ಎ.ಕೆ.ರಾಮಾನುಜನ್ ಅವರ ‘ಒನಕೆಯ ಹಾಡುಗಳು’: ಬುದ್ದನ ಬದುಕಿನೊಂದಿಗೆ ನಡೆಸಿದ ಒಂದು ಸ್ತ್ರೀವಾದಿ ಸಂಕಥನ

1973ರ ಮೇ 4ರಂದು ಇದನ್ನು ರಾಮಾನುಜನ್ ಅವರು ಬರೆದಿದ್ದಾರೆ. ಇದಕ್ಕೆ ಉಪ ಶಿರ್ಷಿಕೆಯಾಗಿ (Some exercise in the folk style) ಎಂದು ಬರೆದುಕೊಂಡಿದ್ದಾರೆ. ಆದರೆ ಈ ಪದ್ಯವನ್ನು ಅವರು ಏಕೆ ಪ್ರಕಟಿಸಲಿಲ್ಲವೋ ತಿಳಿಯದು. ಇದೊಂದು ಜನಪದ ಗೀತೆಯಂತೆ ಆಕೃತಿಯನ್ನು ಹೊಂದಿದ್ದರೂ ಅತ್ಯಂತ ಆಧುನಿಕವಾದ ಆಶಯದ ಹಿನ್ನೆಲೆಯಲ್ಲಿ ಒಬ್ಬ ಜನಪ್ರಿಯ ವ್ಯಕ್ತಿಯೊಬ್ಬನ ಬದುಕನ್ನು ಹಾಗೂ ಜಗಕ್ಕೆ ಬೆಳಕಾದ ವ್ಯಕ್ತಿಯೊಬ್ಬನ ಮನೆಯಲ್ಲಿ ಅವನ ಹೆಂಡತಿಯಲ್ಲೇ ಉಳಿದುಕೊಂಡ ತಳಮಳಗಳನ್ನು ಕೂಡ ಈ ಕವಿತೆ ಗಾಢವಾಗಿ ಚಿತ್ರಿಸಿದೆ.

ಚಿತ್ರ : ನಾ. ರೇವಣಸಿದ್ದಪ್ಪ, ದಾವಣಗೆರೆ

ಕನ್ನಡದ ಅದ್ವಿತೀಯ ಪ್ರತಿಭೆಯಾದ ಎ.ಕೆ. ರಾಮಾನುಜನ್ ಅವರು ಕನ್ನಡ ಕಾವ್ಯಪ್ರಪಂಚದಲ್ಲಿ ಅಸಾಧಾರಣವಾದ ಕೃಷಿಯನ್ನು ಕೈಗೊಂಡ ಮಣ್ಣಿನ ಕವಿ. ಅವರು ತಮ್ಮ ಕನ್ನಡ ಬರಹಗಳಲ್ಲಿ ಅತ್ಯಂತ ವೈಶಿಷ್ಟ್ಯಪೂರ್ಣವಾದ ವಿಷಯಗಳನ್ನು ಕುರಿತು ಚಿಂತಿಸಿದರು. ಅವರ ವಾರಿಗೆಯವರಲ್ಲಿ ಸೃಜನಶೀಲ ಸಾಹಿತ್ಯದಲ್ಲಿ ಜನಪದೀಯ ಸಂಗತಿಗಳನ್ನು ತಂದ ಹಲವರು ಇರಬಹುದು. ಆದರೆ ರಾಮಾನುಜನ್ ಅವರಷ್ಟು ಜನಪದವನ್ನು ತಮ್ಮ ಅಧ್ಯಯನದ ಭಾಗವಾಗಿ ಮಾಡಿಕೊಂಡು ಅದರಲ್ಲಿ ಅಡಗಿರಬಹುದಾದ ವಿಶಿಷ್ಟ ಸಂರಚನೆಗಳನ್ನು ದಕ್ಕಿಸಿಕೊಂಡವರು ಅತೀವಿರಳ. ಅವರು ತಮ್ಮ ಕೃತಿಗಳನ್ನು ರಚಿಸುವಾಗ ವಾಙ್ಮಯಕ್ಕೆ ಹೊಸದಾದ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಾ ಸಾಗಿದರು. ಅವರ ಸೃಜನಶೀಲ ಹಾಗೂ ಸೃಜನೇತರ ಸಾಹಿತ್ಯದ ಅಭಿವ್ಯಕ್ತಿ ಮಾದರಿಗಳಲ್ಲಿ ಅಂತಹ ಬದಲಾವಣೆಗಳೇನೂ ಇಲ್ಲ. ಎರಡೂ ವಿಷಯಗಳಲ್ಲಿ ಅವರು ಮನುಷ್ಯನ ಒಳಗೆ ಅಡಗಿರುವ ದ್ವಂದ್ವಗಳನ್ನು ಹಾಗೂ ಮನುಷ್ಯನು ತನ್ನ ಅನುಭವಗಳನ್ನು ಅನುಭವಿಸುವ ಗರಿಷ್ಟ ಮಟ್ಟದ ಲಯವನ್ನು ಸ್ವತಃ ಸೃಷ್ಟಿಸಬಲ್ಲ ಸಂಗತಿಗೆ ಹೆಚ್ಚಿನ ಮಾನ್ಯತೆಯನ್ನು ನಿಡಿದವರಾಗಿದ್ದರು. ತಾವು ಓದಿದ, ಅನುಭವಿಸಿದ, ಸಂವಾದಿಸಿದ ಅನೇಕ ಭಾಷೆಗಳ ಆಂತರ್ಯದಲ್ಲಿ ಅಡಗಿರುವ ಜೀವಂತಿಕೆಯನ್ನು ಯಾವ ಮುಲಾಜಿಗೂ ಎಡೆಗೊಡದೆ ತಮ್ಮದೇ ಆದ ಶೈಲಿಯಲ್ಲಿ ಹೊರಹೊಮ್ಮಿಸಿದ ವಿಶಿಷ್ಟ ಪ್ರತಿಭೆ ಅವರದ್ದು. ಅವರಿಗೆ ಸಂಖ್ಯೆಗಿಂತ ಮೌಲ್ಯದಲ್ಲಿ ಹೆಚ್ಚು ವಿಶ್ವಾಸವಿದ್ದಂತೆ ತೋರುತ್ತದೆ. ಹಾಗಾಗಿ ತಮ್ಮ ಜೀವಿತ ಕಾಲದಲ್ಲಿ ಅವರು ಪ್ರಕಟಿಸಿದ ಕನ್ನಡ ಕೃತಿಗಳ ಸಂಖ್ಯೆ ಕಡಿಮೆಯೇ. ಹೊಕ್ಕಳಲ್ಲಿ ಹೂವಿಲ್ಲ. ಮತ್ತು ಇತರ ಪದ್ಯಗಳು, ಕುಂಟೋಬಿಲ್ಲೆ ಎಂಬ ಮೂರು ಕವನ ಸಂಕಲನಗಳು, {ಇದರೊಂದಿಗೆ ತಮ್ಮ ಕವನ ಸಂಕಲನಗಳಲ್ಲಿ ಸೇರಿಸದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ ನಾಲ್ಕು ಕವನಗಳೂ ಇವೆ. ಮತ್ತೊಬ್ಬನ ಆತ್ಮಚರಿತ್ರೆ ಎಂಬ ಕನ್ನಡಕ್ಕೇ ವಿಶಿಷ್ಟವಾದ ಕಾದಂಬರಿ, ನಾಲ್ಕು ಸಣ್ಣಕತೆಗಳು, ಎರಡು ರೇಡಿಯೋ ನಾಟಕಗಳು, ಏಳು ನಗೆಬರಹಗಳು ಇವು ತಮ್ಮ ಜೀವಿತ ಕಾಲದಲ್ಲಿ ಅವರು ಪ್ರಕಟಿಸಿದ ಕೃತಿಗಳು. ಇದರೊಂದಿಗೆ ಗಾದೆಗಳು ಎಂಬ ಸಣ್ಣ ಹೊತ್ತಗೆಯು ಆ ವಿಷಯದಲ್ಲಿ ಬಂದ ಆಕರಗ್ರಂಥ ಎಂದರೆ ಅವರ ವಿದ್ವತ್ತಿನ ಪ್ರಮಾಣ ನಮ್ಮ ಗಮನಕ್ಕೆ ಬರುತ್ತದೆ. ಇವೆಲ್ಲವುಗಳ ಬಗ್ಗೆ ಅಲ್ಲಲ್ಲಿ ಸ್ವಲ್ಪಮಟ್ಟಿಗಾದರೂ ವಿಮರ್ಶಕರು ಗಮನ ಹರಿಸಿದ್ದಾರೆ. ಆದರೆ ಬಹಳ ಮುಖ್ಯವಾಗಿ ಎ.ಕೆ. ರಾಮಾನುಜನ್ ಅವರು ತಾವು ಬರೆದು ಯಾವ ಸಂಗ್ರಹಗಳಲ್ಲೂ ಪ್ರಕಟಿಸದ ಕೆಲವು ಪದ್ಯಗಳನ್ನು ಡಾ. ರಮಾಕಾಂತ ಜೋಶಿ ಹಾಗೂ ಎಸ್. ದಿವಾಕರರು ತಾವು ಸಂಪಾದಿಸಿದ ಎ. ಕೆ. ರಾಮಾನುಜನ್ ಸಮಗ್ರ {ಮನೋಹರ ಗ್ರಂಥಮಾಲೆ, ಧಾರವಾಡ, 2011} ಎಂಬ ಕೃತಿಯಲ್ಲಿ ಸಂಕಲಿಸಿ ಬಹಳ ದೊಡ್ಡ ಉಪಕಾರವನ್ನು ಮಾಡಿದ್ದಾರೆ. ಈ ಕೃತಿಯಲ್ಲಿ ಮೇಲೆ ಹೇಳಿದ ರಾಮಾನುಜನ್ ಅವರ ಎಲ್ಲಾ ಪ್ರಕಟಿತ ಕನ್ನಡ ಕೃತಿಗಳೊಂದಿಗೆ ಹನ್ನೊಂದು ಅಪ್ರಕಟಿತ ಕವನಗಳು ಹಾಗೂ ಹನ್ನೆರಡು ಗದ್ಯ ಹಾಗೂ ನಾಟಕಗಳನ್ನು ಸಂಕಲಿಸಿ ಕೊಟ್ಟಿರುವುದು ರಾಮಾನುಜನ್ನರನ್ನು ಸಮಗ್ರವಾಗಿ ಅಧ್ಯಯನ ಮಾಡಲು ಅತ್ಯುತ್ತಮ ದಾರಿಯೊಂದನ್ನು ನಿರ್ಮಿಸಿಕೊಟ್ಟಂತಾಗಿದೆ.

ಇದರಲ್ಲಿ ನನ್ನ ಗಮನವನ್ನು ಸೆಳೆದ ಎ.ಕೆ. ರಾಮಾನುಜನ್ ಅವರ ಪದ್ಯವೊಂದನ್ನು ಕುರಿತು ಕೆಲವು ಅನಿಸಿಕೆಗಳನ್ನು ಈ ಲೇಖನದ ಮೂಲಕ ಹಂಚಿಕೊಳ್ಳಬಯಸುತ್ತೇನೆ. ಇದರ ಹೆಸೆರು ಒನಕೆಯ ಹಾಡುಗಳು. ಅವರ ಸಮಗ್ರ ಕಾವ್ಯದ ಹಿನ್ನೆಲೆಯಲ್ಲಿ ಗಮನಿಸಿದಾಗ ಈ ರಚನೆ ವಿಶೇಷವಾದ ಧ್ವನಿಯನ್ನು ಹೊಂದಿದೆ ಎಂಬುದೇ ಈ ಕವಿತೆಯ ಬಗ್ಗೆ ಬರೆಯಲು ಮುಖ್ಯಪ್ರೇರಣೆ. 1973ರ ಮೇ 4ರಂದು ಇದನ್ನು ರಾಮಾನುಜನ್ ಅವರು ಬರೆದಿದ್ದಾರೆ. ಇದಕ್ಕೆ ಉಪ ಶಿರ್ಷಿಕೆಯಾಗಿ (Some exercise in the folk style) ಎಂದು ಬರೆದುಕೊಂಡಿದ್ದಾರೆ. ಆದರೆ ಈ ಪದ್ಯವನ್ನು ಅವರು ಏಕೆ ಪ್ರಕಟಿಸಲಿಲ್ಲವೋ ತಿಳಿಯದು. ಇದೊಂದು ಜನಪದ ಗೀತೆಯಂತೆ ಆಕೃತಿಯನ್ನು ಹೊಂದಿದ್ದರೂ ಅತ್ಯಂತ ಆಧುನಿಕವಾದ ಆಶಯದ ಹಿನ್ನೆಲೆಯಲ್ಲಿ ಒಬ್ಬ ಜನಪ್ರಿಯ ವ್ಯಕ್ತಿಯೊಬ್ಬನ ಬದುಕನ್ನು ಹಾಗೂ ಜಗಕ್ಕೆ ಬೆಳಕಾದ ವ್ಯಕ್ತಿಯೊಬ್ಬನ ಮನೆಯಲ್ಲಿ ಅವನ ಹೆಂಡತಿಯಲ್ಲೇ ಉಳಿದುಕೊಂಡ ತಳಮಳಗಳನ್ನು ಕೂಡ ಈ ಕವಿತೆ ಗಾಢವಾಗಿ ಚಿತ್ರಿಸಿದೆ.

ಒನಕೆಯ ಹಾಡುಗಳು
(Some exercises in the folk style)

(೧) ಗುಂಡೀಗೆ ಒರಳಲ್ಲಿ ಕುಟ್ಟಿದೆ ಜೀವ
ಕುಟ್ಟಿದೆ ಜೀವ

ಕುಟ್ಟಿದೆ ಜೀವ
ಪ್ರೀತಿಯ ಒನಕೆ ಕುಟ್ಟಿದ ಹಾಗೇ

(೨) ರೊಟೀನ ಕೊಟ್ಟಣ ಕುಟೀದ ಹಾಗೇ
ಕುಟ್ಟಿದ ಹಾಗೇ

ನೆನಸೀದ ಒಡನೇ ಬೀಮನಸಿ ಆಗೀ
ಬಸುರೀಯ ಬಯಕೆ

ಬಸುರೀಯ ಬಯಕೆ
ಬೆಂಗಳೂರು ಬಾಯ್ತುಂಬ ಬಸುರೀಯ ಬಯಕೆ

(೩) ಹೆಡೆಬಿಟ್ಟ ಹಾವು ಕಲ್ಲಾದ ಹಾಗೇ
ಕರಿನಾಗರ ಹಾವೆರಡು

ಕರಿನಾಗರ ಹಾವೆರಡು
ಪ್ರೀತೀಯ ದ್ವೇಷದ ಕೂಡೀಕೆ ಕಾವಲ್ಲಿ

ಎರಡಾಗಿ ಒಂದಾಗಿ ಒಂದಾಗಿ ಎರಡಾಗಿ
ಹೆಡೆಬಿಚ್ಚಿ ಹಾವೂ ಕಲ್ಲಾದ ಹಾಗೇ
ಕಲ್ಲಾದ ಹಾಗೇ

(೪) ಮುಜಗೇರ ಬಂದಾಗ ಮೈ ಇದು ಹೆಬ್ಬಾವು
ಸಾಯೋಕೆ ಮೊದಲೇ

ಸಾಯೋಕೆ ಮೊದಲೇ
ಸಾವಿನ ಇರುವೆ ಸಾವಿರ ಸಾವಿರ
ಸಾವಿನ ಇರುವೆ ಮುತ್ತಿದ ಹಾಗೇ
ಮುತ್ತಿದ ಹಾಗೇ

(೫) ಎಲೆಗೆಲ್ಲ ಹುಳು ಬಿದ್ದು ಹೂವೀಗೆ ಹೊಗೆಬಿದ್ದು
ಕಾಡೀಗೆ ಕಾಡೇ

ಕಾಡೀಗೆ ಕಾಡೇ
ನಂಬಿದ ದೇವರ ಎಲುಬೀನ ಪಂಜರ
ಎಲುಬೀನ ಪಂಜರ

(೬) ಮಾಗೀಯ ಹಕ್ಕಿಯ ಕತ್ತೆಲ್ಲ ಸುಕ್ಕಾಗಿ
ಕಾಲ್ಪೆರಳು ಮೈಪುಕ್ಕ

ಕಾಲ್ಪೆರಳು ಮೈಪುಕ್ಕ
ಕೊಕ್ಕಿನ ಮೇಲ್ಬಾಗ ಹಾರುತ್ತ ಹಾರುತ್ತ

ಉದುರೀದ ಹಾಗೇ
ಬೇಸಗೆ ಮನೆ ಹೆಂಚು ಎಕ್ಕದ ಹಾಳೂರು

ಕಾಲ್ಪೆರಳು ಮೈಪುಕ್ಕ
ಕೊಕ್ಕಿನ ಮೇಲ್ಬಾಗ ಹಾರುತ್ತ ಹಾರುತ್ತ
ಎಲ್ಲೆಲ್ಲೂ ಅಲ್ಲಲ್ಲೇ ಉದುರೀದ ಹಾಗೇ
ಉದುರಿದ ಹಾಗೇ

(೭) ರಾತ್ರಿ ಹಗಲು ಹಿಂದಿಂದ ಮುಂದಿಂದ
ಉಬ್ಬುತ್ತ ತಬ್ಬುತ್ತ ಮಲಗಿಸಿ ಎಬ್ಬಿಸಿ
ಪ್ರೀತೀಯ ಒನಕೇ ಕುಟ್ಟಿದ ಹಾಗೇ
ರೊಟೀನ ಕೊಟ್ಟಣ ಕುಟ್ಟಿದ ಹಾಗೇ

ಮನೆ ತುಂಬ ಓಡಾಡಿ ಹೆಂಚಿಂದ ಇಳಿದಿಳಿದು
ಕಂಬಕ್ಕೆ ಮೈಕೊಟ್ಟು ಚಕ್ಕಂದ ಆಡೀದ

ನನಸೀದ ಒಡನೇ ಬೀಮನಸೀ ಆಗೀ
ಬಸುರೀಯ ಬಯಕೆ
ಬಸುರೀಯ ಬಯಕೆ
ಬೆಂಗಳೂರು ಬಾಯ್ತುಂಬ ಬಸುರೀಯ ಬಯಕ

ಎಲ್ಲೆಲ್ಲೂ ಕೈಕೊಟ್ಟು ತೊಡೆಯೊಳಗೆ ಹೆಡೆಬಿಟ್ಟು
ಮುಡಿದಿದ್ದ ಮಲ್ಲಿಗೆ ಒರೆದಿಟ್ಟ ವಾಸನೆ

ರಾಮಾನುಜನ್ ಇಲ್ಲಿ ತಮ್ಮ ಅನೇಕ ಕವಿತೆಗಳಂತೆ ವಿನೂತನವಾದ ಲಯವನ್ನು ಹುಟ್ಟುಹಾಕಿದ್ದಾರೆ. ಈ ಲಯವು ಕನ್ನಡಕ್ಕೆ ಹೊಸದಲ್ಲದ, ಈಗಾಗಲೇ ಕನ್ನಡದ ಅಸ್ಮಿತೆಯಲ್ಲೇ ಸೇರಿಹೋಗಿರುವ ತ್ರಿಪದಿಯ ಲಕ್ಷಣಗಳನ್ನು ಹೊಂದಿರುವ, ಅತ್ಯಂತ ಸರಳವಾದ ಚಲನಾತ್ಮಕ ನಡೆಯನ್ನು ಹೊಂದಿರುವಂತಹ ರಚನೆಯಾಗಿದೆ. ಪ್ರಾಸದ ಲಯಗಾರಿಕೆಯನ್ನು ಪಾಲಿಸಿಯೂ, ಅದರಾಚೆಗೆ ಒಂದು ರೀತಿಯ ಕುಟ್ಟುವ ಕ್ರಿಯೆಯನ್ನು ನಮ್ಮ ಕಣ್ಣು. ಕಿವಿ ಹಾಗೂ ನಾಲಿಗೆಯ ಮೂಲಕ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಈ ಕುಟ್ಟುವಿಕೆ ಹೇಗೆ ಕವಿತೆಯ ನಾಯಕಿಯಲ್ಲಿ ಮತ್ತೆಮತ್ತೆ ಅನುರಣನಗೊಳ್ಳುವುದೋ ಹಾಗೇ ಓದುಗರಲ್ಲಿಯೂ ತಮ್ಮ ಮನದಾಳದಲ್ಲಿ ಅನೇಕ ಪ್ರೆಶ್ನೆಗಳನ್ನು ಕುಟ್ಟುವಂತಹ ಪ್ರಕ್ರಿಯೆಯಾಗಿ ರೂಪುಗೊಂಡಿದೆ. ಈ ಕವಿತೆಯ ಶಿಲ್ಪವೇ ಗುರುತರವಾದ ಜವಾಬುದಾರಿಕೆಯನ್ನು ಅನಾಯಾಸವಾಗಿ ಹೊತ್ತುಕೊಂಡು ನಿಂತಿದೆ. ಎಂಟು ಭಾಗಗಳಲ್ಲಿ ಚದುರಿ ನಿಂತಿರುವ ಈ ಕವಿತೆ ಒನಕೆಯ ಹಾಡುಗಳು ಎಂದು ಅಭಿದಾನಗೊಂಡಿದೆ. ಒಂದೇ ಪದ್ಯವಾದರೂ ಇಲ್ಲಿರುವುದು ಎಂಟು ಹಾಡುಗಳು. ಇಲ್ಲಿ ಎಲ್ಲವೂ ಸ್ವತಂತ್ರ ಆದರೂ ಒಂದರೊಡನೊಂದು ಅವಿನಾಭಾವ ಸಂಬಂಧಗಳನ್ನು ಇಟ್ಟುಕೊಂಡು ಮುಂದುವರೆಯುವ ಶಕ್ತಿಯನ್ನು ಹೊಂದಿರುವುದು. ಇದು ಏಕಕಾಲಕ್ಕೆ ಅವಳ ಹಾಗೂ ಅವಳಂತಹ ಹಲವರಲ್ಲಿ ಹುಟ್ಟಬಹುದಾದ ಕುಟ್ಟುವಿಕೆಯ ಲಕ್ಷಣಗಳನ್ನು ಒಳಗೊಂಡ ಬೇಗುದಿಯೆಂದರೆ ಹೆಚ್ಚು ಸರಿಯಾದೀತು. ಆರಂಭದಲ್ಲಿ ಬಿಡಿಯಾಗಿ ಆರಂಭಗೊಳ್ಳುವ ಕವಿತೆ ಇಡಿಯಾಗುತ್ತಾ ತಮ್ಮ ನೆನಪುಗಳನ್ನು ಹೊತ್ತುಕೊಂಡು ಕುಟ್ಟುತ್ತಾ ಕುಟ್ಟುತ್ತಾ ಸಾಗುತ್ತದೆ. ಆರು ಹಾಡುಗಳಾದ ನಂತರ ಒಮ್ಮೆಲೇ ತಟಸ್ಥವಾಗಿ ನಿಂತುಬಿಡುತ್ತದೆ. ಇನ್ನು ಉಳಿದಿದ್ದೆಲ್ಲಾ ಕೇವಲ ನೆನಪುಗಳು ಮತ್ತು ಕನವರಿಕೆಗಳು ಮಾತ್ರ. ಇದು ಆರಂಭದಲ್ಲಿ ಕೇವಲ ಗಂಡು ಹೆಣ್ಣಿನ ನಡುವೆ ನಡೆಯಬಹುದಾದ ಸಾಮಾನ್ಯವಾದ ಬದುಕಿನ ಮಾದರಿಯೆಂದು ಅನಿಸಿ ಕೊನೆಯಲ್ಲಿ ಅದು ಬುದ್ದನ ಬದುಕಿಗೆ ಸಂಬಂಧಿಸಿದ ಘಟನೆಯೆಂದು ತಿಳಿದ ಮೇಲೂ ನೊಂದ ಎಲ್ಲಾ ಹೆಣ್ಣಿಗೂ ಅನ್ವಯಿಸಬಹುದಾದ ವಿಷಯವಾಗಿದೆ.

ಬದುಕಿನ ಅಗತ್ಯಕ್ಕೆ ತಕ್ಕಂತಹ ಆಹಾರವನ್ನು ಕುಟ್ಟುವ ಪ್ರಕ್ರಿಯೆಯೊಂದು ಅಷ್ಟೇ ಅಗತ್ಯವಾದ ಕಾಮವಾಂಛೆಯ ಪರಿಹಾರ ರೂಪವಾಗಿ ಕುಟ್ಟುವ ಪ್ರಕ್ರಿಯೆಯಾಗಿ ರೂಪಾಂತರಗೊಂಡು ನಂತರ ಬದುಕಿನ ಅಸಾಧಾರಣ ಪ್ರೆಶ್ನೆಗಳನ್ನು ಕುಟ್ಟುವ ಹಂತಕ್ಕೆ ಏರಿಕೆಯಾಗಿ ತನ್ನ ಏಕಾಂತದ ಕುಟ್ಟುವಿಕೆಯ ಪರಿಣಾಮವಾಗಿ ಹುಟ್ಟುವ ಜೀವಂತಿಕೆಯ ಪ್ರೆಶ್ನೆಗಳು ನಮ್ಮನ್ನು ಕುಟ್ಟಿ ಕುಟ್ಟಿ ಕಾಡದಿರುದು. ಹಾಗಾಗಿಯೇ ಇದು ಒನಕೆಯ ಹಾಡುಗಳು. ಒನಕೆಯೆಂಬುದೇ ಇಲ್ಲಿ ಏಕಾಕಿತನದ ಮಹಾರೂಪಕವಾಗಿರುವುದು ಹಾಗೂ ಅವಳ ಎಲ್ಲಾ ಪ್ರೆಶ್ನೆಗಳೊಂದಿಗೆ ನಿರಂತರವಾಗಿ ಮುಖಾಮುಖಿಯಾಗುವುದು ಈ ಕವಿತೆಯ ಅಸಾಧಾರಣ ವೈಶಿಷ್ಟ್ಯವಾಗಿದೆ.

ಮೊದಲನೆಯ ಹಾಡು ಇಂತಿದೆ
ಗುಂಡೀಗೆ ಒರಳಲ್ಲಿ ಕುಟ್ಟೀದೆ ಜೀವ
ಕುಟ್ಟೀದೆ ಜೀವ

ಕುಟ್ಟೀದೆ ಜೀವ
ಪ್ರೀತಿಯ ಒನಕೆ ಕುಟ್ಟೀದ ಹಾಗೇ

ಇಲ್ಲಿ ಹೆಚ್ಚು ಒತ್ತು ಬಿದ್ದಿರುವುದು ‘ಕುಟ್ಟೀದೆ ಜೀವ’ ಎಂಬ ಮಾತಿಗೆ. ಜೀವ ಕುಟ್ಟೀದೆ ಎಂದರೆ ಒನಕೆಯಲ್ಲಿ ಕುಟ್ಟಿದ ಹಾಗೆ. ಆದರೆ ಆ ಒನಕೆ ಪ್ರೀತಿಯ ಒನಕೆ. ಇದು ಕುಟ್ಟಿರುವುದು ಗುಂಡಿಗೇ ಒರಳಲ್ಲಿ. ಮೊದಲು ಒರಳಲ್ಲಿ ಒನಕೆಯಿಂದ ಏನನ್ನೋ ಕುಟ್ಟುವಂತಹ ಸ್ಥಿತಿಯನ್ನು ಕವಿತೆ ಹೇಳುವುದು. ಅದು ಬಹುಶಃ ನೋವಿನ ಚಿತ್ರಣದಂತೆ ನಮಗೆ ಕಂಡುಬಂದು ನಂತರ ಅದು ಎದೆಯ ಗೂಡಿಗೆ ‘ಗುಂಡೀಗೆ’ ಒರಳು ಎಂಬ ಪದದ ಮೂಲಕ ಹೇಳುತ್ತಿರುವ ಸಂಗತಿಯನ್ನು ಧ್ವನಿಸುತ್ತದೆ ಎಂದು ತಿಳಿಯಬಹುದಾಗಿದೆ. ಇಲ್ಲಿ ಗಂಡು ಹೆಣ್ಣಿನ ಸಮಾಗಮದ ಚಿತ್ರಣವು ಧ್ವನಿಸುವಂತೆ ಕಾಣುತ್ತದೆ. ಹಾಗಾದಾಗ ಮತ್ತೆ ಮತ್ತೆ ಏಕೆ ಕುಟ್ಟೀದೆ ಜೀವ ಎಂಬ ಮಾತನ್ನು ಹೇಳಲಾಗುತ್ತಿದೆ ಎಂದು ಅರ್ಥ ಆಗಬೇಕಾದರೆ ಕವಿತೆಯ ನಡೆಯನ್ನು ನಾವು ಗಮನಿಸಬೇಕಾಗುತ್ತದೆ.

ಎರಡನೆಯ ಹಾಡು ಮತ್ತೆ ಅದೇ ಕುಟ್ಟುವ ಪ್ರಕ್ರಿಯೆಯನ್ನು ಮುಂದುವರೆಸುತ್ತದೆ. ಬಹುಶಃ ಗಂಡು ಹೆಣ್ಣು ಒಂದಾದ ಮೇಲೆ ಜೀವನ ಸಾಗಿಸಬೇಕಾದ ಅನಿವಾರ್ಯತೆ ಹುಟ್ಟಿಕೊಳ್ಳುತ್ತದೆ. ಅದು ರೊಟ್ಟಿ ಮಾಡಲು ಕೊಟ್ಟೀಣ ಕುಟ್ಟುವ ಹಾಗೆ ಎಂಬ ಮಾತಿನಲ್ಲಿ ಧ್ವನಿತವಾಗಿದೆ. {ಕೊಟ್ಟಣ ಎನ್ನುವುದು ಭತ್ತ ಕುಟ್ಟುವ ಸಾಧನ.} ಅಂದರೆ ಜೀವನವನ್ನು ಸಾಗಿಸಲು ಒಂದಾಗುವ ಪರಿ ಇಲ್ಲಿ ರೂಪಿತವಾಗಿದೆ. ಇಲ್ಲಿ ರೊಟ್ಟಿ ನೆನಸಿದ ತಕ್ಷಣ ಬಸುರಿಯ ಬಯಕೆ ಹೇಗೆ ಬೀಮನಸಿಯಾಗುತ್ತದೆ ಎಂದು ಹೇಳುವುದರ ಜೊತೆಗೆ ಗರ್ಭಧಾರಣ ವಿಷಯ ಬೆಂಗಳೂರೆಂಬ ಪಟ್ಟಣದಲ್ಲಿ ಹೇಗೆ ಬಾಯ್ತುಂಬ ಹರಡಿದೆ ಎಂದು ವಾಚ್ಯವಾಗಿಸಿದೆ.

ಆದರೆ ಮೂರನೆಯ ಹಾಡಿನಲ್ಲಿ ಈ ಕುಟ್ಟುವ ಪ್ರಕ್ರಿಯೆ ಕಲ್ಲಾದ ಹಾಗಾಗುತ್ತದೆ. ಹೆಡೆಬಿಟ್ಟ ಹಾವು ಎರಡು ಕರಿನಾಗರಗಳು ತಮ್ಮ ಕಾಮಕೇಳಿಯನ್ನು ಸ್ಥಗಿತಗೊಳಿಸಿಕೊಳ್ಳುವ ಅನಿವಾರ್ಯತೆಯನ್ನು ಇಲ್ಲಿ ಒತ್ತಾಸೆಗೊಂಡಿದೆ. ಕಾರಣ ಪ್ರೀತಿಯ ದ್ವೇಷದ ಕೂಡಿಕೆಯ ಕಾವಲ್ಲಿದ್ದ ಕರಿನಾಗರ ಹಾವೆರಡು ಪ್ರೀತಿಯಲ್ಲಿದ್ದಾಗ ಒಂದಾಗಿ ದ್ವೇಷದಲ್ಲಿದ್ದಾಗ ಎರಡಾಗಿ ಹೀಗೆ ಹೆಡೆಬಿಚ್ಚಿ ಸ್ವಚ್ಚಂದವಾಗಿ ಮಿಥುನದಲ್ಲಿ ಒಳಹೊಕ್ಕಿದ್ದರಿಂದಲೇ ಬಸುರಿಯ ಬಯಕೆ ಹೆಡೆಬಿಚ್ಚಿ ಕಲ್ಲಾದ ಹಾಗಾಗಬೇಕಾಯಿತು. ಬಹುಶಃ ಬುದ್ದನ ಕಾಮಜೀವನ ಕಳೆಗುಂದಿ ಭೋಗಜೀವನ ಕೊನೆಯಾಗಿ ಹೆಡೆಬಿಚ್ಚಿದ ನಾಗರಹಾವು ತನ್ನನ್ನು ಸಂಯಮಕ್ಕೆ ದೂಡಿಕೊಂಡಿದೆ. ಇಲ್ಲಿ ಒನಕೆಯು ಸಾರ್ಥಕವಾಗುವುದು ಅದು ಕಲ್ಲಿನೊಂದಿಗೆ ಸಂಸರ್ಗವನ್ನು ಸ್ಥಾಪಿಸಿಕೊಂಡಾಗಲೇ. ಈಗ ಬರೀ ಕಲ್ಲುಳಿದು ಒನಕೆಯು ಒಂಟಿಯಾಗಿದೆ.

ನಾಲ್ಕನೆಯ ಹಾಡಿನಲ್ಲಿ ಒಂದು ಜೀವ ತನ್ನ ಕರುಳಕುಡಿಯನ್ನು ಹೆರುವುದರ ಮೂಲಕ ತಾಯಿಜೀವ ಹೇಗೆ ತನ್ನತನವನ್ನು ತಾನು ಕೊನೆಗಾಣಿಸಿಕೊಳ್ಳಬೇಕಾಗುತ್ತದೆ ಎಂದು ಮಾರ್ಮಿಕವಾಗಿ ಹೇಳುತ್ತದೆ. ರಾಜಪರಿವಾರದಲ್ಲಿ ಗಂಡನ್ನು ಹೆರುವುದೆಂದರೆ ಅದೊಂದು ಮಹಾಸಾಧನವೇ ಸರಿ. ಮುಜಗೇರ ಬಂದಾಗ ಮೈ ಇೀದು ಹೆಬ್ಬಾವು ಸಾಯುವಂತೆ ಅಂದರೆ ಮರಿಹಾವಿಗೆ ಜನ್ಮನೀಡುತ್ತಲೇ ತಾಯಿ ಹಾವು ಸಾವಿರ ಸಾವಿರ ಇರುವೆಗಳು ಮುತ್ತಿ ಅದರಿಂದ ಸಾಯುವ ಹಾಗೆ ಇವರ ಪರಿಸ್ಥಿತಿ ನಿರ್ಮಾಣವಾಗಿರುವುದು ಸೋಜಿಗದ ಸಂಗತಿಯಾಗಿದೆ. ಇಲ್ಲಿ ಮಗನ ಹುಟ್ಟಿನೊಂದಿಗೆ ಬುದ್ದನಿಗೆ ಒಡಮೂಡುವ ಜೀವನ ವೈರಾಗ್ಯ ಜೀವನವು ಯಶೋಧರೆಯನ್ನು ಕಲ್ಲಾಗಿಸುವುದಲ್ಲದೆ ಆಕೆಯನ್ನು ಒಂಟಿಯಾಗಿಸುವುದು.

ಕೇವಲ ಒಡಲ ಬಯಕೆಗಾಗಿ ಕಾವಿಗೆ ಒಳಗಾದ ಜೀವಗಳು ನಂತರ ಜವಾಬ್ದಾರಿಯ ಸಂಕೋಲೆಯಲ್ಲಿ ಮೈಬಂಧಿಯಾಗುವ ಸಂಕೀರ್ಣತೆ ಇಲ್ಲಿ ರೂಪಿತಗೊಂಡಿದೆ. ಮಗುವಿನ ಒಳಿತಕ್ಕೆ ತುಡಿಯುವ ವಿಷಯಕ್ಕೆ ಬಂದಾಗ ಈಗ ಎರಡೆಂಬ ಜೀವಗಳು ಒಂದಾಗಿದೆ, ಆರೈಕೆಯ ವಿಷಯ ಬಂದಾಗ ಎರಡು ಜೀವಗಳಲ್ಲಿ ಒಂದಕ್ಕೆ ಹೆಚ್ಚು ವಜನ ಬಿದ್ದಿದೆ. ಹಾಗಾಗಿಯೇ ಮುಪ್ಪಿನ ಕಾಲದ ಚಿತ್ರಣ ಹೀಗೆ ಹೇಳುತ್ತದೆ. ಬದುಕಿನ ಎಲೆಗೆಲ್ಲ ಹುಳು ಬಿದ್ದಿದೆ. ಕಾಪಾಡುತ್ತಿದ್ದ ಕಾಡಿಗೆ ಬೆಂಕಿಬಿದ್ದು ಹೊಗೆಯೆದ್ದಿದೆ. ಆ ಹೂವು ಕೇವಲ ಒಣಗಿದ ಕಸಕಡ್ಡಿಗಳನ್ನಲ್ಲದೇ ಅರಳುತ್ತಿರುವ ಹೂವನ್ನೂ ಕೂಡ ಹಾಳುಮಾಡಿದೆ. ನಂಬೀದ ದೇವರ ಎಲುಬೀನ ಪಂಜರ ಎಂದು ಹಾಡು ತಟಸ್ಥಗೊಂಡು ಬಿಡುತ್ತದೆ. ಮುಂದೆ ಆಗುವುದನ್ನು ಕವಿತೆ ನಮ್ಮ ಮನಸ್ಸಿನಲ್ಲಿಯೇ ಹುಟ್ಟಿಸಿಬಿಡುತ್ತದೆ. ತನ್ಮೂಲಕ ಕವಿತೆ ನಮ್ಮನ್ನು ಆವರಿಸಿಕೊಂಡು ತನ್ನೊಡನೆ ನಮ್ಮನ್ನೂ ಕರೆದುಕೊಂಡು ಹೋಗುವಂತಹ ನಡಿಗೆ ಸಿದ್ದಿಸಿದೆ. ಇದೇ ವಿಷಯ ಮುಂದಿನ ಆರನೆಯ ಹಾಡಿನಲ್ಲಿ ಮುಂದುವರೆದು ಈ ಕಾಡಿನಲ್ಲಿ ಮಾಗಿಯ ಚಳಿಯಲ್ಲಿ ಹಾಯಾಗಿ ಬೆಚ್ಚನೆಯ ಪ್ರೀತಿಯ ತೆಕ್ಕೆಯಲ್ಲಿ ಅರಳಬೇಕಾಗಿದ್ದ, ಹೊರಳಬೇಕಾಗಿದ್ದ ಹಕ್ಕಿಯ ಜೀವವು ಈ ಕಾಡಿಗೆ ಬಿದ್ದ ಬೆಂಕಿಯ ಪರಿಣಾಮದಿಂದ ಕಳೆಗುಂದುವ ಹಂತಕ್ಕೆ ತಲುಪಿರುವುದು ವಿಷಾದಕರವಾಗಿದ. ಮಾಗೀಯ ಹಕ್ಕಿಯ ಕತ್ತೆಲ್ಲ ಸುಕ್ಕಾಯಿತು. ಕಾಲ್ಬೆರಳು, ಮೈಪುಕ್ಕ, ಕೊಕ್ಕಿನ ಮೇಲ್ಭಾಗ ಎಲ್ಲವೂ ಉದುರಿಹೋಗುತ್ತಾ ಸಾಗಿತು. ಪ್ರೀತಿಯ ಒನಕೆಯ ಕುಟ್ಟಿದ್ದರಿಂದ ಅರಳಿದ ಹಕ್ಕಿ ಈಗ ಪ್ರಾಕೃತಿಕ ದಾಳಿಗೆ ತುತ್ತಾಗಿ ನಾಶಹೊಂದಬೇಕಾಗುವ ಸನ್ನಿವೇಶವನ್ನು ಕವಿತೆ ಸೊಗಸಾಗಿ ಕಟ್ಟಿಕೊಡುತ್ತದೆ. ಹೀಗೆ ಹೇಳಿದ ತಕ್ಷಣ ಈ ಹಕ್ಕಿ ಯಾರೆಂಬ ಅರಿವು ನಮಗಾಗುತ್ತದೆ. ಹಕ್ಕಿಯ ಪ್ರತಿಮೆ ಒಟ್ಟೊಟ್ಟಿಗೆ ಎರಡೂ ಜೀವಗಳಿಗೂ ಅನ್ವಯವಾಗುವಂತಿದೆ. ಬುದ್ದನು ಸಂಸಾರದ ಸಂಕೋಲೆಯಿಂದ ಸ್ವಚ್ಛಂದವಾಗಿ ಹಾರಿಹೋದ ಹಕ್ಕಿಯಾದರೆ, ಎಲ್ಲಾ ಸಿದ್ದವಾದ ಅರ್ಥಗಳನ್ನು {ಸಿದ್ದಾರ್ಥ} ಕಳೆದುಕೊಂಡ ಯಶೋಧರೆ ಮಾತ್ರ ಈಗ ಮೈಪುಕ್ಕವನ್ನು ಕಳೆದುಕೊಂಡ ಬೆಂಡಾದ ಹಕ್ಕಿಯಾಗಿದ್ದಾಳೆ.

ಇಲ್ಲಿಂದ ಕವಿತೆ ಈ ಘಟನೆಯನ್ನು ಹೊರಗಿನಿಂದ ಮತ್ತೆ ಪುನರಾವಲೋಕನ ಮಾಡುತ್ತದೆ. ಹೆಣ್ಣಿನ ಒಳಮನಸ್ಸಿನ ತೊಳಲಾಟವನ್ನು ಈ ಏಳನೆಯ ಹಾಡು ಸೊಗಸಾಗಿ ಕಟ್ಟಿಕೊಡುತ್ತದೆ. ಈ ಪ್ರೀತಿಯ ಒನಕೇ ಕುಟ್ಟೀದ ಹಾಗೆ. ರೊಟ್ಟೀನ ಕೊಟ್ಟೀಣ ಕುಟ್ಟೀದ ಹಾಗೆ ರಾತ್ರೀ ಹಗಲು ಅವಳ ಹಿಂದಿಂದ ಮುಂದಿಂದ ಉಬ್ಬುತ್ತಾ ತಬ್ಬುತ್ತಾ ಮಲಗಿಸಿ ಎಬ್ಬೀಸಿ ನಡೆಸಿದ ಎಲ್ಲಾ ಆಟಗಳು ನೆನಪಾಗುತ್ತವೆ. ತಾನು ಅವನ ನೆನಸಿಕೆಯಿಂದ ಬಸರಾದದ್ದು, ತನ್ನ ಬಸುರೀಯ ಬಯಕೆ ಇಡೀ ಬೆಂಗಳೂರಲ್ಲಿ ಬಾಯ್ತುಂಬ ಹರಡಿದ್ದು ನಂತರ ಎಲ್ಲೆಲ್ಲೋ ಕೈಕೊಟ್ಟು ತೊಡೆಯೊಳಗೆ ಹೆಡೆಬಿಟ್ಟು ಮುಡಿದಿದ್ದ ಮಲ್ಲೀಗೆ ಒರೆದಿಟ್ಟ ವಾಸನೆಯ ವಿಷಯಗಳು ನಂತರ ಪೊರಿಬಿಟ್ಟು, ಹೆಡೆಬಿಟ್ಟು ನಂತರ ಕಲ್ಲಾದ ಹಾಗೆ ಆಗಿದ್ದು, ನಂತರ ಪ್ರೀತಿಯ ದ್ಷೇಷದ ಕೂಡೀಕೆ ಕಾವಲ್ಲಿ ಕಲ್ಲಾದ ಭಾವವನ್ನು ಹೊಂದಿದ್ದು ಎಲ್ಲವೂ ಈಗ ನೆನಪಾಗಿದೆ. ನೆನಪುಗಳು ಕೂಡ ಈಕೆಯನ್ನು ಕುಟ್ಟುತ್ತಿದೆ. ಈ ಕುಟ್ಟುವ ಪ್ರಕ್ರಿಯೆ ಹೇಗೆ ಅವಳ ಬದುಕನ್ನೇ ಕುಟ್ಟುತ್ತಿದೆ ಎಂದು ಕವಿತೆ ಸೊಗಸಾಗಿ ಹೇಳುತ್ತಿದೆ.

ಈ ಕವಿತೆಯಲ್ಲಿ ನಮಗೆ ಅರ್ಥವಾಗದ ಮಾತು ಎಂದರೆ ಈಕೆಯ ಬಸುರೀಯ ಬಯಕೆ ಬೆಂಗಳೂರಿನ ಬಾಯ್ತುಂಬ ಹರಡಿತು ಎಂಬ ಮಾತು ಮಾತ್ರ, ಬಹುಶಃ ಈ ಮಾತು ಬುದ್ದನ ದೂರದ ಊರಿನಿಂದ ಅವಳ ಬಸಿರಿನ ಬಯಕೆ ದೂರದ ಬೆಂಗಳೂರಿಗೆ ಹಬ್ಬಿದ್ದು ಸೂಚಿಸುತ್ತಿರಬಹುದು. ಅಥವಾ ಇದರ ಸೂಚನೆ ಇನ್ನೇನೋ ಸೂಚಿಸುತ್ತಿರಬಹುದು.

ಹೀಗೆ ಅನಿವಾರ್ಯವಾಗಿ ಆದ ಘಟನೆ ಇಡೀ ಪ್ರಸಂಗವನ್ನು ವಿಶಿಷ್ಟವಾಗಿ ಗಮನಿಸುವಂತೆ ನಮ್ಮನ್ನು ಒತ್ತಾಯಿಸುತ್ತದೆ. ಮನೆತುಂಬ ಓಡಾಡಿಕೊಂಡು ಚಕ್ಕಂದ ಆಡಿದ ವ್ಯಕ್ತಿಯೊಬ್ಬನನ್ನು ಹೊಳೆಮಿಂಡ ಮಳೆರಾಯ ಥಟ್ಟಾನೆ ಎದೆ ಹೊಡೆದು ಸತ್ತೋದ ಹಾಗೆ, ಹೀಗೆ ಸತ್ತು ಹೋಗುವ ಮುನ್ನ ಸಾವಿನ ಇರುವೆ ಅದನ್ನು ಕಚ್ಚಿಕೊಂಡ ಹಾಗೆ, ಕಾಡೀಗೆ ಕಾಡೇ ನಂಬೀದ ದೇವರ ಎಲುಬಿನ ಪಂಜರವನ್ನು ಕಿತ್ತುಕೊಂಡ ಹಾಗೆ, ಮಾಗೀಯ ಹಕ್ಕೀಯ ಕಾಲ್ಬೆರಳು, ಮೈಪುಕ್ಕ, ಕೊಕ್ಕೀನ ಮೇಲ್ಭಾಗ ಎಲ್ಲೆಲ್ಲೋ ಅಲ್ಲಲ್ಲೇ ಉದುರೀದ ಹಾಗೆ, ಕಾಡೀಗೆ ಕಾಡೇ ನಂಬಿದ ದೇವರ ಅಭಯದ ಹಸ್ತದ ಎಲುಬೀನ ಪಂಜರ ವೈಶಾಖ ಮಾಸದ ಪೂರ್ಣಿಮೆಯ ಬೆಳಕಿನಲ್ಲಿ ಈ ಎಲುಬಿನ ಪಂಜರವು ಆಕಾಶದ ತುಂಬಾ ನೆರಳನ್ನು ಹರಡಿದ ಸಂಗತಿಯನ್ನು ಅದ್ಭುತವಾಗಿ ಕಟ್ಟಿಕೊಡುತ್ತದೆ.

ಕವಿತೆಯ ಕಡೆಯಲ್ಲಿ ಬರುವಷ್ಟರ ಹೊತ್ತಿಗೆ ಇದು ನಮಗೆ ಚಿರಪರಿಚಿತವಾಗಿರುವ ವ್ಯಕ್ತಿಯೊಬ್ಬನ ಬದುಕನ್ನು ಕುರಿತು ಬರೆದದ್ದು ಎಂಬ ದರ್ಶನವನ್ನು ನಮಗೆ ಕಟ್ಟಿಕೊಡುತ್ತದೆ. ನಮ್ಮಲ್ಲಿ ಹುಟ್ಟಿದ್ದ ಭಾವನೆಗಳನ್ನೆಲ್ಲಾ ಈ ಕವಿತೆ ಕುಟ್ಟಿಹಾಕಿಬಿಡುತ್ತದೆ. ಅದು ಬೇರೆ ಯಾರೂ ಆಗಿರದೆ ಅದು ಬುದ್ದನ ಬದುಕಿನ ವಿಷಯವೆಂದು ತಿಳಿದಾಗ ಈ ಇಡೀ ಕವಿತೆಯ ಸಂರಚನೆಯನ್ನು ಸೊಗಸಾಗಿ ಉಜ್ಜೀವಿಸಿಕೊಳ್ಳುತ್ತದೆ. ಮತ್ತೆ ನಾವು ಕವಿತೆಯ ಸೂಕ್ಷ್ಮವಾದ ರಚನೆಯನ್ನು ಗಮನವಿಟ್ಟು ನೋಡಬೇಕಾಗುತ್ತದೆ. ಕವಿತೆಯ ಕೊನೆಯಲ್ಲಿ ಧ್ವನಿತವಾಗಿರುವ ವೈಶಾಖ ಪೂರ್ಣಿಮೆಯ ಬೆಳಕು {ವೈಶಾಖ ಮಾಸವು ಬುದ್ದನ ಬದುಕಿನಲ್ಲಿ ಬಹಳ ಮುಖ್ಯವಾದ ದಿನವೆಂದು ನಂಬಲಾಗಿದೆ. ಬುದ್ದನ ಜನನವಾಗಿದ್ದು ಕೂಡ ವೈಶಾಖ ಮಾಸದ ಪೂರ್ಣಿಮೆಯಂದೇ ಹಾಗೂ ಆತನಿಗೆ ನಿರಂಜನ ನದೀ ತೀರದಲ್ಲಿ ಇವತ್ತಿನ ಬುದ್ದಗಯಾ ಎಂಬ ಜಾಗದಲ್ಲಿ ಬೋಧಿಸತ್ತ್ವದ ಮರದಡಿಯಲ್ಲಿ ಕೂತು ಮಾಡಿದ ಧ್ಯಾನದ ಪರಿಣಾಮವಾಗಿ ಆತನಿಗೆ ಜ್ಞಾನೋದಯವಾಯಿತು ಎಂದು ನಂಬಿಕೆ ಇರುವುದರಿಂದ ಹೀಗೆ ಊಹಿಸಲಾಗಿದೆ} ಆಕಾಶದ ತುಂಬ ಬೆಳಕನ್ನಲ್ಲ ಕೇವಲ ನೆರಳನ್ನು ಚಾಚಿದ್ದು ಎಂದು ತಿಳಿಸುತ್ತದೆ. ಆದರೆ ಇದು ಯಶೋಧರೆಯ ದೃಷ್ಟಿಯಿಂದಬರೆದ ಕವಿತೆಯಲ್ಲವೇ? ಹಾಗಾಗಿ ಇಲ್ಲಿ ಸ್ತ್ರೀಯೊಬ್ಬಳ ಒಳತುಮುಲಗಳು ಅವಳ ದೃಷ್ಟಿಕೋನದಿಂದ ಸಂರಚನೆಗೊಂಡಿದೆ. ಹೀಗೆ ಬೆಳಕು ನೀಡುವ ಬದಲಿಗೆ ನೆರಳು ನೀಡಿದ್ದು ಎಲುಬಿನ ಪಂಜರವೇ. ಈ ಎಲುಬಿನ ಪಂಜರ ತಾನು ನಂಬಿದ್ದ “ನಂಬೀದ ದೇವರ ಎಲುಬೀನ ಪಂಜರವೇ”. ಇದು ಈಕೆಯ ಒಳಗೆ ಮೊದಲು ಆಸೆಗಳನ್ನು ಕುಟ್ಟಿದ ಎಲಬಿನ ಪಂಜರ ಹಾಗೂ ಈಗ ನೋವನ್ನು ಕುಟ್ಟುತ್ತಿರುವ ವಿಷಾಧದ ಪಂಜರವೇ, ಈಕೆಯು ನಂಬಿದ ದೇವರೇ ಆತ. ಅವನ ಅಭಯ ಹಸ್ತದ ಆಸೆಯಿಂದ ಅವನೊಡನೆ ಇರಲು ಬಂದ ಅವಳಿಗೆ ಇಡೀ ಜಗತ್ತಿಗೇ ಅಭಯ ಕೊಡಲು ಹೋದ ಸಂಗತಿ ಕುಟ್ಟುವುದಿಲ್ಲವೇ. ಆಕೆಯ ಗುಂಡಿಗೆಯಲ್ಲಿ ಜೀವವನ್ನು ಕುಟ್ಟಿದ ಹಾಗೆ ಆಗುವುದಿಲ್ಲವೇ. ತನ್ನ ಸಂಸಾರದ ಪೊರೆಯನ್ನು ಕಳಚಲು ಸಕಲ ಜೀವಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಪಡುತ್ತಿದ್ದ ಪಾಡಿಗೆ ಪರಿಹಾರಿಯಾಗಿ ಹೊರಹೊಮ್ಮಿದ್ದು ಬುದ್ದನ ರೀತಿಯಲ್ಲಿ ಸರಿಯಿರಬಹುದು ಆದರೆ ಯಶೋಧರೆಗೆ ಅದು ಸಾಯುವ ಮೊದಲು ಸಾವಿರ ಸಾವಿರ ಇರುವೆಗಳು ಮುತ್ತಿಕೊಂಡ ಭಾವವನ್ನು ಹೊರಹೊಮ್ಮದೇ ಬಿಡುತ್ತದೆಯೇ. ಈಕೆಯ ಜೀವನವೆಂಬ ಉದ್ಯಾನದಲ್ಲಿ ಈ ಬುದ್ದನ ರೀತಿಗಳು ಇನ್ನೇನು ಈಗ ತಾನೆ ಮಾಗಿ ಬಂದು ಬೆಚ್ಚನೆಯ ಒಡಲಲ್ಲಿ ಬಚ್ಚಿಟ್ಟುಕೊಳ್ಳಬೇಕೆನ್ನುವ ಹಕ್ಕಿಯ ಭಾವವೇ ಅನಾಥವಾಗಿದೆ.

ಆಕೆಯ ಬಲವಾಗಿದ್ದ ಮಾಗಿಯ ಹಕ್ಕಿಯ ಕತ್ತು, ಕಾಲ್ಬೆರಳು, ಮೈಪುಕ್ಕ, ಕೊಕ್ಕಿನ ಮೇಲ್ಭಾಗಗಳು ಎಲ್ಲೆಲ್ಲೋ ಚದುರಿ ಹಾರಿಹೋದ ವಿಷಾದ ಆಕೆಯನ್ನು ಆವರಿಸಿದೆ. ಇಲ್ಲಿ ಈ ನಾಲ್ಕೂ ರೂಪಕಗಳು ಬುದ್ದನನ್ನು ಅರ್ಥ ಮಾಡಿಕೊಳ್ಳಲು ನಮ್ಮನ್ನು ಪ್ರೇರೇಪಿಸುತ್ತದೆ. ಹಕ್ಕಿಯ ಕತ್ತು ಎನ್ನುವುದು ಅವನ ಸುಕೋಮಲ ಧ್ವನಿಯನ್ನು, ಮೈಪುಕ್ಕ ಎನ್ನುವುದು ತಾನೇ ಇನ್ನೂ ಮಾಗಬೇಕಾಗಿದ್ದ ಸಂಗತಿಯನ್ನು, ಕೊಕ್ಕಿನ ಮೇಲ್ಭಾಗವು ತಾನು ನೋಡಬೇಕಾಗಿದ್ದ ದಾರಿಯನ್ನು ಮಸುಕಾಗಿಸುವ ಕಣ್ಣನ್ನ, ಹಾಗೂ ಕಾಲ್ಬೆರಳು ತಾನು ಭದ್ರವಾಗಿ ಊರಬೇಕಾಗಿದ್ದ ನೆಲೆಯನ್ನು ಪ್ರತಿಪಾದಿಸುತ್ತದೆ. ಈ ರೂಪಕವನ್ನೇ ವಿಸ್ತರಿಸಿ ನೋಡುವುದಾದರೆ ಬುದ್ದ ಒಂದು ಹಕ್ಕಿಯಂತೆ ಕೋಮಲ. ಆತ ಹಾರಲಾರದೇ ಸಂಸಾರದ ಸುಖಪಂಜರದಲ್ಲಿ ಬಂಧಿಯಾಗಿದ್ದವನು. ಅವನ ಆಸರೆಯಾಗಿ ಹೊರಹೊಮ್ಮಿದ ಸುಖಲತೆ ಯಶೋಧರೆಯಾಗಿದ್ದಳು. ಹಕ್ಕಿಯ ಕತ್ತು ಎನ್ನುವುದು ಕೇವಲ ಅರಮನೆಯ ಒಳಭಾಗವನ್ನು ಕಂಡಿದ್ದ ದೃಷ್ಟಿಕೋನವಾಗಿತ್ತು. ಕೊಕ್ಕಿನ ಮೇಲ್ಭಾಗ ಎಂದರೆ ರಾಜಪ್ರಭುತ್ವದ ಬೆಂಬಲ, ಮೈಪುಕ್ಕ ಎಂದರೆ ಅವನನ್ನು ಗಾಢವಾಗಿ ಆವರಿಸಿದ್ದ ಆಶ್ರಯ ತಾಣ, ಕಾಲ್ಬೆರಳು ಎಂದರೆ ಆತ ಭದ್ರವಾಗಿ ನೆಲೆನಿಲ್ಲಲು ತನ್ನ ಕಾಲ್ಬಲದ ಮೇಲೆ ನಿಲ್ಲವಂತಹ ದೃಢವಾದ ಸಾಮ್ರಾಜ್ಯದ ಆಸರೆಯಿದ್ದ ತಾಣವಾಗಿತ್ತು. ಇವೆಲ್ಲವೂ ಬುದ್ದನ ಪಾಲಿಗೆ ಸಂಕೋಲೆಯಾಗಿ ಆತ ಎಲುಬಿನ ಪಂಜರಗಳನ್ನು ಪೋಷಿಸಲು ಹೊರಟರೆ ಈಕೆ ಮಾತ್ರ ತಾನು ನಂಬಿದ ಎಲುಬಿನ ಪಂಜರವು ಹೆಡೆ ಬಿಟ್ಟು ಈಗ ಕಲ್ಲಾದ ಹಾಗೆ ಆಗಿದೆ. ಜಗತ್ತಿಗೆ ಇವರು ಆರಾಧ್ಯರಿರಬಹುದು ಆದರೆ ಈಕೆಗೆ ಮಾತ್ರ ಅವನು ಕಲ್ಲೇ.ಬಹುಶಃ ತೀರ ವಾಚ್ಯವಾಗಿ ಹೇಳಬಹುದಾಗಿದ್ದ ಈ ಪದ್ಯವನ್ನು ಎ.ಕೆ. ರಾಮಾನುಜನ್ ಅವರು ಒನಕೆಯ ಹಾಡುಗಳು ಎಂದು ತೀರ ವಿಶೇಷವಾಗಿ ಹೇಳಿರುವುದು ನಿಜಕ್ಕೂ ವಿಶೇಷವಾದ ಸಂಗತಿಯಾಗಿದೆ. ಬಹುಶಃ ಇದರ ವಾಚ್ಯರೂಪವನ್ನು ಇನ್ನೂ ತಿದ್ದಿ ಬೇರೆಯೇ ಆದ ರೀತಿಯಲ್ಲಿ ಅಥವಾ ಲಯದಲ್ಲಿ ಇದನ್ನು ಮರುನಿರ್ಮಿಸುವ ಬಯಕೆ ರಾಮಾನುಜನ್ ಅವರಲ್ಲಿ ಇದ್ದಿರಬಹುದು. ಹಾಗಾಗಿಯೇ 1973ರಲ್ಲಿ ಬರೆದಿದ್ದ ಈ ಪದ್ಯವನ್ನು ಅವರು ಎಲ್ಲೂ ಪ್ರಕಟಿಸದೇ ಹೋಗಿರಬೇಕು. ಅಥವಾ ಬುದ್ದನ ಬಗ್ಗೆ ಆಗಾಗಲೇ ಬಂದಿದ್ದ ಹಲವು ಪದ್ಯಗಳನ್ನು ನೋಡಿ ಇದನ್ನೂ ಇನ್ನೂ ಸಾಂಕೇತಿಕಗೊಳಿಸಿ ಹೇಳಬಹುದೆಂದು ಅವರು ಇಟ್ಟಿದ್ದಿರಬಹುದು. ಆದರೆ ಇದು ಬುದ್ದನ ಜೀವನವನ್ನು ಅವನ ಮಡದಿಯ ನೋವನ್ನು ಎಲ್ಲೂ ಅವರುಗಳ ಹೆಸರನ್ನು ಹೇಳದೇ ಸೂಚ್ಯವಾಗಿ ಪದ್ಯವನ್ನು ಬರೆದು ರಾಮಾನುಜನ್ ಅದ್ಭುತಗೊಳಿಸಿದ್ದಾರೆ. ಯಾವ ವ್ಯಕ್ತಿಯ ಹೆಸರುಗಳನ್ನೂ ಹೇಳದೇ ನಮ್ಮನ್ನು ಕೊನೆಯ ಸಾಲಿನ ದರ್ಶನದ ಮೂಲಕ ತಮ್ಮ ನಿಜವಾದ ಸಾರ್ಥಕ್ಯವನ್ನು ಕವಿತೆ ಹೊಂದಿದೆ.

ಈ ಪದ್ಯವನ್ನು ಕುಟ್ಟು ಪ್ರಕ್ರಿಯೆಯಾಗಿ ಕಟ್ಟಿದ ಒನಕೆಯ ಹಾಡನ್ನಾಗಿಸಿದ್ದು ಪದ್ಯದ ಶಿಲ್ಪದ ದೃಷ್ಟಿಯಿಂದ ಬಹಳ ಉತ್ತಮವಾದದ್ದು. ಒನಕೆಯ ಕುಟ್ಟುವ ಹಾಡಗಳು ಸಂತೋಷದ ಸಮಯದಲ್ಲಿ ಹಾಡುವ ಹಾಡು. ಅದನ್ನು ವಿಷಾಧಕರ ಸಂದರ್ಭದಲ್ಲಿ ಇಟ್ಟಿರುವುದು ಅವರ ಪ್ರಯೋಗಶೀಲತೆ ಹಾಗೂ ಹೆಚ್ಚುಗಾರಿಕೆಗೆ ಹಾಗೂ ಬದುಕಿನ ನೋವನ್ನು ನಂಗುವಂತಹ ಜನಪದರ ಆಶೋತ್ತರಗಳಿಗೆ ಸಂವಾದಿಯಾಗಿಸಿದ್ದು ಅವರಲ್ಲಿದ್ದ ಜನಪದದ ಮೇಲಿನ ದೃಷ್ಟಿಯಿಂದ ಹಾಗೂ ಕವಿತೆಯ ಬಂಧದ ಮೇಲೆ ಅವರಿಗಿದ್ದ ಪ್ರಬುದ್ದತೆಯಿಂದ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಇದು ಎ. ಕೆ. ರಾಮಾನುಜನ್ನರು ಕಂಡುಕೊಂಡ ಕವಿತೆ ಹೌದೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಈ ರೀತಿಯ ದರ್ಶನವನ್ನು ಕವಿತೆ ಹೊರಡಿಸಿದ್ದು ಮಾತ್ರ ಸುಳ್ಳಲ್ಲ.

ಪ್ರತಿಕ್ರಿಯಿಸಿ