ನಾತಿಚರಾಮಿ ಅಳ್ಳಕವಾಗಿರೋದು ಎಲ್ಲಿ? – ಎರಡು ಟಿಪ್ಪಣಿಗಳು : ಕೆ. ಫಣಿರಾಜ್

ಪ್ರೇಕ್ಷಕರ ನಾಲಿಗೆ ಮತ್ತಷ್ಟೂ ಕಹಿಯಾಗುವ ವಸ್ತುವಿದು.ಸಿನಿಮಾ ಹಾಗೆ ಮಾಡಿದರೆ, ಸುಶಿಕ್ಷಿತರೂ ನೋಡಲು ಹಿಂಜರಿಯುವುದು, ಸಮಾಜದ ವಾಸ್ತವ. ಹಾಗೇ ನೋಡಿದರೆ, ಸುಶಿಕ್ಷಿತರನ್ನು ಥಿಯೇಟರಿಗೆ ಕರೆದು, ಅವರ ಮುಖಕ್ಕೆ ಅವರ ಸಾಮಾಜಿಕ ಪಾತ್ರವನ್ನು ರಾವುಗನ್ನಡಿಯಲ್ಲಿ ತೋರಿಸುವ ಇರಾದೆ ಇದ್ದಿದ್ದರೆ, ಕಥನವು ಮತ್ತಷ್ಟು ಸಾಮಾಜಿಕ ಸಂಬಂಧಗಳ ಆಳ ಕೆದಕುತ್ತಿತ್ತು, ಮತ್ತಷ್ಟು ಸಂಬಂಧದ ಗೋಜಲುಗಳ ಕಪ್ಪು ಮುಖವನ್ನು ತೋರುತ್ತಿತ್ತು.ಆದರೆ,ತಂಡಕ್ಕೆ ಅಮೂರ್ತವಾದ ‘ಸಹೃದಯರಿಗೆ’ ಸಿನಿಮಾ ಮಾಡುವ ಹುಮ್ಮಸ್ಸಿದ್ದಂತಿದೆ. ಆದರೆ, ಶುದ್ಧ ಸಹೃದಯತೆ, ಗೌರಿಯಂತೆ ನಮ್ಮ ಕಾಲದೇಶದಲ್ಲಿ ಅಮೂರ್ತ.

ಇಬ್ಬರು ವ್ಯಕ್ತಿಗಳ ನಡುವಿನ ಪ್ರೀತಿ ಹಾಗು ಕಾಮ ಆಕಾಂಕ್ಷೆಗಳನ್ನು ಪ್ರತ್ಯೇಕಿಸಿ, ಇಷ್ಟು ಪ್ರೀತಿ-ಇಷ್ಟು ಕಾಮ ಎಂದು ವಿಗಂಡಿಸಬಹುದೆ? ಸಂಬಂಧಗಳ ಬಂಧದಲ್ಲಿ ಪ್ರೀತಿ ಹಾಗು ಕಾಮಗಳ ಪಾತ್ರ, ಪ್ರಮಾಣಗಳು ಎಷ್ಟು?-ಇದು ಇಂದಿಗೂ ಮನುಷ್ಯರ ದೈಹಿಕ-ಮಾನಸಿಕ ಶಾಸ್ತ್ರಗಳ ನೋಟದಿಂದಲೂ, ಮನುಷ್ಯ ಬದುಕಿನ ಅಸ್ಥಿತ್ವವಾದಿ ತಾತ್ವಿಕ ನೋಟದಿಂದಲೂ, ನಿರಂತರವಾಗಿ ಶೋಧಿತವಾಗುತ್ತಿರುವ ಜಠಿಲ ವಿಷಯ.ವ್ಯಕ್ತಿಗಳ ಸಂಬಂಧವು ಮನುಷ್ಯ ಸಮಾಜದ ಕಾಲ-ದೇಶಗಳ ಸನ್ನಿವೇಶದಲ್ಲಿ ಘಟಿಸುವುದರಿಂದ, ಈ ಜಠಿಲತೆಗೆ, ಆಯಾ ಕಾಲ-ದೇಶಗಳ ನೈತಿಕ ಸಂಹಿತೆಗಳ ಕಟ್ಟುಪಾಡುಗಳು ಹೆಣೆದುಕೊಳ್ಳುವುದರಿಂದ, ಸಂಬಂಧಗಳ ಜಠಿಲತೆಯು ವ್ಯಕ್ತಿಗಳ ಮಟ್ಟದಲ್ಲಿ ವಿಶ್ವಾತ್ಮಕವೂ, ಸಾಮಾಜಿಕ ಸನ್ನಿವೇಶದಲ್ಲಿ ಸ್ಥಳಿಯವೂ ಆಗಿ, ‘ವ್ಯಕ್ತಿಗಳ ಕಾಮ-ಪ್ರೇಮ’ಸಂಬಂಧದ ಖಾಸಗಿ ಸಮಸ್ಯೆಯು, ಅಷ್ಟೇ ಆಗಿ ಉಳಿಯದೇ, ‘ಒಂದು ಕಾಲ-ದೇಶ’ಗಳ ಸಾಮಾಜಿ ಸನ್ನಿವೇಶದಲ್ಲಿ ಬದುಕುತ್ತಿರು ‘ಇಬ್ಬರು ಸಮಾಜ ಜೀವಿಗಳ ಅಸ್ಥಿತ್ವ’ದ ಸಮಸ್ಯೆಯಾಗಿ ಬೆಳೆಯುತ್ತದೆ. ಸಾಮಾಜಿಕ ಅಸ್ಥಿತ್ವದ ವೇದಿಕೆಯಲ್ಲಿ ಇಬ್ಬರು ಸಮಾಜ ಜೀವಿಗಳ ನಡುವಿನ _’ಪ್ರೀತಿ-ಕಾಮ’_ ಗಳ ತಕಲಾಟವೂ ಮತ್ತಷ್ಟೂ ಸೂಕ್ಷ್ಮವಾಗುತ್ತ ಹೋಗುತ್ತದೆ. _ಕಾಲ-ದೇಶಗಳಲ್ಲಿ ಸಂಭವಿಸುವ ಕ್ರಾಂತಿಕಾರಕ ಪಲ್ಲಟಗಳು, ಸಮಾಜ ಜೀವಿಗಳ  ‘ಪ್ರಿತಿ-ಕಾಮ’ಗಳ ಭಾವ ಸಂವೇದನೆಗಳನ್ನೂ ಪಲ್ಲಟಗೊಳಿಸಿ, ಹೊಸ ಬಗೆಯ ಭಾವ ಸಂವೇದನೆಗಳು ಸಾಮಾಜಿಕ ನೈತಿಕತೆಯನ್ನು ಪ್ರಭಾವಿಸಲು ಮುಂದಡಿ ಇಡುತ್ತವೆ. ಇಂತಾಗಿ ಪಶು ಸಹಜ ಕಾಮವು ಮನುಷ್ಯ ಸಮಾಜದಲ್ಲಿ ಆದಿ ಸಂವೇದನೆಯಾಗಿ ಉಳಿಯುವುದಿಲ್ಲ. ಪ್ರೀತಿಯ ಭಾವವು ಒಂದು ನಿಶ್ಚಲ ರಮ್ಯ ಸಂವೇದನೆಯಾಗಿ ಉಳಿಯುವುದಿಲ್ಲ! ಸಾಮಾಜಿಕ ಚಲನಶೀಲತೆಯು, ಸಮಾಜಜೀವಿಗಳ ಸಂವೇದನೆಯಲ್ಲಿ ಉಂಟಾಗುವ ಚಲನಶೀಲತೆಯೂ ಆಗಿರುತ್ತದೆ.

ಪೋಲ್ಯಾಂಡಿನ ಖ್ಯಾತ ನಿರ್ದೇಶಕ ಕ್ರಿಷ್ಟೋಫ್ ಕಿಸ್ಲೋವೋಸ್ಕಿ, ಅತಿಯಾದ ಸೆನ್ಸಾರ್ ಇದ್ದ ಕಮ್ಯುನಿಷ್ಟ್ ಪ್ರಭುತ್ವದ ಅಡಿ ಸಿನಿಮಾಗಳನ್ನು ಮಾಡಿದವನು. ಅವನು ಒಂದು ಸಂದರ್ಶನದಲ್ಲಿ, ‘ಸೆನ್ಸಾರಿನ ಒಳಿತು ಕೆಡುಕಗಳ ಚರ್ಚೆ ಆಚೆಗಿರ್ಲಿ; ಕಠಿಣ ಸೆನ್ಸಾರ್ ನಿಯಮಗಳಡಿ ಕೆಲಸ ಮಾಡಿ, ನನ್ನ ಸಿನಿಮಾ ಕಸುಬುದಾರಿಕೆ ಬೆಳೆದಿದೆ. ಮೊದ್ಲು ಕಥಾ ಹಂದರವನ್ನು ಹೇಳುವ ಸಂಕ್ಷಿಪ್ತ ನಿರೂಪಣೆ ಕೊಡಬೇಕಿತ್ತು: ನಾನು ನಾನು ಹೇಳಬೇಕೆಂದುಕೊಂಡದ್ದನ್ನು ಜೀವ ಸಹಿತ ಪ್ರಸ್ತುತಪಡಿಸುವ ಟಿಪ್ಪಣಿ ರಚಿಸುವಾಗ ನನಗೆ ಹೇಳಬೇಕೆಂಬುದರ ಕಾಠಿಣ್ಯ ಗೊತ್ತಾಗ್ತಿತ್ತು. ಅದು ಒಪ್ಪಿಗೆ ಪಡೆದ ನಂತರ ಕಥೆಯನ್ನು ನಿರೂಪಿಸಿ ಒಪ್ಪಿಗೆ ಪಡೆಯುವುದು, ನಂತರ ಚಿತ್ರಕಥೆ ಸಲ್ಲಿಸಿ ಒಪ್ಪಿಗೆ ಪಡೆಯುವುದು, ಆಮೇಲೆ ದೃಶ್ಯ ಮಾಲೆ (ಸಿನರಿ ಡಿಸೈನ್) ಯ ನಿರೂಪಣೆ- ಹೀಗೆ ಒಪ್ಪಿಗೆಗಳ ಸಾಲು ಸಲ್ಲಿಸುವಾಗ ಪ್ರತಿ ಹಂತದಲ್ಲೂ ಮೂಲ ವಸ್ತು ದೃಶ್ಯ ರೂಪವನ್ನು ಹಂತ ಹಂತವಾಗಿ ಪಡೆದುಕೊಂಡು, ಶೂಟಿಂಗ್ ವೇಳೆಗೆ ಸಾದೃಷ್ಯಿಕರಿಸುವ ಕ್ಯಾಮೆರ ಪೊಸಿಷನ್ ಗಳ ಬಗ್ಗೆ ಹೆಚ್ಚು ಗಮನ ಕೊಡುವುದು ಸಾಧ್ಯವಾಗುತ್ತಿತ್ತು-ಹೀಗಾಗಿ ಸಿನಿಮಾ ಮಾಡುವ ಕಸುಬುದಾರಿಕೆ ಕರಗತವಾಯ್ತು’ ಎಂಬ ಮಾತುಗಳನ್ನು ಆಡಿದ್ದಾನೆ. ಈ ಮಾತನ್ನು ಯಾಕೆ ಹೇಳಿದೆ ಎಂದರೆ, ಹೊಳೆದ ‘ಒಂದು ವಸ್ತು’ ಹಂತ ಹಂತವಾಗಿ ದೃಶ್ಯಗಳ ಸರಣಿಯಲ್ಲಿ ಪೂರ್ಣ ಅಭಿವ್ಯಕ್ತಿ ಪಡೆಯಬೇಕಾಗುತ್ತದೆ. ವಸ್ತು ಮತ್ತು ಅದನ್ನು ಕಾಲ-ದೇಶಸ್ಥಗೊಳಿಸುವ ಕಥಾ ನಿರೂಪಣೆ, ಕಥೆಯನ್ನು ದೃಶ್ಯಕ್ಕೆ ಎರಕ ಹೊಯ್ಯುವ ಚಿತ್ರಕತೆ- ಇವು ಸಿನಿಮಾದ ಜೀವಾಳ. ‘ನಾತಿಚರಾಮಿ’ಯ ವಸ್ತುವೇ (ಅದು ತೀರಾ ಹೊಸದಲ್ಲ) ಮಾನವ ಜಿಜ್ಞಾಸೆಯಲ್ಲಿ ಕಡೆದು ಕಡೆದು ಹಲವು ಹೊಳಹುಗಳಲ್ಲಿ ಕಂಡಂತಹುದು. ಹಾಗಾಗಿ ಮೊದಲು ಕಥನವು ಆದಷ್ಟು ಗಟ್ಟಿಯಾಗಿ, ಅದರ ಎಲ್ಲ ಗೋಜಲುಗಳನ್ನು ಹಿಡಿದು ಕಾಲ-ದೇಶಕ್ಕೆ ಒಗ್ಗಿಸಿ ನಿರೂಪಿಸಬೇಕಾಗುತ್ತದೆ. ‘ನಾತಿಚರಾಮಿ’ಯಲ್ಲಿ ಗೌರಿ ಕೇಂದ್ರ ಪಾತ್ರ ಹಾಗು ಅವಳ ಅಸ್ಥಿತ್ವದ ತಕಲಾಟ ವಸ್ತುವಿನ ಕೇಂದ್ರ ಜಿಜ್ಞಾಸೆ (ಸೆಂಟ್ರಲ್ ಮೋಟಿಫ್). ಸಮಸ್ಯೆ ಎಂದರೆ, ಗೌರಿಯ ‘ಪ್ರೀತಿ-ಕಾಮ’ದ ಸಂವೇದನೆಗಳು ಜಾಗೃತವಾಗುವುದು ಮಹೇಶನ ಅಗಲುವಿಕೆಯ ನಂತರ; ಆ ಮೊದಲು ಅಂದರೆ ಬಾಲ್ಯ-ಹರೆಯದಲ್ಲಿ ಅವಳಿಗೆ ಯಾವ ಭಾವಗಳಿದ್ದವು? ಮಹೇಶನ ಜೊತೆಗಿನ ಪ್ರೇಮವು ಅಂತಹ ಯಾವ ಪೂರ್ವ ಭಾವಗಳ ಪಲ್ಲಟದಲ್ಲಿ ಸಂಭವಿಸಿತು? ಮಹೇಶನ ಜೊತೆಗಿನ ಅವಳ ಮಾನಸಿಕ ಹಾಗು ದೈಹಿಕ ಸಂಬಂಧವು ಪ್ರೀತಿ-ಕಾಮಗಳ ಅಸೀಮಾ ಮೇಳೈಕೆಗೆ ಅವರ ವ್ಯಕ್ತಿತ್ವಗಳಲ್ಲಿನ ಯಾವ ವಿಶಿಷ್ಠತೆಯ ಯೋಗಾಯೋಗದ ಮಿಳಿತದಲ್ಲಿ ಘಟಿಸಿತು? ಇವ್ಯಾವು ವಾಸ್ತವಿಕ ವಿವರಗಳಾಗಿ ಕಥನದ ಹಿಂದಿನ ಗ್ರಹಿಕೆಗೆ ಒತ್ತಾಯಿಸಿದಂತೆ ಕಾಣುವುದಿಲ್ಲ. ನಾವು ದೃಷ್ಯದಲ್ಲಿ ಕಾಣುವುದು- (೧)ಗೌರಿಗೆ ಅವಳ ತಂದೆ-ತಾಯಿಯರ ಜೊತೆ ಯಾವ ಜೀವಂತ ಸಂಬಂಧವೂ ಇಲ್ಲ- ಯಾಕೆಂದರೆ ತಂದೆ ತಾಯಿ ಜೀವಂತ ಮನುಷ್ಯರಾಗದೇ ಸಂಪ್ರದಾಯಿಕ ಸಮಾಜದ ಅಣಕುವಾಡುಗಳಾಗಿರುವುದು. (೨) ಮಹೇಶನ ಜೊತೆ ಅವಳಿಗಿರುವ ಸಂಬಂಧದಲ್ಲಿ ಅವಳ ಹಾಗು ಮಹೇಶನ ವ್ಯಕ್ತಿತ್ವಗಳ ಯಾವ ಝಲಕು ಕಾಣುವುದಿಲ್ಲ- ಯಾಕೆಂದರೆ ಕಥನನದ ಹಂಬಲಕ್ಕೆ ಅವರು ಆದರ್ಶ ರಮ್ಯ ಪ್ರೇಮಿಗಳು.ಅಂದರೆ ಕಥೆಯ ಕೇಂದ್ರವಾದ ಗೌರಿಯ ತುಮುಲಕ್ಕೆ, ಆ ನಂತರದ ಅವಳ ಪ್ರೀತಿ-ಕಾಮಗಳ ಮುಗ್ಧ ನಂಬುಕೆಗಳಿಗೆ ಯಾವ ಬೇರುಗಳೂ ಇಲ್ಲ. ಗೌರಿ ಕಥೆಯ ವಸ್ತುವಿನ ಹಂಬಲಕ್ಕೆ ಯಾವ ಸಾಮಾಜಿಕ ಲಂಗರುಗಳೂ ಇಲ್ಲದೆ, ಧುತ್ತನೇ ನಿರ್ವಾತದಿಂದ ಹುಟ್ಟುವ ಪಾತ್ರವಾಗಿ ಬಿಟ್ಟಿದೆ-ಅಚ್ಚರಿ ಎಂದರೆ, ಅವಳ ಸ್ವತಂತ್ರ ಭಾವ, ಒಂಟಿತನದ ಕೆಚ್ಚು ಎಲ್ಲವೂ ಅವಳ ವಿದ್ಯೆ- ಉದ್ಯೋಗದಿಂದ ಲಭ್ಯವಾಗಿರುವುದು-ಇದಕ್ಕೂ ಅವಳ ಪ್ರೀತಿ ಮತ್ತು ಕಾಮಗಳ ಬಗೆಗಿನ ಮುಗ್ದತೆಗೂ ಏನಾದರೂ ಸಂಬಂಧವಿದೆಯ? ಕತೆಗೆ ಅದು ಮುಖ್ಯವಾದಂತೆ ಕಾಣುವುದಿಲ್ಲ. ಹಾಗೆಯೇ, ಅವಳ ತುಮುಲಕ್ಕೆ ಒಗ್ಗಿ ಬರುವ ಸುರೇಶ್. ಸುರೇಶ್ ನಂತಹ ವ್ಯಕ್ತಿಗಳು ಯಾಕೆ ಗೌರಿಗೆ ನಂಬಲರ್ಹವಾಗಿ ಕಾಣುತ್ತಾರೆ ಎನ್ನುವುದಕ್ಕೆ, ಯಾವ ವಿವರಗಳನ್ನು ಕತೆ ಯೋಚಿಸಿದಂತೆ ಕಾಣುವುದಿಲ್ಲ-ಇವಳನ್ನು ದೈಹಿಕವಾಗಿ ಹಂಬಲಿಸದ ನಿರಾಸಕ್ತಿಯ ಹೊರತು. ಅಷ್ಟು ಪೋಷಕವಾದ ಸುರೇಶ್ ಗೆ ತನ್ನ ಹೆಂಡತಿ ಹಳ್ಳಿ ಗಮಾರ್, ತಾನು ಮಾಡುತ್ತಿರುವ ಸಿವಿಲ್ ಇಂಜಿನಿಯರಿಂಗ್ ವೃತ್ತಿ ಅವನಿಗೆ ಕೂಲಿ ಕೆಲಸ, ಸ್ವತಂತ್ರವಾಗಿ ಹಣ ಮಾಡುವ ದಂಧೆ ಅವನಿಗೆ ಆದರ್ಶ, ಅವನ ಈ ವ್ಯಕ್ತಿ ವಿವರಗಳಿಗೂ, ಡೇಟಿಂಗ್ ಯಾಪ್ ನಿಂದ ಬರುವ ಯುವಕನ ಸೂಕ್ಷ್ಮ ಜ್ಞತೆಯನ್ನೂ ತೋರುವ ಯುವಕನ ನಡುವೆ ವ್ಯಕ್ತತ್ವಗಳನ್ನು ಅಳಿಯಲಾರದಷ್ಟು ಗೌರಿ ಮುಗ್ದಳು. ಒಂದು ಕಡೆ, ಪಾತ್ರ ಲಕ್ಷಣ ವಿವರವಿರದೆ ಗೌರಿ ಅತಿ ಸೂಕ್ಷ್ಮಜ್ಞೆ, ಮತ್ತೊಂದೆಡೆ ಹಳ್ಳಿಯ ಪ್ರಜ್ಞೆಯಿಂದ ಬಿಡಿಸಿಕೊಳ್ಳಲು ಯತ್ನಿಸುವ ಕಾರಣಕ್ಕೆ ಸುರೇಶ ಹೆಂಡತಿಯೊಟ್ಟಿಗೆ ಒರಟ; ಇವರಿಬ್ಬರಿಗೂ ತಮ್ಮ ಮನೋವೃತ್ತಿಯಿಂದ ಬಿಡುಗಡೆ ಸಿಗುವುದು ಒಂದು ದೈಹಿಕ ಸಮಾಗಮದ ಆಕಸ್ಮಿಕದಲ್ಲಿ. ಅಂದರೆ, ವಸ್ತುವನ್ನು ಕಥನವಾಗಿ ನಿರೂಪಿಸುವ ಧಾವಂತದಲ್ಲಿ ಗೌರಿಯನ್ನು ಸೇರಿದಂತೆ ಕೇಂದ್ರಕ್ಕೆ ಅಗತ್ಯವಾದ ಎಲ್ಲ ಪಾತ್ರಗಳೂ ಅರೆ ಜೀವಂತ. ಹೀಗಾಗಿ ವಸ್ತುವನ್ನು ದೃಷ್ಯಿಕರಿಸುವ ಚಿತ್ರಕತೆಯಲ್ಲಿ ಅನೇಕ ಖಾಲಿ ಜಾಗೆಗಳು ಎದುರಾಗುತ್ತವೆ; ಅವುಗಳನ್ನು ತುಂಬಲು ವಸ್ತುವನ್ನು ಪ್ರೇಕ್ಷಕರಿಗೆ ನೆನಪಿಸುವ ಹಾಡುಗಳು ತುರುಕಿದಂತೆ ಕಾಣುತ್ತವೆ.ಅತ್ಯಂತ ಮೆಚ್ಚುಗೆ ಸೂಸಿರುವ ವಿಮರ್ಶೆಗಳೂ, ಸಿನಿಮಾದ ನಿಧಾನಗತಿಯನ್ನು ಒತ್ತಿ ತೋರುತ್ತವೆ: ಈ ನಿಧಾನಗತಿಗೆ ಕಾರಣವೇನು ಎಂದು ಕೇಳುವುದಿಲ್ಲ; ಕಾರಣ ಕಥೆಯ ಅರೆ ಸಾಮಾಜಿಕ ಜೀವಂತಿಕೆಯ ಪಾತ್ರಗಳನ್ನು ವಸ್ತುವಿಗೆ ಒಗ್ಗಿಸಲು ಹಿಗ್ಗಿಸಲಾದ ಪುನಃರಾವರ್ಥಿತ ದೃಷ್ಯಾವಳಿಗಳ ಚಿತ್ರಕತೆ.ಕೇಂದ್ರ ಪಾತ್ರ ಹಾಗು ಕೇಂದ್ರ ಜಿಜ್ಞಾಸೆಯನ್ನು ಜೀವಂತ ಸಾಮಾಜಿಕ ಪಾತ್ರ ಜಿಜ್ಞಾಸೆಗಳಾಗಿ ಕಟ್ಟಲು, ಬರಿ ವಸ್ತು ಮಾತ್ರ ಸಾಲದು. ವಸ್ತು ಸಾಮಾಜಿಕವಾಗಿ ಸ್ಪೋಟಕ ಮಾತ್ರವಲ್ಲ, ಆಂತಿಕ ಪರಿಹಾರವಿಲ್ಲದ ಮುಂದುವರೆವ ಜಿಜ್ಞಾಸೆ, ಇಲ್ಲಿ ಮಾಂತ್ರಿಕ ಪರಿಹಾರಗಳಿಲ್ಲ; ಗೌರಿಗೂ, ಸುರೇಶನಿಗೂ ಶಿಘ್ರ ಮನೋವೈಜ್ಞಾನಿಕ ಪರಿಹಾರಗಳಿಲ್ಲ….ಪ್ರೇಕ್ಷಕರ ನಾಲಿಗೆ ಮತ್ತಷ್ಟೂ ಕಹಿಯಾಗುವ ವಸ್ತುವಿದು.ಸಿನಿಮಾ ಹಾಗೆ ಮಾಡಿದರೆ, ಸುಶಿಕ್ಷಿತರೂ ನೋಡಲು ಹಿಂಜರಿಯುವುದು, ಸಮಾಜದ ವಾಸ್ತವ. ಹಾಗೇ ನೋಡಿದರೆ, ಸುಶಿಕ್ಷಿತರನ್ನು ಥಿಯೇಟರಿಗೆ ಕರೆದು, ಅವರ ಮುಖಕ್ಕೆ ಅವರ ಸಾಮಾಜಿಕ ಪಾತ್ರವನ್ನು ರಾವುಗನ್ನಡಿಯಲ್ಲಿ ತೋರಿಸುವ ಇರಾದೆ ಇದ್ದಿದ್ದರೆ, ಕಥನವು ಮತ್ತಷ್ಟು ಸಾಮಾಜಿಕ ಸಂಬಂಧಗಳ ಆಳ ಕೆದಕುತ್ತಿತ್ತು, ಮತ್ತಷ್ಟು ಸಂಬಂಧದ ಗೋಜಲುಗಳ ಕಪ್ಪು ಮುಖವನ್ನು ತೋರುತ್ತಿತ್ತು.ಆದರೆ,ತಂಡಕ್ಕೆ ಅಮೂರ್ತವಾದ ‘ಸಹೃದಯರಿಗೆ’ ಸಿನಿಮಾ ಮಾಡುವ ಹುಮ್ಮಸ್ಸಿದ್ದಂತಿದೆ. ಆದರೆ, ಶುದ್ಧ ಸಹೃದಯತೆ, ಗೌರಿಯಂತೆ ನಮ್ಮ ಕಾಲದೇಶದಲ್ಲಿ ಅಮೂರ್ತ.

ಈ ವಸ್ತುವಿಗೆ ಸಂಬಂಧಿಸಿದಂತೆ 2017ರ ‘Body and Soul’ (Hungary) ಮತ್ತು ‘Loveless'(Russia) ಸಿನಿಮಾಗಳಿವೆ. ಕನ್ನಡ ಸಿನಿಮಾಗಳು ಈಗ ಅಂತರಾಷ್ಟ್ರೀಯ ಮಟ್ಟದಲ್ಲೂ ಸ್ಪರ್ಧಿಸುವ ಆಕಾಂಕ್ಷೆ ಹೊಂದಿರುವುದರಿಂದ ಬೇರೆ ದೇಶ-ಭಾಷೆಗಳಿಂದಲೂ ಪಾಠ ಕಲಿಯುವುದು ಕೀಳರಿಮೆಯೇನೂ ಆಗಬೇಕಿಲ್ಲ.ಹಾಗೆಯೇ ಲಾರ್ಸ್ ವಾನ್ ಟ್ರಯರ್ ನ ‘Nymphomaniac’ ಎಂಬ ಎರಡು ಭಾಗಗಳ ೯ ಗಂಟೆಯ ಸಿನಿಮಾವಿದೆ. ಅದನ್ನು ಅದರ ಕಾಠಿಣ್ಯತೆಗಾಗಿ ಸಾರ್ವಜನಿಕ ಪ್ರದರ್ಶನಕ್ಕೆ ಅವಕಾಶ ನೀಡಲಾಗಿಲ್ಲ!

ಪ್ರತಿಕ್ರಿಯಿಸಿ