ಋತುಮಾನಕ್ಕೆ ಒಂದು ಸಂವತ್ಸರ

ಮೊದಲನೆಯದ್ದು ವಿಶೇಷ. ಮೊದಲಿಲ್ಲದೆ ಮುಂದಿನ ಹಾದಿಯಿಲ್ಲ. ಮೊದಲಿಲ್ಲದೆ ಕೊನೆಯೂ ಇಲ್ಲ. ಇಂದು ಋತುಮಾನಕ್ಕೆ ಮೊದಲ ವರುಷದ ಹುಟ್ಟುಹಬ್ಬ. ಈ ನೆಪದಲ್ಲಿ ಋತುಮಾನವನ್ನು ಇನ್ನಷ್ಟು ಸೃಜನಾತ್ಮಕವಾಗಿ, ರಚನಾತ್ಮಕವಾಗಿ ರೂಪಿಸುವ ಆಸೆ ನಮ್ಮದು. ಇದಕ್ಕೆ ಪೂರಕವಾಗಿ ಋತುಮಾನದ ಕುರಿತು ನಿಮ್ಮ ಅಭಿಪ್ರಾಯಗಳನ್ನು, ಸಲಹೆ ಸೂಚನೆಗಳನ್ನು ಈ ಕೆಳಗಿನ ಕಮೆಂಟು ಬಾಕ್ಸಿನಲ್ಲಿ ಕೊಡಿ.

ಸಾಹಿತ್ಯದ ಸ್ವರೂಪ ಕಾಲ ಕಾಲಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿರುತ್ತದೆ. ಮಹಾಕಾವ್ಯ, ಕಾದಂಬರಿ, ಪ್ರಬಂಧ, ಕತೆಗಳ ಜೊತೆಗೆ ಸೋಷಿಯಲ್ ಮೀಡಿಯಾದ ಪೋಸ್ಟ್ ಗಳನ್ನೂ ಹೊಸ ಸಾಹಿತ್ಯ ಪ್ರಕಾರಗಳೆಂದು ಪರಿಗಣಿಸಬೇಕೇ? ಅನೇಕ ಯುವ ಉತ್ಸಾಹಿ ಬರಹಗಾರರು ತಮ್ಮ ಬರವಣಿಗೆಗೆ ಎಲ್ಲ ಸಂಪ್ರದಾಯ ಮಾದರಿಗಳನ್ನು ಬದಿಗಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿವ್ಯಕ್ತಿಯನ್ನು ಪ್ರಕಟಪಡಿಸತೊಡಗಿದ್ದಾರೆ. ಇದು ಸುಲಭ ಮಾರ್ಗವೇನೋ ಹೌದು. ಜೊತೆಗೆ ಲೇಖಕರಿಂದ ಹೆಚ್ಚು ಜವಾಬ್ದಾರಿಯನ್ನೂ, ಸ್ವನಿಯಂತ್ರಣವನ್ನೂ ಬಯಸುತ್ತದೆ. ಈ ಪರಿಸರದಲ್ಲಿ ಸಾಹಿತ್ಯ ಪತ್ರಿಕೆಯನ್ನು ನಡೆಸುವುದೇ ದೊಡ್ಡ ಸವಾಲಾಗಿತ್ತು. ಪತ್ರಿಕೆಯೆನ್ನುವುದು ಸಮುದಾಯದ ಸ್ಪಂದನೆ. ಡಿಜಿಟಲ್ ಜಗತ್ತು ನಮ್ಮನ್ನು ಇಡೀ ಲೋಕದ ಜೊತೆಗೆ ಸಂಬಂಧದ ಭ್ರಮೆ ಹುಟ್ಟಿಸುತ್ತದೆ; ಲಾಗ್ ಔಟ್ ಆದ ಮರುಕ್ಷಣ ಏಕಾಂಗಿಯಾಗಿಸುತ್ತದೆ. ಹಾಗಾಗಿ ಡಿಜಿಟಲ್ ಸಾಹಿತ್ಯ ಪತ್ರಿಕೆ ನಡೆಸಲು ದೊಡ್ಡ ಸವಾಲು ಸೈಬರ್ ಲೋಕದೊಳಗೇ ಇದೆ. ಯಾವುದನ್ನೂ ಇಡಿಯಾಗಿ ಓದಲು, ಗ್ರಹಿಸಲು ಅವಕಾಶವೇ ನೀಡದಂತೆ ಒಂದರ ಹಿಂದೊಂದರಂತೆ ದಿನವೂ ನೂರೆಂಟು ನೀವ್ಸ್ ಫೀಡ್ ಗಳು , ವೈವಿಧ್ಯಮಯ ಬರಹಗಳು ನಮ್ಮ ಮೊಬೈಲ್ ಸ್ಕ್ರೀನಿನ ಮೇಲೆ ಬಂದು ಬೀಳುತ್ತಿರುತ್ತದೆ. ಈ ಅವಸರದ ಬೆನ್ನೇರಲು ನಮಗಿಷ್ಟವಿರಲಿಲ್ಲ. ಹಾಗಾಗಿ ಋತುಮಾನವನ್ನು ಸಾವಧಾನವಾಗಿ ರೂಪಿಸಲು ನಿರ್ಧರಿಸಿದೆವು. ವಾರಕ್ಕೆ ಎರಡು ಅಥವಾ ಮೂರಕ್ಕಿಂತ ಹೆಚ್ಚಿನ ಪೋಸ್ಟ್ ಗಳು ಬರದಂತೆ ಜಾಗ್ರತೆ ವಹಿಸಿದೆವು. ವಾರಕ್ಕೊಮ್ಮೆ ಭೇಟಿ ಕೊಡುವವರಿಗೂ ಬರಹಗಳು ತುಂಬಿ ತುಳಕದಂತೆ ಆದರೆ ಇದ್ದಷ್ಟು ಬರಹಗಳೂ ಓದುಗನ ಆಸಕ್ತಿ ಕೆರಳಿಸುವ, ಹೊಸದನ್ನು ಆಲೋಚಿಸುವ, ಹಳೆಯ ಹಳವಂಡಗಳಲಿ ಆಗಾಗ ಮಿಂದೇಳುವ ಸುಖ ನೀಡಬೇಕೆಂಬುದು ನಮ್ಮ ಬಯಕೆಯಾಗಿತ್ತು.

ಈ ಒಂದು ವರುಷದಲ್ಲಿ ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು ಎಂಬ ಕಗ್ಗದ ಮಾತನ್ನೇ ನಾವು ಧ್ಯೇಯ ವಾಕ್ಯ ಮಾಡಿಕೊಂಡಿದ್ದೇವೆ. ಪುತಿನ, ತೇಜಸ್ವಿ, ಅನಂತಮೂರ್ತಿ, ಕಿ ರಂ, ಕಾರಂತ, ಬೇಂದ್ರೆ , ಡಿ ಆರ್ ನಾಗರಾಜ್ ಇನ್ನು ಮುಂತಾದವರ ಅಪರೂಪದ ಆಡಿಯೋ ವಿಡಿಯೋ ಕ್ಲಿಪ್ಪಿಂಗ್ ಗಳನ್ನು ಎಲ್ಲೆಲ್ಲಿಲ್ಲಂದಲೋ ಹುಡುಕಿ ದಾಖಲಿಸಿದ್ದೇವೆ. ಇದರ ಜೊತೆ ಜೊತೆಗೆ ದಯಾನಂದ, ಲಕ್ಷ್ಮಿನಾರಾಯಣ, ಗೌತಮ್ ಜ್ಯೋತ್ಸ್ನಾ, ಚೈತ್ರಿಕಾ, ಹರೀಶ್ ಹಾಗಲವಾಡಿ ಇನ್ನೂ ಹಲವಾರು ಯುವ ಲೇಖಕರಿಗೆ ಕಿವಿಯಾಗಿದ್ದೇವೆ.

’ವ್ಯಕ್ತ ಮಧ್ಯ ’ ಹೆಚ್ಚಿನ ಓದುಗರು ಮೆಚ್ಚಿಕೊಂಡ ವಿಡಿಯೋ ಸರಣಿ. ಎಸ್ ದಿವಾಕರ್ ರವರು ನಡೆಸಿಕೊಟ್ಟ ’ಸಾಹಿತ್ಯವನ್ನು ಏಕೆ ಓದಬೇಕು?’ , ಕನ್ನಡದ ಎರಡು ಕಥನಗಳಲ್ಲಿ ಬಂದ ಕಾಶಿಯನ್ನು ರೂಪಕವಾಗಿಟ್ಟುಕೊಂಡ ಜಿ ರಾಜಶೇಖರರ ’ಕಾಶಿ ಎಂಬ ರೂಪಕ’, ಕನ್ನಡ ಕಥಾ ಜಗತ್ತಿನ ಎರಡು ಪ್ರಸಿದ್ಧ ಪಾತ್ರಗಳಾದ ಮಂದಣ್ಣ ಮತ್ತು ಹಡೆವೆಂಕಟರನ್ನಿಟ್ಟುಕೊಂಡು ಸ್ಮಾರ್ಟ್ ಸಿಟಿ ಯೋಜನೆಯನ್ನು ಅವಲೋಕಿಸಿದ ಸಿ ಎನ್ ರಾಮಚಂದ್ರನ್ ಅವರ ’ಸ್ಮಾರ್ಟ್ ಸಿಟಿಯಲ್ಲಿ ಮಂದಣ್ಣ ಮತ್ತು ಹಡೆ ವೆಂಕಟ’ ಈ ಅಂಕಣದಲ್ಲಿ ಇದುವರೆಗೆ ಬಂದ ಸಂಚಿಕೆಗಳು.

ಜಿ ರಾಜಶೇಖರರಿಗೆ ಎಪ್ಪತ್ತಾದ ನೆವದಲ್ಲಿ ಅವರ ಕುರಿತು ’ನಿಷ್ಟುರತೆಯ ನೋಂಪು’ ಶೀರ್ಷಿಕೆ ಅಡಿಯಲ್ಲಿ ಪ್ರಕಟಿಸಿದ ಸರಣಿ ಲೇಖನಗಳೂ ನಮಗೆ ಅತ್ಯಂತ ತೃಪ್ತಿ ಕೊಟ್ಟ ವಿಚಾರ. ಈ ನೆವದಲ್ಲಿ ರಾಜಶೇಖರರೊಂದಿಗೆ ಒಡನಾಡಿದ್ದು ಹೂವಿನ ಜೊತೆಗೆ ಗಂಧವೂ ಸಿಕ್ಕ ಖುಶಿ. ಎಸ್ ಮಂಜುನಾಥ್ ನಿಧನರಾದ ಬಳಿಕ ಅವರ ಕುರಿತಾದ ಹಲವು ಲೇಖನಗಳನ್ನೂ, ಅಬ್ದುಲ್ ರಶೀದ್ ನಡೆಸಿಕೊಟ್ಟಿದ್ದ ಹೃದಯಂಗಮ ರೇಡಿಯೊ ಸಂದರ್ಶನ ವನ್ನೂ ಹುಡುಕಿ ಪ್ರಕಟಿಸಿದೆವು.
ಇವುಗಳ ಜೊತೆಗೆ ಭಾರತೀಯ ಸಿನೆಮಾಗಳ ಮೇಲೆ ಡೇವಿಡ್ ಬಾಂಡ್ ಬರೆಯುವ ’ಚಿತ್ರ ಭಾರತ’ ಸರಣಿ, ನಮ್ಮ ನಮ್ಮ ದೇವರುಗಳ ಕುರಿತಾದ ’ನನ್ನ ದೇವರು’ ಸರಣಿ, ಜಗತ್ತಿನ ಜನಪದ ಕತೆಗಳನ್ನು ಕನ್ನಡಿಕರಿಸಿ ಕೊಟ್ಟ ’ಜಗಪದ’, ಯುವ ಲೇಖಕರ ಕೃತಿಗಳನ್ನು ವಿಮರ್ಶಿಸುವ ’ಪುಸ್ತಕ ಪರೀಕ್ಷೆ’ , ಕತೆಗಳನ್ನು ಆಲಿಸುವ ’ಕತೆಯ ಜೊತೆ’ ಶ್ರವ್ಯ ಸರಣಿ ಹೀಗೆ ಮೊದಲ ವರ್ಷದ ಪ್ರಕಟಣೆ ನಮಗೆ ಸ್ವಲ್ಪ ಮಟ್ಟಿಗಿನ ಸಮಾಧಾನವನ್ನಂತೂ ತಂದು ಕೊಟ್ಟಿದೆ. ಇನ್ನಷ್ಟು ಹೊಸ ಆಲೋಚನೆಗಳು, ಯೋಜನೆಗಳು ಮನಸ್ಸಿನಲ್ಲಿವೆ.

ಋತುಮಾನದ ಮೊದಲ ಸಂವತ್ಸರವನ್ನು ಕಲರ್ ಫುಲ್ ಆಗಿಸಿದ ಎಲ್ಲ ಲೇಖಕರಿಗೂ, ಸ್ನೇಹಿತರಿಗೂ , ಹಿತೈಷಿಗಳಿಗೂ, ಹಲವಾರು ಬಗೆಯಲ್ಲಿ ನೆರವಿತ್ತವರಿಗೆ ಧನ್ಯವಾದಗಳು.

ಸದ್ಯಕ್ಕೆ ಇಷ್ಟೇ.

ನಮಸ್ಕಾರ..

One comment to “ಋತುಮಾನಕ್ಕೆ ಒಂದು ಸಂವತ್ಸರ”

ಪ್ರತಿಕ್ರಿಯಿಸಿ