ನನ್ನ ದೇವರು- ಅಶೋಕ್ ಕೆ ಆರ್


 ನಾಸ್ತಿಕರಿಗೆ ಪ್ರಾಬ್ಲಮ್ಮುಗಳು ಜಾಸ್ತಿ!
ಮೂರ್ತ ರೂಪದ ದೈವವನ್ನು, ದೇವಮಂದಿರವನ್ನು ನಂಬುವ ಆಸ್ತಿಕರಿಗೆ ತೊಂದರೆ ಉಂಟಾಯಿತೋ ದೈವಕ್ಕೆ ಮೊರೆ ಹೋಗಿ ದೀಪವಚ್ಚಿ, ಕಾಪಿಡುವಂತೆ ಬೇಡಿಕೊಂಡರೆ ಸಾಕು, ಸಮಸ್ಯೆ ಪರಿಹಾರವಾಗುತ್ತದೋ ಬಿಡುತ್ತದೋ ತತ್ ಕ್ಷಣದ ನೆಮ್ಮದಿಗಂತೂ ಕೊರತೆಯಿಲ್ಲ; ನಾಸ್ತಿಕರಿಗೆ ಈ ಸೌಕರ್ಯವಿಲ್ಲ, ಅಥವಾ ಈ ಸೌಕರ್ಯ ಬೇರೆ ರೂಪದಲ್ಲಿ ಅವರೊಳಗೇ ಅಡಕವಾಗಿದೆ. ಖುಷಿಯಾದರೂ ಆಸ್ತಿಕರಿಗೆ ದೇವರ ನೆನಪಾಗದೇ ಇರದು. ಕಷ್ಟಕಾಲದಲ್ಲಿ ನೆನಪಾದಷ್ಟಲ್ಲ ಎನ್ನುವುದ ಸತ್ಯವೇ.
ದೇವರ ಅಗತ್ಯತೆ ತುರ್ತಾಗಿ ಬೇಕಾಗುವುದು ಕಷ್ಟದ ಸಮಯದಲ್ಲೇ. ನಾಸ್ತಿಕನಾದ ನನಗೆ ‘ಈ ಟೈಮಲ್ಲೂ ನಿನಗೆ ದೇವರನ್ನ ನಂಬಬೇಕು ಅಥವಾ ದೇವಸ್ಥಾನಕ್ಕೆ ಹೋಗಬೇಕು, ಪ್ರಾರ್ಥಿಸಿಕೊಳ್ಳಬೇಕು ಎಂದನ್ನಿಸುವುದಿಲ್ಲವಾ?’ ಎನ್ನುವ ಪ್ರಶ್ನೆಗಳು ನಾನು ದುಃಖದಲ್ಲಿದ್ದಾಗಲೋ ಕಷ್ಟದಲ್ಲಿದ್ದಾಗಲೋ ದುತ್ತನೆ ಎದುರಾಗಿಬಿಡುತ್ತದೆ. ಆ ಪ್ರಶ್ನೆಯನ್ನು ಕೆಲವೊಮ್ಮೆ ನನ್ನ ಸುತ್ತಮುತ್ತಲಿರುವವರು ಕೇಳಿದರೆ ಹಲವು ಸಲ ಆ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಳ್ಳುತ್ತಿರುತ್ತೇನೆ. ‘ಹೌದಲ್ಲ! ಇವತ್ಯಾಕೋ ಎಲ್ಲಾ ಕೆಟ್ಟದ್ದೇ ಆಗ್ತಿದೆ. ನನಗೆ ನಿಜಕ್ಕೂ ದೇವರಿಗೆ ಬೇಡಿಕೊಳ್ಳಬೇಕು ಎನ್ನಿಸುತ್ತಿಲ್ಲವೇ? ನಾಸ್ತಿಕನೆಂದು ಸ್ವಯಂ ಘೋಷಿಸಿಕೊಂಡಿರುವ ಕಾರಣಕ್ಕೆ ನಾನು ಬೇಡಿಕೊಳ್ಳಲು ಹೋಗುತ್ತಿಲ್ಲವಾ?’ ಎನ್ನುವ ಪ್ರಶ್ನೆಗಳು ಅನೇಕ ಸಲ ಕಾಡಿದ್ದಿದೆ. ಉತ್ತರ ಹುಡುಕುವ ಪ್ರಯತ್ನ ಮಾಡಿದಾಗೆಲ್ಲ ನನ್ನ ‘ದೇವರು’ ಕಣ್ಣ ಮುಂದೆ ಮೂಡುತ್ತದೆ, ತನ್ನೆಡೆಗೆ ಕರೆಯುತ್ತದೆ, ಮನಸ್ಸಿಗೊಂದಷ್ಟು ಶಾಂತಿಯನ್ನು ನೀಡುತ್ತದೆ, ಶಾಂತಿ ಮೂಡಿದ ಮನಸ್ಸಿನಲ್ಲಿ ಎದುರಾದ ಕಷ್ಟವನ್ನು ಪರಿಹರಿಸಿಕೊಳ್ಳುವ ಹಾದಿಯೂ ಮೂಡಿಬಿಡುತ್ತದೆ.

ಅಂದಹಾಗೆ ಈ ದೇವರು ಯಾರು ಎನ್ನುವುದು ನನ್ನ ಹುಡುಕಾಟವೂ ಹೌದು. ಹೆಚ್ಚು ಕಡಿಮೆ ಎಂಟನೇ ಕ್ಲಾಸಿನಿಂದ ಇಲ್ಲಿಯವರೆಗೆ ಅಂದರೆ ಸರಿಸುಮಾರು ಇಪ್ಪತ್ತು ವರುಷಗಳಿಂದ ನಾಸ್ತಿಕನಾಗಿರುವ ನಾನು ದೇವರಿಗೆ ಮುಖಾಮುಖಿಯಾದಂತಹ ಸನ್ನಿವೇಶಗಳ್ಯಾವುವು ಎಂದು ನೋಡಿದರೆ ಅವೆಲ್ಲವೂ ಮನಸ್ಸು ಮಗುಚಿ ಬಿದ್ದ ಸಮಯವೇ ಆಗಿದೆ, ಎಲ್ಲೋ ಅಪರೂಪಕ್ಕೆ ಖುಷಿಯ ಸಮಯದಲ್ಲೂ ಮುಖಾಮುಖಿಯಾಗಿರುವುದು ಹೌದು. ಮಗುಚಿ ಬಿದ್ದ ಮನಸ್ಸನ್ನು ಮತ್ತೆ ಎದ್ದು ನಿಲ್ಲುವಂತೆ ಮಾಡಲು ನಾ ಮಾಡಿದ ಕೆಲಸಗಳೇ ದೇವರ ಜೊತೆಗಿನ ಮುಖಾಮುಖಿಯಲ್ಲವೇ? ಅದು ಹೌದಾದರೆ ಬರೋಬ್ಬರಿ ಆರು ವರ್ಷಗಳ ಕಾಲ ನನ್ನ ದೇವರು ನನಗೆ ಎದುರಾಗುತ್ತಿದ್ದಿದ್ದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ! ಬೇಸರವೋ ಖುಷಿಯೋ ಆದ ತಕ್ಷಣ ಬೈಕನ್ನೇರಿ ಹೊರಟುಬಿಡುತ್ತಿದ್ದುದು ಚಾಮುಂಡಿ ಬೆಟ್ಟಕ್ಕೆ. ಸೀದಾ ಮಹಿಷಾಸುರನ ಮೂರ್ತಿಯನ್ನು ಸುತ್ತಿ ಬೈಕನ್ನು ನಿಲ್ಲಿಸಿ ಚಾಮುಂಡಿ ದೇವಸ್ಥಾನದ ಎದುರಿಗಿರುವ ಅಂಗಡಿಯಲ್ಲಿ ಪುರಿ – ಖಾರ ಕಟ್ಟಿಸಿಕೊಂಡು ಮತ್ತೆ ಬೈಕತ್ತಿ ರವಷ್ಟು ದೂರ ಸಾಗಿ ನಂದಿಯ ಕಡೆಗೆ ಹೋಗುವ ರಸ್ತೆಯಲ್ಲಿ ಅರ್ಧ ಹಾದಿ ಕ್ರಮಿಸಿದಾಗ ಒಂದಷ್ಟು ವಿಸ್ತಾರವಾಗಿರುವ ರಸ್ತೆಯಲ್ಲಿ ಎಡಬದಿಯಲ್ಲಿ ಗಾಡಿ ನಿಲ್ಲಿಸಿ ಪ್ರಪಾತದ ಪಕ್ಕಕ್ಕೆ ಕಟ್ಟಿರುವ ಪುಟ್ಟ ತಡೆಗೋಡೆಯ ಮೇಲೆ ಕುಳಿತು ಖಾರ – ಪುರಿಯ ಪೊಟ್ಟಣವನ್ನು ತೆರೆದು ಮೈಸೂರಿನ ವಿಶಾಲತೆಯೆಡೆಗೆ ಕಣ್ಣು ನೆಟ್ಟಿದಾಗಲೇ ದೇವರೊಡನೆ ಮುಖಾಮುಖಿ. ಕಷ್ಟಕ್ಕೂ ಸುಖಕ್ಕೂ ಆ ಮುಖಾಮುಖಿಯೇ ಸಾಕ್ಷಿ. ಸುಖದ ಹಂಚಿಕೆಗಳು ಹೆಚ್ಚು ಸಮಯ ಬೇಡುತ್ತಿರಲಿಲ್ಲ, ‘ಹಿಂಗಿಂಗೆ, ಹಿಂಗಿಂಗೆ’ ಎಂದು ಹೇಳಿಬಿಟ್ಟರಾಯಿತು; ದುಃಖ ಹಂಚಿಕೊಳ್ಳುವುದು ಹಂಗಲ್ಲ, ದುಃಖದ ಹಂಚಿಕೆ ಮುಗಿಯುತ್ತಲೇ ಇರಲಿಲ್ಲ. ‘ಲೇಟ್ ಆಯ್ತು ಕಂದ. ಪೋಲೀಸ್ರು ಬರೋಕ್ ಮುಂಚೆ ಮುಚ್ಕಂಡ್ ಎದ್ದೋಗು’ ಎನ್ನುವವರೆಗೂ ಮುಗಿಯುತ್ತಿರಲಿಲ್ಲ. ಅಷ್ಟಕ್ಕೂ ಅಲ್ಲಿ ಎದುರಾಗಿತ್ತಿದ್ದದ್ದು ಯಾರು? ಆ ನನ್ನ ದೇವರನ್ನು ಎದುರುಗೊಳ್ಳಲಿಕ್ಕೆ ಚಾಮುಂಡಿ ಬೆಟ್ಟದ ಆ ಜಾಗವನ್ನೇ ಹುಡುಕಿ ಯಾಕೆ ಹೋಗುತ್ತಿದ್ದೆ?

ಬೆಟ್ಟದ ಮೇಲೆ ದೈವಸ್ಥಾನ ಕಟ್ಟುವ ಮರ್ಮವೇ ಒಂದು ವಿಜ್ಞಾನ. ಅಲ್ಲಿಗೆ ತಲುಪುವುದಕ್ಕೂ ಸ್ವಲ್ಪ ಪ್ರಯಾಸ ಪಡಬೇಕು (ವಾಹನಗಳಲ್ಲಿ ಹೋಗುವುದು ಸುಲಭದ ಕೆಲಸವೇ, ಹೆದ್ದಾರಿಗಳಲ್ಲಿ ಓಡಿಸುವುದಕ್ಕಿಂತ ಕಷ್ಟವೆಂದು ಸಮಾಧಾನ ಮಾಡಿಕೊಳ್ಳಬಹುದು). ಎತ್ತರೆತ್ತರಕ್ಕೆ ಹೋದಂತೆ ಪರಿಸರದಲ್ಲಿ ಬದಲಾವಣೆಗಳಾಗುತ್ತದೆ, ಶುದ್ಧ ಗಾಳಿ ಮನಸ್ಸನ್ನೂ ಶುದ್ಧಿ ಮಾಡುತ್ತದೆ. ಕೆಳಗಿನ ಪೇಟೆಯ ಜಂಜಡಗಳು ಒಂದಷ್ಟು ಹೊತ್ತಾದರೂ ಮರೆಯಾಗುತ್ತದೆ. ಪರಿಸರದಲ್ಲಿ ಸಂಚರಿಸುವ ಆಹ್ಲಾದ ನಮ್ಮೊಳಗನ್ನೂ ತಲುಪುವುದಕ್ಕೆ ಹೆಚ್ಚು ಸಮಯ ಬೇಕಾಗುವುದಿಲ್ಲ. ಅಂದರೆ ನನಗೆದುರಾಗುತ್ತಿದ್ದ ದೇವರು ನಿಸರ್ಗವೇ? ನಿಸರ್ಗಕ್ಕೊಂದು ಶಕ್ತಿಯಿದೆ, ಅದು ಮನುಷ್ಯನ ಬುದ್ಧಿಯ ಮಟ್ಟಕ್ಕೂ ಮೀರಿದ ಶಕ್ತಿ ಎನ್ನುವುದನ್ನು ಒಪ್ಪಲೇಬೇಕು. ಆ ಶಕ್ತಿಗಳಿಗೊಂದು ದೇವರ ರೂಪು ಕೊಟ್ಟು, ತದನಂತರ ಆ ನಿಸರ್ಗದಿಂದುಟ್ಟಿದ ದೇವರನ್ನು ಪ್ರಕೃತಿಯಿಂದಲೇ ದೂರ ಮಾಡಿದ ಖ್ಯಾತಿ ಮನುಷ್ಯನದು. ಚಾಮುಂಡಿ ಬೆಟ್ಟದ ಮಟ್ಟಿಗೆ ನಿಸರ್ಗವೇ ದೇವರೆಂದು ನಾನು ಒಪ್ಪುವುದಾದರೆ ಮೈಸೂರು ತೊರೆದ ನಂತರ ಅನೇಕ ಊರು ಕೇರಿ ಕಾಡು ಮೇಡು ನಗರಗಳಲ್ಲಿ ತಿರುಗಿದ – ವಾಸಿಸಿದ ದಿನಗಳಲ್ಲೂ ಆ ನನ್ನ ದೇವರನ್ನು ನನ್ನಿಚ್ಛೆಯ ಜಾಗಗಳಲ್ಲಿ ಕಂಡುಕೊಂಡಿರುವುದಂತೂ ಸತ್ಯ. ಅಂದ ಮೇಲೆ ನಿಸರ್ಗವಷ್ಟೇ ನನ್ನ ದೇವರಾಗಿರಲಿಲ್ಲ.

ಎದುರಾಗುತ್ತಿದ್ದ ದೇವರಿಗೊಂದು ಮೂರ್ತ ರೂಪವಿರಲಿಲ್ಲ, ಧ್ವನಿ ಕೂಡ ಕೇಳಿಬರುವುದಿಲ್ಲ. ನಾನು ಮನಸ್ಸಲ್ಲೇ ಯೋಚಿಸಿದ ಪ್ರಶ್ನೆಗಳಿಗೆ ಮನಸ್ಸಿಗೇ ಉತ್ತರ ತಲುಪುವಂತೆ ಮಾಡಿ ಸಮಸ್ಯೆಗಳಿಗೊಂದು ಸ್ಪಷ್ಟತೆಯನ್ನು ಕೊಟ್ಟುಬಿಡುತ್ತಿದ್ದ ದೇವರನ್ನು ಅಥವಾ ಅದನ್ನು ಏನೆಂದು ಕರೆಯಬಹುದು? ನನ್ನ ಸಂವಹನ ನಡೆಯುತ್ತಿದ್ದಿದ್ದು ನನ್ನ ಮನಸ್ಸಾಕ್ಷಿಯ ಜೊತೆಗೇ ಅಲ್ಲವೇ? ಹಾಗಾಗಿ ಮನಸ್ಸಾಕ್ಷಿಯೇ ದೇವರು ಎಂದುಕೊಳ್ಳಬಹುದೇ? ಅಷ್ಟು ಸಾಕೆ? ಅಥವಾ ನನ್ನ ದೇವರೆನ್ನುವುದು ನನ್ನ ಮೇಲಿನ ನನ್ನ ನಂಬುಗೆಯ ಭಾಗವೇ? ನಂಬಿಕೆಯೇ ದೇವರೇ? ನನ್ನ ದೇವರು ನನ್ನ ದೇವರಷ್ಟೇ. ಅದಕ್ಕೊಂದು ಮೂರ್ತ ರೂಪವಿಲ್ಲ, ಅದಕ್ಕೊಂದು ವಿವರಣೆಯಿಲ್ಲ, ಅದಕ್ಕೊಂದು ಹೆಸರಿಲ್ಲ, ಹೆಸರಿಡಲು ನನಗೆ ತಿಳಿಯುತ್ತಿಲ್ಲ. ನಿಸರ್ಗ – ಪ್ರಕೃತಿ – ಮನಸ್ಸಾಕ್ಷಿ – ನಂಬಿಕೆಯೆಂಬ ಹೆಸರುಗಳನ್ನು ಇಡುವ ಪ್ರಯತ್ನ ಮಾಡಬಹುದಾದರೂ ಅದೆಲ್ಲವೂ ‘ನನ್ನ ದೇವರನ್ನು’ ಪರಿಪೂರ್ಣವಾಗಿ ವಿವರಿಸಲಾರವು. ವಿವರಣೆ ಕೊಟ್ಟು, ಮೂರ್ತ ರೂಪ ಕೊಟ್ಟು, ಅದು ನನಗೆ ಸಿಗುವ ಜಾಗಕ್ಕೆ ಅತಿಯಾದ ಪ್ರಾಮುಖ್ಯತೆಯನ್ನೂ ಕೊಟ್ಟುಬಿಟ್ಟರೆ ಅದು ಉಳಿದವರಿಗೂ ದೇವರಾಗಿ ಬಿಡುವ ಅಪಾಯ ಇದೆಯಲ್ಲವೇ?

ನನ್ನ ದೇವರು ನನ್ನ ದೇವರಷ್ಟೇ!

3 comments to “ನನ್ನ ದೇವರು- ಅಶೋಕ್ ಕೆ ಆರ್”
  1. ನೀವು ದೇವರನ್ನೆ ನಂಬುವುದಿಲ್ಲ ಎನ್ನುತ್ತೀರಿ! ನಾನು ನಿಮ್ಮನ್ನು ನಂಬಬೇಕು ಎನ್ನುತ್ತೀರಿ? ಎಂದುಕೇಳಿ ಮೂವತ್ತು ವರ್ಷದ ಹಿಂದೆ ನನ್ನನ್ನೊಬ್ಬ ಬೆಚ್ಚಿ ಬೀಳಿಸಿದ್ದ!!

  2. Thumba sathya, kasta sukaha ene adru manassina bhaara kushi kaleyoke hudkodu ondu manassu athva ondu roopa, aa roopa manushya athva devara anno roopa illa yaavado ondu shakthi. Mathomme manasige ariyalaaagade kooditta nenapugala butthiya mathomme eduru arivikondu kooruva samaya

Leave a Reply to prasadraxidi Cancel reply