ಬೆಜವಾಡ ವಿಲ್ಸನ್ ಸಂದರ್ಶನ – ಭಾಗ ೪ : ನನ್ನ ಕೈಗಳನ್ನು ನೋಡು.. ನನ್ನ ಬದುಕು ಹೇಗಾಯ್ತು ನೋಡು..

ಪೆಮು: ಯಂತ್ರಗಳನ್ನು ಬಳಸುವುದರಲ್ಲಿ ಸರಕಾರಕ್ಕೆ ಏನು ಸಮಸ್ಯೆ?

ಬೆವಿ: ಈ ಕೆಲಸಗಳಲ್ಲಿ ತೊಡಗುವವರು ಪರಿಷ್ಟಿತ ಜಾತಿ,  ಅಂಚಿಗೆ ತಳ್ಳಿದ ಸಮುದಾಯಕ್ಕೆ ಸೇರಿದವರು. ಈ ಬಲಹೀನ ಮನುಷ್ಯರ ಧ್ವನಿ ಮೇಲು ಸ್ಥಾಯಿಯಲ್ಲಿ ಇರುವುದಿಲ್ಲ. ರಾಜಕೀಯ ಪ್ರಭಾವ ಇವರಿಗಿಲ್ಲ. ಇವರ ಸಮಸ್ಯೆಯನ್ನು ಮಾತನಾಡುವ ರಾಜಕಾರಣಿಗಳು ಮಹತ್ತರವಾದ  ಏನನ್ನೂ ಮಾಡುವುದಿಲ್ಲ. ಯಂತ್ರಗಳನ್ನು ಬಳಸಲು ಮೂಲಧನ ಬೇಕು. ರಾಜಕಾರಣಿಗಳಿಗೆ ಕೇವಲ ಕಮಿಷನ್ ದೊರಕುವ, ಅಥವಾ  ಓಟು ಬ್ಯಾಂಕುಗಳು ಮುಖ್ಯವಾಗುತ್ತವೆ. ಇವೆಲ್ಲಾ ದೇಶವನ್ನು ಕಾಡುವ ಸಮಸ್ಯೆಗಳಲ್ಲ.  ದೇಶಾಭಿಮಾನ, ಭಾಷಾಭಿಮಾನ ಇವುಗಳು ಮಾತ್ರ ರಾಷ್ಟ್ರಭಕ್ತಿಯಾಗಿ ಕಾಣುತ್ತದೆ.  ಆದರೆ ಈ ಬಲಹೀನ ಜನರ  ಏಳಿಗೆ ದೇಶದ ಹಿತವೆಂದು  ಇವರು ತಿಳಿಯುವುದಿಲ್ಲ. ಎರಡನೆಯದಾಗಿ ಜಾಡಮಾಲಿಗಳು ಕಕ್ಕಸ್ಸು ಶುದ್ಧ ಮಾಡುವುದರಲ್ಲಿ ಅವರಿಗೆ ಯಾವ ಸಮಸ್ಯೆಯೂ ಕಾಣುವುದಿಲ್ಲ. ಅವರ ವೃತ್ತಿಯನ್ನು ಅವರು ಮಾಡುವುದರಲ್ಲಿ ತಪ್ಪೇನಿದೆ ಎಂಬ ಮನೋಭಾವ ಇದೆ. ರೈತರು ಗದ್ದೆಯಲ್ಲಿ ಕೆಲಸಮಾಡುವಂತೆ, ಮನೆಯ ಕೆಲಸವನ್ನು ಹೆಂಗಸರೆ ಮಾಡಬೇಕು ಎಂಬಂತೆ ಇವರು ಈ ಕೆಲಸವನ್ನು ಮಾಡುವುದರಲ್ಲಿ ತಪ್ಪೇನಿದೆ ಎಂದು ಭಾವಿಸುತ್ತಾರೆ. ಕೆಲಸಕ್ಕೆ ಹೋಗುವ ಹೆಣ್ಣಾಗಿದ್ದರೂ ಮನೆಗೆ ಹಿಂತಿರುಗಿದ ಮೇಲೆ ಮತ್ತೆ ಮನೆ ಕೆಲಸ ಮಾಡುತ್ತಾರೆ. ಗಂಡಸರು ಆರಾಮವಾಗಿರುತ್ತಾರೆ. ಹೆಣ್ಣಾಗಿರಲಿ, ಗಂಡಾಗಿರಲಿ  ಸಮಾಜದಲ್ಲಿ ಅನ್ಯಾಯ ಆದಾಗ ಕಂಡೂ ಕಾಣದಂತೆ ಇದ್ದರೆ ಅದು ತಪ್ಪು. ದುರದೃಷ್ಟದಿಂದ ಅಂತಹ ಮನೋಭಾವ ನಮ್ಮ ದೇಶದಲ್ಲಿ ಬೇರುಬಿಟ್ಟಿದೆ. ನಾವು ಎಲ್ಲವನ್ನೂ ತಪ್ಪಾಗಿ ಅರ್ಥಮಾಡಿಕೊಂಡು ಅದನ್ನು ಸರಿ ಎಂದುಕೊಳ್ಳುತ್ತೇವೆ. ಜಾತಿಪ್ರೇಮವನ್ನು ದೇಶಪ್ರೇಮವನ್ನು ಹೊರಗಿಟ್ಟು ನೋಡಿದರೆ ನಮಗೆ ಇವೆಲ್ಲಾ ಅರ್ಥವಾಗುತ್ತದೆ. ಆದರೆ ಇವೆರಡು ಭಾವೋದ್ವೇಗಗಳು ನಮ್ಮನ್ನು ಆವರಿಸಿಕೊಂಡುಬಿಟ್ಟಿವೆ.

ಪೆಮು: ತೊಂಬತ್ತರ ನಂತರ ದಲಿತ ಚಳುವಳಿಗಳಲ್ಲಿ ಹೆಚ್ಚು ಅರಿವು ಮೂಡಿದೆ. ಅವು ಹಲವು ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಅವುಗಳು ಇಂತಹ ಸಮಸ್ಯೆಗಳ ಬಗ್ಗೆ ಗಮನ ಹರಿಸಿವೆಯೇ? ಹಾಗಿದ್ದರೆ ಇದಕ್ಕೆ ಅವರ ಕೊಡುಗೆ ಏನು?

ಬೆವಿ: ಮಂಗಳಮುಖಿಯರು, ಮಂಗಳಮುಖಿಯರ ಸಮಸ್ಯೆಯನ್ನು ಮಾತನಾಡಬೇಕು, ಜಾಡಮಾಲಿಗಳು ಜಾಡಮಾಳಿಗಳ ಸಮಸ್ಯೆಗಳ ಬಗ್ಗೆ,  ಪಳ್ಳರ್ಗಳು ಪಳ್ಳರ ಸಮಸ್ಯೆಗಳ ಬಗ್ಗೆ ಮಾತನಾಡಬೇಕು ಎಂಬುದು ಭಾರತದಲ್ಲಿ ಬಹಳವಾಗಿ ನಡೆದಿದೆ. ಅವರವರು ಅವರವರ ಸಮಸ್ಯೆಗಳನ್ನು ಮಾತ್ರ ಮಾತನಾಡುವುದು ಎಂಬುದನ್ನು ಮೀರಿಕೊಂಡು  ದಲಿತ ಸಂಸ್ಥೆಗಳು ಸಾಮಾನ್ಯವಾದ ಸಮಸ್ಯೆಗಳ ಬಗ್ಗೆ ಮಾತನಾಡಬೇಕು ಎಂಬ ಅಭಿಪ್ರಾಯ ಮೂಡಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅಸ್ಪೃಶ್ಯತೆಯನ್ನು ತೊಲಗಿಸಬೇಕು ಎಂದರು. ಅವರು ಈ ಸಮಸ್ಯೆಗಳ ಬಗ್ಗೆ ಹಲವು ಆಲೋಚನೆಗಳನ್ನು ಮುಂದಿಟ್ಟಿದ್ದಾರೆ. ಅವರ ಹಾದಿಯಲ್ಲಿ ಸಾಗಿದರೆ ಇವೆಲ್ಲವೂ ಸಾಧ್ಯವಾಗುವುದು ಎಂದೂ ಸಹ ಅವರು ತಿಳಿಸಿದ್ದಾರೆ. ನಾವು ಸಹ ಅದರಿಂದಲೇ ಅಂಬೇಡ್ಕರ್ ಚಿತ್ರವನ್ನು ಮಾತ್ರ ಇಟ್ಟುಕೊಂಡಿದ್ದೇವೆ. ಅವರು ಸೃಷ್ಟಿಸಿದ ಭಾರತ ಸಂವಿಧಾನ ಸ್ವಾತಂತ್ರ್ಯ, ಸಮಾನತೆ, ಸೋದರತ್ವ ಇವುಗಳ ಬಗ್ಗೆ ಹೇಳುತ್ತದೆ. ನಮಗೆ ಇನ್ನೂ ಸ್ವಾತಂತ್ರವೇ ಸಿಕ್ಕಿಲ್ಲ.  ಅದರ ನಂತರವಲ್ಲವೇ ಸಮಾನತೆ, ಸೋದರತ್ವ ಮುಂತಾದವು.

ಅದು ಹೇಗೆ ಎಲ್ಲರೂ ಹೇಗೆ ಸಮಾನವಾಗುವುದಕ್ಕೆ ಸಾಧ್ಯ? ರಾತ್ರಿಯ ಔತಣದಲ್ಲಿ ಒಬ್ಬ ಪರಿಚಾರಕಿ ನಮ್ಮೊಂದಿಗೆ ಕುಳಿತು ಊಟಮಾಡುವುದು ಹೇಗೆ ಪದ್ಧತಿಯಾಗಿರಲು ಸಾಧ್ಯ, ವ್ಯತ್ಯಾಸ ಇರಬೇಕಲ್ಲವೇ ಎಂದೇ ಒಬ್ಬ ನ್ಯಾಯಾದೀಶರು ಈಗಲೂ ಕೇಳುತ್ತಿದ್ದಾರೆ. ನಮ್ಮ ಸಮಾನತೆಯ ಮಟ್ಟ ಅದು. ಮತ್ತೆ, ಸ್ವಂತ ಜಾತಿಯೊಳಗಡೇ ಮಾತ್ರವೇ ನಮ್ಮಲ್ಲಿ ಸೋದರತ್ವ ಇರುವುದು. ಭಾರತ ಭ್ರಾತೃತ್ವದ ಸಮಾಜ. ಆದರೆ ನಮ್ಮ ಸಮಾಜದಲ್ಲಿ ಸೋದರತ್ವ ಇದೆ ಎಂದು ಹೇಳಲಾಗುವುದಿಲ್ಲ.  ಬ್ರಾಹ್ಮಣ ಸಮುದಾಯ, ರೆಡ್ಡಿ ಸಮುದಾಯ, ದಲಿತ ಸಮುದಾಯಗಳು ಭಾರತದಲ್ಲಿ ಇವೆ. ಇವನ್ನೆಲ್ಲಾ ಸಮುದಾಯಗಳಲ್ಲವೆಂದು ಹೇಳಲಾಗದು. ಅವರವರ ಸಮುದಾಯದಲ್ಲಿ ಭ್ರಾತೃತ್ವ ಚೆನ್ನಾಗಿಯೇ ಇದೆ. ಆದರೆ ಒಂದು ಚೌಕಟ್ಟಿನಿಂದ ಹೊರಗೆ  ಬರುವುದಕ್ಕೆ ಅವರಾರಿಗೂ ಇಷ್ಟವಿಲ್ಲ.

ಭಾರತದಲ್ಲಿ ಆರು ಲಕ್ಷದ ನಲವತ್ತು ಸಾವಿರ ಗ್ರಾಮಗಳು ಇರುವುದಾಗಿ ಹೇಳುತ್ತಾರೆ. ಇದರಲ್ಲಿ ಜಾತಿ ಇಲ್ಲದ ಒಂದೇ ಒಂದು ಹಳ್ಳಿಯಿಲ್ಲ. ಬ್ರಾಹ್ಮಣರು ಒಂದು ಜಾಗದಲ್ಲಿ ವಾಸವಿದ್ದರೆ; ಚೆಟ್ಟಿಯರ್ ಗಳು ಮತ್ತೊಂದು ಜಾಗದಲ್ಲಿ ವಾಸಿಸುತ್ತಾರೆ; ಪ್ರತಿಯೊಂದು ಜಾತಿಯೂ ಒಂದೊಂದು ಜಾಗದಲ್ಲಿ ವಾಸಿಸುತ್ತದೆ. ಎಲ್ಲರೂ ಒಂದೇ ಜಾಗದಲ್ಲಿ ವಾಸವಿರುವ ಪರಿಸ್ಥಿತಿ ಇನ್ನೂ ಬಂದಿಲ್ಲ. ಸಮಾನತೆ ಇರುವ ಒಂದು ಹಳ್ಳಿ ಸಹ ನಮ್ಮಲ್ಲಿಲ್ಲ. ಪರಿಸ್ಥಿತಿ ಸುಧಾರಿಸಿಲ್ಲ. ಒಂದೇ ಜಾಗದಲ್ಲಿ ಸುತ್ತುತ್ತಿದ್ದೇವೆ. ನಮ್ಮ ಉಪಕ್ರಮಗಳು, ಬದಲಾವಣೆಯ ದನಿ, ಬೆಳವಣಿಗೆ ಎಲ್ಲವೂ ಅಲ್ಲೇ ಸುತ್ತಾಡುತ್ತಿದೆ. ಆದ್ದರಿಂದ ಸೋದರತ್ವದ ಭಾವನೆ ನಮ್ಮಲ್ಲಿ ಬಂದಿಲ್ಲ. ಹಾಗೇನಾದರೂ ಸೋದರತ್ವದ ಭಾವನೆ ಬಂದರೆ ಪೌರ ಕರ್ಮಚಾರಿಗಳು, ದೇವದಾಸಿ ಪದ್ಧತಿ ಮುಂತಾದವುಗಳು ಇರುವುದಿಲ್ಲ .

ಪೆಮು: ನೀವು ಮಾತನಾಡುವಾಗ ‘ಮನೆಯ ಒಳಗೆ ಏನಾದರೂ ಕಟ್ಟಿಕೊಂಡರೆ ಕಡ್ಡಿಯಿಂದ ಚುಚ್ಚಿ ಹೊರಗೆ ನೂಕುತ್ತಾರೆ, ಆದೆ ಮನುಷ್ಯರನ್ನು ಚರಂಡಿಗೆ ಇಳಿಯಲು ಕಾರಣವಾಗುತ್ತದೆ’ ಎಂದಿರಿ. ಇದು ಎಲ್ಲರಿಗೂ ಇರಬೇಕಾದ ಮೂಲಭೂತ ತಿಳುವಳಿಕೆ. ಇವನ್ನೆಲ್ಲ ಶಿಕ್ಷಣದ ಮೂಲಕ ಕಲಿಸಬೇಕಾ? ಏನು ಮಾಡಬೇಕು?

ಬೆವಿ: ಸಾಮಾನ್ಯವಾಗಿ ನಮ್ಮ ಗಮನವೆಲ್ಲ ಆಹಾರ ಕ್ಷೇತ್ರದ ಮೇಲೆ ಇದೆ. ಆಹಾರ ತಯಾರಿಸುವ ಸಾಮಗ್ರಿಗಳು ಮನೆಗೆ ಬಂದರೆ ಸಾಕು ಅಂದುಕೊಂಡಿದ್ದೆವು. ನಂತರ ಹೊಟೇಲ್, ಮೋಟೆಲ್, ರೆಸ್ಟುರೆಂಟ್ ಎಂದೂ ಫಾಸ್ಟ್ ಫುಡ್, ಪೇಕ್ಕಿಂಗ್ ಫುಡ್ ಎಂದೂ ಬಹಳ ದೂರ ಬಂದಿದ್ದೇವೆ. ಒಂದು ಕ್ಷಣದಲ್ಲಿ ತಯಾರಿಸುವ ಆಹಾರದಂತಹ ಬಹಳ ಬೆಳವಣಿಗೆಗಳು ಆಹಾರ ಕ್ಷೇತ್ರದಲ್ಲಿ ಆಗಿದೆ. ಊಟ ಮಾಡುವಾಗಲು ಸಹ ನಮ್ಮ ಸಂಸ್ಕೃತಿಯಲ್ಲಿ ‘ಅನ್ನಂ ಪರ ಬ್ರಹ್ಮ ಸ್ವರೂಪಂ’ ಎಂದು ಪೂಜಿಸಿ ಇದನ್ನು ದೇವರೇ ಕೊಟ್ಟದ್ದು ಎಂದು ಉಣಲು ತೊಡಗುತ್ತೇವೆ. ದೇಹದೊಳಗೆ ಇವೆಲ್ಲಾ ಹೋಗಿ ರಾಸಾಯನಿಕ ಪರಿವರ್ತನೆಯಾಗಿ ಹೊರಬರುವ ತ್ಯಾಜ್ಯಗಳನ್ನು ತಿರುಗಿ ನೋಡಲು ನಾವು ಸಿದ್ಧರಿಲ್ಲ.

ಆಹಾರಗಳನ್ನು ಹೇಗೆ ವೈಜ್ಞಾನಿಕ ತಂತ್ರಜ್ಞಾನದಿಂದ ನೋಡಿ ನಿರ್ವಹಿಸುತ್ತೇವೋ ಹಾಗೆಯೇ ತ್ಯಾಜ್ಯವನ್ನು ನಿರ್ವಹಿಸಬೇಕೆಂಬುದನ್ನು ಮರೆತುಬಿಟ್ಟಿದ್ದೇವೆ.  ಸಸ್ಯಾಹಾರ, ಉನ್ನತ ಗುಣಮಟ್ಟದ ಸಸ್ಯಾಹಾರ, ಮಾಂಸಾಹಾರ ಎಂಬ ಬಗೆಬಗೆಯ ಆಹಾರಗಳು ಮಾರುಕಟ್ಟೆಗೆ ಬಂದಿವೆ. ಆ ವ್ಯಾಪಾರ ಕೆಲವು ನಿರ್ದಿಷ್ಟ ಜಾತಿಯವರ ಕೈಯಲ್ಲಿದೆ. ಆಹಾರ ಮಾರುಕಟ್ಟೆಯ ವಸ್ತುವಾಗಿದೆ. ಸ್ವಚ್ಚತೆಯ ಕ್ಷೇತ್ರ ದಲಿತರಿಗೆ ಮೀಸಲಾಗಿಸಿದೆ. ಆದ್ದರಿಂದ ಇದರಲ್ಲಿ ಯಾವ ಬೆಳವಣಿಗೆಯೂ ಇಲ್ಲ. ಆ ಕ್ಷೇತ್ರದಲ್ಲಿ ವಿಜ್ಞಾನವೋ,  ತಂತ್ರಜ್ಞಾನವೋ ,ತರಬೇತಿಯೋ, ಪರಿಪೂರ್ಣತೆಯೋ ಯಾವುದೂ ಇಲ್ಲ.

ಬೇಕಾದ ಆಹಾರವನ್ನು ಮನೆಗೆ ತರೆಸಿಕೊಳ್ಳುವ ಸೆಲ್ಫೋನ್ ವ್ಯವಸ್ಥೆಗಳೆಲ್ಲವೂ ಬಂದಿವೆ. ಮನುಷ್ಯರಿಲ್ಲದೆ ತಂತ್ರಜ್ಞಾನವನ್ನು ಬಳಸಿ ಇವನ್ನೆಲ್ಲ ಮಾಡಲು ಸಾಧ್ಯವಾಗಿದೆ. ಆದರೆ ಮನುಷ್ಯನ ತ್ಯಾಜ್ಯವನ್ನು ತೆಗೆಯಲು ಒಂದು ಯಂತ್ರವನ್ನು ಇವರಿಂದ ತಯಾರಿಸಲು ಸಾಧ್ಯವಾಗಿಲ್ಲ.  ಒಂದು ಕ್ಷೇತ್ರವನ್ನು ಪೂಜಿಸುತ್ತೇವೆ. ಮತ್ತೊಂದು ಕ್ಷೇತ್ರವನ್ನು ನಿರ್ಲಕ್ಷಿಸುತ್ತೇವೆ. ಈ ಮನೋಸ್ಥಿತಿಗೆ ಜಾತಿಯೇ ಕಾರಣ. ಇಂತಹ ಅಭಿಪ್ರಾಯಗಳನ್ನು ಜನಗಳ ನಡುವೆ ಚರ್ಚಿಸಬೇಕು. ನಮ್ಮ ಜೊತೆಯ ಮನುಷ್ಯರ ಹತ್ತಿರ ಇಂತಹ ಕೆಲಸ ಮಾಡಿಸಬಾರದು ಎಂದು  ಅವರಿಗೆ ತಿಳಿಸಿ ಹೇಳಬೇಕು.

ನನ್ನ ಅಮ್ಮನಂತೆ ಇವರೇ ನನ್ನನ್ನು ಸ್ವಚ್ಚಗೊಳಿಸಿದರು ಎಂದು ದೈವೀಕರಿಸುವುದರಿಂದ   ಏನೂ ಆಗದು. ಶುದ್ಧಗೊಳಿಸುವವರು ಅಮ್ಮ ಆಗಲು ಎಂದಿಗೂ ಸಾಧ್ಯವಿಲ್ಲ. ಈ ರೀತಿ ದೈವೀಕರಿಸುವುದು  ದೊಡ್ಡ ಅಪರಾಧ. ಇವರನ್ನು ಅಮ್ಮನಂತಹವರು ಎಂದು ಹೇಳುವುದರ ಮೂಲಕ ಶುದ್ಧಗೊಳಿಸುವುದನ್ನು ಮುಂದುವರೆಸು ಎಂದು ಹೇಳದೇ ಹೇಳುತ್ತೇವೆ. ಗಾಂಧಿ ಸಹ ಇದನ್ನೇ ಹೇಳಿದ್ದು.

‘ನನಗೆ ಪುನರ್ಜನ್ಮ ಇದೆಯೋ ಇಲ್ಲವೋ …..ಹಾಗೇನಾದರೂ ಇದ್ದರೆ ನಾನು ತೋಟಿಯ ಸಂಸಾರದಲ್ಲಿ ಹುಟ್ಟಬೇಕು….’  ಎಂದು ಹೇಳಿದರು. ಪುನರ್ಜನ್ಮ ಇದೆಯೋ ಇಲ್ಲವೋ ಎಂದು ಖಚಿತವಾಗಿ ತಿಳಿಯದ ಸ್ಥಿತಿಯಲ್ಲಿ ಅವರು ಮಾತನಾಡುತ್ತಿದ್ದಾರೆ.  ಇದ್ದರೆ ತೋಟಿಯಾಗಿ ಹುಟ್ಟಬೇಕು ಎನ್ನುತ್ತಾರೆ. ಆದರೆ ನಮ್ಮ ಅಭಿಪ್ರಾಯದಲ್ಲಿ ಯಾವ ಮನುಷ್ಯನೂ ತೋಟಿಯಾಗಬಾರದು.

ಕೋಯಂಬತ್ತೂರಿನಲ್ಲಿ ಮಣಿ ಎಂಬವರು ಒಬ್ಬರಿದ್ದಾರೆ.  ಅವರು ಸ್ವಚ್ಚತೆಯ ಕ್ಷೇತ್ರದಲ್ಲಿ ಡ್ರೈವರ್ ಆಗಿದ್ದು ಈ ವರ್ಷ ಜೂಲೈ 31ಕ್ಕೆ ನಿವೃತ್ತರಾದರು. ಅವರ ಬಳಿ ಮಾತನಾಡುವಾಗ ಹೇಳಿದರು, ‘ಇಲ್ಲಿ ನೋಡಿ, ಇದು ಬಹಳ ಕ್ರೂರವಾದ ಕೆಲಸ. ಯಾವಾಗ ಬೇಕಾದರೂ ಸಾಯಬಹುದಾದ ಸ್ಥಿತಿ. ಇದರಲ್ಲಿ ಇಷ್ಟೊಂದು ವರ್ಷಗಳು ಹೇಗಿದ್ದೆ ಎಂಬುದೇ ಆಶ್ಚರ್ಯ. ನನಗೆ ಒಂದೇ ಒಂದು ಆಸೆ, ಏನೆಂದರೆ ಯಾರು ಈ ಕೆಲಸವನ್ನು ಮಾಡಬಾರದು. ಮತ್ತೊಂದು ಜನ್ಮ ಇದ್ದರೆ ಇಂತಹ ಕೆಲಸ ಇರಬಾರದು.’ ಮಣಿ ಮತ್ತೊಂದು ಜನ್ಮ ಹೇಗಿರಬಾರದು ಎನ್ನುವುದನ್ನು ಹೇಳುತ್ತಿದ್ದಾರೆ. ಅಲ್ಲೆ ಪಕ್ಕದಲ್ಲಿ ಅವರ ಮೊಮ್ಮಕ್ಕಳಿದ್ದರು.  ಅವರನ್ನು ‘ನೀವು ಏನಾಗಬೇಕು? ‘ ಎಂದು ನಾವು ಕೇಳಿದೆವು. ಮಕ್ಕಳು, ‘ಕಲೆಕ್ಟರ್, ಡಾಕ್ಟರ್, ಸೈಂಟಿಸ್ಟ್’ ಅಂತ ಹೇಳಿದರು. ಮಣಿ ಏನಂತಾರೆ? ಹೌದು, ಯಾರೂ ಈ ಕೆಲಸ ಮಾಡಬಾರದು ಅಂದರು.  ಆದರೆ ಕರಂಚಂದ್ ಗಾಂಧಿ ತೋಟಿಯಾಗಿ ಹುಟ್ಟಬೇಕು ಅನ್ನುತ್ತಾರೆ. ಎರಡು ಬಗೆಯ ಚಿಂತನೆಗಳು ಸ್ಪಷ್ಟವಾಗಿದೆ.  ಅದರಲ್ಲಿ ಒಂದು ಪುನೀತಗೊಳ್ಳುತ್ತದೆ. ನರೇಂದ್ರ ಮೋದಿ ಸಹ ‘ಸ್ವಚ್ಚತಾ ಕಾರ್ಯ ಅವರಿಗೆ ಅಧ್ಯಾತ್ಮಿಕ ಅನುಭವ’ ಎಂದು ಹೇಳುತ್ತಾರೆ. ಅಷ್ಟು ದೊಡ್ಡ ಅನುಭವವಾಗಿದ್ದರೆ ಹೇಳುವವರೇ ಯಾಕೆ ಈ ಕೆಲಸವನ್ನು ಮಾಡಬಾರದು?

ಪೆಮು: ಆಧ್ಯಾತ್ಮಿಕ ಅನುಭವ ಎಂದ ಮೇಲೆ ಅಧ್ಯಯನ ಬೇಕಿಲ್ಲವಲ್ಲಾ?

ಬೆವಿ: ಹೌದು, ನಮಗೆ Food Industry ಇದೆ, Shit Industry ಇಲ್ಲ. ಎಲ್ಲಾ ಕ್ಷೇತ್ರಗಳಲ್ಲೂ  ಅಧ್ಯಯನ ಸಂಸ್ಥೆ ಇದೆ. ಆದರೆ ತ್ಯಾಜ್ಯಗಳನ್ನು ಸ್ವಚ್ಚಗೊಳಿಸುವುದಕ್ಕೆ ಸಂಬಂಧಿಸಿದಂತೆ ಯಾವ ಅಧ್ಯಯನವೂ ನಡೆಯುವುದಿಲ್ಲ. ನೂರ ಇಪ್ಪತ್ತು ಕೋಟಿ ಜನರೆಲ್ಲಾ ಆರು ತಿಂಗಳಿಗೊಮ್ಮೆಯೋ ವರ್ಷಕ್ಕೊಮ್ಮೆಯೋ ಅಲ್ಲ, ದಿನವೂ ಹೇಲುತ್ತೇವೆ. ಎಲ್ಲರೂ ಮಲವನ್ನು ಸ್ವಚ್ಚಗೊಳಿಸಲೇಬೇಕು.  ‘ಅದನ್ನು ಮಾಡಲು ಒಂದು ಜಾತಿ ಇದೆ, ನಮಗೇನು’ ಎಂದುಕೊಳ್ಳುತ್ತಾರೆ. ದೊಡ್ಡ ದೊಡ್ಡ ಅಧಿಕಾರಿಗಳೂ ಸಹ ‘ತ್ಯಾಜ್ಯಗಳನ್ನು ನೀಗಿಸಲು ಏನಾದರೂ ತಂತ್ರಜ್ಞಾನ ಇದೆಯೇ’ ಎಂದು ನನ್ನನ್ನೇ  ಕೇಳುತ್ತಾರೆ. ನಾನು ತಿಳಿದುಕೊಂಡಿಲ್ಲವಲ್ಲ ಅಂದುಕೊಂಡರೆ,  ಅವರಿಗೂ ಗೊತ್ತಿಲ್ಲವಲ್ಲ ಅನ್ನಿಸಿತು. ನಂತರ ‘ಅದನ್ನೆಲ್ಲಾ ನೀವೆ ನೋಡಿಕೊಳ್ಳಬೇಕು. ನನ್ನನ್ನು ಯಾಕೆ ಕೇಳುತ್ತೀರಾ’ ಎಂದು ಹೇಳಲು ಪ್ರಾರಂಭಿಸಿದೆ. ನಾವು ಬೇಕಾದರೆ ಬೈಯಬಹುದು. ಆದರೆ ಅವರು ಮಾತ್ರ ಏನೂ ಮಾಡುವುದಿಲ್ಲ. ಅವರು ಸ್ವಚ್ಛತ ಕ್ಷೇತ್ರಕ್ಕೆ ಏನಾದರೂ ತಂತ್ರಜ್ಞಾವನ್ನು ತರಲು ನೋಡುತ್ತಿದ್ದಾರೆ.  ಸೈಂಟಿಸ್ಟ್, ವಿಮಾನ ವಿನ್ಯಾಸಕರು ಎಂದು ಬಹಳಷ್ಟು ಮಂದಿ ಬಂದರು. ಎಲ್ಲವನ್ನು ಮಾಡಲು ಮೂರು ದಿನ ಕುಳಿತು ಮಾತನಾಡಿದರು,  ಚರ್ಚೆ ಮಾಡಿದರು.

ಮಲ, ತ್ಯಾಜ್ಯದ ಬಗ್ಗೆ ಯೋಚಿಸಿದರೆ ಮೆದುಳು ಅಶುದ್ಧವಾಗುತ್ತದೆ. ಎಲ್ಲರೂ ಸಂತೋಷವಾಗಿರುವಾಗ ಕೆಲವು ವಿಷಯಗಳನ್ನು ಮಾತ್ರ ಮಾತನಾಡಲು ಸಾಧ್ಯ. ಇದರ ಬಗ್ಗೆ ಮಾತನಾಡಬಾರದು.  ಇದರ ಬಗ್ಗೆ ಮಾತನಾಡಲು ಎಲ್ಲರಿಗೂ ಸಂಕೋಚ. ಇವನ್ನೆಲ್ಲಾ ಹೃದಯಕ್ಕೆ ಹತ್ತಿರವಾಗಿ ಇವರಿಂದ ಮಾಡಲು ಸಾಧ್ಯವಿಲ್ಲ. ನೀವು ಮುಕ್ತ ಮನುಷ್ಯನಾಗಿದ್ದಾಗ ಮಾತ್ರ ಇವನ್ನೆಲ್ಲ ಮಾತನಾಡಲು, ಆಲೋಚಿಸಲು ಸಾಧ್ಯ. ಪ್ರಾಮಾಣಿಕವಾದ ಮನುಷ್ಯನಾಗಿದ್ದರೆ ಮಾತ್ರವೇ ಇವನ್ನೆಲ್ಲಾ ಯೋಚಿಸಲು ಸಾಧ್ಯ.

ಪೆಮು: ನಿಮಗೆ ರಮನ್ ಮೆಗಸೇಸೆ ಪ್ರಶಸ್ತಿ ಬಂದಿದೆ.  ಅದರ ಬಗ್ಗೆ ಹೇಳಿ.

ಬೆವಿ: ಅದು ತುಂಬಾ ಕಷ್ಟ. ಬಹಳ ಕಳವಳವಾಯಿತು. ಏನು ಮಾಡಬೇಕೆಂದು ತೋಚಲಿಲ್ಲ. ಅದಕ್ಕೆ ಮೊದಲು  ಬಹಳ ಜನ ಪ್ರಶಸ್ತಿಗಳನ್ನು  ಕೊಟ್ಟರು. ಭಾರತ ಸರಕಾರದ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತಿರಸ್ಕರಿಸಿದೆ. ಪದ್ಮ ಭೂಷಣ್, ಪದ್ಮ ವಿಭೂಷಣ್ ಪ್ರಶಸ್ತಿಗಳಿಗೆಲ್ಲಾ ಪತ್ರ ಬಂದಿತು. ಅಂತಹ ಸಮಯಗಳಲ್ಲಿ ಸೆಲ್ಫೋನ್ ಸಹ ಇಟ್ಟುಕೊಳ್ಳದೆ ಕೆಲವು ದಿನಗಳು ದಿಲ್ಲಿಯಿಂದ ಹೊರಗೆ ಹೊರಟುಹೋದೆ. ನಾನು ಕೇವಲ ಪ್ರತಿನಿಧಿ. ಇಂದೂ ಸಹ ಕೆಲವು ಪತ್ರಿಕೆಯವರು ಸಂದರ್ಶನಕ್ಕಾಗಿ ನನ್ನನ್ನು ಕರೆದರು. ಆದರೆ ಕ್ಷೇತ್ರದಲ್ಲಿ ಇಳಿದು ಕೆಲಸ ಮಾಡುವ ಜನಗಳು ಇಲ್ಲದೆ ನಾನು ಎಲ್ಲಿಯೂ ಹೋಗುವುದಿಲ್ಲ. ಈ ಕೆಲಸವನ್ನು ತೊಡಗಿ ಹೆಚ್ಚು ಕಡಿಮೆ 35 ವರ್ಷಗಳಾದವು. ಇಷ್ಟು ವರ್ಷಗಳಲ್ಲಿ SKA ವತಿಯಿಂದ ನಡೆದ ಸಾಮಾನ್ಯ ಸಂದರ್ಶನಗಳು ಕೇವಲ ಮೂರು. ವೇದಿಕೆಯ ಮೇಲೆ ಪೌರ ಕಾರ್ಮಿಕರೇ ಕೂರುತ್ತಾರೆ. ಎಲ್ಲರೂ ವೇದಿಕೆಗೆ ಬಂದು ಮಾತನಾಡಿ ಹೋಗುತ್ತಾರೆ. ಪ್ರಧಾನ ಮಂತ್ರಿಯವರನ್ನು ಬೇಟಿಯಾದದ್ದೂ ಹೀಗೆಯೇ. ನಾನು ಪೌರಕಾರ್ಮಿಕರೊಂದಿಗಿದ್ದೇನೆ. ಆದರೆ ಈ ಹೋರಾಟ ಅವರಿಗಾಗಿ, ಅವರಿಗೆ ಸೇರಿದ್ದು.

ಉತ್ತರ ಭಾರತದ ಪ್ರಾಂತಗಳಲ್ಲಿ ಒಂದು ಲಕ್ಷ ಪೌರ ಕರ್ಮಚಾರಿಗಳು ಈ ಕೆಲಸವನ್ನು ಬಿಟ್ಟು ಬಿಡುತ್ತೇವೆ, ನಮಗೆ ನಷ್ಟಕ್ಕೆ ಪರಿಹಾರ ನೀಡಿ ಎಂದು ಕೇಳಿದರು. ಸರಕಾರ ಏನನ್ನೂ ಮಾಡಲಿಲ್ಲ. ರಾಜಸ್ಥಾನ್ ರಾಜ್ಯದಲ್ಲಿ ಕೆಲವರು ಈ ಕೆಲಸ ಬಿಟ್ಟು  ಹೊರಬಂದರು. ಹೊರಗೆ ಬಂದ ಅವರೆಲ್ಲಾ  ಜಿಲ್ಲಾ ಆಡಳಿತ ಅಧಿಕಾರಿಯ ಕಚೇರಿಯ ಮುಂದೆ ಕಸದ ಬುಟ್ಟಿಗಳನ್ನು ಹಾಕಿ ಸುಟ್ಟರು. ಹೋಗುವಾಗ ‘ಬಂದ್ ಕರೋ, ಬಂದ್ ಕರೋ ಮೇರಾ ಪ್ರಧಾನ್ ಬಂದ್ ಕರೋ’ ಎಂದು ಘೋಷಣೆ ಕೂಗಿ ಹೋದರು. ಅಂದರೆ  ‘ಬಿಟ್ಟು ಬಿಡು ಬಿಟ್ಟು ಬಿಡು ಈ ಕೆಲಸವನ್ನು ಬಿಟ್ಟು ಬಿಡು’. ‘ಸೊಪ್ಪುಗಿಪ್ಪು ತಿಂದಾದರೂ ಬದುಕಬಹುದು, ಈ ಬದುಕು ನಮಗೆ ಬೇಡ’  ಇತ್ಯಾದಿ ಘೋಷಣೆಗಳನ್ನು ಕೂಗಿದರು.  ಈ ರೀತಿ ಕೂಗಿ ಆಮೇಲೆ ಮಾರನೆಯ ದಿನ ಬಕೆಟ್ ಎತ್ತಿಕೊಂಡು ಹೋಗಿ ಮಲಮೂತ್ರ ತೆಗೆಯಬೇಕು ಎಂಬ ಕಳವಳ ಅವರಿಗಾಯಿತು. ಆದ್ದರಿಂದ ಅವರಾಗಿಯೇ ಕೆಲಸವನ್ನು ಬಿಟ್ಟುಬಿಟ್ಟರು.

ನಾವು ಈ ಕೆಲಸವನ್ನು ಮಾಡುವುದಿಲ್ಲ ಎಂದು  ಹೇಳುವುದಿಲ್ಲ. ಇದನ್ನು ಮಾಡುವುದರಿಂದ ಏನೆಲ್ಲಾ ಅನಾಹುತಗಳು ಆಗುತ್ತವೆ ಎಂದು ಮಾತ್ರ  ಹೇಳುತ್ತೇವೆ. ಇದನ್ನು ನನ್ನ ಹೆತ್ತವರು ಮಾಡುತ್ತಿದ್ದಾಗ ಶಾಲೆಯಲ್ಲಿ ಸಮಾಜದಲ್ಲಿ ನನಗೆ ಏನೆಲ್ಲಾ ಆಯಿತು, ಅದರ ಪರಿಣಾಮಗಳೇನು ಎಂಬುದರ ಬಗ್ಗೆ ಹೇಳುತ್ತೇವೆ, ಅಷ್ಟೇ. ತಾತ್ಕಾಲಿಕ ಕೆಲಸವನ್ನು ನಿರಂತರಗೊಳಿಸುವೆ ಎಂದರೆ ಅವರಿಗೆ ನಾಯಕನಾಗಬಹುದಿತ್ತು. ಕೆಲಸ ಮಾಡಕೂಡದು ಎಂದರೆ ಹೇಗೆ? ಆದ್ದರಿಂದ ಈ ಕೆಲಸ ಮಾಡಕೂಡದು ಎಂದು ಹೇಳುವುದಿಲ್ಲ. ಹೀಗೆ ಹೇಳಿ ಹೇಳಿ ಮಾಡಿಸುವುದು ಬಹಳ ಕಠಿಣ. ಹಿಂದೆ ಇವನ್ನೆಲ್ಲಾ ನೀನು ಮಾಡಿದ್ದರೆ ನಿನ್ನನ್ನು ಸಾಯಿಸಿಬಿಡುತ್ತಿದ್ದರು ಎಂದರು.

ಇವರ ಬಳಿ ಹೋಗಿ ‘ನೀವು ಈ ಕೆಲಸವನ್ನು ಧೈರ್ಯವಾಗಿ ಬಿಟ್ಟು ಬಿಟ್ಟಿರಿ. ನಿಮ್ಮ ಭಾಷೆಯಲ್ಲಿ ನನಗೆ ಏನು ಹೇಳಲು ಗೊತ್ತಿಲ್ಲ. ಆದರೆ ನಿಮ್ಮನ್ನು ನೋಡಿದರೆ ನನಗೆ ಬಹಳ ಸಂತೋಷವಾಗುತ್ತೆ’ ಎಂದು ಹೇಳಿ ಅತ್ತುಬಿಟ್ಟೆ. ಅದನ್ನು ನೋಡಿ ಅವರು ಫುಲಕಿತರಾದರು. ಯಾರಿಗಾದರೂ ನಿಜವಾಗಿಯೂ ಪ್ರಶಸ್ತಿ ಕೊಡಬೇಕೆಂದು ಕೊಂಡರೆ ….ಧೈರ್ಯವಾಗಿ ಕೆಲಸವನ್ನು ಬಿಟ್ಟವರಿಗೆ ಕೊಡಬೇಕು.

ಮಾಡಲು ಅರ್ಹತೆ ಇದೆ ಎಂಬುದನ್ನು ಬಿಟ್ಟು ನಾನು ನೀನು ಎಂದು ಅಂದುಕೊಳ್ಳುವುದು ತಪ್ಪು. ಆದರೆ ಈ ಎಲ್ಲವನ್ನೂ ಎತ್ತಿ ಬಿಸಾಡಿ, ಸ್ವಾಭಿಮಾನವೇ ಮುಖ್ಯ ಎಂದು ಆಲೋಚಿಸುವ ಧೈರ್ಯವೂ ಮನೋಸ್ಥಿತಿಯೂ ಬಹಳ ಮುಖ್ಯ. ಅಂತಹ ಒಂದು ಕೆಲಸವನ್ನು ನನ್ನಿಂದ ಮಾಡಲು ಆಗದು. ಆದ್ದರಿಂದ ಯಾವ ಬಿರುದಾಗಿದ್ದರೂ ಅದು ಆ ಜನಗಳಿಗೆ ಸೇರಬೇಕು. ಅವರು ಹೋಗುವ ಯಾವುದಾದರೂ ಒಂದು ಸಾಲಿನ ಕೊನೆಯಲ್ಲಿ ಬೇಕಾದರೆ ನಾನು ನಿಂತುಕೊಳ್ಳಬಹುದು. ಆದರೆ ಅರ್ಹತೆ ಅವರಿಗೆ ಮಾತ್ರವೇ ಇದೆ.

ಈಗ ನಮ್ಮ ಕಚೇರಿಯಲ್ಲಿ ಒಬ್ಬ ಹುಡುಗ ಇದ್ದಾನೆ. 2005ರಿಂದ ಹೆಚ್ಚುಕಡಿಮೆ ಹದಿನೈದು ವರ್ಷಗಳಿಂದ ನಮ್ಮ ಜತೆ ಇದ್ದಾನೆ. ಐದನೆಯ ತರಗತಿಯವರೆಗೆ ಒಂದು ಕಾನ್ವೆಂಟಿನಲ್ಲಿ ಓದಿದ್ದಾನೆ. ಅವನ ತಂದೆ ತಾಯಿ ಪೌರ ಕರ್ಮಚಾರಿಗಳು. ಐದನೆಯ ತರಗತಿಯ ನಂತರ ಷೂ ಕಂಪನಿಗೆ ಕೆಲಸಕ್ಕೆ ಕಳುಹಿಸಿದರು. ಷೂವನ್ನು  ಒರಸುವ ಕೆಲಸ. ಚೆನ್ನಾಗಿ ಮಾಡುತ್ತಾನೆ. ಕಂಪನಿಯ ಯಜಮಾನರಿಗೆ ಬೆಳಗ್ಗೆ ಗುಡ್ ಮಾರ್ನಿಂಗ್ ಹೇಳಿದ. ಅವರು ಅದಕ್ಕೆ ಉತ್ತರಿಸಲಿಲ್ಲ ಅಂತ ಅವನಿಗೆ ಕೋಪಬಂತು. ಕೋಪ. ಮಾಲಿಕನನ್ನು ಹೋಗಿ ಕೇಳಿದ. ಮಾಲಿಕ  ‘ನಿನಗೆ ನಾನು ವಿಷ್ ಮಾಡೋದು ನನ್ನ ಕೆಲಸಾನ? ನೀನು ನನ್ನ ಬಳಿ ಕೆಲಸಕ್ಕೆ ಇದ್ದೀಯಾ. ಗುಡ್ ಮಾರ್ನಿಂಗ್ ಹೇಳಬೇಕೆನಿಸಿದರೆ ಹೇಳು. ಅದಕ್ಕೆ ನಾನೇನೂ ಉತ್ತರಿಸಬೇಕಿಲ್ಲ’ ಎಂದು ಉತ್ತರಿಸಿದರು.  ‘ನಾನು ನಿನ್ನ ಬಳಿ ಕೆಲಸ ಮಾಡಬೇಕಿಲ್ಲ’ ಎಂದು ಕೆಲಸವನ್ನು ಬಿಟ್ಟು ಬಂದ.  ನಂತರ ಅವರ ಅಪ್ಪ ಅಮ್ಮ ಅವನನ್ನು ಇಲ್ಲಿ ತಂದು ಬಿಟ್ಟು ಹೋದರು. ಅವನ ಹೆಸರು ಸಚಿನ್. ಅವನು  ಇಲ್ಲೇ ಇದ್ದಾನೆ.

ನಮ್ಮ ಕಚೇರಿಗೆ ಬೀಗ ಇಲ್ಲ. ಒಮ್ಮೆ ಮಾತ್ರ ಸ್ವಲ್ಪ ಹಣ ಕಳವಾಯಿತು. ನಂತರ ನಾನು ಎಲ್ಲರನ್ನೂ ಕರೆದು ಹೇಳಿದೆ. ಈ ರೀತಿ ಹಣ ಎಲ್ಲಾದರೂ ಇದ್ದರೆ ತೆಗೆದುಕೊಂಡು ಹೋಗುವುದು ಒಳ್ಳೆಯದಲ್ಲ. ಇನ್ನು ಮುಂದೆ ಹಣ ಇರುವ ಡ್ರಾಯರಿಗೆ ಬೀಗ ಹಾಕುವುದಿಲ್ಲ. ಟೇಬಲ್ ಮೇಲೆ ಇಡುತ್ತೇವೆ. ಯಾರಿಗೆ ಬೇಕೋ ತೆಗೆದುಕೊಳ್ಳಿ. ಆದರೆ ಕಾರಣವನ್ನು ಬರೆದಿಟ್ಟು ತೆಗೆದುಕೊಳ್ಳಿ ಎಂದು ಹೇಳಿದೆ. ನಾವು ಐಷಾರಾಮಿ ಬದುಕಿಗಾಗಿ  ಹಣ ಇಟ್ಟಿಲ್ಲ. ಪ್ರಯಾಣದ ಖರ್ಚು, ಊಟ ಮುಂತಾದವಕ್ಕೆ ಇಟ್ಟಿದ್ದೇವೆ. ಬೀಗವನ್ನೆಲ್ಲ ತೆಗೆದುಬಿಟ್ಟೆ. ಯಾರಿಗೆ ಎಷ್ಟು ಬೇಕೋ ತೆಗೆದುಕೊಳ್ಳಿ. ಉಳಿದದ್ದರಲ್ಲಿ ನಾವು ನಿಭಾಯಿಸುತ್ತೇವೆ.

ಒಂದು ದಿನ ಸಚಿನ್ ಗೆ ದೂರವಾಣಿಯ ಕರೆ ಬಂತು. ನಾವು ಮನಿಲಾದಿಂದ ಮಾತನಾಡುತ್ತಿದ್ದೇವೆ ಎಂದು ಇಂಗ್ಲೀಷಿನಲ್ಲಿ ಹೇಳಿದರು. ಸಚಿನ್ ಗೆ ಇಂಗ್ಲೀಷ್ ಗೊತ್ತಿಲ್ಲ. ಆದ್ದರಿಂದ ಹಿಂದಿಯಲ್ಲಿ ಉತ್ತರ ಹೇಳಿ ಫೋನನ್ನು ಇಟ್ಟುಬಿಟ್ಟ. ಮುಂದಿನ ನಾಲ್ಕು ದಿನಗಳು ಹೀಗೆ ನಡೆಯಿತು.  ನನ್ನ ಹತ್ತಿರ ರಿಲೈಯನ್ಸ್ ಫೋನ್ ಮಾತ್ರವೇ ಇತ್ತು.  ಇ ಮೆಯಿಲ್, ವಾಟ್ಸ್ ಅಪ್ ಇವೆಲ್ಲಾ ಇರಲಿಲ್ಲ. ಒಂದು ದಿನ ಅವರು ಒಂದು ಎಸ್.ಎಂ.ಎಸ್. ಕಳುಹಿಸಿದರು. ‘ನಿಮಗೆ ಒಂದು ಸಂತೋಷವಾದ ಸುದ್ಧಿಯನ್ನು ಹೇಳಬೇಕು. ದಯವಿಟ್ಟು ಕರೆಯಿರಿ’ ಎಂದಿತ್ತು. ಅವರನ್ನು ನಾನು ಕರೆಯಲಿಲ್ಲ. ಮತ್ತೆ ಎಸ್.ಎಂ.ಎಸ್. ಬಂದಿತು. ನಾನೋ ಇ ಮೇಯಿಲಿನಲ್ಲಿ ಬರುವ ಲಾಟರಿ ಜಾಹಿರಾತಿನ ತರಹ ಇದೂ ಏನೋ ಇರಬಹುದು ಎಂದುಕೊಂಡು ಸುಮ್ಮನಾದೆ. ಮೊದಲು ಇ ಮೆಯಿಲ್ ನಲ್ಲಿ ಮಾತ್ರ ಬರುತ್ತಿತು. ಈಗೆಲ್ಲಾ ಎಸ್.ಎಂ.ಎಸ್. ನಲ್ಲಿ ಸಹ ಬರುತ್ತಿದೆ ಅಂದುಕೊಂಡೆ. ಸುದ್ದಿಯ ಕೊನೆಯಲ್ಲಿ ’ಸ್ವಚ್ಛತ ಆಂದೋಲನದೊಂದಿಗೆ  ಒಂದು ಒಳ್ಳೆಯ ಸುದ್ಧಿಯನ್ನು ಹಂಚಿಕೊಳ್ಳಬೇಕು. ನಮ್ಮನ್ನು ಸಂಪರ್ಕಿಸಿ.’ ಎಂದಿತ್ತು. ಇದು ಏನಾಗಿರಬಹುದು ಎಂದು ನಾನು ಅವರಿಗೆ ಕರೆಮಾಡಿದೆ.

‘ನಮ್ಮ ದತ್ತಿ ಸಂಸ್ಥೆಯ ಸ್ಥಾಪಕರು 15 ನೆಯ ತಾರೀಕು ಸಭೆ ಸೇರಲಿದ್ದಾರೆ. ಅವರಿಗೆ ನಾವು ವಿವರಗಳನ್ನು ನೀಡಬೇಕು’ ಎಂದರು. ನನಗೆ ಏನೂ ಅರ್ಥವಾಗಲಿಲ್ಲ. ನಂತರ ಈ ವರ್ಷ ನಿಮಗೆ ಪ್ರಶಸ್ತಿ ನೀಡಬೇಕೆಂದು ಕೊಂಡಿದ್ದಾರೆ ಎಂದೆಲ್ಲ ಹೇಳಿದರು. ‘ಆಗಲಿ, ನನಗೆ ಅವುಗಳಲ್ಲಿ ಆಸಕ್ತಿ ಇಲ್ಲ’ ಎಂದಷ್ಟು ಮಾತ್ರ ಹೇಳಿ ಫೋನನ್ನು ಇಟ್ಟೆ. ಅವರು ಮತ್ತೆ ದೂರವಾಣಿಯಲ್ಲಿ ಕರೆದು ‘ಈ ಪ್ರಶಸ್ತಿಯ ಬಗ್ಗೆ ನೀವು ತಿಳಿದುಕೊಳ್ಳಬೇಕು. ಇದು ದೊಡ್ಡ ಪ್ರಶಸ್ತಿ’ ಎಂದು ಹೇಳಿದರು. ನಾನು ಒಂದು ಏಳು ಮಹಿಳೆಯರ ಹೆಸರನ್ನು ಹೇಳುತ್ತೇನೆ. ಅವರಿಗೆ ಈ ಪ್ರಶಸ್ತಿಯನ್ನು ಕೊಡಿ ಎಂದೇ. ‘ಅದರ ಬಗ್ಗೆ ನಾನು ಸ್ಥಾಪಕರ ಸಭೆಯಲ್ಲಿ ಮಾತನಾಡುತ್ತೇನೆ’ ಎಂದರು.

ಹದಿನೈದು ದಿನಗಳ ನಂತರ ಮತ್ತೆ ದೂರವಾಣಿಗೆ ಕರೆಮಾಡಿ ‘ನಾವು ಒಂದು ಪತ್ರ ಕಳುಹಿಸುತ್ತೇವೆ. ಅದನ್ನು ನೀವು ತೆಗೆದುಕೊಳ್ಳಬೇಕು. ನಿಮಗೆ ಯಾವಾಗ ಅನುಕೂಲ?’ ಎಂದು ಕೇಳಿದರು. ಶನಿವಾರ ದೂರವಾಣಿಯಲ್ಲಿ ಕೇಳಿದರು. ಸೋಮವಾರ 9 ಗಂಟೆಗೆ ನಾನಿರುವೆ ಎಂದು ಅವರಿಗೆ ತಿಳಿಸಿದೆ. 9 ಗಂಟೆಗೆ ನಮ್ಮ ಪ್ರತಿನಿಧಿ ಬರುತ್ತಾರೆ. ನೀವೇ ಪತ್ರವನ್ನು ತೆಗೆದುಕೊಳ್ಳಬೇಕು. ಬೇರೆ ಯಾರು ತೆಗೆದುಕೊಳ್ಳಲಾಗದು ಎಂದು ಹೇಳಿದರು. ಅದೇ ರೀತಿ ಒಬ್ಬರು ಬಂದರು. ಪತ್ರ ತೆರೆದು ನೋಡಿ ಹೆದರಿದೆ. ಇದನ್ನು ಕೊಟ್ಟು ಬಿಟ್ಟರಲ್ಲ ಏನು ಮಾಡುವುದೆಂದು ಹೆದರಿದೆ. ಹದಿನೈದು ದಿನಗಳಲ್ಲಿ ಮೆಗಸೇಸೆ ಪ್ರಶಸ್ತಿಯನ್ನು ಘೋಷಿಸಿಬಿಟ್ಟರು.

ಬೆಳಗ್ಗೆ ಬಟ್ಟೆಯನ್ನು ಇಸ್ತ್ರಿ ಅಂಗಡಿಯಿಂದ ತೆಗೆದುಕೊಳ್ಳಲು ಹೋದಾಗ ಸುದ್ಧಿ ಹಬ್ಬಿದ್ದು ತಿಳಿಯಿತು. ಪತ್ರಿಕೆಯವರು ಸೇರಿದರು. ಹಿಂದಿನ ಬಾಗಿಲ ಮೂಲಕ ಸಚಿನನ್ನು ಕರೆದು ಅವನ ಬಳಿ ಹೇಳಿ ಅಲ್ಲಿಂದ ಹೊರಟುಬಿಟ್ಟೆ. ಯಾರಿಗೂ ತಿಳಿಯದ ಜಾಗದಲ್ಲಿ ತಟ್ಟೆಯನ್ನು ತೊಳೆಯುತ್ತಿದ್ದೆ. ನನ್ನನ್ನು ಹುಡುಕಿಕೊಂಡು ಅಲ್ಲಿಗೂ ಬಂದರು. ತಟ್ಟೆಯನ್ನು ತೊಳೆಯುವಾಗ ಫೋಟೋ ತೆಗೆದುಬಿಟ್ಟರು. ಅದನ್ನು ಹಾಗೆಯೇ ಪತ್ರಿಕೆಗಳಲ್ಲಿ ಪ್ರಕಟಿಸಿದರು. ನನ್ನ ಬದುಕೇ ಕಳೆದುಹೋಯಿತು. ನನ್ನ ನಾಚಿಕೆಯೆಲ್ಲವನ್ನೂ ಒಂದೇ ದಿನದಲ್ಲಿ ಖಾಲಿಮಾಡಿಬಿಟ್ಟರು. ಈ ಪ್ರಶಸ್ತಿಯನ್ನು ಸ್ವೀಕರಿಸುವುದಾಗಿ ಇಲ್ಲಿಯವರೆಗೆ ನಾನು ಅವರಿಗೆ ಉತ್ತರಿಸಲಿಲ್ಲ. ಅವರು ಕಳುಹಿಸಿದ ಪತ್ರವನ್ನು ಸ್ವೀಕರಿಸಿದ್ದೇನೆ ಎಂದಷ್ಟೇ ಉತ್ತರಿಸಿದ್ದೆ.

ಹಣವನ್ನು ಕಳುಹಿಸಲು ಬ್ಯಾಂಕಿನ ಖಾತೆಯ ಸಂಖ್ಯೆಯನ್ನು ಕೇಳಿದರು. ನನ್ನ ಬಳಿ ಏನೂ ಇಲ್ಲ. ನನಗೆ ಯಾರು ಯಾವಾಗ ಹಣ ಕೊಟ್ಟರೂ SKA ಲೆಕ್ಕಕ್ಕೆ ಜಮಾ ಮಾಡುವೆ. ಬೇರೊಂದು ಖಾತೆಯ ಸಂಖ್ಯೆಯನ್ನು ಕೊಡಲೆ ಎಂದರೆ ಮಗಸೇಸೆ ದತ್ತಿ ಸಂಸ್ಥೆ ಅದನ್ನು ಒಪ್ಪಿಕೊಳ್ಳದೆಂದು ಹಣ ಬೇಡ ಎಂದೆ. ನಂತರ ಸಂಸ್ಥೆಯ ಸ್ಥಾಪಕರೆಲ್ಲ ಸೇರಿ ಹಣವನ್ನು ಕಳುಹಿಸಿಕೊಟ್ಟರು. ಅದನ್ನು ನೋಡಿದಾಗ ಚಿನ್ನ, ಹಣ ಎಲ್ಲ ಸೇರಿದ ಮೊತ್ತವನ್ನು ತಿಳಿಸಿದ್ದರು. ಅದನ್ನು ನೋಡಿ ಏನು ಮಾಡಬೇಕೆಂದು ತಿಳಿಯದೆ ಕಣ್ಣುಕಣ್ಣುಬಿಟ್ಟೆ. ನಮ್ಮ ಕೈಯಲ್ಲಿ ಏನೂ ಇಲ್ಲ.

ಪೆಮು: ತಮಿಳಿನಲ್ಲಿ ಇಷ್ಟೊಂದು ಚೆನ್ನಾಗಿ ಹೇಗೆ ಮಾತನಾಡುತ್ತೀರಿ? ಅದಕ್ಕೆ ಸಂದರ್ಭ ಹೇಗೆ ಒದಗಿತು?

ಬೆವಿ: ತಮಿಳುನಾಡಿನಲ್ಲಿ ಸ್ವಲ್ಪ ಕೆಲಸಮಾಡಿದ್ದೇನೆ. ಭಾಷೆ ತಾನಾಗೆ ಬರುತ್ತದೆ. ನೇಪಾಳಕ್ಕೆ ಹೋಗುವಾಗ ಆ ಭಾಷೆಯ ಐವತ್ತು ಅರವತ್ತು ಪದಗಳು ಗೊತ್ತಿದ್ದರೆ ಮಾತನಾಡಬಹುದು. ನನಗೆ ಯಾವ ಭಾಷೆಯಲ್ಲಿಯೂ ಬಹಳ ಪದಗಳು ಗೊತ್ತಿಲ್ಲ. ವ್ಯಾಕರಣ ಶುದ್ಧಿಯೂ ಇರುವುದಿಲ್ಲ. ತಿಳಿದಷ್ಟು ಮಾತನಾಡುತ್ತೇನೆ. ಸಂಭಾಷಣೆಯನ್ನು ಆರಂಭಿಸುವಾಗಲೇ ಹೇಳಿಬಿಡುತ್ತೇನೆ. ನಾನು ಮಾತನಾಡುವ ಭಾಷೆ  ಇರುವುದು ಹೀಗೆಯೇ ಎಂದು. ಅರ್ಥಮಾಡಿಕೊಳ್ಳುವುದು ಬಿಡುವುದು ನಿಮಗೆ ಸೇರಿದ್ದು ಎಂದು. ಹಿಂದಿ, ಇಂಗ್ಲೀಷ್ ಎಲ್ಲ ಭಾಷೆಯೂ ಹಾಗೆಯೇ. ಯಾವ ಭಾಷೆಯನ್ನು ನಾನು ಕಲಿತು ಅರಿತಿಲ್ಲ. ಮಾತನಾಡಿಯೇ ಕಲಿತದ್ದು. ಎರಡು ಮೂರು ದಿನ ಒಂದು ಭಾಷೆಯಲ್ಲಿ ಮಾತನಾಡಿದರೆ ಸ್ವಲ್ಪ ಮಟ್ಟಿಗೆ ಸರಳವಾಗಿ ಕಲಿಯಬಹುದು. ಈಗ ಸಹ ಎರಡು ದಿನದಿಂದ ನಿಮ್ಮೊಂದಿಗೆ ತಮಿಳಿನಲ್ಲಿ ಮಾತನಾಡುತ್ತಿದ್ದೇನೆ. ಇಲ್ಲದಿದ್ದರೆ ಈ ಅವಕಾಶ ನನಗೆ ದೊರಕುತ್ತಿರಲಿಲ್ಲ. ನೀವು ಈಗ ಹೋದಮೇಲೆ ಉಳಿದವರೊಂದಿಗೆ ಒಂದು ದಿನಕ್ಕಾದರೂ ಈ ತಮಿಳು ಪದಗಳು ನನ್ನ ಸಂಭಾಷಣೆಯಲ್ಲಿ ಬರುತ್ತದೆ. ಬೆಂಗಾಲಿ ಸ್ವಲ್ಪ ಗೊತ್ತು. ನಾನು ಓದಿದ್ದೆಲ್ಲಾ ಆಂಧ್ರದಲ್ಲಿ. ಕನ್ನಡ ಸ್ವಲ್ಪ ಗೊತ್ತು. ಕನ್ನಡಕ್ಕಿಂತಲೂ ತಮಿಳು ಸ್ವಲ್ಪ ಚೆನ್ನಾಗಿಯೆ ಗೊತ್ತು. ಕೆಲವು ಪದಗಳು ಅರ್ಥವಾಗುವುದಿಲ್ಲ. ಆದರೂ ಚೆನ್ನಾಗಿ ಮಾತನಾಡುತ್ತೇನೆ.

ಪೆಮು: ತಮಿಳುನಾಡಿನಲ್ಲಿ ಈ ಕರ್ಮಚಾರಿಗಳ ನಡುವೆ ಕೆಲಸ ಮಾಡಿರುವಿರೀ ಅಲ್ಲವೇ? ಅಲ್ಲಿ ಈ ಕಾರ್ಮಿಕರ ಪರಿಸ್ಥಿತಿಯೂ, ಸರಕಾರದ ಸಂಪರ್ಕವೂ ಹೇಗಿದೆ?

ಬೆವಿ: 2010 ರವರೆಗೆ ತಮಿಳುನಾಡು ಚೆನ್ನಾಗಿಯೇ ಇತ್ತು. ಮತ್ತೊಂದು ಮುಖ್ಯವಾದ ವಿಷಯ, ಒಬ್ಬ ಪ್ರಮುಖ ಕಾರ್ಯದರ್ಶಿ ಮನಸ್ಸು ಮಾಡಿದರೆ ಒಂದು ವಿಷಯವನ್ನು ಕೊನೆಯ ದರ್ಜೆಯ  ಕಾರ್ಮಿಕನವರೆಗೂ ಉಸ್ತುವಾರಿ ನಡೆಸುವ ಒಂದು ಸಂಸ್ಥೆಯ ಶಿಸ್ತು ತಮಿಳುನಾಡಿನಲ್ಲಿದೆ. ಕಳೆದ ಕೆಲವು ವರ್ಷಗಳಿಂದ ಆ ಶಿಸ್ತು ತಮಿಳುನಾಡಿನಲ್ಲಿ ಇಲ್ಲ. ಉಳಿದ ರಾಜ್ಯಗಳಲ್ಲಿ  ಹೀಗಿದೆ ಎಂದು ಹೇಳಲು ಸಾಧ್ಯವಿಲ್ಲ. ಯಾರಿಗೆ ಯಾರು ಸೂಚನೆ ನೀಡಬೇಕು, ಯಾವ ಕೆಲಸವನ್ನು ಯಾರು ಮಾಡಬೇಕು ಎಂಬ ವ್ಯವಸ್ಥೆ ತಮಿಳುನಾಡಿನ ಸರಕಾರದಲ್ಲಿದೆ. ಆ ರೀತಿ ಉಳಿದ  ರಾಜ್ಯಗಳಲ್ಲಿ  ಇಲ್ಲ. ಒಂದು ಕೆಲಸ ಆಗುತ್ತೆ ಅಥವಾ ಆಗುವುದಿಲ್ಲ ಎಂಬುದೆಲ್ಲ ಬೇರೆಯ ವಿಷಯ. ಆದರೆ ಅದರದೇ ಆದ ಒಂದು ಪದ್ಧತಿ ಇರುವುದು ಪ್ರಶಂಸನೀಯ. ಇತ್ತೀಚೆಗೆ ಸ್ವಚ್ಛತೆಯ ವೃತ್ತಿಯ ಬಗೆಯ ಗಮನ ಇಲ್ಲ. ಇದು ಒಳ್ಳೆಯದಕ್ಕಲ್ಲ. ಕೆಲವು ವರ್ಷಗಳವರೆಗೆ ತಮಿಳುನಾಡು ಉದಾಹರಣೆಗೆ ಅರ್ಹವಾಗಿತ್ತು. ಒಳ್ಳೆಯ ಬೆಳವಣಿಗೆ ಆಗಬೇಕಿತ್ತು. ಆದರೆ ಹಾಗೆ ನಡೆಯಲಿಲ್ಲ. ಈಗ ತಮಿಳುನಾಡು ಯಾವುದರ ಬಗ್ಗೆ ತನ್ನ ಗಮನವನ್ನು ಹರಿಸುತ್ತಿದೆ ಎಂದೂ ಸಹ ತಿಳಿಯುತ್ತಿಲ್ಲ.

ಮುಕ್ತಾಯ.

ತಮಿಳಿನಲ್ಲಿ ಬರವಣಿಗೆಯ ರೂಪಕ್ಕೆ: ಕೃಷ್ಣಪ್ರಭು.

ಭಾಗ ೧ : http://ruthumana.com/2018/01/27/bezwada-wilson-interview-part-1/

ಭಾಗ ೨ : http://ruthumana.com/2018/02/04/bezwada-wilson-interview-part-2/

ಭಾಗ ೩ : http://ruthumana.com/2018/02/20/bezwada-wilson-interview-part-3/

ಪ್ರತಿಕ್ರಿಯಿಸಿ