ಬೆಜವಾಡ ವಿಲ್ಸನ್ ಸಂದರ್ಶನ – ಭಾಗ ೨ : ನನ್ನ ಕೈಗಳನ್ನು ನೋಡು.. ನನ್ನ ಬದುಕು ಹೇಗಾಯ್ತು ನೋಡು..

ಪೆಮು: ಅಲ್ಲಿಯವರೆಗೂ ಇಂತಹ ಕೆಲಸ ಮಾಡುವುದನ್ನು ನಿಮ್ಮಿಂದ ಹೇಗೆ ಮುಚ್ವಿಟ್ಟಿದ್ದರು?

ಬೆವಿ: ಸ್ವಲ್ಪ ಗೊತ್ತಿತ್ತು. ಆದರೆ ಖುದ್ದಾಗಿ ನೋಡಿರಲಿಲ್ಲ. ನಾನು ಸಣ್ಣವನಾಗಿದ್ದಾಗ 1976 ರಲ್ಲೇ ಅಪ್ಪ ನಿವೃತ್ತರಾದರು. ಅಮ್ಮನೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ಅಣ್ಣ ಟ್ರಾರ್ಕ್ಟರ್  ಓಡಿಸುವುದಾಗಿ ಹೇಳಿದ. ಆದರೆ ಅವನೂ ಇದೇ ಕೆಲಸವನ್ನು ಮಾಡುತ್ತಿದ್ದ. ಡ್ರೈವರ್ ಅಂತ ಸುಳ್ಳು ಹೇಳಿಕೊಂಡು ಮದುವೆಯನ್ನೂ ಮಾಡಿಕೊಂಡ. KGFನಲ್ಲಿ ಬೇರೊಂದು ಕೆಲಸವನ್ನೂ ಮಾಡುವುದಾಗಿ ಹೇಳಿದ್ದ. ಯಾವುದೋ ದೊಡ್ಡ ಕೆಲಸದಲ್ಲಿದ್ದಾನೆ ಅಂತ ಅವರು ಅಂದುಕೊಂಡರು. ಇಲ್ಲಿಗೆ ಬಂದ ಮೇಲೆ ಅತ್ತಿಗೆ  ಒಂದು ದಿನ ‘ಏನು ನೀನು ಬಂದು ಹೋಗುವಾಗಲೆಲ್ಲಾ ಒಂದು ತರಹ ನಾತ’ ಬರುತ್ತದೆ ಎಂದು ಕೇಳಿದರು. ರಾತ್ರಿ ಹೊತ್ತು ಈ ಹೇಲು ತುಂಬಿಕೊಂಡುಬರುವ ಟ್ರಾಕ್ಟರ್ ಓಡಿಸಿಕೊಂಡು ಬರುತ್ತೇನೆ. ಅದರಿಂದ ಇರಬಹುದು ಎಂದು ಅವನು ಸಮಾದಾನ ಮಾಡಿದ್ದ.

ಅಣ್ಣ ಮೂರು ನಾಲ್ಕು ಪ್ಯಾಂಟ್ ಇಟ್ಟುಕೊಂಡಿದ್ದ. ಐರನ್ ಮಾಡದೆ ಅದನ್ನು ಹಾಕಿಕೊಳ್ಳುತ್ತಿರಲಿಲ್ಲ. ಅವನಿಗೆ ಬರೆಯಲು ಬರುತ್ತಿರಲಿಲ್ಲ. ಆದರೆ ಸಹಿ ಅಂತ ಏನನ್ನೋ ಹಾಕುತ್ತಿದ್ದ. ಇದೇ ನನ್ನ ‘ಸೈನ್’ ಅಂತ ಹೇಳಿದ. ನಾನು ಸಹ ಅವನಂತೆಯೇ ಸ್ವಲ್ಪ ದಿನ ಮಾಡುತ್ತಿದ್ದೆ. ಅವನು ನಿಜವಾಗಿ ಮಾಡುತ್ತಿದ್ದ ಕೆಲಸಕ್ಕೂ ಹೊರಗೆ ತೋರ್ಪಡಿಸಿಕೊಳ್ಳುವುದಕ್ಕೂ ತುಂಬಾ ವ್ಯತ್ಯಾಸ ಇತ್ತು. ಅವನು ಮಾಡುವ ಕೆಲಸದಿಂದ ಹೊರಬರಲು ಈ ರೀತಿ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದ. ಅವನು ಇದೇ ಕೆಲಸ ಮಾಡುತ್ತಿದ್ದ ಅನ್ನುವುದು ನಮಗೆ ಗೊತ್ತು. ಆದರೆ ಸ್ವತಃ ನನಗೆ ಈ ಕೆಲಸದ ಅನುಭವ ಇಲ್ಲ. ನಾನು ಸಹ ಇವುಗಳಿಂದ ದೂರ ಇರಲು ಬಯಸಿದೆ.

ಆದರೆ ಅಂದು ಕಣ್ಣಾರೆ  ನೋಡಿದ ಅನುಭವದಿಂದ ಮಾತ್ರ ನನಗೆ ಹೊರಗೆ ಬರಲಾಗಲಿಲ್ಲ.  ಸಂಜೆ ಆರು ಗಂಟೆಗೆ ಮನೆಯಿಂದ ಹೊರಟವನು ರಾತ್ರಿಯೆಲ್ಲಾ ಅಲೆದೆ. ಅಲ್ಲಿ ಇಲ್ಲಿ ಕುಳಿತು ನನ್ನಿಂದ ಏನು ಮಾಡಲು ಸಾಧ್ಯ, ಏನು, ಎತ್ತ ಎಂದು ಯೋಚಿಸುತ್ತಿದ್ದೆ. ಸತ್ತು ಹೋಗೋಣ ಎಂದು ಸಹ ಯೋಚಿಸಿದೆ. ಬೆಳಗಿನ ಜಾವ ಮೂರು ಗಂಟೆಗೆ ‘ನಾನು ಸತ್ತು ಹೋದರೆ ಏನಾಗುತ್ತೆ, ಸಾಯದಿದ್ದರೆ ಏನಾಗುತ್ತೆ?’ ಎಂದು ಯೋಚಿಸಿದೆ. ಸಾಯುವುದು ಸುಲಭ, ಬದುಕುವುದು ಕಷ್ಟ ಎಂಬ ಯೋಚನೆಯೂ ಬಂದಿತು. ಭೂಮಿಯ ಕೆಳಗೆ ಇರುವ ಬಿಸಿ ನೀರಿನ ಟ್ಯಾಂಕಿನ ಮುಂದೆ ನಿಂತುಕೊಂಡು ಇವುಗಳನ್ನೆಲ್ಲಾ ಯೋಚಿಸಿದೆ. ಯಾರಿಗೂ ಇಂತಹ  ಬದುಕು ಇರಬಾರದು. ಇದು ಯೋಚನೆಗಳೆಲ್ಲಾ ನನ್ನೊಂದಿಗೇ ಕೊನೆಯಾಗಲಿ,  ಸಾಯೋಣ ಅಂದುಕೊಂಡೆ. ಮೇಲಿಂದ ಒಂದು ಕೊಳಾಯಿಯಲ್ಲಿ ನೀರು ಇಳಿದು, ಅರ್ಧ ಕ್ಷಣ ನಿಂತು ಮತ್ತೆ ಮೇಲಕ್ಕೆ ಹೋಗುತ್ತದೆ. ಹಾಗೆ ಹೋಗುವಾಗ ‘ಇಶ್ ಶ್ …’ ಅಂತ ಶಬ್ಧ ಬರುತ್ತಿತ್ತು.

ಏನಾಯಿತೋ ತಿಳಿಯಲಿಲ್ಲ.  ನನ್ನ ಕೊನೆಯ ನಿರ್ಧಾರದ ಬಗ್ಗೆ ಆ ನೀರನ್ನೇ ಕೇಳಿ ನೋಡೋಣ ಅನ್ನಿಸಿತು. ಅದು ಇಶ್ ಶ್ … ಇಶ್ ಶ್ …’ ಅಂತ ಶಬ್ಧ ಮಾಡುತ್ತಿತ್ತು. ಯಾಕೆ ಅದು ಹಾಗೆ ಶಬ್ಧ ಮಾಡುತ್ತಿದೆ ನನಗೆ ತಿಳಿಯಲಿಲ್ಲ. ಅದು ನನ್ನನ್ನು ಸಾಯಬೇಡ ಅಂತ ಹೇಳುತ್ತಿದೆ ಎಂದು ನಾನು ಅರ್ಥಮಾಡಿಕೊಂಡೆ. ಈಗ ಎದ್ದು ಹೋಗಲೇ ಎಂದು ಕೇಳಿದರೂ ಅದೇ ಶಬ್ಧ ಬರುತ್ತಿತ್ತು.  ಏನು ಮಾಡುವುದು? ನಾನು ಎದ್ದೆ, ಬೆಳಗಿನ ಜಾವ ಆಯಿತು. ಬೆಳಕು ಮೂಡಿತು. ಆ ಬೆಳಕು ಒಂದು ನಿಮಿಷದಲ್ಲಿ ಎಲ್ಲಾ ಕಡೆ ಹರಡಿತು. ತುಂಬಾ ಕತ್ತಲಾಗಿದ್ದ ಆಕಾಶ ದಿಢೀರೆಂದು ಬೆಳಕನ್ನು ಹರಿಸಿ ಇರುಳು ಕರಗಿ ಬೆಳಗಾಗುವುದನ್ನು ನಾನು ಅದೇ ಮೊದಲ ಸಲ ನೋಡಿದ್ದು. ಪರವಶಗೊಂಡೆ. ಕೆಲವೇ  ಕ್ಷಣಗಳಲ್ಲಿ ಎಲ್ಲಾ ಬದಲಾಯಿತು. ಆಕಾಶ ಬಹಳ ತಿಳಿಯಾಯಿತು. ಹಕ್ಕಿಗಳು ಹಾರುವ ಶಬ್ಧ. “ಆಕಾಶವೇ ನಾನು ಬಹಳ ಕಷ್ಟದಲ್ಲಿದ್ದೇನೆ. ನೀನು ಈ ಜಗತ್ತಿನ ಎಲ್ಲ ಕಡೆ ಇರುವೆ. ನೀನು ನನ್ನನ್ನು ನೋಡದೇ ಹೋಗಿದ್ದರೆ ಇಂದು ನನಗೆ ಬೆಳಗಾಗುತ್ತಿರಲಿಲ್ಲ. ನಿನ್ನ ಕೆಳಗೆ ಎಷ್ಟೊಂದು ಜನ ಇದ್ದಾರೆ. ಅವರೆಲ್ಲರ ಬಳಿ ಹೋಗಿ ಹೇಳು. ಇದು ತುಂಬಾ ಕ್ರೂರವಾದ ಬದುಕು. ಜಗತ್ತಿನಲ್ಲಿ ಯಾರೂ ಹೀಗೆ ಬದುಕಬಾರದು. ಹಾಗಂತ ನೀನು ಹೋಗಿ ಹೇಳುವೆಯಾ?”  ಎನ್ನುತ್ತಾ ಅಲ್ಲಿಂದ ಹೊರಟು ಬಂದೆ.

ಪೆಮು: ಅದನಂತರ ಏನು ಮಾಡಿದಿರೀ?

ಬೆವಿ: ನಂತರ ಈ ಕೆಲಸ ಮಾಡುವವರನ್ನು ಹಿಂಬಾಲಿಸುವುದು, ಅವರೊಂದಿಗೆ ಮಾತನಾಡುವುದು, ಅವರ ಬದುಕಿನ ಬಗ್ಗೆ ವಿಚಾರಿಸುವುದು ಎಂದುಕೊಂಡೆ.  ಹಾಗೆ ಹೋಗುತ್ತಿದ್ದಾಗ ರಾತ್ರಿಯ ಹೊತ್ತು ಬಸ್ ನಿಲ್ಧಾಣದಲ್ಲೇ ಮಲಗಿಕೊಳ್ಳುತ್ತಿದ್ದೆ.  ಆಗತಾನೇ ಚಿಕ್ಕ ಚಿಕ್ಕ ಬಸ್ ನಿಲ್ಧಾಣಗಳು ಬಂದಿದ್ದ ಸಮಯ. ಪೊಲೀಸ್ ಬಂದು ಓಡಿಸುತ್ತಿದ್ದರು.  ಯಾರನ್ನೂ ಬಸ್ ನಿಲ್ಧಾಣದಲ್ಲಿ ಮಲಗಲು ಬಿಡುತ್ತಿರಲಿಲ್ಲ. ಅಲ್ಲೇ ಪಕ್ಕದಲ್ಲಿ ಲಾಡ್ಜ್ ಇದೆ, ಐವತ್ತು, ನೂರು ಕೊಟ್ಟರೆ ಅಲ್ಲೇ ಉಳಿದುಕೊಳ್ಳಬಹುದು ಎನ್ನುತ್ತಿದ್ದರು. ಆ ಕಾಲದಲ್ಲಿ ಅವೆಲ್ಲಾ ಬಹಳ ದೊಡ್ಡ ಮೊತ್ತ. ಕೈಯಲ್ಲಿ ಕಾಸಿಲ್ಲ ಎಂದರೆ, ‘ಯಾತಕ್ಕೆ ದುಡ್ಡಿಲ್ಲದೇ ಹೊರಗೆ ಬರುತ್ತೀಯ’ ಎಂದು ಅಟ್ಟುತ್ತಿದ್ದರು. ಕೆಲವು ಹುಡುಗರು ಬೆಂಚಿನ ಕೆಳಗೆ ಹೋಗಿ ನಿದ್ದೆ ಮಾಡುತ್ತಿದ್ದರು. ಪೋಲಿಸರು ಅಲ್ಲಿಗೆ ಬಂದ  ಕೂಡಲೇ ದುಡ್ಡನ್ನು ಎಣಿಸುತ್ತಿದ್ದರು. ನನಗೆ ಆ ಚಾತುರ್ಯವೆಲ್ಲ ಇರಲಿಲ್ಲ. ಆದ್ದರಿಂದ ಸಿಕ್ಕಿಹಾಕಿಕೊಳ್ಳುತ್ತಿದ್ದೆ.  ಪೋಲಿಸಿನವರು ಬರುವಾಗ ಒಂದು ರೀತಿಯ ಸದ್ದಾಗುತ್ತಿತ್ತು. ಅದನ್ನು ಕೇಳಿದಕೂಡಲೆ ನಿದ್ದೆ ಮಾಡುತ್ತಿರುವವರು ಎದ್ದು ಓಡಿಹೋಗುತ್ತಿದ್ದರು. ಅವರು ಕಳ್ಳರು ಅದಕ್ಕೆ ಓಡಿಹೋಗುತ್ತಾರೆ. ನಾನು ಯಾಕೆ ಓಡಬೇಕು ಎಂದು ಅಲ್ಲೇ ಇರುತ್ತಿದ್ದೆ. ಸಿಕ್ಕಿ ಬೀಳುತ್ತಿದ್ದೆ.  ನಂತರ ನಾವು ಬರುವಾಗ ಓಡಿಹೋಗು  ನಾವು ಹೋದ ಮೇಲೆ ಮತ್ತೆ ಬಂದು ಮಲಗಿಕೊ” ಎಂದು ಅವರೇ ಹೇಳಿಕೊಟ್ಟರು. ಅಮೇಲೆ ಹಾಗೆಯೇ ಮಾಡುತ್ತಿದ್ದೆ.

ಪೆಮು: ಆ ಘಟನೆ ನಡೆದ ನಂತರ ನೀವು ಮನೆಯನ್ನು ಬಿಟ್ಟು ಹೊರಗೆ ಬಂದು ಬಿಟ್ಟಿರಾ?

ಬೆವಿ: ಸ್ವಲ್ಪ ದಿನ ಮನೆಯಲ್ಲಿರುತ್ತಿದ್ದೆ, ಸ್ವಲ್ಪ ದಿನ ಹೊರಗಡೆ ಸುತ್ತಾಡುತ್ತಿದ್ದೆ. ಹೀಗೆ ದಿನ ಕಳೆಯುತ್ತಿತ್ತು. ಅದನಂತರ ಜನ ನನ್ನನ್ನು ಗುರುತಿಸತೊಡಗಿದರು. ಬಸವಲಿಂಗಪ್ಪ ಎಂಬುವರು ಈ ಬಗ್ಗೆ ಮಾತನಾಡುತ್ತಿದ್ದರು. ಕುವೆಂಪು ಎಂಬ ಕನ್ನಡ ಕವಿಯೊಬ್ಬರು ಇದ್ದರು. ಅವರು ‘ಜಲಗಾರರು’ ಎಂಬ ಒಂದು ಕಥೆ ಸಹ ಬರೆದಿದ್ದಾರೆ. ಶಿವ ಜಟಾಮುಡಿಯೊಂದಿಗೆ ಧರ್ಮೋಪದೇಶ ಮಾಡುತ್ತಿರುವರು. ದೂರದಲ್ಲಿ ಒಬ್ಬ ತೋಟಿ ಬಂದು ಕುಳಿತುಕೊಂಡು ಕೇಳಿಸಿಕೊಳ್ಳುತ್ತಿರುತ್ತಾನೆ. ತೋಟಿಗಳು ಇವನ್ನೆಲ್ಲಾ ಕೇಳಕೂಡದಲ್ಲವೇ? ಕಥೆಯಲ್ಲಿ ಶಿವ ಬಂದು ತೋಟಿಯ ಹತ್ತಿರ ಹೋಗಿ ಮಾತನಾಡಿಸುತ್ತಾರೆ. ಇದನ್ನೆಲ್ಲ ನಮ್ಮ ಜನರಿಗೆ ಹೇಳಿದೆವು.

ದಿನ ಕಳೆದಂತೆ ನನಗೆ ದೂರವಾಣಿ ಕರೆಗಳು ಬರಲು ಪ್ರಾರಂಭವಾಯಿತು. ದೂರವಾಣಿ ಸಂಪರ್ಕವನ್ನು ಮನೆ ಇದ್ದವರು ಮಾತ್ರವೇ ಬಳಸುವ ಕಾಲ ಅದು. ಆದ್ದರಿಂದ ಪಬ್ಲಿಕ್ ಬೂತಿನ ನಂಬರ್‌ಗಳನ್ನು ಅವರ ಬಳಿ ಕೊಡುತ್ತಿದ್ದೆ. ಯಾರಾದರು ನನಗೆ ಸುದ್ಧಿ ತಲುಪಿಸಬೇಕೆಂದರೆ ಪಬ್ಲಿಕ್ ಬೂತಿನವರ ಬಳಿ ಹೇಳುತ್ತಿದ್ದರು. ಅಮೇಲೆ ಆ ಸುದ್ಧಿ ನನಗೆ  ತಲುಪುತ್ತಿತ್ತು. ಸಮಸ್ಯೆಗಳ ಬಗ್ಗೆ  ನಾನು ಮಾತನಾಡುತ್ತೇನೆ ಎಂಬ ನಂಬಿಕೆ ಜನರಿಗೆ ಇತ್ತು. ಆದ್ದರಿಂದ ಸುದ್ಧಿಯನ್ನು ನನಗೆ  ತಲುಪಿಸುತ್ತಿದ್ದರು. ಕೆಜಿಎಫನಲ್ಲಿ ಬಹಳ ಶೌಚಾಲಯಗಳಿದ್ದವು. ಅಲ್ಲಿರುವ ಕೊರತೆಗಳನ್ನು ಉಲ್ಲೇಖಿಸಿ ಒಮ್ಮೆ ಪ್ರಧಾನ ಮಂತ್ರಿಯವರಿಗೆ  ಪತ್ರ ಬರೆದೆ.

“ಪ್ರೀತಿಯ ಪ್ರಧಾನ ಮಂತ್ರಿ ಅವರಿಗೆ, ಮಲಮೂತ್ರಗಳು ತೆಗೆಯುವ ಕೆಲಸದಲ್ಲಿ ಮನುಷ್ಯರನ್ನು ತೊಡಗಿಸುವುದು ಅಪಾಯಕರವಾದದ್ದು. ಅಸಹ್ಯಕರವಾದದ್ದು ಸಹ. ಆದ್ದರಿಂದ ತಕ್ಷಣ ನಿಲ್ಲಿಸಿ.”

“ನಿಲ್ಲಿಸಿ…” ಎನ್ನುವ ಪದವನ್ನು ಉಳಿದ ಪುಟಗಳಲ್ಲಿ ಎಷ್ಟು ಸಲ ಬರೆಯಲು ಸಾಧ್ಯವೋ, ಅಷ್ಟು ಸಲ ಬರೆದು ತುಂಬಿಸಿದೆ. ಟಪಾಲಿಗೂ ಹಾಕಿಬಿಟ್ಟೆ. ಪ್ರಧಾನ ಮಂತ್ರಿಯವರ ವಿಳಾಸ ಸಹ ತಿಳಿಯದು. ಪ್ರಧಾನ ಮಂತ್ರಿ, ದಿಲ್ಲಿ ಎಂದು ಬರೆದು ಕಳುಹಿಸಿದೆ. ಆ ಪತ್ರ ಎಲ್ಲಿ ಹೋಯಿತು ಎಂದು ತಿಳಿಯದು. ನನಗೆ ಉತ್ತರವೂ ಬರಲಿಲ್ಲ. ನಡೆಯುವ ತಪ್ಪುಗಳನ್ನು ಅಧಿಕಾರದಲ್ಲಿರುವವರಿಗೆ ತಿಳಿಸಬೇಕು ಎಂಬುದು ನನ್ನ ಉದ್ದೇಶ. ನಂತರ ನಿರ್ದೇಶಕರಿಗೆ ಒಂದು ಪತ್ರ ಬರೆದೆ. ನನಗೆ ಇಂಗ್ಲೀಷ್, ಕನ್ನಡ ಯಾವುದು ಬರುತ್ತಿರಲಿಲ್ಲ. ಸ್ವಲ್ಪ ಮಟ್ಟಿಗೆ ತೆಲುಗು ಗೊತ್ತಿತ್ತು.

ಶಾಲೆಯಲ್ಲಿ ಹೇಗೆ ಪತ್ರ ಬರೆಯಲು ಹೇಳಿಕೊಡುತ್ತಿದ್ದರೋ ಹಾಗೆ ಇಂಗ್ಲೀಷಿನಲ್ಲಿ ಬರೆಯಲು ಬರುತ್ತಿತ್ತು. ರಜೆಯ ಪತ್ರ ಬರೆಯಲು ಗೊತ್ತು. ಅಷ್ಟೇ.  ಕುಪ್ಪಂ ನಲ್ಲಿ ಓದಿದೆ. ಕುಪ್ಪಂ ಎಂದು ಬರೆದರೆ ಕಾಮ ಹಾಕಬೇಕು, ತಾರೀಕು ಬರೆದು ಪೂರ್ಣ ವಿರಾಮ ಚುಕ್ಕೆ ಹಾಕಬೇಕು. ಡಿಯರ್ ಹೆಡ್ ಮಾಸ್ಟರ್ ಅಂತ ಬರೆಯಬೇಕು. ಅದರ ಕೆಳಗೆ ಯಾವ ಕಾರಣಕ್ಕೆ ಲೀವ್ ಬೇಕೆಂದು ಬರೆಯಬೇಕು. ಅದನ್ನು ಬರೆಯದಿದ್ದರೂ ಪರವಾಗಿಲ್ಲ. ಈ ಕಾಮ, ಪೂರ್ಣವಿರಾಮ ಚುಕ್ಕೆ ಎಲ್ಲಾ ಹಾಕಿದರೆ ಐದು ಮಾರ್ಕ್ಸ್ ದೊರಕುತ್ತಿತ್ತು. ಅದರ ಕೆಳಗೆ ‘yours faithfully’ ಅಂತ ಬರೆದು ಹೆಸರು ಬರೆಯಬೇಕು. ಅದಕ್ಕೆ ಎರಡು ಮಾರ್ಕ್ಸ್, ಒಟ್ಟು ಏಳು ಮಾರ್ಕ್ಸ್ ದೊರಕುವುದು. ಶಾಲೆಯಲ್ಲಿ ಮತ್ತೇನನ್ನು ಹೇಳಿಕೊಡುತ್ತಾರೆ? ಆದ್ದರಿಂದ ನನಗೆ ಪತ್ರ ಬರೆಯುವುದಕ್ಕೆ ಬರುತ್ತಿರಲಿಲ್ಲ. ಆದ್ದರಿಂದ ಒಬ್ಬ ಗೆಳೆಯನ ಬಳಿ ಇಂಗ್ಲೀಷಿನಲ್ಲಿ ಪತ್ರ ಬರೆದುಕೊಡಲು ಕೇಳಿದೆ. ನಿರ್ದೇಶಕರಿಂದ ಉತ್ತರ ಇಲ್ಲ. ಒಂದು ವಾರದ ನಂತರ ಈ ಬಗ್ಗೆ ಕ್ರಮವನ್ನು ತೆಗೆದುಕೊಳ್ಳದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಮತ್ತೆ ತಿಳಿಸಿದೆ. ನಾನು ಹುಚ್ಚಾಂತ ಅವರಿಗೇನು ಗೊತ್ತು. ಆದ್ದರಿಂದ ಅವರಿಂದ ಉತ್ತರ ಬಂದಿತು.

‘ಇಂತಹ ಕೆಲಸಗಳಿಗೆ ಮನುಷ್ಯರನ್ನು ನೇಮಿಸುವುದರಿಂದ ಆಗುವ ಸಮಸ್ಯೆಗಳು ನಮಗೆ ತಿಳಿದ ವಿಷಯವೇ. ಬ್ರಿಟೀಷ್ ಆಡಳಿತದ ಕಾಲದಿಂದ ಕಳೆದ 114 ವರ್ಷಗಳು ಇಂತಹ ಸಮಸ್ಯೆಗಳು ನಗರಗಳಲ್ಲಿ ನಡೆಯುತ್ತಲೇ ಇವೆ.  ಇದನ್ನು ಬದಲಾಯಿಸಲು ಯೋಜನೆಗಳನ್ನು ಮಾಡುತ್ತಿದ್ದೇವೆ. ಜವಹರ್ ರೋಜ್ಗಾರ್ ಯೋಜನೆಯ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಪ್ರತಿ ವರ್ಷವೂ ಇದಕ್ಕಾಗಿ ದೊಡ್ಡ ಮೊತ್ತವನ್ನು ನೀಡಲಾಗುತ್ತಿದೆ. ಕಾರ್ಮಿಕರ ಸಂಖ್ಯೆಯನ್ನು ಬಹಳಷ್ಟರ ಮಟ್ಟಿಗೆ ಕಡಿಮೆ ಮಾಡಿದ್ದೇವೆ.  ಕಾರ್ಮಿಕರ ಸಂಖ್ಯೆಯನ್ನು ಇನ್ನೂ ಕಡಿಮೆ ಮಾಡುತ್ತೇವೆ’ ಎಂದು  ಉತ್ತರ  ಬಂದಿತು.

ಒಬ್ಬ ಅಧಿಕಾರಿ ನನ್ನನ್ನು ಗೌರವಿಸಿ ಉತ್ತರ ಬರೆದಿರುವರಲ್ಲಾ ಎಂದು ಸಂತೋಷವಾಯಿತು. ಅವರು KGF ನಿರ್ದೇಶಕರಾಗಿದ್ದರು ಸಹ. ಅದೂ ನನ್ನನ್ನು ‘ಸರ್’ ಎಂದು ಸಂಭೋದಿಸಿ ಒಬ್ಬ ನಿರ್ದೇಶಕರಿಂದ ಪತ್ರ ಬಂದಿತ್ತು. ಆ ಪತ್ರವನ್ನು ತೆಗೆದುಕೊಂಡು ಊರಿನಲ್ಲಿ ಎಲ್ಲರಿಗೂ ತೋರಿಸಿದೆ. ಅಲ್ಲಿಗೆ ನಿಲ್ಲಿಸಲಿಲ್ಲ. ಆ ಪತ್ರದಲ್ಲಿ ಶೌಚಾಲಯಗಳನ್ನು ಕಟ್ಟಲು ಹದಿನೆಂಟು ಲಕ್ಷ ಅನುದಾನ ನೀಡಿರುವುದಾಗಿಯೂ, ಎಷ್ಟು ಶೌಚಾಲಯಗಳನ್ನು ಕಟ್ಟಲಾಗಿದೆ ಎಂಬ ಮಾಹಿತಿಯೂ ಇತ್ತು. ಊರಿನಲ್ಲಿರುವ ಶೌಚಾಲಯಗಳನ್ನೆಲ್ಲಾ ಲೆಕ್ಕ ಹಾಕಿದೆ. ನೀಡಿದ್ದ ಮಾಹಿತಿಗೆ ಅದು ತಾಳೆಯಾಗಲಿಲ್ಲ. ಅವುಗಳ ಸಂಖೈ ಕಡಿಮೆಯಿತ್ತು.  ಇದರಲ್ಲಿದ್ದ ಭ್ರಷ್ಟಾಚಾರವನ್ನು ಉಲ್ಲೇಖಿಸಿ ಮತ್ತೊಂದು ಪತ್ರವನ್ನು ಬರೆದೆ. ಅವರಿಗೆ ಭಯ ಉಂಟಾಯಿತು.

ನನ್ನ ಬಳಿ ಕ್ಯಾಮೆರಾ ಇರಲಿಲ್ಲ. ಆದ್ದರಿಂದ, ಪರಿಚಯದವರನ್ನು ಕರೆದು ಫೋಟೋ ತೆಗೆದುಕೊಡಲು ಹೇಳಿದೆ. ಸ್ಟುಡಿಯೋದವರು, ಮದುವೆ, ಹುಟ್ಟುಹಬ್ಬ ಎಂದು ಫೋಟೋ ತೆಗೆಯುವವರು. ಯಾರು ಬಂದು ಫೋಟೋ ತೆಗೆಯುತ್ತಾರೆ? ಅವರನ್ನು ಕರೆದುಕೊಂಡು ಹೋಗುವುದು ಬಹಳ ದೊಡ್ಡ ಸಮಸ್ಯೆ. ಒಬ್ಬರು ಬಂದು ತೆಗೆದುಕೊಟ್ಟರು. ಎರಡು ಫೋಟೋ ತೆಗೆದು ಅದನ್ನು ಪತ್ರದೊಂದಿಗೆ ಲಗತ್ತಿಸಿ ನಿರ್ದೇಶಕರಿಗೆ ಕಳುಹಿಸಿಕೊಟ್ಟೆ. ಈ ವಿಷಯ ಸ್ವಲ್ಪ ಗಂಭೀರವಾಗುತ್ತಿದೆ ಅನ್ನಿಸಿ  ಅವರಿಗೆ ಭಯ ಉಂಟಾಯಿತು.  ಇವೆಲ್ಲಾ ಏನು ಪರಿಣಾಮ ಮಾಡುತ್ತಿಲ್ಲ ಎಂದು ನಾನು ಲೆಟ್ಟರ್ಸ್ ಟು ದ ಎಡಿಟರ್ ಗೆ ಒಂದು ಪತ್ರ ಬರೆದೆ.

ಪಿ.ಎಸ್. ರಾವ್ ಎಂಬುವರು ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ವಿದ್ಯಾಲಯದಲ್ಲಿದ್ದರು. ದಿನಪತ್ರಿಕೆಯಲ್ಲಿ ಬಂದಿದ್ದ ಪತ್ರವನ್ನು ಓದಿ ಅವರು ನನ್ನನು ಕರೆದು ‘ಒಳ್ಳೆಯ ಕೆಲಸ ಮಾಡುತ್ತಿದ್ದೀಯಪ್ಪ. ಈ ವಯಸ್ಸಿನಲ್ಲಿ ಇಂತಹ ಕೆಲಸವನ್ನು ಹೇಗೆ ಮಾಡುತ್ತಿದ್ದೀಯೋ. ಆದರೆ ನೀನು ಬಹಳ ಎತ್ತರಕ್ಕೆ ಬೆಳೆಯುತ್ತೀಯ. ಹೇಳಲಾಗದಷ್ಟು ದೊಡ್ಡವನಾಗಿ ಬೆಳೆಯುತ್ತೀಯ’ ಎಂದು ಹೇಳಿದರು. ನಂತರ ಅವರು ಇಂಡಿಯನ್ ಎಕ್ಸ್ ಪ್ರೆಸ್ನಲ್ಲಿ ನನ್ನ ಬಗ್ಗೆ ಒಂದು ಕಾಲಂ ಅನ್ನು ಬರೆದರು. ಅಲ್ಲಿ ಅದು ಪ್ರಕಟವಾಯಿತು. ‘ನೀನು ಎಲ್ಲಾ ದಿನಪತ್ರಿಕೆಗಳಿಗೂ ಬರೀ. ನಿನ್ನ ಹೆಸರಿನಲ್ಲಿಯೇ ಬರೀ’ ಅಂತ ಹೇಳಿದರು. ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಈ ಎರಡು ಪತ್ರಿಕೆಗಳಿಗೂ ಬರೆದೆ. ಆದರೆ ಯಾವುದೂ ಪ್ರಕಟವಾಗಲಿಲ್ಲ. ಇವರು ಹಣ ತೆಗೆದುಕೊಂಡು ಪ್ರಕಟಿಸಲಿಲ್ಲ  ಅಂದುಕೊಂಡೆ.

ಏಪ್ರಿಲ್ 14 ನೇ ತಾರೀಕು. ಅದರ ಬಗ್ಗೆ ಒಂದು ಅಂಕಣ ಬರೆಯುವುದಕ್ಕಾಗಿ ಹತ್ತು ದಿನ ಮೊದಲು ಒಬ್ಬ ವಿಶೇಷ ವರದಿಗಾರರು ನನ್ನನ್ನು ನೋಡಲು ಬಂದರು. ನನ್ನ ಬಗ್ಗೆ ಬಹಳ ಜನಗಳ ಬಳಿ ವಿಚಾರಿಸಿದ್ದರು. ನಾನು ಆಗಾಗ ಆಂಧ್ರಪ್ರಭಾ ತೆಲುಗು ಪತ್ರಿಕೆಗೆ ಏನಾದರೂ ಸುದ್ಧಿ ಕಳುಹಿಸುತ್ತಿದ್ದೆ. ಅದನ್ನು ತೆಲುಗಿನಲ್ಲಿ ಪ್ರಕಟಿಸುತ್ತಿದ್ದರು. ಇಂಗ್ಲೀಷಿನಲ್ಲೂ ಪ್ರಕಟಿಸುತ್ತಿದ್ದರು. Occasional News Contributor ಎಂದು ಹೇಳುತ್ತಾರೆ. ಹಾಗೆ ಸ್ವಲ್ಪ ಕೆಲಸ ಮಾಡುತ್ತಿದ್ದೆ. ಆದ್ದರಿಂದ ನನಗೆ ಕೆಲವು ಪತ್ರಕರ್ತರು ಗೊತ್ತಿತ್ತು. ಅವರೇ ನನ್ನನ್ನು ಬೇಟಿಯಾಗಲು ಆ ವರದಿಗಾರರನ್ನು ಕಳುಹಿಸಿದ್ದರು. ಅವರ ಹೆಸರು ಪ್ರಸನ್ನ ಕುಮಾರ್. ಬೆಂಗಳೂರಿನಲ್ಲಿದ್ದಾರೆ. ನನ್ನ ಬಳಿ ಅವರು ಏನೇನೋ ಕೇಳಿದರು. ನನ್ನ ಕಥೆಯನ್ನು ಯಾರು ಕೇಳುತ್ತಾರೆ ಎಂದು ಎಲ್ಲವನ್ನೂ ಹೇಳಿದೆ. ಫೋಟೋ ಕೇಳಿದರು.  ನನ್ನ ಫೋಟೋ ಕೊಡುವುದಿಲ್ಲ ಎಂದು ಹೇಳಿ ಆ ಅಮ್ಮನ ಫೋಟೋವಿನ ಫೋಟೋಕಾಪಿ ಒಂದನ್ನು ಕೊಟ್ಟೆ. ಒರಿಜನಲ್ ಬೇಕು ಅಥವಾ ನೆಗೆಟಿವ್ ಬೇಕು ಎಂದು ಕೇಳಿದರು. ಇವರು ಚಿನ್ನದ ಗಣಿಯ ಆಸಾಮಿಗಳಾಗಿರಬಹುದೇ ಎಂಬ ಭಯ. ಅವರೋ ಬಹಳ ಗಿಂಜಿದರು.  ನಾನು ಕೋಲಾರಕ್ಕೆ ಹೋಗಿ ಅವರಿಗೆ ತಂದು ಕೊಟ್ಟೆ. ಎರಡು ದಿನ ಬಿಟ್ಟು ಹೋಗಿ ನೆಗೆಟಿವನ್ನು ವಾಪಸ್ಸು ತಂದೆ. ಬರೆಯುತ್ತೇನೆ ಎಂದು ಹೇಳಿದವರು ಏಪ್ರಿಲ್ 14ಕ್ಕೆ ಬರೆಯಲಿಲ್ಲ. ಮಾರನೆಯ ದಿನ ದಿನಪತ್ರಿಕೆಯೊಂದರ ಸಪ್ಲಿಮೆಂಟ್ರಿ ಬರುವುದಿತ್ತು. ಅದರಲ್ಲಿ ವಿಸ್ತಾರವಾಗಿ ನಾನು ಹೇಳಿದ್ದ ಎಲ್ಲವನ್ನೂ ಫೋಟೋವಿನೊಂದಿಗೆ ಬರೆದಿದ್ದರು. ‘ನಾಚಿಕೆ’ ಎಂಬ ಶೀರ್ಷಿಕೆ ಕೊಟ್ಟು ‘ರಾಜ್ಯದ ರಾಜಧಾನಿಯ ಸಮೀಪದಲ್ಲೇ ಕೈಯಿಂದ ಮಲಮೂತ್ರ ಎತ್ತುವ ಕರ್ಮಚಾರಿಗಳು’ ಎಂದು ವಿವರವಾಗಿ ಬರೆದಿದ್ದರು. ಕೋಲಾರದ ಗಣಿಯ ನಿರ್ದೇಶಕರೆಲ್ಲರೂ ಹೆದರಿದರು.

ಏಪ್ರಿಲ್ 14ರ ಕಾರ್ಯಕ್ರಮವನ್ನು ಏಪ್ರಿಲ್ 23, 24 ತಾರೀಕುಗಳಲ್ಲಿ ನಡೆಸಿದರು. ಅದಕ್ಕೆ ರಾಮಕೃಷ್ಣ ಹೆಗ್ಗಡೆ, ದೇವೇಗೌಡ ಎಲ್ಲರೂ ಬಂದಿದ್ದರು. ಪತ್ರಿಕೆಯಲ್ಲಿ ಬಂದಿದ್ದ ಲೇಖನಿಯೊಂದಿಗೆ ಒಂದು  ಪತ್ರವನ್ನು ಲಗತ್ತಿಸಿ ಅವರಿಗೆ ಕೊಟ್ಟೆವು. ಆಗೆಲ್ಲಾ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯನ್ನು ವೇದಿಕೆಯ ಮೇಲೆ ಬೇಟಿಯಾಗುವುದು ದೊಡ್ಡ ವಿಷಯವಾಗಿರಲಿಲ್ಲ. ಅವರೂ ಸಹ ಜನಗಳೊಂದಿಗೆ ಸರಳವಾಗಿ ಬೆರೆಯುತ್ತಿದ್ದರು. ಓದುತ್ತಿದ್ದರೋ ಇಲ್ಲವೋ ತಿಳಿಯದು, ಕೊಡುತ್ತಿದ್ದ ಪತ್ರಗಳನ್ನು ತೆಗೆದುಕೊಳ್ಳುತ್ತಿದ್ದರು. ರಾಜ್ಯದಲ್ಲಿ ಜನತಾ ಪಕ್ಷವೂ, ಕೇಂದ್ರದಲ್ಲಿ  ಕಾಂಗ್ರೆಸ್ ಆಡಳೀತವೂ ಇದ್ದ ಸಮಯ ಅದು. ಚಿನ್ನದ ಗಣಿ ಕೇಂದ್ರ ಸರಕಾರದ ಅಧೀನದಲ್ಲಿದ್ದ ಸಂಸ್ಥೆ. ಆದ್ದರಿಂದ ಕೇಂದ್ರ ಸರ್ಕಾರ ಅಸ್ಪೃಶ್ಯತೆಯನ್ನು ಮುಂದುವರೆಸುತ್ತಿದೆ ಎಂದು ಸಮಸ್ಯೆ ಉಂಟುಮಾಡಲು ಬಯಸಿದರು. ಆದ್ದರಿಂದ ನನ್ನನ್ನು ಒಂದೇ ದಿನದಲ್ಲಿ ಹೀರೋ ಮಾಡಿಬಿಟ್ಟರು. ಒಂದೇ ದಿನದಲ್ಲಿ ಎಂಟು ಮಂತ್ರಿಗಳು ನನ್ನನ್ನು ನೋಡಲು ಬಂದರು. ನಮ್ಮ ಕ್ಷೇತ್ರಕ್ಕೆ ಯಾರು ಬರುತ್ತಿರಲಿಲ್ಲ. ಆದರೆ ನಮ್ಮ ಶೌಚಾಲಯಗಳನ್ನು ನೋಡಲು ಮಂತ್ರಿಗಳು ಬಂದರು. ಎಸ್.ಪಿ. ಇದನ್ನು ನೋಡಿ ನಡುಗಿದರು.

ಶೌಚಾಲಯವನ್ನು ನೋಡಲು ಇವರೇಕೆ ಬರುತ್ತಿದ್ದಾರೆ ಎಂದು ಎಲ್ಲರಿಗೂ ಗೊಂದಲ. ಪೊಲೀಸ್ ಉನ್ನತ ಅಧಿಕಾರಿಗಳು, ಕ್ಯಾಬಿನೆಟ್ ಮಂತ್ರಿಗಳು ಇವರೆಲ್ಲಾ ಬರುವುದನ್ನು ನೋಡಿ ಮನೆಯಲ್ಲಿದ್ದವರು ಹೆದರಿದರು. ಅವರು ಒಬ್ಬೊಬ್ಬರೇ ಬಂದು ಮನೆಯನ್ನು ನೋಡುವುದು, ಅವರನ್ನು ಕರೆದುಕೊಂಡು ಹೋಗಿ ಶೌಚಾಲಯಗಳನ್ನು ತೋರಿಸುವುದರಲ್ಲೇ  ದಿನ ಕಳೆಯಿತು. ಜನತಾ ಪಕ್ಷದ ಮುಖ್ಯಮಂತ್ರಿಯ ಹೊರತು ಉಳಿದ ಎಲ್ಲರೂ ಬಂದಿದ್ದರು. ರಾಂವಿಲಾಸ್ ಪಾಸ್ವಾನ್ ಸಹಾ ಒಂದು ಪತ್ರ ಬರೆದರು. ಕೇಂದ್ರದಲ್ಲಿದ್ದವರಿಗೆ ಇದರಿಂದ ಭಯವಾಯಿತು. ಸುತ್ತಮುತ್ತಲವರು ಮಂತ್ರಿಗಳು ನನ್ನನ್ನು ನೋಡಲು ಬರುತ್ತಿದ್ದಾರೆ ಅಂದುಕೊಂಡರು. ಮನೆ ಇಲ್ಲದವರು ನಮಗೆ ಮನೆ ಕೊಡಿಸು ಎಂದು, ತಮ್ಮ ಮಕ್ಕಳಿಗೆ ಕೆಲಸ ಕೊಡಿಸು ಎಂದು ಕೇಳಲು ತೊಡಗಿದರು. ನನಗೋ ಏನೂ ಅರ್ಥವಾಗಲಿಲ್ಲ. ರಾತ್ರಿ ವೇಳೆ ಅಲೆದಾಡಿ ತಡವಾಗಿ ಮನೆ ಸೇರುವುದರಿಂದ ಮನೆಯ ಮುಂದಿನ ಅಂಗಳದಲ್ಲೇ ಮಲಗಿಬಿಡುತ್ತಿದ್ದೆ. ಬೆಳಗಾದ ಕೂಡಲೇ ಎದ್ದು ಹೊರಟುಬಿಡುತ್ತಿದ್ದೆ.  ನನಗೆ ರಕ್ಷಣೆ ನೀಡಲು ಸೆಕ್ಯೂರಿಟಿಗಳನ್ನು ಕಳುಹಿಸಿದರು. ನನಗೆ ಇವೆಲ್ಲಾ ಬೇಡವೆಂದು ವಾಪಸ್ಸು  ಕಳುಹಿಸಿಬಿಟ್ಟೆ.

ಮುಂದಿನ ಮೂರು ನಾಲ್ಕು ದಿನಗಳಲ್ಲಿ ಹಳೆಯ ಶೌಚಾಲಯಗಳನ್ನು ಕೆಡವಿ ಶೌಚಾಲಯಗಳನ್ನು ಹೊಸದಾಗಿ ಕಟ್ಟಿದರು. ಇಪ್ಪತ್ತು ಮೂವತ್ತು ಮಂದಿಗೆ ಆಟೋರಿಕ್ಷಾ ಕೊಟ್ಟರು. ಕೆಲವರಿಗೆ ಹಸು ಕೊಟ್ಟರು. ಏನು ಕೇಳಿದರೂ ಅವನ್ನೆಲ್ಲಾ ಕೊಟ್ಟರು. ಜಿಲ್ಲಾ ಕಮಿಷನರ್  ಡಾಕ್ಟರ್ ಸಿ.ಸುಬ್ರಮಣ್ಯಂ ನಮ್ಮನ್ನು ನೋಡಲು ಬಂದರು. ಇವೆಲ್ಲ ಬಹಳ ಪ್ರಾಮುಖ್ಯತೆ ಪಡೆಯಿತು. ಅಭ್ಯಾಸ ಇಲ್ಲದ್ದರಿಂದ ಯಾವುದನ್ನೂ ನನ್ನಿಂದ ಸಹಿಸಲಾಗಲಿಲ್ಲ. ನಮಗೆ ಇನ್ನೇನು ಬೇಕು. ಕೈಯಿಂದ ಮಲಮೂತ್ರ ತೆಗೆಯುವುದು ನಿಲ್ಲಬೇಕು,  ಶೌಚಾಲಯಗಳು ಬೇಕು ಎಂದು ಪ್ರಯತ್ನಿಸಿದೆ. ಅದು ಆಯಿತು. ಇನ್ನು ಎಲ್ಲ ಆಯಿತು. ಇಲ್ಲಿಂದ ಹೊರಟುಬಿಡೋಣ ಎಂದು ಹೊರಗೆ ಬಂದೆ.

ಅಲ್ಲಿಂದ ಯಾಕೆ ಹೊರಗೆ ಬಂದೆ ಯಾರಿಗೂ ತಿಳಿಯದು. ಅಮೇಲೆ ಸೈಕಲ್ ಮೇಲೆ ಪ್ರಯಾಣ ಪ್ರಾರಂಭಿಸಿದೆ. ಕರ್ನಾಟಕ, ಆಂಧ್ರ ಎಂದು ಸುತ್ತಾಡಿದೆ. ನಂತರ ಎಸ್.ಆರ್.ಶಂಕರ್ ಅಂತ ತಮಿಳಿನವರು ಒಬ್ಬರು. ಅವರು ಐ.ಏ.ಎಸ್. ಅಧಿಕಾರಿ. ಆಂಧ್ರದಲ್ಲಿ ಅವರ ಸಂಪರ್ಕ ಆಯಿತು. ಅದರ ನಂತರ ಹದಿನೇಳು ವರ್ಷಗಳು ಅವರು ಸಾಯುವವರೆಗೆ ನನ್ನೊಂದಿಗಿದ್ದರು. ಅವರು ನನಗೆ ಬಹಳ ವಿಷಯಗಳನ್ನು ಕಲಿಸಿದರು. ಚಳುವಳಿ ಎಂದರೆ ಏನು, ಚಟುವಟಿಗೆಗಳು ಹೇಗಿರಬೇಕು ಎಂಬುದೆಲ್ಲವನ್ನು ಕಲಿಸಿಕೊಟ್ಟರು. ನಂತರ ಪಾಲ್ ದಿವಾಕರ್ ಮುಂತಾದ ಹಿರಿಯರ ಸಂಪರ್ಕ ದೊರಕಿತು. ಏನಂತ ಗೊತ್ತಿಲ್ಲ, ಎಲ್ಲರೂ ನನ್ನನ್ನು ಪ್ರೀತಿಯಿಂದ ನೋಡಿಕೊಂಡರು. ಯಾರಿಂದಲೂ ನಾನು ಹಣ ತೆಗೆದುಕೊಳ್ಳುತ್ತಿರಲಿಲ್ಲ. ಹಣ ತೆಗೆದುಕೊಳ್ಳುವ ಅಭ್ಯಾಸ ನನಗೆ ಇಲ್ಲ. ತಿನ್ನಲು ಏನಾದರೂ ಕೊಟ್ಟರೆ ತೆಗೆದುಕೊಳ್ಳುತ್ತಿದ್ದೆ. ಅದೂ ಸಹ ಮೂರು ಹೊತ್ತು ತೆಗೆದುಕೊಳ್ಳುತ್ತಿರಲಿಲ್ಲ. ಒಂದು ಹೊತ್ತು ಮಾತ್ರ. ಯಾಕೆಂದರೆ ಉಪವಾಸ ಇರಲು ಆಗುವುದಿಲ್ಲ ಅಲ್ಲವೇ. ಯಾವ ಊರಿಗೆ ಹೋದರು ಆದಷ್ಟು ಕಾರ್ಯಾಲಯದಲ್ಲಿಯೇ ಉಳಿದುಬಿಡುತ್ತಿದ್ದೆ. ಹೊರಗೆ ಎಲ್ಲೂ ಹೋಗುತ್ತಿರಲಿಲ್ಲ. ಅಂತಹ ದೊಡ್ಡ ಖರ್ಚುಗಳು ಸಹಾ ಏನೂ ಇರುತ್ತಿರಲಿಲ್ಲ.

ಈವರೆಗೆ ನಮ್ಮದು ಒಂದು ನೊಂದಾಯಿತ ಸಂಸ್ಥೆಯಾಗಿರಲಿಲ್ಲ. ಯಾರಿಗೂ ಹಣ ಕೊಡುವುದಕ್ಕೆ ನಮಗೆ ಸಾಧ್ಯವಿರಲಿಲ್ಲ. ಎರಡು, ಮೂರು ಎನ್.ಜಿ.ಓಗಳಲ್ಲಿ ಕೆಲಸ ಮಾಡುವ ಹತ್ತಿಪ್ಪತ್ತು ಮಂದಿ ನಮಗಾಗಿ ಕೆಲಸ ಮಾಡುತ್ತಾರೆ. ಆ ಎನ್.ಜಿ.ಓ ಗಳೇ ಅವರಿಗೆ ತಿಂಗಳ ಸಂಬಳ ಕೊಡುತ್ತಾರೆ. ನಾವು ಒಂದು ನಿಧಿ ಅಂತ ಇಟ್ಟುಕೊಂಡು ನಿರ್ವಹಣೆ ಮಾಡಲು ಸಾಧ್ಯವಿಲ್ಲ ಅನ್ನುವ ಕಾರಣಕ್ಕೆ  ಹೀಗೆ ಮಾಡುತ್ತೇವೆ. ಕ್ರಮೇಣ ಸರಕಾರದೊಂದಿಗೆ ಮಾತುಕತೆಗೆ ಪ್ರಾರಂಭಿಸಿದೆವು. ಆದ್ದರಿಂದ ಕೈಯಿಂದ ಮಲಮೂತ್ರ ಎತ್ತುವ ಕರ್ಮಚಾರಿಗಳು ಎಂದರೆ ಈಗ ಸಫಾಯಿ ಕರ್ಮಚಾರಿ ಆಂದೋಲನ ಎಂದೇ ಪ್ರಖ್ಯಾತವಾಗಿದೆ.

ಮುಂದುವರೆಯುವುದು …

ಭಾಗ ೧ : http://ruthumana.com/2018/01/27/bezwada-wilson-interview-part-1/

One comment to “ಬೆಜವಾಡ ವಿಲ್ಸನ್ ಸಂದರ್ಶನ – ಭಾಗ ೨ : ನನ್ನ ಕೈಗಳನ್ನು ನೋಡು.. ನನ್ನ ಬದುಕು ಹೇಗಾಯ್ತು ನೋಡು..”

ಪ್ರತಿಕ್ರಿಯಿಸಿ