ಅಧೋಲೋಕದ ಟಿಪ್ಪಣಿಗಳು – ಕಂತು ೭ (ಫ್ಯೊದರ್ ದಾಸ್ತೋವೆಸ್ಕಿಯ “Notes from Underground” ಅನುವಾದ)

ಅಲ್ಲಿ ನನ್ನ ಹಳೆಯ, ಇನ್ನಿಬ್ಬರು ಸಹಪಾಠಿಗಳು ಸಿಕ್ಕಿದರು. ಎಂತದೋ ಆಳವಾದ ಚರ್ಚೆಯಲ್ಲಿ ಅವರೆಲ್ಲರೂ ಹೇಗೆ ಮೈಮರೆತ್ತಿದ್ದರೆಂದರೆ ನನ್ನ ಆಗಮನಕ್ಕೆ ಅಲ್ಲಿದ್ದ ಒಬ್ಬನೇ ಒಬ್ಬನೂ ಸ್ಪಂದಿಸಲಿಲ್ಲ. ವಿಚಿತ್ರ! ಬಹಳ ವರ್ಷಗಳಾಗಿತ್ತು ಈ ಸಜ್ಜನರನ್ನು ನೋಡಿ. ಇವರಿಗೆಲ್ಲ ಅಂದಿನಿಂದಲೂ ನಾನೊಂದು *ನೊಣದಂತೆ ಬಿಡಿ ಆ ಬಗ್ಗೆ ಯಾವ ಅನುಮಾನವೂ ಇಲ್ಲ. ಖಂಡಿತಾ ಆ ಶಾಲಾದಿನಗಳಿಂದ ಇಲ್ಲಿಯವರೆಗೂ ನನ್ನನ್ನೂ ಬಹಳಾ ದ್ವೇಷಿಸುತ್ತಿದ್ದ ಜನಗಳಿವರು; ಹಾಗಿದ್ದರೂ ನಾನೆಂದರೆ ಇವರಿಗೆ ಗಾಳಿಯಲ್ಲಿ ಹಾರಿಬಂದ ಕೀಟದಂತೆ. ಈ ಪರಿಯ ಹೇಸಿಗೆ ಏಕೆಂದರೆ ನೌಕರಿ ಸಿಕ್ಕ ಬಳಿಕ ಒಂದೂ ಭಡ್ತಿಯನ್ನು ಪಡೆಯದೆ, ಯಾವ ಗೆಲುವನ್ನೂ ನನ್ನದಾಗಿಸಿಕೊಳ್ಳದೆ ಕುಬ್ಜನಾಗಿ ಅದೇ ಸ್ಥಾನದಲ್ಲಿ ಉಳಿದಿದ್ದಕ್ಕೆ… ಮಾನಮರ್ಯಾದೆ ಇಂಥಹುದನ್ನೆಲ್ಲ ಬಿಟ್ಟದ್ದಕ್ಕೆ… ಅಷಡಾ-ಬಷಡಾ ಬಟ್ಟೆ ಹಾಕುತಿದ್ದಕ್ಕೆ(ಅವರಿಗೆ ನಾನು ಹಾಗಿರುವುದು ನನ್ನ ಕೈಲಾಗದ ಸ್ಥಿತಿಯ, ಹಾಗೇ ನನ್ನ ಅಮುಖ್ಯ ಇರುವಿಕೆಯ ಪ್ರದರ್ಶನ). ಇದೆಲ್ಲ ಚೆನ್ನಾಗಿ ಗೊತ್ತಿದ್ದರೂ ಆ ದಿನ, ಆ ಥರದ ಮೌನ ನಿರ್ಲಕ್ಷ್ಯ ನಿಂದನೆಯನ್ನು ಆತನ ಮನೆಯಲ್ಲಿ ನಿರೀಕ್ಷಿಸಿರಲಿಲ್ಲ ನಾನು. ಬರುತ್ತಿದ್ದಂತೆಯೇ ನನ್ನ ನೋಡಿ ಅಚ್ಚರಿಯಾಗಿದ್ದ ಸೈಮೊನವ್; ನಾನು ಯಾವಾಗ ಬಂದರೂ “ಅಯ್ಯೋ ಇವನ್ಯಾಕೆ ಒಕ್ಕರಿಸಿದನಪ್ಪಾ” ಅಂತ ಅಚ್ಚರಿ ಪಡುವ ವ್ಯಕ್ತಿ ಆತ. ಇವೆಲ್ಲವೂ ನನ್ನ ನೆಮ್ಮದಿ ಕೆಡಿಸಿದ್ದವು. ಅವರ ಆಡುವ ಮಾತುಗಳನ್ನು ಮೌನವಾಗಿಯೇ ಕೇಳಿಸಿಕೊಳ್ಳುತ್ತಾ ಮುಳುಗುವ ಹೃದಯದಲ್ಲಿ ಮೆಲ್ಲನೆ ಕುಳಿತೆ.

ಅವರ ಬಿಸಿಬಿಸಿ ಮಾತುಕತೆಗಳು ಝ್ವರ್‍ಕೊವ್ ಅಫ಼ೀಸರ್ರಿನ ಫ಼ೇರ್ವೆಲ್ ಪಾರ್ಟಿಯ ಸುತ್ತ ಸುತ್ತಿದ್ದವು. ಇನ್ನೊಂದು ಪ್ರಮೋಷನ್ನ್ ಏನೋ ಸಿಕ್ಕಿ ದೂರದ ಊರಿಗೆ ಹೋಗುವುದರಲ್ಲಿದ್ದ ಈತ . ಈ ಝ್ವರ್‍ಕೊವ್ ಮಹಾಶಯ ಒಂದಾನೊಂದು ಕಾಲದಲ್ಲಿ ನನ್ನ ಸಹಪಾಠಿಯೂ ಆಗಿದ್ದ. ಎಲ್ಲರೂ ಅವನನ್ನು ಕೊಂಡಾಡುತ್ತಿದ್ದರು. ಮುದ್ದಾದ ಹುಡುಗ, ಪಾದರಸದಂತೆ ಎನ್ನುತ್ತಾ ಹೊಗಳುತ್ತಿದ್ದರು. ನಾನು ಅವನನ್ನು ದ್ವೇಷಿಸುತ್ತಿದ್ದೆ, ಅದೂ ಆತ ಮುದ್ದಾದ ಪಾದರಸದಂತಹ ಹುಡುಗ ಎಂಬ ಕಾರಣಕ್ಕಾಗಿಯೇ. ಅವನೊಬ್ಬ ಕೆಟ್ಟ ವಿಧ್ಯಾರ್ಥಿ, ಪುಸ್ತಕದ ನಿಜ ಸಾರ ಅವನ ತಲೆಗೇ ಹತ್ತುತ್ತಿರಲಿಲ್ಲ. ದಿನ ಕಳೆದಂತೆ ಇನ್ನೂ ಕೆಟ್ಟು ಹೋಗುತ್ತಲೇ ಇದ್ದವ. ಆದರೆ ಈತ ಚಾಲಾಕಿ; ಮಾಕ್ರ್ಸ್ ಹೊಡೆಯುವ ಪ್ಯಾರ್ಟನ್ನನ್ನು ಬಲ್ಲವ. ಒಳ್ಳೇ ಸ್ಕೋರ್ ಮಾಡಿಯೇ ಆತ ಶಾಲೆಯಿಂದ ಪಾಸಾಗಿದ್ದು. ಓದುತ್ತಿದ್ದ ಕೊನೆಯ ವರುಷದಲ್ಲಿ ಆತ ಎಸ್ಟೇಟ್ ಒಂದರ ವಾರಸುದಾರನಾದ. ಇನ್ನೂರು ಜೀತದಾಳುಗಳ ಯಜಮಾನ ಬೇರೆ. ನಮ್ಮಂತಹ ಹೆಕ್ಕಿ ತಿನ್ನುವ ಬಡ ಕೋಳಿಗಳೆದುರು, ಈತ ನಾಚಿಕೆ ಬಿಟ್ಟು ತನ್ನ ಶಕ್ತಿ ಪ್ರದರ್ಶಿಸುತ್ತಿದ್ದ. ತೀರ ವಲ್ಗರ್ರ್ ಹುಡುಗ ಇವನಗಿದ್ದರೂ, ಈತನೊಬ್ಬ ಒಳ್ಳೆಯ ಹೈದನೂ ಹೌದು. ನಮ್ಮ ಶಾಲೆಯಲ್ಲಿ ಸ್ವಾಭಿಮಾನ, ಮರ್ಯಾದೆ, ಆತ್ಮಗೌರವ ಎಂದೆಲ್ಲಾ ಉಪಾಧ್ಯಾಯರು ಕೊರೆಯುತ್ತಿದ್ದರೂ, ಈತನ ಘನಂಧಾರಿ ಬಡಾಯಿಗಳನ್ನೆಲ್ಲ ಮೆಚ್ಚಿ, ಅಂಡು ಬಡಿಯುವ ಅತಿದೊಡ್ಡ ಗುಂಪೊಂದಿತ್ತು. ಆ ಬಳಗದವರು ಝ್ವರ್‍ಕೊವ್‍ನಿಂದ ದೊಡ್ಡ ಲಾಭವನ್ನೇನು ನಿರೀಕ್ಷಿಸುತ್ತಾ ಹೀಗಾಡುತ್ತಿರಲಿಲ್ಲ. ಆದರೆ ಪ್ರಕೃತಿದತ್ತವಾಗಿ ಬಂದಿದ್ದ ಪ್ರಭೆಯ ಬಲ ಇವನಿಗಿದ್ದದರಿಂದ ಈ ರೀತಿ ಹೊಗಳಾಡುತ್ತಿದ್ದರು. ಚಾತುರ್ಯದಲ್ಲಿ, ಶಿಷ್ಟಾಚಾರದಲ್ಲಿ ಝ್ವರ್‍ಕೊವ್ ಸದಾ ನಿಸ್ಸೀಮ ಎಂಬ ಮಾತನ್ನು ನನ್ನ ಬಳಗದವರೆಲ್ಲಾ ಒಕ್ಕೊರೊಲಲ್ಲಿ ಒಪ್ಪಿದ್ದರು ಸಹ. ಈ ಶಿಷ್ಟಾಚಾರದಲ್ಲೂ ಅವನೇ ನಿಪುಣನಾಗಿದ್ದನೆಂಬುದು ವಿಶೇಷವಾಗಿ ನನ್ನನ್ನು ಉರಿಸಿತ್ತು. ಅವನ ಅತಿ ಆತ್ಮವಿಶ್ವಾಸದ ಧ್ವನಿಯನ್ನು ನಾನು ದ್ವೇಷಿಸಿದ್ದೆ. ಭಾಷೆ ತುಂಬಾ ದಿಟ್ಟವಾಗಿದ್ದರೂ ಅವನ ಭಯಂಕರ ಕೆಟ್ಟ ಹಾಸ್ಯವನ್ನು ಆತನೇ ಹೊಗಳುವ ಪರಿಯನ್ನೂ ದ್ವೇಷಿಸಿದ್ದೆ. ಚೆನ್ನಾಗಿದ್ದರೂ, ಬಾಲಿಶವಾಗಿ ಪೆದ್ದು-ಪೆದ್ದಾಗಿದ್ದ ಅವನ ಮುಖವನ್ನೂ(ಅಂದ ಹಾಗೆ ನನ್ನ ಈ ಬುದ್ಧಿಜೀವಿಯ ಮೂತಿಯನ್ನು ಕೊಟ್ಟು, ಆತನ ಮುಖವನ್ನು ಎಕ್ಸ್‍ಛೇಂಜು ಮಾಡುವ ಛಾನ್ಸೇದರೂ ಸಿಕ್ಕಿದ್ದಲ್ಲಿ ಸಂತೋಷದಲ್ಲಿ ಮೊದಲು ಆ ಕೆಲಸ ಮಾಡುತ್ತಿದ್ದೆ), 1840ರ ಸೈನ್ಯಾಧಿಕಾರಿಗಳನ್ನು ಹೋಲುತ್ತಿದ್ದ ಆತನ ಮುಕ್ತ ವೈಖರಿಗಳನ್ನೂ ಧಾರಾಳವಾಗಿಯೇ ದ್ವೇಷಿಸಿದ್ದೆ. ಥೂ…! ಈ ಅರಿವುಗೆಟ್ಟವನು ಭವಿಷ್ಯದಲ್ಲಿ ತಾನು ಹೆಣ್ಣುಗಳನ್ನು ಗೆಲ್ಲುವ ಕಥೆಯನ್ನು ನೂರು ಸಲ ನಮ್ಮೆದುರು ಒದರುತ್ತಿದ್ದ, (ಮತ್ತೊಂದು ವಿಚಾರ; ಹೆಣ್ಣು ಹುಡುಗಿಯರನ್ನು ಮೋಡಿಗೊಳಿಸುವ ಕೆಲಸ ಆರಂಭಿಸಿದ್ದು, ಆತ ಅಫಿೀಸರ್ರಾದ ಮೇಲೆಯೇ. ಅಯ್ಯೋ ಆ ಪೋಶ್ಟಿಗಂತೂ ಆತ ತಾಳ್ಮೆಗೆಟ್ಟು ಕಾದಿದ್ದ ) ತಾನೂ ಪದೇ-ಪದೇ ಆಡಬೇಕಾಗಿರುತ್ತಿದ್ದ ಡ್ಯುಯೆಲ್ ಬಗ್ಗೆಯೂ ಸುಮ್ಮನೇ ಹರಟುತ್ತಿದ್ದ. ಒಂದು ಮಧ್ಯಾಹ್ನದ ಕೆಂಪು ಬಿಸಿಲಿನಲ್ಲಿ ಕುನ್ನಿಯಂತೆ ಆತ ತನ್ನ ಉತ್ತರ ಕುಮಾರ ಪರ್ವವನ್ನು ಶುರುಹಚ್ಚಿಕೊಂಡಿದ್ದ. “ ನನ್ನ ಹಳ್ಳಿಯಲ್ಲಿರೋ ಯಾವ ಹುಡ್ಗೀರೂ ನನ್ನ ಪ್ರಭಾವಳಿಯಿಂದ ತಪ್ಪಿಸಿಕೊಳ್ಳಕ್ಕಾಗಲ್ಲ. ರೈತರೇನಾದರು ಇದನ್ನು ವಿರೋದ್ಸಿ, ಅಡ್ಡಿ ಮಾಡಿದ್ರೆ, ಚಾವಟಿ ತಕ್ಕೊಂಡು ಅವರ ಬೆನ್ನ ಚರ್ಮ ಕಿತ್ತು ಬರೋ ಹಾಗೆ ಬಿಗಿತೀನಿ, ಅವರ ತೆರಿಗೆನೆಲ್ಲ ದಿಕ್ಕಾಪಾಲಾಗಿ ಏರಿಸ್ತೀನಿ, ಗಡ್ಡ ಬಿಟ್ಟ ಖದೀಮ್ರು…” ಎನ್ನುತ್ತಿದ್ದರೆ, ನಮ್ಮ ಶಾಲೆಯಲ್ಲಿ ಅಸಂಖ್ಯವಾಗಿ ತುಂಬಿರುವ ಚೇಲಾಗಳು ಇದಕ್ಕೆಲ್ಲ ಚಪ್ಪಾಳೆ ತಟ್ಟಿ, ಪ್ರೋತ್ಸಾಹಿಸುತ್ತಿದ್ದರು ಬೇರೆ. ನನಗೆ ತಡೆಯಲಾಗಲಿಲ್ಲ. ರೊಚ್ಚಿಗೆದ್ದು ಅವನ ವಿರುದ್ಧ ಎದ್ದು ನಿಂತು ಮಾತನಾಡಿದೆ. ಇದರರ್ಥ ನನಗೆ ಆ ಕನ್ಯೆಯರ ಮೇಲೆ, ಅವರ ಅಪ್ಪಂದಿರ ಮೇಲೆ ಕರುಣೆ ಇತ್ತೆಂದಲ್ಲ. ಆದರೆ ಇಂತಹ ನೀಚ ಕೀಟದ ಮಾತನ್ನು ಕೇಳಿ, ಮರ್ಯಾದೆ ಬಿಟ್ಟ ಜನರು ಚಪ್ಪಾಳೆ ಹೊಡೆದು ಸಂಭ್ರಮಿಸುತ್ತಾರಲ್ಲ, ಅಂತ ಅಷ್ಟೇ. ಅವತ್ತು ಸರಿಯಾಗಿಯೇ ನೀರಿಳಿಸಿದೆ, ಅವನ ಮುಖದಲ್ಲಿ ಅಂತ ಊಹಿಸಿದ್ದೆ ಮೊದಲು ಆದರೆ. ಈ ಮೂರ್ಖ ಝ್ವರ್‍ಕೊವ್ ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಮಾತಾಡುವ ನುಣುಪಾದ ನಡತೆಯವನು. ಅದಕ್ಕೆ ಎಲ್ಲಾ ಆದ ಮೇಲೆ ಇವೆಲ್ಲವೂ ತಮಾಷೆಯಷ್ಟೇ, ಎನ್ನುವಂತೆ ನಕ್ಕು ಬಿಟ್ಟ. ಆಗ ನನಗನ್ನಿಸಿತು, “ಇಲ್ಲ ಸರಿಯಾಗಿ ಇವನ ಬೆಂಡೆತ್ತಲು ಆಗಲಿಲ್ಲ.”

ಆ ನಂತರ ಅದೆಷ್ಟೋ ಸಲ ಆತ ನನ್ನನ್ನು ಹೀಯಾಳಿಸಿ ಸತಾಯಿಸಿದ್ದ; ಜಿದ್ದಿನಿಂದಲ್ಲ ತಮಾಷೆಯಿಂದ, ನಗು-ನಗುತ್ತಾ. ಕೋಪ ಮತ್ತು ನಿಂದನೆಯಿಂದ ಸಿಡುಕಿ, ಪ್ರತ್ಯುತ್ತರಿಸಲು ನಾನು ಹಿಂದೇಟು ಹಾಕುತ್ತಿದ್ದೆ. ಶಾಲೆ ಬಿಟ್ಟ ಮೇಲೆ ಆತ ಮತ್ತೆ ನನ್ನ ಗೆಳೆಯನಾಗಲು ಪ್ರಯತ್ನಿಸಿದ್ದ. ನಾನು ಬೇಡ ಅನ್ನಲಿಲ್ಲ ಏಕೆಂದರೆ ನಾನು ಸಹ ಅವನ ಶೈಲಿಗೆ ಬೆರಗಾಗಿದ್ದೆ. ಆದರೆ ಈ ಸಹಜವಾಗಿಯೇ ಸ್ನೇಹವೂ ಬಹಳ ದಿನ ಉಳಿಯಲಿಲ್ಲ; ನಮ್ಮ ನಮ್ಮ ಹಾದಿ ಹಿಡಿದು ಬೇರೆಬೇರೆಯಾಗಿದ್ದೆವು ನಾವು. ಕೆಲ ಸಮಯದ ನಂತರ ಅವನು ಲ್ಯೂಟಿನೆಂಟ್ ಆದ ಸುದ್ದಿ ತಿಳಿಯಿತು. ಕಾಲ ಕಳೆದಂತೆ ಬೀದಿಯಲ್ಲಿ ನನ್ನತ್ತ ಕೈ ಬೀಸುವುದು, ಮುಗುಳ್ನಗುವುದನೆಲ್ಲಾ ನಿಲ್ಲಿಸಿದ್ದ. ನನ್ನಂತಹ ನಿಕೃಷ್ಟ ವ್ಯಕ್ತಿಯನ್ನು ನೋಡಿ ನಗುವುದು ಆತನ ವರ್ಚಸ್ಸನ್ನು ಕುಂದುಗೊಳಿಸುತ್ತದೆ ಎಂದು ಹೆದರಿದ್ದನೇನೋ. ಸ್ವಲ್ಪ ತಿಂಗಳು ಕಳೆದ ಮೇಲೆ ಸಿನಿಮಾ ಮಂದಿರದಲ್ಲಿ ಒಮ್ಮೆ ಆತನನ್ನು ಕಂಡಿದ್ದೆ. ಪುರಾತನ ಸೈನ್ಯಾಧಿಕಾರಿಯ ಮಗಳನ್ನು ಮೆಚ್ಚಿಸಲೆಂದು ಹಲ್ಕಿರಿಯುತ್ತಿದ್ದ. ಆ ಹಳೆ ಲವಲವಿಕೆ, ಸುಂದರ ಮುಖ ಲಕ್ಷಣಗಳೆಲ್ಲಾ ಹಾಗೇ ಇದ್ದರೂ ಅವನಲ್ಲಿದ್ದ ಮುಂಚಿನ ತೇಜಸ್ಸು ಈಗ ನಶಿಸಿ ಹೋಗಿತ್ತು. ಯದ್ವಾ ತದ್ವಾ ಊದುತಿದ್ದ. ಮೂವತ್ತಕ್ಕೆಲ್ಲಾ ಅವನ ಮುಖ ಜೋತು ಬೀಳುವ ಹಾಗಿತ್ತು. ಇಂತಹ ಝ್ವರ್‍ಕೊವ್‍ಗೋಸ್ಕರವೇ ಗೆಳೆಯರ ಬಳಗ ಬೀಳ್ಕಡುಗೆಯ ಔತಣವನ್ನು ನೀಡಲು ಇಚ್ಛಿಸಿದ್ದದ್ದು. ವಿಶೇಷ ಗೆಳೆತನ ಇವರದ್ದು, ಆದರೂ ಮನಸ್ಸಿನಲ್ಲಿ ಆತನ ಸಮಕ್ಕೆ ಹೆಜ್ಜೆ ಹಾಕುವ ಯೋಗ್ಯತೆಯೂ ಇಲ್ಲಿರುವ ಒಬ್ಬನಿಗೂ ಇಲ್ಲ ಎಂಬ ಅರಿವೂ ಇವರಿಗೆ ಚೆನ್ನಾಗಿಯೇ ಇತ್ತು ಎಂದೂ ನಾನು ಗ್ರಹಿಸಿದ್ದೆ. ಸೈಮೊನವ್ ಅತಿಥಿಗಳಲ್ಲಿ ಒಬ್ಬ ಫರ್‍ಫಿಚ್ಕಿನ್, ಜರ್ಮನ್ ಮೂಲದ ರಷ್ಯನ್. ಈ ಕುಳ್ಳ, ಮಂಗ ಮೋರೆಯವ; ದೊಡ್ಡ ಪೆದ್ದ, ಬೇರೆಯವರನ್ನು ತಮಾಷೆ ಮಾಡೋ ದಡ್ಡ. ನನ್ನ ಕಡು ವೈರಿ, ಪ್ರೈಮರಿ ಸ್ಕೂಲಿನ ದಿನಗಳಿಂದಲೂ ಈತ ನನ್ನ ಪರಮ ಶತ್ರು ಈ ಸ್ವಾರ್ಥಿ ಮಹಾ ತಲೆಹರಟೆ ಕೂಡ! ಕ್ಷುದ್ರ ಬಡಾಯಿಕೋರ, ಭಾರಿ ಆಕಾಂಕ್ಷೆಯುಳ್ಳವನಂತೆ ನಟಿಸುತ್ತಾನೆ ಅಷ್ಟೇ. ಆದರೆ ನಿಜವಾಗಿಯೂ ಆತನೊಬ್ಬ ಹೀನ, ಪುಕ್ಕಲು ಹೃದಯಿ. ಝ್ವರ್‍ಕೊವ್‍ನ ಬೂಟು ನೆಕ್ಕುವವರಲ್ಲಿ ಇವನಿಗೆ ಪ್ರಧಾನ ಸ್ಥಾನವಿದೆ. ದುರುದ್ದೇಶದಿಂದ ಅವನನ್ನು ನಗಿಸಿ, ಕಡೆಗೆ ಅವನಿಂದಲೇ ದುಡ್ಡು ಕೀಳುವ ಖದೀಮ. ಇನ್ನೊಬ್ಬ ಅತಿಥಿ ಟ್ರೂಡೋಲಿಬೋವ್. ಅಪೂರ್ವವಾದುದು ಇವನಲ್ಲೇನು ಇಲ್ಲ. ಉದ್ದದ ಆಳು, ಸೈನ್ಯದ ಅಸಾಮಿ, ತಣ್ಣಗಿನ ಭಾವ, ಪ್ರಾಮಾಣಿಕ. ಆದರೆ ಯಶಸ್ಸನ್ನೇ ಪೂಜಿಸುವ ಈ ಮನುಷ್ಯನಿಗೆ ಭಡ್ತಿಯ ವಿಷವನ್ನೊಂದು ಬಿಟ್ಟು ಬೇರೇ ಯಾವ ಮಾತಾಡಲೂ ತಾಕತ್ತಿಲ್ಲ. ನಮ್ಮ ನಡುವೆ ಇವನ ಪ್ರಾಮುಖ್ಯತೆ ಹೆಚ್ಚಲು ಕಾರಣ ಇವನುಈ ಝ್ವರ್‍ಕೊವ್‍ಗೆ ಒಂದು ರೀತಿಯಲ್ಲಿ ದೂರದ ಸಂಭಂದಿಯಾದ್ದರಿಂದ! ನನ್ನನ್ನು ಆಗಾಗಾ ನಿರ್ಲಕ್ಷಿಸುತ್ತಿದ್ದ ಈ ಮಹಾಶಯ. ಆದರೆ ತೀರ ಸೌಜನ್ಯದಲ್ಲಿ ನನ್ನೊಡನೆ ವರ್ತಿಸದೇ ಇದ್ದರೂ ಕನಿಷ್ಟ ಪಕ್ಷ ನನ್ನನ್ನು ಸಹಿಸುವಷ್ಟು ಸಂಸ್ಕಾರ ಇವನಲ್ಲಿತ್ತು.

“ಸರಿ ಹಾಗಾದರೆ, ಒಬ್ಬಬ್ರೂ ಏಳು ರೂಬಲ್ಸ್ ಕೊಡ್ಬೇಕಾಗುತ್ತೆ” ಅಂದ ಟ್ರೂಡೋಲಿಬೊವ್, “ನಾವು ಮೂರು ಜನ ಇದ್ದೀವಿ, ಅಂದ್ರೆ ಒಟ್ಟಿಗೆ ಇಪ್ಪತ್ತೊಂದು ರೂಬಲ್ಸ್ ಆಯ್ತು. ಸೊಗಸಾದ ಊಟ ಸಿಗುತ್ತೆ ಅಷ್ಟು ಹಣಕ್ಕೆ. ಅಯ್ಯೋ ಖಂಡಿತಾ ಝ್ವರ್‍ಕೊವ್ ಹತ್ರ ಹಣ ಕೊಡಿಸ್ಬಾರ್ದು ನಾವು”
“ಅಯ್ಯೋ… ನಾವೇ ಕರ್ದು ಅವನನ್ನ, ಅವನ್ಹತ್ರನೇ ದುಡ್ಡು ಕೇಳಕ್ಕಾಗುತ್ತಾ…?”, ಖಚಿತವಾದ ದನಿಯಲ್ಲಿ ಮಾತನಾಡಿದ ಸೈಮೊನವ್.
“ನಿನಗೆ ಏನ್ ಅನಿಸುತ್ತೆ” ಮೂಗು ತೂರಿಸಿದ ಫರ್‍ಫಿಚ್ಕಿನ್, ತನ್ನ ಒಡತಿಯ ಅಲಂಕಾರವನ್ನು ಹೊಗಳುವ ಶಿಖಂಡಿಯ ಹಾಗೆ, “ಝ್ವರ್‍ಕೊವ್ ಸುಮ್ಮನೆ ಕೈ ಬೀಸಿಕೊಂಡು ಬರುತ್ತಾನ? ಕಡಿಮೆ ಅಂದ್ರೂ ಆರು ಬಾಟಲಿಗಳನ್ನಾದ್ರೂ ನಮಗೆ ಅಂತ ತರ್ತಾನೆ, ಜಾಣ ಅವನು.”
“ನಮಗ್ಯಾಕೆ ಆರು ಬಾಟಲಿ ಹೆಂಡ? ನಾವಿರೋದು ನಾಲ್ಕೇ ಮಂದಿ ತಾನೆ?” ತನ್ನ ಅಭಿಪ್ರಾಯ ತಿಳಿಸಿದ, ಟ್ರೂಡೋಲಿಬೇವ್ ಅವನೆಲ್ಲಾ ಜ್ಞಾನ ‘ಆರು ಬಾಟಲಿಗಳ ಮೇಲೆ ಕೇಂದ್ರೀತವಾಗಿತ್ತು.
“ಹೌದಲ್ಲ! ಮೂರು ಜನ, ಝ್ವರ್‍ಕೊವ್‍ನನ್ನೂ ಕೂಡಿಸಿ ನಾಲ್ಕು… ನಾವಿಷ್ಟು ಜನ ಏಳೇಳ್ ರೂಬಲ್ಸ್ ಹಾಕಿದ್ರೆ ಇಪ್ಪತ್ತೊಂದು ಆಗುತ್ತೇನೋ, ಪ್ಯಾರಿಸ್ ಹೋಟೆಲಲ್ಲಿ ನಾಳೆ ಸಂಜೆ ಐದಕ್ಕೆ ಹಾಗಾದರೆ” ಅಂದ ಸೈಮೊನವ್, ಈ ಪಾರ್ಟಿಯ ಆಯೋಜಕ ಆತನೇ ಆಗಿದ್ದರಿಂದ ವಿಷಯಗಳನ್ನು ಬೇಗನೇ ತೀರ್ಮಾನಿಸಲು ಕಾತರನಾಗಿದ್ದ.
‘‘ಇಪ್ಪತ್ತೊಂದು ಅಂದ್ಯಲ್ಲಾ…. ಅದ್‍ಹೇಗೆ?’’ ನಾನಂದೆ, ಕೋಪದಲ್ಲಿ ಸಿಡುಕಿ, “ನನ್ನನ್ನು ಸೇರ್ಸೀ ಲೆಕ್ಕ ಹಾಕಿದ್ರೆ ಇಪ್ಪತ್ತೆಂಟು ರೂಬಲ್ ಆಗುತ್ತೆ… ಇಪ್ಪತ್ತೊಂದಲ್ಲ.”
ಹೀಗೆ ಇದ್ದಕ್ಕಿದ್ದಂತೆ ನನ್ನನ್ನು ನಾನೇ ಇನ್ವೈಟ್ ಮಾಡಿಕೊಳ್ಳೋದು, ಒಂದು ಧೀಮಂತ ಛಾಯೇ ಎಂದೇ ಊಹಿಸಿದ್ದೆ ನಾನು; ಆಗ ಇವರೆಲ್ಲರನ್ನೂ ಗೆಲ್ಲುತ್ತೇನೆ; ಆಗ ಇವರೆಲ್ಲರೂ ಗೌರವದಲ್ಲಿ, ವಿಶ್ವಾಸದಲ್ಲಿ ನನ್ನನ್ನು ಇವರ ಗುಂಪಿಗೆ ಸೇರಿಸಿಕೊಳ್ಳಬಹುದೇನೋ… ಆಗ ಮನುಕುಲ ಪ್ರೀತಿಯಲ್ಲಿ ನಾನು ಭಾಗಿ… ಇದೇ ನನಗಾಗಿ ತಯ್ಯಾರಾಗಿರುವ ಕ್ರಿಯಾವಳಿ… ಈ ಕ್ರಿಯೆ ನೆರೆವೇರಿಸಲೆಂದೇ ನನ್ನ ಬಿಲದಿಂದ ಈಚೆ ಬಂದದ್ದು ನಾನು…
“ನಿಜಕ್ಕೂ ನಿನಗೆ ನಮ್ಮ ಜತೆ ಬರಕ್ಕೆ ಇಷ್ಟಾನಾ?” ಸೈಮೊನವ್ ಕೇಳಿದ; ಅವನು ಕಿರಿ-ಕಿರಿಗೊಂಡಿದ್ದನ್ನು ಮುಚ್ಚಿಡುವ ಪ್ರಯತ್ನವನ್ನು ಚೂರೂ ಮಾಡದೆ. ಅದಕ್ಕೇ ನನ್ನನ್ನು ಆತ ಅಪ್ಪಿತಪ್ಪಿಯೂ ನೋಡುತ್ತಿರಲಿಲ್ಲ. ಅವನಿಗೆ ನನ್ನ ನರ-ನರವು ತಿಳಿದಿತ್ತು; ಯಾವಾಗ ಹೇಗೆ, ಯಾವ ಥರ ಅವತಾರ ತೆಗೆಯುತ್ತೇನೇ ನಾನು ಎಂದು ಗೊತ್ತಿತ್ತು ಅವನಿಗೆ. ಅದಕ್ಕೆ ನನಗೆ ಅವನ ಮೇಲೆ ಭಾರೀ ರೋಷ!
“ಯಾಕೆ ಬರ್‍ಬಾರ್ದ…? ನಾನೂ ಕೂಡ ಝ್ವರ್‍ಕೋವ್‍ನ ಸ್ನೇಹಿತ ತಾನೇ? ನೀವೂ ನನ್ನೇ ಲೆಕ್ಕಕ್ಕೆ ತೆಗೆದುಕೊಳ್ದೇ ಇರೋದು, ನನ್ನ ತುಂಬಾ ರೇಗಿಸುತ್ತಪ್ಪ…” ನಾನು ಸಿಡಿದೆ.
“ಹಾಗಂತಾ ನಿನ್ನ ಎಲ್ಲಿ ಅಂತ ಹುಡುಕೋದು ನಾವು ಮಾರಾಯಾ?” ಫರ್‍ಫಿಚ್ಕಿನ್ ಕೆಟ್ಟದಾಗಿ ಕಿರುಚಿದ.
“ನಿನಗೂ ಝ್ವರ್‍ಕೋವ್‍ಗೂ ಅಷ್ಟಕಷ್ಟೇ…” ಸೇರಿಸಿದ ಟ್ರೂಡೋಲಿಬೋವ್, ಹುಬ್ಬೇರಿಸುತ್ತಾ. ಆದರೆ ನಾನು ನನ್ನ ನಿರ್ಧಾರಕ್ಕೆ ನಿಷ್ಠನಾಗಿದ್ದೆ.
“ಹಾಗಂತ ಒಂದೇ ಏಟ್ಗೇ ಈ ಥರ ನಿಮ್ಗೆ ಅನ್ನಿಸಿದ್ದ ಹಾಗೇ ನಿರ್ಧಾರ ತಗೋಳೋದು ತಪ್ಪು.” ನಡುಗುವ ಧ್ವನಿಯಲ್ಲಿ ನಾನಂದೆ, ದೇವರಿಗೇ ಗೊತ್ತು ಏನು ಆಗುತ್ತಿದ್ದೆ ಎಂಬಂತೆ. “ಅವನಿಗೂ ನನಗೂ ಆಗುವುದಿಲ್ಲ ಅನ್ನೋ ವಿಷಯಕ್ಕೇ ನಿಮ್ಮ ಜತೆ ಬರಕ್ಕೆ ನನಗೆ ಆಸೆ.”
“ಓಹ್! ಈ ವೈಭವದ ಮಾತುಗಳ್ನ ಆಡೋ ನಿನ್ನ ಅರ್ಥ ಮಾಡಿಕೊಳ್ಳೋದು ಆಗಲ್ಲಪ್ಪ… ಆಗಲ್ಲ.” ಅಂದ ಟ್ರೂಡೋಲಿಬೋವ್ ಸಣ್ಣ ನಗುವಿನೊಂದಿಗೆ. “ಸರೀ ನಿನ್ನ ಹೆಸರನ್ನೂ ಬರೀತೀವಿ ಬಿಡು ಸೈಮೊನವ್ ಅಂತೂ-ಇಂತೂ ಒಂದು ನಿರ್ಧರಾಕ್ಕೆ ಬಂದಿದ್ದ. ಈಗ ನನ್ನನ್ನು ನೋಡಿ, “ನಾಳೆ ಐದು ಗಂಟೆಗೆ ಹೋಟೇಲ್ ಡಿ ಪ್ಯಾರಿಸ್ಗೆ ಬಾ, ಗೊತ್ತಾಯ್ತಾ? ಜಾಗದ ಹೆಸರನ್ನ ಸರಿಯಾಗಿ ಜ್ಞಾಪಕ ಇಟ್ಕೋ.” ಅಂದ.
“ಮತ್ತೆ ನಿನ್ನ ಪಾಲಿನ ದುಡ್ಡು ಯಾರಪ್ಪ ಕೊಡ್ತಾರೇ….!” ಆ ಹಲ್ಕಾ ಫರ್‍ಫಿಚ್ಕಿನ್ ಶುರುಮಾಡಿದ, ಕ್ಷೀಣ ಸ್ವರದಲ್ಲಿ ಮತ್ತೆ ಸೈಮೋನವ್‍ನತ್ತ ದೃಷ್ಟಿ ಹಾಯಿಸಿ ತಲೆ ಕುಣಿಸಿ, ಒಮ್ಮೆಲೇ ಬಾಯಿಮುಚ್ಚಿದ, ಏಕೆಂದರೆ ಇವನ ಅಧಿಕಪ್ರಸಂಗದಿಂದ ಸೈಮೋನವ್ ಕೂಡ ಸ್ವಲ್ಪ ನಾಚಿದ್ದ “ಬರ್ಲಿ ಬಿಡಿ ಅವ್ನೂ…” ಟ್ರೂಡೋಲಿಬೋವ್ ಎದ್ದು ನಿಲ್ಲುತ್ತಾ ಅಂದ, “ಭಾರೀ ಆಸೆ ಪಡ್ತಿದ್ದಾನೆ ಬರಕ್ಕೆ …”
“ಆದರೆ ನಾವೆಲ್ಲ ಒಂದೇ ಗುಂಪಿನೋರು; ಒಬ್ಬರನ್ನು ಇನ್ನೊಬ್ಬರು ಚೆನ್ನಾಗಿ ತಿಳಿದಿರೋವ್ರು” ಫರ್‍ಫಿಚ್ಕಿನ್ ಕೋಪದಲ್ಲಿ ತನ್ನ ಟೋಪಿಯನ್ನೆತ್ತಿಕೊಳ್ಳುತ್ತಾ ಹೇಳಿದ, “ಇದೇನು ಆಫಿೀಸ್ ಪಾರ್ಟಿ ಅಲ್ಲ ಅಲ್ವಾ…? ಬಹುಶಃ ನಮಗೆ ನೀನ್ ಅಲ್ಲಿಗೆ ಬರೋದೇ ಬೇಡ್ವೇನೋ…”
ಎಲ್ಲರೂ ನಿರ್ಗಮಿಸಿದರು;

ಹೋಗುವಾಗ ‘ಮತ್ತೆ ಸಿಗೋಣ’ ಎಂದು ಔಪಚಾರಿಕವಾಗಿಯೂ ಫರ್‍ಫಿಚ್ಕಿನ್ ಹೇಳಲಿಲ್ಲ. ಟ್ರೂಡೋಲಿಬೋವ್ ಕಷ್ಟದಲ್ಲಿ ತಲೆಕುಣಿಸಿದ; ಆದರೆ ನನ್ನಾಚೆ ನೋಡಲೂ ಇಲ್ಲ. ಸೈಮೊನವ್ ಮಾತ್ರ ನನ್ನ ಜತೆಗೇ ದ್ದ. ಬೇಜಾರಲ್ಲಿರುವಂತೆ ಕಂಡ, ಕಕ್ಕಾಬಿಕ್ಕಿಯಾಗಿದ್ದ. ವಿಚಿತ್ರವಾಗಿ ನನ್ನ ಕಡೆ ದೃಷ್ಟಿ ನೆಟ್ಟ. ಅವನೂ ಕೂರಲಿಲ್ಲ, ನನ್ನ ಕೂರಲೂ ಹೇಳಲಿಲ್ಲ. “ಹ್ಞೂಂ… ಸರಿ ಹಾಗಾದರೆ ನಾಳೆ ನೀನೂ ಬರ್ತೀಯಾ… ಈವಾಗ್ಲೆ ಹಣ ಕೊಡ್ತೀಯ ಹೇಗೆ? ನೀನು ಬರೋದು ಖಾತ್ರಿಯಾಗ್ಬೇಕು ನನಗೆ ಅದಕ್ಕೇ ಕೇಳ್ತಿದ್ದೀನಿ” ಪಿಟಿ-ಪಿಟಿ ಅಂತ ಪಿಸುಗುಟ್ಟಿದ, ಮುಜುಗರದಲ್ಲಿ
ನಾನು ಕೆಂಪಾದೆ, ನಾಚಿಕೆಯಲ್ಲಿ. ಹಾಗೆ ಕೆಂಪಾದಾಗ ಅವನಿಂದ ಸಾಲವಾಗಿ ಪಡೆದಿದ್ದ ಹದಿನೈದು ರೂಬಲ್ಲುಗಳ ನೆನಪಾಯಿತು. ಹಾಗೆಂದು ನಾನೇನು ಅದನ್ನು ಮರೆತಿರಲಿಲ್ಲ. ಆದರೆ ಅದನ್ನು ಮರು ಪಾವತಿಸಿಯೂ ಇರಲಿಲ್ಲ.

“ನೀನು ಒಪ್ಪಲೇ ಬೇಕು ಸೈಮೊನವ್, ಇಲ್ಲಿಗೆ ಬಂದಾಗ ಈ ವಿಷಯ ನನಗೆ ಗೊತ್ತೇ ಇರ್ಲಿಲ್ಲ ನೋಡು… ಮತ್ತೆ ಬರ್ತಾ ಹಣ ತರಕ್ಕೆ ಮರ್ತೆ ಅದಕ್ಕೇ ನನ್ನ ಕ್ಷಮ್ಸು…”
“ಸರಿ ಸರಿ ಹೋಗ್ಲಿ ಬಿಡು, ನಾಳೇನೇ ಹೋಟ್ಲಲಲ್ಲಿ ಕೊಡ್ತೀಯಂತೆ, ನಿನ್ಗೂ ತಿಳೀಲೀ ಅಂತ ಹೇಳ್ದೆ… ದಯವಿಟ್ಟು ಇದಕ್ಕೆಲ್ಲ…” ಹಠಾತ್ತಾಗಿ ಸುಮ್ಮನಾದ, ಸಂಕಟದಲ್ಲಿ ಹಿಮ್ಮಡಿಯ ಮೇಲೆ ತನ್ನೆಲ್ಲಾ ಭಾರ ಹಾಕುತ್ತಾ ಅಡ್ಡಾಡುತ್ತಿದ್ದ.

“ನನ್ನಿಂದ ನಿನಗೇನು ತಡ ಆಗ್ತಿಲ್ಲ ತಾನೆ?” ಅಂತ ಕೇಳಿದೆ, ಎರಡು ನಿಮಿಷಗಳ ನಂತರ.
“ಹಾಗೇನಿಲ್ಲ” ಎಂದವನು, ಇದ್ದಕ್ಕಿದ್ದಂತೆ, “ಅಂದ್ರೆ… ನಿಜ ಹೇಳ್ಬೇಕಂದ್ರೆ… ನಿನ್ನಿಂದ ತಡ ಆಗ್ತಾ ಇದೆ. ಇಲ್ಲೇ ಹತ್ತಿರದ ಜಾಗಕ್ಕೆ ಒಬ್ರನ್ನ ಬಿಟ್ಟು ಬರಕ್ಕಿದೆ” ಎಂದ, ಕ್ಷಮೆ ಮತ್ತು ಅರ್ಧಸಂಕೋಚದ ದನಿಯಲ್ಲಿ.
“ಓ ದೇವರೇ…! ಮೊದಲೇ ಯಾಕೆ ಹೇಳಲಿಲ್ಲ!” ನಾನು ಕಿರುಚಿದೆ, ನನ್ನ ಟೋಪಿಯನ್ನು ಎಳೆದುಕೊಂಡು. ಆಶ್ಚರ್ಯವೆಂದರೆ ಬಹಳ ಸುಲಭ, ಸಹಜವಾಗಿ ನಾನು ಉತ್ತರಿಸಿದೆ. ಅದು ಹೇಗೆ ಈ ಆರಾಮದಾಯಕ ಶೈಲಿ ನನ್ನದಾಯಿತೋ ದೇವರೇ ಬಲ್ಲ.

“ದೂರ ಏನೂ ಇಲ್ಲ… ಇಲ್ಲೇ ಹತ್ತಿರ…” ಮತ್ತೆ ಮತ್ತೆ ಸೈಮೋನವ್ ಅದನ್ನೇ ಪುನರುಚ್ಛರಿಸಿದ, ನನ್ನನ್ನು ಬಾಗಿಲ ತನಕ ನಡೆಸುತ್ತಾ. ಈ ಗಡಿಬಿಡಿ ಮುದ್ರೆ ಆತನಿಗೆ ಚೂರೂ ಒಪ್ಪುತ್ತಿರಲಿಲ್ಲ.
“ಇನ್ನು ನಾಳೆ, ಸರಿಯಾಗಿ ಐದು ಗಂಟೆಗೆ!” ಎಂದು ಕೂಗಿದ, ಏರಿದ ದನಿಯಲ್ಲಿ. ಅವನಿಗೆ ನಾನು ಅಲ್ಲಿಂದ ಜಾಗ ಖಾಲಿ ಮಾಡಿದ್ದು ತುಂಬಾ ಖುಷಿಯಾಗಿತ್ತು. ಆದರೆ ನಾನು ಕೋಪದಲ್ಲಿ ಕುದಿಯುತ್ತಿದ್ದೆ.
“ಯಾಕಾಗಿ ನಾನು ಹೀಗೆಲ್ಲ ಆಡಿದೆ? ಥೂ… ಯಾವ ಪ್ರೇತ ನನ್ನನ್ನು ಅಲ್ಲಿಗೆ ತಳ್ಳಿತು?”- ಬೀದಿಯಲ್ಲಿ ಓಡುವಾಗ . ಕಟ-ಕಟನೆ ಹಲ್ಲು ಕಡಿಯುತ್ತಾ ನನ್ನ ಸೋಲೊಲಿಕಿ ಶುರುವಾಗಿತ್ತು. “ಇಷ್ಟೆಲ್ಲಾ ಯಾರಿಗೋಸ್ಕರ ಆ ವಿಕೃತ, ಆ ಕುಳ್ಳ ಹಂದಿ ಝ್ವರ್‍ಕೋವ್‍ಗೋಸ್ಕರ ! ಖಂಡಿತವಾಗಿಯೂ ನಾನಲ್ಲಿಗೆ ಹೋಗಲ್ಲ… ಇವರಿಗೆಲ್ಲಾ ಒಂದು ಬಿಡಿಗಾಸ ಬೆಲೆಯೂ ನಾನು ಕೊಡಲ್ಲ. ಅವ್ರ ಋಣದಲ್ಲೇನು ಬದುಕಿಲ್ವಲ್ಲ ನಾನು, ನಾಳೇನೆ ಪತ್ರ ಬರೆದು ಸುದ್ದಿ ತಿಳಿಸ್ತೀನಿ ಸೈಮೊನವ್‍ಗೆ…”

ಆದರೆ ನಾನು ಅಲ್ಲಿಗೆ ಖಡಾಖಂಡಿತವಾಗಿ ಹೋಗೇ ಹೋಗುತ್ತೇನೆ ಎಂದು ನನಗೆ ಬಹುಶಃ ಗೊತ್ತಿತ್ತು ಅದಕ್ಕೇ ನನಗೆ ಅಷ್ಟು ಸಿಟ್ಟು ಬಂದದ್ದು. *ಹಾಗೆ ಹೋಗುವುದು ಅಸಭ್ಯತೆ, ಮೂರ್ಖತನದ ಪರಮಾವಧಿ ಎಂದು ನನಗೆ ಹೆಚ್ಚುಹೆಚ್ಚು ಮನವರಿಕೆ ಆದಷ್ಟೂ, ಆ ಸಾಧ್ಯತೆ ಕೂಡ ಹೆಚ್ಚು-ಹೆಚ್ಚಾಗುತಿತ್ತು.
ಈ ಸಾಹಸಕ್ಕೆ ವಕ್ಕರಿಸಿದ್ದ ವಿಘ್ನವೆಂದರೆ ಕೊಡಲು ನನ್ನ ಹತ್ತಿರ ಅಷ್ಟು ಹಣವಿಲ್ಲದೇ ಇದ್ದದ್ದು. ಆಗ ಒಂಭತ್ತು ರೂಬಲ್ ಮಾತ್ರ ಇದ್ದದ್ದು ನನ್ನ ಪೆಟ್ಟಿಗೆಯಲ್ಲಿ. ಅದರಲ್ಲಿ ಏಳು ರೂಬಲ್ ನನ್ನ ಮನೆಯಾಳು ಅಪೋಲನ್‍ನ ಸಂಬಳ. ಅವನೊಬ್ಬ ಕೆಟ್ಟ, ಒಳಗೇ ಸಿಟ್ಟಿಟ್ಟು ಕುದಿಯುವ, ಅವಮಾನಿಸುವ ಖೇಡಿ. ಈಗ ಸಂಬಳ ಸರಿಯಾಗಿ ಕೊಡದಿದ್ದರೆ ಮಹಾ ರಾದ್ಧಾಂತ ಮಾಡುತ್ತಿದ್ದ ಈ ಧೂರ್ತ, ನನ್ನ ಪಾಲಿನ ಕಂಟಕ. ಈ ದ್ರೋಹಿಯ ಕತೆ ಇನ್ನೊಮ್ಮೆ ಹೇಳುವೆ. ಆದರೆ ನನಗೆ ಚೆನ್ನಾಗಿಯೇ ಗೊತ್ತಿತ್ತು, ಅವನಿಗೆ ಸಂಬಳ ಕೊಡದೇ ನಾನು ಅಲ್ಲಿಗೆ ಖಂಡಿತ ಹೋಗೇ ಹೋಗುತ್ತೇನೆ ಎಂದು.

ಅವತ್ತು ರಾತ್ರಿ ನನಗೆ ಭಯಂಕರ ಕನಸುಗಳು… ಅದರಲ್ಲೇನು ಅಚ್ಚರಿ ಇಲ್ಲ ಬಿಡಿ. ಆ ಸಂಜೆಯೆಲ್ಲಾ ನನ್ನ ಹಳೆಯ ಶಾಲೆಯ ನೆನಪಿನಿಂದ ಜರ್ಜರಿತವಾಗಿದ್ದೆ. ಅವುಗಳಿಂದ ನಾನು ಕಳಚಿಕೊಳ್ಳಲು ಆಗಿರಲಿಲ್ಲ. ಆ ಶಾಲೆಗೆ ನನ್ನನ್ನು ದೂರದ ನೆಂಟರು ತುರುಕಿಸಿದ್ದರು. ಅದಕ್ಕೂ ಮುಂಚೆ ಈ ದೂರದ ಸಂಭಂಧಿಗಳೇ ನನ್ನ ಸರ್ವಸ್ವವಾಗಿದ್ದರೂ, ಆ ಜಾಗದಲ್ಲಿ ನನ್ನ ಬಿಟ್ಟ ಮೇಲೆ ಮತ್ತೆ ಯಾವತ್ತೂ ಅವರ ಮುಖಗಳನ್ನು ನಾನು ನೋಡಲೂ ಇಲ್ಲ, ಅವರ ಕಥೆಯೇನಾಯಿತು ಎಂದು ತಿಳಿಯಲೂ ಇಲ್ಲ. ಆ ಶಾಲೆಯಲ್ಲಿ ಈ ಜನ ನನ್ನನ್ನು ತುರುಕಿ ಹೋದ ಕಾಲಕ್ಕೆ ನಾನೊಬ್ಬ ಅನಾಥನಾಗಿದ್ದೆ. ಅವರೆಲ್ಲರ ಖಂಡನೆಗಳಿಂದ ಜಜ್ಜಿ ಹೋಗಿ ಮೌನವಾಗಿ ಎಲ್ಲವನ್ನೂ ಗುಮಾನಿಯಿಂದ ಗಮನಿಸುವ ವ್ಯಕ್ತಿಯಾಗಿದ್ದೆ. ಆ ಶಾಲೆಯ ಹುಡುಗರು ನನ್ನನ್ನು ನೋಡಿ ವ್ಯಂಗ್ಯವಾಡುತ್ತಿದ್ದರು, ಸೇಡಿನಿಂದ ದೂಕಾಡುತ್ತಿದ್ದರು, ಏಕೆಂದರೆ ಆಗಲೇ ನಾನೊಬ್ಬ ಅನ್ಯ. ಆದರೆ ನನಗೆ ಈ ವ್ಯಂಗ್ಯವನ್ನು ಮಾತ್ರ ಸಹಿಸಲಾಗಲೇ ಇಲ್ಲ. ಅವರು ಬೇರೆಯವರ ಜೊತೆ ಕೂಡಿ ಓಡಿ ಆಡುವಂತೆ, ನಾನು ಅವರೆಲ್ಲರ ಜತೆ ಬೆರೆಯುವುದೇ ಅಸಾಧ್ಯವಾಗಿತ್ತು. ಆ ಹುಡುಗರ ಮೇಲೆ ಹಗೆ ಕಾರಿ ದೂರ ಹೋಗಿ ನನ್ನನ್ನು ನಾನು ಮುಚ್ಚಿಕೊಂಡಿದ್ದೆ. ಅಂಜಿಕೆಯಲ್ಲಿ ಗಾಯಾಳುವಾಗಿ ವಿಪರೀತವಾದ ಗರ್ವದಲ್ಲಿ ನೊಂದಿದ್ದೆ. ಅವರ ಕತ್ತರಿಸುವ ಸ್ವಭಾವದಿಂದ ಕೆರಳಿದ್ದೆ. ನನ್ನ ಮುಖ, ನನ್ನ ಅಷ್ಟಾವಕ್ರ ದೇಹವನ್ನು ತಮಾಷೆ ಮಾಡಿ ಸಿನಿಕತನದಲ್ಲಿ ಹಲ್ಲು ಬಿಡುತ್ತಿದ್ದರು, ಆ ಕ್ರೂರಿಗಳು. ಆದರೆ ಆ ಮೂದೇವಿಗಳಿಗೆ ತಮ್ಮ ದ್ರಾಬೆ ಮುಖಗಳು ಹೇಗಿದ್ದವು ಅಂತ ಗೊತ್ತಿದ್ದರೆ ತಾನೆ! ಕಾಲ ಹೋದಂತೆ ನಮ್ಮ ಶಾಲೆಯಲ್ಲಿದ್ದ ಹುಡುಗರ ಮುಖ ಭಾವಗಳು ಕ್ರಮೇಣ ಮಾರ್ಪಾಟಾಗಿ ಹದಗೆಡುತ್ತಾ ಮೂರ್ಖತನದ ಗಣಿಯಾಗಿ ಬಿಡುತ್ತಿದ್ದವು. ಎಷ್ಟು ಮುದ್ದಾದ ಹುಡುಗರು ನಮ್ಮ ಶಾಲೆಗೆ ಸೇರುತ್ತಿದ್ದರು. ಆದರೆ ಕೆಲವು ವರ್ಷಗಳಾದ ಮೇಲೆ ಅಸಹ್ಯವೇ ಅವರಾಗಿ ಬಿಡುತ್ತಿದ್ದರು. ನಾನು ಹದಿನಾರು ವರುಷದವನಾಗಿದ್ದಾಗಲೇ ಜಿದ್ದಿನ ಅಚ್ಚರಿಯಲ್ಲಿ ಅವರತ್ತ ನೋಡುತ್ತಿದ್ದೆ. ಆಗಲೂ ಸಹ ನಾನು ಅವರ ಚಿಲ್ಲರೆ ದೃಷ್ಟಿಕೋನದಿಂದ, ಪೆದ್ದು ಪೆದ್ದು ನಡತೆಯಿಂದ, ಅವರ ಲದ್ದಿ ಮಾತುಗಳಿಂದ ತಬ್ಬಿಬ್ಬಾಗಿದ್ದೆ. ಮುಖ್ಯವಾದ ವಿಷಯಗಳನ್ನೇ ಅರಿಯದ ಮೂಢರವರು. ಅದ್ಭುತ ಸತ್ಯಗಳಲ್ಲಿ ಅವರಿಗೆ ಆಸ್ಥೆಯೇ ಇರಲಿಲ್ಲ. ಇದನ್ನೆಲ್ಲಾ ಗಮನಿಸಿದ್ದ ನಾನು, ಈ ದಡ್ಡ ಹೈಕಳು ನನ್ನಕ್ಕಿಂತ ತುಂಬಾ ಕೀಳು ಎಂದು ಯೋಚಿಸದೇ ಅಂದು ಕೂಡ ಇರಲು ಸಾಧ್ಯವೇ ಇರಲಿಲ್ಲ. ನಾನು ಅವರೆಲ್ಲಗಿಂತಲೂ ಶ್ರೇಷ್ಠ ಎಂದುಕೊಳ್ಳುವುದಕ್ಕೆ ಕಾರಣ ನನ್ನ ಗಾಯಗೊಂಡ ಅಹಂಕಾರವಂತೂ ಖಂಡಿತಾ ಅಲ್ಲ, ಅಥವಾ ನಾನು ಹಗಲುಗನಸಿನಲ್ಲಿ ಮೈ ಕಾಯಿಸಿಕೊಳ್ಳುವಾಗ ಅವರೆಲ್ಲ ಬದುಕಿನಾಳವನ್ನು ಅರ್ಥೈಸಿಕೊಂಡಿದ್ದರು, ಅನ್ನೋ ವಾಂತಿ ಬರಸುವಷ್ಟು ಕ್ಲೀಷೆ ಆಗಿರುವ ಮಾತನ್ನು ಮತ್ತೆ ಇಲ್ಲಿ ಆಡಲೇ ಬೇಡಿ. ನಿಜಬದುಕಿನ ಬಗ್ಗೆ ಅವರಿಗೆ ಏನೇನೂ ಗೊತ್ತಿರಲಿಲ್ಲ. ಈ ಕಾರಣಕ್ಕಾಗಿಯೇ ಅವರೆಂದರೆ ನನ್ನ ಮೈಯೆಲ್ಲಾ ಉರಿಯುತ್ತಿತ್ತು. ಆದರೆ ಇದಕ್ಕೇ ತದ್ವಿರುದ್ಧವಾಗಿರುವ, ಮರಳು ಮಾಡುವ, ನಿಜಕ್ಕೂ ಟೋಪಿ ಹಾಕುವ ಇನ್ನೊಂದು ವಾಸ್ತವವನ್ನು ತಮ್ಮ ಮೂರ್ಖ ಖಯಾಲಿಗಳ ಪ್ರಭಾವದಿಂದ ಬೇಗನೆ ಒಪ್ಪಿ, ಯಶಸ್ಸು… ಯಶಸ್ಸು ಅಂತ ಸಾಯುತಿದ್ದ ಹುಡುಗರು ಅವರು. ಶುದ್ಧವಾಗಿದ್ದೂ, ಹೀನವಾಗಿ ಕಾಣಲ್ಪಟ್ಟ, ತುಳಿಯಲ್ಲಟ್ಟ ಎಲ್ಲವನ್ನೂ ಇವರು ಹೃದಯ ಹೀನರಂತೆ, ನಾಚಿಕೆಯೆಲ್ಲ, ಬಿಟ್ಟು ನಕ್ಕು-ನಕ್ಕು ಛೇಡಿಸುತ್ತಿದ್ದರು. ದುಡ್ಡು ತರುವ ಪೋಶ್ಟಿಂಗನ್ನೇ ಬುದ್ಧಿವಂತಿಕೆಯೆಂಬ ತಪ್ಪು ತಿಳುವಳಿಕೆಯಲ್ಲಿ ಹದಿನಾರನೆಯ ವಯಸ್ಸಿಗೆಲ್ಲ ಐಷಾರಾಮಿ ಪ್ಲೇಸ್ಮೆಂಟುಗಳ ಬಗೆಗೆ ಚರ್ಚಿಸುತ್ತಿದ್ದರು. ಅವರ ಬಾಲ್ಯ ಮತ್ತು ಯೌವನಾವಸ್ಥೆಗಳ ಸುತ್ತಲೂ ತಪ್ಪು ನಿದರ್ಶನಗಳೇ ಸುತ್ತಿರುವಾಗ ಪಾಪ ಆವರು ಬೇರೆ ಏನು ತಾನೇ ಯೋಚಿಸುತ್ತಾರೆ?! ಒಟ್ಟಿನಲ್ಲಿ ಘೋರವಾಗಿ ಕೆಟ್ಟಿದ್ದ ಯುವ ಜನಾಂಗವದು. ಹೌದು, ನನ್ನ ಈ ಮಾತುಗಳು ಸಿನಿಕತನದಿಂದ ಕೂಡಿದ ತಳವಿರದ ಆರೋಪಗಳು. ನಿಸ್ಸಂಶಯವಾಗಿಯೇ ಅವರ ಹೀನ ಅವಸ್ಥೆಯಲ್ಲೂ ಯೌವನದ ಹುಮ್ಮಸ್ಸು ಚೂರು ಉಳಿದಿತ್ತು. ಆದರೆ ಅದರಲ್ಲಿ ಲಂಪಟತನವಿತ್ತೇ ಹೊರತು ಸೆಳೆತವಿರಲಿಲ್ಲ. ಬಹುಶಃ ಅವರಿಗಿಂತಲೂ ನಾನು ಕೆಟ್ಟು ಹೋಗಿದ್ದೆ; ಹಾಗಿದ್ದರೂ ಅವರನ್ನು ಭಯಂಕರವಾಗಿ ದ್ವೇಷಿಸುತ್ತಿದ್ದೆ ನಾನು. ಅವರ ಪ್ರೀತಿಗೆ ನಾನಿನ್ನು ಕಾಯುವ ಸ್ಥಿತಿಯಲ್ಲಿರಲಿಲ್ಲ, ಬದಲಾಗಿ ಅವರನ್ನು ಅವಮಾನಿಸಲು ತಾಳ್ಮೆಯಲ್ಲಿ ಹೊಂಚು ಹಾಕುತಿದ್ದೆ.

ಅವರ ವ್ಯಂಗ್ಯದಿಂದ ಪಾರಾಗಲು ಉದ್ದೇಶಪೂರ್ವಕವಾಗಿಯೇ ಕಷ್ಟಪಟ್ಟು ಓದಿದೆ. ಜಾಸ್ತಿ ಅಂಕ ತೆಗೆಯುವ ಹುಡುಗರ ಸಮಕ್ಕೆ ನಿಲ್ಲುವ ಹಾಗಾದೆ. ಅವರೆಲ್ಲರೂ ಆಗ ನನ್ನನು ಮೆಚ್ಚಿದರು. ಆ ಮೂರ್ಖರು ಓದಲೂ, ಅರ್ಥಮಾಡಿಕೊಳ್ಳಲು ಆಗದ ಪುಸ್ತಕಗಳನ್ನು ನಾನಾಗಲೇ ಅರಗಿಸಿಕೊಂಡಿದ್ದೆನೆಂದು ನಿಧಾನಕ್ಕೆ ಅವರಿಗೂ ತಿಳಿಯಿತು. ಈ ಬೆಪ್ಪುತಕ್ಕಡಿಗಳು ಕಂಡು ಕೇಳರಿಯದ ಐಡಿಯಾಗಳನ್ನು(ನಮ್ಮ ಸ್ಪೆಶಲ್ಲು ಕೋರ್ಸಿನಲ್ಲಿ ಇಲ್ಲದ) ನಾನು ಉಸಿರಾಡುತ್ತೇನೆಂದು ಕ್ರಮೇಣ ಅರಿತರು. ಆಗ ಪೈಶಾಚಿಕ ವ್ಯಂಗ್ಯದಲ್ಲಿ ಈ ಸತ್ಯವನ್ನು ಈ ಹುಡುಗರು ಎದುರಿಸಿದರೂ ಶಿಕ್ಷಕರೂ ನನ್ನ ಆಳವಾದ ಅಧ್ಯಯನದಿಂದ ಬೆರಗಾಗಿ(ಏಕೆಂದರೆ ನಾನು ಓದುತ್ತಿದ್ದ ಎಷ್ಟೋ ಪುಸ್ತಕಗಳ ಸಾರ ಮತ್ತು ಅವುಗಳ ಅಸ್ತಿತ್ವ ನಮ್ಮ ಮೇಷ್ಟ್ರಿಗಳಿಗೂ ಗೊತ್ತಿರಲಿಲ್ಲ) ನನ್ನ ಕಡೆ ವಿಶೇಷವಾಗಿ ಗಮನ ಹರಿಸಿದ ಮೇಲೆ ನೈತಿಕವಾಗಿ ನಾನು ಏರಿದ ಮಟ್ಟಕ್ಕೆ ಅವರಲ್ಲಿ ಯಾರೊಬ್ಬನೂ ಏರಲಾರನೆಂಬ ನಗ್ನ ಸತ್ಯವನ್ನು ಮನಸಾರೆ ಎಲ್ಲರೂ ಒಪ್ಪಲೇ ಬೇಕಾಯಿತು. ಹಾಗೇ ಕ್ರಮೇಣ ವ್ಯಂಗ್ಯ ಕಡಿಮೆಯಾಯಿತು. ಆದರೆ ಅವರ ಅಸಹ್ಯ ನೋಟ ಉಳಿಯಿತು. ಹೀಗೇ ಶೀತಲವಾಗಿ ಮಾತ್ಸರ್ಯ ನಮ್ಮ ನಡುವೆ ಹೆಪ್ಪುಗಟ್ಟಿತು. ಕೊನೆಗೆ ನನಗೇ ಇದನ್ನೆಲ್ಲಾ ಸಹಿಸಲಾಗಲೇ ಇಲ್ಲ. ನನಗೆ ವಯಸ್ಸಾದಂತೆ, ಜನರ ಜತೆ, ಗೆಳೆಯರ ಜತೆ ಬೆರೆಯುವ ಹಂಬಲ ವೇಗವಾಗಿ ಹಬ್ಬುತಿತ್ತು. ನಾನೇ ಅವರ ಸನಿಹ ಹೋಗಲು ಪ್ರಯತ್ನಿಸಿದ್ದೆ. ಆದರೆ ಏನು ಮಾಡೋದು, ನನಗೆ ಹತ್ತಿರ ಬರುವುದು, ಗೆಳೆತನ ಬೆಳೆಸಲೆಂದೇ ಹಲ್ಲು ಗಿಂಜಿ ದೇಶವಾರಿ ಮಾತಾಡುವುದೆಲ್ಲ ಬರುವುದಿಲ್ಲ. ಇವೆಲ್ಲವೂ ಅಸ್ವಾಭಾವಿಕ; ಅದಕ್ಕೆ ಎಲ್ಲವೂ ಶುರುವಾಗುವ ಮುನ್ನವೇ ಮುಗಿದು ಹೋಗುತಿತ್ತು.

ಒಬ್ಬ ಗೆಳೆಯನಿದ್ದ ನನಗೆ, ಆದರೆ ಆ ಹೊತ್ತಿಗಾಗಲೇ ನಾನೋರ್ವ ಸರ್ವಾಧಿಕಾರಿ ಹೃದಯವನಾಗಿದ್ದೆ. ಅವನ ಆತ್ಮದ ಮೇಲೆ ನನಗೆ ಸಂಪೂರ್ಣವಾದ ಹಿಡಿತವಿರಬೇಕೆಂದು ಆಶಿಸಿದ್ದೆ. ಅವನ ಸುತ್ತಮುತ್ತಲಿದ್ದ ಜಗತ್ತಿನ ಬಗ್ಗೆ ಮಾತ್ಸರ್ಯ, ನಿಂದನೆಗಳನ್ನು ಅವನಲ್ಲಿ ಹನಿ-ಹನಿಯಾಗಿ ತುಂಬಲು ಇಚ್ಛಿಸಿದ್ದೆ. ಅವನು ಆ ಜಗತ್ತಿನಿಂದ ಬಿಡುಗಡೆಯಾಗಲೇ ಬೇಕು ಎಂದು ದಬಾಯಿಸಿದ್ದೆ. ನನ್ನ ಭಾವೋಧ್ರಿಕ್ತ ಗೆಳೆತನದಿಂದ ಆತನನ್ನು ದಿಗಿಲುಗೊಳಿಸಿದೆ. ಕಣ್ಣೀರು ಬರಿಸಿ, ಅವನನ್ನು ಉನ್ಮಾದ ರೋಗದಲ್ಲಿ ತೂಗಾಡಿಸಿದ್ದೆ. ಅವನೊಬ್ಬ ಬೆಪ್ಪ ಹಾಗೂ ನಿಷ್ಠಾವಂತ. ಆದರೆ ಅವನ ಭಕ್ತಿ ಮತ್ತು ನಿಷ್ಠೆಯು ಸಂಪೂರ್ಣವಾಗಿ ನನ್ನೆಡೆಗೇ ಎಂದು ಅರಿಯುತ್ತಿದ್ದಾಗಲೇ ನಾನು ಅವನನ್ನು ಹೇಸಿಗೆಯಲ್ಲಿ ದ್ವೇಷಿಸಲು ಶುರುಮಾಡಿ, ದೂರ ತಳ್ಳಿದ್ದೆ. ಅಧೀನದಲ್ಲಿಟ್ಟು, ಸೋಲಿಸಲೆಂದೇ ಬಳಸಿಕೊಂಡೆ ಎಂಬಂತೆ ಆತನನ್ನು ಬಿಸಾಡಿದ್ದೆ. ಆದರೆ ಅಲ್ಲಿದ್ದ ಎಲ್ಲ ಹುಡುಗರನ್ನು ಸೋಲಿಸಲಾಗಲಿಲ್ಲ ನನ್ನ ಕೈಯಲ್ಲಿ. ನನ್ನ ಹಳೆಯಗೆಳೆಯ ಬಿಡಿ, ಆತನದ್ದು ಭಾರೀ ಅಪರೂಪದ ಎಕ್ಸ್‍ಎಪ್ಶನ್ನ್ ಕೇಸು… ಅದಕ್ಕೇ ನನಗೆ ಪ್ರಿಯನಾಗಿದ್ದ. ಮಿಕ್ಕವರೆಲ್ಲ ಹೇಗೆ ಅಂತ ಈಗಾಗಲೇ ಹೇಳೀದ್ದೇನೆ ನಿಮಗೆ. ಅದಕ್ಕೇ ನಾನು ಕಡೆಗೂ ಶಾಲೆಯನ್ನು ಬಿಟ್ಟು ಹೋದದ್ದು. ಆ ಪ್ರದೇಶಕ್ಕೂ ನನಗೂ ಅಂಟಿಕೊಂಡಿದ್ದ ಕರಳು ಬಳ್ಳಿಯಂತಹ ಬಂಧನವನ್ನು ಕಡಿಯಲು ನನ್ನ ಪಾಲಿಗೆ ಒಲಿದು ಬಂದಿದ್ದ ನೌಕರಿಯನ್ನೂ ಮುಂದೆ ಕೈ ಬಿಟ್ಟಿದ್ದೆ, ಭೂತಕಾಲವನ್ನು ಶಪಿಸಿ ಪೂರ್ಣವಾಗಿ ಧೂಳು ಮತ್ತು ಬೂದಿಯಲ್ಲಿ ಅದನ್ನು ಹೂತು ಹಾಕಲು… ಆದರೂ ನಾನು ನರಕಕ್ಕೆ ತಳ್ಳಿಸಿಕೊಳ್ಳುವವನು, ಇಲ್ಲದಿದ್ದರೆ, ಇಷ್ಟೆಲ್ಲ ಆದ ಮೇಲೂ, ಎಲ್ಲ ಬಿಟ್ಟು ಮತ್ತದೇ ಭೂತಕಾಲದ ಮುಖವಾದ, ಸೈಮೊನವ್‍ನನ್ನು ಕಾಣಲು ಹೋಗುತ್ತಿದ್ದೇನೆಯೇ?!

ಆ ದಿನ ಬೆಳಗ್ಗೆ ಉದ್ವಿಗ್ನನಾಗಿ ಹಾಸಿಗೆಯಿಂದ ಜಿಗಿದೆದ್ದೆ, ಈ ಎಲ್ಲವೂ ಒಮ್ಮೆಲೆ ಆಗಿ ಬಿಡುತ್ತದೆ ಎನ್ನುವಂತೆ. ಮೂಲಭೂತವಾದ ಬದಲಾವಣೆಯೇನೋ ನನ್ನ ಬದುಕಲ್ಲಿ ಸಂಭವಿಸಲಿದೆ ಎನ್ನುವ ಕಡಕ್ ನಂಬಿಕೆಯಿತ್ತು ಅವತ್ತು. ಬಹುಶಃ ಈ ರೀತಿಯ ಸಂದರ್ಭ ನನಗೆ ತೀರ ಹೊಸತು. ಆದರೆ, ಪ್ರತಿಯೊಂದು ಕ್ಷುಲಕ ಘಟನೆಗಳೂ ನಡೆಯುವ ಮುಂಜಾನೆಯ ವೇಳೆ ಏನೋ ತೀವ್ರವಾದ ಮಾರ್ಪಾಡು ಆಗುತ್ತದೆ ಎಂದೇ ಭಾವಿಸುತ್ತಿದ್ದ ಜೀವಿ ನಾನು. ಸರಿ, ನನ್ನ ಕಛೇರಿಗೆ ಹೋಗಿ ಎರಡು ಘಂಟೆ ಮುಂಚೆಯೇ ಮನೆಗೆ ಬಂದು ಹೊರಡಲು ಸಜ್ಜಾದೆ; ಆದರೆ ಎಲ್ಲರಿಗಿಂತ ಮುಂಚೆ ನಾನೊಬ್ಬನೇ ಅಲ್ಲಿ ಹೋಗಿ ಕೂರುವುದು ಯಾಕೋ ಸರಿ ಅನ್ನಿಸಲಿಲ್ಲ. ಆಮೇಲೆ ಅವರೆಲ್ಲರೂ ನಾನು ಈ ಪಾರ್ಟಿಗೆ ಬರಲು ತುದಿಗಾಲಲ್ಲಿ ನಿಂತಿರುವೆ ಎಂದೇ ಯೋಚಿಸಿ ಬಿಡುತ್ತಿದ್ದರು. ಈ ಒತ್ತಡದ ಜತೆ-ಜತೆಗೇ ಇನ್ನೂ ಸಾವಿರಾರು ವಿಷಯಗಳು ನನ್ನನ್ನು ತಳಮಳಕ್ಕೀಡು ಮಾಡಿ ಅಸ್ವಸ್ಥಗೊಳಿಸಿದವು. ಈ ಹಲ್ಕಾ ಅಪೋಲನ್ ಅಪ್ಪಿ-ತಪ್ಪಿಯೂ ಎರಡನೆಯ ಸಲ ಯಾವ ಕೆಲಸವನ್ನೂ ಮಾಡದ ಮನುಷ್ಯ. ಅವನಿಗದು ಅನಗತ್ಯ ಅಧಿಕ ಹೊರೆ. ಅದಕ್ಕೆ ಆ ಪ್ರಾಣಿಗೆ ಗೊತ್ತಾಗದ ಹಾಗೆ ಬ್ರಶ್ ಒಂದನ್ನು ಕದ್ದು ನನ್ನ ಬೂಟುಗಳನ್ನು ಮತ್ತೆಮತ್ತೆ ತಿಕ್ಕಿ ತಿಕ್ಕಿ ಹೊಳೆಸಿದೆ. ಇದೇನಾದರು ಅವನಿಗೆ ಗೊತ್ತಾದರೆ ಮತ್ತೆ ಮತ್ತೆ ನನ್ನನ್ನು ಅಸಹ್ಯವಾಗಿ ಕಾಣುವ ಅಪಾಯವಿದ್ದರಿಂದ ಈ ಕೆಲಸವನ್ನು ಅತೀ ಗುಟ್ಟಾಗಿ ನೆರೆವೇರಿಸಿದ್ದೆ. ಆದರೆ ನನ್ನ ಬಟ್ಟೆಗಳನ್ನು ಕೂಲಂಕುಷವಾಗಿ ಗಮನಿಸುವಾಗ, ಅವು ಮುದಿಯಾಗಿ ಜೋತು ಬಿದ್ದಿರುವುದು ಗೊತ್ತಾಯಿತು. ಥೂ… ದಿನ ಹೋದಂತೆ ಅಚ್ಚುಕಟ್ಟಾಗಿ ಬಟ್ಟೆ ಹಾಕುವುದನ್ನೆಲ್ಲ ನಾನು ಅಸಡ್ಡೆ ಮಾಡುತ್ತಿದ್ದೆ ಅನ್ನಿಸಿತು. ನನ್ನಲ್ಲಿದ್ದ ಚೆಂದದ ಉಡುಗೆಂದರೆ ಅದು ನನ್ನ ಸಿವಿಲ್ಲ್ ಸರ್ವಿಸ್ಸಿನ ಯೂನಿಫಾರ್ಮು, ಆದರೆ ಪಾರ್ಟಿಗೆ ಯೂನಿ ಫಾರ್ಮ್ ಹಾಕಲಾಗುತ್ತದೆಯೇ? ಈ ಎಲ್ಲ ತಲ್ಲಣಗಳಿಗೆ ರಂಗೇರಿದ್ದು, ತುಂಬಾ ದೊಡ್ಡದಾಗಿ ನನ್ನ ಪೈಜಾಮದ ಮಂಡಿಯಲ್ಲಿ ಪಡಿಯಚ್ಚಿದ್ದ ಹಳದಿ ಕಲೆಯಿಂದ. ನನ್ನ ಆತ್ಮಗೌರವವನ್ನೆಲ್ಲಾ ಈ ಹಳದಿ ಕಲೆಯೇ ತಿಮಿಂಗಲದಂತೆ ನುಂಗಿಹಾಕುತ್ತಿದೆ ಎನಿಸಿತು. ಆದರೆ ಅದೇ ಸಮಯದಲ್ಲಿ ಹೀಗೆಲ್ಲ ಅಂದುಕೊಳ್ಳುವುದು ಎಷ್ಟು ಹೇಸಿಗೆ ಮತ್ತು ಹೀನ ಎಂದೂ ಗೊತ್ತಿತ್ತು ನನಗೆ. “ಯೋಚಿಸಿ ಕೂರಲು ಈಗ ಸಮಯವಿಲ್ಲ, ವಾಸ್ತವ ಹತ್ತಿರಹತ್ತಿರ ಬರಲಿದೆ ಇನ್ನೇನು” ಎಂದುಕೊಂಡೆ. ಹಾಗಿದ್ದೂ ಈ ಎಲ್ಲಾ ವಿಷಯಗಳನ್ನು ಘೋರವಾಗಿ ಉತ್ಪ್ರೇಕ್ಷಿಸುತ್ತಿದ್ದೇನೆ ಎಂದೂ ಅರಿತಿದ್ದೆ. ಆದರೆ ನಾನೇನು ಮಾಡಲಿ? ಈ ಎಲ್ಲ ತಳಮಳಗಳಿಂದ ನಾನೇ ನನ್ನ ವಶದಲ್ಲಿ ಇರಲಿಲ್ಲ ಹಾಗೂ ಜ್ವರ ಏರಿದಂತೆ ನಡುಗುತ್ತಿದ್ದೆ ಬೇರೆ . ಈ ಖದೀಮ ಝ್ವರ್‍ಕೋವ್ ನನ್ನನ್ನು ಹೇಗೆ ತಣ್ಣಗೆ, ಅಸಡ್ಡೆಯಲ್ಲಿ ಭೇಟಿಯಾಗುತ್ತಾನೆ, ಆ ಮೊದ್ದು ಟ್ರೂಡೋಲಿಬೋವ್ ಹೇಗೆ ನಿಂದಕನ ಹಾಗೆ ನನ್ನತ್ತ ದೃಷ್ಟಿ ಬೀರುತ್ತಾನೆ! ಎಷ್ಟು ಕೊಳಕಾಗಿ ಹಾಗೂ ಎಂತಹ ಸೊಕ್ಕಿನಿಂದ ಆ ವಿಕೃತ ಫರ್‍ಫಿಚ್ಕಿನ್ ಝ್ವರಕೋವ್‍ಗೆ ಪೂಸಿ ಹೊಡೆಯುವ ಸಲುವಾಗಿ ನನ್ನನ್ನು ಕೆಕ್ಕರಿಸುತ್ತಾನೆ; ಎಷ್ಟು ಚೆನ್ನಾಗಿ ಸೈಮೊನವ್ ಇವೆಲ್ಲವನ್ನೂ ಅರ್ಥಮಾಡಿಕೊಂಡರೂ, ಯಾವುದನ್ನೂ ಹೊರ ಹಾಕದೆ, ಬಾಯಿ ಮುಚ್ಚಿಕೊಂಡು, ನನ್ನ ಹೀನ ಅಹಂ ಅನ್ನೂ ಹಾಗೂ ನೈತಿಕ ಪುಕ್ಕಲು ಮನಸ್ಸನ್ನು ಹೇಸಿಗೆಯಲ್ಲಿ ಕಾಣುತ್ತಾನೆ. ಇವೆಲ್ಲವೂ ಒಟ್ಟಾರೆಯಾಗಿ ಎಷ್ಟೊಂದು ಅಸಂಗತ, ಅಜ್ಞಾನ. ಅಲ್ಲಿಗೆ ಹೋಗದೇ ಇರುವುದೇ ಎಲ್ಲ ದೃಷ್ಟಿಕೋನದಿಂದಲೂ ಸರಿಯೇ, ಆದರೆ ಒಮ್ಮೆ ನಾನು ಏನನ್ನಾದರೂ ಮಾಡಲೇ ಬೇಕು ಎಂದು ಪಟ್ಟು ಹಿಡಿದರೆ ಅದನ್ನು ಮುಗಿಸದೇ ಹಿಂದೆ ಸರಿದ ನಿದರ್ಶನವೇ ಇಲ್ಲ. ಹಾಗೇನಾದರೂ ಸರಿದು ಬಿಟ್ಟರೆ ನನ್ನ ಬದುಕು ಪೂರ್ತಿ ನನ್ನನು ನಾನೇ ಛೇಡಿಸುತ್ತಿರುತ್ತೇನೆ. “ನೀನು ಬೆದರಿ ಓಡಿದೆ… ನೀನು ಬೆದರಿ ಓಡಿದೆ… ವಾಸ್ತವಕ್ಕೆ ಬೆದರಿ ಓಡಿದೆ…” ಅದಕ್ಕೇ ನಾನು ಕಲ್ಪಿಸಿಕೊಂಡಷ್ಟು ಮಹಾ ಪುಕ್ಕಲ ನಾನಲ್ಲವೆಂದು ನನಗೆ ನಾನೇ ನಿರೂಪಿಸಬೇಕಿತ್ತು. ನನ್ನಲ್ಲಿದ್ದ ಅದ್ಭುತ ಜ್ಞಾನದಿಂದ ಆ ಜನರನ್ನು ಪ್ರಭಾವಿಸಬೇಕಿತ್ತು. ನಿಯಂತ್ರಿಸಬೇಕಿತ್ತು. ಅವರನ್ನು ಒತ್ತಾಯಿಸಿ ನನ್ನನ್ನೇ ಕಡ್ಡಾಯವಾಗಿ ಪ್ರೀತಿಸುವಂತೆ ಮಾಡಬೇಕಿತ್ತು. ಬತ್ತಲಾರದ ನನ್ನ ಬುದ್ಧಿ ಚಮತ್ಕಾರದಿಂದ, ನನ್ನ ಅಮೋಘವಾದ ಅರಿವಿನಿಂದ ಆ ಧಿಮಾಕಿನ ಝ್ವರ್‍ಕೋವ್‍ನನ್ನು ಹಿಂಡಿ ಬಿಡಬೇಕಿತ್ತು. ಅವಮಾನಿತನಾಗಿ ಮಂಕನಂತೆ ಆತ ಆಗ ಮೂಲೆ ಸೇರುತ್ತಾನೇನೋ, ಆಗ ಅವನ ಪಟಲಾಂ ಅವನನ್ನೇ ದೂರ ತಳ್ಳುತ್ತದೆಯೇನೋ, ನಂತರ ಬಹುಶಃ ನಾನೇ ಅವನ ಜತೆ ಸಂಧಾನ ಮಾಡಿಕೊಂಡು, ನಮ್ಮಿಬ್ಬರ ಗೆಳೆತನ ಸುದೀರ್ಘವಾಗಿ ಬಾಳಲಿ ಎಂದು ಷರಾಬು ಕುಡಿಯುತ್ತೇನೇನೋ. ಆದರೆ ವ್ಯಂಗ್ಯಾತ್ಮಕ ವಿರೋಧಾಭಾಸವೆಂದರೆ ಹೀಗೆ ಈ ಹಗಲುಗನಸಿನ ಗಾಳಿಗೋಪುರದಲ್ಲಿ ಮಜ ಅನುಭವಿಸುತ್ತಿದ್ದಾಗ* ಈ ಘಟನೆಗಳೆಲ್ಲಾ ಆಗುವುದೇ ನನಗೆ ಬೇಕಿಲ್ಲ ಎಂದೂ ಅರಿತಿದ್ದೆ. ಅವನನ್ನು ಹಿಂಡಿ ಮೂಲೆಗೆ ಎಸೆಯುವುದು, ಅವನನ್ನು ನನ್ನ ಕಡೆಗೆ ಸೆಳೆಯುವುದು, ಅವರನ್ನೆಲ್ಲಾ ನನ್ನ ಮನಸ್ಸಿಗನುಗುಣವಾಗಿ ವರ್ತಿಸುವಂತೆ ಮಾಡುವದು, ಈ ಯಾವುದನ್ನೂ ನಾನು ಸಾಧಿಸಬೇಕಾದ ಅವಶ್ಯಕತೆಯೇ ಇಲ್ಲ. ಇವನ್ನೆಲ್ಲ ಸಾಧಿಸಿ ಬಿಡುತ್ತಿದ್ದರೂ ಅಥವಾ ಸಾಧಿಸದೇ ಇದ್ದರೂ, ನಾನಂತೂ ಖಂಡಿತ ತಲೆ ಕೆಡಿಸಿಕೊಳ್ಳುತ್ತಿರಲೇ ಇಲ್ಲ, ಆದರೂ… ಓಹ್! ಆ ದಿನ ಬೇಗನೇ ಉರುಳಿ ಹೋಗಲಿ ಎಂದು ಹೇಗೆಲ್ಲಾ ಪ್ರಾರ್ಥಿಸಿದ್ದೆ! ತೋರ್ಪಡಿಸಲಾಗದ ತಲ್ಲಣದಲ್ಲಿ ಕಿಟಕಿ ಬಳಿ ಹೋಗಿ ಗಾಳಿ ಕಿಂಡಿಕಿಟಕಿಯ ದೂಡಿ ಆಚೆ ಕತ್ತಲಲ್ಲಿ ಕಪ್ಪಾಗಿ ಹೊತ್ತಿರುವ ದಟ್ಟ ದಪ್ಪ ಮಂಜುಮಳೆಗೆ ಮುಖ ಕೊಟ್ಟು ಇಣುಕಿದ್ದೆ…

ಅಂತೂ ಇಂತೂ ನನ್ನ ಭೀಕರವಾದ ಗೋಡೆಯ ಗಡಿಯಾರ ‘ಐದಾಯಿತು’ ಎಂದು ಉಬ್ಬಸದ ಸ್ವರದಲ್ಲಿ ಅರಚಿತು. ನಾನು ಗಡಿಬಿಡಿಯಲ್ಲಿ ಟೋಪಿ ಹಾಕಿಕೊಂಡು, ಆ ಅಪೋಲನ್‍ನನ್ನು ನೋಡದೆ ಇರಲು ಹೆಣಗುತ್ತಾ (ಆ ಖದೀಮ ಬೆಳಗ್ಗೆ ಇಂದ, ಅವನ ಈ ಕಂತಿನ ಸಂಬಳಕ್ಕಾಗಿ ಕಾದು ಕೂತಿದ್ದ. ಆದರೆ ಅಹಂಕಾರಕ್ಕೆ ಕಟ್ಟುಬಿದ್ದು ತಾನಾಗಿ ಕೇಳದೆ ಸುಮ್ಮನೆ ಕುಕ್ಕರಿಸಿದ್ದ.), ಬಾಗಿಲಿನಿಂದ ಆಚೆ ಓಡಿ, ಅದ್ದೂರಿ ಸಾರೋಟನ್ನು ಬಾಡಿಗೆಗೆ ಹಿಡಿದೆ. ನನ್ನಲ್ಲಿ ಉಳಿದಿದ್ದ ಕೊನೆಯ ಐವತ್ತು ಕೊಪೆಕ್‍ಗಳನ್ನು ಈ ಸವಾರನಿಗೆ ಮುಡುಪಾಗಿಟ್ಟು, ಸಜ್ಜನನ ಹಾಗೆ ಹೋಟೆಲ್ ಡಿ ಪ್ಯಾರಿಸ್‍ನತ್ತ ಸಾಗಿದೆ.
*ನೊಣದಂತೆ: ಇಲಿ ಮತ್ತು ನೊಣಗಳ ನಿದರ್ಶನ. ಇಲಿ ಮತ್ತು ನೊಣ ಎರಡೂ ಹೇಸಿಗೆ ಮತ್ತು ಸಿಟ್ಟು ಹುಟ್ಟಿಸುವ ಜೀವಿಗಳು ಮೊದಲೆನೆಯ ಭಾಗದಲ್ಲಿ ಈತ ಇಲಿಯ ಹಾಗೇ ತಾನು ಎಂದಿದ್ದ. ಇಲಿಯೆಂದರೆ ಜನರಿಗೆ ಹೆದರಿ ಬಿಲ ಸೇರುವ ಪ್ರಾಣಿ . ಈತನ ಬಗ್ಗೆ ಈತನೇ ಮಾಡಿಕೊಂಡಿರುವ ಊಹೆಯಿದು. ಈತನಿಗೆ ಸಮಾಜವೆಂದರೆ ಭಯ. ಆದರೆ ಇಲ್ಲಿ ಬೇರೆಯವರು ಈತನನ್ನು ನೊಣದ ಹಾಗೆ ನೋಡುತ್ತಿದ್ದಾರೆ ಅನ್ನಿಸುತ್ತಿದ್ದೆ ಇವನಿಗೆ. ಸಮಾಜಕ್ಕೆ ಆತ ಅಷ್ಟು ಅಮುಖ್ಯ ಮತ್ತು ತುಚ್ಛ… ಏಕೆಂದರೆ ಆತನಂತಹಾ ಮಹಾ ಜ್ಞಾನಿ ಸಮಾಜಕ್ಕೇ ಬೇಡವೇ ಬೇಡ. ಯೇಟ್ಸ್ ಆ ದೇಶ ಮುದುಕರಿಗಲ್ಲ ಅಂದಿದ್ದೂ ಇದೇ ಅರ್ಥದಲ್ಲಿ. ಈ ಪ್ರಾಣಿಗಳ ಕ್ರಿಮಿಗಳ ಹೋಲಿಕೆ ಹಾಗೇ ಮುಂದುವರೆಯುತ್ತದೆ. ಈತನ ಸೋ ಕಾಲ್ಡ್ ಗೆಳೆಯರೆಲ್ಲರ ಹೆಸರು ಒದೊಂದು ವಿಚಿತ್ರವಾದ ಪ್ರಾಣಿಗಳ ಹೆಸರನ್ನು ಸೂಚಿಸುತ್ತವೆ.

ಮುಂದುವರೆಯುವುದು…

ಅನುವಾದ :  ಗೌತಮ್ ಜ್ಯೋತ್ಸ್ನಾ

ಚಿತ್ರ : ಮದನ್ ಸಿ.ಪಿ


ಟಿಪ್ಪಣಿಗಳು

* ಇಷ್ಟೆಲ್ಲಾ ಹಠಕ್ಕೆ ಬಿದ್ದು ಇಷ್ಟವೇ ಇಲ್ಲದ ಯಾತನೆಯನ್ನು ಅಪ್ಪುವುದು ಈತ ಮೊದಲನೆಯ ಭಾಗದಲ್ಲಿ ಹೇಳಿದ್ದ ಮನುಷ್ಯ ಬೇಕೆಂದೇ ಹಲ್ಲು ನೋವಿನಲ್ಲಿ ಅರಚಿ ಬೇರೆಯವರ ನಿದ್ದೆ ಹಾಳು ಮಾಡುವ ಕಲ್ಪನೆಗೊಂದು, ಈತನ ಬದುಕಿನಲ್ಲೇ ಜರುಗಿದ ಘಟನೆಯ ನಿದರ್ಶನ. ಕಾರಣವಿಲ್ಲದಯೇ ನೋವಲ್ಲಿ ಬೇಯುವ ಇಚ್ಛೆ.. ಅಲ್ಲಿಗೆ ಹೋಗಲೇ ಬಾರದು ಹೋದರೆ ತನಗೇ ಅವಮಾನ ಎಂದು ಚೆನ್ನಾಗಿ ಗೊತ್ತಾದಷ್ಟೂ ಆತ ಹೋಗಲು ತಯ್ಯಾರಾಗುವುದು ಇದಕ್ಕೇ..
* ಫ಼್ಯಾಂಟಸಿಯಲ್ಲಿ ಬದುಕಿ ಬದುಕಿ ರಿಯಾಲಿಟಿಯ ಸ್ವರ್ಶ ಮರೆತು ಹೋದದಕ್ಕೊಂದು ನಿದರ್ಶನ

ಪ್ರತಿಕ್ರಿಯಿಸಿ