ಹೆಬ್ಬಂಡೆಯೂ ಮಿದು ಮಣ್ಣಾಗಿ : ರೂಪ ಹಾಸನ ಅವರ ಕಾವ್ಯ

ರೂಪ ಹಾಸನ ಅವರು ಕವಿತೆಯ ಕಸುಬುಗಾರಿಕೆ ಯಲ್ಲಿ ಸಾಕಷ್ಟು ದೂರ ಕ್ರಮಿಸಿದ್ದಾರೆ. ಮಹಿಳಾ ಕವಿತೆ ಕೂಡ ಭಿನ್ನ ನೆಲೆಗಳನ್ನು ಧರಿಸುತ್ತಿದೆ. ರೂಪ ಅವರು ತಮ್ಮ ಕವಿತೆಯ ತೆಕ್ಕೆಗೆ ಒಳಗುಮಾಡಿಕೊಂಡಿರುವ ಭಾಷಿಕ ವಿನ್ಯಾಸಗಳು ಪಲ್ಲಟಗೊಳ್ಳುತ್ತಲೇ ಇವೆ. ಮೊನ್ನೆ ತನಕ ಹೊಸ ಕವಿತೆಯನ್ನ ಗಮನಿಸಿದರೂ ಅರಿವಾಗುತ್ತದೆ.ಇವರ ಇದುವರೆಗಿನ ಐದು ಸಂಕಲನಗಳನ್ನು ಎಚ್ಚರದ ಓದಿಗೆ ಒಳಪಡಿಸಿದಾಗ ಕವಿತೆಗೆ ‘ಸ್ವಗತ ಕ್ರಮ’ ‘ಕಥನಕ್ರಮ’ ‘ಭಾವಗೀತಾತ್ಮಕತೆ’ಯಂಥ ಗುಣಗಳನ್ನು ಮೀರಿಯೂ ಅವರ ಕವಿತೆ ವಿಸ್ತಾರಗೊಂಡಿದೆ.

ಕವಿತೆಯಲ್ಲಿನ ಪ್ರಯೋಗ ಅಂದರೇನು? ಅದು ಕೇವಲ ಭಾಷೆಯನ್ನು ಬದಲು ಮಾಡುವುದೇ? ತಾನು ನಂಬಿದ ನಂಬಿಕೆಗಳನ್ನು ತಾನೇ ಪ್ರಶ್ನಿಸುತ್ತಾ ಸಾಗುವುದೇ? ಮಾಮೂಲಿ ಪ್ರತಿಮೆಗಳನ್ನು ಅಡ್ಡಾವಾಗಿ ಸೀಳಿ ಪುನರ್ ಕಟ್ಟುವುದೇ? ತಾವು ಬದುಕುತ್ತಿರುವ ಕಾಲಮಾನದ ಸಂಗತಿಗಳಿಗೆ ಎದುರಾಗುವುದೇ? ಎಂಬ ಪ್ರಶ್ನೆಗಳಿಗೆ ತಾಕಿದರೆ ಉತ್ತರ ಎಲ್ಲವೂ ಹೌದಲ್ಲವೇ ಎಂದು ಅನಿಸುತ್ತದೆ. ಆದರೆ ಈ ಯಾನದಲ್ಲಿ ಎಷ್ಟು ಜನ ಲೀನವಾಗಿದ್ದಾರೆ, ಅವರ ಕವಿತೆ ಏನನ್ನು ಅಭಿವ್ಯಕ್ತಿಸಲು ಹೊರಟಿದೆ ತಿಳಿಯುವುದಿಲ್ಲ.

ರೂಪ ಅವರನ್ನು ಹಿರಿಯ ಲೇಖಕಿ ಎಂದೋ, ಮಕ್ಕಳ ಪರ ಹಕ್ಕು ಕೇಳುತ್ತಿರುವ ಮಹಿಳೆಯೆಂದು ಕರೆದು ಅವರ ಬರಹಗಳನ್ನು ನೋಡುವುದು ಒಂದು ಬಗೆ. ಆ ಕ್ರಮಗಳನ್ನು ಗೌರವದಿಂದ ಕಂಡು ಅವರ ಕವಿತೆ ಅಭಿವ್ಯಕ್ತಿಸುತ್ತಿರುವ ನಿಜವಾದ ಕಾಳಜಿಗಳೇನು ಎಂಬುದನ್ನು ಅವಲೋಕಿಸುವುದೇ ಸರಿಯಾದ ದಾರಿ. ಅವರ ‘ಗಳಿಗೆ ಬಟ್ಟಲ ತಿರುವುಗಳಲ್ಲಿ’ ಎಂಬ ಆಸಕ್ತಿಕರ ಕಿರು ಕವಿತೆಗಳನ್ನು ಕೇವಲ ಹೆಣ್ಣಬ್ಬೊಳು ಬರೆದವು ಎಂದರೇ ಅದು ರೂಪ ಅವರಿಗೂ ಕನ್ನಡ ಕಾವ್ಯಕ್ಕೂ ಬಗೆಯುವ ವಂಚನೆ ಎಂದೇ ಭಾವಿಸುವೆ. ಇರಲಿ ಕಾವ್ಯವನ್ನು ಕಾವ್ಯವೆಂದೇ ಒಪ್ಪಿಕೊಂಡು ಬರೆಯುತ್ತಿರುವ ಇವರು ನಿಸರ್ಗದ ಪ್ರತಿಮೆಗಳನ್ನು ಸ್ವ ಗುರುತುಗಳಿಗೆ, ಲೋಕದ ತಲ್ಲಣಗಳಿಗೆ ಬಳಸಿಕೊಳ್ಳುವ ವಿಧಾನ ಮುಖ್ಯವಾದ ಸಂಗತಿ. ಇದುವರೆಗಿನ ಮಹಿಳಾ ಕವಿತೆಯನ್ನು ನಮ್ಮ ದೊಡ್ಡ ವಿಮರ್ಶಕರು ‘ಅಡುಗೆ ಮನೆ ಸಾಹಿತ್ಯ’ ಎಂದು ಕರೆದಿರುವುದು ಇಂದು ವ್ಯಂಗ್ಯಕ್ಕೆ ಗುರಿಯಾಗಿ, ಅದೊಂದು ಮೂಢನಂಬಿಕೆ ಯಾಗಿ ಕಾಣುತ್ತಿದೆ. ಹಲವು ದನಿಗಳು ಪ್ರವೇಶ ಪಡೆಯುತ್ತಿರುವ ಈ ಕಾಲಮಾನದಲ್ಲಿ ತಮ್ಮದೇ ಅಸ್ಮಿತೆಗಳ ಹುಡುಕಾಟದಲ್ಲಿ ಸಮರ್ಥವಾಗಿ ತೊಡಗಿಸಿಕೊಂಡಿದ್ದಾರೆ. ಕವಿತೆಯ ಗರ್ಭಕ್ಕೆ ಈಗ ಹಲ ಬಗೆಯ ಅನುಭವಗಳು ಸೇರಿಕೊಳ್ಳುತ್ತಿವೆ. ಆ ಅನುಭವಗಳು ನೆನಪು,ಸ್ವಚರಿತೆ, ಲೋಕಾನುಭವಗಳನ್ನು ಪರೀಕ್ಷಿಸುವಂತೆ ಮಾಡಿವೆ. ಮಹಿಳೆಯರು ಅಡುಗೆ ಮನೆಯ ಆಹಾರ ಚಿತ್ರಗಳನ್ನು ತರುತ್ತಾರೆ ಎಂದ ತಕ್ಷಣ ಅದು ಅಡುಗೆಮನೆ ಸಾಹಿತ್ಯ ಎಂದು ಕರೆಯಲಾಗುವುದಿಲ್ಲ.ಅಷ್ಟೊಂದು ಸರಳೀಕರಣ ಮಾಡುವ ಹಾಗಿಲ್ಲ. ರೂಪ ಅವರ ಅನೇಕ ಕವಿತೆಗಲಲ್ಲಿ ಈ ಬಗೆಯ ಪ್ರತಿಮೆಗಳು ಬಂದರೂ ಒಳಾರ್ಥಗಳು ಬದುಕನ್ನು ಭಿನ್ನ ಬಗೆಯಲ್ಲಿ ಶೋಧಿಸಿವೆ. ಅವರ ಮೊದಲ ಸಂಕಲನ ‘ಒಂದಿಷ್ಟು ಹಸಿ ಮಣ್ಣು’ ಸಂಕಲನದಲ್ಲೇ ಇದರ ಸೂಚನೆಗಳು ದಟ್ಟವಾಗಿವೆ. ಇದರ ಕವಿತೆಗಳಲ್ಲಿ ಮತ್ತೆ ಮತ್ತೆ ಬರುವ ಮಣ್ಣು ಹಸಿ ಯಾಗುವ ಪ್ರಕ್ರಿಯೆ, ಕಡಲು, ನದಿ, ಬಾಗಿಲು ಮಂತಾದ ಪ್ರತಿಮೆಗಳು ಅವರ ಕಾವ್ಯದ ತಾತ್ವಿಕತೆಯನ್ನು ರೂಪಿಸುವ ಜವಾಬ್ದಾರಿಯನ್ನು ಹೊತ್ತಿವೆ. ಏಕೆಂದರೆ ಅವರ ನಾಲ್ಕು ಸಂಕಲಗಳಲ್ಲಿ ಈ ಚಿತ್ರಗಳು ಬೇರೆ ಬೇರೆ ರೂಪಗಳನ್ನು ಧರಿಸುತ್ತಾಹೋಗಿವೆ. ಇದುವರೆಗೆ ಹೆಣ್ಣು ಮತ್ತು ಮಣ್ಣು ನಮ್ಮ ತಿಳುವಳಿಕೆಗೆ ಬಂದಿರುವುದು ಎರಡು ತೆರೆನಾದುದು. ತತ್ವಶಾಸ್ತ್ರೀಯ ನಲೆ ಮತ್ತು ಜೈವಿಕ ನಲೆಗಳು. ಇದು ನೇರ; ಆದರೆ ಇವರ ಕಾವ್ಯದಲ್ಲಿ ‘ಹಸಿ ಮಣ್ಣು’ ಜೀವಂತಿಕೆಯ ಪ್ರಕ್ರಿಯೆ ಎಂದು ಭಾವಿಸುವುದಕ್ಕೆ ಅಡ್ಡಿಯಿಲ್ಲ. ಹೆಣ್ಣಿನ ಸಂವಾದದ ಸೇತುವೆಯಾಗಿ, ಒಳಗಿನ ಮತ್ತು ಹೊರಗಿನ ಲೋಕಗಳನ್ನು ಎದುರುಗೊಳ್ಳುವ ಅಸ್ಮಿತೆಯಾಗಿ ಕಾಣುತ್ತದೆ. ಮಣ್ಣಿನ ಚಿತ್ರಗಳನ್ನು ಕೇವಲ ಪದಗಳಲ್ಲಿ ಬಂಧಿಸಿದ್ದರೆ ರೂಪ ಅವರ ಕಾವ್ಯಕ್ಕೆ ಅಷ್ಟೇನೂ ಶಕ್ತಿ ಬರುತ್ತಿರಲಿಲ್ಲ. ಆದರೆ ಶಬ್ಧಗಳ ಲ್ಲಿ ಒಳಹೊಕ್ಕಿರುವ ಸ್ವ ಚಿಂತನೆ: ಆ ಮೂಲಕ ಹೊರಗಿನ ತಲ್ಲಣಗಳನ್ನು ಅನುಭವಗಳ ಬೆನ್ನಲ್ಲಿ ಅನಾವರಣ ಮಾಡುವುದಕ್ಕೆ ಆ ಬಗೆಯ ಚಿತ್ರಗಳಿಗೆ ಸಾಧ್ಯವಾಗಿದೆ. ಮಣ್ಣು ನಮ್ಮ ಜನಪದರ ಲೋಕದೃಷ್ಟಿಯಲ್ಲಿ ಹಲವು ತೆರನಾದ ಭಾವಗಳಿಗೆ ಒಳಗಾಗಿದೆ. ‘ಹಾಲುಮತ ಪುರಾಣ’ ಎಂಬ ಜನಪದ ಪುರಾಣದಲ್ಲಿ ಮಣ್ಣು ಸೃಷ್ಟಿಶೀಲಕ್ಕೆ ಗುರುತು. ಅಲ್ಲಿ ಮಹಿಳೆಯೇ ಪ್ರಧಾನ. ಆ ಪುರಾಣವನ್ನು ಶಾಕ್ತ ಪಠ್ಯವೆಂದರೂ ಆದೀತು. ಲೋಕವೆಲ್ಲವೂ ಜಲಾವೃತವಾಗಿದ್ದಾಗ ಶಿವ ಪಾರ್ವತಿಯರು ಭೂಲೋಕವನ್ನು ಹಾಗು ಮನುಷ್ಯರನ್ನು ಸೃಷ್ಟಿಸಲು ಸಂಚಾರ ಮಾಡುತಾರೆ.್ತ ಒಣಗಿರುವ ಮಣ್ಣಿಗೆ ಪಾರ್ವತಿ ತನ್ನ ಮೊಲೆಹಾಲಿನಿಂದ ಹಸಿಮಾಡಿ ಎರಡು ಬೊಂಬೆಗಳನ್ನು ಮಾಡುತ್ತಾಳೆ. ಅದರಲ್ಲಿ ಒಂದು ಹೆಣ್ಣು ಬೊಂಬೆ: ಮತ್ತೊಂದು ಗಂಡು ಬೊಂಬೆಯದು. ಶಿವ ಅವುಗಳಿಗೆ ಜೀವಕೊಡುತ್ತಾನೆ. ಅವೇ ಮುದ್ದವ್ವ, ಮದ್ದುಗೊಂಡ ಇವರೇ ಆದಿ ಮನುಷ್ಯರು ಎಂಬುದು ಆ ಪುರಾಣದ ನಂಬಿಕೆ. ಇಲ್ಲಿ ಮಣ್ಣನ್ನು ಜೀವಂತಿಕೆ, ಫಲವಂತಿಕೆಗೆ ಸಾಂಕೇತಿಕ ಗುರುತುಗಳನ್ನು ನೀಡಿದರೂ ಪಾರ್ವತಿಯ ಮೊಲೆಹಾಲು ಮನುಷ್ಯನ ಹುಟ್ಟಿಗೆ ಕಾರಣ. ಮೊಲೆಹಾಲು ಮತ್ತು ಮಣ್ಣು ಪೂರ್ಣತ್ವವನ್ನು ಧರಿಸಿವೆ: ಇದಕ್ಕೆ ಶಿವ ಎಂಬ ಗಂಡಸಿನ ಬೆಂಬಲವೂ ಇದೆ. ಈ ಪ್ರಕ್ರಿಯೇ ಗಂಡು-ಹೆಣ್ಣಿನ ಅಧ್ವೈತ ಕ್ರಮ. ‘ಹೊಂದಾಣಿಕೆ’ ಯ ದಾರಿ ಎಂದು ಕರೆದರೂ ಆದೀತು. ಇದೇ ಪುರಾಣದಲ್ಲಿ ಅಮೋಗಿಸಿದ್ದ ಎಂಬ ಸಿದ್ದನು ಪಾರ್ವತಿಯ ಬೆವರಿನಿಂದ ಹುಟ್ಟುತ್ತಾನೆ. ನಿಸರ್ಗ ಮತ್ತು ಹೆಣ್ಣು ಭೇದವಲ್ಲ ಎಂಬುದು ಹಳೇಮಾತು. ಜನಪದರ ತತ್ವಜ್ಞಾನವೆ ಹಾಗೆ. ಬಹುತೇಕ ಕಡೆ ಅದು ಗಂಡು ಹೆಣ್ಣುನ್ನು ಸೆಕ್ಯೂಲರಾಗಿ ನೋಡುತ್ತದೆ. ಇದರ ಪರಿಕಲ್ಪನೆಗೆ ನಾವು ಸ್ತ್ರೀವಾದಿ ಮನೋಭಾವವನ್ನು ತುರುಕುವುದಕ್ಕೆ ಸಾಧ್ಯವಾಗುವುದಿಲ್ಲ. ಇಷ್ಟು ಹೇಳಲು ಕಾರಣ ರೂಪ ಅವರ ಕಾವ್ಯ, ಜೀವಂತಿಕೆಯ ಪ್ರತಿರೂಪವಾದ ಹಸಿಮಣ್ಣನ್ನು ದಕ್ಕಿಸಿಕೊಳ್ಳಲು ಎದುರಿಸುತ್ತಿರುವ ಸವಾಲುಗಳನ್ನು ವಿವರಿಸಲು: ಹಸಿಮಣ್ಣಿನಿಂದ ಜನಪದರ ಪಾರ್ವತಿಗೆ ಸಿಕ್ಕ ಗೆಲುವು ನಮ್ಮ ಕಾಲದ ರೂಪ ಅವರ ಕವಿತೆಗೆ ಸಿಕ್ಕಿದಯೇ ಎಂಬುದನ್ನು ಕಂಡುಕೊಳ್ಳಲು. ಅದು ಬೇರೆ ಇದು ಬೇರೆ ಎಂದು ಮೇಲುನೋಟಕ್ಕೆ ಅನಿಸಬಹುದು. ಆದರೆ ಹೆಣ್ಣಿನ ಸೃಜನಶೀಲತೆಗೆ ಅಡ್ಡಿಯಾಗುವ ಹಲ ಬಗೆಯ ಅಡೆತಡೆಗಳನ್ನು ರೂಪ ಅವರು ತಮ್ಮದೇ ನುಡಿಗಟ್ಟಿನಲ್ಲಿ ಅಭಿವ್ಯಕ್ತಿಸಲು ಯತ್ನಿಸಿದ್ದಾರೆ.

ವೈಚಾರಿಕತೆ ಯೆಂಬುದು ಕವಿತೆಯಲ್ಲಿ ನೇರವಾಗಿ ಬಂದರೂ ಅಪಾಯವೇ. ಏಕೆಂದರೆ ಅಲ್ಲಿ ಕವಿತ್ವಕ್ಕಿಂತ ವಿಚಾರ ಸರಣಿಯ ಮಾತಿನ ಶೈಲಿ ಮಡುಗಟ್ಟಿರುತ್ತದೆ.

ವೈಚಾರಿಕತೆ ಯೆಂಬುದು ಕವಿತೆಯಲ್ಲಿ ನೇರವಾಗಿ ಬಂದರೂ ಅಪಾಯವೇ. ಏಕೆಂದರೆ ಅಲ್ಲಿ ಕವಿತ್ವಕ್ಕಿಂತ ವಿಚಾರ ಸರಣಿಯ ಮಾತಿನ ಶೈಲಿ ಮಡುಗಟ್ಟಿರುತ್ತದೆ. ಈ ಎಚ್ಚರ ಇವರ ಕವಿತೆಯ ಉದ್ದಕ್ಕೂ ಕಾಣಬಹುದು. ಹಾಗಾಗಿಯೇ ನಿಸರ್ಗದ ಚಿತ್ರಗಳನ್ನು ತರುವಾಗ ನವೋದಯದ ಸ್ವರೂಪವನ್ನು ಬಿಡುತ್ತಾರೆ. ಪ್ರತಿಯೊಂದು ನಿಸರ್ಗದ ಚಿತ್ರಗಳಲ್ಲೂ ಹೆಣ್ಣು ಇದ್ದಾಳೆ. ಅಲ್ಲಿ ಬರುವ ನದಿ, ಕಡಲು, ಗಾಳಿ, ಮರ ಎಲ್ಲವುಗಳಲ್ಲಿ ಹೆಣ್ಣಿನ ಇಂದಿನ ದಂದುಗಗಳನ್ನು ಅನಾವರಣ ಮಾಡುವ ಕಲೆಗಾರಿಕೆ ಸ್ಪಷ್ಟವಾಗಿದೆ. ಈ ಬಗೆಯ ನಿಸರ್ಗವೇ ಭಿನ್ನ ವೇಷಗಳಲ್ಲಿ ಅಡುಗೆಮನೆಯನ್ನು ಪ್ರವೇಶ ಮಾಡುತ್ತದೆ. ಅಲ್ಲಿ ಒಳಜಗತ್ತು ಮತ್ತು ಹೊರಜಗತ್ತುಗಳು ಹೊಂದಾಣಿಕೆ- ತಿಕ್ಕಾಟಗಳು ಮುನ್ನೆಲೆಗೆ ಬರುತ್ತವೆ. ತಾತ್ವಿಕತೆಯನ್ನು ಬಹಳ ಸಾರೆ ವಸ್ತುವೇ ನಿರ್ಧಾರಮಾಡುತ್ತಿರುತ್ತದೆ ಎಂಬುದನ್ನು ಡಿ.ಆರ್. ನಾಗರಾಜ್ ಅವರು ಬಹಳ ಹಿಂದೆಯೇ ಹೇಳಿದ್ದರು. ಹಾಗಾಗಿ ವಸ್ತುವನ್ನು ಸರಿಯಾಗಿ ಗ್ರಹಿಸಬೇಕು. ರೂಪ ಅವರು ಬದುಕನ್ನು ಸ್ವಿಕಾರದ ನೆಲೆಯಲ್ಲಿಯೇ ಕಾಣುತ್ತಾರೆ ಹೊರೆತು ಸಂಘರ್ಷದ ಆಯಾಮದಲ್ಲಿ ಅಲ್ಲ. ಆದರೆ ಹೀಗೆ ಹೇಳುವಾಗಲೂ ಎಚ್ಚರ ಇರಲೇಬೇಕು. ಸ್ವೀಕಾರ ಎಂದರೆ ಸೋಲನ್ನು ಒಪ್ಪಿಕೊಳ್ಳುವುದಲ್ಲ, ಬದಲಿಗೆ ತನ್ನ ಸೋಲನ್ನು ಬಯಸುವ ಸಮಾಜಕ್ಕೆ ತನ್ನ ಗೆಲುವಿನ ಅರಿವನ್ನು ಮೂಡಿಸುವುದು. ಈ ಬಗೆಯ ತಿಳುವಳಿಕೆಯನ್ನು ತರಲು ಕೆಲವೊಮ್ಮೆ ತಣ್ಣನೆಯ ಸಂಘರ್ಷಕ್ಕೆ ಇಳಿಯುತ್ತಾರೆ. ಅದು ತಂಗಾಳಿಯಲ್ಲಿ ನಡೆಸುವ ಸಂವಾದವೂ: ಬಿರುಗಾಳಿಯಲ್ಲಿ ನಡೆಸುವ ಸಂವಾದವೂ ಆಗಬಹುದು. ಅಲ್ಲಿ ಸಿಟ್ಟು, ಕೋಪ,ಕೊನೆಗೆ ತಾಳ್ಮೆಗಳು ಅಂತರಂಗದಲ್ಲಿ ಸ್ವಗತವಾಗಿ ಮಡುಗಟ್ಟಿರುತ್ತವೆ.

‘ನನ್ನದೇ ಕಲ್ಪನೆ ಬೆರೆಸಿ
ಸುಂದರ ಮನೆಯಾಗುತ್ತೇನೆ
ಚಿತ್ರ ವಿಚಿತ್ರ ಕಲಾಕೃತಿಯಾಗುತ್ತೇನೆ
ಮಡಿಕೆ, ಕುಡಿಕೆ, ಕುಂಡವಾಗುತ್ತೇನೆ
ಎಲ್ಲಾ ಒಂದಿಷ್ಟೇ ಇಷ್ಟು ಹಸಿಮಣ್ಣಿನಿಂದ
ಹಸಿಮಣ್ಣಿನ ಪ್ರಶ್ನೆಯಷ್ಟೆ( ಒಂದಿಷ್ಟು ಹಸಿಮಣ್ಣು)

ಈ ಬಗೆಯ ಮಾತುಗಳು ತನ್ನನ್ನು ಒಳಗು-ಹೊರಗು ಏಕಾಂತ ಮಾಡಿರುವ ಸ್ವಾರ್ಥವನ್ನು ಒಡೆಯಲು ಪ್ರಯತ್ನಮಾಡುತ್ತವೆ. ರೂಪ ಅವರು ಪ್ರಕೃತಿಯ ಹಲವು ಅಂಗಗಳಾದ ನೀರು, ಆಕಾಶ, ಭೂಮಿ, ಹಕ್ಕಿ, ಹಾಡು, ಮುಂತಾದ ಪ್ರತಿಮೆಗಳಿಗೆ ತಕ್ಕ ಶಾಬ್ಧಿಕ ಶಕ್ತಿಯನ್ನು ರೂಪಿಸಿಕೊಂಡಿದ್ದಾರೆ. ಅವುಗಳಿಗೆ ತನ್ನತನದ ಗುರುತುಗಳ ಒಳಾರ್ಥವನ್ನು ತುಂಬುವಾಗ ಚಿಂತನಾಕ್ರಮ ಗಟ್ಟಿಯಾಗುತ್ತದೆ. ಬೊಗಸೆಯಲ್ಲಿ ನೀರಿಲ್ಲದಿದ್ದರೂ ತೇವವನ್ನು ನಂಬುವ ಇವರ ಕವಿತೆ ಬದುಕನ್ನು ಹಾಗೆಯೇ ಸ್ವೀಕರಿಸುತ್ತದೆ. ರೂಪ ಅವರ ಕಾವ್ಯದ ಹೆಣ್ಣು ತನ್ನ ತಿಳುವಳಿಕೆಯನ್ನು ಮಾಗಿಸಿಕೊಳ್ಳುತ್ತಾ ಸಾಗುವುದು ಈ ಬಗೆಯ ಚಿತ್ರಗಳಿಂದ. ಮನಸ್ಸಿನ ಒಳ ಸಂವಹನದ ವಿಧಾನಗಳು ಇವರ ಕಾವ್ಯದ ಮುಖ್ಯ ಕಾಳಜಿ. ಹಸಿ ಮಣ್ಣು ‘ಆಗುವ’ ಪ್ರಕ್ರಿಯೇ ಅದರ ಆಳತೆಯನ್ನು ಶೋಧಿಸುವ ಬಗೆಗಳು ಪಲ್ಲಟವಾಗುತ್ತಾ ಹೋಗುತ್ತವೆ. ‘ಮಣ್ಣನಾಳದಲ್ಲೇ ಉಳಿದಹೊದ/ ತನ್ನತನವನ್ನು ಹುಡುಕುತ್ತಿದ್ದೇನೆ’ ಎಂಬ ಸಾಲುಗಳನ್ನು ಗಮನಿಸಿದಾಗ ಮಹಿಳೆಯ ಅಸ್ಮಿತೆಯ ಹುಡುಕಾಟಗಳಿಗೆ ಗುರಿಯ ತಾವಿನ ಗುರುತುಗಳು ಇನ್ನು ಅಸ್ಪಷ್ಟತೆಯನ್ನು ಸೂಚಿಸುತ್ತವೆ. ಆದರೆ ಅವರು ಇಷ್ಟಕ್ಕೇ ಸೀಮಿತವಾಗುವುದಿಲ್ಲ. ಮಣ್ಣಿನ ಅಗೆಯುವ ಶೋಧ ನಡೆಯುತ್ತಲೇ ಹೋಗಿದೆ. ‘ಸಂತನಂತೆ ಹಿಮಾಲಯದೆತ್ತರಕ್ಕೆ/ ಏರಿ ನಿಲ್ಲುವುದು ಸುಲಭ’ ಎಂಬ ಸಾಲುಗಳಿಂದ ಪುರುಷನ ಆಧ್ಯಾತ್ಮಿಕ ಸಾಧನೆಗಳನ್ನು ಗುಮಾನಿಯಿಂದ ನೋಡುತ್ತಾರೆ ಎನ್ನುವುದಕ್ಕಿಂತ ಅದರ ಮಹತ್ತರತೆಯನ್ನು ಹೆಣ್ಣಿನ ಬದುಕಿನ ಸಂಘರ್ಷಗಳ ಮುಂದೆ ಅದನ್ನು ಗೌಣಗೊಳಿಸುವ ಬಗೆ ಮುಖ್ಯವಾಗುತ್ತದೆ. ಅದೇ ಕವಿತೆಯಲ್ಲಿ ಬರುವ ಸಾಲುಗಳನ್ನು ಗಮನಿಸಿ.

‘ಬೊಗಸೆ ತುಂಬಿಕೊಳ್ಳುತ್ತಾ ಹೀರಿ
ನಿಧಾನಕ್ಕೆ ಹಸಿಮಣ್ಣೇ ಆಗುವ ರೀತಿ
ಜೀವಂತಿಕೆಗೆ
ಮುಖಾಮಖಿಯಾಗುವ ಪ್ರೀತಿ
ಆಗಿಬಿಡುವುದು ಕಷ್ಟ-ಸಾಧ್ಯ! ( ಬಾಗಿಲಾಚೆಯ ಮೌನ)

ಮನ ಮಾಗುವುದೆಂದರೆ ಏನು? ಇನ್ನೊಬ್ಬರನ್ನು ಪೀಡಿಸುವುದೇ? ಅಥವಾ ಎಲ್ಲರಿಂದ ನಿರ್ಲಿಪ್ತನಾಗುವುದೇ? ಇದಾವುದು ಇವರ ಕಾವ್ಯಕ್ಕೆ ಅಂಟಿಕೊಂಡಿಲ್ಲ. ಬದಲಿಗೆ ಹೆಣ್ಣಿನ ಸಹಜತೆಯನ್ನು ಇರುವ ಹಾಗೆ ಒಪ್ಪಿಕೊಳ್ಳುವುದೇ ಆಗಿದೆ. ಅಥವಾ ತನ್ನನ್ನು ಈ ರೀತಿಯಲ್ಲಿ ನೋಡು ಎಂದು ಸಮಾಜಕ್ಕೆ ದಾಟಿಸುವುದೇ ಆಗಿದೆ. ಅದನ್ನೇ ಅವರ ಕವಿತೆಯ ಪ್ರತಿಮೆಗಳಲ್ಲಿ ಅಭಿವ್ಯಕ್ತಿಸುವುದಾದರೆ ಕಡಲಾಗಿ, ನದಿಯಾಗಿ, ಬಾಗಿಲಾಗಿ ನೋಡು ಎಂದು ಆಗ್ರಹಿಸುವುದು. ಆಗ್ರಹಿಸುವುದು ಎಂಬ ಪದ ಇಲ್ಲಿ ಆದೇಶವಲ್ಲ ಒಳಜಗತ್ತಿನ ತೀವ್ರತೆಯನ್ನು ಗ್ರಹಿಸುವುದು. ತನ್ನ ಕನ್ನಡಿಯಲ್ಲಿ ತಾನು ನೋಡಿಕೊಳ್ಳುವುದರ ಜೊತೆಗೆ ಇತರರನ್ನು ತನ್ನಡೆಗೆ ಸೆಳೆಯುವುದು.

ಪುರುಷ ಸ್ವಾತಂತ್ರ್ಯವಾದವನ್ನು ವಿರೋಧಿಸಲು ರೂಪ ಅವರು ಲೈಂಗಿಕ ಪರಿಭಾಷೆಯನ್ನು ಎಲ್ಲೂ ಬಳಸುವುದಿಲ್ಲ. ಇದು ಅವರ ಆಯ್ಕೆ ಅಲ್ಲ. ಅಥವಾ ಪುರಾಣ ಮಹಿಳೆಯರ ಬೆನ್ನುಗಳನ್ನು ಹೆಚ್ಚು ತಾಕುವುದು ಇಲ್ಲ. ಕುಟುಂಬ ವ್ಯವಸ್ಥೆಯನ್ನು ಧಿಕ್ಕರಿಸುವುದು ಇಲ್ಲ. ತಮ್ಮ ಅಸ್ಮಿತೆಯ ನುಡಿಗಟ್ಟನ್ನು ನಿಸರ್ಗದ ಚಿತ್ರಗಳ ಮುಖೇನವೇ ತೆರದಿಡಬಲ್ಲರು. ಇವರು ಸೂರ್ಯನನ್ನು ಗಂಡು ಎಂದು ಭಾವಿಸಿದರೂ ಅವನೂ ಮಾಗುವ ಬಯಕೆಯನ್ನು ವ್ಯಕ್ತಪಡಿಸುತ್ತಾರೆ. ಚಂದ್ರನೂ ಕೂಡ ಆಳಕ್ಕಿಳಿಯುವ ಸೂಚನೆಯನ್ನು ನೀಡುತ್ತಾರೆ.

ಮತ್ತೊಂದು ಕಡೆ ‘ಗೋಡೆಗಳಲ್ಲಿದ ನಾನು ನಾನೇ?’ ಎಂಬ ಮಾತುಗಳು ಬರುತ್ತವೆ. ಗಂಡಿನ ಒಳ ಕ್ರೌರ್ಯವನ್ನು ನೇರವಾಗಿ ಹೆಚ್ಚು ವಿರೋಧಿಸುವುದಿಲ್ಲ. ಕನಸುಗಳನ್ನು ಸದಾ ಕದಿಯುವ ಮನಸುಗಳಿಗೆ ಅವರು ‘ದಾರಿಯಾಚೆಗಿನ ಬದುಕು ಕದ್ದವರೆ/ ನನ್ನ ಕನಸು ಕದಿಯುವಿರೇ?’ ಎಂದು ಕೇಳುತ್ತಾರೆ. ಬಾಗಿಲು ಮತ್ತು ಕಡಲು ಇವರ ಕವಿತೆಯಲ್ಲಿ ಬರುವ ಬೇರೆ ಪ್ರತಿಮೆಗಳು. ಇವರೆಡೂ ಒಳಜಗತ್ತು- ಹೊರಜಗತ್ತುಗಳನ್ನು ಪ್ರತಿನಿಧಿಸುತ್ತವೆ ಎಂದರೆ ಅಡ್ಡಿ ಇಲ್ಲ. ಬಾಗಿಲಹೊರಗೆ ಬಯಲಿದ್ದರೆ ಒಳಗೆ ಕತ್ತಲು-ಬೆಳಕುಗಳ ತಿಕ್ಕಾಟವೂ ಇರಬಹುದು. ಇಷ್ಟಿದ್ದರೂ ಅದು ತೆರದ ಬಾಗಿಲು. ಬಾಗಿಲಾಚೆಯ ಮೌನಕ್ಕೂ ಇಲ್ಲಿದೆ ಎಚ್ಚರ.

‘ಇಂದಲ್ಲ ನಾಳೆ ನನ್ನ ತೆಕ್ಕೆಗೇ
ಬಂದು ಬೀಳುವೆಯೆಂಬ ಭರವಸೆಯಿಂದ
ನನ್ನದೆಯೊಳಗೆ ನಿನ್ನ ಪ್ರತಿರೂಪವಿದೆ
ಬಿಟ್ಟು ಎಲ್ಲಿ ಹೋಗುವೆ ಬರದೆ?’ (ಬಾಗಿಲಾಚೆಯ ಮೌನ)

ಮಾನಸಿಕ ಸಂವಹನ ಎಂದರೆ ಇದೆ ಅಲ್ಲವೆ. ಆದರೆ ಈ ಕ್ರಮ ಸಮಾಜದೊಂದಿಗೆ ತನ್ನನ್ನು ಗುರಿತಿಸಿಕೊಳ್ಳುವುದರ ಬದಲಿಗೆ ತನ್ನತ್ತ ಸಮಾಜವನ್ನೇ ಸೆಳೆಯಬಹದಾದ ಬಗೆಯು ಇರಬಹುದು. ಅವರ ಮೊದಲ ಮೂರು ಸಂಕಲನಗಳು ಆಂತರ್ಯದ ಮೂಲಕವೇ ಹೆಚ್ಚು ಮಾತಾಡಿವೆ. ಬಹುಪಾಲು ಸಮಾಜಕೇಂದ್ರದಿಂದ ಹೊರಡುವುದಿಲ್ಲ. ಕುಟುಂಬ ವ್ಯವಸ್ಥೆಯನ್ನು ತೀರಾ ಕಟೆಕಟೆಯಲ್ಲಿ ನಿಲ್ಲುಸುವುದಿಲ್ಲ. ಭಾವನಾತ್ಮಕತೆಯಿಂದ ಸಾಗಿ ಒಳಚಿಂತನೆಯನ್ನು ಪ್ರರೇಪಿಸಬಲ್ಲ ಕವಿತೆಗಳನ್ನು ಆರಂಭದಲ್ಲಿ ನೀಡಿದ್ದಾರೆ. ಮಹಿಳಾ ಕಾವ್ಯವನ್ನು ವಿಶಿಷ್ಟ ವಾಗಿ ಅಧ್ಯಯನ ಮಾಡಿರುವ ಎಚ್.ಎಸ್.ಆರ್.ಅವರು ‘ ‘ದೇಹದ ಸತ್ಯ,’ ಭಾವದ ಸತ್ಯ’ ಮತ್ತು ‘ಸಮಾಜದ ಸತ್ಯ’ಗಳನ್ನು ಕವಿತೆಯೊಳಗೆ ಬೆರೆಸುವ ಹದವನ್ನು ಕಂಡುಕೊಳ್ಳುವುದು ಕಡುಕಷ್ಟ’. ಎಂದು ಅಭಿಪ್ರಾಯ ಪಡುತ್ತಾರೆ.( ಪು89, ಕಣ್ಣ ಹನಿಗಳೆ ಕಾಣಿಕೆ) ಇದು ನಿಜವೂ ಕೂಡ. ಏಕೆಂದರೆ ಮಹಿಳಾ ಕಾವ್ಯ ಇವುಗಳಲ್ಲಿ ಒಂದನ್ನು ಆವಾಹಿಸಿಕೊಂಡಿರುತ್ತದೆ, ಇಲ್ಲವೇ ಕ್ಚಚಿತ್ತಾಗಿ ಮೂರನ್ನು ಒಳಗುಮಾಡಿಕೊಂಡಿರುತ್ತದೆ. ಕೆಲವೊಮ್ಮ ರೂಪ ಅವರ ಕವಿತೆಗಳು ಭಾವದ ಸತ್ಯಗಳನ್ನೇ ಸಮಾಜದ ಸತ್ಯಗಳನ್ನಾಗಿ ಪಡೆಯಲು ಯತ್ನಿಸುತ್ತದೆ.ದಾಂಪತ್ಯ, ಕುಟುಂಬ, ಗಂಡನೊಂದಿಗಿನ ವ್ಯಾಜ್ಯೆಗಳು ಇವರಲ್ಲಿ ಅಷ್ಟಾಗಿ ಜಾಗ ಪಡೆದಿಲ್ಲ ಎನ್ನಬಹುದು. ಬೇರೆಯವರ ಕವಿತೆಗಳ ಹಾಗೆ ಇವರ ಕವಿತೆಗಳು ಉತ್ತಮ ಪುರುಷ (ನನ್ನ) ಮಾದರಿಯಲ್ಲಿ ನುಗ್ಗಿವೆ. ಆದರೆ ಇತ್ತೀಚೆಗೆ ಬಂದ ‘ತನ್ನಷ್ಟಕ್ಕೆ’ ಕವಿತೆಗಳಲ್ಲಿ ಅದನ್ನು ಮೀರಲು ಯತ್ನಿಸಿದ್ದಾರೆ. ಇವರಲ್ಲಿ ನಿಸರ್ಗದ ಪ್ರತಿಮೆಗಳು ಸೌಂದರ್ಯದ ಮೀಮಾಂಸೆಯಲ್ಲಿ ಬರುವುದಿಲ್ಲ. ಇದು ಮಹಿಳಾ ಕಾವ್ಯದ ಲಕ್ಷಣಗಳಲ್ಲಿ ಒಂದೆಂದೂ ಧಾರಾಳವಾಗಿ ಹೇಳಬಹುದೆನೋ. ಆದರೂ ಇದರಲ್ಲಿನ ಅಪಾಯವೆಂದರೆ ವಸ್ತುವಿನ ಪುನರಾವರ್ತನೆ. ತನಗೆ ತಾನೇ ಮೀರುವ ಸಾಮಾಥ್ಯ ಈಚಿನ ಕವಿತೆಗಿದೆ. ರೂಪ ಅವರಲ್ಲಿ ಕೆಲವೊಮ್ಮ ಕಡಲು ಮತ್ತು ಬಾಗಿಲು ಏಕೀಭವಿಸುತ್ತವೆ.

‘ನಿನ್ನ ಉಪ್ಪುಪ್ಪು ನೀರಿನಲಿ
ಗಾಢ ಬಣ್ಣಗಳ ಮಾಡಿ
ಈ ತಟಸ್ಥ ಬದುಕಿಗೆರಚಿಕೊಳ್ಳುತ್ತೇನೆ
ಕೆಲ ಕ್ಷಣಗಳಾದರೂ ನಾನು ಕಡಲಾಗುತ್ತೇನೆ! ( ಬಾಗಿಲಾಚೆಯ ಮೌನ)

ಇಲ್ಲಿ ‘ತಟಸ್ಥ ಬದುಕು’ ಮತ್ತು ‘ಕಡಲಾಗುತ್ತೇನೆ’ ಎಂಬ ನುಡಿಗಟ್ಟುಗಳು ಹೆಣ್ಣಿನ ವೈಯಕ್ತಿಕ ಅನುಭವಗಳ ಚರಿತೆಯನ್ನೇ ಬಯಲುಮಾಡುತ್ತವೆ. ಒಂದು ಪರಂಪರೆಯಿಂದ ಸಾಗಿದ ‘ಬಂಧನ’ ಮತ್ತೊಂದು ತಾನು ಸಾಧಿಸುವ ‘ಸ್ವಾತಂತ್ರ್ಯ ಅಥವಾ ಬಿಡುಗಡೆ. ಇಡೀ ಕವಿತೆಯಲ್ಲೆ ಕ್ರಿಯಾಪದಗಳು ನುಗ್ಗಿವೆ. ಅವು ‘ಕಂಡುಕೊಳ್ಳುವ’ ಪ್ರಕ್ರಿಯೆಯಲ್ಲಿ ಸಾಗುತ್ತಾ ಹೋಗಿವೆ. ಮಹಿಳಾ ಕಾವ್ಯದ ಬಹಳ ಮುಖ್ಯ ಅಂಶವೆಂದರೆ ತನ್ನನ್ನು ತಾನು ಸ್ವಾಂತನಗೊಳಿಸಿಕೊಳ್ಳುವುದು. ಅದು ಎರಡು ಬಗೆಯಲ್ಲಿ ಬರುತ್ತದೆ. ಕವಿತೆಯ ಆಚೆ ಇರುವ ವ್ಯಕ್ತಿ ಮತ್ತೊಬ್ಬರು ಕವಿತೆಯ ಒಳಗೆ ಇರುವ ವ್ಯಕ್ತಿ. ಈಗ ನೋಡಿ;

‘ನೋಡಿಲ್ಲಿ ನಿನ್ನೊಳಗಿನ ಈ
ಕಡಲಿಗೆಷ್ಟೊಂದು ಬಾಗಿಲು
ಬಿಡು ರಕ್ತಕ್ಕಂಟಿದ
ಓಬೀರಾಯನ ಕಾಲದ ಪುರಾಣ
ಮೊಗೆ ಮೊಗೆದು ಹೀರು
ಈ ನೀರು.’ ( ಕಡಲಿಗೆಷ್ಟೊಂದು ಬಾಗಿಲು)

ಈ ಕ್ರಮದಲ್ಲಿ ಮಹಿಳಾ ಲೋಕಕ್ಕೆ ಅಂಟಿದ ಪರಂಪರೆಯ ಒಳ ಕ್ರೌರ್ಯಗಳನ್ನು ತಣ್ಣಗೆ ವಿರೋಧಿಸುವ ಗುಣವಿದೆ. ಈ ಸಂಕನಲದಲ್ಲಿ ಈ ಬಗೆಯ ಹಲವು ಕವಿತೆಗಳಿವೆ.ತನ್ನನ್ನು ತಾನು ಒಡ್ಡಿಕೊಂಡೇ ಮತ್ತೆ ಹೊಸದಾಗುವ ಬಗೆ ಸ್ತ್ರೀವಿಶಿಷ್ಟತೆ. ಹಾಗಾಗಿಯೇ ಇವರಿಗೆ ನದಿ,ಕಡಲು, ಸೂಜಿ ಮುಂತಾದ ಪ್ರತಿಮೆಗಳನ್ನು ಭಿನ್ನವಾಗಿ ದುಡಿಸಿಕೊಳ್ಳಲು ಸಾಧ್ಯವಾಗಿದೆ. ಅಡುಗೆ ಮನೆಯ ಚಿತ್ರಗಳಲ್ಲಿ ಬಹಳ ಮುಖ್ಯವಾದ ರೂಪಕವನ್ನು ತರುತ್ತಾರೆ. ಅದು ‘ ಮಸಿಬಟ್ಟೆ’. ಇದು ಜನಪದರ ನುಡಿಗಟ್ಟು. ಕೊಳೆಯಾದಂತೆಲ್ಲ ಮತ್ತೆ ಮತ್ತೆ ಬಳಸುವ ವಸ್ತು. ರೂಪ ಅವರು ಮಸಿಬಟ್ಟೆಯನ್ನು ಮಹಿಳಾ ವ್ಯಕ್ತಿತ್ವದ ಶಕ್ತಿಯನ್ನಾಗಿ ಮಾಡಿಕೊಂಡಂತೆ ಕಾಣುತ್ತದೆ.

‘ಹರಿದ ಸೀರೆಯ ತುಂಡು
ಅಂಗಿ ಲಂಗದ ಚೂರು
ಉಟ್ಟು ಬಿಟ್ಟಂತ ಹತ್ತಿಯರಿವೆಯ
ಕೊನೆಯ ಪುಟಿಗೋಸಿಯಿವಳು’. (ಕಡಲಿಗೆಷ್ಟೊಂದು ಬಾಗಿಲು)

ಶೋಷಣೆ ಎಂಬ ದೊಡ್ಡ ವಿನ್ಯಾಸವನ್ನು ಈ ಬಗೆಯ ಮನೆಯ ಅಂತಸ್ಥ ರೂಪಕಗಳಲ್ಲಿ ಕಟ್ಟಿಕೊಡುವುದು ಸುಲುಭವಲ್ಲ. ಸಿಟ್ಟನ್ನು ಕವಿತೆಯಲ್ಲಿ ಅತಿರೇಕಕ್ಕೆ ತಲುಪದ ಹಾಗೆ ರೂಪ ಅವರು ಎಚ್ಚರ ವಹಿಸುತ್ತಾರೆ. ಇಂಥ ಜಾಗಗಲ್ಲಿ ಕಥನದ ಅಂಶಕ್ಕೆ ಎಡೆಇದ್ದರೂ ಲಯ ವಿನ್ಯಾಸಗಳನ್ನು ಮರೆಯುವುದಿಲ್ಲ. ರೂಪ ಅವರ ಇದುವರೆಗಿನ ಕಾವ್ಯದಲ್ಲಿ ಕಥನ ವಿಧಾನಗಳು ಕಡಿಮೆ. ತಮ್ಮ ಹಿನ್ನಲೆಗೆ ದಕ್ಕಿರುವ ಸಾರ್ವಜನಿಕ ಬದುಕಿನ ಅನುಭವಗಳನ್ನು ಕವಿತೆಯಾಗಿಸುವುದಕ್ಕೆ ಇವರು ಹೆಚ್ಚು ಪ್ರಯತ್ನ ಮಾಡಿಲ್ಲ. ಮೂಲಭೂತವಾಗಿ ಮಕ್ಕಳ ಹಕ್ಕುಗಳ ಪರವಾಗಿ ಹೋರಾಟ, ಜಾಗೃತಿಗಳಲ್ಲಿ ತೊಡಗಿಸಿಕೊಂಡಿರುವ ರೂಪ ಹಾಸನ ಅವರು ಗದ್ಯ ಲೇಖನಗಳಲ್ಲಿ ಆ ಬಗೆಯ ಚಿಂತನೆಯನ್ನು ನಡೆಸಿದ್ದಾರೆ. ಇದನ್ನು ಕವಿತೆಯಲ್ಲಿ ತರಲೇಬೇಕು ಎಂದೇನೂ ಇಲ್ಲ. ಅವರ ‘ಗಳಿಗೆ ಬಟ್ಟಲ ತಿರುವುಗಳಲ್ಲಿ’ ಎಂಬ ಕಿರು ಪದ್ಯಗಳಲ್ಲಿ ಹಸಿವು ಮತ್ತು ರೊಟ್ಟಿ ಗಳ ಮುಖಾಮುಖಿ ಸಾಮಾಜಿಕ ಆಯಾಮಗಳನ್ನು ತಾಕುತ್ತದೆ. ಇಲ್ಲಿ ಮನುಷ್ಯ, ಮಾನವೀಯತೆಗಳೆ ಮುಖ್ಯವೇ ಹೊರೆತು ಗಂಡು-ಹೆಣ್ಣುಗಳ ತಾಕಲಾಟವಿಲ್ಲ. ರೊಟ್ಟಿ ಮತ್ತು ಹಸಿವುಗಳು ಸಮಾಜದ ಅಂತಸ್ಥ ಬದುಕಿನ ತತ್ವಗಳೇ ಆಗಿವೆ. ಇವುಗಳಿಗೆ ಜಾತಿ,ಧರ್ಮ, ಭಾಷೆಗಳ ಗಡಿಗಳು ಇರುವುದಿಲ್ಲ. ವಿಶ್ವಾತ್ಮಕ ವ್ಯಾಪ್ತಿಯನ್ನು ಧರಿಸಿವೆ. ರೊಟ್ಟಿ ಮತ್ತು ಹಸಿವು ಇಲ್ಲಿ ಪರಸ್ಪರ ಪೈಪೊಟಿಗೆ ಇಳಿಯುತ್ತವೆ: ಹಲವೊಮ್ಮೆ ಸಂಧಿಸುತ್ತವೆ: ಕೊನೆಗೆ ಒಂದಾಗುವ ಕ್ರಿಯೆಯನ್ನು ಕಾಣಬಹುದು. ಇವುಗಳ ಸಂವಾದದಲ್ಲಿ ವಚನ ಪರಿಭಾಷೆಯನ್ನು ಬಳಸುತ್ತಾರೆ. ಇದರಲ್ಲಿ ಸಾಮಾಜಿಕ ಪರಿಭಾಷೆ ಮತ್ತು ಅನುಭಾವಿಕ ಪದಗಳನ್ನು ಎದುರು ಬದರಾಗಿಸಿದ್ದಾರೆ.

‘ಹಸಿವಿನ ಸ್ವಾರ್ಥಕ್ಕೆ ಸಿಕ್ಕು
ನುಚ್ಚು ನೂರಾಗುವ
ರೊಟ್ಟಿಯೆಂಬೋ ಸಂತ
ಹಸಿವಿನ ಒಡಲಲ್ಲಿ
ಸದ್ದಿಲ್ಲದೇ ಮೆಲ್ಲನೆ
ಬಿತ್ತುತ್ತದೆ ಸಾವಿರಾರು
ಪ್ರೀತಿಯ ಬೀಜ’. ( ಗಳಿಗೆ ಬಟ್ಟಲ ತಿರುವುಗಳಲ್ಲಿ)

‘ತನ್ನಷ್ಟಕ್ಕೆ’ ಎಂಬ ಈಚಿನ ಕವಿತೆಗಳಲ್ಲಿ ರೂಪ ಅವರು ಕಾವ್ಯಭಾಷೆಯನ್ನು ಬದಲು ಮಾಡಿಕೊಳ್ಳುವಷ್ಟು ಬೇರೆ ಆಗಿವೆ. ಇಲ್ಲಿನ ಒಳಚಿಂತನೆ ಜೀವ-ಜೀವಗಳ ನಂಟನ್ನು ಬೆಸೆಯುವ ವಿಧಾನವನ್ನು ಅರಿಯಬೇಕು. ಬುದ್ಧನನ್ನು ಸಮರ್ಥವಾಗಿ ಎದುರುಗೊಂಡಿರುವ ಈ ಕವಿತೆಗಳು ಅವನಲ್ಲಿ ಹೆಣ್ಣಿನ ಅಂತರಂಗವನ್ನು ಕಾಣಲಾಗಿದೆ. ಸಾಮಾನ್ಯವಾಗಿ ಮಹಿಳಾ ಕಾವ್ಯ ಪುರಾಣ ಮತ್ತು ಚಾರಿತ್ರಿಕ ವ್ಯಕ್ತಿಗಳನ್ನು ಸಂಘರ್ಷದ ನೆಲೆಯಲ್ಲಿ ಕಂಡಿದ್ದು ಜಾಸ್ತಿ. ಅಕ್ಕನನ್ನು ಬಿಟ್ಟರೆ ಉಳಿದ ಪುರುಷ ಪಾತ್ರಗಳನ್ನು ಈ ಬಗೆಯಲ್ಲಿಯೇ ನೋಡಲಾಗಿದೆ. ಎಲ್ಲೋ ಕೆಲವರು ಮಾತ್ರ ಅವರೊಂದಿಗೆ ಅನುಸಂಧಾನ ಮತ್ತು ಒಳಗುಮಾಡಿಕೊಳ್ಳುವ ಚಿತ್ರಗಳನ್ನು ತಂದಿದ್ದಾರೆ.ನೋವು ಮತ್ತು ವ್ಯಕ್ತಿತ್ವ ಇವುಗಳ ಸಹಜತೆ:ಜೇವಕ್ಕೆ ಅಂಟಿಕೊಂಡಿರುವ ಸಂಕಟಗಳನ್ನು ಆನುಭಾವಿಕ ಚಹರೆಗಳಲ್ಲಿ ಆಲೋಚಿಸುವ ಗುಣಗಳು ಕೆಲವು ಕವಿತೆಗಳಿಗೆ ದಕ್ಕಿವೆ.

‘ಮಳೆ ಬಿದ್ದದ್ದಕ್ಕೇ
ಹೂವರಳಿತೆನ್ನುವುದಕ್ಕೆ
ಯಾವ ಪುರಾವೆಗಳೂ ಇಲ್ಲ
ಹೂವು ಅರಳಿದೆಯಷ್ಟೆ.
ನನಗಾಗಿ ನನ್ನದೇ ಒಂದು
ಕನ್ನಡಿ ಬೇಕೆಂಬ
ಗುಪ್ತ ಬಯಕೆಗೆ ಬಿದ್ದಿರುವೆ ಗುರುವೆ ( ತನ್ನಷ್ಟಕ್ಕೆ. ಇವೆರೆಡೂ ಬೇರೆ ಬೇರೆ ಪದ್ಯಗಳು)

ಸ್ತ್ರೀ ನಿಷ್ಟ ಬಯಕೆಗಳು ಎಂದರೆ ಅವು ಕೇವಲ ಇಂದ್ರಿಯಗಳಿಗೆ ಸಂಬಂಧ ಪಡುವುದಿಲ್ಲ. ಹಲವು ಬಾರಿ ಅವುಗಳನ್ನು ಮೀರಿಯೂ ಬದುಕಿದೆ. ನಿಸರ್ಗಕ್ಕೆ ಯಾವ ಬಂಧನಗಳೂ ಇರಲಾರದ ಹಾಗೆ ಇಲ್ಲಯೂ ತನ್ನದೇ ಬದುಕಿನ ದಾರಿಗಳನ್ನು ಶೋಧಿಸಲು ಹವಣಿಸುವುದು ಅಷ್ಟೇ ಮುಖ್ಯ. ಇಲ್ಲಿ ಹೂವು ಮತ್ತು ಕನ್ನಡಿಯ ಪ್ರತಿಮೆಗಳು ಹೆಣ್ತನದ ಅರಿವನ್ನು ವಿಸ್ತರಿಸುತ್ತವೆ. ಇದೇ ಬಗೆಯ ಲಹರಿಯನ್ನು ಇನ್ನು ಚೆನ್ನಾಗಿ ‘ಜೋಗಿಣಿ ಹಕ್ಕಿಯ ತಾವು ಹುಡುಕುತ್ತಾ’ ಎಂಬ ಕವಿತೆಯಲ್ಲಿ ಕಾಣಬಹುದು.ರೂಪ ಅವರ ಈ ತರದ ಕವಿತೆಗಳು ನಿಜವಾದ ಕವಿತ್ವವನ್ನು ಕಂಡುಕೊಂಡಿವೆ. ಕವಿತೆಗೆ ಬೇಕಾದ ಆಂತರಿಕ ಪರಿಕರಗಳು ಅವರಿಗೆ ಸಿದ್ದಿಸುತ್ತಾ ಹೋಗಿವೆ. ಪದರಚನೆಗಳ ಕಡೆ ಗಮನಿಸಿದರೂ ತಿಳಿಯುತ್ತದೆ. ಈ ನೆಲದ ಸ್ತ್ರೀವಾದಿ ಕಾವ್ಯ ಮೀಮಾಂಸೆ ಯನ್ನು ಕಟ್ಟುವ ಇರಾದೆಯನ್ನು ಹೊಂದಿರುವ ನಾವು ರೂಪ ಹಾಸನ ಅವರ ಬುಧ್ಧನ ಕುರಿತ ಕವಿತೆಗಳನ್ನು ಅವಲೋಕಿಸಬೇಕು ಅನಿಸುತ್ತದೆ. ‘ತಾರಾ’ ಮತ್ತು ‘ಮಹಾ ಪರಿನಿರ್ವಾಣ’ ಮುಂತಾದ ಕವಿತೆಗಳನ್ನು ನೋಡಬಹುದು.ತಾರಾ ಪದ್ಯದಲ್ಲಿ ಮೂಲ ಕತೆ ಟಿಬೆಟ್ ಭೌದ್ಧ ಮೂಲದ್ದಾದರೂ ಅದರ ಪ್ರತಿಮಾ ನಿರ್ವವಣೆ, ಸ್ತ್ರೀ ಚಿಂತನೆಯ ಚೌಕಟ್ಟು ಸಂಕೀರ್ಣತೆಯನ್ನು ಮೈಗೂಡಿಕೊಂಡೇ ಸಹಜತೆಯನ್ನು ಮೆರೆದಿದೆ.ಬುದ್ಧನೇ ತಾರಾ ಆಗುವ ಕ್ರಿಯೇ ಇದೆ.ಭಿಕ್ಷಾ ಪಾತ್ರೆಯ ಬುದ್ದ ಬೋಧಿಸತ್ವನೆನೋ ಆಗುತ್ತಾನೆ. ಇದಕ್ಕೂ ಸಂಕಟಗಳು ಎದುರಾಗಿದ್ದವು. ಭಿಕ್ಷೆ ಒಂದು ಸಾಮಾಜಿಕ ಕ್ರಿಯೆ ಎಂದು ಭಾವಿಸಿದ್ದ ಬುದ್ದ, ಮನುಷ್ಯನ ಮನಸ್ಥಿತಿಯ ಪರಿವರ್ತನೆಯಗೆ ಜೋಡಿಸಿದ್ದ. ಇದಕ್ಕೆ ಅಂಗುಲೀಮಾಲನ ಕತೆಯನ್ನು ನೆನಪಿಸಿಕೊಳ್ಳಬಹುದು. ಆಹಾರ ಒಡಲನ್ನು ಸೇರಬಹುದು ಆದರೆ ಅರುಗುವುದೇ? ಅದೇ ಈ ಸ್ವರೂಪವನ್ನು ಪಡೆದುಕೊಂಡುಬಿಡುತ್ತದೆ:

ಆದರೆ ಒಳಗಿಳಿದದ್ದು ಸುಮ್ಮನುಳಿದೀತೇ?
ಹೃದಯ ತುಂಬಿ ಕುಡಿದದ್ದು
ಕರುಳೇ ಬಿರಿದು
ನೊಂದ ನೋವೆ ಕಾರುಣ್ಯ ರಸವಾಗಿ
ಕಣ್ಣು ತುಂಬಿ
ತಣ್ಣಗೆ ಹರಿದು ನೀರಾಗಿ
ಕಣ್ಣೀರ ಸರೋವರವೇ ಮಡುಗಟ್ಟಿತು. (ತನ್ನಷ್ಟಕ್ಕೆ)

ಈ ಸರೋವರದ ಕಮಲದಲ್ಲಿ ಅರಳಿದ ಬುದ್ಧರೂಪಿಯೇ ತಾರಾ. ಶೈವ ಪುರಾಣದ ಅರ್ಧನಾರೀಶ್ವರ ಪರಿಕಲ್ಪನೆಗಿಂತ ಭಿನ್ನವಾದ ಕಲ್ಪನೆ ಇದು. ಅಲ್ಲಿ ಶಿವ ಹೆಣ್ಣಿನೊಂದಿಗೆ ಅಂಟಿಕೊಂಡರೇ, ಇಲ್ಲಿ ಬುದ್ಧ ತಾರಾ ‘ಆಗುವ’ ಪ್ರಕ್ರಿಯೆ ಜೀವ ಕಾರುಣ್ಯದ್ದು. ‘ಮಹಾ ಪರಿನಿರ್ವಾಣ’ ಕವಿತೆಯಲ್ಲಿ ಬುದ್ದನನ್ನು ಹೆಣ್ತತನಕ್ಕೆ ಒಗ್ಗಿಸಿಕೊಳ್ಳುವ ಬಗೆ ಸ್ತ್ರೀವಾದಿ ಮೀಮಾಂಸೆಯನ್ನು ಗಟ್ಟಿಗೊಳಿಸುತ್ತದೆ. ಹೆಣ್ಣನ್ನು ಸಂಘಕ್ಕೆ ಸೇರಿಸಕೊಳ್ಳದಿದ್ದ ಬುದ್ಧ ಈಗ ಅವಳ ಅಡುಗೆ ಮನೆಯ ಶ್ರಮವನ್ನು ಕಂಡು ತಾನೆ ಕಣ್ಣೀರು ಸುರಿಸುತ್ತಾನೆ.

‘ಹೆಣ್ಣ ಮಿಡಿತದ ಮೃತ್ತಿಕೆಯಲಿ ನೆಟ್ಟ
ಮರಗಲ್ಲ ಬುದ್ಧನಿಗೀಗ
ನೆಲದಾಳದಲ್ಲೆಲ್ಲಾ ಬೇರು
ಕೈಕಾಲು ಎದೆ ತಲೆಗಳೆಲ್ಲ ಚಿಗುರು
ಕಣಕಣದ ಚಲನೆಗೂ ಮಿಡಿವ
ಹೆಣ್ಣ ನೋವಿಗೂ ತುಡಿವ
ಅವನೀಗ ಮತ್ರ್ಯಲೋಕದ ಕೂಸು’ (ತನ್ನಷ್ಟಕ್ಕೆ)

ಇಲ್ಲಿನ ಹೆಣ್ಣು ವಾಸ್ತವತೆಯ ಬೇರುಗಳನ್ನು ಅಲುಗಾಡಿಸಿದ್ದಾಳೆ. ಬುದ್ಧನನ್ನು ಅಡುಗೆ ಮನೆಯಲ್ಲಿ ತಂದು ಕೂರಿಸುವ ನಿಲುವು ವರ್ತಮಾನದ ಸ್ತ್ರೀವಾದಿ ಚಿಂತನೆಯ ಹಲವು ಮಗ್ಗಲುಗಳನ್ನು ತೋರಿಸುತ್ತದೆ. ಹೆಣ್ಣು ತನ್ನ ಅಸ್ಮಿತೆಯನ್ನು ರೂಪಿಸಿಕೊಳ್ಳುವುದು ಎರಡು ಬಗೆಯಲ್ಲಿ ಅನಿಸುತ್ತದೆ. ಒಂದು : ಸಂಘರ್ಷದ ಮೂಲಕ. ಎರಡು: ಸಾಹಚರ್ಯದ ಮೂಲಕ. ರೂಪ ಅವರು ಎರಡನೇ ಮಾರ್ಗಕ್ಕೆ ಸೇರಿದರೂ, ಸಾಹಚರ್ಯದಲ್ಲೂ ತಣ್ಣನೆಯ ಸಂಘರ್ಷವನ್ನು ತರಬಲ್ಲರು. ರೂಪ ಅವರ ಕಾವ್ಯ ಮುಖ್ಯವಾದ ಹಂತಕ್ಕೆ ಬಂದು ನಿಂತಿದೆ. ಕೊನೆಯ ಕವಿತೆಗಳಲ್ಲಿ ಅವರು ಧ್ಯಾನಸ್ಥಸ್ಥಿತಿಯನ್ನು ಆಯ್ಕೆಮಾಡಿಕೊಂಡಂತಿದೆ. ಸಹಜ ಪ್ರತಿಮೆಗಳಿಗೆ ಅವರು ಹೆಚ್ಚು ನಿಸರ್ಗವನ್ನೇ ನಂಬುತ್ತಾರೆ. ಇನ್ನೂ ಮುಂದೆ ಇದೇ ಮಾದರಿಯಲ್ಲಿ ಸಮಾಜದ ದಟ್ಟ ವಿವರಗಳನ್ನು ತರುವ ಶಕ್ತಿ ಅವರಿಗಿದೆ.

ಪ್ರತಿಕ್ರಿಯಿಸಿ