ಕನ್ನಡ ವಿಮರ್ಶಾ ಸಾಹಿತ್ಯದ ಇತ್ತೀಚಿನ ಒಲವುಗಳು

ಕನ್ನಡದ ವಿಮರ್ಶೆ ನಿಜಕ್ಕೂ ಒಂದು ಮಹತ್ವದ ಕಾಲಘಟ್ಟಕ್ಕೆ ಬಂದು ತಲುಪಿದೆ. ಯಾವ ಒಂದು ಸಾಹಿತ್ಯಿಕ ಸಂದರ್ಭದಲ್ಲಿ ಒಂದು ನಿಶ್ಚಿತ ಧೋರಣೆಯನ್ನು, ಮನಸ್ಥಿತಿಯನ್ನು ಗುರುತಿಸಲು ಸಾಧ್ಯವಿಲ್ಲವೋ ಅಂತಹುದೊಂದು ನೆಲೆಗಟ್ಟು ಯಾವುದೇ ಹಣೆಪಟ್ಟಿಯಿಲ್ಲದ – ಸ್ವಾಯತ್ತತೆಯನ್ನ, ಮುಕ್ತತೆಯ ಅರಾಜಕತೆಯನ್ನ, ಅತೀ ಸ್ವಾತಂತ್ರ್ಯದ ಎಚ್ಚರದ ನಡೆಯನ್ನ ಹೊಂದಿರುತ್ತದೆ. ಅಂತಹ ನೆಲೆಯನ್ನು ಏನೆಂದು ಹೆಸರಿಸಬಹುದು? ಏನೆಂದು ಗುರುತಿಸುವುದು? ಕೆಲವರು ನವ್ಯೋತ್ತರ, ಬಂಡಾಯೋತ್ತರ ಎಂದರೆ ಇನ್ನೂ ಹಲವರು ಕಲಾ ವಿಮರ್ಶೆಯ ಪರಿಭಾಷೆಯನ್ನು ಬಳಸಿ ಆಧುನಿಕೋತ್ತರ ಎಂದು ಹೆಸರಿಸಬಹುದು. ಹಾಗೆ ಹೆಸರಿಸಿದ, ಗುರುತಿಸುವ ಮೂಲಕ ನಿಜವಾದ ನೆಲೆಯ ಸಾತತ್ಯವನ್ನು ನಿರ್ವಚಿಸಬಹುದೆ?

ಕಾಲಘಟ್ಟದ ವಿಭಜನಾ ಕ್ರಮವನ್ನು ಮೀರಿ, ಮನೋಧರ್ಮದ ಹಣೆಪಟ್ಟಿಯನ್ನು ಲಗತ್ತಿಸಲು ಸೋತು ಅಂತಿಮವಾಗಿ ಈ ಶೋಧ ವರ್ತಮಾನದಲ್ಲಿ ಒಂದು ಕ್ಷಣ ನಿಂತು ಬಿಡುತ್ತದೆ. ಈ ಸಂಕೀರ್ಣ ವರ್ತಮಾನವನ್ನು ನಾವು ಗುರುತಿಸುತ್ತಿರುವುದೇ ‘ ಇತ್ತೀಚಿನ’ ಎಂಬ ಕಾಲದ ಪರಿಭಾಷೆಯಲ್ಲಿ. ಕನ್ನಡ ಸಾಹಿತ್ಯದ ಹಲವು ಒಲವು – ನಿಲುವುಗಳು ದಾಖಲಾಗುತ್ತಲೇ ಬಂದು – ವರ್ತಮಾನಕ್ಕೆ ಸಂದ ಈ ಹೊತ್ತಿನಲ್ಲಿ ಗುರುತಿಸಬಹುದಾದ ಒಲವುಗಳಾವುವು. ಅದರಲ್ಲೂ ವಿಮರ್ಶೆಯ ನೆಲೆಯಲ್ಲಿ ನಿಂತು ವರ್ತಮಾನವನ್ನು ಗ್ರಹಿಸುವುದಾದರೆ – ಸಾಹಿತ್ಯ ತನ್ನ ವಿರಾಟ್ ವಿಶ್ವರೂಪ ತೋರಿಸಿದಂತೆ ಬೆರಗು, ಬೆಡಗು ಎರಡೂ ಅವಿರ್ಭವಿಸುತ್ತವೆ.

ಕನ್ನಡದ ವಿಮರ್ಶಾ ಪರಂಪರೆ : ಟೀಕೆ, ಭಾಷ್ಯಗಳಿಂದ, ತಾತ್ವಿಕ ಒಳನೋಟಗಳ ಶೋಧದಿಂದ, ತಿಕ್ಕಿ ನೋಡುವ ‘ ಮೃಶ್’ ಧಾತುವಿನಿಂದ, ಕೃತಿ ನಿಷ್ಠತೆಯಿಂದ ತನ್ನ ಸಾಂದರ್ಭಿಕ ಗ್ರಹಿಕೆಗಳನ್ನು ಸ್ಪುಟಗೊಳಿಸುತ್ತಲೇ
‘ ಕಾಲಾಂತರ’ ಕಾಲಗಳನ್ನು ಸಾಗಿ ಬಂದಿದೆ. ನಮ್ಮ ಮೀಮಾಂಸಕಾರರು ಹೇಳುವ : ಅಲಂಕಾರ, ವ್ಯಾಖ್ಯಾನ, ವಿವೇಚನೆ, ಔಚಿತ್ಯ, ವಕ್ರೋಕ್ತಿ, ಭವ್ಯತೆ, ಶೋಧನೆ, ಅನುಕರಣೆ ಮೊದಲಾದ ಪರಿಕರಗಳ ನೆರವು ಪಡೆಯುತ್ತಲೇ– ಆಧುನಿಕ ಸಂದರ್ಭದ ಹಲವು ಓದಿನ ದಾರಿಗಳ ಮೂಲಕ ಸಾಹಿತ್ಯ ಕೃತಿಯನ್ನು, ವರ್ತಮಾನದ ಪಠ್ಯವನ್ನು ವಿಮರ್ಶಿಸುತ್ತಲೇ – ನಿರ್ವಚನಗೊಂಡಿದೆ.

ಮೊದಮೊದಲು ಕೃತಿ ನಿಷ್ಠ ವಿಮರ್ಶೆಯ ಪರಂಪರೆ ಪ್ರಾರಂಭಗೊಂಡು, ಕೃತಿಯನ್ನೇ ಒಂದು ಸ್ವಾಯತ್ತ ಘಟಕ ಎಂದು ಪರಿಭಾವಿಸಿ, ಅದರ ರಚನೆ-ಬಂಧ-ಸ್ವರೂಪ ಮತ್ತು ಕೃತಿ ಜಗತ್ತಿನ ಆಂತರಿಕ ವಿವರಗಳನ್ನ ವಿವೇಚಿಸುವ “ ರಚನಾವಾದ”ವೂ ಬಹಳಷ್ಟು ಮೌಲಿಕತೆಯನ್ನು, ವಿಮರ್ಶೆಯ ವಿಸ್ತೃತತೆಯನ್ನು ಪಡೆದಿದ್ದಂತಹದು. ನಂತರದಲ್ಲಿ ಡೆರಿಡಾ ಪ್ರೇರಿತ ಚಿಂತನಾಕ್ರಮ ಈ ಸಂರಚನೆಯನ್ನು ಪುನರ್ ಪರಿಶೀಲಿಸಿ, ಆಂತರಿಕವಾಗಿ ಛೇದಿಸಿ ಆ ಮೂಲಕ ಹೊಸ ಹೊಳಹುಗಳ ಸಾಧ್ಯತೆಯನ್ನು ತೋರಿದ ‘ನಿರಚನ’ ಕ್ರಮ ಸಾಹಿತ್ಯ ಅಧ್ಯಯನ ಹಾದಿಯಲ್ಲಿ ದಾಖಲಾದ ಮಹತ್ವದ ಮೈಲಿಗಲ್ಲು ಕೂಡಾ. ಈ ಹೊತ್ತಿಗೇ ಸಾಹಿತ್ಯ ವಿಮರ್ಶೆ ಎಂದರೆ ಅದು ಲೋಕ ವಿಮರ್ಶೆ ಕೂಡಾ ಎಂಬ ಆಲೋಚನೆ ಬಂದಿರಬಹುದು. ಡಿ. ಆರ್ ರ ಆ ಪ್ರಸಿದ್ಧ ಉಕ್ತಿಯನ್ನು ಉಲ್ಲೇಖಿಸಿ ಹೇಳುವುದಾದರೆ : ಕನ್ನಡದ ಸಂದರ್ಭದಲ್ಲಿ ಸಾಹಿತ್ಯ ಸಂಕಥನ ( ಡಿಸ್ಕೋರ್ಸ್ ) ಮಾದರಿ ಆರಂಭವಾಗುವುದೇ ಕೃತಿಯ ಆಂತರಿಕ ಮತ್ತು ಬಾಹ್ಯ ಪರಿಸರಗಳೆರಡರ ಗಮನ ಕೇಂದ್ರೀಕೃತವಾದಾಗ. ಅದು ನಿಜಕ್ಕೂ ಸಮಾಜ ವಿಮರ್ಶೆ. ರಾಜಕೀಯ ಸಿದ್ಧಾಂತಗಳು, ಪುನರ್ ಮೌಲಿಕೀಕರಣಗೊಳಿಸುವ ಪರಿಕರಗಳು – ಸಾಹಿತ್ಯಿಕ ಸಮಾಜವನ್ನು ಮಾರ್ಕ್ಸ್ ವಾದ, ಲೋಹಿಯಾ ಚಿಂತನೆ, ಸಮಾಜವಾದ, ಅಂಬೇಡ್ಕರ್ ಗ್ರಹಿಕೆ ಮೊದಲಾದ ಸಿದ್ಧಾಂತಗಳ ಮೂಲಕ ಕೃತಿಯ ಮರು ಪ್ರವೇಶ, ಅದರ ಒಳಗಣವನ್ನು ಅವಲೋಕಿಸಿ – ವ್ಯಾಖ್ಯಾನಿಸಿದೆ. ಅಂತಹುದೇ ಮತ್ತೊಂದು ಸಾಧ್ಯತೆ ತೆರೆದುಕೊಂಡುದು ‘ಸ್ತ್ರೀ’ ಸಂಕಥನವಾಗಿ. ಸಿಮನ್ ದ ಬುವಾ, ಕೇಟ್ ಮಿಲ್ಲೆಟ್ ಮೊದಲಾದವರ ಚಿಂತನಾಕ್ರಮದ ಪ್ರಭಾವ ಕನ್ನಡದ ‘ಸ್ತ್ರೀ’ತನವನ್ನು ನಿರ್ವಚಿಸಲು ಸಹಕರಿಸಿದೆ. ಅಂತರಾಷ್ಟ್ರೀಯ ಪ್ರವೇಶದಂತೇ, ದೇಸೀ ಮೂಲದಿಂದ ಅಕ್ಕಮಹಾದೇವಿ, ಹೊನ್ನಮ್ಮ ಮೊದಲಾದವರ ‘ಮೌಲ್ಯ’ ಪ್ರತಿಪಾದನೆಯ ಪುನರ್ ವ್ಯಾಖ್ಯಾನ, ಅಮೃತಮತಿಯಂತಹ ಪ್ರತೀಮಾತ್ಮಕ ಉಪಮಾನ, ಆಧುನಿಕ ಸಂದರ್ಭದ ಸಂವೇದನೆಗಳೆಲ್ಲಾ ಮುಪ್ಪರಿಗೊಂಡು – ಕನ್ನಡದ ‘ಸ್ತ್ರೀ’ತನ ಈ ಹೊತ್ತು ಸ್ಪುಟಗೊಂಡಿದೆ.

ಈಗಾಗಲೇ ಹಲವು ಬಾರಿ ಕ್ರೋಢೀಕರಿಸಲಾದ ಈ ಹಲವು ಓದಿನ ದಾರಿಗಳನ್ನ ಸಂಕ್ಷೇಪವಾಗಿ ಅವಲೋಕಿಸುತ್ತಲೇ ನಮ್ಮೆಲ್ಲರ ಸದ್ಯದ ವರ್ತಮಾನವನ್ನು ಪರಿಗಣಿಸಬೇಕಾಗುತ್ತದೆ. ವರ್ತಮಾನದ ವಿಮರ್ಶಾ ವಲಯವು ಸತ್ವಯುತವಾದುದು, ಗುಣಗ್ರಾಹಿಯಾದುದು, ಅಷ್ಟೇ ಅಲ್ಲ..  ಅದು ಸಾಹಿತ್ಯ ಸಂಕಥನದ ಪರಿಧಿಯನ್ನು ವಿಸ್ತರಿಸಿರುವಂತಹುದು. ಈ ಹಿನ್ನೆಲೆಯಲ್ಲಿ : ಕುವೆಂಪುರವರ ವೈಚಾರಿಕ ಪ್ರಜ್ಞೆ, ಜಿ.ಎಸ್.ಶಿವರುದ್ರಪ್ಪ, ಶಂಕರ ಮೊಕಾಶಿ ಪುಣೇಕರರ ಮತ್ತು ಜಿ.ಹೆಚ್. ನಾಯಕರ ವಿಮರ್ಶಾ ಸೃಜನಶೀಲತೆ, ಓ.ಎಲ್. ನಾಗಭೂಷಣ ಸ್ವಾಮಿ, ಹೆಚ್.ಎಸ್. ರಾಘವೇಂದ್ರರಾವ್ ಮತ್ತು ಸಿ.ಎನ್. ರಾಮಚಂದ್ರನ್ ರವರ ವೈಶಾಲ್ಯತೆ, ಬಂಡಾಯಗಾರ ಬರಗೂರರ ಪಿಸುಮಾತು, ರಹಮತ್ ತರೀಕೆರೆಯವರ ಪ್ರತಿ ಸಂಸ್ಕೃತಿಯ ಶೋಧ, ಮಾತಿನಲ್ಲೇ “ಆಡಿ” ಬ್ರಹ್ಮಾಂಡದ ಅರಿವನ್ನು ಉಣಬಡಿಸಿದ ಕಿ.ರಂ., ವಿಮರ್ಶೆಯ ವಸಂತ   ಸ್ಮೃತಿ  ಡಿ.ಆರ್.,  ಹೀಗೇ ಎಲ್ಲಾ ಕ್ರಿಯಾಶೀಲರ ನೆರವೂ, ನೆರಳೂ, ವರ್ತಮಾನದ ಮೇಲಿದೆ. ಅಂತಹ ವರ್ತಮಾನವನ್ನು ಖಚಿತ ಪಡಿಸಿಕೊಂಡ ಸಂದರ್ಭದಲ್ಲೇ ಈ ವರ್ತಮಾನದ ತುರ್ತುಗಳೂ ಗಮನಾರ್ಹವಾಗುತ್ತವೆ. ಹೊಸ ತಲೆಮಾರಿನ ಹಲವು ಮನಸ್ಸುಗಳು ಕ್ರಿಯಾಶೀಲವಾಗುತ್ತವೆ, ಹಲವು ಪ್ರಶ್ನೆಗಳೂ ಎದ್ದು ನಿಲ್ಲುತ್ತವೆ.

ಹೊಸ ಸಂದರ್ಭದ ಪ್ರಶ್ನೆಗಳನ್ನು ಹೀಗೆ ಸಂಕಲಿಸಬಹುದು.

1. ಸಾಹಿತ್ಯದ ನೆಲೆಯಲ್ಲಿ ಈಗಾಗಲೇ ನಮ್ಮ ಮುಂಚಿನ ತಲೆಮಾರು ಅಲಕ್ಷಿತ ಸಮುದಾಯಗಳ ( ಸಬಾಲ್ಟ್ರನ್ ) ಚರಿತ್ರೆಯನ್ನು ಕಟ್ಟಿಕೊಟ್ಟಿದೆ. ಆದಾಗಿಯೂ ಏಕೆ ಈ ಅಲಕ್ಷಿತ ಸಮುದಾಯಗಳು ತಮ್ಮದೇ ದನಿಯಲ್ಲಿ ಮಾತನಾಡಲಾಗುತ್ತಿಲ್ಲ? ಅಥವಾ ಅಂತಹ ದನಿಯೊಂದು ವರ್ತಮಾನದ ದನಿಯಾಗಿ ದಾಖಲಾಗುತ್ತಿಲ್ಲ ಏಕೆ?

2. ಅಲಕ್ಷಿತ ಸಮುದಾಯಗಳ ಶಕ್ತಿ ಕೇಂದ್ರದ ಪರಿಶೋಧನೆಯ ಮಾರ್ಗಗಳಾವುವು? ಈ ಸಮುದಾಯಗಳ ಕಕ್ಷೆಯಲ್ಲಿ ‘ಸ್ತ್ರೀ’ ಸಂಕಥನ ಪ್ರಭಲವಾಗಿ ಕೇಳಿ ಬಂದರೂ, ಅದರದೊಂದು ಪ್ರತ್ಯೇಕತೆ, ಶೃತಿ ಗಮನಿಸಿದರೂ ಸೃಜನಶೀಲ ಆಯಾಮಗಳಲ್ಲೂ ಈ ‘ಶೃತಿ’ ಏಕೆ ಗಮನಾರ್ಹವಾಗಿ ದಾಖಲಾಗುತ್ತಿಲ್ಲ?

3. ಸಂಸ್ಕೃತಿಯ ಪುನರ್ ವ್ಯಾಖ್ಯೆ, ಪ್ರತಿ  ಸಂಸ್ಕೃತಿಯ       ಎಲ್ಲಾ ಪರಿವೇಶಗಳನ್ನು ಶೋಧಿಸುತ್ತಿರುವ ಈ ಹೊತ್ತಿನಲ್ಲಿ ವೈದಿಕ – ಅವೈದಿಕ ಎಂಬ ಬೈನರಿ ಅಧ್ಯಯನ ಕ್ರಮ ಸಾಧುವೇ? ಬೌದ್ಧ, ಜೈನ, ನಿಮ್ನ ಸಮುದಾಯಗಳ  ಸಂಸ್ಕೃತಿ ಕಥನ ಈ ದ್ವಂದ್ವಮಾನದಿಂದ ಉಪೇಕ್ಷಿತವಾಗುವುದಿಲ್ಲವೇ?

4. ಅನುಭಾವಿಕ ನೆಲೆಯನ್ನು ಆಧ್ಯಾತ್ಮದಿಂದ ಸಾಮಾಜಿಕ ಬದುಕಿನ ಅವಧಾನದವರೆಗೆ ವಿಸ್ತರಿಸಿ ನೋಡಬೇಕಾದ ತುರ್ತು ಇರುವ ಈ ಹೊತ್ತಿನಲ್ಲಿ ‘ ನವ-ಅನುಭಾವಿಕ’ ಅನುಭೂತಿಯನ್ನು ನಿರ್ವಚಿಸುವ ಪರಿ ಹೇಗೆ?

ಈ ಎಲ್ಲಾ ಪ್ರಶ್ನೆಗಳನ್ನು ಸಂಕಲಿಸಿದ ಮಾತ್ರಕ್ಕೇ ನಾನೇ ಉತ್ತರಗಳನ್ನು ಕಂಡು ಕೊಂಡಿದ್ದೇನೆ ಎಂದು ಅರ್ಥವಲ್ಲ. ನಮ್ಮ ತಲೆಮಾರು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಈ ವರ್ತಮಾನದಲ್ಲಿ – ಇತ್ತೀಚಿನ ಸಾಹಿತ್ಯದ ಒಲವುಗಳ ನಿರ್ವಚನದಲ್ಲಿ ಈ ಎಲ್ಲಾ ಅಂಶಗಳು ಮುಖ್ಯ ಪಾತ್ರ ವಹಿಸುತ್ತವೆ ಎಂದು ನನ್ನ ಭಾವನೆ. ಇದಕ್ಕೆ ಪೂರಕವಾಗಿ ವರ್ತಮಾನದಲ್ಲಿ ದಾಖಲಾಗಿರುವ ಹೊಸ ವಿಮರ್ಶಾ ಸಂವೇದನೆಗಳನ್ನ ಗುರುತಿಸುವುದು – ನನ್ನ ಆದ್ಯತೆ, ಬದ್ಧತೆ.

ಮೊದಲ ಪ್ರಶ್ನೆಗೆ : ಅಲಕ್ಷಿತ ಸಮುದಾಯಗಳ ಚರಿತ್ರೆಯನ್ನು ಅವುಗಳ ಸಾಂಸ್ಕøತಿಕ ಹಿರಿಮೆಯನ್ನು ಕಟ್ಟಿಕೊಟ್ಟ ಮಾತ್ರಕ್ಕೆ ಅವುಗಳ ವರ್ತಮಾನದ ಸ್ಥಿತ್ಯಂತರಗಳನ್ನು ಗುರುತಿಸಿದಂತೆ ಅಲ್ಲ ಎಂಬ ಅಭಿಪ್ರಾಯ ನಮ್ಮ ವರ್ತಮಾನದ್ದು. ಹಾಗೆಂದೇ ಈವರೆಗೆ ಬುಡಕಟ್ಟು ಸಮುದಾಯಗಳ ಅಧ್ಯಯನ ಕ್ರಮವನ್ನೇ ಪ್ರಶ್ನಿಸಿ, ಪರ್ಯಾಯ ಅಧ್ಯಯನದ ಸಹಜ ಮಾದರಿಗಳನ್ನು ಕಂಡುಕೊಳ್ಳಬೇಕಾದ ತುರ್ತನ್ನು ಸಮಕಾಲೀನ ವಿಮರ್ಶೆ ಮನಗಂಡಂತಿದೆ. ಅಂತಹ ಮಹತ್ವದ ಪ್ರಯತ್ನವಾಗಿ ಡಾ. ಎ.ಎಸ್.ಪ್ರಭಾಕರ್ ರವರ ‘ ಬುಡಕಟ್ಟು ಸ್ಥಿತ್ಯಂತರಗಳು’, ಅವರ ಸಂಪಾದನೆಯ ‘ ಬುಡಕಟ್ಟು ಮೀಮಾಂಸೆ’ ಮತ್ತು “ ಆದಿವಾಸಿ ಆಖ್ಯಾನ ” ವರ್ತಮಾನದ ಸಾಹಿತ್ಯ ಅಧ್ಯಯನಕ್ಕೆ ಮಹತ್ವದ ಪರಿಕರಗಳನ್ನು ಒದಗಿಸಿವೆ. ಇಂತಹ ನೂತನ ಪರಿಕರ ಮತ್ತು ದೃಷ್ಠಿಕೋನದಿಂದ  ವಡ್ಡಗೆರೆ_ನಾಗರಾಜಯ್ಯ ರವರ “ ಬುದ್ಧನೆಡೆಗೆ” ವಿಮರ್ಶಾ ಕೃತಿ ಸಾಮಾಜಿಕ ಸಂರಚನೆಯಲ್ಲಿನ ಸಾಂಸ್ಕøತಿಕ ತೊಡರುಗಳನ್ನು ಎಳೆ ಎಳೆಯಾಗಿ ಬಿಡಿಸಿಡಲು ಪ್ರಯತ್ನಿಸುತ್ತದೆ. ಪ್ರತಿ ಸಂಸ್ಕøತಿಯ ಪರಿವೇಶಗಳು, ಆಧುನಿಕತೆ ಹೊಕ್ಕಿದ ದಮನಿತರ ಮಾರ್ಗಗಳೂ ಮತ್ತೆ ಮತ್ತೆ ಸಾಂಸ್ಕøತಿಕ ಯಜಮಾನಿಕೆಯ ದಾಸ್ಯಕ್ಕೆ ಸಿಲುಕುತ್ತಿರುವ ಪರಿಯನ್ನ ವಿಮರ್ಶಿಸುತ್ತಿರುವ ‘ಬುದ್ಧನೆಡೆಗೆ’ ಆ ನಿಟ್ಟಿನಲ್ಲಿ ಗಮನಾರ್ಹ ಕೃತಿ ಕೂಡಾ ಹೌದು.

ಎರಡನೆಯ ಪ್ರಶ್ನೆಗೆ : ಅಲಕ್ಷಿತ ಸಮುದಾಯಗಳ ಶಕ್ತಿ ಕೇಂದ್ರದ ಶೋಧನೆಯ ಈ ನಿರ್ವಚನಾ ಕ್ರಮ ಹಲವು ಹೊಸ ಪ್ರಮೇಯಗಳ ಮೂಲಕ ಶೃತಗೊಂಡಿದೆ. ಡಾ. ಎಂ. ಎಸ್. ಆಶಾದೇವಿ ಯವರ ಹಲವು ಮೌಖಿಕ ಮತ್ತು ಲಿಖಿತ ಲೇಖನಗಳು ಅಂತಹ ಪ್ರಮೇಯಗಳನ್ನು ಹೆಚ್ಚು ಸ್ಪುಟಗೊಳಿಸುತ್ತಿವೆ. ಅದಕ್ಕೆ ಪೂರಕವಾಗಿ ‘ಸ್ತ್ರೀ’ ಸಂಕಥನಗಳಲ್ಲಿ ವಿವಾಹ, ಕುಟುಂಬ ಮೊದಲಾದ ಸಾಮಾಜಿಕ ಘಟಕಗಳ ಪುನರ್ ವ್ಯಾಖ್ಯಾನದ ಮೂಲಕ ‘ಸ್ತ್ರೀ’ ಶಕ್ತಿ ಕೇಂದ್ರದ ಕಡೆಗೆ ‘ಅರಿವಿನ ನಡೆ’ಯನ್ನು ಡಾ. ಕವಿತಾ ರೈ ರವರು ದಾಖಲಿಸಿದ್ದಾರೆ. ಈ ನಡೆಯ ದಾರಿಯಲ್ಲಿ ಹಿನ್ನೋಟವಾಗಿ ಸ್ತ್ರೀ ಪರಂಪರೆಯ ಪುನರ್ ದಾಖಲೀಕರಣ ಮತ್ತು ವರ್ತಮಾನದ ಸಂಕೀರ್ಣತೆಯ ಸ್ಪುಟಗೊಳಿಸುವ ಕ್ರಿಯೆಯಲ್ಲಿ ಶ್ರೀಮತಿ ತಾರಿಣಿ ಶುಭದಾಯಿನಿ ತೊಡಗಿಸಿಕೊಂಡಿದ್ದಾರೆ.

ಮೂರನೆಯ ಪ್ರಶ್ನೆ : ಸಾಂಸ್ಕøತಿಕ ಪುನರ್ ವ್ಯಾಖ್ಯೆಯಲ್ಲಿ ದ್ವಂದ್ವಮಾನದ ಮಿತಿಯನ್ನು ತಮ್ಮ ಹಲವು ಆಯಾಮಗಳ ಅಧ್ಯಯನದ ಗ್ರಹಿಕೆಗಳಿಂದ ಪ್ರಶ್ನಿಸುವ ಮನೋಧರ್ಮ ವರ್ತಮಾನವನ್ನು ಹೆಚ್ಚು ನಿಕಷಕ್ಕೆ ಒಳಪಡಿಸುತ್ತಿದೆ. ಡಾ. ಜಿ.ಬಿ.ಹರೀಶರ “ಬೆಳಕಿನಾಟ” ಅಂತಹ ತಕರಾರನ್ನು ಕೈಗೊಂಡ ಕೃತಿ. ಅಂತಹುದೇ ತಕರಾರನ್ನು ಡಾ. ಮೊಗಳ್ಳಿ ಗಣೇಶರು ನಿಮ್ನ ವರ್ಗದ ಸಂಕಥನದ ಮೂಲಕ ದಾಖಲಿಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಶ್ರಿ. ವಡ್ಡಗೆರೆಯವರ ಪುನರ್ ವ್ಯಾಖ್ಯಾನ – ತಕರಾರನ್ನು ಹೆಚ್ಚು ಸ್ಪುಟಗೊಳಿಸುತ್ತದೆ.

ನಾಲ್ಕನೆಯ ಪ್ರಶ್ನೆ : ಸಾಮಾಜಿಕ ಬದುಕಿನ ಒಂದು ‘ಅವಧಾನ’ವಾಗಿ ಅನುಭಾವವನ್ನ ಪುನರ್ ವ್ಯಾಖ್ಯಾನಿಸುವ ಪರಿ ಈ ವರ್ತಮಾನದ ತುರ್ತು ಮತ್ತು ಶೋಧ ಕೂಡಾ. ಈಗಾಗಲೇ ಅನುಭಾವಿಕ ನೆಲೆಯಲ್ಲಿ ಪರಿಶೀಲಿಸಿ ನಿರ್ವಚನಗೊಳಿಸಲಾದ ಪಠ್ಯಗಳ ಮರು ಪರಿಶೀಲನೆ, ಹೊಸ ಪರಿಕರಗಳ ಮೂಲಕ ಆಧ್ಯಾತ್ಮ ಮತ್ತು ಅನುಭಾವಿಕತೆಯ ಹೊಸ ಆಯಾಮಗಳನ್ನು ಸ್ಪಷ್ಠಗೊಳಿಸಿವೆ. ಡಾ. ಗೀತಾ ವಸಂತರ “ ಬೆಳಕಿನ ಬೀಜ” ಕೃತಿಯಲ್ಲಿ ಪುನರ್ ವ್ಯಾಖ್ಯಾನಿಸಲ್ಪಟ್ಟ ಶರೀಫ, ಬೇಂದ್ರೆ ಕಾವ್ಯದಲ್ಲಿ ‘ಅವಧೂತ’ ಪ್ರಜ್ಞೆಯ ಶೋಧ – ಈ ನೆಲೆಯಲ್ಲಿ ಮಹತ್ವದ್ದು.

ಒಟ್ಟಾರೆ ಇತ್ತೀಚಿನ ಸಾಹಿತ್ಯ ವಿಮರ್ಶೆ –  ಹೊಸ ಒಲವುಗಳನ್ನು ವರ್ತಮಾನದ ಅರ್ಥಪೂರ್ಣತೆಗಾಗಿ ಸೃಜಿಸಿಕೊಂಡಿರುವ ಈ ಸಂದರ್ಭ – ಆ ಕಾರಣಕ್ಕೇ ಒಂದು ವಿಶೇಷವೂ ಹೌದು. ಅಂತಹ ಸಂದರ್ಭದ ಒಂದು ಅವಲೋಕನವೇ ಈ ಸಂಕಿರಣದ ಆಶಯ ಮತ್ತು ಉದ್ದೇಶ ಕೂಡಾ ಎಂದು ಭಾವಿಸಿದ್ದೇನೆ.  ಹಾಗೆಂದೇ ಈಗಿನ  ವರ್ತಮಾನ ಹೇಳುತ್ತಿರುವ ವಿಮರ್ಶೆಯ ಹೊಸ ವ್ಯಾಕರಣ _

“ ಲೋಕ ವಿಮರ್ಶೆಯೂ ಸಾಹಿತ್ಯ ವಿಮರ್ಶೆ ಹೌದು”

One comment to “ಕನ್ನಡ ವಿಮರ್ಶಾ ಸಾಹಿತ್ಯದ ಇತ್ತೀಚಿನ ಒಲವುಗಳು”
  1. ಪ್ರಸ್ತುತ, ಹೊಸ ಇತ್ತೀಚಿನ ಆಧುನಿಕ ಇತ್ಯಾದಿ ಪದಗಳನ್ನು ಬಳಸಿದ ಮೇಲೆ ಅದರ ನೆಲೆಯಲ್ಲೇ ಮಾತಾಡಬೇಕು. ಅರ್ಧ ಲೇಖನವನ್ನು ಹಳೆಯ ಚರಿತ್ರೆಯ ಬಗ್ಗೆ ಮೀಸಲಾಗಿಟ್ಟು ಉಳಿದದರಲ್ಲಿಯೂ ಅರ್ಧ ವ್ಯಾಖ್ಯಾನಗಳಿಗೆ ಕೊಟ್ಟು ಇನ್ನುಳಿದ ಸ್ಪೇಸ್ ನಲ್ಲಿ ಅಪೂರ್ಣ ವ್ಯಾಖ್ಯಾನದಿಂದ ಪ್ರಯೋಜನವಿಲ್ಲ. ಅಲ್ಲದೇ ಕನ್ನಡ ಸಾಹಿತ್ಯದ ಇತ್ತೀಚಿನ ಒಲವುಗಳು ಎನ್ನುವ ಶೀರ್ಷಿಕೆ ಕೊಟ್ಟು ಬರೀ ವಿಮರ್ಶೆ ಬಗ್ಗೆ ಬರೆದಿರುವುದು ಮಿಸ್ ಲೀಡಿಂಗ್ ಆಗಿದೆ.
    ೧. ಅಲಕ್ಷಿತ ಸಮುದಾಯಗಳು ತಮ್ಮದೇ ದನಿಯಲ್ಲಿ ಮಾತನಾಡಲಾಗುತ್ತಿಲ್ಲ. ೨. ದನಿಯೊಂದು ವರ್ತಮಾನದ ದನಿಯಾಗಿ ದಾಖಲಾಗುತ್ತಿಲ್ಲ ೩. ಸೃಜನಶೀಲ ಆಯಾಮಗಳಲ್ಲೂ ಈ ‘ಶೃತಿ’ ಏಕೆ ಗಮನಾರ್ಹವಾಗಿ ದಾಖಲಾಗುತ್ತಿಲ್ಲ ೪. ವೈದಿಕ – ಅವೈದಿಕ ಎಂಬ ಬೈನರಿ ಅಧ್ಯಯನ ಕ್ರಮ ಸಾಧುವೇ ೫. ಅನುಭಾವಿಕ ನೆಲೆಯನ್ನು ಆಧ್ಯಾತ್ಮದಿಂದ ಸಾಮಾಜಿಕ ಬದುಕಿನ ಅವಧಾನದವರೆಗೆ ವಿಸ್ತರಿಸಿ ನೋಡಬೇಕಾದ ತುರ್ತು … ಈ ಎಲ್ಲ ಮಾತುಗಳನ್ನು ಸ್ವಲ್ಪ ಮರು ಪರಿಶೀಲಿಸುವುದು ಉತ್ತಮ. ಇವೆಲ್ಲಕ್ಕೂ ಉತ್ತರಗಳಿವೆ ಮತ್ತು ಈಗಾಗಲೇ ಚರ್ಚೆಯಾಗಿವೆ.
    “ಬುಡಕಟ್ಟು ಸಮುದಾಯಗಳ ಅಧ್ಯಯನ ಕ್ರಮವನ್ನೇ ಪ್ರಶ್ನಿಸಿ, ಪರ್ಯಾಯ ಅಧ್ಯಯನದ ಸಹಜ ಮಾದರಿಗಳನ್ನು ಕಂಡುಕೊಳ್ಳಬೇಕಾದ ತುರ್ತನ್ನು ಸಮಕಾಲೀನ ವಿಮರ್ಶೆ ಮನಗಂಡಂತಿದೆ” ಉತ್ತರದಲ್ಲಿ ಇದರ ಬಗ್ಗೆ ಮಾತ್ರ ಹೇಳಲಾಗಿದೆ. ಸೃಜನಶೀಲ ಸಾಹಿತ್ಯದ ಬಗ್ಗೆ ಇಲ್ಲ.
    ಮುಂದಿನ ಪ್ರಶ್ನೆಗಳ ಉತ್ತರಗಳಲ್ಲೂ ಕೂಡಾ ಇಂದಿನ ಸೃಜನಶೀಲ ಕೃತಿಗಳ ಬಗ್ಗೆ ಮಾತಿಲ್ಲ. ಸಮಕಾಲೀನ ಸಾಹಿತ್ಯದ ಬಗ್ಗೆ ಮಾತಾಡುವಾಗ ಕಳೆದ ಹತ್ತು ವರ್ಷಗಳ ಕೃತಿಗಳನ್ನು ಪರಿಗಣಿಸಬೇಕು – ವಿಮರ್ಶೆ ಕೂಡಾ. ಇತ್ತೀಚಿಗೆ ಸಾಹಿತ್ಯವನ್ನು ಮರುವ್ಯಾಖ್ಯಾನಕ್ಕೆ ಮರುಓದಿಗೆ ಒಳಪಡಿಸಿದ ಯಾವುದನ್ನೂ ಇಲ್ಲಿ ಪರಿಗಣಿಸಿಲ್ಲ.

ಪ್ರತಿಕ್ರಿಯಿಸಿ