ಡಿ. ಆರ್. ನಾಗರಾಜ್ ಉಪನ್ಯಾಸ : ರಾಷ್ಟ್ರೀಯತೆ (#Nationalism)

1997ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಐವತ್ತು ವರ್ಷಗಳಾದ  ಸಂದರ್ಭದಲ್ಲಿ ಮಣಿಪಾಲದ ಮಾನವಿಕ ಅಧ್ಯಯನಗಳ ಕೇಂದ್ರದಲ್ಲಿ ಹಮ್ಮಿಕೊಳ್ಳಲಾದ ಉಪನ್ಯಾಸ ಸರಣಿಯಲ್ಲಿ  ’ಭಾರತೀಯ ಕಲ್ಪನೆಯ ಸಮಕಾಲೀನ ರೂಪಗಳು’ ಎಂಬ ವಿಷಯದ ಮೇಲೆ ಶ್ರೀಯುತ ಡಿ. ಆರ್. ನಾಗರಾಜ್ ಅವರು ಇಂಗ್ಲೀಷಿನಲ್ಲಿ ಕೊಟ್ಟ ಮೂರು ದಿನಗಳ ಉಪನ್ಯಾಸ ಮಾಲಿಕೆಯ ಒಂದು ಉಪನ್ಯಾಸ ಇಲ್ಲಿದೆ. ಈ ಉಪನ್ಯಾಸದ ಧ್ವನಿಮುದ್ರಿಕೆಯಲ್ಲಿ ಅವರ ಆರಂಭದ ಕೆಲ ಮಾತುಗಳು ಮುದ್ರಿತವಾಗಿಲ್ಲ. ಆದ್ದರಿಂದ ಅವರ ಮಾತುಗಳು ಎಲ್ಲಿಂದ ಮುದ್ರಿತವಾಗಿವೆಯೋ ಅಲ್ಲಿಂದ ಪ್ರಕಟಿಸಲಾಗಿದೆ ಹಾಗೂ ಕನ್ನಡ ಅನುವಾದವನ್ನು ಮಾಡಲಾಗಿದೆ.  ಉಳಿದ ಎರಡು ಉಪನ್ಯಾಸಗಳನ್ನು ಮುಂದೆ ಪ್ರಕಟಿಸಲಾಗುವುದು .


ರಾಜಕೀಯ ಮತ್ತು ಸಾಹಿತ್ಯದ ಸೈದ್ಧಾಂತಿಕ ತತ್ವಗಳ ಒಬ್ಬ ಚಿಂತಕನಾಗಿ ನಾನು ಇವತ್ತು ರಾಷ್ಟ್ರೀಯತೆ ಎಂಬ ಕನಸು  ಮತ್ತು ಆ ಕನಸಿನಿಂದಾಗಿ  ಉದ್ದೀಪನಗೊಳ್ಳುವ ಒಂದು ವಿಶಿಷ್ಟ ವಿದ್ಯಮಾನವನ್ನು ಕುರಿತು ಮಾತನಾಡಲಿದ್ದೇನೆ. ಈ ವಿದ್ಯಮಾನವು ಸಮಾಜದಲ್ಲಿನ  ಕೆಲವು ಸಮುದಾಯಗಳು ’ಅಗೋಚರವಾಗುವ ಪ್ರಕ್ರಿಯೆ’ ಗಳಿಗೆ ಸಂಬಂಧಪಟ್ಟಿದ್ದು. ಇವತ್ತಿನ ಉಪನ್ಯಾಸದ ಮುಖ್ಯ ವಿಷಯ ಇದೇ.

ಪ್ರಾಯಶಃ ಅದು ಯಾಕೆಂದರೆ ಈ ಅಗೋಚರವಾಗುವ ಪ್ರಕ್ರಿಯೆಗಳು  ಮಹಾ ಪಾತಕದ ಕತೆಗಳು ಕೂಡ ಆಗಿವೆ. ನಾವು ನಮ್ಮ ರಾಷ್ಟ್ರವನ್ನು ನೂರು ವರ್ಷಗಳ ಪರಿಶ್ರಮದಿಂದ ಕಟ್ಟಿದೆವು ಮತ್ತು ನಾವೀಗ ಸಾಧನೆಯ ಸಂಭ್ರಮದಲ್ಲಿ ಮುಳುಗಿದ್ದೇವೆ. ಆದರೆ ಎಲ್ಲೋ ಒಂದು ಕಡೆ ಈ ಸಂಭ್ರಮ ಇನ್ನೂ ಅಪೂರ್ಣ ಎಂದು ನನಗೆ ಅನಿಸುತ್ತದೆ.  ಇಲ್ಲಿಯವರೆಗೆ ನಾವು ಏನೇನನ್ನು ಸಾಧಿಸಿದ್ದೇವೆ ಎಂಬುದರ ಕುರಿತು  ಒಂದು ಸುಸಂಸ್ಕೃತ ಮಾತುಕತೆಯನ್ನೇನಾದರೂ ನಾವು ನಡೆಸಿದರೆ ನಮಗೆ ಸಂಭ್ರಮಾಚರಣೆಗಿಂತ ಶೋಕಾಚರಣೆಗೆ ಬಹಳಷ್ಟು ಸಂಗತಿಗಳು ದೊರೆಯುತ್ತವೆ ಎಂದು ನನಗನಿಸುತ್ತದೆ. ಹಾಗಾಗಿ, ಈ ಒಂದು ಭಾವನಾತ್ಮಕ ಒತ್ತಡದ ಹಿನ್ನೆಲೆಯಲ್ಲಿ.  ಒಂದು ವಿಷಾದಪೂರ್ಣ ತಾತ್ವಿಕ ನಿಲುವಿನ ಹಿನ್ನೆಲೆಯಲ್ಲಿ ನಾನು ನಿಮ್ಮೆದುರಿಗೆ ನನ್ನ ಕೆಲವು ವಿಚಾರಗಳನ್ನು ಮಂಡಿಸುತ್ತಿದ್ದೇನೆ.

ಇವತ್ತು ನಾನು ನಿಮ್ಮೆದುರಿಗೆ ಚರ್ಚಿಸಬಯಸುವ ವಿಷಯ ರಾಷ್ಟ್ರವೆಂಬ ಕನಸಿನ ಕುರಿತಾದದ್ದು. ಹಾಗಾಗಿ.  ನನ್ನ ಮೊದಲ ಉಪನ್ಯಾಸದಲ್ಲಿ ನಾನು ರಾಷ್ಟ್ರವೆಂಬ ಕನಸನ್ನು ಒಂದು ರೂಪಕವನ್ನಾಗಿಟ್ಟುಕೊಂಡು ಅದರ ಸ್ವರೂಪ  ಮತ್ತು ಗುಣ ಲಕ್ಷಣಗಳನ್ನು ಕುರಿತು ಮಾತನಾಡಲಿದ್ದೇನೆ. ಎರಡನೆಯ ಉಪನ್ಯಾಸದಲ್ಲಿ ಮತ್ತೊಂದು ಕನಸಿನ ಬಗೆಗೆ ಮಾತನಾಡಲಿದ್ದೇನೆ, ಅದನ್ನು ನಾನು ಸೆಕ್ಯುಲರಿಸಂನ ಕನಸು ಎಂದು ಕರೆಯುತ್ತೇನೆ. ಮೂರನೆಯ ಕನಸು, ನಾನದನ್ನು ಪ್ರಗತಿ ಮತ್ತು ಅಭಿವೃದ್ಧಿಯ ಕನಸು ಎಂದು ಕರೆಯುತ್ತೇನೆ, ಅದರ ಬಗೆಗೆ ನಾಡಿದ್ದು ಮಾಡುವ ಮೂರನೆಯ ಉಪನ್ಯಾಸದಲ್ಲಿ ಚರ್ಚಿಸುತ್ತೇನೆ.

ಮುಖ್ಯವಾಗಿ  ನಮ್ಮ ಈ ಕನಸುಗಳ ಸ್ವರೂಪಗಳನ್ನು ಪರಿಶೋಧಿಸುವುದು ನನ್ನ ಉದ್ದೇಶವಾಗಿದೆ. ಇವು ನಮ್ಮನ್ನೆಲ್ಲಾ ಉತ್ತೇಜಿಸಿದ ಕನಸುಗಳು,   ನಮ್ಮೊಳಗೆ ಹೊಸ ಜೀವ ತುಂಬಿದ ಕನಸುಗಳು, ನಮ್ಮನ್ನು ಪೋಷಿಸಿದ ಕನಸುಗಳು,  ನಮ್ಮನ್ನು ಆಕ್ಟಿವಿಸ್ಟ್ ಗಳನ್ನಾಗಿ ಮಾಡಿದ ಕನಸುಗಳು,  ನಮ್ಮನ್ನು ರಾಜನೀತಿಜ್ಞರನ್ನಾಗಿ  ಮಾಡಿದ ಕನಸುಗಳು. ನಾನು ಈ ಉಪನ್ಯಾಸದ ಆರಂಭದಲ್ಲೇ ಹೇಳಿದಂತೆ ಇವು ದುಃಸ್ವಪ್ನಗಳು ಕೂಡ. ಹಾಗಾಗಿ,  ಐವತ್ತರ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಇವತ್ತು ಒಂದು ರಾಷ್ಟ್ರವಾಗಿ, ಒಂದು ಸಮಾಜವಾಗಿ, ಒಂದು ನಾಗರಿಕತೆಯಾಗಿ ನಾವು  ನಮ್ಮ ಕನಸುಗಳು ಮತ್ತು ದುಃಸ್ವಪ್ನಗಳ ನಡುವಿನ ವ್ಯತ್ಯಾಸವನ್ನು ಅರಿಯಲು ಅಸಮರ್ಥರಾಗಿದ್ದೇವೆ. ಯಾವುದು ಕನಸು  ಮತ್ತು ಯಾವುದು ದುಃಸ್ವಪ್ನ, ಹೇಗೆ ಅವರೆಡೂ ಬೇರೆ ಬೇರೆ ಎಂಬುದನ್ನು ಅರಿಯಲು ನಮಗೆ ಸಾಧ್ಯವಾಗುತ್ತಿಲ್ಲ. ಕಳೆದ ಐವತ್ತು ವರ್ಷಗಳಿಂದ ನಾವು ಈ ಎಲ್ಲ ಕನಸುಗಳನ್ನೂ ಉದಾತ್ತ ಕನಸುಗಳು ಎಂಬಂತೆ ಸಂಭ್ರಮಿಸುತ್ತ ಬಂದಿದ್ದೇವೆ. ನೇಶನ್-ಸ್ಟೇಟ್ ಒಂದು ಕನಸಾಗಿದೆ. ಸೆಕ್ಯುಲರಿಸಂ ಒಂದು ಕನಸಾಗಿದೆ.  ಪ್ರಗತಿ ಮತ್ತು ಅಭಿವೃದ್ಧಿ, ಇದೂ ಒಂದು ಕನಸಾಗಿದೆ. ಖಂಡಿತಾ ನಾನು ಅದನ್ನು ಪ್ರಶ್ನಿಸಲು ಹೋಗುತ್ತಿಲ್ಲ, ಈ ಮೂರೂ ಮೌಲ್ಯಗಳ ಮಹತ್ವವನ್ನು ಅಲ್ಲಗಳೆಯುತ್ತಿಲ್ಲ, ಯಾಕೆಂದರೆ ಈ ಮೂರೂ ವಿಷಯಗಳನ್ನು ನಾನು ಭಾರತ ದೇಶದ ಮಹಾಕಥನಗಳು ಎಂದೇ ಕರೆದಿದ್ದೇನೆ. ಇವೆಲ್ಲಾ ನಿಜಕ್ಕೂ ಮಾಸ್ಟರ್ ನರೇಟಿವ್ಸ್.  ವಿರಾಟ್  ಕಥನಗಳು. ಈ  ಉದ್ಘೋಷಿತ ಮೌಲ್ಯಗಳ ಹಿಂದೆ ಇರುವಂತಹ ಎಲ್ಲಾ ಆದರ್ಶ ತತ್ವಗಳ ಮಹತ್ವವನ್ನು ನಾನು ಅಲ್ಲಗಳೆಯುತ್ತಿಲ್ಲ. ಬದಲಿಗೆ ಅವುಗಳನ್ನು ಪರೀಕ್ಷಿಸುವುದಷ್ಟೇ ನನ್ನ ಉದ್ದೇಶವಾಗಿದೆ. ನಾನಿಲ್ಲಿ ಕೇವಲ ಒಬ್ಬ ಸಂದೇಹವಾದಿಯ  ಕಾರ್ಯವನ್ನು ಮಾತ್ರ ನಿರ್ವಹಿಸುತ್ತಿದ್ದೇನೆ. ನಾನು ಇವು ಯಾವುದನ್ನೂ ಪರಿಶೀಲಿಸದೇ ಮುಗ್ಧವಾಗಿ ನಂಬುವವನಲ್ಲ. ನಾನು ಒಬ್ಬ ಚಿಂತಕನಾಗಿ, ರಾಜಕೀಯ ತತ್ವ-ಸಿದ್ಧಾಂತಗಳ ಪ್ರತಿಪಾದಕನಾಗಿ, ಸಾಹಿತ್ಯದ ಸೈದ್ಧಾಂತಿಕ ತತ್ವಗಳ ಚಿಂತಕನಾಗಿ  ಈ ಮೂರೂ ತತ್ವಗಳನ್ನು ಕುರಿತು ಚರ್ಚಿಸುವಾಗ ಒಳಗೊಂದು ಸಂಶಯವನ್ನು ಉಳಿಸಿಕೊಂಡೇ ಚರ್ಚಿಸಬಯಸುತ್ತೇನೆ. ಪ್ರಶ್ನೆಯೊಂದನ್ನು ಉಳಿಸಿಕೊಂಡೇ ಸಮಾಲೋಚಿಸುತ್ತೇನೆ.

ಈಗ  ಇವತ್ತಿನ ವಿಷಯಕ್ಕೆ ಬರೋಣ. ಇವತ್ತಿನ ಉಪನ್ಯಾಸದ ವಿಷಯ  ರಾಷ್ಟ್ರ ನಿರ್ಮಾಣದ ಕನಸು ಅಥವಾ ಸಮಕಾಲೀನ ರಾಜಕೀಯ ಚಿಂತಕರು, ತಾತ್ವಿಕ ಸಿದ್ಧಾಂತಿಗಳು ಹೇಳುವ ಹಾಗೆ ಒಂದು ರಾಷ್ಟ್ರ ಪ್ರಭುತ್ವದ (ನೇಶನ್ ಸ್ಟೇಟ್‌) ಕನಸು. ಪ್ರಮುಖ ರಾಜ್ಯಶಾಸ್ತ್ರಜ್ಞರಾದ ಬೆನೆಡಿಕ್ಟ್ ಆಂಡರ್ಸನ್ ರವರ ಬಗೆಗೆ ಪ್ರಾಯಶಃ ನಿಮ್ಮಲ್ಲಿ ಕೆಲವರಿಗಾದರೂ ಗೊತ್ತಿರಬಹುದು, ಅವರ ’ಇಮ್ಯಾಜಿನ್ಡ್ ಕಮ್ಯುನಿಟೀಸ್’ (ಕಲ್ಪಿಸಿಕೊಂಡ ಸಮುದಾಯಗಳು)  ಎಂಬ ಪುಸ್ತಕವು ರಾಜ್ಯಶಾಸ್ತ್ರದ ತತ್ವಗಳಿಗೆ ಸಂಬಂಧಪಟ್ಟಂತೆ ಇತಿಹಾಸದಲ್ಲಿ ಚಿರಸ್ಥಾಯಿಯಾಗಿರುವ ಕೃತಿ. ಆ ಕೃತಿಯ ಮೂಲಕ ಅವರು ಮಂಡಿಸುವ ವಾದದ ಸಾರವನ್ನು ಒಂದೆರಡು ವಾಕ್ಯಗಳಲ್ಲಿ ನಿಮ್ಮೆದುರು ಇಡುತ್ತೇನೆ. ನಂತರ ಮುಂದುವರೆದು ಇವತ್ತಿನ ನಮ್ಮ ವಿಷಯದ ಮೇಲೆ ಬೆಳಕು ಚೆಲ್ಲಲು  ಆಂಡರ್ಸನ್ ರವರು ಪ್ರಸ್ತುತ  ಪಡಿಸುವ ಕೆಲವು ಮಹತ್ವದ ವಿಚಾರಗಳನ್ನು ಬಳಸಿಕೊಳ್ಳುತ್ತೇನೆ. ಬೆನೆಡಿಕ್ಟ್ ಆಂಡರ್ಸನ್ ರವರ ಪ್ರಕಾರ ರಾಷ್ಟ್ರ ಅಥವಾ ರಾಷ್ಟ್ರ ಪ್ರಭುತ್ವವೆಂಬುದು ಮೂಲತಃ ಒಂದು ಕಾಲ್ಪನಿಕ ಸಂಗತಿ. ಭಾವಿಸಿಕೊಂಡ ಸಂಗತಿ.  ಎಲ್ಲಾ ರಾಷ್ಟ್ರಗಳೂ, ಎಲ್ಲಾ ರಾಷ್ಟ್ರ ಪ್ರಭುತ್ವಗಳೂ ಅವರ ಪ್ರಕಾರ ಮಾನಸಿಕವಾಗಿ ಭಾವಿಸಿಕೊಂಡ ರಚನೆಗಳು.

ಇದು ಆಂಡರ್ಸನ್‌ರವರ ಮೊದಲ ಪ್ರಮೇಯ. ಅನೇಕ ರೀತಿಯಲ್ಲಿ ಇದು ಸ್ವಲ್ಪ ಮಟ್ಟಿಗೆ ಅಸಹನೆ ಮೂಡಿಸುವಂತಹ ವಿಚಾರವೇ ಹೌದು. ಹಾಗಾದರೆ ಅವರು ಏನನ್ನು ಹೇಳುತ್ತಿದ್ದಾರೆ? ಅವರು ರಾಷ್ಟ್ರ, ರಾಷ್ಟ್ರ ಪ್ರಭುತ್ವ ಮತ್ತು ರಾಷ್ಟ್ರೀಯತೆಯ ಬಗೆಗೆ ಒಬ್ಬ ರಾಚನಿಕವಾದಿಯ ವಿವರಣೆಯನ್ನು ನೀಡುತ್ತಿದ್ದಾರೆ. ಅವರು ಹೇಳುತ್ತಾರೆ, ರಾಷ್ಟ್ರ ಮತ್ತು ರಾಷ್ಟ್ರೀಯತೆ  ಎಂದು ನಾವೇನು ಕರೆಯುತ್ತೇವೋ ಅವು ಯಾವವೂ  ಗಿಡ ಮರಗಳಂತೆ ಸ್ವಾಭಾವಿಕವಾಗಿಯೇ ಅಸ್ತಿತ್ವದಲ್ಲಿ ಇರುವ ಸಂಗತಿಗಳಲ್ಲ. ಅವೆಲ್ಲ ಭಾವಿಸಿಕೊಂಡದ್ದು. ಅದರರ್ಥ ಅವು ಅಸತ್ಯವೆಂದಲ್ಲ. ಒಂದು ಅಸತ್ಯ ಮತ್ತು ಒಂದು ಕಾಲ್ಪನಿಕ ಸಂರಚನೆಯ ನಡುವೆ ಒಂದು ಅತಿಮುಖ್ಯವಾದ ವ್ಯತ್ಯಾಸವಿದೆ. ಒಂದುವೇಳೆ ನಮಗೆ ಇವತ್ತಿನ ರಾಜಕೀಯ ಸಿದ್ದಾಂತಗಳಾಗಲೀ, ಸಾಹಿತ್ಯದ ಸಿದ್ಧಾಂತಗಳಾಗಲೀ ಮುಖ್ಯವೆಂದು ಯಾಕೆ ಅನಿಸುತ್ತದೆಯೆಂದರೆ  ಅವು  ಕಾಲ್ಪನಿಕ  ಸಂರಚನೆಗಳನ್ನು ಭಿನ್ನ ಭಿನ್ನ ರೀತಿಯಲ್ಲಿ ಗ್ರಹಿಸುವ ಸವಲತ್ತನ್ನು ನೀಡುತ್ತಿರುತ್ತವೆ ಎಂಬ ಕಾರಣಕ್ಕೇ.  ಇವು ಯಾವವೂ ಅಸತ್ಯಗಳಲ್ಲ. ಅವು ಖಂಡಿತಕ್ಕೂ ವಾಸ್ತವವೇ. ಅವು ಭಯಾನಕ ವಾಸ್ತವವೆಂದರೂ ಸರಿಯೇ. ಆದರೆ ನಿಜವಾಗಿಯೂ ಹೇಳಬೇಕೆಂದರೆ  ಅವೆಲ್ಲ ಕಾಲ್ಪನಿಕ, ಮಾನಸಿಕ ಸಂರಚನೆಗಳು. ಮನುಷ್ಯರಿಗೆ ಇಂತಹ ಸಂರಚನೆಗಳ ಅವಶ್ಯಕತೆ ಖಂಡಿತಕ್ಕೂ ಇದೆ. ಇಂತಹ ಕಾಲ್ಪನಿಕ ಸಂಗತಿಗಳ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿಯೇ ಬೆನೆಡಿಕ್ಟ್ ಆಂಡರ್ಸನ್ ರವರು ರಾಷ್ಟ್ರೀಯತೆ ಅನ್ನುವುದು ಮೂಲತಃ ಒಂದು ಕಾಲ್ಪನಿಕ ಸಂರಚನೆ ಎಂದು ಪ್ರತಿಪಾದಿಸುತ್ತಾರೆ.

ರಾಷ್ಟ್ರ, ರಾಷ್ಟ್ರಪ್ರಭುತ್ವ ಇವೆಲ್ಲಾ  ಭಾವಿಸಿಕೊಂಡ ಸಮುದಾಯಗಳು. ಹಾಗಾದರೆ ಅವು ಹೇಗೆ ಅಸ್ತಿತ್ವಕ್ಕೆ ಬರುತ್ತವೆ? ಈ ಕಲ್ಪನೆಯನ್ನು ಭೌತಿಕವಾಗಿ ಅಸ್ತಿತ್ವಕ್ಕೆ ತರುವ, ಈ ಕಾಲ್ಪನಿಕ ಸಮುದಾಯಗಳನ್ನು   ಐತಿಹಾಸಿಕ ಪ್ರಕ್ರಿಯೆಯ ಒಂದು ಭಾಗವನ್ನಾಗಿ ಮಾಡುವ ಮತ್ತು ಅಂತಹ ಒಂದು ಪ್ರಕ್ರಿಯೆಗೆ ಚಾಲನೆ ನೀಡುವ  ವಿನ್ಯಾಸ ಯಾವುದು?  ಇಲ್ಲಿ ಗಮನಿಸತಕ್ಕ ಎರಡು ಸಂಗತಿಗಳಿವೆ. ಮೊದಲನೆಯದು, ಒಂದು ಬಗೆಯ ಸಾಹಿತ್ಯಿಕ ಜ್ಞಾನ, ಒಂದು ಬಗೆಯ ಸಾಹಿತ್ಯಿಕ ಸಂಸ್ಕೃತಿಯ ಜ್ಞಾನವು ಈ ರಾಷ್ಟ್ರ ಮತ್ತು ರಾಷ್ಟ್ರೀಯತೆ ಎಂಬ ಪರಿಕಲ್ಪನೆಗಳನ್ನು ಹುಟ್ಟುಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ರಾಷ್ಟ್ರೀಯತೆಯು ಮೂಲತಃ ಸಾಹಿತ್ಯದ  ಒಂದು ನಿರ್ಮಿತಿ.  ಮೂಲತಃ ಅದು ಒಂದು ಬಗೆಯ ಸಾಹಿತ್ಯಿಕ ಕಲ್ಪನೆಯ ಕೂಸು. ಅದಿಲ್ಲದಿದ್ದರೆ ಅದೊಂದು ಅಸಡ್ಡೆ ಮಾಡಬಹುದಾದ ಸಂಗತಿಯಾಗಿತ್ತು. ಅಂದರೆ ಏನರ್ಥ? ಆಂಡರ್ಸನ್ ರವರ ನಿಲುವನ್ನು ಸರಳೀಕರಿಸಿ ವಿಶ್ಲೇಷಿಸುವುದಾದರೆ ಬಂಡವಾಳಷಾಹಿ ಇತಿಹಾಸದ ಒಂದು ಕಾಲಘಟ್ಟದಲ್ಲಿ ಕೆಲವು ನಿರ್ದಿಷ್ಟ ಸಮುದಾಯಗಳನ್ನು ಒಂದು ಬಗೆಯ ಹಾತೊರೆಯುವಿಕೆ ಆವರಿಸಿಕೊಳ್ಳುತ್ತದೆ.  ಕೆಲವು ನಾಗರಿಕ ಸಮುದಾಯಗಳು, ಕೆಲವು ರಾಷ್ಟ್ರೀಯ ಸಮುದಾಯಗಳು. ಅವು ತಮ್ಮನ್ನು ತಾವು ಪುನರ್-ಸಂಘಟಿಸಿಕೊಂಡು  ಹೊಸ ಸಮುದಾಯಗಳಾಗಿ ಪರಿವರ್ತಿತಗೊಳ್ಳುತ್ತವೆ. ಹೀಗೆ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಪರಿಕಲ್ಪನೆಗಳ ಹೊಸ ರೂಪದ ಅಸ್ಮಿತೆಗಳು ಹುಟ್ಟಿಕೊಳ್ಳುತ್ತವೆ. ಈ ಪ್ರಕ್ರಿಯೆಯಲ್ಲಿ ಸಮಾಜದೊಳಗಿದ್ದ ಹಲವು ಅಸ್ಮಿತೆಗಳು ಒಂದರೊಳಗೊಂದು ಲೀನವಾಗುತ್ತವೆ. ಅನಾದಿ ಕಾಲದಿಂದಲೂ ಇದ್ದ ಅಸ್ಮಿತೆಗಳನ್ನು ಪ್ರಶ್ನಿಸಲಾಗುತ್ತದೆ. ಹಿಂದಿನ   ಅಸ್ಮಿತೆಗಳು ಒತ್ತಡಕ್ಕೆ ಮಣಿದು ಸಾಯುತ್ತವೆ. ಹೊಸ ಬಗೆಯ ಅಸ್ಮಿತೆ ಅಸ್ತಿತ್ವಕ್ಕೆ ಬರುತ್ತದೆ. ಯಾವಾಗ ಒಂದು ವಿಶಿಷ್ಟ ಬಗೆಯ ಸಾಹಿತ್ಯ ಅಥವಾ ಸಾಹಿತ್ಯಕ ಸಂಸ್ಕೃತಿ ತನ್ನನ್ನು ತಾನು ಪುನರ್ ಸಂಘಟಿಸಿಕೊಳ್ಳುತ್ತದೋ ಆವಾಗ  ರಾಷ್ಟ್ರೀಯ ಅಸ್ಮಿತೆಗಾಗಿ ಒಂದು ರೀತಿಯ ಭಾವೋದ್ರಿಕ್ತ ಹುಡುಕಾಟ ಸಾಧ್ಯವಾಗುತ್ತದೆ. ಇದನ್ನೇ ಬೇರೆ ಪದಗಳಲ್ಲಿ ಹೇಳುವುದಾದರೆ  ಸಾಹಿತ್ಯಿಕ ಪ್ರಜ್ಞೆಯೇ ರಾಷ್ಟ್ರೀಯತೆಯ ತಾಯಿ ಎನ್ನಬಹುದು. ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಸಾಹಿತ್ಯವೇ ಸೃಷ್ಟಿಸುತ್ತದೆ. ಇದರಿಂದ ನಮ್ಮ ರಾಜಕಾರಣ, ನಮ್ಮ ರಾಷ್ಟ್ರೀಯ ಚಳುವಳಿಗಳು  ಮತ್ತು ಸಾಹಿತ್ಯಿಕ ಸಿದ್ಧಾಂತಗಳೂ ಕೂಡ ಆಮೂಲಾಗ್ರವಾಗಿ   ಬದಲಾಗಬಲ್ಲಂತಹ, ಆ ದಿಶೆಯಲ್ಲಿ  ತೀವ್ರ ಸಂಚಲನವನ್ನು ಹುಟ್ಟು ಹಾಕುವಂತಹ ಪರಿಣಾಮಗಳು ಸೂಚಿತವಾಗುತ್ತವೆ.

ಆಂಡರ್ಸನ್ ರವರ ಪ್ರತಿಪಾದನೆಯು ನಮಗೆ ಒಪ್ಪಿಗೆಯಾದಲ್ಲಿ, ಅಂದರೆ ರಾಷ್ಟ್ರ, ರಾಷ್ಟ್ರ ಪ್ರಭುತ್ವ (nation state) ಮತ್ತು ರಾಷ್ಟ್ರೀಯತೆ ಎಂಬ ಈ ನಿರ್ಣಾಯಕ ತತ್ವಗಳು ಒಂದು ರೀತಿಯ ಸಾಹಿತ್ಯಿಕ ಕಲ್ಪನೆಯಿಂದ ಜನ್ಮ ತಾಳಿದವು ಎಂಬುದು ನಮಗೆ ಒಪ್ಪಿಗೆಯಾದಲ್ಲಿ ರಾಷ್ಟ್ರೀಯ ಅಸ್ಮಿತೆಗಾಗಿ ನಾವು ನಡೆಸುವ ಭಾವೋದ್ರಿಕ್ತ ಹುಡುಕಾಟವು  ಕಣ್ಮರೆಯಾಗುತ್ತದೆ. ಠುಸ್ಸೆನ್ನುತ್ತದೆ. ಆಗ ರಾಷ್ಟ್ರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಹೊಸ ’ಸಂಕಥನ’ ವನ್ನು (ಡಿಸ್ಕೋರ್ಸ್‌) ಕಟ್ಟುವ ಕಾಯಕದಲ್ಲಿ ಸಂಭ್ರಮವೇನೂ ಇರಲಾರದು. ರಾಷ್ಟ್ರೀಯತೆಯ ನಿರ್ಮಾಣಕ್ಕಾಗಿ ಹೋರಾಡುವ ಕಾರ್ಯಕರ್ತರು ಯಾವುದೋ ಕಾದಂಬರಿಯಲ್ಲಿನ ಪಾತ್ರಗಳೆನಿಸಿಬಿಡಬಹದು. ಯಾವುದೋ ನಾಟಕದ ಅಥವಾ ಸಣ್ಣಕತೆಯಲ್ಲಿನ ಒಂದು ತರಹದ ಕಳಂಕಿತ ಪಾತ್ರಗಳೆನಿಸಿಬಿಡಬಹುದು. ಇಲ್ಲಿ ಉಂಟಾಗುವ ಪಲ್ಲಟವನ್ನು ಗಮನಿಸಿ. ಹತ್ತೊಂಬತ್ತನೇ ಶತಮಾನದ ಭಾರತೀಯ ಇತಿಹಾಸದಿಂದ ಹೆಸರುಗಳನ್ನು ಹೆಕ್ಕುವ ಕೆಲಸವನ್ನೇನೂ ನಾನು ಈಗ ಮಾಡುವುದಿಲ್ಲ. ಆದರೆ ಆಂಡರ್ಸನ್ ರವರ ಈ ಸೈದ್ಧಾಂತಿಕ ನಿಲುವನ್ನು ನಾವು ಒಪ್ಪಿಕೊಂಡರೆ ಆಗ  ನಮ್ಮ ನಾಗರಿಕತೆಯ ಉಳಿವಿಗಾಗಿ ಹೋರಾಡಿದ ನಾಯಕರು ಮತ್ತು ಭಾರತದಂತಹ ಒಂದು ಮಹಾ ರಾಷ್ಟ್ರಪ್ರಭುತ್ವದ  ಕನಸನ್ನು ಕಂಡ   ರಾಷ್ಟ್ರ ನಾಯಕರೆಲ್ಲಾ ಅಮುಖ್ಯರಾಗಿಬಿಡುತ್ತಾರೆ. ಹಾಗೆ ನೋಡಿದರೆ ರಾಜಕಾರಣದ ದೊಡ್ಡ ದೊಡ್ಡ ಕನಸುಗಳನ್ನೆಲ್ಲ ಅಲ್ಪಗೊಳಿಸುವುದು ರಾಜಕಾರಣ ಮತ್ತು ಸಮಾಜದ  ಸ್ವಾಸ್ಥ್ಯದ ದೃಷ್ಟಿಯಿಂದ ಒಳ್ಳೆಯದೇ. ಕೆಲವೊಮ್ಮೆ  ಶ್ರೇಷ್ಠವೆನಿಸಿದ ಕೆಲವು ಸತ್ಯಗಳನ್ನು, ಧ್ಯೇಯಗಳನ್ನು  ಐತಿಹಾಸಿಕವಾಗಿ  ಕ್ಷುಲ್ಲಕಗೊಳಿಸುವುದು ಅನಿವಾರ್ಯವಾಗುತ್ತದೆ. ಇತ್ತೀಚೆಗೆ ನನಗೆ ಅನಿಸುತ್ತಿದೆ, ಏನೆಂದರೆ, ಕೆಲವೊಂದು ಮಹತ್ತರ ಎನಿಸಿಕೊಂಡ ಸಂಗತಿಗಳನ್ನು ಕ್ಷುಲ್ಲಕಗೊಳಿಸದೇ ಹೋದರೆ, ಅಲೌಕಿಕ (ಸೇಕ್ರಡ್) ಅನಿಸಿಕೊಂಡವುಗಳನ್ನು ಲೌಕಿಕ (ಪ್ರೊಫೇನ್) ಗೊಳಿಸದೇ ಹೋದರೆ ಸಮಾಜದಲ್ಲಿ ಶಾಂತಿ ನೆಲಸದು.  ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಸಲುವಾಗಿ  ಹೋರಾಟ ನಡೆಸಿದವರು, ತ್ಯಾಗ ಮಾಡಿದವರೆಲ್ಲ ಕಾದಂಬರಿಯ ಪಾತ್ರಗಳಾಗಿಬಿಡುತ್ತಾರೆ ಅಂತಾದರೆ ಅದು  ಮೂಲತಃ ಕೆಲವೊಂದು ಸಾಹಿತ್ಯಿಕ ಕಲ್ಪನೆಗಳಿಂದ ಹೊರಹೊಮ್ಮಿದ್ದು. ಆಗ ತನ್ನ ಅನುಯಾಯಿಗಳಲ್ಲಿ  ಭಯಭಕ್ತಿ ಹುಟ್ಟಿಸಿದ ರಾಷ್ಟ್ರೀಯವಾದ ಎಂಬುದೇ ಹುರುಳಿಲ್ಲದ್ದಾಗಿ ಅದು ತನ್ನ ಪ್ರಭಾವಳಿಯನ್ನು ಕಳೆದುಕೊಳ್ಳುತ್ತದೆ. ಯಾಕೆಂದರೆ ಕಳೆದ ಐವತ್ತು/ಅರವತ್ತು ವರ್ಷಗಳಲ್ಲಿ ನಾವು ನೋಡಿದ ಹಾಗೆ ಭಾರತ ಉಪಖಂಡದೊಳಗೆ ಭುಗಿಲೇಳುತ್ತಿರುವ ಹಿಂಸಾಚಾರದ ಮೂಲ ಇವೇ ಧ್ಯೇಯಗಳು: ರಾಷ್ಟ್ರ, ರಾಷ್ಟ್ರ ಪ್ರಭುತ್ವ ಮತ್ತು ರಾಷ್ಟ್ರೀಯತೆ.  ನಾನು ಈಗಿಲ್ಲಿ  ಅಂಕಿಅಂಶಗಳ ಗೊಡವೆಗೆ ಹೋಗುವುದಿಲ್ಲ. ಅದರೆ ಹಿಂಸೆಯ ಹುಟ್ಟಿಗೆ  ಇದೊಂದೇ ಎದ್ದು ತೋರುವ ಪ್ರಮುಖ ಆಧಾರ. ರಕ್ತಪಾತಕ್ಕೆ ಇದೊಂದೇ ಎದ್ದು ತೋರುವ ಪ್ರಮುಖ ನೆಲೆ. ರಾಷ್ಟ್ರದ ಹೆಸರಿನಲ್ಲಿ ಪರಸ್ಪರ ಬಡಿದಾಡಿದ್ದೇವೆ, ಕೊಂದುಕೊಂಡಿದ್ದೇವೆ. ದೇಶ ವಿಭಜನೆ  ಕೂಡ ಈ ರೀತಿಯ ಮತಿಹೀನ ಹಿಂಸೆಗೆ ಒಂದು ಉದಾಹರಣೆಯಾಗಬಲ್ಲದು. ಇದನ್ನೇ ಬೇರೆ ರೀತಿಯಲ್ಲಿ ಇಡುವುದಾದರೆ, ಈ ರಾಷ್ಟ್ರೀಯತೆಯೇನಾದರೂ ತನ್ನ ಬಲೆಗೆ  ವೀರ ನಾಯಕರನ್ನು ಅಥವಾ ಬಲಿಪಶುಗಳನ್ನು ಆಕರ್ಷಿಸುತ್ತ ಅಥವಾ ಆಹ್ವಾನಿಸುತ್ತ  ಒಂದು ಬೃಹತ್ ಸ್ತರದ (macro level) ಧ್ಯೇಯವಾಗಿ ಹೊರಹೊಮ್ಮಿದರೆ ಆಗ ರಕ್ತಪಾತ ಅನಿವಾರ್ಯ. ಅದಕ್ಕೇ ಕಳೆದ ಎಪ್ಪತ್ತು-ಎಂಬತ್ತು ವರ್ಷಗಳಲ್ಲಿ ಭಾರತದಲ್ಲಿ ಪ್ರಕಟಗೊಂಡ  ಸಾಹಿತ್ಯ ಕೃತಿಗಳನ್ನು ಅಧ್ಯಯನ ಮಾಡಿದರೆ ತಿಳಿಯುತ್ತದೆ, ಅಲ್ಲಿ ರಾಷ್ಟ್ರೀಯವಾದವು ಸದಾ ಶಂಕಿತರ ಸ್ಥಾನದಲ್ಲಿದೆ.  ಇದು  ಇವತ್ತು ನಾನು ಪ್ರತಿಪಾದಿಸುತ್ತಿರುವ ವಿಚಾರಗಳಲ್ಲಿ ಒಂದು.

ಇದು ವಿವಾದಗಳನ್ನು ಸೃಷ್ಟಿಸಬಲ್ಲ ಹೇಳಿಕೆಯೆಂಬುದು ಗೊತ್ತಿದೆ. ಈಗ  ನನ್ನ ಹುಡುಕಾಟವನ್ನು ಮುಂದುವರೆಸುವ ಮೊದಲು ಅದಕ್ಕೆ ಅನುಸರಿಸಿದ ವಿಧಾನದ ಬಗೆಗೆ ಸ್ವಲ್ಪ ಹೇಳುತ್ತೇನೆ. ಮೊದಲೇ ಹೇಳಿದ ಹಾಗೆ ಇವೆಲ್ಲ ಮಹಾಕಥನಗಳು. ರಾಷ್ಟ್ರ, ರಾಷ್ಟ್ರೀಯತೆ, ಸೆಕ್ಯುಲರಿಸಂ, ಪ್ರಗತಿ ಮತ್ತು ಅಭಿವೃದ್ಧಿ – ಇವೆಲ್ಲವೂ ಮಹಾಕಥನಗಳು. ಇವುಗಳಲ್ಲಿ ಪ್ರತಿಯೊಂದು ತತ್ವವೂ ಹಿಂದೆಂದೂ ಕಾಣದ ರೀತಿಯಲ್ಲಿ ಹಿಂಸೆಯನ್ನು ಪ್ರಚೋದಿಸಿವೆ. ಪ್ರತಿಯೊಂದೂ ಯಾವ ಲೆಕ್ಕಾಚಾರಕ್ಕೂ ನಿಲುಕದ ರೀತಿಯಲ್ಲಿ, ಯಾವ ರೀತಿಯಲ್ಲೂ ಸಮರ್ಥಿಸಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ಹಿಂಸೆಯನ್ನು ಹುಟ್ಟು ಹಾಕಿವೆ. ಆದರೆ ಇಲ್ಲಿ ಅಂತರ್ಗತವಾಗಿರುವ ವ್ಯಂಗ್ಯವನ್ನು ಗಮನಿಸಿ. ನಾನು ಇಲ್ಲಿ ಎರಡು ಸಂಗತಿಗಳನ್ನು ತಳಕು ಹಾಕುತ್ತೇನೆ. ಮೊದಲನೆಯ ಸಂಗತಿ ಏನೆಂದರೆ  ನಾನು ಅವುಗಳನ್ನು ಮಹಾಕಥನಗಳು ಎಂದು ಕರೆದಿದ್ದೇನೆ ಯಾಕೆಂದರೆ ಈ ಕಥನಗಳು ನಿಜಕ್ಕೂ ಭಾರತೀಯ ಭಾವಕೋಶವನ್ನು ಕಳೆದ  ನೂರು ವರ್ಷಗಳಲ್ಲಿ ಅತ್ಯಂತ ಸೃಜನಾತ್ಮಕವಾಗಿ  ಪ್ರೇರೇಪಿಸಿವೆ. ಒಂದು ಐಡಿಯಾಲಜಿಯಾಗಿ ರಾಷ್ಟ್ರೀಯವಾದದ ಪ್ರಾಮುಖ್ಯತೆಯನ್ನು ನಿರಾಕರಿಸುವಂತಿಲ್ಲ. ರಾಷ್ಟ್ರೀಯವಾದವು ನಿಜಕ್ಕೂ ಒಂದು ಅನನ್ಯ ದೃಷ್ಟಿ. ನಿಜಕ್ಕೂ ಅದೊಂದು ತತ್ವ ದರ್ಶನದಂತೆ   ನಮ್ಮ ಅನೇಕ ಕವಿಗಳು ಮತ್ತು ಕಾದಂಬರಿಕಾರರನ್ನು ಪ್ರೇರೇಪಿಸಿದೆ. ಆದರೆ ಇವತ್ತು ಬೆಳಿಗ್ಗೆ ನನ್ನ ಕೆಲವು ಮಿತ್ರರೊಂದಿಗೆ ಚರ್ಚಿಸುತ್ತಿದ್ದಾಗ ಹೇಳುತ್ತಿದ್ದೆ,  ಸಾಹಿತ್ಯಕ್ಕೆ ಅದರ ಅದರ ಮೇಲಿನ ಆಪಾದನೆಗಳನ್ನು ತೊಡೆದು ಹಾಕುವ ಒಂದು ವಿಶೇಷ ಗುಣವಿದೆ,  ಅದೇನಂದರೆ ಸ್ವ-ನಿರಾಕರಣೆ. ತನ್ನ ಚಿಂತನಾ ಮಾರ್ಗಗಳನ್ನು (ಐಡಿಯಾಲಜಿ) ತಾನೆ ವಿಘಟಿಸಿಕೊಳ್ಳುತ್ತದೆ. ಸಾಹಿತ್ಯವು ಒಂದು ಸೈದ್ಧಾಂತಿಕ ನೆಲೆಯಲ್ಲಿ, ಒಂದು ಜಾಗೃತ ಚಿಂತನಾ ಮಾರ್ಗದ ನೆಲೆಯಲ್ಲಿ ಯಾವುದೋ ಒಂದನ್ನು ಗಹನವಾದದ್ದು ಎಂದು ಘೋಷಿಸುತ್ತದೆ,  ಯಾವುದೋ ಒಂದನ್ನು ಸೇಕ್ರೆಡ್ ಎಂದು ಘೋಷಿಸುತ್ತದೆ. ಆದರೆ ಸೃಷ್ಟಿಕ್ರಿಯೆ ನಡೆಯುತ್ತಿರುವಂತಹ  ಸಂದರ್ಭಧಲ್ಲಿ ಅದು ತಾನು ಅಕ್ಕರೆಯಿಂದ ಎತ್ತಿಹಿಡಿದ ಸತ್ಯಗಳನ್ನು ವಿಘಟಿಸುತ್ತದೆ. ಆಗ ಅದು ಅಲ್ಲಿಯವರೆಗೆ ಪ್ರತಿಪಾದಿಸಿದ ಸತ್ಯ ಸತ್ಯವಾಗಿ ಉಳಿಯಲಾರದು. ಸತ್ಯವು ಶಂಕಿತವಾಗುತ್ತದೆ.  ಈ ರೀತಿ ಸ್ವಪರಾಮರ್ಶೆಗೆ ಒಳಗಾಗುವ ಅನಂತಾನಂತ ಸಾಧ್ಯತೆಗಳನ್ನು ತನ್ನೊಳಗೆ ಇಟ್ಟುಕೊಳ್ಳುತ್ತದೆ  ಎನ್ನುವುದೇ ಸಾಹಿತ್ಯದ ಅಗ್ಗಳಿಕೆ. ಸ್ವಪರಾಮರ್ಶೆಗೆ ಒಡ್ಡಿಕೊಳ್ಳುವ ಗುಣ ಇರದೇ ಹೋಗಿದ್ದಿದ್ದರೆ ಸಾಹಿತ್ಯಕ್ಕೆ ಯಾವ ಅರ್ಥವೂ ಇರುತ್ತಿರಲಿಲ್ಲ. ಈಗ ಹೇಳಿದ ವಿಚಾರವನ್ನು ಮುಂದೆ ಬೇರೆ ಬೇರೆ ವಾದಗಳನ್ನು ಮಂಡಿಸುವಾಗ ಮತ್ತೆ ಮತ್ತೆ ಬಳಸಿಕೊಳ್ಳುತ್ತೇನೆ. ಸಾಹಿತ್ಯಕ್ಕೆ ಹೀಗೆ ತನ್ನನ್ನು ತಾನೆ ಭಂಜಿಸಿಕೊಳ್ಳುವ ಅಥವಾ ಮಹಾಕಥನಗಳನ್ನು  ಭಂಜಿಸುವ ಸಾಮರ್ಥ್ಯ ಅಪಾರವಾಗಿದೆ.

ಸಾಹಿತ್ಯವು ಒಂದು ಸ್ತರದಲ್ಲಿ ತನಗೆ ಮಹಾಕಥನಗಳಿಂದ ಸ್ಪೂರ್ತಿ ಸಿಕ್ಕಿದೆ ಎಂಬಂತೆ ವರ್ತಿಸುತ್ತದೆ, ಅದು ರಾಷ್ಟ್ರವೇ ಆಗಿರಬಹುದು. ಬೇಂದ್ರೆಯವರ ಈ ಸಾಲನ್ನು ತೆಗೆದುಕೊಳ್ಳಿ: “ಗಂಡುಸಾದರೆ ನಿನ್ನ ಬಲಿ ಕೊಡುವೆಯೇನು?”.  ಈ ಪ್ರಶ್ನೆಯನ್ನವರು  ಓದುಗರೆದುರು ಇಡುತ್ತಾರೆ. ಈ ಪ್ರಶ್ನೆ ಭಾರತಾಂಬೆಯದ್ದು. ದೇಶಭಕ್ತರನ್ನು ಉದ್ದೇಶಿಸಿ ಕೇಳಿದ್ದು. ಇದನ್ನು ನಾನು ಸಾಹಿತ್ಯದ  ’ತತ್ವ ಪ್ರಸಾರಕ’  (ಪ್ರೊಪಗಾಂಡ)  ಘಟ್ಟವೆನ್ನುತ್ತೇನೆ. ಆದರೆ ಒಳಗಿಂದೊಳಗೇ ಸಾಹಿತ್ಯವು ತನ್ನ ಪ್ರವೃತ್ತಿಗೆ ನಿಷ್ಠವಾಗಿ, ತನ್ನ ವೈರುಧ್ಯಾತ್ಮಕ ಸ್ವಭಾವಕ್ಕೆ ನಿಷ್ಠವಾಗಿ ತೀವ್ರ ಪ್ರಚೋದನಕಾರಿಯಾದ, ಆದರೆ ಮೇಲ್ನೋಟದ ಗ್ರಹಿಕೆಗೆ ನಿಲುಕದ ರೀತಿಯಲ್ಲಿ ಸ್ವಪರಾಮರ್ಶೆಗೆ ಇಳಿದು ಮಹಾ ಕಥನಗಳನ್ನು ಭಂಜಿಸುತ್ತದೆ. ಅದು  ಯಾವ ರೀತಿಯ ಪ್ರಧಾನ ಘೋಷಣೆಯೇ ಇರಲಿ ಸಾಹಿತ್ಯವು ಅದನ್ನು ನೆಚ್ಚಿಕೊಳ್ಳುವುದಿಲ್ಲ. ಅಂತಹ ಒಂದು ಪ್ರಕ್ರಿಯೆಯಲ್ಲಿ ಅದು ಯಾವ ಮಹಾಕಥನವೇ ಇರಲಿ ಸಾಹಿತ್ಯಕ್ಕೆ  ಅದನ್ನು ಒಪ್ಪಿಕೊಳ್ಳುವುದಕ್ಕಾಗುವುದಿಲ್ಲ.  ಸಾಹಿತ್ಯವು ಇವತ್ತು,  ಈ ಕಾಲಘಟ್ಟದಲ್ಲಿಯೆ ನಮಗೆ ಮುಖ್ಯವೆನಿಸುವುದು ಯಾಕೆಂದರೆ ಅದು ನಮಗೆ ಪವಿತ್ರವೆಂದು ಅನಿಸುವ ಅನೇಕ  ಒಪ್ಪಿತ ಊಹೆಗಳನ್ನು ಪರಾಮರ್ಶೆ ಮಾಡುತ್ತದೆ. ಸಮಾಜದ ಬಗೆಗಿನ ಊಹೆಗಳು, ಬದುಕಿನ ಬಗೆಗೆ ಇರುವ ಊಹೆಗಳು, ರಿಲಿಜನ್ ಬಗೆಗೆ ಇರುವ ಊಹೆಗಳು. ಹೀಗೆ ಯಾವುದೇ ಇರಬಹುದು. ಸಾಹಿತ್ಯವು ಅದನ್ನು ಪ್ರಶ್ನಿಸುತ್ತದೆ, ವಿಚಾರಣೆಗೆ ಒಳಪಡಿಸುತ್ತದೆ ಮತ್ತು ವಿಘಟಿಸುತ್ತದೆ. ಇದೇ ಕಾರಣಕ್ಕೇ, ನಾನು ಹೇಳಿದ ಹಾಗೆ ಸಾಹಿತ್ಯವು ನಿರ್ವಿವಾದವಾಗಿ ಮಹತ್ವದ ಸ್ಥಾನವನ್ನು ಪಡೆಯುತ್ತದೆ.

ಈಗ ರಾಷ್ಟ್ರೀಯವಾದಕ್ಕೆ ಮರಳೋಣ. ಕಳೆದ ಸುಮಾರು ನೂರು-ನೂರೈವತ್ತು ವರ್ಷಗಳಿಂದೀಚೆಗಿನ ಭಾರತೀಯ ಸಾಹಿತ್ಯದ ಇತಿಹಾಸವನ್ನು ಪರಿಗಣಿಸಿದರೆ ಅತ್ಯುತ್ತಮ ಎನ್ನಬಹುದಾದ ಬರಹಗಳನ್ನು ಪ್ರಭಾವಿಸಿದ ಏಕೈಕ ಚಿಂತನಾ ಮಾರ್ಗವೆಂದರೆ ರಾಷ್ಟ್ರೀಯವಾದ. ಬೇಂದ್ರೆ, ಕುವೆಂಪು, ಕಾರಂತ,  ಟ್ಯಾಗೋರ್, ಸುಬ್ರಹ್ಮಣ್ಯ ಭಾರತಿ, ಕುಮಾರನ್ ಆಶನ್ ಈ ಎಲ್ಲಾ ಮೇರು ಬರಹಗಾರರು ರಾಷ್ಟ್ರೀಯವಾದದ ಚಿಂತನಾ ಮಾರ್ಗದಿಂದ ಪ್ರಭಾವಿತರಾಗಿದ್ದರು. ತಮ್ಮ ಬರಹಗಳಲ್ಲಿ ರಾಷ್ಟ್ರೀಯವಾದದಿಂದ ಹೊರಹೊಮ್ಮಿದ ಚಿಂತನೆಗಳನ್ನು ಬಿಂಬಿಸುವ ಮೂಲಕ, ಆ ವಿಚಾರಗಳನ್ನು ತಮ್ಮ ಬರಹಗಳಲ್ಲಿ ಅಂತರ್ಗತ ಮಾಡುವ ಮೂಲಕ ತಾವು ಭಾರತದ ಸೇವೆ ಮಾಡುತ್ತಿದ್ದೇವೆ ಎಂದು ಅವರೆಲ್ಲ ತಿಳಿದಿದ್ದರು. ಆದರೆ ಇದಿಷ್ಟೇ ಕತೆಯೆ? ಇಲ್ಲ. ನನಗೆ ಖಂಡಿತಾ ವಿಶ್ವಾಸವಿದೆ, ಹುಡುಕಿದರೆ  ಒಟ್ಟೂ ಭಾರತೀಯ ಸಾಹಿತ್ಯದ ಸಂದಿಗೊಂದಿಗಳಲ್ಲಿಯಾದರೂ ಒಂದು ಬಗೆಯ ಸಂದೇಹ ಎಡತಾಕುತ್ತದೆ,  ಯಾವುದಾದರೂ ಮೂಲೆಯಲ್ಲಿ ಹತಾಶೆ ಗೋಚರಿಸುತ್ತದೆ. ಅದೇ ರೀತಿ ಒಂದು ಬಗೆಯ ರಾಷ್ಟ್ರೀಯವಾದ, ಒಂದು ಬಗೆಯ ರಾಷ್ಟ್ರ ನಿರ್ಮಾಣದ ಕನಸು, ಒಂದು ಬಗೆಯ   ರಾಷ್ಟ್ರ ನಿರ್ಮಾಣದ ಕನಸನ್ನೇ ಆದರ್ಶವನ್ನಾಗಿಟ್ಟುಕೊಂಡ ರಾಜಕೀಯ ಶೂರತ್ವ ಕೂಡ ಗೋಚರಿಸುತ್ತದೆ. ಉದಾಹರಣೆಗೆ ಶಿವರಾಮ ಕಾರಂತರನ್ನೇ ತೆಗೆದುಕೊಳ್ಳಿ. ಕಾರಂತರು ಭಾರತದ ಅಗ್ರಮಾನ್ಯ ಕಾದಂಬರಿಕಾರರಲ್ಲಿ ಒಬ್ಬರು.  ಅವರು ಸಾಕಷ್ಟು  ಪ್ರಮಾಣದಲ್ಲಿ ರಾಷ್ಟ್ರ, ರಾಷ್ಟ್ರೀಯತೆ ಮತ್ತು ರಾಷ್ಟ್ರ ಪ್ರಭುತ್ವದ ಬಗೆಗೆ ನಿರ್ದಯವಾಗಿ ಪರಾಮರ್ಶೆ ಮಾಡಿದ್ದಾರೆ. ಅದರರ್ಥ ಅವರು ದೇಶದ್ರೋಹಿ ಎಂದಲ್ಲ. ಅವರು ಭಾರತ ವಿರೋಧಿ ಅಂತಲ್ಲ. ಆದರೆ ದೈನಂದಿನ ವಾಸ್ತವಕ್ಕೆ ಬದ್ಧರಾದ ಲೇಖಕರಾಗಿ ಅವರಿಗೆ ರಾಷ್ಟ್ರೀಯವಾದದ ಮಹಾಕಥನವನ್ನು ಪ್ರಶ್ನಿಸುವುದು ಅನಿವಾರ್ಯವಾಗಿತ್ತು. ಅವರ ಜನಪ್ರಿಯ ಕಾದಂಬರಿ ಮರಳಿ ಮಣ್ಣಿಗೆಯಲ್ಲಿ    ಮುಖ್ಯವಾಗಿ ಮೂರನೆಯ ತಲೆಮಾರಿನ ನಾಯಕ ಒಬ್ಬ ರಾಷ್ಟ್ರವಾದಿ. ಅವನು ಜೈಲಿಗೆ ಹೋದ. ಅವನು ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾನೆ. ಆದರೆ ಎಲ್ಲೋ ಒಂದು ಕಡೆ ಅವನ ನಂಬಿಕೆಗಳ ಸೌಧ ಕುಸಿಯುತ್ತದೆ. ಹೀಗೆ ಒಂದೇ ಹಾದಿಯನ್ನು ನೆಚ್ಚಿಕೊಂಡು ರಾಷ್ಟ್ರಕ್ಕಾಗಿ ಹೋರಾಡುವುದರಲ್ಲಿ ಅರ್ಥವಿಲ್ಲ ಎಂದು ಅವನ ಮನದಾಳದಲ್ಲೆಲ್ಲೋ ಅನಿಸತೊಡಗುತ್ತದೆ. ಆದರೆ ಅವನ ಈ ಜಿಜ್ಞಾಸೆಯನ್ನು ಕಾರಂತರು ಎಲ್ಲೂ ಋಣಾತ್ಮಕವಾಗಿ ಪ್ರಸ್ತುತ ಪಡಿಸುವುದಿಲ್ಲ. ಬೇರೇ ಯಾವುದೇ ತೀವ್ರ ರಾಷ್ಟ್ರೀಯವಾದಿ ಬರಹಗಾರರಾಗಿದ್ದರೆ ರಾಮನನ್ನು ಹಾಸ್ಯಾಸ್ಪದವಾಗಿ ಚಿತ್ರಿಸುತ್ತಿದ್ದರು. ಅವನನ್ನು ಗೇಲಿ ಮಾಡಿ ಅವನೊಬ್ಬ ತತ್ವಭ್ರಷ್ಟ, ದ್ರೋಹಿ ಎಂಬಂತೆ ಚಿತ್ರಿಸುತ್ತಿದ್ದರು. ಆದರೆ ಕಾರಂತರು ತಮ್ಮ ಕಲೆಗೆ ನಿಷ್ಠರಾದವರು, ಅವರು ರಾಮನನ್ನು ಭ್ರಷ್ಟನೆಂಬಂತೆ ಚಿತ್ರಿಸುವುದಿಲ್ಲ. ಅಲ್ಲಿ ಅವನೂ ಒಬ್ಬ ಮನುಷ್ಯ, ಭ್ರಷ್ಟನಲ್ಲ. ಅವನು ವಿಸ್ಮೃತಿಗೊಳಗಾದ ಕೆಲವು ಮಾನವೀಯ ಮೌಲ್ಯಗಳನ್ನು ಮರಳಿ ಪಡೆಯಲು ಯತ್ನಿಸುತ್ತಾನೆ. ರಾಷ್ಟ್ರೀಯವಾದವು ಸೃಷ್ಟಿಸಿದ ಕೆಲವು ಭ್ರಾಂತಿಗಳನ್ನು ಅಂಗೀಕರಿಸಲು ನಿರಾಕರಿಸುತ್ತಾನೆ. ಹಾಗಾಗಿ ಕಾರಂತರು ಒಂದು ದೃಷ್ಟಿಯಲ್ಲಿ ಒಂದು ನಿರ್ದಿಷ್ಟ ಬಗೆಯ ರಾಷ್ಟ್ರೀಯವಾದವನ್ನು ತ್ಯಜಿಸುತ್ತಾರೆ. ಒಂದು ನಿರ್ದಿಷ್ಟ ರೂಪದ ರಾಷ್ಟ್ರೀಯವಾದವನ್ನು ಅನುಮೋದಿಸುವುದಿಲ್ಲ. ಹಾಗಾದರೆ ಅವರು ಏನು ಹೇಳುತ್ತಿದ್ದಾರೆ? ಅಲ್ಲೊಂದು ಸಂದರ್ಭ ಹೀಗೆ ಬರುತ್ತದೆ. ದೇಶಭಕ್ತ ರಾಮ ಮತ್ತು ಅವನ ಮನೆಯಲ್ಲಿ ಕೆಲಸಕ್ಕಿದ್ದ ತಳಸಮುದಾಯದ ಆಳುಗಳ ನಡುವೆ ಸಂಭಾಷಣೆ ನಡೆಯುತ್ತದೆ. ರಾಮ ಆಳಿನ ಮನ ಗೆಲ್ಲಲು ಯತ್ನಿಸುತ್ತಾನೆ. ಆಳಿನ ಮನವನ್ನು ರಾಷ್ಟ್ರ ಪ್ರೇಮದತ್ತ ತಿರುಗಿಸಲು ನೋಡುತ್ತಾನೆ. ಅದೊಂದು ಆಸಕ್ತಿ ಕೆರಳಿಸುವಂತಹ ಸಂಭಾಷಣೆ. ಆದರೆ ಕೆಲಸಗಾರರು  ರಾಮ ಆಯ್ದುಕೊಂಡಿರುವಂತಹ ರಾಷ್ಟ್ರ ನಿರ್ಮಾಣದಲ್ಲಿ ತಮಗೆ ಆಸಕ್ತಿ ಇಲ್ಲವೆಂಬ ಸತ್ಯವನ್ನು ಅರುಹುತ್ತಾರೆ. ಯಾಕೆಂದರೆ ರಾಮ ಆಯ್ದುಕೊಂಡಿದ್ದ ರಾಷ್ಟ್ರ ನಿರ್ಮಾಣದ ಕಾರ್ಯವು ಅವರನ್ನು ಒಳಗೊಳ್ಳುವುದೇ ಇಲ್ಲ. ಅಂತಹ ಒಂದು ರಾಷ್ಟ್ರ ನಿರ್ಮಾಣದಲ್ಲಿ ಅವರಿಗೆ ಯಾವ ಪಾತ್ರವೂ ಇಲ್ಲ. ಅಲ್ಲಿ ಅವರಿಗೆ ಯಾವ ಜಾಗವೂ ಇಲ್ಲ. ರಾಮನು ನಂತರ ರಾಷ್ಟ್ರೀಯ ಚಳುವಳಿಯಿಂದ ಯಾವಾಗ ಹೊರಬಂದನೋ ಆಗ ಕೊನೆ ಪಕ್ಷ ಕಾದಂಬರಿಯಲ್ಲಾದರೂ ಮೊದಲಿಗಿಂತ ಮೇಲಾದ ಮನುಷ್ಯಜೀವಿಯಾಗಿ ಹೊರಹೊಮ್ಮುತ್ತಾನೆ.  ಅದೇ ಒಂದು ವಿಪರ್ಯಾಸ. ಅವನು ಒಬ್ಬ ಕಲಾಕಾರನಾಗುತ್ತಾನೆ. ಎಲ್ಲೂ ಕಾರಂತರು ಒಬ್ಬ ನ್ಯಾಯಾಧೀಶನ ಸ್ಥಾನದಲ್ಲಿ ಕೂತು  ಯಾವುದೇ ರೀತಿಯ ನೈತಿಕ ಅಥವಾ ರಾಜಕೀಯ ಫರ್ಮಾನನ್ನು ತಮ್ಮ ಕಾದಂಬರಿಯ ಮೂಲಕ ಧ್ವನಿಸುವುದಿಲ್ಲ. ನಾನು ಹೇಳಿದ ಹಾಗೆ ಇಲ್ಲಿ ರಾಮ ತತ್ವಭ್ರಷ್ಟನಲ್ಲ. ಅದರ ಬದಲು ರಾಮ  ಉತ್ತಮ ಮನುಷ್ಯನಾಗುತ್ತಾನೆ.

ರಾಷ್ಟ್ರೀಯವಾದದ ಚಿಂತನಾ ಕ್ರಮದ ಬಗೆಗೆ ಈ ಬಗೆಯ ಅವಿಶ್ವಾಸವು  ಈ ಬಗೆಯ  ಕಟು ಪರಾಮರ್ಶೆಯು ಆಧುನಿಕ ಕನ್ನಡ ಸಾಹಿತ್ಯದ ಒಂದು ಚಾಲನಾಶಕ್ತಿಯಾಗಿ ಯಾವಾಗಲೂ ಕಾಣಿಸಿಕೊಂಡಿದೆ ಎಂಬುದೇ ಒಂದು ವಿಪರ್ಯಾಸ. ಕುವೆಂಪುರವರ ಕಾದಂಬರಿಗಳನ್ನು ತೆಗೆದುಕೊಳ್ಳಿ. ಅವರ ಕಾನೂರು ಹೆಗ್ಗಡತಿಯಲ್ಲಿ,  ನನ್ನನ್ನು ಕ್ಷಮಿಸಿ, ಬರೀ ನನ್ನ ನಾಡಿನ ಉದಾಹರಣೆಗಳನ್ನೇ ಕೊಡುತ್ತಿದ್ದೇನೆ, ಬರೀ ಕನ್ನಡ ಸಾಹಿತ್ಯದ್ದೇ ಕೊಡುತ್ತಿದ್ದೇನೆ,   ಮುಂದೆ ಮಲಯಾಳಿ ಸಾಹಿತ್ಯ ಅಥವಾ ಬಂಗಾಲಿಯಿಂದಲೂ ಉದಾಹರಣೆಗಳನ್ನು ಕೊಡುತ್ತೇನೆ. ಟ್ಯಾಗೋರ್, ಬಂಕಿಮಚಂದ್ರ…..ಬೇರೆ ಸಾಹಿತ್ಯಗಳಿಂದಲೂ  ಕೊಡುತ್ತೇನೆ.  ಕುವೆಂಪುರವರ ಹೂವಯ್ಯನದೂ ಕಾರಂತರ ರಾಮನ ತರಹದ ಪಯಣವೇ. ಹೂವಯ್ಯನೂ ಸ್ವಲ್ಪ ರಾಮನ ಹಾಗೆಯೇ ವಿಕಾಸ ಹೊಂದುತ್ತಾನೆ. ಹೂವಯ್ಯನೂ ರಾಷ್ಟ್ರೀಯವಾದದ ಚಿಂತನೆಗಳಿಂದ ಪ್ರಭಾವಿತನಾಗಿದ್ದ. ಆದರೆ ಮುಂದೆ ಅವನು ರಾಷ್ಟ್ರೀಯವಾದವನ್ನು ಸಮರ್ಥಿಸಿಕೊಳ್ಳುವ ಉತ್ಸುಕತೆಯನ್ನು ಕಳೆದುಕೊಳ್ಳುತ್ತಾನೆ. ಮೊದ ಮೊದಲಿನ ಹೂವಯ್ಯ ಮುಂಗೋಪಿ. ಯಾಕೆಂದರೆ ಅವನಿಗೆ ತಾನು ನಂಬಿದ್ದರ ಬಗೆಗೆ ಅತೀವ ಆತ್ಮವಿಶ್ವಾಸ. ಅವನಿಗೆ ತಾನು ನಂಬಿದ ರಾಷ್ಟ್ರ ನಿರ್ಮಾಣದ ಹಾದಿಯೇ ಸರಿ ಎಂಬ ಭಾವನೆ. ಅದೊಂದೇ ಹಾದಿ ಭವ್ಯ ರಾಷ್ಟ್ರವೊಂದನ್ನು ನಿರ್ಮಿಸಬಲ್ಲುದು ಎಂಬ ವಿಶ್ವಾಸ. ಹೀಗೆ ರಾಷ್ಟ್ರೀಯವಾದವು ಕೆಲವೇ ಕೆಲವು ಸಂಪೂರ್ಣ ಸತ್ಯಗಳ, ನಿಷ್ಕಳಂಕ ಮಹಾಸತ್ಯಗಳ ಒಂದು ಭಂಡಾರ ಎಂಬಂತೆ ಕಾಣಲಾಯಿತು. ಏಕರೂಪಿ ಮಾರ್ಗವೇ ಆದರ್ಶವಾಯಿತು. ರಾಷ್ಟ್ರನಿರ್ಮಾಣಕ್ಕೆ ಅದೊಂದೇ ಮಾರ್ಗ ಎಂಬ ಭ್ರಮೆ ಮತ್ತು ಹೂವಯ್ಯನಿಗೆ ಆ ಮಾರ್ಗದ ಮೇಲೆ ಅಚಲ ವಿಶ್ವಾಸ. ಅವನದು ತಳಸಮುದಾಯದ ಜನರೊಂದಿಗೆ ತಿರಸ್ಕಾರಪೂರಿತ ನಂಟು. ಆದರೆ ಅವರನ್ನು ಕಂಡರೆ ದಯೆಯೂ ಇದೆ. ತಳ ಸಮುದಾಯದ ಅಚರಣೆಗಳನ್ನು ಅಪಹಾಸ್ಯ ಮಾಡುತ್ತಾನೆ. ಯಾಕೆಂದರೆ ಅವನಿಗೆ ತಾನು ನಂಬಿದ ರಿಲಿಜನ್ನಿನ ಮೇಲೆ ಧೃಡವಿಶ್ವಾಸ. ಆ ದಿನಗಳಲ್ಲಿ ಅವನ ರಿಲಿಜನ್ ರಾಷ್ಟ್ರೀಯವಾದವಾಗಿತ್ತು. Religion of Bharatmaata.  ಆದರೆ ನಂತರ ಹೂವಯ್ಯನ ವ್ಯಕ್ತಿತ್ವದಲ್ಲಿ ಪರಿವರ್ತನೆಯಾಗುತ್ತದೆ. ನನ್ನ ಒಂದು ಪ್ರಬಂಧದಲ್ಲಿ  ಈ ಸಂಗತಿಯನ್ನು ವಿಶ್ಲೇಷಿಸಿದ್ದೇನೆ. ಹಾಗಾಗಿ ಕನ್ನಡ ಕಾದಂಬರಿಗಳ ಚರಿತ್ರೆಯಲ್ಲಿ ಎರಡು ಪರಿವರ್ತನೆಗಳನ್ನು ಕಾಣುತ್ತೇವೆ. ಒಂದರಲ್ಲಿ ಕಥಾನಾಯಕರು ಒಂದು ನಿರ್ದಿಷ್ಟ ಬಗೆಯ ರಾಷ್ಟ್ರೀಯವಾದದ ತೆಕ್ಕೆಯಿಂದ ಕಳಚಿಕೊಳ್ಳುತ್ತಾರೆ. ಕಾನೂರು ಹೆಗ್ಗಡತಿ ಕಾದಂಬರಿಯ ಒಂದು ಹಂತದಲ್ಲಿ ಹೂವಯ್ಯ ತಳ ಸಮುದಾಯದವರೊಂದಿಗೆ ಒಂದು ಸಂತೋಷದಾಯಕ ಸಂಬಂಧವನ್ನು ಬೆಳೆಸುತ್ತಾನೆ. ಅವರೊಂದಿಗೆ ನಂಟು ಬೆಳೆಯುತ್ತದೆ. ಸಾಧಾರಣ ಸಂದರ್ಭಗಳಲ್ಲಿ ಕೆಳಜಾತಿಯವರೊಂದಿಗೆ  ಬೆರೆಯುವುದೆಂದರೆ ಆಗದ ಮಾತು. ಒಂದುವೇಳೆ ಅವರನ್ನು ನಿಮ್ಮ ಜಾತಿಗೆ ಸೇರಿಸಿಕೊಂಡಿದ್ದರೆ ಸಮಸ್ಯೆ ಇರುವುದಿಲ್ಲ. ಹೂವಯ್ಯನಿಗೆ ಮತಾಂತರದಲ್ಲಿ ವಿಶ್ವಾಸವಿಲ್ಲ. ರಾಮನಿಗೂ ಅದು ಇಷ್ಟವಿರಲಿಲ್ಲ. ಅವರಿಬ್ಬರೂ ರಾಷ್ಟ್ರೀಯವಾದದ ಧ್ಯೇಯಕ್ಕೆ ಬದ್ಧರಾಗಿರಬೇಕಾದ ಒತ್ತಡದಲ್ಲಿ ಮತಾಂತರದ ವಿಚಾರವನ್ನು ಅವರು ಸ್ವೀಕರಿಸಬೇಕಿತ್ತು. ಆದರೆ ಹಾಗೆ ಮಾಡದೆ ಮತಾಂತರದ ವಿಚಾರವನ್ನು ಯಾವ ಕ್ಷಣದಲ್ಲಿ ಅವರಿಬ್ಬರೂ ಕೈಬಿಟ್ಟರೋ ಆ ಕ್ಷಣದಿಂದಲೇ ಅವರಿಬ್ಬರೂ ಉತ್ತಮ ಮನುಷ್ಯರಾದರು. ಹಾಗಾಗಿ ಕನ್ನಡ ಸಾಹಿತ್ಯದಲ್ಲಿ ಈ ಸಂಘರ್ಷವು ಯಾವಾಗಲೂ ಇದೆ. ಕೇವಲ ಕನ್ನಡ ಸಾಹಿತ್ಯವೊಂದೇ ಅಲ್ಲ ಅದು ಬಂಗಾಳಿ, ಮಲಯಾಳಂ ಸಾಹಿತ್ಯಗಳಲ್ಲೂ ಇದೆ. ರವೀಂದ್ರನಾಥ ಟ್ಯಾಗೋರರನ್ನೇ ತೆಗೆದುಕೊಳ್ಳಿ. ನನ್ನ ಗೆಳೆಯರು ಈ ಕ್ಷೇತ್ರದಲ್ಲಿ ತುಂಬಾ ಗಹನವಾದ ಅಧ್ಯಯನ ಮಾಡಿದ್ದಾರೆ. ಬಂಗಾಳಿ ಸಾಹಿತ್ಯದಲ್ಲಿ ಈ  ರಾಷ್ಟ್ರೀಯವಾದಿ ಚಿಂತನೆಯ ಥಳಕು ಕಂಡುಬರುತ್ತದೆ. ಅಲ್ಲಿಯೂ ರಾಷ್ಟ್ರೀಯವಾದದ  ಹುಚ್ಚು ಕಾಣುತ್ತದೆ. ಟಾಗೋರರೂ ರಾಷ್ಟ್ರೀಯವಾದವನ್ನು ತೀವ್ರವಾಗಿ ಬೆಂಬಲಿಸುತ್ತಿದ್ದರು ಎಂಬಂತೆ ಅನಿಸುತ್ತದೆ.

ಅಶೀಷ್ ನಂದಿಯವರು ಈ ಕುರಿತಾಗಿ ಒಂದು ಅದ್ಭುತವಾದ ಪುಸ್ತಕವನ್ನೇ ಬರೆದಿದ್ದಾರೆ. ಎಲ್ಲೋ ಒಂದು ಕಡೆ ಈ ರಾಷ್ಟ್ರೀಯವಾದವು ಅಕ್ರಮ ಎಂಬುದು  ಟಾಗೋರರಿಗೆ ಸಂಪೂರ್ಣವಾಗಿ  ಮನವರಿಕೆಯಾಗಿತ್ತು ಎಂದು ನಂದಿಯವರು ಬರೆಯುತ್ತಾರೆ.  ಆ ಪುಸ್ತಕದ ಹೆಸರೂ ’ರಾಷ್ಟ್ರೀಯವಾದದ ಅಕ್ರಮ ನಡೆಗಳು’ (The Illegitimacy of Nationalism).  ನಮ್ಮ ಭಾರತೀಯ ಸಾಹಿತ್ಯದ ಇತಿಹಾಸವನ್ನು ಅವಲೋಕಿಸಿದರೆ ಕಳೆದ ನೂರು ವರ್ಷಗಳಿಂದೀಚೆಗೆ ಭಾರತದ ಉತ್ಕೃಷ್ಟ ಬರಹಗಾರರೆಲ್ಲ  ಈ ರಾಷ್ಟ್ರೀಯವಾದಿ ಚಿಂತನೆಯು ಒಂದು ಹಂತದಿಂದಾಚೆಗೆ ಯಾವಾಗಲೂ  ಅಕ್ರಮವಾಗಿತ್ತು,  ಅಪಾಯಕಾರಿಯಾಗಿತ್ತು,  ಋಣಾತ್ಮಕ ಅಂಶಗಳನ್ನು ಒಳಗೊಂಡಿತ್ತು ಎಂಬ ವಿಚಾರವನ್ನೇ ವ್ಯಕ್ತಪಡಿಸಿದ್ದಾರೆ. ಹಾಗೆಂದು ಅವರೆಲ್ಲ ಒಂದು ಸಮಾಜವಾಗಿ ಭಾರತವನ್ನು ವಿರೋಧಿಸುತ್ತಿದ್ದಾರೆ ಎನ್ನಲಾಗುವುದಿಲ್ಲ. ಅಥವಾ ಭಾರತದ ಜನಮಾನಸದಲ್ಲಿ ಅಡಕವಾಗಿರುವ ಒಂದು  ಸಾಂಸ್ಕೃತಿಕ ಐಕ್ಯಮತ್ಯವನ್ನು ವಿರೋಧಿಸುತ್ತಿದ್ದಾರೆ ಎಂದರ್ಥವಲ್ಲ. ಇಲ್ಲಿ ಎರಡು ಅಂಶಗಳಿವೆ. ನೀವು ಭಾರತವನ್ನು ಹೇಗೆ ಕಾಣಬಯಸುತ್ತೀರಿ? ಅದನ್ನು ಸಾಂಸ್ಕೃತಿಕವಾಗಿ ಒಗ್ಗೂಡಿದ ಒಂದು ರಾಷ್ಟ್ರವೆಂದು ಭಾವಿಸುತ್ತಿರೋ ಅಥವಾ ರಾಜಕೀಯವಾಗಿ ಒಗ್ಗೂಡಿದ ರಾಷ್ಟ್ರ ಪ್ರಭುತ್ವವೆಂದೊ? ಆಯ್ಕೆ ಕಷ್ಟ, ಆದರೆ ಯಾವುದಾದರೂ ಒಂದನ್ನು ಆರಿಸಿಕೊಳ್ಳಲೇ ಬೇಕು. ನೀವು ಭಾರತವನ್ನು ಒಂದು ಸಾಂಸ್ಕೃತಿಕವಾಗಿ ಒಗ್ಗೂಡಿದ ದೇಶವೆಂದು ಭಾವಿಸಿದರೆ, ಕಾಶ್ಮೀರವು ಅಭಿನವಗುಪ್ತನ ನಾಡು ಮತ್ತು  ಕಾಶ್ಮೀರಿ ಶೈವ ಚಿಂತನೆಯ ನೆಲೆವೀಡು  ಎಂಬ ಕಾರಣಕ್ಕಾಗಿ  ನಿಮಗೆ  ಅದು ಖಂಡಿತವಾಗಿಯೂ ಮುಖ್ಯವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಂಡರೆ  ಕಾಶ್ಮೀರವು ಮುಸ್ಲೀಮರ ಕೈಯಲ್ಲಿದೆಯೋ ಇಲ್ಲವೋ ಎಂಬುದು ನಿಮಗೆ ಪ್ರಸ್ತುತವಾಗುವುದಿಲ್ಲ, ಇದೇ ದೊಡ್ಡ ಸಂಘರ್ಷ. ರಾಜಕೀಯವಾಗಿ ಒಗ್ಗೂಡಿಸಿ ಸದಾ ಸೇನೆಯ ಕಣ್ಗಾವಲಿನೊಳಗೆ  ಇರುವ ರಾಷ್ಟ್ರ ಪ್ರಭುತ್ವವನ್ನೇ ಪರಮ ಧ್ಯೇಯ ಎಂದು ನೀವು ಒಪ್ಪಿಕೊಂಡರೆ ಹತ್ತನೆಯ ಶತಮಾನದ ಕಾಶ್ಮೀರಿ ಶೈವ ಸಂತರೊಂದಿಗೆ ಒಂದು ಸೃಷ್ಟಿಶೀಲ ಬಾಂಧವ್ಯ ಸಾಧ್ಯವಾಗುವುದಿಲ್ಲ. ಯಾಕೆಂದರೆ  ಅವರನ್ನು ಸೇರುವ ಹಾದಿ ಮುಚ್ಚಿಕೊಳ್ಳುತ್ತದೆ. ನೀವು ಮುಸ್ಲಿಂ ಮೂಲಭೂತವಾದಿಗಳೊಂದಿಗೆ ಘರ್ಷಣೆಗಿಳಿಯಬೇಕಾಗುತ್ತದೆ. ನಮ್ಮಲ್ಲಿ ಹೇಗೆ ಹಿಂದೂ ಮೂಲಭೂತವಾದಿಗಳಿದ್ದಾರೋ ಹಾಗೆ ಮುಸ್ಲಿಂ ಮೂಲಭೂತವಾದಿಗಳೂ ಇದ್ದಾರೆ. ಹಾಗಾಗಿ ಯಾವ ಸಮುದಾಯದ ಬಗೆಗೂ ರಮ್ಯ ಕಲ್ಪನೆಗಳನ್ನು ಇಟ್ಟುಕೊಳ್ಳುವುದು ಬೇಡ.  ಆಧ್ಧರಿಂದ ನೀವೀಗ ಎರಡರಲ್ಲಿ ಒಂದನ್ನು ಆರಿಸಿಕೊಳ್ಳಬೇಕು. ಸಾಂಸ್ಕೃತಿಕವಾಗಿ ಒಗ್ಗೂಡಿದ ರಾಷ್ಟ್ರ ಅಥವಾ ಸಾಂಸ್ಕೃತಿಕವಾಗಿ ಒಗ್ಗೂಡಿದ ಸಮಾಜ…ನಾನು ರಾಷ್ಟ್ರವೆಂದು ಬಳಸುವುದಿಲ್ಲ. ರಾಷ್ಟ್ರ ಎನ್ನುವುದು ಬೇಡ. ಅದಕ್ಕೀಗ ರಕ್ತದ ಕಲೆ ಅಂಟಿಕೊಂಡಿದೆ. ರಾಷ್ಟ್ರ ಎನ್ನುವ ಪದ ರಕ್ತಸಿಕ್ತವಾಗಿದೆ. ಅದೀಗ ಮಲಿನಗೊಂಡಿದೆ. ಅಲ್ಲೀಗ ರಕ್ತದ ಛಾಯೆ ಇದೆ. ಕರಾಳ ಛಾಯೆ. ಈಗ ನೀವು ಸಾಂಸ್ಕೃತಿಕವಾಗಿ ಒಗ್ಗೂಡಿದ ಸಮಾಜವನ್ನು ಆರಿಸಿಕೊಳ್ಳಬೇಕು ಅಥವಾ ಶಕ್ತಿಶಾಲಿ ಸೇನಾಬಲದೊಂದಿಗೆ ಕಾರ್ಯಸನ್ನದ್ಧವಾಗುವ ಒಂದು ರಾಷ್ಟ್ರ ಪ್ರಭುತ್ವವನ್ನು ಅನುಮೋದಿಸಬೇಕು. ನೀವು ಎರಡನೆಯ ಆಯ್ಕೆಯನ್ನು ಒಪ್ಪಿಕೊಂಡ ಮರುಕ್ಷಣವೇ ಮೊದಲನೆಯದು ತನ್ನಿಂತಾನೇ ಕಣ್ಮರೆಯಾಗುತ್ತದೆ ಮತ್ತು  ನಿಮ್ಮ ಬಳಿ ಕಡಿದದ್ದನ್ನು ಮರಳಿ ಪಡೆಯಲು ಸಂಪರ್ಕ ಸಾಧನಗಳೇ ಇರುವುದಿಲ್ಲ. ಕಳೆದ ನೂರು ವರ್ಷಗಳ ಅವಧಿಯಲ್ಲಿ ಇದೇ ಕಾರಣಕ್ಕಾಗಿಯೇ  ಭಾರತೀಯ ಸಾಹಿತ್ಯದ (ಎಲ್ಲರೂ ಅಂತಲ್ಲ) ಕೆಲವು ಸೂಕ್ಷ್ಮಸಂವೇದನೆಯುಳ್ಳ ಮನಸ್ಸುಗಳು  ಸದಾ  ಸಾಂಸ್ಕೃತಿಕವಾಗಿ ಒಗ್ಗೂಡಿದ ಸಮಾಜವೊಂದರ ಪರಿಕಲ್ಪನೆಗೆ ನೀರೆರೆದಿವೆ.  ಸೇನಾಬಲದಿಂದ ಸಂರಕ್ಷಿತವಾದ ಒಂದು ರಾಷ್ಟ್ರ ಪ್ರಭುತ್ವದ ಪರಿಕಲ್ಪನೆಗಲ್ಲ.

ರಾಷ್ಟ್ರ ಅಥವಾ ರಾಷ್ಟ್ರ ಪ್ರಭುತ್ವದ ಇನ್ನೊಂದು ಆಯಾಮವನ್ನು ನೋಡೋಣ. ರಾಷ್ಟ್ರಪ್ರಭುತ್ವವನ್ನು ಭಿನ್ನವಿಭಿನ್ನ ಸ್ಮೃತಿಗಳ ಮೇಲೆ ನಿರ್ಮಿಸಲಾಗುವುದಿಲ್ಲ. ಒಂದು ಸಮಾಜದಲ್ಲಿ ಕೆಲವು ಸಮುದಾಯಗಳು ಜ್ಞಾನ ಮತ್ತು ಅಧ್ಯಾತ್ಮಕ್ಕೆ ಸಂಬಂಧಿಸಿದಂತೆ ಸಮಾಜದ ಸ್ಮೃತಿಕೋಶಗಳಿಂದ ಕಣ್ಮರೆಯಾದಾಗ ಮಾತ್ರ ರಾಷ್ಟ್ರಪ್ರಭುತ್ವ ನೆಲೆ ನಿಲ್ಲುತ್ತದೆ. ಆ ಸಮುದಾಯಗಳು ಅಲ್ಲಿಂದ ಹೊರಹೋಗಬೇಕು. ಏನು ಮಾಡಿದ್ದೀವಿ ಹಾಗಾದರೆ ಇಲ್ಲಿಯವರೆಗೆ? ಈಶಾನ್ಯ ಭಾರತವನ್ನೇ ತೆಗೆದುಕೊಳ್ಳಿ. ಸುಮಾರು ನಲವತ್ತು ವರ್ಷಗಳಿಂದೀಚೆಗೆ ಅಜಿತ್ ರಾಯ್ ಎನ್ನುವ  ಮಾರ್ಕ್ಸ್‌ವಾದಿ ಚಿಂತನೆಯಿಂದ ಪ್ರಭಾವಿತರಾದ ಸಂಪಾದಕರೊಬ್ಬರು ಈಶಾನ್ಯ ಭಾರತದ ಅಲ್ಪಸಂಖ್ಯಾತರ ಬದುಕು-ಬವಣೆಗಳ ಬಗೆಗೆ ಹೇಳುತ್ತಲೇ ಬಂದಿದ್ದಾರೆ. ನಾಗಾಲ್ಯಾಂಡಿನಲ್ಲಿ…ಆಸ್ಸಾಮಿನಲ್ಲಿ… ಇವತ್ತೂ ಕೂಡ ನಾವು ಅವರನ್ನು ನಡೆಸಿಕೊಳ್ಳುತ್ತಿರುವ ಬಗೆಗೆ ನನಗೆ ಹೆಮ್ಮೆಯೆನಿಸುವುದಿಲ್ಲ. ನಮ್ಮದು ಖಂಡಿತಾ ತಲೆ ತಗ್ಗಿಸುವಂತಹ ನಡವಳಿಕೆ. ಅವರನ್ನು  ಬಂದೂಕಿನ ನಳಿಗೆ ತೋರಿಸಿ ನಮ್ಮ ರಾಷ್ಟ್ರದೊಳಗೆ  ಇರಿಸಿಕೊಂಡಿದ್ದೇವೆ, ಅದನ್ನು ಮರೆಮಾಚಲು ಪ್ರತಿಯಾಗಿ ತರಹೇವಾರಿ ಸುದ್ದಿಗಳನ್ನು ಹರಡುತ್ತಿದ್ದೇವೆ. ’ನೋಡಿ ಇದೆಲ್ಲಾ ಕ್ರಿಶ್ಚಿಯನ್ ಮಿಶನರಿಗಳ ಪ್ರಭಾವ. ಅವರೆಲ್ಲಾ ದೇಶದ್ರೋಹಿಗಳು’  ಹೀಗೆ ಎಲ್ಲಾ ರೀತಿಯ ಸುದ್ದಿಗಳೂ ಹರಡುತ್ತಿವೆ. ಭಾರತದ ನಲವತ್ತು ಪ್ರತಿಶತ ರಾಜ್ಯಗಳು ನಾವು ನಮ್ಮ ರಾಷ್ಟ್ರ ಪ್ರಭುತ್ವವನ್ನು ಕಟ್ಟುತ್ತಿರುವ ರೀತಿಗೆ  ಅಸಮಾಧಾನದಿಂದಿವೆ. ಆಂಗ್ಲ ಕವಿ ಯೇಟ್ಸ್ ನ ಸಾಲುಗಳು ನೆನಪಿಗೆ ಬರುತ್ತಿವೆ: ‘ the centre just cannot hold’. ಈ ರೂಪಕ ಇವತ್ತು ಒಂದು ಭಯಾನಕ ವಾಸ್ತವ  ಎಂದೆನಿಸುತ್ತಿದೆ.

ನಾನು ಈಗಾಗಲೇ ಒಂದು ವಿಚಾರವನ್ನು ಮಂಡಿಸಿದ್ದೇನೆ. ಏನೆಂದರೆ  ರಾಷ್ಟ್ರ ನಿರ್ಮಾಣದ ಹಾದಿಯಲ್ಲಿ ಕೆಲವೊಂದಿಷ್ಟು ಸಮುದಾಯಗಳು ಸಮಾಜದ ಜ್ಞಾನಸಂಬಂಧಿ ಸ್ಮೃತಿಕೋಶಗಳಿಂದ ಕಣ್ಮರೆಯಾಗಲೇಬೇಕು ಎಂದು. ರಾಷ್ಟ್ರ ಎನ್ನುವುದೇ ಪ್ರಗತಿ, ಅಭಿವೃದ್ಧಿ, ಸೆಕ್ಯುಲರಿಸಂ ನ  ಕೆಲವು ನಿರ್ದಿಷ್ಟ ಪರಿಕಲ್ಪನೆಗಳ ಮೇಲೆ ನಿಂತಿದೆ. ನಾನು ಮುಂದಿನ ಉಪನ್ಯಾಸಗಳಲ್ಲಿ ಅದನ್ನು ಕುರಿತು ವಿವರವಾಗಿ ಚರ್ಚಿಸುತ್ತೇನೆ. ಹಾಗಾದರೆ, ಸ್ವಾತಂತ್ತ್ರ್ಯಾನಂತರ ಭಾರತದಲ್ಲಿ ಕಣ್ಮರೆಯಾದ ಸಮುದಾಯಗಳು ಯಾವವು? ಆದಿವಾಸಿ ಸಮುದಾಯಗಳು ಕಣ್ಮರೆಯಾಗಿವೆ. ಆದಿವಾಸಿ ಸಮುದಾಯಗಳು ನಮ್ಮ ರಾಜಕೀಯದ  ಭಾವಕೋಶದಿಂದ ಸಂಪೂರ್ಣವಾಗಿ ಹೊರಬಿದ್ದಿವೆ. ಒಂದು ರಾಷ್ಟ್ರ ಪ್ರಭುತ್ವವಾಗಿ  ಭಾರತದಲ್ಲಿ ಆದಿವಾಸಿಗಳಿಗೆ ಜಾಗವೇ ಇಲ್ಲ. ಮಧ್ಯಪ್ರದೇಶದಲ್ಲಿ ಏನಾಗುತ್ತಿದೆ? ಓರಿಸ್ಸಾದಲ್ಲಿ ಏನಾಗುತ್ತಿದೆ? ಉತ್ತರ ಪ್ರದೇಶದಲ್ಲಿ?  ಪಶ್ಚಿಮ ಬಂಗಾಳದಲ್ಲಿ? ನಲ್ಪತ್ತರ ದಶಕದ ಆರಂಭದಲ್ಲಿ ನೀರದ್ ಚೌಧರಿ ಎಂಬ ಸಂಪ್ರದಾಯವಾದಿ, ಬಲಪಂಥೀಯ ಚಿಂತಕರೊಬ್ಬರು ಈ ಕುರಿತು ಬರೆದರು, ಕೆಲವರಂತೂ ಇವರನ್ನು ಹುಚ್ಚ ಎಂದೇ ಕರೆದರು. ಐವತ್ತರ ದಶಕದ ಆರಂಭದಲ್ಲೇ ಆದಿವಾಸಿಗಳ ಬವಣೆಯ ಬಗೆಗೆ ಬರೆದು ಅರಿವು ಮೂಡಿಸಿದವರು ಅವರೇ. ‘ಕಾಂಟಿನೆಂಟಲ್ ಸರ್ಚ’’ ಎಂಬ ಅವರ ಪುಸ್ತಕದಲ್ಲಿ ಅವರು ಆದಿವಾಸಿಗಳ ಅಳಿವಿನ ಬಗ್ಗೆ ಮನಮುಟ್ಟುವ ಹಾಗೆ  ಬರೆಯುತ್ತಾರೆ.  ಬೇರೆ ಪದಗಳಲ್ಲಿ ಇಡುವುದಾದರೆ ಭಾರತವು ಒಂದು ಹೊಸ ರಾಷ್ಟ್ರವಾಗಿ ಹೊರಹೊಮ್ಮಿದಾಗ ಮೊದಲು ಬಲಿಯಾದವರು ಆದಿವಾಸಿಗಳು. ಇತ್ತೀಚೆಗಿನ ಅಂಕಿಅಂಶಗಳ ಪ್ರಕಾರ ಹನ್ನೆರಡರಿಂದ ಹದಿನೈದು ಪ್ರತಿಶತಕ್ಕಿಂತಲೂ ಜಾಸ್ತಿ ಪ್ರಮಾಣದಲ್ಲಿ ಅವರ ಸಂಖ್ಯೆ ಇಳಿಮುಖವಾಗುತ್ತಿದೆ. ತನ್ನ ವ್ಯಾಪ್ತಿಯಲ್ಲಿರುವ ಐವತ್ತು ಪ್ರತಿಶತ ಜನರ ಅಸ್ತಿತ್ವವನ್ನೇ ನಿರಾಕರಿಸುವ ರಾಷ್ಟ್ರ ಪ್ರಭುತ್ವವೊಂದನ್ನು  ರಾಷ್ಟ್ರ ಪ್ರಭುತ್ವ ಎನ್ನಲು ಸಾಧ್ಯವೇ ಇಲ್ಲ. ಅದಕ್ಕೇ ಹೊಸ ಪರಿಕಲ್ಪನೆಯೊಂದು ಈಗ ಹರಿದಾಡುತ್ತಿದೆ.  ಅದರ ಪ್ರಕಾರಒಂದು ರಾಷ್ಟ್ರದ ಉಳಿವು ಅದು ಸೃಷ್ಟಿಸಿಕೊಳ್ಳುವ ’ಶೂನ್ಯ’ ಅಥವಾ ’ಅಗೋಚರ ಲೋಕ’ಗಳ ಮೇಲೆ ನಿಂತಿದೆ. ಏನಿವು ’ಅಗೋಚರ ಲೋಕ’ಗಳು?  ಇವುಗಳು ಖಾಲಿ ಕಮರಿಗಳು, ಸಮುದಾಯಕ್ಕೆ ಸಮುದಾಯವೇ ಈ ಅಗೋಚರ ಲೋಕಗಳ ಕಮರಿಯೊಳಗೆ ಜಾರಿ ಕಣ್ಮರೆಯಾಗುತ್ತದೆ. ಆ ಸಮುದಾಯಗಳು ದಲಿತರದ್ದಾಗಿರಬಹುದು, ದಲಿತರಲ್ಲೇ ಕಡು ಬಡವರದ್ದಾಗಿರಬಹುದು, ತಂತ್ರಜ್ಞಾನದ ಅರಿವಿರದ ಆಧುನಿಕ ಪೂರ್ವ ಸಮುದಾಯಗಳಾಗಿರಬಹುದು, ಅಥವಾ ಆಧುನಿಕ ತಂತ್ರಜ್ಞಾನವಿನ್ನೂ ಸೋಂಕದ ಗ್ರಾಮೀಣ ಸಮುದಾಯಗಳಾಗಿರಬಹುದು ಈ ಸಮುದಾಯಗಳು ಇತಿಹಾಸದ ಕತ್ತಲಿನೊಳಗೆ ಹೀಗೇ ಕಾಣೆಯಾಗಿಬಿಡುತ್ತವೆ. ಯಾಕೆಂದರೆ ನಾವು  ಕಟ್ಟುತ್ತಿರುವ ರಾಷ್ಟ್ರ ಪ್ರಭುತ್ವವು ಈ ಸಮುದಾಯಗಳನ್ನು ಒಳಗೊಳ್ಳಲಾರದು.

ಸಾಹಿತ್ಯವು ಕೂಡ… ಕನ್ನಡ ಇರಬಹುದು, ತೆಲುಗು ಇರಬಹುದು ನಾನು ವಿಶೇಷವಾಗಿ ಕನ್ನಡ ಸಾಹಿತ್ಯದ ಬಗೆಗ ಖಂಡಿತವಾಗಿಯೂ ಹೇಳಬಲ್ಲೆ, ನಮಗೆ ಈ ಕಣ್ಮರೆಯಾದ ಸಮುದಾಯಗಳು ಕಾಣುವುದೇ ಇಲ್ಲ.    ಆಧುನಿಕ ಕನ್ನಡ ಸಾಹಿತ್ಯವು  ಯಾದಿಯಲ್ಲಿರುವ  ಜನಗಳಿಂದ ನಿರ್ಮಿತವಾಗಿದೆ.  ಗ್ರೀಕ್ ತತ್ವಶಾಸ್ತ್ರದಲ್ಲಿ ಒಂದು ಅದ್ಭುತ ಪರಿಕಲ್ಪನೆಯಿದೆ. ’ಜನರು ಅಸ್ತಿತ್ವದಲ್ಲಿದ್ದಾರೆ ಆದರೆ ಯಾದಿಯಲ್ಲಿ ಇಲ್ಲ’ ಅನ್ನುವ ವಿಚಾರವೊಂದಿದೆ. ಈ ವಿಚಾರವು  ಜಗತ್ತಿನ ತಾತ್ವಿಕ ಚಿಂತನೆಗಳಲ್ಲಿಯೇ ನನಗೆ ಖುಷಿ ಕೊಟ್ಟ ಪರಿಕಲ್ಪನೆಗಳಲ್ಲಿ ಒಂದು. ಇದೊಂದು ಗ್ರೀಕ್ ರಾಜಕೀಯ ಚಿಂತನೆ. ಜನ ಅಸ್ತಿತ್ವದಲ್ಲಿದ್ದಾರೆ, ಆದರೆ ಯಾದಿಯಲ್ಲಿ ಇಲ್ಲ. ನೋಡಿ ಎಂಥಾ ವ್ಯಂಗ್ಯವಿದೆ. ರಾಷ್ಟ್ರ ಅಥವಾ ರಾಷ್ಟ್ರೀಯತೆಯು ಯಾದಿಯಲ್ಲಿ ಇಲ್ಲದವರಿಂದಾಗಿಯೇ ಯಶಸ್ವಿಯಾಗುತ್ತದೆ. ಕನ್ನಡ ವಾಙ್ಮಯದ ಸಂಸ್ಕೃತಿಯಲ್ಲಿ ಕೂಡ ನಮ್ಮ ಸಾಹಿತ್ಯಿಕ ಕಲ್ಪನೆಗಳು ಈ ಯಾದಿಯಲ್ಲಿ ಇಲ್ಲದವರನ್ನು ಪರಿಗಣಿಸುವುದೇ ಇಲ್ಲ. ಉದಾಹರಣೆಗೆ ಇವತ್ತಿನವರೆಗೂ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಆದಿವಾಸಿಗಳ ಅಳಿವು-ಉಳಿವಿನ ಬಗೆಗೆ ಪರಿಶೋಧನೆ ನಡೆಸಿದ ಒಂದೇ ಒಂದು ವಿವರವೂ ಸಿಗುವುದಿಲ್ಲ ಆಧುನಿಕ ತಂತ್ರಜ್ಞಾನವಿನ್ನೂ ಸೋಂಕದ ಸಮುದಾಯಗಳನ್ನು ಕುರಿತು  ಪರಿಶೋಧನೆ ನಡೆಸಿದ  ವಿವರಗಳಿಲ್ಲ. ವಿಶಾಲ ದೃಷ್ಟಿಯ ಕೊರತೆ ಇದೆ. ರಾಷ್ಟ್ರೀಯತೆಯು ಒಂದು ನಿರ್ದಿಷ್ಟ ಬಗೆಯ ಉತ್ಸಾಹವನ್ನು, ಒಂದು ನಿರ್ದಿಷ್ಟ  ಬಗೆಯ ಸಂಭ್ರಮವನ್ನು ಜನಮಾನಸದಲ್ಲಿ ತುಂಬುತ್ತದೆ. ಆದರೆ ಅಗೋಚರ ಲೋಕಗಳ ಕಮರಿಯೊಳಗೆ ಕುಸಿದವರ ರೋದನ ಅದಕ್ಕೆ ಕೇಳಿಸುವುದೇ ಇಲ್ಲ.

ಕಳೆದ ಐವತ್ತು ವರ್ಷಗಳಲ್ಲಿ ನಾವು ನಮ್ಮ ರಾಷ್ಟ್ರವನ್ನು ಕಟ್ಟಿದ ರೀತಿ ಹೇಗಿದೆ ಎಂದರೆ  ಕೊನೆಪಕ್ಷ ಇಪ್ಪತ್ತರಿಂದ ಇಪ್ಪತ್ತೆರಡು ಪ್ರತಿಶತ ಸೃಜನಶೀಲ ಸಮುದಾಯಗಳನ್ನು ಈ ರಾಷ್ಟ್ರವೆಂಬ ಪರಿಕಲ್ಪನೆ  ಸೃಷ್ಟಿಸಿದ ಕಮರಿಯೊಳಗೆ  ಎಸೆದಿದ್ದೇವೆ. ಆದಿವಾಸಿಗಳು, ಆಧುನಿಕ ತಂತ್ರಜ್ಞಾನವಿನ್ನೂ ಸೋಂಕದ ಸಮುದಾಯಗಳು, ಅರವತ್ತು ಪ್ರತಿಶತ ದಲಿತರು, ಹೀಗೆ ಈ ಕೆಲವು ಸಮುದಾಯಗಳು ರಾಷ್ಟ್ರೀಯವಾದ ಸೃಷ್ಟಿಸಿದ ಪ್ರಪಾತದೊಳಕ್ಕೆ ಎಸೆಯಲ್ಪಟ್ಟಿವೆ. ಮತ್ತು  ನಮ್ಮ ಸಾಹಿತ್ಯ ಕೂಡ ಆಶ್ಚರ್ಯಕರ ರೀತಿಯಲ್ಲಿ ಈ ದುರಂತದ ಬಗೆಗೆ ಮೌನ ತಾಳಿದೆ. ಮಲಯಾಳಿ ಸಾಹಿತ್ಯದೊಳಗೆ ಹೇಗೆ ಎಂಬುದನ್ನು ಗೆಳೆಯರಾದ ಕುಟ್ಟಿಯವರು ಹೇಳಬೇಕು. ಗೋಪಿನಾಥ ಮೊಹಂತಿ, ಮಹಾಶ್ವೇತಾ ದೇವಿಯವರಂತಹ ಬರಹಗಾರರು ಆದಿವಾಸಿ ಸಮುದಾಯಗಳ ಪಾಡನ್ನು ತಮ್ಮ ಬರಹಗಳಲ್ಲಿ ಚಿತ್ರಿಸಿದ್ದಾರೆ.  ಆದರೆ  ದಕ್ಷಿಣ ಭಾರತದ ಆದಿವಾಸಿ ಬರಹಗಾರರನ್ನು ಇನ್ನೂ ಎದಿರು ನೋಡುತ್ತಿದ್ದೇವೆ. ಕನ್ನಡದಲ್ಲಿ ಯಾರೂ ಇಲ್ಲ.  ಕಳೆದ ಇಪ್ಪತ್ತು ವರ್ಷಗಳ ಬರೆಹಗಳನ್ನೆಲ್ಲಾ ಸಂಪಾದಿಸಿ ಸಮಗ್ರ ಸಂಪುಟವನ್ನೇನಾದರೂ ಮಾಡಿದರೆ ಬರೀ ಸಂಭ್ರಮಾಚರಣೆಯೇ ಆಗುತ್ತದೆ ಹೊರತು ಅಳಿದು ಹೋದ ಸಮುದಾಯಗಳು ಮೇಲೆದ್ದು ಬರುವುದಿಲ್ಲ. ಇವು ವಿವರಗಳು. ಆದರೆ ಅಮೂರ್ತ ಚಿಂತನೆಯ ನೆಲೆಯಲ್ಲಿ, ಮಹಾಕಥನಗಳ ನೆಲೆಯಲ್ಲಿ ನಮ್ಮ ಕೆಲವು ಬರಹಗಾರರು ರಾಷ್ಟ್ರೀಯತೆಯ ಸೋಗನ್ನು ಪ್ರಶ್ನಿಸಿದ್ದಾರೆ. ಅದು ಸೈದ್ಧಾಂತಿಕ ನೆಲೆಯಲ್ಲಿ ಸಿಕ್ಕ ವಿಜಯ. ಆದರೆ ವಾಸ್ತವ ಬದುಕಿನ ಅನುಭವಗಳ ನೆಲೆಯಲ್ಲಿ  ಸಮುದಾಯಗಳ ಅಳಿವಿನ ಅನುಭವಗಳನ್ನು ಚಿತ್ರಿಸುವಾಗ, ಆ ಸಮುದಾಯಗಳ ಮೇಲಾಗುತ್ತಿರುವ ದೌರ್ಜನ್ಯಗಳನ್ನು ಚಿತ್ರಿಸುವಾಗ ಈ ಬರಹಗಾರರು ಮೌನ ತಾಳುತ್ತಾರೆ.

ಇವತ್ತಿನ ಉಪನ್ಯಾಸವನ್ನು ಮುಗಿಸುತ್ತ ಹೇಳುವುದೇನೆಂದರೆ, ರಾಷ್ಟ್ರ ಪ್ರಭುತ್ವದ ಉಳಿವು ಅದು ಸೃಷ್ಟಿಸುವ ’ಅಗೋಚರ ಲೋಕ’ಗಳ ಮೇಲೆ ನಿಂತಿದೆ. ರಾಷ್ಟ್ರ ಪ್ರಭುತ್ವದ ಉಳಿವು ಮೂಲತಃ ತಾನು ಅವ್ಯಕ್ತವಾಗಿದ್ದರೂ  ನಾನಾ ರೂಪಗಳಲ್ಲಿ ವ್ಯಕ್ತವಾಗುವ ಹಿಂಸೆಯನ್ನು  ಅವಲಂಬಿಸಿದೆ. ಈ ರಾಷ್ಟ್ರೀಯತೆಯ ಚಾಲಕ ಶಕ್ತಿಯೇ ಸಾಹಿತ್ಯವಾದ್ದರಿಂದ ಒಂದು ನೆಲೆಯಲ್ಲಿ  ಸಾಹಿತ್ಯಕ್ಕೆ ತನ್ನ ಅಪರಾಧವನ್ನು ಮುಚ್ಚಿಕೊಳ್ಳುವ ಅನಿವಾರ್ಯತೆ ಇದೆ.  ಆದರೆ  ಸೈದ್ಧಾಂತಿಕ ನೆಲೆಯಲ್ಲಾದರೂ, ಜ್ಞಾನ ಮೀಮಾಂಸೆಯ ನೆಲೆಯಲ್ಲಾದರೂ ಕೆಲವು ಬರಹಗಾರರಿಗೆ, ಚಿಂತಕರಿಗೆ ಮತ್ತು ವಿಮರ್ಶಕರಿಗೆ  ಸಾಹಿತ್ಯ ವಲಯದಲ್ಲಿರುವ ಮೌನ ಖಂಡಿತವಾಗಿಯೂ ಮುಜುಗರವನ್ನುಂಟು ಮಾಡುತ್ತದೆ. ಆದರೆ ಬಹಳಷ್ಟು ಸಾರಿ ಅವರಿಗೆ ತಮ್ಮ ವಲಯದಲ್ಲಿ ಎಲ್ಲರೂ ಆಚರಿಸುವ ಮೌನದ ಒಂದು ಮಾದರಿಯನ್ನು ತ್ಯಜಿಸಲಾಗುವುದಿಲ್ಲ; ಹಿಂಸೆಯ ರೂಪಗಳನ್ನು, ಅಳಿವಿನ ಕ್ರಿಯೆಗಳನ್ನು ಹಿಡಿದಿಡಲು ಆಗುವುದಿಲ್ಲ. ಕೊನೆಯಲ್ಲಿ ಹೇಳುವುದಿಷ್ಟೇ, ರಾಷ್ಟ್ರೀಯವಾದವು ಬಹುಶಃ ನಾವೆಲ್ಲ ಮರುಗಬೇಕಾದ, ದುಃಖಿಸಬೇಕಾದ ಮತ್ತು ವಿಷಾದಿಸುವ ಸಂಗತಿ. ಧನ್ಯವಾದ.

                                                       ********

ಈ ಉಪನ್ಯಾಸದ ನಂತರ ನಡೆದ ಸ್ವಾರಸ್ಯಕರ ಚರ್ಚೆಯ ಕೆಲ ಭಾಗಗಳು:

ಪ್ರಶ್ನೆ:  ಚಲನಚಿತ್ರ ಮಾಧ್ಯಮ ಮತ್ತು ಸಾಹಿತ್ಯದ ನಡುವೆ ಮೂಲಭೂತವಾದ ವ್ಯತ್ಯಾಸಗಳೇನಾದರೂ ಇವೆಯೆ?

ಡಿ. ಆರ್: ಚಲನಚಿತ್ರ ಮತ್ತು ಸಾಹಿತ್ಯದ ಇತರ ಪ್ರಕಾರಗಳ ನಡುವೆ ಮೂಲಭೂತವಾದ ವ್ಯತ್ಯಾಸಗಳೇನೂ ಇಲ್ಲ. ಅವೆರಡರಲ್ಲೂ ಸಾಮಾನ್ಯವಾಗಿ ಕಂಡುಬರುವ ಸಂಗತಿಯೆಂದರೆ ತಮ್ಮ ಬೆನ್ನನ್ನು ತಾವೆ ತಟ್ಟಿಕೊಂಡು ಸಮಾಧಾನ ಪಟ್ಟುಕೊಳ್ಳುವ ಮಧ್ಯಮ ವರ್ಗೀಯ ನಿಲುವುಗಳು. ನಿಹಲಾನಿಯವರ ಆಕ್ರೋಶ್ ಅಂತ ಒಂದು ಚಲನಚಿತ್ರ ಇದೆ.  ಒಂದು ದೃಷ್ಟಿಯಿಂದ ಅದು  ಆಸಕ್ತಿದಾಯಕ ಸಿನೆಮಾ. ಬುಡಕಟ್ಟು ಸಮುದಾಯದವರ ಮೇಲಿನ ದೌರ್ಜನ್ಯವನ್ನು ಬಿಂಬಿಸುವ ಸಿನೆಮಾ. ಆದರೆ ನೀವು ಆ ಸಿನೆಮಾವನ್ನು ಗಮನವಿಟ್ಟು ನೋಡಿ.  ಅದರ ನಾಯಕ ಬುಡಕಟ್ಟು ಸಮುದಾಯದವನಲ್ಲ, ಮಧ್ಯಮವರ್ಗಕ್ಕೆ ಸೇರಿದ ಒಬ್ಬ ವಕೀಲನಾಗಿರುತ್ತಾನೆ. ತುಳಿತಕ್ಕೆ ಒಳಗಾದವರ ಸಲುವಾಗಿ ಎಂತಹ ತ್ಯಾಗಕ್ಕೂ ಸಿದ್ದನಿರುವ ಒಬ್ಬ ಸಂವೇದನಾಶೀಲ ನಾಯಕ. ಈ ನಿಟ್ಟಿನಲ್ಲಿ ಆ ಸಿನೆಮಾವು ಮಧ್ಯಮವರ್ಗಕ್ಕೆ ರೂಢಿಯಾಗಿರುವ ಸ್ವಪ್ರಶಂಸೆಯ ನಿಲುವುಗಳ ಬಗೆಗೆ ಇದೆಯೇ ಹೊರತು ಬುಡಕಟ್ಟು ಸಮುದಾಯದವರ ಬಗೆಗಲ್ಲ. ರಾಷ್ಟ್ರೀಯವಾದಿ ನಿಲುವನ್ನು ಹೊಂದಿದ ಸಿನೆಮಾಗಳಿಗೆ ಇನ್ನೊಂದು ಕ್ರೂಡ್ ಆದ ಉದಾಹರಣೆ ಕೊಡುವುದಾದರೆ ಗಳಿಗೆ ಎಂಬ ಒಂದು ಸಿನೆಮ. ಕಳೆದ ಸುಮಾರು ಹದಿನೈದು ವರ್ಷಗಳಿಂದೀಚೆಗೆ ನಾನು ನೋಡಿದ ಅತ್ಯಂತ ಕೆಟ್ಟ, ರಾಷ್ಟ್ರೀಯವಾದಿ ಕಚಡಾ ತುಂಬಿದ ಸಿನೆಮಾಗಳಲ್ಲಿ ಅದೂ ಒಂದು. ಹೀಗಾಗಿ ಚಲನಚಿತ್ರ ಮಾಧ್ಯಮ ಮತ್ತು ಸಾಹಿತ್ಯದ ನಡುವೆ ರಾಷ್ಟ್ರೀಯವಾದಿ ನಿಲುವನ್ನು ಬಿಂಬಿಸುವ ನಿಟ್ಟಿನಲ್ಲಿ ಅಂತಹ ವ್ಯತ್ಯಾಸಗಳೇನೂ ಇಲ್ಲ ಎಂದು ನನಗನಿಸುತ್ತದೆ.

ಆದರೆ ಕೆಲವೊಮ್ಮೆ ಸಾಹಿತ್ಯ ಕ್ಷೇತ್ರದಲ್ಲಿ ನಡೆಯುವಂತೆ ಚಲನಚಿತ್ರ ಮಾಧ್ಯಮದಲ್ಲಿ ಸಹಾ ಅಪರೂಪಕ್ಕೆಂಬಂತೆ ಕೆಲವು ಸಂವೇದನಾಶೀಲ ಚಿತ್ರ ನಿರ್ಮಾಪಕರು ರಾಷ್ಟ್ರೀಯ ಪ್ರಜ್ಞೆಯ ಸಿದ್ಧ ಮಾದರಿಗಳಿಂದ ಹೊರಬರುವ ಸಾಹಸ ಮಾಡಿದ್ದನ್ನು ಕಾಣುತ್ತೇವೆ. ಅವರು ರಾಷ್ಟ್ರೀಯವಾದಿ ನಿಲುವಿನ ಕೆಲವು ಸೋಗುಗಳನ್ನು ಪ್ರಶ್ನಿಸುವ ಛಾತಿ ಹೊಂದಿದಂಥವರು. ಸತ್ಯಜಿತ್ ರೇ ಅಂತಹ ಒಂದು ಪ್ರಯತ್ನ ಮಾಡುತ್ತಾರೆ. ಹೀಗಿದ್ದರೂ ಕೂಡಾ, ರಾಷ್ಟ್ರೀಯವಾದವನ್ನು ಸಂಭ್ರಮಿಸುವ ನಿಟ್ಟಿನಲ್ಲಿ ಮಧ್ಯಮವರ್ಗದವರ ನಡುವೆ ಒಂದು ಬಗೆಯ ಸಹಮತ ಯಾವಾಗಲೂ ಇರುವುದನ್ನು ಕಾಣಬಹುದು. ಈ ಒಂದು ಮಧ್ಯಮ ವರ್ಗಕ್ಕೆ -ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾದ, ಇಂಗ್ಲೀಷ್ ಮಾತನಾಡುವ, ನಗರಕೇಂದ್ರಿತ ಮಧ್ಯಮ ವರ್ಗಕ್ಕೆ ಕಳೆದ ಐವತ್ತು ವರ್ಷಗಳಿಂದಲೂ ರಾಷ್ಟ್ರ ನಿರ್ಮಾಣವು ಒಂದು ಮುಖ್ಯ ಅಜೆಂಡಾ ಆಗಿದೆ. ಅವರಿಗೆಲ್ಲ ನೆಹರೂ ಒಬ್ಬ ಹೀರೋ.  ಮಧ್ಯಮವರ್ಗದವರ  ಈ ರೀತಿಯ ಸ್ವಪ್ರಶಂಸೆಯ ಗೀಳಿನ, ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡು ಸಮಾಧಾನ ಪಟ್ಟುಕೊಳ್ಳುವ ಅಭ್ಯಾಸದ ಮಿತಿಗಳನ್ನು ಎತ್ತಿ ತೋರಿಸಿ ಅದನ್ನು ವಿಮರ್ಶಾತ್ಮಕವಾಗಿ ವಿವೇಚಿಸುವುದು ಇವತ್ತಿನ ಎಲ್ಲ ಚಿಂತಕರ ಹೊಣೆಯಾಗಿದೆ. ಭಾರತದ ರಾಷ್ಟ್ರೀಯವಾದಿ ಸಾಹಿತ್ಯ ಮತ್ತು ಕಲಾ ಪ್ರಕಾರಗಳು ಯಾವಾಗಲೂ ಸ್ವಶ್ಲಾಘನೆ ಮಾಡಿಕೊಂಡೇ ಬಂದಿವೆ. ಹೀಗೆ ರಾಷ್ಟ್ರವೆಂಬುದು ಮಧ್ಯಮವರ್ಗದವರು ಕಾಪಿಟ್ಟುಕೊಂಡು ಬಂದ ಕನಸು. ಅದಕ್ಕಾಗಿಯೇ ಕಾರಂತರ ಮರಳಿ ಮಣ್ಣಿಗೆ ಕಾದಂಬರಿಯಲ್ಲಿ ಬರುವ ತಳ ಸಮುದಾಯದ ಕೆಲಸದ ಆಳುಗಳು ತಮ್ಮ ಒಡೆಯಂದಿರು ಕಂಡ ರಾಷ್ಟ್ರ ನಿರ್ಮಾಣದ ಕನಸಿನ ಬಗೆಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರಿಗೆ ಅದು ಏನೂ ಅಲ್ಲ. ಆ ಕಾದಂಬರಿಯಲ್ಲಿ ಒಂದು ಸ್ತ್ರೀ ಪಾತ್ರವಿದೆ. ಅವಳು ಕಾದಂಬರಿಯ ನಾಯಕನಾದ ರಾಮನನ್ನು ಮೂದಲಿಸುತ್ತಾಳೆ. ಒಟ್ಟಿನಲ್ಲಿ ನನ್ನ ವಾದ ಏನೆಂದರೆ, ರಾಷ್ಟ್ರೀಯವಾದಿ ಯೋಜನೆಯು ಭಾರತದ ಅನೇಕ ಸಮುದಾಯಗಳ ಬದುಕಿನ ಕ್ರಮಗಳನ್ನು ಮತ್ತು ಅವರ ಕಲ್ಪನೆಯ ಜಗತ್ತನ್ನು  ತನ್ನ ಪರಿಧಿಯ ಒಳಗೆ ಸೇರಿಸಿಕೊಳ್ಳಲಿಲ್ಲ.

ಪ್ರಶ್ನೆ:  ಅನಂತಮೂರ್ತಿಯವರು ಗಾಂಧಿ, ತಿಲಕ್ ಮತ್ತು ಅಂಬೇಡ್ಕರರ ವಿಚಾರಗಳನ್ನು ತುಲನೆ ಮಾಡುತ್ತ ಹೀಗೆನ್ನುತ್ತಾರೆ. ’ತಿಲಕರಿಗೆ ಭಾರತವು ಒಂದು ರಾಷ್ಟ್ರವಾಗಿತ್ತು. ಅಂಬೇಡ್ಕರ್ ರವರಿಗೆ ಭಾರತವು ಒಂದು ಸಮಾಜವಾಗಿತ್ತು.  ಮತ್ತು ಗಾಂಧಿಯವರಿಗೆ ಭಾರತವು ಒಂದು ರಾಷ್ಟ್ರವೂ ಆಗಿತ್ತು, ಒಂದು ಸಮಾಜವೂ ಆಗಿತ್ತು.’ ಎನ್ನುತ್ತಾರೆ. ಈಗ  ಗಾಂಧಿಯವರ ನಿಲುವನ್ನೇ ತೆಗೆದುಕೊಂಡರೆ ”ರಾಷ್ಟ್ರ’ ಮತ್ತು ’ಸಮಾಜ’ದ ನಡುವೆ ಒಂದು ಸಮತೋಲನ ಸಾಧ್ಯವೆ ಎಂಬುದು ನನ್ನ ಪ್ರಶ್ನೆ. ರಾಷ್ಟ್ರೀಯವಾದವು ಒಂದು ಹಂತದ ನಂತರ ಹಲವು ಬಗೆಯ ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ ಎಂಬುದನ್ನು ನಾನು ಖಂಡಿತ ಒಪ್ಪಿಕೊಳ್ಳುತ್ತೇನೆ. ಆದರೆ ರಾಷ್ಟ್ರೀಯವಾದವು ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ, ರಾಷ್ಟ್ರೀಯವಾದಿ ಬರೆಹಗಾರರಿಗೆ ಮತ್ತು ಕವಿಗಳಿಗೆ  ಒಂದು ಚಾಲಕ ಶಕ್ತಿಯಾಗಿತ್ತು ಎಂದೂ ನೀವು ಹೇಳುತ್ತೀರಿ. ಬಹುಶಃ ತಪ್ಪು ಎಲ್ಲಾಯಿತೆಂದರೆ, ನಾವು ನಮ್ಮ ದೇಶವು  ಒಂದು ಸಮಾಜವೆನ್ನುವ ಪ್ರಜ್ಞೆಗಿಂತ ಅದು ಒಂದು ರಾಷ್ಟ್ರವೆನ್ನುವ ಪ್ರಜ್ಞೆಗೆ ಹೆಚ್ಚು ಒತ್ತನ್ನು ನೀಡಿದೆವು ಅನಿಸುತ್ತದೆ. ಅವೆರಡೂ ಅರಿವುಗಳ ನಡುವೆ ಒಂದು ಸಮತೋಲನ ಸಾಧಿಸಿದರೆ ಬಹುಶಃ ರಾಷ್ಟ್ರೀಯವಾದವು ಹುಟ್ಟಿಸಿದ ಸಮಸ್ಯೆಗಳಿಂದ ಹೊರಬರಬಹುದೇನೋ ಎಂದು ನನಗೆ ಅನಿಸುತ್ತದೆ.

ಡಿ. ಆರ್: ಖಂಡಿತ ಹೌದು. ನಿಮ್ಮ ವಿಚಾರವನ್ನು ಒಪ್ಪಿಕೊಳ್ಳುತ್ತೇನೆ.  ಆದರೆ ಒಂದು ಸಣ್ಣ ತಿದ್ದುಪಡಿಯೊಂದಿಗೆ. ಗಾಂಧಿಯವರನ್ನು ಒಬ್ಬ ರಾಷ್ಟ್ರೀಯವಾದಿ ಚಿಂತಕ ಎಂದು ಬಿಂಬಿಸುವುದು ಕಷ್ಟ. ಗಾಂಧಿಯವರಿಗೆ ರಾಷ್ಟ್ರ ಅನ್ನುವುದಕ್ಕಿಂತ ಒಂದು ನಾಗರಿಕ ಸಮಾಜವನ್ನು ಕಟ್ಟುವ ಕನಸಿತ್ತು.  ಕೆಲವು ’ರಾಷ್ಟ್ರೀಯವಾದಿ ಶಕ್ತಿ’ ಗಳು ಗಾಂಧಿಯವರನ್ನು  ಭೌತಿಕವಾಗಿ ದೂರ ಇಟ್ಟಿದ್ದಕ್ಕೆ ಇದೂ ಒಂದು ಕಾರಣ.   ಯಾಕೆಂದರೆ ರಾಷ್ಟ್ರೀಯವಾದ ಅಥವಾ ರಾಷ್ಟ್ರ ಪ್ರಜ್ಞೆಯೆಂಬುದು ಮೂಲಭೂತವಾಗಿ ಒಂದು ಅಪಾಯಕಾರಿ ವಿಚಾರ. ತನ್ನೊಂದಿಗೆ ಹಿಂಸೆಯನ್ನೂ ತಳಕು ಹಾಕಿಕೊಂಡ ವಿಚಾರ. ಅದರ ಮೂಲ ಹಂದರದೊಳಗೇ ದಮನಕಾರಿ ಅಂಶಗಳಿವೆ. ಇದನ್ನು ಇನ್ನೂ ಬೆಳಸುವುದಕ್ಕೆ ಹೋಗುವುದಿಲ್ಲ. ಒಟ್ಟಿನಲ್ಲಿ ನನ್ನ ನಿಲುವನ್ನು ಇಲ್ಲಿ ಸ್ಪಷ್ಟಗೊಳಿಸುತ್ತೇನೆ. ರಾಷ್ಟ್ರೀಯವಾದವು ಒಂದು ನಿರ್ಮಿತಿ. ಅದು ನಿರ್ಮಾಣಗೊಂಡದ್ದು. ಮತ್ತು ಹಿಂಸೆಯನ್ನು ಅದು ಆಹ್ವಾನಿಸದೇ ಇರಲಾರದು.

ಪ್ರಶ್ನೆ: ರಾಷ್ಟ್ರೀಯತೆಯು ಒಂದು ಮಹಾ ಕನಸು ಎಂದು ಹೇಳಿದ್ದಕ್ಕಾಗಿ ನಾಗರಾಜ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹೇಗೆ ಮಹಾಭಾರತದಲ್ಲಿ ಎರಡು ಕುಟುಂಬಗಳ ನಡುವಿನ ಕೆಟ್ಟ ಕಲಹವೊಂದರಿಂದ ಲಕ್ಷಲಕ್ಷ ನಿರಪರಾಧಿಗಳ, ತಳ ಸ್ತರದವರ ಬಲಿಯಾಯಿತು ಎಂಬುದು ಕಣ್ಣ ಮುಂದೆ ಬಂದಾಗ ನೀವು ಹೇಳಿದ್ದು ಸರಿಯೆನಿಸುತ್ತದೆ. ಆದರೆ ರಾಷ್ಟ್ರೀಯವಾದವು ಕೆಲವು ಸಾಂಸ್ಕೃತಿಕ ಅನನ್ಯತೆಗಳನ್ನು ಕಾಪಾಡುವುದಕ್ಕೆ ಸಹಾಯ ಮಾಡುತ್ತದೆ ಎಂದು ನಿಮಗೆ ಅನಿಸುತ್ತದೆಯೆ? ಯಾಕೆಂದರೆ ಸ್ವ-ಅಸ್ಮಿತೆ ಮತ್ತು ಸಾಂಸ್ಕೃತಿಕ ಅಸ್ಮಿತೆಗಳೆರಡೂ ಪರಸ್ಪರ ಸಂವಾದಿಯಾಗಿರುವಂಥವು. ಸಾಂಸ್ಕೃತಿಕ ಅಸ್ಮಿತೆ ಇಲ್ಲದೆ ಸ್ವ-ಅಸ್ಮಿತೆ ಇಲ್ಲ. ರಾಷ್ಟ್ರವೊಂದರ ಅನನ್ಯತೆ ಇರಬೇಕೆಂದರೆ ಸಾಂಸ್ಕೃತಿಕ ಅನನ್ಯತೆ ಬೇಕು. ರಾಷ್ಟ್ರೀಯವಾದವೂ ಯೋಗ್ಯವಾದದ್ದರ ಉಳಿವನ್ನು ಮುಂದುವರೆಸುವ ಒಂದು ಯತ್ನವೋ?  ಅಥವಾ ಪ್ರತಿಯೊಂದು ಸಂಸ್ಕೃತಿಯೂ ತನ್ನ ಅನನ್ಯತೆಯನ್ನು ಉಳಿಸಿಕೊಳ್ಳುವ ಸಲುವಾಗಿ ನಡೆಸುವ ಯತ್ನವು ರಾಷ್ಟ್ರೀಯವಾದದ ರೂಪದಲ್ಲಿ ಹೊರಬರುತ್ತದೆಯೆ?

ಡಿ. ಆರ್: ಇದೊಂದು ಒಳ್ಳೇ ಪ್ರಶ್ನೆ. ರಾಷ್ಟ್ರೀಯವಾದವು ಸಾಂಸ್ಕೃತಿಕ ಅನನ್ಯತೆಗಳನ್ನು ಕಾಪಾಡುವ ಒಂದು ಹಾದಿ ಎನ್ನುವುದು ಒಂದು ಸಾಮಾನ್ಯ ಊಹೆ. ಇದೊಂದು ವಿಪರ್ಯಾಸ. ರಾಷ್ಟ್ರೀಯವಾದವು ಒಂದು ನಿಯಂತ್ರಣ ತಂತ್ರ. ಅದು ಸಮಾಜದ ಸಾಂಸ್ಕೃತಿಕ ಸೀಮೆಗಳನ್ನು ಪುನರ್‌ಸಂಘಟಿಸುವ ಒಂದು ಮಾರ್ಗ. ಸಾಂಸ್ಕೃತಿಕ ರಾಷ್ಟ್ರ ಎಂಬ ಕಲ್ಪನೆಯಲ್ಲಿ ಕೆಲವು ನಿರ್ದಿಷ್ಟ ಸಂಗತಿಗಳನ್ನು ಮಾತ್ರ ಬರಮಾಡಿಕೊಳ್ಳಲಾಗುತ್ತದೆ. ಇದು ಸಾಹಿತ್ಯದಲ್ಲೂ ಆಗುತ್ತದೆ. ಕೆಲವು ಸಂಗತಿಗಳನ್ನು ಒಳ ಸೇರಿಸುವುದಿಲ್ಲ. ಇದು ಭಾರತದ ಬಹುತೇಕ ಎಲ್ಲ ಭಾಷೆಯ ಸಾಹಿತ್ಯಗಳಲ್ಲೂ ನಡೆದಿದೆ. ಕನ್ನಡ, ತಮಿಳು, ಮಲಯಾಳಂ, ಬಂಗಾಲಿ…ಉದಾಹರಣೆಗೆ ನಮ್ಮ ಸಾಹಿತ್ಯ ಚರಿತ್ರೆಗಳನ್ನು ತೆಗೆದುಕೊಳ್ಳಿ. ಆರ್. ನರಸಿಂಹಾಚಾರ್ಯ, ತಮಿಳಿನ ಹೂವೆ ಸ್ವಾಮಿನಾಥನ್, ಹಳೇ ಬಂಗಾಲಿ ಭಾಷೆಯ ಹರಿಪ್ರಸಾದ್ ಅಪಭ್ರಂಶ, ಕೇರಳದ ಕೇರಳ ವರ್ಮ –ಇವರನ್ನೆಲ್ಲ ತೊಗೊಳ್ಳಿ. ಅವರೆಲ್ಲ ಏನು ಮಾಡಿದರು ಅಂದರೆ ತಂತಮ್ಮ ಭಾಷೆಯ ಹೊಸ ಹೊಸ ಚರಿತ್ರೆಗಳನ್ನೆ ಸೃಷ್ಟಿಸಿದರು. ಕನ್ನಡದ  ರಂ. ಶ್ರೀ. ಮುಗಳಿಯವರ ಸಾಹಿತ್ಯ ಚರಿತ್ರೆಯನ್ನೇ ನೋಡಿ, ಅಲ್ಲಿ ಶಿಶುನಾಳ ಷರೀಫರು ಒಬ್ಬ ಸಾಮಾನ್ಯ ಗೀತರಚನೆಕಾರ. ಅದನ್ನು ಬಿಟ್ಟರೆ ಅವರಿಗೆ ಇನ್ಯಾವ ಮಹತ್ವವೂ ಸಿಕ್ಕಿಲ್ಲ. ಹಾಗೇನೇ, ಹತ್ತೊಂಬತ್ತನೆ ಶತಮಾನದಲ್ಲಿ ರಾಷ್ಟ್ರೀಯವಾದವು ಅನನ್ಯ ಸಂಸ್ಕೃತಿಗಳ ಏಕೈಕ ರಕ್ಷಕನಾಗಿ ಹೊರಹೊಮ್ಮಿದಾಗ ಪ್ರಾಚೀನ ಶೈಲಿಯ ಅಥವಾ ನವ-ಶಾಸ್ತ್ರೀಯ ಸಾಂಸ್ಕೃತಿಕ ಸ್ವರೂಪಗಳನ್ನು ಮಾತ್ರ ’ರಾಷ್ಟ್ರೀಯ’ ಎಂದು ಗುರುತಿಸಲಾಯಿತು, ಉಳಿದವೆಲ್ಲ ’ಜಾನಪದ’ ಅಥವಾ ’ಜನಪ್ರಿಯ’ ಎಂದು ಗುರುತಿಸಲಾಯಿತು ಮತ್ತು ಅಂತಹ ಸ್ವರೂಪಗಳನ್ನು ತಿರಸ್ಕರಿಸಲಾಯಿತು.

ನಿಜ, ರಾಷ್ಟ್ರೀಯವಾದವು ತನ್ನನ್ನು ತಾನು ಸಂಸ್ಕೃತಿ ರಕ್ಷಕ ಎಂದೇ ಬಿಂಬಿಸಿಕೊಳ್ಳುತ್ತ ಬಂದಿದೆ, ಆದರೆ ವಾಸ್ತವದಲ್ಲಿ ಅದು ಕಟ್ಟಿಕೊಡುವ ಸಾಂಸ್ಕೃತಿಕ ಅನನ್ಯತೆಗಳು ಅದು ತನಗೆ ಯಾವುದು ಸೂಕ್ತ ಎನಿಸುತ್ತದೋ ಹಾಗೆ ಆರಿಸಿ ತೆಗೆದ ಅನನ್ಯತೆಗಳು.  ಆಯ್ಕೆ ಹೇಗಿರುತ್ತದೆ? ಕೆಲವೊಂದಷ್ಟನ್ನು ಆರಿಸಿ ಇನ್ನುಳಿದವನ್ನು ಬಿಡುತ್ತದೆ. ಕೆಲವು ಸಾಂಸ್ಕೃತಿಕ ಸ್ವರೂಪಗಳನ್ನು ರಾಷ್ಟ್ರ ವಿರೋಧಿ ಎಂದು ಕರೆಯುವ ಮಟ್ಟಿಗೆ ಹೋಗದಿದ್ದರೂ ಅವು  ರಾಷ್ಟ್ರವೆಂಬ ಒಂದು ಅವಿಚ್ಛಿನ್ನ ಸ್ವರೂಪಕ್ಕೆ ಯಾವ ರೀತಿಯಿಂದಲೂ ಕೊಡುಗೆ ಇತ್ತಿಲ್ಲವಾದ್ದರಿಂದ ಅವು ಚೌಕಟ್ಟಿನಿಂದ ಹೊರಗೆ. ಹತ್ತೊಂಬತ್ತನೆ ಶತಮಾನದ ಹೊತ್ತಿಗೆ ಭಾರತಕ್ಕೊಂದು ಅದರದ್ದೇ ಆದ ಮಹಾಕಾವ್ಯ ಇರಬೇಕು  ಮತ್ತು ಅದು ಯಾವುದಾಗಬೇಕು ಎಂಬುದರ ಮೇಲೆ ಭಯಂಕರ ಚರ್ಚೆ ನಡೆಯಿತು. ರಾಷ್ಟ್ರೀಯವಾದ ಒಂದು ರಾಷ್ಟ್ರೀಯ ಮಹಾಕಾವ್ಯವಿಲ್ಲದೆ ಅಪೂರ್ಣ. ನಮಗೆ ನಮ್ಮದೇ ಆದ ರಾಷ್ಟ್ರೀಯ ಮಹಾಕಾವ್ಯ ಇರಲಿಲ್ಲ. ಸರಿ, ಇಂಡಾಲಜಿಯ ವಿದ್ವಾಂಸರೆಲ್ಲ ಸೇರಿ ರಾಮಾಯಣ ನಮ್ಮ ರಾಷ್ಟ್ರೀಯ ಮಹಾಕಾವ್ಯ ಎಂದು ಘೋಷಿಸಿಬಿಟ್ಟರು. ಹಾಗೆ ಹೊರಬಿದ್ದ ರಾಮಾಯಣದ ಸಂಪುಟಗಳನ್ನು ನೋಡಿ, ನಾನು ಕೆಲವು ಇಂಡಾಲಜಿ ವಿದ್ವಾಂಸರು ಹೊರತಂದ ರಾಮಾಯಣದ ಸಂಪುಟಗಳನ್ನ ನೋಡಿದ್ದೇನೆ, ಮುಖಪುಟದ ಮೇಲೆ ’ಭಾರತದ ರಾಷ್ಟ್ರೀಯ ಮಹಾಕಾವ್ಯ’ ಎಂದು ಮುದ್ರಿಸಲಾಗಿದೆ. ಅದೂ ಅವರು ಬಳಸಿಕೊಂಡಿದ್ದು ವಾಲ್ಮೀಕಿ ರಾಮಾಯಣ. ಆದರೆ ಈಗ ತಿಳಿದು ಬಂದಂತೆ ಸುಮಾರು ಎರಡು ಸಾವಿರ ನಮೂನೆಯ ರಾಮಾಯಣಗಳು ನಮ್ಮಲ್ಲಿವೆ. ಕೆಲವು ರಾಮಾಯಣಗಳಲ್ಲಿ ಸೀತೆ ರಾಮನ ಜೊತೆ ಹೋಗೋದಿಲ್ಲ ಅಂತಾಳೆ.

ಎ.ಕೆ. ರಾಮಾನುಜನ್ ಒಂದು ಸ್ವಾರಸ್ಯಕರ ಪ್ರಸಂಗವನ್ನು ಉದಾಹರಿಸುತ್ತಾರೆ. ಯಾವುದೋ ಒಂದು ರಾಮಾಯಣದಲ್ಲಿ ರಾಮ ಸೀತೆಯನ್ನು ಮರಳಿ ಸ್ವೀಕರಿಸಲು ಒಪ್ಪದಿದ್ದಾಗ  ಸೀತೆ ರಾಮನಿಗೆ ಹೇಳ್ತಾಳೆ, “ನೋಡು ರಾಮ, ನೀನು ಹೀಗೆ ಮಾಡಲು ಆಗುವುದಿಲ್ಲ. ನಾನು ಕೇಳಿದ ರಾಮಾಯಣಗಳಲ್ಲೆಲ್ಲ ಸೀತೆ ಗಂಡನ ಜತೆ ಮರಳಿ ಹೋಗುತ್ತಾಳೆ.  ನೀನು ಆ ಅವಕಾಶವನ್ನು ನನಗೆ ಕೊಡದೇ ಇರಲಿಕ್ಕೆ ಆಗೋದಿಲ್ಲ.” ಆಗ ರಾಮ ಹೇಳ್ತಾನೆ, ಹೌದು. ನೀ ಹೇಳೋದರಲ್ಲಿ ಹುರುಳಿದೆ. ಬಾ ನನ್ನ ಜೊತೆ ಅಂತಾನೆ. ಈ ರೀತಿಯ ಸ್ವ-ಮನನದ ಗುಣ (self-reflexive)  ಭಾರತೀಯ ಸಂಸ್ಕೃತಿಯಲ್ಲಿ ಯಾವಾಗಲೂ ಇರುವಂಥದು.

ಕೆಲವು ಮೌಖಿಕ ಪರಂಪರೆಯ ರಾಮಾಯಣಗಳನ್ನು ಅಧ್ಯಯನ ಮಾಡಿದರೆ ಅಲ್ಲಿ ರಾಮ, ರಾವಣ ಮತ್ತು ಸೀತೆಯರ ಚಿತ್ರಣವನ್ನು ನೋಡಿದರೆ ನಾಚಿಕೆಗೇಡು ಎನ್ನುವ ರೀತಿಯಲ್ಲಿದೆ. ಇಂತಹ ಅನೇಕ ರಾಮಾಯಣದ ಕಥನಗಳು ಲುಪ್ತವಾಗಿವೆ. ಒಂದು ನಿರ್ದಿಷ್ಟ ಕಥನವನ್ನು ಮಾತ್ರ ಎತ್ತಿಕೊಂಡು ಇದು ನಮ್ಮ ರಾಷ್ಟ್ರೀಯ ಮಹಾಕಾವ್ಯ ಎನ್ನಲಾಯಿತು. ನಾನು ಆಗ ಹೇಳಿದ ಹಾಗೆ  ರಾಷ್ಟ್ರೀಯವಾದವು ಅದರ ವಕ್ತಾರರು ಪ್ರಜ್ಞಾಪೂರ್ವಕವಾಗಿ ನಡೆಸುವ ಆಯ್ಕೆಯ ಒಂದು ಪ್ರಕ್ರಿಯೆ. ರಾಷ್ಟ್ರೀಯವಾದದ ಸಂಕಥನವನ್ನು ಕಟ್ಟಬೇಕೆಂದರೆ ನೀವು ಕೆಲವೇ ಕೆಲವು ಸಂಗತಿಗಳನ್ನು ಆರಿಸಿಕೊಂಡು ಇನ್ನುಳಿದವನ್ನು ಕಿತ್ತೊಗೆಯಬೇಕು. ಬೇರೇ ಪರ್ಯಾಯವೇ ಇಲ್ಲ.

ಪ್ರಶ್ನೆ: ಗುಡ್ಡಗಾಡು ಜನಗಳ ಆಶೋತ್ತರಗಳ ಬಗ್ಗೆ ಬರೆಯುತ್ತಿರುವ ಮಹಾಶ್ವೇತಾದೇವಿಯವರ ಕಾದಂಬರಿಗಳನ್ನು ಭಾಷಾಂತರದಲ್ಲಿ ಅಧ್ಯಯನ ಮಾಡಿದ್ದರೆ ಅವರ ಕಾದಂಬರಿಗಳಲ್ಲಿ ಗುಡ್ಡಗಾಡು ಜನರ ಯಾವ ಸಮಸ್ಯೆಗಳು ದೃಷ್ಟಿಕೇಂದ್ರ ಆಗಿವೆ?

ಡಿ. ಆರ್ : ನಾನು ಮಹಾಶ್ವೇತಾದೇವಿಯವರ ಅನುವಾದಿತ ಕೃತಿಗಳನ್ನು ಓದಿದ್ದೇನೆ. ನನಗೆ ಅನಿಸೋದು ಏನೆಂದರೆ, ಇನ್ನೊಬ್ಬರ ಅನುಭವವನ್ನು ಚಿತ್ರಿಸುವ, ನಿರೂಪಿಸುವ, ಪ್ರತಿನಿಧಿಸುವ ವಿಚಾರವೇ ಸ್ವಲ್ಪ ಸಮಸ್ಯಾತ್ಮಕವಾದದ್ದು. ನಾನು ಈ ಕುರಿತು ಅಷ್ಟು ಗಂಭೀರವಾದ ಅಧ್ಯಯನ ನಡೆಸಿಲ್ಲ. ಫ್ರೆಂಚ್ ತತ್ವಶಾಸ್ತ್ರಜ್ಞ ಫುಕೋ ಹೇಳುವ ಹಾಗೆ ವಾಸ್ತವದಲ್ಲಿರುವ ಚಿತ್ರಣವನ್ನು ಮೇಲಿನ ವಿಧಾನವು ಕೀಳಾಗಿಸುತ್ತದೆ. ”ಅನ್ಯ’ ವನ್ನು ಚಿತ್ರಿಸಲು ತೊಡಗಿದೊಡನೆಯೇ ಅಲ್ಲೊಂಚೂರು ಸಂಬಂಧಪಡದ ಅಂಶ, ಅತಿಯಾಗಿ ಭಾವಿಸಿಕೊಂಡ ಸ್ವಪ್ರತಿಷ್ಠೆ ನುಸುಳಿರುತ್ತದೆ. ತನ್ನ ಔದಾರ್ಯವನ್ನು ತಾನೇ ಮೆಚ್ಚಿಕೊಳ್ಳುವ ಆತ್ಮಶ್ಲಾಘನೆಯ ಅಂಶ ನುಸುಳಿರುತ್ತದೆ. ದುರದೃಷ್ಟವಶಾತ್ ನಾನಿನ್ನೂ ಈ ದಿಶೆಯಲ್ಲಿ ಹೆಚ್ಚಿನ ಅಧ್ಯಯನ ಮಾಡಿಲ್ಲ. ಇತ್ತೀಚೆಗೆ ಸಾಹಿತ್ಯದಲ್ಲಿನ ನಿರೂಪಣೆಯ ರಾಜಕಾರಣದ ಬಗೆಗೆ ನಾನು ಆಸಕ್ತನಾಗುತ್ತಿದ್ದೇನೆ. ಒಂದು ಕಲಾ ಪ್ರಕಾರವಾಗಿ ಸಮುದಾಯವೊಂದರ ಚಿತ್ರಣವೊಂದು ಎಷ್ಟರ ಮಟ್ಟಿಗೆ  ನ್ಯಾಯ ಒದಗಿಸುತ್ತದೆ ಅಂತ ಹೇಗೆ ನಿರ್ಧರಿಸುವುದು? ಈ ದೃಷ್ಟಿಯಲ್ಲಿ ಯೋಚಿಸಿದಾಗ ನನಗೆ ಶಿವರಾಮ ಕಾರಂತರ ಕುಡಿಯರ ಕೂಸು ಅಷ್ಟಾಗಿ ತೃಪ್ತಿ ನೀಡಲಿಲ್ಲ. ಕಾರಂತರು ತನ್ನದಲ್ಲದ ಸಮುದಾಯವೊಂದನ್ನು ಪ್ರತಿನಿಧಿಸಲು ಹೊರಡುತ್ತಾರೆ. ರಾಜಕೀಯದ ನಿಟ್ಟಿನಿಂದ ಮತ್ತು ಕಲಾತ್ಮಕತೆಯ ನಿಟ್ಟಿನಿಂದ –ಎರಡೂ ನಿಟ್ಟಿನಿಂದಲೂ ಅಲ್ಲಿ ಸಮಸ್ಯೆಗಳಿವೆ. ಆದರೆ ನನಗೆ ಒಪ್ಪಿಗೆಯಾಗದ ಅಂಶಗಳ ಮೇಲೆ ಇದೇ ಅದು ಅಂತ ನಾನು ಬೊಟ್ಟಿಟ್ಟು ವಿಶ್ಲೇಷಿಸಲಾರೆ. ಅದಕ್ಕೆ ಇನ್ನೂ ಹೆಚ್ಚಿನ ಸೈದ್ಧಾಂತಿಕ ಅರಿವು ಬೇಕು, ಅಧ್ಯಯನ ಬೇಕು. ಹಾಗಾಗಿ ಇದನ್ನು ಇಲ್ಲಿಗೇ ನಿಲ್ಲಿಸುತ್ತೇನೆ.

ಪ್ರಶ್ನೆ: ಧ್ವನಿ ಮುದ್ರಿಕೆಯಲ್ಲಿ ಸ್ಪಷ್ಟವಾಗಿಲ್ಲ.

ಡಿ. ಆರ್:  ಇತ್ತೀಚೆಗೆ ಪತ್ರಿಕೆಗಳಲ್ಲಿ ಚಿದಾನಂದಮೂರ್ತಿಯವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂಬ ಸುದ್ದಿ ಬಂದಿತ್ತು. ಚಿದಾನಂದ ಮೂರ್ತಿಯವರು ಅದನ್ನು `ಆತ್ಮಬಲಿ` ಎಂದು ತಿದ್ದಿದರು. ಅದು ಆತ್ಮಹತ್ಯೆಯ ಯತ್ನವಲ್ಲ ಆತ್ಮಬಲಿಯ ಯತ್ನ ಎಂದು ಅವರು ಸ್ಪಷ್ಟವಾಗಿ ಹೇಳಿದರು. ಅದು ಕನ್ನಡಪರ ಹೋರಾಟಕ್ಕಾಗಿ ಬಲಿದಾನ ಮಾಡಲು ಹೊರಟದ್ದು, ಆತ್ಮಹತ್ಯೆಯ ಯತ್ನವಲ್ಲ ಎಂಬ ಸ್ಪಷ್ಟೀಕರಣ ಬಂತು. ಹಾಗಾಗಿ, ನಾನು ಪ್ರತಿಪಾದಿಸಲು ಹೊರಟಿದ್ದೇನೆಂದರೆ, ರಾಷ್ಟ್ರವೆಂಬ ಪೀಠದ ಮೇಲೆ ರಾಷ್ಟ್ರೀಯತೆ ಎಂಬ ಧ್ಯೇಯವನ್ನು ಪ್ರತಿಷ್ಠಾಪಿಸಿದ ಕೂಡಲೇ ಹಿಂಸೆಯು ಅದರ ಒಂದು ಅನಿವಾರ್ಯ ಅಂಗವಾಗಿಬಿಡುತ್ತದೆ. ರಕ್ತಪಾತ ಅನಿವಾರ್ಯವಾಗುತ್ತದೆ. ಅದರಿಂದ ಹೊರಬರುವುದು ಕಷ್ಟವಾಗುತ್ತದೆ. ಗಾಂಧಿಯವರು ಮಾತ್ರ ಎಂದೂ ಇಂತಹ ರಾಷ್ಟ್ರೀಯವಾದದ ಹರಿಕಾರರಾಗಿರಲಿಲ್ಲ. ಆದರೆ ಭಾರತವು ಸಾಂಸ್ಕೃತಿಕವಾಗಿ (ಸಿವಿಲಿಜೇಶನ್ ಆಗಿ) ಒಗ್ಗೂಡಬೇಕೆಂದು ಅವರು ಬಯಸಿದ್ದಂತೂ ನಿಜ. ಅಥವಾ ದಕ್ಷಿಣ ಏಶಿಯಾದ ಒಂದು ಅಖಂಡ ಸಾಂಸ್ಕೃತಿಕ ವಲಯ (ಸಿವಿಲಿಜೇಶನ್). ತಾವು ಪಾಕಿಸ್ತಾನದಲ್ಲಿ ನೆಲೆಸುವ ಆಶಯವನ್ನು ಅವರು ವ್ಯಕ್ತಪಡಿಸಿದ್ದೂ ಇದೇ ಕಾರಣಕ್ಕೆ. ಕೆಲವು ವಿದ್ವಾಂಸರು ವಾದಿಸುವ ಹಾಗೆ, ಗಾಂಧಿಯವರಿಗೆ ತಾವು ಪಾಕಿಸ್ತಾನದಲ್ಲಿ ನೆಲೆಸುವ ಅವಕಾಶವಿದ್ದರೆ ಅಲ್ಲಿ ತಮ್ಮ ಕಾಯಕವನ್ನು ಮುಂದುವರಿಸಬೇಕೆಂದು ಮಾಡಿದ್ದರಂತೆ. ಯಾಕೆಂದರೆ, ಅವರಿಗೆ ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳ ನಡುವಿನ ಗಡಿರೇಖೆಗಳಲ್ಲಿ ನಂಬಿಕೆಯಿರಲಿಲ್ಲ. ಅವರಿಗೆ ಅವೆರಡೂ ಸಾಂಸ್ಕೃತಿಕವಾಗಿ ಒಂದೇ ಎಂಬ ಭಾವನೆ. ಆದರೆ ದೇಶವಿಭಜನೆಯ ಸಂದರ್ಭದಲ್ಲಿ ಕೆಲವು ರಾಜಕೀಯ ಹಿತಾಸಕ್ತಿಗಳು ಅದನ್ನು ಬಯಸಿದ್ದರಿಂದ ಗಾಂಧಿಯವರಿಗೆ ವಿಭಜನೆಯನ್ನು ಮಾನ್ಯ ಮಾಡುವ ಅನಿವಾರ್ಯತೆ ಉಂಟಾಯಿತು. ಪಾಕಿಸ್ತಾನದ ಜನಕ್ಕೆ ಅದೇ ಬೇಕಾಗಿದ್ದರೆ ಅದನ್ನು ಯಾರೂ ತಡೆಯಲು ಶಕ್ಯವಿಲ್ಲ. ಆಗ ಅದೂ ಒಂದು ಮೂಲಭೂತವಾದಿಗಳ ನಿಲುವೇ ಆಗುವ ಅಪಾಯವಿದೆ. ಈಗ, ನೋಡಿ ನಮಗೆ ಪಾಕಿಸ್ತಾನ ಬೇಡ ಎಂದು ವಾದಿಸಲಾಗದು. ಭಾರತವು ಅಖಂಡ. ಪಾಕಿಸ್ತಾನವನ್ನು ಕುರಿತಂತೆ ಗಾಂಧಿಯವರ ನಿಲುವಿಗೂ ಮತ್ತು ಹಿಂದೂ ಮೂಲಭೂತವಾದಿಗಳ ನಿಲುವಿಗೂ ವ್ಯತ್ಯಾಸವಿದೆ.

ಪ್ರಶ್ನೆ: ನಾನು ಒಬ್ಬ ವೈದ್ಯ. ಸಾಹಿತ್ಯ ನನ್ನ ಕ್ಷೇತ್ರವಲ್ಲ. ನೀವೆಲ್ಲ ಕಾರಂತರನ್ನು, ಕುವೆಂಪು ಅವರನ್ನು ಮೆಚ್ಚಿಕೊಳ್ಳುತ್ತೀರಿ. ಎಂದಾದರೂ ಬಸವರಾಜ ಕಟ್ಟೀಮನಿಯವರ ಬಗೆಗೆ ಯೋಚಿಸಿದ್ದೀರಾ?

ಡಿ. ಆರ್:  ನೀವು ಈ ಪ್ರಶ್ನೆಯನ್ನೆತ್ತಿದ್ದು ಒಳ್ಳೆಯದಾಯಿತು. ಒಂದು ಕಾಲಕ್ಕೆ ನಾನು ಅವರ `ಮಾಡಿ ಮಡಿದವರು` ಕಾದಂಬರಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದೆ. ಕಾದಂಬರಿಯು ಕ್ವಿಟ್ ಇಂಡಿಯಾ ಚಳುವಳಿಯ ನಾಯಕ ನಾಯಕಿಯರನ್ನು ಎತ್ತಿ ಮೆರೆಸುತ್ತದೆ. ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ ಆಸುಪಾಸಿನಲ್ಲಿ ಘಟನೆಗಳೆಲ್ಲ ನಡೆಯುತ್ತವೆ. ಮನಸೆಳೆಯುವ ಕಾದಂಬರಿ. ಮುಖ್ಯವಾಗಿ ಆಗಷ್ಟೇ ಹರೆಯ ಮೆಟ್ಟಿದ ತರುಣ-ತರುಣಿಯರಿಗೆ ಮತ್ತು ರಾಷ್ಟ್ರ ಪ್ರೇಮದ ಉತ್ತುಂಗವನ್ನೇರಿದವರಿಗೆ ಅದು ಬಹುವಾಗಿ ಸೇರುತ್ತದೆ. ಆದರೆ, ಈಗ, 97ರಲ್ಲಿ, ಕಟ್ಟಿಮನಿಯವರ ಬಗೆಗೆ ನನ್ನನ್ನು ನೀವು ಪ್ರಶ್ನಿಸಿದರೆ ಅಥವಾ ಕಾರಂತರು ಮತ್ತು ಕುವೆಂಪು ಅವರಿಗೆ ಹೋಲಿಸಿದರೆ ಕಟ್ಟೀಮನಿಯವರು ರಾಷ್ಟ್ರೀಯತೆಯ ಪ್ರಜ್ಞೆಯನ್ನು ಹೇಗೆ ಅರ್ಥ ಮಾಡಿಕೊಂಡಿದ್ದರು ಎಂದು ನನ್ನನ್ನು ಕೇಳಿದರೆ ಕುವೆಂಪು ಮತ್ತು ಕಾರಂತರು ಕಟ್ಟಿಮನಿಯವರಿಗಿಂತಲೂ ಚೆನ್ನಾಗಿ ರಾಷ್ಟ್ರೀಯವಾದಿ ಚಳುವಳಿಯನ್ನು ಅರ್ಥ ಮಾಡಿಕೊಂಡಿದ್ದರು ಎಂದು ನಾನು ಹೇಳುತ್ತೇನೆ. ಕುವೆಂಪು ಮತ್ತು ಕಾರಂತರಿಗೆ ಕಟ್ಟಿಮನಿಯವರಿಗಿಂತಲೂ ಎಷ್ಟೆಷ್ಟೋ ಚೆನ್ನಾಗಿ ರಾಷ್ಟ್ರೀಯವಾದಿ ಪ್ರಜ್ಞೆಯ ನಾಡಿಮಿಡಿತಗಳು ಅರ್ಥವಾಗಿವೆ ಎಂದೇ ಹೇಳಬಹುದು. ಕಟ್ಟೀಮನಿಯವದ್ದು ಅಷ್ಟೇ ಜಗತ್ತಿಗೆ ಕಣ್ತೆರೆದ ಬಾಲಕನ ಅಮಾಯಕ ಗ್ರಹಿಕೆಯಂತೆ ಅನಿಸುತ್ತದೆ. ಕಾರಂತರು ಬರೆಯಲು ಆರಂಭಿಸಿದ್ದು 1948 ರ ಸುಮಾರಿಗೆ. ಆ ಹೊತ್ತಿಗೆ ಅವರ ಪಾಲಿಗೆ ಹಬ್ಬದ ಸಡಗರ ಕೊನೆಗೊಂಡಿತ್ತು. ಹಾಗಾಗಿ ಅವರು ರಾಷ್ಟ್ರೀಯವಾದದ ಮತ್ತೊಂದು ಮಗ್ಗಲಿನ ಶೋಧನೆಗೆ ತೊಡಗಿದರು. ಕೆಡುಕಿನ ಆಗಮನವನ್ನು ಅವರಾಗಲೇ ಗ್ರಹಿಸಿದ್ದರು. ಒಬ್ಬ ಬರಹಗಾರನನ್ನು ಈ ನೆಲೆಯಲ್ಲಿ ಅಳೆಯಬೇಕು.

ಪ್ರಶ್ನೆ :  ಒಂದು ರಾಷ್ಟ್ರ ಆದ ಮೇಲೆ ಈ ರಾಷ್ಟ್ರವನ್ನು ಉಳಿಸಿಕೊಳ್ಳುವ ಕಾರಣಕ್ಕೆ, ಕಾಶ್ಮೀರವನ್ನು ಉಳಿಸಿಕೊಳ್ಳಬೇಕು ಅಂತಲೋ ನಾಗಾಲ್ಯಾಂಡನ್ನು ಉಳಿಸಿಕೊಳ್ಳಬೇಕು ಅಂತಲೋ ಹಿಂಸೆ ನಡಿತಾ ಇದೆ. ಆದರೆ ಪ್ರಾಚೀನ ಭಾರತದಲ್ಲಿ, ಬ್ರಿಟೀಶರು ಬರುವದಕ್ಕಿಂತ ಮೊದಲಿನ ಭಾರತದಲ್ಲಿ ನಮ್ಮ ರಾಜ ಮಹಾರಾಜರುಗಳ ನಡುವೆ ನಡೆಯುತ್ತಿದ್ದ ಹಿಂಸೆಯು ಈಗ ರಾಷ್ಟ್ರವನ್ನು ಉಳಿಸಿಕೊಳ್ಳಲಿಕ್ಕಾಗಿ ನಡೆಯುತ್ತಿರುವ ಹಿಂಸೆಗಿಂತ ಹೇಗೆ ಭಿನ್ನ? ಆಗಿನ ಹಿಂಸೆ ಈಗಿನದಕ್ಕಿಂತ ಹೆಚ್ಚಿನದು ಅನಿಸುವುದಿಲ್ಲವೆ? ಯಾಕೆಂದರೆ ಸ್ತ್ರೀ ಶೋಕ ಪರ್ವವು ಮಹಾಭಾರತದ ಒಂದು ಅಧ್ಯಾಯ ಮಾತ್ರವಲ್ಲ ಈ ದೇಶದ ಹಳ್ಳಿ ಹಳ್ಳಿಗಳ ಕತೆ ಅದು. ನಮ್ಮ ಮಾಸ್ತಿಕಲ್ಲುಗಳು ವೀರಗಲ್ಲುಗಳು ಹೇಳುವ ಕತೆ ಅದೇ. ರಾಜರ ನಡುವೆ, ಮಾಂಡಳಿಕರ ನಡುವೆ ನಡೆದ ಯುದ್ಧದ ಕತೆಗಳು. ಕಾರಂತರು ತಮ್ಮ ಅನೇಕ ಭಾಷಣಗಳಲ್ಲಿ ಹಳೆಯ ರಾಜರುಗಳ ಚಲನೆಯನ್ನು ಭೂಪಟದಲ್ಲಿ ಮಾರ್ಕ್ ಮಾಡಿ ಈ ಪ್ರದೇಶಗಳಲ್ಲಿ ಎಷ್ಟು ಹಿಂಸೆ ಆಗಿರಬೇಕು ಯೋಚನೆ ಮಾಡಿ ಎನ್ನುತ್ತಿದ್ದದ್ದನ್ನು ಕೇಳಿದ್ದೇನೆ.

ಡಿ. ಆರ್:  ಎರಡನೆಯದಕ್ಕೆ ನನ್ನ ಉತ್ತರ ಸ್ವಲ್ಪ ವಿವಾದಾತ್ಮಕ ಅನಿಸಬಹುದು. ಕರ್ನಾಟಕದ ಬೃಹತ್ ಅರಸು ಮನೆತನಗಳನ್ನು ತೆಗೆದುಕೊಂಡರೆ ಅವೆಲ್ಲ ಶುದ್ಧ ಎನ್ನಬಹುದಾದ ಅರಸು ಮನೆತನಗಳಲ್ಲ. ಅವೆಲ್ಲ ಶುದ್ಧ ಕನ್ನಡದ, ಶುದ್ಧ ತೆಲುಗಿನ ಅಥವಾ ಶುದ್ಧ ತಮಿಳಿನ ಅರಸು ಮನೆತನಗಳು ಎನ್ನುವುದು ಕಷ್ಟ. ರಾಷ್ಟ್ರಕೂಟರನ್ನೆ ತೆಗೆದುಕೊಳ್ಳಿ. ಅವರು ಬರಿಯ ಕರ್ನಾಟಕದಲ್ಲಿ ಮಾತ್ರವಲ್ಲ ಅದರಾಚೆಗೂ ಇದ್ದರು. ಕಲಚೂರಿ ಅರಸರನ್ನೇ ನೋಡಿ ಬೇಕಾದರೆ. ಏನಂದರೆ, ನಮ್ಮ ಅರಸುಮನೆತನಗಳ ಮಧ್ಯಯುಗದ ಇತಿಹಾಸವನ್ನು ಅವಲೋಕಿಸಿದರೆ ಎಲ್ಲಾ ಪ್ರಮುಖ ಅರಸು ಮನೆತನಗಳು, ಕೆಲವೊಮ್ಮೆ ಸಣ್ಣ ಪುಟ್ಟ ಅರಸು ಮನೆತನಗಳೂ ಬಂತು, ಅವೆಲ್ಲ ಯಾವಾಗಲೂ ಬಹುಭಾಷಿಕ ಅರಸು ಮನೆತನಗಳಾಗಿದ್ದವು. ನಾಯಕರನ್ನೇ ತೆಗೆದುಕೊಳ್ಳಿ, ಅವರಿಗೆ ತೆಲುಗು ಬರ್ತಿತ್ತು, ಕನ್ನಡವೂ ಬರ್ತಿತ್ತು, ತಮಿಳೂ ಬರ್ತಿತ್ತು. ಕೆಲವೊಮ್ಮೆ ಬಹುಧರ್ಮೀಯರೂ ಆಗಿದ್ದರು. ಕೃಷ್ಣದೇವರಾಯ ಯಾರು? ಕನ್ನಡದ ರಾಜನೇ, ತೆಲುಗಿನ ರಾಜನೇ ಅಥವಾ ತುಳವನೆ? ಹೇಳುವುದು ಕಷ್ಟ. ಅಥವಾ ಅವನು ಈ ಎಲ್ಲ ಅಸ್ಮಿತೆಗಳನ್ನೂ ಒಳಗೊಂಡ ರಾಜನಾಗಿದ್ದ. ಹೀಗಾಗಿ ನಿಮ್ಮ ಎರಡನೆಯ ಪ್ರಶ್ನೆಗೆ ನಾನು ಹೀಗೆ ಉತ್ತರಿಸುತ್ತೇನೆ: ಆಧುನಿಕ ಪೂರ್ವ ಯುಗದಲ್ಲಿ ಕಂಡು ಬಂದ ಹಿಂಸೆಯ ಸ್ವರೂಪವು ಇವತ್ತಿನ ರಾಷ್ಟ್ರ ಪ್ರಭುತ್ವಗಳ ನಡುವಿನ ಹಿಂಸೆಯ ಸ್ವರೂಪಕ್ಕಿಂತ ಪರಿಮಾಣಾತ್ಮಕವಾಗಿ ಮತ್ತು ಗುಣಾತ್ಮಕವಾಗಿ ಭಿನ್ನವಾಗಿತ್ತು. ಹಿಂದಿನವು ಭಿನ್ನ ಸ್ವರೂಪದ ಯುದ್ಧಗಳಾಗಿದ್ದವು. ಅದರರ್ಥ ಆ ಕಾಲದ ಹಿಂಸೆ ಸರಿ ಅಂತಲ್ಲ. ಯಾವ ಸ್ವರೂಪದ ಹಿಂಸೆಯೂ, ಯುದ್ಧವೂ ಸಮರ್ಥನೀಯವಲ್ಲ. ಆದರೆ ಪರಿಕಲ್ಪನಾತ್ಮಕವಾಗಿ ಅವೆರಡೂ ಬೇರೆ ಬೇರೆ.
ಪ್ರಶ್ನೆ: ರಾಷ್ಟ್ರೀಯವಾದ ಎನ್ನುವುದು ಇಲ್ಲದೇ ಇದ್ದರೆ ಏನಿರುತ್ತಿತ್ತು? ರಾಷ್ಟ್ರೀಯವಾದಕ್ಕೆ ಪರ್ಯಾಯವೇನು? ಇತಿಹಾಸ ಬಲ್ಲವರಿಗೆ ಗೊತ್ತು, ಏನೆಂದರೆ ಆ ಒಂದು ಸಂಘರ್ಷದ ಕಾಲಕ್ಕೆ ಇಡೀ ಭಾರತವು ಒಂದಾಗಿತ್ತು. ರಾಷ್ಟ್ರೀಯವಾದವೇ ಇಡೀ ಭಾರತವನ್ನು ಒಗ್ಗೂಡಿಸಿತ್ತು. ಈಗ ಅದೇ ರಾಷ್ಟ್ರೀಯವಾದವು ಭಾಷೆಗಳು, ಪ್ರಾಂತ್ಯಗಳು ಹೀಗೆ ಹಲವು ಕವಲುಗಳಲ್ಲಿ ಒಡೆದು ದುರ್ಬಲವಾಗಿದೆ. ಅದಕ್ಕೆ ರಾಷ್ಟ್ರವನ್ನು ದೂಷಿಸುವುದು ತರವೆ? ಅದಕ್ಕೆ ಯಾರು ಹೊಣೆ?

ಡಿ. ಆರ್:  ರಾಷ್ಟ್ರೀಯವಾದ ಇಲ್ಲದೆ ಇದ್ದರೆ ಇನ್ನೇನಾಗುತ್ತಿತ್ತು ಎಂಬ ಪ್ರಶ್ನೆ ಕುತೂಹಲಕರವಾಗಿಯೇ ಇದೆ…ಉತ್ತರ ನನಗೆ ಗೊತ್ತಿಲ್ಲ. ನಿಜವಾಗಿಯೂ ಗೊತ್ತಿಲ್ಲ. ಏನಾಗುತ್ತಿತ್ತು? ಬಹುಶಃ ಅದಕ್ಕೆ ತಕ್ಕ ಪರ್ಯಾಯವನ್ನು ಹುಡುಕಬೇಕಾದೀತೇನೋ. ಅದೇನೇ ಇದ್ದರೂ ರಾಷ್ಟ್ರೀಯವಾದದ ಕಾಲ ಮುಗಿಯುತ್ತಾ ಬಂದಿತು ಎನಿಸುತ್ತದೆ. ಇನ್ನೊಂದು ನಲ್ವತ್ತು-ಐವತ್ತು ವರ್ಷಗಳಾಚೆಗೆ ರಾಷ್ಟ್ರೀಯವಾದ ಎನ್ನುವ ಐಡಿಯಾಲಜಿ ಇರಲಿಕ್ಕಿಲ್ಲ. ಯಾಕೆಂದರೆ ಅಷ್ಟು ಅತಿಯಾಗಿ ಅದು ಬೆಳೆದಿದೆ. ಅತಿಯಾದದ್ದು ವಿಘಟಿಸಲೇಬೇಕು. ನಾನೇನು ರಾಜಕೀಯದ ಭವಿಷ್ಯ ಹೇಳುತ್ತಿಲ್ಲ. ಇದು ನನ್ನ ಒಂದು ಸಾಮಾನ್ಯ ತಿಳುವಳಿಕೆ. ಈ ರೀತಿಯ ರಾಷ್ಟ್ರೀಯವಾದವು ಬಹು ಕಾಲ ನಿಲ್ಲಲಿಕ್ಕಿಲ್ಲ ಎಂಬ ಸಾಮಾನ್ಯ ತಿಳುವಳಿಕೆ. ಆಗ ಬೇರೆ ಬೇರೆ ರೂಪದ ಸಾಮಾಜಿಕ ಸಂಸ್ಥೆಗಳು ಹುಟ್ಟಿಕೊಳ್ಳುತ್ತವೆ. ಇದು ನನ್ನ ಅಂದಾಜು. ನನ್ನ ಮಿತ್ರರು ರಾಷ್ಟ್ರೀಯವಾದವು ಕವಲೊಡೆದು ದುರ್ಬಲಗೊಂಡಿದೆ ಎಂಬ ಮಾತನ್ನು ಹೇಳಿದರು. ಇಲ್ಲಿ ನಾನು ಸ್ವಲ್ಪ ಸಿನಿಕನಾದೆ ಎನಿಸಿದರೂ ಅಡ್ಡಿಲ್ಲ, ರಾಷ್ಟ್ರೀಯವಾದವು ಕವಲುಗಳಲ್ಲಿ ಒಡೆದು ಹರಿದು ಹಂಚಿಹೋದರೆ ನನಗೆ ಸಂತೋಷವೇ ಆಗುತ್ತದೆ. ಅದರರ್ಥ ಎಲ್ಲೋ ನಮ್ಮಲ್ಲಿ ಇನ್ನೂ ಅಲ್ಪಸ್ವಲ್ಪ ಮಾನವೀಯತೆ ಉಳಿದುಕೊಂಡಿದೆ; ಶಾಂತಿಗಾಗಿ ತಪನೆ ಉಳಿದುಕೊಂಡಿದೆ. ಬದುಕು ತೀರಾ ದುರ್ಭರವಾಗಿಲ್ಲ ಎಂಬುದು ಅದರಿಂದ ಗೋಚರವಾಗುತ್ತದೆ. ಸೈದ್ಧಾಂತಿಕವಾಗಿ ಕೂಡ ನಾವು ದೈನಂದಿನ ಶಾಂತಿಯುತ ಬದುಕಿನ ಬಗೆಗೆ ಹೆಚ್ಚು ಗಮನ ಕೊಡುತ್ತಿಲ್ಲ. ಮಾಧ್ಯಮಗಳಲ್ಲಿ ನಾನು ಗಮನಿಸಿದಂತೆ ಹಿಂಸೆಯ ಕುರಿತಾದ ಕಥನಗಳನ್ನು ಓದಿದರೆ, ಅವುಗಳಲ್ಲಿ ಬಹುತೇಕವಾಗಿ ಕಾಣಿಸಿಕೊಳ್ಳುವ ವಾಕ್ಯವೆಂದರೆ ಇದು: ಗಲಭೆಗೊಳಗಾದ ನಗರವು ಇಂದು ಶಾಂತವಾಗಿತ್ತು. ಜನರು ನಿತ್ಯದ ಬದುಕಿಗೆ ಮರಳುತ್ತಿದ್ದಾರೆ. ಬಹುತೇಕ ಎಲ್ಲೆಡೆ ಮಹಿಳೆಯರು ಹಾಲು ಮತ್ತು ತರಕಾರಿಗಳನ್ನು ಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಅಂದರೆ ಮಹಿಳೆಯರು ಯಾವಾಗ ದೈನಂದಿನ ಅವಶ್ಯಕತೆಗಳಾದ ಹಾಲು ಮತ್ತು ತರಕಾರಿಗಳನ್ನು ಕೊಳ್ಳಲೆಂದು ಮನೆಯಿಂದ ಹೊರಬರುತ್ತಾರೋ ಆವಾಗ ನಿತ್ಯದ ಸಾಮಾನ್ಯ ಚಟುವಟಿಕೆಗಳು ಶುರುವಾದವು ಅಂದರ್ಥ. ಅಂದರೆ ಬದುಕು ಎಂದಿನ ಸುಸ್ಥಿತಿಗೆ ಮರಳಿತು ಎಂದರ್ಥ. ಅದು ನಿಜವಾದ ಅರ್ಥದಲ್ಲಿ ಹಿಂಸೆಯ ಮೇಲಿನ ಜಯ. ಸಾಮಾನ್ಯವಾಗಿ ಹಿಂಸೆಯು ಹುಟ್ಟುವದು ವಿರಾಟ್ ಕಥನಗಳ, ವಿರಾಟ್ ಮೌಲ್ಯಗಳ ದೆಸೆಯಿಂದ. ಬದುಕು ಯಾವಾಗ ಎಂದಿನ ಚಟುವಟಿಕೆಗಳಿಗೆ ಮರಳುತ್ತದೆಯೋ ಆಗ ಶಾಂತಿಯ ಮರುಸ್ಥಾಪನೆಯಾಗುತ್ತದೆ. ಆದ್ದರಿಂದ ಒಂದು ಮಹಾ ಕಥನವಾದ ರಾಷ್ಟ್ರೀಯವಾದವು ಕವಲಾಗಿ ಹರಿದು ದುರ್ಬಲವಾದರೆ ನನಗೆ ಕೆಟ್ಟ ಸಂತೋಷವಾಗುತ್ತದೆ. ಅದು ಹಾಗೆಯೇ ಆಗಬೇಕೆಂಬುದು ನನ್ನ ಆಸೆ.

ಪ್ರಶ್ನೆ:  ಡಾ. ನಾಗರಾಜ್, ರಾಷ್ಟ್ರೀಯವಾದವೆಂದರೆ ಒಂದು ಏಕರೂಪದ ಐಡಿಯಾಲಜಿ ಎಂಬಂತೆ ನೀವು ಮಾತಾಡುತ್ತಿದ್ದೀರಿ. ನನ್ನ ಮಾತಿನ ಅರ್ಥವೇನೆಂದರೆ, ರಾಷ್ಟ್ರೀಯವಾದವು ಒಂದೇ ಬಗೆಯದ್ದಾಗಿರಲಿಕ್ಕಿಲ್ಲ. ಅಲ್ಲಿ ಬೇರೆ ಬೇರೆ ಬಗೆಯ ರಾಷ್ಟ್ರೀಯವಾದಗಳು ಇರಬಹುದಲ್ಲವೆ? ಮತ್ತು ರಾಷ್ಟ್ರೀಯವಾದದ ಐಡಿಯಾಲಜಿಯನ್ನು ಕುರಿತು ನೀವು ಹೇಳುವಾಗ ನೀವು ಬರಿಯ ಹಿಂದೂ ರಾಷ್ಟ್ರೀಯವಾದದ ಮೇಲೆ ಕೇಂದ್ರೀಕರಿಸಿದಂತೆ ನನಗೆ ತೋರುತ್ತದೆ. ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಸಂದರ್ಭದಲ್ಲಿ ಕೂಡ ರಾಷ್ಟ್ರೀಯವಾದಕ್ಕೆ ಹಲವು ಆಯಾಮಗಳಿದ್ದವು. ಗಾಂಧಿಯರವರ ವಿಚಾರಕ್ಕೇ ಬಂದರೆ, ಅಲ್ಲೊಂದು ಅಹಿಂಸಾತ್ಮಕ ರಾಷ್ಟ್ರೀಯವಾದಿ ಐಡಿಯಾಲಜಿ ಇದ್ದ ಹಾಗೆ ಅನಿಸುವುದಿಲ್ಲವೆ? ರಾಷ್ಟ್ರೀಯವಾದವು ಯಾವತ್ತೂ ಹಿಂಸೆಯನ್ನು ಆಕರ್ಷಿಸುತ್ತದೆ ಎಂದು ನೀವು ಹೇಳುವುದನ್ನು ನಾನು ಒಪ್ಪಲಾರೆ.

ಡಿ. ಆರ್:  ನನ್ನ ಅಭಿಪ್ರಾಯವನ್ನು ನೀವು ಈಗ ಒಪ್ಪದೇ ಇದ್ದರೂ ಬಹುಶಃ ನಾಳೆ ಒಪ್ಪಿಕೊಳ್ಳಬಹುದು. ಗಾಂಧಿಯವರು ಅಂದು ಸಾಮಾನ್ಯವಾಗಿ ಪ್ರಚಲಿತದಲ್ಲಿದ್ದ ರಾಷ್ಟ್ರೀಯವಾದವನ್ನು ಬೆಂಬಲಿಸಲಿಲ್ಲ. ನೀವದನ್ನು ರಾಷ್ಟ್ರೀಯವಾದ ಎಂದು ಯಾಕೆ ಕರೆಯುತ್ತೀರಿ? ಗಾಂಧಿಯವರಿಗೆ ಒಲವಿದ್ದದ್ದು ಸಾಂಸ್ಕೃತಿಕವಾಗಿ ಒಗ್ಗೂಡಿದ ಜನಸಮುದಾಯಗಳ ಒಂದು ಸಾಮಾಜಿಕ ವ್ಯವಸ್ಥೆಯ ಬಗೆಗೆ. ಒಂದು ಸಾಮಾಜಿಕ ವ್ಯವಸ್ಥೆಯಾಗಿ ರಾಷ್ಟ್ರವು ಒಂದು ನಿರ್ದಿಷ್ಟ ನಿಲುವನ್ನು ಹೊಂದಿರಬೇಕಾಗುತ್ತದೆ. ಸ್ಟಾಲಿನ್ ಅವರು ತಮ್ಮ `ನ್ಯಾಶನಲಿಸಂ` ಎನ್ನುವ ಕೃತಿಯಲ್ಲಿ ಹೇಳುವ ಹಾಗೆ, `ರಾಷ್ಟ್ರೀಯವಾದವು ಹುಟ್ಟಿದ್ದು ಒಂದು ಮಾರುಕಟ್ಟೆಯಲ್ಲಿ.’ ಅವರ ಪ್ರಕಾರ ರಾಷ್ಟ್ರೀಯವಾದಕ್ಕೆ ಬಂಡವಾಳಶಾಹಿ ಐಡಿಯಾಲಜಿಯು ಮೂಲ. ರಾಷ್ಟ್ರವು ಸಮಾಜದಲ್ಲಿ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸುವ ಏಕೈಕ ಮತ್ತು ಅಂತಿಮ ವಿಧಾನ ಎಂದು ನೀವು ಒಪ್ಪಿಕೊಂಡರೆ ಆಗ ಹಿಂಸೆಯು ಅನಿವಾರ್ಯaವಾಗುತ್ತದೆ. ಇದೊಂದು ಬಗೆಯ ತಾತ್ವಿಕ ನಿಲುವು ಮತ್ತು ಅದು ನನ್ನ ಧೃಡವಾದ ನಂಬಿಕೆ ಕೂಡಾ.


ಮೂಲ ಇಂಗ್ಲೀಷ್ ಭಾಷಣ : ಡಿ.ಆರ್ ನಾಗರಾಜ್ | ಕನ್ನಡ ಅನುವಾದ ಮತ್ತು ಬರಹ ರೂಪ : ಪ್ರಜ್ಞಾ ಶಾಸ್ತ್ರಿ

One comment to “ಡಿ. ಆರ್. ನಾಗರಾಜ್ ಉಪನ್ಯಾಸ : ರಾಷ್ಟ್ರೀಯತೆ (#Nationalism)”
  1. Pingback: ಡಿ. ಆರ್. ನಾಗರಾಜ್ ಉಪನ್ಯಾಸ : ಪ್ರಗತಿ ಮತ್ತು ಅಭಿವೃದ್ಧಿ (#Progress & Development) – ಋತುಮಾನ

ಪ್ರತಿಕ್ರಿಯಿಸಿ