ಮಹಾಂತೇಶ ಪಾಟೀಲ ಕವಿತೆ – ಋತುಗೀತ

 ೧
ಬಂಡವಾಳ ಹೂಡಿವೆ ಭ್ರೂಣದಲ್ಲಿ
ಈಡಿಪಸ್‍ನ ಖಾಸಾ ಹಳವಂಡಗಳು

ಬಿಳಿ ಕಾಲರಿನವರದೇನೂ
ತಕಾರಿಲ್ಲ: ಬೇಳೆ ಬೇಯಿಸುವುದಕ್ಕೆ
ಹಣದ ಹಡದಿಯ ಹಾಸಿ
ವಿನಾಯಿತಿಗಳ ವಿನಯ ತೋರಿದ್ದಾರೆ

ಅರೇ- ಅದೆಂತಹ ಮಾತೃ ವಾತ್ಸಲ್ಯ !!

ಜೀವಧಾತುಗಳ ಪೂರೈಕೆಗೆ
ಉಂಬಳಿ ಬಿಡುತ್ತಾರಂತೆ
ಊಳಲಾಗದ ಉತ್ತರರು
ಅಲೀಯಾಸ್ ಕಂಬಳಿ ಹುಳುಗಳು

ಕುದುರೆ ಹಿಂದೆ ಕಿನ್ನೂರಿ ನುಡಿಸುವರು
ಸೋ… ಎನ್ನಿರೇ- ಸಂಪನ್ನರಿಗೆ


ಕಾಗೆ ಗೂಡು ಬಾಡಿಗೆ ಬಸಿರು
ಕರುಳ ಬಳ್ಳಿಯ ಸರಕುಗಳು
ಸರಿದು ಹೋಗುತ್ತಿವೆ
ಹೃದಯಾಂತರದಿಂದ ದೇಶಾಂತರಕ್ಕೆ

ಹೊಕ್ಕಳ ಹುರಿ ಕತ್ತರಿಸಿ
ಕರುಳಿಗೊಂದು ಕಾನೂನು ಮಾಡವರೆ
ನ್ಯಾಯವಂತ ಸೈತಾನರು !

೩ 
ಗಾಯಕ್ಕೆ ಜೀವವಿಮೆ ನೀಡಿ
ಮಲಾಮು ಸಬ್ಸಿಡಿ ಕೊಡುವರಂತೆ

ಹರಾಮಿ ಸಂಕಟಗಳೆದುರು
ಹಲಕಾ ಮಂದಿ ಸಾಧುಗಳಾಗವರೇ
ಸಿದ್ಧಿತನಕೆ ಶೀಲದ ಸೋಗಲಾಡಿತನ !


ಮೋಜಿನ ಹಾಡು
ಲೋಕದ ಲಾಲಿತ್ಯಕ್ಕೆ

ಎದೆ ಕುಟುಕರ ಲೋಕದಲ್ಲಿ
ಗಾಯಗಳು ಖಾಸಾ ಬೀಗರಿದ್ದಂತೆ

ಹಂಗಾಮಿ ಹರೆಯಕ್ಕೆ
ಸುಖದ ನೋವು.
ಋತುಗೀತೆಯೊಂದು ರಕ್ತ ಕವಿತೆ.

ಚಿತ್ರ : ಚೇತನಾ ತೀರ್ಥಹಳ್ಳಿ


 

One comment to “ಮಹಾಂತೇಶ ಪಾಟೀಲ ಕವಿತೆ – ಋತುಗೀತ”
  1. ಕನ್ನಡದ ಅತ್ಯುತ್ತಮ ಯುವ ಕವಿ. ಆದರೆ ಈ ಬಗೆಗೆ ವಿಮರ್ಶಕರು ಚರ್ಚೆಯ ನಡೆದಿಲ್ಲ. ಓದುಗ ವಲಯದಲ್ಲಿ ಚರ್ಚೆಗಳು ನಡೆದಂತೆ

ಪ್ರತಿಕ್ರಿಯಿಸಿ