ಬೃಹನ್ನಳೆ ಸೈರಂಧ್ರಿಯನ್ನು ದೂರದಿಂದ ನೋಡಿದಾಗ

ಎ.ಕೆ. ರಾಮಾನುಜನ್ ಧ್ವನಿ ಕೀಚಲಾಗಿತ್ತು ಎಂದು ಅವರನ್ನು ಬಲ್ಲ ಎಲ್ಲರೂ ಹೇಳುವ ಮಾತು. ರಾಮಾನುಜನ್ ಹಾಗೆ ನೋಡಿದರೆ ಕಾವ್ಯದಲ್ಲಾದರೂ ತಮ್ಮ ದನಿಯನ್ನು ನೇರವಾಗಿ ಹರಿಬಿಟ್ಟವರೆ ಅಲ್ಲ; ಅದೊಂದು ಗೊಗ್ಗರು ದನಿ; ಅಡಗಿಸಿದ ಎಷ್ಟೊ ಮಾತುಗಳ ಮೌನವನ್ನು ಮೆಲ್ಲಗೆ ಮೀಟಿದಂತಿದ್ದ ಸಣ್ಣ ಧ್ವನಿ. ರಾಮಾನುಜನ್ ತಮ್ಮ ಈ ಕೀಚಲು ದನಿಯಲ್ಲಿ ಹೇಳುವ ಪದಾರ್ಥಗಳು ಲಘುತ್ವದಿಂದ ಕೂಡಿರುತ್ತವೆಂದು ಭಾವಿಸಲಾಗದು. ಅವು ಎಷ್ಟೊ ಸಾರಿ ಸಾಂಪ್ರದಾಯಿಕ ಅಧ್ಯಾಹಾರಗಳನ್ನು ಮೀರಿ ನಿಂತಿರುತ್ತಿದ್ದವು. ಈ ಮಾತಿನ ಪರಿಯನ್ನು controlled speech ಎಂದು ಕರೆಯಬಹುದಾದರೆ ಹೌದು ಅದರರ್ಥ ಅದೇ. ಆದರೆ ರಾಮಾನುಜನ್ ಒಬ್ಬ ಜಂಟಲ್‍ಮ್ಯಾನ್‍ನಂತೆ ತಮ್ಮ ಮಾತುಗಳನ್ನು ನಿಯಂತ್ರಿಸಿಕೊಂಡು ಆಡುತ್ತಿರಲಿಲ್ಲ. ಮತ್ತೊಂದು ಕಡೆಯಿಂದ ಅವರಿಗೆ ಮಾತಿನ ಬಗ್ಗೆ, ಅದರಲ್ಲೂ ತಾವಾಡುವ ಮಾತಿನ ಬಗ್ಗೆ ಅನೇಕ ಸಂಶಯಗಳಿದ್ದವು. ಆದ್ದರಿಂದಲೇ ಅವರು ಪೂರೈಸದೇ ಬಿಡುತ್ತಿದ್ದ ಪದಗಳು, ಅವುಗಳ ಅರ್ಥಗಳು ಗೂಡಾರ್ಥವನ್ನು ಪಡೆದುಕೊಂಡು ಬಿಡುತ್ತವೆ. ಇದು ಈ ಕವಿಗೆ ವರವೂ ಶಾಪವೂ ಆಗಿದ್ದರೆ ಆಶ್ಚರ್ಯವಿಲ್ಲ. ಈ ಅಂಶಗಳೇ ರಾಮಾನುಜನ್ ಅವರನ್ನು ವಿಮರ್ಶೆಯು ಮೈನರ್ ಕವಿಗಳ ಸಾಲಿಗೆ ಸೇರಿಸಿ ನೋಡುತ್ತದೆ ಎನ್ನಿಸುತ್ತದೆ. ಇದು ವಿಮರ್ಶೆಯ ಮಿತಿಯಾಗಿರಬಹುದು. ಪ್ರಾಯಶ: ರಾಮಾನುಜನ್ ಮೇಜರ್ ಅನ್ನು ಮೈನರ್ ಆಗಿ ಭಾವಿಸುವ, ಮೈನರ್ ಮೂಲಕ ಮೇಜರ್ ಅನ್ನು ನಿರಚನೆಗೊಳಿಸಿಕೊಳ್ಳುವ ಸನ್ನೆಗೋಲುಗಳನ್ನು ಹುಡುಕುತ್ತಿದ್ದಂತೆ ತೋರುತ್ತದೆ. ಅಂಚು-ಕೇಂದ್ರಗಳನ್ನು ಪಲ್ಲಟಿಸುವ ಕ್ರಮಗಳನ್ನು ತಮ್ಮದೇ ಆದ ರೀತಿಗಳಲ್ಲಿ ಶೋಧಿಸಿಕೊಳ್ಳುತ್ತಿದ್ದ ರಾಮಾನುಜನ್ ತಮ್ಮ ಕಾಲಕ್ಕಿಂತ ಮುಂದೆ ಯೋಚಿಸಿದ್ದರು ಎಂದು ಹೇಳಬಹುದು.

ರಾಮಾನುಜನ್ ಅವರದೇ ಕವಿತೆಯಾದ ‘ಅಂಗುಲಹುಳುವಿನ ಪರಕಾಯ ಪ್ರವೇಶ’ ಒಂದು ಅಳತೆಯ ನಿಖರತೆಯನ್ನು ಎತ್ತಿಹಿಡಿಯುವ ಭರದಲ್ಲಿ ಅಳತೆಯ ಪ್ರಕ್ರಿಯೆಯಲ್ಲಿ ಎದುರಾಗುವ ಅಸಹ್ಯವಾದ ಪ್ರಮಾಣಗಳನ್ನು ಕಾಣುತ್ತದೆ. ಅಳತೆಯ ಮಿತಿ ಮತ್ತು ಶಕ್ತಿಗಳೆರಡನ್ನೂ ಧ್ವನಿಸುವ ಮೂಲಕ ಅಳತೆಯ ಸಾಮಥ್ರ್ಯವನ್ನೇ ನಿರಚನೆಗೊಳಿಸಿಕೊಳ್ಳುವ ಮಟ್ಟಿಗೆ ಪದ್ಯ ಬೆಳೆಯುತ್ತದೆ. ಈ ‘ಅಳತೆಯ ಹುಳು’ ಆದರೇನು? ವಿಮರ್ಶೆಯ ಚರ ಗುಣವು ಇವರಿಗೆ ಏನೇನೆಲ್ಲಾ ನೋಡಿತಲ್ಲಾ ಎನ್ನುವ ಅಹಮಿಕೆಯ ಭಾವವನ್ನು ಹುಟ್ಟುಹಾಕದೆ, ಏನೇನನ್ನು ನೋಡಬೇಕಾಯಿತಲ್ಲ ಎಂಬ ವಿಷಾದವನ್ನು ಹುಟ್ಟಿಸಿದೆ. ಹೀಗೆ ನಿರಚನೆ ಮಾಡಿಕೊಳ್ಳುವುದು ಶಕ್ತಿಯೇ? ಮಿತಿಯೇ? ಈ ಸಂದಿಗ್ಧವನ್ನೇ ತಮ್ಮ ಶಕ್ತಿಯನ್ನಾಗಿ ಭಾವಿಸಿ ಸಾಹಿತ್ಯ ಬರೆದ ಬರಹಗಾರ ಈ ರಾಮಾನುಜನ್. ಇದರಿಂದ ರಾಮಾನುಜನ್ ಕಾವ್ಯ/ಕಥನಗಳು ಸಾಧಿಸಿದ್ದೆಂದರೆ ಒಂದು ಪ್ರಚಂಡವಾದ ಒಳಬಂಡಾಯದ ಪ್ರವಾಹ ತನ್ನೊಳಗೆ ಇರುವುದನ್ನು ಅರಿತಿದ್ದು ಮತ್ತು ಅದನ್ನು ಸದಾ ಜಾಗೃತವಾಗಿ ಗಮನಿಸುವ ಪ್ರಜ್ಞಾಪೂರ್ವಕತೆಯನ್ನು ಒಳಗೇ ಕಾಪಾಡಿಕೊಂಡಿದ್ದು. ಇದನ್ನು ಅವರು ಕಾಮ, ತೀವ್ರ ವ್ಯಾಮೋಹ ಎಂದು ಭಾವಿಸಿದ್ದರು. ಹೀಗೆ ಬುದ್ಧಿಯನ್ನು ಸೃಜನಶೀಲತೆಯಲ್ಲಿ ಮೀಯಿಸುವ ಹಲವು ವಿಧಾನಗಳನ್ನು ಅವರಲ್ಲಿ ಕಾಣಬಹುದು.

ಏರುದನಿಯ, ಅಹಮಿಕೆಯ ಗುಣವನ್ನು ಬಿಟ್ಟುಕೊಡುವ ಮೂಲಕ ಸ್ತ್ರೀತ್ವದ ಗುಣವನ್ನು ತೋರುವ ರಾಮಾನುಜನ್ ಅವರ ಸಾಹಿತ್ಯದ ಗುಣವೇ, ರಾಮಾನುಜನ್ ಅವರ ಈ ಸೃಜನಶೀಲ ಹೊರಳೇ ಸ್ತ್ರೀಪ್ರತಿಭೆ ಎಂದು ಭಾವಿಸಲು ಅವಕಾಶವಿರುವ ಸಂಗತಿ ಎಂದು ನಾನು ಭಾವಿಸುವೆ. ಒಂದರ್ಥದಲ್ಲಿ ಅವರದು intransitive verb ಬಳಕೆಯಂತಿರುವ ಪ್ರತಿಭೆ. ಇದೂ ಕೂಡ ಸ್ತ್ರೀಭಾಷಿಕ ಪ್ರಪಂಚದಲ್ಲಿ ಸ್ತ್ರೀತ್ವವನ್ನು ಪ್ರತಿನಿಧಿಸುವ ಅಂಶವೇ. ರಾಮಾನುಜನ್ ಎಚ್ಚರವಿಟ್ಟುಕೊಂಡೇ ತಮ್ಮ ಸೃಜನಶೀಲತೆಯನ್ನು ಸ್ತ್ರೀಯಾತ್ಮಕವಾಗಿಸಿಕೊಳ್ಳುತ್ತಾರೆ. ಅವರು ಒಂದರ್ಥದಲ್ಲಿ ಜಾಣ ಬರಹಗಾರ.

ಮೇಲ್ನೋಟಕ್ಕೆ ರಾಮಾನುಜನ್ ಅವರಂತಹ ಬರಹಗಾರರನ್ನು ಸ್ತ್ರೀದೃಷ್ಟಿ, ಸ್ತ್ರೀವಾದಗಳಿಗೆ ಒಗ್ಗಿಸುವುದು ಬಲವಂತದ ಕ್ರಿಯೆ ಎನಿಸುತ್ತದೆ. ಏಕೆಂದರೆ ರಾಮಾನುಜನ್ ಬರೆಯುತ್ತಿದ್ದ ನವ್ಯದ ಕಾಲವು ಗಂಡು ಅಹಮಿಕೆಯನ್ನು ಎತ್ತಿಹಿಡಿದ ಸಾಹಿತ್ಯದ ಪರ್ವಕಾಲ ಎಂದು ಈಗಾಗಲೇ ಪ್ರಚಲಿತವಾಗಿದೆ. ನವ್ಯದಲ್ಲಿ ಕೇಂದ್ರವಾದ ಗಂಡು ನಾಯಕನಾಗಿ, ಎಚ್ಚೆತ್ತ ಪ್ರಜ್ಞೆಯನ್ನು ತೋರುವ ಮೂಲಕ ತನ್ನ ಅಸ್ತಿತ್ವವನ್ನು ಸಾದರ ಪಡಿಸಿಕೊಳ್ಳುವವನು. ಇದರ ಆಧಾರದ ಮೇಲೆ ಹೇಳುವುದಾದರೆ, ರಾಮಾನುಜನ್ ಕವಿತೆಗಳಲ್ಲಾಗಲೀ ಕಥನಗಳಲ್ಲಾಗಲೀ ಇರುವುದು ಗಂಡು ಪಾತ್ರಗಳೇ. ಅಲ್ಲಿ ಗಂಡಸಿನ ದನಿಯ ನಿರೂಪಣೆ ಇದೆ. ನೇರನೋಟಕ್ಕೆ ರಾಮಾನುಜನ್ ಗಂಡೇ ಸರಿ! ಇನ್ನು ಸಾಂಪ್ರದಾಯಿಕವಾದ ಸ್ತ್ರೀವಾದವು ಶೋಧಿಸಿಕೊಳ್ಳುವ ಕ್ರಮಗಳಲ್ಲಿ ರಾಮಾನುಜನ್ ಕಾಣುವುದು ಕಷ್ಟ. ಏಕೆಂದರೆ ಸದ್ಯ ಪ್ರಚಲಿತವಾಗಿರುವ ಸ್ತ್ರೀನೋಟಕ್ರಮಗಳು ಪುರುಷಾಧಿಕಾರದ ನೆಲೆಗಳನ್ನು ಪ್ರಶ್ನಿಸಿಕೊಳ್ಳುತ್ತಾ ಅದರ ಮೂಲಕ ಸ್ತ್ರೀನೆಲೆಗಳನ್ನು ಹುಡುಕಿಕೊಳ್ಳುವ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಪುರುಷಾಧಿಕಾರಗಳನ್ನು ಅನುಮಾನಿಸದಿದ್ದರೆ ಸತ್ಯದ ಶೋಧನೆ ಸಾಧ್ಯವಾಗದೆಂಬ ಬಲವಾದ ನಂಬಿಕೆಯಿಂದ ಹೊರಡುವ ಹುಡುಕಾಟಗಳು ಇವು. ಈ ಕ್ರಮಗಳು ಪ್ರಾಥಮಿಕ ಹಂತದಲ್ಲಿ ಅನುಸರಿಸುತ್ತಿದ್ದಂತಹ ಕ್ರಮಗಳು. ಇವುಗಳಲ್ಲಿ ದೋಷ, ಕುಂದು ಕೊರತೆಗಳ ಎಣಿಕೆಯು ಸ್ವಾಭಾವಿಕವೆನಿಸುವಂತದ್ದು. ಇದೇ ಕ್ರಮವು ಸದಾಕಾಲಕ್ಕೂ ಸಲ್ಲುತ್ತದೆ ಎಂದು ಗ್ರಹಿಸಿದರೆ ಸ್ತ್ರೀಸತ್ವಗಳು ಉಜ್ವಲವಾಗಿರುವ ಅನೇಕ ವಲಯಗಳನ್ನೂ ಆಯಾಮಗಳನ್ನೂ ಮರೆತಂತಾಗುತ್ತದೆ. ಸ್ತ್ರೀವಾದವನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಬೇರೆ ಬೇರೆ ರೀತಿ establish ಆಗಬೇಕಾಗುತ್ತದೆ. ಮೂರ್ತವಾಗಿರುವ ಹಕ್ಕು ಬಾಧ್ಯತೆಗಳ ಜೆಂಡರ್ ರಚನೆಗಳ ರಾಜಕೀಯಗಳ ಅಳತೆಗೋಲುಗಳನ್ನು ಬದಿಗಿಟ್ಟು ಸ್ತ್ರೀಸತ್ವ, ಸಾಮರ್ಥ್ಯಗಳು ಸೃಷ್ಟಿಸುವ ಸೃಜನಶೀಲತೆಯ ಅಮೂರ್ತವೆನಿಸುವ ಮೀಮಾಂಸೆಗಳು ಸ್ತ್ರೀ ನೆಲೆಗಳನ್ನು ವಿಶಾಲವಾದ ತತ್ವಶಾಸ್ತ್ರೀಯ ಪಾತಳಿಗೊಯ್ದು ಭೌತಿಕ ಮೀಮಾಂಸೆಯಿಂದ ಸರಿಯುವ ಅಥವಾ ಅದನ್ನೂ ಇಟ್ಟುಕೊಂಡೇ ತಾತ್ವಿಕತೆಗಳನ್ನು ವಿಸ್ತರಿಸಿಕೊಳ್ಳುವ ಹಂತ ತಲುಪಿಸುತ್ತವೆ. ಇದರಿಂದ ಸ್ತ್ರೀವಾದಿ ಕಲಾ ಮೀಮಾಂಸೆಯು ಒದಗಿ ಸ್ಥೂಲದಿಂದ ಸೂಕ್ಷ್ಮಕ್ಕೆ ಎಳಸುವ ಪ್ರವೃತ್ತಿಯನ್ನು ತೋರಿತು ಎನ್ನಬಹುದು. ಇಂತಲ್ಲಿ ಪ್ರಾಯಶ: ರಾಮಾನುಜನ್ ನಮಗೆ ಹೆಣ್ಣಾಗಿ ಸಿಗಬಹುದು.

ರಾಮಾನುಜನ್ ಸಾಹಿತ್ಯ ಒದಗಿಸುವ ಸ್ತ್ರೀಸತ್ವಗಳು, ಅವರ ಸ್ತ್ರೀಪಾತ್ರಗಳು ಒದಗಿಸುವ ಸ್ತ್ರೀತ್ವದ ಮೀಮಾಂಸೆಗಳು ಒಂದು ಪರ್ಯಾಯ ಸೃಷ್ಟಿಯ ಯತ್ನಗಳಾದರೆ ಸ್ವತ: ರಾಮಾನುಜನ್ ಅವರು ಸ್ತ್ರೀಸತ್ವಗಳನ್ನು ಶೋಧಿಸಿಕೊಳ್ಳುವ ಸ್ತ್ರೀ ಅಧ್ಯಯನದ ವೈಧಾನಿಕತೆಯನ್ನು ಹುಡುಕಿಕೊಟ್ಟರು. ಇದರಲ್ಲಿ ಅವರು ಮುಖ್ಯವಾಗಿ ಜನಪದ ಮಾದರಿಗಳನ್ನೇ ಆಧರಿಸಿ ಹೆಣ್ಣು ನಿರೂಪಣಾ ಕ್ರಮಗಳನ್ನು ಸಾದ್ಯಂತವಾಗಿ ತೋರಿಸಿಕೊಟ್ಟರು. ಹೀಗಾಗಿ ಸಾಹಿತಿ ರಾಮಾನುಜನ್ ಕಂಡುಕೊಂಡ ಸ್ತ್ರೀಸತ್ವಗಳು ಶಿಷ್ಟವಾದ ನೆಲೆಯಲ್ಲಿ ಸ್ತ್ರೀ ತತ್ವವನ್ನು ಗ್ರಹಿಸಿದರೆ, ಅವರ ಸಂಶೋಧನಾ ಆಸಕ್ತಿಗಳು ಜನಪದದಲ್ಲಿ ಸ್ತ್ರೀ ತಾತ್ವಿಕತೆಗಳನ್ನು ಹುಡುಕಿಕೊಂಡವು. ಈ ದೃಷ್ಟಿಯಿಂದ ರಾಮಾನುಜನ್ ಹೆಣ್ಣುದೃಷ್ಟಿಯಿಂದ ಅಭ್ಯಾಸ ಮಾಡಲೇ ಬೇಕಾದ ಕನ್ನಡದ ಲೇಖಕ ಎನ್ನುವುದರಲ್ಲಿ ಅನುಮಾನವಿಲ್ಲ.

 ರಾಮಾನುಜನ್ ಅವರ ಒಟ್ಟೂ ಸಾಹಿತ್ಯದಲ್ಲಿ ಒಂದು ಸಂವೇದನಾಶೀಲ, ಕೊಂಚ vulnerable ಎನ್ನಿಸುವ ಗುಣವಿದೆ. ಈ ಮೊದಲೇ ಹೇಳಿದಂತೆ ಅದೇ ಅವರ ಸಾಮರ್ಥ್ಯ ಮತ್ತು ಅಸಾಮರ್ಥ್ಯ ಎರಡೂ ಆಗಿದೆ. ಸೃಜನಶೀಲವಾದ ಒಂದು ಜಾಗವನ್ನು ತಮಗಾಗಿ ಹುಡುಕಿಕೊಳ್ಳುವಾಗ ಒಬ್ಬೊಬ್ಬ ಬರಹಗಾರ/ರ್ತಿ ಒಂದೊಂದು ಬಗೆಯ ತಂತ್ರಗಳನ್ನು ಕಂಡುಕೊಳ್ಳುತ್ತಾನೆ/ಳೆ. ಯಾವ ಸಂದರ್ಭದಲ್ಲಾದರೂ ತಮ್ಮ ಸಾಮರ್ಥ್ಯವನ್ನು ಪಣಕ್ಕಿಟ್ಟು ಮುಖಾಮುಖಿಯಾಗಲು ಸಾಧ್ಯವೇ? ಎನ್ನುವುದು ರಾಮಾನುಜನ್ ಪಾಲಿಗೆ ಒಂದು ಹಿಂಜರಿಕೆಯ ಮಾತಷ್ಟೆ ಅಲ್ಲ ಅದೊಂದು ಮೂಲಭೂತವಾದ ಪ್ರಶ್ನೆ. ‘ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೆ ಆ ಅಂಥ ಪುರೋಷತ್ತಮನ ರೇಖೆ’ ಎಂಬ ಸಂಕಲ್ಪದಿಂದ ಹೊರಡುವುದಕ್ಕಿಂತ ಸಣ್ಣ ಪುಟ್ಟ ಸಂಗತಿಗಳಿಂದ ಆರಂಭಿಸುವುದು ಅವರ ಆಯ್ಕೆ. ಅಂತಹ ಕಿರಿದರಲ್ಲೆ ಕ್ಷಣ ಕ್ಷಣವನ್ನು ತೀವ್ರತೆಯಿಂದ ಅನುಭವಿಸಲು ತುಡಿತ ಹೊಂದುವುದು ಅವರ ಇಷ್ಟ. ಜೊತೆಗೆ ರಾಮಾನುಜನ್ ಅವರಲ್ಲಿ ಒಂದು ರೀತಿಯ ಸಣ್ಣಪುಟ್ಟ ನರಳಿಕೆಗಳು, ಭ್ರಮನಿರಸನಗಳು, ಅಪರಾಧೀ ಭಾವಗಳು ಇದ್ದು ಅವು ಅವರೊಳಗಿನ ‘ಪುರುಷೋತ್ತಮ’ನ ಒಟ್ಟು ಗ್ರಹಿಕೆ, ರೂಪುಗಳನ್ನೇ ಹೊಡೆದು ಹಾಕುವಂತಿದ್ದವು. ತುಟಿಯಂಚಿನಲ್ಲೇ ‘ಛೆ’ ಎನ್ನುವ ಸಣ್ಣ ವ್ಯಂಗ್ಯ, ವಿಷಾದಗಳನ್ನು ಹೊಮ್ಮಿಸಬಲ್ಲ ರೀತಿ ಅದು. ಭ್ರಮೆನಿರಸನವಾಗುವ ಕ್ರಿಯೆಯ ಜೊತೆಗೆ ನುಸುಳುವ ಸಣ್ಣ ವ್ಯಂಗ್ಯ ಕಾವ್ಯದ ಚೌಕಟ್ಟಿನಲ್ಲಿಯೇ ಸಾಧ್ಯವಾಗುತ್ತದೆ. ‘ನಲವತ್ತರ ನೆರಳು’ ಪದ್ಯದಲ್ಲಿ ‘ದೇವರು ಮೈಮೇಲೆ ಬಂದ ಆವಾಹನೆಯ ಯೋಗ’ಕ್ಕೆ ‘ಅವಸರದಲ್ಲೋಡಿ ಮಾಡಿದ ಕಕ್ಕಸೇ ನೈವೇದ್ಯ ಬಿಟ್ಟ ನೀರೇ ಧಾರೆ’ ಎನ್ನುವಲ್ಲಿಗೆ ಮಹಾ ಎನ್ನುವುದು ಅಸಹ್ಯವಾಗಿ ನಿರಸನಗೊಳ್ಳುವ ವ್ಯಂಗ್ಯವನ್ನು ಸಾಧಿಸುತ್ತಾರೆ. ‘ಅಣ್ಣಯ್ಯನ ಮಾನವಶಾಸ್ತ್ರ’ ಕತೆಯಲ್ಲಿ ಸ್ವಸಂಸ್ಕೃತಿಯೇ ನಿರಸನಗೊಳ್ಳುವುದು ವ್ಯಂಗ್ಯವೇ ಸರಿ. ಆದರೆ ವ್ಯಂಗ್ಯ ರಾಮಾನುಜನ್ ಅವರ ಪ್ರಧಾನ ಅಸ್ತ್ರ ಅಲ್ಲ; ಅದರ ಮೂಲಕ ಅವರು ಸ್ವಚ್ಛಸಮಾಜದ ಆದರ್ಶವನ್ನು ಕನಸಿದವರೂ ಅಲ್ಲ. ಹೀಗಾದುದರಿಂದಲೇ ರಾಮಾನುಜನ್ ಮೀಟುವ ಕೆಲವು ಮಂದಸ್ವರದ ಸ್ವರಗಳು ಶ್ರುತಿ ಮತ್ತು ಅಪಶ್ರುತಿಗಳೆರಡನ್ನೂ ಒಳಗೊಂಡ ಮೇಳವಾಗಿರುತ್ತದೆ.

ಹುಳ ಹುಪ್ಪಟೆ ಅಂತೀವಿ:
ಕೂದಲು ಕಾಡಿನ ಬುಡದಲ್ಲಿ ಬಿಡಾರ
ಪ್ರಪಂಚದ ತೊಡೆ ಸಂದಿನಲ್ಲಿ ಸಮಾರಾಧನೆ
ಎಂಟು ಗುಂಗಿನ ಅಟಾಮಿಕ್ ಮೌನದ ತುಂಬ
ಈ ಕಾಲದ ಗುಲ್ಲು

ಎನ್ನುವ ಮೂಲಕ ಕ್ಷುದ್ರತೆಯನ್ನು ಗಮನಿಸುತ್ತಲೇ ಕೊನೆಗೆ ಸ್ಫೋಟಗೊಳ್ಳುವುದು ಅಟಾಮಿಕ್ ರಿಯಾಕ್ಟರ್ ಕಳಗೇ ಇರುವ ಒಂದು ಸಾದಾ ಜೇನುಗೂಡು ಇಡೀ ಪೆಂಟಗಾನ್ ಮಹಾ ಸೈನ್ಯಾಧಿಕಾರಕ್ಕೆ ಹೆದರಿಸಿದ ಸತ್ಯವನ್ನು ಮುಂದಿಡುವ ಮೂಲಕ. ಹೀಗೆ ಮಹತ್ತಿನ ಎದುರಿರುವ ಪರ್ಯಾಯಗಳ ಬಗ್ಗೆ ಸಣ್ಣ ಸುಳಿವುಗಳನ್ನು ಕೊಡುವುದು ಅವರಿಗೆ ಪ್ರೀತಿ. ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಗುತ್ತಿ ಹೀಗೆ ಸೆಗಣಿ ಹುಳುವಿನ ಶೌರ್ಯ, ಸೋಲಿಗೆ ಹೆದರದ ಬದುಕಿನ ಎದೆಗಾರಿಕೆಯನ್ನು ಮಿಡುಕಿ ತೋರಿಸಿದ ದರ್ಶನಕ್ಕೆ ಸಮನಾದ ವಾಸ್ತವವಾದ ಇದು.

ಹೀಗೆ ಪರ್ಯಾಯಗಳನ್ನು ಸೃಷ್ಟಿಸಿಕೊಳ್ಳುವುದು ಶೂದ್ರಪ್ರಜ್ಞೆಯಲ್ಲಿ, ಸ್ತ್ರೀಪ್ರಜ್ಞೆಯಲ್ಲಿ ಸಾಮಾನ್ಯ. ಹೀಗೆ ಪರ್ಯಾಯಗಳ ಬಗೆಗೆ ಬರೆಯುವಾಗ ಒಂದು ಬಗೆಯ assertiveness ಪ್ರಶ್ನೆ ಅಮುಖ್ಯವೆನಿಸುವಂತೆ ಇರುವುದೇ ಇಲ್ಲಿನ ವಿಶೇಷ. ಇಂತಹ ಸಬಾಲ್ಟ್ರನ್ ಪರ್ಯಾಯಗಳು ಕೆದಕಿ ತೋರುವ ಸತ್ಯಗಳು ಒಂದು ಸಾಹಿತ್ಯವನ್ನು ಸ್ತ್ರೀಯಾತ್ಮಕಗೊಳಿಸಬಹುದೆಂಬ ಅರಿವು ರಾಮಾನುಜನ್ ಅವರಿಗೆ ಸಹ ಇತ್ತು. ಇದನ್ನು ಅವರು ಕ್ಲೀಷೆಯ ಸಂಗತಿಗಳಲ್ಲೇ ಹೇಳುವ ಪ್ರಯತ್ನ ಮಾಡಿದರು. ಇದಕ್ಕೆ ಉದಾಹರಣೆ ಎಂದರೆ ‘ಈ ಕೋಳಿಮರಿ ಹಿಕ್ಕೆಯಲಿ ಕಾಳು ಹುಡುಕುತ್ತ ಹುಡುಕುತ್ತ ಸತ್ಯ ಶಿವ ಸೌಂದರ್ಯ ಸಿಕ್ಕಿತು’ ಎನ್ನುವ ಪದ್ಯದ ಸಾಲು. ಇದು ಸಹಜವಾಗಿ ಏನು ಮೂಲಭೂತವಾದ ಸತ್ಯವನ್ನು ತಿಳಿಸಿಕೊಟ್ಟುಬಿಟ್ಟಿದೆ.

ರಾಮಾನುಜನ್ ಅವರ ಬರವಣಿಗೆಯ ಪ್ರವೃತ್ತಿಯ ಹಿಂದೆ ಅನೇಕ ತಾತ್ವಿಕ ಅಳವಡಿಕೆಗಳಿವೆ. ಗಂಡಾಗುವ ಕ್ರಿಯೆಯಲ್ಲಿ ಸೃಷ್ಟಿಯ ಅಹಂಕಾರ ಎದ್ದು ಕಾಣುತ್ತಿದ್ದರೆ, ಅದರಿಂದ ನಿರಸನಗೊಳ್ಳುವುದು ಹೆಣ್ಣಾಗುವ ಕ್ರಿಯೆಯಿಂದ ಸಾಧ್ಯ ಎನ್ನುವ ಆಲೋಚನಾಕ್ರಮ ಇಲ್ಲಿದೆ. ಇದೇನು ರಾಮಾನುಜನ್‍ಗೆ ಹೊಸದಲ್ಲ. ಭಾರತೀಯ ಭಕ್ತಿ ಪರಂಪರೆಗಳನ್ನು ಆಳವಾಗಿ ಅಭ್ಯಾಸ ಮಾಡಿದ ಅವರಿಗೆ ಹೆಣ್ಣಾಗಿ ಮಹತ್ತಿನೊಂದಿಗೆ ಆಡುವ ಭಕ್ತಿಯ ಸರಳ ಸನ್ನೆಗೋಲುಗಳ ಸಂಕೀರ್ಣತೆಯು ಹೊಳೆದಿರುವ ಸಾಧ್ಯತೆ ಇದೆ. ತಮ್ಮೊಳಗೆ ಇರುವ ಒಳ ಬಂಡಾಯಗಳನ್ನು ರಾಮಾನುಜನ್ ಪರಿಹರಿಸಿಕೊಳ್ಳುವುದು ಈಗಾಗಲೇ ಪ್ರಚಲಿತವಿರುವ ದಾರಿಗಳನ್ನು ಬಿಟ್ಟುಕೊಟ್ಟರು ಎನ್ನುವುದು ಅವರ ಸಾಹಿತ್ಯದ ಒಟ್ಟು ಧ್ವನಿ. ಅವರ ಕಾವ್ಯದಲ್ಲಿ ಸತತವಾಗಿ ಅವರು ತಮ್ಮನ್ನು ಗಂಡಸಾಗಿ ಕಲ್ಪಿಸಿಕೊಳ್ಳುವ ಸಾಧ್ಯತೆಗಳನ್ನು ಸಂಶಯದಿಂದ ಅವಲೋಕಿಸುತ್ತಾರೆ. ‘ಅಜ್ಞಾತಪರ್ವದಲ್ಲಿ ಬೃಹನ್ನಳೆ ಸೈರಂಧ್ರಿಯನ್ನು ದೂರದಿಂದ ನೋಡಿದಾಗ’ ಕವಿತೆಯಲ್ಲಿ ಹೆಣ್ಣಾದ ಅರ್ಜುನ ಬೃಹನ್ನಳೆಯ ವೇಷದಲ್ಲಿದ್ದಾನೆ. ಗಂಡಸಿನ ಕಾಮ, ಆಸೆಗಳೆಲ್ಲ ಕೆಲಸಕ್ಕೆ ಬಾರದೆ ‘ಮಾತೇ ಜ್ಯೋತಿರ್ಲಿಂಗ’ವಾಗಿರುವ ಪರಿ ಅಪಹಾಸ್ಯವಲ್ಲ ಬದಲಾಗಿ ಗಂಡಸಿನ ಭ್ರಮನಿರಸನ. ಅವರ ಕವಿತೆಗಳನ್ನೇ ಅವರು assertive ಆಗಿ ಹೇಳಿಕೊಳ್ಳುವ ಗಂಡಸಿನ ಭಾವದಲ್ಲಿ ನೋಡಲಾರರು. ಆದ್ದರಿಂದಲೇ ‘ಕುಸ್ತಿ ಸೋತ ಪಯಿಲ್ವಾನ ಕೆಮ್ಮಣ್ಣಲ್ಲಿ ದಿನವೆಲ್ಲ ತಲೆವರೆಗೂ ಹೂತಿಟ್ಟುಕೊಂಡು ಸಂಜೆ ಎದ್ದ ಹಾಗೆ ಕೆಲವು ಪದ್ಯ’ ಎಂದು ಸಣ್ಣದಾಗಿ ಅಂದುಬಿಡುವುದು ರಾಮಾನುಜನ್ ಕಾವ್ಯ.

ಹೆಣ್ಣಾಗುವುದು ಎಂದರೆ ರಾಮಾನುಜನ್‍ಗೆ ಅವಲೋಕಿಸಿ ನೋಡಲು ಇರುವ ಇನ್ನೊಂದು ಜಾಗ. ಅವರು ಹೆಣ್ಣಾಗುವ ಕ್ರಿಯೆಯನ್ನು ಪ್ರಜ್ಞಾಪೂರ್ವಕವಾಗಿ ಸ್ವೀಕರಿಸುತ್ತಾರೆ. ಅವರ ಕಾವ್ಯದ ಬಹುಭಾಗ ಹೆಣ್ಣಿನ ಸಂಬೋಧನೆಯಿಂದ ಕೂಡಿದೆ ಎನ್ನುವುದನ್ನು ಗಮನಿಸಬಹುದು. ಅವರು ಸ್ತ್ರೀ ಸಂಬೋಧನೆಯನ್ನು ಅಸಹಜವೆನ್ನುವಂತೆ ಬಳಸುತ್ತಾರೆ ಎಂದರೆ ಅವರು ಯಾರೊ ತಮ್ಮೊಳಗಿನ ಒಬ್ಬ ಸಖಿಯೊಡನೆ ಮಾತನಾಡುತ್ತಿದ್ದೇನೆಯೊ ಎಂಬಂತೆ. ಅವರು ತಮ್ಮಂತರಂಗಕ್ಕೆ ಮಾತನಾಡುವುದು ಸಹ ಒಳಗಿನ ಒಳಗಿನ ಮಾತೇ ಆದರೂ ಅದನ್ನು ಒಪ್ಪಿಸುತ್ತಿರುವುದು ಅಲ್ಲಿ ಅವರ ಹೆಣ್ಣುಭಾಗಕ್ಕೆ. ಬರುಬರುತ್ತಾ ಅವರಿಗೆ ಜಗತ್ತಿನ ಎಲ್ಲ ಪದಾರ್ಥಗಳೂ ಪ್ರಕೃತಿಯೂ ಹೆಣ್ಣಿನ ಭಾಗದಂತೆ ತೋರಿ ಅವರು ಜಗತ್ತಿನೊಡನೆ ಮಾತನಾಡುವುದೇ ಹೆಣ್ಣಿನ ಜೊತೆ ಎಂಬಂತೆ ಇರುತ್ತದೆ(‘ಕಣೆ’, ‘ಹೋಗೆ’ ಈ ತರದ ಸಂಬೋಧನೆಗಳು ಅವರಲ್ಲಿ ಹೇರಳವಾಗಿ ಸಿಗುತ್ತವೆ, ಗಮನಿಸಿದರೆ). ಸ್ತ್ರೀವಾಚಕ ಎನ್ನುವುದು ಹಳೆ ವ್ಯಾಕರಣದ ಪ್ರಕಾರ ಸ್ತ್ರೀಲಿಂಗಿಗಳನ್ನೇ ಒಳಗೊಳ್ಳಬೇಕಿಲ್ಲ; ಅಲ್ಲಿ ಚಂದ್ರ, ನದಿಗಳೂ ಸ್ತ್ರೀಲಿಂಗಗಳಾಗಿ ಅಲ್ಲಿ ಸ್ತ್ರೀವಾಚಕ ಸರಿಹೊಂದಿಸಬಹುದು. ‘ಅವಳು’, ‘ಇವಳು’, ಎನ್ನುವ ಸ್ತ್ರೀವಾಚಕಗಳನ್ನು ನಿರ್ದಿಷ್ಟವಾಗಿ ಲಿಂಗವಾಚಕವನ್ನಾಗಿ ಬಳಸದಿರುವುದೇ ರಾಮಾನುಜನ್ ಜಾಣತನ. ಅವರು ಅದನ್ನು ವಿಸ್ತರಿಸಿಕೊಳ್ಳುವ ರೀತಿ ನೋಡಿದರೆ ಆ ಸಂಬೋಧನೆಗಳು, ವಾಚಕಗಳು ಸರ್ವವ್ಯಾಪಿಯಾದುದನ್ನು ಸೂಚಿಸುತ್ತವೆ. ತಕ್ಷಣ ನೆನಪಾಗುವುದು ‘ಅಗ್ನಿಮಾಸ’ ಕವಿತೆಯ ಸಾಲುಗಳು:

ಲಂಬಾಣಿಯ ಕೈಬೆಳ್ಳಿ ಬಳೆ; ಬಿಸಿಲು,
ಸೂಜಿ.
‘ಒಳಗೆ ಬರಬೇಡ ಹೋಗೇ ಆಚೆ’
ಅಂದೆ

ಹಾಗೇ ‘ಸ್ವಿಟ್ಜರ್ಲೆಂಡಿನ ಮಂಜಿನಲ್ಲಿ ದೋಸೆ ಕಾಫಿ ನೆನೆಸಬಾರದು, ಅಮೆರಿಕನ್ ಮದುವೆ ಪಾರ್ಟಿಯಲ್ಲಿ ಎಲೆಡಿಕೆ ಅರಿಸಿನ ಕುಂಕುಮಕ್ಕೆ ಕಾಯ ಬಾರದು ಕಣೆ ಅಂತ ಎಷ್ಟು ಹೇಳಿದರೂ ಕೇಳುವುದಿಲ್ಲ ತಲಕಾಡಿನಲ್ಲಿ ಹುಟ್ಟಿ ಮಲೆನಾಡಿನಲ್ಲಿ ಮಡುವಾದ ಮನಸ್ಸು’ ಎಂದು ಮನಸ್ಸಿಗೆ ಸಂಬೋಧಿಸುವುದು ಹೆಣ್ಣಿನ ವಾಚಕದಲ್ಲೇ. ಇನ್ನು ‘ಇವಳು’ ಎಂದು ಬಣ್ಣಿಸುವ ಮರ ‘ಮುತ್ತಿಟ್ಟರೆ ಸಿಬಿರು, ಒದ್ದರೆ ಪುಷ್ಪವೃಷ್ಟಿ’ ಎನ್ನುವ ಸ್ತ್ರೀತ್ವವನ್ನು ಹೊಂದಿರುವ ಬಗ್ಗೆ ಅವರು ಬರೆಯತ್ತಾರೆ.

ಯಾಕಾಗಿ ರಾಮಾನುಜನ್ ಹೆಣ್ಣುತನವನ್ನು ಪ್ರಜ್ಞಾಪೂರ್ವಕವಾಗಿ ಧಾರಣೆ ಮಾಡುವುದಕ್ಕೆ ಬಯಸಿದ್ದರು? ಎಂದು ಕೇಳಿಕೊಂಡರೆ ಅದಕ್ಕೆ ಉತ್ತರ ಒಬ್ಬ ಕವಿಯಾಗಿ ರಾಮಾನುಜನ್ ಅವರಿಗೆ ಸೃಜನಶೀಲತೆಯ ವಿಸ್ತರಣೆ ಸ್ತ್ರೀತ್ವದ ನೆಲೆಯಲ್ಲಿರುತ್ತದೆ ಎಂದು ಭಾವಿಸಿದ್ದು ಎನ್ನಬಹುದು. ಸ್ತ್ರೀತ್ವವನ್ನು ಸೃಜನಶೀಲತೆಯ ಪ್ರತೀಕ ಎಂದು ಮಂಡಿಸಿದ ಇರಿಗಾರೆಯಂತಹ ಚಿಂತಕಿಯರು ಈ ಬಗೆಗೆ ಒಂದು ತತ್ವವನ್ನೇ ಮುಂದಿಡುತ್ತಾರೆ. ಆದುದರಿಂದ ಸ್ತ್ರೀ ಸೃಷ್ಟಿಶೀಲ ತಾವಿನ ಬಗೆಗೆ ರಾಮಾನುಜನ್ ಹೊಸದಾಗಿ ತಳೆದ ನಿಲುವೆಂದು ಹೇಳಲಾಗದು. ಆದರೆ ತಮ್ಮ ಸೃಷ್ಟಿಕ್ರಿಯೆ ಒಂದು ಸ್ತ್ರೀಯಾತ್ಮಕ ಚೈತನ್ಯ ಎಂದು ಗುರುತಿಸಿಕೊಂಡವರಲ್ಲಿ ರಾಮಾನುಜನ್ ವಿಶಿಷ್ಟವಾಗಿ ಕಾಣುತ್ತಾರೆ. ರಾಮಾನುಜನ್ ಶೋಧಿಸಿದ ಕಥೆಯೊಂದರಲ್ಲಿ ಹೆಣ್ಣು ತನ್ನನ್ನು ತಾನು ಹೂವಿನ ಮರವನ್ನಾಗಿ ಮಾಡಿಕೊಳ್ಳುತ್ತಾಳೆ(ಪುಷ್ಪವತಿ ಆಗುತ್ತಾಳೆ!). ಹೂವಾಗುವುದೆಂದರೆ ಫಲವಂತಿಕೆಯನ್ನು, ಸೃಷ್ಟಿಶೀಲತೆಯನ್ನು ಸಂಕೇತಿಸುವುದು. ಇದನ್ನು ಆಗಿಸುವ ಶಕ್ತಿ ಹೆಣ್ಣಿಗೆ ಇದೆ. ರಾಮಾನುಜನ್ ಅವರಿಗೆ ಈ ಬಗೆಯ ಹೆಣ್ಣು ಸೃಷ್ಟಿಶೀಲತೆಯ ಬಗೆಗೆ ಕುತೂಹಲವಿತ್ತು. ಆದುದರಿಂದ ಅವರಿಗೆ ಕಾವ್ಯದ ಸೃಷ್ಟಿಶೀಲತೆ ಮತ್ತು ಹೆಣ್ಣಿನ ಸೃಷ್ಟಿಶೀಲತೆಗಳು ಅಭಿನ್ನವಾಗಿಯೇ ಕಂಡಿರಬಹುದು.

ಹೆಣ್ಣಿನ ಕಥೆಗಳನ್ನು ಗಮನವಿಟ್ಟು ಕೇಳುವ ರಾಮಾನುಜನ್ ಅವರಿಗೆ ಬದುಕಿನ ಸಣ್ಣ ಸಣ್ಣ ಸತ್ಯಗಳು ಹೊಳೆಯುವುದು ಅವುಗಳಿಂದಲೇ. ಸ್ತ್ರೀ ಸಾಹಿತ್ಯ, ಸ್ತ್ರೀ ಸಂವೇದನೆ ಎನ್ನುವುದು ಒಂದು ‘ಗೆಟ್ಟೊ’ ಪ್ರಕಾರವಾಗಿ ರೂಢಿಯಾಗಿರುವಂತದ್ದು. ಇದನ್ನು ರಾಮಾನುಜನ್ ತಮ್ಮ ಮುಖ್ಯ ಅಭಿವ್ಯಕ್ತಿಯನ್ನಾಗಿ ಮಾಡಿಕೊಳ್ಳುತ್ತಾರೆ. ‘ಮತ್ತೊಬ್ಬನ ಆತ್ಮಚರಿತ್ರೆ’ಯಲ್ಲಿ ಅವರು ರಾಮಾನುಜನ್ ಹೆಸರಲ್ಲಿ ಶೋಧಿಸುವ ಕತೆಗಳೆಲ್ಲವೂ ಕಾಕತಾಳೀಯವಾಗಿ ಹೆಂಗಸರ ಕತೆಗಳೇ ಆಗಿವೆ. ಕಥಾನಾಯಕನ ಅತ್ತೆಯರು ಒಬ್ಬೊಬ್ಬರು ಒಂದೊಂದು ಬಗೆಯ ಜೀವನ ಮಾಡಿ, ಸಂಸಾರ ಚಕ್ರದಲ್ಲಿ ತಿರುಗಿ, ಹೆಣ್ಣಾಗಿ, ಗಂಡಾಗಿ ಜೀವನದ ಸುಳಿವುಗಳನ್ನು ಅವನಿಗೆ ಬಿಟ್ಟುಕೊಡುತ್ತಿದ್ದಾರೆ. ಮದರಾಸಿನ ಅತ್ತೆ, ಮತ್ತು ಅವರ ಅಮ್ಮ(ಅವರ ಸವತಿ) ಕಟ್ಟುವ ಬದುಕಿನ ಅನುಭವಗಳು ಗಂಡಸಿನ ಲೋಕಕ್ಕಿಂತ ವಿಭಿನ್ನವಾದವು. ಗಂಡಸಿನ ಲೋಕವಾದರೋ ಶಿಷ್ಟತೆಯ ಸೋಗಿನಲ್ಲಿ ಅನುಭವಗಳನ್ನು ಕಂಡುಕೊಳ್ಳುವ ಅಧಿಕೃತತೆಯ ಮುದ್ರೆ ಹೊತ್ತಂತೆ ಇರುವಂತದ್ದು. ರಾಮಾನುಜನ್ ಅಪ್ಪ ಜೀವಿಸುವ ಎರಡು ಜಗತ್ತುಗಳಲ್ಲಿ ಅವರ ಭಾಷೆಗಳು, ಸಂಸ್ಕೃತಿಗಳನ್ನು ಬದಲಾಯಿಸುತ್ತವೆ. ಈ ಹಿಪೊಕ್ರೆಸಿಯ ಹಿಂದೆ ಜಂಟಲ್‍ಮ್ಯಾನ್ ಆಗುವ ಆಶೆ ಇರುತ್ತದೆ ಎನ್ನುವುದನ್ನು ಭೇಧಿಸಲೆಂದೆ ರಾಮಾನುಜನ್ ಹೆಣ್ಣುಗಳ ಕತೆಗಳತ್ತ ಹೊರಳುತ್ತಾರೆ ಎನಿಸುತ್ತದೆ. ಅವರು ಅಡುಗೆ ಕೋಣೆಗಳಲ್ಲಿ, ಹಿತ್ತಿಲುಗಳಲ್ಲಿ, ಸಂಸಾರಗಳಲ್ಲಿ ಕಂಡುಕೊಳ್ಳುವ ಅನುಭವಗಳೇ ಇವರಿಗೆ ಒಳಬಾಳುಗಳ ಬಗೆಗೆ ಕುತೂಹಲ ಮೂಡಿಸಿದ್ದು; ಅವರ ಸೃಜನಶೀಲತೆ ಅರಳಿಸಿದ್ದು.

ರಾಮಾನುಜನ್ ಸಾಹಿತ್ಯ ಎಂದರೆ ಅದು ಕ್ಯಾಷ್ಯುಯಲ್ ಅನ್ನಿಸುವಂತೆ ಇರುತ್ತದೆ. ಅದಕ್ಕೆ ಅವರು ಬಳಸುವ ಸಣ್ಣ ಪುಟ್ಟ ದೈನಂದಿನ ವಿವರಗಳು ಎಂದು ಊಹಿಸಬಹುದು. ಇದನ್ನು ಅವರು ತಮ್ಮ ಮುಖ್ಯ ತಂತ್ರವನ್ನಾಗಿ ಬಳಸುತ್ತಾರೆ. ಅದರಿಂದ ಅವರು ಕಲ್ಲು ಹೊಡೆಯುವುದು ಅನೇಕ ಆಯಾಮಗಳಿಗೆ. ಒಂದು ಕಾವ್ಯಾತ್ಮಕವಾದ ತೀವ್ರತೆಯನ್ನು ಸಾಧಿಸುವ ದಿಕ್ಕಿನಲ್ಲಿ ಆಲೋಚಿಸುವುದು; ಇನ್ನೊಂದು ಪೊಲಿಟಿಕಲ್ ಆಗಿ ಮತ್ತೊಂದು, ಅವರ ಮುಖ್ಯ ಸಿದ್ಧಾಂತವನ್ನಾಗಿ ರೂಪಿಸಿಕೊಡುವ ಆಯಾಮವಾಗಿ. ಅವುಗಳನ್ನು ಒಂದೊಂದಾಗಿ ನೋಡೋಣ.

ರಾಮಾನುಜನ್ ಅವರು ಹೆಣ್ಣುತನಗಳನ್ನು ಕಾಣುವುದು ಸಣ್ಣಪುಟ್ಟ ವಿವರಗಳಲ್ಲಿ; ದೈನಿಕದ ಚಿಕ್ಕಪುಟ್ಟ ಸಂಗತಿಗಳಲ್ಲಿ. ಪ್ರಾಯಶ: ಈ ಅನುಭವಗಳು ಕಣ್ಣೆದುರಿನ ಸತ್ಯಗಳನ್ನು ಮತ್ತೆ ಮತ್ತೆ ಹೊಳೆಯಿಸಿಕೊಡುವಂತೆ ಇರುತ್ತವೆ ಎನ್ನುವುದು ಅವರ ನಂಬಿಕೆಯಾಗಿತ್ತು. ಅವರ ಸವಾಲು ಇದ್ದುದು ‘ಅನುದಿನದ ಅಂತರಗಂಗೆ’ಯನ್ನು ದಾಟುವುದು ಹೇಗೆ?ಕಣ್ಣೊಳಗಿನ ಕ್ಷಿತಿಜ ಮುಟ್ಟುವುದು ಹೇಗೆ?’-ಎನ್ನುವಲ್ಲಿ. ‘ಕಣ್ಣೆದುರಿಗೆ ಇರುವುದನ್ನು ನೋಡುವುದಕ್ಕೆ ಎರಡು ಕಣ್ಣು ಸಾಲದು ಸ್ವಾಮಿ, ಅದೃಷ್ಟ ಬೇಕು’ ಎನ್ನುವ ಸಾಲು ಇಲ್ಲಿ ನೆನಪಾಗುತ್ತದೆ. ಪ್ರತಿ ಕ್ಷಣವನ್ನು ತೀವ್ರವಾಗಿ ಬದುಕಲು ತವಕಿಸುವ ವ್ಯಾಮೋಹಿಗೆ ಅನುಕ್ಷಣದ ತೀವ್ರತೆಯನ್ನು ಹಿಡಿಯುವುದು ಸವಾಲಿನ ಕೆಲಸ. ಅದು ಒಬ್ಬ ಕವಿಗೂ ಕಷ್ಟದ ಕೆಲಸವೇ. ಈ ದೈನಿಕದ ವಿವರಗಳನ್ನು ಕೇಳಿಸಿಕೊಳ್ಳುವುದು, ಅದನ್ನು ಪದಗಳನ್ನಾಗಿಸುವುದು, ಅವುಗಳನ್ನು ಮತ್ತೆ ಪದ್ಯವಾಗಿಸುವುದು ಎಲ್ಲಕ್ಕು ಮೂಲ ಈ ‘ಅನುದಿನದ ಅಂತರಗಂಗೆ’ಯ ಒಳ ಪ್ರವಾಹ. ಆದುದರಿಂದ ಒಬ್ಬ ಕವಿಯಾಗಿ, ಸಂವೇದನಾಶೀಲ ವ್ಯಕ್ತಿಯಾಗಿ ಈ ನಿತ್ಯದ ಅಮುಖ್ಯವೆನಿಸುವ ಸಂಗತಿಗಳಲ್ಲಿ; ಅವು ಹೊರಡಿಸುವ ದನಿಗಳಲ್ಲಿ. ಹೆಣ್ಣಾಗುವುದೆಂದರೆ ಅದೊಂದು ನಿರಂತರ ಪ್ರಕ್ರಿಯೆಯ ಕ್ರಿಯೆ. ಅದನ್ನು ರೂಢಿಸಿಕೊಳ್ಳುವುದು ರಾಮಾನುಜನ್ ಅವರ ಸೃಜನಶೀಲತೆಗೆ ಸವಾಲಿನ ಕೆಲಸ ಆಗಿತ್ತು.

ಈ ರೀತಿ ‘ಅನುದಿನದ ಅಂತರಗಂಗೆ’ಯ ಒರತೆಗಳನ್ನು ರಾಮಾನುಜನ್ ಪೊಲಿಟಿಕಲ್ ಆಗಿ ಬಳಸುತ್ತಾರೆ. ಅವರಿಗೆ ನಿತ್ಯದ ಸಂಗತಿಗಳೇ ಪರ್ಯಾಯಗಳನ್ನು ಸೃಷ್ಟಿಸುವ ನಂಬಿಕೆ ಇದೆ. ಒಬ್ಬ ಗಾಂಧಿಗೆ ನಿತ್ಯ ಹೆಣ್ಣು ಬಳಸುವ ಮನೆಗೆಲಸದ ಪರಿಕರಗಳು ಸೇವೆಯ, ಸತ್ಯಾಗ್ರಹದ ವಸ್ತುಗಳಾಗುವಂತೆ ರಾಮಾನುಜನ್ ಅವರಂತಹ ಕವಿಗೆ ಯಾಕೆ ಪರ್ಯಾಯಗಳಾಗಬಾರದು? ಹೆಣ್ತನದ ಜಗತ್ತುಗಳ ಶೋಧ ರಾಮಾನುಜನ್ ಅವರಿಗೆ ಇನ್ನೊಂದು ಪರ್ಯಾಯ ಜಗತ್ತುಗಳ ಶೋಧವೇ ಆಗಿ ಉಳಿಯುತ್ತದೆ. ಅವರೊಳಗಿನ ಚಿಂತಕ ಮತ್ತು ಕವಿ ಇಬ್ಬರಿಗೂ ಈ ಬಗೆಯ alternatives ಬಗೆಗೆ ತುಡಿತ ಇತ್ತು. ರಾಮಾನುಜನ್ ತಮ್ಮ ಚೈತನ್ಯವನ್ನು ಕೇಂದ್ರೀಕರಿಸಿದ ಭಕ್ತರು ಮತ್ತು ಅನುಭಾವಿಗಳ ಅಧ್ಯಯನವು ರಾಮಾನುಜನ್ನರ ನಿತ್ಯದ ರೂಪಕಗಳ ಮಹತ್ವವನ್ನು ಉಜ್ವಲಗೊಳಿಸಿತು. ಭಕ್ತರು ಮತ್ತು ಅನುಭಾವಿಗಳು ಇನ್ನೊಂದು ಅತೀತವಾದ ಜಗತ್ತನ್ನು ವಿವರಿಸಲು ರೂಪಕಗಳನ್ನಾಗಿ ಬಳಸಿದ್ದು ಇದೇ ನಿತ್ಯದ ಬದುಕಿನ ಸಂಗತಿಗಳನ್ನು ಎನ್ನುವುದನ್ನು ಈ ಸಂದರ್ಭದಲ್ಲಿ ನೆನೆಯಬೇಕು.

ರಾಮಾನುಜನ್ ತಮ್ಮ ಹೆಣ್ಣು ಕೇಂದ್ರಿತ, ಹೆಣ್ನೆಲೆಗಳಿಂದ ಕಾವ್ಯ ಬಯಸಬಹುದಾದ ಒಂದು ಅಹಿಂಸಾತ್ಮಕ, ಜೀವಕಾರುಣ್ಯದ ಕಾವ್ಯನ್ಯಾಯವನ್ನಂತೂ ಸಾಧಿಸಿದರು. ಅಹಿಂಸಾತ್ಮಕ ನೆಲೆಯನ್ನು ಕಂಡುಕೊಳ್ಳುವುದಾದರೆ ಹೀಗೆ ತಮ್ಮ undertones ಗಳ ಮೂಲಕ ಹೇಳಬಹುದಾದ ಹೆಣ್ಣುದಾರಿಯನ್ನವರು ಹುಡುಕಿಕೊಂಡಿದ್ದರು. ಮಗಳು ಮಾಡಿದ ಲ್ಯಾಂಪ್ ಶೇಡ್ ಸೇರಿಕೊಳ್ಳುವುದು ನಾಜಿಗಳ ಕತೆಗೆ. ಅವರ ಹಾಗೆ ಜಾತಿ ನೋಡಿ, ಬೇಯಿಸಿ ಮನುಷ್ಯ ಧರ್ಮ ಸುಲಿದು ಲ್ಯಾಂಪ್ ಶೇಡ್ ಮಾಡಿದರೆ ಅದು ತೋರಿಸುವ ಬೆಳಕೇ ಬೇರೆ’ ಎನ್ನುವ ಪುಟ್ಟ ಒಗರು ಮಾತು ಮನುಷ್ಯತ್ವವನ್ನು ಹೀನಾಯವಾಗಿಸಿದ್ದರ ಬಗೆಗೆ ಸೂಚನೆ ನೀಡುತ್ತದೆ.

ರಾಮಾನುಜನ್ ಸಾಹಿತ್ಯದ ವಿನ್ಯಾಸದಲ್ಲಿ ದ್ವಿತ್ವಗಳು ಬರುವುದು ಒಂದು ವಿಶೇಷ. ಕಪ್ಪು-ಬಿಳುಪು; ಗಂಡು-ಹೆಣ್ಣು, ಪ್ರಾಣಿ-ಮನುಷ್ಯ ಹೀಗೆ ಹಲವಾರು ಬಗೆಯ ದ್ವಿತ್ವಗಳು ಅವರಲ್ಲಿ ಬರುತ್ತವೆ. ಆದರೆ ಈ ದ್ವಿತ್ವಗಳು ರಾಮಾನುಜನ್ ಅವರಲ್ಲಿ ವಿರುದ್ಧಾರ್ಥಕವಾದ ಪದಗಳಲ್ಲ. ಅವು ಒಂದಕ್ಕೊಂದು ವಿರೋಧ ವ್ಯಕ್ತ ಪಡಿಸುವಂತಿದ್ದರೂ ಒಳಗೆ ಅವು ಬೆಸೆದುಕೊಂಡಿರುತ್ತವೆ ಎನ್ನುವುದು ತಾತ್ವಿಕವಾಗಿ ನಿರೂಪಿತವಾಗಿರುವುದು. ರಾಮಾನುಜನ್ ಅವರು ಈ ಅಂಶವನ್ನು ತೀರಾ ಸಹಜವಾಗಿ ಎಂಬಂತೆ ತರುವುದು ವಿಶೇಷವಾಗಿದೆ(ಯಿನ್ ಮತ್ತು ಯಾಂಗ್ ಎನ್ನುವ ಚೀನೀ ತಾತ್ವಿಕತೆಯಲ್ಲಿ ಬರುವ ಕಪ್ಪು ಬಿಳುಪಿನ ದ್ವಿತ್ವಗಳು ಪರಸ್ಪರ ಇನ್ನೊಂದು ಅಂಶವನ್ನೇ ಹೊಂದಿಕೊಂಡೇ ಬರುತ್ತವೆ ಎನ್ನುವ ಅಂಶವನ್ನಿಲ್ಲಿ ನೆನಪು ಮಾಡಿಕೊಳ್ಳಬಹುದು). ಸಂಘರ್ಷ ಮತ್ತು ಹೊಂದಾಣಿಕೆಗಳು ಸಂಗಮಿಸುವ ಅಸ್ತಿತ್ವವು ಪೂರ್ಣತ್ವಕ್ಕಲ್ಲದ್ದಿದ್ದರೂ ಒಂದು ಸತ್ಯಕ್ಕೆ ವಿಭಿನ್ನ ಆಯಾಮಗಳನ್ನು ಒದಗಿಸುವುದನ್ನು ಕಂಡುಕೊಳ್ಳುವುದು ಇಲ್ಲಿ ಮುಖ್ಯವೆನಿಸುತ್ತದೆ. ಜಾನ್ ಡನ್ ತನ್ನ ಕವಿತೆ ‘ಕೆನನೈಸೇಶನ್’ನಲ್ಲಿ ಕಲ್ಪಿಸುವ ಹೆಣ್ಣು ಗಂಡಿನ ಪ್ರತಿಮೆ ರಾಮಾನುಜನ್ ಕಲ್ಪನೆ ಹತ್ತಿರವಿದೆ. ಅಲ್ಲಿ ಡನ್ ಪ್ರೇಮಿ ಮತ್ತು ಪ್ರೇಯಸಿಯರನ್ನು ಗಿಡುಗ ಮತ್ತು ಪಾರಿವಾಳಗಳನ್ನಾಗಿ ಮಾಡುತ್ತಾನೆ. ಇಬ್ಬರಲ್ಲಿ ಒಬ್ಬರು ಗಿಡುಗವಾದಾಗ ಇನ್ನೊಬ್ಬರು ಪಾರಿವಾಳವಾಗುತ್ತಾರೆ. ಅಲ್ಲಿ ಗಿಡುಗ ಮತ್ತು ಪಾರಿವಾಳಗಳು ಎಂದೊಡನೆ ತತಕ್ಷಣ ಮೂಡುವ ಅಭಿಪ್ರಾಯವೆಂದರೆ ಗಂಡು ತನ್ನ ಸ್ವಭಾವಕ್ಕನುಗುಣವಾಗಿ ಗಿಡುಗ, ಹೆಣ್ಣು ಮೃದುವಾದ ಪಾರಿವಾಳ ಎಂದು. ಆದರೆ ಕವಿ ಮುಂದಿನ ಸಾಲಿನಲ್ಲೇ ಅವಳು ಗಿಡುಗವಾದರೆ ನಾನು ಪಾರಿವಾಳ ಎಂದು ಬಿಡುತ್ತಾನೆ. ಅಂದರೆ ಹೆಣ್ಣು ಗಂಡು ಅಸ್ತಿತ್ವಗಳನ್ನು ಇಲ್ಲಿ ಪರಸ್ಪರ ಕಲ್ಪಿಸುವುದೇ ವಿರುದ್ಧಾರ್ಥಕಗಳ ಸೂಚಿಗಳನ್ನಾಗಿ ಅಲ್ಲ; ಬದಲಾಗಿ ಅವರ ಜಾಗಗಳು ಬದಲಾದರೆ ಸ್ವಭಾವಗಳು ಸಾಮ್ಯತೆ ಮತ್ತು ಭಿನ್ನತೆಗಳನ್ನು ಸೂಚಿಸುವಂತದ್ದಾಗಿರುತ್ತವೆ. ರಾಮಾನುಜನ್ ಅವರಲ್ಲಿ ಈ ‘ಆಟ’ ಇದ್ದೇ ಇದೆ. ಅವರು ಗಂಡನ್ನು ಹೆಣ್ಣಾಗಿ ಹೆಣ್ಣನ್ನು ಗಂಡಾಗಿ ಕಲ್ಪಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಆಸಕ್ತರು. ಗಂಡು ಹೆಣ್ಣುಗಳ ಪಾತ್ರಗಳು ನಿರಂತರವಾಗಿ ಅದಲು ಬದಲಾಗುತ್ತಿರುತ್ತದೆ.

ಯಾರ ಅನುಭವಗಳನ್ನು ಯಾರು ಒಳಗು ಮಾಡಿಕೊಂಡು ಅನುಭವಿಸುತ್ತಾರೊ ಎನ್ನುವುದೇ ರಾಮಾನುಜನ್ ಅವರಿಗೆ ಕುತೂಹಲದ ಸಂಗತಿ. ಏಕೆಂದರೆ ಅನುಭವ ಎನ್ನುವುದು ಸ್ಥಿರವಾಗಿ ಒಬ್ಬರದೇ ಆಗಿದೆ ಎನ್ನುವುದು ಸದಾ ಸಂಶಯಕ್ಕೆ ಈಡಾಗುವ ಸಂಗತಿ. ‘ಮತ್ತೊಬ್ಬನ ಆತ್ಮಚರಿತ್ರೆ’ಯಲ್ಲಿ ಅವರ ಕಥಾನಾಯಕ ಮಾಡುವುದು ಅದೇ. ರಾಮಾನುಜನ್ ಅವರನ್ನು ಸ್ವಲ್ಪ ವ್ಯತ್ಯಯದ ರಾಮಾನುಜನ್ ಭೇಟಿಯಾಗಿ ನಡೆಸುವ ಅನುಭವ ಮಂಥನದಲ್ಲಿ ಯಾರು ನಿಜವಾದ ರಾಮಾನುಜನ್? ಒಬ್ಬ ಬಿಂಬ; ಇನ್ನೊಬ್ಬ ಪ್ರತಿಬಿಂಬವೇ? ಅಥವಾ ಇಬ್ಬರೂ ರಾಮಾನುಜನ್ನುಗಳು ಬೇರೆ ಬೇರೆ ಜಾಗಗಳಲ್ಲಿ ನಿಂತು ನೋಡಿಕೊಳ್ಳುತ್ತಿದ್ದಾರೆಯೇ? ಆತ್ಮಕತೆ ಎಂಬ ಪ್ರಕಾರದ ರೋಚಕ ಅಂಶವನ್ನು ಉಪಯೋಗಿಸಿಕೊಂಡು ಮಾಡುವ ತಂತ್ರವು ಅವರ ಸಾಹಿತ್ಯದ ಬಹುಮುಖ್ಯ ತಂತ್ರವಾಗಿದೆ. ಇದರಿಂದ ಅವರಲ್ಲಿ ಗಂಡು ಹೆಣ್ಣುಗಳು ಸ್ವತ: ಎದುರಾಬದಿರು ನಿಂತಾಗ ಅವರು ವಿರುದ್ಧಾರ್ಥಕವೂ ಸಮಾನಾರ್ಥಕವೂ ಆಗುವುದು ಹೀಗೆಯೇ. ಇದನ್ನು ಅವರೇ ಕರೆದಂತೆ ‘ಕ್ಯಾನಿಬಾಲಿಸಂ’; ಒಬ್ಬರು ಮತ್ತೊಬ್ಬರನ್ನು ತಿನ್ನುವುದು!. ಅಥವಾ ಯಾರು ಯಾರಾಗಿ ಪರಿವರ್ತನೆಯಾಗುತ್ತಾರೊ ಯಾರು ಬಲ್ಲರು! ಎಂಬ ಆಶ್ಚರ್ಯ. ಇದಕ್ಕೆ ಅವರು ಉದಾಹರಣೆಯಾಗಿ ಕೊಡುವ ಪದ್ಯ ದೇವರ ದಾಸಿಮಯ್ಯನ ‘ ಮೊಲೆ ಮುಡಿ ಬಂದರೆ ಹೆಣ್ಣೆಂಬರು/ನಡುವೆ ಸುಳಿವಾತ್ಮ ಗಂಡೂ ಅಲ್ಲ/ಹೆಣ್ಣೂ ಅಲ್ಲ’ ಎನ್ನುವುದು. ಪರಸ್ಪರ ಹೊಂದಿಕೊಂಡು ಬಾಳಿದ ದಂಪತಿಗಳಲ್ಲಿ ಯಾರು ಯಾರು ಎನ್ನುವುದನ್ನು ಗುರುತಿಸುವುದೇ ಕಷ್ಟ ಎಂದು ಪ್ರೊಫೆಸರ್ ಸುಬ್ಬರಾಮಯ್ಯ ದಂಪತಿಗಳನ್ನು ಉದಾಹರಿಸುವಾಗ, ಹೆಂಡತಿಯ ಅನುಭವ ಗಂಡ ತನ್ನದಾಗಿ ಹೇಳಿಕೊಳ್ಳುವಾಗ ಅವರಿಗೆ ತಕ್ಷಣ ನೆನಪಾಗುವುದು ಕವಿ ಯೇಟ್ಸ್‍ನ ಅನುಭವ: ಅವನಿಗೆ ಅವನ ನಿದ್ದೆಯಲ್ಲಿ ಬಿದ್ದ ಕನಸು ಅವನ ಹೆಂಡತಿಯಲ್ಲಿ ಪೂರ್ಣವಾಗುತ್ತಿತ್ತಂತೆ. ಈ ಸಂಗಾತಿತನದಲ್ಲಿ ಕೊಡು ಕೊಳ್ಳುವಿಕೆ, ಪರಸ್ಪರದ ತಾದಾತ್ಮ್ಯ ಒಳಗಿನ self ಅನ್ನು ಕೊಂದುಕೊಳ್ಳುವುದೇ ಅಥವಾ ವಿಸ್ತರಿಸಿಕೊಳ್ಳುವುದೇ ಎನ್ನುವುದೇ ಶೋಧದ ನೆಲೆಯಾಗುತ್ತದೆ.

ರಾಮಾನುಜನ್ ಒಟ್ಟಾರೆ ಗಂಡು ಹೆಣ್ಣುಗಳ ದ್ವಿತ್ವದಲ್ಲಿ ಸಾಧಿಸುವುದಾದರೂ ಏನನ್ನು? ಎಂದು ಪ್ರಶ್ನಿಸಿಕೊಂಡರೆ, ಅಲ್ಲಿ ಅವರು ಹುಡುಕಿಕೊಳ್ಳುವುದು ಒಂದು ನಿರ್ಲಿಂಗತ್ವದ ಜಾಗ ಎನಿಸುತ್ತದೆ. ಅಂದರೆ ಒಂದು ಜೆಂಡರ್ ಶೂನ್ಯ ಸ್ಥಿತಿಯತ್ತ ಅವರ ಸಂವೇದನೆ ಚಲಿಸುತ್ತಿತ್ತು ಎನ್ನಬಹುದು. ರಾಮಾನುಜನ್ ಹೆಂಡತಿ ಮೋಲಿ ಅವರು ರಾಮಾನುಜನ್ನರ ಪ್ರತಿಭೆಯಲ್ಲಿ ಈ ಅಂಶವನ್ನು ಗ್ರಹಿಸಿದ್ದಾರೆ; ಅವರ ಪ್ರಕಾರ ಪ್ಯಾರಾಡಾಕ್ಸ್‍ಗಳ ಬಳಕೆಗೆ ಅನೇಕ ಉಪಯೋಗಗಳಿವೆ: ಸೊನ್ನೆ ಎನ್ನುವುದು ಒಂದು ಪೂರ್ಣತೆ ಮತ್ತು ಒಂದು ಶೂನ್ಯ, ಕಾಣುವ ಜಗತ್ತು ಮತ್ತು ಅಗೋಚರ ಜಗತ್ತು ಎರಡೂ ಆಗಿರುತ್ತದೆ. ‘ರೋಮಿನ ಮಾರ್ಕೆಟ್ಟಿನಲ್ಲಿ’ ಪದ್ಯದಲ್ಲಿ ನಿಲುಗನ್ನಡಿಯ ಸತ್ಯದ ಎದುರು ಬಿಂಬ ಪ್ರತಿಬಿಂಬ ಎರಡೂ ಲೀನವಾಗಿಬಿಡುತ್ತವೆ. ಹೆಣ್ಣು ಗಂಡಾಗಿ, ಗಂಡು ಹೆಣ್ಣಾಗಿ, ಅವರು ಧರಿಸುವ ಬಟ್ಟೆಗಳು ಜೆಂಡರ್ ಅನ್ನು ಗುರುತಿಸಿಕೊಟ್ಟು ಅವರನ್ನು ಹೆಣ್ಣು ಗಂಡೆಂದು ಭೇಧಿಸಿ ದೇಶಕಾಲಗಳನ್ನು ನೆನಪಿಸುತ್ತವೆ. ಈ ಪದ್ಯದ ಕೆಲ ಸಾಲುಗಳು ಹೀಗಿವೆ:

ನನ್ನ ಅವಳ
ಮುಖ
ಮುಖ-ನೋಡಿ ನಾಚಿ ನಕ್ಕು
ಮಿಲಿಯ/ದಲ್ಲೆರಡಾಗಿ
ಬೆತ್ತಲೆಗೆ
ಸೂಟು/ಬೂಟು
ಸೀರೆ/ಕುಪ್ಪಸ
ಹುಟ್ಟಿ
ಮಂಜು
ಮಳೆ
ಆಯ್ತು.( ರೋಮಿನ ಮಾರ್ಕೆಟ್ಟಿನಲ್ಲಿ)

ಇದೇ ತರ ಸಾಗುವ ‘ನಲವತ್ತರ ನೆರಳು’ ಕವಿತೆಯನ್ನೂ ಇದೇ ಸಂದರ್ಭದಲ್ಲಿ ಗಮನಿಸಬಹುದು. ಗಂಡು ಹೆಣ್ಣುಗಳ ಸಂಬಂಧ ಕ್ಲೀಷೆಯಾಗುವ ಸಂದರ್ಭಗಳು ಸಾಮಾಜಿಕ ನಿಶ್ಚಿತತೆಗಳಲ್ಲಿ ಸಂಭವಿಸುವಂತವು. ಆದರೆ ತಾತ್ವಿಕವಾಗಿ ಜೆಂಡರ್ ಅನ್ನು ಒಡೆದುಕೊಳ್ಳುವುದೇ ಒಂದು ಪ್ರಕ್ರಿಯಾ ತತ್ವದ ಬಹುಮುಖ್ಯ ಭಾಗ. ಇದರಿಂದ ಸಾಂಸ್ಥಿಕವಾಗಿ ಸಾಧಿತವಾದ ಗಂಡ-ಹೆಂಡತಿ, ಪ್ರೇಮಿ-ಪ್ರೇಮಿಕೆ ಮುಂತಾದ ಇತ್ಯಾದಿ ಅಸ್ತಿತ್ವಗಳು ಅವರ ಸಾಹಿತ್ಯದಲ್ಲಿ ಸಣ್ಣದಾಗಿ ಕಂಪಿಸುತ್ತವೆ.

ಇಲ್ಲಿಂದಾಚೆಗೆ ಜೆಂಡರ್ ಎನ್ನುವುದು ಒಂದು ಶೂನ್ಯತೆಯ ಬಿಂದುವನ್ನು ತಲುಪಿದಂತೆ. ಒಂದು ಅನುಭವ ಎನ್ನುವುದು ದೇಹದ ಮೂಲಕ ಬರುವಂತದ್ದು. ಇದನ್ನು ಪರಿಭಾವಿಸಿ ಸಂವೇದನೆಗಳು ಹುಟ್ಟಿಕೊಳ್ಳುತ್ತವೆ. ಆದರೆ ಈ ಸಂವೇದನೆಗಳು ದೇಹದೊಳಗೆ ಇರುವ ಗಂಡು ಹೆಣ್ಣುಗಳೆಂಬ ಲಿಂಗತ್ವಗಳನ್ನು ಒಟ್ಟುಗೂಡಿಸಿಕೊಂಡಿರುತ್ತವೆ ಎನ್ನುವುದನ್ನು ಗಮನಿಸಬೇಕು. ಅಂದರೆ ಲಿಂಗತ್ವವೆನ್ನುವುದು ವಿಸ್ತøತ ರೂಪದಲ್ಲಿ ಈ ಹಿಂದೆ ಚರ್ಚಿಸಿದಂತೆ ಗಂಡು-ಹೆಣ್ಣು; ಹೆಣ್ಣು-ಗಂಡು(ಯಿನ್-ಯಾಂಗ್) ರೂಪಗಳಲ್ಲಿ ಒಂದರೊಳಗೆ ಇನ್ನೊಂದನ್ನು ಹೊಂದಿರುವ ವಾಸ್ತವಗಳಾಗುತ್ತವೆ. ಇದೊಂದು ಪ್ರಕ್ರಿಯಾತ್ಮಕ ಸಂಗತಿಯೂ ಆಗಿದೆ. ಇಲ್ಲಿ ಅನುಭವಗಳು, ಸಂವೇದನೆಗಳು ಅನೇಕತ್ವವನ್ನು ಹೊಂದುವುದು ಸಾಧ್ಯವಿದೆ ಎಂದು ರಾಮಾನುಜನ್ ನಂಬುಗೆ ಹೇಳುತ್ತದೆ. ಆದರಿಂದ್ದ ಅವರಲ್ಲಿ ಜೆಂಡರ್ ಎನ್ನುವುದು ಸಾಮಾಜಿಕ ರಚನೆ ಮಾತ್ರವಲ್ಲ; ಅವು ವ್ಯಕ್ತಿ ವಿಶಿಷ್ಟಗಳು. ಅವುಗಳು ಹೊಂದಿದ ಸಂವೇದನೆಗಳೊಳಗೆ ಪರಕಾಯ ಪ್ರವೇಶ ಸಾಧ್ಯವಿದೆ. ಹೀಗೆಂದಾಗ ಅವರು ವಹಿಸುವ ಸ್ವಾತಂತ್ರ್ಯವು ಅಸೀಮವಾದುದಾಗಿರುತ್ತದೆ. ಸ್ತ್ರೀವಾದವನ್ನು ಸ್ತ್ರೀತ್ವದ ವಿಶಿಷ್ಟತೆಯಿಂದ ಗುರುತಿಸುವ ಸ್ತ್ರೀವಾದಿಗಳ ಪ್ರಕಾರ ಸ್ತ್ರೀತ್ವ ಎನ್ನುವುದು ಪುರುಷತ್ವದ ವಿರುದ್ಧಾರ್ಥಕವಲ್ಲ. ವಾಸ್ತವವಾಗಿ ವೈರುಧ್ಯಗಳನ್ನು ಸೃಷ್ಟಿಸಿಕೊಳ್ಳುವುದು ಗಂಡು ತರ್ಕ; ಅದು ಒಂದು ಸಂಗತಿಯನ್ನು ಛೇದಿಸಿ, ವರ್ಗೀಕರಿಸಿ, ಶ್ರೇಣೀಕರಣಗಳನ್ನು ಮಾಡಿಕೊಳ್ಳುತ್ತದೆ ಎನ್ನುತ್ತದೆ.

ಬದಲಾಯಿಸಿಕೊಳ್ಳುವ ಆಟದಲ್ಲಿ ಪರಿಧಿಗಳನ್ನು ಕಳಚಿ ಮುನ್ನುಗ್ಗುವಾಗ ಲಿಂಗತ್ವವನ್ನು ಕಳಚಿಕೊಳ್ಳುತ್ತಾ ಹೋಗುವುದೇ ರಾಮಾನುಜನ್ನರಿಗೆ ಮುಖ್ಯವೆನಿಸುತ್ತದೆ. ಹೆಣ್ಣುಗಂಡುಗಳ ಸಂಬಂಧಗಳು ಕ್ಲೀಷೆಯಾಗುವ ಸಂದರ್ಭಗಳನ್ನು ಬಹಳ ಸೂಕ್ಷ್ಮವಾಗಿ ನೋಡುವ ಅವರಿಗೆ ಅವು ಬೆಸೆದುಕೊಳ್ಳುವ ಪರಿಯೂ ಸಾಧ್ಯವಿದೆ ಎನ್ನುವುದನ್ನು ತಾತ್ವಿಕವಾಗಿ ನಿಜವೆನಿಸಿದೆ. ‘ಮತ್ತೊಬ್ಬನ ಆತ್ಮಚರಿತ್ರೆ’ ಯಲ್ಲಿ ಬರುವ ಸಯಾಮಿ ಅವಳಿಗಳು ದೇಹವೊಂದೇ ಆಗಿ ಪರಿಭಾವಿಸುವ ಸಂವೇದನೆಗಳು ಭಿನ್ನವಾಗಿ ಬದುಕುವ ಆಟ ಒಂದೆಡೆ; ಇನ್ನೊಂದೆಡೆ, ಭಿನ್ನ ದೇಹಿಗಳಾಗಿ, ಭಿನ್ನ ಲಿಂಗಿಗಳಾಗಿ ಇರುವ ಗಂಡ ಹೆಂಡಿರು ತಮ್ಮ ಪರಸ್ಪರತೆಯಲ್ಲಿ ಒಂದೇ ಆಗಿ ಬದಲಾಗಿ ಬಿಡುವ ಪ್ರಕ್ರಿಯೆ. ಈ ಎರಡೂ ಅನುಭವಗಳೂ ‘ಏಕತೆ’ ಎನ್ನುವುದರ ವ್ಯಾಖ್ಯಾನಗಳೇ. ಇಂತಲ್ಲಿ ಲಿಂಗತ್ವದ ವ್ಯಾಖ್ಯಾನವೂ ಬದಲಾಗುತ್ತದೆ. ‘ಸೋಫಿಯಾ ಚರ್ಚಿಗೆ ನಲವತ್ತು ಕಿಟಕಿ ಪದ್ಯದಲ್ಲಿ ಅವರು ತಾಳುವ ನಿಲುವು: ‘ಒಳಗೆ ಬಂದ/ ಗಂಡು ಹೆಣ್ಣು ಯಾರಿಗೂ ಏಳು ಬಣ್ಣದ ಕಣ್ಣು’.

ಹೆಣ್ಣು ದೃಷ್ಟಿಕೋನಗಳನ್ನು ತಮ್ಮ ಸಂಶೋಧನೆಯಲ್ಲಿ ಬೆಳೆಸುವ ಮೂಲಕ ರಾಮಾನುಜನ್ ಸಂಶೋಧನೆಯಲ್ಲಿ ಮೇಲುಗೈ ಸಾಧಿಸಿರುವ ಪುರುಷತ್ವದ ನೋಟಕ್ರಮಗಳನ್ನು ನಿರಚನೆ ಮಾಡಲು ಪ್ರೇರಣೆ ನೀಡಿದರು. ರಾಮಾನುಜನ್ ಸಂಶೋಧನಾ ಕ್ಷೇತ್ರ ಜನಪದ ಮತ್ತು ಭಾಷಾಧ್ಯಯನಗಳಾಗಿದ್ದವು. ಇಲ್ಲಿ ಚರ್ಚಿಸಬಹುದಾದ ಅವರ ಎರಡು ಮುಖ್ಯ ಶೋಧನೆಗಳೆಂದರೆ ಭಕ್ತಿ ಪಂಥವು ಸ್ತ್ರೀತ್ವವನ್ನು ಹೊಂದುವುದರಿಂದ ವೈದಿಕ ಪರಂಪರೆಗೆ ಹೇಗೆ ಮುಖಾಮುಖಿಯಾಯಿತು ಎನ್ನುವುದು ಹಾಗು ಜನಪದದಲ್ಲಿ ಸ್ತ್ರೀ ನಿರೂಪಣೆಗಳು ಕಥನಗಳನ್ನು ಹೇಗೆ ಜೀವಕಾರುಣ್ಯದ ನೆಲೆಯಲ್ಲಿ ಪುನರ್ರಚನೆ ಮಾಡಿಕೊಳ್ಳುತ್ತವೆ ಎನ್ನುವುದು. ಇವನ್ನು ಒಂದೊಂದಾಗಿ ವಿವರಿಸಬಹುದು.

ಭಕ್ತಿಪಂಥದ ಲಕ್ಷಣಗಳು ಹಾಗು ಭಕ್ತೆಯರ ಬಗೆಗೆ ಬರೆದ ಲೇಖನಗಳು(ಆನ್ ವಿಮೆನ್ ಸೇಂಟ್ಸ್, ಇತ್ಯಾದಿ ಲೇಖನಗಳು) ಸ್ತ್ರೀತ್ವವನ್ನು ವಿವೇಚಿಸುತ್ತವೆ. ರಾಮಾನುಜನ್ ಸ್ತ್ರೀತ್ವವನ್ನು ವಿವರಿಸಿಕೊಳ್ಳುವುದೇ ಇಲ್ಲಿ ಪರ್ಯಾಯ ಮಾದರಿಯಾಗಿ. ಅವರ ಪ್ರಕಾರ ಭಕ್ತಿ ಎನ್ನುವುದೇ ಒಂದು ಸ್ತ್ರೀಲಕ್ಷಣವುಳ್ಳ ಸಂಗತಿ. ಏಕೆಂದರೆ ವೈದಿಕ ಸಂಪ್ರದಾಯಾಚರಣೆಗಳು ಭಾಷಿಕ ದೃಷ್ಟಿಯಿಂದ ಹಾಗು ಸಮುದಾಯದ ಸಾಂಪ್ರದಾಯಿಕ ದೃಷ್ಟಿಯಿಂದ ‘ಪುರುಷ’ ಲಕ್ಷಣಗಳನ್ನು ಹೊಂದಿದಂತವು. ಭಕ್ತನಾಗುವ ಪುರುಷ ಹೆಣ್ಣಾಗ ಬಯಸುವುದು ಈ ಭಕ್ತಿಪರಂಪರೆಯಲ್ಲಿ ಸಾಮಾನ್ಯವಾಗಿದೆ. ಹೆಣ್ಣು ಭಕ್ತೆಯಾದಾಗ ಸ್ತ್ರೀತ್ವ ಎನ್ನುವುದು ಅವಳಿಗೆ ಸಹಜವಾಗಿ ಜೈವಿಕವಾಗಿ ಒದಗಿರುತ್ತದೆ. ಆದರೆ ಗಂಡು ಹೆಣ್ಣಿನ ಸಂವೇದನೆಯನ್ನು ಕಲಿತು ಅನುಭವಿಸಬೇಕಾಗುತ್ತದೆ. ಪರಮಾತ್ಮ/ಇಷ್ಟದೈವವನ್ನು ಒಲಿಸಿಕೊಳ್ಳುವಾಗ ಹೆಣ್ಣಾಗಿ ತೀವ್ರ ವ್ಯಾಮೋಹಿಯಾಗಿ, ಗಂಡು ದೇವರನ್ನು ಕಾಡುತ್ತಾ, ವಿರಹದ ಸುಖ ಅನುಭವಿಸುತ್ತಾ ಇರುವುದನ್ನು ಕಲಿಯಬೇಕಾಗುತ್ತದೆ. ಅಲ್ಲದೆ ಪರಮಾತ್ಮನ ಮುಂದೆ ಎಲ್ಲ ಭಕ್ತರೂ ಹೆಣ್ಣುಗಳೇ. ಹೆಣ್ಣು ಭಕ್ತೆಯಾದರೊ ಗಂಡಾಗಲು ಪ್ರಯತ್ನ ಪಡದೆ ತನ್ನ ಹೆಣ್ತನವನ್ನೇ ಒಂದು ಭಕ್ತಿಯ ಸತ್ವವನ್ನಾಗಿ ಮಾಡಿಕೊಳ್ಳುತ್ತಾಳೆ. ಇವರು ತೋರುವ ವಿದ್ರೋಹಾತ್ಮಕ ಲಕ್ಷಣಗಳು ಇವರನ್ನು ಸಾಂಪ್ರದಾಯಿಕ ಸತಿ ಮಾದರಿಗಳಾದ ಸೀತೆ, ಸಾವಿತ್ರಿಯರಿಗಿಂತ ವಿಭಿನ್ನವಾಗಿಸುತ್ತವೆ ಎನ್ನುವುದನ್ನು ರಾಮಾನುಜನ್ ಗುರುತಿಸುತ್ತಾರೆ. ಅವರ ಅಧ್ಯಯನದಲ್ಲಿ ಭಾರತದಾದ್ಯಂತ ಇರುವ ಹೆಣ್ಣು ಭಕ್ತೆಯರನ್ನೂ ಅನುಭಾವಿಗಳನ್ನೂ ವಿವರವಾಗಿ ಚರ್ಚಿಸುತ್ತಾರೆ. ಈ ಸಂಶೋಧನೆಗಳಲ್ಲಿ ರಾಮಾನುಜನ್ ಅನುಸರಿಸುವುದು ಸಮಾಜೊ –ಆಚಿಥ್ರೊಪಾಲೊಜಿಕಲ್ ವಿಧಾನವನ್ನು. ಇದು ಅವರಿಗೆ ವಿಸ್ತøತವಾದ ಸಾಂಸ್ಕøತಿಕ ಚೌಕಟ್ಟನ್ನು ಒದಗಿಸಿಕೊಡುವಂತೆಯೇ ಅವರ ತಾತ್ವಿಕತೆಗೆ ವೈಜ್ಞಾನಿಕ ಆಯಾಮವನ್ನೂ ನೀಡುತ್ತದೆ.

ರಾಮಾನುಜನ್ ಅವರ ಜನಪದ ಅಧ್ಯಯನವು ಅವರಿಗೆ ಖಚಿತವಾದ ಸ್ತ್ರೀನೋಟಕ್ರಮಗಳನ್ನು ತಂದುಕೊಟ್ಟಿತು. ಮೌಖಿಕ ಪರಂಪರೆಯಲ್ಲಿ ಕ್ರಿಯಾಶೀಲವಾಗಿರುವ ಹೆಣ್ಣುಧಾರೆಯು ತನ್ನದೇ ಜಾನ್ರಾ(genre) ಗಳನ್ನು ಸೃಷ್ಟಿಸಿಕೊಳ್ಳುವುದು ಮತ್ತು ಅದಕ್ಕೆ ತಕ್ಕಂತಹ ನಿರೂಪಣಾ ವಿಧಾನಗಳನ್ನು ರೂಪಿಸಿಕೊಳ್ಳುವುದು ಮುಂತಾದ ಕ್ರಿಯೆಗಳನ್ನು ಅವರು ವಿಶಿಷ್ಟವೆಂದು ಗುರುತಿಸುತ್ತಾರೆ. ಹೆಣ್ಣು ನಿರೂಪಣಾ ವಿಧಾನಗಳಲ್ಲಿ ಕಾಣುವ ಜೀವಪರತೆಯನ್ನು ಅವರು ತಮ್ಮ ಲೇಖನಗಳಲ್ಲಿ ಮತ್ತೆ ಮತ್ತೆ ಚರ್ಚಿಸಿದ್ದಾರೆ. ಗಂಡು ನಿರೂಪಕರು ಹೇಳುವ ಕಥೆಗಳಲ್ಲಿ ಕಾಣುವ ಯುದ್ಧೋತ್ಸಾಹ, ಸಾಹಸಮಯ ಸಂಗತಿಗಳು, ದೇಶಾಂತರಗಳು ಒಂದೆಡೆ ಇದ್ದರೆ, ಇನ್ನೊಂದೆಡೆ ಹೆಣ್ಣು ನಿರೂಪಕರು ಹೇಳುವ ಕಥೆಗಳಲ್ಲಿ ಕಟ್ಟುವಿಕೆ, ಜೀವಕಾರುಣ್ಯ, ಸಂಬಂಧಗಳ ಬಗೆಗೆ ಇವೆ. ಇವು ಸ್ಪಷ್ಟವಾಗಿ ಎರಡು ನೋಟಕ್ರಮಗಳನ್ನು ಸೂಚಿಸುತ್ತವೆ ಎಂದು ರಾಮಾನುಜನ್ ಅಭಿಪ್ರಾಯ ಪಡುತ್ತಾರೆ. ಈ ಹಿಂದೆ ನಿರೂಪಕರ ನಿರೂಪಣೆಯನ್ನು ಪಠ್ಯಗಳನ್ನಾಗಿ ಸ್ವೀಕರಿಸಿ ಅಧ್ಯಯನಗಳು ನಡೆಯುತ್ತಿದ್ದವು. ಆ ವಿಧಾನವನ್ನು ನಿರೂಪಕರ ಸಾಮಾಜಿಕ ನಿಶ್ಚಿತತೆ, ಲಿಂಗಗಳಿಗೆ ಅನ್ವಯಿಸಿದಾಗ ಹೊಳೆಯುವ ಹೊಸ ಆಯಾಮಗಳನ್ನು ರಾಮಾನುಜನ್ ಗುರುತಿಸಿದರು.

ರಾಮಾನುಜನ್ ಮಾಡಿದ ಇಂತಹ ಅನೇಕ ಸಂಶೋಧನೆಗಳ ಬಗೆಗೆ ಇನ್ನಷ್ಟು ಅಧ್ಯಯನದ ಅಗತ್ಯವಿದ್ದು ರಾಮಾನುಜನ್ ಸಾಧಿಸುವ ಸ್ತ್ರೀ ಪ್ರಮೇಯಗಳು ಒಂದು ಪರ್ಯಾಯ ಅಭ್ಯಾಸವನ್ನಂತೂ ಸೂಚಿಸುತ್ತವೆ ಎಂದು ಖಂಡಿತವಾಗಿ ಒಪ್ಪಬಹುದು. ಮತ್ತೆ ಮೊದಲಲ್ಲಿ ಹೇಳಿದಂತೆ ರಾಮಾನುಜನ್ ತಮ್ಮ ಸಾಹಿತ್ಯದಲ್ಲಿ ಸ್ತ್ರೀನೋಟಗಳನ್ನು ಸೃಜನಶೀಲತೆಯ ಸತ್ವಗಳನ್ನಾಗಿ ಮಾಡಿಕೊಂಡರೆ, ತಮ್ಮ ಸಂಶೋಧನೆಗಳಲ್ಲಿ ಈ ನೋಟಕ್ರಮಗಳಿಗೆ ತಾತ್ವಿಕ ಆಯಾಮ ನೀಡಿದರು. ಸಾಹಿತ್ಯ ಮತ್ತು ಸಂಶೋಧನೆ ಎರಡೂ ದೃಷ್ಟಿಯಿಂದ ಅವರ ನೋಟಗಳು ಗಮನಾರ್ಹವಾಗಿವೆ.

One comment to “ಬೃಹನ್ನಳೆ ಸೈರಂಧ್ರಿಯನ್ನು ದೂರದಿಂದ ನೋಡಿದಾಗ”
  1. ಎ.ಕೆ.ರಾಮಾನುಜಂ ಓಶೋ ಓದಿಕೊಂಡಿದ್ದಿರಬಹುದು. ಹೆಣ್ಣು ಗಂಡು ಒಂದರೊಳೊಗೊಂದು ಸಂಭವಿಸುವ ಪರಿಕಲ್ಪನೆಯ ಕುರಿತು ಓಶೋ ಬಹಳ ದೀರ್ಘ ವಾಗಿ ಚರ್ಚಿಸುತ್ತಾರೆ. (Transforming the energy of women)
    ತಾರಿಣಿಯವರ ಲೇಖನ ರಾಮಾನುಜಂ ಅವರನ್ನು ಸಮಗ್ರವಾಗಿ ಓದಲು tempt ಮಾಡುತ್ತದೆ.

ಪ್ರತಿಕ್ರಿಯಿಸಿ