ನಾನು ನೋಡಿದ ಚಿತ್ರ: ಸೂಡಾನಿ ಫ್ರಮ್ ನೈಜಿರಿಯಾ

ಇದನ್ನೊಂದು ಶುದ್ದ ಚಿತ್ರ ವಿಮರ್ಶೆಯಾಗಿ ಬರೆಯಲು ಸಾದ್ಯವೇ ಇಲ್ಲವೆಂದು ತೋರುತ್ತಿದೆ. ವಸ್ತು ನಿಷ್ಟವಾದ ವಿಮರ್ಶೆಗೆ ಕಥಾವಸ್ತುವಿನೊಂದಿಗೆ ಒಂದು ಬೌದ್ದಿಕ ಮತ್ತು ಭಾವನಾತ್ಮಕ ಅಂತರ ಅಗತ್ಯ ಎಂಬುದು ಅನುಭವಕ್ಕೆ ಬರುತ್ತಿದೆ. ’ಸೂಡಾನಿ ಫ್ರಮ್ ನೈಜೀರಿಯ’ ಎಂಬ ಮಲಯಾಳಿ ಚಿತ್ರ ನನ್ನ ಗಮನಸೆಳೆದದ್ದು ನನಗೆ ಆಫ್ರಿಕಾದ ದೇಶಗಳು ಮತ್ತು ಜನರ ಬಗೆಗಿನ ಪ್ರೀತಿ ಆಕರ್ಷಣೆ ಒಡನಾಟ ಕಾರಣವಾದರೂ ಚಿತ್ರನೋಡಿದ ಮೇಲೆ ಚಿತ್ರದ ವಸ್ತುವಿನೊಂದಿಗೆ ನನ್ನ ನಿಕಟತೆ ಇನ್ನು ಹತ್ತಿರದ್ದು ಎಂದು ಗೊತ್ತಾಯಿತು. ಏಕೆಂದರೆ ಚಿತ್ರದ ಕತೆ ನಡೆಯುವುದು ಕೇರಳದ ಮಲಪ್ಪುರಂ ಜಿಲ್ಲೆಯ ಗ್ರಾಮೀಣ ಬಾಗದಲ್ಲಿ. ನನ್ನ ವೃತ್ತಿಜೀವನ ಆರಂಭವಾದದ್ದೂ ಅಲ್ಲೇ. ಮನಸ್ಸೆಂಬ ಕುದುರೆ ಪರಶುರಾಮ ಎಕ್ಸ್ಪ್ರೆಸ್ ರೈಲು ಹತ್ತಿ ತೀರೂರು ಕುಟ್ಟಿಪುರಂ ಪೋನ್ನಾಣಿಯಕಡೆ ನೆನಪಿನ ಆಳಕ್ಕೆ ನೆಗೆಯುತ್ತದೆ. ಸ್ಮರಣ ಕೋಶದಲ್ಲಿ ಹುದುಗಿದ ಬಿಂಬಗಳು ಭಾಜ್ಹದಪುಜ್ಹ (ಭಾರಥಪುರ ) ನದಿಯ ಮರಳಿನ ಹರವಾದ ದಂಡೆಯ ಭಿತ್ತಿಯಲ್ಲಿ ದೃಶ್ಯ ಶ್ರವ್ಯ ಮತ್ತು ವಾಸನೆಗಳ ಹಲವು ಆಯಾಮಗಲ್ಲಿ ಗರಿಗೆದರಿ ನಿಲ್ಲುತ್ತವೆ. ಹೊಸ ಸ್ಥಳಕ್ಕೆ ಹೋದಾಗ ಧುತ್ತನೆ ಆವರಿಸುವ ಅನಾಮಧೆಯತೆ ನಿಮ್ಮ ಚಿತ್ತ ಬಿತ್ತಿಯನ್ನ ಸಂಪೂರ್ಣ ಶುದ್ದವಾಗಿ ಒರೆಸಿ ಹೊಸ ಬಿಂಬಗಳಿಗೆ ವಿಸ್ತಾರವಾದ ಅವಕಾಶ ಸೃಷ್ಟಿಸುತ್ತದೆ ಎಂದೆನ್ನಿಸುತ್ತದೆ.
ಇಸ್ಲಾಂ ಮಲಪ್ಪುರಂ ಜಿಲ್ಲೆಯಲ್ಲಿ ಪ್ರಬಲವಾಗಿ ನೆಲೆಯೂರಿರುವ ಒಂದು ಧರ್ಮವಾದರೆ ಫುಟ್ಬಾಲ್ ಎರಡನೆಯ ಧರ್ಮ ! ವಿಶ್ವಕಪ್ ಸಂದರ್ಭದಲ್ಲಿ ಎಲ್ಲೆಲ್ಲೂ ಬ್ರೆಜಿಲ್ ಅರ್ಜೆಂಟೀನ ದೇಶಗಳ ಧ್ವಜ ಹಾರಾಡುತ್ತಿರುತ್ತವೆ. ಆಗ ಅಲ್ಲಿ ಅಬಾಲ ವೃದ್ದರಾದಿಯಾಗಿ ಎಲ್ಲರಿಗೂ ಫುಟ್ಬಾಲ್ ಜ್ವರ ಏರುತ್ತದೆ. ಸೂಡಾನಿ ಫ್ರಮ್ ನೈಜೀರಿಯ ಕೇರಳದ ಈ ಮಲಪ್ಪುರಂ ಜಿಲ್ಲೆಯ ಗ್ರಾಮೀಣ ಭಾಗದ ಈ ಫುಟ್ಬಾಲ್ ಸಂಸ್ಕೃತಿಯ ಭೂಮಿಕೆಯಲ್ಲಿ ಹೆಣೆದ ಒಂದು ಮಾನವೀಯ ಕಥೆ. ಇದು ಚಕ್ ದೇ ಇಂಡಿಯಾ ರೀತಿಯ ಬರೀ ಕ್ರೀಡೆಯ ಬಗೆಗಿನ ಚಿತ್ರವಂತೂ ಖಂಡಿತ ಅಲ್ಲ. ಐ.ಪಿ.ಎಲ್ ರೀತಿಯಲ್ಲಿ ಕೇರಳದಲ್ಲಿ ಒಂದು ತಂಡದಲ್ಲಿ ಏಳು ಜನ ಮಾತ್ರ ಇರುವ ಸೆವೆನ್ಸ್ ಫುಟ್ಬಾಲ್ ಪಂದ್ಯಾವಳಿಗಳು ವಾಪಕವಾಗಿ ನಡೆಯುತ್ತವೆ. ಫುಟ್ಬಾಲ್ ಕ್ರೀಡೆಯ ಬಗ್ಗೆ ವಿಪರೀತ ಪ್ರೇಮ ಇರುವ ಇಲ್ಲಿಯ ಜನ ಕೇರಳ ಮಾತ್ರವಲ್ಲದೆ ಹೊರ ರಾಜ್ಯ ಮತ್ತು ಹೊರ ದೇಶಗಳಿಂದಲೂ ಕ್ರೀಡಾಪಟುಗಳನ್ನು ತಮ್ಮ ಕ್ಲಬ್ಬುಗಳಿಗೆ ಕರೆತರುತ್ತಾರೆ. ಗ್ರಾಮೀಣ ಬಾಗದ ಕ್ರೀಡಾಂಗಣಗಳಲ್ಲಿ ಬೊಂಬುವಿನಿಂದ ನಿರ್ಮಿತವಾದ ಗ್ಯಾಲರಿಗಳಲ್ಲಿ ಕೂತು ತಮ್ಮ ನೆಚ್ಚಿನ ಪ್ರಾದೇಶಿಕ ಸ್ಟಾರ್ ಕ್ರೀಡಾ ಪಟುಗಳ ಆಟವನ್ನು ವೀಕ್ಷಿಸಲು ಜನ ದುಬಾರಿ ಟಿಕೆಟ್ಗಳನ್ನು ಕೊಂಡು ಬಾರೀ ಸಂಖ್ಯೆಯಲ್ಲಿ ಬರುತ್ತಾರೆ. ನಮ್ಮಲ್ಲಿ ಹೋರಿ ಬೆರೆಸುವ ಪಂದ್ಯಾವಳಿಗಳು ಹೇಗೆ ಗ್ರಾಮೀಣ ಸಂಸ್ಕೃತಿಯ ಭಾಗವಾಗಿವೆಯೋ ಹಾಗೆ ಸೆವೆನ್ಸ್ ಫುಟ್ಬಾಲ್ ಅಲ್ಲಿನ ಗ್ರಾಮೀಣ ಫುಟ್ಬಾಲ್ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗ! ಇತ್ತೀಚಿಗೆ ಇವುಗಳಲ್ಲಿ ಕೆಲವು ಪ್ರಸಿದ್ದವಾದ ಫುಟ್ಬಾಲ್ ಕ್ಲಬ್ಬು ಗಳ ಮ್ಯಾನೇಜರ್ ಗಳು ಆಫ್ರಿಕಾ ದೇಶಗಳಾದ ಸುಡಾನ್, ಘಾನಾ, ನೈಜೀರಿಯಾ, ಐವೋರಿಕೋಸ್ಟ್ ನಂತಹ ದೇಶಗಳಿಂದ ಪ್ರತಿಭಾನ್ವಿತ ಆಟಗಾರರನ್ನು ಕರೆತರುವುದು ಉಂಟು. ಆ ಆಟಗಾರರೊಂದಿಗೆ ಸಂವಹನ ನಡೆಸಲು ಇಂಗ್ಲಿಷು ಅಥವಾ ಫ್ರೆಂಚ್ ಬಾರದ, ಕೇವಲ ಈ ಕ್ರೀಡೆಯ ಬಗೆಗಿರುವ ಪ್ರೇಮವೊಂದರಿಂದಲೇ ಪ್ರೇರಣೆ ಪಡೆದ ಅಷ್ಟೇನೂ ಸ್ಥಿತಿವಂತನಲ್ಲದ ಒಬ್ಬ ಮ್ಯಾನೇಜರ್ ಮಜೀದ್ ರೆಹಮಾನ್ ಈ ಕತೆಯ ಮುಖ್ಯ ಪಾತ್ರ.

ಆ ವಯಸ್ಸಿನ ಎಷ್ಟೋ ಕನ್ನಡಿಗರಿಗೆ ಅನ್ನಿಸುವಂತೆ ನನಗೂ ಕರ್ನಾಟಕದ ಹೊರಗೆ ಜಿಗಿಯುವ ಹೊಸ ಭಾಷೆ ಸಂಸ್ಕೃತಿಯೊಂದನ್ನು ಅನುಭವಿಸುವ ಇಪ್ಪತ್ತಮೂರರ ಏರು ಯೌವನದ ಕೌತುಕದ ದಿನಗಳವು. ಕೇರಳ ಅದರಲ್ಲೂ ಮಲಪ್ಪುರಂ ಜಿಲ್ಲೆ ನನ್ನನು ಆವರಿಸಿತ್ತು. ೨೦೦೬ ವಿಶ್ವ ಕಪ್ ಫುಟ್ಬಾಲ್ ಜ್ವರ ಮಲಪ್ಪುರಂ ಜಿಲ್ಲೆಯನ್ನು ಆವರಿಸಿತ್ತು. ಅತಿಥೇಯ ರಾಷ್ಟ್ರ ಜರ್ಮನಿ ಎಂಬುದನ್ನು ಹೊರತು ಪಡಿಸಿ ಅದರ ಬಗ್ಗೆ ಹೆಚ್ಚೇನೂ ತಿಳಿದಿರದ ಕನ್ನಡಿಗನಾದ ನಾನು ನನ್ನ ಈ ಕಾಲ್ಚೆಂಡಾಟದ ಬಗೆಗಿನ ಅಜ್ಞಾನವನ್ನು ವಿದ್ಯಾರ್ಥಿಗಳ ಎದುರು ಒಪ್ಪಿಕೊಳ್ಳುವುದು ನಮ್ಮ ಕನ್ನಡ ನಾಡಿಗೆ ಶೋಭೆ ತರದೆಂದು ಭಾವಿಸಿ ಅವರೆದುರು ಬ್ರೆಜಿಲ್ ನನ್ನ ಮೆಚ್ಚಿನ ತಂಡವೆಂದು ಘೋಷಿಸಿದೆ ! ಆ ದಿನಗಳಲ್ಲಿ ಮಲಪ್ಪುರಂ ಜಿಲ್ಲೆಯಲ್ಲಿ ಫುಟ್ಬಾಲ್ ಬಗೆಗೆ ನಿರ್ಲಕ್ಷ್ಯ ತೋರಿಸುವುದೂ ಯುವ ಸಮುದಾಯದಿಂದ ಬಹಿಷ್ಕೃತರಾಗುವುದೂ ಒಂದೇ ಎಂದು ನಿಮಗೆ ಅಲ್ಲಿ ಇದ್ದಿದ್ದರೆ ಅರ್ಥವಾಗುತ್ತಿತ್ತು. ನನ್ನ ಈ ಸುಳ್ಳು ಮುಂದೆ ಹಲವಾರು ತೊಂದರೆ ಪಜೀತಿಗಳಿಗೆ ಎಡೆಮಾಡಿಕೊಡುವ ಪೂರ್ವದ ಸೂಚನೆಯೂ ನನಗಿತ್ತು. ಶಾಲೆ ಹಾಸ್ಟೆಲ್ ಜೊತೆಗೆ ಇದ್ದು ವಿದ್ಯಾರ್ಥಿಗಳೊಂದಿಗೆ ಹಾಸ್ಟೆಲ್ ನಲ್ಲೆ ವಾಸವಿದ್ದುದುದರಿಂದ ಸಹೋದ್ಯೋಗಿಗಳು ವಿದ್ಯಾರ್ಥಿಗಳೊಂದಿಗೆ ಅರ್ಥವಾಗದಿದ್ದರೂ ಪಂದ್ಯ ನೋಡಲು ಜಾಗರಣೆ ಮಾಡಬೇಕಾಯಿತು. ವಿದ್ಯಾರ್ಥಿಗಳೊಂದಿಗೆ ಫುಟ್ಬಾಲ್ ಆಡಲು ಹೋಗಿ ನನ್ನ ಚೆಡ್ಡಿ ಪಿಸಿದು ಅವಮಾನವೂ ಆಯಿತು (ಇದನ್ನು ನಾನು ಅಲಂಕಾರಿಕವಾಗಿ  ಹೇಳಿದ್ದಲ್ಲ ಪಿಸಿದದ್ದು ಅಕ್ಷರಶಃ ಸತ್ಯ ! ).
ಕತೆಯಲ್ಲಿ ನೈಜೀರಿಯಾದ ಸ್ಯಾಮ್ಯುಎಲ್ ಅಬಿಯೋಲಾ ರೋಬಿನ್ಸೋನ್ (ನಿಜ ಹೆಸರೂ ಅದೇ) ಎಂ,ವೈ,ಸಿ ಅಕ್ಕೋಡ್ ತಂಡದ ಸ್ಟಾರ್ ಆಟಗಾರ. ಮೂವರು ಆಫ್ರಿಕನ್ನರು ಮತ್ತು ನಾಲ್ವರು ಮಲಯಾಳಿಗಳ ಒಟ್ಟು ಏಳು ಜನ ತಂಡದ ಮ್ಯಾನೇಜರ್ ಮಜೀದ್ ರೆಹಮಾನ್ (ಸೌಬಿನ್ ಸಾಹಿರ್) ಮೂವತ್ತು ದಾಟಿದ ಅವಿವಾಹಿತ. ತಲೆ ಕೂದಲು ಉದುರುತ್ತಿದೆ ಆದರೆ ಸರಿಯಾದ ಉದ್ಯೋಗವಿಲ್ಲದೆ ಫುಟ್ಬಾಲನ್ನೇ ಜೀವನವಾಗಿಸಿಕೊಂಡಿರುವ ಮಜೀದನನ್ನು ಮದುವೆಯಾಗಲು ಹೆಣ್ಗಳು ಒಪ್ಪರು ಎಂಬುದು ವೃದ್ದ ತಾಯಿಯ ಅಳುಕು.


ಸ್ಯಾಮ್ಯುಎಲ್ ನ ಅದ್ಬುತ ಫುಟ್ಬಾಲ್ ಪ್ರದರ್ಶನದಿಂದ ವಿರೋಧಿ ಕ್ಲಬ್ ಗಳನ್ನು ಗೆದ್ದು ಬೀಗುತ್ತಿರುವ ಮಜೀದ್ ಮತ್ತು ಅವನ ತಂಡಕ್ಕೆ ಸ್ಯಾಮ್ಯುಎಲ್ ಬಚ್ಚಲು ಮನೆಯಲ್ಲಿ ಕಾಲು ಜಾರಿ ಬಿದ್ದು ಕಾಲು ಮತ್ತು ಬೆನ್ನುಮೂಳೆ ಮುರಿದುಕೊಂಡಾಗ ಮರ್ಮಾಘಾತವಾಗುತ್ತದೆ. ಆಸ್ಪತ್ರೆಯಲ್ಲಿ ಇಡಲು ಸಾಕಷ್ಟು ಹಣವಿರದೇ ಮಜೀದ್ ಒಂದು ತಿಂಗಳ ವಿಶ್ರಾಂತಿಗಾಗಿ ಸ್ಯಾಮ್ಯುಎಲ್ ನನ್ನು ತಾನು ತಾಯಿಯೊಂದಿಗೆ ವಾಸವಾಗಿರುವ ಮನೆಗೆ ಕರೆತರುತ್ತಾನೆ. ಆ ಒಂದು ತಿಂಗಳ ಅವಧಿಯಲ್ಲಿ ಸ್ಯಾಮ್ಯುಎಲ್ ನೊಂದಿಗೆ ಮಜೀದನ ವೃದ್ದ ತಾಯಿ ಜಮೀಲಾ (ಸಾವಿತ್ರಿ ಶ್ರೀದರನ್) ಮತ್ತು ಆಕೆಯ ಪಕ್ಕದ ಮನೆಯ ವೃದ್ದ ಗೆಳತಿ ಬೀಯುಮ್ಮಾ (ಸರಸಾ ಬಳುಸೇರಿ) ಬೆಳೆಸಿಕೊಳ್ಳುವ ಮಮಕಾರ, ಹಳ್ಳಿಯ ಜನ ಸ್ಯಾಮ್ಯುಎಲ್ಗೆ ತೋರುವ ಮುಗ್ದ ಪ್ರೀತಿ ಮತ್ತು ಕಾಳಜಿ ಚಿತ್ರದ ಮೂಲ ದ್ರವ್ಯ.
ಯುವ ನಿರ್ದೇಶಕ ಜಕಾರಿಯಾ ಮೊಹಮ್ಮದ್ ಅವರು ಮಲಪ್ಪುರಂ ಜಿಲ್ಲೆಯವರೇ ಹಾಗು ನನ್ನ ಹಾಗೆ ಕ್ರೀಡೆಯ ಬಗ್ಗೆ ಅಷ್ಟೇನೂ ಆಸಕ್ತಿ ಇಲ್ಲದ ವ್ಯಕ್ತಿ. ತಮ್ಮ ಪರಿಸರದ ಸುತ್ತಮುತ್ತಲಿನ ವ್ಯಕ್ತಿಗಳಿಂದ ಸ್ಫೂರ್ತಿ ಪಡೆದು ಈ ಕತೆಯನ್ನು ರಚಿಸಿದ್ದಾರೆ. ತಮ್ಮ ಮನೆಯ ಬಳಿ ವಾಸಿಸುತ್ತಿದ್ದ ಆಫ್ರಿಕನ್ ಫುಟ್ಬಾಲ್ ಆಟಗಾರರಲ್ಲಿ ಒಬ್ಬರು ರೋಗಕ್ಕೆ ತುತ್ತಾಗಿ ತೀರಿಕೊಂಡಾಗ ಅಪ್ಪಟ ಫುಟ್ಬಾಲ್ ಪ್ರೇಮಿಯಾದ ಅವರ ತಂಡದ ಮ್ಯಾನೇಜರ್ ಅನುಭವಿಸಿದ ದುಃಖ ಜಕಾರಿಯಾ ಮನ ಕಲಕಿತ್ತು. “ಅಷ್ಟು ದೂರದ ದೇಶದಿಂದ ಬಂದು ನಮ್ಮೂರಲ್ಲಿ ತೀರಿಕೊಂಡು ಬಿಟ್ಟನಲ್ಲ” ಎಂದು ಆ ಮ್ಯಾನೇಜರ್ ದುಃಖಿಸುತ್ತಿದ್ದುದು ಅವರಿಗೆ ಇಂದೂ ನೆನಪಿದೆ ಎನ್ನುತ್ತಾರೆ ಜಕಾರಿಯಾ.

ಪತ್ರಕರ್ತನೊಬ್ಬ ಸ್ಯಾಮುಎಲ್ ಮತ್ತು ಮಜೀದನ ಕುಟುಂಬದ ಬಗ್ಗೆ ಲೇಖನವೊಂದನ್ನು ಆಕರ್ಷಕ ಫೋಟೋದೊಂದಿಗೆ ಪ್ರಕಟಿಸಿದಾಗ ತೊಂದರೆಗಳ ಸರಮಾಲೆಯೇ ಸೃಷ್ಟಿ ಆಗುತ್ತದೆ. ಕೇಂದ್ರ ಸರ್ಕಾರದ ಅಧಿಕಾರಿಗಳು ಸ್ಯಾಮ್ಯುಎಲ್ ನ ಪಾಸ್ಪೋರ್ಟ್ ತಪಾಸಣೆಗೆ ಬಂದಾಗ ಸ್ಯಾಮ್ಯುಎಲ್ ನ ಪಾಸ್ಪೋರ್ಟ್ ಕಳೆದು ಹೋಗಿರುವುದು ಅರಿವಿಗೆ ಬರುತ್ತದೆ. ಅಲ್ಲಿಂದ ಶುರುವಾಗುವ ಕಾರ್ಪಣ್ಯಗಳನ್ನೂ ಎದುರಿಸುತ್ತ ಮಜೀದ್ ಮತ್ತು ಸ್ಯಾಮ್ಯುಎಲ್ ಪರಸ್ಪರರ ವಯಕ್ತಿಕ ಜೀವನದ ನೋವುಗಳನ್ನು ಅರಿತುಕೊಳ್ಳುತ್ತಾರೆ. ಮಜೀದನ ತಂದೆಯ ಸಾವಿನ ಬಳಿಕ ತಾಯಿ ಜಮೀಲಾ ಸಮಾಜದ ಒತ್ತಡಕ್ಕೆ ಸಿಲುಕಿ ಮತ್ತೋರ್ವ ವ್ಯಕ್ತಿಯನ್ನು ಮದುವೆಯಾಗುತ್ತಾರೆ (ಕೆ.ಟಿ.ಸಿ ಅಬ್ದುಲ್ಲಾ). ಬಾಲ್ಯದಿಂದಲೂ ಮಜೀದ್ ಈ ಹೊಸವ್ಯಕ್ತಿಯನ್ನು ಮಲತಂದೆಯಾಗಿ ಒಪ್ಪಿಕೊಳ್ಳಲಾಗದೆ ಮಾನಸಿಕ ಕ್ಷೋಭೆಗೆ ಒಳಗಾಗಿರುತ್ತಾನೆ. ಇತ್ತ ಸ್ಯಾಮ್ಯುಎಲ್ ಅಂತರ್ಯುದ್ದದಲ್ಲಿ ತಂದೆ ತಾಯಿಗಳನ್ನು ಕಳೆದುಕೊಂಡು ತನ್ನ ಅಜ್ಜಿ ಮತ್ತು ತಂಗಿಯರೊಂದಿಗೆ ನಿರಾಶ್ರಿತರ ಶಿಭಿರದಲ್ಲಿ ವಾಸಿಸುವ ವ್ಯಕ್ತಿ. ಫುಟ್ಬಾಲ್ ಒಂದೇ ಅವನಿಗೆ ಬಡತನದಿಂದ ತಪ್ಪಿಸಿಕೊಳ್ಳಲು ಇರುವ ಅಸ್ತ್ರ. ಸಿಕ್ಕ ಅವಕಾಷನ್ನು ಕಳೆದುಕೊಳ್ಳಬಾರದೆಂದು ನಕಲಿ ಪಾಸ್ಪೋರ್ಟ್ ಮಾಡಿಸಿಕೊಂಡು ಭಾರತಕ್ಕೆ ಬಂದು ಮಜೀದನ ತಂಡವನ್ನು ಸೇರಿಕೊಂಡಿರುತ್ತಾನೆ.
೨೦೧೬ ರಲ್ಲಿ ಅಸ್ಸಾಂ ಜೈಲಿನಲ್ಲಿ ಕೈದಿಯಾಗಿದ್ದ ನೈಜೀರಿಯಾದ ಹೆನ್ರಿ ಓಜಾ ಕೆಲೆಚಿ ಖೈದಿಗಳಿಗೆಲ್ಲ ಸ್ಪೂರ್ತಿ ಆಗಿ ಫುಟ್ಬಾಲ್ ಕಲಿಸಿದ್ದನ್ನು ಇಲ್ಲಿ ಸ್ಮರಿಸ ಬಹುದು. ಅಸ್ಸಾಂನ ಮಂತ್ರಿಯೊಬ್ಬರು ಎಲ್ಲ ಕಾಗದ ಪತ್ರಗಳನ್ನು ನೋಡಿಕೊಳ್ಳುವುದಾಗಿ ಹೇಳಿ ಹೆನ್ರಿ ಓಜಾ ಕೆಲೆಚಿ ಯನ್ನು ಕರೆಸಿಕೊಂಡು ಎಂದಿನಂತೆ ತಮ್ಮ ಭರವಸೆಯನ್ನು ಮರೆತು ಕೆಲೆಚಿಯನ್ನು ಜೈಲು ಪಾಲಾಗಿಸಿದ್ದರು. ಕೆಲೆಚಿ ಜೈಲು ಸೆರೆ ವಾಸದಲ್ಲಿದ್ದಾಗ ಸಹ ಖೈದಿಗಳಿಗೆ ಸ್ಫೂರ್ತಿ ತುಂಬಿ ಫುಟ್ಬಾಲ್ ಕಲಿಸಿ ಉತ್ತಮ ಫುಟ್ಬಾಲ್ ತಂಡಗಳನ್ನು ಕಟ್ಟಿದರು.
ಸರಿ, ಕತೆ ಹೇಳಿದ್ದು ಸ್ವಲ್ಪ ಜಾಸ್ತಿ ಆಯ್ತಲ್ಲವೇ ? ಇಲ್ಲಿಂದ ಮುಂದೆ ಚಿತ್ರದ ಕತೆ ಬರಿ ಕತೆಯಲ್ಲ ಕಾವ್ಯ ವಾಗುತ್ತದೆ. ಕವಿಗಳೆಂಬವರು ನಾವೆಲ್ಲಾ ನಿತ್ಯ ವ್ಯವಹಾರದಲ್ಲಿ ಬಳಸುವ ಭಾಷೆಯನ್ನೇ ಬಳಸುವರು ಎಂಬುದು ನಿಜವಾದರೂ ಕಾವ್ಯದಲ್ಲಿ ಭಾಷೆಯ ಬಳಕೆಯ ಕ್ರಮ ನಿತ್ಯರೂಢಿಯನ್ನು ಸಾಮಾನ್ಯವಾಗಿ ಮೀರಿದ್ದಾಗಿರುತ್ತದೆ. ಈ ಚಿತ್ರವೂ ಹಾಗೆ ಸಾಧಾರಣ ದೃಶ್ಯಗಳನ್ನು ಅಸಾದರಣ ವಾಗಿಸುತ್ತ ಸಾಗುತ್ತದೆ.
ವೃದ್ದ ತಾಯಿ ಜಮೀಲಾ ಆಗಿ ಸಾವಿತ್ರಿ ಶ್ರೀದರನ್, ಆಕೆಯ ಪಕ್ಕದ ಮನೆಯ ವೃದ್ದ ಗೆಳತಿ ಬೀಯುಮ್ಮಾ ಆಗಿ ಸರಸಾ ಬಳುಸೇರಿ ಮತ್ತು ಕೆ.ಟಿ.ಸಿ ಅಬ್ದುಲ್ಲಾ ನಟನೆ ಅತ್ಯದ್ಬುತ ಎಂದರೆ ಉತ್ಪ್ರೇಕ್ಷೆ ಆಗಲಾರದೆಂದು ನೀವು ಸಿಮಾ ನೋಡಿದರೆ ಖಂಡಿತ ಹೇಳುವಿರಿ. ಸಾವಿತ್ರಿ ಶ್ರೀದರನ್ ಮತ್ತು ಸರಸಾ ಬಳುಸೇರಿ ಈ ಹಿಂದೆ ಯಾವ ಸಿನಿಮಾದಲ್ಲೂ ನಟಿಸಿಲ್ಲ. ನಿರ್ದೇಶಕ ಜಕಾರಿಯಾ ಜಮೀಲಾ ಮತ್ತು ಬೀಯುಮ್ಮಾ ಪಾತ್ರಗಳನ್ನೂ ಈ ಚಿತ್ರದ ಎರಡು ಮುಖ್ಯ ಆಧಾರ ಸ್ತಂಭಗಳಾಗಿ ಭಾವಿಸಿದ್ದಾರೆ. ಆದರಿಂದ ಈ ಎರಡು ಪಾತ್ರಗಳಿಗೆ ತುಂಬಾ ಜತನ ದಿಂದ ಹುಡುಕಿ ಮೇಲಿನ ನಟಿಯರನ್ನು ಆಯ್ಕೆ ಮಾಡಿದ್ದಾರೆ. ನಟಿಯರು ಹೊಸ ಮುಖಗಳಾಗಿಯೂ ಇರಬೇಕು ಆದರೆ ಅಭಿನಯದಲ್ಲಿ ಪಕ್ವತೆ ಬೇಕು. ಹಾಗಾಗಿ ಅವರು ಮೊರೆ ಹೋಗಿದ್ದು ರಂಗಭೂಮಿಯನ್ನು. ಐದಾರು ದಶಕಗಳಿಂದ ರಂಗಭೂಮಿಯಲ್ಲಿ ಅನುಭವ ಪಡೆದಿದ್ದ ಸಾವಿತ್ರಿ ಶ್ರೀಧರನ್ ವಯಸ್ಸಾದ ಮೇಲೆ ಯಾವುದೇ ಪಾತ್ರಗಲ್ಲಿಲ್ಲದೆ ತಮ್ಮ ಕುಟ್ಟಿಪುರಂ ಮನೆಲ್ಲಿ ಜೀವನ ಸವೆಸುತ್ತಿದ್ದರಂತೆ. ಈ ಚಿತ್ರ ಅವರ ಬಾಳಿನ ಸಂಧ್ಯಾ ಕಾಲದಲ್ಲಿ ಹುಡುಕಿಕೊಂಡು ಬಂದ ಹೊಸ ಅನುಭವ. ಸಾವಿತ್ರಿ ಶ್ರೀಧರನ್ ಮತ್ತು ಸರಸಾ ಬಳುಸೇರಿ ತುಂಬಾ ಅಳುಕು ಆತಂಕ ಗಳಿಂದ ಒಪ್ಪಿಕೊಂಡರೂ ಸೆಟ್ ನಲ್ಲಿ ಅವರು ಮಾಡಿದ ತಪ್ಪುಗಳನ್ನೂ ತನ್ನ ತಪ್ಪು ಗಳೆಂದು ಮೈಲೇಲೆ ಹಾಕಿಕೊಂಡು ಅವರನ್ನು ಹಾಸ್ಯ ಪ್ರಜ್ಞೆಯಿಂದ ನಗಿಸಿ ನಟಿಸುವಂತೆ ಮಾಡಿದ್ದು ಈ ಚಿತ್ರದ ಏಕಮಾತ್ರ ಸ್ಟಾರ್ ನಟ ಸೌಬಿನ್ ಸಾಹಿರ್. ಅನುಭವಿ ನಟನೋರ್ವ ತನ್ನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುವುದಲ್ಲದೆ ಹೊಸದಾಗಿ ಬಂದ ನಟರನ್ನು ಹುರಿದುಂಬಿಸಿ ನಟಿಸುವಂತೆ ಮಾಡುವುದು ಸಹಜವಷ್ಟೇ ಎನ್ನ ಬಹುದಾದರೂ, ಸೌಬಿನ್ ಅದನ್ನು ತುಂಬಾ ಸಮರ್ಥವಾಗಿ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ಚಿತ್ರದ ಸಂಕಲನ ಮಾಡುವಾಗ ಜಕಾರಿಯಾ ತಾವು ನಿರೀಕ್ಷಿಸಿಯೇ ಇರದ ಎಷ್ಟೋ ಬಾವಗಳನ್ನು ಈ ಮೂರು ವೃದ್ದ ನಟರ ನಟನೆಯಲ್ಲಿ ಕಂಡು ಅದನ್ನು ಒಂದು ಆಧ್ಯಾತ್ಮಿಕ ಯಾನ ಎಂದು ಹೇಳಿದ್ದಾರೆ.
ಮಜೀದನ ಮಲ ತಂದೆ ಸ್ಯಾಮ್ಯುಎಲ್ ನಿಗೆ ತನ್ನನು ಪರಿಚಯಿಸಿ ಕೊಳ್ಳುವ ದೃಶ್ಯವನ್ನು ಕ್ಲಾಸಿಕ್ ದೃಶ್ಯ ಎಂದರೆ ತಪ್ಪಿಲ್ಲ. ಕೆ,ಟಿ,ಸಿ ಅಬ್ದುಲ್ಲ ತಮ್ಮ ನಟನೆಯಿಂದ ಆಧ್ಯಾತ್ಮಿಕ ಮಟ್ಟಕ್ಕೆ ಒಯ್ದಿದ್ದಾರೆ ಎಂದು ಹೇಳಲೇ ಬೇಕು. ಅವರು ದೃಶ್ಯ ಮಾಧ್ಯಮಕ್ಕಿರುವ ಅದ್ಬುತ ಸಾದ್ಯತೆನ್ನು ಒಬ್ಬ ಅಪ್ಪಟ ಕಲಾವಿದನಂತೆ ಹೊರತೆಗೆದಿದ್ದಾರೆ. ನಿಮಗೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ನೆನಪಾಗಬಹುದು.
ಮಲಯಾಳಿ ಚಿತ್ರ ರಂಗದಲ್ಲಿ ನೇಟಿವಿಟಿ ಎಂಬುದು ತುಂಬಾ ವಿಶಿಷ್ಟವಾದ ಅಂಶ. ಕೇರಳದ ಪ್ರತೀ ಜಿಲ್ಲೆಯೂ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ನುಡಿಗಟ್ಟು ಮಾತಿನ ಶೈಲಿಯನ್ನು ಹೊಂದಿದೆ. ಇದು ಕರ್ನಾಟಕದ ಮಟ್ಟಿಗೆ ಸ್ವಲ್ಪ ನಿಜವಾದರೂ ನಮ್ಮ ಜಿಲ್ಲೆಗಳು ಕೇರಳದ ಜಿಲ್ಲೆಗಳಿಗಿಂತ ಭೌಗೋಳಿಕವಾಗಿ ತುಂಬಾ ವಿಸ್ತಾರವಾಗಿದ್ದು. ಒಂದೇ ಜಿಲ್ಲೆಯಲ್ಲಿ ಹಲವು ಸೀಮೆಗಳೂ ಸಂಸ್ಕೃತಿಗಳೂ ಅಡಕವಾಗಿವೆ. ಮಲಪ್ಪುರಂ ನುಡಿಗಟ್ಟನ್ನು ಅದರಲ್ಲೂ ಮಲಬಾರಿನ ಮಾಪಿಳ್ಳೆ ಉಚ್ಚಾರಣಾ ರೀತಿ ವಾಕ್ಯದಲ್ಲಿನ ಸ್ವರಭಾರವನ್ನು ನಿಭಾಯಿಸುವುದು ಸೌಬಿನ್ ಹೊರತು ಪಡಿಸಿ ಉಳಿದೆಲ್ಲ ನಟರಿಗೆ ಸವಾಲೇ ಎನ್ನಿಸಿಲ್ಲ. ಏಕೆಂದರೆ ಸೌಬಿನ್ ಮಾತ್ರವೇ ಕೊಚ್ಹಿ ಯವರು. ಉಳಿದಂತೆ ನಿರ್ದೇಶಕರನ್ನೂ ಸೇರಿಸಿ ಬಹುಪಾಲು ನಟರು ಮಲಬಾರಿನವರೆ (ಕೇರಳದ ಉತ್ತರ ಬಾಗವನ್ನು ಮಲಬಾರ್ ಎಂದು ಕರೆಯಲಾಗುತ್ತದೆ) ಅದರಲ್ಲೂ ಮಲಪ್ಪುರಂ ಜಿಲ್ಲೆಯವರು. ಈ ರೀತಿ ಬೇರೆ ಪ್ರದೇಶದ ನಟರನ್ನು ಅದೇ ಭಾಷೆಯ ಮತ್ತೊಂದು ಉಚ್ಚಾರಣಾ ಕ್ರಮಕ್ಕೆ ಹೊಂದಿಸುವುದು ಬಹು ದೊಡ್ಡ ಸವಾಲೆಂದು ಜಗತ್ತಿ ಹಲವು ನಿರ್ದೇಶಕರ ಅಭಿಪ್ರಾಯ. ಇಂತಹ ದೊಡ್ಡ ಸವಾಲನ್ನು ಸೌಬಿನ್ ಎಷ್ಟು ಚೆನ್ನಾಗಿ ನಿರ್ವಹಿಸಿದ್ದಾರೆ ಎಂದು ನಾನು ಖಂಡಿತ ತೀರ್ಮಾನಿಸಿ ಹೇಳಲಾರೆ. ಅದನ್ನು ನೀವು ಮಲಯಾಳಿಗಳನ್ನೇ ಕೇಳಿ ತಿಳಿಯಬೇಕು.”ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಇರುವವರಲ್ಲಿ ನಾನು ಮತ್ತು ಸ್ಯಾಮ್ಯುಎಲ್ ಇಬ್ಬರು ಮಾತ್ರ ವಿದೇಶಿಗಳು ಉಳಿದೆಲ್ಲರೂ ಮಲಪ್ಪುರಂ ಜಿಲ್ಲೆಯವರು. ಹಾಗಾಗಿ ಚಿತ್ರದ ಭಾಷೆ ಇಬ್ಬರಿಗೂ ಸವಾಲಾಗಿತ್ತು” ಎಂದು ಸೌಬಿನ್ ತಮಾಷೆಯಾಗಿ ಹೇಳಿದ್ದಾರೆ ಇದಕ್ಕೆ ಮುಂಚೆ ಅವರು ಮಹೇಶಿಂಟೆ ಪ್ರತೀಕಾರಂ ಚಿತ್ರದಲ್ಲಿ ನಟಿಸಿದರೂ ಚಿತ್ರದಲ್ಲಿ ಅವರು ಇಡುಕ್ಕಿ ಜಿಲ್ಲೆಯ ಮೂಲ ನಿವಾಸಿ ಆಗಿರುವುದಿಲ್ಲ. ಹಾಗಾಗಿ ಅವರು ಅಲ್ಲಿ ಹೇಗೆ ಮಾತಾಡಿದರೂ ಆದೀತು.

ಈ ಮಾತನ್ನು ನಾನು ಏಕಿಷ್ಟು ವಿಸ್ತರಿಸುತ್ತಿದ್ದೇನೆ ಎನ್ನುವಿರಾ ? ನಾನು ಮಲಪ್ಪುರಂನಲ್ಲಿ ಕೆಲಸ ಮಾಡುತ್ತಿದ್ದುದು ಮುಸ್ಲಿಂ ಶಾಲೆಯಲ್ಲಿ. ನಂತರ ತ್ರಿಶೂರಿನಲ್ಲಿ ಕೆಲಸ ಮಾಡುವಾಗ ನಾನು ಮಲಯಾಳಂ ಮಾತನಾಡಲು ಯತ್ನಿಸಿದಾಗ ನನ್ನ ಸಹುದ್ಯೋಗಿಗಳು “ಶೀ ಮುಸ್ಲಿಂ ಮಾಪಿಳ್ಳೆಯಂತೆ ಮಾತಾಡ್ತೀಯ” ಎಂದು ನಗುತ್ತಿದ್ದರು.
ಹೀಗೆ ಹೊರ ರಾಜ್ಯದವನಾದ ನಾನು ಒಂಧರ್ಥದಲ್ಲಿ ಜೀವನದ ಯಾವುದೋ ಅನಿವಾರ್ಯತೆಗೆ ಸಿಲುಕಿ ಉದ್ಯೋಗವನ್ನು ಅರಸಿ ಸ್ಯಾಮ್ಯುಎಲ್ಲ ನಂತೆ ಮಲಪ್ಪುರಂ ಜಿಲ್ಲೆಯ ಕಡಗಶೇರಿ ಗ್ರಾಮದ ಮಾಪಿಲ್ಲ ಮುಸಲ್ಮಾನ ಸಮುದಾಯದ ನಡುವೆ ಬಂಧಿತನಾಗಿದ್ದೆ.! ನನಗೆ ಚಿತ್ರ ನೋಡುವಾಗ ಅವನೊಂದಿಗೆ ಮೂಡುವ ತಾದಾತ್ಮ್ಯಾನುಭೂತಿ ಚಿತ್ರದ ಇತರ ಪಾತ್ರಗಳಿಗೂ ಮೂಡುವುದು ನಿಮಗೆ ತಿಳಿದು ಬರುತ್ತದೆ. ಎಷ್ಟಾದರೂ ಜೀವನದ ವಿವಿದ ಸ್ತರಗಳಲ್ಲಿ, ಸ್ಥಳಗಳಲ್ಲಿ, ಕಾಲ ದೇಶಗಲ್ಲಿ ಸಿಕ್ಕಿ ಹಾಕಿಕೊಂಡು ಪಜೀತಿಪಡುತ್ತಿರುವ ನಮ್ಮೆಲ್ಲರ ಪಾಡು ಒಂದೇ ಎನ್ನುವ ವಿಶ್ವಾತ್ಮಕ ಅನುಭೂತಿ ಅದು.
ಚಿತ್ರದ ಕೊನೆಯಲ್ಲಿ ಕಳೆದು ಹೋದ ಸ್ಯಾಮುಎಲ್ಲೆನ ಪಾಸ್ಪೋರ್ಟ್ ಮರಳಿ ಸಿಗುತ್ತದೆ. ಎಲ್ಲರೂ ಅವನಿಗೊಂದು ಭಾವುಕ ವಿದಾಯ ಹೇಳುತ್ತಾರೆ. ಆದರೆ ಮಜೀದ್ ಈ ಅನುಭವದಿಂದ ಮಾಗುತ್ತಾನೆ. ಎ.ಟಿ.ಎಂ ಗೆ ಸೆಕ್ಯೂರಿಟಿ ಗಾರ್ಡ್ ಆಗಿರುವ ತನ್ನ ಮಲತಂದೆ ಮನೆಗೆ ಕರೆತಂದು ಒಪ್ಪಿಕೊಳ್ಳುತಾನೆ.
ನಿಶ್ಚಯವಾಗಿಯೂ ಇದು ಬರೀ ಒಂದು ಭಾವಾತಿರೇಕದ ನಾಟಕೀಯ ಸನ್ನಿವೇಶವಾಗಿ ನಿಮಗೆ ತೋರುವುದಿಲ್ಲ. ಚಿಕ್ಕದೊಂದು ಜಗತ್ತಿನಲ್ಲಿ ನಮ್ಮೆಲ್ಲರಂತೆ ಬಂಧಿಯಾಗಿರುವ ಮ್ಯಾನೇಜರ್ ಮಜೀದ ಜಗತ್ತಿನ ಮತ್ತೊಂದು ಮೂಲೆಯಿದ ಖಂಡಾಂತರ ಮಾಡಿ ಬಂದಿರುವ ಸ್ಯಾಮ್ಯುಎಲ್ಲನ ಅಂತರ್ಯುದ್ದದಿಂದ ನಿರಾಶ್ರಿತವಾಗಿ ವಿಘಟಿತ ಕುಟುಂಬದ ಸಂಕಟವನ್ನು ಸ್ಯಾಮ್ಯುಎಲ್ಲನ ಮೂಲಕ ಅನುಭಾವಿಸಿ ತನ್ನ ಕೌಟುಂಬಿಕ ಸಮಸ್ಯೆಗಳನ್ನು, ಭಾವ ತುಮುಲಗಳನ್ನು ಚಿಲ್ಲರೆಯವೆಂದು ಪರಿಗಣಿಸಿದರೆ ಅದು ಭಾವಾತಿರೇಕ ಏಕಾದೀತು?
ಒಂದಂತೂ ಸತ್ಯ ನಿರ್ದೇಶಕ ಜಕಾರಿಯಾ ಮೊಹಮ್ಮದ್ ಗೆ ಪ್ರತಿಯೊಂದು ಪಾತ್ರದ ಪ್ರತಿಯೊಂದು ದೃಶ್ಯದ ಹರವು ವಿಸ್ತಾರಗಳ ಬಗ್ಗೆ ಚಿತ್ರೀಕರಣಕ್ಕೆ ಮುಂಚೆ ತುಂಬಾ ಸ್ಪಷ್ಟವಾದ ಪರಿಕಲ್ಪನೆ ಇದ್ದಿರುವಂತಿದೆ. ಎಲ್ಲ ಪಾತ್ರಗಳನ್ನೂ ಸಮಾನ ಎಚ್ಚರದಿಂದ ಪೋಷಿಸಿದ್ದಾರೆ. ಯಾವ ದೃಶ್ಯವೂ ಪಾತ್ರವೂ ಚಿತ್ರದ ಮೇಲೆ ಅನಾಮತ್ತಾಗಿ ಹೇರಿದಂತೆ ತೋರಿಬರುವುದಿಲ್ಲ ಎಲ್ಲವೂ ಚಿತ್ರದ ಒಟ್ಟಾರೆ ಬಂಧದೊಂದಿಗೆ ಸಾವಯವವಾಗಿದೆ. ಅದು ಅನುಭವಿಸಿ ಬರೆದ ಕಾವ್ಯದ ಬಂಧದಷ್ಟೇ ಪರಿಪಕ್ವ. ಇತೀಚೆಗೆ ಅಭೂತಪೂರ್ವ ವಾಣಿಜ್ಯ ಯಶಸ್ಸು ಕಂಡ ಕನ್ನಡ ಚಿತ್ರವೊಂದರ ನಿರ್ದೇಶಕ ತನ್ನ ಚಿತ್ರ ನಿಜವಾಗಿ ಸಂಕಲನಕಾರನ ಮೇಜಿನ ಮೇಲೆ ತಯಾರಾಗುತ್ತದೆ. ಚಿತ್ರದ ಫೂಟೇಜ್ ತನಗೆ ಕೇವಲ ಕಚ್ಚಾ ವಸ್ತು ಮಾತ್ರ. ದೃಶ್ಯ ಮತ್ತು ಶಬ್ದದ ತುಣುಕುಗಳನ್ನು ವಿಶೇಷ ಪರಿಣಾಮಗಳೊಂದಿಗೆ ಗಣಕಯಂತ್ರದಲ್ಲಿ ಜೋಡಿಸುವುದೇ ಸಮಕಾಲೀನ ನಿರ್ದೇಶನ ಪ್ರತಿಭೆ,, , ಎಂಬರ್ಥ ಬರುವಂತಹ ಮಾತನಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಇಂತಹ ನಿರ್ದೇಶಕರೆಲ್ಲ ಕೇವಲ ಹಾಲಿವುಡ್ ಜಗತ್ತಿನ ಶ್ರೇಷ್ಠ ಚಿತ್ರ ಪರಂಪರೆ ಎಂದು ಭಾವಿಸಿದ್ದಾರೆ ಎಂಬುದರಲ್ಲಿ ನನಗೆ ಎಳ್ಳಷ್ಟೂ ಸಂಶಯ ಉಳಿದಿಲ್ಲ. ತಮ್ಮ ಚೊಚ್ಚಲ ಚಿತ್ರದಲ್ಲೇ ಸೂಕ್ಷ್ಮ ವಿವರಗಳಿಗೆ ಗಮನ ಕೊಟ್ಟು ಕಾದಂಬರಿಯೊಂದು ನೀಡುವ ದಟ್ಟ ವಿವರಗಳ ಅನುಭವವನ್ನು ದೃಶ್ಯ ಮಾದ್ಯಮದಲ್ಲಿ ಕಟ್ಟಿಕೊಡುವ ಚಿಕ್ಕ ವಯಸ್ಸಿನ ಜಕಾರಿಯಾ ಮೊಹಮ್ಮದ್ ಕೂಡ ನಮ್ಮ ನಿರ್ದೇಶಕರಿಗೆ ಸ್ಪೂರ್ತಿಯಾಗಲಿ ಎಂಬುದು ನನ್ನ ಆಶಯ.
ಚಿತ್ರೀಕರಣಕ್ಕೆ ವಳಯೂರ್ (ವಜ್ಹಾಯುರ್) ಎಂಬ ಚಿಕ್ಕ ಊರಿನ ಮನೆಯೊಂದನ್ನು ಆಯ್ದುಕೊಂಡಿದ್ದಾರೆ. ಆಫ್ರಿಕಾದಲ್ಲಿ ನಡೆಯುವ ದೃಶ್ಯಗಳನ್ನು ಹೊರತುಪಡಿಸಿ ಉಳಿದದ್ದೆಲ್ಲ ವಳಯೂರ್ (ವಜ್ಹಾಯುರ್) ನಲ್ಲೆ ಚಿತ್ರೀಕರಿಸಲಾಗಿದೆ. ಯಾವುದೇ ಕ್ರೇನ್ ಅಥವಾ ವಿಶೇಷ ಶಾಟ್ ಗಳನ್ನೂ ಬಳಸಲಾಗಿಲ್ಲ. ನಿರ್ದೇಶಕ ಜಕಾರಿಯಾ ಹೇಳುವಂತೆ ಒಂದು ಕ್ಯಾಮರಾ ಒಂದು ಟ್ರೈ ಪಾಡ್ ಮತ್ತು ನಾಲ್ಕು ಲೈಟು ಮಾತ್ರ ಬಳಸಲಾಗಿದೆ. ಹಾಗಿದ್ದೂ ಚಿತ್ರದ ಕೊನೆಗೆ ಆ ಮನೆ ಮತ್ತು ಅದರ ಸುತ್ತಮುತ್ತಲಿನ ಪರಿಸರ ಒಂದು ಪಾತ್ರವಾಗಿ ಹೊಮ್ಮಿದೆ ಎನ್ನಬಹುದು.
ಚಿತ್ರದ ಯಶಸ್ಸಿನ ನಂತರ ಒಂದು ವಿಚಿತ್ರ ಘಟನೆ ನಡೆಯಿತು. ಸ್ಯಾಮುಯೆಲ್ ಅಬಿಯೋಲ ರೋಬಿನ್ಸೋನ್ ನೈಜೀರಿಯಾಕ್ಕೆ ಮರಳಿದ ಮೇಲೆ ಚಿತ್ರದ ವ್ಯಾವಹಾರಿಕ ಯಶಸ್ಸಿನ ಬಗ್ಗೆ ತಿಳಿದೋ ಅಥವಾ ಯಾರೋ ಪ್ರಚೋದಿಸಿದ್ದರಿಂದಲೋ ಆತ ತನಗೆ ಕಪ್ಪು ಜನಾಂಗದ ನಟನೆಂದು ಉಳಿದೆಲ್ಲರಿಗಿಂತ ಕಡಿಮೆ ಸಂಭಾವನೆ ನೀಡಿದ್ದಾರೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಿಸಿದನು. ನಂತರ ನಿರ್ಮಾಪಕರು (ಸಮೀರ್ ತಾಹಿರ್ ಮತ್ತು ಸೈಜು ಖಾಲಿದ್) ಮತ್ತಷ್ಟು ಹಣ ನೀಡಿ ಸುಮ್ಮನಾಗಿಸಿದರು ಎಂದು ಸುದ್ದಿಯಾಯಿತು. ಈಗ ಸ್ಯಾಮ್ಯುಎಲ್ ನಾಲಿವುಡ್ ನಲ್ಲಿ ಮಾತ್ರವಲ್ಲ (ನೈಜೀರಿಯನ್ ಚಿತ್ರ ರಂಗ) ಬದಲಾಗಿ ಮಲಯಾಳಂ ಚಿತ್ರರಂಗದಲ್ಲೂ ಬೇಡಿಕೆಯ ನಟ. ಕೆರೆಬಿಯನ್ ಉಡಿಯಪ್ಪು ಎಂಬ ಕಾಲೇಜ್ ಕತೆ ಇರುವ ಚಿತ್ರದಲ್ಲಿ ನಟಿಸುತ್ತಿದ್ದಾನೆ.
ಈಚಿನ ದಿನಗಳಲ್ಲಿ ಮಲೆಯಾಳಂ ಚಿತ್ರ ರಂಗದಲ್ಲಿ ಒಂದು ಹೊಸ ಶಕೆ ಶುರುವಾಗಿದೆ. ಹೊಸ ನಟರು ತರುಣ ನಿರ್ದೇಶಕರು ಬ್ಲ್ಯಾಕ್ ಹ್ಯುಮರ್ ಮತ್ತು ಡಾರ್ಕ್ ಕಾಮಿಡಿ ಅಂತಹ ನಾಟಕೀಯ ಅಂಶಗಳನ್ನು ಬದುಕಿನ ಅಸಂಗತ ಕ್ಷಣಗಳನ್ನು ತುಂಬಾ ಯಶಸ್ವಿಯಾಗಿ ದೃಶ್ಯ ಮಾಧ್ಯಮಕ್ಕೆ ತರುತ್ತಿದ್ದಾರೆ. ಕನ್ನಡ ಮಟ್ಟಿಗೆ ನವ್ಯ ಮತ್ತು ನವ್ಯೋತ್ತರ ಸಾಹಿತ್ಯದಲ್ಲಿ ಪುಷ್ಕಳವಾಗಿರುವ ಈ ಅಂಶಗಳು ನಮ್ಮ ಚಿತ್ರ ರಂಗಕ್ಕೂ ವ್ಯಾಪಿಸಲೆಂದು ಹಾರೈಸುತ್ತೇನೆ.

2 comments to “ನಾನು ನೋಡಿದ ಚಿತ್ರ: ಸೂಡಾನಿ ಫ್ರಮ್ ನೈಜಿರಿಯಾ”

ಪ್ರತಿಕ್ರಿಯಿಸಿ