ತಾಯ್ನುಡಿಯಲ್ಲಿ ದೇವರನ್ನು ಕರೆದವರು ..

ಮಧುಕೀಶ್ವರ್ ಸಂಪಾದಕತ್ವದ ‘ಮಾನಸಿ’ ಪತ್ರಿಕೆಯ ದಶಮಾನೋತ್ಸವ ಸಂದರ್ಭದಲ್ಲಿ ಪ್ರಕಟವಾದ ವಿಶೇಷ ಸಂಚಿಕೆಗಾಗಿ ಮಧುಕಿಶ್ವರ್ ನಡೆಸಿದ ಧ್ವನಿಮುದ್ರಿತ ಸಂವಾದಕ್ಕೆ ಎ. ಕೆ. ರಾಮಾನುಜನ್ ನೀಡಿದ ಲೇಖನ ರೂಪ ‘Women Bhakta Poets’ (1989).

ಭಕ್ತಿಯ ಬಗೆಗೆ ಮಾತನಾಡುವಾಗ ಅದು ಒಂದೇ ಎಂದು ಭಾವಿಸಿ ಮಾತನಾಡುತ್ತಿರುತ್ತೇವೆ. ಆದರೆ ಅದರಲ್ಲಿ ಅನೇಕ ವಿಧಗಳಿವೆ. ಭಕ್ತಿಯ ಅಗಾಧ ವೈವಿಧ್ಯವನ್ನು ನಾವು ಗಮನಿಸಬೇಕು. ಶಿವಭಕ್ತಿ, ವಿಷ್ಣುಭಕ್ತಿ, ದೇವೀಭಕ್ತಿ, ಪುರುಷಭಕ್ತಿ, ಸ್ತ್ರೀಯರ ಭಕ್ತಿ, ಕರ್ನಾಟಕದಲ್ಲಿ ಭಕ್ತಿ – ಹೀಗೆ ಹಲವು ಪ್ರಭೇದಗಳಿವೆ. ಭಕ್ತಿ ಪಂಥದ ಉಗಮ ಮತ್ತು ಅದರ ಅಂತಿಮ ಸ್ವರೂಪ ಕೂಡ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದೆ. ಈ ವೈವಿಧ್ಯವನ್ನು ಅಧ್ಯಯನ ಮಾಡುವ ಅಗತ್ಯವಿದೆ. ನನಗೆ ಒಂದೆರಡು ಭಕ್ತಿ ಪರಂಪರೆಗಳ ಬಗೆಗೆ ಸ್ವಲ್ಪಮಟ್ಟಿಗೆ ಗೊತ್ತು. ನನ್ನ ಪ್ರತಿಕ್ರಿಯೆಗಳು ಈ ಭಕ್ತಿ ಪರಂಪರೆಗಳಿಂದ ಪ್ರಭಾವಿತವಾಗಿವೆ. ಇಲ್ಲಿ ಕನ್ನಡ ವೀರಶೈವ ಪರಂಪರೆಯಿಂದ ಆಯ್ದುಕೊಂಡ ಉದಾಹರಣೆಗಳನ್ನು ಮಾತ್ರ ಉಲ್ಲೇಖಿಸುತ್ತೇನೆ.

ಜಾತಿ, ಲಿಂಗ ಅಥವಾ ದೇವರ ಕಲ್ಪನೆಯ ಬಗೆಗೆ ಅಭಿಜಾತ ಅಥವಾ ಸಾಂಪ್ರದಾಯಿಕ ವ್ಯವಸ್ಥೆಯಲ್ಲಿರುವ ದೃಷ್ಟಿಕೋನಕ್ಕೆ ವಿರುದ್ಧವಾದ ಒಂದು ಪ್ರತಿವ್ಯವಸ್ಥೆಯಾಗಿ ಭಕ್ತಿಪಂಥವನ್ನು ಪರಿಶೀಲಿಸಬಹುದು. ಉದಾಹರಣೆಗೆ ವೈದಿಕ ದೇವರುಗಳು ಸ್ಥಳೀಯ ದೇವರುಗಳಲ್ಲ. ಆದರೆ ಭಕ್ತಿಪಂಥದಲ್ಲಿ ದೇವರುಗಳನ್ನು ಸ್ಥಳೀಯ ರೂಪಗಳಲ್ಲಿ, ದೇವಾಲಯಗಳಲ್ಲಿ ಪೂಜಿಸಬಹುದು. ಈ ದೇವರುಗಳಿಗೆ ಬಣ್ಣ, ವ್ಯಕ್ತಿಗಳ ಭಾವನೆಗಳು ಹಾಗೂ ಕುಟುಂಬವನ್ನು ಆವಾಹಿಸಬಹುದು – ಇವರು ದೇವರುಗಳಾಗಿರುವಂತೆಯೇ ಮನುಷ್ಯರೂ ಆಗಿರುತ್ತಾರೆ.

ಅಭಿಜಾತ ಪರಂಪರೆಯಲ್ಲಿ ಯಾವನೇ ಅಸ್ಪಶ್ಯ ಅಥವಾ ಸ್ತ್ರೀ ಸಾಹಿತ್ಯ ಕೃತಿಯನ್ನು ರಚಿಸಿದ ಉಲ್ಲೇಖಗಳಿಲ್ಲ. ಆದರೆ ಭಕ್ತಿಪಂಥದಲ್ಲಿ ಇವರೆಲ್ಲ ಪ್ರಮುಖ ಅನುಭಾವಿ ಕವಿಗಳು, ಭಕ್ತಿಪಂಥದ ಮೊದಲ ಆಂದೋಳನ ಐದು ಅಥವಾ ಆರನೆ ಶತಮಾನದಲ್ಲಿ ತಮಿಳಿನಲ್ಲಿ ಆರಂಭವಾಗುತ್ತದೆ. ಅದುವರೆಗೆ ಎಲ್ಲ ಧಾರ್ಮಿಕ ರಚನೆಗೆ ಸಂಸ್ಕೃತ, ಪಾಲಿ ಮುಂತಾದ ಭಾಷೆಗಳಲ್ಲಿದ್ದವು. ಸಂಸ್ಕೃತವು ಹಿಂದೂಗಳಿಗೆ ಪಿತೃಭಾಷೆ. ಅದು ಪಿತೃಸಮಾನರ, ಬ್ರಾಹ್ಮಣರ, ಕುಟುಂಬದ ಯಜಮಾನರ, ಸಮುದಾಯ ಹಿರಿಯರ ಭಾಷೆ. ಕೆಲವು ಸ್ತ್ರೀಯರಿಗೆ ಕೂಡ ಸಂಸ್ಕೃತ ಭಾಷೆ ಗೊತ್ತಿತ್ತು ಎಂಬುದು ಕಥೆ, ಕಾವ್ಯಗಳಿಂದ ತಿಳಿದುಬರುತ್ತದೆ. ಆದರೂ ಆ ಕಾಲದಲ್ಲಿ ಸಾಮಾನ್ಯವಾಗಿ ಸ್ತ್ರೀಯರು ಸಂಸ್ಕೃತವನ್ನು ಕಲಿಯುವಂತಿರಲಿಲ್ಲ. ಐದನೆಯ ಶತಮಾನದವರೆಗೆ ತಾಯ್ನುಡಿಯಲ್ಲಿ ಯಾವುದೇ ಧಾರ್ಮಿಕ ಕಾವ್ಯ ರಚನೆಯಾದುದು ನಮಗೆ ಕಂಡು ಬರುವುದಿಲ್ಲ. ಜಗತ್ತಿನಲ್ಲಿ ಅತ್ಯುತ್ತಮವೆನ್ನಬಹುದಾದ ವೀರಕಾವ್ಯ ಹಾಗೂ ಪ್ರೇಮ ಕಾವ್ಯಗಳು ತಮಿಳಿನಲ್ಲಿ ಮೊದಲ ಎರಡು, ಮೂರನೆಯ ಶತಮಾನಗಳಲ್ಲಿ ರಚನೆಯಾಗಿವೆ. ಮುರುಗನನ್ನು ಸ್ತುತಿಸುವ ಮೊದಲ ಭಕ್ತಿ ಕಾವ್ಯ ತಮಿಳಿನಲ್ಲಿ ಕ್ರಿ.ಶ. 550ರ ಸುಮಾರಿಗೆ ರಚನೆಯಾಯಿತು.

ತಾಯ್ನುಡಿಯಲ್ಲಿ, ಅಂದರೆ ಮಕ್ಕಳ ಹಾಗೂ ಕುಟುಂಬದ ಸದಸ್ಯರ ಮಾತಿನಲ್ಲಿ, ದೇವರ ಜೊತೆ ಮಾತನಾಡುವ ಅವಕಾಶ ಸಿಕ್ಕಿದೊಡನೆ ಎಲ್ಲ ಬಗೆಯ ಮಾನವೀಯ ಹಾಗೂ ಭಾವನಾತ್ಮಕ ಅನುಭವಗಳು ಧರ್ಮಕ್ಕೆ ಸುಸಂಗತವೆನಿಸಿದವು. ಎಲ್ಲ ಕುಟುಂಬ ಸಂಬಂಧಗಳು ಭಕ್ತಿಯ ಭಾವಕೋಶದ ಭಾಗವಾದವು. ಈಗ ದೇವರು ಕೇವಲ ಪ್ರಭುವಲ್ಲ. ಒಡೆಯನಲ್ಲ. ಆತ ತಾಯಿ, ತಂದೆ, ಮಗು, ಪ್ರಿಯಕರ ಎಲ್ಲವೂ.

ಆರನೆಯ ಶತಮಾನದಿಂದ ಮೊದಲ್ಗೊಂಡು ಸುಮಾರು ಮೂರು ಶತಮಾನಗಳ ಕಾಲ ಶಿವ ಹಾಗೂ ವಿಷ್ಣುವನ್ನು ಸ್ತುತಿಸುವ ಕಾವ್ಯ ಸಮೃದ್ಧವಾಗಿ ಮೂಡಿಬಂದಿತು. ಇಂದಿಗೂ ಕೂಡ ಇದು ಜೀವಂತ ಪರಂಪರೆಯಾಗಿ ಮುಂದುವರಿದಿದೆ. ಜನ ಈಗಲೂ ಈ ಬಗೆಯ ಹಾಡುಗಬ್ಬಗಳನ್ನು ದೇವಾಲಯಗಳಲ್ಲಿ ಮೆರವಣಿಗೆಗಳಲ್ಲಿ, ಸಂಗೀತ ಕಛೇರಿಗಳಲ್ಲಿ ಹಾಡುತ್ತಾರೆ; ಹೊಸ ಹಾಡುಗಳನ್ನು ಕಟ್ಟುತ್ತಾರೆ.

ಆರನೆಯ ಶತಮಾನದ ವೇಳೆಗೆ ತಮಿಳಿನಲ್ಲಿ ಭಕ್ತಿಪಂಥ ಆರಂಭವಾಯಿತು. ಇದಕ್ಕೆ ಕಾರಣವೆಂದರೆ, ಆ ಕಾಲಕ್ಕೆ ಸಂಸ್ಕೃತ ಮತ್ತು ತಮಿಳು ಭಾಷೆಗಳು ಮಾತ್ರ ಅಭಿಜಾತ ಸಾಹಿತ್ಯದ ಭಾಷೆಗಳಾಗಿದ್ದವು. ತಮಿಳು ಭಾಷೆಗೆ ಮಾತ್ರ ತಾಯ್ನುಡಿಯಾಗಿ ಸಾಹಿತ್ಯದ ಒಂದು ದೀರ್ಘ ಪರಂಪರೆ ಇದ್ದಿತು. ಉಳಿದೆಲ್ಲ ಭಾಷೆಗಳು ಮೌಖಿಕ ಸಂಪ್ರದಾಯವನ್ನು ನೆಚ್ಚಿಕೊಂಡ ಉಪಭಾಷೆಗಳಾಗಿದ್ದವು. ಹತ್ತನೆಯ ಶತಮಾನದ ಹೊತ್ತಿಗೆ ಕನ್ನಡದಲ್ಲಿ ಭಕ್ತಿಪಂಥದ ರಚನೆಗಳು ಬಂದವು. ಅನಂತರ ಭಕ್ತಿ ಎಂಬುದೇ ಬೆಂಕಿಯ ಕಿಡಿಯಂತೆ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ, ಭಾಷೆಯಿಂದ ಭಾಷೆಗೆ ಹಬ್ಬಿತು. ತಮಿಳಿನಿಂದ ಕನ್ನಡಕ್ಕೆ, ಕನ್ನಡದಿಂದ ಮರಾಠಿಗೆ, ಹಿಂದಿಗೆ ಮತ್ತು ಉತ್ತರಕ್ಕೆ ಹರಡಿತು. ಈ ಬಗೆಯ ಸಂಬಂಧಗಳು ಹಾಗೂ ಅಖಿಲಭಾರತ ವ್ಯಾಪ್ತಿಯ ಸಂಪರ್ಕ ಜಾಲದ ಬಗೆಗೆ ನಾವು ಇನ್ನಷ್ಟು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ನಮ್ಮ ಸಾಮಾಜಿಕ ಮತ್ತು ಸೈದ್ದಾಂತಿಕ ಇತಿಹಾಸಕ್ಕೆ ಸಂಬಂಧಪಟ್ಟಂತೆ ನಮ್ಮ ಜ್ಞಾನ ಅತೃಪ್ತಿಕರವಾಗಿದೆ.

ಭಕ್ತಿಪಂಥದ ಆಂದೋಳನಗಳು ಸಾಮಾಜಿಕ ಆಂದೋಳನಗಳೂ ಹೌದು. ಈ ಆಂದೋಳನಗಳಲ್ಲಿ ಎಲ್ಲ ಬಗೆಯ ಮಾನವ ಅನುಭವಗಳನ್ನು ಧಾರ್ಮಿಕ ನುಡಿಗಟ್ಟಿನಲ್ಲಿ ನಿರೂಪಿಸಲಾಗಿದೆ. ಭಕ್ತಿಯ ಅನುಭವದಲ್ಲಿ ಮನುಷ್ಯ ಕೇವಲ ಮನುಷ್ಯ ಮಾತ್ರ ಆಗಿರುತ್ತಾನೆ. ಸ್ತ್ರೀಯರು ಕೂಡ ಈ ಅನುಭವದ ಒಂದು ಭಾಗವೇ. ಜ್ಞಾನ, ಸಾಮಾಜಿಕ ಘನತೆ ಗೌರವಗಳು, ಸೌಲಭ್ಯಗಳು ಇವೇ ಮುಂತಾದವುಗಳಿಗಿಂತ ಭಾವನೆಗಳೆ ಹೆಚ್ಚು ಮುಖ್ಯ.  ವಾಸ್ತವವಾಗಿ ನೋಡಿದರೆ, ಸಾಮಾಜಿಕ ಘನತೆ, ಗೌರವ, ಪಾಂಡಿತ್ಯ, ಪುರುಷತ್ವ ಮತ್ತು ಇದೆಲ್ಲದರೊಂದಿಗೆ ಬರುವ ಅಹಂಕಾರ – ಇವೆಲ್ಲವೂ ದೈವಿಕ ಅನುಭವದ ಸಾಕ್ಷಾತ್ಕಾರಕ್ಕೆ ಅಡಚಣೆಗಳು. ಒಮ್ಮೆ ಈ ನಿಲುವು ತೆಗೆದುಕೊಂಡರೆ ಸಾಕು, ಯಾರು ಬೇಕಾದರೂ ದೈವಿಕ ಅನುಭವಗಳನ್ನು ಗಳಿಸುವ ಅರ್ಹತೆ ಉಳ್ಳವರಾಗುತ್ತಾರೆ. ಮಾನವೀಯವಾಗುವುದೆಂದರೆ ಈ ಅರ್ಹತೆ ಗಳಿಸುವುದು ಎಂದೇ ಅರ್ಥ.

ಮೊದಮೊದಲು ಭಕ್ತರು ಜಾತಿ ಹಾಗೂ ಶ್ರೀಮಂತಿಕೆಯನ್ನು ವಿರೋಧಿಸಿದರೂ ಕೂಡಾ ಅವರು ಹಿಂದುಳಿದ ಜಾತಿ ಹಾಗೂ ಬಡ ವರ್ಗಗಳಿಂದ ಬಂದವರೇನೂ ಆಗಿರಲಿಲ್ಲ. ಅವರಲ್ಲಿ ಅನೇಕರು ಬ್ರಾಹ್ಮಣ, ವೈಶ್ಯ ಹಾಗೂ ಕ್ಷತ್ರಿಯ ವರ್ಣಗಳಿಗೆ ಸೇರಿದವರಾಗಿದ್ದರು. ಬಿಡುವು, ಊಟ, ವಸತಿ, ಸ್ವಾತಂತ್ರ್ಯ ಮತ್ತು ಸುಸ್ಥಿತಿಯನ್ನು ಬುಡಮೇಲು ಮಾಡಲು ಅಗತ್ಯವಾದ ಭದ್ರತೆ ಇಲ್ಲದಿದ್ದರೆ ಕ್ರಾಂತಿಕಾರಿಗಳಾಗಲು ಸಾಧ್ಯವಿಲ್ಲ. ಸೌಲಭ್ಯಗಳಿಲ್ಲದೆ ಸೌಲಭ್ಯಗಳನ್ನು ಒದ್ದು ಬಿಸುಡಲು ಸಾಧ್ಯವಿಲ್ಲ. ಹಾಗೆ ಸೌಲಭ್ಯಗಳನ್ನು ತ್ಯಜಿಸಿದವರು ಹೀನ ಕುಲದವರ ಮತ್ತು ದನಿ ಇಲ್ಲದವರ ದನಿಯಾಗುತ್ತಾರೆ. ಕೆಲವರು ತಮ್ಮ ದನಿಗಳನ್ನು ತಾವೇ ಗುರುತಿಸಿಕೊಳ್ಳುತ್ತಾರೆ. ಮಹಾದೇವಿ ಮತ್ತು ಮೀರಾಳ ಹಾಗೆ ಪ್ರಖ್ಯಾತರಾದ ಹಲವು ಮಹಿಳಾ ಅನುಭಾವಿಗಳು ಮೇಲ್ವರ್ಗಗಳಿಂದಲೇ ಬಂದವರು. ಇವರು ತಮ್ಮ ಹಿನ್ನೆಲೆಯಿಂದಾಗಿ ದೊರೆತ ಸೌಲಭ್ಯಗಳನ್ನು ಕಿತ್ತೆಸೆಯಲು ಯತ್ನಿಸಿದರು.

ಪ್ರಾದೇಶಿಕವಾದ ಪ್ರತಿಯೊಂದು ಭಕ್ತಿ ಆಂದೋಳನವೂ (ಬಹಳ ಮುಖ್ಯವಾಗಿ ದಕ್ಷಿಣದಲ್ಲಿ) ಒಬ್ಬರಲ್ಲ ಒಬ್ಬಳು ಮಹಿಳೆಯನ್ನು ಒಳಗೊಂಡಿದೆ. ಭಕ್ತಿ ಮತ್ತು ಕಾವ್ಯ ಈ ಎರಡು ದೃಷ್ಟಿಗಳಿಂದಲೂ, ಆಕೆಯನ್ನು ಪುರುಷನಿಗೆ ಸಮನಾಗಿ ಅಥವಾ ಅದಕ್ಕಿಂತಲೂ ಮಿಗಿಲಾದ ಗೌರವದಿಂದ ಕಾಣಲಾಗಿದೆ. ಕನ್ನಡದ ವೀರಶೈವ ಆಂದೋಳನದಲ್ಲಿ ಪಾಲ್ಗೊಂಡ ಮುನ್ನೂರರಷ್ಟು ಅನುಭಾವಿಗಳಲ್ಲಿ ಸುಮಾರು 60 ಅನುಭಾವಿಗಳು ಸ್ತ್ರೀಯರು. ಇವರೆಲ್ಲ ಅನಾಮಧೇಯರೇನಲ್ಲ. ಇವರ ಹೆಸರುಗಳೊಂದಿಗೆ ಹಲವಾರು ದಂತಕಥೆಗಳು, ಸ್ಥಳ ನಾಮಗಳು ತಳುಕು ಹಾಕಿಕೊಂಡಿವೆ. ಇವರಲ್ಲಿ ಹಲವರು ವಚನಕಾರ್ತಿಯರು. ಇವರಲ್ಲಿ ಅತ್ಯಂತ ಪ್ರಸಿದ್ದಳಾದವಳೆಂದರೆ ಮಹಾದೇವಿಯಕ್ಕ. ಈಕೆ ಸುಮಾರು ಒಂದು ಸಾವಿರ ವಚನಗಳನ್ನು ರಚಿಸಿದ್ದಾಳೆ. ಇಂಥ ಒಂದು ಪರಂಪರೆಯಲ್ಲಿ ಪುರುಷನಾಗಿರುವುದು ಹೇಳಿಕೊಳ್ಳುವ ವಿಶೇಷ ಸಂಗತಿ ಏನೂ ಅಲ್ಲ.

ಅಧಿಕಾರಕ್ಕೆ ಮತ್ತಷ್ಟು ಅಧಿಕಾರದ ದಾಹ. ಅಧಿಕಾರ ಮತ್ತು ಸೌಲಭ್ಯಗಳಿಗೆ ರಕ್ಷಣೆಯ ಅಗತ್ಯವಿದೆ. ಭಕ್ತಿ ಪರಂಪರೆಯಲ್ಲಿ ಪುರುಷರು ಅಧಿಕಾರ ಮತ್ತು ಸೌಲಭ್ಯದ ಹಂಬಲವನ್ನು ತೊರೆಯುತ್ತಾರೆ. ತಮ್ಮ ರಕ್ಷಣೆಯ ತಡೆಗೋಡೆಗಳನ್ನು ಕಿತ್ತೊಗೆಯುತ್ತಾರೆ. ಅಷ್ಟು ಮಾತ್ರವಲ್ಲದೆ ಕಟ್ಟಕಡೆಗೆ ಪುರುಷತ್ವವನ್ನೂ ಮೀರಿ ನಿಲ್ಲುತ್ತಾರೆ. ಹಾಗಾಗಿ ಭಕ್ತಪಂಥದಲ್ಲಿ ಪುರುಷ ಅನುಭಾವಿಗಳು ಸ್ತ್ರೀಯರಾಗಲು ಬಯಸುತ್ತಾರೆ; ಪುರುಷತ್ವವನ್ನು  ಕಿತ್ತೊಗೆಯಲು ಬಯಸುತ್ತಾರೆ. ಹೀಗೆ ಪುರುಷ ಅನುಭಾವಿಗಳು ಒಂದು ಬಗೆಯ ತೃತೀಯ ಲಿಂಗವಾಗುತ್ತಾರೆ. ಪುರುಷ ಮತ್ತು ಸ್ತ್ರೀಯರುಗಳ ನಡುವೆ ಇರುವ ಸೀಮಾರೇಖೆಗಳು ಅವರ ಬದುಕಿನಲ್ಲಿ ಪರಸ್ಪರ ತಾಕಲಾಡುತ್ತವೆ. ದಾಸಿಮಯ್ಯ ಹೇಳುತ್ತಾನೆ.

ಮೊಲೆಮುಡಿ ಬಂದರೆ ಹೆಣ್ಣೆಂಬರು

ಗಡ್ಡ ಮೀಸೆ ಬಂದರೆ ಗಂಡೆಂಬರು

ನಡುವೆ ಸುಳಿವಾತ್ಮನು

ಗಂಡೂ ಅಲ್ಲ ಹೆಣ್ಣೂ ಅಲ್ಲ ಕಾಣಾ ರಾಮನಾಥ

(‘ವಚನ ಕಮ್ಮಟ’ ಸಂಪಾದಕರು: ಕೆ. ಮರುಳಸಿದ್ದಪ್ಪ, ಕಿ. ರಂ. ನಾಗರಾಜ, ಕರ್ನಾಟಕ ಸರಕಾರ 1983)

ಅಂಗ ರಚನೆಯೇ ಅದೃಷ್ಟವೆಂದು ಫ್ರಾಯ್ಡ್ ಹೇಳಿದ. ದಾಸಿಮಯ್ಯನ ವಚನವು ಇದಕ್ಕೆ ವಿರುದ್ಧವಾದುದನ್ನು ಸಾರುತ್ತದೆ. ಅಂಗಾಂಗ ರಚನೆಯು ಸ್ತ್ರೀ ಪುರುಷರ ಆತ್ಮವನ್ನು ಬಂಧಿಸುವುದಿಲ್ಲ; ಸಂಸ್ಕೃತಿ ಮಾತ್ರವೇ ಲಿಂಗನೀತಿ ಅಥವಾ ವಿವಿಧ ಪಾತ್ರಗಳನ್ನು ನಿರ್ದೇಶಿಸುತ್ತದೆ,  ಪುಲ್ಲಿಂಗ-ಸ್ತ್ರೀಲಿಂಗಗಳೆಂದು ವಿಭಜಿಸುತ್ತದೆ. ತನ್ಮೂಲಕ ಕಲೆ, ಸಮಾಜ, ಜ್ಞಾನ ಅಥವಾ ಆತ್ಮಜ್ಞಾನ ಇವೇ ಮುಂತಾದ ವಿಷಯಗಳಲ್ಲಿ ಸಾಧನೆಯನ್ನು ನಿರ್ಬಂಧಿಸುತ್ತದೆ. ಈ ಬಗೆಯ ವಚನಗಳು ಸಾಮಾಜಿಕ ನೆಲೆಯಲ್ಲಿ ಹೆಣ್ಣು ಪುರುಷನಿಗಿಂತ ಭಿನ್ನವಾಗಿದ್ದರೂ ಮಾನಸಿಕ ಹಾಗೂ ಆಧ್ಯಾತ್ಮಿಕ ನೆಲೆಯಲ್ಲಿ ಆಕೆಯನ್ನು ಭಿನ್ನವೆಂದು ಗುರುತಿಸುವುದಿಲ್ಲ.

ಪುರುಷರು ಪರಂಪರಾಗತವಾಗಿ ಪಡೆದುಕೊಂಡು ಬಂದಿರುವ ಗುಣಲಕ್ಷಣಗಳನ್ನು ಸ್ತ್ರೀಯರು ಭಕ್ತಿ ಆಂದೋಳನದ ಮೂಲಕ ಪಡೆದುಕೊಳ್ಳುತ್ತಾರೆ. ಅವರು ತಮ್ಮನ್ನು ನಿರ್ಬಂಧಿಸುವ ಮನುಸ್ಮತಿಯ ಕಟ್ಟಳೆಗಳನ್ನು ಮುರಿಯುತ್ತಾರೆ. ಉದಾಹರಣೆಗೆ, ಓರ್ವ ಗೌರವಾನ್ವಿತ ಸ್ತ್ರೀ ಸ್ವತಂತ್ರವಾಗಿ ಬದುಕುವಂತಿಲ್ಲ. ಹೊರಗೆಲ್ಲೂ ಸಂಚರಿಸುವಂತಿಲ್ಲ.

ತನ್ನ ಗಂಡನಿಗೆ ಲೈಂಗಿಕ ಸುಖವನ್ನು ನಿರಾಕರಿಸುವಂತಿಲ್ಲ. ಸ್ತ್ರೀ ಅನುಭಾವಿಗಳಾದರೋ ಒಂಟಿಯಾಗಿ ಸಂಚರಿಸುತ್ತಾರೆ. ಗಂಡ, ಮಕ್ಕಳು ಹಾಗೂ ಸಂಸಾರವನ್ನೇ ತೊರೆಯುತ್ತಾರೆ.

ಸಾವಿಲ್ಲದ ಕೇಡಿಲ್ಲದ ಚೆಲುವಂಗಾನೊಲಿದೆನವ್ವ ಚಿಲುವಂಗಾನೊಲಿದೆನವ್ವಾ!

ಭವವಿಲ್ಲದ ಭಯವಿಲ್ಲದ ಚೆಲುವಂಗಾನೊಲಿದೆ!

ಕುಲಸೀಮೆಯಿಲ್ಲದ ನಿಸ್ಸೀಮ ಚೆಲುವಂಗಾನೊಲಿದೆ!

ಇದು ಕಾರಣ ಚೆನ್ನಮಲ್ಲಿಕಾರ್ಜುನ ಚೆಲುವ ಗಂಡನೆನಗೆ

ಈ ಸಾವ ಕೆಡುವ ಗಂಡರನೊಯ್ದು ಒಲೆಯೊಳಗಿಕ್ಕು ತಾಯೆ

(ಅಕ್ಕನ ವಚನಗಳು, ಸಂ: ಡಾ. ಎಲ್. ಬಸವರಾಜು 1977)

ಸ್ತ್ರೀ ಹಾಗೂ ಪುರುಷ ಅನುಭಾವಿಗಳ ನಡುವೆ ವ್ಯತ್ಯಾಸಗಳಿರುವುದು ಇವರ ಜೀವನ ಮತ್ತು ಕಾವ್ಯದ ಪರಿಶೀಲನೆಯಿಂದ ವ್ಯಕ್ತವಾಗುತ್ತದೆ. ಸಾಮಾನ್ಯವಾಗಿ ಪುರುಷ ಅನುಭಾವಿಗಳು ತಮ್ಮ ವ್ಯಕ್ತಿತ್ವದಲ್ಲಿ ಪರಿವರ್ತನೆಗೊಂಡು ದೇವರನ್ನು ಕಾಣುತ್ತಾರೆ. ಆದರೆ ಸ್ತ್ರೀಯರು ಮೊದಲಿನಿಂದಲೂ ತಮ್ಮ ದೇವರಲ್ಲಿ ಪ್ರೇಮಾನುರಕ್ತರಾಗಿರುತ್ತಾರೆ. ಹೀಗಾಗಿ ಅವರ ವ್ಯಕ್ತಿತ್ವದಲ್ಲಿ ಪರಿವರ್ತನೆಯಾಗುವುದಿಲ್ಲ. ಅವರು ದೇವರನ್ನು ಮಾತ್ರವೇ ತಮ್ಮ ಗಂಡನೆಂದು ಪರಿಗಣಿಸುತ್ತಾರೆ. ಒತ್ತಾಯಕ್ಕೆ ಕಟ್ಟುಬಿದ್ದು ಮದುವೆಯಾಗುತ್ತಾರೆ. ಮಹಾದೇವಿಯಕ್ಕ ಹೀಗೆ ಒತ್ತಾಯಕ್ಕೆ ಕಟ್ಟುಬಿದ್ದು ಮೂರು ಷರತ್ತುಗಳನ್ನು ವಿಧಿಸಿ ಮದುವೆಯಾಗುತ್ತಾಳೆ. ಗಂಡ ಆ ಷರತ್ತುಗಳನ್ನು ಉಲ್ಲಂಘಿಸಿದಾಗ ಆತನನ್ನು ತೊರೆಯುತ್ತಾಳೆ. ಇದಾದ ಬಳಿಕ ಆಕೆ ಸಮಾನಮನಸ್ಕರನ್ನು ಅರಸುತ್ತ ಅಲೆಯುತ್ತಾಳೆ.

ಕವಿಗಳು ಒಮ್ಮೆ ತಮ್ಮ ಕುಟುಂಬದಲ್ಲಿ, ಇನ್ನೊಮ್ಮೆ ಸಮಾನ ಮನಸ್ಕರ ಗುಂಪಿನಲ್ಲಿ – ಹೀಗೆ ಎರಡು ಬಾರಿ ಜನ್ಮ ಎತ್ತುತ್ತಾರಂತೆ. ಭಕ್ತರು ದ್ವಿಜತ್ವದ ಕಲ್ಪನೆಯನ್ನು ತಿರಸ್ಕರಿಸುತ್ತಾರಾದರೂ ಎರಡು ಬಾರಿ ಜನ್ಮವೆತ್ತುವ ಮಾತು ಅವರ ಮಟ್ಟಿಗೆ ನಿಜವೇ. ಅನೇಕ ಭಕ್ತರು ತಮ್ಮ ಕುಟುಂಬವನ್ನು ತೊರೆದು ಇನ್ನೊಂದು ಬಳಗವನ್ನು ಅರಸಿಕೊಂಡು ಹೋಗುತ್ತಾರೆ. ಪರ್ಯಾಯ ಸಮಾಜವ್ಯವಸ್ಥೆಯ ಸ್ಥಾಪನೆಯ ಉದ್ದೇಶದಿಂದ ವ್ಯವಸ್ಥೆಯ ವಿರುದ್ಧ ಪ್ರತಿಭಟನೆ ವ್ಯಕ್ತವಾಗುತ್ತದೆ. ಹೀಗಾಗಿ ಮಹಾದೇವಿಯಕ್ಕ ಇತರ ಭಕ್ತರನ್ನು ತಂದೆಗಳಿರಾ, ಅಣ್ಣಗಳಿರಾ ಎಂದು ಸಂಬೋಧಿಸುತ್ತಾಳೆ. ಅವರೆಲ್ಲ ವಧುವಿನ ಬಳಗದವರಾಗಿ ತನ್ನನ್ನು ಚೆನ್ನಮಲ್ಲಿಕಾರ್ಜುನನಿಗೆ ಮದುವೆ ಮಾಡಿಕೊಟ್ಟರೆಂದು ಹೇಳುತ್ತಾಳೆ. ಸ್ವತಃ ಆಕೆಯನ್ನು ಅವರೆಲ್ಲ ‘ಅಕ್ಕ’ ಎಂದು ಸಂಬೋಧಿಸುತ್ತಾರೆ.

ಮಹಾದೇವಿಯಕ್ಕ ದೇವರನ್ನು ಕುರಿತು ಪ್ರೇಮಭರಿತ ವಚನಗಳನ್ನು ರಚಿಸಿದ್ದಾಳೆ. ತನ್ನೊಳಗೆ ಓರ್ವ ಪ್ರಿಯಕರನಿದ್ದಾನೆ; ಹೊರಗೆ ಗಂಡನಿದ್ದಾನೆ. ಈ ಇಬ್ಬರನ್ನೂ ಸಂಭಾಳಿಸಿಕೊಂಡು ಹೋಗುವುದು ಕಷ್ಟ ಎನ್ನುತ್ತಾಳೆ ಆಕೆ. ಗಂಡ ಮತ್ತು ಕುಟುಂಬವೆಂಬುದು ಐಹಿಕ, ಸಾಮಾಜಿಕ ಬೇಡಿಕೆಗಳ ಸಂಕೇತವಾಗಿರುವುದಲ್ಲದೆ ಅಕ್ಕ ನಂಬಿರುವ ಮೌಲ್ಯಗಳಿಗೆ ವ್ಯತಿರಿಕ್ತವಾದ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ.

ಅತ್ತೆ ಮಾಯೆ, ಮಾವ ಸಂಸಾರಿ

ಮೂವರು ಮೈದುನರು ಹುಲಿಯಂಥವರು

ನಲ್ಲನು ನಗೆವೆಣ್ಣು ಕೆಳದಿಯ ಭಾವದಲಿರುವನು

ಇವ ದೇವನಲ್ಲ

ಅತ್ತಿಗೆಯ ಮೀರಲಾರೆನು

ತೊತ್ತುವಿನ ಕಾವಲು ಹೇಳುವರೆ ಕೇಳು

ಕರ್ಮವೆಂಬ ಗಂಡನ ಬಾಯ ಟೊಣೆದು

ಹಾದರವನಾಡುವೆನು ಹರನ ಕೂಡೆ!

ಮನವೆಂಬ ಸಖಿಯ ಪ್ರಸಾದದಿಂದ

ಅನುಭಾವವ ಕಲಿತೆನು ಶಿವನೊಡನೆ

ಕರ ಚೆಲುವ ಶ್ರೀ ಶೈಲ ಚೆನ್ನಮಲ್ಲಿಕಾರ್ಜುನನ

ಸಜ್ಜನದ ಗಂಡನ ಮಾಡಿಕೊಂಬೆನು

(ಅಕ್ಕನ ವಚನಗಳು: ಡಾ. ಎಲ್. ಬಸವರಾಜು 1977)

ಇಲ್ಲಿ ಅಕ್ಕ ತನ್ನೊಳಗೆ ಒಂದು ಸಂಘರ್ಷವನ್ನು ಅನುಭವಿಸುತ್ತಿದ್ದಾಳೆ. ಆಕೆ ನಿಜವಾಗಿಯೂ ತನ್ನ ದೇವರನ್ನು ಮತ್ತು ಪ್ರೇಮವನ್ನು ಕಂಡುಕೊಳ್ಳಬೇಕಾದರೆ ಬಂಧುಗಳು, ಸಾಮಾಜಿಕ ಸ್ಥಿತಿ ಹಾಗೂ ಸ್ತ್ರೀ ಪುರುಷರನ್ನು ನಿರ್ಬಂಧಿಸುವ ರೀತಿನೀತಿಗಳನ್ನು ಕಿತ್ತೊಗೆಯಲೇ ಬೇಕು. ಕುಟುಂಬ ಮತ್ತು ಬಂಧುಗಳು ಪುರುಷ ನಿರ್ಮಿತ ಜಗತ್ತಿನ ಸಂಕೇತಗಳಾಗಿವೆ. ‘ಮಾಯಾ’ ಪದದ ಮೂಲರೂಪ ‘ಮಾ’ ಎಂದರೆ “ರಚಿಸು’, ‘ನಿರ್ಮಿಸು’ ಎಂಬ ಅರ್ಥ ಪ್ರತೀತವಾಗುತ್ತದೆ. ಆದುದರಿಂದ ಆಕೆ ಈ ಮಾಯಾ ಜಗತ್ತನ್ನು ಒಳಹೊಕ್ಕು ಭೇದಿಸಿ ನೋಡಬೇಕು.

ಅಕ್ಕನ ಒಟ್ಟು ಬದುಕು ಈ ಒಳಹೊಗುವ, ಭೇದಿಸುವ ಕ್ರಿಯೆಯಲ್ಲಿ ಸಂಭ್ರಮಿಸುವಾಗ ಆಕೆ ತನ್ನ ಉಡುಪುಗಳನ್ನು ಬಿಸುಟು ನೀಳ ಕೇಶರಾಶಿಯಿಂದ ಮೈಮುಚ್ಚಿಕೊಂಡು ಓಡಾಡುತ್ತಾಳೆ. ಪಾವಿತ್ರ್ಯ ಹಾಗೂ ನಗ್ನತೆಯ ಬಗೆಗೆ ಆಕೆಯ ಅದ್ಭುತವಾದ ವಚನವೊಂದು ಹೀಗಿದೆ –

ಕೈಸಿರಿಯ ದಂಡವ ಕೊಳಬಹುದಲ್ಲದೆ

ಮೈಸಿರಿಯ ದಂಡವ ಕೊಳಲುಂಟೆ?

ಉಟ್ಟಂತ ಉಡಿಗೆ ತೊಡಿಗೆಯನೆಲ್ಲ ಸೆಳೆದುಕೊಳ್ಳಬಹುದಲ್ಲದೆ

ಮುಚ್ಚಿ ಮುಸುಕಿದರೆ ನಿರ್ವಾಣವ ಸೆಳೆದುಕೊಳ್ಳಬಹುದೇ? ಚೆನ್ನಮಲ್ಲಿಕಾರ್ಜುನ ದೇವರ ಬೆಳಗನುಟ್ಟು ಲಜ್ಜೆಗೆಟ್ಟವಳಿಗೆ

ಉಡುಗೆ ತೊಡಿಗೆಯ ಹಂಗೇಕೊ ಮರುಳೆ.

(ವಚನ ಕಮ್ಮಟ, ಸಂ: ಕೆ. ಮರುಳಸಿದ್ದಪ್ಪ, ಕಿ. ರಂ. ನಾಗರಾಜ, ಕರ್ನಾಟಕ ಸರಕಾರ, 1983)

ಈ ರೀತಿ ಉಡುಗೆ ತೊಡುಗೆಗಳ ಹಂಗು ತೊರೆಯುವುದೆಂದರೆ ಸಾಮಾಜಿಕ ಕಟುಕಟ್ಟಳೆಗಳು, ಸಮರ್ಥನೆಗಳು ಮತ್ತು ಅರ್ಥವಂತಿಕೆಯ ಮೇರೆಗಳನ್ನು ಮೀರುವುದಾಗಿದೆ. ದೈವಿಕ ಅನುಭವಕ್ಕೆ ತೆರೆದುಕೊಳ್ಳುವುದನ್ನು ನಗ್ನತೆಯು ಸಂಕೇತಿಸುತ್ತದೆ. ಕೃಷ್ಣ ನಾರಿಯರ ಸೀರೆಗಳನ್ನು ಕದಿಯುತ್ತಾನೆ. ಜೈನ ಪರಂಪರೆಯಲ್ಲಿ ಇಡೀ ಒಂದು ಸಮುದಾಯ ನಗ್ನತೆಗೆ ಬೆಲೆಕೊಟ್ಟು ‘ದಿಗಂಬರ’ ಎಂದು ಕರೆದುಕೊಂಡಿದೆ.

ಕಾಶ್ಮೀರದ ಲಲ್ಲಾ ದೇವಿ ಮತ್ತು ಮಹಾದೇವಿಯಂಥ ಸ್ತ್ರೀ ಅನುಭಾವಿಗಳು ಬಟ್ಟೆಯನ್ನು ಕಿತ್ತೆಸೆದರು. ಹೀಗೆ ಮಾಡುವುದರ ಮೂಲಕ ಅವರು ಕಾಮಪ್ರಚೋದಕ ವಾದ ಸ್ತ್ರೀ ದೇಹದ ಆಕರ್ಷಕ ಅಂಗಾಂಗಗಳನ್ನೂ ಪಾವಿತ್ರ್ಯವನ್ನೂ ನಿರಾಕರಿಸಿದರು. ಸ್ತ್ರೀ ಅನುಭಾವಿಗಳು ಪುರುಷರ ಕಾಮವಿಕಾರಗಳನ್ನು ಎದುರಿಸಬೇಕಾಗಿ ಬಂದ ಸಂದರ್ಭಗಳೂ ಇವೆ. ಉಡುಗೆ ತೊಡುಗೆಗಳಂತೆ ಪಾವಿತ್ರ್ಯ ಕೂಡ ಲೈಂಗಿಕ ಕುತೂಹಲವನ್ನು ದಮನಿಸುವುದಿಲ್ಲ. ಬಟ್ಟೆಬರೆಗಳ ಹಂಗು ತೊರೆದಾಗ ಈ ವಿರೋಧಾಭಾಸ ಬೆಳಕಿಗೆ ಬರುತ್ತದೆ.

ಬಟ್ಟೆ ಬರೆಗಳ ಹಂಗು ತೊರೆಯುವುದು ಕೂಡ ಸಮಾಜವನ್ನು ಧಿಕ್ಕರಿಸುವ, ಕಂಟಕಗಳನ್ನು ನಿವಾರಿಸಿಕೊಳ್ಳುವ, ಬಾಹ್ಯ ಸೌಂದರ್ಯದ ನಿರ್ವಹಣೆ ಮತ್ತು ಸಾಮಾಜಿಕ ತಾರತಮ್ಯ ನೀತಿಯನ್ನು ತಿರಸ್ಕರಿಸಿ ನಿಲ್ಲುವ ಒಂದು ಬಗೆಯ ಪ್ರತಿಭಟನೆ. ಸ್ತ್ರೀ ಪುರುಷರ ನಡುವೆ ಇರುವ ವ್ಯತ್ಯಾಸಗಳನ್ನು ಬಯಲಿಗೆಳೆಯುವ ಮತ್ತು ಅದನ್ನು ನಿರ್ಲಕ್ಷಿಸುವ ಮೂಲಕ ಅಕ್ಕ ಬಿಡುಗಡೆ ಹೊಂದುತ್ತಾಳೆ. ಅಲ್ಲದೆ ಹೀಗೆ ಮಾಡುವ ಎಲ್ಲರಿಗೂ ಬಿಡುಗಡೆ ದೊರೆಯುತ್ತದೆ.

ಭಕ್ತಿ ಆಂದೋಳನಗಳಲ್ಲಿ ಕಂಡುಬರುವ ಸ್ತ್ರೀಯರು ಹಾಗೂ ಅಸ್ಪಶ್ಯ ಅನುಭಾವಿಗಳ ನಡುವೆ ಹಲವಾರು ಸಮಾನ ಅಂಶಗಳಿವೆ. ಮೇಲ್ವರ್ಗದ ಪುರುಷ ಅನುಭಾವಿಗಳಂತೆ ಇವರಲ್ಲಿ ಯಾರೊಬ್ಬರೂ ಪರಿವರ್ತನೆ ಹೊಂದಬೇಕಾದ ಅಗತ್ಯವಿಲ್ಲ. ಇವರಿಗೆ ಸ್ವತಃ ತಮ್ಮೊಂದಿಗೆ ಜಗಳವಿಲ್ಲ; ಬದಲಿಗೆ ಇವರನ್ನು ಕಡೆಗಣಿಸಿರುವವರೊಂದಿಗೆ, ದೇವರ ಸನಿಹ ಹೋಗಲು ಬಿಡದೆ ಇರುವವರೊಂದಿಗೆ ತಕರಾರುಗಳಿವೆ. ಒಂದು ಕತೆಯಲ್ಲಿ ಬರುವಂತೆ, ದೇವಾಲಯ ಪ್ರವೇಶಕ್ಕೆ ನಿರಾಕರಿಸಿದ್ದ ಬ್ರಾಹ್ಮಣರು ಮತ್ತುಇತರ ಜಾತಿಗಳೊಂದಿಗೆ ಅಸ್ಪಶ್ಯ ಅನುಭಾವಿಗೆ ಜಗಳವಿತ್ತು. ಆತ ಸಮಾಜಬಾಹಿರನೂ, ಪರಿತ್ಯಕ್ತನೂ ಆಗಿ ಹೊಲೆಯರ ಕೇರಿಗೆ ಬರುತ್ತಾನೆ ಮತ್ತು ಅಲ್ಲೇ ಬದುಕುತ್ತಾನೆ. ಆತನನ್ನು ನೋಡುವ ಹಂಬಲದಿಂದ ದೇವರು ಊರ ಹೊರಗಿನ ಹೊಲೆಯರ ಕೇರಿಗೆ ಬರುತ್ತಾನೆ. ಬ್ರಾಹ್ಮಣ ಪೂಜಾರಿ ದೇವಾಲಯಕ್ಕೆ ಹೋಗಿ ನೋಡಿದರೆ ಅಲ್ಲಿ  ದೇವರಿಲ್ಲ! ದೇವರನ್ನು ಮತ್ತೆ ದೇವಾಲಯಕ್ಕೆ ಕರೆತಂದು ಪ್ರತಿಷ್ಠಾಪಿಸಲು ಆ ಪೂಜಾರಿ ಹೊಲೆಯನನ್ನು ತನ್ನ ಹೆಗಲ ಮೇಲೆ ಹೊತ್ತು ದೇವಾಲಯಕ್ಕೆ ಕರೆತರುತ್ತಾನೆ.

ಮಹಾದೇವಿಯಕ್ಕನ ಬದುಕನ್ನು ಪರಿಶೀಲಿಸುವುದರ ಮೂಲಕ ನಾನು  ಅನುಭಾವಿಗಳ ಬಗೆಗಿನ ನನ್ನ ಅಧ್ಯಯನವನ್ನು ಆರಂಭಿಸಿದೆ. ಮಹಾರಾಷ್ಟ್ರದ ಬಹಿನಾಬಾಯಿ, ಕಾಶ್ಮೀರದ ಲಲ್ಲಾ, ರಾಜಸ್ಥಾನದ ಮೀರಾ ಮತ್ತು ತಮಿಳಾ ಆಂಡಾಳ್ ಮುಂತಾದ ಭಾರತದ ಇತರ ಭಕ್ತಿ ಪರಂಪರೆಗಳಲ್ಲಿ ಕಂಡು ಬರುವ ಅನುಭಾವಿಗಳ ಬದುಕನ್ನು ಪರಿಶೀಲಿಸಿದಾಗ ಸೀತೆ ಮತ್ತು ಸಾವಿತ್ರಿಯಂಥ ಆದರ್ಶ ನಾರೀಮಣಿ ಮಾದರಿಗಳನ್ನು ತಲೆಕೆಳಗು ಮಾಡುವ ಕೆಲವು ಸಮಾನ ಅಂಶಗಳು ಇವರಲ್ಲಿ ಕಂಡುಬಂದಿವೆ. ಸ್ತ್ರೀ ಅನುಭಾವಿ ಪುರುಷನಿಗೆ ಅಧೀನೆಯಲ್ಲ. ಆಕೆ ತನ್ನ ತಂದೆ ತಾಯಿಗಳನ್ನು ಧಿಕ್ಕರಿಸಿ ವಿವಾಹ ಬಂಧನದಿಂದ ಪಾರಾಗಬಹುದು. ತನ್ನ ರೂಪವನ್ನು ಬದಲಾಯಿಸಿಕೊಂಡು ಅವ್ವಾಯಿಯಂತೆ ಮುದುಕಿಯಾಗಬಹುದು. ತಿಲಕವ್ವೆಯಂತೆ ಗಂಡಸಿನ ರೂಪ ಧರಿಸಬಹುದು. ನಾನು ಪರಿಶೀಲಿಸಿದ ಸುಮಾರು ನೂರು ಸ್ತ್ರೀ ಅನುಭಾವಿಗಳಲ್ಲಿ ಲಲ್ಲಾ ಮತ್ತು ಬಹಿನಾ ಮಾತ್ರ ದಾರುಣವಾದ ವಿವಾಹ ಬಂಧನಕ್ಕೆ ಕಟ್ಟುಬಿದ್ದರು. ಬಹಿನಾಳಿಗೆ ಒಂದು ಮಗು ಕೂಡಾ ಇತ್ತು. ಅದಕ್ಕಾಗಿ ಆಕೆ ಬಹಳ ಪಶ್ಚಾತ್ತಾಪ ಪಟ್ಟಿರಬೇಕು. ಆದರೂ ಆಕೆ ಆ ಮಗು ತನ್ನ ಪೂರ್ವಜನ್ಮದ ಸಂಗಾತಿ ಎಂದು ಭಾವಿಸುತ್ತಾಳೆ. ಈ ಅನುಭಾವಿಗಳ ಜೀವನಕ್ರಮ ಹಿಂದೂ ನಾರಿಯ ಸಾಂಪ್ರದಾಯಿಕ ಪಡಿಯಚ್ಚಿಗಿಂತ ಎಷ್ಟೊಂದು ಭಿನ್ನವಾಗಿದೆ!.

ದಾಲಾಯಿ ತನ್ನ ಗಂಡನೊಡನೆ ಸರಸದಲ್ಲಿರುವಾಗ ಶಿವ ಆಕೆಯನ್ನು ಕರೆಯುತ್ತಾನೆ. ಆ ಕರೆಯನ್ನು ಕೇಳಿ ಸರಸವನ್ನು ಅಲ್ಲಿಗೆ ಬಿಟ್ಟು ಗಂಡನನ್ನು ತೊರೆಯುತ್ತಾಳೆ. ಕಾರಿಕಾಲಮ್ಮೆ ತನ್ನ ಮಾಯಕದಿಂದ ಗಂಡನಲ್ಲಿ ಭೀತಿ ಹುಟ್ಟಿಸಿ ಆತನನ್ನು ಕೈ ಬಿಡುತ್ತಾಳೆ. ಹೀಗೆ ವಿವಾಹಿತ ಸ್ತ್ರೀ ಅನುಭಾವಿ ಸಾಮಾನ್ಯವಾಗಿ ತನ್ನ ಗಂಡನನ್ನು ತೊರೆಯುತ್ತಾ ಒಂದು ವೇಳೆ ವಿಧವೆಯಾಗಿದ್ದರೆ ತನಗೆ ಮದುವೆಯೇ ಆಗಿಲ್ಲವೆಂಬಂತೆ ವೈಧವ್ಯ ಸ್ಥಿತಿಯನ್ನು ನಿರಾಕರಿಸುತ್ತಾಳೆ. ಮೀರಾ ಸತಿ ಹೋಗಲು ನಿರಾಕರಿಸುತ್ತಾಳೆ. ಗೌರಿ ಮತ್ತು ವೆಂಕಮ್ಮ ತಮ್ಮ ತಲೆ ಬೋಳಿಸಿಕೊಳ್ಳಲು ಒಪ್ಪುವುದಿಲ್ಲ. ತಾವು ನಿಜವಾಗಿಯು ದೇವರನ್ನು ವರಿಸಿರುವುದರಿಂದ ವಿಧವೆಯಾಗಲು ಸಾಧ್ಯವಿಲ್ಲ ಎಂದು ಭಾವಿಸುತ್ತಾರೆ. ಈ ಹಿಂದೆ ಉಲ್ಲೇಖಿಸಿದ ವಚನದಲ್ಲಿ ಮಹಾದೇವಿ ಹೀಗೆ ಹೇಳುತ್ತಾಳೆ:

ಇದು ಕಾರಣ ಚೆನ್ನಮಲ್ಲಿಕಾರ್ಜುನ ಚೆಲುವ ಗಂಡನೆನಗೆ

ಈ ಸಾವ ಕೆಡುವ ಗಂಡರನೊಯ್ದು ಒಲೆಯೊಳಗಿಕ್ಕು ತಾಯೆ

ವಿವಾಹ ಬಂಧನಗಳಿಂದ ಪಾರಾದ ಬಳಿಕ, ಅನುಭಾವಿಯು ಸಾಮಾಜಿಕ ಎಳೆಗಳನ್ನು ವಿಧಿ ನಿಯಮಗಳನ್ನು ಮೀರಿ ಅಸಾಂಪ್ರದಾಯಿಕವಾದ ರೀತಿಯಲ್ಲಿ ಜೀವನ ಸಾಗಿಸುತ್ತಾಳೆ. ಕೆಲವೊಮ್ಮೆ ಆಕೆ ಪುರುಷ ಅನುಭಾವಿ ಅಥವಾ ಶರಣನ ಟೊಳ್ಳುತನವನ್ನು ಕೂಡ ಬಯಲಿಗೆಳೆಯುತ್ತಾಳೆ.

ಆದರೂ ಆಕೆಯ ಗುರು ಓರ್ವ ಗಂಡಸು, ಆಕೆಯ ದೇವರು ಪುರುಷ ಸರೂಪಿ ಎಂಬುದನ್ನು ನಾವು ಮರೆಯಬಾರದು. ಮಹಾದೇವಿಯಕ್ಕ ಶ್ರೀಶೈಲದಲ್ಲಿ, ಆಂಡಾಳ್ ಶ್ರೀರಂಗದಲ್ಲಿ ಲೀನವಾದಂತೆ ಅನೇಕ ಸ್ತ್ರೀ ಅನುಭಾವಿಗಳು ದೇಗುಲದಲ್ಲಿ ದೇವರೊಂದಿಗೆ ಲೀನವಾಗುತ್ತಾರೆ. ಕೆಲವೇ ಕೆಲವರು ಬಹಿನಾ ಬಾಯಿಯಂತೆ ಸಹಜ ಮರಣವನ್ನು ಹೊಂದುತ್ತಾರೆ.

ಭಕ್ತಿ ಪರಂಪರೆಗಳಲ್ಲಿ ಇನ್ನೊಂದು ಬಗೆಯ ಸ್ತೀ ಅನುಭಾವಿ ಇದ್ದಾಳೆ. ಆಕೆ ಸಂತನ ಹೆಂಡತಿಯಾಗಿದ್ದು, ಸಂತತ್ವದಲ್ಲಿ ತನ್ನ ಗಂಡನನ್ನೂ ಮೀರಿಸುತ್ತಾಳೆ. ಆಕೆಯ ವರ್ತನೆ ನಾಟಕೀಯವಾದ ಪರಿವರ್ತನೆಯನ್ನೇನೂ ಹೊಂದುವುದಿಲ್ಲ; ಆದರೂ ಆಕೆ ಅತ್ಯಂತ ಸಹಜವಾಗಿ, ಅನಾಯಾಸವಾಗಿ ದೇವರ ಸಾನಿಧ್ಯ ಹೊಂದುತ್ತಾಳೆ. ಪುರಂದರದಾಸರ ಕಥೆಯಲ್ಲಿ ಇದಕ್ಕೆ ನಿದರ್ಶನ ಲಭಿಸುತ್ತದೆ.

ಸಂತನ ಹೆಂಡತಿಯಾಗಿರುವ ಓರ್ವ ಸಾಧಾರಣ ಮಹಿಳೆ, ಸಂಸಾರ ಜೀವನವನ್ನು ಧಿಕ್ಕರಿಸುವ ಸ್ತ್ರೀ ಅನುಭಾವಿ – ಇವರ ನಡುವಿನ ವೈದೃಶ್ಯ ಗಮನಾರ್ಹವಾಗಿದೆ. ಒಬ್ಬಳು ವಿಶೇಷ ಪ್ರಯತ್ನವನ್ನೇನೂ ಮಾಡದೆ, ಕೇವಲ ತನ್ನ ದಿನನಿತ್ಯದ ಜೀವನದಲ್ಲಿ ವ್ಯಕ್ತಪಡಿಸಿದ ಪ್ರೇಮ ಹಾಗೂ ಭಕ್ತಿಯ ಮೂಲಕ ದೇವರ ಸಾಮೀಪ್ಯ ಸಾಧಿಸುತ್ತಾಳೆ. ಆದರೆ ಸ್ತ್ರೀ ಅನುಭಾವಿಯ ಬದುಕು ತಳಮಳ, ಅನ್ವೇಷಣೆ ಹಾಗೂ ತೀವ್ರ ನಾಟಕೀಯತೆಯಿಂದ ಕೂಡಿರುತ್ತದೆ. ಆಕೆಯ ಹುಡುಕಾಟವೆಂಬುದು ಕುಟುಂಬ ಹಾಗೂ ಮನೆವಾರ್ತೆಯ ಬಂಧನದಾಚೆಗಿನ ಹುಡುಕಾಟ. ಈ ವೈದೃಶ್ಯಕ್ಕೆ ಸಂವಾದಿಯಾದ ಅಂಶಗಳು ನಮಗೆ ಅಭಿಜಾತ ಪರಂಪರೆ ಮತ್ತು ಜನಪದ ಪರಂಪರೆಯಲ್ಲಿರುವ ದೈವ ದೇವತೆಗಳಲ್ಲಿ ಕಾಣಸಿಗುತ್ತವೆ.

ಅಭಿಜಾತ ಪರಂಪರೆಯಲ್ಲಿ ದೇವತೆಗಳು ದೇವರುಗಳ ಹೆಂಡಂದಿರಾಗಿರುತ್ತಾರೆ. ಅವರು ಕರುಣಾಮಯರೂ ಮಂದಸ್ಮಿತರೂ ಜೀವನ್ಮರಣ ಚಕ್ರದ ಪರಮಪಾಲಕರೂ ಆಗಿರುತ್ತಾರೆ. ಲಕ್ಷ್ಮೀ ಮತ್ತು ಪಾರ್ವತಿ ಈ ಬಗೆಯ ದೇವತೆಗಳು. ದೇವಗಣದಲ್ಲಿ ಇವರು ತಮ್ಮ ಪತಿದೇವರುಗಳಿಗೆ ಅಧೀನರು, ದೇವತೆಗಳನ್ನು ಮುಖ್ಯದೇವತೆಗಳೆಂದು, ‘ಶಕ್ತಿಸ್ವರೂಪಿ’ ಎಂದು ಪೂಜಿಸಿದರೂ ಕೂಡ ಅವರು ತಮ್ಮ ಗಂಡಂದಿರನ್ನು, ಅನುಸರಿಸ ಬೇಕಾದವರು. ಅವರು ಆಗಾಗ್ಗೆ ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಪ್ರದರ್ಶಿಸಿದರೂ ಕೂಡಾ ಗಂಡನನ್ನು ಅವಲಂಬಿಸಬೇಕು. ಆದರೆ ದಕ್ಷಿಣ ಭಾರತದ ಪರಂಪರೆಯಲ್ಲಿ ಪ್ರತಿಯೊಂದು ಗ್ರಾಮಕ್ಕೂ ಒಂದಲ್ಲ ಒಂದು ಅಧಿದೈವವಿದೆ. ದೈವಗಳೆಲ್ಲ ತಮ್ಮ ಗಂಡಂದಿರನ್ನು ಧಿಕ್ಕರಿಸುವ ಅಥವಾ ಅವರನ್ನು ಕೊಂದು ತಿನ್ನುವ ದೈವಗಳು. ಇಲ್ಲಿ ಗಂಡಸು ಹೆಂಗಸಿಗೆ ಅಧೀನ. ಗಂಡ ಹೆಂಡತಿಯನ್ನು ವಂಚಿಸಿರಬಹುದು ಅಥವಾ ಧಿಕ್ಕರಿಸಿರಬಹುದು. ಇದಕ್ಕೆ ಪ್ರತೀಕಾರವಾಗಿ ಹೆಂಡತಿ ಉಗ್ರರೂಪ ಧರಿಸುತ್ತಾ ಇದರಿಂದ ವಿಶೇಷ ಶಕ್ತಿ ಲಭಿಸಿ ಆಕೆ ದೈವವಾಗುತ್ತಾಳೆ. ಈ ಬಗೆಯ ದೈವಗಳು ಸ್ವರ್ಗದಿಂದ ಅವತರಿಸುವುದಿಲ್ಲ. ಇವು ಅವತಾರಗಳಲ್ಲ. ಎಲ್ಲ ದೈವಗಳೂ ನಮ್ಮ ನಿಮ್ಮಂತೆ ಮನುಷ್ಯರೇ. ಈ ದೈವಗಳ ಕಥೆ ಎಂಬುದು ದೈವೀ ಸ್ಥಿತಿಗೆ ಏರಿದ ಅಥವಾ ದೈವಗಳಾದ ಮಾನವರ ಕಥೆ. ಉಗ್ರ ಕೋಪ ಈ ಸಂಪ್ರದಾಯಗಳ ಪ್ರಧಾನ ಲಕ್ಷಣ.

ಒಂದು ವಿಶಿಷ್ಟ ಅಂಶವನ್ನು ನಾವಿಲ್ಲಿ ಮರೆಯಬಾರದು. ಗ್ರಾಮೀಣ ಮತ್ತು ಭಕ್ತಿ ಪರಂಪರೆಗಳಲ್ಲಿ ಅಸಾಧಾರಣ ಸ್ವಭಾವದ ಸ್ತ್ರೀಯರು ಮತ್ತು ಅವರು ಪ್ರತಿಪಾದಿಸುವ ಮೌಲ್ಯಗಳನ್ನು ಹಾಗೂ ಕೃತ್ಯಗಳನ್ನು ಜನ ಅನುಮೋದಿಸುತ್ತಾರೆ. ಅವರನ್ನು ತೃಪ್ತಿಪಡಿಸುವ ಯತ್ನಗಳು ನಡೆಯುತ್ತವೆ. ಅವರನ್ನು ಅನುಮೋದಿಸದಿದ್ದರೆ, ಅವರು ನಿಜವಾದ ಪರ್ಯಾಯ ದೈವಗಳಾಗುತ್ತಾರೆ. ಅನುಮೋದನೆ ಮತ್ತು ಆರಾಧನೆಯು ಅವರನ್ನು ಸ್ವೀಕರಿಸಿ ಅವರಲ್ಲಿರುವ ಉಗ್ರತೆಯನ್ನು ಶಮನ ಮಾಡುತ್ತದೆ.

ಈ ಒಂದು ಕಾರಣದಿಂದಾಗಿ ಭಕ್ತಿ ಆಂದೋಳನ ಆರಂಭದಲ್ಲಿ ಕ್ರಾಂತಿಕಾರಿಯಾಗಿದ್ದರೂ ಮುಂದೆ ಯಾಂತ್ರಿಕವೂ ಜಡವೂ ಆಗಿಬಿಟ್ಟಿತು. ಈ ಆಂದೋಳನವನ್ನು ಪುನರ್ ನವೀಕರಿಸಬೇಕು. ಪುನರ್ ವ್ಯಾಖ್ಯಾನಕ್ಕೆ ಒಳಪಡಿಸಬೇಕು ಮತ್ತು ಅದನ್ನು ಪಳಗಿಸುವಿಕೆಯಿಂದ ಪಾರು ಮಾಡಬೇಕು. ಆಗ ಮಾತ್ರ ಈ ಆಂದೋಳನಗಳು ಸ್ತ್ರೀ ಪುರುಷರಿಬ್ಬರಿಗೂ ಇರುವಿಕೆ ಮತ್ತು ನಡವಳಿಕೆಯ ಮಾನವೀಯ ಹಾಗೂ ಸೃಷ್ಟಿಶೀಲ ರೀತಿನೀತಿಗಳನ್ನು, ಪರ್ಯಾಯ ವ್ಯವಸ್ಥೆಯನ್ನು ಒದಗಿಸುತ್ತವೆ.

ಭಾರತೀಯ ಸ್ತ್ರೀಯರನ್ನು ಕುರಿತಾಗಿ ಅಧ್ಯಯನ ಮಾಡಬಯಸುವ, ಅ ದನಿಗಳನ್ನು ಆಲಿಸಲು ಅಪೇಕ್ಷಿಸುವ ಮತ್ತು ಭಾರತೀಯ ನಾಗರಿಕತೆಯಲ್ಲಿ ಪರ್ಯಾಯ ಪರಿಕಲ್ಪನೆಗಳನ್ನು ಶೋಧಿಸ ಬಯಸುವ ಪ್ರತಿಯೊಬ್ಬರೂ ಸ್ತ್ರೀ ಅನುಭಾವಿಗಳ ಜೀವನ ಮತ್ತು ಕಾವ್ಯವನ್ನು ಅಭ್ಯಾಸ ಮಾಡಲೇ ಬೇಕು; ಮೌಖಿಕ ಪರಂಪರೆಯಲ್ಲಿ ಲಭಿಸುವ  ಮಹಿಳೆಯರ ಕಥೆಗಳು, ಹಾಡುಗಳು, ಒಗಟುಗಳು, ಆಟಗಳು, ಗಾದೆಗಳು, ದೇವತೆಗಳ ಬಗೆಗಿನ ಐತಿಹ್ಯಗಳು ಮತ್ತು ಆಚರಣೆಗಳತ್ತ ಗಮನಹರಿಸಬೇಕು.

ಎ. ಕೆ. ರಾಮಾನುಜನ್ ಭಕ್ತಿ ಕುರಿತ ಲೇಖನಗಳನ್ನು ಈ ಸಲದ ಅಭಿನವ ಚಾತುರ್ಮಾಸಿಕ ಹೊಂದಿದೆ. ಈ ಸಾಹಿತ್ಯ ಪತ್ರಿಕೆಗೆ ಋತುಮಾನ ಸ್ಟೋರ್ ನ ಈ ಲಿಂಕ್ ನಲ್ಲಿ ಚಂದಾದಾರರಾಗಬಹುದು . http://store.ruthumana.com/product/abhinava-chaturmasika/


ಅನುವಾದ : ಮಹಾಬಲೇಶ್ವರ ರಾವ್ 

ಕೃಪೆ : ಮನೋಹರ ಗ್ರಂಥಮಾಲೆ ಧಾರವಾಡ

One comment to “ತಾಯ್ನುಡಿಯಲ್ಲಿ ದೇವರನ್ನು ಕರೆದವರು ..”
  1. ಧನ್ಯವಾದ. ಮನೋಹರ ಗ್ರಂಥಮಾಲೆಗೆ ಕೃತಜ್ಞತೆ ಏಕೆ?ಈ ಲೇಖನ ಮೊದಲು ಪ್ರಕಟವಾದದ್ದು ಪ್ರಸನ್ನ ಸಂಪಾದಕತ್ವದ ಋಜುವಾತು ಪತ್ರಿಕೆಯಲ್ಲಿ .ಭಕ್ತಿ ಕಂಪಿತ ಪುಸ್ತಕವಾಗಿ ಬರುವುದು ಯಾವಾಗ? ಮಹಾಬಲೇಶ್ವರ ರಾವ್

ಪ್ರತಿಕ್ರಿಯಿಸಿ