ಗಮಕ : ಕುಮಾರವ್ಯಾಸ ಭಾರತದ ಸಭಾಪರ್ವದ ೧೪ನೇ ಸಂಧಿಯ ಕೆಲವು ಪದ್ಯಗಳು

ಕೌರವರೊಂದಿಗಿನ ಕಪಟದ್ಯೂತದಲ್ಲಿ ರಾಜ್ಯಕೋಶಗಳಾದಿಯಾಗಿ ಸಮಸ್ತವನ್ನೂ ಸೋತ ಯುಧಿಷ್ಠಿರ ಕೊನೆಯಲ್ಲಿ ತನ್ನೊಂದಿಗೆ ತಮ್ಮಂದಿರು ಮತ್ತು ಪತ್ನಿ ದ್ರೌಪದಿಯನ್ನೂ ಪಣವಾಗಿಟ್ಟು ಸೋಲುತ್ತಾನೆ.

’ರಾಜಸಭೆಗೆ ಬರಲಾರೆ, ರಜಸ್ಪತಿ’ ಎಂದರೂ ಕೇಳದೆ ದ್ರೌಪದಿಯನ್ನು ನೀನಿನ್ನು ನಮ್ಮ ದಾಸಿ. ರಾಣಿವಾಸದ ತೊತ್ತು ಎಂದು ದುಶ್ಯಾಸನನು ಎಳೆದು ತರುತ್ತಾನೆ. ಉಟ್ಟ ಸೀರೆಯನ್ನೇ ಸೆಳೆಯಲು ಮುಂದಾದಾಗ ದ್ರೌಪದಿ ಸಭೆಯಲ್ಲಿದ್ದ ಭೀಷ್ಮ, ದ್ರೋಣಾದಿ ಹಿರಿಯರಲ್ಲಿ ಇದು ಧರ್ಮವೇ ಎಂದು ಪ್ರಶ್ನಿಸುತ್ತಾಳೆ. ತನ್ನನ್ನು ಈ ಖಳರಿಂದ ರಕ್ಷಿಸಿ ಎಂದು ಸಭಾಸದವರಲ್ಲಿ – ಗಾಂಧಾರಿ- ಭಾನುಮತಿ ಮುಂತಾದವರಲ್ಲಿ ಬೇಡಿಕೊಳ್ಳುತ್ತಾಳೆ. ತನ್ನ ಪತಿಗಳೂ ತನ್ನನ್ನು ರಕ್ಷಿಸಲಾರರು, ತುಂಬಿದ ಸಭೆಯಲ್ಲಿ ತನ್ನನ್ನು ರಕ್ಷಿಸುವರಾರೂ ಇಲ್ಲವೆಂದು ಅರಿವಾದಾಗ ಶ್ರೀಕೃಷ್ಣನ ಮೊರೆ ಹೋಗುತ್ತಾಳೆ. ಐರಾವತಿಯಲ್ಲಿ ಪಗಡೆಯಾಡುತ್ತಿರುವ ಶ್ರೀ ಕೃಷ್ಣ ಅಲ್ಲಿಂದಲೇ ದ್ರೌಪದಿಗೆ ಅಕ್ಷಯವಸ್ತ್ರ ಪ್ರದಾನ ಮಾಡುತ್ತಾನೆ.

ಕುಮಾರ ವ್ಯಾಸ ಭಾರತದ ಸಭಾ ಪರ್ವದ ಈ ಭಾಗವನ್ನು ಋತುಮಾನಕ್ಕಾಗಿ ಗಮಕಿ ಸಮುದ್ಯತಾ ವೆಂಕಟರಾಮು ಅವರು ಓದಿದ್ದಾರೆ.


ಹಿರಿಯರಿಲ್ಲದ ಸಭೆ ಮನುಷ್ಯರ
ನೆರವಿಯದು ಸಭೆಯಲ್ಲ ಮೂರ್ಖರು
ಹಿರಿಯರಲ್ಲ ಯಥಾರ್ಥಭಾಷಣ ಭೀತ ಚೇತನರು
ಹಿರಿಯರಿದೆ ಸಾಮಾಜಿಕರು ಸ
ಚ್ಚರಿತರಿದೆಲಾ ಸ್ತ್ರೀಮತವನು
ತ್ತರಿಸಲಾಗದೆ ಧರ್ಮಶಾಸ್ತ್ರದೊಳೆಂದಳಿಂದುಮುಖಿ -೮೧

ಪತಿಗಳೆನ್ನನು ಮಾರಿ ಧರ್ಮ
ಸ್ಥಿತಿಯ ಕೊಂಡರು. ಭೀಷ್ಮ ಮೊದಲಾ
ದತಿರಥರು ಪರಹಿತವ ಬಿಸುಟರು ವ್ಯರ್ಥಭೀತಿಯಲಿ.
ಸುತನ ಸಿರಿ ಸೊಗಸಲಾ ಭೂ
ಪತಿಗೆ ಗಾಂಧಾರಿಗೆ ಅನಾಥೆಗೆ
ಗತಿಯ ಕಾಣೆನು ಶಿವ ಶಿವಾಯೆಂದೊರಳಿದಳು ತರಳೆ – ೧೦೮

ನಾಥರಿಲ್ಲದ ಶಿಶುಗಳಿಗೆ ನೀ
ನಾಥನೈ ಗೋವಿಂದ ಸಲಹೈ
ಯೂಥಪತಿಗಳು ಬಿಸುಟ ತರುಣಿಗೆ ಕೃಪೆಯ ನೀ ಮಾಡೈ
ನಾಥರಿಲ್ಲೆನಗಿಂದು ದೀನಾ
ನಾಥಬಾಂಧವ ನೀನೆಲೈ ವರ
ಮೈಥಿಲೀಪತಿ ಮನ್ನಿಸೆಂದೊದರಿದಳು ಮೃಗನಯನೆ – ೧೨೧

ನಂದಗೋಪ ಕುಮಾರ ಗೋಪೀ
ವೃಂದ ವಲ್ಲಭ ದೈತ್ಯ ಮಥನ ಮು
ಕುಂದ ಮುರಹರ ಭಕ್ತವತ್ಸಲ ಘನ ಕೃಪಾಜಲಧೆ
ನೊಂದೆನೈ ನುಗ್ಗಾದೆನೈ ಗೋ
ವಿಂದ ಕೃಪೆ ಮಾಡೆನುತ ಪೂ
ರ್ಣೇಂದುಮುಖಿ ಹಲುಬಿದಳು ಬಲು ತೆರದಿಂದಲಚು ತನ – ೧೨೯

ಪ್ರತಿಕ್ರಿಯಿಸಿ