ಯಕ್ಷಮೇರು ಸೂರಿಕುಮೇರಿ ಕೆ. ಗೋವಿಂದ ಭಟ್

ಅವರೀಗೀಗ 77 ರ ಹರೆಯ. ಸರಕಾರಿ ಉದ್ಯೋಗದಲ್ಲಿರುತ್ತಿದ್ದರೆ ನಿವೃತ್ತಿಯಾಗಿ ಹದಿನೇಳು ವರ್ಷ ದಾಟುತ್ತಿತ್ತು. ಅವರಿನ್ನೂ ಯಕ್ಷರಂಗ ಭೂಮಿಯಲ್ಲಿ ಸಕ್ರಿಯರಾಗಿದ್ದಾರೆ. ಮೊದಲಿನಂತಲ್ಲದಿದ್ದರೂ ತಮ್ಮ ಪಾಲಿಗೆ ಬಂದ ಪಾತ್ರವನ್ನು ನಿರ್ವಂಚನೆಯಿಂದ ಮಾಡುತ್ತಾರೆ. ತಮ್ಮ ದಾಖಲೆಯ 67ವರ್ಷಗಳ ತಿರುಗಾಟದಲ್ಲಿ 50 ವರ್ಷಗಳನ್ನು  ಅವ್ಯಾಹತವಾಗಿ ಶ್ರೀ ಧರ್ಮಸ್ಥಳ ಯಕ್ಷಗಾನ ಮಂಡಳಿಯಲ್ಲೇ ಕಳೆದಿದ್ದಾರೆ. ದೇಹದ ಆರೋಗ್ಯ, ಮಂಜಾಗುತ್ತಿರುವ ಕಣ್ಣು-ಅವರ ವೃತ್ತಿಗೆ ಆತಂಕ ಒಡ್ಡುತ್ತಿವೆ. ಆದರೂ ಮೇಳ ಬಿಟ್ಟಿಲ್ಲ. ನೀವು ವೇಷ ಹಾಕದಿದ್ದರೂ ಚಿಂತಿಲ್ಲ; ಮೇಳ ಬಿಡಬೇಡಿ ಎಂದು ಮೇಳದ ಯಜಮಾನರು ಹೇಳುತ್ತಿದ್ದಾರೆ.  ನೀವು ದುಡಿದದ್ದು ಸಾಕು ಎಂದು ಮನೆಯೊಡತಿ ಸಾವಿತ್ರಮ್ಮ ವಿನಂತಿಸುತ್ತಿದ್ದಾರೆ. ಅವರಿಗೆ ಮನೆಯಲ್ಲಿ ಕೂರಲು ಮನಸ್ಸಿಲ್ಲ; ಮೊದಲಿನಂತೆ ರಂಗದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಆದರೂ ರಂಗ ಬಿಡಲು ಮನಸ್ಸಿಲ್ಲ .

ಅವರ ಹೆಸರು ಸೂರಿ ಕುಮೇರಿ ಕೆ. ಗೋವಿಂದ ಭಟ್. ತೆಂಕುತಿಟ್ಟು ಉಕ್ಷಗಾನ ಇದುವರೆಗೆ ಕಂಡ ಸರ್ವಾಂಗೀಣ ಮತ್ತು ಸರ್ವಶ್ರೇಷ್ಠ ಕಲಾವಿದ ಅವರು. ಸಮಗ್ರ ಭಾರತೀಯ ಕಲಾ ಇತಿಹಾಸದಲ್ಲಿ ಸಾರ್ವಕಾಲಿಕ ಸರ್ವಶ್ರೇಷ್ಠ ಕಲಾವಿದರ ಸಾಲಲ್ಲಿ ನಿಲ್ಲುವ ಅಭೂತಪೂರ್ವ ಅನನ್ಯ ಕಲಾವಿದ ಗೋವಿಂದ ಭಟ್ಟರು. ಅವರು ತೆಂಕು0ಬಡಗು ಎರಡೂ ತಿಟ್ಟುಗಳಲ್ಲಿ ಯಾವುದೇ ಪಾತ್ರವನ್ನಾದರೂ ಲೀಲಾಜಾಲವಾಗಿ ಮಾಡಬಲ್ಲವರು. ಅನಿವಾರ್ಯ ಸ್ಥಿತಿಯಲ್ಲಿ ಭಾಗವತ, ಚೆಂಡೆಗಾರ, ಮದ್ದಳೆಗಾರನಾಗಿ ಹಿಮ್ಮೇಳದಲ್ಲಿ ಕೆಲಸ ನಿಭಾಯಿಸಲು ಬಲ್ಲವರು. ಮೇಳದ ಮೆನೇಜರು ಇಲ್ಲದ ಕಾಲದಲ್ಲಿ ಮೆನೇಜರರಾಗಿ ಕಾರ್ಯವಹಿಸಬಲ್ಲವರು. ಅವರೊಬ್ಬ ಸರ್ವಾಂಗೀಣ ಪರಿಪೂರ್ಣ ಕಲಾವಿದ, ನಾಯಕ, ಪ್ರತಿನಾಯಕ, ರಕ್ಕಸ ಪಾತ್ರ, ರಕ್ಕಸಿ ಪಾತ್ರ, ಹಾಸ್ಯ, ಮಂತ್ರಿ, ಪುಂಡುವೇಷ- ಯಾವುದೇ ವೇಷವಾದರೂ ಲೀಲಾಜಾಲವಾಗಿ ನಿಭಾಯಿಸಬಲ್ಲವರು. ಅದಕ್ಕಾಗಿ ಅವರನ್ನು ಯಕ್ಷಗಾನದ ಸವ್ಯಸಾಚಿ ಎಂದು ಕರೆಯಲಾಗುತ್ತದೆ. ಒಂದರ್ಥದಲ್ಲಿ ಗೋವಿಂದ ಭಟ್ಟರ ಯಕ್ಷೋಪಾಸನೆ ನ ಭೂತೋ, ನ ಭವಿಷ್ಯತಿ.

ಗೋವಿಂದ ಭಟ್ಟರು ಜನಿಸಿದ್ದು 1940ರ ಮಾರ್ಚ್ 22ರಂದು. ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳ ತಾಲೂಕಿನ ವಿಟ್ಲದ ಬಳಿಯ ಕೋಡಪದವು ಕುಕ್ಕೆಮನೆಯಲ್ಲಿ ಕಡು ದಾರಿದ್ರ್ಯದ ಕುಟುಂಬ ಒಂದರಲ್ಲಿ ಭಟ್ಟರ ಜನನ. ಇವರ ಪೂರ್ವಿಕರು ಉತ್ತರಕನ್ನಡ ಜಿಲ್ಲೆಯ ಪ್ರಖ್ಯಾತ ಚೀಮುಳ್ಳು ಶಾಸ್ತ್ರಿಗಳ ವಂಶಕ್ಕೆ ಸೇರಿದವರು. ಬಡತನದಿಂದಾಗಿ ಪೂರ್ವಿಕರು ತೆಂಕಿನತ್ತ ವಲಸೆ ಬಂದು ಅಲ್ಲಲ್ಲಿ ನೆಲೆ ಕಂಡುಕೊಂಡರು. ಲಕ್ಷ್ಮೀ ಅಮ್ಮ ಮತ್ತು ಶಿನಿಲ ಶಂಕರನಾರಾಯಣ ಭಟ್ಟರ ಐವರು ಮಕ್ಕಳಲ್ಲಿ ಗೋವಿಂದ ಭಟ್ಟರು ಮೂರನೆಯವರು. ಗೋವಿಂದ ಭಟ್ಟರ ಬದುಕು ವಸ್ತುಶಃ ಕಣ್ಣೀರ ಕತೆಯಾಗಿತ್ತು. ಅವರ ಅಜ್ಜನ ಆಸ್ತಿಯನ್ನು ದಾಯಾದಿಗಳು ಕಬಳಿಸಿದ್ದರು. ಅದನ್ನು ಪಡೆಯಲು ನಡೆದ ಹೋರಾಟದಲ್ಲಿ ಗೋವಿಂದ ಭಟ್ಟರ ತಂದೆಯ ಜೀವನ ಕೋರ್ಟ್ ಕಛೇರಿಗಳಿಗೆ ಅಲೆಯುವುದರಲ್ಲಿ ಕಳೆದು ಹೋಯಿತು. ದೈಹಿಕ ಹಲ್ಲೆಯಿಂದಾಗಿ ಅವರ ಕೈಯೊಂದು ತುಂಡಾಯಿತು. ಚಿಕ್ಕಪ್ಪನಿಗೆ ಹುಚ್ಚು ಹಿಡಿಯಿತು. ಅವರನ್ನು ಕರಕೊಂಡು ಅಜ್ಜಿ ಅದೆಲ್ಲಿಗೋ ಹೋಗಿಬಿಟ್ಟರು. ತುತ್ತು ಅನ್ನಕ್ಕಾಗಿ ಎಳೆಯ ಗೋವಿಂದ ಭಟ್ ಎಲ್ಲೆಲ್ಲಾ ಕೆಲಸಕ್ಕೆ ನಿಲ್ಲಬೇಕಾಯಿತು. ಹೋಟೆಲ್‍ಗಳಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿದರೆ ಯಜಮಾನರುಗಳು ಸಂಬಳ ಕೊಡುತ್ತಿರಲಿಲ್ಲ. ನೀನು ಒಡೆದ ಲೋಟಾಗಳ ಬೆಲೆ ನಿನ್ನ ಸಂಬಳಕ್ಕಿಂತ ಹೆಚ್ಚಾಗಿದೆ ಎಂದು ಗದರುತ್ತಿದ್ದರು. ಹೋಟೇಲು ಬಿಟ್ಟು 91ರ ಹರೆಯದ ವೃದ್ಧ ಪಿಲಿಂಗುಳಿ ಶಂಭಟ್ಟರೊಡನೆ ಮನೆಯ ಸುತ್ತಮುತ್ತಲಿನ ಸಂದರ್ಭದಲ್ಲಿ ನಡೆದ ಜಗಳದಲ್ಲಿ ಗೋವಿಂದ ಭಟ್ಟರ ತಂದೆಯ ಕೈಯೊಂದು ಮುರಿದು ಹೋಯಿತು. ಅದು ಹೇಗೋ ದೊರತ ಮದಕ ಎಂಬಲ್ಲಿನ ಜಾಗದಲ್ಲಿ ಗುಡಿಸಲು ಹಾಕಿಕೊಂಡು ತಾಯಿ ಯಾರದೋ ಮನೆಯ ಕೆಸಲಕ್ಕೆ ಹೋಗಿ ಹೊಟ್ಟೆ ಹೊರೆಯಬೇಕಾಯಿತು. ಕಳೆದು ಹೋದ ಆಸ್ತಿ ದೊರೆಯಲಿಲ್ಲ. ಅದನ್ನು ಪಡೆಯಲು ಅಲೆದೂ ಅಲೆದೂ ಕೊನೆಗೊಂದು ದಿನ ಅಪ್ಪ ಪಾಶ್ರ್ವವಾಯು ಬಡಿದು ಕಂಗಾಲಾದರು. ಅವರಿಗೆ ಚಿಕಿತ್ಸೆಗಾಗಿ ಅಮ್ಮ ಮಾಂಗಲ್ಯ ಮತ್ತು ಕಿವಿಯ ಬೆಂಡೊಲೆಗಳನ್ನು ಮಾರಬೇಕಾಗಿ ಬಂತು. ಆ ಬಳಿಕ ಅಪ್ಪ ನ್ಯಾಯಾಲಯದಲ್ಲಿ ಹೋರಾಡಿ ತಾಯಿಯ ತಂದೆಯ (ಅಜ್ಜನ) ಆಸ್ತಿಯಲ್ಲಿ ಸ್ವಲ್ಪ ಪಾಲು ಪಡೆದರೂ ಅದರಿಂದ ಬರುವ ಗೇಣಿ ಎಲ್ಲರಿಗೂ ಸಾಲುತ್ತಿರಲಿಲ್ಲ.

ರಂಗದಲ್ಲಿ ಜಾಂಬವಂತನಾಗಿ 

ಹುಡುಗ ಗೋವಿಂದ ಬೇರೆ ಬೇರೆ ಮನೆಗಳಳ್ಲಿ ಕೆಲಸಕ್ಕೆ ನಿಂತ. ಎಳೆ ಹುಡುಗ ಏನು ಕೆಲಸ ಮಾಡಿಯಾನು? ಊಟಕ್ಕೆ ಗತಿಯಿಲ್ಲದ ಪರಿಸ್ಥಿತಿ. ಅಂತಹ ಕಾಲದಲ್ಲಿ ತಿಪ್ಪೆಗೆಸೆಯುತ್ತಿದ್ದ ಉಪ್ಪಿನ ಕಾಯಿಯನ್ನು ಅಮ್ಮ ಮನೆಗೆ ತಂದರು. ಅದನ್ನು ತಿಂದ ನೀರು ಕುಡಿದು ಮಲಗಿದ ಮಕ್ಕಳಿಗೆ ಮರುದಿನ ಬೇದಿ ಹತ್ತಿಕೊಂಡಿತು. ಅಪ್ಪ ಯಾರದೋ ಮನೆಗೆ ಹೋಗಿ ಒಂದೂವರೆ ಸೇರಿ ಅಕ್ಕಿ ತಂದರು. ಅಮ್ಮ ಅದನ್ನು ಬೇಯಿಸಿ ಹಾಕಿದಳು. ಅದನ್ನು ತಿಂದ ಮೇಲೆ ಬೇಧಿ ನಿಂತಿತು. ಅಂತಹ ಸ್ಥಿತಿಯಲ್ಲಿ ಹುಚ್ಚು ಹಿಡಿದ ಚಿಕ್ಕಪ್ಪನನ್ನು ಅಜ್ಜಿ ಕರಕೊಂಡು ಎಲ್ಲಗೋ ಹೋದರು. ಅಪ್ಪ ಪ್ರತಿದಿನ ಕೋಲೂರಿ ಕೊಂಡು ಎಲ್ಲೆಲ್ಲೋ ಯಾಚನೆಗೆ ಹೋಗುತ್ತಿದ್ದರು.

ಆ ದಿನಗಳಲ್ಲಿ ಭಟ್ಟರಿಗೆ 81 ವರ್ಷದ ಪಿಲಿಂಗುಳಿ ಶಂಭಟ್ಟರ ಪರಿಚಯವಾಯಿತು. ಶಂಭಟ್ಟರು ಯಾರ್ಯಾರ ಮನೆಯ ಮದುವೆ, ಉಪನಯನ, ಶ್ರಾದ್ಧ. ವರ್ಷಾಂತಿಕ, ಬೊಜ್ಜು, ಪೂಜೆ ಇತ್ಯಾದಿಗಳಿಗೆ ಪುರೋಹಿತರ ಜತೆ ಪರಿಕರ್ಮಕ್ಕೆ ಹೋಗುತ್ತಿದ್ದರು. ಗೋವಿಂದ ಭಟ್ಟರನ್ನೂ ಕರೆದೊಯ್ಯುತ್ತಿದ್ದರು. ಗೋವಿಂದ ಭಟ್ಟರಿಗೆ ಪುಷ್ಕಳ ಊಟ ದೊರೆಯುತ್ತಿತ್ತಾದರೂ ಇದು ಎಷ್ಟು ದಿನ ಎಂಬ ಪ್ರಶ್ನೆ ಕಾಡುತ್ತಿತ್ತು. ಮಾಣಿ ಗೋವಿಂದನ ಈ ದೈನೇಸಿ ಪರಿಸ್ಥಿತಿಗೆ ಮನಕರಗಿ ಶಿರಂಕಲ್ಲು ಕೃಷ್ಣ ಜೋಯಿಸರು ಮನೆಯಲ್ಲಿ ಇಟ್ಟುಕೊಂಡರು. ಅಲ್ಲಿ ಎಳೆಯ ಗೋವಿಂದ ಎರಡು ತಿಂಗಳು ದುಡಿದ. ಆಗ ಬಂತು ಅಪ್ಪನ ನಿಧನದ ವಾರ್ತೆ. ಗೋವಿಂದ ಭಟ್ಟರು ಮನೆಗೆ ಹೊರಟು ನಿಂತಾಗ ಜೋಯಿಸರು ಐದು ರೂಪಾಯಿ ಹಣ ಮತ್ತು ಏಳು ಸೇರು ಅಕ್ಕಿ ನೀಡಿ “ ನಿನ್ನ ಮುಖದಲ್ಲೊಂದು ಸಂಸ್ಕಾರಯುತ ಕಳೆಯಿದೆ. ಒಂದಲ್ಲ ಒಂದು ದಿನ ದೊಡ್ಡ ಸಾಧನೆ ಮಾಡಿ ಹೆಸರು ಗಳಿಸು” ಎಂದು ಆಶೀರ್ವದಿಸಿದರು.

ಕೆಲದಿನಗಳ ಬಳಿಕ ಸಮಾರಂಭ ಒಂದರಲ್ಲಿ ಹೊಸಹಿತ್ಲು ಮಾಲಿಂಗ ಭಟ್ಟರು ಕಾಣ ಸಿಕ್ಕಿ ತಾನು ಧರ್ಮಸ್ಥಳ ಮೇಳದಲ್ಲಿ ತಿರುಗಾಟ ಮಾಡುತ್ತಿರುವುದಾಗಿಯೂ, ಆರು ತಿಂಗಳಿಗೆ ರೂ. ಐದು ನೂರು ಗಳಿಸುತ್ತಿರುವುದಾಗಿಯೂ ಗೋವಿಂದ ಭಟ್ಟರಲ್ಲಿ ತಿಳಿಸಿದರು. ಎಳೆಯ ಗೋವಿಂದ ಧರ್ಮಸ್ಥಳಕ್ಕೆ ಹೋಗಿ ತನ್ನನ್ನು ಮೇಳಕ್ಕೆ ಸೇರಿಕೊಳ್ಳುವಂತೆ ವಿನಂತಿಸಿಕೊಂಡ. ಅದು ಏಪ್ರಿಲ್ ತಿಂಗಳು. ಮೇ ತಿಂಗಳಲ್ಲಿ ಮೇಳಗಳ ತಿರುಗಾಟ ನಿಲ್ಲುತ್ತದೆ. ಆದುದರಿಂದ ಮೇಳದ ಸಂಚಾಲಕ ಕುರಿಯ ವಿಠ್ಠಲ ಶಾಸ್ತ್ರಿಗಳು ನವರಾತ್ರಿ  ಕಾಲಕ್ಕೆ ಬಾರೆಂದು ಸಲಹೆ ನೀಡಿದರು. ಆ ಮಳೆಗಾಲದಲ್ಲಿ ಮಿತ್ತನಡ್ಕದಲ್ಲಿ ವಿಠ್ಠಲಶಾಸ್ತ್ರಿಗಳು ಯಕ್ಷಗಾನ ಶಿಕ್ಷಣ ನೀಡುವುದರೊಂದಿಗೆ   ಪರಮಶಿವನ್ ಎಂಬವರಿಂದ ಭರತನಾಟ್ಯವನ್ನು ಕಲಿಸುವ ಏರ್ಪಾಡು ಮಾಡಿದ್ದರು. ಗೋವಿಂದ ಭಟ್ಟರು ಅವೆರಡೂ ಶಿಕ್ಷಣ ಪಡೆದುಕೊಂಡು  ಧರ್ಮಸ್ಥಳ ಮೇಳಕ್ಕೆ ಸೇರ್ಪಡೆಯಾದರು. ಅದಕ್ಕೆ ಪೂರ್ವಭಾವಿಯಾಗಿ ಎರಡು ತಿಂಗಳು ಹೋಟೆಲೊಂದರಲ್ಲಿ ಕ್ಲೀನರ್ ಆಗಿ ಸೇರಿ ತಿರುಗಾಟಕ್ಕೆ ಬೇಕಾದ ವಸ್ತ್ರವನ್ನು ಕೊಂಡಿದ್ದರು. ಮೇಳದಲ್ಲಿ ಬಾಲಗೋಪಾಲ ವೇಷದೊಡನೆ ಭಟ್ಟರ ಅರಂಗೇಟಾಂ ನಡೆಯಿತು. ಇದು ನಡೆದದ್ದು 1951 ರಲ್ಲಿ.

ಮೇಳದ ಕೆಲವು ಹಿರಿಯ ಕಲಾವಿದರು ಎಳೆಯರಿಗೆ ಇನ್ನಿಲ್ಲದ ಹಿಂಸೆ ನೀಡುತ್ತಿದ್ದರು. ಚೌಕಿಯಲ್ಲಿ  ಮಲಗಿದ್ದರೆ ಬಿಸಿಬಿಸಿ ಎಣ್ಣೆ ಹೊೈದು ಎಬ್ಬಿಸುತ್ತಿದ್ದರು. ಅವರು ಮುಖದ ಬಣ್ಣತೆಗೆಯಲು ಬಳಸಿದ ಬಟ್ಟೆಯನ್ನು ಒಗೆದು ತರಬೇಕಿತ್ತು. ಅವರಿಗೆ ಚಾ ತಂದು ಕೊಡಬೇಕಿತ್ತು. ಚಾಕ್ಕೆ ಅವರು ಹಣ ಕೊಡುತ್ತಿರಲಿಲ್ಲ. ಇವೆಲ್ಲಾ ಹಿಂಸೆ ಸಾಕಾಗಿ  ಮೇಳ ಬಿಡುವ ಆಲೋಚನೆಯಲ್ಲಿದ್ದಾಗ ಹಾಸ್ಯ ಕಲಾವಿದ ಪೆರುವಡಿ ನಾರಾಯಣ ಭಟ್ಟರು ಸಂತೈಸಿ ಮೇಳದಲ್ಲೇ ಉಳಿಯುವಂತೆಯೇ ಮಾಡಿದರು. ವರ್ಷದ ಕೊನೆಗೆ ಮೇಳದ ಯಜಮಾನರು ಹದಿನಾರು ರೂಪಾಯಿಗಳನ್ನು ನೀಡಿದರು. ಆರು ತಿಂಗಳಿಗೆ ಕೇವಲ ರೂ. 75 ಎಂದು ನಿಗದಿ ಮಾಡಲಾಗಿತ್ತು. ಮಾಲಿಂಗ ಭಟ್ಟರಲ್ಲಿ ಕೇಳೀದಾಗ ಆರು ತಿಂಗಳಿಗೆ 500 ರೂಪಾಯಿ ಸಿಗುವುದು ಹಿರಿಯ ಕಲಾವಿದರಿಗೆಂದು ತಾನು ಹೇಳಿದ್ದಾಗಿ ತಮ್ಮನ್ನು ಸಮರ್ಥಿಸಿಕೊಂಡರು.

ಆ ಮಳೆಗಾಲದಲ್ಲಿ ಗೋವಿಂದ ಮಾಣಿಗೆ ಉಪನಯನವಾಯಿತು. ಉಪನಯನವಾದ ಮೇಲೆ ಮಾಣಿ ವೇದ ಪಾಠಕ್ಕೆ ಹೋಗಲಿ ಎಂದು ಯಾರೋ ಪುಕ್ಕಟೆ ಸಲಹೆ ನೀಡಿದರು. ಉಡುಪಿಯಲ್ಲಿ ಉಚಿತವಾಗಿ ವೇದ ಪಾಠ ಮಾಡುತ್ತಾರೆಂದು ತಿರುಗಾಟದ ಸಮಯದಲ್ಲಿ ಗೊತ್ತಾಗಿತ್ತು. ಆದುದರಿಂದ ಮಾಣಿ ಗೋವಿಂದ ಉಡುಪಿಗೆ ಹೋಗಿ ವೇದಾಧ್ಯಯನಕ್ಕೆ ಸೇರಿಕೊಂಡ. ಅಲ್ಲಿನ ಇತರ ವಿದ್ಯಾರ್ಥಿಗಳು ನೀನು ಮಾಧ್ವನಲ್ಲವೆಂದು, ಹೇಳಿ ಉಪಟಳ ನೀಡಲಾರಂಭಿಸಿದರು. ವೇದ ಕಲಿಸುವವರು “ನೀನು  ಮನೆಗೆ ಹೋಗಿಂದು ನೇರವಾಗಿ ಹೇಳಿಬಿಟ್ಟರು. ವೇದ ಕಲಿಯುವ ಆಸೆಗೆ ಮಾಣಿ ತಿಲಾಂಜಲಿ ನೀಡಬೇಕಾಗಿ ಬಂತು.

ದೇವಿ ಮಹಾತ್ಮೆಯ ಮಹಿಷಾಸುರನಾಗಿ  

ಆ ವರ್ಷಪೆರುವಡಿ ಸುಭ್ರಾಯ ಭಟ್ಟರ ನೇತೃತ್ವದ ಮೂಲ್ಕಿ ಮೇಳಕ್ಕೆ ಗೋವಿಂದ ಭಟ್ಟರು ಸೇರಿಕೊಂಡರು. ಅದೇ ಮೇಳದಲ್ಲಿದ್ದ ಸಣ್ಣ ತಿಮ್ಮಪ್ಪ ಎಂಬ ಅಸಾಮಾನ್ಯ ಕಲಾವಿದನಿಂದ ವೈವಿಧ್ಯಮಯ ಮುಖ ವರ್ಣಿಕೆ ಮತ್ತು ವಿವಿಧ ಪಾತ್ರಗಳ ಅಭಿವ್ಯಕ್ತಿ ವಿಧಾನ ಕಲಿತುಕೊಂಡ ಭಟ್ಟರು ಬಹಳ ವೇಗವಾಗಿ ಪ್ರಗತಿ ಸಾಧಿಸಿದರು. ಆ ವರ್ಷ ಪುತ್ತೂರು ನಾರಾಯಣ ಹೆಗ್ಡೆ ಎಂಬ ಇನ್ನೋರ್ವ ಖ್ಯಾತ ಕಲಾವಿದ ಅದೇ ಮೇಳದಲ್ಲಿದ್ದರು. ಗೋವಿಂದ ಭಟ್ಟರಿಗೆ ಬಾಲಗೋಪಾಲ ಮಾತ್ರವಲ್ಲದೆ ಪ್ರಮುಖ ಪುಂಡು ವೇಷಗಳನ್ನು ಮಾಡುವ ಅವಕಾಶ ದೊರೆಯಿತು. ಆ ಮಳೆಗಾಲದಲ್ಲಿ ಯಕ್ಷಗಾನದಲ್ಲಿ ಸುಪ್ರಸಿದ್ಧರಾಗಿದ್ದ ಬಲಿಪ ನಾರಾಯಣ ಭಾಗವತರಲ್ಲಿದ್ದು, ಪದ್ಯ ಮತ್ತು ಮಾತುಗಾರಿಕೆ ಕಲಿಯಲು ಅವಕಾಶವಾಯಿತು. ಮಳೆಗಾಲ ಕಳೆದ ಮೇಲೆ ಕಾಂದಿಲ್ಕರರ ನೇತೃತ್ವದಲ್ಲಿನ ಕೂಡ್ಲು ಮೇಳಕ್ಕೆ  ಸೇರ್ಪಡೆಗೊಂಡರು. ಅಲ್ಲಿ ಶೇಣಿ ಗೋಪಾಲಕೃಷ್ಣ ಭಟ್, ದಾಮೋದರ ಮಂಡೆಚ್ಚ, ದೊಡ್ಡ ಸಾಮಗ, ಕದ್ರಿ ವಿಷ್ಣು ಮುಂತಾದವರ ಸಾಹಚರ್ಯದಿಂದಾಗಿ ಬಹಳಷ್ಟನ್ನು ಕಲಿಯುವ ಅವಕಾಶ ದೊರಕಿತು.

ಮರುವರ್ಷ ಕಾಂದಿಲ್ಕಾರರಿಗೆ ಕೂಡ್ಲು ಮೇಳ ಕೈತಪ್ಪಿ ಹೋಯಿತು. ಅವರು ಹಟದಿಂದ ಸುರತ್ಕಲ್ಲು ಮೇಳವನ್ನು ಹೊರಡಿಸಿದರು. ಗೋವಿಂದ ಭಟ್ಟರು ಸುರತ್ಕಲ್ ಮೇಳವನ್ನು ಸೇರಿಕೊಂಡು ತಿರುಗಾಟ ನಡೆಸಿದರು. ಆದರೆ ಆರ್ಥಿಕವಾಗಿ ಮೇಳ ಚೇತರಿಸಿಕೊಳ್ಳಲಿಲ್ಲ. ಮೇ 25ರಂದು ನಿಲ್ಲಬೇಕಿದ್ದ ಪ್ರದರ್ಶನ ಏಪ್ರಿಲ್ ಹದಿನಾಲ್ಕರಂದೇ ತಿರುಗಾಟ ನಿಲ್ಲಿಸಿತು. ಕೈಯಲ್ಲಿ ಕಾಸಿಲ್ಲದೆ ಅಲೆದಾಟ ಆರಂಭವಾಯಿತು. ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಭೇಟಿಯಾದ ಐ.ವಿ. ಕೃಷ್ಣರಾಯರು, ತುದಿಯಡ್ಕ ವಿಷ್ಣಯ್ಯ ಎಂಬ ವಿದ್ವಾಂಸರಲ್ಲಿಗೆ ಹೋಗಿ ಅರ್ಥಗಾರಿಕೆಯನ್ನು ಸುಧಾರಿಸಬೇಕೆಂದು ಸಲಹೆಯಿತ್ತರು. ಅರ್ಥ ಸುಧಾರಣೆಯೊಂದಿಗೆ ಮಳೆಗಾಲದಲ್ಲಿ ಹೊಟ್ಟೆಯ ಪ್ರಶ್ನೆಯೂ ನೀಗಿತು.

1955ರಲ್ಲಿ ಗೋವಿಂದ ಭಟ್ಟರು ಕುಂಡಾವು ಮೇಳ ಎಂದು ಕರೆಯಲ್ಪಡುವ ಇರಾ ಸೋಮನಾಥೇಶ್ವರ ಯಕ್ಷಗಾನ ಮಂಡಳಿಯನ್ನು ಸೇರಿಕೊಂಡು ಹದಿನಾಲ್ಕು ವರ್ಷಗಳ ಅಖಂಡ ತಿರುಗಾಟ ನಡೆಸಿದರು. ಆ ಮೇಳದ ಯಜಮಾನ ಕಲ್ಲಾಡಿ ಕೊರಗಪ್ಪ ಶೆಟ್ಟರು ಕಲಾವಿದರ ಬಗ್ಗೆ ಅಪಾರ ಗೌರವ ಹೊಂದಿದ್ದರು. ಅವರು ಯಕ್ಷಗಾನದಲ್ಲಿ ಅನೇಕ ಆವಿಷ್ಕಾರಿಕ ಪ್ರಯೋಗ ನಡೆಸಿದರು. ಪೂರ್ವರಂಗದ ಬದಲು ಭಾರತೀಯ ನೃತ್ಯ ವೈವಿಧ್ಯಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಿಕೊಟ್ಟರು. ಅದಕ್ಕೆಂದೇ ಭರತನಾಟ್ಯ ಬಲ್ಲ ತರುಣಿಯರನ್ನು ಮೇಳಕ್ಕೆ ಸೇರ್ಪಡೆಗೊಳಿಸಿದ್ದರು. ಮೇಳವು ಪೌರಾಣಿಕ ಪ್ರಸಂಗಗಳನ್ನಷ್ಟೇ ಪ್ರದರ್ಶಿಸುತ್ತಿತ್ತು. ಮೇಳದಲ್ಲಿ ವೀರಭದ್ರ ನಾಯಕ, ರಾಮದಾಸ ಸಾಮಗ, ಕುಂಬಳೆ ಸುಂದರರಾವ್ ಮುಂತಾದ ನುರಿತ ಕಲಾವಿದರಿದ್ದರು. ರಾಮದಾಸ ಸಾಮಗರ ಸಂಸರ್ಗದಿಂದಾಗಿ ಮಾತುಗಾರಿಕೆಯ ಆಳ ವಿಸ್ತಾರಗಳ ಅರಿವು ಗೋವಿಂದ ಭಟ್ಟರಿಗಾಯಿತು. ಸಾಮಗರಿಂದಾಗಿ ನಿತ್ಯಾನುಷ್ಠಾನವನ್ನು ಮಾಡುವಂತಾಯಿತು. ಆ ಮಳೆಗಾಲದಲ್ಲಿ ಆಗಿನ ಪ್ರಸಿದ್ಧ ಕೋಲು ಕಿರೀಟ ವೇಷಧಾರಿ ವೇಣೂರು ವೆಂಕಟ್ರಮಣ ಭಟ್ಟರ ಮನೆಯಲ್ಲಿ ಎರಡು ವರ್ಷ ಇದ್ದು ಪೂಜಾ ವಿಧಾನಗಳಳನ್ನು ಕಲಿತುಕೊಂಡುದರ ಜೊತೆಗೆ ಗದಾಯುದ್ಧ, ಕೌರವ, ಭೀಷ್ಮ ವಿಜಯದ ಭೀಷ್ಮ ಮತ್ತು ಕರ್ಣ ಪರ್ವದ ಕರ್ಣ ಇತ್ಯಾದಿ ಪಾತ್ರಗಳ ಒಳ ಮರ್ಮಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು.

ಇರಾ ಸೋಮನಾಥ ಮೇಳದಲ್ಲಿ ಭಟ್ಟರು ಅನೇಕ ಪ್ರಸಂಗಗಳ ರಂಗ ಪ್ರಯೋಗದ ವಿಧಾನವನ್ನು ಅರಿತುಕೊಡರು. ಮೇಳದ ಯಜಮಾನ ಕಲ್ಲಾಡಿ ಕೊರಗಪ್ಪ ಶೆಟ್ಟರ ಮಾತಿಗೆ ಕಟ್ಟುಬಿದ್ದು, ನೆಲ್ಯಾಡಿ ಬಳಿಯ ಕೆಮ್ಮಣಮ್ಕಕ್ಕಿ ಎಂಬಲ್ಲಿ ಇಸುಬು ಬ್ಯಾರಿ ಎಂಬಾತನಿಂದ ವಾೈದೆ ಗೇಣಿಗೆ ಭೂಮಿಯನ್ನು ಕೃಷಿಗಾಗಿ ಮಾಡಿಕೊಂಡರು. ಉಳಲುಇ ಎತ್ತುಗಳನಜ್ನು ಮತ್ತು ಹಾಲಿಗಾಗಿ ಹಸುವನ್ನು ಬ್ಯಾರಿಯು ಧರ್ಮಾರ್ಥ ಕೊಟ್ಟ.  ಭೂಮಿಯಲ್ಲಿ ಕೃಷಿ ಮಾಡಲಾರಂಭವಾದ ಮೇಲೆ ಜೀವನದಲ್ಲಿ ಸ್ವಲ್ಪ ಆರ್ಥಿಕ ಭದ್ರತೆ ಉಂಟಾಯಿತು.

ಕುಂಡಾವು ಮೇಳದಲ್ಲಿ ಪ್ರಬುದ್ಧ ಕಲಾವಿದರಿದ್ದರು. ಭಟ್ಟರು ಆ ಕಾಲದಲ್ಲಿ ಕನಕ ರೇಖೆ- ರತ್ನ ಕಂಕಣ ಎಂಬ ಪ್ರಸಂಗ ರಚಿಸಿ ರಂಗ ಪ್ರಯೋಗವಾಗುವಂತೆ ನೋಡಿಕೊಂಡಿದ್ದರು. ಅದು 141 ಪ್ರಯೋಗಗಳನ್ನು ಕಂಡು ಯಶಸ್ವಿಯಾಯಿತು. ರಾಮದಾಸ ಸಾಮಗರ ಶಿಷ್ಯನಾಗಿ ಗೋವಿಂದ ಭಟ್ಟರು ತುಂಬಾ ಪ್ರಗತಿ ಸಾಧಿಸಿದರು. ಅವರಿಬ್ಬರ ಬ್ರಹ್ಮ-ಈಶ್ವರ, ಭೀಷ್ಮ-ಪರಶುರಾಮ, ಹರಿಶ್ಚಂದ್ರ-ವಿಶ್ವಾಮಿತ್ರ, ಶುಕ್ರಾಚಾರ್ಯ-ಕಚ, ರಾಮ-ಭರತ, ಶಕುನಿ- ಕೌರವ ಪಾತ್ರಗಳು ಜನಮನ್ನಣೆ ಗಳಿಸಿದವು. ಅನ್ಯರ ಏಳಿಗೆಯನ್ನು ಸಹಿಸದ  ಕೆಲವರು ಅವರಿಬ್ಬರ ಗುರು ಶಿಷ್ಯರ ಸಂಬಂಧಕ್ಕೆ ಹುಳಿ ಹಿಂಡಿದರು. ವಿಘ್ನ ಸಂತೋಷಿಗಳ ಮಾತು ಕೇಳಿದ ಗುರುಗಳು ಶಿಷ್ಯನನ್ನು ದೂರ ಇಡಲು ಯತ್ನಿಸಿದರು. ಒಂದು ಸಲ ಗೋವಿಂದನಿದ್ದರೆ ನಾನು ವೇಷ ಮಾಡುವುದಿಲ್ಲ ಎಂದು ಸಾರಿಬಿಟ್ಟರು.  ಕೊರಗಪ್ಪ ಶೆಟ್ಟಿಯವರಿಂದಲೂ ಸಂದರ್ಭವನ್ನು ತಿಳಿಗೊಳಿಸಲು ಸಾಧ್ಯವಾಗಲಿಲ್ಲ. ಅಲ್ಲಿಗೆ ಭಟ್ಟರಿಗೆ ಕುಂಡಾವು ಮೇಳದ ಋಣ ಹರಿದು ಹೋಯಿತು.

ಗದಾಯುದ್ದದ ಧುರ್ರ್ಯೋಧನನಾಗಿ 

1968ರಲ್ಲಿ ಭಟ್ಟರು ಧರ್ಮಸ್ಥಳ ಮೇಳಕ್ಕೆ ಸೇರಿಕೊಂಡು ಅಖಂಡ 50 ವರ್ಷಗಳ ತಿರುಗಾಟ ನಡೆಸಿದರು. ಇದರ ನಡುವೆ 1966ರಲ್ಲಿ ಸಾವಿತ್ರಿ ಎಂಬ ದೂರದ ಸಂಬಂಧಿಯೊಡನೆ ಗೋವಿಂದ ಭಟ್ಟರ ವಿವಾಹ ನಡೆದು ಹೋಯಿತು. ಧರ್ಮಸ್ಥಳ ಮೇಳಕ್ಕೆ ವಾಪಾಸಾದಾಗ ಮೇಳದಲ್ಲಿ ಘಟಾನುಘಟಿಗಳಾದ ಕಲಾವಿದರಿದ್ದರು. ಹಾಡುಗಾರಿಕೆಗೆ ಕಡತೋಕ ಮಂಜುನಾಥ ಭಾಗವತ ಚೆಂಡೆ ಮದ್ದಳೆಕಾರರಾಗಿ ಚಿಪ್ಪಾರು ಕೃಷ್ಣಯ್ಯ ಬಳ್ಳಾಳ್ ಮತ್ತು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು, ಪಾತ್ರಾಧಾರಿಗಳಾಗಿ ವಿಟ್ಲ ಗೋಪಾಲಕೃಷ್ಣ ಜೋಷಿ, ಕುಂಬಳೆ ಸುಂದರರಾವ್, ಪುತ್ತೂರು ನಾರಾಯಣ ಹೆಗ್ಡೆ, ಎಂಪೆಕಟ್ಟೆ ರಾಮಯ್ಯ ರೈ, ಪಾತಾಳ ವೆಂಕಟ್ರಮಣ ಭಟ್, ಕಡಬ ಸಾಂತಪ್ಪ, ಮುಳಿಯ ಭೀಮ ಭಟ್, ಶ್ರೀನಿವಾಸ ಆಚಾರ್ಯ, ಚಂದ್ರಗಿರಿ ಅಂಬು, ಪಕಳಕುಂಜ ಕೃಷ್ಣ ನಾಯ್ಕ, ಪುತ್ತೂರು ಶ್ರೀಧರ ಭಂಡಾರಿ, ಉಬರಡ್ಕ ಉಮೇಶ್ ಶೆಟ್ಟಿ ಮುಂತಾದವರಿದ್ದರು. ನವೆಂಬರ್‍ನಿಂದ ಮೇ ಅಂತ್ಯದವರೆಗೆ ಮೇಳದಲ್ಲಿ ತಿರುಗಾಟ, ಮಳೆಗಾಲದಲ್ಲಿ ಮುಂಬಯಿಯಂತಹ ಹೊರನಾಡುಗಳಲ್ಲಿ ಆಯ್ದ ಕಲಾವಿದರಿಂದ ಪ್ರದರ್ಶನ- ಹೀಗೆ ವರ್ಷ ಮುಗಿದು ಹೋಗುತ್ತಿತ್ತು.

ಭಟ್ಟರು ಕುಂಡಾವು ಮೇಳದಲ್ಲಿದ್ದಾಗ ಇತರ ಮೇಳಗಳೊಡನೆ ಸ್ಪರ್ಧೆಯ  ಜೋಡಾಟ ನಡೆಯುತ್ತಿತ್ತು. ಜೋಡಾಟವೆಂದರೆ ಅಕ್ಕ ಪಕ್ಕದ ರಂಗಗಳಲ್ಲಿ ಏಕಕಾಲದಲ್ಲಿ ಒಂದೇ ಪ್ರಸಂಗವನ್ನು ಪ್ರದರ್ಶಿಸುವುದು. ಅಂತಹ ಪ್ರದರ್ಶನಗಳಿಗೆ ವೀರ ರಸ ಪ್ರಧಾನವಾದ ಪ್ರಸಂಗಗಳನ್ನು ಆಯ್ದು ಪ್ರದರ್ಶಿಸುವುದು ವಾಡಿಕೆ. ಅಂತಹ ಜೋಡಾಟಗಳಲ್ಲಿ ಆ ಕಾಲದ ಪ್ರಸಿದ್ಧ ಕಲಾವಿದರಾದ ಅಳಿಕೆ ರಾಮಯ್ಯ ರೈ, ಕೇದಗಡಿ ಗುಡ್ಡಪ್ಪ ಗೌಡ, ಕದ್ರಿ ವಿಷ್ಣು, ಪಡ್ರೆ ಚಂದು, ಅಪ್ಪಯ್ಯ ಮಣಿಯಾಣಿ, ಅರುವ ಕೊರಗಪ್ಪ ಶೆಟ್ಟಿ, ಕೋಳ್ಯೂರು ರಾಮಚಂದ್ರ ರಾವ್, ಕ್ರಿಶ್ಚಿಯನ್ ಬಾಬು, ಹೊಸಹಿತ್ಲು ಮಾಲಿಂಗ ಭಟ್- ಮುಂತಾದವರೆದುರು ಸರಿ ಮಿಗಿಲೆನಿಸಿ ಎಲ್ಲರಿಂದಲೂ ಹೊಗಳಿಸಿಕೊಂಡವರು ಭಟ್ಟರು. ಅವರು ತನಗೆ ಇಂತಹದೇ ಪಾತ್ರ ಬೇಕೆಂದು ಪಟ್ಟು ಹಿಡಿದವರಲ್ಲ. ಎಲ್ಲಾ ಬಗೆಯ ವೈವಿಧ್ಯಮಯ ಪಾತ್ರಗಳನ್ನು ಮಾಡಲು ಅವರು ಹಿಂಜರಿದವರಲ್ಲ. ಅವರ ಅತ್ಯಂತ ಯಶಸ್ವಿಯಾದ ಪಾತ್ರಗಳೆಂದರೆ ಅಕ್ಷಯಾಂಬರ ವಿಲಾಸ ಮತ್ತು ಗದಾಯುದ್ಧದ ಕೌರವ, ಪಾಂಡವಾಶ್ವಮೇಧದ ಅರ್ಜುನ, ತಾಮ್ರ ಧ್ವಜ ಮತ್ತು ಬಬ್ರುವಾಹನ, ಕಾರ್ತ ವೀರ್ಯಾರ್ಜುನದ ಪರಶುರಾಮ ಮತ್ತು ಕಾರ್ತವೀರ್ಯ ಪಂಚವಟಿಯ ಮಾಯಾ ಶೂರ್ಪನಖಿ, ಚಂದ್ರಾವಳಿ ವಿಲಾಸ ರಾಧೆ, ಪಾರಿಜಾತದ ದೂತಿ, ಜಲಂಧರದ  ದೇವೇಂದ್ರ, ಪಾದುಕಾ ಪ್ರಧಾನದ ಶ್ರೀರಾಮ, ರತಿ ಕಲ್ಯಾಣದ ಕೌಂಡಿಕ, ಸಮುದ್ರ ಮಥನದ ವಾಲಿ, ಇಂದ್ರಜಿತು, ದೇವಿ ಮಹಾತ್ಮೆಯ ಮಧು ಕೈಟಭ, ಚಂಡ-ಮುಂಡ, ವಿಶ್ವಾಮಿತ್ರ, ದೂರ್ವಾಸ ಮತ್ತು ಹೆಣ್ಣು ಬಣ್ಣಗಳು.

ಗೋವಿಂದ ಭಟ್ಟರು ಯಾವುದೇ ಪಾತ್ರ ನೀಡಿದರೂ ಅದರ ನಿರ್ವಹಣೆಯಲ್ಲಿ ಯಶಸ್ವಿಯಾಗುತ್ತಾರೆ. ಎಲ್ಲಾ ವೇಷಗಳಿಗೊಪ್ಪುವ ಹದವಾದ ಎತ್ತರ ಸುಂದರವಾದ ದೇಹಯಷ್ಟಿ, ತುಂಬು ಝೇಂಕಾರದ ಕಂಠಶ್ರೀ, ನೃತ್ಯಕ್ಕೊಪ್ಪುವ ಶಾರೀರಿಕತೆಗಳ ಪ್ರಾಕೃತಿಕ ಭಾಗ್ಯಗಳೊಡನೆ ವ್ಯವಸ್ಥಿಕವಾಗಿ ಕಲಿತ ನೃತ್ಯ, ಪಾರಂಪರಿಕ ವಿಧಾನಗಳ ಅರಿವು, ರೂಢಿಸಿಕೊಂಡ ಪುರಾಣಶಾಸ್ತ್ರ ಅನುಭವ, ಭರತ ನಾಟ್ಯ ಅಭ್ಯಾಸ, ಪೌರಾಣಿಕ ಆವರಣ ನಿರ್ಮಾಣದ ಚೊಕ್ಕ ಪ್ರೌಢ ಭಾಷೆ, ಅಭಿನಯ ಪ್ರತಿಭೆ, ದನಿವಿರದ ದುಡಿತದ ಮನೋಧರ್ಮ ಮತ್ತು ಇವೆಲ್ಲವನ್ನು ಒಂದು ಪಾಕವಾಗಿಸುವ ವಿಶಿಷ್ಟ ಯೋಗ್ಯತೆ ಗಳಿಸಿದ ಗೋವಿಂದ ಭಟ್ಟರು ದೇಶದ ಶ್ರೇಷ್ಠ ಕಲಾವಿದರಲ್ಲಿ ಒಬ್ಬರು ಎಂದು ಖ್ಯಾತ ಯಕ್ಷಗಾನ ವಿಮರ್ಶಕ ಡಾı ಪ್ರಭಾಕರ ಜೋಷಿ ಅಭಿಪ್ರಾಯ ಪಟ್ಟಿದ್ದಾರೆ.

ಉಳ್ಳವರು ಶಿವಾಲಯವ ಮಾಡುವರು; ಆನೇನು ಮಾಡಲಿ ಬಡವನಯ್ಯ ಎಂದು ಬಸವಣ್ಣನವರು ಕೇಳಿದ್ದರು. ಗೋವಿಂದ ಭಟ್ಟರು ಉಳ್ಳವರಲ್ಲ. ಆದರೆ ತೀರ್ಥಹಳ್ಳಿಯ ಹದ್ದೂರಿನ ಸಮೀಪ ಅವರೊಂದು ಪುಟ್ಟ ಗಣಪತಿ ಗುಡಿಯನ್ನು ನಿರ್ಮಿಸಿದ್ದಾರೆ. ಪ್ರಯತ್ನ, ಹುಮ್ಮಸ್ಸು ಮತ್ತು ಪರಿಶ್ರಮವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇದೊಂದು ಉದಾಹರಣೆ.

ಯಕ್ಷಗಾನದಲ್ಲಿ ತೆಂಕು ತಿಟ್ಟು ಮತ್ತು ಬಡಗು ತಿಟ್ಟು ಎಂಬ ಪ್ರಭೇದಗಳಿವೆ. ಉಡುಪಿಯಿಂದ ಉತ್ತರಕ್ಕಿರುವುದು ಬಡಗು ತಿಟ್ಟಾದರೆ, ದಕ್ಷಿಣಕ್ಕಿರುವುದು ತೆಂಕು ತಿಟ್ಟು. ತೆಂಕು ತಿಟ್ಟಿನಲ್ಲಿ ವರ್ಣವೈವಿಧ್ಯವಿದೆ; ಆದರೆ ನೃತ್ಯ ವೈವಿಧ್ಯವಿಲ್ಲ ಎಂದು ವಿಮರ್ಶಕರು ಹಲವಾರು ಬಾರಿ ಹೇಳಿದ್ದಿದೆ. ಗೋವಿಂದ ಭಟ್ಟರು ಶ್ರೀ ಕ್ಷೇತ್ರ ಧರ್ಮಸ್ಥಳದ ಯಕ್ಷಗಾನ ಕಲಾಕೇಂದ್ರದ ಗುರುಗಳಾಗಿದ್ದ ಅವಧಿಯಲ್ಲಿ ನೆಡ್ಕೆ ನರಸಿಂಹ ಭಟ್, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರೊಡಗೂಡಿ ಅವರಂದು ತೆಂಕುತಿಟ್ಟು  ಯಕ್ಷಗಾನ ಕಲಿಕೆಗೆ ಬಾಯಿತಾಳವನ್ನು ರೂಪಿಸಿದರು. ಅದೊಂದು ಮೌಖಿಕ ಸಂಪ್ರದಾಯವಾಗಿ ಬೆಳೆದು ಬಂದಿದ್ದ ಯಕ್ಷಗಾನಕ್ಕೆ ಅಕ್ಷರದ ರೂಪು ಕೊಡುವ ಪ್ರಯತ್ನ. ಪ್ರತಿಯೊಂದು ತಾಳಕ್ಕೂ 10-12 ವಿಧದ ಕುಣಿತದ ಆವಿಷ್ಕಾರವದು. ಏಕತಾಳಕ್ಕೆ ದಾಖಲೆಯ 24 ಕುಣಿತಗಳು ಆವಿಷ್ಕರಿಸಿದರು.

1985ರಲ್ಲಿ ಉಡುಪಿಯಲ್ಲಿ ಡಾı ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ ನಡೆದ ಯಕ್ಷಗಾನ ಪ್ರಾತ್ಯಕ್ಷಿಕೆಯಲ್ಲಿ ಶ್ರೀ ಕ್ಷೇತ್ರದ ಶಿಷ್ಯ ಗಡಣ, ಗೋವಿಂದ ಭಟ್ಟರು ಮತ್ತು ವಿಶ್ವೇಶ್ವರ  ಭಟ್ಟರು  ತೆಂಕುತಿಟ್ಟಿನ  ಆವಿಷ್ಕಾರಿಕ ನೃತ್ಯ ವೈವಿಧ್ಯವನ್ನು ಪ್ರದರ್ಶಿಸಿ ಶಿವರಾಮ ಕಾರಂತರು ತೆಂಕುತಿಟ್ಟಿನಲ್ಲಿ  ಇಷ್ಟೂ ನರ್ತನ ವೈವಿಧ್ಯ ಇದೆಯೇ ಎಂದು ಅಚ್ಚ್ರಿಯಿಂದ ಕೇಳಿದರೆಉ. ಮೆಚ್ಚಿಕೊಂಡಿದ್ದರೂ ಕೂಡಾ.

ಹನುಮಂತ ವೇಷಧಾರಿಯಾಗಿ

ಗೋವಿಂದ ಭಟ್ಟರು 80ರ ಸನಿಹದಲ್ಲಿದ್ದಾರೆ. ವಯೋ ಸಹಜ ದೌರ್ಬಲ್ಯದೊಡನೆ ಕಣ್ಣಿನ ಸಮಸ್ಯೆ ಅವರನ್ನು ಬಾಧಿಸಿದೆ. ರಂಗದಲ್ಲಿರುವಾಗ ಹ್ಯಾಲೋಜಿನ್ ಲೈಟನ್ನು ನೋಡಿ ನೋಡಿ ಅವರ ಕಣ್ಣಿನ ಶಕ್ತಿ ಕ್ಷೀಣಿಸಿದೆ. ತೀರಾ ಸನಿಹದಲ್ಲಿರುವವರನ್ನು ಕೂಡಾ ಗುರುತಿಸಲು ಕಷ್ಟಪಡಬೇಕಾಗುತ್ತದೆ. ಆದರೂ ತಿರುಗಾಟ ನಿಲ್ಲಿಸಲು ಅವರ ಒಳಗಿರುವ ಕಲಾವಿದ ಒಪ್ಪುತ್ತಿಲ್ಲ. ಪ್ರಾಯಃ ಅವರು 80 ತುಂಬುವ ತನಕ ತಿರುಗಾಟ ಮುಂದುವರಿಸಬಹುದು. ಪೂಜ್ಯ ಹೆಗ್ಗಡೆಯವರಿಗೂ ಭಟ್ಟರನ್ನು ಬಿಡಲು ಸಾಧ್ಯವಾಗುತ್ತಿಲ್ಲ. ನೀವು ಚೌಕಿಯಲ್ಲಿ ಇದ್ದರೆ ಸಾಕು. ವೇಷ ಹಾಕಬೇಕಾಗಿಲ್ಲ ಎಂದು ಹೇಳುವ ಮೂಲಕ ಹೆಗ್ಗಡೆಯವರು ಗೋವಿಂದ ಭಟ್ಟರನ್ನು ಮೇಳದಲ್ಲಿ ಮುಂದುವರಿಸಲು ಇಚ್ಛಿಸುತ್ತಾರೆ.

ಗೋವಿಂದ ಭಟ್ಟರ ಆರ್ಥಿಕ ಸ್ಥಿತಿ ಈಗಲೂ ತುಂಬಾ ಸುಧಾರಣೆ ಕಂಡಿಲ್ಲ. ಅವರಿಗಾದಷ್ಟು ಸನ್ಮಾನ ಯಾರಿಗೂ ಆಗಿಲ್ಲ. ಆದರೆ ಕಲಾವಿದರಿಗೆ ಬೇಕಾದದ್ದು ಶಾಲು ಮತ್ತು ಹಣ್ಣುಗಳಲ್ಲಿ. ಆರ್ಥಿಕ ನೆರವು. ಸನ್ಮಾನ ಮಾಡುವವರು ಈ ಬಗ್ಗೆ ಗಮನ ಹರಿಸಬೇಕಾಗಿದೆ.

ಭಟ್ಟರ ಸಂಸಾರ ದೊಡ್ಡದು. ಅವರಿಗೆ ಮೂವರು ಮಕ್ಕಳು, ಮೂವರು ಸೊಸೆಯಂದಿರು ಮತ್ತು ಮೂವರು ಮೊಮ್ಮಕ್ಕಳು. ಎಲ್ಲರೂ ತಕ್ಕ ಮಟ್ಟಿಗೆ ಸುಖವಾಗಿದ್ದಾರೆ. ಭಟ್ಟರು ಮಣಿ ಮೇಖಲೆ, ಕನಕ ರೇಖೆ, ಕಾವೇರಿ ಮಹಾತ್ಮೆ, ಮೂರುವರೆ ವಜ್ರಗಳು ರಾಜಶೇಖರ ವಿಲಾಸ, ಮಹಾವೀರ ಸಮ್ರಾಟ ಅಶೋಕ, ನಹುಷೇಂದ್ರ ಎಂಬ ಏಳು ಯಕ್ಷ ಪ್ರಸಂಗಗಳನ್ನು ಬರೆದಿದ್ದಾರೆ. ಪೂರ್ವಕ್ಕೆ ಜಪಾನಿಗೆ, ಪಶ್ಚಿಮಕ್ಕೆ ಅಬುದಾಬಿ, ಬಹ್ರೈನ್, ದುಬಾಯಿಗಳಿಗೆ ಹೋಗಿ ಯಕ್ಷಗಾನ ಪ್ರದರ್ಶಿಸಿದ್ದಾರೆ. ದೆಹಲಿಯಲ್ಲಿ ರಾಷ್ಟ್ರಪತಿಯವರೆದುರು ಯಕ್ಷಗಾನ ಪ್ರದರ್ಶಿಸಿ ಶಹಬ್ಬಾಸ್ ಗಿರಿ ಪಡೆದಿದ್ದಾರೆ. ಗೋವಿಂದ ಭಟ್ಟರ ಜೀವನ ಚರಿತ್ರೆ ಯಕ್ಷೋಪಾಸನೆ ಮತ್ತು ಅಭಿನಂದನಾ ಗ್ರಂಥ ಸವ್ಯಸಾಚಿಯನ್ನು ಡಾı ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ (ರಿ.) ಸಂಪಾಜೆ ಕಲ್ಲುಗುಂಡಿ ಹೊರತಂದಿದೆ.

ಗೋವಿಂದ ಭಟ್ಟರಿಗೆ ಯಕ್ಷಗಾನ ಬಿಟ್ಟರೆ ಅನ್ಯಲೋಕವಿಲ್ಲ. ಯಕ್ಷಗಾನಕ್ಕಾಗಿ ಜೀವ ತೇದ ಮಹಾನ್ ಕಲಾವಿದ. ಗೋವಿಂದ ಭಟ್ಟರು ವೃದ್ಧಾಪ್ಯದಲ್ಲಿ ಸುಖಕರವಾಗಿರುವಂತೆ ನೋಡಿಕೊಳ್ಳಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿ.

ಚಿತ್ರಗಳು : ಮಹೇಶ್ ಕೃಷ್ಣ ತೇಜಸ್ವಿ , ಅಂತರ್ಜಾಲ

ಪ್ರತಿಕ್ರಿಯಿಸಿ