ಡೇವಿಡ್ ಬಾಂಡ್ ಬರೆಯುವ ಚಿತ್ರ ಭಾರತ: ಕಾಲ ಬದಲಾದರೂ ಬದಲಾಗದ ಸಮಸ್ಯೆಗಳು

ಔರತ್ (1940 ಹಿಂದಿ ಚಲನಚಿತ್ರ, ಮೆಹಬೂಬ್ ಖಾನ್ ನಿರ್ದೇಶನ) ಮತ್ತು ಮದರ್ ಇಂಡಿಯಾ (1957 ಹಿಂದಿ ಚಲನಚಿತ್ರ, ಮೆಹಬೂಬ್ ಖಾನ್ ನಿರ್ದೇಶನ).

ಹಳೆಯದಾದ ಒಂದು ಸುಪ್ರಸಿದ್ಧ ಮತ್ತು ಆಷ್ಟೇನೂ ಪ್ರಸಿದ್ಧವಲ್ಲದ ಈ ಎರಡು ಭಾರತೀಯ ಚಿತ್ರಗಳ ಈ ವಿಮರ್ಶೆ ಕನ್ನಡ ಚಲನಚಿತ್ರ ’ತಿಥಿ’ಯ ನನ್ನ ವಿಮರ್ಶೆಗೆ ತಳುಕು ಹಾಕಿಕೊಂಡಿರುವಂಥದು. ಏಕೆಂದರೆ ಒಂದೇ ಥರದ ಸಾಮಾಜಿಕ ಕಾಳಜಿಗಳನ್ನೆ ಯಾವಾಗಲೂ ಭಾರತೀಯ ಚಲನಚಿತ್ರಗಳು ಅಯ್ದುಕೊಳ್ಳುವದು ಮತ್ತು ಈ ಸಮಸ್ಯೆಗಳನ್ನು ಬಿಂಬಿಸುವ ವಿಧಾನವು ಹೇಗೆ ರಾಜಕೀಯ ಸ್ಥಿತ್ಯಂತರ ಮತ್ತು ಸಿನಿಮೀಯ ರಚನೆಗಳೊಡನೆ ಬದಲಾಗುತ್ತ ಹೋಗುತ್ತದೆ ಎಂಬುದನ್ನು ತೋರುವದು ನನ್ನ ಉದ್ದೇಶ. ’ತಿಥಿ’ಯಲ್ಲಿ ಬಿಂಬಿಸಲಾಗಿರುವ ಸಮಸ್ಯೆ – ಸಾಂಪ್ರದಾಯಿಕ ಆಚರಣೆಗಳು ತಂದಿಕ್ಕುವ ಆರ್ಥಿಕ ಹೊರೆ – ಆಗಲೇ ಭಾರತದ ಅತ್ಯಂತ ಪ್ರಸಿದ್ಧ ಚಲನಚಿತ್ರಗಳಲ್ಲೊಂದಾದ ಮೆಹಬೂಬ್ ಖಾನರ ’ಮದರ್ ಇಂಡಿಯಾ’ದ ವಿಷಯವಸ್ತುವಾಗಿತ್ತು. 1957 ರಲ್ಲಿ ಇದು ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದಲ್ಲಿ ಆಸ್ಕರ್ ಗೆಲ್ಲುವುದನ್ನ ಕೂದಲೆಳೆಯ ಅಂತರದಿಂದ ತಪ್ಪಿಸಿಕೊಂಡಿತು.
’ಮದರ್ ಇಂಡಿಯಾ’ದ ಪ್ರಸಿದ್ಧಿ ಎಲ್ಲರಿಗು ತಿಳಿದಿರುವಂಥದ್ದೇ – IMDB ಯಲ್ಲಿ ಇದರ ಇಪ್ಪತ್ತನಾಲ್ಕು ವಿಮರ್ಶೆಗಳು ಲಭ್ಯವಿವೆ. ಆದರೆ ಅದಕ್ಕೂ ಸುಮಾರು ಹದಿನೇಳು ವರುಷಗಳ ಹಿಂದೆ ಚಿತ್ರೀಕರಿಸಲಾದ, ’ಔರತ್’ ಚಲನಚಿತ್ರ ಇವತ್ತಿಗೂ ಅಜ್ಞಾತವಾಗೇ ಉಳಿದುಕೊಂಡಿದೆ. ಅದರ ಪ್ರತಿಗಳು ಇತ್ತೀಚಿನವರೆಗು ಸಿಗುವುದು ಬಹಳ ಕಷ್ಟವಿತ್ತು. IMDB ನಲ್ಲಿ ಇದಕ್ಕೆ ಕೇವಲ ಒಂದು ವಿಮರ್ಶೆ, ಅದೂ ಕೆಲ ತಿಂಗಳ ಹಿಂದೆ ಹಾಕಲಾಗಿರುವುದು, ಕಾಣಸಿಗುತ್ತದೆ. ಆದರೆ ಭಾರತೀಯ ಮೂಲದ US ನಿವಾಸಿಗರೆಂದೆನಿಸುವ ಆ ವಿಮರ್ಶಕರು ಔರತ್ ಅನ್ನು “ ಸಾಂಸ್ಕೃತಿಕವಾಗಿ ಅತ್ಯಂತ ಉತ್ಕೃಷ್ಟವಾದ ಮತ್ತು ಎಲ್ಲಾ ಫಿಲ್ಮ್ ಸ್ಕೂಲುಗಳಲ್ಲೂ ಕಡ್ಡಾಯವಾಗಿ ಪ್ರದರ್ಶಿಸಬೇಕಾದ ಚಲನಚಿತ್ರ” ಎಂದು ಬಣ್ಣಿಸುತ್ತಾರೆ. ಈ ಭಾಷೆ ನನ್ನದಲ್ಲದಿದ್ದರೂ ಸಹ ನಾನು ಉತ್ಸಾಹೀ ವಿಮರ್ಶಕನೊಂದಿಗೆ ಸಹಮತ ಹೊಂದಿದ್ದೇನೆ.

ಔರತ್ ಮತ್ತು ಮದರ್ ಇಂಡಿಯಾ ಒಂದು ರೀತಿಯಲ್ಲಿ ಹೇಳಬೇಕೆಂದರೆ ಬೇರೆಯಲ್ಲ. ಎರಡರ ಕಥಾಹಂದರಗಳೂ ಹೆಚ್ಚೂಕಡಿಮೆ ಹೋಲುವಂತಿವೆ. ನಂತರದ ಚಿತ್ರಕ್ಕಾಗಿ ಬರವಣಿಗೆಯಲ್ಲಿ ಹಲವಾರು ಮಾರ್ಪಾಡುಗಳನ್ನ ಮಾಡಲಾಯಿತಾದರು, ನಿಜವಾದ ಬದಲಾವಣೆಗಳು ಬೆರಳೆಣಿಕೆಯಷ್ಟು ಮಾತ್ರವೇ. ಆದರೆ ತೀವ್ರತೆ ಮತ್ತು ವಿಷಯನಿರೂಪಣೆಗಳಲ್ಲಿ ಕಂಡುಬರುವ ಅತ್ಯಂತ ಗಮನಾರ್ಹ ಬದಲಾವಣೆಗಳಿಂದಾಗಿ ಒಂದೆಡೆ ಮದರ್ ಇಂಡಿಯಾ ರಾಷ್ಟ್ರೀಯತಾವಾದಿ ಮಹಾಕಾವ್ಯವಾಗಿ ರೂಪುತಾಳಿದರೆ ಔರತ್ ಸಾಮಾಜಿಕ ವಿಮರ್ಶೆಯ ಪ್ರಬಲ ಮಾಧ್ಯಮವಾಯಿತು. ಭಾರತವು ನಂತರದ ವರ್ಷಗಳಲ್ಲಿ ಸ್ವತಂತ್ರ ರಾಷ್ಟ್ರವಾಯಿತೇನೋ ಸರಿಯೆ, ಆದರೆ ಈ ನಡುವಲ್ಲಿ ಮೆಹಬೂಬರ ಒಳಗಿನ ನಿರ್ದೇಶಕ ಮತ್ತು ಅವರ ಚಲನಚಿತ್ರಗಳ ಸೌಂದರ್ಯಪ್ರಜ್ಞೆಯಲ್ಲಿ ಹಲವಾರು ಬದಲಾವಣೆಗಳು ಉಂಟಾಗಿದ್ದವು.

ನಲವತ್ತರ ದಶಕದ ಅವಧಿಯಲ್ಲಿ ಅವರು ಜರ್ಮನ್ ( “ಅಭಿವ್ಯಕ್ತಿ”) ಮತ್ತು ರಷ್ಯನ್ ( “ಸಾಮಾಜಿಕ ವಾಸ್ತವಿಕತಾವಾದಿ”) ಚಿತ್ರ ಸಂಪ್ರದಾಯಗಳ ಬಲವಾದ ಪ್ರಭಾವದಡಿ ಹಲವಾರು ಭಾರತೀಯ ನಿರ್ದೇಶಕರಂತೆಯೇ ಸಿಲುಕಿಕೊಂಡಿದ್ದರು. ಹೀಗಾಗಿ ಅವರ ಈ ಆರಂಭಿಕ ಚಲನಚಿತ್ರಗಳಲ್ಲಿ ’ವಾಸ್ತವಿಕತೆ’ ( ನ್ಯಾಚುರಲಿಸಮ್: ’ನವ ವಾಸ್ತವಿಕತೆ’ – ನಿಯೋ ರಿಯಲಿಸಮ್ ಎಂದೂ ಕರೆಯಲಾಗುವ) ಮತ್ತು ಒಮ್ಮೊಮ್ಮೆ ಅವಾಸ್ತವಿಕ ಮಾಂಟಾಜುಗಳ ಶ್ರೀಮಂತವಾದ, ಅಚ್ಚರಿಮೂಡಿಸುವಂಥ ಸಂಯೋಗಗಳು ಕಂಡುಬರುತ್ತವೆ. ಇದು ಮೂಲಭೂತವಾಗಿ ಪಾತ್ರಗಳ ಮನಸ್ಸನ್ನು ಪ್ರತಿಬಿಂಬಿಸಲು ವಿನ್ಯಾಸಗೊಳಿಸಿದ ತಂತ್ರ.

ನಂತರದ ವರ್ಷಗಳಲ್ಲಿ ಮೆಹಬೂಬ್ US ಸಿನೆಮಾದಿಂದ ಹೆಚ್ಚು ಆಕರ್ಷಿತರಾದರು . ತನ್ನನ್ನು ತಾನು ಭಾರತೀಯ ಸೆಸಿಲ್ ಬಿ ಡಿಮಿಲ್ (ತಾನು ಆರಾಧಿಸುತ್ತಿದ್ದ USನ ನಿರ್ದೇಶಕ) ಎಂದು ಭಾವಿಸಿಕೊಂಡಿದ್ದರು. ಅಮೇರಿಕಾದ ಮಾರುಕಟ್ಟೆಯನ್ನು ಸೂರೆ ಮಾಡುವ ಅವರ ಗೀಳು 1952ರ ಫ್ಯಾಂಟಸಿ ’ಆನ್’ ಇಂದ ಆರಂಭಗೊಂಡು ನಾಲ್ಕು ವರ್ಷಗಳ ನಂತರ ಮದರ್ ಇಂಡಿಯಾದ ಯಶಸ್ಸಿನೊಂದಿಗೆ ಅಂತ್ಯ ಕಂಡಿತು. ಇದನ್ನು ಸಾಧಿಸಲು ಮೆಹಬೂಬ್ ಔರತ್ ನ ಸಮಗ್ರವಾಗಿ ಕಪ್ಪು ಮತ್ತು ಬಿಳಿ ವಾಸ್ತವಿಕತೆಯ ಬದಲಿಗೆ ಹೆಚ್ಚು ಚಿತ್ತಾಕರ್ಷಕವಾದ ಟೆಕ್ನಿಕಲರ್ ಚಿತ್ರಿಕೆಯನ್ನು ಕೈಗೆತ್ತಿಕೊಂಡರು ಮತ್ತು US ಸಿನೆಮಾದಲ್ಲಿ ಆಗಿನ ಬಳಕೆಯಲ್ಲಿದ್ದ ರಿಯಲಿಸಮ್(ವಾಸ್ತವವಾದ) ವೈಖರಿಯ ಸಲುವಾಗಿ ಅಭಿವ್ಯಕ್ತವಾದದ (ಎಕ್ಸ್ ಪ್ರೆಶನಿಸಮ್) ಎಲ್ಲಾ ರೀತಿನೀತಿಗಳನ್ನು ಕೈಬಿಡಲಾಯಿತು. ಆದ್ದರಿಂದ, ಮದರ್ ಇಂಡಿಯಾ ತಾಂತ್ರಿಕವಾಗಿ ಅದ್ಭುತವಾಗಿದ್ದು ಯಾವುದೇ ಡಿಮಿಲ್ ಚಿತ್ರದಷ್ಟೇ ಆಕರ್ಷಕವಾಗಿದ್ದಿತ್ತಾದರೂ ಮೆಹಬೂಬರ ಔರತ್ ಮತ್ತು 1940ರ ದಶಕದ ಅವರ ಇತರ ಚಿತ್ರಗಳಲ್ಲಿ ಬಳಸಿದ ಸೂಕ್ಷ್ಮ ಸಂಯೋಜನೆಗಳಾಗಲೀ, ಎಫೆಕ್ಟುಗಳಾಗಲೀ ಅದರಲ್ಲಿ ಕಂಡುಬರುವದಿಲ್ಲ.

1957ರ ಚಲನಚಿತ್ರದ ಶೀರ್ಷಿಕೆಯು ಸಾಧಾರಣವಾಗಿ 1927ರಲ್ಲಿ ಪ್ರಕಟವಾದ US ನಿರ್ದೇಶಕಿ ಕ್ಯಾಥರೀನ್ ಮೇಯೊ ಳ ಅದೇ ಹೆಸರಿನ ವಿವಾದಾತ್ಮಕ ಪುಸ್ತಕವನ್ನು ಉಲ್ಲೇಖಿಸುತ್ತದೆ ಎಂದು ಪರಿಗಣಿಸಲಾಗುತ್ತದೆ. ಮೇಯೋಳ ಸಾಮ್ರಾಜ್ಯಶಾಹೀ ಪುಸ್ತಕವು ತೀವ್ರ ಟೀಕೆಗೆ ಗುರಿಯಾಗಿದ್ದು ಲೇಖಕಿಯ ಭಾರತದ ಬಗೆಗಿನ ಅಭಿಪ್ರಾಯವು ಆಕೆಯ ಜನಾಂಗೀಯ ಭೇದದ ಒಳನೋಟಗಳ ಕಾರಣದಿಂದ ವಿರೂಪಗೊಂಡಿದೆ ಎಂಬ ಆಕ್ಷೇಪದಿಂದ. ಆದರೆ ಇದರಿಂದಾಗಿ ಆಗಿನ ಸಾಮಾಜಿಕ ಕೆಡುಕುಗಳಾದ ಬಾಲ್ಯವಿವಾಹ, ಮಹಿಳೆಯರ ಮೇಲಿನ ದಬ್ಬಾಳಿಕೆ, ಶಿಶು ಮರಣ ಅಥವಾ ಗ್ರಾಮೀಣ ಸಾಲಗಳೇ ಮೊದಲಾದುವುಗಳ ಬಗ್ಗೆ ಆಕೆಯ ವಿಮರ್ಶೆಗಳನ್ನು ಅನೂರ್ಜಿತಗೊಳಿಸುವ ಹಾಗಿಲ್ಲ. ಔರತ್ ಅನ್ನು ಮೇಯೋಳ ಪುಸ್ತಕ ವಿವಾದದ ಸುಳಿಯಲ್ಲಿದ್ದ ಸಂದರ್ಭದಲ್ಲಿ ನಿರ್ಮಿಸಿದ್ದೇ ಆದರೂ ಅದಕ್ಕೆ ಪ್ರತಿಕ್ರಿಯೆ ಎಂದು ಹೇಳಲಾಗದು. ಈ ಚಲನಚಿತ್ರ ಮೇಯೊ ಒತ್ತಿಹೇಳುವ ಕೆಡುಕುಗಳಲ್ಲೊಂದರ ನಾಟಕೀಯ ವೈಭವೀಕರಣವಾಗಿರುವುದು ಇದಕ್ಕೆ ಕಾರಣ. ಆಕೆಯ ಪುಸ್ತಕದಿಂದಲೇ ಉದಾಹರಿಸುವುದಾದಲ್ಲಿ, “ಬ್ರಿಟಿಷ್ ಭಾರತದ ಒಟ್ಟು ಗ್ರಾಮೀಣ ಸಾಲ ಸರಿಸುಮಾರು $ 1.900.000.000 ಎಂದು ಅಂದಾಜಿಸಲಾಗಿದೆ. ಇದು ಅನುತ್ಪಾದಕವಾದ್ದು. ಈ ಹೊರೆಗೆ ಅನೈತಿಕ ದುಬಾರಿ ಬಡ್ಡಿ ಮತ್ತು ಚಕ್ರಬಡ್ಡಿ ವ್ಯವಸ್ಥೆಯೇ ಪ್ರಮುಖ ಕಾರಣ …ಉಳಿದುದನ್ನು ಮದುವೆಗಳ ಮೇಲೆ ಮಾಡಲಾಗುವ ಅತಿಯಾದ ವೆಚ್ಚದ ಮೇಲೆ ಆರೋಪಿಸಬಹುದು. “

ಮೇಯೊ ಅವರು ತನ್ನ ಪುಸ್ತಕದಲ್ಲಿ “ಹಿಂದ್ ಸ್ವರಾಜ್” ನ ಗಾಂಧೀವಾದದ ಮುಗ್ಧತೆಯನ್ನು ಟೀಕಿಸಿದ್ದಲ್ಲದೆ ಅದು ರಾಷ್ಟ್ರೀಯತಾವಾದಿಗಳಿಗೆ ಆಗ ಅಸ್ತಿತ್ವದಲ್ಲಿದ್ದ ಅನೇಕ ಸಾಮಾಜಿಕ ಸಮಸ್ಯೆಗಳನ್ನು ಗಂಭೀರವಾಗಿ ಪರಾಮರ್ಶಿಸಲು ಅಡ್ಡಿಯನ್ನೊಡ್ಡುತ್ತಿದೆ ಎಂದು ಭಾವಿಸಿದ್ದರು. ವಾಸ್ತವವಾಗಿ ಗಾಂಧಿ ಯವರ ಸ್ನೇಹಿತರು ಮತ್ತು ಮಿತ್ರರೇ ಹಿಂದ್ ಸ್ವರಾಜ್ ಬಗ್ಗೆ ಆಕೆಯಷ್ಟು ವಿನೀತವಾದ ಭಾವನೆಯನ್ನು ಹೊಂದಿರಲಿಲ್ಲ. ಅವರ ಮಾರ್ಗದರ್ಶಿ ಗೋಪಾಲಕೃಷ್ಣ ಗೋಖಲೆಯವರು ಆ ಪುಸ್ತಕ “ಕಚ್ಚಾ ಮತ್ತು ತರಾತುರಿಯಿಂದ ಕಲ್ಪಿಸಲಾದಂಥದು” ಎಂದರೆ ಜವಾಹರಲಾಲ್ ನೆಹರೂ ಅದನ್ನು “ಸಂಪೂರ್ಣ ಅವಾಸ್ತವ” ಎಂದು ತಿರಸ್ಕರಿಸಿದರು. ಆದರೆ ಸಂಪ್ರದಾಯದ ಶ್ರೇಷ್ಠತೆಯ ಬಗೆಗಿನ ಗಾಂಧಿಯನ್ ಮುಗ್ಧತೆಯು ಅಭಿವೃದ್ಧಿಯ ಶ್ರೇಷ್ಠತೆಯ ಬಗೆಗಿನ Nehruvian ಮುಗ್ಧತೆಗೂ ಬಹುತೇಕ ನಿಖರವಾದ ಸಾಮ್ಯತೆಗಳಿವೆ. ಆ ಮುಗ್ಧತೆಯೇ ಸ್ವಾತಂತ್ರ್ಯ ನಂತರದ ವರ್ಷಗಳಲ್ಲಿ ’ರಾಷ್ಟ್ರೀಯ ಒಮ್ಮತ’ದ ರೂಪ ಪಡೆದುಕೊಂಡು ಆ ಅವಧಿಯ ಚಿತ್ರಗಳಲ್ಲಿ ಸರ್ವೇಸಾಧಾರಣವಾಗಿ ಬಿತ್ತರಗೊಂಡಿತು. ಆದ್ದರಿಂದ 1957 ಚಿತ್ರಕ್ಕೆ ಸೇರಿಕೊಳ್ಳುವ ಪ್ರಸಿದ್ಧವಾದ ಬದಲಾವಣೆಯೆಂದರೆ ಚಿತ್ರ ಕೊನೆಗೊಳ್ಳುವಾಗ ಸುಳ್ಳು ಆಶಾವಾದದ ಪ್ರತೀಕವೆಂಬಂತೆ ತೋರಿಸಲಾಗುವ ಅಣೆಕಟ್ಟಿನ ಫ್ರೇಮ್ ಕಥೆ. ಮೂಲ ಅದೇ ಉಳಿದರೂ, ಇದರಿಂದಾಗಿ ಕಥೆಯ ಮೂಲಭೂತ ಚಲನೆಯೇ ಬದಲಾಗಿಹೋಯಿತು. ಮದರ್ ಇಂಡಿಯಾ ಈಗ ಅಭಿವೃದ್ಧಿಯೆಂಬ ಪವಾಡ ಮಾತ್ರ ಗುಣಪಡಿಸಬಹುದಾದ ಭಾರತೀಯ ಬಡತನದ ಸಮಸ್ಯೆಗಳ ಬಗೆಗಿನ ಒಂದು ಕಥೆ ಎಂಬಂತೆ ಕಾಣಿಸತೊಡಗಿತು.

ಇದು ನಿಜವಾಗಿ ಚಲನಚಿತ್ರದ ಕಥೆಯಲ್ಲ ( ಎರಡೂ ಚಿತ್ರಗಳಲ್ಲಿಯೂ ಕೂಡಾ). ಅಲ್ಲಿ ತೋರಲಾಗಿರುವ ಕುಟುಂಬ ಬಡವರದಲ್ಲ. ಅದು ’ತಿಥಿ’ ಯಲ್ಲಿ ಕಂಡುಬರುವ ಕುಟುಂಬದ ಹಾಗೇ ಫಲಭರಿತವಾದ ಕೃಷಿ ಪ್ರದೇಶದಲ್ಲಿ ವಾಸವಿರುವ ಸಾಕಷ್ಟು ಸ್ಥಿತಿವಂತರಾದ ರೈತರ ಕುಟುಂಬ. ತಮ್ಮ ಅಚಾತುರ್ಯದ ಖರ್ಚು (ಅತಿ ದುಬಾರಿಯಾದ ಮದುವೆ) ಮತ್ತು ಸಾಲದ ಮೂಲಕ ಅದರ ಆರ್ಥಿಕ ಸ್ಥಿತಿ ದುರ್ಬಲಗೊಳ್ಳುತ್ತದೆ. 1940 ರ ಚಿತ್ರವು 1957 ರ ತನ್ನ ಪ್ರತಿರೂಪದ ಹಾಗೆಯೆ ಬರ ಮತ್ತು ಕ್ಷಾಮದ ದೃಶ್ಯಗಳನ್ನು ತೋರಿಸುತ್ತದೆ. ಆದರೆ ಇವೆಲ್ಲ ಸಮಸ್ಯೆಯ ಮೂಲಕಾರಣಗಳಲ್ಲವೇ ಅಲ್ಲ, ಬದಲಾಗಿ ಪರಿಸ್ಥಿತಿಯನ್ನು ಉಲ್ಬಣಗೊಳಿಸುತ್ತಿರುವ ಅಂಶಗಳು. ಅಣೆಕಟ್ಟು ಕಟ್ಟುವದು ಚಲನಚಿತ್ರವು ತೋರುವ ಎಲ್ಲಾ ಮುಖ್ಯ ಸಾಮಾಜಿಕ ಸಮಸ್ಯೆಗಳಿಗೆ ಯಾವುದೇ ಉತ್ತರವನ್ನು ನೀಡುವುದೇ ಇಲ್ಲ.

1957 ರ ಕಥೆಯಲ್ಲಿ ಮಾಡಲಾಗಿರುವ ಕೆಲವು ಪ್ರಮುಖ ಬದಲಾವಣೆಗಳಲ್ಲಿ ಅತ್ಯುತ್ತಮವಾದ್ದೆಂದರೆ 1940 ರ ಚಿತ್ರದಲ್ಲಿ ನಟ ಅರುಣ್ (ನಟ/ನರ್ತಕ ಗೋವಿಂದನ ತಂದೆ) ಅತ್ಯುತ್ತಮವಾಗಿ ವಹಿಸಿರುವ ಪತಿ Shanu ಪಾತ್ರ. 1957 ರಲ್ಲಿ ಆತನನ್ನು ಕೃಷಿ ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡವನಾಗಿ ತೋರಿಸಲಾಗಿದ್ದು, ಆತನ ಕುಟುಂಬ ಪರಿತ್ಯಾಗವು ’ಪ್ರಾಕೃತಿಕ’ ವಿಪತ್ತೊಂದರ ಆಕಸ್ಮಿಕ ಭಾಗವೆಂಬಂತೆ ಕಾಣುತ್ತದೆ. ಔರತ್ ನಲ್ಲಿ ಇದಕ್ಕೆ ಒತ್ತಡ ( ಅವರ ಪತ್ನಿ ಮತ್ತೆ ಗರ್ಭಿಣಿ ಎಂಬ ವಿಚಾರ) ಮತ್ತು ಕೇವಲ ಆರ್ಥಿಕ ಪರಿಸ್ಥಿತಿಯ ಚಿಂತೆಗಳು ಶಾನು ತನ್ನ ಕುಟುಂಬವನ್ನು ತೊರೆಯಲು ಕಾರಣವಾಗುತ್ತವೆ ಎಂದು ತೋರಲಾಗಿದೆ. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಆತ ಚೆಲ್ಲಾಚೆದರಾಗುವುದನ್ನು ಕೆಲವು ಅತ್ಯುತ್ತಮ ಮತ್ತು ಅತ್ಯಂತ “ಅಭಿವ್ಯಕ್ತಿಪೂರ್ಣ” ದೃಶ್ಯಗಳ ಮೂಲಕ ಬಿಂಬಿಸಲಾಗಿದೆ.

ತಂದೆಯ ವೈಫಲ್ಯಗಳು ಮುಂದಿನ ಪೀಳಿಗೆಯಲ್ಲಿ ಬೇರೆ ರೂಪದಲ್ಲಿ ಬಿಂಬಿತವಾಗುವದು ಅಪರಾಧಿ ಮಗ ಬಿಜ್ರುವಿನ ಅಜಾಗರೂಕತೆಯ ಮೂಲಕ, 1957ರ ಆವೃತ್ತಿಯಲ್ಲಿ ಈ ಬಲವಾದ ವಿಷಯಾಧಾರಿತ ಕೊಂಡಿಯೇ ಕಳೆದುಹೋಗಿದೆ. ಪುರುಷನ “ಹೊಣೆಗೇಡಿತನ” ಮತ್ತು “ಹಾಳಾದ ಮಗ” ಸಿಂಡ್ರೋಮುಗಳು ಸೇರಿಕೊಂಡು ಮಹಿಳೆಯ ಮೇಲೆ ಸಂಪೂರ್ಣ ಹೊರೆ ಬಂದುಬೀಳುವದು ಬಲವಾದ ಮೆಹಬೂಬ್ ಥೀಮ್ ( ನೋಡಿ: 1946 ರ ಅನ್ಮೋಲ್ ಘಡಿ.). ಇದು ಔರತ್ ನಲ್ಲಿ ಕಥೆ ಆರಂಭವಾಗುವ ದುಬಾರಿ ಮದುವೆಯಿಂದ ಹಿಡಿದು ಡಕಾಯಿತ ಮಗನ ಟ್ರ್ಯಾಜಿಡಿಯ ತನಕದ ಎಲ್ಲ ಎಲಿಮೆಂಟುಗಳನ್ನು ಒಗ್ಗೂಡಿಸಿ ದುರದೃಷ್ಟವಂತ ತಾಯಿಯೊಬ್ಬಳ ಅಂತಿಮ ಆಘಾತಕಾರಿ ಸೋಲನ್ನು ಚಿತ್ರೀಕರಿಸುತ್ತದೆ. 1957 ರಲ್ಲಿ ಕಂಡುಬರುವಂತೆ ಆ ಘಳಿಗೆ ಅನುದ್ವೇಗಪೂರ್ಣ ಹೀರೋಯಿಸಮ್ಮನ್ನು ತೋರುವದಿಲ್ಲ. ಹೀಗಾಗಿ ’ಔರತ್’ ತನ್ನ ಟೈಟಲ್ಲೇ ಸೂಚಿಸುವಂತೆ ಒಂದು ನಿಜವಾದ ಮಹಿಳೆಯ ಕಥೆ – ಮದರ್ ಇಂಡಿಯಾ ತೋರುವ ಕಾಲ್ಪನಿಕ ರಾಷ್ಟ್ರೀಯ ಚಿಹ್ನೆಯದಲ್ಲ. ಮದರ್ ಇಂಡಿಯಾದಲ್ಲಿ ಕೊರತೆಯಾಗಿ ಕಾಡುವ ಸುಸಂಬದ್ಧತೆ ಇಲ್ಲಿ ಕಂಡುಬರುತ್ತದೆ. ಅದರ ಏಕೈಕ Iಒಆಃ ವಿಮರ್ಶಕನ ಪಾಲಿಗೆ ಇದು “ಎರಡು ಚಲನಚಿತ್ರಗಳಲ್ಲಿ ಉತ್ಕೃಷ್ಟವಾದ್ದು”. ಇದಕ್ಕೆ ನನ್ನ ಸಮ್ಮತಿಯಿದೆ. ತನ್ನ ಹೊಳಪು ಮತ್ತು ಹೆಚ್ಚು ಸ್ಪಷ್ಟವಾಗಿ ಕಾಣುವ “ಅಂತರರಾಷ್ಟ್ರೀಯ” ಅಪೀಲಿನ ಹೊರತಾಗಿಯೂ ಮದರ್ ಇಂಡಿಯಾ ತನ್ನ ಮೂಲರೂಪದಲ್ಲಿನ ಸತ್ಯದ ಸತ್ವವಿಲ್ಲದೆ ಸೊರಗುತ್ತದೆ .

ಇಂದು ಜನಸಾಮಾನ್ಯರು ಗಾಂಧೀವಾದ ಮತ್ತು ನೆಹರೂವಾದಗಳ ಬಗ್ಗೆ ಹೆಚ್ಚೂಕಡಿಮೆ ಒಂದೇರೀತಿಯ ಸಂದೇಹಗಳನ್ನು ಹೊಂದಿದ್ದು ಅವುಗಳ ಜಾಗವನ್ನು ನಮ್ಮದೇ ಆದ ಪುರಾಣ ಮತ್ತು ಭ್ರಾಂತಿಗಳು ಆವರಿಸಿಕೊಂಡಿವೆ. ಮೆಟ್ರೋಪಾಲಿಟನ್ ಸಂಸ್ಕೃತಿಯ ಅಪೂರ್ವ ಅಭಿವೃದ್ಧಿ ಮತ್ತು ’ಜಾಗತೀಕರಣ’ (ನಿಜವಾಗಿ ಹೇಳಬೇಕೆಂದರೆ ನವ ಉದಾರವಾದಿ ಅರ್ಥಶಾಸ್ತ್ರಕ್ಕೆ ಕೇವಲ ಒಂದು ಸೌಮ್ಯೋಕ್ತಿ) ವನ್ನು ಅಪ್ಪುವ ಉತ್ಸಾಹಗಳು ವಿಶೇಷತಃ ಗ್ರಾಮೀಣ ಭಾರತದಲ್ಲಿ ಉಳಿದುಕೊಂಡು ಬಂದಿರುವ ಸಾಮಾಜಿಕ ಸಮಸ್ಯೆಗಳ ಅರಿವನ್ನೇ ಮರೆಸಿಬಿಡುತ್ತ ಇವೆ. ಹೊಳೆಯುತ್ತಿರುವ ಈ ಆಧುನಿಕ ಭಾರತದಲ್ಲಿ ನಮಗೆ ನಮ್ಮ ಮುಳುಗಿಕೂತ, ಅನನುಕೂಲಕರ ಸತ್ಯಗಳನ್ನು ನೆನಪುಮಾಡಿಕೊಡಬಲ್ಲ ಪಾಲಗುಮ್ಮಿ ಸಾಯಿನಾಥರ ರೀತಿಯ ಲೇಖಕರ ಅವಶ್ಯಕತೆ ತುರ್ತಾಗಿದೆ. ಚಿತ್ರ ಶೈಲಿಗಳು ಮತ್ತು ಫ್ಯಾಶನ್ನುಗಳು ಕಾಲದೊಡನೆ ಬದಲಾಗಬಹುದೇನೋ ಸರಿ, ಆದರೆ ಚಲನಚಿತ್ರಗಳು ಸಮಾಜದ ಸಮಸ್ಯೆಗಳಿಗೆ ವಾಸ್ತವಿಕವಾಗಿ ಸ್ಪಂದಿಸಬೇಕಾದ ಅವಶ್ಯಕತೆ ಎಂದೆಂದಿಗೂ ಸ್ಥಿರವಾಗಿರುತ್ತದೆನ್ನುವುದೂ ಅಷ್ಟೇ ನಿಜ.

ಇಂಗ್ಲೀಷಿ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ


ಅನುವಾದ : ಟೀನಾ ಶಶಿಕಾಂತ್
ಟೀನಾ ಹುಟ್ಟಿದ್ದು ಮಲೆನಾಡಿನಲ್ಲಿ ಓದಿದ್ದು ಕುವೆಂಪು ವಿವಿಯಲ್ಲಿ ಇಂಗ್ಲೀಷ್ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ಬೆಂಗಳೂರು ನಗರದಲ್ಲಿ ವಾಸ ಮತ್ತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಉಪಮುಖ್ಯಸಂಪಾದಕರಾಗಿ ಉದ್ಯೋಗ. ಇಂಗ್ಲಿಷ್ ಸಾಹಿತ್ಯದ ಅಪಾರ ಓದು ಇರುವ ಟೀನಾ ಟಾಲ್ ಸ್ಟಾಯ್ ಸೇರಿದಂತೆ ಹಲವು ಪಾಶ್ಚಿಮಾತ್ಯ ಬರಹಗಾರರ ಬರಹಗಳ ಕನ್ನಡಾನುವಾದ ಮಾಡಿದ್ದಾರೆ. ಅಷ್ಟಲ್ಲದೇ ಕನ್ನಡ ಕವಿತೆಗಳನ್ನು ಬರೆದಿದ್ದಾರೆ. ಬ್ಲಾಗ್ ಬರಹಗಳು ಮುಂಚೂಣಿಯಲ್ಲಿದ್ದ ಕಾಲದಲ್ಲಿ ಇವರ ‘ ಟೀನಾಝೋನ್’ ಬಹಳಷ್ಟು ಓದುಗರ ಆಪ್ತ ಬ್ಲಾಗ್ ಆಗಿತ್ತು.

ಪ್ರತಿಕ್ರಿಯಿಸಿ