕಟ್ಟಿನ ಒಳಗೆ ಸಿಕ್ಕಿಹಾಕಿಕೊಳ್ಳದೆ ಒಬ್ಬ ಆಧುನಿಕವಾದದ ಒಳಗಡೆ ವಿದ್ರೋಹಿ ಕಲಾವಿದನಾಗಿ ಉಳಿದರು. ಹೆಬ್ಬಾರರು ಸ್ಥಳೀಯವೂ ಅಲ್ಲದ ರಾಷ್ಟ್ರೀಯ ಎಂದೂ ಹೆಸರಿಸಲಾಗದ ವಿಶಾಲ ವ್ಯಾಪ್ತಿ ಹೊಂದಿದ ಕಲಾವಿದರಾಗಿದ್ದರು ಎಂಬುದು ಕುಮಾರ್ ಅಭಿಪ್ರಾಯ. ಅವರ ಕಲಾಕೃತಿಗಳು ಯಾವುದೇ ನಿರ್ಧಿಷ್ಟ ರಾಷ್ಟ್ರ ಇಲ್ಲಾ ರಾಜ್ಯಕ್ಕೆ ಸೇರಿದ ಸೋಗುಹಾಕದೆ ಅಂತಹ ಚೌಕಟ್ಟನ್ನು ಮೀರಿ ನಿಂತವು, ಮತ್ತು ಆ ಮುಖಾಂತರ ಹೆಬ್ಬಾರರನ್ನು ಅಂತಹ ಚೌಕಟ್ಟಿನಿಂದ ಪಾರು ಮಾಡಿವೆ. ‘ಆದರೆ ರಾಷ್ಟ್ರೀಯ ಮತ್ತು ಸ್ಥಳೀಯ ಎಂಬ ವರ್ಗೀಕರಣವನ್ನು ವಿರೋಧಿಸುವ ಮತ್ತು ನಿರಾಕರಿಸುವ ಕೃತಿಗಳನ್ನು ಏನೆಂದು ಗುರುತಿಸಬೇಕು?’ – ಈ ಪ್ರಶ್ನೆಯನ್ನು ನಾವು ಅಲ್ಲಗಳೆಯಲು ಸಾಧ್ಯವಿಲ್ಲ. ಅದೂ ಕಲೆ ಎಂದರೆ ಕೇವಲ ಸೌಂದರ್ಯಾನುಭವ ರಸಾನುಭವ ನೀಡುವ ವಸ್ತು ಮಾತ್ರವಲ್ಲ ಬದಲಾಗಿ ಒಂದು ತಮ್ಮದೇ ದೇಶ-ಕಾಲದಲ್ಲಿ ಅರಳಿದ ಸಾಮಾಜಿಕ-ಸಾಂಸ್ಕೃತಿಕ ದ್ರವ್ಯ ಆಗಿರುವಾಗ.

ಕನ್ನಡಕ್ಕೆ ಅನುವಾದ – ಸಂವರ್ತ ‘ಸಾಹಿಲ್’

ಕೃಪೆ :

ಕೆ.ಕೆ.ಹೆಬ್ಬಾರ್ ಗ್ಯಾಲರಿ ಮತ್ತು ಕಲಾ ಕೇಂದ್ರ (ಎಚ್.ಜಿ.ಎ.ಸಿ.)
ಮಣಿಪಾಲ್ ಸೆಂಟರ್ ಫಾರ್ ಫಿಲೊಸೊಫಿ ಅಂಡ್ ಹ್ಯುಮಾನಿಟೀಸ್
ಡಾ. ಟಿ.ಎಂ.ಎ.ಪೈ ತಾರಾವೀಕ್ಷಣಾಲಯ ಸಂಕೀರ್ಣ, ಅಲೆವೂರು ರಸ್ತೆ
ಮಣಿಪಾಲ್- 576104

One comment to “ಹಾಡುವ ರೇಖೆ ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್‌ (೧೯೧೧-೧೯೯೬)”

ಪ್ರತಿಕ್ರಿಯಿಸಿ