ನನ್ನ ದೇವರು-ಗೀತಾ ಭಟ್

ನಾವು ಸಣ್ಣವರಿರುವಾಗ ನಾವು ದೇವರ ಬಗ್ಗೆ ಕೇಳಿದ್ದು ,ಕಲ್ಪಿಸಿಕೊಂಡಿದ್ದು ನಮ್ಮ ತಂದೆ ತಾಯಿಯ ಹೇಳಿಕೆಗಳಿಂದ. ನಮಗೆ ಅವರು ಹೇಳುತ್ತಿದ್ದದ್ದು, ಬೆಳಿಗ್ಗೆ ಎದ್ದು ದೇವರಿಗೆ ಕೈ ಮುಗಿ, ಇಲ್ಲ ಅಂದ್ರೆ ಶಾಪ ಕೊಡ್ತಾನೆ, ಪರೀಕ್ಷೆಯಲ್ಲಿ ಫೇಲ್ ಆಗ್ತೀರಿ ಎಂದು. ಆಗ ನಮಗೆ ದೇವರ ಬಗ್ಗೆ ಇದ್ದದ್ದು ಭಕ್ತಿಗಿಂತ ಭಯವೇ ಹೆಚ್ಚು. ನಾವು ಕೇಳಿದ್ದು ದೇವರೆಂದ್ರೆ, ಸರ್ವಶಕ್ತ, ಸರ್ವಜ್ಞ ಸರ್ವಾಂತರ್ಯಾಮಿ ಎಂದು. ಹಾಗಾಗಿ ಎಲ್ಲವು ಅವನಿಂದ ಸಾಧ್ಯ ಎಂಬ ವಿಶ್ವಾಸ ನಮಗೆ.

ಸ್ವಲ್ಪ ತಿಳುವಳಿಕೆ ಬಂದ ಮೇಲೆ ನಮ್ಮ ಸಾಗರದ ಮಾರಿಕಾಂಬೆಯೇ ದೇವರು ಎಂದು
ಅನ್ನಿಸಿತು. ಏಕಂದ್ರೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ನಾವು ಮಾರಿಕಾಂಬೆ ದೇವಾಲಯಕ್ಕೆ ಹೋಗಿ ಹಣ್ಣುಕಾಯಿ ಮಾಡಿಸಿಕೊಂಡು ಬರಬೇಕಿತ್ತು. ನಮ್ಮ ಅಹವಾಲು ಏನೇ ಇದ್ದರು ಅವಳಲ್ಲಿಯೆ ನಿವೇದಿಸಿಕೊಳ್ಳುತ್ತಿದ್ದೆವು. ದೇವರೆ ಪರೀಕ್ಷೆಯಲ್ಲಿ ಪಾಸ್ ಮಾಡಿಸು, ಹೊಟ್ಟೆಗೆ ತಿನ್ನಲು ಏನಾದ್ರು ಕೊಡಿಸು ಎಂದು. ಏಕೆಂದರೆ ನಮಗೆ ಒಂದೊಂದು ಸಾರಿ ತಿನ್ನಲು ಏನೂ ಇರುತ್ತಿರಲಿಲ್ಲ.ಅವಳು ಕೊಡಿಸಿದಳೋ, ಅಥವಾ ಕೊಡಿಸುವಂತೆ ಮಾಡಿದಳೊ ಗೊತ್ತಿಲ್ಲ. ಅಂತೂ ಬೆಳಿಗ್ಗೆಯಿಂದ ಉಪವಾಸ ಇದ್ರು, ಅಪ್ಪ ರಾತ್ರಿ ಹೊತ್ತಿಗೆ ಎಲ್ಲಿಂದಲೋ ದಿನಸಿ ಹೊಂಚಿ ತರುತ್ತಿದ್ದರು. ಅಮ್ಮ ಅಡುಗೆ ಮಾಡಿ ಬಡಿಸುತ್ತಿದ್ದರು. ಆಗ ನನಗೆ ಅಮ್ಮ ಬಡಿಸಿದ್ದ ಅನ್ನ ಸಾಂಬಾರಿನಲ್ಲಿ ದೇವರು ಕಾಣಿಸುತ್ತಿದ್ದ.

ಆಮೇಲಾಮೇಲೆ ಸಾಗರದ ಮಾರಿಕಾಂಬೆಯ ಹತ್ತಿರ ಬೇಡಿಕೊಳ್ಳದೆ ಏನೂ ಕೆಲಸವನ್ನು ನಾನು ಮಾಡುತ್ತಿರಲಿಲ್ಲ. ಅದಕ್ಕೆ ಸರಿಯಾಗಿ ನನ್ನ ಪ್ರಯತ್ನವು ಇರುತ್ತಿತ್ತೇನೋ. ಪ್ರತಿ ತರಗತಿಯಲ್ಲು ಫರ್ಸ್ಟ್ ಕ್ಲಾಸ್ ನಲ್ಲಿ ಪಾಸಾಗುತ್ತಿದ್ದೆ. ಇಲ್ಲಿ ನನ್ನ ಸ್ನೇಹಿತೆ ಸೀತಾಳನ್ನು ನೆನಸಲೆಬೇಕು. ನನ್ನ ಹತ್ತಿರ ಪುಸ್ತಕಗಳಿರುತ್ತಿರಲಿಲ್ಲ. ಅವಳು ತನ್ನ ಪುಸ್ತಕಗಳನ್ನು ಎರಡು ಭಾಗ ಮಾಡಿ ನನಗೆ ಓದಲು ಕೊಡುತ್ತಿದ್ದಳು. ತನ್ನ ಟ್ಯುಷನ್ನಿನ ನೋಟ್ಸ್ ಗಳನ್ನು ಕೊಡುತ್ತಿದ್ದಳು. ಆ ದೇವರೆ ಅವಳ ರೂಪದಲ್ಲಿ ನನಗೆ ಸಹಾಯ ಮಾಡುತ್ತಿದ್ದ ಎನಿಸುತ್ತಿತ್ತು.

ಡಿಗ್ರಿ ಮುಗಿದ ಕೂಡಲೆ ಟೈಫಾಯ್ಡ್ ಕಾಯಿಲೆ ಬಂತು. ಒಂದು ರಾತ್ರಿ ಜ್ವರ ತುಂಬ ಜಾಸ್ತಿ ಆದಾಗ , ರಾತ್ರಿ 12 ಗಂಟೆಗೆ ನನ್ನಪ್ಪ ನಡೆದುಕೊಂಡು ಹೋಗಿ ಕೊಳಕೆಬೈಲ್ ಡಾಕ್ಟರ್ರವರನ್ನು ಕರೆದುಕೊಂಡು ಬಂದಾಗ, ಮಲಗಿದಲ್ಲೆ ಎಲ್ಲ ಮಾಡಿಕೊಳ್ಳುತ್ತಿದ್ದ ನನ್ನನ್ನು ಶುಚಿಗೊಳಿಸುತ್ತಿದ್ದ ನನ್ನಮ್ಮ ನಲ್ಲಿ ದೇವರು ಕಾಣಿಸಿದ್ದ ನನಗೆ.

ನಂತರ ಕೆಲಸ ಸಿಕ್ಕಿ ತರಬೇತಿಗೆಂದು ಮೈಸೂರಿಗೆ ಹೋದೆ. ಒಂದು ದಿನ ನಾವು 12 ಜನ ಗೆಳತಿಯರು ಸೇರಿ ಬೃಂದಾವನ ಗಾರ್ಡನ್ ನೋಡಲು ಹೋದಾಗ ನಮ್ಮನ್ನು ಮೊದಲಿಂದಲು ಒಬ್ಬ ವ್ಯಕ್ತಿ ಹಿಂಬಾಲಿಸುತ್ತಿದ್ದ. ಆತ ಮಾಸಲು ಬಟ್ಟೆ ಧರಿಸಿದ್ದ. ನಮಗೆಲ್ಲ ಆತ ಕಳ್ಳನೊ ಅಥವಾ ಇನ್ನೇನೊ ಅನಿಸಿ ಭಯಗೊಂಡು ಅವನಿಂದ ದೂರ ದೂರ ಹೋದಷ್ಟು ಆತ ನಮ್ಮ ಹಿಂದೇಯೆ ಬರುತ್ತಿದ್ದ. ಆಗಿನ್ನು ಮ್ಯುಸಿಕಲ್ ಫೌಂಟೇನ್ ಆರಂಭವಾಗಿದ್ದ ಕಾಲ. ಎಲ್ಲರು ನೋಡಲು ಅಲ್ಲಿ ಸೇರಿದ ಸಮಯದಲ್ಲಿಯೆ ವಿದ್ಯುತ್ ಕೈಕೊಟ್ಟಿತು. ಸುತ್ತಲು ಕಗ್ಗತ್ತಲೆ ಕವಿದಿತ್ತು. ನೂಕುನುಗ್ಗಲಿನಲ್ಲಿ ನಾವು 12 ಜನ ಇದ್ದವರು , ನಾವು ನಾಲ್ಕು ಜನ ಒಂದು ಕಡೆ ಉಳಿದವರು ಇನ್ನೊಂದು ಕಡೆ ಆದೆವು. ನನ್ನ ಸ್ನೇಹಿತೆಯಂತು ಅಳುವುದಕ್ಕೆ ಪ್ರಾರಂಭಿಸಿದಳು. ಆಗ ನಮಗೆ ಸಹಾಯ ಮಾಡಿದ್ದು ಆ ಹಿಂಬಾಲಿಸುತ್ತಿದ್ದ ವ್ಯಕ್ತಿಯೆ. ಆತ ನಮ್ಮೆಲ್ಲರನ್ನು ಒಗ್ಗೂಡಿಸಿ ಹೊರಗಿನ ಗೇಟ್ ವರೆಗೆ ಕರೆದುಕೊಂಡು ಬಂದು ಬಸ್ ಹತ್ತಿಸಿ ಕಳಿಸಿದ. ಆತನನ್ನು ಇನ್ನು ನನಗೆ ಮರೆಯಲು ಆಗಿಲ್ಲ. ಆತನನ್ನು ಆ ದೇವರೇ ಕಳಿಸಿರಬೇಕು ಎಂದುಕೊಂಡೆ. ಆ ದಿನದಿಂದ ಯಾವುದೆ ವ್ಯಕ್ತಿಯ ಬಾಹ್ಯ ಚಹರೆಗಳಿಂದ ಆ ವ್ಯಕ್ತಿಯನ್ನು ಅಳೆಯಬಾರದು ಎಂಬ ಪಾಠ ಕಲಿತೆ.

ನಂತರ ಜೀವನದ ಪಯಣದಲ್ಲಿ ನನ್ನ ಮಗಳು ಬಂದಳು. ಅವಳು ಬಂದಾಗ ನಾನು ಸಾಲದ ಕೂಪದಲ್ಲಿದ್ದೆ. ಫೈನಾನ್ಸ್ ನಲ್ಲಿ ಮಾಡಿದ ಸಾಲ ತೀರಿಸಲಾಗದೆ ನನ್ನ ಸಂಬಳದಲ್ಲಿ ಕಡಿತಗೊಳಿಸುವ ಆರ್ಡರ್ ಆತ ತಂದಾಗ ನನ್ನನ್ನು ಕಾಪಾಡಿದ್ದು ಆ ದೇವರ ಕಾಣದ ಕೈ. ನಮ್ಮ ಕಚೇರಿಯ ಸೊಸೈಟಿಯಲ್ಲಿ ಸಾಲ ತೆಗೆಯಲು ಶೂರಿಟಿ ಹಾಕಲು ನನ್ನ ಗೆಳತಿ ನಿರಾಕರಿಸಿದಾಗ, ನನಗೆ ಸಹಾಯ ಮಾಡಿದ್ದು ನನಗೆ ಪರಿಚಯವೇ ಇಲ್ಲದ ಪಡುಬಿದ್ರಿ ಪೋಸ್ಟ್ ಆಫೀಸಿನ ಬಾಬು ಕೊಟ್ಯಾನ್ ಎನ್ನುವವರು. ಹೊಸ ಸದಸ್ಯರಿಗೆ ಯಾರಿಗು ಸಾಲ ಕೊಡದಿದ್ದ ಸೊಸೈಟಿಯವರು ನನಗೆ ಕೊಟ್ಟಿದ್ದು ಆ ದೇವರಿಂದ ಎಂದುಕೊಂಡೆ.

ಮುಂದೆ ನನ್ನ ಮಗಳಿಗೆ ಬ್ರೈನ್ ಟ್ಯುಮರ್ ಆದಾಗ, ಅವಳನ್ನು ಉಳಿಸಿಕೊಳ್ಳಲು ಪೈಸೆ ಪೈಸೆಗು ಕೈ ಚಾಚುವಂತೆ ಮಾಡಿದ, ಯಾವಾಗಲು ಭೂಮಿ ನೋಡುತ್ತಿದ್ದ ನನ್ನ ಕೈ ಆಕಾಶ ನೋಡುವಂತೆ ಮಾಡಿ, ಭಿಕ್ಷೆ ಬೇಡುವಂತೆ ಮಾಡಿದ್ದು ಆ ದೇವರಲ್ಲದೆ ಇನ್ಯಾರು ಅನಿಸಿತು. ನನ್ನಿಂದ ಸಹಾಯ ಪಡೆದವರೆಲ್ಲರು ಮುಖ ತಿರುಗಿಸಿದಾಗ ನನಗೆ ಸಹಾಯ ಮಾಡಿದ್ದು ನನ್ನ ಗೆಳತಿಯರಾದ, ಅನಿತ, ನಿರ್ಮಲ, ಸೆಲೆ, ನನ್ನ ತಂಗಿ ಭಾರತಿ, ನನ್ನ ದೊಡ್ಡಕ್ಕ, ನಮ್ಮ ಅಣ್ಣ ಮಂಜು ಮತ್ತು ನನ್ನ ಸಹೋದ್ಯೋಗಿಗಳು. ಇವರೆಲ್ಲರಿಗು ಮನಸ್ಸು ಕೊಟ್ಟಿದ್ದು ಆ ದೇವನಲ್ಲವೆ.

ಆದರೂ ನನ್ನ ಮಗಳು ಉಳಿಯದಿದ್ದಾಗ, ಮೊಟ್ಟ ಮೊದಲ ಬಾರಿಗೆ ನಾನು ನಂಬಿದ ದೇವರು ಸರ್ವಶಕ್ತ ಅಲ್ಲ ಎನ್ನಿಸಿತು.ಎ ಎನ್ ಮೂರ್ತಿರಾಯರು ಹೇಳಿದಂತೆ ದೇವರು ಏಕಕಾಲದಲ್ಲಿ ಸರ್ವಶಕ್ತ, ಸರ್ವಜ್ಞ ಆಗಲು ಸಾಧ್ಯವಿಲ್ಲ ಎನ್ನುವುದು ನಿಜ ಅನ್ನಿಸತೊಡಗಿತು.

ನನ್ನ ಅಪ್ಪ, ಸಣ್ಣ ಅಕ್ಕನ ಮೊದಲ ಮಗ, ಮತ್ತು ಗಂಡ, ನನ್ನ ಅಮ್ಮ ಮತ್ತು ನನ್ನ ಪ್ರೀತಿಯ ಮುನ್ನಿಯ ಸಾವು, ನನ್ನ ಪ್ರೀತಿಯ ನಾಯಿಗಳಾದ ಡುಮ್ಮ, ಕಡ್ಡಿಗಳ ಸಾವು, ನನ್ನ ನಂಬಿಕೆಗೆ ಪೆಟ್ಟು ಕೊಡುತ್ತಲೆ ಹೋದವು. ಈಗ ನನ್ನ ಭಾವನ ಹಾಗು ಅವರನ್ನು ನೋಡಿಕೊಳ್ಳುವ ನನ್ನಕ್ಕನ ಅಸಹಾಯಕತೆಯನ್ನು ನೋಡಿ ದೇವರು ಸರ್ವಶಕ್ತ ಹೌದೇ ಅವನು ಇದ್ದಾನೆಯೇ ಅನ್ನಿಸತೊಡಗಿದೆ.

ಅವನು ಇದ್ದಾನೋ ಇಲ್ಲವೋ ಗೊತ್ತಿಲ್ಲ ಅಥವ ನಮ್ಮೊಳಗೆಯೆ ಇದ್ದಾನೆಯೆ, ನಮ್ಮ ಕೈಯಲ್ಲಾಗುವ ಕೆಲಸಗಳು ಮಾತ್ರ ಮಾಡುತ್ತಾನೊ, ಎಂದನ್ನಿಸುತ್ತದೆ. ಆದರೆ ರೋಗ ರುಜಿನಗಳ ಮಾತು ಬಂದಾಗ ಅವನು ಸಹ ನಮ್ಮಂತೆ ಸೋಲುತ್ತಿದ್ದಾನೆ. ಅಸಹಾಯಕನಾಗುತ್ತಾನೆ ಎನಿಸುತ್ತದೆ.

ಆದರೆ ದೇವರ ಪೂಜೆ ಇತ್ಯಾದಿ ವಿಷಯ ಬಂದಾಗ, ನನಗನ್ನಿಸುವುದು ಜನರಲ್ಲಿ ಪೂಜೆ ಮಾಡದಿದ್ದರೆ ಏನಾಗುತ್ತದೊ ಎನ್ನುವ ಭಯವಿದೆಯೆ ಹೊರತು, ಅಲ್ಲಿ ಭಕ್ತಿಯಾಗಲಿ ಪ್ರೀತಿಯಾಗಲಿ ಇಲ್ಲ ಎಂದು. ದೇವರು ಕರುಣೆ ಮತ್ತು ಪ್ರೀತಿಯ ಸಾಗರ ಎನ್ನುತ್ತೇವೆ ಆದರೆ ಅವನಿಗೆ ಹೆದರುತ್ತೇವೆ. ಎಲ್ಲೆಲ್ಲು ಇದ್ದಾನೆ ಎನ್ನುತ್ತೇವೆ ಆದರೆ ಅವನನ್ನು ಹುಡುಕಿಕೊಂಡು ಗುಡಿ ಗುಂಡಾರಗಳನ್ನು ಸುತ್ತುತ್ತೇವೆ. ನಮಗೆ ನಮ್ಮ ನಂಬಿಕೆಯಲ್ಲೆ ವಿಶ್ವಾಸವಿಲ್ಲ ಎನಿಸುತ್ತದೆ.

ಆದರೂ ವೈಯಕ್ತಿಕವಾಗಿ, ಸಾಮಾಜಿಕವಾಗಿ ಎಷ್ಟೊ ಅವಮಾನಗಳನ್ನು ಸಹಿಸಿ, ನನ್ನವರು ಎನಿಸಿಕೊಂಡವರ ಸ್ವಾರ್ಥಗಳನ್ನು ನೋಡಿ, ಬಂದ ಕಷ್ಟಗಳನ್ನು ಎದುರಿಸಿ , ಗೀತಾ ಅಂದ್ರೆ ಜೋರು ಅನ್ನುವ ಪಟ್ಟ ಕಟ್ಟಿ , ಒಬ್ಬಳೆ ಆದರೂ ಬದುಕುವ ಛಲವನ್ನು ತುಂಬಿದವನು ಅವನೆ ಅಲ್ಲವೇ ಅನಿಸುತ್ತದೆ.

ಆದರೂ ಅವನೆಲ್ಲು ಇಲ್ಲ, ಒಂದು ಸುಂದರ ಮುಂಜಾವಿನಲ್ಲಿ, ಪ್ರಾಣಿ ಪಕ್ಷಿಗಳ ಕೂಗಿನಲ್ಲಿ, ಬೀಸುವ ಗಾಳಿಯಲ್ಲಿ, ಹರಿಯುವ ನೀರಿನಲ್ಲಿ , ಬದುಕುವ ಛಲದಲ್ಲಿ, ಅಸಹಾಯಕರಿಗೆ ಸಹಾಯ ಮಾಡಿದಾಗ ಸಿಗುವ ಖುಷಿಯಲ್ಲಿ, ನಮ್ಮ ಮನೆಗೆ ಮಳೆ ನೀರು ನುಗ್ಗಿದಾಗ ಫೋನ್ ಮಾಡಿದಾಗ ತಕ್ಷಣ ಜೆ ಸಿ ಬಿ ಕಳಿಸಿ ಸಹಾಯ ಮಾಡಿದ ನಮ್ಮೂರ ಎಮ್ ಎಲ್ ಎ, ಕಚೇರಿಯಲ್ಲಿ ರಜಾ ಕೇಳಿದಾಕ್ಷಣ ಹೋಗಿ ಹೋಗಿ ಎನ್ನುವ ನನ್ನ ಹಿರಿಯ ಅಧಿಕಾರಿಗಳು ವಿಶೇಷವಾಗಿ ನಾಗರಾಜ್ ಸರ್, ನನ್ನ ನಾಯಿಗಳಿಗೆ ನಿಷ್ಟೆಯಿಂದ ಊಟ ಹಾಕುವ ಶಿವು, ನಾನು ಎಷ್ಟು ಹೊತ್ತಿಗೆ ಕರೆ ಮಾಡಿದರೂ ಬೇಸರಿಸದೆ ಬಂದು ನಾಯಿಗಳ ಯೋಗಕ್ಷೇಮ ನೋಡುವ ನಮ್ಮ ಡಾಕ್ಟರ್, ಏನಾದ್ರು ಕಷ್ಟ ಬಂದ್ರೆ ಸ್ಪಂದಿಸುವ ನನ್ನ ಬಂಧುಗಳು ಮತ್ತು ಗೆಳತಿಯರು, ಸಹೋದ್ಯೊಗಿಗಳು ಮತ್ತು ನನ್ನ ಕಿರಿಕಿರಿಗಳಿಗೆ ಕಿವಿಯಾಗುವ ನನ್ನಕ್ಕನ ಮಗಳು ಆಶಾ ಮತ್ತು ನನಗೆ ಸಹಾಯ ಮಾಡಿದವರು, ಇನ್ನು ಮಾಡುತ್ತಿರುವವರಲ್ಲಿ ದೇವರಿದ್ದಾನೆ ಎಂದುಕೊಳ್ಳುತ್ತೇನೆ.
ಆದರೂ ಕೊನೆಯಲ್ಲಿ ಆತ ಸರ್ವಶಕ್ತ ಅಲ್ಲ ಅನ್ನುವ ಕೊರೆ ಉಳಿದೆ ಉಳಿಯುತ್ತದೆ ನನ್ನ ಮನದಲ್ಲಿ.

ಚಿತ್ರ : ಮಾಹಾಂತೇಶ್ ದೊಡ್ಡಮನಿ 

ಪ್ರತಿಕ್ರಿಯಿಸಿ