ಧರ್ಮಗ್ರಂಥಗಳನ್ನು ಸಾಹಿತ್ಯದ ಕಣ್ಣಿಂದ ಓದಲು ಸಾಧ್ಯವೇ?

ಲಂಡನ್ನಿನ್ನಲ್ಲಿರುವ ನನ್ನ ಸ್ನೇಹಿತರೊಬ್ಬರ ಎರಡು ಮಕ್ಕಳಿಗೆ ಕಲ್ಲುಸಕ್ಕರೆಯೆಂದರೆ ಅಚ್ಚುಮೆಚ್ಚು. ನಮ್ಮ ಕೆಲವು ದೇವಾಲಯಗಳಲ್ಲಿ ಅವುಗಳನ್ನು ಪ್ರಸಾದವಾಗಿ ಕೊಡುವುದು ವಾಡಿಕೆ. ಈ ಮಕ್ಕಳ ಕಲ್ಲುಸಕ್ಕರೆಯ ಮೇಲಿನ ಮೋಹವನ್ನು ಅವರ ತಂದೆ-ತಾಯಿಯರು ಮಾತ್ರ ತಮಗೆ ಬೇಕಾದ ಹಾಗೆ ಹೇಗೆ ಬಳಸಿಕೊಳ್ಳ ಬೇಕು ಅನ್ನೋದನ್ನು ಕಲಿತುಕೊಂಡಿದ್ದಾರೆ: ಪ್ರತಿ ಮುಂಜಾನೆ ಈ ಮಕ್ಕಳು ಊಟದ ಕೋಣೆಯ ಮೂಲೆಯಲ್ಲಿರುವ ಬೆಳ್ಳಿಯ ಗಣೇಶನಿಗೆ ನಮಸ್ಕರಿಸಿ, ಚಿಕ್ಕದೊಂದು ಪ್ರಾರ್ಥನೆ ಸಲ್ಲಿಸಿದರೆ ಮಾತ್ರ, ಕಲ್ಲುಸಕ್ಕರೆ ಸಿಗುತ್ತದೆ. ಇಲ್ಲದಿದ್ದರೆ ಇಲ್ಲ. ಮನೋವಿಜ್ನಾನದ ಭಾಷೆಯಲ್ಲಿ ಹೇಳುವುದಾದರೆ, ತಮಗೆ ಬೇಕಾದ ನಡುವಳಿಕೆಯನ್ನು ಇವರು ಮಕ್ಕಳಲ್ಲಿ ’ಕಂಡೀಷನಿಂಗ್’ ಮಾಡಿದ್ದಾರೆ.

ಈ ಮಕ್ಕಳಿಗೆ ದೇವರು ಎಂಬುವವನ ಪರಿಚಯವದದ್ದು ಒಂದು ಕೊಡುಕೊಳ್ಳುವಿಕೆಯ ಸಂಬಂಧದ ಮೂಲಕ. ಬೆಳೆದ ಮೇಲೆಯೂ ದೇವರ ಮತ್ತು ನಿಮ್ಮ್ ನಡುವಿನ ಸಂಬಂಧ ಹೆಚ್ಚೇನು ಬದಲಾಗುವುದಿಲ್ಲ. ನೀವು ಯಾವುದೋ ಒಂದು ನಿಗದಿಯಾದ ದಿನಕ್ಕೆ ದೇವಸ್ಥಾನಕ್ಕೆ ಹೋಗಿ ಪೂಜಾವಿಧಿಗಳಲ್ಲಿ, ಹೋಮ-ಹವನಗಳಲ್ಲಿ ಭಾಗವಹಿಸಿದರೆ ನಿಮ್ಮ ಭಕ್ತಿಗೆ ಪ್ರತಿಫಲವಾಗಿ ಮನಸೋಇಚ್ಛೆ ಪ್ರಾಪ್ತಿರಸ್ತು ಎಂದು ನಂಬುತ್ತೀರಿ! ಇದು ದೊಡ್ಡವರ ಕಲ್ಲುಸಕ್ಕರೆ.  ಹಿಂದೂ, ಮುಸ್ಲಿಮ್, ಕ್ರಿಶಿಯನ್ ಯಾರೇ ಆಗಿರಲಿ, ಬಹುತೇಕ ಭಾರತೀಯರ ಧರ್ಮದ ಅಸ್ಮಿತೆಯನ್ನು ಇಂತಹ ಆಚರಣೆಗಳ ಮೂಲಕವೇ ವ್ಯಕ್ತಪಡಿಸುತ್ತಾರೆ. ಆದರೆ ಆಚರಣೆಗಳ ದಿಕ್ಕು ಯಾವತ್ತಿದ್ದರೂ ಹೊರಮುಖವಾದದ್ದೇ. ಅವು ಎಂದಿಗೂ ಅಂತರ್ಮುಖಿಯಾಗಲು ಸಾಧ್ಯವಿಲ್ಲ.

ನಾವು ಆಚರಣೆಗಳ ಕುರಿತು ಮಾತನಾಡುವಾಗ, performance of rituals ಎಂಬ ಪದಗುಚ್ಛವನ್ನು ಬಳಸುತ್ತವೆ. ಈ ಪದಗುಚ್ಛ, ಆಚರಣೆಗಳ ಆ ಹೊರಮುಖಿ ಗುಣವನ್ನು ಬಹು ಸೊಗಸಾಗಿ ವ್ಯಕ್ತಪಡಿಸುತ್ತದೆ. ಪ್ರದರ್ಶನ ಕಲೆಗಳಂತೆ ಧರ್ಮದ ಆಚರಣೆಗಳು ಪ್ರೇಕ್ಷಕರಿಲ್ಲದೆ ನಡೆಯಲಾರವು. ಆ ಪ್ರೇಕ್ಷಕ ನಿಮ್ಮ ಕುಟುಂಬವಾಗಿರಬಹುದು ಅಥವಾ ಸಮಾಜವೇ ಆಗಿರಬಹುದು. ನಮ್ಮ ಅಂತಃಸತ್ವವನ್ನು ಪೋಷಿಸದೆ, ಕೇವಲ ತಾನು ಇಂತಹ ಧರ್ಮದ ಸದಸ್ಯ ಎಂದು ಗುರುತಿಸಲು ಅಥವಾ ನಾನು ಈ ನಂಬಿಕೆಗೆ ಬದ್ಧನಾಗಿದ್ದೇನೆ ಎಂಬ ತೋರಿಕೆಯ ಆಚರಣೆಗಳ ಅರ್ಥವಾದರೂ ಏನು? ಇವುಗಳಿಂದ ಸಿಗುವ ಸಮುದಾಯದ ಸದಸ್ಯತ್ವಕ್ಕೆ ನಿಜವಾಗಿಯೂ ಬೆಲೆ ಇದೆಯೆ?

ವೈಯಕ್ತಿಕವಾಗಿ, ನನಗೆ ಧರ್ಮದ ಪರಿಚಯವಾದದ್ದು ದೇವಾಲಯಗಳ ಭೇಟಿಯ ಅಥವಾ ಚರ್ಚುಗಳ ಪವಿತ್ರ ಜಲವನ್ನು ಚಿಮುಕಿಸಿಕೊಳ್ಳುವ ಮೂಲಕ ಅಲ್ಲ. ನನ್ನ ಅಜ್ಜ-ಅಜ್ಜಿಯರು ಹೇಳಿದ ಕಥೆಗಳ ಮೂಲಕ, ದೂರದರ್ಶನ ಚಾನೆಲ್ ನ  ದೃಶ್ಯೀಕರಣಗೊಂಡ ಕಥೆಗಳ ಮೂಲಕ (ಮುಂದೊಮ್ಮೆ ಅದು ಎಷ್ಟು ಕೆಟ್ಟದಾಗಿತ್ತು ಎಂದು ಜ್ನಾನೋದಯವಾಗಿದ್ದು ಬೇರೆ ಕಥೆ ಬಿಡಿ!) ನಾನು ಧರ್ಮವನ್ನು ಕಂಡುಕೊಂಡೆ. ೯೦ರ ದಶಕದ ವಿಡಿಯೋಕಾನ್ ಟಿವಿಯ ಜೊತೆಜೊತೆಗೆ ನನ್ನ ಮನಸ್ಸಿನಲ್ಲಿಯೂ ನಮ್ಮ ಪುರಾಣಗಳ ದೇವ-ದೇವತೆಯರು, ಯಕ್ಷಂದಿರು, ಜೀವ ತೆಳೆದರು.

ನಾನು ಬೆಳೆದ ರೀತಿ ಹೇಗಿತ್ತಂದೆರೆ ಯಾವುದೋ ಒಂದು ಕಥೆಯ ಪಾತ್ರದಂತೆ, ನಮ್ಮ ಪುರಾಣಗಳಲ್ಲಿ ಬರುವ ಎಲ್ಲಾ ದೇವರುಗಳ ಮೇಲೆ ಕೋಪ ಮಾಡಿಕೊಳ್ಳಬಹುದಿತ್ತು, ಬೈಯ್ಯಬಹುದಿತ್ತು – ಅದನ್ನು ಯಾರೂ ಸಹ ಧರ್ಮನಿಂದನೆ ಅಥವಾ blasphemy ಎಂದು ಹೇಳುತ್ತಿರಲಿಲ್ಲ. ನನ್ನ ಮತ್ತು ನನ್ನ ದೇವರಿನ ಸಂಬಂಧ ನನ್ನ ಮತ್ತು ನನ್ನ ದೇವರಿಗೆ ಮಾತ್ರ ಸಂಬಂಧಸಿದ್ದು ಎಂದು ನಾನು ನಂಬಿದ್ದೆ. ಶಿವ-ಗಣೇಶರ ಮೇಲಿನ ನನ್ನ ಅಭಿಮಾನವು, ಕರ್ವಾಲೋ-ಸಿಂಹ ಸೇನಾಪತಿಯ ಮೇಲಿದ್ದ ಅಭಿಮಾನಕ್ಕಿಂತೇನೂ ಭಿನ್ನವಾಗಿರಲಿಲ್ಲ. ಹೇಗೆ ನನ್ನೊಳಗೆ ಕರ್ವಾಲೊ ಜೀವಂತನಿದ್ದನೋ, ಹಾಗೆಯೇ ಶಿವನೂ ಕೂಡ ಇದ್ದನು. ನನ್ನ ಪರಿಕಲ್ಪನೆಯ ಧರ್ಮ ಒಬ್ಬ ವ್ಯಕ್ತಿಯ ವೈಯಕ್ತಿಕ ಆಧ್ಯಾತ್ಮದ ಪಯಣಕ್ಕೆ ಎಡೆ ಮಾಡಿಕೊಡುವ ದಾರಿದೀಪವೇ ಹೊರತು, ಅರ್ಥಹೀನ ಆಚರಣೆಗಳಿಗೆ ಕಟ್ಟುಬಿದ್ದ ಪ್ರದರ್ಶನದ ವಸ್ತುವಲ್ಲ.

ಬಹುಶಃ ಇಂದು ನಾವು  ನಮ್ಮ  ಬೇರುಗಳತ್ತ ಕೈ ಚಾಚಿ ನಮ್ಮ ಪವಿತ್ರ ಪುಸ್ತಕಗಳನ್ನು ಮರುಭೇಟಿ ಮಾಡುವ ಕಾಲ ಬಂದಿದೆ. ಆದರೆ ನಾವು ಈ ಪುಸ್ತಕಗಳಲ್ಲಿನ ಕಥೆಗಳ ಆಳಕ್ಕೆ ಇಳಿಯುವ ಪ್ರಯತ್ನ ಮಾಡಬೇಕೆ ಹೊರತು, ಆ ಕಥೆಗಳಲ್ಲಿನ ಪಾತ್ರಗಳ ಮೇಲ್ಪಟ್ಟದ ಹೇಳಿಕೆಗಳನ್ನು ವೇದವಾಕ್ಯವೆಂದು ಪರಿಗಣಿಸುವುದಲ್ಲ. ನಮ್ಮ ಪುರಾಣಗಳಲ್ಲಿರುವ ದೇವರುಗಳು ಮತ್ತು ಪ್ರವಾದಿಯರನ್ನು, ಅತಿಮಾನುಷ ಶಕ್ತಿಗಳನ್ನಾಗಿ ನೋಡದೆ, ಒಂದು ಸುಂದರವಾಗಿ ಹೆಣೆದಿರುವ ಕಥೆಯಲ್ಲಿನ ಪಾತ್ರಗಳಾಗಿ ಮಾತ್ರ ನೋಡುವ ಅಗತ್ಯ ಇಂದಿದೆ.  ದೈವತ್ವವನ್ನು ತೊರೆದ ದೇವರೊಂದಿಗೆ ಅವನು ಪ್ರತಿಪಾದಿಸುವ ಧರ್ಮವು ದೇವಾಲಯ, ಮಸೀದಿ ಚರ್ಚುಗಳನ್ನು ಬಿಟ್ಟು ಹೊರಬರುತ್ತದೆ. ಹಾಗೆ ಹೊರಬಂದು  ಜನಸಾಮಾನ್ಯರಿಗೆ ಹತ್ತಿರವಾಗುವುದೇ ಸಾಹಿತ್ಯದ ವಾಹಕಶಕ್ತಿಗೆ ಸಾಕ್ಷಿ. ಧರ್ಮವನ್ನು ಧಾರ್ಮಿಕ ಪಂಡಿತರ ಕಪಿಮುಷ್ಟಿಯಿಂದ ಸಾಹಿತ್ಯದ ಪರಿಧಿಯೊಳಗೆ ತಂದಾಗ, ನಮ್ಮ ದೇವರುಗಳನ್ನು ವಿಮರ್ಶಿಸುವ, ಪ್ರಶ್ನಿಸುವ ಹಕ್ಕು ನಮಗೆ ಸಿಗುತ್ತದೆ. ಸಾಹಿತ್ಯದಲ್ಲಿ ಯಾವ ಪಾತ್ರವೂ ಪ್ರಶ್ನಾತೀತನಲ್ಲ.

ಜಗತ್ತಿನಲ್ಲಿ ನಡೆಯುತ್ತಿರುವ ಎಷ್ಟೋ ಹಿಂಸಾಚಾರ ಮತ್ತು ಕ್ರೌರ್ಯಕ್ಕೆ ಧರ್ಮವೇ ಕಾರಣವೆಂದು ಬಲವಾಗಿ ನಂಬಿರುವ ನಾಸ್ತಿಕರಾದ  ಸ್ಯಾಮ್ ಹಾರಿಸ್ ಮತ್ತು ರಿಚರ್ಡ್ ಡಾಕಿನ್ಸ್ ಅಂತವರು ಇಡೀ ಧರ್ಮವೆಂಬುದನ್ನೇ ನಿರ್ನಾಮ ಮಾಡಬೇಕೆಂದು ವಾದಿಸುತ್ತಾರೆ. ಆದರೆ ಸಾವಿರಾರು ಜನರ ಅಸ್ತಿತ್ವದ ಬೇಗುದಿಯ ಗಾಯಗಳಿಗೆ ಮುಲಾಮಾಗುವ ಧರ್ಮವನ್ನು ಸಂಪೂರ್ಣವಾಗಿ ಅಳಿಸಿಹಾಕುವುದು ಆಗದ ಮಾತು. ಅದರ ಬದಲು ನಾವು ಅದನ್ನು ನೋಡುವ ದೃಷ್ಟಿಕೋನವನ್ನು ಬದಲಿಸುವುದು ಜಾಣತನ. ಅಷ್ಟೇ ಅಲ್ಲದೇ ಧರ್ಮಪುಸ್ತಕಗಳಲ್ಲಿ ಮಾನವರ ಇತಿಹಾಸದ ಕುರಿತು ಎಷ್ಟೋ ಹೊಳಹುಗಳಿವೆ ಎಂಬುದನ್ನು ಅಲ್ಲಗಳೆಯುವುದು ಕಷ್ಟಸಾಧ್ಯ.

ಬದಲಾಗಿ, ಸಾಹಿತ್ಯದ ವಿಸ್ತಾರ ಜಗತ್ತಿನೊಳಗೆ ಧರ್ಮವನ್ನು ಆಮಂತ್ರಿಸೋಣ. ನಮ್ಮ ಸಾಹಿತ್ಯದ ಕ್ಲಾಸುಗಳಲ್ಲಿ ಕುವೆಂಪು, ಬೇಂದ್ರೆ, ಕಾರಂತರ ಜೊತೆಜೊತೆಗೆ ಭಗವದ್ ಗೀತೆಯನ್ನು, ಕುರಾನ್ ನನ್ನು, ಬೈಬಲ್ ಅನ್ನು ಕಲೆಯೋಣ. ನಮ್ಮ ಧರ್ಮ ಗ್ರಂಥಗಳು ಸತ್ಯವಾಕ್ಯಗಳಾಗಿರದೆ, ಕಾಲ್ಪನಿಕ ಕಥೆಗಳಾಗಿರುವ ಸಾಧ್ಯತೆಯನ್ನು ಕೇವಲ ಒಂದು ಗಂಟೆಯ ಮಟ್ಟಿಗಾದರು ಪರಿಶೀಲಿಸೋಣ. ನಮ್ಮ ಮಕ್ಕಳ ತಲೆಯಲ್ಲಿ ಈ ಸಾಧ್ಯತೆ ಯ ಹುಳುವನ್ನು ಬಿಡೋಣ.

ಧರ್ಮದ ವಿಚಾರದಲ್ಲಿ ಕಂಡುಬರುವಷ್ಟೇ ಭಾವೋದ್ರೇಕತೆ ಸಾಹಿತ್ಯಲೋಕದಲ್ಲಿ ಇಲ್ಲವಂದೇನಲ್ಲ. ನೀವು ಸಾಹಿತ್ಯದ ಕ್ಲಾಸುಗಳಲ್ಲಿ, ಸೆಮಿನಾರ್ ಗಳಲ್ಲಿ ಅಥವಾ ನಿಮ್ಮ ಬಳಗದ ಸಾಹಿತ್ಯಾಸಕ್ತರ ಜೊತೆ ನಡೆಯುವ ಮಾತುಕತೆಯಲ್ಲೇ ಕಾಣಬಹುದು, ಕೆಲವರು ತಾವು ಇಷ್ಟಪಟ್ಟ ಪುಸ್ತಕಗಳ, ಲೇಖಕರ ಕುರಿತು ಎಷ್ಟು ಪ್ರೀತಿಯಿಂದ, ಉತ್ಕಟತೆಯಿಂದ ಮಾತನಾಡುತ್ತಾರೆಂದು. ಭಾವನೆಗಳ ತೀವ್ರತೆಯ ವಿಚಾರದಲ್ಲಿ ನೋಡುವುದಾದರೆ ಸಾಹಿತ್ಯಕ್ಕೂ, ಧರ್ಮಕ್ಕೂ ಅಂತಹ ವ್ಯತ್ಯಾಸವೇನಿಲ್ಲ. ಆದರೆ ಒಂದು ಗುಂಪಿನ ಸಾಹಿತ್ಯರಾಧಕರು, ಇನ್ನೊಂದು ಗುಂಪಿನ ಸಾಹಿತ್ಯಾರಾಧಕರನ್ನು ಕೊಂದ ಉದಾಹರಣೆಗಳಿಲ್ಲ. ಹಿಂಸೆ ಏನಿದ್ದರೂ ಧರ್ಮಾಂಧರ ಅಸ್ತ್ರ.

ಓದು ಒಬ್ಬ ಮನುಷ್ಯನಲ್ಲಿ ಇತರರ ಬಗೆಗಿನ ಮೇಲಿನ ಕಾಳಜಿಯನ್ನು ಹೆಚ್ಚುವಂತೆ ಮಾಡುತ್ತದೆ ಎಂದು ಎಷ್ಟೋ ಸಂಶೋಧಕರು ಈಗಾಗಲೇ ಸಾಬೀತು ಪಡಿಸಿದ್ದಾರೆ. ಸಾಹಿತ್ಯದ ಶಕ್ತಿ ಏನೆಂಬುದನ್ನು ಯಾವ ಓದುಗರು ಸಾಹಿತ್ಯದ ಜೊತೆಗೆ ಒಂದು ವಿಮರ್ಶಾತ್ಮಕವಾದ ಒಡನಾಟ ಹೊಂದಿರುತ್ತಾರೋ ಅವರು ಅರಿತಿರುತ್ತಾರೆ. ಈ ಶಕ್ತಿಯ ಅರಿವಿರುವವರು ಹಿಂಸೆಯ ಮೊರೆ ಹೋಗುವುದಾದರೂ ಹೇಗೆ? ಮಂತ್ರ, ಗಾಸ್ಪೆಲ್, ಹಡಿತ್ ಗಳ ಮೂಲಕ ಪದಗುಚ್ಚಗಳ ಮೇಲೆ ಸಾಹಿತ್ಯದಷ್ಟೇ ಪ್ರಾಮುಖ್ಯತೆಯನ್ನು ವಹಿಸಿದರೂ, ರಕ್ತಪಾತ ಕಂಡುಬರುವುದು ಧರ್ಮದಲ್ಲೇ ಹೊರತು, ಸಾಹಿತ್ಯದಲ್ಲ.

ಸಾಹಿತ್ಯಕ್ಷೇತ್ರ ಒಂದು ಕೃತಿಯ ಪಾತ್ರಗಳ ಗುಣ-ಅವಗುಣಗಳ ಬಗೆಗಿನ ಚರ್ಚೆಗೆ ಅನುವು ಮಾಡಿಕೊಡುತ್ತದೆ. ಧರ್ಮದಲ್ಲಿ ಇದು ಸಾಧ್ಯವಿಲ್ಲ. ಧರ್ಮಗ್ರಂಥಗಳನ್ನು ಸಾಹಿತ್ಯದ ದೃಷ್ಟಿಕೋನದಲ್ಲಿ ಕಂಡಾಗ ಆ ಪಾತ್ರಗಳು ನಮ್ಮ ಮುಂದೆ ತರುವ ವಿಷಯಗಳು, ಹೊಸ ಯೋಚನೆಗಳು ಪ್ರಸ್ತುತವಾಗುತ್ತವೆ ಹೊರತು, ಸ್ವತಃ ಆ ಪಾತ್ರಗಳಲ್ಲ. ಯೇಸು ಕ್ರಿಸ್ತ, ಪ್ರವಾದಿ ಮೊಹಮ್ಮದ್, ಶ್ರೀ ರಾಮ –ಇವರ್ಯಾರ ಆಯ್ಕೆಗಳು, ನಡೆದು ಬಂದ ಹಾದಿ, ಸಾಹಿತ್ಯದ ಭೂತಗನ್ನಡಿಯ ಮಸೂರದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹ ದೈವಿಕ ಛಾಯೆಯ ಪಾತ್ರಗಳೆಲ್ಲವೂ ತಮ್ಮನ್ನು ಪ್ರತಿಷ್ಠಾಪಿಸಿರುವ ಸಿಂಹಾಸನದಿಂದ ಕೆಳಗಿಳಿಸಿ, ಸಾಮಾನ್ಯ ಜನರಿಗೆ ಸರಿಸಮಾನರಂತೆ ಪ್ರಶ್ನಿಸುವ ಅಧಿಕಾರವನ್ನು ಸಾಹಿತ್ಯ ನೀಡುತ್ತದೆ. ಸಾಹಿತ್ಯ ದೇವರನ್ನು ಮಾನವೀಕರಿಸುತ್ತದೆ.  ಈ ಮೂಲಕ ಉಳಿದ ಪಾತ್ರಗಳ ಸಮ್ಮುಖದಲ್ಲೇ ಅವರ ಬೋಧನೆಗಳನ್ನು, ಮೌಲ್ಯಗಳನ್ನು ಪುನರ್ ಪರಿಶೀಲಿಸಲಾಗುತ್ತದೆ. ಎಷ್ಟಾದರೂ ಧರ್ಮದ ಸತ್ವವನ್ನು ಅವರವರ ಭಾವಕ್ಕೆ, ಅವರವರ ಭಕುತಿಗೆ ತಕ್ಕಂತೆ ವ್ಯಾಖ್ಯಾನಿಸಬಹುದದ್ದರಿಂದ, ಸಾಹಿತ್ಯದ ಪರಿಧಿಯೊಳಗೆ ಧರ್ಮವನ್ನು ತಂದರೆ, ಕೇವಲ ಪಂಡಿತ, ಮೌಲ್ವಿ, ಪಾದ್ರಿಗಳ ಹಿಡಿತದಲ್ಲಿದ್ದ ಈ ಸೌಭಾಗ್ಯ, ಎಲ್ಲರಿಗೂ ಸಿಗುವಂತಾಗುತ್ತದೆ. ಜ್ನಾನವು ಪ್ರಜಾಪ್ರಭುತ್ವದ ರೂಪ ತೆಳೆದು ಮತ್ತೆ, ಧರ್ಮವನ್ನು ಸಾಮಾನ್ಯ ಜನರ ಕೈಯಲ್ಲಿ ತಂದಿಡುತ್ತದೆ.

ಹಿಂದೂ ಪುರಾಣಗಳಲ್ಲಿ ಕಂಡುಬರುವ ಕಥಾ ವೈವಿಧ್ಯತೆ ಇನ್ನೆಲ್ಲೂ ಕಂಡುಬರದು. ನಮ್ಮ ಪುರಾಣಗಳು ಹಲವಾರು ರೂಪಗಳಲ್ಲಿ ದೇಶದ ಉದ್ದಗಲಕ್ಕೂ  ಹರಡಿವೆ. ಒಂದೂರು ದಾಟಿ ಮತ್ತೊಂದೆಡೆಗೆ ಹೆಜ್ಜೆ ಇಡುವಷ್ಟರಲ್ಲಿ, ಬೇರೆ ಬೇರೆ ರೀತಿಯ ರಾಮಾಯಣದ ಕಥೆಗಳು ಕಾಣಸಿಗುತ್ತವೆ, ಪ್ರದೇಶಕ್ಕನುಸಾರವಾಗಿ ಪಾತ್ರಗಳ ಪ್ರಾಮುಖ್ಯತೆಯು, ಅವುಗಳ ಮೇಲೆ ಜನರಿಗಿರುವ ಪ್ರೀತಿಯೂ ಬದಲಾಗುತ್ತ ಹೋಗುತ್ತದೆ. ನಮ್ಮ ಪುರಾಣಗಳು ವಾಕ್ ಸಂಸ್ಕೃತಿಯ ಭಾಗವಾಗಿರುವುದೇ ಇಷ್ಟೊಂದು ವೈವಿಧ್ಯತೆಗೆ ಕಾರಣ. ಒಬ್ಬರು ಶಿವನನ್ನು ನೀಲಕಂಠನಾಗಿ ಪೂಜಿಸಿದರೆ, ಮತ್ತೊಬ್ಬರು ನಟರಾಜನಾಗಿ ಪೂಜಿಸುತ್ತಾರೆ. ಕೆಲವರಿಗೆ ರಾಮ ದೇವರಾದರೆ, ಇನ್ನು ಕೆಲವರಿಗೆ ರಾವಣನೇ ದೇವರು. ಇಲ್ಲಿ ಸಿದ್ಧ ಸೂತ್ರಗಳಿಲ್ಲ. ಎಲ್ಲಾ ಕಥೆಗಳು ಸಂದರ್ಭಕ್ಕನುಗುಣವಾಗಿ ಬದಲಾಗುತ್ತವೆ.

ಆದರೆ ಕೇಸರಿ ಬಳಗದ ಏಕರೂಪ ಸಿದ್ಧಾಂತ ಪರಿಣಾಮವಾಗಿ, ನಮ್ಮ ಬಹು ಸಂಸ್ಕೃತಿ ಸಮಾಜದ ಹದ ಕೆಟ್ಟಿದೆ. ನಮ್ಮ ಕಥಾ ಪ್ರಕಾರಗಳನ್ನು ಒಂದೇ ಅಳತೆಗೆ ಬಗ್ಗಿಸುವ ಪ್ರಯತ್ನಗಳು ನಡೆಯುತ್ತಿವೆ. ಮೂಲಭೂತವಾದದ ಜೊತೆ ನಂಟಿದೆ ಎಂದು ಇತರ ಧರ್ಮಗಳನ್ನು ದೂಷಿಸುತ್ತಿದ್ದವರು ಹಿಂದೂ ಧರ್ಮ ಅದೇ ದಾರಿ ಹಿಡಿಯುತ್ತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಆದರೆ ಈ ಆತಂಕಕಾರಿ ಬದಲಾವಣೆ, ನಮಗೆ ಒಂದು ಹೊಸ ಅವಕಾಶವನ್ನೂ ಕಲ್ಪಿಸಿ ಕೊಟ್ಟಿದೆ. ಹಿಂದೂ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳೆಲ್ಲವೂ ಜೊತೆಗೂಡಿ, ಧರ್ಮಗಳು ಹೇಗೆ ಪುಸ್ತಕಗಳ ಚೌಕ್ಕಟ್ಟುಗಳನ್ನು ಮೀರಿ, ಜನ ಸಾಮಾನ್ಯರ ದಿನನಿತ್ಯದ ಬದುಕಿಗೆ ಪೂರಕವಾಗುವಂತೆ, ಹೊಂದಿಕೊಳ್ಳಬೇಕೆಂಬುದನ್ನು ಸಾಧಿಸಿ ತೋರಿಸಲು ಇದೇ ಸದಾವಕಾಶ.

ಈಗಾಗಲೇ ಅಮೀಶ್  ತ್ರಿಪಾಠಿಯಂತಹ ಎಷ್ಟೋ ಕಾದಂಬರಿಕಾರರು ನಮ್ಮ ಪುರಾಣಗಳಿಂದ ಸ್ಪೂರ್ತಿ ಪಡೆದು ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. ನಾನು ಈ ರೀತಿಯ ಧರ್ಮ ಸಾಹಿತ್ಯವಾಗುವ ಬಗ್ಗೆ ಮಾತನಾಡುತ್ತಿಲ್ಲ. ಬದಲಾಗಿ ನಮ್ಮ ಇಡೀ ಧರ್ಮ ಗ್ರಂಥಗಳೇ ಸಾಹಿತ್ಯವಾಗಲಿ, ಸಾಹಿತ್ಯದಲ್ಲಿ ಪರಿಧಿಯಲ್ಲಿ ಧರ್ಮದಸಂಕೋಲನೆಗಳನ್ನು ಕಳಚಿ ನಾವದನ್ನು ಆಸ್ವಾದಿಸುವಂತಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸುತ್ತಿದ್ದೇನಷ್ಟೇ.

ಈ ಯೋಜನೆಗೆ ಬಹು ದೊಡ್ಡ ತೊಡಕು ನಮ್ಮ ಜಾತ್ಯಾತೀತರಿಂದಲೇ ಬರಬಹುದು ಎಂಬುದು ಒಂದು ಕುತೂಹಲಕರ ಸಂಗತಿ. ಸೆಕುಲರಿಸಂ ಎಂಬ ಪಾಶ್ಚಾತ್ಯ ಕಲ್ಪನೆಯಡಿಯಲ್ಲಿ, ಧರ್ಮ ಮತ್ತು ಆಡಳಿತ ಎರಡನ್ನು ದೂರವಿರಿಸಬೇಕು. ಆದರೆ ಭಾರತದಲ್ಲಿ ಮಾತ್ರ ಇದನ್ನು, ತಾವು ಇನ್ನೊಬ್ಬರ ಧರ್ಮದಲ್ಲಿರುವ ಹೊಳಕುಗಳ ಕುರಿತು ಮಾತನಾಡಬಾರದೆಂಬ ವಿಚಿತ್ರ ಅರ್ಥವನ್ನು ಪಡೆದುಕೊಂಡಿದೆ. ಆದ್ದರಿಂದಲೇ ಧರ್ಮ ನಮ್ಮನ್ನು ಆಳುತ್ತಿದೆ.

ಆದರೆ ಧರ್ಮ ನಮ್ಮನ್ನು ಆಳುವ ಬದಲು, ನಾವು ಧರ್ಮವನ್ನು ಹಿಡಿತದಲ್ಲಿಟ್ಟುಕೊಂಡು ಆಳಬೇಕು ಎಂದು ಬಯಸುವುದಾದರೆ, ನಮ್ಮ ಧರ್ಮಗಳು ಕೇವಲ ನೀತಿಪಾಠ ಬೋಧಿಸುವ ಪಠ್ಯಗಳಾಗದೆ, ವಿಮರ್ಶೆಗೆ ಒಳಪಡುವ ಸಾಹಿತ್ಯ ಕೃತಿಗಳಾಗಿ ಮಾರ್ಪಾಡಾದರೆ ಮಾತ್ರ ಸಾಧ್ಯ.

ಪ್ರತಿಯೊಂದು ಧರ್ಮವು ಒಂದು ಸಿದ್ಧಾಂತವನ್ನು ಬಿಂಬಿಸುತ್ತದೆ. ಭಾರತೀಯರಾಗಿ ನಾವು ಈ ಯಾವುದೇ ಸಿದ್ಧಾಂತವನ್ನು ಪ್ರಶ್ನಿಸುವ ಅವಕಾಶವಿದೆ. ನಾವು ಯಾವ ಧರ್ಮಕ್ಕೆ ಸೇರಿದವರು ಎಂಬ ಸಂಗತಿ ಪ್ರಶ್ನೆ ಮಾಡುವ ಸಂದರ್ಭದಲ್ಲಿ ಅಪ್ರಸ್ತುತ. ನಮ್ಮ ರಾಜಕೀಯ ವಾಸ್ತವತೆ ಅದಕ್ಕೆ ಅನುವು ಮಾಡಿಕೊಡುತ್ತಿಲ್ಲವಾದ್ದರಿಂದಲೇ ನಾವಿಂದು ಸಾಹಿತ್ಯದ ಕಡೆ ಮುಖ ಮಾಡಿದ್ದೇವೆ. ಸಾಹಿತ್ಯದಲ್ಲಿರುವ ಸ್ವಾತಂತ್ರ್ಯ ,ಧರ್ಮಕ್ಕೂ ತಟ್ಟಲಿ.

ಪ್ರತಿಕ್ರಿಯಿಸಿ