ಲಕ್ಷ್ಮೀಶ ತೋಳ್ಪಾಡಿ : ನಮ್ಮ ಕಾಲದ ಧರ್ಮಸಂಕಟಗಳು

ಹಿಂದೂ ಧರ್ಮವೆಂದರೆ-ನಮ್ಮ ದರ್ಶನ ಶಾಸ್ತ್ರಗಳನ್ನು ನೋಡಿದರೆ ತಿಳಿಯುತ್ತದೆ- ಭಿನ್ನಮತೀಯರೊಂದಿಗೆ ನಡೆಸಿದ ನಿರಂತರ ಸಂವಾದವಾಗಿದೆ! ಶಂಕರು ತಮ್ಮ ಬ್ರಹ್ಮ ಸೂತ್ರ ಭಾಷ್ಯಕ್ಕೆ ಬರೆದ ಮುನ್ನುಡಿಯಂತಿರುವ ‘ಅಧ್ಯಾಸಭಾಷ್ಯ’ ವನ್ನೋದಿದರೆ ತಿಳಿಯುತ್ತದೆ-ಅದರ ಪರಿಭಾಷೆಯೆ ಹೊಸತು! ಅಲ್ಲಿ ಉಪನಿಷತ್ತಿದ್ದಾಗಲೀ ಯಾವುದೇ ಆರ್ಷ ಸಾಹಿತ್ಯದ್ದಾಗಲಿ ಒಂದೇ ಒಂದು ಉಲ್ಲೇಖವಿಲ್ಲ. ತೀರ ಬೌದ್ಧಿಕವಾದ ಪರಿಭಾಷೆ, ಇದು ಬೌದ್ಧ ಪ್ರಭಾವವೇ ಸರಿ. ಇದು ಹೆಚ್ಚುಗಾರಿಕೆಯಲ್ಲವೆ? ಬೌದ್ಧಧರ್ಮವನ್ನು ನೆಚ್ಚಿದ ಅಂಬೇಡ್ಕರ್ ಇದನ್ನು ಗಮನಿಸುತ್ತಿದ್ದರೆ ಏನು ಹೇಳುತ್ತಿದ್ದರೋ! ಅದೊಂದು ಕುತೂಹಲದ ವಿಷಯ.  ಭಿನ್ನ ಮತೀಯರೊಂದಿಗೆ ಅಸಹನೆ ಹಿಂದೂ ಧರ್ಮದ ನಿಜವಾದ Spirit ಅಲ್ಲವೇ ಅಲ್ಲ. Spirit ಅನ್ನು ಕೊಂದು ಏನು ಹಿಂದೂಧರ್ಮ? ಬಸವಣ್ಣ ಹೇಳಿದಂತೆ- ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ ಎಂಬಂತಾಗಿದೆ ಇದು.

‘ಹೊಸ ಮನುಷ್ಯ’ ಮಾಸಿಕದ ವಾರ್ಷಿಕ ವಿಶೇಷಾಂಕದಲ್ಲಿ ಲಕ್ಷ್ಮೀಶ ತೋಳ್ಪಾಡಿಯವರು ಬರೆದ ಲೇಖನ ಇದು . ನೀವು ‘ಹೊಸ ಮನುಷ್ಯ’ ಪತ್ರಿಕೆಗೆ ಋತುಮಾನದ ಸ್ಟೋರ್ ನ ಈ ಕೆಳಗಿನ ಕೊಂಡಿಯಲ್ಲಿ ಚಂದಾದಾರರಾಗಬಹುದು. http://store.ruthumana.com/product/hosamanushya-monthly/


ಅಮೆರಿಕೆಯಲ್ಲಿ ವಾಸವಿರುವ ಕನ್ನಡ ಮಿತ್ರರೊಬ್ಬರು ಊರಿಗೆ ಬಂದಿದ್ದಾಗ ದಿನವಿಡೀ ಮಾತಿಗೆ ಸಿಕ್ಕಿದ್ದರು.  ಈ ನಮ್ಮ ದೇಶದಲ್ಲಿ ಸ್ತ್ರೀಯರ ಮೇಲೆ ನಡೆಯುತ್ತಿರುವ ಅನೂಹ್ಯವಾದ ದೌರ್ಜನ್ಯ ನಮ್ಮಿಬ್ಬರನ್ನೂ ಕಂಗೆಡಿಸಿತ್ತು.  ಹಾಲು ಹಸುಳೆಗಳ ಮೇಲೆ ಅತ್ತ್ಯಾಚಾರವೆಂದರೆ ಏನಾಗಿದೆ ಈ ದೇಶಕ್ಕೆ?  ಅಮೆರಿಕೆಯೇ ವಾಸಿಯೇನೋ ಎಂದೆ.  ಅವರು ಕೂಡಲೇ ಹಾಗೆನ್ನದಿರಿ, ನಿಮಗೆ ತಿಳಿದಿಲ್ಲ.  ಅಮೆರಿಕೆ ವೈಜ್ಞಾನಿಕವಾಗಿ ಮುಂದುವರಿದ ದೇಶ; ಮುಕ್ತ ಚಿಂತನೆಯ ದೇಶ ಎಂದೆಲ್ಲ ಭಾವಿಸುತ್ತೇವೆ.  ಒಂದು ಮಟ್ಟಿಗೆ ಅದು ನಿಜವೂ ಹೌದು.  ಆದರೆ ಅತ್ತ್ಯಾಚಾರ ಪ್ರಕರಣಗಳು ಅಲ್ಲೂ ನಡೆಯುತ್ತವೆ.  ವಿಚಿತ್ರವೆಂದರೆ ಅಲ್ಲಿನ ಕೆಥೋಲಿಕರು ಹೆಚ್ಚಿನ ಜನ ಇಂಥ ಅತ್ತ್ಯಾಚಾರಗಳಿಗೆ ಸ್ಪಂದಿಸುವ ರೀತಿ-ಅಂದರೆ ಇಂಥ ಪ್ರಕರಣಗಳಲ್ಲಿ ಮಹಿಳೆಯರದೇ ತಪ್ಪೆನ್ನುತ್ತಾರೆ ಅವರು.  ಪ್ರಚೋದನೆ ಬರುವುದು ಮಹಿಳೆಯ ಕಡೆಯಿಂದಲೇ ಎನ್ನುತ್ತಾರೆ, ಎಂದರು.  ನನಗೆ ಗಾಬರಿಯಾಯಿತು.  ಅತ್ತ್ಯಾಚಾರಕ್ಕೆ ಒಳಗಾದ ನೋವು ಮಾತ್ರವಲ್ಲ ಈ ಆಪಾದನೆ ಬೇರೆ! ನಾನು ಕೇಳಿದೆ: ಏಕೆ ಹೀಗೆ ಯೋಚಿಸುತ್ತಾರೆ? ಹೌದು; ನಾನು ಗಂಡಸು; ನಾನು ಅತ್ತ್ಯಾಚಾರ ಮಾಡಬಲ್ಲೆ ಎಂಬ ರೀತಿಯ ಅತಿ ನೀಚ ಪುರುಷಾಹಂಕಾರವೂ ಅಲ್ಲವಿದು-ತಪ್ಪೆಲ್ಲವೂ ಮಹಿಳೆಯದು ಎಂಬ ರೀತಿ? ಮಿತ್ರರು ಹೇಳಿದರು: ಅಯ್ಯೋ ಅದನ್ನೇನು ಕೇಳುತ್ತೀರಿ? ಬೈಬಲ್ ಗ್ರಂಥದಲ್ಲಿ ಕಥೆಯೇ ಇಲ್ಲವೆ? ಈಡನ್ ಉದ್ಯಾನದಲ್ಲಿ ಮನುಷ್ಯಕುಲದ ಮೂಲ ಗಂಡು-ಹೆಣ್ಣುಗಳಾದ ‘ಆಡಂ’ ಮತ್ತು ‘ಈವ್’ ಇದ್ದರಲ್ಲ, ಅಲ್ಲಿ ದೇವರ ಆದೇಶವನ್ನು ಮೀರಿ ತಿನ್ನಬಾರದ ಹಣ್ಣನ್ನು ತಿನ್ನುವಂತೆ ಪ್ರೇರೇಪಿಸಿದವಳು ‘ಈವ್’ ಅಲ್ಲವೆ? ಆದುದರಿಂದ, ಎಲ್ಲ ಕೆಡುಕಿಗೂ, ಅವಳ ಮೇಲೇ ಆಗುವ ಕೆಡುಕಿಗೂ ಸ್ತ್ರೀಯರೇ ಹೊಣೆ ಎಂದು ಬೈಬಲ್ ಪ್ರಕಾರ ವಾದಿಸುವವರುಂಟು.  ಆದರೆ ಅಲ್ಲಿನ ನ್ಯಾಯಾಲಯಗಳು ನ್ಯಾಯನಿಷ್ಠುರವಾಗಿವೆ.  ಇಂಥ ಮಾತುಗಳಿಗೆಲ್ಲ ಕಿವಿಗೊಡುವುದಿಲ್ಲ.  ಆ ಮಾತು ಬೇರೆ.  ಆದರೆ ಈ ಕಾಲದಲ್ಲೂ ಇರುವ ಮಾನಸಿಕತೆ ಇದು-ಎಂದರು.

ಚಿತ್ರ : ನಭಾ ಒಕ್ಕುಂದ

ಇದು ಆಘಾತಕಾರಿಯಾಗಿತ್ತು.  ಭೀಕರವಿದು.  ಧರ್ಮಗ್ರಂಥಗಳನ್ನು ಅರ್ಥಮಾಡಿಕೊಳ್ಳುವುದು ಹೇಗೆ ಎಂದೇ ನಮಗೆ ಇನ್ನೂ ತಿಳಿದಿಲ್ಲ. ನಮ್ಮನ್ನೇ ನಾವು ಮೊದಲು ವಿಮರ್ಶೆಗೆ ಒಡ್ಡಿಕೊಳ್ಳದೆ ಯಾವುದನ್ನೂ ಸರಿಯಾಗಿ ನಾವು ವಿಮರ್ಶಿಸಲಾರೆವು. ಆದುದರಿಂದ, ಸ್ತ್ರೀಯರ ಮೇಲೆ ಅತ್ತ್ಯಾಚಾರವೆಸಗುವುದಕ್ಕೆ ಪುರುಷರಿಗೆ ಈ ನಿಲುವು ಅನುಕೂಲಕರವೆನ್ನುವ ವಿರೋಧಾಭಾಸವೂ ನಮಗೆ ತಿಳಿಯುವುದಿಲ್ಲ. ಮ್ಯಾಗ್ದಲೀನಾ ಮೇಲೆ ಕಲ್ಲೆಸೆಯಬೇಕೆನ್ನುವ ಸಂದರ್ಭದಲ್ಲಿ ಜೀಸಸ್-ಯಾರು ಬದುಕಿನಲ್ಲಿ ತಪ್ಪೇ ಮಾಡಿಲ್ಲವೋ ಅವರು ಕಲ್ಲೆಸೆಯಬಹುದು ಎಂದುದು ಸ್ವವಿಮರ್ಶೆ ಇಲ್ಲದೆ ಇನ್ನೊಬ್ಬರನ್ನು ಶಿಕ್ಷಿಸುವ ಅಧಿಕಾರ ಯಾರಿಗೂ ಬರುವುದಿಲ್ಲ ಎಂದು ಸೂಚಿಸುವ ಮಾತು. ಇನ್ನೊಂದು ಅದ್ಭುತವಾದ ಮಾತು ಜೀಸಸ್ ಹೇಳಿದ್ದು-ಬೈಬಲಲ್ಲೇ ಇದೆ-ಅದೆಂದರೆ Letter Kills, Spirit revives ಎಂಬ ಮಾತು! ವಾಚ್ಯಾರ್ಥಕ್ಕೆ ಕಟ್ಟು ಬೀಳುವುದು ಆತ್ಮಹತ್ಯಾತ್ಮಕವಾದ್ದು-ಮಾತಿನ ಒಳಧ್ವನಿಯನ್ನು ಗ್ರಹಿಸಿದಾಗ ಮಾತ್ರ ಹೊಸ ಚೈತನ್ಯ ಎಂಬರ್ಥದ ಮಾತದು. ನಿನ್ನನ್ನು ನೀನು ತಿಳಿ; ತಿಳಿಯುತ್ತ ಹೋಗು ಎನ್ನುವ ಮಾತನ್ನು ಹಿಂದೂಧರ್ಮ ಹೇಳುತ್ತದೆ; ಬೈಬಲ್ ಹೇಳುತ್ತದೆ; ಕುರಾನ್ ಹೇಳುತ್ತದೆ. ಈ ಮಾತು ಸ್ವವಿಮರ್ಶೆಗೆ ಒತ್ತು ಕೊಡುವ ಮಾತಲ್ಲವೆ? ಇದನ್ನೊಪ್ಪಿದರೆ, ನಾವೆಲ್ಲ-ನಾವು ಹಿಂದೂ-ನಾವು ಮುಸ್ಲಿಂ-ನಾವು ಕ್ರಿಶ್ಚಿಯನ್ಸ್ ಎಂದೆಲ್ಲ ತಿಳಿದದ್ದು, ನಮ್ಮ ಕುರಿತು ನಾವೇ ವಿಮರ್ಶಿಸಿ ಪಡೆದ ತಿಳುವಳಿಕೆಯಲ್ಲ, ವಾತಾವರಣದ ಪ್ರಭಾವಕ್ಕೊಳಗಾಗಿ ಅನಿವಾರ್ಯವಾಗಿ ನಾವು ನಂಬುವಂತೆ ಆದ ತಿಳುವಳಿಕೆಯಷ್ಟೆ ಎಂದು ಏರ್ಪಡುತ್ತದೆ.  ಗ್ರೀಸ್ ದೇಶದ ಹಳೆಯ ಕಾಲದ ದೊಡ್ಡ ಜ್ಞಾನಿ ಸಾಕ್ರಟೀಸ್, ಪ್ರತಿಯೊಂದು ಸಂಗತಿಯನ್ನೂ ವಿಮರ್ಶೆಗೆ ಒಡ್ಡುತ್ತಿದ್ದ. ಒಮ್ಮೆ ಅವನಲ್ಲಿ ಯಾರೋ ಕೇಳಿದರಂತೆ:  ಈ ಪರಿಯ ವಿಮರ್ಶಾತ್ಮಕತೆಯನ್ನು ನೀನು ಹೇಗೆ ಬೆಳೆಸಿಕೊಂಡೆ? ಸಾಕ್ರಟೀಸ್ ಹೇಳಿದನಂತೆ: ಡೆಲ್ಫಿಯ ದೇವವಾಣಿ Know Thy Self – ನಿನ್ನನ್ನು ನೀನು ತಿಳಿ ಎಂದದ್ದು ನನಗೆ ಕೇಳಿಸಿತು.  ಹಾಗಾದರೆ ಇದುವರೆಗೆ ನಾನು ಏನು ತಿಳಿದಿದ್ದೆನೋ ಅದು ಸರಿಯಾದ ತಿಳುವಳಿಕೆಯಲ್ಲವೆಂದಾಯಿತು. ಸರಿಯಾದ ತಿಳುವಳಿಕೆ ಇನ್ನು ಮುಂದೆ ಪಡೆಯಬೇಕಾಗಿದೆ ಎಂದಾಯಿತು. ಇದು ವಿಚಾರ-ವಿಮರ್ಶೆಯ ದಾರಿಯನ್ನು ನನಗೆ  ತೋರಿಸಿತು ಎಂದು. ವಿಮರ್ಶೆಯ ದಾರಿಯನ್ನು ಬಿಡದೆ ಇದ್ದುದಕ್ಕಾಗಿ ಸಾಕ್ರಟೀಸ್ ಬಲಿದಾನ ಮಾಡಬೇಕಾಯಿತು ಎನ್ನುವುದೂ ನಾವು ನಡೆದು ಬಂದ ದಾರಿಯ ಗುರುತಾಗಿದೆ.  ಜೀಸಸ್ ಆಡಿದ ಒಂದು ಮಾತಿಗೆ ಗಾಂಧೀಜಿ ಮಾಡಿದ ಅತಿ ವಿಶಿಷ್ಟ ವ್ಯಾಖ್ಯಾನವೊಂದು ಕುತೂಹಲಕಾರಿಯಾಗಿದೆ ಮತ್ತು ಮಾರ್ಗದರ್ಶಕವಾಗಿದೆ.  1922ರಲ್ಲಿ ಬ್ರಿಟಿಷ್ ಪತ್ರಕರ್ತನೊಬ್ಬ – Render unto Caesar the things which are Caesar’s”  ಎಂಬ ಜೀಸಸ್ ಮಾತನ್ನು ಉಲ್ಲೇಖಿಸಿ, ನಾಗರಿಕ ಅಧಿಕಾರಿಗಳಿಗೆ ನಾವು ಸಲ್ಲಿಸಬೇಕಾದ ತೆರಿಗೆ ಇತ್ಯಾದಿಗಳನ್ನು ಸಲ್ಲಿಸಬೇಕಾದುದು ನಮ್ಮ ಕರ್ತವ್ಯವೆಂದಲ್ಲವೆ ಈ ಮಾತಿನ ಅರ್ಥ? – ಅಲ್ಲವೆಂದಾದರೆ ಈ ಮಾತಿಗೆ ಬೇರೇನು ಅರ್ಥವಿದ್ದೀತು ಎಂದು ಗಾಂಧೀಜಿಯವರೊಡನೆ ಕೇಳುತ್ತಾನೆ.   Civil disobidienceನ ಗಾಂಧೀಜಿಯವರ ದಾರಿ ಕ್ರಿಸ್ತನಿಗೆ ಸಮ್ಮತವಲ್ಲದಿದ್ದೀತು ಎಂದು ತಿಳಿಸುವುದು ಈ ಪತ್ರಕರ್ತನ ಇಚ್ಛೆಯಾಗಿದ್ದಿರಬಹುದು.  ಅದಕ್ಕೆ ಗಾಂಧೀಜಿ ಕೊಟ್ಟ ಉತ್ತರವಿದು:

“Christ never answered a question in a simple and literal manner.  He always gave in his replies more than was expected, something deeper. It was so in this case.  Here He does not mean at all whether you must or must not pay taxes.  When He says “Give back to Caesar the things which are Caesar’s”, He is stating a law.  It means ‘give back to Caesar what is his, i.e. I wil have nothing to do with it”. In this incident Christ enunciated the great law-which he exemplified all his life-of refusing to co.operate with evil”.  Don’t co.operate with evil – ಕೆಡುಕಿನ ಜತೆ ಸಹಕರಿಸದಿರುವುದೇ ಗಾಂಧೀಜಿ ಕಂಡುಕೊಂಡ ಕ್ರಿಸ್ತಧರ್ಮದ ತಿರುಳು.

-2-

                ನಮ್ಮ ದೇಶದಲ್ಲಿ ಧರ್ಮ-ಧಾರ್ಮಿಕತೆಯ ಪರಿಸರವನ್ನು ನೋಡುವಾಗ ನಾವು ಮಧ್ಯ ಯುಗದಲ್ಲಿರುವಂತೆ ಅನ್ನಿಸುತ್ತದೆ. ಇಲ್ಲಿ ಬಾಬಾಗಳು-ಬಾಪುಗಳು-ಸ್ವಾಮಿಗಳು-ಮಠಾಧೀಶರು-ಧರ್ಮಾಧಿಕಾರಿಗಳ ಸಾಮ್ರಾಜ್ಯವೇ ನಡೆಯುತ್ತಿದೆ. ರಾಮ್‍ರಹೀಮ್ ಬಾಬಾ-ಆಸಾರಾಂಬಾಪುಗಳಿಗೆ ಶಿಕ್ಷೆಯಾದದ್ದು ಎಲ್ಲರೂ ಸಂಭ್ರಮಿಸಬೇಕಾದ-ನಿಜವಾದ ಧಾರ್ಮಿಕರು ಹೆಚ್ಚು ಸಂಭ್ರಮಿಸಬೇಕಾದ-ಸಂಗತಿಯಾಗಿದೆ.  ಆದರೆ ನಾವು ಯಾವುದೋ ಸ್ವಾಮಿಗಳ-ಬಾಬಾಗಳ ಹಿಂಬಾಲಕರಾಗಿರುವವರೆಗೆ ಇಂಥ ತೀರ್ಪುಗಳ ಮಹತ್ವವನ್ನೇ ತಿಳಿಯರಲಾರೆವು. ಎಲ್ಲವೂ ನಮಗೆ ಇನ್ನೊಂದು ಧರ್ಮದವರು, ನಮ್ಮ ಶತ್ರುಸ್ಥಾನದಲ್ಲಿರುವವರು-ನಮ್ಮ ಧಾರ್ಮಿಕ ನಾಯಕರ ವಿರುದ್ಧ ನಡೆಸುತ್ತಿರುವ ಷಡ್ಯಂತ್ರವಾಗಿ ಕಾಣಿಸುತ್ತದೆ.  21ನೇಯ ಶತಮಾನದ ಈ ಎರಡನೇಯ ದಶಕದಲ್ಲಿ ನಮ್ಮ ಧಾರ್ಮಿಕ ವ್ಯಕ್ತಿಗಳು ನಮಗೆ ತೀರ ಪರಿಚಿತಗೊಳಿಸಿದ ಒಂದು ಪದವೆಂದರೆ ಈ “ಷಡ್ಯಂತ್ರ” ಎಂಬ ಪದ! ತಮ್ಮ ಪಾತಕಗಳನ್ನು ಮುಚ್ಚಿಕೊಳ್ಳಲು ಸ್ವರಕ್ಷಣೆಗಾಗಿ ಮಾಡಿಕೊಳ್ಳುವ ಉಪಾಯಗಳಿವು ಎಂದು ಹೆಚ್ಚಿನ ಎಲ್ಲರಿಗೂ ಗೊತ್ತಿದ್ದರೂ ಆತ್ಮವಂಚನೆ ಹೇಗೆ ನಡೆದಿದೆ ನೋಡಿ!

ಸನಾತನ ಸಂಸ್ಥೆ ಎಂಬೊಂದು ಸಂಸ್ಥೆಯ ಬಗ್ಗೆ ಕೇಳಿ ಬರುತ್ತಿದೆ. ಸಾವಯವ ವಸ್ತುಗಳು, ಆಧ್ಯಾತ್ಮಿಕ ಸಾಧನೆ ಎಂದೆಲ್ಲ ಹೇಳುತ್ತಿರುತ್ತಾರೆ.  ಇವೆಲ್ಲ ಅವರಿಗೇ ಬಿಟ್ಟ ವಿಚಾರ. ಆರೆಸೆಸ್‍ನಂತೆಯೇ ಹಿಂದೂ ರಾಷ್ಟ್ರ ಕಟ್ಟುವುದೇ ಇವರ ಗುರಿಯಾಗಿರುವಂತಿದೆ.  ಇವರ ಅಭಿಪ್ರಾಯಗಳೊಂದಿಗೆ ಭಿನ್ನಮತ ಹೊಂದಿದವರ ಬಗ್ಗೆ ಮಾತ್ರ ಇವರದು ಉಗ್ರ ಅಸಹನೆ. ವಿಚಾರವಾದಿಗಳೇ ಇವರ ಗುರಿಯಾಗಿರುವಂತಿದೆ. ಹತ್ಯೆ ನಡೆದರೂ ನಡೆಯಿತೇ. ಮತ್ತು ಹತ್ಯಾಕೋರರು ಇವರ ದೃಷ್ಟಿಯಲ್ಲಿ ಧರ್ಮ ವೀರರು! ಹತ್ಯೆ ಮಾಡಿದವರಿಗೆ ಕಾನೂನು ರೀತ್ಯಾ ಶಿಕ್ಷೆಯಾಗಬಹುದು. ಆ ಮಾತು ಬೇರೆ. ಏಕೆಂದರೆ ಆ ಶಿಕ್ಷೆಯನ್ನು ಅನುಭವಿಸುವುದು ಧರ್ಮವೀರರೆಂದೆನಿಸಿಕೊಂಡವರಿಗೆ ಒಂದು ಹೆಮ್ಮೆ. ಜೈಲೊಂದು ವೀರಸ್ವರ್ಗ! ಇದು ಇನ್ನಷ್ಟು ಗಾಬರಿಗೊಳ್ಳಬೇಕಾದ ಸಂಗತಿಯಾಗಿದೆ.  ಅಂದರೆ ತನ್ನಂತೆಯೇ ಇರುವ ಮನುಷ್ಯ ಜೀವಿಯನ್ನು ಭಿನ್ನಮತದ ಕಾರಣಕ್ಕೆ ಕೊಂದ ಮೇಲೆ, ಕೊಂದವನೂ ಮನುಷ್ಯನೇ ಆಗಿರುವುದರಿಂದ, ಎಂದಾದರೊಂದು ದಿನ ತಾನು ಮಾಡಿದ ಕೊಲೆಗೆಲಸಕ್ಕೆ ಪಶ್ಚಾತ್ತಾಪಪಡುವ ಸಾಧ್ಯತೆ ಇದ್ದರೆ-ಆ ಸಾಧ್ಯತೆಯನ್ನೂ ಈ ಧರ್ಮವೀರತನದ ಕಲ್ಪನೆ ಗುಡಿಸಿ ಹಾಕಿ ಬಿಡುತ್ತದೆ. ಪಶ್ಚಾತ್ತಾಪಪಡಲಾಗುವುದು ನಿಜವಾಗಿ ಒಂದು ದೊಡ್ಡ ಯೋಗ್ಯತೆ. ಈ ಜನುಮದಲ್ಲೇ ಮರಳಿ ಮನುಷ್ಯನಾಗುವ ಅವಕಾಶವಿದು.  ನಿಸರ್ಗವೇ ನಮ್ಮೊಳಗಿಟ್ಟ ಅವಕಾಶ. ಈಗ ಆ ಅವಕಾಶವನ್ನು ಮುಚ್ಚಿದಂತಾಯಿತು. ಎಲ್ಲವೂ ಧರ್ಮದ ಹೆಸರಿನಲ್ಲಿ! ಹಿಂದೂ ಧರ್ಮದ ಧರ್ಮಶಾಸ್ತ್ರಗಳಲ್ಲಿ ‘ಪ್ರಾಯಶ್ಚಿತ್ತಕಾಂಡ’ ಎಂಬೊಂದು ಭಾಗವೇ ಇದೆ ಎಂದಾದರೂ ಈ ಮಂದಿಗೆ ತಿಳಿದಿದೆಯೇನು?

ಮಹಾಭಾರತದ ನೆನಪಾಗುತ್ತಿದೆ. ಯುದ್ಧ ಮುಗಿದಿದೆ. ದುರ್ಯೋಧನ ತೊಡೆ ಮುರಿದು ಬಿದ್ದಿದ್ದಾನೆ. ಇನ್ನೂ ಕುಟುಕು ಜೀವ ಇದೆ. ಹುಡುಕಿಕೊಂಡು ಕೃಪ ಕೃತವರ್ಮ-ಅಶ್ವತ್ಥಾಮರು, ದುರ್ಯೋಧನನಲ್ಲಿಗೆ ಬರುತ್ತಾರೆ.  ನಡೆದುಹೋದ ದುರಂತವನ್ನು ನೋಡಿ ಇವರಿಗೆ ತೀರ ದುಃಖವಾಗುತ್ತದೆ.  ಆಗ ದುರ್ಯೋಧನ ಹೇಳುವ ಮಾತು ಇದು: ದುಃಖಿಸಬೇಡಿ. ನನ್ನ ಕುರಿತು ದುಃಖಿಸುವಂತೆ ನಾನು ಜೀವನ ಮಾಡಿಲ್ಲ. ನಾನು ದುಃಖಾರ್ಹನಲ್ಲ.  ಏಕೆಂದರೆ ನಾನು ಕ್ಷತ್ರಿಯನಂತೆ ಕಾದಿದ್ದೇನೆ. ವೇದಗಳು ನಮಗೆ ಪ್ರಮಾಣವಲ್ಲವೆ? ಯುದ್ಧದಲ್ಲಿ ದೇಹ ತೆತ್ತವನಿಗೆ ವೀರ ಸ್ವರ್ಗವೆಂದು ವೇದಗಳೇ ಹೇಳಿಲ್ಲವೆ?  ನನಗೆ ವೀರಸ್ವರ್ಗ ಸಿಗಬಾರದೆಂದೇ ಕೃಷ್ಣನಂಥವನು ಸಂಧಾನಕ್ಕೆ ನನ್ನನ್ನು ಒಡಂಬಡಿಸಲು ಯತ್ನಿಸಿದ್ದ.  ಈ ಗುಟ್ಟು

ನನಗೆ ಗೊತ್ತಾಗದಿರುವುದೆ? ನಾನು ಬಿಡುವೆನೆ? ಸಂಧಾನವನ್ನು ಮುರಿದು ಯುದ್ಧವೇ ಸೈ ಎಂದು ನಿಶ್ಚಯಿಸಿಬಿಟ್ಟೆ ನೋಡಿ.  ಆದುದರಿಂದ ನಾನೆಂದೆಂದೂ ಶೋಚನೀಯನಲ್ಲ. ‘Áಸ್ಮಿ ಶೋಚ್ಯಃಕಥಂಚನ’

   ಏನು ಹೇಳಬೇಕು ಈ ಮಾತಿಗೆ? ನಡೆದುದರ ಕುರಿತು ಪಶ್ಚಾತ್ತಾಪವೇ ಇಲ್ಲ. ತನ್ನ ಬಗ್ಗೆಯೂ ಇಲ್ಲ.  ಸಾಯುವ ಕಾಲದಲ್ಲೂ ಯಾರಾದರೂ ಪರಿತಪಿಸಿದರೆ ಅದರಿಂದ ಅಹಂಕಾರಕ್ಕೆ ಗಾಸಿಯಾಗುವುದು! ತಾನು ಹೀಗೆ ಎಲ್ಲರನ್ನೂ ತನ್ನ ಅಹಂಕಾರಕ್ಕೆ ಆಹುತಿ ತೆಗೆದುಕೊಂಡು ಬದುಕಿದ್ದುದಕ್ಕಿಂತ ಬೇರೆಯೇ ಒಂದು ರೀತಿಯಲ್ಲಿ ಬದುಕಬಹುದಿತ್ತೆಂಬ ಸಾಧ್ಯತೆಯೂ ಹೊಳೆಯುವುದಿಲ್ಲ. ಹೊಳೆದರೆ ಪಶ್ಚಾತ್ತಾಪದ ಕಣ್ಣೀರು ತುಳುಕುವುದು. ಅಲ್ಲಿ ಆ ಕ್ಷಣದಲ್ಲಿ ಮಾನವೀಯತೆ ಅರಳಿಕೊಳ್ಳುವುದು. ಆದರೆ ಹಾಗಾಗುವುದಿಲ್ಲ.  ದುರ್ಯೋಧನನಿಗೆ ಪಶ್ಚಾತ್ತಾಪ ಉಂಟಾಗುವುದೇ ಇಲ್ಲ. ಪಶ್ಚಾತ್ತಾಪವೆಲ್ಲ ಧರ್ಮರಾಜನಿಗೆ ಮೀಸಲು.  ದುರ್ಯೋಧನನಿಗೆ ಹೀಗಾಯಿತಲ್ಲ ಎಂಬ ಪಶ್ಚಾತ್ತಾಪವೂ ಧರ್ಮರಾಜನಿಗೇ.

                ನನಗನಿಸುತ್ತದೆ ನಮ್ಮ ಸಂಘಟನೆಗಳು ದುರ್ಯೋಧನನಂಥವರನ್ನು ನಿರ್ಮಿಸಲು ಹೊರಟಿವೆಯೋ ಹೇಗೆ?

ಒಂದು Crisisಗೆ ಒಳಗಾದಾಗ ನಮ್ಮಲ್ಲಿ ಒಂದು ವಿಶೇಷವಾದಕ್ತಿಯು-ಅದುವರೆಗೆ ನಮಗೇ ತಿಳಿದಿರದ ನಮ್ಮ ಶಕ್ತಿಯು–ಜಾಗೃತವಾಗುವುದು.  ಜೀವನ್ಮರಣಗಳಿಗೆಯಲ್ಲಿ ಉಂಟಾಗುವ ಶಕ್ತಿ ಅದು. ಪ್ರಾಣಾಪಾಯದಲ್ಲಿರುವ ತನ್ನ ಮಗುವನ್ನು ನೋಡಿ ಅದನ್ನುಳಿಸಲು ತಾಯಿ ತನ್ನನ್ನೇ ಮರೆತು ಅದರತ್ತ ನುಗ್ಗುವಳು. ಇದು ಅಡಿisis ನಲ್ಲಿ ಶಕ್ತಿ. ಬೌದ್ಧಿಕವಾಗಿ ಉಂಟಾಗುವ, Self-hypnosisನಿಂದ ಉಂಟಾಗುವ ಶಕ್ತಿಯಲ್ಲ. ತನ್ನ ಆಸೆಯನ್ನೇ ಬಿಟ್ಟಾಗ ಉಂಟಾಗುವ ಶಕ್ತಿ. ನಮ್ಮೊಳಗೇ ಇರುವ ಈ energyಯ ಪರಿಚಯ ಇರುವವರಿಗೆ ಭೋಗದಲ್ಲಿ ಆಸಕ್ತಿ ಇರುವುದಿಲ್ಲ. ಏಕೆಂದರೆ ಅಂಥವರಿಗೆ ಆಸೆಯೇ ಇರುವುದಿಲ್ಲ.  ಆಸೆಯನ್ನು ತೊರೆದಾಗಲೇ ಉಂಟಾಗುವ ಶಕ್ತಿ ಅದು! ಬುದ್ಧ, ಆಸೆಯನ್ನು ಬಿಡಿ ಎಂದುದಕ್ಕೆ ಈ ಅನುಭವವೇ ಮೂಲ.

ಇವೆಲ್ಲವೂ ನಮಗೆ ಅನುಭವದಲ್ಲಿ ಅಲ್ಲದಿದ್ದರೂ ಬೌದ್ಧಿಕವಾಗಿ ಗೊತ್ತೇ ಇರುವುದರಿಂದ, ಪ್ರಚಂಡವಾದ ಬಿಕ್ಕಟ್ಟುಗಳನ್ನು ಸೃಷ್ಟಿಸಲು ನಾವು ಸಮರ್ಥರಾಗಿದ್ದೇವೆ. Crisis ಅನ್ನು ಕೃತಕವಾಗಿ ಸೃಷ್ಟಿಸಿ ಅದರ ಫಲವಾಗಿ ಉದ್ವಿಗ್ನ ಮನುಷ್ಯರನ್ನು ಸೃಷ್ಟಿಸುವುದರತ್ತಲೇ ನಮ್ಮ ಗಮನ. ವಿಜ್ಞಾನ ಯಂತ್ರಮಾನವನನ್ನು ಸೃಷ್ಟಿಸಿದಂತೆ! ನಮ್ಮ ಧರ್ಮ ಅಪಾಯದಲ್ಲಿದೆ ಎಂಬೊಂದು ಕೂಗನ್ನು ಎಬ್ಬಿಸಿ ಕೆಲವು ಉದಾಹರಣೆಗಳನ್ನು ಮುಂದೊಡ್ಡಿ ಹಬ್ಬಿಸಿ ಬಿಡಿ-ತತ್‍ಕ್ಷಣದಲ್ಲಿ ಉದ್ವಿಗ್ನ ಸನ್ನಿವೇಶವೊಂದು ಸೃಷ್ಟಿಯಾಗುತ್ತದೆ. ಮುಂದೆ ನಡೆಯುವ ಘಟನೆಗಳಿಗೆ ಯಾವ ತರ್ಕವೂ ಇರುವುದಿಲ್ಲ. ಮತ್ತು ಇಂಥದೊಂದು ಕೂಗಿಗೆ ಓಗೊಟ್ಟು ಉದ್ವಿಗ್ನಗೊಳ್ಳುವುದೇ ಮೌಲ್ಯವೆಂಬಂತೆ, ಆ ಕೂಗಿಗೆ ಕಾಯುತ್ತಿರುವಂತೆ, ಒಂದು ವಾತಾವರಣವನ್ನು ಸಿದ್ಧಪಡಿಸಿಟ್ಟುಕೊಂಡಿರುತ್ತೇವೆ! ಇದು ಎಲ್ಲ ಧರ್ಮಗಳಲ್ಲೂ ನಡೆಯುತ್ತಲೇ ಇದೆ. ಧರ್ಮದ ಮಾತೇಕೆ? ಈಗಲೀಗ ಈ ಕೂಗು ಜಾತಿ-ಮತಗಳ ಮಟ್ಟದಲ್ಲೂ ನಡೆಯುತ್ತಿದೆ.

                                           -3-

ಆರ್.ಎಸ್.ಎಸ್. ಹೇಳುತ್ತಿದೆ. ನಾವು ಎಂದರೆ ಹಿಂದೂಗಳು ಬಲಿಷ್ಠರಾಗಬೇಕು ಎಂದು. ಅಂದಾಗ ಮಾತ್ರ ಇತರರು ನಮ್ಮ ಮಾತು ಕೇಳುತ್ತಾರೆ ಎಂದು. ಇದು ಯೋಚಿಸಬೇಕಾದ್ದು. ಅಂದರೆ ಯೋಗ್ಯವಾದ ಮಾತನ್ನು,-ಆಡಬೇಕಾದ ಮಾತನ್ನು-ಮನೋಬುದ್ಧಿಗಳನ್ನು ಮುಟ್ಟಬಲ್ಲ, ಮುಟ್ಟಿ ಬೆಳೆಸಬಲ್ಲ ಮಾತುಗಳನ್ನಾಡುವುದಲ್ಲ. ಹಾಗೆ ಮಾತನಾಡುವಂತೆ ಯೋಚಿಸುವ ವ್ಯಕ್ತಿತ್ವಗಳನ್ನು ಬೆಳೆಸುವುದಲ್ಲ! ಅಲ್ಲದೆ ಒಳ್ಳೆಯ ಮಾತಿಗೆ ಜನ ಕಿವಿಗೊಡಲಾರರು; ಶಕ್ತಿವಂತರ ಮಾತಿಗೆ ಮಾತ್ರ ಬೆಲೆ ಕೊಡುವರು ಅಂದರೆ ಹೇಳಿದಂತೆ ಕೇಳುವರ ಎಂಬೀರೀತಿಯ ತಿಳುವಳಿಕೆಯೇ ಪ್ರಶ್ನಾರ್ಹ. ಆರ್.ಎಸ್.ಎಸ್. ಜನರನ್ನು ತಿಳಿದ ರೀತಿಯೇ ಅಸಾಂಸ್ಕೃತಿಕವಾಗಿದೆ.

ಆಯಿತು.  ಈಗ ಆರ್.ಎಸ್.ಎಸ್. ಬಲಿಷ್ಠವಾಗಿದೆಯಲ್ಲ. ಕೇಂದ್ರದಲ್ಲಿ ಬಿ.ಜಿ.ಪಿ. ದೊಡ್ಡ ಬಹುಮತದಲ್ಲಿ ಆಳುತ್ತಿದೆ.  ಮೋದಿಯವರಿಗೆ ವಿಶ್ವಮಾನ್ಯತೆ ಇದೆ. ಈಗ ಮಂತ್ರಿಗಳು ಇತರರನ್ನು ಕುರಿತು ಆಡುವ ಮಾತುಗಳು ಹೇಗಿವೆ? ಕೇಂದ್ರ ಮಂತ್ರಿ ಅನಂತ ಕುಮಾರ್ ಹೆಗಡೆಯವರ ಮಾತುಗಳನ್ನು ಕೇಳಿದರೆ ಗೊತ್ತಾಗುವುದಿಲ್ಲವೆ? ಅವರು ಕರ್ನಾಟಕಕ್ಕೆ ಬಂದ ಕೂಡಲೇ ಕೆಂಡಾಮಂಡಲರಾಗಿ ಅದೇಕೆ ಗುಟುರು ಹಾಕುತ್ತಾರೋ ದೇವರೇ ಬಲ್ಲ! ಅವರು ಬಲಿಷ್ಠರಾಗಿದ್ದಾರೆ; ಸುಮ್ಮನೆ ಕೂರುವಂತಿಲ್ಲ!

  ಆರ್ ಎಸ್ ಎಸ್  ಹಿಂದೂ ರಾಷ್ಟ್ರ ಎನ್ನುತ್ತಿದೆ. ಹೇಳಲಿ. ಆದರೆ ನಾನು ಹಿಂದೂ ಆಗಿ ಸಾಯಲಾರೆನೆನ್ನುವ ಅಂಬೇಡ್ಕರ್ ಮಾತನ್ನೂ, ನಾನು ಆಯ್ಕೆಯಲ್ಲಿ ಅಸ್ಪೃಶ್ಯನ್ನೆನ್ನುವ ಗಾಂಧಿಯವರ ಮಾತನ್ನೂ ನೆನಪಲ್ಲಿಟ್ಟುಕೊಂಡು ಅಸ್ಪೃಶ್ಯತೆಯನ್ನು ಹೋಗಲಾಡಿಸುವ ಕಾರ್ಯಕ್ರಮವನ್ನೇ ಮನಃಪೂರ್ವಕ ಹಮ್ಮಿಕೊಂಡಿದ್ದರೆ ಅವರ ಅನುಭವಗಳೇ ಬೇರೆಯಾಗುತ್ತಿದ್ದವು. ಆ ಅನುಭವಗಳು ಅವರನ್ನು ಈಗಿನಂತಲ್ಲದೆ ಬೇರೆಯೇ ರೀತಿಯಲ್ಲಿ ಮಾಗಿಸುತ್ತಿದ್ದವು.  ಗೋರಕ್ಷಣೆಯು ಮುಖ್ಯ ಕಾರ್ಯಕ್ರಮವಾಗಿದ್ದ ಗಾಂಧೀಜಿ-ಗೋರಕ್ಷಣೆಯೆನ್ನು ನೆಹರೂಗೆ ಅರ್ಥ ಮಾಡಿಕೊಟ್ಟ ರೀತಿ ಇದು-“Cow-protection means protection of the weak, the helpless, the dumb-and the deaf ”(ಗೋರಕ್ಷಣೆ ಅಂದರೆ ದುರ್ಬಲರ, ಅಸಾಯಕರ, ಮೂಕರ ಮತ್ತು ಕಿವುಡಾದವರ ರಕ್ಷಣೆ.)

ಇನ್ನು ಹಿಂಸೆಯ ಬಗ್ಗೆ ಹೇಳಲು ಮಾತುಗಳೇ ಇಲ್ಲ. ಗುಜರಾತ್‍ನಲ್ಲಿ ನಡೆದ ಹಿಂಸೆಯ ಬಗ್ಗೆ ಇನ್ನೂ ಪೂರ್ಣ ಪ್ರಮಾಣದ ರಾಷ್ಟ್ರೀಯ ಮಟ್ಟದ ಹೃತ್ಪೂರ್ವಕ ಕ್ಷಮಾಯಾಚನೆಯೇ ನನಗೆ ತಿಳಿದಂತೆ ನಡೆದಿಲ್ಲ. ನಡೆದಿದ್ದರೆ ಕ್ಷಮೆ ಇರಲಿ. ನಡೆದಿಲ್ಲವೆಂದು ಏಕೆ ಹೇಳುತ್ತಿದ್ದೇನೆಂದರೆ, ನಡೆದಿದ್ದರೆ ತೀಸ್ತಾ ಸೆಟಲ್‍ವಾಡ್ ಅಂಥ ಸಾಮಾಜಿಕ ಕಾರ್ಯಕರ್ತರು ಇನ್ನೂ ಆ ಕಾನೂನಿನ ಚಕ್ರವ್ಯೂಹದಲ್ಲಿ ಹೋರಾಡುತ್ತಿರಬೇಕಿರಲಿಲ್ಲ!

                                   -4-

ಹಿಂದೂ ಧರ್ಮವೆಂದರೆ-ನಮ್ಮ ದರ್ಶನ ಶಾಸ್ತ್ರಗಳನ್ನು ನೋಡಿದರೆ ತಿಳಿಯುತ್ತದೆ- ಭಿನ್ನಮತೀಯರೊಂದಿಗೆ ನಡೆಸಿದ ನಿರಂತರ ಸಂವಾದವಾಗಿದೆ! ಶಂಕರು ತಮ್ಮ ಬ್ರಹ್ಮ ಸೂತ್ರ ಭಾಷ್ಯಕ್ಕೆ ಬರೆದ ಮುನ್ನುಡಿಯಂತಿರುವ ‘ಅಧ್ಯಾಸಭಾಷ್ಯ’ ವನ್ನೋದಿದರೆ ತಿಳಿಯುತ್ತದೆ-ಅದರ ಪರಿಭಾಷೆಯೆ ಹೊಸತು! ಅಲ್ಲಿ ಉಪನಿಷತ್ತಿದ್ದಾಗಲೀ ಯಾವುದೇ ಆರ್ಷ ಸಾಹಿತ್ಯದ್ದಾಗಲಿ ಒಂದೇ ಒಂದು ಉಲ್ಲೇಖವಿಲ್ಲ. ತೀರ ಬೌದ್ಧಿಕವಾದ ಪರಿಭಾಷೆ, ಇದು

ಬೌದ್ಧ ಪ್ರಭಾವವೇ ಸರಿ. ಇದು ಹೆಚ್ಚುಗಾರಿಕೆಯಲ್ಲವೆ? ಬೌದ್ಧಧರ್ಮವನ್ನು ನೆಚ್ಚಿದ ಅಂಬೇಡ್ಕರ್ ಇದನ್ನು ಗಮನಿಸುತ್ತಿದ್ದರೆ ಏನು ಹೇಳುತ್ತಿದ್ದರೋ! ಅದೊಂದು ಕುತೂಹಲದ ವಿಷಯ.

  ಭಿನ್ನ ಮತೀಯರೊಂದಿಗೆ ಅಸಹನೆ ಹಿಂದೂ ಧರ್ಮದ ನಿಜವಾದ Spirit ಅಲ್ಲವೇ ಅಲ್ಲ. Spirit ಅನ್ನು ಕೊಂದು ಏನು ಹಿಂದೂಧರ್ಮ? ಬಸವಣ್ಣ ಹೇಳಿದಂತೆ- ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ ಎಂಬಂತಾಗಿದೆ ಇದು.

Image Building ಆರ್‍ಎಸ್‍ಎಸ್‍ನ ಒಂದು ವಿಧಾನವಾಗಿದೆ. ಈಗ ಮೋದಿಯವರ  Image  ಬೆಳೆಸುತ್ತಿದ್ದಾರೆ! ಕಾಂಗ್ರ್ರೆಸ್ಸು ನೆಹರೂ ಮನೆತನದ Image  ಬೆಳೆಸುತ್ತಿದೆ. ಸಿಖ್ ಗಲಭೆ ರಕ್ತಪಾತದ ಕಲಂಕ ಈ ನೆಹರೂ ಮನೆತನಕ್ಕೆ ಅಂಟಿಕೊಂಡಿದ್ದ್ದರೆ ಗುಜರಾತ್ ಗಲಭೆಗಳ ಕಳಂಕ ಮೋದಿಗೆ ಅಂಟಿಕೊಂಡಿದೆ. ರಾಜೀವ ಗಾಂಧಿ ದುರಂತಕ್ಕೆ ಈಡಾದಾಗ ಗಲಭೆಯಲ್ಲಿ ಮನೆಯ ಗಂಡಸರನ್ನು ಕಳಕೊಂಡ ಸಿಖ್ ಮಹಿಳೆಯರ ದುಃಖ ಈಗ ನನಗೆ ಅರ್ಥವಾಗುತ್ತಿದೆ ಎಂದು ಸೋನಿಯಾಗಾಂಧಿ ಹೇಳುತ್ತಿದ್ದರೆ ಜನಮನದಲ್ಲಿ ಭಾವದ ಅ¯ಗಳೇಳುತ್ತಿದ್ದವು! ನನ್ನ ಪ್ರಜೆಗಳನ್ನು ಕಾಪಾಡಲಾಗಲಿಲ್ಲ ಎಂದು ಮೋದಿ, ಗುಜರಾತ್ ಗಲಭೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಡುತ್ತಿದ್ದರೆ ಅವರ Image  ಏಕೆ? ಅವರ ವ್ಯಕ್ತಿತ್ವವೇ ಬೆಳೆಯುತ್ತಿತ್ತು!

ವ್ಯಕ್ತಿತ್ವವು ಬೆಳೆಯುವುದು ಧರ್ಮದ ದಾರಿ. Image  ಬೆಳೆಸುವುದು ನಮ್ಮ ಸದ್ಯದ ರಾಜಕಾರಣದ ದಾರಿಯಾಗಿದೆ. Image  ಅನ್ನು     ಹೇರುವುದು ಜನರ ಮನಸ್ಸಿನ ಮೇಲೆ ಮಾಡುವ ಹಿಂಸೆಯೇ ಆಗಿದೆ.

ಧರ್ಮವಾದಿಗಳ ಜತೆಗೆ, ಹಿಂಸೆಯನ್ನು ಪ್ರಚೋದಿಸುವುದರಲ್ಲಿ ಎಡಪಂಥೀಯರು, ಸೆಕ್ಯುಲರ್ ಚಿಂತಕರು ಏನೂ ಕಡಿಮೆ ಇಲ್ಲ. ಯಾರೇ ಆದರೂ ರೂಕ್ಷವಾಗಿ ಏಕೆ ಮಾತನಾಡಬೇಕೋ ತಿಳಿಯದಾಗಿದೆ.

ಈಗ ಏನಾಗಿದೆ ಎಂದರೆ-ಪರ; ವಿರೋಧಗಳಲ್ಲಿ ನೀವು ಯಾವುದಾದರೂ ಒಂದು ಗುಂಪನ್ನು ಸೇರಿಕೊಳ್ಳದಿದ್ದರೆ ಉಳಿಗಾಲವಿಲ್ಲ ಎಂಬ ರೀತಿಯ ಸನ್ನಿವೇಶವಿದೆ ಜೆಕೆ ಹೇಳುತ್ತಿದ್ದರಂತೆ “Every body  should give me up” ಎಂದು. ಇದು ನನ್ನನ್ನು ಯಾರೂ ಹಚ್ಚಿಕೊಳ್ಳಬೇಡಿ ಎಂದು ಲೋಕಕ್ಕೆ ಮೊರೆ ಇಟ್ಟಂತೆ ಕೇಳಿಸುತ್ತದೆ. ಸರ್ವಸಂಗ ಪರಿತ್ಯಾಗ ಎನ್ನುವ ಪರಿಕಲ್ಪನೆಯ ಇನ್ನೊಂದು ರೂಪವಿದು. ಇದು ಲೋಕದ ಸಂದರ್ಭವನ್ನು ವಿಮರ್ಶಿಸಿದ ಮಾತೂ ಹೌದು.

                                                                              (ಕೃಪೆ: ‘ಹೊಸ ಮನುಷ್ಯ’)

6 comments to “ಲಕ್ಷ್ಮೀಶ ತೋಳ್ಪಾಡಿ : ನಮ್ಮ ಕಾಲದ ಧರ್ಮಸಂಕಟಗಳು”
  1. ಬಹಳ ಉಪಯುಕ್ತ ಲೇಖನ. ಈ ಪರಿಭಾಷೆಯನ್ನು ಆಡಳಿತ ವ್ಯವಸ್ಥೆಗೆ ತರುವುದು ಹೇಗೆ? ಇದನ್ನು ದುರ್ಯೋಧನಾದಿಗಳ ಮನಮುಟ್ಟಿಸುವುದು ಕೃಷ್ಣನಿಗೂ ಸಾಧ್ಯವಾಗಲಿಲ್ಲ ಅಲ್ಲವೇ?

  2. ಅಧ್ಯಾಸ ಭಾಷ್ಯದ ತಲೆ ಬಾಲ ಅರಿಯದಿದ್ದದವರು ಅದರ ಬಗ್ಗೆ ಮಾತನಾಡುವುದು ನೋಡಿದರೆ ಆಶ್ಚರ್ಯ ಆಗುತ್ತದೆ. ಪ್ರಮಾಣಗಳು ಕೂಡ ಅಧ್ಯಸದ ಅಂತರ್ಗತ. ಆದ್ದರಿಂದ ಅಧ್ಯಾಸಕ್ಕೆ ಪ್ರಮಾಣ ಕೊಡಲಾಗುವುದಿಲ್ಲ. ಸ್ವಯಂ ಸಂವೆದ್ಯ. ಆದ್ದರಿಂದ ಒಬ್ಬ ಕಟ್ಟಾ ಮೀಮಾಂಸಕ ಆ ಭಾಗ ಬರೆದಿದ್ದರೆ ಹಾಗೆಯೇ ಬರೆಯ ಬೇಕಿತ್ತು. ಇನ್ನು ಬೌದ್ಧರ ಪ್ರಭಾವ ಅಂತ ಕಿರುಚಿಕೊಳ್ಳುವವರೆಲ್ಲ ಬೌದ್ಧರ ಮೇಲೆ ಸನಾತನಿಗಳ ಪ್ರಭಾವದ ಬಗ್ಗೆ ಏಕೆ ಮಾತನ್ನು ಆಡುವುದಿಲ್ಲ. ಒಬ್ಬ ಮೂರ್ಖನಿಗೆ ಇನ್ನೊಬ್ಬ ಮೂರ್ಖ ಪ್ರಮಾಣ, ಇವರಿಬ್ಬರೂ ಇನ್ನೊಬ್ಬ ಮೂರ್ಖನಿಗೆ. ದೊಡ್ಡ ನಮಸ್ಕಾರ.

ಪ್ರತಿಕ್ರಿಯಿಸಿ