ಅರವಿಂದ್‌ಗೆ ಚಿತ್ರ ಇಷ್ಟವಾಗಲಿಲ್ಲವೆಂದು ನಮಗೆ ಹೆಚ್ಚೂ ಕಡಿಮೆ ಖಚಿತವಾಗಿ ಅನ್ನಿಸುತ್ತದೆ | ‘The Insignificant Man’ ಚಿತ್ರ ನಿರ್ದೇಶಕರ ಸಂದರ್ಶನ

2013 ರಲ್ಲಿ ಜನಲೋಕಪಾಲ ಮಸೂದೆಗಾಗಿ ಅಣ್ಣಾ ಹಜಾರೆಯಿಂದ ಶುರುವಾದ ಪ್ರತಿಭಟನೆ ಮತ್ತು ಅಲ್ಲಿಂದ ರೂಪುಗೊಂಡ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ತನಕದ ಹಾದಿ ಭಾರತೀಯ ರಾಜಕೀಯ ಚರಿತ್ರೆಯಲ್ಲಿ ಮಹತ್ವದ ಬೆಳವಣಿಗೆ. ಭಾರತದ ಪ್ರಜಾಸತ್ತೆಯ ಶಕ್ತಿಯನ್ನು ಮತ್ತೊಮ್ಮೆ ಪ್ರಚುರಪಡಿಸಿದ ಈ ಚಾರಿತ್ರಿಕ ಘಟನಾವಳಿಗಳನ್ನು ದೃಶ್ಯರೂಪದಲ್ಲಿ ದಾಖಲಿಸಿದ ‘ ಆನ್ ಇನ್ ಸಿಗ್ನಿಫಿಕಂಟ್ ಮ್ಯಾನ್’ ಎಂಬ ಡಾಕ್ಯುಮೆಂಟರಿ ಚಿತ್ರ ೨೦೧೭ ರಲ್ಲಿ ಬಿಡುಗಡೆಯಾಗಿ ಜಗತ್ತಿನಾದ್ಯಂತ ಮೆಚ್ಚುಗೆಯನ್ನೂ ಗಳಿಸಿತು.

ಭಾರತದಲ್ಲಿ ಮುನ್ನಲೆಗೆ ಬರುತ್ತಿರುವ ಇಂಡಿಪೆಂಡೆಂಟ್ ಸಿನೆಮಾ (ಸ್ವತಂತ್ರ ಸಿನೆಮಾ) ದ ಸದ್ಯದ ಅತಿ ಎತ್ತರದ ಕಲಾಕೃತಿ ಎಂದು ಈ ಚಿತ್ರವನ್ನು ಪರಿಗಣಿಸಬಹುದು. ಸ್ವತಂತ್ರ ಸಿನೆಮಾಗಳ ಶಕ್ತಿ ಮತ್ತು ಸಾಧ್ಯತೆಯನ್ನ ಇಡೀ ಜಗತ್ತಿಗೆ ಇದು ತೆರೆದಿಟ್ಟಿದ್ದರ ಹಿಂದೆ ನಿರ್ದೇಶಕ ವಿನಯ್ ಶುಕ್ಲಾ ಮತ್ತು ಖುಷ್ಬೂ ರಂಖಾರ ಅಪಾರ ಪರಿಶ್ರಮವಿದೆ.  ಸಾರ್ವಜನಿಕರಿಂದ ಸಂಗ್ರಹಿಸಿದ ಹಣದಿಂದ ತಯಾರಾದ ಈ ಸಿನೆಮಾ ಯೂ ಟ್ಯೂಬಿನಲ್ಲಿ ವೀಕ್ಷಣೆಗೆ ಲಭ್ಯವಿದೆ. ಕನ್ನಡ ಸಿನೆಮಾ ರಂಗದಲ್ಲಿ ಬರಹಗಾರ ಮತ್ತು ಸಹ ನಿರ್ದೇಶಕರಾಗಿರುವ ವಿವೇಕ್ ಪ್ರಕಾಶ್ ಇಲ್ಲಿ ಖುಷ್ಬೂ ಮತ್ತು ವಿನಯ್ ಅವರನ್ನು ಮಾತಾಡಿಸಿದ್ದಾರೆ .


ವಿವೇಕ್ : ಧನ್ಯವಾದ ಖುಷ್ಬೂ ಮತ್ತು ವಿನಯ್. ನಾನು ಸಿನಿಮಾವನ್ನು ಎರಡು ಸಲ ನೋಡಿದೆ. (ವಿನಯ್ : ಓಹ್ ವಾವ್!) ಆ ಉದ್ವೇಗವನ್ನು ನನ್ನೊಳಗೆ ಮತ್ತೂ ಸ್ವಲ್ಪ ಹೊತ್ತು ಇಟ್ಟುಕೊಳ್ಳುವ ಉದ್ದೇಶದಿಂದ ನಾನು ಮತ್ತೊಮ್ಮೆ ನೋಡಿದೆ. ಇದೊಂದು ಡಾಕ್ಯುಮೆಂಟರಿ ಎಂದು ಯಾರೂ ನಂಬಲಾರರು. ಮೂರು ಅಂಕಗಳ ಬಂಧ ಸಿನಿಮಾಗಿದೆ. ನಮ್ರತಾ ಜೋಶಿ ಕೂಡ “ದಿ ಹಿಂದೂ”ನಲ್ಲಿ ಇದನ್ನೇ ಹೇಳಿದ್ದು; ಇದು ಶೇಕ್ಸ್ಪಿಯರನ ರಾಜಕೀಯ ನಾಟಕದಂತಿದೆ ಎಂದು.
ಮೊದಲನೆಯದಾಗಿ, ನಿಮಗೆ ಈ ಚಳುವಳಿಯನ್ನು ಅಥವಾ ಈ ಪಯಣವನ್ನು ದಾಖಲಿಸುವುದು ಮುಖ್ಯವೆಂದು ಏಕೆ ಅನ್ನಿಸಿತು? ವೈಯಕ್ತಿಕವಾಗಿ ನಿಮಗಿದ್ದ ಕಾರಣವೇನು? ಏಕೆಂದರೆ ಈ ಚಳುವಳಿ ಆಗಿನ್ನೂ ಪ್ರಾರಂಭವಾಗಿತ್ತಷ್ಟೆ ಹಾಗೂ ಅವರು ನಿಜಕ್ಕೂ ರಾಜಕೀಯ ಪಕ್ಷವೊಂದನ್ನು ಕಟ್ಟುತ್ತಾರೋ ಇಲ್ಲವೋ ಎನ್ನುವುದರ ಬಗ್ಗೆಯೇ ಬಹಳ ಚರ್ಚೆಗಳು ನಡೆಯುತ್ತಿದ್ದವು. ನಿಮಗಿದ್ದ ಪ್ರೇರಣೆ ಏನು?

ಖುಷ್ಬೂ: ಒಂದು ಕಥೆ ಹೇಳುವ ಉದ್ದೇಶವಿತ್ತು. ನಮ್ರತಾ ಜೋಶಿ ರಾಜಕೀಯ ನಾಟಕದ ಹಾಗಿದೆಯೆಂದು ಹೇಳಿದರೆಂದು ನೀವು ಹೇಳಿದ ಹಾಗೆಯೇ… ನಾವಿಬ್ಬರೂ ಒಳಗಿಂದೊಳಗೇ ಈ ರೀತಿಯೇ ಆಗುತ್ತದೆಂದು ಆಶಿಸುತ್ತಿದ್ದೆವು ಎಂದು ಹೆಚ್ಚೂಕಡಿಮೆ ಖಚಿತವಾಗಿ ಅನ್ನಿಸುತ್ತಿದೆ. ಏಕೆಂದರೆ ಹೊಸದಾಗಿ ಹುಟ್ಟುತ್ತಿರುವ ಪಕ್ಷವೊಂದು ಕೆರಳಿಸುವ ರಾಜಕೀಯ ಆಸಕ್ತಿಯಲ್ಲಿ ಅಂತಹ ಒಂದು ಕಥೆಯ ಭರವಸೆ ಇರುತ್ತದೆ. ಅವರ ಜೊತೆಗಿದ್ದು ಚಿತ್ರೀಕರಿಸಲು ಅವರ ಒಪ್ಪಿಗೆ (Access) ಮಾತ್ರವೇ ನಮಗೆ ಮುಖ್ಯವಾಗಿತ್ತು. ಹೆಚ್ಚು ಲೆಕ್ಕಾಚಾರವಿಲ್ಲದೆ, ನಮ್ಮದೇ ಊಹೆಯಲ್ಲಿ ಅವರನ್ನು ನಾವು ಕೇಳಿದರೆ, ಅವರು ಚಿತ್ರೀಕರಣಕ್ಕೆ ಒಪ್ಪಿಕೊಂಡರು. ಶುರುವಿನಲ್ಲಿ ನಮಗೂ ಶಂಕೆಯಿತ್ತು, ನಮಗೆ ಒಂದು ಸಮತೋಲಿತ ಡಾಕ್ಯುಮೆಂಟರಿ ಮಾಡಬೇಕಿತ್ತು; ವೈಭವೀಕೃತ ದಂತಕಥೆಯಾಗಲಿ, ಪಕ್ಷಕ್ಕೆ ಪ್ರಚಾರ ಕೊಡುವುದಾಗಲಿ ನಮಗೆ ಬೇಕಿರಲಿಲ್ಲ. ಅದಕ್ಕವರು ಒಪ್ಪಿಕೊಂಡರೂ, ತಮ್ಮಿಂದ ಯಾವ ಸಹಾಯವನ್ನೂ ನಿರೀಕ್ಷಿಸುವುದು ಬೇಡವೆಂದು ಸ್ಪಷ್ಟವಾಗಿ ಹೇಳಿದರು. ಒಮ್ಮೆ ಈ ವಿಷಯ ಸ್ಪಷ್ಟವಾದ ಮೇಲೆ ಅವರಿಗೆ ಮತ್ತೂ ಹತ್ತಿರವಾಗುವುದಷ್ಟೆ ಉಳಿದಿತ್ತು. ಏನೇ ಆದರೂ ಇದೊಂದು ಉತ್ತಮ ಕಥೆಯಾಗುವ ಬಗ್ಗೆ ನಮಗೆ ಯಾವುದೇ ಸಂದೇಹಗಳಿರಲಿಲ್ಲ. ಒಮ್ಮೆ ಚಿತ್ರೀಕರಣ ಶುರುವಾದ ಮೇಲೆ, ನಮಗೆ ಈ ದೃಶ್ಯಗಳು ಎಷ್ಟು ಅದ್ಭುತವಾಗಿವೆ ಎಂದು ಗೊತ್ತಾಗತೊಡಗಿತು. ಹಾಗೆಂದು ನಾವು ಅದ್ಭುತವಾಗಿ ಚಿತ್ರೀಕರಿಸಿದೆವು ಎಂದಲ್ಲ ನನ್ನ ಮಾತಿನ ಅರ್ಥ; ನಾವು ಹಿಂದೆಂದೂ ನೋಡದ್ದನ್ನು ನೋಡುತ್ತಿದ್ದೆವು. ಇದರಿಂದ ಹುಟ್ಟಿದ ಆಸಕ್ತಿಯೇ ನಮ್ಮನ್ನು ಮುಂದುವರೆಯಲು ಪ್ರೇರೇಪಿಸಿತು ಅನ್ನಿಸುತ್ತದೆ.

ವಿವೇಕ್: ನೀವು ಹೆಚ್ಚೂಕಡಿಮೆ ಒಂದು ವರ್ಷ ಅವರ ಜೊತೆಗಿದ್ದಿರಿ. ಶುರುವಿನಲ್ಲಿ ನೀವು ಚಿತ್ರೀಕರಿಸಲು ಶುರು ಮಾಡಿದಾಗ ಯಾವತ್ತಾದರೂ ಅವರು ಕ್ಯಾಮೆರಾದ ಉಪಸ್ಥಿತಿಯ ಅರಿವಿರುವ ಹಾಗೆ ಅಥವಾ ಯಾರೋ ಇದನ್ನೆಲ್ಲ ಚಿತ್ರೀಕರಿಸುತ್ತಿದ್ದಾರೆ ಎಂಬುದರ ಅರಿವಿರುವವರಂತೆ ನಡೆದುಕೊಂಡ ಹಾಗೆ ನಿಮಗೆ ಅನ್ನಿಸಿತೇ?

ವಿನಯ್: ಇಲ್ಲ. ಏನಾಗುತ್ತದೆ ಎಂದರೆ, ಆ ರೀತಿಯ ಒಂದು ಕೋಣೆಯಲ್ಲಿ ನೀವಿದ್ದಾಗ, ಅಲ್ಲಿ ನಿರಂತರವಾಗಿ ಸನ್ನಿವೇಶ ಎಷ್ಟು ಛಿನ್ನಭಿನ್ನವಾಗುತ್ತಿರುತ್ತದೆಯೆಂದರೆ, ಅವರು ನಮ್ಮನ್ನು ಗಣನೆಗೆ ತೆಗೆದುಕೊಳ್ಳುವುದನ್ನೇ ನಿಲ್ಲಿಸಿದರು. ಈ ರೀತಿ ನಾವು ಅವರ ಗಮನ ಸೆಳೆಯದಂತೆ ‘ಅದೃಶ್ಯ’ರಾಗಲು ತುಂಬ ಸಮಯ ಹಿಡಿಯಿತು. ಮೊದಲ ಮೂರು ತಿಂಗಳು ಸುಮ್ಮನೇ ಅವರ ಪಕ್ಕದಲ್ಲಿದ್ದು, ಯಾರ ದೃಷ್ಟಿಯೂ ನಮ್ಮ ಮೇಲೆ ಬೀಳದಂತೆ ಎಚ್ಚರ ವಹಿಸುತ್ತಾ ಇದ್ದೆವು. ಮೊದಲ ದಿನವೇ ಎಲ್ಲದಕ್ಕೂ ನಮಗೆ ಪ್ರವೇಶ ಇರುವುದಿಲ್ಲ, ಆದರೆ ನಮ್ಮನ್ನು ಗಣನೆಗೆ ತೆಗೆದುಕೊಳ್ಳದಂತೆ ಮಾಡಲು ಮೂರು ತಿಂಗಳ ಹಿಡಿಯಿತು. ಹೀಗಾದ ಮೇಲೆ ನಮಗೆ ಒಳ್ಳೆಯ ಸಾಮಗ್ರಿ ಸಿಗಲಾರಂಭಿಸಿತು. ನಾವು ನಮ್ಮ ಕಡೆಯಿಂದ ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರಿಂದ ನಮ್ಮ ಕೆಲಸ ಸುಲಭವಾಯಿತು. ನಾವು ಟ್ರೈಪಾಡ್ಗಳನ್ನು ಬಳಸಲಿಲ್ಲ. ಇಡಿಯ ಸಿನಿಮಾವನ್ನು ಕೈಯಲ್ಲೇ ಕ್ಯಾಮೆರಾ ಹಿಡಿದುಕೊಂಡು ಚಿತ್ರೀಕರಿಸಲಾಗಿದೆ. ರಿಗ್ ಉಪಕರಣವನ್ನೂ ಬಳಸಲಿಲ್ಲ.


The insignificant man ಚಲನಚಿತ್ರ


ವಿವೇಕ್: ಎಷ್ಟು ಕ್ಯಾಮೆರಾಗಳನ್ನು ಬಳಸಿದಿರಿ?

ವಿನಯ್: ಒಂದು. ಸಿನಿಮಾ ಮುಗಿಸುವ ಹೊತ್ತಿಗೆ ನಮ್ಮ ಬಳಿ ನಾಲ್ಕು ಯೂನಿಟ್ಗಳಿದ್ದವು. ಆದರೆ ಚಿತ್ರೀಕರಣದ ಸಮಯದಲ್ಲಿ, ಒಂದು ನಿರ್ದಿಷ್ಟ ಚಿತ್ರೀಕರಣ ಸ್ಥಳದಲ್ಲಿ ನಮ್ಮಲ್ಲಿ ಒಂದಕ್ಕಿಂತ ಹೆಚ್ಚಿನ ಕ್ಯಾಮೆರಾ ಯಾವತ್ತೂ ಇರಲಿಲ್ಲ. ಇದರಿಂದ ಸಿನಿಮಾದ ಸ್ವರೂಪ ಪ್ರಕಟಗೊಳ್ಳಲು ಸಹಾಯವಾಯಿತು. ಸಿನಿಮಾ ನೋಡುವವರಿಗೆ ಆ ಕೋಣೆಯೊಳಗಿರುವ, ಆ ಸ್ಥಳಗಳ ನಡುವೆ ತಾವು ಇರುವ ಉತ್ಸಾಹವನ್ನು ಮುಟ್ಟಿಸುತ್ತದೆ ಎಂದು ನನಗೆ ಅನ್ನಿಸುತ್ತದೆ.

ವಿವೇಕ್: ಇದು ನಾಲ್ಕು ನೂರು ಗಂಟೆಗಳ… (ವಿನಯ್: ಮ್ಯಾರಥಾನ್!) ಹೌದು, ಮ್ಯಾರಥಾನ್ (ನಗು). ಫೂಟೇಜನ್ನು ಬೇರ್ಪಡಿಸಲು ನೀವು ಪಾಲಿಸಿದ ವಿಧಾನವೇನು? ಈ ಅಗಾಧ ಫೂಟೇಜನ್ನು ಹೇಗೆ ಬೇರ್ಪಡಿಸಿದಿರಿ? ಎಲ್ಲಿಂದ ಶುರು ಮಾಡಿದಿರಿ? ಘಟನೆಗಳು ನಡೆದ ದಿನಾಂಕಗಳ ಪ್ರಕಾರ ಶುರು ಮಾಡಿದಿರೇ?

ಖುಷ್ಬೂ: ನಮ್ಮ ಕೆಲಸದ ಕ್ರಮದಲ್ಲಿ ನಾವು ಹಲವು ತಪ್ಪುಗಳನ್ನು ಮಾಡಿದೆವು. ತಪ್ಪುಗಳು ಎಂದರೆ, ನಮಗೆ ಈ ಸಿನಿಮಾ ಹೇಗಿರಬೇಕೆಂಬುದರ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಒಂದು ಸ್ಥೂಲವಾದ ಪರಿಕಲ್ಪನೆ ಇತ್ತು, ಆದರೆ ಪ್ರಜ್ಞೆಯಲ್ಲೆಲ್ಲೋ ಹುದುಗಿರುವ ಕನಸನ್ನು ಗ್ರಹಿಸಲು ಕಷ್ಟಪಡುವ ಹಾಗಿತ್ತು. ಗ್ರಹಿಸಿ ಅದರ ಪ್ರಕಾರ ನಮ್ಮಲ್ಲಿರುವ ಸರಕಿಗೆ ಆಕಾರ ಕೊಡಬೇಕಿತ್ತು. ನಾವು ಹಲವು ರೀತಿಗಳಲ್ಲಿ ಪ್ರಯತ್ನಿಸಿದೆವು. ಉದಾಹರಣೆಗೆ, ಒಂದರಲ್ಲಿ ಯಾವುದೇ ಪಾತ್ರಗಳಿರಲಿಲ್ಲ – ಹಲವು ಸ್ವಯಂಸೇವಕರ ಕಥೆಗಳಿದ್ದವು. ಇನ್ನೊಂದು ಅಸಂಗತವಾಗಿತ್ತು, ಅದರಲ್ಲಿ ಪರಿಸ್ಥಿತಿಗಳು ಅಸಂಗತವಾಗಿರುವುದಕ್ಕೆ ಬಹಳ ಅವಕಾಶವಿತ್ತು. ಮತ್ತೊಂದಿತ್ತು – ಅದು ಈಗಿರುವುದಕ್ಕೆ ಬಹಳ ಹತ್ತಿರವಿದ್ದರೂ ಮೂರು ಗಂಟೆ ಉದ್ದವಿತ್ತು. ಹಾಗಾಗಿ, ನಾವು ಬೇರೆ ಬೇರೆ ವಿಧಾನಗಳನ್ನು ಪ್ರಯತ್ನಿಸಿ ಅರ್ಥವಾದದ್ದೇನೆಂದರೆ – ನಾವು ಒಂದು ಡಾಕ್ಯುಮೆಂಟರಿ ಮಾಡಿದ್ದೇವೆ ಹಾಗೂ ನಮಗಿರುವ ಉತ್ತಮ ಮಾರ್ಗವೆಂದರೆ ನಿಜವಾಗಿಯೂ ನೋಡುಗನನ್ನು ಹಿಡಿದಿಡುವ, ನೋಡುಗ ಸ್ತಬ್ಧನಾಗುವ ಒಂದು ಕಥೆಯನ್ನು ಹೇಳುವುದಾಗಿತ್ತು. ಏಕೆಂದರೆ ಸಾಮಗ್ರಿ ಹಾಗಿತ್ತು. ಅಲ್ಲದೆ ಸಿನಿಮಾ ಸಾಧ್ಯವಾದಷ್ಟೂ ಜನರಿಗೆ ಮುಟ್ಟುವಂತೆ ಮಾಡಬೇಕಿತ್ತು. ಹಾಗಾಗಿ ಕಥೆಯು ನೋಡುಗನನ್ನು ಹಿಡಿದಿಡುವ ಹಾಗಿರಬೇಕೆಂಬುದು ಪ್ರಜ್ಞಾಪೂರ್ವಕ ನಿರ್ಧಾರವಾಗಿತ್ತು. ಹಾಗೆ ಮಾಡುವಾಗ, ನಾವು ಕೆಲವು ಪಾತ್ರಗಳಿಗೆ ಕತ್ತರಿ ಹಾಕಬೇಕಾಯಿತು, ಸ್ವಲ್ಪ ಅಸಂಗತತೆಯನ್ನು ತೆಗೆದುಹಾಕಬೇಕಾಯಿತು. ಅಲ್ಲದೆ ಕಥೆಯನ್ನು ಬಿಗಿಯಾಗಿಡಬೇಕಿತ್ತು. ಸಿನಿಮಾದ ಬಂಧವನ್ನು ಅರಿಯುವುದು ಕೂಡಾ ಒಂದು ಪ್ರಕ್ರಿಯೆ. ಮೂರು ಅಂಕಗಳ ಸಂರಚನೆಯ ಕಲ್ಪನೆಗೊಂದು ಕಾರಣವಿದೆ. ಅರಿಸ್ಟಾಟಲ್ ‘ಪೊಯೆಟಿಕ್ಸ್’ನಲ್ಲಿ ಹೇಳಿದ ವಿಷಯಕ್ಕೆ ಇವತ್ತಿಗೂ ಬಾಳಿಕೆ ಇರುವುದಕ್ಕೊಂದು ಕಾರಣವಿದೆ. ಏನೆಂದರೆ, ಅದು ನಿಜಕ್ಕೂ ನಾಟಕಕಲೆಯ ಅತಿಸೂಕ್ಷ್ಮವಾದ ತಿಳಿವಳಿಕೆಯಿಂದ ಬಂದ ಜ್ಞಾನ. ಸ್ವಾರಸ್ಯವೇನೆಂದರೆ ಅದನ್ನು ಬದುಕಿಗೆ ಅನ್ವಯಿಸುವುದು. ಏಕೆಂದರೆ ಬದುಕಿನಲ್ಲಿ ಎರಡೂ ಇದೆ; ಬದುಕು ನೀರಸವೂ ಹೌದು, ನಾಟಕೀಯವೂ ಹೌದು. ನಾವು ಹೇಗೆ ಹೇಳುತ್ತೇವೆಂದು ನಿರ್ಧರಿಸುತ್ತೇವೋ, ಅದರ ಮೇಲೆ ಅವಲಂಬಿಸಿದೆ.

ವಿವೇಕ್: ಹಿನ್ನೆಲೆ ಧ್ವನಿಯನ್ನಾಗಲಿ, ಸಂದರ್ಶನಗಳನ್ನಾಗಲಿ ಬಳಸುವುದಿಲ್ಲ ಎಂಬ ನಿರ್ಧಾರವನ್ನು ನೀವು ತೆಗೆದುಕೊಂಡದ್ದು ಯಾವ ಹಂತದಲ್ಲಿ? ಅದು ಬಹಳ ಮುಖ್ಯ ನಿರ್ಧಾರ.

ವಿನಯ್: ನಾವು ಶುರುವಿನಲ್ಲೇ ಹಾಗೆ ನಿರ್ಧರಿಸಿದ್ದೆವೆಂದು ನನಗನ್ನಿಸುತ್ತದೆ. ಏನೆಂದರೆ, ನಾವು ಕಲ್ಪಿತ-ಕಥೆಯ(Fiction) ಹಿನ್ನೆಲೆಯಿಂದ ಬಂದವರು. ಭಾರತದಲ್ಲಿ ಯಾರೂ ಡಾಕ್ಯುಮೆಂಟರಿ ಸಿನಿಮಾಗಳನ್ನು ಮಾಡಬೇಕೆಂದು ಕನಸು ಕಾಣುತ್ತಾ ಬೆಳೆಯುವುದಿಲ್ಲ. ಸೌಂದರ್ಯ ಶಾಸ್ತ್ರದಲ್ಲಿನ (Aesthetics) ನಮ್ಮ ತರಬೇತಿ ನಡೆದಿದ್ದು ಕಲ್ಪಿತ-ಕಥೆಗಳ ಸಿನಿಮಾಗಳ ಮೂಲಕವೇ. ನಿರೂಪಕ ಮಧ್ಯ ಪ್ರವೇಶಿಸದೆ ಒಂದು ದೃಶ್ಯ ಇನ್ನೊಂದು ದೃಶ್ಯದ ಜೊತೆ ಮಾತಾಡುವುದು ನಮಗೆ ಇಷ್ಟ. ಅಲ್ಲಿಂದ ಶುರುವಾದದ್ದಿದು. ಸಿನಿಮಾ ಮಾಡುವಾಗ ಖಂಡಿತವಾಗಿಯೂ ಅಭದ್ರ ಭಾವ ಬಂದದ್ದಿದೆ. ಸಂದರ್ಶನಗಳನ್ನೂ ಮಾಡಬೇಕೇನೋ, ಕೊನೆಗೆ ಸಿನಿಮಾ ಸರಿಯಾಗಿ ಬರದಿದ್ದರೆ ಏನು ಮಾಡುವುದು ಎಂದು ಅನ್ನಿಸಿ ಒಂದೆರಡು ಸಂದರ್ಶನಗಳನ್ನು ಮಾಡಿದೆವು. ಅದು ಸರಿ ಹೋಗಲಿಲ್ಲ. ಏಕೆಂದರೆ ಇವರಿಗೆಲ್ಲ ಹೇಳಿದ್ದನ್ನೇ ಹೇಳಿ ಅಭ್ಯಾಸ ಆಗಿ ಹೋಗಿರುತ್ತದೆ. ‘ನಿಮಗೇನು ಮಾಡುವುದು ಇಷ್ಟ?’- ‘ನನಗಿದು ಇಷ್ಟ’, ‘ಈ ದಿನ ಹೇಗಿತ್ತು?’ – ’ದಿನ ಹೀಗಿತ್ತು.’, ‘ಅವನು ಯಾವ ಥರದವನು?’ – ‘ಅವನು ಇಂಥವನು.’… ಅವರು ಸಂದರ್ಶನಗಳಲ್ಲಿ ನಾವು ಕೇಳಬಯಸುವುದನ್ನು ಹೇಳುವುದಿಲ್ಲ ಎಂಬುದಂತೂ ಸ್ಪಷ್ಟ.

ಖುಷ್ಬೂ: ಸಂದರ್ಶನ ನಡೆಸುವುದು ಕೂಡ ಒಂದು ಕಲೆ. ಸಂದರ್ಶನಗಳನ್ನೇ ಆಧಾರವಾಗಿಟ್ಟುಕೊಂಡ ಡಾಕ್ಯುಮೆಂಟರಿಗಳ ಬಗ್ಗೆ ಅಗೌರವವಲ್ಲ. ಜನರ ಸಂದರ್ಶನ ನಡೆಸಿ, ಪ್ರಶ್ನೆಗಳ ಮೂಲಕ ಅವರ ಒಳಜಗತ್ತನ್ನು ಶೋಧಿಸಿ ತೆಗೆಯುವ ಕೆಲವು ಒಳ್ಳೆಯ ಡಾಕ್ಯುಮೆಂಟರಿಗಳು ಇವೆ. ಆದರೆ ರಾಜಕಾರಣಿಗಳಲ್ಲಿ ಕೇಳಿದ ಪ್ರಶ್ನೆಯಿಂದ ತಪ್ಪಿಸಿಕೊಂಡು, ಪ್ರಶ್ನೆಯನ್ನೇ ತಿರುಚಿ ಅವರಿಗೆ ಮಾತಾಡಬೇಕಿರುವುದರ ಬಗ್ಗೆಯೇ ಮಾತಾಡುವ ಅಭ್ಯಾಸವಿದೆ. ನಮಗಿದು ಗೊತ್ತಾಯಿತು.

ವಿನಯ್: ಖುಷ್ಬೂ ಹೇಳಿದ್ದು ನಿಜ. ಅವರು ಆ ರೀತಿ ಮಾಡುತ್ತಾರೆ.

ಖುಷ್ಬೂ : ‘ನಿನ್ನೆ ಏನು ಕನಸು ಬಿತ್ತು?’, ಎಂದು ಕೇಳಿದರೆ, ‘ನಾನು ಉತ್ತಮ ಭಾರತದ ಕನಸು ಕಂಡೆ!’, ಎಂದು ಉತ್ತರಿಸುತ್ತಾರೆ.

ವಿನಯ್: ನಿಜ ಹೇಳಬೇಕೆಂದರೆ, ರಾಜಕಾರಣಿಗಳನ್ನು ಯಾರೂ ನಂಬುವುದಿಲ್ಲ. ಪರದೆಯ ಮೇಲೆ ಒಬ್ಬ ರಾಜಕಾರಣಿ, ‘ನನಗೆ ಹೀಗನ್ನಿಸುತ್ತದೆ. ಹೀಗೆ ಮಾಡಬೇಕೆಂದಿದ್ದೇನೆ.’, ಎಂದು ಹೇಳಿದರೆ ನೀವು ಅವನನ್ನು ನಂಬುವುದಿಲ್ಲ. ನಮಗೂ ಕೂಡ ಆಪ್ ನ ಜೊತೆ ಮಾತಿನ ಮೂಲಕ ಸಂವಹನ ನಡೆಸುವುದು ಬೇಕಿರಲಿಲ್ಲ. ಮಾತಾಡುವಾಗ ಒಂದಿಲ್ಲ ಒಂದು ಕಡೆ ನಮ್ಮ ಉದ್ದೇಶ ಪ್ರಕಟವಾಗುತ್ತದೆ, ಇದರಿಂದ ನಾವು ತಟಸ್ಥವಾಗಿರುವುದು ಹಾಗೂ ವಸ್ತುನಿಷ್ಠರಾಗಿರುವುದು ಕಷ್ಟವಾಗುತ್ತದೆ. ಹಾಗಾಗಿ ನಮಗೆ ಅವರ ಜೊತೆ ಮಾತಾಡುವುದು ಬೇಕಿರಲಿಲ್ಲ. ಅದಲ್ಲದೆ, ಅವರಿಗೆ ನಮ್ಮ ಬಳಿ ಮಾತಾಡಲು ಸಮಯವೂ ಇರಲಿಲ್ಲ. ಸಿನಿಮಾ ಶುರು ಮಾಡಿದಾಗ, ನಮಗೆ ಒಂದು ತಟಸ್ಥ ಹಾಗೂ ವಸ್ತುನಿಷ್ಠವಾದ ಡಾಕ್ಯುಮೆಂಟರಿ ಮಾಡಬೇಕೆಂದು ಹೇಳಿದಾಗ ಅವರು ತಮ್ಮಿಂದ ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳುವುದು ಬೇಡವೆಂದು ಹೇಳಿದ್ದರು. ‘ತುಮ್ ಕೋ ಜೋ ಕರ್ನಾ ಹೈ ಕರೋ’ (ನಿಮಗೇನು ಬೇಕೋ ಮಾಡಿಕೊಳ್ಳಿ) ‘ನಮಗೆ ಬೇಕಾದಷ್ಟು ಕೆಲಸ ಇದೆ.’ ಅವರು ನಮ್ಮನ್ನು ಗಣನೆಗೇ ತೆಗೆದುಕೊಳ್ಳಲಿಲ್ಲ. ಸದ್ಯಕ್ಕೆ ಮುಗಿಯದ ಮಹತ್ವಾಕಾಂಕ್ಷಿ ಕಾಲೇಜ್ ಪ್ರಾಜೆಕ್ಟ್ ಮಾಡುತ್ತಿರುವ ಎರಡು ಯುವಕರು ಎಂದಷ್ಟೇ ಅಂದುಕೊಂಡಿದ್ದರು.

ವಿವೇಕ್: ಇದು ನಾಲ್ಕು ವರ್ಷ ಹಿಂದೆಯೇ?

ವಿನಯ್: ಹೌದು. ನಾಲ್ಕು ವರ್ಷ ಹಿಂದೆ. 2012 ರಲ್ಲಿ ನಾವು ಶುರು ಮಾಡಿದ್ದು.

ವಿವೇಕ್: ಈ ಒಂದು ವರ್ಷದ ಸಮಯದಲ್ಲಿ ಯಾವತ್ತಾದರೂ ಅವರು, ‘ದಯವಿಟ್ಟು ಕ್ಯಾಮೆರಾ ಆಫ್ ಮಾಡಿ’, ಎಂದು ಹೇಳಿದ್ದರೇ? ಯಾವತ್ತಾದರೂ ಹಾಗೆ ಆಗಿದ್ದುಂಟೇ? ಅರವಿಂದ್ ಬಯ್ದಾಗ, ‘ಟಿಕೆಟ್ ಮಿಲ್ನಾ ರೈಟ್ ನಹೀ ಹೈ..’, ಎಂದಾಗ..

ಖುಷ್ಬೂ : ನಾವು ಸರಿಯಾದ ಸ್ಥಳದಲ್ಲಿದ್ದು ಚಿತ್ರೀಕರಿಸುತ್ತಿದ್ದಾಗ, ಯಾರೂ ಕ್ಯಾಮೆರಾ ಆಫ್ ಮಾಡಲು ಹೇಳಿಲ್ಲ…

ವಿವೇಕ್: ಹ್ಞಾಂ… ವಿನಯ್ ಅದೇ ಹೇಳುತ್ತಿದ್ದರು, ಕಣ್ಣಿಗೆ ಬೀಳದಂತೆ ಆಗುವ ಬಗ್ಗೆ…

ಖುಷ್ಬೂ: ಅದೊಂದೇ ಅಲ್ಲ. ಒಬ್ಬರಲ್ಲದಿದ್ದರೆ ಒಬ್ಬ ದ್ವಾರಪಾಲಕರಿಗೆ ನಮ್ಮ ಬಗ್ಗೆ ಗೊತ್ತಿಲ್ಲದವರು ಇರುತ್ತಿದ್ದರು. ನಾವು ಸಿನಿಮಾ ಮಾಡುತ್ತಿರುವ ಬಗ್ಗೆ, ದಿನವೂ ಬರುತ್ತಿರುವ ಬಗ್ಗೆ ಗೊತ್ತಿಲ್ಲದವರು. ನಾವು ವೃತ್ತಿನಿರತ ದೃಶ್ಯ ಮಾಧ್ಯಮದವರಲ್ಲ ಎಂಬುದು ಅವರಿಗೆ ಗೊತ್ತಿರುತ್ತಿರಲಿಲ್ಲ. ಅದು ಅವರ ಮನಸಲ್ಲೂ ದೊಡ್ಡ ವ್ಯತ್ಯಾಸ. ಎಲ್ಲರಿಗೂ ದೃಶ್ಯ ಮಾಧ್ಯಮದವರ ಬಗ್ಗೆ ಅಸಮಾಧಾನವಿದೆ. ಒಮ್ಮೆ ನಾವು ಬೇರೆ ಎಂದು ರುಜುವಾತು ಮಾಡಿದ ಮೇಲೆ… ಆದರೆ ಅದು ಪ್ರತಿ ಸಲವೂ ಹೊಸದಾಗಿ ಮಾಡಬೇಕಿತ್ತು… ನಾವು ಸರಿಯಾದ ಸ್ಥಳದಲ್ಲಿ ಇದ್ದ ಮೇಲೆ, ಬೇರೆ ಸಮಸ್ಯೆ ಇರುತ್ತಿರಲಿಲ್ಲ.

ವಿವೇಕ್: ನೀವು ಚಿತ್ರೀಕರಿಸುತ್ತಿದ್ದಾಗ.. ನೀವು ಹೇಳಿದ ಹಾಗೆ ಅದೊಂದು ಮ್ಯಾರಥಾನ್. ನಿಮಗೆ ನಿಮ್ಮ ಫೂಟೇಜಿನಿಂದ ಸೃಜಿಸಬಹುದಾದ ದೃಶ್ಯ ನಾಟಕದ ಅರಿವು ಇತ್ತೇ? ಚಿತ್ರೀಕರಿಸುವಾಗ ಸಿನಿಮಾದ ಕಲ್ಪನೆ ಇತ್ತೇ?

ಖುಷ್ಬೂ: ಅದು ಇದ್ದೂ ಇರದಂತಿತ್ತು. ನಮಗೆ ಅದರ ಗಂಧ ಬರುತ್ತಿತ್ತಾದರೂ, ಅದನ್ನು ಸೆರೆ ಹಿಡಿಯುವುದು ಗೊತ್ತಿರಲಿಲ್ಲ. ನಾವು ನಾಲ್ಕು ನೂರು ಗಂಟೆ ಚಿತ್ರೀಕರಿಸಿದ್ದರಿಂದ, ಅದರ ಬಹುಭಾಗವೂ ಜನರು ತುದಿಮೊದಲಿಲ್ಲದೆ ಮಾತಾಡುವುದೇ ತುಂಬಿತ್ತು. ಏಕೆಂದರೆ ಎಲ್ಲರಿಗೂ ಸ್ಪಷ್ಟ ಮಾತುಗಳಲ್ಲಿ ವಿಷಯವನ್ನು ಹೇಳುವ ಕೌಶಲ್ಯ ಇರುವುದಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಒಂದು ಚಿಕಿತ್ಸಾ ವೇದಿಕೆಯ ಹಾಗಿತ್ತು. ಎಲ್ಲಾ ವಿಷಯಗಳ ಬಗ್ಗೆ ರೇಜಿಗೆ ಹುಟ್ಟಿದವರೆಲ್ಲರೂ ಬಂದು ಅಳಲು ತೋಡಿಕೊಳ್ಳುತ್ತಿದ್ದರು. ಇದನ್ನು ಸಿನಿಮಾದ ರೀತಿ ನೋಡಲು ಹೋದರೆ ಪರಿಸ್ಥಿತಿ ಆಶಾಜನಕವಾಗಿರಲಿಲ್ಲ. ಅಲ್ಲಿಲ್ಲಿ ನಮಗೆ ಇದರಿಂದ ಏನೂ ಹುಟ್ಟುವುದಿಲ್ಲ ಎಂದು ಅನ್ನಿಸಿತ್ತು. ತಂಡದ ಒಬ್ಬ ಸದಸ್ಯ, ‘ಇದರಿಂದ ಏನೂ ಆಗುವುದಿಲ್ಲ. ಫೂಟೇಜ್ ನೋಡಿದ್ದೇನೆ. ನನ್ನಿಂದ ಇದನ್ನು ಏನು ಮಾಡುವುದಕ್ಕೂ ಆಗುವುದಿಲ್ಲ. ನಿಮ್ಮಿಂದ ಮಾಡಲಿಕ್ಕಾದರೆ ಮಾಡಿ.’, ಎಂದಿದ್ದ. ಕೆಲವು ದಿನ ಕಳವಳ ಮತ್ತು ಹತಾಶೆ ತುಂಬ ಹೆಚ್ಚಿರುತ್ತಿತ್ತು.

ವಿವೇಕ್: ಅದರಲ್ಲಿ ಅವನ ವೈಯಕ್ತಿಕ ಸಿಟ್ಟು ಏನೂ ಇರಲಿಲ್ಲ. ಅವನು ನಿಜಕ್ಕೂ ಸುಸ್ತಾಗಿದ್ದ. ಅಲ್ಲವೇ?

ಖುಷ್ಬೂ: ಹೌದು ಹೌದು! ಅವನು ಸುಸ್ತಾಗಿದ್ದ. ಅವನಿಗೆ ನಿಜಕ್ಕೂ ಇದನ್ನು ಎಡಿಟ್ ಮಾಡುವುದು ಹೇಗೆಂದು ತಿಳಿಯದೆ ಹೇಳಿದ್ದು.

ವಿವೇಕ್: ಇದಕ್ಕೆ ಮೊದಲು ನೀವಿಟ್ಟ ಹೆಸರು ‘ಕ್ರಾಂತಿ ಕಾ ನಿವೇದನ್’, ‘A Proposition for Revolution’. ‘An Insignificant Man’ ಎಂದು ಬದಲಾಯಿಸಿದಿರಿ. ಹೆಸರು ಬದಲಾಯಿಸಲು ಕಾರಣವೇನು? ರವೀಶ್ ಕುಮಾರ್ ಈ ಹೆಸರಿನ ಬಗ್ಗೆ ಚೆನ್ನಾಗಿ ಬರೆದಿದ್ದಾರೆ – ಒಬ್ಬ ಸಾಧಾರಣ ಮನುಷ್ಯ ನಾಯಕನಾಗುವುದೇ ಪ್ರಜಾಪ್ರಭುತ್ವದ ಶ್ರೇಷ್ಠತೆಯ ಉಜ್ವಲ ಲಕ್ಷಣ, ಇದಕ್ಕಾಗಿಯೇ ನರೇಂದ್ರ ಮೋದಿ ತಾವೊಬ್ಬ ಟೀ ಮಾರುತ್ತಿದ್ದ ಸಾಧಾರಣ ಮನುಷ್ಯನೆಂದು ಕರೆದುಕೊಂಡದ್ದು ಎಂದು. ಈ ಹೆಸರಿನ ಬದಲಾವಣೆಗೆ ಕಾರಣವೇನು?

ವಿನಯ್: ಎರಡು ಕಾರಣಗಳಿವೆ. ಮೊದಲನೆಯದು ಚಂಚಲ ಕಾರಣ. ನಿಜ ಹೇಳಬೇಕೆಂದರೆ ನಮಗೆ ಮೊದಲಿಟ್ಟ ಹೆಸರು ಇಷ್ಟವಿರಲಿಲ್ಲ. ನಾವು ಫಂಡ್ ಗೆ ಅರ್ಜಿ ಹಾಕುವಾಗ ಆ ಹೆಸರನ್ನು ಇಟ್ಟಿದ್ದೆವು. ಆದರೆ ಅದು ಕೆಟ್ಟ ಹೆಸರೆಂದು ಕೂಡಲೇ ನಮಗೆ ಗೊತ್ತಾಯಿತು. ಏಕೆಂದರೆ ಅದೊಂದು ಭಾರಿ ಇಂಗ್ಲಿಷ್ ಹೆಸರು. ಜನರು ಸಿನಿಮಾವನ್ನು ಭಾರತದಂತಹ ದೇಶಕ್ಕೆ ಕ್ರಾಂತಿಯ ಪ್ರಸ್ತಾವನೆಯಾಗಿ ಕಾಣುವ ಸಾಧ್ಯತೆ ಇತ್ತು. ಆ ಹೆಸರೇ ಜನರನ್ನು ಪ್ರತ್ಯೇಕಿಸುವ ಸಾಧ್ಯತೆಯಿತ್ತು. ಎಷ್ಟೋ ಜನರಿಗೆ proposition ಪದ ಅರ್ಥವೇ ಆಗುತ್ತಿರಲಿಲ್ಲ. ನೀವು ಅದನ್ನು ಸುಂದರವಾಗಿ ‘ನಿವೇದನೆ’ ಎಂದಿರಿ. ಆದರೆ ಜನರಿಗೆ ಅದು ಅರ್ಥವಾಗಲಿಲ್ಲ. ಇದು ಮೊದಲನೆಯ ಕಾರಣ. ಆ ವಾಚ್ಯವಾದ ಹೆಸರಿನಿಂದ ತೊಂದರೆಯಾಗುತ್ತಿತ್ತು.

ವಿವೇಕ್: ನೀವು ತುಂಬ ಜನರನ್ನು ಕೇಳಿ ತೀರ್ಮಾನಿಸಿದ್ದು , ಹಾಗಿದ್ದರೆ?

ವಿನಯ್: ಅಲ್ಲ. ಅದು ಹೇಗಿತ್ತೆಂದರೆ – ‘Proposition for revolution’ ಹೇಗಿದೆ? ಹ್ಞಾಂ ಚೆನ್ನಾಗಿದೆ.

ಖುಷ್ಬೂ: ಅದು ಚಿತ್ರೀಕರಣ ಶುರು ಮಾಡಿದ ಒಂದು ತಿಂಗಳಿಗೇ ನಿರ್ಧರಿಸಿದ್ದ ಹೆಸರು.

ವಿವೇಕ್: ಡೆಡ್ಲೈನ್ ಹತ್ತಿರ ಬರುತ್ತಿದ್ದದ್ದಕ್ಕೆ…

ವಿನಯ್: ಹೌದು. ಆ ಥರದ್ದೇ ಏನೋ ವಿಷಯಕ್ಕೆ. ನೋಡಿ, ದುರದೃಷ್ಟವೆಂದರೆ, ವಿಶೇಷವಾಗಿ ನಮ್ಮಲ್ಲಿ, ತುಂಬಾ ಮುಖ್ಯವಾದ ವಿಷಯಗಳನ್ನು ಕೊನೆಗೆ ಮಾಡುತ್ತೇವೆ. ಸಿನಿಮಾಗೆ ಹೆಸರು ಇಡುವುದು ಮೊದಲೇ ಮಾಡಬೇಕಿತ್ತು. (ಹಾಗೆ ಮಾಡದೆ) ಕೊನೆಗೆ ದಿಗಿಲಾಗಿ, ಆ ಹೆಸರು ಒಪ್ಪುತ್ತದೆಯೆಂದು ಇಟ್ಟುಬಿಟ್ಟೆವು. ಮತ್ತೆ ಕೊನೆಯವರೆಗೂ ಅದನ್ನು ಬದಲಿಸಬೇಕೆಂದುಕೊಳ್ಳುತ್ತಲೇ ಇದ್ದೆವು, ಆದರೆ ಬದಲಿಸಲಿಲ್ಲ. ಇದು ‘ಚಂಚಲ’ ಕಾರಣ.
ಮತ್ತೊಂದು ಸ್ವಲ್ಪ ಗಂಭೀರವಾದ ಕಾರಣವೆಂದರೆ, ಕ್ರಾಂತಿ ಎಂಬ ಪದ ಬೇರೆ ಬೇರೆ ಜನರಿಗೆ ಬೇರೆ ಬೇರೆ ಅರ್ಥಗಳನ್ನು ಸೂಚಿಸುತ್ತದೆಂದು ನಮಗೆ ಗೊತ್ತಾಯಿತು. ಕಮ್ಯುನಿಸ್ಟ್ ಸಾಹಿತ್ಯ ಓದಿದವರಲ್ಲಿ ಕ್ರಾಂತಿ ಎಂದರೆ ಬೂರ್ಜ್ವಾ (Bourgeois) ಆಡಳಿತವನ್ನು ಉಚ್ಛಾಟಿಸಿ… (ಖುಷ್ಬೂ: ತುಂಬ ರಕ್ತಸಿಕ್ತ ಅರ್ಥವನ್ನು ಸೂಚಿಸುತ್ತದೆ.) ಹೌದು, ರಕ್ತಸಿಕ್ತ ಅರ್ಥ ಕೊಡುತ್ತದೆ. ಅಲ್ಲದೆ ಆ ಪದ ಸಿನಿಮಾ ನೋಡುವುದಕ್ಕೂ ಮೊದಲೇ ಜನರನ್ನು ವಿರೋಧಿ ಬಣಗಳಲ್ಲಿ ವಿಂಗಡಿಸಿಬಿಡುತ್ತದೆ. ಯಾವ ಕ್ರಾಂತಿ? ಕ್ರಾಂತಿ ಎಲ್ಲಿದೆ? ಯಾರು ಕ್ರಾಂತಿಕಾರರು? ಈ ಪಕ್ಷದವರು ಕ್ರಾಂತಿ ತರುತ್ತಾರಾ? – ಈ ರೀತಿಯ ಸಂವಾದದಲ್ಲಿ ಕಳೆದು ಹೋಗುವುದು ನಮಗೆ ಬೇಕಿರಲಿಲ್ಲವೆಂದು ತುಂಬಾ ಬೇಗನೆ ಗೊತ್ತಾಯಿತು. ನಮಗೆ ಇದನ್ನು ಕ್ರಾಂತಿಯ ದೃಷ್ಟಿಯಿಂದ ನೋಡುವುದು ಬೇಕಿರಲಿಲ್ಲ. ಇದು ಪ್ರಜಾಪ್ರಭುತ್ವದ ಮೇಲಿನ Procedural , ಹಾಗೆ ಹೇಳಬಹುದಿದ್ದರೆ.

ಖುಷ್ಬೂ: ಅಲ್ಲದೆ ನಮಗೆ ಸಿನಿಮಾದ ಶೀರ್ಷಿಕೆ ಮತ್ತೂ ಹೆಚ್ಚು ಕಾವ್ಯಾತ್ಮಕವಾಗಿರಬೇಕಿತ್ತು. ‘An Insignificant Man’ ಎಂಬ ಹೆಸರು ಕಾವ್ಯಾತ್ಮಕವಾಗಿದೆ. ಮತ್ತೂ ಹೆಚ್ಚಿನ ವ್ಯಾಖ್ಯಾನಗಳಿಗೆ ಇದರಲ್ಲಿ ಅವಕಾಶವಿದೆ.

ವಿವೇಕ್: ಮತ್ತೆ ಈ ಅರವಿಂದ್ ಮತ್ತು ಯೋಗೇಂದ್ರರ ನಡುವಿನ ವಿಷಯ… ಇದು ಮಾಧ್ಯಮದಲ್ಲಿ ಎಲ್ಲೆಡೆ ವರದಿಯಾಗಿತ್ತು. ಸಿನಿಮಾದಲ್ಲಿ, ಅರವಿಂದ್ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ, ಯೋಗೇಂದ್ರ ಜನರ ನಡುವೆ ನಿಂತು ಅರವಿಂದರನ್ನು ನೋಡುತ್ತಿರುವ ದೃಶ್ಯ. ಅರವಿಂದರಿಗೆ ಯೋಗೇಂದ್ರ ಕಾಣಲಿಕ್ಕೆ ಸಾಧ್ಯವಿರಲಿಲ್ಲ ಏಕೆಂದರೆ ಅವರು ಜನರ ನಡುವೆ ಇದ್ದರು. ಇದೊಂದು ಅದ್ಭುತ ದೃಶ್ಯ. ನೀವು ಇದನ್ನು ಬರೆದು ಸಂಯೋಜಿಸಿದರೂ ಇಷ್ಟು ನಾಟಕೀಯವಾಗಿ ಬರಲು ಸಾಧ್ಯವಿಲ್ಲ. ಯೋಗೇಂದ್ರ ಪರವಶರಾಗಿದ್ದರು. ತುಂಬಾ ಭಾವುಕರಾಗಿದ್ದರು. ಆ ಹಂತದಲ್ಲಿ ಅವರಿಬ್ಬರೂ ಚೆನ್ನಾಗಿದ್ದರು, ಒಳ್ಳೆಯ ಸ್ನೇಹಿತರಾಗಿದ್ದರು. ಆದರೆ ಬಳಿಕ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಬಂದ ಮೇಲೆ ನಿಮಗೆ ಇಷ್ಟು ಒಳ್ಳೆಯ ದೃಶ್ಯ ಸೆರೆ ಸಿಕ್ಕಿದ್ದಕ್ಕೆ ಖುಷಿಯಾಯಿತೆ? ಏಕೆಂದರೆ ಈ ದೃಶ್ಯ ಅವರಿಬ್ಬರ ನಡುವಿನ ಸಂಬಂಧವನ್ನು ಮತ್ತು ಘರ್ಷಣೆಯನ್ನು ತುಂಬಾ ಸುಂದರವಾಗಿ ಸೆರೆ ಹಿಡಿಯುತ್ತದೆ.

ಖುಷ್ಬೂ: ಹೌದು, ನಮಗೆ ತುಂಬಾ ಸಂತೋಷವಾಗಿತ್ತು. ಅವರ ದಾರಿಗಳು ಬೇರೆಯಾಗುವ ಮೊದಲೇ…

ವಿವೇಕ್: ಆದರೆ ಚಿತ್ರೀಕರಿಸುವಾಗ ನಿಮ್ಮ ಕಲ್ಪನೆ ಅದಾಗಿರಲಿಲ್ಲ…

ಖುಷ್ಬೂ: ಹೌದು, ಅದನ್ನೇ ನಾನೂ ಹೇಳಹೊರಟಿದ್ದು. ಆಗ ನಮಗೆ ತಿಳಿದಿರಲಿಲ್ಲ. ಈ ದೃಶ್ಯವನ್ನು ನಾವು ಗ್ರಹಿಸಬಹುದಾದ ರೀತಿ (Optics )… ಅಧಿಕಾರ, ಪ್ರಜಾಪ್ರಭುತ್ವ, ವ್ಯಕ್ತಿಗಳ ನಡುವಿನ ಸಂಬಂಧಗಳ ಬಗ್ಗೆ… ಆ ದೃಶ್ಯವನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಬಹುದು ಎಂಬುದೇ ವೈಯಕ್ತಿಕವಾಗಿ ನನಗೆ ತುಂಬಾ ಸ್ವಾರಸ್ಯಕರ ಅನ್ನಿಸುತ್ತದೆ. ನನ್ನ ಪ್ರಕಾರ, ಯೋಗೇಂದ್ರ ಅವರ ನಡುವೆ ಹೊಂದಿಕೆಯಾಗದ ಮನುಷ್ಯ.

ವಿವೇಕ್: ಅವರು ಅರವಿಂದರಿಗೆ ಶುಭಾಶಯ ಕೋರುವಾಗ ತುಂಬಾ ಸಮಚಿತ್ತದವರಾಗಿಯೂ ಪ್ರಬುದ್ಧರಾಗಿಯೂ ಕಾಣುತ್ತಾರೆ. ಕೆಲವೇ ದೃಶ್ಯಗಳ ಹಿಂದೆ ಅರವಿಂದ್ ವಾಸ್ತವಕ್ಕೆ ದೂರವಾದ ಆಶ್ವಾಸನೆಗಳನ್ನು ಮಾಡುವಾಗ ಯೋಗೇಂದ್ರರಿಗೆ ಅರವಿಂದರ ಮೇಲೆ ಬಹಳ ಸಿಟ್ಟು ಬಂದಿತ್ತು. ಆದರೆ ಅದೆಲ್ಲವೂ ಈಗ ಯೋಗೇಂದ್ರರಿಗೆ ತುಂಬ ಸಾಮಾನ್ಯ ವಿಚಾರದ ಹಾಗೆ ಕಾಣುತ್ತದೆ.

ಖುಷ್ಬೂ: ಹೌದು. ಅವರು ತುಂಬಾ ಮಹತ್ತರ ಸನ್ನಿವೇಶದ ನಡುವೆ ಇದ್ದರು… ಅಲ್ಲದೆ ಯೋಗೇಂದ್ರ ಅಲ್ಲಿ ನೆಮ್ಮದಿಯಾಗಿರಲಿಲ್ಲ, ಕಳವಳದಲ್ಲಿದ್ದರು. ಮಾತು ಕೇಳಿಸಿಕೊಳ್ಳಲಾಗುತ್ತಿರಲಿಲ್ಲ. (ವಿವೇಕ್: ಜನರ ನಡುವೆ ಅವರು ಉದ್ವಿಗ್ನರಾಗಿದ್ದರು) ಹೌದು, ಜನರ ನಡುವೆ ಉದ್ವಿಗ್ನರಾಗಿದ್ದರು. ಅವರು ಭಾವುಕರಾಗಿದ್ದರು. ನೀವು ಹೇಳಿದ ಹಾಗೆಯೇ, ಹಿಂದೆ ಅರವಿಂದರ ಜೊತೆ ಅವರ ಭಿನ್ನಾಭಿಪ್ರಾಯಗಳು ಹೆಚ್ಚಿದ್ದವು. ಈ ಎಲ್ಲ ಎಳೆಗಳೂ ಆ ಕ್ಷಣದಲ್ಲಿ ಜೊತೆಯಾಗುತ್ತಿದ್ದವು. ಅಲ್ಲದೆ, ಯೋಗೇಂದ್ರ ರಾಜಕಾರಣಿಯಾಗಲೆಂದು ಬಂದವರಲ್ಲ, ಅರವಿಂದ್ ಕೂಡ. ಶುರುವಿನಲ್ಲಿ ಅವರು ಹೇಳಿದ್ದಾರೆ ಇದರ ಬಗ್ಗೆ; ಹಲವು ರಾಜಕೀಯ ಪಕ್ಷಗಳನ್ನು ಕಟ್ಟಲು ಪ್ರಯತ್ನಿಸಿ ಸಾಧ್ಯವಾಗದೆ ಸೋತೆವೆಂದು. ಆ ಕ್ಷಣದಲ್ಲಿ ನಮಗದು ವ್ಯಕ್ತಿಯೊಬ್ಬ ಮತ್ತೆ ಮತ್ತೆ ಪ್ರಯತ್ನಿಸಿ ಕೊನೆಗೆ ಇಲ್ಲಿಗೆ ತಲುಪಿದ್ದರ ಬಗ್ಗೆಯೂ ಆಗಿತ್ತು. ಹಿನ್ನೆಲೆಯಲ್ಲಿದ್ದ ಈ ಎಲ್ಲ ಎಳೆಗಳನ್ನೂ ಆ ದೃಶ್ಯದಲ್ಲಿ ಕಾಣಬಹುದು.

ವಿವೇಕ್: ಹೌದು, ಅದೊಂದು ಅದ್ಭುತ ದೃಶ್ಯ.
ನೀವು ಚಿತ್ರೀಕರಣ ಮುಗಿಸಿ ಫೂಟೇಜನ್ನೆಲ್ಲ ನೋಡಿ ಸಿನಿಮಾದಲ್ಲಿ ಬಳಸಲಿರುವ ಫೂಟೇಜನ್ನು ಆರಿಸಿಕೊಂಡ ಮೇಲೆ ಮೇಲೆ ಎಷ್ಟು ಆವೃತ್ತಿಗಳ ಮೇಲೆ ಕೆಲಸ ಮಾಡಿದಿರಿ?

ವಿನಯ್: ನಾವು 5-6 ಎಂದುಕೊಂಡಿದ್ದೆವು. ನಮ್ಮ ಎಡಿಟರ್ ಅಭಿನವ್ ಜೊತೆ ಮಾತಾಡುತ್ತಿದ್ದಾಗ ಅವರು 9 ಎಂದರು.

ವಿವೇಕ್: ಎಲ್ಲವೂ ಇಷ್ಟೇ ಅವಧಿಯೇ? ಅಥವಾ ಇನ್ನೂ ಉದ್ದಕ್ಕಿದ್ದವೇ?

ವಿನಯ್: ಮೊದಲು 3 ಗಂಟೆಯದಿತ್ತು. ಎಲ್ಲವೂ 2-3 ಗಂಟೆಯ ಅಥವಾ ಅದರ ನಡುವಿನ ಅವದಧಿಯದಿತ್ತು. ಇದಕ್ಕೆ ಮೊದಲು 90 ನಿಮಿಷಗಳ ಆವೃತ್ತಿ ಇರಲಿಲ್ಲ. ನಾವು ಅಂತಿಮ ಆವೃತ್ತಿ ಎಂದುಕೊಂಡದ್ದು 2 ಗಂಟೆ ಉದ್ದಕ್ಕಿತ್ತು. ಸಿನಿಮಾ ಬರುವ ಸ್ವಲ್ಪ ಹಿಂದೆ ನಾವು ಲಂಡನ್ನಿನ ಕನ್ಸಲ್ಟಿಂಗ್ ಎಡಿಟರ್ ಜೊತೆ ಕೆಲಸ ಮಾಡುತ್ತಿದ್ದೆವು. ಅವರು 24 ನಿಮಿಷದಷ್ಟು ದೃಶ್ಯಗಳನ್ನು ಕತ್ತರಿಸಿ ಹಾಕಿದರು. ಫ್ರೇಂ ರೇಟ್ ಪರಿವರ್ತನೆಯಿಂದಾಗಿ ಈಗ 96 ನಿಮಿಷವಿದೆ. ಇಲ್ಲದಿದ್ದರೆ ಇದು 91-92 ನಿಮಿಷವಷ್ಟೇ ಇರುವುದು.

ಖುಷ್ಬೂ: ಈಗ ಇದು 1 ಗಂಟೆ, 43 ನಿಮಿಷ ಇದೆ.

ವಿವೇಕ್:  ಹಾಗಿದ್ದರೆ 96 ನಿಮಿಷ. ?

ಖುಷ್ಬೂ: ಹೌದು, 103 ನಿಮಿಷ ಆಗಿರುವುದು ಫ್ರೇಂ ರೇಟ್ ಪರಿವರ್ತನೆಯಿಂದಾಗಿ.

ವಿವೇಕ್: ಓಹ್ ಸರಿ. ಯಾವುದೇ ರಾಜಕೀಯ ಸಿನಿಮಾವನ್ನು ಹಿಂದಿರುಗಿ ನೋಡಿದಾಗ ಮುಖದಲ್ಲೊಂದು ನಗು ತರಿಸುತ್ತದೆ. ಶೀಲಾ ದೀಕ್ಷಿತ್, ‘ಅರವಿಂದ್ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ.’, ಎನ್ನುವುದನ್ನು ನೋಡಿದಾಗ… ಮಾಧ್ಯಮ ಮತ್ತು ಮತದಾನೋತ್ತರ ಸಮೀಕ್ಷೆಗಳು ಕೂಡ (Exit Polls)…
CBFC ಜೊತೆಗಿನ ನಿಮ್ಮ ಜಗಳ ಹೇಗಿತ್ತು, ನರೇಂದ್ರ ಮೋದಿ, ಕೇಜ್ರಿವಾಲ್ ಎಲ್ಲರಿಂದ NOC ತರಲು ಹೇಳಿದಾಗ? ಅವರ ಮೊದಲ ಪ್ರತಿಕ್ರಿಯೆ ಹೇಗಿತ್ತು ಸಿನಿಮಾ ನೋಡಿದ ಮೇಲೆ?

ಖುಷ್ಬೂ: ಮೊದಲ ಕಮಿಟಿ.. ಮೊದಲು ಎಕ್ಸಾಮಿನಿಂಗ್ ಕಮಿಟಿ ನೋಡುತ್ತದೆ, ಮತ್ತೆ ರಿವ್ಯೂವಿಂಗ್ ಕಮಿಟಿಗೆ ಹೋಗುತ್ತದೆ. ಎಕ್ಸಾಮಿನಿಂಗ್ ಕಮಿಟಿಯವರು ಏನನ್ನು ಹೇಳಲೂ ನಿರಾಕರಿಸಿಬಿಟ್ಟರು.

ವಿವೇಕ್: ಅವರು ಪ್ರಮಾಣಪತ್ರ ಕೊಡಲಿಲ್ಲ?

ಖುಷ್ಬೂ: ಅವರು ಪ್ರಮಾಣಪತ್ರ ಕೊಡಲಿಲ್ಲ. ಅವರಿಗಿದ್ದ ತಕರಾರನ್ನೂ ತಿಳಿಸಲಿಲ್ಲ. ಹೆಚ್ಚೂಕಡಿಮೆ, ‘ನಮಗೆ ಗೊತ್ತಿಲ್ಲ’, ಎಂದಂತಿತ್ತು. ಅವರು ಕಡೆಗಣಿಸಿಬಿಟ್ಟರು. ನಾವು ಶುಲ್ಕದ ಮೊತ್ತ ಪಾವತಿಸಿ, ಸಿನಿಮಾ ಪ್ರದರ್ಶನಕ್ಕೆ ಒಂದು ಮಾಲ್ ನಲ್ಲಿ ವ್ಯವಸ್ಥೆ ಮಾಡಿ… ಕೊನೇಪಕ್ಷ ಅವರ ಅಭಿಪ್ರಾಯವನ್ನು ತಿಳಿಸಬೇಕಿತ್ತು. ಅವರು ಏನೂ ಹೇಳಲಿಲ್ಲ. ರಿವೈಸಿಂಗ್ ಕಮಿಟಿಗೆ ವಹಿಸಿದರು. ರಿವೈಸಿಂಗ್ ಕಮಿಟಿಯಲ್ಲಿ ಪಹಲಾಜ್ ನೆಹಲಾನಿ ಇದ್ದರು. ಅವರು ನರೇಂದ್ರ್ ಮೋದಿ, ಅರವಿಂದ್ ಕೇಜ್ರಿವಾಲ್, ಶೀಲಾ ದೀಕ್ಷಿತರಿಂದ NOC ತರಲು ಮತ್ತು ಕಾಂಗ್ರೆಸ್ ಮತ್ತು ಬಿ.ಜೆ.ಪಿ. ಹೆಸರುಗಳನ್ನು ತೆಗೆದು ಹಾಕಲು ಹೇಳಿದರು. ಅಷ್ಟು ಮಾಡಿದರೆ ಪ್ರಮಾಣಪತ್ರ ಕೊಡುವುದಾಗಿ ಹೇಳಿದರು. ಅದು ಚಂದ್ರಲೋಕಕ್ಕೆ ಹೋಗಿ ಬಂದರೆ ಪ್ರಮಾಣಪತ್ರ ಕೊಡುತ್ತೇವೆ ಎಂದು ಹೇಳಿದ ಹಾಗೆ. ಇದು ಸಂವಿಧಾನಕ್ಕೆ ವಿರುದ್ಧವಾಗಿತ್ತು, ಅದಕ್ಕೆ ನಾವು FCAT ನ ಬಳಿ ಹೋದೆವು. ಅವರು ಅದನ್ನು ಅಸಾಂವಿಧಾನಿಕ ಕೋರಿಕೆಯೆಂದು ಹೇಳಿದರು. FCAT ನಲ್ಲಿರುವಂತಹ ಸಮರ್ಥ ಜನರು ರಿವೈಸಿಂಗ್ ಕಮಿಟಿಯಲ್ಲಿದ್ದರೆ ಒಳ್ಳೆಯದು ಎಂದು ನನ್ನ ಭಾವನೆ.

ವಿವೇಕ್: ಅವರು ಹೆಚ್ಚು ವಿವೇಚನೆಯುಳ್ಳ ಜನ…

ಖುಷ್ಬೂ: ವಿವೇಚನೆ ಎಂದಲ್ಲ. ಇದರ ಅರ್ಥವೇನು? ಅದೇ ಸಂಸ್ಥೆ ಬೇರೆ ಬೇರೆ ತೀರ್ಮಾನಗಳನ್ನು ಕೊಡುತ್ತಿದೆ ಎಂದಲ್ಲವೇ? ನೀವು ಯೋಗ್ಯರಲ್ಲದವರನ್ನು ಆರಿಸಿದ್ದೀರಿ, ಅವರಿಗೆ ನಿಯಮಗಳ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಅಲ್ಲಿ ಗೊಂಬೆಗಳನ್ನು ಕೂರಿಸಿದರೂ ಏನೂ ವ್ಯತ್ಯಾಸ ಆಗುವುದಿಲ್ಲ. ಯಾರಿಗೂ ಏನೂ ಗೊತ್ತಿಲ್ಲ, ನಿಯಮಗಳ ಬಗ್ಗೆ ಏನೂ ತಿಳಿದಿಲ್ಲ. ಯಥಾರ್ಥದಲ್ಲಿ ಇದೊಂದು ಕಾನೂನುಬಾಹಿರ ವಿಷಯ.

ವಿವೇಕ್: ಕೊನೆಯ ಆವೃತ್ತಿಯಲ್ಲಿ ನೀವು ‘ಕಾಂಗ್ರೆಸ್-ಬಿಜೆಪಿ’ಯನ್ನು ಉಳಿಸಿಕೊಂಡಿರಿ ಅಲ್ಲವೇ?

ಖುಷ್ಬೂ: ಯಾವ ದೃಶ್ಯ ಅಥವಾ ಸಂಭಾಷಣೆಯನ್ನು ಕತ್ತರಿಸದೆ FCAT ಮಾನ್ಯ ಮಾಡಿತು.

ವಿವೇಕ್: ಯಾವುದೇ ಬೀಪ್ ಇಲ್ಲದೆ…?

ಖುಷ್ಬೂ: ಹೌದು. ಯಾವುದೇ ಬೀಪ್ ಇಲ್ಲದೆ. ಯಾರಾದರೂ ಈ ವಿಷಯದ ಬಗ್ಗೆ ಸಮಗ್ರವಾಗಿ ಅನ್ವೇಷಿಸಬೇಕು. ಏಕೆಂದರೆ ನನಗೇನೂ ಸಿಕ್ಕಿಲ್ಲ. ಕಲ್ಪಿತ ಕಥೆಗಳ ಎಷ್ಟು ಸಿನಿಮಾಗಳಲ್ಲಿ ಕಾಂಗ್ರೆಸ್ ಮತ್ತು ಬಿ.ಜೆ.ಪಿ.ಯ ಹೆಸರನ್ನು ಬಳಸಿದ್ದಾರೆ ಎಂದು ಹುಡುಕಬೇಕು. ಡಾಕ್ಯುಮೆಂಟರಿಗಳಲ್ಲಿ ನನಗೆ ಗೊತ್ತು… (ವಿವೇಕ್: ಇಲ್ಲ, ಡಾಕ್ಯುಮೆಂಟರಿಗಳಲ್ಲಿ ಬಳಸಲು ಬಿಡುವುದಿಲ್ಲ.) ಆದರೆ ಸಿನಿಮಾ ಇತಿಹಾಸದಲ್ಲಿ ಕಲ್ಪಿತ-ಕಥೆಗಳ ಸಿನಿಮಾಗಳಲ್ಲಿ ಕಾಂಗ್ರೆಸ್ ಮತ್ತು ಬಿ.ಜೆ.ಪಿ.ಯ ಹೆಸರು ಎಷ್ಟು ಬಳಕೆಯಾಗಿದೆಯೆಂದು ತಿಳಿಯಬೇಕು.

ವಿವೇಕ್: ನನಗನ್ನಿಸುತ್ತದೆ ‘ಬ್ಲಾಕ್ ಫ್ರೈಡೇ’ಯಲ್ಲಿ… ಹೌದು, ಅದು ಬಿಡುಗಡೆ ಆಗಲಿಲ್ಲ.

 ಇಷ್ಟೆಲ್ಲ ಆದ ಮೇಲೆ ನೀವು ಅರವಿಂದ್ ಗೆ ಸಿನಿಮಾ ತೋರಿಸಿದಿರೇ?

ಖುಷ್ಬೂ: ಹೌದು, ಪ್ರೀಮಿಯರಿನ ಎರಡು ತಿಂಗಳ ನಂತರ ತೋರಿಸಿದೆವು. ಸೆಪ್ಟೆಂಬರ್ 2016 ರಲ್ಲಿ.

ವಿವೇಕ್: ಏನು ಹೇಳಿದರು?

ಖುಷ್ಬೂ: ಅವರು ಹಾರಿಕೆಯ ಪ್ರತಿಕ್ರಿಯೆ ಕೊಟ್ಟರು. ‘ಸ್ವಾರಸ್ಯಕರವಾಗಿದೆ’, ಎಂದರು. ಅವರಿಗೆ ಇಷ್ಟವಾಗಲಿಲ್ಲವೆಂದು ನಮಗೆ ಹೆಚ್ಚೂ ಕಡಿಮೆ ಖಚಿತವಾಗಿ ಅನ್ನಿಸುತ್ತದೆ.

ವಿವೇಕ್: ಹೌದೇ! ಏಕೆ?

ಖುಷ್ಬೂ: ಏಕೆಂದರೆ ಸಿನಿಮಾ ಅವರ ಬಗ್ಗೆ ವಿಮರ್ಶಾತ್ಮಕವಾಗಿದೆ.

ವಿವೇಕ್: ಹ್ಞಾಂ ಹೌದು.

ಖುಷ್ಬೂ: ಒಬ್ಬ ರಾಜಕಾರಣಿಯ ಪ್ರಕಾರ, ಅವನು ಬಿಂಬಿಸಲು ಇಷ್ಟಪಡದ ಅವನ ಬಗೆಗಿನ ಯಾವುದೇ ಚಿತ್ರಣವೂ ಅವನ ಅಸ್ತಿತ್ವಕ್ಕೆ ಅಪಾಯಕಾರಿ.

ವಿವೇಕ್: ಖಂಡಿತ.

ಖುಷ್ಬೂ & ವಿನಯ್

ವಿವೇಕ್: ವಿಶಾಲ ಡಡ್ಲಾನಿ ಮುಂತಾದ ಬಹಳ ಹೆಸರುವಾಸಿ ಜನರು ಸಿನಿಮಾದ ಬಗ್ಗೆ ಮಾತಾಡಿದ್ದಾರೆ. ಎಲ್ಲರೂ ಬೆಂಬಲ ನೀಡಿದ್ದಾರೆ. ಸಿನಿಮೋದ್ಯಮದ ಒಳಗಿನ ಜನರ ಪ್ರತಿಕ್ರಿಯೆ ಯಾವ ಥರ ಇದೆ? ಈ ರೀತಿಯ ಸಿನಿಮಾ ಮಾಡುವುದು ಎಷ್ಟು ಕಷ್ಟವೆಂದು ಅವರಿಗೆ ತಿಳಿದಿರುತ್ತದೆ. ಅವರು ಏನು ಹೇಳುತ್ತಿದ್ದಾರೆ?

ವಿನಯ್: ಕೆಲವರು ಬೇರೆಯವರಿಗಿಂದ ಹೆಚ್ಚಾಗಿ ಬಹಿರಂಗವಾಗಿ ಇದರ ಬಗ್ಗೆ ಹೇಳಿದ್ದಾರೆ. ಅವರೆಲ್ಲ ಕ್ಯಾಮೆರಾ ಮುಂದೆ ಬಂದು ಮಾತಾಡಿದ್ದಾರೆ. ಬಹಳ ಜನ ಖುದ್ದಾಗಿ ಸಂದೇಶಗಳನ್ನು ಕಳಿಸಿ ಹಾರೈಸಿದ್ದಾರೆ. ಇದರಿಂದ ನಮ್ಮ ನಂಬಿಕೆ ಹೆಚ್ಚಾಗಿದೆ. ಈ ಸಿನಿಮಾವನ್ನು ಮುಖ್ಯವಾಹಿನಿಗೆ ಹತ್ತಿರವಾಗಿಸಿದ್ದರಿಂದ ಡಾಕ್ಯುಮೆಂಟರಿ ಸಿನಿಮಾ ಪ್ರಕಾರಕ್ಕೆ ಹೊಸಜೀವ ತುಂಬಿದಂತಾಗಿದೆ ಎಂಬಂತಹ ದೊಡ್ಡ ಮಾತುಗಳನ್ನು ಕೂಡ ಮತ್ತೂ ಕೆಲವರು ಹೇಳಿದ್ದಾರೆ. ಉದ್ಯಮದಿಂದ ಈ ರೀತಿಯ ಆದರದ ಪ್ರತಿಕ್ರಿಯೆ ಬಂದಿದೆ. ಇನ್ನೊಂದು ವಿಷಯವೆಂದರೆ ರಾಜಕಾರಣದಲ್ಲಿ ಭಾಗವಹಿಸುವ ವಿಷಯದಲ್ಲಿ ಉದ್ಯಮ ಈಗ ಒಂದು ಕಷ್ಟಕರ ಪರಿಸ್ಥಿತಿಯಲ್ಲಿದೆ. ಪದ್ಮಾವತಿಯಂತಹ ಸಿನಿಮಾಗಳಿಗೆ ಏನಾಗುತ್ತಿದೆಯೋ, ಅಂತಹ ಪರಿಸ್ಥಿತಿಯಿಂದಾಗಿ ಜನರೂ ಕೂಡ ನಮ್ಮ ಸಿನಿಮಾದ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯಿಸುವಾಗ ಸ್ವಲ್ಪ ಹೆಚ್ಚೇ ಎಚ್ಚರಿಕೆಯಿಂದ ಮಾತಾಡುತ್ತಿದ್ದಾರೆ. ಆದರೆ ಅವರೆಲ್ಲ ಕ್ಯಾಮೆರಾ ಮುಂದಿರುವಾಗಕ್ಕಿಂತ ಕ್ಯಾಮೆರಾ ಇಲ್ಲದಿರುವಾಗ ಹೆಚ್ಚು ಬೆಂಬಲ ನೀಡಿದ್ದಾರೆ.

ವಿವೇಕ್: ಆ ರೀತಿಯದ್ದು ಇದ್ದೇ ಇರುತ್ತದೆ.

ವಿವೇಕ್: CBFC ಜೊತೆಗಿನ ನಿಮ್ಮ ಎಲ್ಲ ಹೋರಾಟದ ಹಿನ್ನೆಲೆಯಲ್ಲಿ ಭಾರತ ರಾಜಕೀಯದ ಬಗೆಗಿನ ಸಿನಿಮಾಗಳಿಗೆ ತಯಾರಾಗಿದೆ ಎಂದು ನಿಮಗೆ ಅನ್ನಿಸುತ್ತದೆಯೇ? ಅವರಿಗೆ ನೀವು ಕೇವಲ ವ್ಯಾಖ್ಯಾನಿಸುತ್ತಿದ್ದೀರಿ, ನಿಮ್ಮ ಅಭಿಪ್ರಾಯಗಳನ್ನು ಕೊಡುತ್ತಿದ್ದೀರಿ ಎಂಬುದು ಯಾವತ್ತಾದರೂ ಅರ್ಥವಾಗಬಹುದೇ?

ವಿನಯ್: ಇಲ್ಲ. ಅವರು ತಯಾರಾಗಿಲ್ಲ.

ಖುಷ್ಬೂ: ಅದು ಒಂದು ನಿರಂತರ ಪ್ರಕ್ರಿಯೆ. ನೀವು ಹೋರಾಟಕ್ಕೆ ತಯಾರಾಗಿರಬೇಕು. ಈ ರೀತಿಯ ಕೆಲಸಕ್ಕೆ ಹೊರಟಾಗ ನಿಮಗೆ ವಾಸ್ತವದಲ್ಲಿ ಎಷ್ಟು ಹೋರಾಡಬೇಕೆಂಬುದರ ಬಗ್ಗೆ ತುಂಬ ಸ್ಪಷ್ಟವಾದ ಅರಿವು ಇರಬೇಕು. ಕೊನೆಯಲ್ಲಿ ನೀವು ಜಯಗಳಿಸಲೂಬಹುದು, ಸೋಲಲೂ ಬಹುದು. ಹೋರಾಡಲು ಸೋತ ಎಷ್ಟೋ ಸಿನಿಮಾಗಳಿವೆ. ಹೋರಾಡಿದರೂ ಕೂಡ ಅನುಕೂಲಕರ ತೀರ್ಮಾನ ಪಡೆಯುವಲ್ಲಿ ಸೋತ ಸಿನಿಮಾಗಳಿವೆ. ಪರಿಸ್ಥಿತಿ ಆಶಾದಾಯಕವಾಗಿಲ್ಲ. ಆದರೆ ಡಿಜಿಟಲ್ ಮಾಧ್ಯಮದಿಂದ ಉಪಯೋಗವಾಗಬಹುದು. ದುಡ್ಡಿನ ತೊಂದರೆ ಇದ್ದಲ್ಲಿ ಸಿನಿಮಾವನ್ನು ಯೂಟ್ಯೂಬಿನಲ್ಲಿ ಪ್ರದರ್ಶಿಸಬಹುದು. ಆದರೆ ರಾಜಕೀಯದ ಕುರಿತು ಒಂದು ಸಿನಿಮಾ ಮಾಡಿ ಯೂಟ್ಯೂಬಿನಲ್ಲಿ ಯಾರಾದರೂ ಏಕೆ ಹಾಕುತ್ತಾರೆ?

ವಿವೇಕ್: ನೀವು ಸಿನಿಮಾವನ್ನು ವಿದೇಶಗಳಲ್ಲೂ ಪ್ರದರ್ಶಿಸಿದ್ದೀರಿ. ಆದರೆ ವಿದೇಶದಲ್ಲಿ ನೋಡುಗರಿಗೆ ಖಂಡಿತವಾಗಿಯೂ ನಮ್ಮಷ್ಟು ಸ್ಪಷ್ಟವಾಗಿ ಸನ್ನಿವೇಶದ ಕಲ್ಪನೆ ಸಿಗಲು ಸಾಧ್ಯವಿಲ್ಲ. ಅವರ ಪ್ರತಿಕ್ರಿಯೆ ಹೇಗಿತ್ತು?

ವಿನಯ್: ಅವರಿಗೆಲ್ಲ ಎಷ್ಟು ಅರ್ಥವಾಯಿತೆಂಬುದನ್ನು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಸಿನಿಮಾ ಪ್ರದರ್ಶನ ಮುಗಿದ ಮೇಲೆ ಜನರು ನಮ್ಮ ಬಳಿ ಬಂದು ಅವರ ದೇಶದಲ್ಲೂ ಕೂಡ ಇದೇ ಆಗುತ್ತಿರುವುದು ಎಂದು ಹೇಳಿದ್ದಾರೆ. ಸ್ಪೇನ್ ದೇಶದಲ್ಲಿ 400 ಸೀಟುಗಳೂ ಭರ್ತಿಯಾಗಿದ್ದವು. ಪ್ರದರ್ಶನ ಬಳಿಕ ಜನರು ಬಂದು ನಮ್ಮ ದೇಶದಲ್ಲಿ ನಡೆಯುತ್ತಿರುವುದೂ ಕೂಡ ಇದೇ. ನಿಮ್ಮಲ್ಲಿ ಆಪ್ ಇದೆ, ನಮ್ಮಲ್ಲಿ ಪೋಡೆಮೋಸ್ ಇದೆ. ನಿಮ್ಮಲ್ಲಿ ಆ ನಾಯಕನಿದ್ದರೆ ನಮ್ಮಲ್ಲಿ ಈ ನಾಯಕನಿದ್ದಾನೆ. ನಿಮ್ಮಲ್ಲಿ ನಡೆಯುತ್ತಿರುವ ಹಾಗೆಯೇ ನಾವೂ ಹೋರಾಡುತ್ತಿದ್ದೇವೆ. ನಿಮ್ಮಲ್ಲಿ ಆ ಕಾರ್ಪೊರೇಷನ್ ಇದ್ದರೆ ನಮ್ಮಲ್ಲಿ ಈ ಕಾರ್ಪೊರೇಷನ್ ಇದೆ. ಜನರು ಎರಡೂ ದೇಶದ ವಿದ್ಯಮಾನಗಳ ಮಧ್ಯೆ ಇರುವ ಸಾಮ್ಯತೆಯನ್ನು ಗುರುತಿಸುತ್ತಾರೆ. ಒಂದು ಜಾಗತಿಕ ಮಂಥನದ ನಡುವೆ ನಾವಿದ್ದೇವೆ ಎಂಬುದನ್ನು ನಂಬಲು ನಿಮಗೆ ಕಷ್ಟವಾಗಬಹುದು. ತಲೆಯೆತ್ತಿ ಹೊರಗೆ ನೋಡಿದಾಗ ಮಾತ್ರ ನಮಗೆ ಜಾಗತಿಕ ರಾಜಕಾರಣದ ಅಂದಾಜು ಸಿಗಲು ಸಾಧ್ಯ. ಇದೆಲ್ಲವೂ ನಮ್ಮ ಸಿನಿಮಾದ ಬಗ್ಗೆ ನಮಗಿದ್ದ ನಂಬಿಕೆಯನ್ನು ಗಟ್ಟಿ ಮಾಡಿದೆ.

ವಿವೇಕ್: ಈ ರೀತಿಯ ಸಿನಿಮಾ ಮಾಡುವುದು ಬಲು ಕಷ್ಟ. ಸಿನಿಮಾ ಮಾಡುವಾಗ ನೀವು ತೆಗೆದುಕೊಂಡ ನಿರ್ಧಾರಗಳೂ ಕಷ್ಟದ ನಿರ್ಧಾರಗಳು. An Insignificant Man ಅನ್ನು ನಮಗೆ ಕೊಟ್ಟಿದ್ದಕ್ಕೆ ಧನ್ಯವಾದ. ನಿಮ್ಮಿಂದ ಮತ್ತೂ ಒಳ್ಳೆಯ ಸಿನಿಮಾಗಳನ್ನು ನಿರೀಕ್ಷಿಸುತ್ತೇನೆ.

ವಿನಯ್: ಧನ್ಯವಾದ. ನಾವು ತುಂಬಾ ಸುಸ್ತು ಹೊಡೆದಿರುವ ಸಿನಿಮಾಕಾರರು. ಈಗ ನಮಗೆ ಪ್ರಶಂಸೆ ಸಿಗುತ್ತಿದೆ. ಇದನ್ನು ನಾವು ತುಂಬಾ ಸಮಯ ನೆನಪಿಟ್ಟುಕೊಳ್ಳುತ್ತೇವೆ ಎಂದುಕೊಳ್ಳುತ್ತೇನೆ.

ವಿವೇಕ್: ಮಾತಾಡಿದ್ದಕ್ಕೆ. ಬೆಂಗಳೂರಿಗೆ ಬಂದದ್ದಕ್ಕೆ ಧನ್ಯವಾದ. ನಿಮ್ಮ ಸಿನಿಮಾ ಲಾಭ ಮಾಡಲಿ ಎಂದು ಹಾರೈಸುತ್ತೇನೆ.

ಖುಷ್ಬೂ ಮತ್ತು ವಿನಯ್ : ಧನ್ಯವಾದ!


ಬರಹರೂಪ : ಕಿರಣ್ ಕುಮಾರ್

ಪ್ರತಿಕ್ರಿಯಿಸಿ