ವಿಭಿನ್ನ ಅರ್ಥಗಳನ್ನು ಕಟ್ಟಿ ಕೊಡುವ ‘ಅಸ್ಪೃಶ್ಯ ಗುಲಾಬಿ’ ಎಂಬ ನೋವಿಗದ್ದಿದ ಕುಂಚ

ಈ ವರುಷ ಅನಾವರಣಗೊಂಡ ಕವಿ, ಕಥೆಗಾರರಾಗಿ ಪರಿಚಿತರಾಗಿರುವ ವಿ.ಎಂ. ಮಂಜುನಾಥ್ ಅವರ ಕಾದಂಬರಿ ‘ಅಸ್ಪೃಶ್ಯ ಗುಲಾಬಿ’ ಓದುಗರ ಗಮನ ಸೆಳೆಯಿತು . ಋತುಮಾನಕ್ಕಾಗಿ ಎಂ . ಜವರಾಜು ಈ ಕೃತಿಯನ್ನು ವಿಮರ್ಶಿಸಿದ್ದಾರೆ .

ಒಂದು ಕತೆ ಒಂದು ಕಾದಂಬರಿ ಒಂದು ಕಾವ್ಯ- ಹೀಗೇ ಇರಬೇಕು ಎಂಬ ನಿಯಮಗಳಿವೆಯೇ? ಹೌದು, ಒಂದು ಕಾಲಘಟ್ಟದಲ್ಲಿ ಸಾಹಿತ್ಯ ರಚನೆ ಹೀಗೆ ಇದ್ದಿರಬಹುದು, ಇತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಸಾಹಿತ್ಯ ಓದುವ, ಬರೆಯುವ, ಸಂವಾದಿಸುವ, ಚಿಂತಿಸುವ, ಚಿತ್ರಿಸುವ ಮನಸ್ಸುಗಳು ಬದಲಾಗುತ್ತ ಹಳೆಯ ಅಥವಾ ಪುರಾತನ ಸಿದ್ಧ ಮಾದರಿಯ ಬರಹದ ದೃಷ್ಟಿಕೋನದ ಚೌಕಟ್ಟು ಬದಲಾಗುತ್ತ ಅದು ತನ್ನನ್ನು ತಾನು ನಿವಾಳಿಸಿಕೊಂಡು ಬಂದಂತೆ ಕಾಣುತ್ತದೆ, ಕಂಡಿದೆ.

ಪಿ.ಲಂಕೇಶ್, ‘ಪಾಪದ ಹೂವುಗಳು’ – ಪ್ರಕಟವಾದಾಗ, ಜನರ ಪ್ರತಿಕ್ರಿಯೆ ಕೂಡ ವಿಚಿತ್ರವಾಗಿತ್ತು. ಅನೇಕರಿಗೆ ಅದು ಅರ್ಥವಾಗಿರಲಿಲ್ಲ. ಹಲವರಿಗೆ ಅದು ಕೊಳಕು ಪುಸ್ತಕವಾಗಿ ಕಾಣಿಸಿತು. ಮತ್ತೆ ಕೆಲವರಿಗೆ ಅದು ಅಸಹಜವಾದ ಹುಂಬತನದ ಪುಸ್ತಕವಾಗಿ ಕಾಣಿಸಿತು.’ ಎಂದು ಚಾರ್ಲ್ಸ್ ಬೋದಿಲೇರನ ಕುತೂಹಲಕಾರಿ ‘ಲೆ ಫ್ಲೂರ್ ದು ಮಾಲ್’ ಅನುವಾದದಲ್ಲಿ ಗುರುತಿಸುತ್ತಾರೆ. ಹಾಗೆ, ‘ಬೋದಿಲೇರ್ ಒಂದು ಕೆಲಸವನ್ನು ಖಂಡಿತವಾಗಿ ಮಾಡಿದ್ದ. ಓದುಗರನ್ನು ಬೆಚ್ಚಿ ಬೀಳಿಸಿದ್ದ. ಯಾವನೇ ಲೇಖಕ ಓದುಗರನ್ನು ಬೆಚ್ಚಿ ಬೀಳಿಸದಿದ್ದರೆ ಎಂಥದನ್ನೂ ಹೇಳಲಾರ’ ಎಂಬ ಮಾತು ಎಷ್ಟು ಸತ್ಯವೋ ಅಷ್ಟೇ ಸತ್ಯವಾಗಿ ಮಂಜುನಾಥ್ ವಿ.ಎಂ‌. ಅವರ ‘ ಅಸ್ಪೃಶ್ಯ ಗುಲಾಬಿ’ ನಮ್ಮ ಒಳಹೊಕ್ಕು ಬೆಚ್ಚಿಸಿ ಬೆರಗು ಹುಟ್ಟಿಸುತ್ತದೆ. ಹಾಗು ಮಡಿವಂತಿಕೆ ಮನಸ್ಸಿನ ಶೀಲತೆಯ ಚೌಕಟ್ಟಿನೊಳಗಿನ ಸಂಪ್ರದಾಯ ಬದ್ಧ ಓದುಗ ಮಹಾಶಯರಿಗೆ ಅದೊಂದು ಕೊಳಕು ಪುಸ್ತಕವಾಗಿ ಕಂಡು ನಿರಂತರವಾಗಿ ಕಾಡುತ್ತದೆ.

ಮಂಜುನಾಥ್ ವಿ.ಎಂ. ಅವರ ‘ಅಸ್ಪೃಶ್ಯ ಗುಲಾಬಿ’ ಎಂಬುದೊಂದು ಕಾದಂಬರಿಯ ‘ನಳನಳಿಸುವ ಅಸ್ಪೃಶ್ಯ ಗುಲಾಬಿಯನ್ನ ಕೇಡಿಯೊಬ್ಬ ಮಾನಸಿಕವಾಗಿ ಸ್ಪರ್ಶಿಸಿ ಗೆದ್ದಿದ್ದ!’ ಎಂಬ ಕೊನೆಯ ಪುಟದ ಕೊನೇ ಸಾಲು ನೀಡಿದ ಒಳ ಗೂಢಾರ್ಥಕ್ಕಿಂತ ‘ ಮಳೆ ಬಿಟ್ಟು ನಿಂತು ಹೋಗಿದೆ ಎನಿಸಿದರೂ ಹನಿಗಳು ಜಿನು ಜಿನುಗುತ್ತಿದ್ದವು’ ಎಂಬ ಕಾದಂಬರಿಯ ಮೊದಲ ಪುಟದ ಮೊದಲ ಸಾಲು ನೀಡುವ, ನಿಖರವಾಗಿ ಅಷ್ಟೇ ತೀಕ್ಷ್ಣವಾಗಿ ಹೊಮ್ಮುವ ಜೀವಂತ ಧಾರುಣತೆಯನ್ನು ಸೂಚಿಸುತ್ತ ಸಾಗುತ್ತದೆ.

ಜಿ.ಎಚ್.ನಾಯಕ್, ದೇವನೂರರ ‘ ಕುಸುಮ ಬಾಲೆ’ ಬಗ್ಗೆ, ‘ಕಾದಂಬರಿಯೊಳಗಿನ ವಿವರಗಳನ್ನು ಹಿಡಿದಿಡುವ ಕೇಂದ್ರ ಮೊದಲ ಓದಿಗೆ ದಕ್ಕಲಿಲ್ಲ. ಅಥವಾ ನಮ್ಮ ವಿಮರ್ಶೆಯ ಮಾನದಂಡಗಳನ್ನೆ ಪರಿಶೀಲಿಸಬೇಕೋ ಏನೋ..’ ಎಂದು ಹೇಳುವಷ್ಟು ಮಂಜುನಾಥ್ ವಿ.ಎಂ. ಅವರ ‘ಅಸ್ಪೃಶ್ಯ ಗುಲಾಬಿ’ ಕ್ಲಿಷ್ಟಕರವಾಗಿಲ್ಲ. ಬದಲಿಗೆ ಗಾಢ ವಿವರಗಳುಳ್ಳ ದಟ್ಟ ಅನುಭವದ ಒಂದೇ ಗುಕ್ಕಿಗೆ ಓದಿಸಿಕೊಂಡು ಹೋಗುವ, ಜತೆಗೆ ಕೊನೆಯವರೆಗೂ ಕುತೂಹಲ ಹುಟ್ಟಿಸುವ ಕಾದಂಬರಿ.

‘ ಅಸ್ಪೃಶ್ಯ ಗುಲಾಬಿ’ ಕೇಂದ್ರ ಬಿಂದುವೇ ದೀಪಾ. ಆ ದೀಪದ ಸುತ್ತ ಜರುಗುವ ಕ್ರಿಯೆ ಪ್ರಕ್ರಿಯೆಗಳೇ ಕಾದಂಬರಿಯೊಳಗಿನ ನಗ್ನ ವಿವರಗಳು. ಆ ವಿವರಗಳ ನಿರೂಪಣಾ ವಿಧಾನವೇ ಮಂಜುನಾಥ್ ವಿ.ಎಂ. ಅವರ ಕಥನ ಶೈಲಿಯ ತಂತ್ರಗಾರಿಕೆ. ಆ ತಂತ್ರಗಾರಿಕೆ ಕಲಾತ್ಮಕ ರೂಪದಲ್ಲಿ ಮೂಡಿ ಬಂದಿರುವ ಒಂದು ಹೊಸ ಬಗೆಯ ಸೃಜನಶೀಲ ನೈಪುಣ್ಯ ಅನ್ನಬಹುದು.

ಈ ಕಾದಂಬರಿಯಲ್ಲಿ ಹತ್ತಾರು ಜನವಾಸಿ ಜೀವನ ಪದ್ಧತಿ ಇದೆ. ಅವರು ಅನಿವಾರ್ಯವೋ ಆಕಸ್ಮಿಕವೋ ವೃತ್ತಿಪರವೋ ಎನುವಂತೆ ತಮ್ಮದೇ ಆದ ಕಸುಬುಗಳಲ್ಲಿ ತೊಡಗಿದ್ದಾರೆ. ಅಂತೆಯೇ ಇಲ್ಲೊಂದು ಊರಿದೆ. ಅದು ಕೇರಿಯೂ ಹೌದು. ಈ ಕೇರಿಯ ಪ್ರತಿ ಮನೆ ಮನೆಯ ಸೂರಿನಲು, ಪ್ರತಿ ಬೀದಿ ಬೀದಿಯ ಮೋರಿಯಲು, ಸಾವಕಾಶವಾಗಿ ತೆರೆದುಕೊಂಡಿರುವ ಗಲ್ಲಿ ಗಲ್ಲಿಯಲು ನೋವಿಗದ್ದಿದ ನೂರಾರು ಕತೆಗಳಿವೆ. ಅದರಲ್ಲೊಂದು ಕುಟುಂಬ. ಆ ಕುಟುಂಬದ ದೀಪಾ ಕ್ಯಾಂಡಿ ಮಾರುವ ಹೆಣ್ಣು. ಹೆಸರಿಗಷ್ಟೆ ಕ್ಯಾಂಡಿ ಮಾರಾಟ. ಅದರೊಂದಿಗೆ ತಗಲುವಂತೆ ಪೊಲೀಸ್ ನ್ಯೂಸ್ ನಂಥ ಪೇಪರ್, ಹಸಿಹಸಿಯಾದ ಹೆಣ್ಣಿನ ನಗ್ನ ಚಿತ್ರಗಳು, ಸಂಭೋಗ ದೃಶ್ಯಗಳು, ಉದ್ರೇಕಕಾರಿ ಬರಹವಿರುವ ಸೆಕ್ಸ್ ಪುಸ್ತಕವನ್ನು ಮಾರಾಟ ಮಾಡಿ ಕಾಸು ಮಾಡುವ ಹೆಣ್ಣು. ಆ ಪುಸ್ತಕ ಮಾರುವಾಗ ಅದೇ ವರ್ಗದ ಗಿರಾಕಿಗಳನ್ನು‌ ಸೆಳೆಯುವ ತಂತ್ರಗಾರಿಕೆಯೂ ಅವಳಲ್ಲಿದೆ. ಅದು ಅವಳಿಗೆ ಸಿದ್ದಿಸಿದಂತೆಯೂ ಇದೆ. ‘ ಅಣ್ಣೊ ನೋಡು ಹೆಂಗಿದೆ ಫೋಸು. ಸಕತ್ತಾಗಿದೆ ತಗೊ ಓದಿ ಮಜಾ ಮಾಡು’ ಎಂದು ಅವರ ಮುಖದ ಮುಂದೆ ತೂರಿಸಿ ಉದ್ರೇಕ ಉಕ್ಕಿಸುವ ಮಾತು ಅವಳ ಬಾಯಲ್ಲಿ.

ಹಾಗೆ, ಅವಳಿಗೊಬ್ಬ ಮುಸ್ಲಿಂ ಸಮುದಾಯದ ಯುವಕ ಚಾಂದ್ ಎನುವ ಪ್ರೇಮಿ. ಅವರ ಪ್ರೇಮ ಎಂಥದು..? ಅವನು ಅವಳಿರುವಲ್ಲೆ ತನ್ನ ಗಾಡಿ ಸೈಡಿಗಾಕಿ ನಗಾಡುತ್ತ ಮಾತಾಡುತ್ತ ಕಿಚಾಯಿಸುತ್ತ ತನ್ನ ಪ್ಯಾಂಟ್ ಜಿಪ್ ಊರಿ ಶಿಶ್ನ ಹೊರ ತೆಗೆದು ಉಚ್ಚೆ ಉಯ್ಯುವಷ್ಟು! ಅವಳೋ ‘ಅದನ್ನು’ ನೋಡುತ್ತ ಥೂ.. ಎಂದು ಛೇಡಿಸುತ್ತ ಒಳಗೊಳಗೆ ವಿಕೃತ ಖುಷಿ ಒಡುವ ಹೆಣ್ಣು; ಅದೇ ಮಗ್ಗುಲಿಗೆ, ಸುಮ್ಮನೆ ಒಂದೇ ಸಮನೆ ಬೀಳುವ ಥಂಡಿ ಥಂಡಿ ಮಳೆಯಲ್ಲು ಅವಳನ್ನು ಬರಸೆಳೆದು ‘ ಒಪ್ಪಿತ’ ಕಾಮತೃಷೆ ತೀರಿಸಿಕೊಂಡು ಮೈ ಬೆಚ್ಚಗಾಗಿಸಿ ಸುಖಿಸಿ ಏನು ನಡೆದೇ ಇಲ್ಲವೇನೋ ಎನುವಂತೆ ತಮ್ಮ ತಮ್ಮ ದಾರಿಗಳತ್ತ ಹೆಜ್ಜೆ ಹಾಕುವಂಥ ಹಸಿಹಸಿಯಾದ ತಳುಕು ಬಳುಕಿದೆ. ಅಂಥ ತಳುಕು ಬಳುಕು ಕೇವಲ ಕಾಮತೃಷೆಗಷ್ಟೇ ಅಂದರೆ ‘ ಅಸ್ಪೃಶ್ಯ ಗುಲಾಬಿ’ ಅರ್ಥಹೀನವಾಗುತ್ತದೆ; ಅದು ಕಾದಂಬರಿ ಉದ್ದಕ್ಜು ಅನಿವಾರ್ಯವೆಂಬಂತೆ ಸಂದರ್ಭ ಸನ್ನಿವೇಶಕ್ಕನುಗುಣವಾಗಿ ಬಹುಮುಖ್ಯ ಧಾರೆಯಲ್ಲಿ
‘ಹೊಟ್ಟೆಪಾಡಿಗಾಗಿ’ ಚಾಂದ್ ನನ್ನು ದಾಟಿ ರೂಢಿಸಿಕೊಂಡಂತೆ ಇಡೀ ಕಾದಂಬರಿ ಆವರಿಸಿದೆ.

ಮಂಜುನಾಥ್ ವಿ.ಎಂ. ‘ಅಸ್ಪೃಶ್ಯ ಗುಲಾಬಿ’ ಉದ್ದಕ್ಕು ಇಂಥದ್ದನ್ನು ಹೇಳುವಾಗ ಅಥವಾ ಇಂಥ ಪಾತ್ರವನ್ನು ನಿರೂಪಿಸುವ ರೀತಿಯೇ ಓದುಗನನ್ನು ಜೋಪಾನವಾಗಿ ಕಾದಂಬರಿಯೊಳಕ್ಕೆ ಪ್ರವೇಶಿಸುವಂತೆ ಪ್ರೇರೇಪಿಸಿ, ಪ್ರವೇಶದ ನಂತರದ ಒಳ ಚಿತ್ರಣ ನಮಗರಿವಿಲ್ಲದೆಯೇ ಆವರಿಸುತ್ತ ನಿಬ್ಬೆರಗಾಗಿಸುವಂಥ ಕುಶಲ ಕಲೆಗಾರಿಕೆಯ ಆವರಣ ಸೃಷ್ಟಿಸಿ ಕಾದಂಬರಿಗೆ ಒಂದು ಹದವಾದ ಚೌಕಟ್ಟು ಕಟ್ಟಿ ಕೊಟ್ಟಿದ್ದಾರೆ.

‘ಅಸ್ಪೃಶ್ಯ ಗುಲಾಬಿಯ’ ದೀಪಾಳಿಗೆ ವಸಂತ ಎನುವ ತಂಗಿಯೂ ಇದ್ದಾಳೆ. ಅವಳು ಕಾದಂಬರಿಯುದ್ದಕ್ಕು ಅಚ್ಚುಕಟ್ಟಾಗಿರುವಂತೆ ಕಂಡರು ವರಸೆಗೆ ಬಿಟ್ಟರೆ, ದೀಪಾಳನ್ನು ಮೀರಿಸುವ ವರ್ಚಸ್ಸಿನ ಹೆಣ್ಣು. ಇದು ಕಾದಂಬರಿಯೊಳಗೆ ತೆರೆಯ ಹಿನ್ನೆಲೆಯಾಗಿ ದೀಪಾಳ ಪ್ರೇಮಿ ಚಾಂದ್ ನ ಮನಸ್ಸನ್ನು ಆಗಾಗ ಮನಸೋ ಇಚ್ಚೆ ಆವರಿಸಿ ವಿಚಲಿತಗೊಳಿಸಿ ಮಂಕು ಬರಿಸಿ ಹಾಗೆ ಹೆಪ್ಪುಗಟ್ಟುವಂತೆ.

ದೀಪಾ ತನ್ನ ‘ ಹೊರಗಿನ’ ಕೆಲಸದ ಒತ್ತಡಕ್ಕೊ ತನ್ನಂತೆ ಥೇಟು ‘ಅದೇ’ ಆಗಿರುವ ತನ್ನ ತಾಯಿ ಸುಗುಣಳ ರೇಗಾಟ ಕೂಗಾಟಕ್ಕೊ ಅಥವಾ ನಯಾ ಪೈಸಾ ಸಂಪಾದನೆ ಮಾಡದ, ಕೆಮ್ಮುತ್ತ ಕ್ಯಾಕರಿಸುತ್ತ ಸಿಕ್ಕರೆ ಕಿಲೋಗಟ್ಟಲೆ ಮೀನು ಬಾಡು ತಿನ್ನುತ್ತ ಕುಡಿಯುತ್ತ ಬೀಡಿ ಸೇದುತ್ತ ಕುಂತೋ ನಿಂತೋ ಮಗ್ಗುಲು ಬದಲಿಸುತ್ತಲೋ ಪದೇ ಪದೇ ಕೈಯೊಡ್ಡಿ ಗೋಳು ಉಯ್ದುಕೊಳ್ಳುವ ಅಪ್ಪ ಜಮಾಲನ ಮೇಲಿನ‌ ಮಾಮೂಲಿ ಸಿಟ್ಟಿಗೋ ಈಡಾಗುತ್ತ ಎಲ್ಲವನ್ನು ಸಮಚಿತ್ತದಿಂದ ಸ್ವೀಕರಿಸುವವಳು.

ಈ ರೀತಿಯಾಗಿ ಒಂದಿಡೀ ಕುಟುಂಬ ಪದೇ ಪದೇ ಮನೆ ಮತ್ತು ಮನಸ್ಸಿನ ವ್ಯಾವಹಾರಿಕ ಕಲಹದ ಕೆಸರಿನಲ್ಲಿ ಮುಳುಗೇಳುತ್ತ ಸಾವಕಾಶವಾಗಿ ದಡಕ್ಕೆ ಬಂದು ತಮ್ಮ ಮೈಗಂಟಿದ ಕೆಸರು ಒದರುವ ಕ್ರಿಯೆ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತ ಹಾಗೆ ಸಡಿಲವಾಗುತ್ತ ಒಟ್ಟು ಚಿತ್ರಣ ಒಂದು ಕ್ಯಾನ್ವಾಸ್ ನಂತೆ ಕಣ್ಣ ಮುಂದೆ ನಿಗಿನಿಗಿ ನಿಲ್ಲುತ್ತ ‘ ಅಸ್ಪೃಶ್ಯ ಗುಲಾಬಿ’ ಯು ತನ್ನ ವ್ಯಾಪ್ತಿಯನ್ನು ಮೀರಿ ಖಾಸಗೀತನಗಳನ್ನ ಎದೆಯ ಒಲವನ್ನ ಅಷ್ಟೆ ಪಾರದರ್ಶಕವಾಗಿ ತೆರೆದಿಡುತ್ತದೆ.

‘ಅಸ್ಪೃಶ್ಯ ಗುಲಾಬಿ’ ಕೆಲ ನೈಜ ಸತ್ಯಗಳನ್ನು ಹೊರ ಹಾಕುತ್ತದೆ. ಆ ಸತ್ಯ ಯಾವ ರೂಪದಲ್ಲಾದರು ಪ್ರಕಟಗೊಳ್ಳಬಹುದು. ಅದು ಕಾದಂಬರಿಕಾರನ ಕಸುಬುಗಾರಿಕೆಗೆ ಸಾಕ್ಷೀಕರಿಸುತ್ತದೆ. ಇಲ್ಲಿ ದೀಪಾ
‘ಹೊಟ್ಟೆಪಾಡಿನ ವ್ಯವಹಾರ’- ರೈಲ್ವೆ ಹಳಿ, ರೈಲ್ವೆ ಸ್ಟೇಷನ್, ಮೋಟಾರ್ ಬೈಕ್ ರೇಸ್ ಪ್ಲೇಸ್, ಸೈನಿಕ ತರಬೇತಿ ಕ್ಯಾಂಪಸ್, ಕಬ್ಬನ್ ಪಾರ್ಕ್, ವಿಧಾನಸೌಧ, ಹೈಕೋರ್ಟ್ ಹೊರ ಆವರಣ, ಗಾಂಧೀ ನಗರ, ಶಿವಾಜಿ ನಗರ, ಎಂ.ಜಿ.ರಸ್ತೆ, ಅಗಾಧ ವಾಣಿಜ್ಯ ವ್ಯವಹಾರ ಕೇಂದ್ರ ಅವಿನ್ಯೂ ರೋಡ್ ಗಳಲ್ಲಿ ಹಾಸು ಹೊಕ್ಕಾಗಿ ವಿಸ್ತಾರವಾಗುತ್ತ ಭಿನ್ನ ಬಗೆಯ ಮನಸ್ಸುಗಳೊಂದಿಗೆ ವ್ಯವಹರಿಸುವ ಚಿತ್ರಣದೊಂದಿಗೆ ಕತೆ ಒಂದು ಮಗ್ಗುಲಿಗೆ ತೆರೆದುಕೊಳ್ಳುತ್ತದೆ.

ಅದು ನಿಕೃಷ್ಟ ದಲಿತ ಬದುಕಿನ ಕ್ಲಿಷ್ಟತೆಯನ್ನು ‘ ಅಸ್ಪೃಶ್ಯ ಗುಲಾಬಿ’ ಯಲ್ಲಿ ಬರುವ ದಲಿತ ಹೋರಾಟ ಸಂಘಟಕನ ಮುಖೇನ ಪ್ರವೇಶವಾಗುತ್ತದೆ. ಆ ಪ್ರವೇಶ ಒಂದು ಮಹತ್ತರ ತಿರುವಿನಂತಿರುವ ಚೈನಾರಮ್-ದೀಪಾಳ ಸಂಗಮಿಸುವಿಕೆ. ದಲಿತ ಸಂಘಟನೆ, ದಲಿತ ಚಿಂತನೆ, ದಲಿತ ಹೋರಾಟದ ಬಗೆಬಗೆಯ ನಾಯಕರನ್ನು ವಾಸ್ತವದಲ್ಲಿ ಅವರ ನಿಜ ಅಂತರಂಗವನ್ನು ಪ್ರವೇಶಿಸಿ ಪ್ರಶ್ನಿಸುತ್ತ ಕೆಣಕುತ್ತ ನ್ಯಾಯದ ಪರಾಮರ್ಶೆಗೆ ತಂದು ನಿಲ್ಲಿಸುವ ಕಾದಂಬರಿಕಾರರು , ತಮ್ಮ ಇನ್ನೊಂದು ಮಗ್ಗುಲನ್ನು ಬಿಚ್ಚಿಡುತ್ತಾರೆ.

ಕಾದಂಬರಿಯಲ್ಲಿ ಬರುವ ಆ ಮಗ್ಗುಲು ವಾಸ್ತವದಲ್ಲಿ ಸತ್ಯದಂತೆ ಕಾಣುತ್ತದೆ. ಅಲ್ಲಿ ಏನೊಂದೂ ಗೊತ್ತಿಲ್ಲದ ತನ್ನ ಪೂರ್ವಿಕರು ಹಾಕಿಕೊಟ್ಟ ನ್ಯಾಯದ ಮಾರ್ಗದಲ್ಲಿ (ಇತಿಹಾಸದ ದಾರಿಯುದ್ದಕ್ಕು ಅಸಹನೆಗೆ ಕಾರಣವಾಗಿಯೂ) ಬದುಕು ರೂಪಿಸಿಕೊಂಡು ‘ನಾವೆಲ್ಲ ಒಂದು’ (ಕೆಳಗಿನವರು- ಮುಟ್ಟಿಸಿಕೊಳ್ಳದವರು-ಅಸ್ಪೃಶ್ಯರು)
ಎಂಬಂತಿದ್ದ ಮುಗ್ಧ ದಲಿತ ಜನ ಸಮೂಹವನ್ನು ಮೇಲ್ವರ್ಗದ ಸಂಘಟಿತ (ಮೇಲ್ಜಾತಿ ಮೋಹಿತ ವ್ಯಾವಹಾರಿಕ ಮನಸ್ಸುಗಳು) ಮನಸ್ಸುಗಳು ಟೋಪಿವಾಲನ ರೂಪದಲ್ಲಿ ಪ್ರತ್ಯಕ್ಷವಾಗುತ್ತವೆ.

ಅನೇಕ ಕನಸು ಹೊತ್ತು ಸಿನಿಮಾ ಎಂಬ ಮಾಯಾ ತೆರೆಯ ಮೇಲೆ ಮಿಂಚುವ ಭರವಸೆಯಲ್ಲಿ ‘ ನೀವು ಎತ್ತಿ ತೋರಿಸಬೇಕು’ ಎಂದು ಹೇಳುವ ಟೋಪಿವಾಲನ ಮುಂದೆ ದೀಪಾ, ಪೂಮಣಿ, ಅಂಬಿಕಾ ಎಂಬ ‘‌ಕಷ್ಟಸುಖ’ಗಳಿಗೆ ಭಾಗೀದಾರರಾಗುವ ‘ ವೃತ್ತಿಪರ’ ಗೆಳತಿಯರು ಅವನ ಮುಂದೆ ಬಂದಾಗ ಎದುರಾಗುವ ಪ್ರಶ್ನೆ ‘ ನೀವೆಲ್ಲ ಯಾವ ಜಾತಿಯೋರು?’ ಎಂಬುದು. ಧುತ್ತನೆ ಎರಗಿದ ಪ್ರಶ್ನೆಗೆ ಅಷ್ಟೇ ತೀಕ್ಷ್ಣವಾಗಿ ‘ ಏಕೆ ಜನ’ ಎಂಬ ಉತ್ತರ. ಈ ಮೂವರಲ್ಲಿ ಯಾರು ಹೇಳಿದರೆಂಬುದು ಅವನಿಗೆ ಗೊತ್ತಾಗಲಿಲ್ಲ.
‘ಅದರಲ್ಲಿ ಯಾವ್ದು?’ ಪ್ರಶ್ನೆಗೆ ಗೊಂದಲಕ್ಕೀಡಾದರು. ಬಿರುಗಾಳಿಯಂತೆ ‘ ಎಡಾನೋ ಬಲಾನೋ?’ ಅವನೇ ಆಯ್ಕೆಗಳನ್ನು ಕೊಟ್ಟ. ಅವರ ಉತ್ತರ ‘ ಅದೇನೋ ಗೊತ್ತಿಲ್ಲ ಸರ್..? ಉತ್ತರಕ್ಕೆ ಮತ್ತೆ ಪ್ರಶ್ನೆ ‘ಹೊಲೇರೋ ಮಾದಿಗ್ರೋ?’ ಮಿಕಿ ಮಿಕಿ ಕಣ್ಣು ಮಿಟುಕಿಸುತ್ತ ‘ ಇವ್ಳು ಆದಿ ದ್ರಾವಿಡ, ಇವ್ಳು ಆದಿ ಕರ್ನಾಟಕ, ನಾನು ಆದಿ ದ್ರಾವಿಡ’
ಈ ಉತ್ತರದಿಂದ ಯಾವ್ಯಾವ ಪಂಗಡ ಅನ್ನೋದು ಗೊತ್ತಾಗದೆ ತಲೆ ಕೆರೆದುಕೊಳ್ಳುವ ಟೋಪಿವಾಲ ಕ್ಯಾಮರಾ ಕಡೆ ತಿರುಗುವನು.

ಕಾದಂಬರಿಯಲ್ಲಿ ಇದೊಂದು ಗಂಭೀರ ಸನ್ನಿವೇಶ. ಪ್ರಸ್ತುತ ದಲಿತ ಎಡ-ಬಲ ಸಂಘರ್ಷ ತೀರ್ವಗೊಂಡಿದೆ. ಅದುವರೆವಿಗೂ ಒಂದಾಗಿದ್ದ ದಲಿತ ಸಮೂಹ ಛಿದ್ರಗೊಳ್ಳಲು ಕಾರಣವೇನು? ಸಂಘಟಿತ ಸಮಾಜ ವಿಘಟನೆಯತ್ತ ಹೆಜ್ಜೆ ಇರಿಸಿದ್ದು ಹೇಗೆ? ಎಂಬ ಸೂಕ್ಷ್ಮತೆಯನ್ನು, ನಿಜಾರ್ಥದಲ್ಲಿ ದಸಂಸ ಒಡಲೊಳಗಿನ ಒಳ ಮರ್ಮವನ್ನು ಪ್ರಶ್ನಿಸುವ ಎದೆಗಾರಿಕೆಯನ್ನು ಕಾದಂಬರಿಕಾರರು ಅನಾವರಣಗೊಳಿಸಿಕೊಂಡಿರುವುದು ಕಾಣುತ್ತದೆ.

ಕಾದಂಬರಿ ‘ಅಸ್ಪೃಶ್ಯ ಗುಲಾಬಿ’ ಯಲ್ಲಿ ಪ್ರಧಾನವಾಗಿ ಕಾಣುವ ದೀಪಾ ಎಲ್ಲವನ್ನು ದಾಟಿ ‘ಗುರುತು ಕಾಣದಾಗೆ’ ಬೆಳೆವ ಅವಳ ವೇಗ, ಅಪ್ಪ ಜಮಾಲ ಸತ್ತ ವಿಚಾರ ಗೊತ್ತಾಗದಷ್ಟು! ಗೊತ್ತಾದರು ಸಹ, ಅದು ತನ್ನದಲ್ಲದ ವಿಚಾರ ಅಂದುಕೊಳ್ಳುವುದು; ಹಾಗೇ ಆ ವಿಚಾರವನ್ನೆ ಮರೆಸಿ ಮಾತಿನ ಧಾಟಿ ಬದಲಿಸುವುದು; ಆನಂತರದ ಚಿತ್ರಣ ಸುಗುಣ. ಆಗಲೇ ಎಲ್ಲವೂ ಆಗಿ ಹೋಗಿದ್ದ ತಾಯಿ ಸುಗುಣ, ತೆರೆಮರೆಯಲ್ಲಿನ ಆಟ ಈಗದು ತನ್ನ ಸೂರಿನಲ್ಲೆ ಬಹಿರಂಗ ಲಜ್ಜೆತನ! ಈ ರೀತಿಯಿಂದ ಹೆತ್ತವಳು ಎಂಬುದೇ ಇಲ್ಲಿ ತೃಣವಾಗಿ ದೀಪಾಳ ನಿರ್ಧಾರ ಗಟ್ಟಿಯಾಗುತ್ತದೆ. ತನ್ನ ವಾಸದ ಬೆಂಗಳೂರಿನಲ್ಲಿನ ರೂಮಿಗೆ ಕರೆ ತಂದು ಗೆಳತಿಯರಿಬ್ಬರಿಗೆ ಪರಿಚಯಿಸುವ ‘ಹೊಟ್ಟೆಪಾಡಿನ ನೈಜಸ್ಥಿತಿ’ ಯಾವ ತರದ್ದು ಎಂದರೆ ‘ಇವಳು ನಮ್ಮೂರಿನವಳು ನನ್ನ ಗೆಳತಿ ಸುಗುಣ’ ಎನ್ನುವಷ್ಟರ ಮಟ್ಟಿಗೆ! ದೀಪಾ ತನ್ನ ತಾಯಿಯನ್ನು ಅನಿವಾರ್ಯವೆಂಬಂತೆ ಗೆಳತಿಯ ರೂಪದಲ್ಲಿ ‘ದಂಧೆಗೆ’ ದೂಡುವ ಪ್ರಸಂಗ, ಇದು ಒಂದು ಕ್ಷಣ ಓದುಗನನ್ನು ದಂಗು ಬಡಿಸುತ್ತದೆ.

ಶಿವರಾಮ ಕಾರಂತರ ‘ ಮೈಮನಗಳ ಸುಳಿಯಲ್ಲಿ’ ನ ‘ಮಂಜುಳೆಯ ಕುಲದ ಇತಿಹಾಸ ಹತ್ತೆಂಟು ತಲೆಮಾರುಗಳದ್ದಾದರು ಇರಬೇಕು. ಅವಳ ಮೊದಲನೆ ಹಿರಿಯೆ ವೇಶ್ಯಾವೃತ್ತಿಗೆ ಯಾವುದೋ ಅನಿವಾರ್ಯದಿಂದ ತೇಲಿ ಬಂದವರಿರಬೇಕು..’ ಎಂಬ ಮಂಜುಳೆಯ ಪೂರ್ವಿಕರ ವೇಶ್ಯವೃತ್ತಿ ಬಗೆಗೆ ಕೆದಕಿ ಕೆಡವಿ ಪರಾಮರ್ಶಿಸುವಂತೆ ‘ಅಸ್ಪೃಶ್ಯ ಗುಲಾಬಿ’ ಯಲ್ಲಿ ದೀಪಾ ಅಥವ ಸುಗುಣಳ‌ ಪೂರ್ವಿಕರ ವೇಶ್ಯಾವೃತ್ತಿ ಪರಾಮರ್ಶೆ ವಿಚಾರ ಬರುವುದೇ ಇಲ್ಲ.

ಆದರೆ ಕಾರಂತರ ‘ ಮೈಮನಗಳ ಸುಳಿಯಲ್ಲಿ’ ನ
‘ಹೊಟ್ಟೆಯ ಪಾಡು ಅದಕ್ಕೆ ಕಾರಣವಾಗಿರಲೂಬಹುದು. ಅಂತೂ ಅವರದ್ದು ಅದಕ್ಕೆ ತೆರೆದ ಜೀವನ; ಅಂಥ ಬದುಕಿನಲ್ಲಿ ಸುಪ್ತ ಆಸೆಗಳು, ಬಯಕೆಗಳು, ಬಿನ್ನಾಣಗಳು, ವಿರಕ್ತಿ, ಅನುರಕ್ತಿಗಳು ಇದ್ದಿರಲೂಬಹುದು..’ ಎನ್ನುವ ಇಲ್ಲಿ ‘ಅದಕ್ಕೆ’ ಪ್ರಧಾನ ಒತ್ತಾಸೆಯಾಗಿ, ಒಟ್ಟಾರ್ಥವನ್ನು ಗ್ರಹಿಸುವುದಾದರೆ ‘ಅಸ್ಪೃಶ್ಯ ಗುಲಾಬಿ’ಯು ‘ಮೈಮನಗಳ ಸುಳಿಯಲ್ಲಿ’ ಯನ್ನು ಹೊದ್ದು ಮಲಗಿದೆಯೇನೋ ಎನ್ನುವಷ್ಟು ಸನ್ನಿವೇಶಗಳು ಸಾಕಷ್ಟು ಸಾಮ್ಯತೆ ಹೊಂದಿವೆ ಎನಿಸುತ್ತದೆ. ಹಾಗೆ ‘ ಮೈಮನಗಳ ಸುಳಿಯಲ್ಲಿ’ ನ ಮಂಜುಳೆ, ಕಪಿಲೆ, ಶಾರಿ ಅರ್ಥಾತ್ ಶಾರಿಕೆ, ಪಾತ್ರಗಳಂತೆ ‘ಅಸ್ಪೃಶ್ಯ ಗುಲಾಬಿ’ ಯ ಪಾತ್ರಗಳು ಒಂದು ರೀತಿಯ ಪ್ರಜ್ಞಾಪೂರ್ವ ತಂತ್ರದಲ್ಲಿ ಚಿತ್ರಿತವಾಗಿವೆ ಚಂದ್ರಿಯನ್ನು ಹೊರತುಪಡಿಸಿ.

ಈ ‘ಅಸ್ಪೃಶ್ಯ ಗುಲಾಬಿ’ ಒಂದೆಡೆ ತಣ್ಣನೆ ಗಾಳಿಯಂತೆ; ಮತ್ತೊಂದೆಡೆ ಬೆಚ್ಚನೆಯ ಹೊದಿಕೆಯಂತೆ; ಇನ್ನೊಂದೆಡೆ ಮುಂಗಾರು ಮಳೆಯಂತೆ;ಮಗದೊಂದೆಡೆ ಸುಯ್ಯನೆ ಎರಗುವ ಸುಂಟರಗಾಳಿಯಂತೆ; ಆವರಿಸಿದಂತೆಲ್ಲ- ತನ್ನ ಮೂವತ್ತೇಳನೇ ವಸಂತಗಳಲ್ಲಿ ಎಪ್ಪತ್ತೇಳು ವಸಂತ ದಾಟಿದವನಂತೆ ಕಾಣುತ್ತ, ತನ್ನ ಜೀವನದುದ್ದಕ್ಕು ‘ತೃಪ್ತಿ’ ಅರಸಿ ಹೋದವನಂತೆ ‘ ಸುಖದ ಸಖ್ಯ’ ಜೊತೆಗಿನ ಆಟದಲ್ಲಿ ನೋವಿಗದ್ದಿದ ಕುಂಚದಂತಾದ ಡಚ್ ಕಲಾವಿದ
ವ್ಯಾನ್ ಗೋ ನ ಧಾರುಣ ಚಿತ್ರ ಓದುಗನ ಕಣ್ಮಂದೆ ಬರುತ್ತದೆ.

ಹೀಗೆ, ವಿ.ಎಂ. ಚಿತ್ರಿಸುವ ಸನ್ನಿವೇಶಗಳ ಪಾತ್ರಗಳು ಕೊನೆಯಲ್ಲಿ ಧಾರುಣ ಅಂತ್ಯದ ಒತ್ತೊತ್ತಿಗೆ ಸರಿದಂತೆ- ಕಾಡುವ ಒಂದು ಪಾತ್ರ ವಸಂತ. ಅವಳೊಮ್ಮೆ ಸ್ಪರ್ಶಿಸಿ ಹಾಗೇ ಕಣ್ಮುಂದೆ ಹಾದು ಹೋದಂತಾಗುತ್ತದೆ. ಮತ್ತೆ, ‘ನಳನಳಿಸುವ ಅಸ್ಪೃಶ್ಯ ಗುಲಾಬಿಯನ್ನು ಕೇಡಿಯೊಬ್ಬ ಮಾನಸಿಕವಾಗಿ ಗೆದ್ದಿದ್ದ!’ ಎಂಬುದರೊಂದಿಗೆ ಕಾದಂಬರಿ ಅಂತ್ಯ ಕಾಣುವಾಗ ಅನೇಕ‌ ಅರ್ಥಗಳು ಹುಟ್ಟಿಕೊಳ್ಳುತ್ತವೆ. ಇಲ್ಲಿ ಮತ್ತೆ ನಮಗೆ ನೆನಪಾಗುವುದು ಚಾರ್ಲ್ಸ್ ಬೋದಿಲೇರನ ‘ಈ ಜಗತ್ತಿನಲ್ಲಿ ದೇವರಿರುವುದಾದರೆ ಅದು ಸೂಳೆಯ ಚಂಚಲತೆಯಲ್ಲಿ ಹೂವಿನ ಪರಿಮಳದಲ್ಲಿ…’ ಎನ್ನುವುದು.
*

One comment to “ವಿಭಿನ್ನ ಅರ್ಥಗಳನ್ನು ಕಟ್ಟಿ ಕೊಡುವ ‘ಅಸ್ಪೃಶ್ಯ ಗುಲಾಬಿ’ ಎಂಬ ನೋವಿಗದ್ದಿದ ಕುಂಚ”
  1. ಪುಸ್ತಕ ಪರಿಚಯ ಬಹಳ ಇಷ್ಟವಾಯತು, ಕಾದಂಬರಿ ಓದಲೇಬೇಕು

ಪ್ರತಿಕ್ರಿಯಿಸಿ