ಪುಸ್ತಕ ಪರೀಕ್ಷೆ : ಪುನರಪಿ

‘ಪುನರಪಿ” ಕಾವ್ಯ ಕಡಮೆ ನಾಗರಕಟ್ಟೆ ಅವರ ಮೊದಲ ಕಾದಂಬರಿ . ‘ಧಾನಕ್ಕೆ ತಾರೀಖಿನ ಹಂಗಿಲ್ಲ ಕಾವ್ಯ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪಡೆದಿರುವ ಕಾವ್ಯ ಗೆ ಈ ಬಾರಿಯ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಕೂಡ ದೊರಕಿದೆ. ಪತ್ರಕರ್ತ , ಲೇಖಕರೂ ಆಗಿರುವ  ಮಂಜುನಾಥ್ ಲತಾ ಋತುಮಾನಕ್ಕಾಗಿ ಪುನರಪಿಯನ್ನು ವಿಮರ್ಶಿಸಿದ್ದಾರೆ.

ಕಥನವೊಂದನ್ನು ಪ್ರೀತಿಯಿಂದ, ಭಾವುಕ ಪಾತಳಿಯಲ್ಲಿಟ್ಟು ಕರಗುವುದು ಬೇರೆ, ಅದೇ ಕಥನವನ್ನು ನಮ್ಮ ನೆಲೆಯೊಳಗಿಂದ, ಕಣ್ಣೆದುರಿಗಿನ ನಿಜಗಳ ಎದುರಲ್ಲಿ ನಿಲ್ಲಿಸಿ ನೋಡುವುದೇ ಬೇರೆ. ಇದನ್ನು ಹೀಗೆಯೂ ಅಳತೆ ಮಾಡಿ ನೋಡಬಹುದು: ನಮ್ಮೆದುರಿಗೆ ಇರುವ ಕಾದಂಬರಿಕಾರ, ಅಥವಾ ಕಥನಕಾರ ಈ ಎರಡೂ ಭಾವುಕ-ಕಣ್ಣೆದುರಿನ ನಿಜಗಳ ನಡುವೆ ತನ್ನ ಕಥನ ಅಥವಾ ಕಾದಂಬರಿಯನ್ನು ಕಡೆದು ಎಷ್ಟರ ಮಟ್ಟಿಗೆ ಎದ್ದು ನಿಲ್ಲಿಸಬಲ್ಲ? ಅದರ ಅಳತೆಗೋಲೆಷ್ಟು?

ಇಂತಹ ಎರಡು ಪ್ರಶ್ನೆಗಳನ್ನಿಟ್ಟುಕೊಂಡು ಕಾವ್ಯಾ ಕಡಮೆ ನಾಗರಕಟ್ಟೆ ಅವರ ‘ಪುನರಪಿ’ ಕಾದಂಬರಿಯನ್ನು ನಮ್ಮೊಳಗೆ ಒಡಮೂಡಿಸಿಕೊಳ್ಳಲು ಯತ್ನಿಸಬಹುದು.

‘ಕಾದಂಬರಿಕಾರ’ ಅಥವಾ ‘ಕಥನಕಾರ’ ಎಂಬ ಕ್ಲೀಷೆಯನ್ನು ನಾನು ಬಳಸಲು ಯತ್ನಿಸುತ್ತಿರುವ ಸಂದರ್ಭದಲ್ಲಿಯೇ ತೊಡಕಿದೆ ಎಂದುಕೊಳ್ಳುತ್ತಿದ್ದೇನೆ. ಈ ತೊಡಕು ಎರಡು ಬಗೆಯದು. ಒಂದು, ಈ ಕಥನದ ಕರ್ತೃ ‘ಕಾದಂಬರಿಕಾರ’, ಅಥವಾ ‘ಕಥನಕಾರ’ ಅಲ್ಲ; ಕಾದಂಬರಿಕಾರ್ತಿ;ಕಥನಗಾರ್ತಿ. ಎರಡು, ಈ ಕಾದಂಬರಿಯ ವಸ್ತು ಇಬ್ಬರು ‘ಹೆಣ್ಣು’ಗಳ ದೇಹ-ಮನಸ್ಸುಗಳ ಸಂಘರ್ಷವನ್ನು ನಿರೂಪಿಸಲು ಯತ್ನಿಸುತ್ತಿರುವ ಕೃತಿ. ಈ ಎರಡೂ ಹಿನ್ನೆಲೆಗಳಲ್ಲಿ ಕಾದಂಬರಿ ಸಾಗಿರುವ ದಾರಿಯನ್ನು ಲೇಖಕಿ ಸ. ಉಷಾ ಕಾದಂಬರಿಯ ಮುನ್ನುಡಿಯಲ್ಲಿ ವಿಶ್ಲೇಷಿಸಲು ಯತ್ನಿಸಿದ್ದಾರೆ.

ಅವರು ಮೊದಲಿಗೆ ಒಟ್ಟು ಕಾದಂಬರಿಯ ಮತ್ತೊಂದು ಮಗ್ಗುಲು ಮುಟ್ಟಲು ಯತ್ನಿಸಿ ನೇರವಾಗಿ ಸಲಿಂಗ ಸಂಬಂಧಗಳ ನೇರ ಉಲ್ಲೇಖಗಳಿಗೆ ಇಳಿದಿದ್ದಾರೆ. ‘1960ರ ನಂತರವೇ ಸಲಿಂಗ ಸಂಬಂಧಗಳ ಬಗ್ಗೆ ಸಹನಶೀಲ ಪ್ರವೃತ್ತಿ ಬೆಳೆದುದು’ ಎಂಬಲ್ಲಿಂದ ಶುರುವಾಗಿ ಸಲಿಂಗ ಸ್ನೇಹಿಬದುಕು ಸಾಹಿತ್ಯಕ ಪ್ರತಿಮೆಗಳಲ್ಲಿ ಹೇಗೆ ಪಡಮೂಡಿತೆಂಬುದನ್ನು ಹೇಳಲು ಯತ್ನಿಸಿದ್ದಾರೆ.

ಉಷಾ ಮೇಡಂ ಅವರೇ ಹೇಳುವ ಹಾಗೆ; ಇದು ಅವರ ಉಲ್ಲೇಖ: ‘ಮೋಹಿನಿ ಭಸ್ಮಾಸುರರ ಕಥೆ, ಅಯ್ಯಪ್ಪನನ್ನು ಹರಿಹರಪುತ್ರನೆಂದು ಕೊಂಡಾಡುವುದು, ಮಿತ್ರಾವರುಣರನ್ನು ಅಭಿನ್ನರೆಂದೇ ಸ್ತುತಿಸಿ ಹವ್ಯವನ್ನು ನೀಡುವುದು, ಅಗ್ನಿಯ ಅನೇಕ ಮುಖಗಳ ಸ್ತುತಿ, ಅರೇಬಿಯನ್ ನೈಟ್ಸ್ ಕತೆಗಳು; ಇಲ್ಲೆಲ್ಲ ಪುರುಷ- ಪುರುಷ ಪ್ರೀತಿಯನ್ನು ಗುರುತಿಸಬಹುದು. ಆದರೆ ಸ್ತ್ರೀಯನ್ನು ಒಲಿಯುವ ಪರಸ್ಪರರೊಡನೆ ಒಲಿದು ಬಾಳುವ ಬಾಳಿಸುವ ಕತೆಯನ್ನು ನಾವು ಭಾರತೀಯ ಪುರಾಣಗಳಲ್ಲಂತೂ ಕಂಡಿಲ್ಲ…’

ಅವರ ಪ್ರಕಾರ ಆನಂತರ ‘ಪಾಶ್ಚಾತ್ಯ ಸಾಹಿತ್ಯ ಕೂಡ 1960ರ ನಂತರವೇ ಸ್ತ್ರೀಸಲಿಂಗತೆಯನ್ನು ಪ್ರಕಟಿಸಿದೆ’. ಇಲ್ಲಿ ನನ್ನದೊಂದು ಪ್ರಶ್ನೆ ಇಟ್ಟು ಮುಂದಕ್ಕೆ ಹೋಗುವೆ: ಅದು ಸಾಹಿತ್ಯವೋ, ಇನ್ನಾವುದೋ ಪ್ರಕಾರದಲ್ಲಿ ಪ್ರಕಟಗೊಂಡಿಲ್ಲವೆಂದ ಮಾತ್ರಕ್ಕೆ ಮನುಷ್ಯಜೀವಿಗಳಲ್ಲಿ ಒಡನಾಡಿಲ್ಲವೆ? . ಪುರಾಣಗಳು ಇದನ್ನು ಅಂಗೀಕರಿಸಿವೆ, ಅಂತಹ ಪುರಾಣಗಳನ್ನು ಭಾರತೀಯ ಸಮಾಜ ಕೂಡ ಧಾರ್ಮಿಕ ಪಠ್ಯವಾಗಿ, ಸಾಮಾಜಿಕ ನೆಲೆಗಳಲ್ಲಿ ಮಾನ್ಯ ಮಾಡಿಕೊಂಡಿದೆ.

ಇದು ಕಾದಂಬರಿಯ ಕುರಿತು ಉಷಾ ಅವರು ಬರೆದ ಮುನ್ನುಡಿಯ ಮಾತಾಯಿತು. ಕಾದಂಬರಿಕಾರ್ತಿ ಕಾವ್ಯಾ ಅವರ ಮಾತುಗಳು ಮೊದಲಿಗೆ ನನ್ನನ್ನು ಡಿಸ್ಟರ್ಬ್ ಮಾಡಿದುದು ಹೀಗೆ: ‘ಕಳೆದ ವರ್ಷ ಇಂಗ್ಲಿಷಿನ ‘sense of an ending’ ಮತ್ತು ಕನ್ನಡದ ‘ಮೋಹನಸ್ವಾಮಿ’ ಕೃತಿಗಳನ್ನು ಒಂದೇ ವಾರದ ಅಂತರದಲ್ಲಿ ಓದಿ ಮುಗಿಸುವ ತನಕ ಗದ್ಯ ಬರವಣಿಗೆ ಸಾಧ್ಯವೇ ಇಲ್ಲ ಅಂತ ನಾನು ದೃಢವಾಗಿ ನಂಬಿದ್ದೆ.’

ಕಾದಂಬರಿಕಾರ್ತಿಯ ನಿಲುವಿಗೆ ನನ್ನ ಎರಡನೆಯ ಪ್ರಶ್ನೆ: ‘sense of an ending’  ಮತ್ತು ಕನ್ನಡದ ‘ಮೋಹನಸ್ವಾಮಿ’ ಕೃತಿಗಳು ಮಾತ್ರವೇ ‘ಪುನರಪಿ’ ಕಾದಂಬರಿಗೆ ಪ್ರೇರಣೆಯಾಯಿತೆ?

ಹಾಗಿದ್ದರೆ ಕಥನಕಾರ್ತಿಯೊಬ್ಬಳಲ್ಲಿ ಈ ಕೃತಿಯ ಅಂತಃಸ್ಸತ್ವ ಕಾಡಿರಲಿಲ್ಲವೆ? ಹಾಗೆ ಕಾದಂಬರಿಯೊಂದು ಕೃತಿಕಾರನ/ಳಲ್ಲಿ ಬೀಜಸ್ವರೂಪದಲ್ಲಿ ಇದ್ದುದಲ್ಲವೆ, ಇರಬಾರದೆ? ಹಾಗೊಂದು ವೇಳೆ ಅಡಗಿದ್ದರೆ ಇನ್ನೊಂದು ಕೃತಿಯ ಪ್ರೇರಣೆಯಿಂದ ಕಡೆದ ಕೃತಿಯಲ್ಲಿರುವ ಸ್ವಂತದ ಪಾಲೆಷ್ಟು, ಪಾಡೆಷ್ಟು? ನಿಷೇಧಿಷಲ್ಪಟ್ಟಂತೆ ಭಾವಿಸಿರಬಹುದಾದ ಒಂದು ವಿಷಯದ ಕುರಿತು ಯಾರೋ ಬರೆದುದು ನಮಗೆ ಧೈರ್ಯ ತುಂಬುತ್ತಿದೆ ಎಂಬುದನ್ನು ನಾವು ಎಷ್ಟರಮಟ್ಟಿಗೆ ಆತ್ಮವಿಶ್ವಾಸದಿಂದ ಒಪ್ಪಿಕೊಳ್ಳಬಲ್ಲೆವು? ಬೇರೆಯವರು ಆ ವಿಷಯದ ಕುರಿತು ಸಾಹಿತ್ಯಕ ಕೃತಿಯೊಂದನ್ನು ರಚಿಸಿದ್ದಾರೆಂಬ ಧೈರ್ಯದ ಮೇಲೆ ಬರೆದ ಕೃತಿಯ ಮೇಲೆ ಓದುಗನೆಷ್ಟು ವಿಶ್ವಾಸವನ್ನು ಇರಿಸಿಕೊಳ್ಳಬಲ್ಲ?.

ಇವು ಕೃತಿಯೊಂದರ, ಕೃತಿಕಾರಳೊಬ್ಬಳ ಮೂಲಭೂತ ಪ್ರಶ್ನೆ ಎಂಬುದನ್ನು ಬಿಟ್ಟುಬಿಡೋಣ. ಓದುಗನೂ ಇದನ್ನೇ ಪರಿಭಾವಿಸಲು ಯತ್ನಿಸಿದರೆ?. ಇರಲಿ. ಕಾದಂಬರಿಯೊಳಕ್ಕೆ ತೊಡಗಿಕೊಳ್ಳಲು ಯತ್ನಿಸುತ್ತೇನೆ.

ಕಾದಂಬರಿಯ ಒಟ್ಟು ನೆಲೆ ವಿಸ್ತಾರಗೊಳ್ಳುವುದು ಮೂರೇ ಪಾತ್ರಗಳಿಂದ. ಒಂದು ಲೋಕೇಶ ಜಿಗಜಿಗಣಗಿ ಹಾಗೂ ಅಸ್ಮಾ ಮತ್ತು ಅನುಷಾರ ವ್ಯಕ್ತಿಗಳ ನೆಲೆಗಟ್ಟಿನಲ್ಲಿ. ಇಡೀ ಕಾದಂಬರಿ ನೆಲೆ ಕಂಡುಕೊಳ್ಳಲು ಯತ್ನಿಸುವುದು ಈ ಮೂರು ಪಾತ್ರಗಳ ಮುಖೇನವೇ. ಈ ಮೂರು ಪಾತ್ರಗಳ ಪರಿಚಯ ತೆರೆದುಕೊಳ್ಳುವುದು ಕೂಡ ರೊಮ್ಯಾಂಟಿಕ್ ಎನ್ನಿಸಬಹುದಾದ ಭಾವನೆಗಳ ತೆಳು ಸನ್ನಿವೇಶಗಳ ಮೂಲಕವೇ. ಎಂ.ಎಸ್. ಶ್ರೀರಾಮ್ ಅವರ ‘ಅವರವರ ಸತ್ಯ’ ಸಂಕಲನದ ಮುಖ್ಯಪಾತ್ರವಾದ ಭಾಸ್ಕರರಾಯ, ಇನ್ನೊಂದೆಡೆ ಕುಸುಮಾಕರ ದೇವರಗೆಣ್ಣೂರ ಅವರ ‘ನಿರಿಂದ್ರಿಯ’ ಕಾದಂಬರಿಯ ರೊಳ್ಳಿಯಂತೆ ಭಾಸವಾಗುವ ಇಲ್ಲಿನ ಲೋಕೇಶನಲ್ಲಿ ನೆನಪುಗಳು ಅಗಾಧವಾಗಿವೆ. ಅವುಗಳಿಂದ ಕಳಚಿಕೊಳ್ಳಲು ಅವನು ಅವನದ್ದೇ ಹಾದಿಗಳನ್ನು ಕಂಡುಕೊಳ್ಳಲು ಯತ್ನಿಸಿದ್ದಾನೆ. ಒಮ್ಮೆ ಕಾದಂಬರಿಕಾರನಂತೆಯೂ ಮತ್ತೊಮ್ಮೆ ತನ್ನ ನೈಜನೆಲೆಗಳಿಗಾಗಿ ಹಪಹಪಿಸುವ ವೃದ್ಧನಂತೆಯೂ ಕಾಣುವ ಲೋಕೇಶ ಈ ಕ್ಷಣದ ಲೌಕಿಕತೆಯೊಂದಿಗೆ(ಅವನ ಲ್ಯಾಟ್‍ಟಾಪ್, ಇಂಟರ್‍ನೆಟ್ ಇತ್ಯಾದಿ)ನೆಲೆಗೊಂಡಿದ್ದರೂ ನೆನಪುಗಳಿಗೇ ಆತುಕೊಂಡಿರುವ ವ್ಯಕ್ತಿ. ಅವನೊಂದಿಗೆ ಬೆಸೆದುಕೊಂಡಿರುವ ಎರಡು ಹೆಣ್ಣುಮಕ್ಕಳಾದ ಅಸ್ಮಾ ಮತ್ತು ಅನುಷಾ ಕೂಡ ಗಾಢ ಸಂಬಂಧ ಹೊಂದಿಕೊಂಡಂತೇ ಇರುವಾಗಲೇ ತಮ್ಮದೇ ನೆನಪುಗಳ ಸಂಯೋಜನೆಯೊಂದಿಗೆ ತೂಗುತ್ತಿರುವ ಜೀವಗಳು.

ಹೀಗೆ ಬೇರೆ ಬೇರೆ ಭಾಗಗಳಲ್ಲಿ ಕಳೆದುಹೋಗಿರುವ ಅಧ್ಯಾಯಗಳಂತಿರುವ ಮೂರು ವ್ಯಕ್ತಿತ್ವಗಳು ಮರುಜೋಡಣೆಗೊಳ್ಳುವುದು ‘ಮನಿಯೂಟ’ದ ಪ್ರಸಂಗದೊಂದಿಗೆ. ಹಾಗಿದ್ದ ಸಂಬಂಧ ಕಳೆದುಹೋಗುವುದು ಕೂಡ ಅನುಷಾಳನ್ನು ತನ್ನ ತಮ್ಮನ ಮಗ ಇಷ್ಟಪಡುತ್ತಿದ್ದಾನೆಂದು ಲೋಕೇಶ ಭಾವಿಸುವುದು, ಹಾಗೂ ಅವರ ಮದುವೆ ಪ್ರಸ್ತಾಪದೊಂದಿಗೆ.

ಆನಂತರ ಕಾದಂಬರಿಯ ಪುಟಗಳು ತೆರದುಕೊಳ್ಳುವುದು ಅವರವರ ಆತ್ಮಕತೆಗಳ ಸಾಲುಗಳೊಂದಿಗೆ. ತಕ್ಷಣವೇ ಲೋಕೇಶ ಅವರಿಗೆ ಅವಳಿಗಿಂತ ದೊಡ್ಡವಳಾಗಿದ್ದು, ಅವಳನ್ನು ಪ್ರೀತಿಸಿದ ಸಂಜೀವಿನಿ ನೆನಪಾಗುತ್ತಾಳೆ, ಅವಳನ್ನು ಕಳೆದುಕೊಂಡಾಗಿನ ತಲ್ಲಣದ ಕ್ಷಣಗಳು ನೆನಪಿಗೆ ಬರುತ್ತವೆ. ಹಾಗೆಯೇ ಮತ್ತೊಂದು ಅಧ್ಯಾಯದಲ್ಲಿ ದೂರದ ಊರಿನಿಂದ ಬಂದಿದ್ದ ಅಸ್ಮಾಳ ಬದುಕಿನ ಪುಟಗಳು ತೆರೆದುಕೊಳ್ಳುತ್ತವೆ. ತನ್ನನ್ನು ಪ್ರೀತಿಸಿದ ಅವ್ವ, ತನ್ನ ಚಿಕ್ಕಪ್ಪನನ್ನು ಕಾಮಿಸಿದ್ದ ವಿವರಗಳು, ತನ್ನ ಚಿಕ್ಕಪ್ಪ ತನ್ನನ್ನೇ ಬಯಸಿದ ನೀಚತನ… ಅವೆಲ್ಲವನ್ನೂ ಸಹಿಸಲಾಗದೆ ಓಡಿಬಂದ ಅವಳ ಬದುಕಿನ ಪುಟಗಳು ಮಗುಚಿಕೊಳ್ಳುತ್ತವೆ. ಅಸ್ಮಾ-ಅನುಷಾಳ ಭೇಟಿ, ಅವರಿಬ್ಬರ ಭಾವೋನ್ಮಾದ ಕ್ಷಣಗಳು, ಪರಸ್ಪರ ಕಾಮನೆ, ಮಿಲನದ ಬಿಸುಪು, ಗೆಳತಿಯರಿಬ್ಬರ ತಾಯ್ತನ, ವಿರಸ ಎಲ್ಲವೂ ‘ಅನುಷಾ ಟಾಪು ಕಿತ್ತೆಸೆದು ಬರಿ ಬ್ರಾ ಮೇಲೆ ನಿದ್ದೆಹೋಗುವ (ಅಧ್ಯಾಯ: ದಡ-ಪುಟ 108) ಕ್ಷಣಗಳಂತೆಯೇ ಬಿಚ್ಚಿಕೊಳ್ಳುತ್ತವೆ. ಈ ಮುಕ್ತತೆ ‘ಕಿಟಕಿಯ ಹೊರಗೆ ನಿಂತ ಆ ಹುಡುಗ ತನ್ನ ಪ್ಯಾಂಟಿನ ಜಿಪ್ಪು ಕೆಳಗಿಳಿಸಿ ಇವರನ್ನು ನೋಡುತ್ತ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ಇವರು ತನ್ನನ್ನು ನೋಡುತ್ತಿದ್ದಾರೆ ಎಂಬ ಪರಿವೆ, ನಾಚಿಕೆ, ಸಂಕೋಚ ಯಾವುದೂ ಅವನಿಗೆ ಇದ್ದಂತಿರಲಿಲ್ಲ’(ಪುಟ 51) ಎಂಬುವರೆಗೂ ಹಬ್ಬಿದೆ.
ಹಾಗಾದರೆ ಈ ಮುಕ್ತತೆಯನ್ನು ಕೇವಲ ಹೆಣ್ಣು-ಹೆಣ್ಣು, ಅಥವಾ ಗಂಡು-ಗಂಡುಗಳ ಸಂಬಂಧಗಳ ಮೂಲಕವಷ್ಟೆ ನೋಡಲು ಕೃತಿಕಾರಳಿಗೆ ಸಾಧ್ಯವಾಗಿದೆಯೆ? ಸಮಾಜ ಅಮಾನ್ಯವೆನ್ನಬಹುದಾದ, ಅಸಹಜವೆನ್ನಬಹುದಾದ ಸಲಿಂಗಸಂಗವನ್ನು ಸಹಜವಾಗಿ ನೋಡಲು ಸಾಧ್ಯವಿರುವ ಕೃತಿಕಾರಳ ಮನಸ್ಸಿಗೆ ಒಂದು ರೀತಿಯಲ್ಲಿ ಸಮಾಜಕ್ಕೆ ಅಮಾನ್ಯವಾಗಿರಬಹುದಾದ ಅಸ್ಮಾಳ ಚಿಕ್ಕಪ್ಪ-ತಾಯಿಯ ಲೈಂಗಿಕ ಕ್ರಿಯೆಯನ್ನು ಯಾಕೆ ಸಹಜಗಣ್ಣುಗಳಿಂದ ನೋಡಲು ಸಾಧ್ಯವಾಗಿಲ್ಲ? ಹುಡುಗನೊಬ್ಬನ ಹಸ್ತಮೈಥುನ ಕ್ರಿಯೆಯನ್ನು ಸಹಿಸಲಾಗದೆ “ನಿಮ್ಮವ್ವನ ಮುಂದ ನಿಂತು ಮಾಡಕೋ ಹೋಗಲೇ ನಾಯಿ ಸೂಳಾಮಗನಾ” ಎಂದು ಅರಚುತ್ತ ಕೈಗೆ ಸಿಕ್ಕಿದ ಚಪ್ಪಲಿ ಎತ್ತಿಕೊಂಡು ಹೊರಗೆ ಓಡುವ ಅವಳ ಅಸಹ್ಯ ಪ್ರಜ್ಞೆ ಕೇವಲ ಸಲಿಂಗ ಸಂಬಂಧಗಳನ್ನು ಮಾತ್ರ ಮಾನ್ಯಮಾಡಿ ಎಂಬ ಬೇಡಿಕೆಯ ಕುರಿತ ಆಕ್ರೋಶವೆ? ಅವನ ಸಹಜಕ್ರಿಯೆಯನ್ನು, ಅದಕ್ಕೆ ಅನುಷಾಳ ಪ್ರತಿಕ್ರಿಯೆಯನ್ನು ನೈತಿಕ-ಅನೈತಿಕ ನೆಲೆಗಳಲ್ಲಿ ನೋಡಲು ಸಾಧ್ಯವಿದೆಯೆ? .

ಇಂತಹ ಸೂಕ್ಷ್ಮ ಪ್ರಶ್ನೆಗಳನ್ನು ಉಳಿಸುತ್ತಾ ಹೋಗುತ್ತದೆ ಕಾದಂಬರಿ. ಈ ಬಗೆಯ ಆತ್ಮ ನಿರೀಕ್ಷಣೆಗಳಿಗೇನಾದರೂ ಕಾದಂಬರಿಯ ಕೊನೆಯ ಅಧ್ಯಾಯಗಳಲ್ಲಿ ಅವಕಾಶವಿದೆಯೆ ಎಂದು ಕಾದು ನೋಡಿದೆ. ಆದರೆ ಕಾಡಿದ್ದು ಲೋಕೇಶ ಪ್ರೀತಿಸಿದ ಹುಡುಗಿಯಂತೆಯೇ ಇದ್ದ ಆತನ ಹೆಂಡತಿ ರೇಷ್ಮಾ. ಮತ್ತೆ ತನ್ನ ಸಂಜೀವಿನಿ ಸಿಗುವ ತವಕವೇ ತನ್ನನ್ನು ಇಷ್ಟರವರೆಗೆ ಬೆಚ್ಚಗಿಟ್ಟಿದ್ದು, ಎನ್ನುವುದು ಕಾದಂಬರಿಕಾರ್ತಿಯನ್ನು ಕಾಡದಿರುವುದು ಕಾದಂಬರಿಯೊಳಗಿನ ವಿಪರ್ಯಾಸ. ಬಹುಶಃ ಕಾದಂಬರಿಯ ತಕ್ಕಮಟ್ಟಿಗಿನ ಶಕ್ತಿ ಇರುವುದೇ ಅಲ್ಲಿ. ಇದು ಕಾದಂಬರಿಯ ಕಥನಶಕ್ತಿಯನ್ನೂ ಅಲ್ಲಲ್ಲಿ ವಿವರವಾಗಿ ಕೊಡಲು ಯತ್ನಿಸುತ್ತದೆ. ಬದುಕಿನ ಲಯಗಳನ್ನು ಕಾದಂಬರಿಯ ಹದದಲ್ಲಿ, ಬಂಧದಲ್ಲಿ ಹಿಡಿಯಲು ಯತ್ನಿಸಿರುವುದು ಕೂಡ ಚೌಕಟ್ಟಿಗೆ ಹೊಂದಿಕೊಂಡಂತೆ ಇದೆ.

ಆದರೆ ಕೊನೆಯಲ್ಲಿ ಲೋಕೇಶ ಅವರು ತಾವು ಬರೆಯಬೇಕೆಂದಿದ್ದ ತಮ್ಮ ಆತ್ಮಕತೆಯನ್ನು ಕಾದಂಬರಿ ಎಂದು ಬದಲಿಸಿಬಿಡುತ್ತಾರೆ! ಕಾದಂಬರಿಯೊಳಗಿನ ಪಾತ್ರಕ್ಕೆ ಆತ್ಮವಂಚನೆಯಿಂದ ಮುಕ್ತಿ ಸಿಕ್ಕಿತು; ಆದರೆ ಕಾದಂಬರಿಯ ಕರ್ತೃವಿನೊಳಗೆ ಇರಬಹುದಾದ ಕಲಾವಂತಿಕೆಗೆ?.

ಹಾಗಾಗಿಯೇ ನಮ್ಮನ್ನು ಕಾಫ್ಕಾನ ‘ಮೆಟಾಮಾರ್ಫಸಿಸ್’ ಅಥವಾ ಆಲ್ಬರ್ಟ್ ಕಮೂವಿನ ‘ಔಟ್‍ಸೈಡರ್’ ಕೃತಿಗಳಲ್ಲಿರುವ ಪ್ರಜ್ಞಾ ಪ್ರವಾಹ ಕಾಡುವಂತೆ ಕನ್ನಡದ ಕಾದಂಬರಿಗಳು ಕಾಡುವುದು ವಿರಳ. ನವ್ಯದವರ ಪ್ರಯೋಗಗಳು ಕೂಡ ಮತ್ತೊಬ್ಬರ ಅನುಭವಗಳನ್ನು ನಕಲು ಮಾಡಲು ಹೋಗಿಯೇ ಪೇಲವವಾಗಿವೆ. ಅನುಭವದ ಅನನ್ಯತೆ ಸಾಧ್ಯವಾಗದೆ ಹೋದಲ್ಲಿ, ಅದನ್ನು ಸಾಧಿಸಲು ಆಗದೆ ಹೋದಲ್ಲಿ, ಮತ್ತೊಂದು ಕೃತಿಯ ನೆವದಲ್ಲಿ ನಮ್ಮ ಕೃತಿಗಳನ್ನು ನಿಲ್ಲಿಸಲು ಹೋದಲ್ಲಿ ‘ಪ್ರತಿಕೃತಿ’ಗಳಷ್ಟೇ ಸೃಷ್ಟಿಯಾಗುತ್ತವೆ.
ಇದು ಕೃತಿಯೊಂದನ್ನು ನನ್ನ ಅನುಭವದ ಸಾರವಾಗಿ ಓದಿನ ಮೂಲಕ ಗ್ರಹಿಸಿರುವ ಪ್ರಯತ್ನವಷ್ಟೆ. ಇಲ್ಲಿ ನಾನು ಕಂಡುಕೊಂಡಿರುವ ವಿಮರ್ಶಾ ಮಾನದಂಡಗಳೇನೂ ಇಲ್ಲವೆಂದು ಭಾವಿಸಿಕೊಂಡಿದ್ದೇನೆ.


ಕೃತಿ : ಪುನರಪಿ ( ಕಾದಂಬರಿ )
ಲೇಖಕರು : ಕಾವ್ಯ ಕಡಮೆ ನಾಗರಕಟ್ಟೆ
ಪ್ರಕಟಣೆ : ಪಲ್ಲವ ಪ್ರಕಾಶನ
ಬೆಲೆ : 130ರೂಪಾಯಿಗಳು

 

2 comments to “ಪುಸ್ತಕ ಪರೀಕ್ಷೆ : ಪುನರಪಿ”
  1. ನಿಜಕ್ಕೂ ಸರಿಯಾದ ವಿಮರ್ಶೆ. ಇತ್ತೀಚೆಗೆ ವಿಮರ್ಶೆಯ ಹೆಸರಲ್ಲಿ ಹಾಹೋ ಅಥವ ತೂಥೂ ಮಾತ್ರ ಕಾಣುತ್ತಿರುವ ಹೊತ್ತಲ್ಲಿ ಮಂಜುನಾಥ ಲತಾ ಅವರ ಓದು ಕಾದಂಬರಿಕಾರ್ತಿಯ ಮುಂದಿನ ಬರವಣಿಗೆಗೆ ಖಂಡಿತ ಸಹಾಯ ಮಾಡುತ್ತದೆ.
    ಭಾನುವಾರದ ಸಂಚಿಕೆಗಳಲ್ಲೇ ವಿಮರ್ಶೆ ಕಾಣದಾಗಿರುವಾಗ ಋತುಮಾನದ ಕೆಲಸ ಅಭಿನಂದನಾರ್ಹವಾದುದು. ಶುಭವಾಗಲಿ

Leave a Reply to ಡಿ.ಎಸ್.ರಾಮಸ್ವಾಮಿ Cancel reply